ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ‘ಕಾಲವನ್ನು ಬೆಲೆಯುಳ್ಳದ್ದಾಗಿ ಉಪಯೋಗಿಸಿಕೊಳ್ಳು’ತ್ತೀರೋ?

ನೀವು ‘ಕಾಲವನ್ನು ಬೆಲೆಯುಳ್ಳದ್ದಾಗಿ ಉಪಯೋಗಿಸಿಕೊಳ್ಳು’ತ್ತೀರೋ?

ನೀವು ‘ಕಾಲವನ್ನು ಬೆಲೆಯುಳ್ಳದ್ದಾಗಿ ಉಪಯೋಗಿಸಿಕೊಳ್ಳು’ತ್ತೀರೋ?

ಪ್ರಥಮ ಶತಮಾನದ ಎಫೆಸಸ್‌ನಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಸಲಹೆ ನೀಡಿದ್ದು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ [“ಸಮಯೋಚಿತ ಕಾಲವನ್ನು ಖರೀದಿಸಿರಿ,” NW].” (ಎಫೆಸ 5:​15, 16) ಈ ಸಲಹೆಯು ಏಕೆ ಅಗತ್ಯವಾಗಿತ್ತು? ಈ ಪ್ರಶ್ನೆಗೆ ಉತ್ತರವು, ಆ ಪುರಾತನ ನಗರದಲ್ಲಿದ್ದ ಕ್ರೈಸ್ತರು ಎದುರಿಸುತ್ತಿದ್ದ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುವುದನ್ನು ಅಗತ್ಯಪಡಿಸುತ್ತದೆ.

ಎಫೆಸಸ್‌ ನಗರವು, ಅತಿಯಾದ ಐಶ್ವರ್ಯ, ಘೋರ ಅನೈತಿಕತೆ, ವ್ಯಾಪಕವಾದ ಪಾತಕ, ಹಾಗೂ ಬೇರೆ ಬೇರೆ ರೀತಿಯ ಭೂತಪ್ರೇತಗಳ ನಂಬಿಕೆಗೆ ತುಂಬ ಪ್ರಸಿದ್ಧವಾಗಿತ್ತು. ಇದರೊಂದಿಗೆ, ಅಲ್ಲಿದ್ದ ಕ್ರೈಸ್ತರು ಸಮಯದ ಕುರಿತಾದ ತತ್ವಜ್ಞಾನಕ್ಕೆ ಸಂಬಂಧಿಸಿದ ನಂಬಿಕೆಗಳೊಂದಿಗೆ ಹೋರಾಡಬೇಕಾಗಿತ್ತು. ಎಫೆಸಸ್‌ನಲ್ಲಿದ್ದ ಕ್ರೈಸ್ತೇತರ ಗ್ರೀಕರು, ಸಮಯವು ಒಂದೇ ದಿಕ್ಕಿನಲ್ಲಿ ಚಲಿಸುತ್ತದೆ ಎಂಬುದನ್ನು ನಂಬುತ್ತಿರಲಿಲ್ಲ. ನಿರಂತರ ಜೀವನ ಚಕ್ರಗಳಲ್ಲಿ ಜೀವಿತವು ಪುನರಾವರ್ತಿತವಾಗುತ್ತದೆ ಎಂದು ಗ್ರೀಕ್‌ ತತ್ವಜ್ಞಾನವು ಅವರಿಗೆ ಕಲಿಸಿತ್ತು. ಒಂದು ಜೀವನ ಚಕ್ರದಲ್ಲಿ ಒಬ್ಬ ವ್ಯಕ್ತಿಯು ಸಮಯವನ್ನು ಹಾಳುಮಾಡುವಲ್ಲಿ, ಇನ್ನೊಂದು ಜೀವನ ಚಕ್ರದಲ್ಲಿ ಅವನು ಹಾಳುಮಾಡಿದ ಸಮಯವನ್ನು ಹಿಂದಿರುಗಿ ಪಡೆಯಸಾಧ್ಯವಿತ್ತು. ಈ ರೀತಿಯ ಆಲೋಚನೆಯು, ದೈವಿಕ ನ್ಯಾಯತೀರ್ಪಿಗಾಗಿರುವ ಯೆಹೋವನ ಕಾಲತಖ್ತೆ ಹಾಗೂ ಘಟನೆಗಳ ಕುರಿತಾದ ಆತನ ಕಾಲತಖ್ತೆಯ ಕಡೆಗೆ ಎಫೆಸದ ಕ್ರೈಸ್ತರು ಉದಾಸೀನ ಮನೋಭಾವವನ್ನು ತೋರಿಸುವಂತೆ ಪ್ರಚೋದಿಸಸಾಧ್ಯವಿತ್ತು. ಆದುದರಿಂದ, ‘ಕಾಲವನ್ನು ಬೆಲೆಯುಳ್ಳದ್ದಾಗಿ ಉಪಯೋಗಿಸಿ’ಕೊಳ್ಳಿರಿ ಎಂಬ ಪೌಲನ ಸಲಹೆಯು ಸೂಕ್ತವಾದದ್ದಾಗಿತ್ತು.

ಪೌಲನು ಇಲ್ಲಿ ಕೇವಲ ಸಾಮಾನ್ಯ ಅರ್ಥದಲ್ಲಿ ಸಮಯದ ಕುರಿತು ಮಾತಾಡುತ್ತಿರಲಿಲ್ಲ. ಅವನು ಉಪಯೋಗಿಸಿದ ಗ್ರೀಕ್‌ ಶಬ್ದವು, ನೇಮಿತ ಸಮಯವನ್ನು, ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಿಷ್ಕರ್ಷೆಮಾಡಲ್ಪಟ್ಟಿರುವ ಸಮಯವನ್ನು ಸೂಚಿಸುತ್ತದೆ. ಸದ್ಯದಲ್ಲಿ ಅವರು ಅನುಭವಿಸುತ್ತಿರುವ ಸಮಯೋಚಿತ ಕಾಲಾವಧಿಯನ್ನು ಅಥವಾ ಅನುಗ್ರಹ ಕಾಲವನ್ನು ವಿವೇಚನೆಯಿಂದ ಉಪಯೋಗಿಸಿಕೊಳ್ಳುವಂತೆ ಪೌಲನು ಪ್ರಥಮ ಶತಮಾನದ ಕ್ರೈಸ್ತರಿಗೆ ಸಲಹೆ ನೀಡುತ್ತಿದ್ದನು. ಏಕೆಂದರೆ ಆ ಕಾಲಾವಧಿಯು ಮುಗಿದಾಗ, ದೇವರ ಕರುಣೆ ಹಾಗೂ ರಕ್ಷಣೆಯ ಅವಕಾಶವು ಖಂಡಿತವಾಗಿಯೂ ಅವರಿಗೆ ಸಿಗಲು ಸಾಧ್ಯವಿರಲಿಲ್ಲ.​—ರೋಮಾಪುರ 13:​11-13; 1 ಥೆಸಲೊನೀಕ 5:​6-11.

ನಾವು ಸಹ ತದ್ರೀತಿಯ ಸಮಯೋಚಿತ ಕಾಲಾವಧಿಯಲ್ಲಿ ಜೀವಿಸುತ್ತಿದ್ದೇವೆ. ಆದುದರಿಂದ, ಲೋಕದಲ್ಲಿ ಸಿಗುವ ತಾತ್ಕಾಲಿಕ ಸುಖಾನುಭೋಗವನ್ನು ಬೆನ್ನಟ್ಟುವ ಮೂಲಕ, ಇನ್ನೆಂದೂ ಪುನರಾವರ್ತಿಸಲ್ಪಡದಂತಹ ಅನುಗ್ರಹ ಕಾಲವನ್ನು ವ್ಯರ್ಥವಾಗಿ ಕಳೆಯದಿರೋಣ. ಅದಕ್ಕೆ ಬದಲಾಗಿ, ತಮಗೆ ಸಿಕ್ಕಿರುವ ಸಮಯವನ್ನು ಕ್ರೈಸ್ತರು “ದೈವಿಕ ಭಕ್ತಿಯ ಕೃತ್ಯಗಳನ್ನು” (NW) ಮಾಡಲಿಕ್ಕಾಗಿ ಉಪಯೋಗಿಸುವುದು ಒಳ್ಳೇದಾಗಿದೆ. ಇದು ಸೃಷ್ಟಿಕರ್ತನಾದ ಯೆಹೋವ ದೇವರೊಂದಿಗಿನ ಅವರ ಸಂಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ.​—2 ಪೇತ್ರ 3:11; ಕೀರ್ತನೆ 73:28; ಫಿಲಿಪ್ಪಿ 1:10.