ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆತ್ಮವ್ಯವಹಾರವಾದವು ನಿಜವಾಗಿಯೂ ನಮ್ಮ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುತ್ತದೋ?

ಆತ್ಮವ್ಯವಹಾರವಾದವು ನಿಜವಾಗಿಯೂ ನಮ್ಮ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುತ್ತದೋ?

ಆತ್ಮವ್ಯವಹಾರವಾದವು ನಿಜವಾಗಿಯೂ ನಮ್ಮ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುತ್ತದೋ?

ನಮಗೆಲ್ಲರಿಗೂ ಆತ್ಮಿಕ ಹಾಗೂ ಭೌತಿಕ ಆವಶ್ಯಕತೆಗಳಿವೆ. ಆದುದರಿಂದಲೇ, ಅನೇಕರು ಈ ಪ್ರಶ್ನೆಗಳನ್ನು ಕೇಳುತ್ತಾರೆ: ಜೀವಿತದ ಉದ್ದೇಶವೇನು, ಜನರು ಏಕೆ ಕಷ್ಟವನ್ನು ಅನುಭವಿಸುತ್ತಾರೆ ಮತ್ತು ನಾವು ಮರಣಪಟ್ಟಾಗ ನಮಗೆ ಏನು ಸಂಭವಿಸುತ್ತದೆ? ಈ ಪ್ರಶ್ನೆಗಳಿಗೆ ಹಾಗೂ ತದ್ರೀತಿಯ ಇನ್ನಿತರ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ಅನೇಕ ಯಥಾರ್ಥ ಜನರು ಆತ್ಮವ್ಯವಹಾರ ಸಭೆಗಳಿಗೆ ಹೋಗುತ್ತಾರೆ; ಮತ್ತು ಮೃತರ ಆತ್ಮಗಳೊಂದಿಗೆ ಸಂವಾದಿಸುವ ನಿರೀಕ್ಷೆಯಿಂದ ಅಲ್ಲಿರುವ ಸಂಪರ್ಕ ಮಾಧ್ಯಮಗಳೊಂದಿಗೆ ವ್ಯವಹರಿಸುತ್ತಾರೆ. ಈ ರೂಢಿಯನ್ನು ಆತ್ಮವ್ಯವಹಾರವಾದ ಎಂದು ಕರೆಯಲಾಗುತ್ತದೆ.

ಆತ್ಮವ್ಯವಹಾರವಾದದ ಅನುಯಾಯಿಗಳು ಅನೇಕ ದೇಶಗಳಲ್ಲಿ ಕಂಡುಬರುತ್ತಾರೆ ಮತ್ತು ಅವರು ಆತ್ಮವ್ಯವಹಾರ ಸಭೆಗಳಲ್ಲಿ ಹಾಗೂ ಚರ್ಚುಗಳಲ್ಲಿ ಕೂಡಿಬರುತ್ತಾರೆ. ಉದಾಹರಣೆಗೆ, ಬ್ರಸಿಲ್‌ನಲ್ಲಿ ಸುಮಾರು 40,00,000 ಆತ್ಮವಾದಿಗಳಿದ್ದು, ಈಪೊಲೇಟ್‌ ಲೇಓನ್‌ ಡೆನಿಸಾರ್‌ ರಿವೈನಿಂದ ಕ್ರೋಡೀಕರಿಸಿದ ಬೋಧನೆಗಳನ್ನು ಅನುಸರಿಸುತ್ತಾರೆ. ಇವನು 19ನೆಯ ಶತಮಾನದ ಫ್ರೆಂಚ್‌ ಶಿಕ್ಷಕನೂ ತತ್ತ್ವಜ್ಞಾನಿಯೂ ಆಗಿದ್ದು, ಅಲನ್‌ ಕಾರ್ಡೆಕ್‌ ಎಂಬ ಹೆಸರನ್ನು ಉಪಯೋಗಿಸಿ ಬರೆಯುತ್ತಿದ್ದನು. ಮೊದಲಾಗಿ 1854ರಲ್ಲಿ ಕಾರ್ಡೆಕ್‌ ಆತ್ಮವ್ಯವಹಾರವಾದದಲ್ಲಿ ಆಸಕ್ತನಾದನು. ತದನಂತರ, ಅನೇಕ ಸ್ಥಳಗಳಲ್ಲಿರುವ ಆತ್ಮ ಮಾಧ್ಯಮಗಳಿಗೆ ಪ್ರಶ್ನೆಗಳನ್ನು ಹಾಕಿ, ಅವುಗಳಿಂದ ಕೊಡಲ್ಪಟ್ಟ ಉತ್ತರಗಳನ್ನು ಆತ್ಮಗಳ ಪುಸ್ತಕ (ಪೋರ್ಚುಗೀಸ್‌) ಎಂಬ ಪುಸ್ತಕದಲ್ಲಿ ದಾಖಲಿಸಿ, 1857ರಲ್ಲಿ ಅದನ್ನು ಮುದ್ರಿಸಿದನು. ಅವನು ಬರೆದಂತಹ ಇನ್ನೂ ಎರಡು ಕೃತಿಗಳು ಯಾವುವೆಂದರೆ, ಆತ್ಮಮಾಧ್ಯಮಗಳ ಪುಸ್ತಕ ಮತ್ತು ಆತ್ಮವ್ಯವಹಾರವಾದಕ್ಕನುಸಾರ ಸುವಾರ್ತೆ (ಪೋರ್ಚುಗೀಸ್‌).

ಆತ್ಮವ್ಯವಹಾರವಾದವು, ವೂಡೂ, ಮಾಟಮಂತ್ರ, ಮ್ಯಾಜಿಕ್‌, ಅಥವಾ ಸೈತಾನಾರಾಧನೆಯಂತಹ ಧಾರ್ಮಿಕ ಪದ್ಧತಿಗಳಿಗೆ ಸಂಬಂಧಿಸಿದ್ದಾಗಿದೆ. ಆದರೂ, ಅಲನ್‌ ಕಾರ್ಡೆಕ್‌ನ ಬೋಧನೆಗಳನ್ನು ಅನುಸರಿಸುವವರು, ತಮ್ಮ ನಂಬಿಕೆಗಳು ತೀರ ಭಿನ್ನವಾಗಿವೆ ಎಂದು ಹೇಳಿಕೊಳ್ಳುತ್ತಾರೆ. ಅವರ ಪುಸ್ತಕಗಳಲ್ಲಿ ಅನೇಕವೇಳೆ ಬೈಬಲನ್ನು ಆಧಾರವಾಗಿ ಉಪಯೋಗಿಸಲಾಗಿರುತ್ತದೆ. ಮತ್ತು ಅವರು ಯೇಸುವನ್ನು “ಎಲ್ಲ ಮಾನವಕುಲದ ಮಾರ್ಗದರ್ಶಕ ಹಾಗೂ ಮಾದರಿಯಾಗಿ” ಸಂಬೋಧಿಸುತ್ತಾರೆ. ಯೇಸುವಿನ ಬೋಧನೆಗಳು “ದೈವಿಕ ನಿಯಮದ ಅಭಿವ್ಯಕ್ತಿಗಳಲ್ಲೇ ಅತಿ ಪರಿಶುದ್ಧವಾದವುಗಳಾಗಿವೆ” ಎಂದು ಹೇಳುತ್ತಾರೆ. ಆತ್ಮವಾದದ ಬರಹಗಳು, ದೇವರು ಮಾನವಕುಲಕ್ಕೆ ಕೊಟ್ಟಿರುವ ನಿಯಮದ ಮೂರನೆಯ ಪ್ರಕಟನೆಯಾಗಿವೆ; ಮೋಶೆಯ ಬೋಧನೆಗಳು ಮೊದಲ ಪ್ರಕಟನೆಯಾಗಿವೆ ಮತ್ತು ಯೇಸುವಿನ ಬೋಧನೆಗಳು ಎರಡನೆಯ ಪ್ರಕಟನೆಯಾಗಿವೆ ಎಂಬುದು ಅಲನ್‌ ಕಾರ್ಡೆಕ್‌ನ ದೃಷ್ಟಿಕೋನವಾಗಿತ್ತು.

ಆತ್ಮವ್ಯವಹಾರವಾದವು ಅನೇಕರನ್ನು ಆಕರ್ಷಿಸುತ್ತದೆ. ಏಕೆಂದರೆ ಅದು ನೆರೆಯವರ ಪ್ರೀತಿಯನ್ನು ಹಾಗೂ ಧರ್ಮಕಾರ್ಯಗಳನ್ನು ಉತ್ತೇಜಿಸುತ್ತದೆ. “ಧರ್ಮಕಾರ್ಯಗಳನ್ನು ಮಾಡದಿದ್ದರೆ ರಕ್ಷಣೆಯಿಲ್ಲ” ಎಂಬುದು ಆತ್ಮವಾದಿಗಳ ಒಂದು ನಂಬಿಕೆಯಾಗಿದೆ. ಆತ್ಮವಾದಿಗಳಲ್ಲಿ ಅನೇಕರು ಸಾಮಾಜಿಕ ಕೆಲಸಗಳಲ್ಲಿ ಕ್ರಿಯಾಶೀಲರಾಗಿರುತ್ತಾರೆ; ಆಸ್ಪತ್ರೆಗಳು, ಶಾಲೆಗಳು ಹಾಗೂ ಇನ್ನಿತರ ಸಂಸ್ಥೆಗಳನ್ನು ಸ್ಥಾಪಿಸುವುದರಲ್ಲಿ ಸಹಾಯಮಾಡುತ್ತಾರೆ. ಇಂತಹ ಪ್ರಯತ್ನಗಳು ಪ್ರಶಂಸಾರ್ಹವಾಗಿವೆ. ಆದರೂ, ಆತ್ಮವಾದಿಗಳ ನಂಬಿಕೆಗಳನ್ನು ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಬೋಧನೆಗಳೊಂದಿಗೆ ಹೋಲಿಸುವಾಗ, ಅವುಗಳಲ್ಲಿ ಭಿನ್ನತೆಯಿದೆಯೋ? ಈ ವಿಷಯದಲ್ಲಿ ಎರಡು ಉದಾಹರಣೆಗಳನ್ನು ಪರಿಗಣಿಸೋಣ: ಮೃತರಿಗಾಗಿರುವ ನಿರೀಕ್ಷೆ ಹಾಗೂ ಕಷ್ಟಾನುಭವಕ್ಕೆ ಕಾರಣ.

ಮೃತರಿಗೆ ಯಾವ ನಿರೀಕ್ಷೆಯಿದೆ?

ಆತ್ಮವಾದಿಗಳಲ್ಲಿ ಅನೇಕರು ಪುನರ್ಜನ್ಮದಲ್ಲಿ ನಂಬಿಕೆಯಿಡುತ್ತಾರೆ. ಆತ್ಮವಾದಕ್ಕೆ ಸಂಬಂಧಿಸಿದ ಒಂದು ಪುಸ್ತಕವು ಹೇಳುವುದು: “ದೈವಿಕ ನ್ಯಾಯದ ಕುರಿತಾದ ನಮ್ಮ ಊಹೆಗೆ ಸಮಂಜಸವಾಗಿರುವ ಏಕಮಾತ್ರ ಸಿದ್ಧಾಂತವು ಪುನರ್ಜನ್ಮವಾಗಿದೆ; ಭವಿಷ್ಯತ್ತನ್ನು ವಿವರಿಸಸಾಧ್ಯವಿರುವ ಹಾಗೂ ನಮ್ಮ ನಿರೀಕ್ಷೆಗಳನ್ನು ಬಲಪಡಿಸಸಾಧ್ಯವಿರುವ ಏಕಮಾತ್ರ ಸಿದ್ಧಾಂತವು ಇದೇ ಆಗಿದೆ.” ಒಬ್ಬನು ಸಾಯುವಾಗ, ಅವನ “ಅವತಾರಪಡೆದ ಆತ್ಮವು” ದೇಹವನ್ನು ಬಿಟ್ಟುಹೋಗುತ್ತದೆ; ಇದು ಒಂದು ಚಿಟ್ಟೆಯು ತನ್ನ ಗೂಡಿನಿಂದ ಹೊರಹೋಗುವಂತಿರುತ್ತದೆ ಎಂದು ಆತ್ಮವಾದಿಗಳು ವಿವರಿಸುತ್ತಾರೆ. ತದನಂತರ, ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದ ಮುಕ್ತಿಪಡೆಯಲಿಕ್ಕಾಗಿ, ಈ ಆತ್ಮಗಳು ಮನುಷ್ಯರಾಗಿ ಪುನರ್ಜನ್ಮ ಪಡೆಯುತ್ತವೆ ಎಂದು ಅವರು ನಂಬುತ್ತಾರೆ. ಆದರೆ ಆ ಹಿಂದಿನ ಪಾಪಗಳನ್ನು ಜ್ಞಾಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ “ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳನ್ನು ಮರೆಯುವುದು ಸೂಕ್ತವಾದದ್ದಾಗಿದೆ ಎಂದು ದೇವರು ನೆನಸಿದನು” ಎಂದು ಆತ್ಮವ್ಯವಹಾರವಾದಕ್ಕನುಸಾರ ಸುವಾರ್ತೆಯು ಹೇಳುತ್ತದೆ.

“ಪುನರ್ಜನ್ಮವನ್ನು ಅಲ್ಲಗಳೆಯುವುದು, ಕ್ರಿಸ್ತನ ಮಾತುಗಳನ್ನೇ ಅಲ್ಲಗಳೆಯುವುದಕ್ಕೆ ಸಮಾನವಾಗಿದೆ” ಎಂದು ಅಲನ್‌ ಕಾರ್ಡೆಕ್‌ ಬರೆದನು. ಆದರೂ, ಯೇಸು ಎಂದೂ “ಪುನರ್ಜನ್ಮ” ಎಂಬ ಶಬ್ದವನ್ನೇ ಉಚ್ಚರಿಸಲಿಲ್ಲ ಮತ್ತು ಅಂತಹ ಒಂದು ವಿಷಯವನ್ನು ಪ್ರಸ್ತಾಪಿಸಲೂ ಇಲ್ಲ. (22ನೆಯ ಪುಟದಲ್ಲಿರುವ “ಬೈಬಲ್‌ ಪುನರ್ಜನ್ಮದ ಬಗ್ಗೆ ಕಲಿಸುತ್ತದೋ?” ಎಂಬ ವಿಷಯವನ್ನು ನೋಡಿ.) ಅದಕ್ಕೆ ಬದಲಾಗಿ, ಮೃತರ ಪುನರುತ್ಥಾನದ ಕುರಿತು ಯೇಸು ಕಲಿಸಿದನು. ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅವನು ಮೂವರು ವ್ಯಕ್ತಿಗಳನ್ನು ಪುನರುತ್ಥಾನಗೊಳಿಸಿದನು​—ನಾಯಿನೆಂಬ ಊರಿನ ವಿಧವೆಯ ಮಗ, ಸಭಾಮಂದಿರದ ಅಧಿಕಾರಿಯ ಮಗಳು ಮತ್ತು ಅವನ ಆಪ್ತ ಮಿತ್ರನಾಗಿದ್ದ ಲಾಜರ. (ಮಾರ್ಕ 5:​22-24, 35-43; ಲೂಕ 7:​11-15; ಯೋಹಾನ 11:​1-44) ಈ ಗಮನಾರ್ಹ ಘಟನೆಗಳಲ್ಲಿ ಒಂದನ್ನು ನಾವು ಪರಿಗಣಿಸೋಣ ಮತ್ತು ಯೇಸು “ಪುನರುತ್ಥಾನ” ಎಂದು ಹೇಳಿದಾಗ ಅವನೇನನ್ನು ಅರ್ಥೈಸಿದನು ಎಂಬುದನ್ನು ನೋಡೋಣ.

ಲಾಜರನ ಪುನರುತ್ಥಾನ

ತನ್ನ ಮಿತ್ರನಾದ ಲಾಜರನು ಅಸ್ವಸ್ಥನಾಗಿದ್ದಾನೆ ಎಂಬ ಸುದ್ದಿಯು ಯೇಸುವಿಗೆ ಮುಟ್ಟಿತು. ಎರಡು ದಿನಗಳ ನಂತರ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ.” ಯೇಸು ಏನು ಹೇಳುತ್ತಿದ್ದನು ಎಂಬುದು ಶಿಷ್ಯರಿಗೆ ಅರ್ಥವಾಗಲಿಲ್ಲ. ಆದುದರಿಂದ, ಅವನು ಸರಳವಾದ ಮಾತಿನಲ್ಲಿ ಹೇಳಿದ್ದು: “ಲಾಜರನು ಸತ್ತುಹೋದನು.” ತದನಂತರ ಯೇಸು ಲಾಜರನ ಸಮಾಧಿಗೆ ಬಂದಾಗ, ಅವನು ಸತ್ತು ನಾಲ್ಕು ದಿನಗಳಾಗಿದ್ದವು. ಆದರೂ, ಸಮಾಧಿಯ ಬಾಯಿಗೆ ಮುಚ್ಚಿದ್ದ ಕಲ್ಲನ್ನು ತೆಗೆಯುವಂತೆ ಯೇಸು ಅಪ್ಪಣೆಕೊಟ್ಟನು. ಆಮೇಲೆ ಅವನು “ಲಾಜರನೇ ಹೊರಗೆ ಬಾ” ಎಂದು ಕೂಗಿ ಹೇಳಿದನು. ಆಗ, ಅದ್ಭುತಕರವಾದ ಸಂಗತಿಯು ಸಂಭವಿಸಿತು. “ಸತ್ತಿದ್ದವನು ಹೊರಗೆ ಬಂದನು; ಅವನ ಕೈಕಾಲುಗಳು ಬಟ್ಟೆಗಳಿಂದ ಕಟ್ಟಿದ್ದವು, ಅವನ ಮುಖವು ಕೈಪಾವಡದಿಂದ ಸುತ್ತಿತ್ತು. ಯೇಸು ಅವರಿಗೆ​—ಅವನನ್ನು ಬಿಚ್ಚಿರಿ, ಹೋಗಲಿ ಎಂದು ಹೇಳಿದನು.”​—ಯೋಹಾನ 11:​5, 6, 11-14, 43, 44.

ಇದು ಖಂಡಿತವಾಗಿ ಪುನರ್ಜನ್ಮವಾಗಿರಲಿಲ್ಲ ಎಂಬುದಂತೂ ಸ್ಪಷ್ಟ. ಲಾಜರನು ನಿದ್ರಿಸುತ್ತಿದ್ದಾನೆ, ಅಂದರೆ ಪ್ರಜ್ಞೆಯಿಲ್ಲದವನಾಗಿದ್ದಾನೆ ಎಂದು ಯೇಸು ಹೇಳಿದನು. ಬೈಬಲ್‌ ಅದನ್ನು ವ್ಯಕ್ತಪಡಿಸುವಂತೆ ‘ಅವನ ಸಂಕಲ್ಪಗಳೆಲ್ಲಾ ಹಾಳಾಗಿಹೋಗಿದ್ದವು.’ ಅವನಿಗೆ ‘ಯಾವ ತಿಳುವಳಿಕೆಯೂ ಇರಲಿಲ್ಲ.’ (ಕೀರ್ತನೆ 146:4; ಪ್ರಸಂಗಿ 9:5) ಪುನರುತ್ಥಾನಗೊಳಿಸಲ್ಪಟ್ಟ ಲಾಜರನು, ಪುನರ್ಜನ್ಮ ಪಡೆದ ಆತ್ಮವಿದ್ದ ಒಬ್ಬ ಭಿನ್ನ ವ್ಯಕ್ತಿಯಾಗಿರಲಿಲ್ಲ. ಅವನಿಗೆ ಅದೇ ವ್ಯಕ್ತಿತ್ವವಿತ್ತು, ಅವನು ಅದೇ ವಯಸ್ಸಿನವನಾಗಿದ್ದನು ಮತ್ತು ಅವನಿಗೆ ಅವೇ ನೆನಪುಗಳಿದ್ದವು. ಅವನು ಅಕಾಲಿಕವಾಗಿ ಮರಣಪಡುವುದಕ್ಕೆ ಮುಂಚೆ ಯಾವ ಚಟುವಟಿಕೆಗಳನ್ನು ಮಾಡುತ್ತಿದ್ದನೋ ಅದೇ ರೀತಿ ಈಗಲೂ ತನ್ನ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದನು. ಮತ್ತು ತನ್ನ ಮರಣದಿಂದ ದುಃಖಿತರಾಗಿದ್ದ ತನ್ನ ಪ್ರಿಯ ಜನರ ಬಳಿಗೆ ಹಿಂದಿರುಗಿದನು.​—ಯೋಹಾನ 12:​1, 2.

ಸಮಯಾನಂತರ ಲಾಜರನು ಪುನಃ ಮೃತಪಟ್ಟನು. ಹಾಗಾದರೆ ಅವನ ಪುನರುತ್ಥಾನದಿಂದ ಯಾವ ಉದ್ದೇಶವು ಸಾಧಿಸಲ್ಪಟ್ಟಿತು? ಯೇಸು ಮಾಡಿದ ಇನ್ನಿತರ ಪುನರುತ್ಥಾನಗಳ ಜೊತೆಗೆ ಇದು ಸಹ, ತನ್ನ ಕ್ಲುಪ್ತ ಕಾಲದಲ್ಲಿ ದೇವರು ಮೃತ ನಂಬಿಗಸ್ತ ಸೇವಕರನ್ನು ಪುನಃ ಎಬ್ಬಿಸುವುದರ ಕುರಿತಾದ ಆತನ ವಾಗ್ದಾನದಲ್ಲಿನ ನಮ್ಮ ಭರವಸೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಯೇಸುವಿನ ಈ ಅದ್ಭುತಕಾರ್ಯಗಳು, ಅವನ ಮಾತುಗಳನ್ನು ಇನ್ನಷ್ಟು ಅರ್ಥಗರ್ಭಿತವಾಗಿ ಮಾಡುತ್ತವೆ: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.”​—ಯೋಹಾನ 11:25.

ಭವಿಷ್ಯತ್ತಿನ ಆ ಪುನರುತ್ಥಾನದ ಬಗ್ಗೆ ಯೇಸು ಹೇಳಿದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ [ನನ್ನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.” (ಯೋಹಾನ 5:​28, 29) ಲಾಜರನಂತೆಯೇ, ಇದು ಮೃತ ಜನರ ಪುನರುತ್ಥಾನವಾಗಿರುವುದು. ಕೊಳೆತುಹೋಗಿರುವ ಹಾಗೂ ಇನ್ನಿತರ ಸಜೀವ ಜೀವಿಗಳ ಭಾಗವಾಗಿಹೋಗಿರಬಹುದಾದ ದೇಹಗಳನ್ನು ಪುನರುತ್ಥಾನಗೊಳಿಸಿ, ಅವುಗಳೊಂದಿಗೆ ಪ್ರಜ್ಞೆಯುಳ್ಳ ಆತ್ಮಗಳನ್ನು ಐಕ್ಯಗೊಳಿಸುವುದು ಇದರ ಅರ್ಥವಾಗಿರುವುದಿಲ್ಲ. ಭೂಪರಲೋಕಗಳ ಸೃಷ್ಟಿಕರ್ತನಾದ ಯೆಹೋವನಿಗೆ ಮೃತರನ್ನು ಪುನರುತ್ಥಾನಗೊಳಿಸುವ ಸಾಮರ್ಥ್ಯವಿದೆ. ಏಕೆಂದರೆ ಆತನ ಬಳಿ ಅಪಾರ ವಿವೇಕ ಹಾಗೂ ಶಕ್ತಿಯಿದೆ.

ಯೇಸು ಕ್ರಿಸ್ತನಿಂದ ಕಲಿಸಲ್ಪಟ್ಟಂತೆ, ಪುನರುತ್ಥಾನದ ಸಿದ್ಧಾಂತವು, ವೈಯಕ್ತಿಕವಾಗಿ ದೇವರಿಗೆ ಮಾನವರ ಕಡೆಗಿರುವ ಆಳವಾದ ಪ್ರೀತಿಯನ್ನು ತಿಳಿಯಪಡಿಸುವುದಿಲ್ಲವೋ? ಆದರೆ ಈ ಮುಂಚೆ ತಿಳಿಸಲ್ಪಟ್ಟಿರುವ ಎರಡನೆಯ ಪ್ರಶ್ನೆಯ ಕುರಿತಾಗಿ ಏನು?

ಕಷ್ಟಾನುಭವಕ್ಕೆ ಕಾರಣವೇನು?

ಮಾನವರು ಅನುಭವಿಸುವ ಅಧಿಕಾಂಶ ಕಷ್ಟಾನುಭವಗಳಿಗೆ, ಅವಿವೇಕಿಗಳು, ಅನನುಭವಿಗಳು ಅಥವಾ ದುಷ್ಟ ಜನರು ಮಾಡುವ ಕಾರ್ಯಗಳೇ ಕಾರಣವಾಗಿವೆ. ಆದರೆ, ನೇರವಾಗಿ ಜನರ ಮೇಲೆ ಆರೋಪ ಹೊರಿಸಲು ಅಸಾಧ್ಯವಾಗಿರುವಂತಹ ದುರ್ಘಟನೆಗಳ ಕುರಿತಾಗಿ ಏನು? ಉದಾಹರಣೆಗೆ, ಅಪಘಾತಗಳು ಮತ್ತು ನೈಸರ್ಗಿಕ ವಿಪತ್ತುಗಳು ಏಕೆ ಸಂಭವಿಸುತ್ತವೆ? ಕೆಲವು ಮಕ್ಕಳಿಗೆ ಹುಟ್ಟಿನಿಂದಲೇ ಏಕೆ ಕುಂದುಕೊರತೆಗಳಿರುತ್ತವೆ? ಅಲನ್‌ ಕಾರ್ಡೆಕ್‌ನ ದೃಷ್ಟಿಯಲ್ಲಿ ಈ ವಿಷಯಗಳು ಶಿಕ್ಷೆಗಳಾಗಿದ್ದವು. ಅವನು ಬರೆದುದು: “ನಮಗೆ ಶಿಕ್ಷೆಯಾಗುತ್ತಿರುವಲ್ಲಿ, ಖಂಡಿತವಾಗಿಯೂ ನಾವು ತಪ್ಪನ್ನು ಮಾಡಿರಲೇಬೇಕು ಎಂಬುದು ರುಜುವಾಗುತ್ತದೆ. ಒಂದುವೇಳೆ ಆ ತಪ್ಪು ಈ ಜನ್ಮದ್ದಾಗಿಲ್ಲದಿರುವಲ್ಲಿ, ಬಹುಶಃ ಅದು ಹಿಂದಿನ ಜನ್ಮದ್ದಾಗಿರಬೇಕು.” ಆತ್ಮವಾದಿಗಳಿಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಲಾಗಿರುತ್ತದೆ: “ಕರ್ತನೇ, ನೀನು ನ್ಯಾಯವಂತನಾಗಿದ್ದೀ. ನೀನು ನನ್ನ ಮೇಲೆ ಬರಮಾಡಲಿಕ್ಕಾಗಿ ಆಯ್ಕೆಮಾಡಿರುವ ಶಿಕ್ಷೆಗೆ ನಾನು ಅರ್ಹನಾಗಿರಲೇಬೇಕು . . . ನಾನು ಇದನ್ನು, ನನ್ನ ಗತ ತಪ್ಪುಗಳಿಗಾಗಿರುವ ಪ್ರಾಯಶ್ಚಿತ್ತದೋಪಾದಿ ಹಾಗೂ ನನ್ನ ನಂಬಿಕೆಯ ಪರೀಕ್ಷೆಯೋಪಾದಿ ಮತ್ತು ನಿನ್ನ ಆಶೀರ್ವದಿತ ಚಿತ್ತಕ್ಕೆ ಅಧೀನತೆಯೋಪಾದಿ ಸ್ವೀಕರಿಸುತ್ತೇನೆ.”​—ಆತ್ಮವ್ಯವಹಾರವಾದಕ್ಕನುಸಾರ ಸುವಾರ್ತೆ.

ಯೇಸು ಇಂತಹ ವಿಷಯವನ್ನು ಕಲಿಸಿದನೋ? ಇಲ್ಲ. “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂಬ ಬೈಬಲ್‌ ಹೇಳಿಕೆಯು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. (ಪ್ರಸಂಗಿ 9:11) ಕೆಲವೊಮ್ಮೆ ಕೆಟ್ಟ ಸಂಗತಿಗಳು ಅನಿರೀಕ್ಷಿತವಾಗಿ ಸಂಭವಿಸುತ್ತವೆ ಎಂಬುದು ಸಹ ಅವನಿಗೆ ತಿಳಿದಿತ್ತು. ಆದುದರಿಂದ ಇವು ಪಾಪಗಳಿಗಾಗಿರುವ ಶಿಕ್ಷೆಯಾಗಿರಬೇಕಾಗಿರಲಿಲ್ಲ.

ಯೇಸುವಿನ ಜೀವಿತದ ಈ ಘಟನೆಯನ್ನು ಪರಿಗಣಿಸಿರಿ: “ಯೇಸು ಹಾದುಹೋಗುತ್ತಿರುವಾಗ ಒಬ್ಬ ಹುಟ್ಟುಕುರುಡನನ್ನು ಕಂಡನು. ಆತನ ಶಿಷ್ಯರು​—ಗುರುವೇ, ಇವನು ಕುರುಡನಾಗಿ ಹುಟ್ಟಿರುವದಕ್ಕೆ ಯಾರು ಪಾಪಮಾಡಿದರು? ಇವನೋ? ಇವನ ತಂದೆತಾಯಿಗಳೋ? ಎಂದು ಕೇಳಿದರು.” ಅವರಿಗೆ ಯೇಸು ಕೊಟ್ಟ ಉತ್ತರವು ತುಂಬ ಬೋಧಪ್ರದವಾಗಿತ್ತು: “ಇವನೂ ಪಾಪಮಾಡಲಿಲ್ಲ, ಇವನ ತಂದೆತಾಯಿಗಳೂ ಪಾಪಮಾಡಲಿಲ್ಲ; ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವದಕ್ಕೆ ಇದಾಯಿತು. ಇದನ್ನು ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ ಆ ಕೆಸರನ್ನು ಅವನ ಕಣ್ಣುಗಳಿಗೆ ಹಚ್ಚಿ​—ನೀನು ಸಿಲೋವ ಕೊಳಕ್ಕೆ ಹೋಗಿ ತೊಳಕೋ ಅಂದನು. . . . ಅವನು ಹೋಗಿ ತೊಳಕೊಂಡು ಕಣ್ಣು ಹೊಂದಿದವನಾಗಿ ಬಂದನು.”​—ಯೋಹಾನ 9:​1-3, 6, 7.

ಹುಟ್ಟಿನಿಂದ ಬಂದಿದ್ದ ಈ ಕುರುಡುತನಕ್ಕೆ ಆ ಮನುಷ್ಯನಾಗಲಿ ಅವನ ತಂದೆತಾಯಿಗಳಾಗಲಿ ಜವಾಬ್ದಾರರಾಗಿರಲಿಲ್ಲ ಎಂಬುದನ್ನು ಯೇಸುವಿನ ಮಾತುಗಳು ತೋರಿಸಿದವು. ಹೀಗೆ, ಹಿಂದಿನ ಜನ್ಮದಲ್ಲಿ ಈ ಮನುಷ್ಯನು ಮಾಡಿದ್ದ ಪಾಪಗಳಿಗೆ ಈ ಶಿಕ್ಷೆ ನೀಡಲ್ಪಟ್ಟಿತು ಎಂಬ ಕಲ್ಪನೆಗೆ ಸಹ ಯೇಸು ಒತ್ತುನೀಡಲಿಲ್ಲ. ಎಲ್ಲ ಮಾನವರು ಪಾಪವನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾರೆ ಎಂಬುದು ನಿಜ. ಅವರು ಆದಾಮನಿಂದ ಪಿತ್ರಾರ್ಜಿತವಾಗಿ ಪಾಪವನ್ನು ಪಡೆದಿದ್ದಾರೇ ಹೊರತು, ತಾವು ಜನಿಸುವುದಕ್ಕೆ ಮುಂಚೆ ಮಾಡಿದ ಪಾಪಗಳನ್ನಲ್ಲ. ಆದಾಮನ ಪಾಪದ ಕಾರಣದಿಂದಾಗಿ, ಎಲ್ಲ ಮಾನವರು ಶಾರೀರಿಕವಾಗಿ ಅಪರಿಪೂರ್ಣರಾಗಿ ಜನಿಸುತ್ತಾರೆ ಮತ್ತು ಅಸ್ವಸ್ಥತೆ ಹಾಗೂ ಮರಣಕ್ಕೆ ಒಳಗಾಗುತ್ತಾರೆ. (ಯೋಬ 14:4; ಕೀರ್ತನೆ 51:5; ರೋಮಾಪುರ 5:12; 9:11) ವಾಸ್ತವದಲ್ಲಿ, ಈ ಸನ್ನಿವೇಶವನ್ನು ಸರಿಪಡಿಸಲಿಕ್ಕಾಗಿಯೇ ಯೇಸು ಕಳುಹಿಸಲ್ಪಟ್ಟಿದ್ದನು. “ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಎಂದು ಸ್ನಾನಿಕನಾದ ಯೋಹಾನನು ಯೇಸುವಿನ ಕುರಿತು ಹೇಳಿದನು.​—ಯೋಹಾನ 1:29. *

ಒಂದಲ್ಲ ಒಂದು ದಿನ ಯೇಸು ಆ ಮನುಷ್ಯನ ಬಳಿಗೆ ಬಂದು ಅವನನ್ನು ವಾಸಿಮಾಡಸಾಧ್ಯವಾಗುವಂತೆ ದೇವರೇ ಉದ್ದೇಶಪೂರ್ವಕವಾಗಿ ಅವನನ್ನು ಹುಟ್ಟುಕುರುಡನನ್ನಾಗಿ ಮಾಡಿದ್ದನು ಎಂದು ಯೇಸು ಹೇಳಲಿಲ್ಲ ಎಂಬುದನ್ನು ಸಹ ಗಮನಿಸಿರಿ. ಅದೆಷ್ಟು ಕ್ರೂರವಾದ, ದುಷ್ಟ ಕೃತ್ಯವಾಗಿರುತ್ತಿತ್ತು! ಅದು ದೇವರಿಗೆ ಸ್ತುತಿಯನ್ನು ತರಸಾಧ್ಯವಿತ್ತೋ? ಖಂಡಿತವಾಗಿಯೂ ಇಲ್ಲ. ಅದಕ್ಕೆ ಬದಲಾಗಿ, ಈ ಕುರುಡನ ಅದ್ಭುತಕರ ವಾಸಿಮಾಡುವಿಕೆಯು, ‘ದೇವರ ಕ್ರಿಯೆಗಳು ತೋರಿಬರುವಂತೆ’ ಕಾರ್ಯನಡಿಸಿತು. ಯೇಸು ಮಾಡಿದ ಇನ್ನಿತರ ವಾಸಿಮಾಡುವಿಕೆಗಳಂತೆ ಇದು ಸಹ, ಕಷ್ಟಾನುಭವಿಸುತ್ತಿರುವ ಮಾನವಕುಲದ ಕಡೆಗಿರುವ ದೇವರ ನಿಜವಾದ ಪ್ರೀತಿಯನ್ನು ಪ್ರತಿಬಿಂಬಿಸಿತು; ಮತ್ತು ಎಲ್ಲ ಮಾನವ ಅಸ್ವಸ್ಥತೆ ಹಾಗೂ ಕಷ್ಟಾನುಭವಕ್ಕೆ ತನ್ನ ಕ್ಲುಪ್ತ ಕಾಲದಲ್ಲಿ ಅಂತ್ಯವನ್ನು ತರುವ ಆತನ ವಾಗ್ದಾನದ ವಿಶ್ವಾಸಾರ್ಹತೆಯನ್ನು ಇನ್ನಷ್ಟು ದೃಢಪಡಿಸಿತು.​—ಯೆಶಾಯ 33:24.

ಕಷ್ಟಾನುಭವವನ್ನು ಉಂಟುಮಾಡುವುದಕ್ಕೆ ಬದಲಾಗಿ, ನಮ್ಮ ಸ್ವರ್ಗೀಯ ತಂದೆಯು “ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು” ಕೊಡುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ಸಾಂತ್ವನದಾಯಕವಾಗಿಲ್ಲವೋ? (ಮತ್ತಾಯ 7:11) ಕುರುಡರ ಕಣ್ಣುಗಳು ತೆರೆಯಲ್ಪಡುವಾಗ, ಕಿವುಡರ ಕಿವಿಗಳು ಕೇಳುವಾಗ, ಕುಂಟರು ನಡೆದಾಡಿ, ಜಿಗಿದು, ಓಡುವಾಗ, ಅದು ಸರ್ವೋನ್ನತ ದೇವರಿಗೆ ಎಷ್ಟು ಮಹಿಮೆಯನ್ನು ತರುವುದು!​—ಯೆಶಾಯ 35:​5, 6.

ನಮ್ಮ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುವುದು

ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಮತ್ತಾಯ 4:4) ಹೌದು, ದೇವರ ವಾಕ್ಯವಾದ ಬೈಬಲನ್ನು ನಾವು ಓದುವಾಗ ಮತ್ತು ಅದಕ್ಕೆ ಹೊಂದಿಕೆಯಲ್ಲಿ ನಮ್ಮ ಜೀವಿತಗಳನ್ನು ನಡೆಸುವಾಗ, ನಮ್ಮ ಆತ್ಮಿಕ ಆವಶ್ಯಕತೆಗಳು ಪೂರೈಸಲ್ಪಡುವವು. ಆತ್ಮ ಮಾಧ್ಯಮಗಳನ್ನು ಸಂಪರ್ಕಿಸುವುದರಿಂದ ನಮ್ಮ ಆತ್ಮಿಕ ಆವಶ್ಯಕತೆಗಳನ್ನು ನಿಜವಾಗಿಯೂ ತೃಪ್ತಿಪಡಿಸಸಾಧ್ಯವಿಲ್ಲ. ವಾಸ್ತವದಲ್ಲಿ, ಅಲನ್‌ ಕಾರ್ಡೆಕ್‌ ಯಾವುದನ್ನು ದೇವರ ನಿಯಮದ ಮೊದಲ ಪ್ರಕಟನೆ ಎಂದು ಕರೆದನೋ ಆ ಮೋಶೆಯ ಬೋಧನೆಗಳಲ್ಲಿ ಇಂತಹ ರೂಢಿಯನ್ನು ಸ್ಪಷ್ಟವಾಗಿ ಖಂಡಿಸಲಾಗಿದೆ.​—ಧರ್ಮೋಪದೇಶಕಾಂಡ 18:​10-13.

ಆತ್ಮವಾದಿಗಳನ್ನೂ ಸೇರಿಸಿ ಇನ್ನೂ ಅನೇಕರು, ದೇವರು ಪರಮಾತ್ಮನಾಗಿದ್ದಾನೆ, ಸದಾಕಾಲ ಇರುವಾತನಾಗಿದ್ದಾನೆ, ಪರಮ ಪರಿಪೂರ್ಣನೂ, ದಯಾಪರನೂ, ಒಳ್ಳೆಯವನೂ, ನ್ಯಾಯವಂತನೂ ಆಗಿದ್ದಾನೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬೈಬಲ್‌ ಇದಕ್ಕಿಂತಲೂ ಹೆಚ್ಚಿನದ್ದನ್ನು ಪ್ರಕಟಪಡಿಸುತ್ತದೆ. ಆತನಿಗೆ ಯೆಹೋವ ಎಂಬ ವೈಯಕ್ತಿಕ ಹೆಸರಿದೆ ಮತ್ತು ಯೇಸುವಿನಂತೆಯೇ ನಾವು ಸಹ ಈ ಹೆಸರನ್ನು ಘನಪಡಿಸಬೇಕು ಎಂದು ಅದು ತಿಳಿಯಪಡಿಸುತ್ತದೆ. (ಮತ್ತಾಯ 6:9; ಯೋಹಾನ 17:6) ಅದು, ಮಾನವರು ಒಂದು ಆಪ್ತ ಸಂಬಂಧದಲ್ಲಿ ಆನಂದಿಸಸಾಧ್ಯವಿರುವ ಒಬ್ಬ ನೈಜ ವ್ಯಕ್ತಿಯನ್ನಾಗಿ ದೇವರನ್ನು ಚಿತ್ರಿಸುತ್ತದೆ. (ರೋಮಾಪುರ 8:​38, 39) ಬೈಬಲನ್ನು ಓದುವ ಮೂಲಕ, ದೇವರು ಕರುಣಾಳುವಾಗಿದ್ದಾನೆ ಮತ್ತು “ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ” ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. (ಕೀರ್ತನೆ 103:10) ತನ್ನ ಲಿಖಿತ ವಾಕ್ಯದ ಮೂಲಕ ಸಾರ್ವಭೌಮ ಕರ್ತನಾದ ಯೆಹೋವನು ತನ್ನ ಪ್ರೀತಿ, ಪರಮಾಧಿಕಾರ ಹಾಗೂ ವಿವೇಚನಾಶೀಲತೆಯ ಕುರಿತು ಪ್ರಕಟಪಡಿಸುತ್ತಾನೆ. ವಿಧೇಯ ಮಾನವರನ್ನು ಮಾರ್ಗದರ್ಶಿಸುವವನು ಹಾಗೂ ಸಂರಕ್ಷಿಸುವವನು ಆತನೇ ಆಗಿದ್ದಾನೆ. ಯೆಹೋವನನ್ನು ಹಾಗೂ ಆತನ ಮಗನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ “ನಿತ್ಯಜೀವ”ವಾಗಿದೆ.​—ಯೋಹಾನ 17:3.

ದೇವರ ಉದ್ದೇಶಗಳ ಕುರಿತು ನಮಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಬೈಬಲ್‌ ಒದಗಿಸುತ್ತದೆ. ಮತ್ತು ಆತನನ್ನು ಸಂತೋಷಪಡಿಸಲು ಬಯಸುವಲ್ಲಿ ನಾವೇನು ಮಾಡಬೇಕು ಎಂಬುದನ್ನು ಸಹ ತಿಳಿಸುತ್ತದೆ. ಬೈಬಲಿನ ಜಾಗರೂಕ ಪರಿಶೀಲನೆಯು, ನಮ್ಮ ಪ್ರಶ್ನೆಗಳಿಗೆ ನಿಜವಾದ ಹಾಗೂ ಸಂತೃಪ್ತಿಕರವಾದ ಉತ್ತರಗಳನ್ನು ಒದಗಿಸುತ್ತದೆ. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ವಿಷಯದಲ್ಲಿಯೂ ಬೈಬಲ್‌ ನಮಗೆ ಮಾರ್ಗದರ್ಶನವನ್ನು ನೀಡುತ್ತದೆ. ಅಷ್ಟುಮಾತ್ರವಲ್ಲ, ಅದು ಮಹತ್ವಪೂರ್ಣವಾದ ನಿರೀಕ್ಷೆಯನ್ನು ಸಹ ಒದಗಿಸುತ್ತದೆ. ಭವಿಷ್ಯತ್ತಿನಲ್ಲಿ, ಬೇಗನೆ ದೇವರು “ಅವರ [ಮಾನವಕುಲದ] ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು” ಎಂಬ ಆಶ್ವಾಸನೆಯನ್ನೂ ಅದು ನೀಡುತ್ತದೆ. (ಪ್ರಕಟನೆ 21:​3, 4) ಮಾನವಕುಲವು ಬಾಧ್ಯತೆಯಾಗಿ ಪಡೆದಿರುವ ಪಾಪ ಮತ್ತು ಅಪರಿಪೂರ್ಣತೆಯನ್ನು, ಯೇಸು ಕ್ರಿಸ್ತನ ಮೂಲಕ ಯೆಹೋವನು ಸಂಪೂರ್ಣವಾಗಿ ಇಲ್ಲವಾಗಿಸುವನು. ಮತ್ತು ವಿಧೇಯ ಮಾನವರು ಪರದೈಸ ಭೂಮಿಯಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳುವರು. ಆ ಸಮಯದಲ್ಲಿ, ಅವರ ಶಾರೀರಿಕ ಹಾಗೂ ಆತ್ಮಿಕ ಆವಶ್ಯಕತೆಗಳು ಸಂಪೂರ್ಣವಾಗಿ ತೃಪ್ತಿಪಡಿಸಲ್ಪಡುವವು.​—ಕೀರ್ತನೆ 37:​10, 11, 29; ಜ್ಞಾನೋಕ್ತಿ 2:​21, 22; ಮತ್ತಾಯ 5:5.

[ಪಾದಟಿಪ್ಪಣಿ]

^ ಪ್ಯಾರ. 19 ಪಾಪ ಹಾಗೂ ಮರಣವು ಹೇಗೆ ಆರಂಭವಾಯಿತು ಎಂಬುದರ ಕುರಿತಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 6ನೆಯ ಅಧ್ಯಾಯವನ್ನು ನೋಡಿರಿ.

[ಪುಟ 22ರಲ್ಲಿರುವ ಚೌಕ]

ಬೈಬಲು ಪುನರ್ಜನ್ಮದ ಬಗ್ಗೆ ಕಲಿಸುತ್ತದೋ?

ಪುನರ್ಜನ್ಮದ ಕುರಿತಾದ ಸಿದ್ಧಾಂತವನ್ನು ಬೈಬಲಿನ ಯಾವುದೇ ವಚನಗಳು ಅನುಮೋದಿಸುತ್ತವೋ? ಈ ಸಿದ್ಧಾಂತದಲ್ಲಿ ನಂಬಿಕೆಯಿಡುವ ಕೆಲವರು ಉಪಯೋಗಿಸಿರುವ ಶಾಸ್ತ್ರವಚನಗಳಲ್ಲಿ ಕೆಲವನ್ನು ಪರಿಗಣಿಸಿರಿ:

“ಪ್ರವಾದಿಗಳೆಲ್ಲರೂ ಧರ್ಮಶಾಸ್ತ್ರವೂ ಪ್ರವಾದಿಸುವದು ಯೋಹಾನನ ತನಕ ಇತ್ತು . . . ಬರತಕ್ಕ ಎಲೀಯನು ಇವನೇ ಎಂದು ತಿಳುಕೊಳ್ಳಿರಿ.”​—ಮತ್ತಾಯ 11:​13, 14.

ಎಲೀಯನು ಪುನರ್ಜನ್ಮ ಪಡೆದವನಾಗಿ ಸ್ನಾನಿಕನಾದ ಯೋಹಾನನ ರೂಪದಲ್ಲಿ ಬಂದಿದ್ದನೋ? “ನೀನು ಯಾರು? ಎಲೀಯನೋ?” ಎಂದು ಕೇಳಿದಾಗ ಯೋಹಾನನು ಸ್ಪಷ್ಟವಾಗಿ ಉತ್ತರಿಸಿದ್ದು: “ಅಲ್ಲ.” (ಯೋಹಾನ 1:21) ಆದರೂ, ಯೋಹಾನನು “ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ” ಮೆಸ್ಸೀಯನಿಗೆ ಮುಂಚಿತವಾಗಿ ಬರುವನು ಎಂದು ಮೊದಲೇ ಮುಂತಿಳಿಸಲಾಗಿತ್ತು. (ಲೂಕ 1:​16, 17; ಮಲಾಕಿಯ 4:​5, 6) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಎಲೀಯನಿಗೆ ಹೋಲಿಸುವಾಗ ಅವನಂತಹದ್ದೇ ಕೆಲಸವನ್ನು ಸ್ನಾನಿಕನಾದ ಯೋಹಾನನೂ ಮಾಡಿದ ಅರ್ಥದಲ್ಲಿ ಅವನು ಎಲೀಯನಾಗಿದ್ದನು.

“ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು . . . ನೀವು ಹೊಸದಾಗಿ ಹುಟ್ಟಬೇಕು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.”​—ಯೋಹಾನ 3:​3, 7.

ಸಮಯಾನಂತರ ಅಪೊಸ್ತಲರಲ್ಲಿ ಒಬ್ಬನು ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರಿಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿದನು.” (1 ಪೇತ್ರ 1:​3, 4; ಯೋಹಾನ 1:​12, 13) ಸ್ಪಷ್ಟವಾಗಿಯೇ, ಯೇಸು ಸೂಚಿಸಿ ಮಾತಾಡಿದಂತಹ ಹುಟ್ಟುವಿಕೆಯು ಆತ್ಮಿಕ ರೀತಿಯ ಒಂದು ಅನುಭವವಾಗಿದ್ದು, ಅವನ ಶಿಷ್ಯರು ಬದುಕಿದ್ದಾಗಲೇ ಅದು ಸಂಭವಿಸಲಿಕ್ಕಿತ್ತು. ಆದುದರಿಂದ ಇದು ಭವಿಷ್ಯತ್ತಿನ ಪುನರ್ಜನ್ಮಕ್ಕೆ ಸೂಚಿತವಾಗಿರಲಿಲ್ಲ.

“ಒಬ್ಬ ಮನುಷ್ಯನು ಮರಣಪಟ್ಟಾಗ, ಅವನು ಯಾವಾಗಲೂ ಜೀವಿಸುತ್ತಿರುತ್ತಾನೆ: ಭೂಮಿಯ ಮೇಲಿನ ನನ್ನ ಅಸ್ತಿತ್ವದ ದಿನಗಳು ಮುಗಿದಾಗ, ನಾನು ಪುನಃ ಹಿಂದಿರುಗುವ ಸಮಯಕ್ಕಾಗಿ ಮುನ್ನೋಡುತ್ತಾ ಕಾಯುವೆನು.”​— ಆತ್ಮವ್ಯವಹಾರವಾದಕ್ಕನುಸಾರ ಸುವಾರ್ತೆ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವ ಯೋಬ 14:14ರ “ಗ್ರೀಕ್‌ ಭಾಷಾಂತರ.”

ಸತ್ಯವೇದವು ಬೈಬಲ್‌ ಈ ವಚನವನ್ನು ಹೀಗೆ ತರ್ಜುಮೆಮಾಡುತ್ತದೆ: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? ಹಾಗಾಗುವದಾದರೆ ನನಗೆ ಬಿಡುಗಡೆಯಾಗುವವರೆಗೆ ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು.” ಆ ವಚನದ ಪೂರ್ವಾಪರ ಭಾಗಗಳನ್ನು ಓದಿರಿ. ಮೃತರು ತಮ್ಮ “ಬಿಡುಗಡೆ”ಗಾಗಿ ಎದುರುನೋಡುವರು ಎಂಬುದನ್ನು ನೀವು ಕಂಡುಕೊಳ್ಳುವಿರಿ. (13ನೆಯ ವಚನ) ಹೀಗೆ ಕಾಯುತ್ತಿರುವಾಗ, ಅವರು ಅಸ್ತಿತ್ವದಲ್ಲಿರುವುದಿಲ್ಲ. “ಮನುಷ್ಯನಾದರೋ ಸತ್ತು ಬೋರಲಬೀಳುವನು, ಪ್ರಾಣಹೋಗಲು ಅವನು ಎಲ್ಲಿಯೋ!”​—ಯೋಬ 14:10.

[ಪುಟ 21ರಲ್ಲಿರುವ ಚಿತ್ರ]

ಪುನರುತ್ಥಾನದ ನಿರೀಕ್ಷೆಯು, ವೈಯಕ್ತಿಕವಾಗಿ ದೇವರಿಗೆ ನಮ್ಮಲ್ಲಿರುವ ಆಳವಾದ ಆಸಕ್ತಿಯನ್ನು ಪ್ರಕಟಪಡಿಸುತ್ತದೆ

[ಪುಟ 23ರಲ್ಲಿರುವ ಚಿತ್ರಗಳು]

ಎಲ್ಲ ಮಾನವ ಕಷ್ಟಾನುಭವಗಳನ್ನು ದೇವರು ಕೊನೆಗೊಳಿಸುವನು