ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚರ್ಚ್‌ ಫಾದರ್‌ಗಳು ಬೈಬಲ್‌ ಸತ್ಯದ ಸಮರ್ಥಕರಾಗಿದ್ದರೋ?

ಚರ್ಚ್‌ ಫಾದರ್‌ಗಳು ಬೈಬಲ್‌ ಸತ್ಯದ ಸಮರ್ಥಕರಾಗಿದ್ದರೋ?

ಚರ್ಚ್‌ ಫಾದರ್‌ಗಳು ಬೈಬಲ್‌ ಸತ್ಯದ ಸಮರ್ಥಕರಾಗಿದ್ದರೋ?

ನೀವು ಒಬ್ಬ ಕ್ರೈಸ್ತರೆಂದು ಹೇಳಿಕೊಳ್ಳುತ್ತಿರಲಿ ಇಲ್ಲದಿರಲಿ, ಬೈಬಲಿನ ದೇವರ ಕುರಿತು, ಯೇಸುವಿನ ಕುರಿತು ಮತ್ತು ಕ್ರೈಸ್ತತ್ತ್ವದ ಕುರಿತಾದ ನಿಮ್ಮ ಗ್ರಹಿಕೆಯನ್ನು ಅವರು ಪ್ರಭಾವಿಸಿರಬಹುದು. ಅವರಲ್ಲಿ ಒಬ್ಬನನ್ನು ಹೊನ್ನಿನ-​ಮಾತುಳ್ಳವನು ಎಂದು, ಮತ್ತೊಬ್ಬನನ್ನು ಮಹಾ ಎಂದು ಕರೆಯಲಾಯಿತು. ಒಟ್ಟಾಗಿ ಅವರನ್ನು “ಯೇಸುವಿನ ಜೀವನದ ಶ್ರೇಷ್ಠ ಸಾಕಾರರೂಪಗಳು” ಎಂದು ವರ್ಣಿಸಲಾಗಿದೆ. ಅವರು ಯಾರು? ಇವರು, ಇವತ್ತಿನ ಹೆಚ್ಚಿನ “ಕ್ರಿಸ್ತೀಯ” ಆಲೋಚನೆಯನ್ನು ರೂಪಿಸಿದ, ಪುರಾತನ ಧಾರ್ಮಿಕ ತತ್ತ್ವಶಾಸ್ತ್ರಜ್ಞರು, ಬರಹಗಾರರು, ದೇವತಾಶಾಸ್ತ್ರಜ್ಞರು ಮತ್ತು ತತ್ತ್ವಜ್ಞಾನಿಗಳಾಗಿದ್ದಾರೆ. ಇವರೇ ಚರ್ಚ್‌ ಫಾದರ್‌ಗಳು.

“ಬೈಬಲ್‌ ಮಾತ್ರ ದೇವರ ವಾಕ್ಯವಾಗಿರುವುದಿಲ್ಲ” ಎಂದು ಗ್ರೀಕ್‌ ಆರ್ತಡಾಕ್ಸ್‌ನ ಧಾರ್ಮಿಕ ಅಧ್ಯಯನಗಳ ತತ್ತ್ವಜ್ಞಾನಿಯಾದ ಡಮೀಟ್ರಿಯೋಸ್‌ ಜೆ. ಕಾನ್‌ಸ್ಟಾಂಟೆಲಾಸ್‌ ತಿಳಿಸುತ್ತಾರೆ. “ಪವಿತ್ರಾತ್ಮವು ಪ್ರಕಟಪಡಿಸುವ ದೇವರ ವಾಕ್ಯವನ್ನು, ಒಂದು ಪುಸ್ತಕದ ಪುಟಗಳಲ್ಲಿ ಬಂಧಿಸಿಡಲು ಸಾಧ್ಯವಿಲ್ಲ.” ದೈವಿಕ ಪ್ರಕಟನೆಯ ಇನ್ನಾವ ನಂಬತಕ್ಕ ಮೂಲವು ಇರಬಹುದು? ಕಾನ್‌ಸ್ಟಾಂಟೆಲಾಸ್‌, ಗ್ರೀಕ್‌ ಆರ್ತಡಾಕ್ಸ್‌ ಚರ್ಚನ್ನು ಅರ್ಥಮಾಡಿಕೊಳ್ಳುವುದು (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಒತ್ತಿಹೇಳುವುದು: “ಪವಿತ್ರ ಸಂಪ್ರದಾಯ ಮತ್ತು ಪವಿತ್ರ ಶಾಸ್ತ್ರಗಳು ಒಂದೇ ನಾಣ್ಯದ ಎರಡು ಮುಖಗಳಂತಿವೆ.”

ಆ “ಪವಿತ್ರ ಸಂಪ್ರದಾಯ”ದ ತಿರುಳಿನಲ್ಲಿ, ಚರ್ಚ್‌ ಫಾದರ್‌ಗಳ ಬೋಧನೆಗಳು ಮತ್ತು ಬರಹಗಳು ಒಳಗೂಡಿವೆ. ಅವರು, ಸಾ.ಶ. ಎರಡನೆಯ ಹಾಗೂ ಐದನೆಯ ಶತಮಾನಗಳ ನಡುವಿನ ಸಮಯಾವಧಿಯಲ್ಲಿ ಜೀವಿಸಿದ ಪ್ರಖ್ಯಾತ ದೇವತಾಶಾಸ್ತ್ರಜ್ಞರು ಮತ್ತು “ಕ್ರಿಸ್ತೀಯ” ತತ್ತ್ವಜ್ಞಾನಿಗಳಾಗಿದ್ದರು. ನವೀನ “ಕ್ರಿಸ್ತೀಯ” ಆಲೋಚನೆಯನ್ನು ಅವರು ಎಷ್ಟರ ವರೆಗೆ ಪ್ರಭಾವಿಸಿದ್ದಾರೆ? ಅವರ ಬೋಧನೆಗಳು ಬೈಬಲಾಧಾರಿತವಾಗಿದ್ದವೋ? ಯೇಸು ಕ್ರಿಸ್ತನ ಒಬ್ಬ ಹಿಂಬಾಲಕನಿಗೆ, ಕ್ರೈಸ್ತ ಸತ್ಯದ ದೃಢವಾದ ಆಧಾರವು ಯಾವುದಾಗಿರಬೇಕು?

ಐತಿಹಾಸಿಕ ಹಿನ್ನೆಲೆ

ಸಾ.ಶ. ಎರಡನೆಯ ಶತಮಾನದ ಮಧ್ಯಭಾಗದಲ್ಲಿ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದವರು, ರೋಮನ್‌ ಹಿಂಸಕರು ಹಾಗೂ ಪಾಷಂಡಿಗಳ ವಿರುದ್ಧ ತಮ್ಮ ನಂಬಿಕೆಯನ್ನು ಸಮರ್ಥಿಸುತ್ತಿದ್ದರು. ಆದರೂ, ಅದು ದೇವತಾಶಾಸ್ತ್ರದ ಅಭಿಪ್ರಾಯಗಳು ಅತ್ಯಧಿಕವಾಗಿ ತುಂಬಿದ್ದ ಯುಗವಾಗಿತ್ತು. ಯೇಸುವಿನ “ದೇವತ್ವ” ಮತ್ತು ಪವಿತ್ರಾತ್ಮದ ಸ್ವರೂಪ ಹಾಗೂ ಕಾರ್ಯಾಚರಣೆಗಳ ಕುರಿತಾದ ಧಾರ್ಮಿಕ ವಾಗ್ವಾದಗಳು, ಕೇವಲ ಜ್ಞಾನವಂತರ ಮಧ್ಯೆ ಬಿರುಕುಗಳನ್ನು ಉಂಟುಮಾಡುವುದಕ್ಕಿಂತ ಹೆಚ್ಚಿನದ್ದನ್ನು ಮಾಡಿತು. “ಕ್ರಿಸ್ತೀಯ” ಸಿದ್ಧಾಂತಗಳ ಕುರಿತಾದ ಆವೇಶಪೂರಿತ ಭಿನ್ನಾಭಿಪ್ರಾಯಗಳು ಮತ್ತು ಸರಿಪಡಿಸಲಾಗದಂಥ ಒಡಕುಗಳು, ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳಿಗೂ ಅತ್ಯಧಿಕವಾಗಿ ಹಬ್ಬಿಕೊಂಡು, ಕೆಲವು ವೇಳೆಗಳಲ್ಲಿ ಗುಂಪುಗಲಭೆಗಳು, ದಂಗೆ, ಸಾರ್ವಜನಿಕ ಕಲಹ ಮತ್ತು ಯುದ್ಧವನ್ನೂ ಬರಮಾಡಿದವು. ಇತಿಹಾಸಗಾರ ಪಾಲ್‌ ಜಾನ್ಸನ್‌ ಬರೆಯುವುದು: “[ಧರ್ಮಭ್ರಷ್ಟ] ಕ್ರೈಸ್ತ ಧರ್ಮವು ಗಲಿಬಿಲಿ, ವಾದವಿವಾದ ಹಾಗೂ ಭೇದದೊಂದಿಗೆ ಆರಂಭವಾಯಿತು ಮತ್ತು ಹಾಗೆಯೇ ಮುಂದುವರಿಯಿತು. . . . ಕ್ರಿ.ಶ. ಮೊದಲನೆಯ ಮತ್ತು ಎರಡನೆಯ ಶತಮಾನಗಳಲ್ಲಿ ಮಧ್ಯ ಹಾಗೂ ಪ್ರಾಚ್ಯ ಮೆಡಿಟರೇನಿಯನ್‌ ಕ್ಷೇತ್ರವು, ಪ್ರಸಿದ್ಧಿ ಪಡೆಯಲು ಹೆಣಗಾಡುತ್ತಿದ್ದ ಕೊನೆಯಿಲ್ಲದ ಧಾರ್ಮಿಕ ಅಭಿಪ್ರಾಯಗಳಿಂದ ತುಂಬಿತುಳುಕುತ್ತಿತ್ತು. . . . ಆದ್ದರಿಂದ, ಆರಂಭದಿಂದಲೇ ಕ್ರೈಸ್ತ ಧರ್ಮದ ಅಸಂಖ್ಯಾತ ವಿಭಿನ್ನ ರೂಪಗಳಿದ್ದವು ಮತ್ತು ಇವುಗಳು ಒಂದಕ್ಕೊಂದು ಸಹಮತದಲ್ಲಿರಲಿಲ್ಲ.”

ಆ ಯುಗದಲ್ಲೇ, ತತ್ತ್ವಜ್ಞಾನದ ಪದಗಳನ್ನು ಉಪಯೋಗಿಸಿ “ಕ್ರಿಸ್ತೀಯ” ಬೋಧನೆಗಳ ಅರ್ಥನಿರೂಪಿಸುವುದು ಅತಿ ಪ್ರಾಮುಖ್ಯವೆಂದು ನೆನಸಿದ ಬರಹಗಾರರು ಮತ್ತು ತತ್ತ್ವಜ್ಞಾನಿಗಳು ಏಳಿಗೆಹೊಂದಲು ಆರಂಭಿಸಿದರು. “ಕ್ರೈಸ್ತತ್ವಕ್ಕೆ”ಕ್ಕೆ ಹೊಸದಾಗಿ ಮತಾಂತರಗೊಂಡಿದ್ದ ಸುಶಿಕ್ಷಿತ ವಿಧರ್ಮಿಗಳನ್ನು ತೃಪ್ತಿಪಡಿಸಲು, ಇಂತಹ ಧಾರ್ಮಿಕ ಬರಹಗಾರರು ಹಿಂದಿನ ಗ್ರೀಕ್‌ ಮತ್ತು ಯೆಹೂದಿ ಸಾಹಿತ್ಯಗಳ ಮೇಲೆ ಅತಿಯಾಗಿ ಆತುಕೊಂಡಿದ್ದರು. ಗ್ರೀಕ್‌ ಭಾಷೆಯಲ್ಲಿ ಬರೆಯುತ್ತಿದ್ದ ಜಸ್ಟಿನ್‌ ಮಾರ್ಟರ್‌ (c. ಸಾ.ಶ. 100-⁠165)ನಿಂದ ಪ್ರಾರಂಭಿಸಿ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದವರು ಗ್ರೀಕ್‌ ಸಂಸ್ಕೃತಿಯ ತತ್ತ್ವಜ್ಞಾನ ಸಂಬಂಧಿತ ಪರಂಪರೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಹೆಚ್ಚೆಚ್ಚು ನಿಪುಣ ರಾದರು.

ಈ ಪ್ರವೃತ್ತಿಯು, ಆರಿಜೆನ್‌ (c. ಸಾ.ಶ. 185-​254)ನ ಬರಹಗಳಲ್ಲಿ ಗಮನಾರ್ಹವಾಗಿ ತೋರಿಬಂತು. ಇವನು, ಅಲೆಗ್ಸಾಂಡ್ರಿಯದಿಂದ ಬಂದ ಒಬ್ಬ ಗ್ರೀಕ್‌ ಲೇಖಕನಾಗಿದ್ದನು. ಆರಿಜೆನ್‌ನ ಮೊದಲ ನಿಯಮಗಳು (ಇಂಗ್ಲಿಷ್‌) ಎಂಬ ಗ್ರಂಥವೇ, “ಕ್ರಿಸ್ತೀಯ” ತತ್ವಜ್ಞಾನದ ಪ್ರಧಾನ ಸಿದ್ಧಾಂತಗಳನ್ನು ಗ್ರೀಕ್‌ ತತ್ವಜ್ಞಾನದ ಪದಗಳಲ್ಲಿ ವಿವರಿಸಲು ಮಾಡಲ್ಪಟ್ಟ ಮೊದಲ ಕ್ರಮಬದ್ಧ ಪ್ರಯತ್ನವಾಗಿತ್ತು. ಕ್ರಿಸ್ತನ “ದೇವತ್ವ”ವನ್ನು ವಿವರಿಸುವ ಹಾಗೂ ಸ್ಥಾಪಿಸುವ ನೈಸೀಯ ಮಹಾಸಭೆ (ಸಾ.ಶ. 325)ಯ ಯತ್ನವು, “ಕ್ರಿಸ್ತೀಯ” ತತ್ತ್ವವನ್ನು ಅರ್ಥನಿರೂಪಿಸಲು ಹೊಸ ಚಾಲಕ ಶಕ್ತಿಯನ್ನು ಕೊಟ್ಟ ಮೈಲಿಗಲ್ಲಾಯಿತು. ಈ ಮಹಾಸಭೆಯು, ಸಾಧಾರಣವಾಗಿ ಚರ್ಚಿನ ಎಲ್ಲ ಮಹಾಸಭೆಗಳು ಮತತತ್ತ್ವವನ್ನು ಇನ್ನು ಹೆಚ್ಚು ನಿಷ್ಕೃಷ್ಟವಾಗಿ ವಿವರಿಸಲು ಪ್ರಯತ್ನಿಸಿದ ಒಂದು ಯುಗದ ಆರಂಭವನ್ನು ಗುರುತಿಸಿತು.

ಬರಹಗಾರರು ಮತ್ತು ವಾಗ್ಮಿಗಳು

ಮೊದಲ ನೈಸೀಯ ಮಹಾಸಭೆಯ ಸಮಯದಲ್ಲಿ ಬರಹಗಾರನಾಗಿದ್ದ, ಕೈಸರೈಯದ ಯುಸೀಬಿಯಸ್‌, ಸಾಮ್ರಾಟ ಕಾನ್‌ಸ್ಟೆಂಟೀನ್‌ನೊಂದಿಗೆ ಸಹವಾಸವನ್ನು ಇಟ್ಟುಕೊಂಡಿದ್ದನು. ನೈಸೀಯ ಮಹಾಸಭೆಯ ಸುಮಾರು 100 ವರ್ಷಗಳಿಗಿಂತಲೂ ಹೆಚ್ಚು ಸಮಯದ ನಂತರ, ದೇವತಾಶಾಸ್ತ್ರಜ್ಞರು​—ಇವರಲ್ಲಿ ಅಧಿಕ ಮಂದಿ ಗ್ರೀಕ್‌ ಭಾಷೆಯಲ್ಲಿ ಬರೆಯುತ್ತಿದ್ದರು​—ದೀರ್ಘವಾದ ಮತ್ತು ಕಠೋರವಾದ ವಾಗ್ವಾದದ ಮೂಲಕ, ಕ್ರೈಸ್ತಪ್ರಪಂಚದ ವಿಶಿಷ್ಟ ಬೋಧನೆಯಾಗಿ ಪರಿಣಮಿಸಲಿದ್ದ ತ್ರಯೈಕ್ಯ ತತ್ವವನ್ನು ನಿರೂಪಿಸಿದರು. ಅವರಲ್ಲಿ, ಅಲೆಕ್ಸಾಂಡ್ರಿಯದ ಹಠಸ್ವಭಾವದ ಬಿಷಪ್‌ ಅಥನೇಸಿಯಸ್‌ ಮತ್ತು ಏಷಿಯ ಮೈನರ್‌ನ ಕೇಪಡೊಸಿಯದಿಂದ ಬಂದ ಮೂವರು ಚರ್ಚ್‌ ನಾಯಕರು, ಅಂದರೆ ಮಹಾ ಬ್ಯಾಸಿಲ್‌, ಇವನ ತಮ್ಮ ನಿಸಾದ ಗ್ರೆಗರಿ ಮತ್ತು ಇವರ ಮಿತ್ರ ನೇಸಿಯನ್ಸಸ್‌ ಗ್ರೆಗರಿ ಎಂಬುವವರು ಪ್ರಧಾನರಾಗಿದ್ದರು.

ಆ ಯುಗದಲ್ಲಿ, ಬರಹಗಾರರು ಮತ್ತು ಪ್ರಚಾರಕರು ಉಚ್ಚ ಮಟ್ಟದ ವಾಕ್ಚಾತುರ್ಯವನ್ನು ಸಂಪಾದಿಸಿಕೊಂಡರು. ನೇಸಿಯನ್ಸಸ್‌ನ ಗ್ರೆಗರಿ ಮತ್ತು ಜಾನ್‌ ಕ್ರಿಸೋಸ್ಟಮ್‌ (ಅರ್ಥ “ಹೊನ್ನಿನ-​ಮಾತುಳ್ಳವನು”) ಎಂಬುವರು ಗ್ರೀಕ್‌ ಭಾಷೆಯಲ್ಲಿ ಹಾಗೂ ಮಿಲನ್‌ನ ಏಂಬ್ರೊಸ್‌ ಮತ್ತು ಹಿಪ್ಪೊವಿನ ಅಗಸ್ಟಿನ್‌ ಎಂಬುವವರು ಲ್ಯಾಟಿನ್‌ ಭಾಷೆಯಲ್ಲಿ ನಿಸ್ಸೀಮ ವಾಗ್ಮಿಗಳಾಗಿದ್ದು, ಹೀಗೆ ಅವರ ಕಾಲದಲ್ಲಿ ಅತಿ ಗೌರವಾನ್ವಿತವಾಗಿದ್ದ ಮತ್ತು ಪ್ರಖ್ಯಾತವಾಗಿದ್ದ ಈ ಕಲೆಯಲ್ಲಿ ನಿಪುಣರಾಗಿದ್ದರು. ಅಗಸ್ಟಿನ್‌ನು ಆ ಸಮಯದ ಅತ್ಯಂತ ಪ್ರಭಾವಶಾಲಿ ಬರಹಗಾರನಾಗಿದ್ದನು. ಅವನ ದೇವತಾಶಾಸ್ತ್ರೀಯ ಗ್ರಂಥಗಳು, ಇಂದಿನ “ಕ್ರಿಸ್ತೀಯ” ಯೋಚನೆಯನ್ನು ವ್ಯಾಪಕವಾಗಿ ರೂಪಿಸಿವೆ. ಆ ಸಮಯದಲ್ಲಿ, ಅತಿ ಹೆಸರುವಾಸಿ ವಿದ್ಯಾವಂತ ಪಂಡಿತನಾಗಿದ್ದ ಜೆರೋಮ್‌, ಬೈಬಲನ್ನು ಅದರ ಮೂಲ ಭಾಷೆಗಳಿಂದ ಲ್ಯಾಟಿನ್‌ ವಲ್ಗೇಟ್‌ಗೆ ಭಾಷಾಂತರಿಸುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದನು.

ಹಾಗಿದ್ದರೂ, ಈ ಪ್ರಮುಖ ಪ್ರಶ್ನೆಗಳು ಏಳುತ್ತವೆ: ಆ ಚರ್ಚ್‌ ಫಾದರ್‌ಗಳು ಬೈಬಲ್‌ಗೆ ನಿಕಟವಾಗಿ ಅಂಟಿಕೊಂಡಿದ್ದರೋ? ಅವರು ಬೈಬಲ್‌ಗೆ ತಕ್ಕಂತೆ ಬೋಧಿಸಿದರೋ? ದೇವರ ಕುರಿತಾದ ನಿಷ್ಕೃಷ್ಟವಾದ ಜ್ಞಾನವನ್ನು ಪಡೆದುಕೊಳ್ಳಲು ಅವರ ಬರಹಗಳು ಒಳ್ಳೆಯ ಮಾರ್ಗದರ್ಶಕಗಳಾಗಿವೆಯೊ?

ದೇವರ ಬೋಧನೆಗಳೋ ಅಥವಾ ಮಾನವರ ಬೋಧನೆಗಳೋ?

ಇತ್ತೀಚೆಗೆ, ಪಿಸೀಡಿಯದ ಗ್ರೀಕ್‌ ಆರ್ತಡಾಕ್ಸ್‌ ಮೆಟ್ರೊಪಾಲಿಟನ್‌ ಮೆಥೋಡಿಯಸ್‌ ಎಂಬುವವರು, ಕ್ರೈಸ್ತತ್ತ್ವದ ಗ್ರೀಕ್‌ ಅಸ್ತಿವಾರ (ಇಂಗ್ಲಿಷ್‌) ಎಂಬ ಪುಸ್ತಕವನ್ನು ಬರೆದರು. ಗ್ರೀಕ್‌ ಸಂಸ್ಕೃತಿ ಮತ್ತು ತತ್ತ್ವಜ್ಞಾನವು ಆಧುನಿಕ “ಕ್ರಿಸ್ತೀಯ” ಯೋಚನೆಗೆ ಆಧಾರಕಟ್ಟನ್ನು ಒದಗಿಸಿತು ಎಂಬುದನ್ನು ತೋರಿಸಲು ಅವರು ಈ ಪುಸ್ತಕವನ್ನು ಬರೆದರು. ಆ ಪುಸ್ತಕದಲ್ಲಿ ಅವರು ಹಿಂಜರಿಯದೆ ಒಪ್ಪಿಕೊಳ್ಳುವುದು: “ಹೆಚ್ಚುಕಡಿಮೆ ಎಲ್ಲ ಪ್ರಖ್ಯಾತ ಚರ್ಚ್‌ ಫಾದರ್‌ಗಳು, ಗ್ರೀಕ್‌ ಮೂಲಾಂಶಗಳು ಅತ್ಯಧಿಕವಾಗಿ ಉಪಯುಕ್ತವಾಗಿವೆ ಎಂದು ಪರಿಗಣಿಸಿದರು ಮತ್ತು ಅವುಗಳನ್ನು ಅತಿ ಪ್ರಾಚೀನ ಗ್ರೀಕ್‌ ಸಾಹಿತ್ಯದಿಂದ ತೆಗೆದುಕೊಂಡರು. ಕ್ರೈಸ್ತ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿಯಾಗಿ ವ್ಯಕ್ತಪಡಿಸಲು ಅವನ್ನು ಒಂದು ಮಾಧ್ಯಮವಾಗಿ ಉಪಯೋಗಿಸಿದರು.”

ಉದಾಹರಣೆಗಾಗಿ, ತಂದೆ, ಮಗ ಮತ್ತು ಪವಿತ್ರಾತ್ಮವು ತ್ರಯೈಕ್ಯವನ್ನು ರೂಪಿಸುತ್ತದೆ ಎಂಬ ವಿಚಾರವನ್ನು ಪರಿಗಣಿಸಿ. ನೈಸೀಯ ಮಹಾಸಭೆಯ ನಂತರ, ಅನೇಕ ಚರ್ಚ್‌ ಫಾದರ್‌ಗಳು ನಿಷ್ಠಾವಂತ ತ್ರಯೈಕ್ಯವಾದಿಗಳಾದರು. ಅವರ ಬರಹಗಳು ಹಾಗೂ ನಿರೂಪಣೆಗಳು, ತ್ರಯೈಕ್ಯವನ್ನು ಕ್ರೈಸ್ತಪ್ರಪಂಚದ ಹೆಗ್ಗುರುತು ಬೋಧನೆಯಾಗಿ ಮಾಡುವುದರಲ್ಲಿ ನಿರ್ಣಾಯಕವಾಗಿದ್ದವು. ಆದರೆ ಬೈಬಲಿನಲ್ಲಿ ತ್ರಯೈಕ್ಯವನ್ನು ಕಾಣಲು ಸಾಧ್ಯವಿದೆಯೋ? ಇಲ್ಲ. ಹಾಗಾದರೆ ಈ ಚರ್ಚ್‌ ಫಾದರ್‌ಗಳು ಅದನ್ನು ಎಲ್ಲಿಂದ ತಂದರು? ತ್ರಯೈಕ್ಯವು “ವಿಧರ್ಮಿ ಧರ್ಮಗಳಿಂದ ತೆಗೆದುಕೊಳ್ಳಲ್ಪಟ್ಟು, ಕ್ರೈಸ್ತ ನಂಬಿಕೆಗೆ ಕಸಿಕಟ್ಟಲ್ಪಟ್ಟ ಅಶುದ್ಧತೆಯಾಗಿದೆ” ಎಂದು ಅನೇಕರು ಹೇಳುತ್ತಾರೆ ಎಂಬುದಾಗಿ, ಧಾರ್ಮಿಕ ಜ್ಞಾನದ ಶಬ್ದಕೋಶ (ಇಂಗ್ಲಿಷ್‌) ಸೂಚಿಸುತ್ತದೆ. ಮತ್ತು ನಮ್ಮ ಕ್ರೈಸ್ತತ್ತ್ವದಲ್ಲಿ ವಿಧರ್ಮ (ಇಂಗ್ಲಿಷ್‌) ಖಚಿತಪಡಿಸುವುದು: “ತ್ರಯೈಕ್ಯವು ವಿಧರ್ಮಿ ಮೂಲದಿಂದ ಬಂದದ್ದಾಗಿದೆ.” *​—ಯೋಹಾನ 3:​16; 14:28.

ದೇಹ ಸತ್ತ ನಂತರವೂ ಮಾನವನ ಯಾವುದೋ ಒಂದು ಭಾಗವು ಜೀವಿಸುತ್ತದೆ ಎಂಬ ಪ್ರಾಣದ ಅಮರತ್ವದ ಕುರಿತಾದ ಬೋಧನೆಯನ್ನು ಪರಿಗಣಿಸಿರಿ. ಇಲ್ಲಿ ಪುನಃ, ಮರಣವನ್ನು ಪಾರಾಗಿ ಉಳಿಯುವ ಪ್ರಾಣದ ಕುರಿತಾದ ಯಾವ ಬೋಧನೆಯೂ ಇಲ್ಲದಿದ್ದ ಒಂದು ಧರ್ಮದೊಳಗೆ ಈ ಕಲ್ಪನೆಯನ್ನು ಪರಿಚಯಿಸುವುದಕ್ಕೆ ಚರ್ಚ್‌ ಫಾದರ್‌ಗಳು ಕಾರಣರಾಗಿದ್ದರು. ಪ್ರಾಣವು ಸಾಯಬಲ್ಲದು ಎಂಬುದನ್ನು ಬೈಬಲ್‌ ಸ್ಪಷ್ಟವಾಗಿ ತೋರಿಸುತ್ತದೆ: ‘ಪಾಪಮಾಡುವ ಪ್ರಾಣವೇ ಸಾಯುವುದು.’ (ಯೆಹೆಜ್ಕೇಲ 18:4) ಪ್ರಾಣದ ಅಮರತ್ವದಲ್ಲಿ ನಂಬಿಕೆಯಿಡಲು ಚರ್ಚ್‌ ಫಾದರ್‌ಗಳಿಗೆ ಯಾವ ಆಧಾರವಿತ್ತು? “ಒಂದು ಆತ್ಮಿಕ ಪ್ರಾಣವು ದೇವರಿಂದ ಸೃಷ್ಟಿಸಲ್ಪಟ್ಟು, ಮಾನವನನ್ನು ಸಜೀವಗೊಳಿಸಲು ಗರ್ಭಧಾರಣೆಯ ಸಮಯದಲ್ಲಿ ಅವನ ದೇಹದಲ್ಲಿ ತುಂಬಿಸಲ್ಪಡುತ್ತದೆ ಎಂಬ ಕ್ರಿಸ್ತೀಯ ಕಲ್ಪನೆಯು, ಕ್ರಿಸ್ತೀಯ ತತ್ತ್ವಜ್ಞಾನದಲ್ಲಿ ದೀರ್ಘ ಸಮಯದಿಂದ ನಡೆದಿರುವ ವಿಕಸನದ ಫಲವಾಗಿದೆ. ಪೂರ್ವ ದಿಕ್ಕಿನಲ್ಲಿ ಆರಿಜೆನ್‌ ಮತ್ತು ಪಶ್ಚಿಮ ದಿಕ್ಕಿನಲ್ಲಿ ಸಂತ ಅಗಸ್ಟಿನ್‌ ಮಾತ್ರ, ಪ್ರಾಣ ಆತ್ಮಿಕ ಸತ್ವವಾಗಿದೆ ಎಂಬ ವಿಚಾರವನ್ನು ಒಂದು ಬೋಧನೆಯಾಗಿ ಸ್ವೀಕರಿಸಿದರು ಮತ್ತು ಅದರ ಸ್ವರೂಪದ ಕುರಿತಾಗಿ ಒಂದು ತಾತ್ತ್ವಿಕ ವಿಚಾರವನ್ನು ರೂಪಿಸಿದರು. . . . [ಅಗಸ್ಟಿನ್‌ನ ಬೋಧನೆಗೆ] (ಕೆಲವು ನ್ಯೂನತೆಗಳೊಂದಿಗೆ) ಒಂದು ದೊಡ್ಡ ಕಾರಣವು, ನವಪ್ಲೇಟೋವಾದವಾಗಿತ್ತು” ಎಂಬುದಾಗಿ ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡಿಯ ಹೇಳುತ್ತದೆ. ಮತ್ತು ಪ್ರೆಸ್‌ಬಿಟೀರಿಯನ್‌ ಜೀವನ (ಇಂಗ್ಲಿಷ್‌) ಎಂಬ ಪತ್ರಿಕೆಯು ಹೇಳುವುದು: “ಪ್ರಾಣದ ಅಮರತ್ವವು ಒಂದು ಗ್ರೀಕ್‌ ಕಲ್ಪನೆಯಾಗಿದ್ದು, ಪುರಾತನ ಕಾಲದ ನಿಗೂಢ ಪಂಥಗಳಿಂದ ರೂಪಿಸಲ್ಪಟ್ಟಿತು ಮತ್ತು ತತ್ತ್ವಜ್ಞಾನಿ ಪ್ಲೇಟೋವಿನಿಂದ ಬೆಳೆಸಲ್ಪಟ್ಟಿತು.” *

ಕ್ರೈಸ್ತ ಸತ್ಯದ ದೃಢ ಆಧಾರ

ಚರ್ಚ್‌ ಫಾದರ್‌ಗಳ ಐತಿಹಾಸಿಕ ಹಿನ್ನೆಲೆ ಹಾಗೂ ಅವರ ಬೋಧನೆಗಳ ಮೂಲಗಳ ಕುರಿತಾದ ಈ ಸಂಕ್ಷಿಪ್ತವಾದ ಪರಿಶೀಲನೆಯ ನಂತರವೂ ಹೀಗೆ ಕೇಳುವುದು ಸೂಕ್ತವಾಗಿದೆ: ಒಬ್ಬ ಪ್ರಾಮಾಣಿಕ ಕ್ರೈಸ್ತನೊ/ಳೊ ತನ್ನ ನಂಬಿಕೆಗಳನ್ನು ಚರ್ಚ್‌ ಫಾದರ್‌ಗಳ ಬೋಧನೆಗಳ ಮೇಲೆ ಆಧಾರಿಸಬೇಕೋ? ಈ ಪ್ರಶ್ನೆಯನ್ನು ಬೈಬಲ್‌ ಉತ್ತರಿಸಲಿ.

ಒಂದು ವಿಷಯವೇನೆಂದರೆ, “ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ” ಎಂದು ಹೇಳುವ ಮೂಲಕ, “ತಂದೆ” (ಅಥವಾ ‘ಫಾದರ್‌’) ಎಂಬ ಧಾರ್ಮಿಕ ಬಿರುದನ್ನು ಉಪಯೋಗಿಸುವುದು ತಪ್ಪೆಂಬುದನ್ನು ಯೇಸು ಕ್ರಿಸ್ತನು ತೋರಿಸಿದನು. (ಮತ್ತಾಯ 23:9) ಒಬ್ಬ ಧಾರ್ಮಿಕ ವ್ಯಕ್ತಿಗೆ ‘ಫಾದರ್‌’ ಎಂಬ ಪದವನ್ನು ಉಪಯೋಗಿಸುವುದು ಅಕ್ರೈಸ್ತವೂ ಅಶಾಸ್ತ್ರೀಯವೂ ಆಗಿದೆ. ಸುಮಾರು ಸಾ.ಶ. 98ರಲ್ಲಿ ದೇವರ ಲಿಖಿತ ವಾಕ್ಯವು ಅಪೊಸ್ತಲ ಯೋಹಾನನ ಬರಹದೊಂದಿಗೆ ಪೂರ್ಣಗೊಂಡಿತು. ಆದುದರಿಂದ, ನಿಜ ಕ್ರೈಸ್ತರು ಯಾರೇ ಒಬ್ಬ ಮಾನವನನ್ನು ದೈವಿಕ ಪ್ರಕಟನೆಯ ಮೂಲನೆಂದು ಪರಿಗಣಿಸಿ ಅವನ ಮೇಲೆ ಆತುಕೊಳ್ಳುವ ಆವಶ್ಯಕತೆಯಿಲ್ಲ. ಮಾನವ ಸಂಪ್ರದಾಯದಿಂದಾಗಿ ‘ದೇವರ ವಾಕ್ಯವನ್ನು ನಿರರ್ಥಕ ಮಾಡುವುದರಿಂದ’ ಇವರು ದೂರವಿರುತ್ತಾರೆ. ಮಾನವನ ಸಂಪ್ರದಾಯಕ್ಕೆ ದೇವರ ವಾಕ್ಯದ ಸ್ಥಾನವನ್ನು ಕೊಡುವುದು ಆತ್ಮಿಕವಾಗಿ ಮಾರಕವಾಗಿರುತ್ತದೆ. ಯೇಸು ಎಚ್ಚರಿಸಿದ್ದು: “ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು.”​—ಮತ್ತಾಯ 15:6, 14.

ದೇವರ ವಾಕ್ಯವಾಗಿರುವ ಬೈಬಲಿನ ಹೊರತು ಒಬ್ಬ ಕ್ರೈಸ್ತನಿಗೆ ಬೇರಾವುದೇ ಪ್ರಕಟನೆಯ ಆವಶ್ಯಕತೆಯಿದೆಯೋ? ಇಲ್ಲ. ಪ್ರೇರಿತ ದಾಖಲೆಗೆ ಏನನ್ನಾದರೂ ಕೂಡಿಸುವುದರ ವಿರುದ್ಧ ಪ್ರಕಟನೆ ಪುಸ್ತಕ ಎಚ್ಚರಿಸುತ್ತದೆ: “ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ತಂದುಹಾಕಿದರೆ ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ತಂದುಹಾಕುವನು.”​—ಪ್ರಕಟನೆ 22:18.

ದೇವರ ಲಿಖಿತ ವಾಕ್ಯವಾದ ಬೈಬಲಿನಲ್ಲಿ ಕ್ರಿಸ್ತೀಯ ಸತ್ಯವು ರೂಪತಾಳಿದೆ. (ಯೋಹಾನ 17:17; 2 ತಿಮೊಥೆಯ 3:16; 2 ಯೋಹಾನ 1-4) ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಐಹಿಕ ತತ್ತ್ವಜ್ಞಾನದ ಮೇಲೆ ಹೊಂದಿಕೊಂಡಿರುವುದಿಲ್ಲ. ದೈವಿಕ ಪ್ರಕಟನೆಯನ್ನು ವಿವರಿಸಲಿಕ್ಕಾಗಿ ಮಾನವನ ವಿವೇಕವನ್ನು ಉಪಯೋಗಿಸಲು ಪ್ರಯತ್ನಿಸಿದ ಮನುಷ್ಯರ ಸಂಬಂಧದಲ್ಲಿ, ಅಪೊಸ್ತಲ ಪೌಲನ ಪ್ರಶ್ನೆಗಳನ್ನು ಪುನಃ ಉಚ್ಚರಿಸುವುದು ಉತ್ತಮವಾಗಿರುವುದು: “ಜ್ಞಾನಿಯು ಎಲ್ಲಿ? ಶಾಸ್ತ್ರಿಯೆಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕಜ್ಞಾನವನ್ನು ಹುಚ್ಚುತನವಾಗ ಮಾಡಿದ್ದಾನಲ್ಲವೇ.”​—1 ಕೊರಿಂಥ 1:20.

ಅಲ್ಲದೆ, ನಿಜ ಕ್ರೈಸ್ತ ಸಭೆಯು “ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ.” (1 ತಿಮೊಥೆಯ 3:15) ಅದರ ಮೇಲ್ವಿಚಾರಕರು, ಸಭೆಯಲ್ಲಿ ತಮ್ಮ ಬೋಧನೆಯ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಯಾವುದೇ ರೀತಿಯ ತತ್ತ್ವಾಧಾರಿತ ಮಾಲಿನ್ಯವು ಒಳನುಸುಳುವುದನ್ನು ತಡೆಯುತ್ತಾರೆ. (2 ತಿಮೊಥೆಯ 2:​15-​18, 25) ಅವರು ‘ಸುಳ್ಳುಪ್ರವಾದಿಗಳು, ಸುಳ್ಳುಬೋಧಕರು ಮತ್ತು ನಾಶಕರವಾದ ಮತಭೇದಗಳಿಂದ’ ಸಭೆಯನ್ನು ರಕ್ಷಿಸುತ್ತಾರೆ. (2 ಪೇತ್ರ 2:1) ಅಪೊಸ್ತಲರ ಮರಣಾನಂತರ, ‘ವಂಚಿಸುವ ಆತ್ಮಗಳ ನುಡಿಗಳೂ ದೆವ್ವಗಳ ಬೋಧನೆಗಳೂ’ ಕ್ರೈಸ್ತ ಸಭೆಯೊಳಗೆ ಬೇರುಬಿಡುವಂತೆ ಚರ್ಚ್‌ ಫಾದರ್‌ಗಳು ಅನುಮತಿಸಿದರು.​—1 ತಿಮೊಥೆಯ 4:1.

ಈ ಧರ್ಮಭ್ರಷ್ಟತೆಯ ಪರಿಣಾಮಗಳು ಇಂದು ಕ್ರೈಸ್ತಪ್ರಪಂಚದಲ್ಲಿ ಪ್ರತ್ಯಕ್ಷವಾಗಿವೆ. ಅದರ ನಂಬಿಕೆಗಳು ಮತ್ತು ಆಚರಣೆಗಳು ಬೈಬಲ್‌ ಸತ್ಯಕ್ಕಿಂತ ತೀರ ಭಿನ್ನವಾಗಿವೆ.

[ಪಾದಟಿಪ್ಪಣಿಗಳು]

^ ಪ್ಯಾರ. 15 ತ್ರಯೈಕ್ಯ ಬೋಧನೆಯ ವಿಸ್ತಾರವಾದ ಚರ್ಚೆಯು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ, ನೀವು ತ್ರಯೈಕ್ಯವನ್ನು ನಂಬ ಬೇಕೋ? ಎಂಬ ಬ್ರೋಷರಿನಲ್ಲಿದೆ.

^ ಪ್ಯಾರ. 16 ಪ್ರಾಣದ ಕುರಿತಾದ ಬೈಬಲಿನ ಸವಿಸ್ತಾರವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ರೀಸನಿಂಗ್‌ ಫ್ರಮ್‌ ದ ಸ್ಕ್ರಿಪ್ಚರ್ಸ್‌ ಪುಸ್ತಕದ ಪುಟ 98-104 ಹಾಗೂ 375-80ನ್ನು ನೋಡಿ.

[ಪುಟ 18ರಲ್ಲಿರುವ ಚೌಕ/ಚಿತ್ರ]

ಕೇಪಡೊಸಿಯದ ಫಾದರ್‌ಗಳು

“ಆರ್ತಡಾಕ್ಸ್‌ ಚರ್ಚ್‌ . . . ನಾಲ್ಕನೆಯ ಶತಮಾನದ ಬರಹಗಾರರಿಗೆ, ಅದರಲ್ಲೂ ಪ್ರಾಮುಖ್ಯವಾಗಿ ‘ಮೂವರು ಮಹಾನ್‌ ಪ್ರಧಾನ ಫಾದರ್‌ಗಳು’ ಎಂದು ಅದು ಹೆಸರಿಸುವ ನೇಸಿಯನ್ಸಸ್‌ನ ಗ್ರೆಗರಿ, ಮಹಾ ಬ್ಯಾಸಿಲ್‌ ಮತ್ತು ಜಾನ್‌ ಕ್ರಿಸೋಸ್ಟಮ್‌ಗಾಗಿ ವಿಶಿಷ್ಟವಾದ ಮರ್ಯಾದೆಯನ್ನು ಹೊಂದಿರುತ್ತದೆ” ಎಂಬುದಾಗಿ ಸಂನ್ಯಾಸಿಯಾಗಿರುವ, ಬರಹಗಾರ ಕಾಲೀಸ್ಟೋಸ್‌ ಹೇಳುತ್ತಾನೆ. ಈ ಚರ್ಚ್‌ ಫಾದರ್‌ಗಳು ತಮ್ಮ ಬೋಧನೆಗಳನ್ನು ಬೈಬಲಿನ ಮೇಲೆ ಆಧಾರಿಸಿದರೋ? ಮಹಾ ಬ್ಯಾಸಿಲ್‌ನ ಕುರಿತಾಗಿ, ಗ್ರೀಕ್‌ ಚರ್ಚಿನ ಫಾದರ್‌ಗಳು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಅವನು ಪ್ಲೇಟೋ, ಹೊಮರ್‌ ಮತ್ತು ಇತಿಹಾಸಗಾರರು ಹಾಗೂ ವಾಗ್ಮಿಗಳೊಂದಿಗೆ ಜೀವನಪರ್ಯಂತ ಆಪ್ತಸಹವಾಸವನ್ನು ಇಟ್ಟುಕೊಂಡಿದ್ದನು ಎಂಬುದನ್ನು ಅವನ ಬರಹಗಳು ತೋರಿಸುತ್ತವೆ ಮತ್ತು ಅವರು ಅವನ ಶೈಲಿಯ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರಿದರು. . . . ಬ್ಯಾಸಿಲ್‌ ‘ಗ್ರೀಕ್‌’ ಆಗಿಯೇ ಉಳಿದನು.” ನೇಸಿಯನ್ಸಸ್‌ನ ಗ್ರೆಗರಿಯ ವಿಷಯದಲ್ಲೂ ಇದು ಸತ್ಯವಾಗಿತ್ತು. “ಚರ್ಚ್‌ನ ಯಶಸ್ಸು ಹಾಗೂ ಹಿರಿಮೆಯು, ಪ್ರಾಚೀನ ಸಾಹಿತ್ಯ ಸಂಸ್ಕೃತಿಯ ಸಂಪ್ರದಾಯಗಳನ್ನು ಸಂಪೂರ್ಣವಾಗಿ ಸ್ವೀಕರಿಸುವುದರ ಮೂಲಕವೇ ಅತ್ಯುತ್ತಮವಾಗಿ ತೋರಿಬರುವುದು, ಎಂಬುದು ಅವನ ದೃಷ್ಟಿಕೋನವಾಗಿತ್ತು.”

ಈ ಮೂವರ ಕುರಿತಾಗಿ, ಪ್ರೊಫೆಸರ್‌ ಪಾನಾಈಓಟೀಸ್‌ ಕೆ. ಕ್ರೀಸ್ಟೊ ಬರೆಯುವುದು: “ಹೊಸ ಒಡಂಬಡಿಕೆಯ ಆಜ್ಞೆಗೆ ಹೊಂದಿಕೆಯಲ್ಲಿರಲು ‘ಪ್ರಾಪಂಚಿಕಬಾಲಬೋಧನೆ ಮತ್ತು ನಿರರ್ಥಕ ತತ್ವಜ್ಞಾನಬೋಧನೆಯ’ [ಕೊಲೊಸ್ಸೆ 2:8] ವಿರುದ್ಧ ಕೆಲವು ಸಂದರ್ಭಗಳಲ್ಲಿ ಅವರು ಎಚ್ಚರಿಸುವುದಾದರೂ, ಅದೇ ಸಮಯದಲ್ಲಿ ಸ್ವತಃ ಅವರು ತತ್ತ್ವಜ್ಞಾನ ಮತ್ತು ಅದಕ್ಕೆ ಸಂಬಂಧಿತ ನಿಬಂಧನೆಗಳನ್ನು ಕಟ್ಟಾಸಕ್ತಿಯಿಂದ ಅಭ್ಯಾಸಿಸುತ್ತಾರೆ ಮಾತ್ರವಲ್ಲದೆ ಬೇರೆಯವರೂ ಅಭ್ಯಾಸಿಸುವಂತೆ ಶಿಫಾರಸ್ಸುಮಾಡುತ್ತಾರೆ.” ನಿಸ್ಸಂದೇಹವಾಗಿ, ತಮ್ಮ ಆಲೋಚನೆಗಳನ್ನು ಬೆಂಬಲಿಸಲು ಬೈಬಲ್‌ ಮಾತ್ರ ಸಾಕಾಗುವುದಿಲ್ಲ ಎಂದು ಇಂತಹ ಚರ್ಚ್‌ ಬೋಧಕರು ನೆನಸಿದರು. ಅವರು ಪ್ರಮಾಣಕ್ಕಾಗಿ ಬೇರೆ ಆಧಾರಸ್ತಂಭಗಳನ್ನು ಹುಡುಕುವುದು, ಅವರ ಬೋಧನೆಗಳು ಬೈಬಲ್‌ಗೆ ಪರಕೀಯವಾಗಿವೆ ಎಂದು ಅರ್ಥೈಸುತ್ತದೋ? ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರನ್ನು ಎಚ್ಚರಿಸಿದ್ದು: “ನಾನಾವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ.”​—ಇಬ್ರಿಯ 13:9.

[ಕೃಪೆ]

© Archivo Iconografico, S.A./CORBIS

[ಪುಟ 20ರಲ್ಲಿರುವ ಚೌಕ/ಚಿತ್ರ]

ಅಲೆಕ್ಸಾಂಡ್ರಿಯದ ಸಿರಿಲ್‌ ವಿವಾದಾಸ್ಪದ ಚರ್ಚ್‌ ಫಾದರ್‌

ಅಲೆಕ್ಸಾಂಡ್ರಿಯದ ಸಿರಿಲ್‌ (c. ಸಾ.ಶ. 375-​444), ತುಂಬ ವಿವಾದಾಸ್ಪದವಾಗಿದ್ದ ಚರ್ಚ್‌ ಫಾದರ್‌ಗಳಲ್ಲಿ ಒಬ್ಬನಾಗಿದ್ದನು. ಚರ್ಚ್‌ ಇತಿಹಾಸಗಾರನಾದ ಹನ್ಸ್‌ ಫಾನ್‌ ಕಾಂಪನ್‌ಹೌಸನ್‌ ಅವನನ್ನು, “ಹಠಮಾರಿ, ಹಿಂಸಾತ್ಮಕ ಮತ್ತು ಕುತಂತ್ರಿ ಹಾಗೂ ಅವನ ವೃತ್ತಿಯ ದೊಡ್ಡಸ್ತಿಕೆಯಿಂದ ಮತ್ತು ಸ್ಥಾನದ ಹಿರಿಮೆಯಿಂದ ಪ್ರಭಾವಿಸಲ್ಪಟ್ಟವನು” ಎಂದು ವರ್ಣಿಸುತ್ತಾನೆ. ಅವನು ಇನ್ನೂ ಕೂಡಿಸುವುದು, “ಯಾವುದೇ ವಿಷಯವು, ಅವನ ಪ್ರಭಾವ ಮತ್ತು ಅಧಿಕಾರವನ್ನು ಹೆಚ್ಚಿಸಲು ಉಪಯುಕ್ತಕರವಾಗಿರದಿದ್ದರೆ, ಅವನು ಅದನ್ನು ಸರಿಯೆಂದು ಪರಿಗಣಿಸುತ್ತಿರಲಿಲ್ಲ. . . . ತನ್ನ ವಿಧಾನಗಳಲ್ಲಿನ ಕ್ರೌರ್ಯ ಹಾಗೂ ನೀತಿನಿಷ್ಠೆಗಳಿಲ್ಲದಿರುವಿಕೆಯಿಂದ ಅವನೆಂದೂ ಖಿನ್ನನಾಗಲಿಲ್ಲ.” ಸಿರಿಲ್‌ ಅಲೆಕ್ಸಾಂಡ್ರಿಯದ ಬಿಷಪ್‌ ಆಗಿದ್ದಾಗ, ಕಾನ್‌ಸ್ಟಾಂಟಿನೋಪಲ್‌ನ ಬಿಷಪ್‌ನನ್ನು ಅಧಿಕಾರದಿಂದ ತೆಗೆದುಹಾಕಲು, ಲಂಚ, ಮಾನಹಾನಿಕರ ಹೇಳಿಕೆಗಳು ಮತ್ತು ಮಿಥ್ಯಾಪವಾದವನ್ನು ಉಪಯೋಗಿಸಿದನು. ಸಾ.ಶ. 415ರಲ್ಲಿ, ಹೈಪಾಶೆ ಎಂಬ ಒಬ್ಬ ಪ್ರಖ್ಯಾತ ತತ್ತ್ವಜ್ಞಾನಿಯ ಕೊಲೆಗೆ ಅವನು ಜವಾಬ್ದಾರನಾಗಿದ್ದಾನೆ ಎಂದು ಎಣಿಸಲಾಗುತ್ತದೆ. ಸಿರಿಲ್‌ನ ದೇವತಾಶಾಸ್ತ್ರೀಯ ಬರಹಗಳ ಕುರಿತಾಗಿ ಕಾಂಪನ್‌ಹೌಸನ್‌ ಹೇಳುವುದು: “ನಂಬಿಕೆಯ ವಿಷಯವಾದ ಪ್ರಶ್ನೆಗಳನ್ನು ತೀರ್ಮಾನಿಸುವುದರಲ್ಲಿ ಸಂಪೂರ್ಣವಾಗಿ ಬೈಬಲಿನ ಮೇಲೆ ಮಾತ್ರ ಆತುಕೊಳ್ಳುವುದರ ಬದಲಾಗಿ, ಅಂಗೀಕೃತವಾಗಿರುವ ಬೇರೆ ಪ್ರಮಾಣಗ್ರಂಥಗಳಿಂದ ಸೂಕ್ತವಾದ ಉಲ್ಲೇಖಗಳು ಮತ್ತು ಉಲ್ಲೇಖಗಳ ಸಂಗ್ರಹಗಳ ಸಹಾಯವನ್ನು ತೆಗೆದುಕೊಳ್ಳುವ ವಾಡಿಕೆಯನ್ನು ಇವನೇ ಆರಂಭಿಸಿದನು.”

[ಪುಟ 19ರಲ್ಲಿರುವ ಚಿತ್ರ]

ಜೆರೋಮ್‌

[ಪುಟ 19ರಲ್ಲಿರುವ ಚಿತ್ರಗಳು]

Garo Nalbandian