ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ನಂಬಿಕೆಯು ಶೋಧಿಸಲ್ಪಟ್ಟಾಗ ನಾವು ಒಂಟಿಗರಾಗಿರಲಿಲ್ಲ

ನಮ್ಮ ನಂಬಿಕೆಯು ಶೋಧಿಸಲ್ಪಟ್ಟಾಗ ನಾವು ಒಂಟಿಗರಾಗಿರಲಿಲ್ಲ

ನಮ್ಮ ನಂಬಿಕೆಯು ಶೋಧಿಸಲ್ಪಟ್ಟಾಗ ನಾವು ಒಂಟಿಗರಾಗಿರಲಿಲ್ಲ

ವಿಕಿ, ಒಬ್ಬ ಆರೋಗ್ಯವಂತ, ಮುದ್ದಾದ ಮತ್ತು ಚುರುಕಾದ ಗೊಂಬೆಯಂಥ ಹೆಣ್ಣು ಮಗುವಾಗಿದ್ದಳು. ಹೌದು, 1993ರ ವಸಂತ ಋತುವಿನಲ್ಲಿ ಅವಳು ಹುಟ್ಟಿದಾಗ, ನಮ್ಮ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ನಾವು ಸ್ವೀಡನ್‌ನ ದಕ್ಷಿಣ ದಿಕ್ಕಿನ ಒಂದು ಚಿಕ್ಕ ಪಟ್ಟಣದಲ್ಲಿ ಜೀವಿಸುತ್ತಿದ್ದೆವು. ಮತ್ತು ಜೀವನವು ತುಂಬ ಸಂತೋಷಮಯವಾಗಿತ್ತು.

ದರೆ, ವಿಕಿ ಒಂದೂವರೆ ವರ್ಷದವಳಾಗಿದ್ದಾಗ, ನಮ್ಮ ಈ ಪುಟ್ಟ ಸಂಸಾರವು ಕುಸಿದುಬೀಳುತ್ತಿರುವಂತೆ ತೋರಿತು. ವಿಕಿ ಸ್ವಲ್ಪ ಸಮಯದಿಂದ ಅಸ್ವಸ್ಥಳಾಗಿದ್ದಳು. ಆದ್ದರಿಂದ ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆವು. ನಮ್ಮ ಮಗಳು, ತೀವ್ರತರ ದುಗ್ಧಕಣ ಊತಗೊಂಡ ಲುಕೇಮಿಯ, ಅಂದರೆ ಬಿಳಿ ರಕ್ತಕಣಗಳನ್ನು ಬಾಧಿಸುವಂಥ, ಮಕ್ಕಳನ್ನು ತಾಕುವ ಒಂದು ರೀತಿಯ ಕ್ಯಾನ್ಸರ್‌ನಿಂದ ನರಳುತ್ತಿದ್ದಾಳೆ ಎಂದು ಡಾಕ್ಟರರು ಹೇಳಿದರು; ಆ ಕ್ಷಣವನ್ನು ನಾವು ಎಂದಿಗೂ ಮರೆಯುವಂತಿಲ್ಲ.

ನಮ್ಮ ಪುಟ್ಟ ಕಂದಮ್ಮ ಈ ಭಯಂಕರವಾದ ರೋಗದಿಂದ ಪೀಡಿತಳಾಗಿದ್ದಾಳೆಂಬುದು ನಮಗೆ ನುಂಗಲಾಗದ ತುತ್ತಾಗಿತ್ತು. ಅವಳು ಈಗತಾನೇ ತನ್ನ ಸುತ್ತಲೂ ಇರುವ ಲೋಕವನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಳು. ಆದರೆ ಈಗ ಅವಳು ಸಾಯುವ ಸಾಧ್ಯತೆಯಿತ್ತು. ನಮ್ಮನ್ನು ಸಂತೈಸಲು ಪ್ರಯತ್ನಿಸುತ್ತಾ, ಇದ್ದಮಟ್ಟಿಗೆ ಯಶಸ್ವಿಕರವಾದ ಚಿಕಿತ್ಸೆಯೊಂದನ್ನು ಅವಳಿಗೆ ನೀಡಬಹುದೆಂದು ಡಾಕ್ಟರರು ಹೇಳಿದರು. ಮತ್ತು ಇದರಲ್ಲಿ ಅನೇಕ ರಕ್ತಪೂರಣಗಳೊಂದಿಗೆ ಕೀಮೋಥೆರಪಿ ಚಿಕಿತ್ಸೆಯು ಒಳಗೂಡಿದೆ ಎಂದು ಹೇಳಿದರು. ಇದು ನಮಗೆ ಇನ್ನೊಂದು ಧಕ್ಕೆಯಾಗಿತ್ತು.

ನಮ್ಮ ನಂಬಿಕೆಯು ಪರೀಕ್ಷಿಸಲ್ಪಡುತ್ತದೆ

ನಾವು ಖಂಡಿತವಾಗಿಯೂ ನಮ್ಮ ಮಗಳನ್ನು ತುಂಬ ಪ್ರೀತಿಸಿದೆವು ಮತ್ತು ಅವಳಿಗೆ ಲಭ್ಯವಿರುವ ಅತ್ಯುತ್ತಮವಾದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಲು ಬಯಸಿದೆವು. ಆದರೆ, ಅವಳಿಗೆ ರಕ್ತಪೂರಣಗಳನ್ನು ಕೊಡುವಂತೆ ನಾವು ಖಂಡಿತವಾಗಿಯೂ ಅನುಮತಿಸಸಾಧ್ಯವಿರಲಿಲ್ಲ. ಏಕೆಂದರೆ, ದೇವರ ವಾಕ್ಯವಾದ ಬೈಬಲನ್ನು ನಾವು ದೃಢವಾಗಿ ನಂಬುತ್ತೇವೆ ಮತ್ತು ಅದು ‘ರಕ್ತವನ್ನು ವಿಸರ್ಜಿಸಿರಿ’ ಎಂದು ಸ್ಪಷ್ಟವಾಗಿ ತಿಳಿಸುತ್ತದೆ. (ಅ. ಕೃತ್ಯಗಳು 15:28, 29) ರಕ್ತಪೂರಣಗಳು ಅಪಾಯಕರವಾಗಿವೆ ಎಂಬುದು ಸಹ ನಮಗೆ ಗೊತ್ತಿತ್ತು. ಸಾವಿರಾರು ಜನರು ರಕ್ತಪೂರಣಗಳಿಂದ ಸೋಂಕಿತರಾಗಿ ಸತ್ತುಹೋಗಿದ್ದಾರೆ. ಇದ್ದಂತಹ ಒಂದೇ ಒಂದು ಬದಲಿಮಾರ್ಗವು, ರಕ್ತಪೂರಣಗಳಿಲ್ಲದ ಉಚ್ಚ-ಗುಣಮಟ್ಟದ ಚಿಕಿತ್ಸೆಯಾಗಿತ್ತು. ಈ ಸಂಬಂಧದಲ್ಲಿ, ನಂಬಿಕೆಗಾಗಿರುವ ನಮ್ಮ ಹೋರಾಟವು ಇಲ್ಲಿ ಶುರುವಾಯಿತು.

ಈಗೇನು ಮಾಡುವುದು? ಸಹಾಯಕ್ಕಾಗಿ ಯೆಹೋವನ ಸಾಕ್ಷಿಗಳ ಸ್ವೀಡನ್‌ ಬ್ರಾಂಚ್‌ ಆಫೀಸಿನಲ್ಲಿರುವ ಹಾಸ್ಪಿಟಲ್‌ ಇನ್‌ಫರ್‌ಮೇಷನ್‌ ಸರ್ವಿಸಸ್‌ (ಏಚ್‌ಐಎಸ್‌) ಅನ್ನು ನಾವು ಸಂಪರ್ಕಿಸಿದೆವು. * ರಕ್ತಪೂರಣಗಳಿಲ್ಲದೆ ಕೀಮೋಥೆರಪಿ ಚಿಕಿತ್ಸೆಯನ್ನು ನೀಡಲು ಸಿದ್ಧವಿರುವ ಒಂದು ಆಸ್ಪತ್ರೆ ಮತ್ತು ಡಾಕ್ಟರ್‌ಗಾಗಿರುವ ನಮ್ಮ ಹುಡುಕಾಟದಲ್ಲಿ, ಯೂರೋಪಿನಾದ್ಯಂತ ಇರುವ ಅನೇಕ ಆಸ್ಪತ್ರೆಗಳಿಗೆ ಫ್ಯಾಕ್ಸ್‌ಗಳು ಒಡನೆಯೇ ಕಳುಹಿಸಲ್ಪಟ್ಟವು. ನಮ್ಮೊಂದಿಗೆ ಸಹಕರಿಸಲು ನಮ್ಮ ಸಹೋದರರು ಮಾಡಿದ ಪ್ರಯತ್ನಗಳಲ್ಲಿ ಅವರ ಹುರುಪು ಹಾಗೂ ಪ್ರೀತಿಯನ್ನು ನೋಡಿದ್ದು ನಮ್ಮನ್ನು ತುಂಬ ಬಲಗೊಳಿಸಿತು. ನಂಬಿಕೆಗಾಗಿರುವ ನಮ್ಮ ಹೋರಾಟದಲ್ಲಿ ನಾವು ಒಂಟಿಗರಾಗಿರಲಿಲ್ಲ.

ಕೆಲವೇ ತಾಸುಗಳಲ್ಲಿ, ಜರ್ಮನಿಯ ಹ್ಯಾಂಬರ್ಗ್‌/ಸಾರ್‌ನಲ್ಲಿ ಒಂದು ಆಸ್ಪತ್ರೆ ಮತ್ತು ಒಬ್ಬ ಡಾಕ್ಟರ್‌ನನ್ನು ಕಂಡುಹಿಡಿಯಲಾಯಿತು. ವಿಕಿಯನ್ನು ಅಲ್ಲಿ ಪರೀಕ್ಷಿಸಲಿಕ್ಕಾಗಿ, ಮರುದಿನ ನಾವು ವಿಮಾನದಲ್ಲಿ ಹೋಗಲು ಏರ್ಪಾಡುಗಳನ್ನು ಮಾಡಲಾಯಿತು. ನಾವು ಅಲ್ಲಿ ತಲಪಿದಾಗ, ಹ್ಯಾಂಬರ್ಗ್‌ನ ಸ್ಥಳಿಕ ಸಭೆಯಿಂದ ನಮ್ಮ ಕ್ರೈಸ್ತ ಸಹೋದರರು ಹಾಗೂ ನಮ್ಮ ಸಂಬಂಧಿಕರಲ್ಲಿ ಕೆಲವರು, ನಮ್ಮನ್ನು ಬರಮಾಡಿಕೊಳ್ಳಲು ಬಂದಿದ್ದರು. ಸ್ಥಳಿಕ ಹಾಸ್ಪಿಟಲ್‌ ಲಿಯೆಸನ್‌ ಕಮಿಟಿಯ ಒಬ್ಬ ಪ್ರತಿನಿಧಿಯು ನಮ್ಮನ್ನು ಆದರದಿಂದ ಸ್ವಾಗತಿಸಿದರು. ಅವರು ನಮ್ಮೊಂದಿಗೆ ಆಸ್ಪತ್ರೆಗೆ ಬಂದರು ಹಾಗೂ ತಮ್ಮಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಿದರು. ಒಂದು ಪರಕೀಯ ದೇಶದಲ್ಲಿ ಕೂಡ ಆತ್ಮಿಕ ಸಹೋದರರು ನಮ್ಮ ಪಕ್ಕದಲ್ಲಿರುವುದನ್ನು ನೋಡುವುದು ನಮಗೆ ತುಂಬ ಸಾಂತ್ವನವನ್ನು ನೀಡಿತು.

ಆಸ್ಪತ್ರೆಯಲ್ಲಿ ಡಾ. ಗ್ರಾಫ್‌ರನ್ನು ಭೇಟಿಯಾದಾಗ, ನಾವು ಪುನಃ ಸಂತೈಸಲ್ಪಟ್ಟೆವು. ಅವರು ಚೆನ್ನಾಗಿ ಅರ್ಥಮಾಡಿಕೊಳ್ಳುವವರಾಗಿದ್ದರು ಮತ್ತು ರಕ್ತಪೂರಣಗಳಿಲ್ಲದೆ ವಿಕಿಗೆ ಚಿಕಿತ್ಸೆ ನೀಡಲು ತನ್ನಿಂದಾದುದೆಲ್ಲವನ್ನೂ ಮಾಡುವೆನೆಂದು ನಮಗೆ ಆಶ್ವಾಸನೆ ಕೊಟ್ಟರು. ಅವಳ ಹೀಮೋಗ್ಲೋಬಿನ್‌ (ರಕ್ತವರ್ಣ) ಮಟ್ಟವು ಡೆಸಿಲೀಟರಿಗೆ 5 ಗ್ರಾಮ್‌ಗಳಷ್ಟು ಇಳಿದರೂ ಕೂಡ, ರಕ್ತಪೂರಣಗಳಿಲ್ಲದೆ ಚಿಕಿತ್ಸೆಯನ್ನು ಮುಂದುವರಿಸುವುದಕ್ಕೆ ಸಿದ್ಧರಿರುವುದಾಗಿ ಅವರು ಹೇಳಿದರು. ವಿಕಿಗೆ ತಡವಿಲ್ಲದೆ ರೋಗನಿದಾನ ಮಾಡಿದ್ದು ಹಾಗೂ ಆ ಕೂಡಲೇ ಅವಳನ್ನು ಅಲ್ಲಿಗೆ ತರಲು ಶ್ರಮಪಟ್ಟಿದ್ದು, ಅವಳಿಗೆ ಯಶಸ್ವಿಕರವಾದ ಚಿಕಿತ್ಸೆ ನೀಡಲು ಒಳ್ಳೆಯ ಅವಕಾಶವನ್ನು ಕೊಟ್ಟಿದೆ ಎಂದು ಅವರು ಹೇಳಿದರು. ವಿಕಿಯಂತಹ ರೋಗಿಯ ವಿಷಯದಲ್ಲಿ, ರಕ್ತಪೂರಣಗಳಿಲ್ಲದೆ ತಾನು ಕೀಮೋಥೆರಪಿ ಮಾಡುವುದು ಇದೇ ಮೊದಲ ಬಾರಿ ಎಂಬುದನ್ನು ಅವರು ಒಪ್ಪಿಕೊಂಡರು. ನಾವು ತುಂಬ ಕೃತಜ್ಞರಾಗಿದ್ದೆವು ಮತ್ತು ಸಹಾಯಮಾಡಲು ಡಾ. ಗ್ರಾಫ್‌ರಿಗಿರುವ ಧೈರ್ಯ ಹಾಗೂ ದೃಢಸಂಕಲ್ಪವನ್ನು ತುಂಬ ಮೆಚ್ಚಿದೆವು.

ಹಣಕಾಸಿನ ಸಮಸ್ಯೆಗಳು

ಆದರೆ ಈಗ, ವಿಕಿಯ ಚಿಕಿತ್ಸೆಗಾಗಿ ಹಣ ಎಲ್ಲಿಂದ ತರುವುದೆಂಬ ಪ್ರಶ್ನೆ ನಮ್ಮ ಮುಂದೆ ಬಂತು. ಎರಡು ವರ್ಷಗಳ ಚಿಕಿತ್ಸೆಯ ಖರ್ಚು 1,50,000 ಡಾಯಿಚ್‌ ಮಾರ್ಕ್‌ಗಳು (30 ಲಕ್ಷ ರೂಪಾಯಿಗಳು) ಆಗುವುದು ಎಂದು ನಮಗೆ ತಿಳಿಸಲ್ಪಟ್ಟಾಗ ನಾವು ಬೆಚ್ಚಿಬಿದ್ದೆವು. ಅಷ್ಟೊಂದು ಮೊತ್ತದಲ್ಲಿ ಒಂದು ಸ್ವಲ್ಪ ಹಣವೂ ನಮ್ಮ ಹತ್ತಿರವಿರಲಿಲ್ಲ, ಆದರೆ ಅದೇ ಸಮಯದಲ್ಲಿ ವಿಕಿಯ ಚಿಕಿತ್ಸೆಯನ್ನು ಆರಂಭಿಸುವುದು ಅತ್ಯಗತ್ಯವಾಗಿತ್ತು. ಚಿಕಿತ್ಸೆಗಾಗಿ ಸ್ವೀಡನ್‌ನಿಂದ ಜರ್ಮನಿಗೆ ಬಂದಿರುವ ಕಾರಣ, ಯಾವುದೇ ರೀತಿಯ ಸಾರ್ವಜನಿಕ ಆರೋಗ್ಯಾರೈಕೆಯ ವಿಮೆಯನ್ನು ಪಡೆದುಕೊಳ್ಳುವ ಹಕ್ಕು ನಮಗಿರಲಿಲ್ಲ. ಒಂದು ಕಡೆಯಲ್ಲಿ ತುಂಬ ಅಸ್ವಸ್ಥಳಾಗಿರುವ ನಮ್ಮ ಪುಟ್ಟ ಹುಡುಗಿ ಮತ್ತು ಇನ್ನೊಂದು ಕಡೆಯಲ್ಲಿ ಸಹಾಯಮಾಡಲು ಸಿದ್ಧವಿರುವ ವೈದ್ಯಕೀಯ ಪರಿಣತರಿದ್ದರು, ಆದರೆ ನಮ್ಮ ಹತ್ತಿರ ಸಾಕಷ್ಟು ಹಣವಿರಲಿಲ್ಲ.

ಆಸ್ಪತ್ರೆಯು ನಮ್ಮ ಸಹಾಯಕ್ಕೆ ಬಂತು. ಈಗ 20,000 ಮಾರ್ಕ್‌ಗಳ (4 ಲಕ್ಷ ರೂಪಾಯಿಗಳು) ಒಂದು ಭಾಗವನ್ನು ಕೊಟ್ಟು, ಮಿಕ್ಕಿದ ಹಣವನ್ನು ಕೊಡುವಂತೆ ರುಜುಪಡಿಸುವ ಒಂದು ಗ್ಯಾರಂಟಿ ಪತ್ರಕ್ಕೆ ನಾವು ಸಹಿಹಾಕಿದರೆ, ಚಿಕಿತ್ಸೆ ಆಗಲೇ ಶುರುಮಾಡಲಾಗುವುದೆಂದು ಆಸ್ಪತ್ರೆಯು ಹೇಳಿತು. ನಮ್ಮ ಹತ್ತಿರ ಸ್ವಲ್ಪ ಉಳಿತಾಯ ಹಣವಿತ್ತು ಮತ್ತು ಬಂಧುಬಳಗದವರ ಪ್ರೀತಿಯ ಸಹಾಯದಿಂದ ಆ 20,000 ಮಾರ್ಕ್‌ಗಳನ್ನು (4 ಲಕ್ಷ ರೂಪಾಯಿಗಳು) ಕೊಡಲು ನಾವು ಶಕ್ತರಾದೆವು. ಆದರೆ ಬಾಕಿ ಹಣಕ್ಕಾಗಿ ಏನು ಮಾಡುವುದು?

ನಂಬಿಕೆಗಾಗಿರುವ ನಮ್ಮ ಹೋರಾಟದಲ್ಲಿ ನಾವು ಒಂಟಿಗರಾಗಿಲ್ಲ ಎಂಬುದು ಮತ್ತೊಮ್ಮೆ ನಮಗೆ ಮರುಜ್ಞಾಪಿಸಲಾಯಿತು. ಆಗ ನಮಗೆ ಪರಿಚಯವಿಲ್ಲದಿದ್ದ ಒಬ್ಬ ಆತ್ಮಿಕ ಸಹೋದರನು, ಬಾಕಿ ಹಣವನ್ನು ಕೊಡುವ ಜವಾಬ್ದಾರಿಯನ್ನು ಹೊರಲು ಸಿದ್ಧನಿದ್ದನು. ಆದರೆ ಅವನ ಧಾರಾಳಮನಸ್ಸಿನ ಈ ನೀಡುವಿಕೆಯನ್ನು ನಾವು ತೆಗೆದುಕೊಳ್ಳುವ ಅಗತ್ಯಬೀಳಲಿಲ್ಲ, ಏಕೆಂದರೆ ನಾವು ಬೇರೆ ಏರ್ಪಾಡುಗಳನ್ನು ಮಾಡಲು ಸಾಧ್ಯವಾಯಿತು.

ವೈದ್ಯಕೀಯ ಪರಿಣತರು ಕಾರ್ಯೋನ್ಮುಖರಾಗುತ್ತಾರೆ

ಕೀಮೋಥೆರಪಿ ಚಿಕಿತ್ಸೆ ಪ್ರಾರಂಭವಾಯಿತು. ದಿನಗಳು, ವಾರಗಳು ಉರುಳಿದವು. ಕೆಲವು ಸಮಯಗಳಲ್ಲಿ, ನಮ್ಮ ಚಿಕ್ಕ ಮಗಳಿಗೂ ಮತ್ತು ನಮಗೂ ತುಂಬ ಕಷ್ಟಕರವಾಗಿತ್ತು ಹಾಗೂ ಶ್ರಮದಾಯಕವಾಗಿತ್ತು. ಇನ್ನೊಂದು ಪಕ್ಕದಲ್ಲಿ, ಅವಳು ಚೇತರಿಸಿಕೊಳ್ಳುತ್ತಿರುವ ಲಕ್ಷಣಗಳನ್ನು ತೋರಿಸುತ್ತಿದ್ದ ಪ್ರತಿ ಸಂದರ್ಭದಲ್ಲಿ ನಾವು ಅತಿಯಾಗಿ ಸಂತೋಷಿಸಿದೆವು ಮತ್ತು ಆಭಾರಿಗಳಾಗಿದ್ದೆವು. ಕೀಮೋಥೆರಪಿ ಚಿಕಿತ್ಸೆ ಎಂಟು ತಿಂಗಳುಗಳ ವರೆಗೆ ನೀಡಲ್ಪಟ್ಟಿತು. ವಿಕಿಯ ಹೀಮೋಗ್ಲೋಬಿನ್‌ನ ಅತಿ ಕಡಿಮೆ ಮಟ್ಟವು, ಡೆಸಿಲೀಟರಿಗೆ 6 ಗ್ರಾಮ್‌ ಆಗಿತ್ತು, ಮತ್ತು ಡಾ. ಗ್ರಾಫ್‌ ತಾವು ಕೊಟ್ಟ ಮಾತನ್ನು ಉಳಿಸಿಕೊಂಡರು.

ಈಗ ಆರಕ್ಕಿಂತಲೂ ಹೆಚ್ಚು ವರ್ಷಗಳು ಗತಿಸಿಹೋಗಿವೆ. ವಿಕಿಯ ಬೆನ್ನುಮೂಳೆಯ ದ್ರವದ ಕೊನೆಯ ಚೆಕ್‌ಅಪ್‌, ಲುಕೇಮಿಯದ ಯಾವುದೇ ಸೂಚನೆಗಳನ್ನು ತೋರಿಸುವುದಿಲ್ಲ. ಈಗ ಅವಳು ರೋಗದ ಯಾವ ಸುಳಿವೂ ಇಲ್ಲದ ಒಬ್ಬ ಸಂತೋಷವುಳ್ಳ ಹುಡುಗಿಯಾಗಿದ್ದಾಳೆ. ಹೌದು, ವಿಕಿ ಇಷ್ಟು ಸಂಪೂರ್ಣವಾಗಿ ಗುಣಮುಖಳಾಗಿರುವುದು ಒಂದು ಅದ್ಭುತದಂತಿದೆ. ಇದೇ ರೋಗದಿಂದ ನರಳುತ್ತಿರುವ ಅನೇಕ ಮಕ್ಕಳು, ಕೀಮೋಥೆರಪಿ ಚಿಕಿತ್ಸೆ ಮತ್ತು ರಕ್ತಪೂರಣಗಳನ್ನು ತೆಗೆದುಕೊಂಡ ನಂತರವೂ ಸತ್ತುಹೋಗುತ್ತಾರೆಂಬುದು ನಮಗೆ ಗೊತ್ತು.

ನಂಬಿಕೆಗಾಗಿರುವ ಹೋರಾಟದಲ್ಲಿ ನಾವು ವಿಜಯಿಗಳಾಗಿದ್ದೇವೆ. ಆದರೆ ನಮ್ಮ ಸಂಬಂಧಿಕರ, ಕ್ರೈಸ್ತ ಸಹೋದರ ಸಹೋದರಿಯರ ಮತ್ತು ವೈದ್ಯಕೀಯ ನಿಪುಣರ ಸಹಾಯವಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ. ಹಾಸ್ಪಿಟಲ್‌ ಇನ್‌ಫರ್‌ಮೇಷನ್‌ ಸರ್ವಿಸಸ್‌, ನಮಗೆ ಬೇಕಾದ ಪೂರ್ಣ ಬೆಂಬಲವನ್ನು ದಿನದ 24 ಗಂಟೆಯೂ ಕೊಟ್ಟಿತು. ವಿಕಿ ಗುಣಮುಖಳಾಗಲಿಕ್ಕಾಗಿ, ಡಾ. ಗ್ರಾಫ್‌ ಮತ್ತು ಅವರ ಸಹೋದ್ಯೋಗಿಗಳು ತಮ್ಮ ಎಲ್ಲಾ ಕೌಶಲಗಳನ್ನು ಉಪಯೋಗಿಸಿದರು. ಇದಕ್ಕೆಲ್ಲ, ನಾವು ನಿಜವಾಗಿಯೂ ತುಂಬ ಆಭಾರಿಗಳಾಗಿದ್ದೇವೆ.

ನಮ್ಮ ನಂಬಿಕೆಯು ಬಲಗೊಳಿಸಲ್ಪಟ್ಟಿದೆ

ಆದರೆ, ಎಲ್ಲಕ್ಕಿಂತ ಮಿಗಿಲಾಗಿ, ನಾವು ನಮ್ಮ ದೇವರಾದ ಯೆಹೋವನಿಗೆ, ಆತನು ಕೊಟ್ಟ ಪ್ರೀತಿಯ ಆರೈಕೆಗೆ ಹಾಗೂ ಆತನ ವಾಕ್ಯವಾದ ಬೈಬಲಿನ ಮೂಲಕವಾಗಿ ನಾವು ಪಡೆದುಕೊಂಡ ಬಲಕ್ಕಾಗಿ ಆತನಿಗೆ ಕೃತಜ್ಞರಾಗಿದ್ದೇವೆ. ಹಿನ್ನೋಟ ಬೀರುವಾಗ, ಜೀವನದಲ್ಲಿ ಬಂದ ಈ ಕಷ್ಟಕರವಾದ ಅನುಭವದಿಂದ ನಾವು ಎಷ್ಟೊಂದು ಸಂಗತಿಗಳನ್ನು ಕಲಿತಿದ್ದೇವೆ ಮತ್ತು ಇದು ನಮ್ಮ ನಂಬಿಕೆಯನ್ನು ಎಷ್ಟು ಬಲಗೊಳಿಸಿದೆ ಎಂಬುದನ್ನು ಗ್ರಹಿಸಲು ಸಾಧ್ಯವಾಗುತ್ತದೆ.

ಈಗ, ಯೆಹೋವ ದೇವರೊಂದಿಗಿರುವ ನಮ್ಮ ಆಪ್ತವಾದ ಸಂಬಂಧವನ್ನು ಕಾಪಾಡಿಕೊಳ್ಳುವುದು ಮತ್ತು ಆತನ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಜೀವಿಸುವುದರ ಮೌಲ್ಯವನ್ನು ನಮ್ಮ ಮಗಳಿಗೆ ಕಲಿಸುವುದೇ ನಮ್ಮ ಮನದಾಸೆಯಾಗಿದೆ. ಹೌದು, ಈ ಭೂಮಿಯಲ್ಲಿ ಸ್ಥಾಪಿಸಲ್ಪಡಲಿರುವ ಪರದೈಸಿನಲ್ಲಿ ನಿತ್ಯಜೀವವೆಂಬ ಒಳ್ಳೆಯ ಆತ್ಮಿಕ ಬಳುವಳಿಯನ್ನು ಅವಳಿಗೆ ಕೊಡಲು ನಾವು ಆಶಿಸುತ್ತೇವೆ.​—ದತ್ತ ಲೇಖನ.

[ಪಾದಟಿಪ್ಪಣಿ]

^ ಪ್ಯಾರ. 7 ಹಾಸ್ಪಿಟಲ್‌ ಇನ್‌ಫರ್‌ಮೇಷನ್‌ ಸರ್ವಿಸಸ್‌ (ಏಚ್‌ಐಎಸ್‌), ಲೋಕದಾದ್ಯಂತವಿರುವ ಹಾಸ್ಪಿಟಲ್‌ ಲಿಯೆಸನ್‌ ಕಮಿಟಿಗಳ ನೆಟ್‌ವರ್ಕ್‌ ಅನ್ನು ನಿರ್ವಹಿಸುತ್ತದೆ. ಈ ಕಮಿಟಿಗಳಲ್ಲಿ ಕ್ರೈಸ್ತ ಸ್ವಯಂಸೇವಕರು ಇದ್ದಾರೆ ಮತ್ತು ವೈದ್ಯರ ಹಾಗೂ ಸಾಕ್ಷಿ ರೋಗಿಗಳ ಮಧ್ಯೆ ಸಹಕಾರವನ್ನು ಹೆಚ್ಚಿಸಲು ಇವರನ್ನು ತರಬೇತುಗೊಳಿಸಲಾಗುತ್ತದೆ. 200ಕ್ಕಿಂತಲೂ ಅಧಿಕ ದೇಶಗಳಲ್ಲಿ, 1,400ಕ್ಕಿಂತಲೂ ಹೆಚ್ಚಿನ ಹಾಸ್ಪಿಟಲ್‌ ಲಿಯೆಸನ್‌ ಕಮಿಟಿಗಳು, ರೋಗಿಗಳಿಗೆ ಬೇಕಾದ ನೆರವನ್ನು ನೀಡುತ್ತಿವೆ.