“ಯೆಹೋವನು ನನಗೆ ಒಳ್ಳೇದನ್ನೇ ಮಾಡಿದ್ದಾನೆ!”
“ಯೆಹೋವನು ನನಗೆ ಒಳ್ಳೇದನ್ನೇ ಮಾಡಿದ್ದಾನೆ!”
ಇಸವಿ 1985ರ ಮಾರ್ಚ್ ತಿಂಗಳಿನ ಹಿತವಾದ ಸಾಯಂಕಾಲದಂದು, ಅಮೆರಿಕದ ನ್ಯೂ ಯಾರ್ಕಿನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದ ರೈಟಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡುತ್ತಿದ್ದ ಸ್ತ್ರೀಪುರುಷರು, ಒಂದು ಮಹತ್ವಪೂರ್ಣ ಘಟನೆಯಿಂದ ತುಂಬ ಸಂತೋಷಪಟ್ಟರು. ಅಂದು, ಸಹೋದರ ಕಾರ್ಲ್ ಎಫ್. ಕ್ಲೈನ್ ಪೂರ್ಣ ಸಮಯದ ಸೇವೆಯಲ್ಲಿ 60 ವರ್ಷಗಳನ್ನು ಮುಗಿಸಿದ್ದರು. ಸಹೋದರ ಕ್ಲೈನ್ ಅತ್ಯಂತ ಹುರುಪಿನಿಂದ ಹೇಳಿದ್ದು: “ಯೆಹೋವನು ನನಗೆ ಒಳ್ಳೇದನ್ನೇ ಮಾಡಿದ್ದಾನೆ!” ಕೀರ್ತನೆ 37:4 ತನ್ನ ಅಚ್ಚುಮೆಚ್ಚಿನ ಬೈಬಲ್ ವಚನವಾಗಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ತದನಂತರ ಅವರು, ತಮ್ಮ ಚೆಲೋ (ದೊಟ್ಟ ಪಿಟೀಲು)ವನ್ನು ನುಡಿಸುವ ಮೂಲಕ ಎಲ್ಲರನ್ನು ಸಂತೋಷಗೊಳಿಸಿದರು.
ಮುಂದಿನ 15 ವರ್ಷಗಳ ವರೆಗೆ ಸಹೋದರ ಕ್ಲೈನ್, ರೈಟಿಂಗ್ ಸಿಬ್ಬಂದಿ ಹಾಗೂ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿ ತಮ್ಮ ಕೆಲಸವನ್ನು ಮುಂದುವರಿಸಿದರು. ಆದರೆ 2001, ಜನವರಿ 3ರಂದು, 95ರ ಪ್ರಾಯದಲ್ಲಿ ಕಾರ್ಲ್ ಕ್ಲೈನ್ ತಮ್ಮ ಭೂಜೀವಿತವನ್ನು ನಂಬಿಗಸ್ತಿಕೆಯಿಂದ ಪೂರ್ಣಗೊಳಿಸಿದರು.
ಸಹೋದರ ಕಾರ್ಲ್‌ರು ಜರ್ಮನಿಯಲ್ಲಿ ಜನಿಸಿದ್ದರು. ತದನಂತರ ಅವರ ಕುಟುಂಬವು ಅಮೆರಿಕಕ್ಕೆ ಸ್ಥಳಾಂತರಿಸಿತು ಮತ್ತು ಇಲಿನೊಯಿಯ ಚಿಕಾಗೋದ ಉಪನಗರವೊಂದರಲ್ಲಿ ಕಾರ್ಲ್ ಬೆಳೆದರು. ಇನ್ನೂ ಚಿಕ್ಕವರಾಗಿದ್ದಾಗಲೇ ಕಾರ್ಲ್ ಮತ್ತು ಅವರ ತಮ್ಮ ಟೆಡ್‌ಗೆ ಬೈಬಲಿನಲ್ಲಿ ಗಾಢವಾದ ಆಸಕ್ತಿ ಹುಟ್ಟಿತ್ತು. 1918ರಲ್ಲಿ ಕಾರ್ಲ್ ದೀಕ್ಷಾಸ್ನಾನ ಪಡೆದುಕೊಂಡರು. ಮತ್ತು 1922ರಲ್ಲಿ, ಬೈಬಲ್ ವಿದ್ಯಾರ್ಥಿಗಳ ಅಧಿವೇಶನವೊಂದರಲ್ಲಿ ಇವರು ಕೇಳಿಸಿಕೊಂಡ ರೋಮಾಂಚಕ ಸಂಗತಿಗಳು, ಕ್ಷೇತ್ರ ಸೇವೆಗಾಗಿ ಜೀವನಪರ್ಯಂತ ಉಳಿದಂಥ ಒಲವನ್ನು ಬೆಳೆಸಿಕೊಳ್ಳುವಂತೆ ಮಾಡಿತು. ಪ್ರತಿ ವಾರ ಅವರು ತಪ್ಪದೇ ಸಾರುವ ಕೆಲಸದಲ್ಲಿ ಭಾಗವಹಿಸುತ್ತಿದ್ದರು. ಮತ್ತು ಇದನ್ನು ತಮ್ಮ ಜೀವಿತದ ಅಂತಿಮ ವಾರಗಳಲ್ಲಿಯೂ ಮಾಡಿದರು.
ಕಾರ್ಲ್ ಅವರು 1925ರಲ್ಲಿ ಮುಖ್ಯಕಾರ್ಯಾಲಯದ ಸಿಬ್ಬಂದಿಯ ಸದಸ್ಯರಾದರು. ಇವರು ಮೊದಲು ಕೆಲಸವನ್ನು ಆರಂಭಿಸಿದ್ದು ಮುದ್ರಣಾಲಯದಲ್ಲೇ. ಇವರಿಗೆ ಸಂಗೀತದಲ್ಲಿ ತೀವ್ರಾಸಕ್ತಿಯಿತ್ತು ಮತ್ತು ಕ್ರಿಸ್ತೀಯ ರೇಡಿಯೋ ಪ್ರಸಾರಗಳಲ್ಲಿ ವಿಶೇಷ ಕಾರ್ಯಕ್ರಮವಾಗಿದ್ದ ಆರ್ಕೆಸ್ಟ್ರದಲ್ಲಿ ಕೆಲವು ವರ್ಷಗಳ ವರೆಗೆ ಇವರು ಚೆಲೋವನ್ನು ನುಡಿಸಿದ್ದರು. ತದನಂತರ, ಇವರು ಸರ್ವಿಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡಿದರು; ಅದರಲ್ಲೂ ವಿಶೇಷವಾಗಿ ಈ ಡಿಪಾರ್ಟ್‌ಮೆಂಟಿನ ಮೇಲ್ವಿಚಾರಕರಾಗಿದ್ದ ಟಿ. ಜೆ. ಸಲ್ಲಿವಾನ್ ಎಂಬ ಸಹೋದರರ ಸಹವಾಸದಲ್ಲಿ ತುಂಬ ಆನಂದಿಸಿದ್ದರು. ಈ ಮಧ್ಯೆ, ಇವರ ತಮ್ಮನಾದ ಟೆಡ್ ಮದುವೆಯಾಗಿ ತನ್ನ ಹೆಂಡತಿ ಡೋರಿಸ್‌ಳೊಂದಿಗೆ ಪೋರ್ಟರೀಕೊದಲ್ಲಿ ಮಿಷನೆರಿ ಸೇವೆಯನ್ನು ಆರಂಭಿಸಿದನು.
ಸುಮಾರು ಐವತ್ತು ವರ್ಷಗಳ ವರೆಗೆ, ಕಾರ್ಲ್ ಕ್ಲೈನ್‌ರವರು ರೈಟಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡಿದರು. ಇಲ್ಲಿ ಇವರು ಅತಿ ಮಹತ್ವಪೂರ್ಣ ರೀತಿಯಲ್ಲಿ ಸಹಾಯಮಾಡಿದರು. ಏಕೆಂದರೆ, ಇವರು ಸಂಶೋಧನೆ ಮಾಡಲು ತುಂಬ ಇಷ್ಟಪಡುತ್ತಿದ್ದರು ಮತ್ತು ಬೈಬಲಿನ ಆಳವಾದ ಜ್ಞಾನವು ಇವರಿಗಿತ್ತು. 1963ರಲ್ಲಿ, ಮಾರ್ಗರೀಟ ಎಂಬುವವರನ್ನು ಕಾರ್ಲ್ ಮದುವೆಯಾದರು. ಮಾರ್ಗರೀಟ ಒಬ್ಬ ಜರ್ಮನ್ ಮಿಷನೆರಿಯಾಗಿದ್ದು, ಬೊಲಿವಿಯದಲ್ಲಿ ಸೇವೆಮಾಡುತ್ತಿದ್ದರು. ಕಾರ್ಲ್‌ರವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರೂ, ಅನೇಕರು ನಿವೃತ್ತಿಯನ್ನು ಪಡೆಯುವಂತಹ ವಯಸ್ಸು ಮೀರಿ ಅನೇಕ ವರ್ಷಗಳು ಕಳೆದಿದ್ದರೂ, ತಮ್ಮ ಪತ್ನಿಯ ಪ್ರೀತಿಯ ಬೆಂಬಲದಿಂದ ತುಂಬ ಕಾರ್ಯಸಮರ್ಥರಾಗಿದ್ದರು. ಸಹೋದರ ಕಾರ್ಲ್‌ರ ಸಹಜವಾದ ಬಿಚ್ಚುಮನಸ್ಸು ಹಾಗೂ ಒಬ್ಬ ಸಂಗೀತಗಾರನಿಗಿರುವಂಥ ಅತ್ಯುತ್ಸಾಹವು, ಸಭೆಗಳಲ್ಲಿ ಹಾಗೂ ಅಧಿವೇಶನಗಳಲ್ಲಿ ಸ್ಮರಣಾರ್ಹವಾದಂಥ ರೀತಿಯ ಭಾಷಣಗಳನ್ನು ಕೊಡಲು ಸಹಾಯಮಾಡಿತ್ತು. ತಮ್ಮ ಮರಣಕ್ಕೆ ಸ್ವಲ್ಪ ಮುಂಚೆ ಇವರು, ನ್ಯೂ ಯಾರ್ಕಿನಲ್ಲಿರುವ ದೊಡ್ಡ ಬೆತೆಲ್ ಕುಟುಂಬದ ಬೆಳಗ್ಗಿನ ದೈನಿಕ ವಚನದ ಚರ್ಚೆಯನ್ನು ನಡೆಸಿದರು ಮತ್ತು ಇದು ಎಲ್ಲರಿಗೂ ಆನಂದವನ್ನು ಉಂಟುಮಾಡಿತ್ತು ಹಾಗೂ ಪ್ರಯೋಜನದಾಯಕವಾಗಿತ್ತು.
ಕಾವಲಿನಬುರುಜು ಪತ್ರಿಕೆಯನ್ನು ಕ್ರಮವಾಗಿ ಓದುವಂಥವರಲ್ಲಿ ಅನೇಕರಿಗೆ, 1984ರ ಅಕ್ಟೋಬರ್ 1ನೆಯ ಸಂಚಿಕೆಯಲ್ಲಿ ಪ್ರಕಾಶಿಸಲ್ಪಟ್ಟಿದ್ದ ಸಹೋದರ ಕ್ಲೈನ್‌ರ ಜೀವನ ಕಥೆಯು, ಅವರ ಅನುಭವಗಳ ಆಕರ್ಷಕ ವೃತ್ತಾಂತವು ನೆನಪಿರಬಹುದು. ಈ ಲೇಖನದ ಬರಹಗಾರನು ಒಬ್ಬ ನಂಬಿಗಸ್ತ ಸಮರ್ಪಿತ ಕ್ರೈಸ್ತನೋಪಾದಿ ಅಂದಿನಿಂದ ಇನ್ನೂ ಹದಿನೈದು ವರ್ಷಗಳನ್ನು ಕಳೆದನು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ, ನೀವು ಆ ವೃತ್ತಾಂತವನ್ನು ಓದುವುದರಲ್ಲಿ ಅಥವಾ ಪುನಃ ಪುನಃ ಓದುವುದರಲ್ಲಿ ಆನಂದಿಸುವಿರಿ.
ಕರ್ತನ ಅಭಿಷಿಕ್ತರಲ್ಲಿ ಒಬ್ಬರೋಪಾದಿ ಸಹೋದರ ಕ್ಲೈನ್‌ರು, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳ್ವಿಕೆ ನಡೆಸಲು ಮನಃಪೂರ್ವಕವಾಗಿ ಬಯಸುತ್ತಿದ್ದರು. ಈಗ ಯೆಹೋವನು ಅವರ ಆ ಬಯಕೆಯನ್ನು ಪೂರೈಸಿದ್ದಾನೆ ಎಂದು ನಂಬಲು ನಮಗೆ ಸಕಲ ಕಾರಣಗಳೂ ಇವೆ.—ಲೂಕ 22:28-30.
[ಪುಟ 31ರಲ್ಲಿರುವ ಚಿತ್ರ]
ಇಸವಿ 1943ರಲ್ಲಿ, ಟಿ. ಜೆ. ಸಲ್ಲಿವಾನ್ ಮತ್ತು ಟೆಡ್ ಹಾಗೂ ಡೋರಿಸ್‌ರೊಂದಿಗೆ ಕಾರ್ಲ್
[ಪುಟ 31ರಲ್ಲಿರುವ ಚಿತ್ರ]
ಇಸವಿ 2000ದ ಅಕ್ಟೋಬರ್‌ನಲ್ಲಿ ಕಾರ್ಲ್ ಮತ್ತು ಮಾರ್ಗರೀಟ