ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮಾರ್ಗದಲ್ಲಿ ಮುಂದುವರಿಯುವುದೇ ನಮಗೆ ಬಲ ಹಾಗೂ ಸಂತೋಷವನ್ನು ನೀಡುತ್ತದೆ

ಯೆಹೋವನ ಮಾರ್ಗದಲ್ಲಿ ಮುಂದುವರಿಯುವುದೇ ನಮಗೆ ಬಲ ಹಾಗೂ ಸಂತೋಷವನ್ನು ನೀಡುತ್ತದೆ

ಜೀವನ ಕಥೆ

ಯೆಹೋವನ ಮಾರ್ಗದಲ್ಲಿ ಮುಂದುವರಿಯುವುದೇ ನಮಗೆ ಬಲ ಹಾಗೂ ಸಂತೋಷವನ್ನು ನೀಡುತ್ತದೆ

ಲೂಈಜೀ ಡಿ. ವ್ಯಾಲೆಂಟೀನೊ ಅವರು ಹೇಳಿರುವಂತೆ

“ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ಯೆಹೋವನು ಬುದ್ಧಿವಾದ ಹೇಳುತ್ತಾನೆ. (ಯೆಶಾಯ 30:21) 60 ವರ್ಷಗಳ ಹಿಂದೆ ನಾನು ದೀಕ್ಷಾಸ್ನಾನ ಪಡೆದುಕೊಂಡಂದಿನಿಂದ, ಈ ಸಲಹೆಗೆ ಅನುಸಾರವಾಗಿ ನಡೆಯುವುದೇ ನನ್ನ ಗುರಿಯಾಗಿದೆ. ನನ್ನ ಹೆತ್ತವರ ಮಾದರಿಯಿಂದಾಗಿ ನಾನು ಚಿಕ್ಕ ಪ್ರಾಯದಲ್ಲೇ ಈ ಗುರಿಯನ್ನು ಇಡಲು ಸಾಧ್ಯವಾಯಿತು. 1921ರಲ್ಲಿ, ನನ್ನ ಹೆತ್ತವರು ಇಟಲಿಯಿಂದ ವಲಸೆ ಹೋಗಿ ಅಮೆರಿಕದ ಓಹಾಯೋದ ಕ್ಲೀವ್ಲೆಂಡ್‌ನಲ್ಲಿ ನೆಲೆಸಿದರು. ಅಲ್ಲಿ ಅವರು ಮೂವರು ಮಕ್ಕಳನ್ನು, ಅಂದರೆ ನನ್ನ ಅಣ್ಣನಾದ ಮೈಕ್‌, ನನ್ನ ತಂಗಿಯಾದ ಲಿಡಿಯ ಹಾಗೂ ನನ್ನನ್ನು ಬೆಳೆಸಿದರು.

ನನ್ನ ಹೆತ್ತವರು ಬೇರೆ ಬೇರೆ ಧರ್ಮಗಳನ್ನು ಪರೀಶೀಲಿಸಿದರು, ಆದರೆ ಕಾಲಕ್ರಮೇಣ ನಿರಾಶೆಯಿಂದ ಎಲ್ಲ ಪ್ರಯತ್ನಗಳನ್ನು ನಿಲ್ಲಿಸಿಬಿಟ್ಟರು. ತದನಂತರ, 1932ರಲ್ಲಿ ಒಂದು ದಿನ ರೇಡಿಯೋದಲ್ಲಿ ಬರುತ್ತಿದ್ದ ಇಟಲಿ ಭಾಷೆಯ ಕಾರ್ಯಕ್ರಮವನ್ನು ಅಪ್ಪ ಕೇಳಿಸಿಕೊಳ್ಳುತ್ತಿದ್ದರು. ಅದು ಯೆಹೋವನ ಸಾಕ್ಷಿಗಳಿಂದ ಮಾಡಲ್ಪಟ್ಟ ರೇಡಿಯೋ ಪ್ರಸಾರವಾಗಿತ್ತು ಮತ್ತು ತಾವು ಕೇಳಿಸಿಕೊಂಡ ವಿಷಯವು ಅಪ್ಪನಿಗೆ ಇಷ್ಟವಾಯಿತು. ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲಿಕ್ಕಾಗಿ ಅವರು ಬೆತೆಲ್‌ಗೆ ಪತ್ರ ಬರೆದರು ಮತ್ತು ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದ ಇಟಲಿ ಭಾಷೆಯನ್ನಾಡುವ ಒಬ್ಬ ಸಾಕ್ಷಿಯು ನಮ್ಮನ್ನು ಭೇಟಿಮಾಡಿದನು. ಮರುದಿನ ಮುಂಜಾವದ ತನಕ ಆಸಕ್ತಿಕರವಾದ ಚರ್ಚೆಯು ಮುಂದುವರಿದ ಬಳಿಕ, ತಾವು ಸತ್ಯ ಧರ್ಮವನ್ನು ಕಂಡುಕೊಂಡಿದ್ದೇವೆ ಎಂಬುದು ನನ್ನ ಹೆತ್ತವರಿಗೆ ಮನವರಿಕೆಯಾಯಿತು.

ಅಪ್ಪ ಮತ್ತು ಅಮ್ಮ ಕ್ರೈಸ್ತ ಕೂಟಗಳಿಗೆ ಹಾಜರಾಗಲಾರಂಭಿಸಿದರು ಮತ್ತು ಸಂಚರಣ ಮೇಲ್ವಿಚಾರಕರು ನಮ್ಮ ಮನೆಯಲ್ಲಿ ಉಳಿದುಕೊಳ್ಳುವಂತೆ ಸಹ ಅನುಮತಿಸುತ್ತಿದ್ದರು. ನಾನು ಒಬ್ಬ ಚಿಕ್ಕ ಹುಡುಗನಾಗಿದ್ದರೂ, ಸಾರುವ ಕೆಲಸಕ್ಕೆ ಹೋಗುವಾಗ ಈ ಮೇಲ್ವಿಚಾರಕರು ನನ್ನನ್ನು ಸಹ ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಇದು, ಪೂರ್ಣ ಸಮಯ ಯೆಹೋವನ ಸೇವೆಮಾಡುವುದರ ಕುರಿತು ನಾನು ಆಲೋಚಿಸುವಂತೆ ಮಾಡಿತು. ಇಂತಹ ಭೇಟಿಗಾರರಲ್ಲಿ ಒಬ್ಬರು ಕ್ಯಾರಿ ಡಬ್ಲ್ಯೂ. ಬಾರ್ಬರ್‌ ಆಗಿದ್ದು, ಈಗ ಇವರು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿದ್ದಾರೆ. ಸಮಯಾನಂತರ, 1941ರ ಫೆಬ್ರವರಿ ತಿಂಗಳಿನಲ್ಲಿ, 14 ವರ್ಷ ಪ್ರಾಯದವನಾಗಿದ್ದಾಗ ನಾನು ದೀಕ್ಷಾಸ್ನಾನ ಪಡೆದುಕೊಂಡೆ. 1944ರಲ್ಲಿ ನಾನು ಕ್ಲೀವ್ಲೆಂಡ್‌ನಲ್ಲಿ ಒಬ್ಬ ಪಯನೀಯರನೋಪಾದಿ ಸೇವೆಮಾಡಲಾರಂಭಿಸಿದೆ. ಮೈಕ್‌ ಮತ್ತು ಲಿಡಿಯ ಸಹ ಬೈಬಲ್‌ ಸತ್ಯವನ್ನು ಅನುಸರಿಸಲು ಆರಂಭಿಸಿದರು. ಮೈಕ್‌ ತನ್ನ ಮರಣದ ತನಕ ಯೆಹೋವನ ಸೇವೆಮಾಡಿದನು ಮತ್ತು ಲಿಡಿಯಳು ತನ್ನ ಪತಿಯಾದ ಹೆರಲ್ಡ್‌ ವೈಡ್ನರ್‌ನೊಂದಿಗೆ 28 ವರ್ಷಗಳ ವರೆಗೆ ಸಂಚರಣ ಸೇವೆಯಲ್ಲಿ ಜೊತೆಗೂಡಿದ್ದಳು. ಇಂದು, ಅವರು ವಿಶೇಷ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಮಾಡುತ್ತಿದ್ದಾರೆ.

ದೇವರ ಮಾರ್ಗದಲ್ಲಿ ಮುಂದುವರಿಯುವ ನನ್ನ ನಿರ್ಧಾರವನ್ನು ಸೆರೆಮನೆಯು ಬಲಪಡಿಸುತ್ತದೆ

ಕತ್ತಿಗಳನ್ನು ಗುಳಗಳನ್ನಾಗಿ ಮಾಡುವುದರ ಕುರಿತು ತಿಳಿಸುವ ಯೆಶಾಯ 2:4ರ ವಚನಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವಂತೆ ನನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ನನ್ನನ್ನು ಪ್ರಚೋದಿಸಿದ್ದರಿಂದ, 1945ರ ಆರಂಭದಲ್ಲಿ ನಾನು ಓಹಾಯೋದ ಚಿಲಕಾತೀ ಫೆಡರಲ್‌ ಸೆರೆಮನೆಗೆ ಹಾಕಲ್ಪಟ್ಟೆ. ಒಂದು ಸಲ, ಸೆರೆಮನೆಯ ಅಧಿಕಾರಿಗಳು ಸೆರೆಮನೆಯಲ್ಲಿದ್ದ ಸಾಕ್ಷಿಗಳಿಗೆ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಕೆಲವೇ ಬೈಬಲ್‌ ಸಾಹಿತ್ಯವನ್ನು ಪಡೆದುಕೊಳ್ಳುವಂತೆ ಅನುಮತಿ ನೀಡಿದರು. ಆದರೂ, ಹತ್ತಿರದಲ್ಲಿದ್ದ ಒಂದು ಸಭೆಯ ಸಾಕ್ಷಿಗಳು ನಮಗೆ ಸಹಾಯಮಾಡಿದರು. ಕೆಲವೊಮ್ಮೆ ಅವರು ಸೆರೆಮನೆಯ ಸಮೀಪದಲ್ಲಿದ್ದ ಕೆಲವು ಹೊಲಗಳಲ್ಲಿ ಕೆಲವು ಪ್ರಕಾಶನಗಳನ್ನು ಬಿಟ್ಟುಹೋಗುತ್ತಿದ್ದರು. ಮರುದಿನ ಬೆಳಗ್ಗೆ ಸೆರೆವಾಸಿಗಳನ್ನು ಅವರ ಕೆಲಸದ ಸ್ಥಳಕ್ಕೆ ಕರೆದೊಯ್ಯುವಾಗ, ಅವರು ಆ ಪ್ರಕಾಶನಗಳನ್ನು ಹುಡುಕುತ್ತಿದ್ದರು ಮತ್ತು ಹೇಗೋ ಮಾಡಿ ಸೆರೆಮನೆಗೆ ತೆಗೆದುಕೊಂಡುಹೋಗುತ್ತಿದ್ದರು. ನಾನು ಆ ಸೆರೆಮನೆಗೆ ಹೋಗುವ ಸಮಯದಷ್ಟಕ್ಕೆ, ಇನ್ನೂ ಹೆಚ್ಚು ಸಾಹಿತ್ಯವನ್ನು ಪಡೆದುಕೊಳ್ಳುವಂತೆ ಅನುಮತಿ ನೀಡಲಾಗಿತ್ತು. ಹೀಗೆ, ಯೆಹೋವನು ಒದಗಿಸುವಂತಹ ಆತ್ಮಿಕ ಆಹಾರವನ್ನು ಅಮೂಲ್ಯವಾಗಿ ಪರಿಗಣಿಸಲು ನಾನು ಕಲಿತುಕೊಂಡೆ. ಈಗಲೂ ಪ್ರತಿ ಬಾರಿ ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಹೊಸ ಪ್ರತಿಯನ್ನು ನಾನು ಪಡೆದುಕೊಂಡಾಗ ಈ ಪಾಠವನ್ನು ಜ್ಞಾಪಿಸಿಕೊಳ್ಳುತ್ತೇನೆ.

ಸಮಯಾನಂತರ, ಸೆರೆಮನೆಯಲ್ಲಿ ಸಭಾ ಕೂಟಗಳನ್ನು ನಡಿಸಲು ನಮಗೆ ಅನುಮತಿ ಸಿಕ್ಕಿತು. ಆದರೆ ಸಾಕ್ಷಿಗಳಲ್ಲದವರು ಅದಕ್ಕೆ ಹಾಜರಾಗುವಂತಿರಲಿಲ್ಲ. ಆದರೂ, ಸೆರೆಮನೆಯ ಅಧಿಕಾರಿಗಳಲ್ಲಿ ಕೆಲವರು ಮತ್ತು ಇತರ ಸೆರೆವಾಸಿಗಳು ಗುಪ್ತವಾಗಿ ಹಾಜರಾದರು ಮತ್ತು ಅವರಲ್ಲಿ ಕೆಲವರು ಸತ್ಯವನ್ನೂ ಸ್ವೀಕರಿಸಿದರು. (ಅ. ಕೃತ್ಯಗಳು 16:​30-34) ಸಹೋದರ ಎ. ಏಚ್‌. ಮ್ಯಾಕ್‌ಮಿಲನ್‌ರ ಭೇಟಿಗಳು ಸಾಂತ್ವನದ ಪ್ರಮುಖ ಮೂಲವಾಗಿದ್ದವು. ನೀವು ಸೆರೆಮನೆಯಲ್ಲಿ ಕಳೆದ ಸಮಯವು ವ್ಯರ್ಥವಲ್ಲ, ಏಕೆಂದರೆ ಭವಿಷ್ಯತ್ತಿನ ನೇಮಕಗಳಿಗಾಗಿ ಈ ಸಮಯವು ನಿಮ್ಮನ್ನು ತರಬೇತುಗೊಳಿಸಿದೆ ಎಂದು ಅವರು ಯಾವಾಗಲೂ ಆಶ್ವಾಸನೆ ನೀಡುತ್ತಿದ್ದರು. ಆ ಪ್ರೀತಿಯ ವೃದ್ಧ ಸಹೋದರರು ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿದರು ಮತ್ತು ಯೆಹೋವನ ಮಾರ್ಗದಲ್ಲಿ ನಡೆಯುವ ನನ್ನ ದೃಢನಿರ್ಧಾರವನ್ನು ಇನ್ನಷ್ಟು ಬಲಗೊಳಿಸಿದರು.

ನನಗೆ ಒಬ್ಬ ಸಂಗಾತಿ ಸಿಕ್ಕಿದ್ದು

ಎರಡನೇ ಲೋಕ ಯುದ್ಧವು ಮುಗಿದು ಸೆರೆಮನೆಯ ದ್ವಾರಗಳು ತೆರೆಯಲ್ಪಟ್ಟವು ಮತ್ತು ಪೂರ್ಣ ಸಮಯದ ಪಯನೀಯರ್‌ ಸೇವೆಯನ್ನು ನಾನು ಪುನಃ ಆರಂಭಿಸಿದೆ. ಆದರೆ 1947ರಲ್ಲಿ ನನ್ನ ತಂದೆ ಮೃತಪಟ್ಟರು. ಕುಟುಂಬಕ್ಕೆ ಸಹಾಯಮಾಡಲಿಕ್ಕಾಗಿ ನಾನು ಐಹಿಕ ಕೆಲಸವನ್ನು ಆರಂಭಿಸಿದೆ ಮತ್ತು ವೈದ್ಯಕೀಯ ಮಾಲೀಸು ಮಾಡುವ ಅರ್ಹತೆಯನ್ನೂ ಪಡೆದುಕೊಂಡೆ. ಸುಮಾರು 30 ವರ್ಷಗಳ ಬಳಿಕ ನಾನೂ ನನ್ನ ಪತ್ನಿಯೂ ಎದುರಿಸಿದ ಸಂಕಷ್ಟಕರ ಸಮಯದಲ್ಲಿ ಈ ಕೈಚಳಕವು ನನಗೆ ತುಂಬ ಸಹಾಯಮಾಡಲಿತ್ತು. ಆದರೆ ನನ್ನ ಕಥೆಯನ್ನು ನಾನು ಮಧ್ಯೆ ಮಧ್ಯೆ ಹೇಳುತ್ತಿದ್ದೇನೆ. ಆದುದರಿಂದ, ಮೊದಲಾಗಿ ನನ್ನ ಪತ್ನಿಯ ಕುರಿತು ನಿಮಗೆ ತಿಳಿಸಲು ಬಯಸುತ್ತೇನೆ.

1949ರಲ್ಲಿ, ಒಂದು ಮಧ್ಯಾಹ್ನ ನಾನು ರಾಜ್ಯ ಸಭಾಗೃಹದಲ್ಲಿದ್ದಾಗ ಒಂದು ಫೋನ್‌ ಬಂತು. ನಾನು ಫೋನನ್ನು ತೆಗೆದುಕೊಂಡಾಗ, ಒಂದು ಸುಮಧುರ ಧ್ವನಿಯು ಹೀಗೆ ಹೇಳುತ್ತಿರುವುದನ್ನು ಕೇಳಿಸಿಕೊಂಡೆ: “ನನ್ನ ಹೆಸರು ಕ್ರಿಸ್ಟೀನ್‌ ಜೆಂಚರ್‌. ನಾನು ಯೆಹೋವನ ಸಾಕ್ಷಿಯಾಗಿದ್ದೇನೆ. ಒಂದು ಕೆಲಸವನ್ನು ಹುಡುಕಲಿಕ್ಕಾಗಿ ನಾನು ಕ್ಲೀವ್ಲೆಂಡ್‌ಗೆ ಬಂದಿದ್ದೇನೆ ಮತ್ತು ಒಂದು ಸಭೆಯೊಂದಿಗೆ ಜೊತೆಗೂಡಲು ಬಯಸುತ್ತೇನೆ.” ಅವಳು ವಾಸಿಸುತ್ತಿದ್ದ ಸ್ಥಳದಿಂದ ನಮ್ಮ ರಾಜ್ಯ ಸಭಾಗೃಹವು ತುಂಬ ದೂರವಿತ್ತು. ಆದರೂ ಅವಳ ಸುಮಧುರ ಧ್ವನಿಯು ನನಗೆ ತುಂಬ ಇಷ್ಟವಾಯಿತು. ಆದುದರಿಂದ ನಾನು ಅವಳಿಗೆ ನಮ್ಮ ರಾಜ್ಯ ಸಭಾಗೃಹಕ್ಕೆ ಬರುವ ದಾರಿಯ ಬಗ್ಗೆ ಮಾರ್ಗದರ್ಶನ ನೀಡಿದೆ ಮತ್ತು ಅದೇ ಭಾನುವಾರ ಬರುವಂತೆ ಉತ್ತೇಜಿಸಿದೆ. ಏಕೆಂದರೆ ಆ ದಿನ ನಾನೇ ಬಹಿರಂಗ ಭಾಷಣವನ್ನು ಕೊಡಲಿದ್ದೆ. ಭಾನುವಾರ ಎಲ್ಲರಿಗಿಂತಲೂ ಮೊದಲು ನಾನೇ ರಾಜ್ಯ ಸಭಾಗೃಹಕ್ಕೆ ಬಂದೆ, ಆದರೆ ಅಲ್ಲಿ ಯಾವ ಅಪರಿಚಿತ ಸಹೋದರಿಯೂ ದೃಷ್ಟಿಗೆ ಬೀಳಲಿಲ್ಲ. ಭಾಷಣದಾದ್ಯಂತ ನಾನು ಸಭಾಗೃಹದ ಪ್ರವೇಶದ್ವಾರದ ಕಡೆಗೆ ಅನೇಕಬಾರಿ ನೋಡುತ್ತಾ ಇದ್ದೆ, ಆದರೆ ಅಪರಿಚಿತರಾರೂ ಒಳಗೆ ಬರಲಿಲ್ಲ. ಮರುದಿನ ನಾನೇ ಅವಳಿಗೆ ಫೋನ್‌ಮಾಡಿದೆ. ಇಲ್ಲಿನ ಸ್ಥಳಿಕ ಬಸ್‌ ವ್ಯವಸ್ಥೆಯ ಬಗ್ಗೆ ತನಗೆ ಹೆಚ್ಚು ತಿಳಿದಿರಲಿಲ್ಲವಾದ್ದರಿಂದ ತಾನು ಬರಲಾಗಲಿಲ್ಲ ಎಂದು ಅವಳು ಹೇಳಿದಳು. ಆದುದರಿಂದ, ಇದರ ಬಗ್ಗೆ ಹೆಚ್ಚನ್ನು ತಿಳಿಸಲಿಕ್ಕಾಗಿ ಸ್ವತಃ ನಾನೇ ನಿನ್ನನ್ನು ಭೇಟಿಮಾಡುತ್ತೇನೆ ಎಂದು ಅವಳಿಗೆ ಹೇಳಿದೆ.

ಅವಳ ಹೆತ್ತವರು ಚೆಕಸ್ಲೊವಾಕಿಯದಿಂದ ವಲಸೆ ಬಂದವರಾಗಿದ್ದರು; ಮೃತರು ಎಲ್ಲಿದ್ದಾರೆ? (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು ಓದಿದ ನಂತರ ಅವರು ಬೈಬಲ್‌ ವಿದ್ಯಾರ್ಥಿಗಳೊಂದಿಗೆ ಸಹವಾಸಿಸಲು ಆರಂಭಿಸಿದ್ದರು ಎಂಬುದು ನನಗೆ ತಿಳಿದುಬಂತು. 1935ರಲ್ಲಿ ಅವಳ ಹೆತ್ತವರು ದೀಕ್ಷಾಸ್ನಾನ ಪಡೆದುಕೊಂಡಿದ್ದರು. 1938ರಲ್ಲಿ, ಕ್ರಿಸ್ಟೀನ್‌ಳ ತಂದೆಯು ಅಮೆರಿಕದ ಪೆನ್ಸಿಲ್ವೇನಿಯದಲ್ಲಿರುವ ಕ್ಲೈಮರ್‌ನ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಕಂಪೆನಿ ಸರ್ವೆಂಟ್‌ (ಈಗ ಅಧ್ಯಕ್ಷ ಮೇಲ್ವಿಚಾರಕರೆಂದು ಕರೆಯಲಾಗುತ್ತದೆ) ಆಗಿ ನೇಮಿತರಾದರು. ಮತ್ತು 1947ರಲ್ಲಿ, 16 ವರ್ಷ ಪ್ರಾಯದಲ್ಲಿ ಕ್ರಿಸ್ಟೀನ್‌ ದೀಕ್ಷಾಸ್ನಾನ ಪಡೆದುಕೊಂಡಳು. ಈ ಸುಂದರ, ಆತ್ಮಿಕ ಮನೋಭಾವದ ಸಹೋದರಿಯಲ್ಲಿ ಅನುರಕ್ತನಾಗಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. 1950ರ ಜೂನ್‌ 24ರಂದು ನಾವು ಮದುವೆಯಾದೆವು; ಅಂದಿನಿಂದ ಕ್ರಿಸ್ಟೀನ್‌ ನನ್ನ ನಂಬಿಗಸ್ತ ಸಂಗಾತಿಯಾಗಿದ್ದಾಳೆ ಮತ್ತು ದೇವರ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಲು ಯಾವಾಗಲೂ ಮನಃಪೂರ್ವಕವಾಗಿ ಸಿದ್ಧಳಿದ್ದಾಳೆ. ಈ ಸಮರ್ಥ ಸಂಗಾತಿಯು ನನ್ನೊಂದಿಗೆ ಜೀವನ ಕಳೆಯಲು ಒಪ್ಪಿಕೊಂಡದ್ದಕ್ಕಾಗಿ ನಾನು ಯೆಹೋವನಿಗೆ ಆಭಾರಿಯಾಗಿದ್ದೇನೆ.​—ಜ್ಞಾನೋಕ್ತಿ 31:10.

ಅನಿರೀಕ್ಷಿತ ಸುದ್ದಿ

1951ರ ನವೆಂಬರ್‌ 1ರಂದು ನಾವಿಬ್ಬರೂ ಒಟ್ಟಿಗೆ ಪಯನೀಯರ್‌ ಸೇವೆಯನ್ನು ಆರಂಭಿಸಿದೆವು. ಎರಡು ವರ್ಷಗಳ ಬಳಿಕ, ಓಹಾಯೋದ ಟೊಲೆಡೋದಲ್ಲಿ ನಡೆದ ಒಂದು ಅಧಿವೇಶನದಲ್ಲಿ, ಹೂಗೋ ರೀಮ ಮತ್ತು ಆಲ್ಬರ್ಟ್‌ ಶ್ರೋಡರ್‌ ಎಂಬ ಸಹೋದರರು, ಮಿಷನೆರಿ ಸೇವೆಯಲ್ಲಿ ಆಸಕ್ತರಾಗಿದ್ದ ಪಯನೀಯರರ ಒಂದು ಗುಂಪಿನೊಂದಿಗೆ ಮಾತಾಡಿದರು. ಆ ಗುಂಪಿನಲ್ಲಿ ನಾವೂ ಸೇರಿದ್ದೆವು. ಆಗ, ಕ್ಲೀವ್ಲೆಂಡ್‌ನಲ್ಲೇ ಪಯನೀಯರ್‌ ಸೇವೆಯನ್ನು ಮುಂದುವರಿಸುವಂತೆ ನಮ್ಮನ್ನು ಉತ್ತೇಜಿಸಲಾಯಿತು. ಆದರೆ ಮುಂದಿನ ತಿಂಗಳೇ ನಮಗೆ ಒಂದು ಅನಿರೀಕ್ಷಿತ ಸುದ್ದಿಯು ಬಂದು ಮುಟ್ಟಿತು. ಅದೇನೆಂದರೆ, 1954ರ ಫೆಬ್ರವರಿ ತಿಂಗಳಿನಲ್ಲಿ ಆರಂಭವಾಗಲಿದ್ದ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 23ನೆಯ ತರಗತಿಗೆ ಹಾಜರಾಗುವಂತೆ ನಮಗೆ ಕರೆ ಬಂದಿತ್ತು!

ಆಗ, ನ್ಯೂ ಯಾರ್ಕಿನ ಸೌತ್‌ ಲ್ಯಾನ್ಸಿಂಗ್‌ನಲ್ಲಿದ್ದ ಗಿಲ್ಯಡ್‌ ಸ್ಕೂಲ್‌ಗೆ ನಾವು ಪ್ರಯಾಣಿಸುತ್ತಿದ್ದಾಗ ಕ್ರಿಸ್ಟೀನ್‌ ಎಷ್ಟು ಕಳವಳಗೊಂಡಿದ್ದಳೆಂದರೆ, “ನಿಧಾನವಾಗಿ ಗಾಡಿ ಓಡಿಸಿ!” ಎಂದು ಅವಳು ನನಗೆ ಪುನಃ ಪುನಃ ಹೇಳುತ್ತಿದ್ದಳು. “ಕ್ರಿಸ್ಟೀನ್‌ ಒಂದುವೇಳೆ ನಾನು ಇದಕ್ಕಿಂತ ನಿಧಾನಗೊಳಿಸಿದರೆ, ನಮ್ಮ ಕಾರ್‌ ಪಾರ್ಕ್‌ ಮಾಡಿರುವ ಕಾರಿನಂತಿರುತ್ತದೆ ಅಷ್ಟೇ” ಎಂದು ನಾನು ಅವಳಿಗೆ ಹೇಳಿದೆ. ಆದರೂ, ಗಿಲ್ಯಡ್‌ ಸ್ಕೂಲ್‌ಗೆ ಬಂದು ಮುಟ್ಟಿದ ಬಳಿಕ ನಮ್ಮಿಬ್ಬರಿಗೂ ನಿರಾತಂಕವಾದ ಅನಿಸಿಕೆಯಾಯಿತು. ಸಹೋದರ ನೇತನ್‌ ನಾರ್‌ ಅವರು ವಿದ್ಯಾರ್ಥಿಗಳ ಗುಂಪನ್ನು ಸ್ವಾಗತಿಸಿದರು ಮತ್ತು ನಮಗೆ ಗಿಲ್ಯಡ್‌ನ ಎಲ್ಲ ವಿಭಾಗಗಳನ್ನು ತೋರಿಸಿದರು. ನಾವು ನೀರು ಹಾಗೂ ವಿದ್ಯುಚ್ಛಕ್ತಿಯನ್ನು ಹೇಗೆ ಉಳಿತಾಯ ಮಾಡಸಾಧ್ಯವಿದೆ ಎಂಬುದನ್ನು ಸಹ ಅವರು ವಿವರಿಸಿದರು. ಮತ್ತು ರಾಜ್ಯಾಭಿರುಚಿಗಳನ್ನು ಪೂರೈಸುತ್ತಿರುವಾಗ ಮಿತವ್ಯಯಮಾಡುವುದು ಒಂದು ಸದ್ಗುಣವಾಗಿದೆ ಎಂಬುದನ್ನು ಒತ್ತಿಹೇಳಿದರು. ಆ ಬುದ್ಧಿವಾದವು ನಮ್ಮ ಮನಸ್ಸಿಗೆ ನಾಟಿತು. ಈಗಲೂ ನಾವು ಅದಕ್ಕನುಸಾರ ಜೀವಿಸುತ್ತಿದ್ದೇವೆ.

ರಿಯೋಗೆ ವಿಮಾನ ಪ್ರಯಾಣ

ಸ್ವಲ್ಪದರಲ್ಲೇ ನಾವು ಪದವಿಯನ್ನು ಪಡೆದುಕೊಂಡೆವು ಮತ್ತು 1954ರ ಡಿಸೆಂಬರ್‌ 10ರಂದು ಚಳಿಗಾಲದಿಂದ ಕೂಡಿದ್ದ ನ್ಯೂ ಯಾರ್ಕ್‌ ಸಿಟಿಯಲ್ಲಿ ವಿಮಾನವನ್ನು ಏರಿದೆವು. ಬ್ರಸಿಲ್‌ನ ತುಂಬ ಬಿಸಿಲಿನಿಂದ ಕೂಡಿದ್ದ ರಿಯೋ ಡೇ ಜನೈರೋದ ನಮ್ಮ ಹೊಸ ನೇಮಕಕ್ಕೆ ಪ್ರಯಾಣಿಸುತ್ತಿರುವ ಸಂಗತಿಯಿಂದ ನಾವು ರೋಮಾಂಚಿತರಾಗಿದ್ದೆವು. ಪೀಟರ್‌ ಮತ್ತು ಬಿಲೀ ಕಾರ್ಬೆಲೋ ಎಂಬ ಜೊತೆ ಮಿಷನೆರಿಗಳು ಸಹ ನಮ್ಮೊಂದಿಗೆ ಪ್ರಯಾಣಿಸಿದರು. ವಿಮಾನವು ಪೋರ್ಟರೀಕೊ, ವೆನಿಸ್ವೇಲ ಹಾಗೂ ಉತ್ತರ ಬ್ರಸಿಲ್‌ನ ಬೆಲೇಮ್‌ನಲ್ಲಿ ಮಾತ್ರ ನಿಂತು, ಸುಮಾರು 24 ತಾಸುಗಳಲ್ಲಿ ರಿಯೋವನ್ನು ತಲಪಬೇಕಾಗಿತ್ತು. ಆದರೆ, ಇಂಜಿನ್‌ ಸಮಸ್ಯೆಗಳ ಕಾರಣದಿಂದ, 36 ತಾಸುಗಳ ಬಳಿಕವೇ ನಾವು ಮೇಲಿನಿಂದ ರಿಯೋ ಡೇ ಜನೈರೋವನ್ನು ನೋಡಸಾಧ್ಯವಿತ್ತು. ಅಬ್ಬ, ಅದೆಷ್ಟು ಶೋಭಾಯಮಾನ ದೃಶ್ಯವಾಗಿತ್ತು! ಆ ನಗರದ ದೀಪಗಳು ಹೇಗೆ ಮಿನುಗುತ್ತಿದ್ದವೆಂದರೆ, ಒಂದು ಕಪ್ಪು ವೆಲ್ವೆಟ್‌ ರತ್ನಗಂಬಳಿಯ ಮೇಲೆ ಕೆಂಪಗೆ ಹೊಳೆಯುತ್ತಿರುವ ವಜ್ರಗಳಂತೆ, ಹಾಗೂ ಚಂದ್ರನ ಬೆಳ್ಳಿಯಂಥ ಬೆಳಕು ಗ್ವಾನಬಾರಾ ಕೊಲ್ಲಿಯ ನೀರಿನಲ್ಲಿ ಮಂದ ಪ್ರಕಾಶ ಬೀರುತ್ತಿರುವಂತೆ ತೋರಿತು.

ಬೆತೆಲ್‌ ಕುಟುಂಬದ ಅನೇಕ ಸದಸ್ಯರು ವಿಮಾನ ನಿಲ್ದಾಣದಲ್ಲಿ ನಮಗೋಸ್ಕರ ಕಾಯುತ್ತಿದ್ದರು. ನಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಬಳಿಕ, ಅವರು ನಮ್ಮನ್ನು ಬ್ರಾಂಚ್‌ ಆಫೀಸಿಗೆ ಕರೆದುಕೊಂಡು ಹೋದರು. ಮತ್ತು ಬೆಳಗ್ಗೆ ಸುಮಾರು ಮೂರು ಗಂಟೆಗೆ ನಾವು ಮಲಗಲು ಹೋದೆವು. ಕೆಲವೇ ತಾಸುಗಳ ಬಳಿಕ, ಬೆತೆಲ್‌ನಲ್ಲಿ ಬೆಳಗ್ಗೆ ಏಳುವ ಸೂಚನೆ ನೀಡುವ ಗಂಟೆಯು ಬಾರಿಸಿದಾಗ, ಮಿಷನೆರಿಗಳೋಪಾದಿ ಸೇವೆಮಾಡುವ ನಮ್ಮ ಮೊದಲ ದಿನವು ಆರಂಭವಾಗಿದೆ ಎಂಬುದನ್ನು ಅದು ನಮಗೆ ನೆನಪು ಹುಟ್ಟಿಸಿತು!

ಆರಂಭದ ಪಾಠ

ಸ್ವಲ್ಪದರಲ್ಲೇ ನಾವು ಪ್ರಾಮುಖ್ಯವಾದ ಒಂದು ಪಾಠವನ್ನು ಕಲಿತೆವು. ಒಂದು ಸಾಯಂಕಾಲ ನಾವು ಸಾಕ್ಷಿ ಕುಟುಂಬದೊಂದಿಗೆ ಸಮಯವನ್ನು ಕಳೆದೆವು. ತದನಂತರ ನಾವು ಬ್ರಾಂಚ್‌ಗೆ ಹಿಂದಿರುಗಲು ಬಯಸಿದಾಗ, ಆತಿಥ್ಯ ನೀಡಿದ ವ್ಯಕ್ತಿಯು ನಮಗೆ “ಇಲ್ಲ, ನೀವು ಇಲ್ಲಿಂದ ಹೋಗಲು ಆಗುವುದಿಲ್ಲ; ತುಂಬ ಮಳೆ ಬರುತ್ತಿದೆ” ಎಂದು ಹೇಳಿದನು ಮತ್ತು ಆ ರಾತ್ರಿ ಅಲ್ಲಿಯೇ ಉಳಿಯುವಂತೆ ನಮ್ಮನ್ನು ಒತ್ತಾಯಿಸಲು ಪ್ರಯತ್ನಿಸಿದನು. “ನಾವು ಅಮೆರಿಕದಿಂದ ಬಂದಿದ್ದೇವೆ, ಅಲ್ಲಿ ಸಹ ಹೀಗೆಯೇ ಮಳೆ ಬರುತ್ತದೆ” ಎಂದು ನಾನು ಹೇಳಿದೆ ಮತ್ತು ನಗುತ್ತಲೇ ಅವನ ಮಾತನ್ನು ನಯವಾಗಿ ತಳ್ಳಿಹಾಕಿದೆ. ಆಮೇಲೆ ನಾವು ಅಲ್ಲಿಂದ ಹೊರಟೆವು.

ರಿಯೋದ ಸುತ್ತಮುತ್ತಲೂ ಪರ್ವತಗಳಿರುವುದರಿಂದ, ಅತಿಬೇಗನೆ ಮಳೆನೀರು ಶೇಖರವಾಗುತ್ತದೆ ಮತ್ತು ನಗರಕ್ಕೆ ಹರಿಯುತ್ತದೆ. ಇದು ಕೆಲವೊಮ್ಮೆ ಪ್ರವಾಹವನ್ನು ಸಹ ಉಂಟುಮಾಡುತ್ತದೆ. ಸ್ವಲ್ಪದರಲ್ಲೇ ನಾವು ಮೊಣಕಾಲುದ್ದದಷ್ಟು ನೀರಿನಲ್ಲಿ ಕಷ್ಟಪಟ್ಟು ನಡೆಯುತ್ತಿದ್ದೆವು. ಬ್ರಾಂಚ್‌ನ ಹತ್ತಿರವಿದ್ದ ಬೀದಿಗಳು ರಭಸವಾಗಿ ಹರಿಯುವ ನದಿಗಳಾಗಿ ಪರಿಣಮಿಸಿದ್ದವು ಮತ್ತು ನಮ್ಮ ಎದೆಯ ತನಕ ನೀರು ತುಂಬಿತ್ತು. ಕೊನೆಗೂ ಬೆತೆಲ್‌ಗೆ ತಲಪಿದಾಗ ನಾವು ಸಂಪೂರ್ಣವಾಗಿ ತೋಯ್ದುಹೋಗಿದ್ದೆವು. ಮರುದಿನ ಕ್ರಿಸ್ಟೀನ್‌ ತುಂಬ ಅಸೌಖ್ಯಳಾದಳು ಮತ್ತು ಅವಳಿಗೆ ಟೈಫಾಯ್ಡ್‌ ಜ್ವರ ಬಂದು ತುಂಬ ದಿನಗಳ ವರೆಗೆ ಬಹಳ ನಿತ್ರಾಣಳಾಗಿದ್ದಳು. ನಾವು ಈ ಸ್ಥಳದಲ್ಲಿ ಹೊಸ ಮಿಷನೆರಿಗಳಾಗಿದ್ದರಿಂದ, ಸ್ಥಳಿಕ ಅನುಭವಸ್ಥ ಸಾಕ್ಷಿಗಳ ಬುದ್ಧಿಮಾತಿಗೆ ಕಿವಿಗೊಡಬೇಕಾಗಿತ್ತು ಎಂಬುದಂತೂ ಖಂಡಿತ.

ಮಿಷನೆರಿ ಹಾಗೂ ಸಂಚರಣ ಕೆಲಸದಲ್ಲಿ ಆರಂಭದ ಹೆಜ್ಜೆಗಳು

ಇಂತಹ ಅಹಿತಕರ ಆರಂಭದ ಬಳಿಕ, ನಾವಿಬ್ಬರೂ ತುಂಬ ಹುರುಪಿನಿಂದ ನಮ್ಮ ಕ್ಷೇತ್ರ ಸೇವೆಯನ್ನು ಪ್ರಾರಂಭಿಸಿದೆವು. ನಾವು ಸಂಧಿಸುವ ಪ್ರತಿಯೊಬ್ಬರಿಗೆ ಪೋರ್ಚುಗೀಸ್‌ ಭಾಷೆಯಲ್ಲಿ ನಿರೂಪಣೆಯೊಂದನ್ನು ಓದಿದೆವು ಮತ್ತು ಆ ಭಾಷೆಯನ್ನು ಮಾತಾಡುವುದರಲ್ಲಿಯೂ ಪ್ರಗತಿಯನ್ನು ಮಾಡಿದೆವು. “ನೀನು ಮಾತಾಡುವುದು ನನಗೆ ಅರ್ಥವಾಗುತ್ತದೆ, ಆದರೆ ಅವನು ಮಾತಾಡುವುದು ಅರ್ಥವಾಗುವುದಿಲ್ಲ” ಎಂದು ನನ್ನ ಬಗ್ಗೆ ಒಂದು ಮನೆಯವನು ಕ್ರಿಸ್ಟೀನ್‌ಳಿಗೆ ಹೇಳುತ್ತಿದ್ದನು. ಇನ್ನೊಂದು ಮನೆಯಲ್ಲಿ “ನೀನು ಮಾತಾಡುವುದು ಅರ್ಥವಾಗುತ್ತದೆ ಆದರೆ ಅವಳ ಭಾಷೆ ಅರ್ಥವಾಗುವುದಿಲ್ಲ” ಎಂದು ಆ ಮನೆಯವನು ನನಗೆ ಹೇಳುತ್ತಿದ್ದನು. ಹಾಗಿದ್ದರೂ, ಆ ಮೊದಲ ಕೆಲವು ವಾರಗಳಲ್ಲಿ ಕಾವಲಿನಬುರುಜು ಪತ್ರಿಕೆಯ 100 ಚಂದಾಗಳು ನಮಗೆ ಸಿಕ್ಕಿದಾಗ ನಾವು ಪುಳಕಗೊಂಡೆವು. ಅಷ್ಟುಮಾತ್ರವಲ್ಲ, ಬ್ರಸಿಲ್‌ನಲ್ಲಿ ನಾವು ಕಳೆದ ಮೊದಲ ವರ್ಷದಲ್ಲೇ ನಮ್ಮ ಬೈಬಲ್‌ ವಿದ್ಯಾರ್ಥಿಗಳಲ್ಲಿ ಅನೇಕರು ದೀಕ್ಷಾಸ್ನಾನ ಪಡೆದುಕೊಂಡರು. ಇದು ನಮಗೆ, ಈ ಮಿಷನೆರಿ ನೇಮಕವು ಎಷ್ಟು ಪ್ರತಿಫಲದಾಯಕವಾಗಿ ಪರಿಣಮಿಸಲಿದೆ ಎಂಬುದರ ರುಚಿಯನ್ನು ತೋರಿಸಿತು.

1950ಗಳ ಮಧ್ಯ ಭಾಗದಲ್ಲಿ, ಬ್ರಸಿಲ್‌ನಲ್ಲಿದ್ದ ಅನೇಕ ಸಭೆಗಳಿಗೆ ಸರ್ಕಿಟ್‌ ಮೇಲ್ವಿಚಾರಕರು ಕ್ರಮವಾಗಿ ಭೇಟಿ ನೀಡುತ್ತಿರಲಿಲ್ಲ. ಏಕೆಂದರೆ ಅಲ್ಲಿ ಈ ಕೆಲಸಕ್ಕೆ ಅರ್ಹರಾದ ಸಹೋದರರು ತುಂಬ ಕಡಿಮೆ ಸಂಖ್ಯೆಯಲ್ಲಿದ್ದರು. ಆದುದರಿಂದ, ನಾನಿನ್ನೂ ಪೋರ್ಚುಗೀಸ್‌ ಭಾಷೆಯನ್ನು ಕಲಿಯುತ್ತಿದ್ದು, ಅಷ್ಟರ ತನಕ ಆ ಭಾಷೆಯಲ್ಲಿ ಒಂದು ಬಹಿರಂಗ ಭಾಷಣವನ್ನು ಕೊಟ್ಟಿರಲಿಲ್ಲವಾದರೂ, 1956ರಲ್ಲಿ ಸಾವ್‌ ಪಾವ್ಲೂ ರಾಜ್ಯದಲ್ಲಿ ಸರ್ಕಿಟ್‌ ಕೆಲಸವನ್ನು ಮಾಡುವಂತೆ ನೇಮಿಸಲ್ಪಟ್ಟೆ.

ನಾವು ಸಂದರ್ಶಿಸಿದ ಮೊದಲ ಸಭೆಗೆ ಸರ್ಕಿಟ್‌ ಮೇಲ್ವಿಚಾರಕರು ಸಂದರ್ಶನ ನೀಡಿ ಎರಡು ವರ್ಷಗಳು ಕಳೆದಿದ್ದವು. ಆದುದರಿಂದ, ಬಹಿರಂಗ ಭಾಷಣದ ಬಗ್ಗೆ ಪ್ರತಿಯೊಬ್ಬರಿಗೂ ತುಂಬ ಉಚ್ಚ ನಿರೀಕ್ಷೆಗಳಿದ್ದವು. ಆ ಭಾಷಣವನ್ನು ತಯಾರಿಸಲಿಕ್ಕಾಗಿ ನಾನು ಪೋರ್ಚುಗೀಸ್‌ ಭಾಷೆಯ ಕಾವಲಿನಬುರುಜು ಪತ್ರಿಕೆಯ ಲೇಖನಗಳಿಂದ ಪ್ಯಾರಗ್ರಾಫ್‌ಗಳನ್ನು ಕಟ್‌ಮಾಡಿ, ಅವುಗಳನ್ನು ಕಾಗದದ ಹಾಳೆಗಳ ಮೇಲೆ ಅಂಟಿಸಿದ್ದೆ. ಆ ಭಾನುವಾರ ರಾಜ್ಯ ಸಭಾಗೃಹವು ಜನರಿಂದ ತುಂಬಿಹೋಗಿತ್ತು. ಜನರು ವೇದಿಕೆಯ ಮೇಲೂ ಕುಳಿತುಕೊಂಡಿದ್ದರು ಮತ್ತು ಎಲ್ಲರೂ ಈ ವಿಶೇಷ ಘಟನೆಯನ್ನು ಎದುರುನೋಡುತ್ತಿದ್ದರು. ಬಹಿರಂಗ ಭಾಷಣ ಅಥವಾ ವಾಚನವು ಆರಂಭವಾಯಿತು. ಮಧ್ಯೆ ಕೆಲವೊಮ್ಮೆ ನಾನು ತಲೆಯೆತ್ತಿ ನೋಡುತ್ತಿದ್ದೆ ಮತ್ತು ನನ್ನ ಆಶ್ಚರ್ಯಕ್ಕೆ ಯಾರೂ ಅಲುಗಾಡುತ್ತಿರಲಿಲ್ಲ, ಮಕ್ಕಳು ಸಹ ಸುಮ್ಮನೆ ಕುಳಿತುಕೊಂಡಿದ್ದರು. ಎಲ್ಲರೂ ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದರು. ನಾನು ಮನಸ್ಸಿನಲ್ಲೇ ಹೀಗೆ ನೆನಸಿದೆ: ‘ವ್ಯಾಲೆಂಟೀನೊ, ನಿನ್ನ ಪೋರ್ಚುಗೀಸ್‌ ಭಾಷಾ ಸಾಮರ್ಥ್ಯವು ಎಷ್ಟು ಉತ್ತಮಗೊಂಡಿದೆ! ಈ ಜನರು ತುಂಬ ಗಮನಕೊಟ್ಟು ಕೇಳುತ್ತಿದ್ದಾರೆ.’ ಕೆಲವು ವರ್ಷಗಳ ಬಳಿಕ, ಅದೇ ಸಭೆಯನ್ನು ನಾನು ಪುನಃ ಸಂದರ್ಶಿಸಿದಾಗ, ಮೊದಲ ಸರ್ಕಿಟ್‌ ಸಂದರ್ಶನದ ಸಮಯದಲ್ಲಿ ಹಾಜರಿದ್ದ ಒಬ್ಬ ಸಹೋದರನು ಹೇಳಿದ್ದು: “ನೀವು ಒಂದು ಬಹಿರಂಗ ಭಾಷಣವನ್ನು ಕೊಟ್ಟದ್ದು ನೆನಪಿದೆಯೋ? ಆ ಭಾಷಣದ ಒಂದು ಶಬ್ದವೂ ನಮಗೆ ಅರ್ಥವಾಗಲಿಲ್ಲ.” ಆ ಸಮಯದಲ್ಲಿ, ಆ ಭಾಷಣದ ಅಧಿಕಾಂಶ ಭಾಗವು ತನಗೇ ಅರ್ಥವಾಗಿರಲಿಲ್ಲ ಎಂದು ನಾನು ಒಪ್ಪಿಕೊಂಡೆ.

ಸರ್ಕಿಟ್‌ ಕೆಲಸದಲ್ಲಿ ಕಳೆದ ಆ ಮೊದಲ ವರ್ಷದಲ್ಲಿ ನಾನು ಅನೇಕ ಬಾರಿ ಜೆಕರ್ಯ 4:6ನ್ನು ಓದಿದೆ. ಅದರಲ್ಲಿರುವ ‘ಬಲದಿಂದಲ್ಲ, ನನ್ನ ಆತ್ಮದಿಂದಲೇ’ ಎಂಬ ಮಾತುಗಳು, ಯೆಹೋವನ ಆತ್ಮದ ಬಲದಿಂದಲೇ ರಾಜ್ಯದ ಕೆಲಸವು ಪ್ರಗತಿಯನ್ನು ಸಾಧಿಸುತ್ತಿದೆ ಎಂಬುದನ್ನು ನನಗೆ ಜ್ಞಾಪಕ ಹುಟ್ಟಿಸಿದವು. ಮತ್ತು ನಮಗೆ ಅನೇಕ ಇತಿಮಿತಿಗಳಿದ್ದರೂ ನಾವು ಪ್ರಗತಿಯನ್ನು ಮಾಡುತ್ತಾ ಮುಂದುವರಿದೆವು.

ಪಂಥಾಹ್ವಾನಗಳು ಮತ್ತು ಅದೇ ಸಮಯದಲ್ಲಿ ಆಶೀರ್ವಾದಗಳು

ಸರ್ಕಿಟ್‌ ಕೆಲಸವೆಂದರೆ, ಒಂದು ಟೈಪ್‌ರೈಟರ್‌, ಸಾಹಿತ್ಯದ ಪೆಟ್ಟಿಗೆಗಳು, ಸೂಟ್‌ಕೇಸ್‌ಗಳು ಮತ್ತು ಬ್ರೀಫ್‌ಕೇಸ್‌ಗಳನ್ನು ಹೊತ್ತುಕೊಂಡು ದೇಶದ ಬೇರೆ ಬೇರೆ ಸ್ಥಳಗಳಿಗೆ ಸಂಚರಿಸುವುದೇ ಆಗಿದೆ. ಆತುರದಿಂದ ಒಂದು ಬಸ್ಸಿನಿಂದ ಇನ್ನೊಂದು ಬಸ್ಸಿಗೆ ಹೋಗುವಾಗ ಯಾವುದೇ ಲಗೇಜನ್ನು ಕಳೆದುಕೊಳ್ಳದಂತೆ, ಬುದ್ಧಿವಂತಿಕೆಯನ್ನು ಉಪಯೋಗಿಸಿ ಕ್ರಿಸ್ಟೀನ್‌ ನಮ್ಮ ಪ್ರತಿಯೊಂದು ಲಗೇಜ್‌ಗೆ ಸಂಖ್ಯೆಯನ್ನು ಅಂಟಿಸುತ್ತಿದ್ದಳು. ನಮ್ಮ ಮುಂದಿನ ಸ್ಥಳವನ್ನು ತಲಪಲು ಧೂಳಿನಿಂದ ಕೂಡಿದ್ದ ರಸ್ತೆಗಳಲ್ಲಿ 15 ತಾಸುಗಳಷ್ಟು ಪ್ರಯಾಣಿಸುವುದು ಅಸಾಮಾನ್ಯವಾದ ಸಂಗತಿಯೇನಾಗಿರಲಿಲ್ಲ. ಕೆಲವೊಮ್ಮೆ ನಮ್ಮ ಪ್ರಯಾಣವು ತುಂಬ ಭೀತಿದಾಯಕವಾಗಿರುತ್ತಿತ್ತು; ಅದರಲ್ಲೂ ವಿಶೇಷವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುತ್ತಿರುವ ಎರಡು ಬಸ್ಸುಗಳು, ಏಕಕಾಲದಲ್ಲಿ ಅಭದ್ರವಾದ ಸೇತುವೆಯ ಮೇಲೆ ಹಾದುಹೋಗುವಾಗ ಅವು ಎಷ್ಟು ಹತ್ತಿರವಿರುತ್ತಿದ್ದವೆಂದರೆ, ಎರಡೂ ಬಸ್ಸುಗಳ ನಡುವೆ ಒಂದು ಕಾಗದವು ಮಧ್ಯೆ ತೂರುವಷ್ಟೂ ಜಾಗವಿರುತ್ತಿರಲಿಲ್ಲ. ಇದಲ್ಲದೆ ನಾವು ರೈಲಿನಲ್ಲಿ, ಹಡಗಿನಲ್ಲಿ, ಕುದುರೆಯ ಮೇಲೆ ಸಹ ಪ್ರಯಾಣಿಸಿದ್ದೇವೆ.

1961ರಲ್ಲಿ, ಬೇರೆ ಬೇರೆ ಸಭೆಗಳಿಗೆ ಪ್ರಯಾಣಿಸುವುದಕ್ಕೆ ಬದಲಾಗಿ ಬೇರೆ ಬೇರೆ ಸರ್ಕಿಟ್‌ಗಳಿಗೆ ಪ್ರಯಾಣಿಸುತ್ತಾ, ನಾವು ಡಿಸ್ಟ್ರಿಕ್ಟ್‌ ಕೆಲಸದಲ್ಲಿ ಸೇವೆಮಾಡಲು ಆರಂಭಿಸಿದೆವು. ಒಂದೇ ವಾರದಲ್ಲಿ ಅನೇಕ ಸಾಯಂಕಾಲಗಳಂದು ಯೆಹೋವನ ಸಂಸ್ಥೆಯಿಂದ ತಯಾರಿಸಲ್ಪಟ್ಟ ಫಿಲ್ಮ್‌ಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ತೋರಿಸುತ್ತಿದ್ದೆವು. ಈ ಪ್ರದರ್ಶನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದ ಸ್ಥಳಿಕ ಪಾದ್ರಿಗಳಿಂದ ಉಪಾಯವಾಗಿ ತಪ್ಪಿಸಿಕೊಳ್ಳಲಿಕ್ಕಾಗಿ ನಾವು ಅನೇಕವೇಳೆ ತ್ವರಿತಗತಿಯಿಂದ ಕ್ರಿಯೆಗೈಯಬೇಕಾಗಿತ್ತು. ಒಂದು ಪಟ್ಟಣದಲ್ಲಿ, ಫಿಲ್ಮನ್ನು ತೋರಿಸಲಿಕ್ಕಾಗಿ ನಾವು ಒಂದು ಸಭಾಂಗಣವನ್ನು ಬಾಡಿಗೆಗೆ ಗೊತ್ತುಮಾಡಿದ್ದೆವು. ಆದರೆ ಆ ಸಭಾಂಗಣದ ಒಡೆಯನು ನಮ್ಮೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸುವಂತೆ ಸ್ಥಳಿಕ ಪಾದ್ರಿಯು ಅವನ ಮೇಲೆ ಒತ್ತಡ ಹಾಕಿದನು. ಅನೇಕ ದಿನಗಳ ವರೆಗೆ ಹುಡುಕಿದ ಬಳಿಕ ಇನ್ನೊಂದು ಸಭಾಂಗಣವು ಸಿಕ್ಕಿತು, ಆದರೆ ಇದರ ಬಗ್ಗೆ ನಾವು ಯಾರಿಗೂ ಹೇಳಲಿಲ್ಲ. ಅದೇ ಸಮಯದಲ್ಲಿ ಮುಂಚಿನ ಸಭಾಂಗಣಕ್ಕೇ ಬರುವಂತೆ ಎಲ್ಲರನ್ನು ಆಮಂತ್ರಿಸುವುದನ್ನು ಮಾತ್ರ ಮುಂದುವರಿಸಿದೆವು. ಗೊತ್ತುಪಡಿಸಿದ ದಿನ ಕಾರ್ಯಕ್ರಮವು ಆರಂಭವಾಗುವುದಕ್ಕೆ ಮೊದಲು ಕ್ರಿಸ್ಟೀನ್‌ ಆ ಸಭಾಂಗಣಕ್ಕೆ ಹೋಗಿ, ಯಾರು ಫಿಲ್ಮನ್ನು ನೋಡಲು ಬಯಸಿದರೋ ಅವರನ್ನು ಸದ್ದಿಲ್ಲದೆ ಈ ಹೊಸ ಸಭಾಂಗಣಕ್ಕೆ ಕಳುಹಿಸಿದಳು. ಆ ಸಾಯಂಕಾಲ 150 ಮಂದಿ ಫಿಲ್ಮನ್ನು ನೋಡಿದರು. ಅದರ ಹೆಸರು ದ ನ್ಯೂ ವರ್ಲ್ಡ್‌ ಸೊಸೈಟಿ ಇನ್‌ ಆ್ಯಕ್ಷನ್‌ ಎಂದಾಗಿತ್ತು.

ಬಹು ದೂರದಲ್ಲಿದ್ದ ಪ್ರತ್ಯೇಕ ಕ್ಷೇತ್ರಗಳಿಗೆ ಸಂಚರಿಸುವ ಕೆಲಸವು ತುಂಬ ಶ್ರಮದಾಯಕವಾಗಿತ್ತಾದರೂ, ಅಲ್ಲಿ ವಾಸಿಸುತ್ತಿದ್ದ ನಮ್ರ ಸಹೋದರರು ನಮ್ಮ ಭೇಟಿಗಳನ್ನು ತುಂಬ ಗಣ್ಯಮಾಡುತ್ತಿದ್ದರು ಮತ್ತು ತಮ್ಮ ಸಾಧಾರಣ ಮನೆಗಳಲ್ಲಿ ನಮ್ಮನ್ನು ಉಳಿಸಿಕೊಳ್ಳುವ ಮೂಲಕ ಅತಿಥಿ ಸತ್ಕಾರವನ್ನೂ ತೋರಿಸುತ್ತಿದ್ದರು. ಅವರೊಂದಿಗೆ ಉಳಿಯಸಾಧ್ಯವಾದುದಕ್ಕಾಗಿ ನಾವು ಯಾವಾಗಲೂ ಯೆಹೋವನಿಗೆ ಉಪಕಾರ ಸಲ್ಲಿಸುತ್ತಿದ್ದೆವು. ಅವರಿಗೆ ಸಹಾಯಮಾಡುವುದರಿಂದ ಹೃತ್ಪೂರ್ವಕವಾದ ಆಶೀರ್ವಾದಗಳು ನಮಗೆ ಸಿಗುತ್ತಿದ್ದವು. (ಜ್ಞಾನೋಕ್ತಿ 19:17; ಹಗ್ಗಾಯ 2:7) ಆದುದರಿಂದ, ಬ್ರಸಿಲ್‌ನಲ್ಲಿ 21ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಸೇವೆಮಾಡಿದ ಬಳಿಕ, ನಮ್ಮ ಮಿಷನೆರಿ ದಿನಗಳು ಕೊನೆಗೊಂಡದ್ದಕ್ಕೆ ನಾವೆಷ್ಟು ದುಃಖಿತರಾಗಿದ್ದೆವು!

ಬಿಕ್ಕಟ್ಟಿನ ಸಮಯದಲ್ಲಿ ಯೆಹೋವನು ನಮಗೆ ದಾರಿತೋರಿಸಿದನು

1975ರಲ್ಲಿ ಕ್ರಿಸ್ಟೀನ್‌ಗೆ ಶಸ್ತ್ರಚಿಕಿತ್ಸೆಯಾಯಿತು. ನಂತರ ನಾವು ಸಂಚರಣ ಕೆಲಸವನ್ನು ಪುನಃ ಆರಂಭಿಸಿದರೂ, ಕ್ರಿಸ್ಟೀನಳ ಆರೋಗ್ಯವು ಇನ್ನೂ ಹದಗೆಟ್ಟಿತು. ಅವಳು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಸಾಧ್ಯವಾಗುವಂತೆ ಅಮೆರಿಕಕ್ಕೆ ಹಿಂದಿರುಗುವುದೇ ಒಳ್ಳೇದೆಂದು ತೋರಿತು. 1976ರ ಏಪ್ರಿಲ್‌ ತಿಂಗಳಿನಲ್ಲಿ ನಾವು ಕ್ಯಾಲಿಫೋರ್ನಿಯದ ಲಾಂಗ್‌ ಬೀಚ್‌ಗೆ ಆಗಮಿಸಿದೆವು ಮತ್ತು ನನ್ನ ತಾಯಿಯೊಂದಿಗೆ ಉಳಿದೆವು. ಎರಡು ದಶಕಗಳ ವರೆಗೆ ವಿದೇಶದಲ್ಲಿ ವಾಸಿಸಿದ ಬಳಿಕ, ಈ ಸನ್ನಿವೇಶವನ್ನು ಹೇಗೆ ನಿಭಾಯಿಸುವುದು ಎಂಬುದೇ ನಮಗೆ ತೋಚಲಿಲ್ಲ. ನಾನು ಮಾಲೀಸ್‌ ಮಾಡುವ ಕೆಲಸವನ್ನು ಆರಂಭಿಸಿದೆ ಮತ್ತು ಆ ಕೆಲಸದಿಂದ ಸಿಗುತ್ತಿದ್ದ ಸಂಪಾದನೆಯು ನಮ್ಮ ಜೀವನೋಪಾಯಕ್ಕೆ ಸಹಾಯಕವಾಗಿತ್ತು. ಕ್ಯಾಲಿಫೋರ್ನಿಯದ ಸರಕಾರವು ಕ್ರಿಸ್ಟೀನ್‌ಳಿಗೆ ಆಸ್ಪತ್ರೆಯಲ್ಲಿ ಒಂದು ಸ್ಥಳವನ್ನು ಒದಗಿಸಿತು, ಆದರೆ ದಿನ ಕಳೆದಂತೆ ಅವಳು ಹೆಚ್ಚು ದುರ್ಬಲಳಾಗತೊಡಗಿದಳು. ಏಕೆಂದರೆ ಅವಳಿಗೆ ರಕ್ತರಹಿತ ಚಿಕಿತ್ಸೆಯನ್ನು ನೀಡಲು ವೈದ್ಯರು ನಿರಾಕರಿಸಿದರು. ನಾವು ತುಂಬ ಹತಾಶ ಸ್ಥಿತಿಯಲ್ಲಿದ್ದುದರಿಂದ, ಯೆಹೋವನ ಮಾರ್ಗದರ್ಶನಕ್ಕಾಗಿ ಬೇಡಿಕೊಂಡೆವು.

ಒಂದು ದಿನ ಮಧ್ಯಾಹ್ನ ನಾನು ಕ್ಷೇತ್ರ ಸೇವೆಯಲ್ಲಿ ಪಾಲ್ಗೊಂಡಿದ್ದಾಗ, ಅಲ್ಲಿ ಒಂದು ವೈದ್ಯರ ಆಫೀಸ್‌ ಇದ್ದದ್ದು ನನ್ನ ಕಣ್ಣಿಗೆ ಬಿತ್ತು ಮತ್ತು ಆ ಕೂಡಲೆ ನಾನು ಒಳಗೆ ಹೋಗಲು ನಿರ್ಧರಿಸಿದೆ. ಆಗ ವೈದ್ಯರು ಮನೆಗೆ ಹೋಗಲು ಸಿದ್ಧರಾಗುತ್ತಿದ್ದರೂ, ನನ್ನನ್ನು ಆಫೀಸಿನೊಳಕ್ಕೆ ಕರೆದರು ಮತ್ತು ಸುಮಾರು ಎರಡು ಗಂಟೆಗಳ ತನಕ ನಾವು ಮಾತಾಡಿದೆವು. ತದನಂತರ ಅವರು ಹೇಳಿದ್ದು: “ಮಿಷನೆರಿಗಳಾಗಿರುವ ನಿಮ್ಮ ಕೆಲಸವನ್ನು ನಾನು ಗಣ್ಯಮಾಡುತ್ತೇನೆ ಮತ್ತು ಹಣವನ್ನು ತೆಗೆದುಕೊಳ್ಳದೆ ಹಾಗೂ ರಕ್ತಪೂರಣವನ್ನು ನೀಡದೆ ನಿನ್ನ ಪತ್ನಿಗೆ ನಾನು ಚಿಕಿತ್ಸೆ ನೀಡುತ್ತೇನೆ.” ನಾನು ಕೇಳಿಸಿಕೊಳ್ಳುತ್ತಿರುವುದು ನಿಜವೇ ಎಂದು ನನಗನಿಸಿತು.

ದಯಾಪರನಾದ ಈ ವೈದ್ಯನು ಒಬ್ಬ ಗೌರವಾನ್ವಿತ ಸ್ಪೆಷಲಿಸ್ಟ್‌ ಆಗಿದ್ದು, ತಾನು ಕೆಲಸಮಾಡುತ್ತಿದ್ದ ಆಸ್ಪತ್ರೆಗೆ ಕ್ರಿಸ್ಟೀನ್‌ಳನ್ನು ಕರೆದೊಯ್ದನು. ಅವನ ಸಮರ್ಥ ಆರೈಕೆಯ ಕೆಳಗೆ ಅವಳ ಆರೋಗ್ಯವು ಉತ್ತಮಗೊಂಡಿತು. ಆ ಸಂಕಷ್ಟಕರ ಸಮಯದಲ್ಲಿ ನಮಗೆ ದಾರಿತೋರಿಸಿದ್ದಕ್ಕಾಗಿ ಯೆಹೋವನಿಗೆ ನಾವೆಷ್ಟು ಕೃತಜ್ಞರಾಗಿದ್ದೆವು!

ಹೊಸ ನೇಮಕಗಳು

ಕ್ರಿಸ್ಟೀನಳು ಗುಣಮುಖಳಾಗಿ ಪುನಃ ಬಲಗೊಂಡಾಗ ನಾವು ಪಯನೀಯರರಾಗಿ ಸೇವೆಮಾಡಿದೆವು ಮತ್ತು ಲಾಂಗ್‌ ಬೀಚ್‌ನಲ್ಲಿರುವ ಅನೇಕ ಜನರು ಯೆಹೋವನ ಆರಾಧಕರಾಗುವಂತೆ ಸಹಾಯಮಾಡುವ ಆನಂದವನ್ನೂ ಪಡೆದುಕೊಂಡೆವು. 1982ರಲ್ಲಿ, ಅಮೆರಿಕದಲ್ಲಿ ಸರ್ಕಿಟ್‌ ಕೆಲಸವನ್ನು ಮಾಡುವಂತೆ ನಮಗೆ ಹೇಳಲಾಯಿತು. ಸಂಚರಣ ಕೆಲಸದಲ್ಲಿ, ಅಂದರೆ ನಾವು ತುಂಬ ಇಷ್ಟಪಡುತ್ತಿದ್ದಂತಹ ಸುಯೋಗದಲ್ಲಿ ನಮ್ಮನ್ನು ಪುನಃ ಉಪಯೋಗಿಸಿದ್ದಕ್ಕಾಗಿ ದಿನಾಲೂ ನಾವು ಯೆಹೋವನಿಗೆ ಉಪಕಾರ ಸಲ್ಲಿಸಿದೆವು. ಮೊದಲು ನಾವು ಕ್ಯಾಲಿಫೋರ್ನಿಯದಲ್ಲಿ ಮತ್ತು ನಂತರ ಯಾವ ಸರ್ಕಿಟ್‌ನಲ್ಲಿ ಪೋರ್ಚುಗೀಸ್‌ ಭಾಷೆಯನ್ನು ಮಾತಾಡುವ ಸಭೆಗಳಿದ್ದವೋ ಆ ನ್ಯೂ ಇಂಗ್ಲೆಂಡ್‌ ಸರ್ಕಿಟ್‌ನಲ್ಲಿ ಸೇವೆಮಾಡಿದೆವು. ಸಮಯಾನಂತರ ಬರ್ಮುಡವು ಸಹ ಇದರಲ್ಲಿ ಒಳಗೂಡಿತ್ತು.

ನಾಲ್ಕು ಚೈತನ್ಯದಾಯಕ ವರ್ಷಗಳ ಬಳಿಕ, ಇನ್ನೊಂದು ನೇಮಕವನ್ನು ನಾವು ಪಡೆದುಕೊಂಡೆವು. ನಮಗೆ ಇಷ್ಟವಾದ ಸ್ಥಳದಲ್ಲಿ ವಿಶೇಷ ಪಯನೀಯರರಾಗಿ ಸೇವೆಮಾಡುವಂತೆ ನಮಗೆ ತಿಳಿಸಲಾಯಿತು. ಸಂಚರಣ ಕೆಲಸವನ್ನು ಬಿಟ್ಟುಹೋಗುವುದು ನಮಗೆ ದುಃಖಕರ ಸಂಗತಿಯಾಗಿತ್ತಾದರೂ, ನಮ್ಮ ಹೊಸ ನೇಮಕದಲ್ಲಿ ಮುಂದುವರಿಯಲು ನಿರ್ಧರಿಸಿದೆವು. ಆದರೆ ಎಲ್ಲಿಗೆ ಹೋಗುವುದು? ಸಂಚರಣ ಕೆಲಸದಲ್ಲಿದ್ದಾಗ, ಮ್ಯಾಸಚೂಸೆಟ್ಸ್‌ನ ನ್ಯೂ ಬೆಡ್‌ಫೋರ್ಡ್‌ ಪೋರ್ಚುಗೀಸ್‌ ಸಭೆಗೆ ಸಹಾಯದ ಅಗತ್ಯವಿದೆ ಎಂಬುದನ್ನು ನಾನು ಗಮನಿಸಿದ್ದೆ. ಆದುದರಿಂದ ನಾವು ನ್ಯೂ ಬೆಡ್‌ಫೋರ್ಡ್‌ ಸಭೆಯ ಕಡೆಗೆ ಪ್ರಯಾಣ ಬೆಳೆಸಿದೆವು.

ನಾವು ಇಲ್ಲಿಗೆ ಆಗಮಿಸಿದಾಗ, ಸಭೆಯು ನಮಗಾಗಿ ದೊಡ್ಡ ಸ್ವಾಗತದ ಪಾರ್ಟಿಯನ್ನು ಏರ್ಪಡಿಸಿತ್ತು. ನಮ್ಮ ಸಹಾಯದ ಆವಶ್ಯಕತೆ ಇವರಿಗೆ ಎಷ್ಟಿದೆ ಎಂಬುದನ್ನು ಇದು ವ್ಯಕ್ತಪಡಿಸಿತು! ಇದನ್ನು ನೋಡಿ ನಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ನಮಗೆ ಮನೆ ಸಿಗುವ ತನಕ, ತಮ್ಮೊಂದಿಗೆ ಉಳಿಯುವಂತೆ ಇಬ್ಬರು ಮಕ್ಕಳಿದ್ದ ಒಬ್ಬ ದಂಪತಿ ಅನುಮತಿ ನೀಡಿದರು. ನಿಜವಾಗಿಯೂ ನಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಾಗಿ ಯೆಹೋವನು ಈ ವಿಶೇಷ ಪಯನೀಯರ್‌ ನೇಮಕವನ್ನು ಆಶೀರ್ವದಿಸಿದನು. 1986ರಿಂದ, ಈ ಪಟ್ಟಣದಲ್ಲಿರುವ ಸುಮಾರು 40 ಬೇರೆ ಬೇರೆ ವ್ಯಕ್ತಿಗಳು ಸಾಕ್ಷಿಗಳಾಗಲು ನಾವು ಸಹಾಯಮಾಡಿದ್ದೇವೆ. ಅವರೇ ನಮ್ಮ ಆತ್ಮಿಕ ಕುಟುಂಬವಾಗಿದ್ದಾರೆ. ಇದಲ್ಲದೆ, ಐವರು ಸ್ಥಳಿಕ ಸಹೋದರರು ಆತ್ಮಿಕವಾಗಿ ಅಭಿವೃದ್ಧಿಹೊಂದಿ, ಮಂದೆಯನ್ನು ಪರಾಮರಿಸುವ ಕುರುಬರಾಗಿ ಪರಿಣಮಿಸುವುದನ್ನು ನೋಡಿ ಆನಂದಿಸುವ ಸುಯೋಗವೂ ನಮಗೆ ಸಿಕ್ಕಿತು. ಇದು, ಪ್ರತಿಫಲದಾಯಕ ಮಿಷನೆರಿ ನೇಮಕದಲ್ಲಿ ನಾವು ಸೇವೆಮಾಡುತ್ತಿದ್ದೇವೋ ಎಂಬಂತಿತ್ತು.

ಇಂದು ನಾವು ಹಿನ್ನೋಟ ಬೀರುವಾಗ, ಯುವಪ್ರಾಯದಿಂದ ಯೆಹೋವನ ಸೇವೆಮಾಡಿರುವುದಕ್ಕಾಗಿ ಮತ್ತು ಸತ್ಯವನ್ನು ನಮ್ಮ ಜೀವನಮಾರ್ಗವಾಗಿ ಮಾಡಿಕೊಂಡಿರುವುದಕ್ಕಾಗಿ ತುಂಬ ಆನಂದಿಸುತ್ತೇವೆ. ವೃದ್ಧಾಪ್ಯ ಹಾಗೂ ದೌರ್ಬಲ್ಯಗಳು ಈಗ ನಮ್ಮ ಮೇಲೆ ಪ್ರಭಾವ ಬೀರಿವೆ ಎಂಬುದನ್ನು ಒಪ್ಪಿಕೊಳ್ಳುತ್ತೇವಾದರೂ, ಈಗಲೂ ಯೆಹೋವನ ಮಾರ್ಗದಲ್ಲಿ ಮುಂದುವರಿಯುವುದೇ ನಮಗೆ ಬಲ ಹಾಗೂ ಸಂತೋಷವನ್ನು ನೀಡುತ್ತದೆ.

[ಪುಟ 26ರಲ್ಲಿರುವ ಚಿತ್ರ]

ರಿಯೋ ಡೇ ಜನೈರೋಗೆ ಹೊಸದಾಗಿ ಆಗಮಿಸಿದಾಗ

[ಪುಟ 28ರಲ್ಲಿರುವ ಚಿತ್ರ]

ಮ್ಯಾಸಚೂಸೆಟ್ಸ್‌ನ ನ್ಯೂ ಬೆಡ್‌ಫೋರ್ಡ್‌ನಲ್ಲಿ ನಮ್ಮ ಆತ್ಮಿಕ ಕುಟುಂಬ