ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಾಲ್ಯ ಹೇಗಿದ್ದರೂ ನೀವು ಯಶಸ್ವಿಯಾಗಬಹುದು

ಬಾಲ್ಯ ಹೇಗಿದ್ದರೂ ನೀವು ಯಶಸ್ವಿಯಾಗಬಹುದು

ಬಾಲ್ಯ ಹೇಗಿದ್ದರೂ ನೀವು ಯಶಸ್ವಿಯಾಗಬಹುದು

ನಿಕಲಸ್‌ ಬಾಲ್ಯದಿಂದಲೂ ದಂಗೆಕೋರ ಪ್ರವೃತ್ತಿಯುಳ್ಳವನಾಗಿದ್ದನು. * ಸ್ವಲ್ಪಸಮಯದೊಳಗೆ, ತನ್ನೊಳಗಾಗುತ್ತಿದ್ದ ಘರ್ಷಣೆಯು ಅವನನ್ನು ಮಾದಕ ವ್ಯಸನಿಯಾಗಿಯೂ ಮತ್ತು ಕುಡುಕನನ್ನಾಗಿಯೂ ಮಾಡಿತು. “ನನ್ನ ತಂದೆ ಒಬ್ಬ ಕುಡುಕ. ಅವರಿಂದಾಗಿ ನಾನು ಮತ್ತು ನನ್ನ ತಂಗಿ ಬಹಳ ಕಷ್ಟವನ್ನು ಅನುಭವಿಸಿದೆವು” ಎಂಬುದಾಗಿ ನಿಕಲಸ್‌ ವಿವರಿಸುತ್ತಾನೆ.

ಮಲಿಂಡಳ ಹೆತ್ತವರು ಹೊರನೋಟಕ್ಕೆ ಗೌರವಾನ್ವಿತ ವ್ಯಕ್ತಿಗಳಾಗಿದ್ದು, ತಮ್ಮ ಸಮುದಾಯದಲ್ಲಿದ್ದ ಚರ್ಚಿನ ಕ್ರಿಯಾಶೀಲ ಸದಸ್ಯರಾಗಿದ್ದರು. ಆದರೆ, ಅವರು ಒಂದು ಪಂಥದಲ್ಲಿ ಕೂಡ ಆಳವಾಗಿ ಒಳಗೂಡಿದ್ದರು. “ಅವರ ಪಂಥದ ಕೆಲವು ಆಚರಣೆಗಳು ನನಗೆ ಶಾರೀರಿಕವಾಗಿ ಹಾನಿಕರವಾಗಿದ್ದವು ಮತ್ತು ನಾನು ಚಿಕ್ಕವಳಿದ್ದಾಗಲೇ ನನ್ನ ಮನೋಭಾವವನ್ನು ಕೆಡಿಸಿದವು” ಎಂಬುದಾಗಿ 30ರ ಪ್ರಾಯದಲ್ಲಿರುವ ಮಲಿಂಡಳು ಶೋಕಿಸುತ್ತಾಳೆ. ಅಷ್ಟುಮಾತ್ರವಲ್ಲ, “ನನಗೆ ಜ್ಞಾಪಕವಿರುವ ಸಮಯದಂದಿನಿಂದ ನನ್ನ ಮನಸ್ಸಿನಲ್ಲಿ ತುಂಬಿಸಲ್ಪಟ್ಟ ಹತಾಶೆ ಮತ್ತು ಯಾವುದಕ್ಕೂ ಪ್ರಯೋಜನವಿಲ್ಲದವಳು ಎಂಬ ಭಾವನೆಗಳು ನನ್ನನ್ನು ಸತತವಾಗಿ ಕಾಡಿವೆ” ಎಂದೂ ಅವಳು ಹೇಳುತ್ತಾಳೆ.

ಹಿಂಸೆ, ದುರಾಚಾರ, ಹೆತ್ತವರಿಂದ ಕಡೆಗಣಿಸಲ್ಪಡುವಂತಹ ಇನ್ನಿತರ ನಕಾರಾತ್ಮಕ ಅಂಶಗಳು ಅನೇಕರ ಬಾಲ್ಯವನ್ನು ಹಾಳುಮಾಡಿವೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಲು ಸಾಧ್ಯ? ಬಾಲ್ಯದಲ್ಲಿ ಅನುಭವಿಸುವ ನೋವಿನ ಗಾಯಗಳು ಆಳವಾಗಿರಸಾಧ್ಯವಿದೆ. ಈ ರೀತಿಯ ನೋವಿನ ಗಾಯಗಳು ಒಬ್ಬನು ದೇವರ ವಾಕ್ಯದ ಸತ್ಯವನ್ನು ಸ್ವೀಕರಿಸಿ, ಸ್ವಲ್ಪಮಟ್ಟಿಗಿನ ಸಂತೋಷವನ್ನು ಕಂಡುಕೊಳ್ಳುವ ಸಾಧ್ಯತೆಯನ್ನು ನಿರಂತರವಾಗಿ ಹಾಳುಮಾಡಬೇಕೋ? ತಮ್ಮ ಅಹಿತಕರವಾದ ಬಾಲ್ಯದ ಮಧ್ಯೆಯೂ ನಿಕಲಸ್‌ ಮತ್ತು ಮಲಿಂಡ ಸಮಗ್ರತೆಯ ವ್ಯಕ್ತಿಗಳಾಗಿ ಯಶಸ್ವಿಯಾಗಸಾಧ್ಯವಿದೆಯೋ? ಮೊದಲು, ಯೆಹೂದದ ಅರಸನಾದ ಯೋಷೀಯನ ಉದಾಹರಣೆಯನ್ನು ಪರಿಗಣಿಸಿರಿ.

ಶಾಸ್ತ್ರೀಯ ಉದಾಹರಣೆ

ಸಾ.ಶ.ಪೂ. ಏಳನೇ ಶತಮಾನದಲ್ಲಿ (ಸಾ.ಶ.ಪೂ. 659-629) ಯೋಷೀಯನು ಯೂದಾಯವನ್ನು 31 ವರ್ಷಗಳ ವರೆಗೆ ಆಳಿದನು. ಯೋಷೀಯನ ತಂದೆಯ ಹತ್ಯೆಯ ನಂತರ, ಅವನು ಸಿಂಹಾಸನಾರೂಢನಾದ ಸಮಯದಲ್ಲಿ ಯೆಹೂದದ ಸ್ಥಿತಿಯು ಹದಗೆಟ್ಟಿತ್ತು. ಯೆಹೂದ ಮತ್ತು ಯೆರೂಸಲೇಮ್‌ ನಗರಗಳು ಬಾಳನ ಆರಾಧಕರಿಂದಲೂ ಹಾಗೂ ಅಮ್ಮೋನಿಯರ ಮುಖ್ಯ ದೇವರಾದ ಮಲ್ಕಾಮನ ಮೇಲೆ ಆಣೆಯನ್ನಿಡುವವರಿಂದಲೂ ತುಂಬಿಹೋಗಿತ್ತು. ಯೆಹೂದದ ಯುವರಾಜರು “ಗರ್ಜಿಸುವ ಸಿಂಹಗಳು” ಮತ್ತು ನ್ಯಾಯಾಧಿಪತಿಗಳು “ಸಂಜೆಯ ತೋಳಗಳು” ಎಂಬುದಾಗಿ ಆ ಸಮಯದ ದೇವರ ಪ್ರವಾದಿಯಾಗಿದ್ದ ಚೆಫನ್ಯನು ಹೇಳಿದನು. ಅದಕ್ಕೆ ತಕ್ಕಂತೆಯೇ, ಹಿಂಸೆ ಮತ್ತು ಮೋಸವು ದೇಶದಲ್ಲೆಲ್ಲಾ ತುಂಬಿತುಳುಕುತ್ತಿತ್ತು. ಅನೇಕರು ತಮ್ಮ ಹೃದಯದಲ್ಲೇ ಹೀಗೆ ಅಂದುಕೊಳ್ಳುತ್ತಿದ್ದರು: “ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು.”​—ಚೆಫನ್ಯ 1:​3–2:3; 3:​1-5.

ಯೋಷೀಯನು ಯಾವ ರೀತಿಯ ಅರಸನಾಗಿ ಪರಿಣಮಿಸಿದನು? ಬೈಬಲಿನ ಚರಿತ್ರೆ ಲೇಖಕನಾದ ಎಜ್ರನು ಬರೆದದ್ದು: “[ಯೋಷೀಯನು] ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಳ್ಳದೆ ತನ್ನ ಪೂರ್ವಿಕನಾದ ದಾವೀದನ ಮಾರ್ಗದಲ್ಲೇ ಯೆಹೋವನ ಚಿತ್ತಾನುಸಾರವಾಗಿ ನಡೆದನು.” (2 ಪೂರ್ವಕಾಲವೃತ್ತಾಂತ 34:​1, 2) ಸ್ಪಷ್ಟವಾಗಿಯೇ, ಯೋಷೀಯನು ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡುವುದರಲ್ಲಿ ಯಶಸ್ವಿಯಾದನು. ಆದರೆ ಅವನ ಕುಟುಂಬದ ಹಿನ್ನೆಲೆಯು ಹೇಗಿತ್ತು?

ಲಾಲನೆಪಾಲನೆಯುಳ್ಳ ಬಾಲ್ಯವೊ ದೌರ್ಜನ್ಯಭರಿತ ಬಾಲ್ಯವೊ?

ಯೋಷೀಯನು ಸಾ.ಶ.ಪೂ. 667ರಲ್ಲಿ ಹುಟ್ಟಿದನು. ಆಗ ಅವನ ತಂದೆಯಾದ ಆಮೋನನು ಕೇವಲ 16 ವರ್ಷದವನಾಗಿದ್ದು, ತಾತನಾದ ಮನಸ್ಸೆಯು ಯೆಹೂದದ ಮೇಲೆ ರಾಜ್ಯಭಾರ ಮಾಡುತ್ತಿದ್ದನು. ಯೂದಾಯವನ್ನು ಆಳಿದ ಅತ್ಯಂತ ದುಷ್ಟ ಅರಸರಲ್ಲಿ ಮನಸ್ಸೆಯೂ ಒಬ್ಬನಾಗಿದ್ದನು. ಬಾಳನಿಗೆ ಯಜ್ಞವೇದಿಗಳನ್ನು ಕಟ್ಟಿಸುವ ಮೂಲಕ ಅವನು “ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದದ್ದನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದನು.” (NW) ಅವನು ತನ್ನ ಮಕ್ಕಳನ್ನು ಬೆಂಕಿಗೆ ಆಹುತಿಕೊಟ್ಟನು, ಯಂತ್ರಮಂತ್ರಗಳನ್ನು ಮಾಡಿಸಿದನು, ಕಣಿಹೇಳಿಸಿದನು, ಪ್ರೇತಾತ್ಮವಾದವನ್ನು ಪ್ರೋತ್ಸಾಹಿಸಿದನು ಮತ್ತು ನಿರಪರಾಧಿಗಳ ರಕ್ತವನ್ನು ದೊಡ್ಡ ಪ್ರಮಾಣದಲ್ಲಿ ಚೆಲ್ಲಿದನು. ತಾನು ಮಾಡಿಸಿದ ವಿಗ್ರಹಸ್ತಂಭವನ್ನು ಯೆಹೋವನ ಆಲಯದಲ್ಲಿರಿಸಿದನು. ಅವನು ಯೂದಾಯ ಮತ್ತು ಯೆರೂಸಲೇಮನ್ನು, “ಇಸ್ರಾಯೇಲ್ಯರ ಮುಂದೆಯೇ ಯೆಹೋವನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ದುಷ್ಟ”ರಾಗುವಂತೆ ಪ್ರೇರಿಸಿದನು.​—2 ಪೂರ್ವಕಾಲವೃತ್ತಾಂತ 33:​1-9.

ಮನಸ್ಸೆಯು ಎಷ್ಟು ದುಷ್ಟನಾಗಿದ್ದನೆಂದರೆ, ಯೆಹೋವನು ಅವನನ್ನು ಅಶ್ಶೂರದ ಅರಸನ ರಾಜನಗರಗಳಲ್ಲಿ ಒಂದಾದ ಬಾಬೆಲಿಗೆ ಕಬ್ಬಿಣದ ಬೇಡಿಗಳಲ್ಲಿ ಸಿಕ್ಕಿಸಿ ಒಯ್ಯಲ್ಪಡುವಂತೆ ಮಾಡಿದನು. ಅಲ್ಲಿ ಬಂಧಿವಾಸದಲ್ಲಿದ್ದಾಗ ಮನಸ್ಸೆಯು ಪಶ್ಚಾತ್ತಾಪವನ್ನು ತೋರಿಸಿದನು, ಮತ್ತು ತನ್ನನ್ನು ತಗ್ಗಿಸಿಕೊಂಡು, ಕ್ಷಮೆಗಾಗಿ ಯೆಹೋವನಲ್ಲಿ ಅಂಗಲಾಚಿದನು. ಕೃಪೆಗಾಗಿರುವ ಅವನ ಮೊರೆಯನ್ನು ದೇವರು ಆಲಿಸಿದನು ಮತ್ತು ಯೆರೂಸಲೇಮಿನಲ್ಲಿ ರಾಜತ್ವವನ್ನು ಅವನಿಗೆ ಪುನಃಸ್ಥಾಪಿಸಿಕೊಟ್ಟನು. ನಂತರ ಮನಸ್ಸೆಯು ಸುಧಾರಣೆಗಳನ್ನು ಮಾಡಿದನು. ಅದರಿಂದ ಸ್ವಲ್ಪ ಮಟ್ಟಿಗೆ ಯಶಸ್ವಿಯು ಸಿಕ್ಕಿತು.​—2 ಪೂರ್ವಕಾಲವೃತ್ತಾಂತ 33:​10-17.

ಮನಸ್ಸೆಯ ದುಷ್ಟತನ ಮತ್ತು ತರುವಾಯ ತೋರಿಸಿದ ಪಶ್ಚಾತ್ತಾಪವು, ಅವನ ಮಗನಾದ ಆಮೋನನ ಮೇಲೆ ಯಾವ ಪರಿಣಾಮವನ್ನು ಬೀರಿತು? ಆಮೋನನು ತೀರ ದುಷ್ಟನಾಗಿ ಪರಿಣಮಿಸಿದನು. ಮನಸ್ಸೆಯು ಪಶ್ಚಾತ್ತಾಪವನ್ನು ತೋರಿಸಿ, ನಂತರ ತಾನೇ ಪ್ರಾರಂಭಿಸಿದ ಅಶುದ್ಧತೆಯಿಂದ ದೇಶವನ್ನು ಶುದ್ಧೀಕರಿಸುವುದಕ್ಕಾಗಿ ಹೆಜ್ಜೆಗಳನ್ನು ತೆಗೆದುಕೊಂಡಾಗ, ಆಮೋನನು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ತನ್ನ 22ರ ಪ್ರಾಯದಲ್ಲಿ ಸಿಂಹಾಸನಾರೂಢನಾದ ಆಮೋನನು “ತನ್ನ ತಂದೆಯಾದ ಮನಸ್ಸೆಯ ಹಾಗೆಯೇ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.” ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಳ್ಳುವ ಬದಲಿಗೆ “ಮಹಾಪರಾಧಿಯಾದನು.” (2 ಪೂರ್ವಕಾಲವೃತ್ತಾಂತ 33:​21-23) ಆಮೋನನು ಯೆಹೂದದ ಅರಸನಾದಾಗ ಯೋಷೀಯನು ಕೇವಲ ಆರು ವರ್ಷದವನಾಗಿದ್ದನು. ಯೋಷೀಯನ ಬಾಲ್ಯವು ಎಂಥ ಭೀಕರ ಬಾಲ್ಯವಾಗಿದ್ದಿರಬೇಕು ಅಲ್ಲವೇ!

ಆಮೋನನ ಸೇವಕರು ಅವನ ವಿರುದ್ಧ ಒಳಸಂಚನ್ನು ಮಾಡಿ ಅವನನ್ನು ಕೊಂದುಹಾಕಿದರು. ಹೀಗೆ, ಆಮೋನನ ದುಷ್ಟ ಆಳ್ವಿಕೆಯು ಎರಡು ವರ್ಷಗಳಲ್ಲೇ ಅಂತ್ಯಗೊಂಡಿತು. ಆದರೆ, ದೇಶದ ಜನರಾದರೋ ಆಮೋನನ ವಿರುದ್ಧ ಒಳಸಂಚನ್ನು ಮಾಡಿದವರನ್ನು ಕೊಂದು, ಅವನ ಮಗನಾದ ಯೋಷೀಯನನ್ನು ಅರಸನನ್ನಾಗಿ ಮಾಡಿದರು.​—2 ಪೂರ್ವಕಾಲವೃತ್ತಾಂತ 33:​24, 25.

ವೇದನಾಭರಿತ ಪರಿಸ್ಥಿತಿಗಳ ಮಧ್ಯೆ ತನ್ನ ಬಾಲ್ಯವನ್ನು ಕಳೆದಿದ್ದರೂ ಯೋಷೀಯನು ಯೆಹೋವನ ದೃಷ್ಟಿಯಲ್ಲಿ ಯಾವುದು ಒಳ್ಳೆಯದಾಗಿತ್ತೋ ಅದನ್ನೇ ಮಾಡಿದನು. ಇದರಿಂದಾಗಿ ಅವನ ಆಳ್ವಿಕೆಯು ಎಷ್ಟೊಂದು ಯಶಸ್ವಿಕರವಾಗಿತ್ತೆಂದರೆ, ಬೈಬಲು ಹೇಳುವುದು: “ಯೆಹೋವನ ಕಡೆಗೆ ತಿರುಗಿಕೊಂಡು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬಲದಿಂದಲೂ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದ ಯೋಷೀಯನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ.”​—2 ಅರಸುಗಳು 23:​19-25.

ಭೀಕರವಾದ ಬಾಲ್ಯವನ್ನು ಸಹಿಸಿಕೊಳ್ಳಬೇಕಾಗಿದ್ದವರಿಗೆ ಯೋಷೀಯನು ಎಂಥ ಪ್ರೋತ್ಸಾಹದಾಯಕ ಮಾದರಿಯಾಗಿದ್ದಾನೆ! ಯೋಷೀಯನ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು? ಸರಿಯಾದ ಮಾರ್ಗವನ್ನು ಆಯ್ದುಕೊಳ್ಳಲು ಮತ್ತು ಅದೇ ಮಾರ್ಗದಲ್ಲಿ ಮುಂದುವರಿಯಲು ಯೋಷೀಯನಿಗೆ ಸಹಾಯಮಾಡಿದ್ದು ಯಾವುದು?

ಯೆಹೋವನನ್ನು ತಿಳಿದುಕೊಳ್ಳಲು ಪ್ರಯತ್ನಿಸಿರಿ

ಯೋಷೀಯನ ಬಾಲ್ಯದ ವರ್ಷಗಳಲ್ಲಿ ಒಂದು ಒಳ್ಳೆಯ ಪ್ರಭಾವವಾಗಿ ಉಳಿದವನು, ಪಶ್ಚಾತ್ತಾಪಿಯಾಗಿದ್ದ ಅವನ ಅಜ್ಜನಾದ ಮನಸ್ಸೆಯೇ ಆಗಿದ್ದನು. ಆದರೆ ಅವರಿಬ್ಬರ ಮಧ್ಯೆ ಯಾವ ರೀತಿಯ ಸಂಬಂಧವಿತ್ತು ಹಾಗೂ ಮನಸ್ಸೆ ತನ್ನನ್ನು ತಿದ್ದಿಕೊಂಡಾಗ ಯೋಷೀಯನು ಎಷ್ಟು ದೊಡ್ಡವನಾಗಿದ್ದನು ಎಂಬುದರ ಕುರಿತ ವಿವರಣೆಗಳನ್ನು ಬೈಬಲ್‌ ನೀಡುವುದಿಲ್ಲ. ಯೆಹೂದ್ಯರಲ್ಲಿ ಕುಟುಂಬಗಳು ತುಂಬ ಆಪ್ತವಾಗಿರುತ್ತಿದ್ದುದರಿಂದ, ಸತ್ಯ ದೇವರಾದ ಯೆಹೋವನಿಗಾಗಿ ಮತ್ತು ಆತನ ವಾಕ್ಯಕ್ಕಾಗಿ ಗೌರವವನ್ನು ತನ್ನ ಮೊಮ್ಮಗನ ಹೃದಯದಲ್ಲಿ ನಾಟಿಸುವ ಮೂಲಕ, ಮನಸ್ಸೆಯು ತನ್ನ ಮೊಮ್ಮಗನ ಸುತ್ತಲೂ ಇದ್ದ ಭ್ರಷ್ಟ ಪ್ರಭಾವಗಳಿಂದ ಅವನನ್ನು ಕಾಪಾಡಲು ಪ್ರಯತ್ನಿಸಿದ್ದಿರಬಹುದು. ಯೋಷೀಯನ ಹೃದಯದಲ್ಲಿ ಮನಸ್ಸೆಯು ಬಿತ್ತಲು ಸಾಧ್ಯವಿದ್ದ ಸತ್ಯದ ಬೀಜ ಮಾತ್ರವಲ್ಲದೆ, ಬಹುಶಃ ಇನ್ನಿತರ ಸಕಾರಾತ್ಮಕ ಪ್ರಭಾವಗಳು ಕೊನೆಯಲ್ಲಿ ಫಲವನ್ನು ಕೊಟ್ಟವು. ಯೆಹೂದದ ಸಿಂಹಾಸನದ ಮೇಲೆ ಆಸನಾರೂಢನಾದ ಎಂಟನೇ ವರ್ಷದಲ್ಲಿ, 15 ವರ್ಷದವನಾಗಿದ್ದ ಯೋಷೀಯನು ಯೆಹೋವನನ್ನು ತಿಳಿದುಕೊಳ್ಳಲು ಮತ್ತು ಆತನ ಚಿತ್ತವನ್ನು ಮಾಡಲು ಪ್ರಯತ್ನಿಸಿದನು.​—2 ಪೂರ್ವಕಾಲವೃತ್ತಾಂತ 34:​1-3.

ಕೆಲವರಿಗೆ ತಮ್ಮ ಬಾಲ್ಯದ ಸಮಯದಲ್ಲಿದ್ದ ಏಕೈಕ ಆತ್ಮಿಕ ಸಂಬಂಧವು, ಒಬ್ಬ ದೂರದ ಸಂಬಂಧಿ ಇಲ್ಲವೇ ಒಬ್ಬ ಪರಿಚಯಸ್ಥರು, ಅಥವಾ ಒಬ್ಬ ನೆರೆಯವರಷ್ಟೇ ಆಗಿದ್ದಿರಬಹುದು. ಆದರೂ, ಈ ರೀತಿಯಲ್ಲಿ ಬಿತ್ತಲ್ಪಟ್ಟಿರುವ ಬೀಜಗಳಿಗೆ ಸರಿಯಾದ ಆರೈಕೆ ಕೊಡಲ್ಪಡುವಲ್ಲಿ, ಕಾಲಾನಂತರ ಅವು ಒಳ್ಳೆಯ ಫಲಗಳನ್ನು ನೀಡಬಲ್ಲವು. ಈಗಾಗಲೇ ತಿಳಿಸಿರುವ ಮಲಿಂಡಳಿಗೆ ಒಬ್ಬ ದಯಾಪರ ಅಜ್ಜನಂತಿದ್ದ ನೆರೆಯವರೊಬ್ಬರಿದ್ದರು. ಅವರು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಕ್ರಮವಾಗಿ ಅವಳ ಮನೆಗೆ ತಂದುಕೊಡುತ್ತಿದ್ದರು. ಅವರನ್ನು ಪ್ರೀತಿಯಿಂದ ನೆನಪುಮಾಡಿಕೊಳ್ಳುತ್ತಾ ಅವಳು ಹೇಳುವುದು: “ನನ್ನ ನೆರೆಯವರ ಕುರಿತು ನನಗೆ ತುಂಬ ಹಿಡಿಸಿದ ವಿಷಯವೇನೆಂದರೆ, ಅವರು ಯಾವ ಹಬ್ಬದ ದಿನಗಳನ್ನೂ ಆಚರಿಸುತ್ತಿರಲಿಲ್ಲ. ಇದು ನನಗೆ ತುಂಬ ಪ್ರಾಮುಖ್ಯವಾಗಿತ್ತು, ಏಕೆಂದರೆ ಹ್ಯಾಲೋವಿನ್‌ ಮತ್ತು ಇನ್ನಿತರ ಹಬ್ಬದ ದಿನಗಳು ನನ್ನ ಹೆತ್ತವರಿಗೆ ಕುಪಂಥದ ಸಂಸ್ಕಾರಗಳನ್ನು ಮಾಡುವ ಸಂದರ್ಭಗಳಾಗಿದ್ದವು.” ಹತ್ತು ವರ್ಷಗಳ ನಂತರ, ಒಬ್ಬ ಸ್ನೇಹಿತೆಯು ಮಲಿಂಡಳನ್ನು ಯೆಹೋವನ ಸಾಕ್ಷಿಗಳ ಕ್ರೈಸ್ತ ಕೂಟಕ್ಕೆ ಹಾಜರಾಗುವಂತೆ ಆಹ್ವಾನಿಸಿದಾಗ, ಅವಳು ತನ್ನ ನೆರೆಯವರನ್ನು ನೆನಪಿಸಿಕೊಂಡಳು ಮತ್ತು ಕೂಡಲೇ ಆಹ್ವಾನಕ್ಕೆ ಓಗೊಟ್ಟಳು. ಇದು ಸತ್ಯಕ್ಕಾಗಿ ಹುಡುಕುವಂತೆ ಅವಳಿಗೆ ಸಹಾಯಮಾಡಿತು.

ದೇವರ ಮುಂದೆ ನಮ್ರರಾಗಿರ್ರಿ

ಯೋಷೀಯನ ಆಳ್ವಿಕೆಯ ಸಮಯವು ಯೆಹೂದದಲ್ಲೆಲ್ಲಾ ಮಹತ್ತರವಾದ ಧಾರ್ಮಿಕ ಸುಧಾರಣೆಗಳಿಂದ ಗುರುತಿಸಲ್ಪಟ್ಟಿತ್ತು. ವಿಗ್ರಹಾರಾಧನೆಯ ವಿರುದ್ಧ ಚಳುವಳಿಯನ್ನು ಮಾಡಿ, ಯೆಹೂದವನ್ನು ಶುದ್ಧೀಕರಿಸಲಿಕ್ಕಾಗಿ ಆರು ವರ್ಷಗಳ ವರೆಗೆ ಸತತವಾಗಿ ಹೋರಾಡಿದ ನಂತರ, ಯೋಷೀಯನು ಯೆಹೋವನ ಆಲಯವನ್ನು ದುರಸ್ತಿಗೊಳಿಸಿದನು. ಆ ಕೆಲಸವು ಪ್ರಗತಿಯಲ್ಲಿದ್ದಾಗ, ಮಹಾಯಾಜಕನಾಗಿದ್ದ ಹಿಲ್ಕೀಯನು ಎಷ್ಟು ಅಮೂಲ್ಯವಾದ ವಸ್ತುವನ್ನು ಕಂಡುಕೊಂಡನು! ‘ಯೆಹೋವನ ಧರ್ಮೋಪದೇಶದ ಗ್ರಂಥದ’ ಮೂಲಪ್ರತಿಯು ಅವನಿಗೆ ಸಿಕ್ಕಿತು. ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ ಈ ಕುತೂಹಲಕರ ವಸ್ತುವನ್ನು ಕೊಟ್ಟಾಗ, ಶಾಫಾನನು ಅದರ ಕುರಿತು ಅರಸನಿಗೆ ವರದಿಸಿದನು. ಇಂಥ ಸಾಧನೆಗಳು 25 ವರ್ಷದವನಾಗಿದ್ದ ಯೋಷೀಯನನ್ನು ಗರ್ವಿಷ್ಠನನ್ನಾಗಿ ಮಾಡಿದವೊ?​—2 ಪೂರ್ವಕಾಲವೃತ್ತಾಂತ 34:​3-18.

‘ಅರಸನು ಧರ್ಮಶಾಸ್ತ್ರದ ವಾಕ್ಯಗಳನ್ನು ಕೇಳಿದಾಗ ಬಟ್ಟೆಗಳನ್ನು ಹರಿದುಕೊಂಡನು’ ಎಂಬುದಾಗಿ ಎಜ್ರನು ಬರೆಯುತ್ತಾನೆ. ಇದು ದುಃಖವನ್ನು ಸೂಚಿಸುವ ಮನಃಪೂರ್ವಕವಾದ ಅಭಿವ್ಯಕ್ತಿಯಾಗಿದೆ. ಏಕೆಂದರೆ, ತನ್ನ ಪೂರ್ವಿಕರು ದೇವರ ಎಲ್ಲ ಕಟ್ಟಳೆಗಳನ್ನು ಪಾಲಿಸಿಲ್ಲ ಎಂಬುದನ್ನು ಅವನು ಗ್ರಹಿಸಿದನು. ನಿಶ್ಚಯವಾಗಿಯೂ ಇದು ನಮ್ರತೆಯ ಚಿಹ್ನೆಯಾಗಿತ್ತು! ಕೂಡಲೇ ಅರಸನು, ಪ್ರವಾದಿನಿಯಾದ ಹುಲ್ದಳ ಮೂಲಕ ಯೆಹೋವನ ಬಳಿ ವಿಚಾರಿಸುವಂತೆ ಐದು ಮಂದಿಯ ಪ್ರತಿನಿಧಿ ತಂಡವನ್ನು ನಿಯಮಿಸಿದನು. ಪ್ರತಿನಿಧಿ ತಂಡವು ತಂದ ವರದಿಯ ಸಾರಾಂಶವು ಸಾಧಾರಣ ಹೀಗಿತ್ತು: ಯೋಷೀಯನೇ ನೀನು ‘ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದ . . . ನಾನು ಬರಮಾಡುವ ಶಿಕ್ಷೆಗಳಲ್ಲಿ ನೀನು ಒಂದನ್ನೂ ನೋಡದೆ ಸಮಾಧಾನದಿಂದ ಮೃತಿಹೊಂದಿ ಸಮಾಧಿಸೇರುವಂತೆ ಅನುಗ್ರಹಿಸುವೆನು.’ (2 ಪೂರ್ವಕಾಲವೃತ್ತಾಂತ 34:​19-28) ಯೋಷೀಯನ ಮನೋಭಾವವನ್ನು ನೋಡಿ ಯೆಹೋವನು ಪ್ರಸನ್ನನಾದನು.

ನಮ್ಮ ಕುಟುಂಬ ಹಿನ್ನೆಲೆಯು ಹೇಗೆಯೇ ಇರಲಿ, ನಾವು ಸಹ ಸತ್ಯ ದೇವರಾದ ಯೆಹೋವನ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳಸಾಧ್ಯವಿದೆ, ಹಾಗೂ ಆತನ ಮತ್ತು ಆತನ ವಾಕ್ಯವಾದ ಬೈಬಲಿನ ಕಡೆಗೆ ಗೌರವಪೂರ್ವಕವಾದ ಮನೋಭಾವವನ್ನು ತೋರಿಸಬಹುದು. ಲೇಖನದ ಆರಂಭದಲ್ಲಿ ತಿಳಿಸಿದ ನಿಕಲಸ್‌ ಇದನ್ನೇ ಮಾಡಿದನು. ಅವನು ಹೇಳುವುದು: “ಮಾದಕವಸ್ತುಗಳ ದುರುಪಯೋಗ ಹಾಗೂ ಕುಡುಕತನದಿಂದಾಗಿ ನನ್ನ ಜೀವನವು ಸಮಸ್ಯೆಗಳಿಂದ ತುಂಬಿದ್ದರೂ, ಬೈಬಲಿನಲ್ಲಿ ನನಗೆ ಆಸಕ್ತಿಯಿತ್ತು ಹಾಗೂ ಜೀವನದಲ್ಲಿ ಉದ್ದೇಶವನ್ನು ಕಂಡುಕೊಳ್ಳಲು ಹಾತೊರೆಯುತ್ತಿದ್ದೆ. ಕೊನೆಗೆ ಯೆಹೋವನ ಸಾಕ್ಷಿಗಳ ಸಂಪರ್ಕವಾಯಿತು, ನನ್ನ ಜೀವನಶೈಲಿಯನ್ನು ಬದಲಾಯಿಸಿದೆ ಮತ್ತು ಸತ್ಯವನ್ನು ಸ್ವೀಕರಿಸಿದೆ.” ಹೌದು, ನಮ್ಮ ಸುತ್ತಮುತ್ತಲಿನ ಪರಿಸ್ಥಿತಿ ಹೇಗೆಯೇ ಇರಲಿ ನಾವು ದೇವರ ಕಡೆಗೆ ಮತ್ತು ಆತನ ವಾಕ್ಯದ ಕಡೆಗೆ ಗೌರವಪೂರ್ವಕವಾದ ಮನೋಭಾವವನ್ನು ತೋರಿಸಸಾಧ್ಯವಿದೆ.

ಯೆಹೋವನ ಏರ್ಪಾಡಿನಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ

ಯೋಷೀಯನು, ಯೆಹೋವನ ಪ್ರವಾದಿಗಳಿಗೂ ಆಳವಾದ ಗೌರವವನ್ನು ತೋರಿಸಿದನು. ಅವನು ಪ್ರವಾದಿನಿಯಾಗಿದ್ದ ಹುಲ್ದಳನ್ನು ವಿಚಾರಿಸಿದನು ಮಾತ್ರವಲ್ಲ, ತನ್ನ ದಿನದಲ್ಲಿದ್ದ ಇನ್ನಿತರ ಪ್ರವಾದಿಗಳಿಂದಲೂ ಸಾಕಷ್ಟು ಮಟ್ಟಿಗೆ ಪ್ರಭಾವಿಸಲ್ಪಟ್ಟಿದ್ದನು. ಉದಾಹರಣೆಗೆ, ಯೆರೆಮೀಯ ಮತ್ತು ಚೆಫನ್ಯರು ಯೆಹೂದದಲ್ಲಿದ್ದ ವಿಗ್ರಹಾರಾಧನೆಯ ವಿರುದ್ಧ ಬರಲಿರುವ ಶಾಪಗಳ ಕುರಿತಾಗಿ ಘೋಷಿಸುವುದರಲ್ಲಿ ಕಾರ್ಯಮಗ್ನರಾಗಿದ್ದರು. ಯೋಷೀಯನು ಅವರ ಸಂದೇಶಕ್ಕೆ ಗಮನ ಕೊಟ್ಟದ್ದು, ಸುಳ್ಳಾರಾಧನೆಯ ವಿರುದ್ಧ ಚಳುವಳಿಯನ್ನು ಮಾಡುತ್ತಿದ್ದಾಗ ಅವನಲ್ಲಿ ಎಷ್ಟೊಂದು ಬಲವನ್ನು ತುಂಬಿಸಿರಬೇಕು!​—ಯೆರೆಮೀಯ 1:​1, 2; 3:​6-10; ಚೆಫನ್ಯ 1:​1-6.

“ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಸರಿಯಾದ ಸಮಯಕ್ಕೆ ಆತ್ಮಿಕ ಆಹಾರವನ್ನು ಒದಗಿಸುವಂತೆ “ಯಜಮಾನ”ನಾದ ಯೇಸು ಕ್ರಿಸ್ತನು ಒಂದು ಸಂಯೋಜಿತ ಗುಂಪನ್ನು ನೇಮಿಸಿದ್ದಾನೆ. (ಮತ್ತಾಯ 24:​45-47) ಈ ಆಳು ವರ್ಗವು, ಬೈಬಲಾಧಾರಿತವಾದ ಪ್ರಕಾಶನಗಳು ಮತ್ತು ಸಭೆಯ ಏರ್ಪಾಡಿನ ಮೂಲಕ ಬೈಬಲಿನ ಸಲಹೆಗೆ ಕಿವಿಗೊಡುವುದರಿಂದ ಸಿಗುವ ಪ್ರಯೋಜನಗಳ ಕಡೆಗೆ ಗಮನವನ್ನು ಸೆಳೆಯುತ್ತದೆ ಹಾಗೂ ಅದನ್ನು ನಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಲಿಕ್ಕಾಗಿ ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತದೆ. ಆದುದರಿಂದ, ಆಳವಾಗಿ ಬೇರೂರಿರುವ ಅಹಿತಕರವಾದ ಪ್ರವೃತ್ತಿಗಳನ್ನು ಜಯಿಸಲು ಯೆಹೋವನ ಏರ್ಪಾಡನ್ನು ಉಪಯೋಗಿಸುವುದು ಎಷ್ಟೊಂದು ಯೋಗ್ಯವಾಗಿದೆ! ಬಾಲ್ಯದಿಂದಲೂ ನಿಕಲಸ್‌ಗೆ ಅಧಿಕಾರದಲ್ಲಿರುವವರು ಕಿಂಚಿತ್ತೂ ಹಿಡಿಸುತ್ತಿರಲಿಲ್ಲ. ಅವನು ದೇವರ ವಾಕ್ಯದಿಂದ ಸತ್ಯವನ್ನು ಕಲಿಯುತ್ತಿದ್ದಾಗಲೂ, ಈ ಬಲಹೀನತೆಯು ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸುವುದರಿಂದ ಅವನನ್ನು ತಡೆಯುತ್ತಿತ್ತು. ಈ ಪ್ರವೃತ್ತಿಯನ್ನು ಬದಲಾಯಿಸುವುದು ಅವನಿಗೆ ಅಷ್ಟೇನೂ ಸುಲಭವಾಗಿರಲಿಲ್ಲ. ಆದರೆ, ಸ್ವಲ್ಪ ಸಮಯದೊಳಗಾಗಿ ಅವನು ಯಶಸ್ವಿಯಾದನು. ಹೇಗೆ? “ನನ್ನನ್ನು ಅರ್ಥಮಾಡಿಕೊಂಡ ಇಬ್ಬರು ಹಿರಿಯರ ಸಹಾಯದಿಂದ, ನಾನು ನನ್ನ ಸಮಸ್ಯೆಯನ್ನು ಒಪ್ಪಿಕೊಂಡೆ ಮತ್ತು ಅವರ ಪ್ರೀತಿಪರ ಆತ್ಮಿಕ ಸಲಹೆಯನ್ನು ಅನ್ವಯಿಸಲು ಆರಂಭಿಸಿದೆ” ಎಂಬುದಾಗಿ ನಿಕಲಸ್‌ ವಿವರಿಸುತ್ತಾನೆ. ಅವನು ಮುಂದುವರಿಸುತ್ತಾ ಹೇಳುವುದು: “ಸ್ವಲ್ಪ ಅಸಮಾಧಾನವು ಆಗಿಂದಾಗ್ಗೆ ಹೊರಬರುವುದಾದರೂ, ನನ್ನ ದಂಗೆಕೋರ ಸ್ವಭಾವವನ್ನು ಈಗ ನಾನು ಹತೋಟಿಯಲ್ಲಿಟ್ಟುಕೊಂಡಿದ್ದೇನೆ.”

ಮಲಿಂಡಳು ಕೂಡ ತನ್ನ ಜೀವನದಲ್ಲಿ ಪ್ರಾಮುಖ್ಯವಾದ ನಿರ್ಣಯಗಳನ್ನು ಮಾಡುವಾಗ ಹಿರಿಯರ ಸಲಹೆಯನ್ನು ಕೇಳುತ್ತಾಳೆ. ಬಾಲ್ಯದಲ್ಲಿ ಆರಂಭವಾದ ಹತಾಶೆಯ ಭಾವನೆ ಮತ್ತು ಪ್ರಯೋಜನಕ್ಕೆ ಬಾರದವಳು ಎಂಬ ಅನಿಸಿಕೆಯೊಂದಿಗೆ ಹೋರಾಡುವುದರಲ್ಲಿ, ವಿಶೇಷವಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಬರುವ ಹಲವಾರು ಲೇಖನಗಳೇ ಅವಳಿಗೆ ಬಹುಮೂಲ್ಯವಾಗಿ ಪರಿಣಮಿಸಿದವು. ಅವಳು ಹೇಳುವುದು: “ಕೆಲವೊಮ್ಮೆ ಲೇಖನವೊಂದರಲ್ಲಿರುವ ಒಂದು ಪ್ಯಾರ ಅಥವಾ ವಾಕ್ಯದಂಥ ತುಣುಕುಗಳೇ ನನ್ನ ಮನಸ್ಸನ್ನು ಸ್ಪರ್ಶಿಸುತ್ತವೆ. ಸುಮಾರು ಒಂಭತ್ತು ವರ್ಷಗಳ ಹಿಂದೆ, ನಾನು ಅಂಥ ಲೇಖನಗಳನ್ನು ಬಿಡಿಹಾಳೆಯ ನೋಟ್‌ಪುಸ್ತಕದಲ್ಲಿ ಕೂಡಿಸಿಡಲು ಪ್ರಾರಂಭಿಸಿದೆ. ಹೀಗೆ ನಾನು ಬಯಸುವಾಗಲೆಲ್ಲ ಕೂಡಲೇ ಅವುಗಳನ್ನು ತಿರುಗಿಸಿನೋಡಬಹುದು.” ಇಂದು ಅವಳ ಮೂರು ನೋಟ್‌ಪುಸ್ತಕಗಳು ಸುಮಾರು 400 ಲೇಖನಗಳನ್ನು ಒಳಗೂಡಿವೆ!

ಹಾಗಾದರೆ, ಕೆಟ್ಟದಾದ ಕುಟುಂಬ ಜೀವನವನ್ನು ಅನುಭವಿಸಿರುವ ಜನರು, ಸದಾಕಾಲಕ್ಕೂ ಅದರ ಪರಿಣಾಮಗಳನ್ನು ಅನುಭವಿಸುವ ಆವಶ್ಯಕತೆಯಿಲ್ಲ. ಯೆಹೋವನ ಸಹಾಯದಿಂದ ಅವರು ಆತ್ಮಿಕ ರೀತಿಯಲ್ಲಿ ಯಶಸ್ಸನ್ನು ಪಡೆಯಬಹುದು. ಒಳ್ಳೇ ರೀತಿಯಲ್ಲಿ ಬೆಳೆಸಲ್ಪಟ್ಟ ಮಾತ್ರಕ್ಕೆ ಅದು ಒಬ್ಬನ ಸಮಗ್ರತೆಯ ಖಾತರಿಯನ್ನು ಹೇಗೆ ಕೊಡುವುದಿಲ್ಲವೋ ಹಾಗೆಯೇ ಕೆಟ್ಟ ಬಾಲ್ಯವು ಒಬ್ಬ ವ್ಯಕ್ತಿಯು ದೈವಭಕ್ತಿಯುಳ್ಳವನಾಗುವುದರಿಂದ ಅವನನ್ನು ತಡೆಯುವುದಿಲ್ಲ.

ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲಿ ಧರ್ಮಶಾಸ್ತ್ರದ ಗ್ರಂಥವು ಸಿಕ್ಕಿದ ನಂತರ ಯೋಷೀಯನು, ‘ಯೆಹೋವನ ಮಾರ್ಗದಲ್ಲಿ ನಡೆಯುವದಾಗಿಯೂ ಆತನಿಗೆ ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ವಿಧೇಯನಾಗಿರುವುದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು.’ (2 ಪೂರ್ವಕಾಲವೃತ್ತಾಂತ 34:31) ತಾನು ಕೊನೆಯುಸಿರೆಳೆಯುವ ವರೆಗೂ ಅವನು ಈ ಪ್ರತಿಜ್ಞೆಯನ್ನು ಕಾಪಾಡಿಕೊಂಡನು. ಮಲಿಂಡ ಮತ್ತು ನಿಕಲಸ್‌ರು ಕೂಡ ಯೆಹೋವ ದೇವರಿಗೆ ನಿಷ್ಠೆಯುಳ್ಳವರಾಗಿರಲು ದೃಢಮನಸ್ಕರಾಗಿದ್ದಾರೆ. ಹೀಗೆ ಅವರು ಯಶಸ್ವಿಕರವಾಗಿ ಸಮಗ್ರತೆಯ ವ್ಯಕ್ತಿಗಳಾಗುವರು. ನೀವು ಸಹ ದೇವರಿಗೆ ಆಪ್ತರಾಗಿ ಉಳಿಯಲು ದೃಢನಿಶ್ಚಿತರಾಗಿದ್ದು, ಆತನನ್ನು ನಂಬಿಗಸ್ತರಾಗಿ ಸೇವಿಸುವಂತಾಗಲಿ. ಆಗ ನೀವು ಯಶಸ್ಸನ್ನು ಗಳಿಸುವುದರಲ್ಲಿ ಖಚಿತರಾಗಿರುವಿರಿ. ಏಕೆಂದರೆ ಯೆಹೋವನು ವಾಗ್ದಾನಿಸುವುದು: “ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ. ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.”​—ಯೆಶಾಯ 41:​10, 13.

[ಪಾದಟಿಪ್ಪಣಿ]

^ ಪ್ಯಾರ. 2 ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 26ರಲ್ಲಿರುವ ಚಿತ್ರಗಳು]

ಭೀಕರವಾದ ಬಾಲ್ಯವನ್ನು ಹೊಂದಿದ್ದರೂ, ಯೋಷೀಯನು ಯೆಹೋವನನ್ನು ತಿಳಿದುಕೊಳ್ಳಲು ಪ್ರಯತ್ನಿಸುವ ಮೂಲಕ ತನ್ನ ಜೀವನದಲ್ಲಿ ಯಶಸ್ವಿಯಾದನು

[ಪುಟ 28ರಲ್ಲಿರುವ ಚಿತ್ರ]

ಆಳವಾಗಿ ಬೇರೂರಿರುವ ವ್ಯಕ್ತಿತ್ವದ ಲಕ್ಷಣವನ್ನು ಜಯಿಸಲು ಹಿರಿಯರು ನಿಮಗೆ ಸಹಾಯಮಾಡಬಲ್ಲರು

[ಪುಟ 28ರಲ್ಲಿರುವ ಚಿತ್ರ]

“ಕಾವಲಿನಬುರುಜು” ಮತ್ತು “ಎಚ್ಚರ!” ಪತ್ರಿಕೆಗಳು ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯಮಾಡಬಲ್ಲವು