ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರುತ್ಸಾಹದ ಭಾವನೆಗಳ ವಿರುದ್ಧ ಹೇಗೆ ಹೋರಾಡುವುದು?

ನಿರುತ್ಸಾಹದ ಭಾವನೆಗಳ ವಿರುದ್ಧ ಹೇಗೆ ಹೋರಾಡುವುದು?

ನಿರುತ್ಸಾಹದ ಭಾವನೆಗಳ ವಿರುದ್ಧ ಹೇಗೆ ಹೋರಾಡುವುದು?

ಆಸಾಫನು ದೂರಿದ್ದು: “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ. ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.”​—ಕೀರ್ತನೆ 73:​13, 14.

ಬಾರೂಕನು ಕೊರಗಿದ್ದು: ‘ವ್ಯಥೆಪಡುತ್ತಿದ್ದ ನನ್ನನ್ನು ಯೆಹೋವನು ಹೆಚ್ಚೆಚ್ಚಾಗಿ ದುಃಖಪಡಿಸಿದ್ದಾನೆ; ನಾನು ನರಳಿ ನರಳಿ ದಣಿದಿದ್ದೇನೆ, ನನಗೆ ಯಾವ ವಿಶ್ರಾಂತಿಯೂ ದೊರಕಿಲ್ಲ.’​—ಯೆರೆಮೀಯ 45:3.

ನೊವೊಮಿಯು ಶೋಕಿಸಿದ್ದು: “ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. . . . ಭಾಗ್ಯವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಬರಮಾಡಿದನು. ಯೆಹೋವನು ನನಗೆ ವಿರೋಧವಾಗಿ ಸಾಕ್ಷಿಹೇಳಿದ್ದಾನೆ; ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಇದರಿಂದ ನೀವು ನನ್ನನ್ನು ನೊವೊಮಿಯೆಂದು ಕರೆಯುವದು ಹೇಗೆ”?​—ರೂತಳು 1:​20, 21.

ಯೆಹೋವನ ನಂಬಿಗಸ್ತ ಆರಾಧಕರು ಕೆಲವೊಮ್ಮೆ ನಿರುತ್ಸಾಹದ ಭಾವನೆಗಳಲ್ಲಿ ಪೂರ್ತಿಯಾಗಿ ಮುಳುಗಿಬಿಟ್ಟಿದ್ದರು. ಅಂಥವರ ಹಲವಾರು ಉದಾಹರಣೆಗಳು ಬೈಬಲಿನಲ್ಲಿವೆ. ನಿಜ ಹೇಳಬೇಕಾದರೆ, ಅಪರಿಪೂರ್ಣ ಮಾನವರಾಗಿರುವ ನಾವೆಲ್ಲರೂ ಆಗಿಂದಾಗ್ಗೆ ಈ ರೀತಿಯ ಭಾವನೆಗಳಿಂದ ವೇದನೆಯನ್ನು ಅನುಭವಿಸುತ್ತೇವೆ. ನಮ್ಮಲ್ಲಿ ಕೆಲವರು ಇತರರಿಗಿಂತ ಹೆಚ್ಚಾಗಿ ನಿರುತ್ಸಾಹದ ಭಾವನೆಗಳಿಗೆ ಸುಲಭವಾಗಿ ಬಲಿಬೀಳಬಹುದು. ಬಹುಶಃ, ಜೀವನದಲ್ಲಿ ತುಂಬ ದುಃಖಕರವಾದ ಅನುಭವಗಳನ್ನು ಹಾದುಹೋಗಿರುವ ಕಾರಣ ನಮ್ಮಲ್ಲಿ ಕೆಲವರು ನಾವು ಸ್ವಲ್ಪ ಮಟ್ಟಿಗೆ ಸ್ವಾನುಕಂಪಪಡುತ್ತಿರಬಹುದು.

ಆದರೆ, ಈ ರೀತಿಯ ಭಾವನೆಗಳನ್ನು ಹತೋಟಿಯಲ್ಲಿಡದಿದ್ದರೆ, ಇತರರೊಂದಿಗೆ ಹಾಗೂ ಯೆಹೋವ ದೇವರೊಂದಿಗಿರುವ ನಿಮ್ಮ ಸಂಬಂಧವನ್ನು ಅವು ಹಾಳುಮಾಡಸಾಧ್ಯವಿದೆ. ಸ್ವಾನುಕಂಪಪಡುತ್ತಿದ್ದ ಒಬ್ಬ ಕ್ರೈಸ್ತ ಮಹಿಳೆಯು ಒಪ್ಪಿಕೊಳ್ಳುವುದು: “ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಿಕ್ಕಿದ ಅನೇಕ ಕರೆಯೋಲೆಗಳನ್ನು ನಾನು ತಿರಸ್ಕರಿಸಿದ್ದೇನೆ. ಏಕೆಂದರೆ, ಸಭೆಯಲ್ಲಿರುವವರೊಂದಿಗೆ ಸಹವಾಸಿಸಲು ನಾನು ಅರ್ಹಳಲ್ಲ ಎಂದು ನನಗೆ ಅನಿಸುತ್ತಿತ್ತು.” ಈ ರೀತಿಯ ಭಾವನೆಗಳು ಒಬ್ಬ ವ್ಯಕ್ತಿಯ ಜೀವನದ ಮೇಲೆ ಎಂಥ ಧ್ವಂಸಕಾರಿ ಪರಿಣಾಮಗಳನ್ನು ಉಂಟುಮಾಡಬಲ್ಲವು! ಅವುಗಳನ್ನು ದಮನಮಾಡಲು ನೀವು ಏನು ಮಾಡಸಾಧ್ಯವಿದೆ?

ಯೆಹೋವನಿಗೆ ಹತ್ತಿರವಾಗಿರಿ

ಕೀರ್ತನೆ 73ರಲ್ಲಿ ಆಸಾಫನು ತನ್ನ ಮನಸ್ಸಿನಲ್ಲಿದ್ದ ಗೊಂದಲದ ಕುರಿತು ಮುಚ್ಚುಮರೆಯಿಲ್ಲದೆ ಬರೆದನು. ತನ್ನ ಸ್ಥಿತಿಯನ್ನು ದುಷ್ಟರ ಸಮೃದ್ಧ ಜೀವನದೊಂದಿಗೆ ಹೋಲಿಸಿ ನೋಡಿದಾಗ ಅವನಿಗೆ ಅಸೂಯೆ ಉಂಟಾಯಿತು. ಭಕ್ತಿಹೀನ ಜನರು, ಅಹಂಕಾರಿಗಳೂ ಹಿಂಸಾತ್ಮಕರೂ ಆಗಿರುವುದನ್ನು ಅವನು ಕಂಡನು. ಅವರು ಏನೇ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಂತೆ ತೋರುತ್ತಿತ್ತು. ಯಥಾರ್ಥವಾದ ಜೀವನಮಾರ್ಗವನ್ನು ತಾನು ಬೆನ್ನಟ್ಟುತ್ತಿರುವುದಕ್ಕೆ ಮೌಲ್ಯವಾದರೂ ಇದೆಯೋ ಎಂಬುದರ ಕುರಿತು ಸಂದೇಹವನ್ನು ವ್ಯಕ್ತಪಡಿಸಿದನು.​—ಕೀರ್ತನೆ 73:​3-9, 13, 14.

ಆಸಾಫನಂತೆ ನೀವು ಸಹ ತಮ್ಮ ದುರ್ಮಾರ್ಗಗಳನ್ನು ಜಂಬದಿಂದ ಪ್ರದರ್ಶಿಸಿಕೊಳ್ಳುವ ದುಷ್ಟರಿಗೇ ಯಶಸ್ಸು ಸಿಗುತ್ತಿರುವುದನ್ನು ಗಮನಿಸಿದ್ದೀರೋ? ತನ್ನ ನಕಾರಾತ್ಮಕ ಭಾವನೆಗಳನ್ನು ಆಸಾಫನು ಹೇಗೆ ಜಯಿಸಿದನು? ಅವನು ಮುಂದುವರಿಸುತ್ತಾ ಹೇಳುವುದು: “ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು. ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು.” (ಕೀರ್ತನೆ 73:​16, 17) ಯೆಹೋವನಲ್ಲಿ ಪ್ರಾರ್ಥಿಸುವ ಮೂಲಕ ಆಸಾಫನು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಂಡನು. ಕಾಲಾನಂತರ ಅಪೊಸ್ತಲ ಪೌಲನು ಉಪಯೋಗಿಸಿದ ಮಾತುಗಳಲ್ಲಿ ಹೇಳುವುದಾದರೆ, ತನ್ನೊಳಗಿರುವ “ಆತ್ಮಿಕ ಮನುಷ್ಯ”ನು (NW) ಎಚ್ಚೆತ್ತುಕೊಳ್ಳುವಂತೆ ಮಾಡುತ್ತಾ ಆಸಾಫನು “ಪ್ರಾಕೃತ ಮನುಷ್ಯ”ನನ್ನು ಅದುಮಿಟ್ಟನು. ನವೀಕರಿಸಲ್ಪಟ್ಟ ಆತ್ಮಿಕ ದೃಷ್ಟಿಯೊಂದಿಗೆ, ಯೆಹೋವನು ಕೆಟ್ಟದ್ದನ್ನು ಹಗೆಮಾಡುತ್ತಾನೆ ಹಾಗೂ ತಕ್ಕ ಸಮಯದಲ್ಲಿ ದುಷ್ಟನು ಶಿಕ್ಷಿಸಲ್ಪಡುವನು ಎಂಬುದನ್ನು ಅವನು ಅರ್ಥಮಾಡಿಕೊಂಡನು.​—1 ಕೊರಿಂಥ 2:​14, 15.

ಜೀವನದ ನಿಜತ್ವಗಳ ಮೇಲೆ ನಾವು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಬೈಬಲ್‌ ನಮಗೆ ಸಹಾಯಮಾಡುವಂತೆ ಅನುಮತಿಸುವುದು ಎಷ್ಟು ಪ್ರಾಮುಖ್ಯ! ದುಷ್ಟರು ಮಾಡುತ್ತಿರುವ ಕೆಲಸಗಳಿಗೆ ತಾನು ಕುರುಡನಾಗಿಲ್ಲ ಎಂಬುದನ್ನು ಯೆಹೋವನು ನಮಗೆ ಮರುಜ್ಞಾಪಿಸುತ್ತಾನೆ. ಬೈಬಲ್‌ ಕಲಿಸುವುದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. . . . ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ.” (ಗಲಾತ್ಯ 6:​7-9) ಯೆಹೋವನು ದುಷ್ಟರನ್ನು “ಅಪಾಯಕರ” ಸ್ಥಳದಲ್ಲಿಡುವನು; ಅವರು ‘ನಾಶವಾಗುವಂತೆ’ ಆತನು ಮಾಡುವನು. (ಕೀರ್ತನೆ 73:18) ಕೊನೆಯಲ್ಲಿ ದೈವಿಕ ನ್ಯಾಯವೇ ಜಯಿಸುವುದು.

ಯೆಹೋವನ ಮೇಜಿನಲ್ಲಿ ಸತತವಾಗಿ ಸಿಗುವ ಆತ್ಮಿಕ ಭೋಜನ ಮತ್ತು ದೇವರ ಜನರೊಂದಿಗಿನ ಹಿತಕರವಾದ ಸಹವಾಸವು ನಿಮ್ಮ ನಂಬಿಕೆಯನ್ನು ಬಲಪಡಿಸಲು ಮತ್ತು ನಿರುತ್ಸಾಹದ ಅಥವಾ ನಕಾರಾತ್ಮಕ ಭಾವನೆಗಳನ್ನು ಜಯಿಸಲು ಸಹಾಯಮಾಡುವುದು. (ಇಬ್ರಿಯ 10:25) ಆಸಾಫನಂತೆ, ದೇವರಿಗೆ ಹತ್ತಿರವಾಗಿರುತ್ತ ನೀವು ಸಹ ಆತನ ಪ್ರೀತಿಪರ ಬೆಂಬಲವನ್ನು ಅನುಭವಿಸಬಹುದು. ಆಸಾಫನು ಮುಂದುವರಿಸುತ್ತಾ ಹೇಳುವುದು: “ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.” (ಕೀರ್ತನೆ 73:​23, 24) ಮಗುವಾಗಿದ್ದಾಗ ದೌರ್ಜನ್ಯಕ್ಕೆ ಒಳಗಾಗಿದ್ದ ಒಬ್ಬ ಕ್ರೈಸ್ತಳು ಈ ಮಾತುಗಳಲ್ಲಿರುವ ವಿವೇಕವನ್ನು ಅರಿತುಕೊಂಡಳು. ಆಕೆಯು ಹೇಳುವುದು: “ಸಭೆಯೊಂದಿಗಿನ ನಿಕಟವಾದ ಸಹವಾಸವು ಜೀವನದ ಮತ್ತೊಂದು ಮುಖವನ್ನು ನನಗೆ ತೋರಿಸಿಕೊಟ್ಟಿದೆ. ಕ್ರೈಸ್ತ ಹಿರಿಯರು ಪ್ರೀತಿಯುಳ್ಳವರಾಗಿದ್ದಾರೆ ಹಾಗೂ ಅವರು ಪೊಲೀಸರಲ್ಲ ಬದಲಿಗೆ ಕುರುಬರಾಗಿದ್ದಾರೆ ಎಂಬುದನ್ನು ನಾನು ಸ್ಪಷ್ಟವಾಗಿ ನೋಡಲು ಶಕ್ತಳಾದೆ.” ಹೌದು, ಧ್ವಂಸಕಾರಿ ಭಾವನೆಗಳನ್ನು ಕಿತ್ತೊಗೆಯುವುದರಲ್ಲಿ ಸಹಾನುಭೂತಿಯುಳ್ಳ ಕ್ರೈಸ್ತ ಹಿರಿಯರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ.​—ಯೆಶಾಯ 32:​1, 2; 1 ಥೆಸಲೊನೀಕ 2:​7, 8.

ಯೆಹೋವನ ಸಲಹೆಯನ್ನು ಸ್ವೀಕರಿಸಿ

ಪ್ರವಾದಿಯಾದ ಯೆರೆಮೀಯನ ಕಾರ್ಯದರ್ಶಿಯಾಗಿದ್ದ ಬಾರೂಕನು, ತನ್ನ ನೇಮಕದ ಭಾವನಾತ್ಮಕ ಒತ್ತಡದ ಕಾರಣ ಕೊರಗಿದನು. ಹಾಗಿದ್ದರೂ, ಬಾರೂಕನ ಗಮನವನ್ನು ವಾಸ್ತವಿಕತೆಯ ಮೇಲೆ ಕೇಂದ್ರೀಕರಿಸುವಂತೆ ಯೆಹೋವನು ದಯಾಪರವಾಗಿ ಸಹಾಯಮಾಡಿದನು. “ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸ ಬೇಡ; ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನುಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಬಾಚಿಕೊಂಡುಹೋಗುವದಕ್ಕೆ ನಿನಗೆ ಅವಕಾಶ ಕೊಡುವೆನು.”​—ಯೆರೆಮೀಯ 45:​2-5.

ಬಾರೂಕನ ಆಶಾಭಂಗಕ್ಕೆ ಮೂಲಕಾರಣವು ಅವನ ಸ್ವಾರ್ಥ ಬೆನ್ನಟ್ಟುವಿಕೆಗಳೇ ಎಂಬುದನ್ನು ಯೆಹೋವನು ನೇರವಾದ ಮಾತುಗಳಲ್ಲಿ ವಿವರಿಸಿದನು. ಬಾರೂಕನು ತನಗಾಗಿ ಮಹಾಪದವಿಯನ್ನು ಹುಡುಕುತ್ತಿದ್ದು, ಅದೇ ಸಮಯದಲ್ಲಿ ದೇವದತ್ತ ನೇಮಕದಲ್ಲಿ ಆನಂದವನ್ನು ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ನಿರುತ್ಸಾಹವನ್ನು ಜಯಿಸಲು ನಿಜವಾಗಿಯೂ ಪರಿಣಾಮಕಾರಿಯಾಗಿರುವ ಹೆಜ್ಜೆಯನ್ನು ನೀವು ಕೂಡ ತೆಗೆದುಕೊಳ್ಳಬಹುದು. ಅದೇನೆಂದರೆ, ಅಪಕರ್ಷಣೆಗಳನ್ನು ತಪ್ಪಿಸುತ್ತಾ ದೈವಿಕ ಸಂತೃಪ್ತಿಯಿಂದ ಸಿಗುವ ದೇವಶಾಂತಿಯನ್ನು ಅಂಗೀಕರಿಸುವುದೇ.​—ಫಿಲಿಪ್ಪಿ 4:​6, 7.

ಮೋವಾಬ್‌ ದೇಶದಲ್ಲಿ ತನ್ನ ಗಂಡ ಮತ್ತು ಇಬ್ಬರು ಗಂಡುಮಕ್ಕಳು ಸತ್ತುಹೋದಾಗ, ತನ್ನ ಮೇಲೆ ಬಂದೆರಗಿದ ಕಷ್ಟದೆಸೆಗಳು ತನ್ನನ್ನು ಮುಳುಗಿಸಿಬಿಡುವಂತೆ ವಿಧವೆಯಾದ ನೊವೊಮಿಯು ಬಿಡಲಿಲ್ಲ. ಆದರೂ, ಸ್ವಲ್ಪ ಸಮಯದ ವರೆಗೆ ತನ್ನ ಹಾಗೂ ತನ್ನ ಇಬ್ಬರು ಸೊಸೆಯಂದಿರ ಕುರಿತು ಕಹಿಯಾದ ಭಾವನೆಗಳನ್ನು ಹೊಂದಿದ್ದಳು ಎಂಬುದಕ್ಕೆ ಸೂಚನೆಗಳಿವೆ. ಅವರನ್ನು ಕಳುಹಿಸಿಕೊಡುವ ಸಮಯದಲ್ಲಿ ನೊವೊಮಿಯು ಹೇಳಿದ್ದು: “ಯೆಹೋವನ ಹಸ್ತವು ನನಗೆ ವಿರೋಧವಾಗಿರುವದರಿಂದ ನಿಮಗೋಸ್ಕರ ಬಹಳ ದುಃಖಪಡುತ್ತೇನೆ.” ಮತ್ತೆ ಬೆತ್ಲಹೇಮನ್ನು ತಲಪಿದ ನಂತರ ಆಕೆ, “ನನ್ನನ್ನು ನೊವೊಮಿ [“ನನ್ನ ಮನೋಹರತೆ”]ಯೆಂದು ಕರೆಯಬೇಡಿರಿ; ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. ಆದದರಿಂದ ಮಾರಾ [“ಕಹಿ”] ಎಂದು ಕರೆಯಿರಿ” ಎಂದು ಒತ್ತಾಯಿಸಿದಳು.​—ರೂತಳು 1:​13, 20.

ಹಾಗಿದ್ದರೂ, ನೊವೊಮಿಯು ತನ್ನ ದುಃಖದಲ್ಲೇ ಮುಳುಗಿಬಿಡುತ್ತಾ ಯೆಹೋವನಿಂದ ಮತ್ತು ಆತನ ಜನರಿಂದ ದೂರವಿರಲಿಲ್ಲ. ಆಕೆಯು ಮೋವಾಬಿನಲ್ಲಿದ್ದಾಗ, “ಯೆಹೋವನು ತನ್ನ ಜನರನ್ನು ಕಟಾಕ್ಷಿಸಿ ಅವರಿಗೆ ಆಹಾರವನ್ನು ಅನುಗ್ರಹಿಸಿದ್ದಾನೆಂಬ” ಸುದ್ದಿಯನ್ನು ಕೇಳಿಸಿಕೊಂಡಿದ್ದಳು. (ರೂತಳು 1:6) ಯೆಹೋವನ ಜನರೊಂದಿಗೆ ಇರುವುದೇ ಉತ್ತಮವೆಂಬುದನ್ನು ಅವಳು ಗ್ರಹಿಸಿದಳು. ತದನಂತರ ತನ್ನ ಸೊಸೆಯಾದ ರೂತಳೊಂದಿಗೆ ನೊವೊಮಿಯು ಯೂದಾಯಕ್ಕೆ ಹಿಂದಿರುಗಿದಳು ಮತ್ತು ಅವಳ ಸಂಬಂಧಿಕನೂ ಪುನಃ ಖರೀದಿಸಿದವನೂ ಆದ ಬೋವಜನೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ವಿಷಯದಲ್ಲಿ ರೂತಳನ್ನು ಕುಶಲತೆಯಿಂದ ಮಾರ್ಗದರ್ಶಿಸಿದಳು.

ತದ್ರೀತಿಯಲ್ಲಿ ಇಂದು ಸಹ, ತಮ್ಮ ಸಂಗಾತಿಯನ್ನು ಮರಣದಲ್ಲಿ ಕಳೆದುಕೊಂಡಿರುವ ನಿಷ್ಠಾವಂತ ಸೇವಕರು ಕ್ರೈಸ್ತ ಸಭೆಯೊಳಗೆ ಕಾರ್ಯಮಗ್ನರಾಗಿರುವ ಮೂಲಕ, ಭಾವನಾತ್ಮಕ ಒತ್ತಡವನ್ನು ಯಶಸ್ವಿಕರವಾಗಿ ನಿಭಾಯಿಸುತ್ತಿದ್ದಾರೆ. ನೊವೊಮಿಯಂತೆ ಅವರು ಸಹ ಆತ್ಮಿಕ ವಿಷಯಗಳನ್ನು ನಿಕಟವಾಗಿ ಅನ್ವಯಿಸುತ್ತಿದ್ದಾರೆ, ದೇವರ ವಾಕ್ಯವನ್ನು ಪ್ರತಿದಿನವೂ ಓದುತ್ತಿದ್ದಾರೆ.

ದೈವಿಕ ವಿವೇಕವನ್ನು ಅನ್ವಯಿಸುವುದರಿಂದ ಪ್ರಯೋಜನಗಳನ್ನು ಪಡೆದುಕೊಳ್ಳುವುದು

ಈ ಬೈಬಲ್‌ ವೃತ್ತಾಂತಗಳು, ನಕಾರಾತ್ಮಕ ಇಲ್ಲವೇ ನಿರುತ್ಸಾಹದ ಭಾವನೆಗಳನ್ನು ಒಬ್ಬನು ಹೇಗೆ ಜಯಿಸಬಹುದು ಎಂಬುದರ ಕುರಿತು ಒಳನೋಟವನ್ನು ಒದಗಿಸುತ್ತವೆ. ಆಸಾಫನು ದೇವರ ಅಂಗಣದಲ್ಲಿ ಸಹಾಯವನ್ನು ಕೋರಿದನು ಮತ್ತು ತಾಳ್ಮೆಯಿಂದ ಯೆಹೋವನಿಗಾಗಿ ಕಾದಿದ್ದನು. ಬಾರೂಕನು ಸಲಹೆಗೆ ಪ್ರತಿಕ್ರಿಯಿಸಿದನು ಹಾಗೂ ಭೌತಿಕ ವಸ್ತುಗಳ ಅಪಕರ್ಷಣೆಗಳನ್ನು ತ್ಯಜಿಸಿದನು. ನೊವೊಮಿ ಯೆಹೋವನ ಜನರ ನಡುವೆ ಕ್ರಿಯಾಶೀಲಳಾಗಿದ್ದು, ಸತ್ಯ ದೇವರ ಆರಾಧನೆಯಲ್ಲಿನ ಸುಯೋಗಗಳಿಗಾಗಿ ಯುವ ಸ್ತ್ರೀಯಾದ ರೂತಳನ್ನು ಸಿದ್ಧಗೊಳಿಸಿದಳು.​—1 ಕೊರಿಂಥ 4:7; ಗಲಾತ್ಯ 5:26; 6:4.

ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಯೆಹೋವನು ತನ್ನ ಜನರಿಗೆ ನೀಡಿರುವ ದೈವಿಕ ವಿಜಯಗಳನ್ನು ಮೆಲುಕುಹಾಕುವ ಮೂಲಕ, ನೀವು ನಿರುತ್ಸಾಹ ಹಾಗೂ ಇನ್ನಿತರ ನಕಾರಾತ್ಮಕ ಭಾವನೆಗಳನ್ನು ಜಯಿಸಬಹುದು. ಹೀಗೆ ಮಾಡುವುದರೊಂದಿಗೆ, ನಿಮಗಾಗಿ ಪ್ರಾಯಶ್ಚಿತ್ತವನ್ನು ಒದಗಿಸುವ ಯೆಹೋವನ ಪ್ರೀತಿಯ ಸರ್ವಶ್ರೇಷ್ಠ ಕೃತ್ಯದ ಕುರಿತಾಗಿಯೂ ಮನನಮಾಡಿರಿ. ಕ್ರೈಸ್ತ ಸಹೋದರತ್ವದ ನೈಜ ಪ್ರೀತಿಯನ್ನು ಗಣ್ಯಮಾಡಿರಿ. ನಿಕಟವಾಗಿರುವ ದೇವರ ಹೊಸ ಲೋಕದಲ್ಲಿ ನೀವು ಅನುಭವಿಸಲಿರುವ ಜೀವನದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರಿ. ಹೀಗೆ ನೀವು ಸಹ ಆಸಾಫನಂತೆ ಪ್ರತಿಕ್ರಿಯಿಸುವಂತಾಗಲಿ: “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.”​—ಕೀರ್ತನೆ 73:28.