ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವೆಯಲ್ಲಿ ನಿಮ್ಮ ಆನಂದವನ್ನು ಕಾಪಾಡಿಕೊಳ್ಳುವುದು

ಯೆಹೋವನ ಸೇವೆಯಲ್ಲಿ ನಿಮ್ಮ ಆನಂದವನ್ನು ಕಾಪಾಡಿಕೊಳ್ಳುವುದು

ಯೆಹೋವನ ಸೇವೆಯಲ್ಲಿ ನಿಮ್ಮ ಆನಂದವನ್ನು ಕಾಪಾಡಿಕೊಳ್ಳುವುದು

“ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ.”​—ಫಿಲಿಪ್ಪಿ 4:4.

1, 2. ಒಬ್ಬ ಸಹೋದರನು ಹಾಗೂ ಅವನ ಕುಟುಂಬವು ತಮ್ಮೆಲ್ಲ ಸೊತ್ತನ್ನು ಕಳೆದುಕೊಂಡರೂ, ಹೇಗೆ ತಮ್ಮ ಆನಂದವನ್ನು ಕಾಪಾಡಿಕೊಳ್ಳಲು ಶಕ್ತರಾಗಿದ್ದರು?

ಸಿಯೆರ ಲಿಯೋನದಲ್ಲಿ ವಾಸಿಸುತ್ತಿರುವ 70 ವರ್ಷ ಪ್ರಾಯದ ಜೇಮ್ಸ್‌ ಎಂಬ ಕ್ರೈಸ್ತನು, ತನ್ನ ಜೀವಮಾನಕಾಲದಲ್ಲೆಲ್ಲ ಕಷ್ಟಪಟ್ಟು ಕೆಲಸಮಾಡಿದ್ದನು. ಕೊನೆಗೂ ನಾಲ್ಕು ಕೊಠಡಿಗಳಿದ್ದ ಸಾಧಾರಣ ರೀತಿಯ ಮನೆಯನ್ನು ಕೊಂಡುಕೊಳ್ಳಲು ಬೇಕಾದಷ್ಟು ಹಣವನ್ನು ಒಟ್ಟುಗೂಡಿಸಿದಾಗ, ಅವನಿಗಾದ ಸಂತೋಷವನ್ನು ತುಸು ಊಹಿಸಿಕೊಳ್ಳಿರಿ! ಆದರೂ, ಜೇಮ್ಸ್‌ ಹಾಗೂ ಅವನ ಕುಟುಂಬವು ಹೊಸ ಮನೆಗೆ ಬಂದ ಸ್ವಲ್ಪ ಕಾಲಾನಂತರ, ಆ ದೇಶದಲ್ಲಿ ಅಂತರ್ಯುದ್ಧವು ಆರಂಭವಾಯಿತು. ಅವರ ಮನೆಯು ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು. ಅವರು ತಮ್ಮ ಮನೆಯನ್ನು ಕಳೆದುಕೊಂಡರು, ಆದರೆ ತಮ್ಮ ಸಂತೋಷವನ್ನು ಕಳೆದುಕೊಳ್ಳಲಿಲ್ಲ. ಏಕೆ?

2 ತಾವು ಕಳೆದುಕೊಂಡದ್ದರ ಮೇಲಲ್ಲ, ಬದಲಾಗಿ ಇನ್ನೂ ಉಳಿದಿರುವವುಗಳ ಮೇಲೆ ಜೇಮ್ಸ್‌ ಹಾಗೂ ಅವನ ಕುಟುಂಬವು ತಮ್ಮ ಮನಸ್ಸುಗಳನ್ನು ಕೇಂದ್ರೀಕರಿಸಿತು. ಜೇಮ್ಸ್‌ ವಿವರಿಸುವುದು: “ಅತ್ಯಂತ ಭೀತಿಯ ಸಮಯದಲ್ಲಿಯೂ ನಾವು ಕೂಟಗಳನ್ನು ನಡೆಸಿದೆವು, ಬೈಬಲನ್ನು ಓದಿದೆವು, ಒಟ್ಟಿಗೆ ಪ್ರಾರ್ಥಿಸಿದೆವು ಮತ್ತು ನಮ್ಮ ಬಳಿ ಏನಿತ್ತೋ ಅದನ್ನು ಇತರರೊಂದಿಗೆ ಹಂಚಿಕೊಂಡೆವು. ಯೆಹೋವನೊಂದಿಗೆ ನಮಗಿರುವ ಅದ್ಭುತಕರ ಸಂಬಂಧದ ಮೇಲೆ ಗಮನವನ್ನು ಕೇಂದ್ರೀಕರಿಸಿದ ಕಾರಣ, ನಾವು ಆನಂದವನ್ನು ಕಾಪಾಡಿಕೊಳ್ಳಲು ಶಕ್ತರಾಗಿದ್ದೆವು.” ತಾವು ಅನುಭವಿಸಿದ ಒಳ್ಳೇ ಸಂಗತಿಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಯೆಹೋವನೊಂದಿಗಿನ ನಿಕಟವಾದ ವೈಯಕ್ತಿಕ ಸಂಬಂಧದ ಬಗ್ಗೆ ಆಲೋಚಿಸುವ ಮೂಲಕ, ಈ ನಂಬಿಗಸ್ತ ಕ್ರೈಸ್ತರು “ಯಾವಾಗಲೂ ಸಂತೋಷಪಡಲು” ಶಕ್ತರಾಗಿದ್ದರು. (2 ಕೊರಿಂಥ 13:​11, NW) ಅವರು ಸಂಕಟಮಯ ಸನ್ನಿವೇಶಗಳಲ್ಲಿ ತಾಳಿಕೊಳ್ಳುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಆದರೂ ಯೆಹೋವನಲ್ಲಿ ಸಂತೋಷಿಸುವುದನ್ನು ಅವರೆಂದೂ ನಿಲ್ಲಿಸಲಿಲ್ಲ.

3. ಕೆಲವು ಆದಿ ಕ್ರೈಸ್ತರು ತಮ್ಮ ಸಂತೋಷವನ್ನು ಹೇಗೆ ಕಾಪಾಡಿಕೊಂಡರು?

3 ಜೇಮ್ಸ್‌ ಹಾಗೂ ಅವನ ಕುಟುಂಬವು ಅನುಭವಿಸಿದಂತಹ ಪರೀಕ್ಷೆಗಳನ್ನೇ ಆದಿ ಕ್ರೈಸ್ತರು ಸಹ ಎದುರಿಸಿದರು. ಆದರೂ, ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಈ ಮಾತುಗಳನ್ನು ಬರೆದನು: “ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ [ನೀವು] ಸಂತೋಷದಿಂದ ಬಿಟ್ಟಿರಿ.” (ಓರೆ ಅಕ್ಷರಗಳು ನಮ್ಮವು.) ಅವರ ಸಂತೋಷದ ಮೂಲವು ಏನಾಗಿತ್ತೆಂಬುದನ್ನು ನಂತರ ಪೌಲನೇ ವಿವರಿಸಿದನು: ‘ನಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡಿರಿ.’ (ಇಬ್ರಿಯ 10:34) ಹೌದು, ಪ್ರಥಮ ಶತಮಾನದ ಆ ಕ್ರೈಸ್ತರಿಗೆ ಬಲವಾದ ನಿರೀಕ್ಷೆಯಿತ್ತು. ಯಾರೂ ಸುಲುಕೊಳ್ಳಲು ಸಾಧ್ಯವಿರದಂಥದ್ದನ್ನು ಪಡೆದುಕೊಳ್ಳಲು ಅವರು ದೃಢವಿಶ್ವಾಸದಿಂದ ಎದುರುನೋಡುತ್ತಿದ್ದರು. ದೇವರ ಸ್ವರ್ಗೀಯ ರಾಜ್ಯದಲ್ಲಿ ಬಾಡದಂತಹ “ಜೀವವೆಂಬ ಜಯಮಾಲೆ”ಯೇ ಅದಾಗಿತ್ತು. (ಪ್ರಕಟನೆ 2:10) ಇಂದು, ನಾವು ಕಷ್ಟಸಂಕಟಗಳನ್ನು ಎದುರಿಸುವಾಗಲೂ ಆನಂದವನ್ನು ಕಾಪಾಡಿಕೊಳ್ಳಲು ನಮ್ಮ ಕ್ರೈಸ್ತ ನಿರೀಕ್ಷೆಯು​—ಭೂಮಿಯದ್ದಾಗಿರಲಿ ಅಥವಾ ಸ್ವರ್ಗದ್ದಾಗಿರಲಿ​—ನಮಗೆ ಸಹಾಯಮಾಡಸಾಧ್ಯವಿದೆ.

‘ನಿರೀಕ್ಷೆಯಲ್ಲಿ ಉಲ್ಲಾಸವಾಗಿರ್ರಿ’

4, 5. (ಎ) ‘ನಿರೀಕ್ಷೆಯಲ್ಲಿ ಉಲ್ಲಾಸವಾಗಿರ್ರಿ’ ಎಂಬ ಪೌಲನ ಸಲಹೆಯು, ರೋಮಾಪುರದವರಿಗೆ ಏಕೆ ಅಷ್ಟು ಸಮಯೋಚಿತವಾಗಿತ್ತು? (ಬಿ) ಒಬ್ಬ ಕ್ರೈಸ್ತನು ರಾಜ್ಯದ ನಿರೀಕ್ಷೆಯನ್ನು ಅಪ್ರಾಮುಖ್ಯವಾದದ್ದಾಗಿ ಕಾಣುವಂತೆ ಯಾವುದು ಮಾಡಬಲ್ಲದು?

4 ರೋಮಾಪುರದಲ್ಲಿದ್ದ ಜೊತೆ ವಿಶ್ವಾಸಿಗಳಿಗೆ ಅಪೊಸ್ತಲ ಪೌಲನು ನಿತ್ಯಜೀವದ ‘ನಿರೀಕ್ಷೆಯಲ್ಲಿ ಉಲ್ಲಾಸವಾಗಿರ್ರಿ’ ಎಂದು ಉತ್ತೇಜಿಸಿದನು. (ರೋಮಾಪುರ 12:12) ಅದು ರೋಮಾಪುರದವರಿಗೆ ಸಮಯೋಚಿತ ಸಲಹೆಯಾಗಿತ್ತು. ಪೌಲನು ಅವರಿಗೆ ಪತ್ರವನ್ನು ಬರೆದು ಹತ್ತು ವರ್ಷಗಳು ಕಳೆಯುವುದಕ್ಕೆ ಮೊದಲೇ ಅವರು ಭೀಕರ ಹಿಂಸೆಯನ್ನು ಅನುಭವಿಸಿದರು ಮತ್ತು ಚಕ್ರವರ್ತಿ ನೀರೊನ ಆಜ್ಞೆಯ ಮೇರೆಗೆ ಕೆಲವರು ಮರಣಯಾತನೆಗೆ ಸಹ ಗುರಿಯಾದರು. ಅವರ ಕಷ್ಟಾನುಭವದ ಸಮಯಗಳಲ್ಲಿ, ದೇವರು ವಾಗ್ದಾನಿಸಿದಂತೆ ತಮಗೆ ಖಂಡಿತವಾಗಿಯೂ ಜೀವವೆಂಬ ಜಯಮಾಲೆಯು ಸಿಗುತ್ತದೆ ಎಂಬ ನಂಬಿಕೆಯೇ ಅವರನ್ನು ಬಲಪಡಿಸಿತು. ಇಂದು ನಮ್ಮ ಕುರಿತಾಗಿ ಏನು?

5 ಕ್ರೈಸ್ತರೋಪಾದಿ ನಾವು ಸಹ ಹಿಂಸೆಯನ್ನು ನಿರೀಕ್ಷಿಸುತ್ತೇವೆ. (2 ತಿಮೊಥೆಯ 3:12) ಇದಲ್ಲದೆ, “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂಬುದನ್ನು ನಾವು ಮನಗಂಡಿದ್ದೇವೆ. (ಪ್ರಸಂಗಿ 9:11) ನಾವು ಪ್ರೀತಿಸುವಂತಹ ಒಬ್ಬ ವ್ಯಕ್ತಿಯು ಅಪಘಾತಕ್ಕೆ ಬಲಿಯಾಗಬಹುದು. ಮಾರಕವಾದ ಒಂದು ಅಸ್ವಸ್ಥತೆಯಿಂದಾಗಿ ಹೆತ್ತವರಲ್ಲಿ ಒಬ್ಬರು ಅಥವಾ ಆಪ್ತ ಸ್ನೇಹಿತನೊಬ್ಬನು ಸಾಯಬಹುದು. ಇಂತಹ ಪರೀಕ್ಷೆಗಳು ಸಂಭವಿಸುವಾಗ, ಒಂದುವೇಳೆ ನಮ್ಮ ರಾಜ್ಯ ನಿರೀಕ್ಷೆಯ ಮೇಲೆ ಸಂಪೂರ್ಣವಾದ ಗಮನವನ್ನು ಕೇಂದ್ರೀಕರಿಸದಿರುವಲ್ಲಿ, ನಾವು ಆತ್ಮಿಕವಾಗಿ ಅಪಾಯಕ್ಕೆ ಸಿಕ್ಕಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿ ಈ ಕೆಳಗಿನ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳುವುದು ಒಳ್ಳೇದು, ‘ನಾನು “ನಿರೀಕ್ಷೆಯಲ್ಲಿ ಉಲ್ಲಾಸವಾಗಿ”ದ್ದೇನೋ? ನಿತ್ಯಜೀವದ ನಿರೀಕ್ಷೆಯ ಕುರಿತು ಮನನಮಾಡಲು ನಾನೆಷ್ಟು ಸಮಯವನ್ನು ಬದಿಗಿರಿಸುತ್ತೇನೆ? ಬರಲಿರುವ ಪರದೈಸವು ನನಗೆ ನೈಜವಾಗಿ ಕಂಡುಬರುತ್ತದೋ? ನಾನು ಸಹ ಅಲ್ಲಿರುವಂತೆ ಚಿತ್ರಿಸಿಕೊಳ್ಳುತ್ತೇನೋ? ಆರಂಭದಲ್ಲಿ ನಾನು ಸತ್ಯವನ್ನು ಕಲಿಯುತ್ತಿರುವಾಗ, ಸದ್ಯದ ಈ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ನೋಡಲು ಎಷ್ಟು ಕಾತುರದಿಂದಿದ್ದೇನೋ ಅಷ್ಟೇ ಕಾತುರ ಈಗಲೂ ಇದೆಯೋ?’ ಈ ಕೊನೆಯ ಪ್ರಶ್ನೆಯ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ. ಏಕೆ? ಏಕೆಂದರೆ, ಒಂದುವೇಳೆ ನಮಗೆ ಯಾವುದೇ ರೀತಿಯ ಅಸ್ವಸ್ಥತೆಯಿಲ್ಲದಿರುವಲ್ಲಿ, ನಾವು ಐಷಾರಾಮವಾಗಿ ಬದುಕುತ್ತಿರುವಲ್ಲಿ, ಹಾಗೂ ಯುದ್ಧ, ಆಹಾರದ ಕೊರತೆ, ಇಲ್ಲವೆ ನೈಸರ್ಗಿಕ ವಿಪತ್ತುಗಳಂತಹ ತೊಂದರೆಗಳಿಂದ ಬಾಧಿಸಲ್ಪಡದೇ ಇರುವ ಭೂಭಾಗದಲ್ಲಿ ಜೀವಿಸುತ್ತಿರುವಲ್ಲಿ, ಸದ್ಯಕ್ಕೆ ದೇವರ ಹೊಸ ಲೋಕದ ಆಗಮನದ ಜರೂರಿಯು ನಮಗೆ ಅಪ್ರಾಮುಖ್ಯವಾಗಿ ಕಂಡುಬರಸಾಧ್ಯವಿದೆ.

6. (ಎ) ಪೌಲ ಹಾಗೂ ಸೀಲರು ಯಾವಾಗ ಸಂಕಟವನ್ನು ಅನುಭವಿಸಿದರು, ಆದರೆ ಅವರು ಯಾವುದರ ಮೇಲೆ ತಮ್ಮ ಆಲೋಚನೆಗಳನ್ನು ಕೇಂದ್ರೀಕರಿಸಿದರು? (ಬಿ) ಪೌಲ ಹಾಗೂ ಸೀಲರ ಮಾದರಿಯು, ಇಂದು ನಮಗೆ ಹೇಗೆ ಉತ್ತೇಜನವನ್ನು ನೀಡುತ್ತದೆ?

6 ಅಷ್ಟುಮಾತ್ರವಲ್ಲ, “ಉಪದ್ರವದಲ್ಲಿ [“ಸಂಕಟದಲ್ಲಿ,” NW] ಸೈರಣೆಯುಳ್ಳವರಾಗಿರಿ” ಎಂದು ಸಹ ಪೌಲನು ರೋಮಾಪುರದವರಿಗೆ ಸಲಹೆ ನೀಡಿದನು. (ರೋಮಾಪುರ 12:12) ಸಂಕಟ ಅಥವಾ ಉಪದ್ರವವು ಪೌಲನಿಗೆ ಅಪರಿಚಿತ ಸಂಗತಿಯಾಗಿರಲಿಲ್ಲ. ಒಮ್ಮೆ, ಅವನು ಒಂದು ದರ್ಶನವನ್ನು ಕಂಡನು; ಅದರಲ್ಲಿ ಕಂಡುಬಂದ ಒಬ್ಬ ಪುರುಷನು, “ಮಕೆದೋನ್ಯಕ್ಕೆ ಬಂದು” ಅಲ್ಲಿನ ಜನರಿಗೆ ಯೆಹೋವನ ಕುರಿತು ಕಲಿಯಲು ಸಹಾಯಮಾಡುವಂತೆ ಕೇಳಿಕೊಂಡನು. (ಅ. ಕೃತ್ಯಗಳು 16:9) ಆಗ ಪೌಲನು, ಲೂಕ, ಸೀಲ ಮತ್ತು ತಿಮೊಥೆಯರೊಂದಿಗೆ ಯೂರೋಪಿಗೆ ಪ್ರಯಾಣ ಬೆಳೆಸಿದನು. ಆ ಹುರುಪಿನ ಮಿಷನೆರಿಗಳಿಗೆ ಏನು ಕಾದಿತ್ತು? ಸಂಕಟಮಯ ಸನ್ನಿವೇಶ! ಮಕೆದೋನ್ಯದ ಫಿಲಿಪ್ಪಿ ಪಟ್ಟಣದಲ್ಲಿ ಸಾರುವ ಕೆಲಸವನ್ನು ಮಾಡಿದ ಬಳಿಕ, ಪೌಲ ಹಾಗೂ ಸೀಲರಿಗೆ ಚಡಿಗಳಿಂದ ಹೊಡೆದು ಅವರನ್ನು ಸೆರೆಮನೆಗೆ ಹಾಕಲಾಯಿತು. ಫಿಲಿಪ್ಪಿ ಪಟ್ಟಣದಲ್ಲಿ ವಾಸಿಸುತ್ತಿದ್ದ ಕೆಲವರು ರಾಜ್ಯದ ಸಂದೇಶಕ್ಕೆ ಉದಾಸೀನಭಾವವನ್ನು ತೋರಿಸುತ್ತಿದ್ದರು ಮಾತ್ರವಲ್ಲ ಕಟುವಿರೋಧವನ್ನೂ ವ್ಯಕ್ತಪಡಿಸುತ್ತಿದ್ದರು ಎಂಬುದಂತೂ ನಿಜ. ಘಟನೆಗಳು ಈ ರೀತಿಯ ತಿರುವು ಪಡೆದುಕೊಂಡದ್ದರಿಂದ, ಹುರುಪುಳ್ಳ ಈ ಮಿಷನೆರಿಗಳು ತಮ್ಮ ಆನಂದವನ್ನು ಕಳೆದುಕೊಂಡರೋ? ಖಂಡಿತವಾಗಿಯೂ ಇಲ್ಲ. ಅವರನ್ನು ಹೊಡೆದು ಸೆರೆಮನೆಗೆ ಹಾಕಿದ ಬಳಿಕ, “ಮಧ್ಯರಾತ್ರಿಯಲ್ಲಿ ಪೌಲನೂ ಸೀಲನೂ ಪ್ರಾರ್ಥನೆಮಾಡುವವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು.” (ಅ. ಕೃತ್ಯಗಳು 16:​25, 26, ಓರೆ ಅಕ್ಷರಗಳು ನಮ್ಮವು.) ಹೊಡೆತಗಳಿಂದ ಉಂಟಾದ ನೋವು, ಪೌಲ ಹಾಗೂ ಸೀಲರಿಗೆ ಆನಂದವನ್ನು ಉಂಟುಮಾಡಲಿಲ್ಲ ಎಂಬುದಂತೂ ಸತ್ಯ, ಆದರೂ ಈ ಇಬ್ಬರು ಮಿಷನೆರಿಗಳು ಇದರ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲಿಲ್ಲ. ಅವರ ಆಲೋಚನೆಗಳು ಯೆಹೋವನ ಮೇಲೆ ಮತ್ತು ಆತನು ಅವರನ್ನು ಆಶೀರ್ವದಿಸುತ್ತಿದ್ದ ವಿಧಗಳ ಮೇಲೆ ಕೇಂದ್ರೀಕೃತವಾಗಿದ್ದವು. ಆನಂದದಿಂದ ‘ಸಂಕಟದಲ್ಲಿ ಸೈರಣೆಯುಳ್ಳವರಾಗಿರುವ’ ಮೂಲಕ, ಫಿಲಿಪ್ಪಿಯಲ್ಲಿದ್ದ ಹಾಗೂ ಬೇರೆ ಕಡೆಗಳಲ್ಲಿದ್ದ ತಮ್ಮ ಸಹೋದರರಿಗೆ ಪೌಲ ಸೀಲರು ಅತ್ಯುತ್ತಮ ಮಾದರಿಯನ್ನಿಟ್ಟರು.

7. ನಮ್ಮ ಪ್ರಾರ್ಥನೆಯಲ್ಲಿ ಕೃತಜ್ಞತೆಯ ಅಭಿವ್ಯಕ್ತಿಗಳು ಏಕೆ ಒಳಗೂಡಿರಬೇಕು?

7 ಪೌಲನು ಬರೆದುದು: “ಪಟ್ಟುಹಿಡಿದು ಪ್ರಾರ್ಥಿಸಿರಿ.” (ರೋಮಾಪುರ 12:​12, NW) ಸಂಕಷ್ಟದ ಸಮಯಗಳಲ್ಲಿ ನೀವು ಪ್ರಾರ್ಥಿಸುತ್ತೀರೋ? ಯಾವುದರ ಕುರಿತು ನೀವು ಪ್ರಾರ್ಥಿಸುತ್ತೀರಿ? ಬಹುಶಃ ನಿಮಗಿರುವಂತಹ ನಿರ್ದಿಷ್ಟ ಸಮಸ್ಯೆಯ ಕುರಿತು ತಿಳಿಸಿ, ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳುತ್ತೀರಿ. ಅದರೊಂದಿಗೆ ನೀವು ಆನಂದಿಸುವ ಆಶೀರ್ವಾದಗಳಿಗಾಗಿರುವ ಕೃತಜ್ಞತೆಯ ಅಭಿವ್ಯಕ್ತಿಗಳನ್ನು ಸಹ ನೀವು ಒಳಗೂಡಿಸಸಾಧ್ಯವಿದೆ. ಸಮಸ್ಯೆಗಳು ಏಳುವಾಗ ಯೆಹೋವನು ನಮ್ಮ ಕಡೆಗೆ ತೋರಿಸಿರುವ ಒಳ್ಳೇತನದ ಕುರಿತು ಮನನಮಾಡುವುದು, ‘ನಿರೀಕ್ಷೆಯಲ್ಲಿ ಉಲ್ಲಾಸವಾಗಿರುವಂತೆ’ ನಮಗೆ ಸಹಾಯಮಾಡುತ್ತದೆ. ಯಾರ ಜೀವಿತವು ತೊಂದರೆಗಳಿಂದ ತುಂಬಿತ್ತೋ ಆ ದಾವೀದನು ಬರೆದುದು: “ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.” (ಕೀರ್ತನೆ 40:5) ದಾವೀದನಂತೆ ನಾವು ಸಹ ಯೆಹೋವನಿಂದ ಪಡೆದುಕೊಳ್ಳುವ ಆಶೀರ್ವಾದಗಳ ಕುರಿತು ಕ್ರಮವಾಗಿ ಮನನಮಾಡುವಲ್ಲಿ, ನಿಶ್ಚಯವಾಗಿ ನಾವೂ ಆನಂದಭರಿತರಾಗಿರುವೆವು.

ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿರಿ

8. ಹಿಂಸೆಯನ್ನು ಅನುಭವಿಸುತ್ತಿರುವಾಗ ಸಂತೋಷವಾಗಿರಲು ಒಬ್ಬ ಕ್ರೈಸ್ತನಿಗೆ ಯಾವುದು ಸಹಾಯಮಾಡುವುದು?

8 ಅನೇಕ ಪರೀಕ್ಷೆಗಳನ್ನು ಎದುರಿಸುವಾಗ, ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ಯೇಸು ತನ್ನ ಶಿಷ್ಯರನ್ನು ಉತ್ತೇಜಿಸಿದನು. ಅವನು ಹೇಳುವುದು: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.” (ಮತ್ತಾಯ 5:11) ಅಂತಹ ಸನ್ನಿವೇಶಗಳಲ್ಲಿ ನಾವು ಸಂತೋಷಪಡಲು ಯಾವ ಕಾರಣವಿದೆ? ವಿರೋಧವನ್ನು ಎದುರಿಸಿ ನಿಲ್ಲಲಿಕ್ಕಾಗಿರುವ ನಮ್ಮ ಸಾಮರ್ಥ್ಯವು, ಯೆಹೋವನ ಆತ್ಮವು ನಮ್ಮ ಮೇಲೆ ಇದೆ ಎಂಬುದಕ್ಕೆ ರುಜುವಾತಾಗಿದೆ. ತನ್ನ ದಿನಗಳಲ್ಲಿದ್ದ ಜೊತೆ ಕ್ರೈಸ್ತರಿಗೆ ಅಪೊಸ್ತಲ ಪೇತ್ರನು ಹೇಳಿದ್ದು: “ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರೇ; ತೇಜೋಮಯವಾದ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.” (1 ಪೇತ್ರ 4:​13, 14) ಯೆಹೋವನು ತನ್ನ ಆತ್ಮದ ಮೂಲಕ ನಮಗೆ ತಾಳಿಕೊಳ್ಳಲು ಸಹ ಸಹಾಯಮಾಡುವನು ಮತ್ತು ಇದರ ಫಲಿತಾಂಶವಾಗಿ ನಾವು ಆನಂದವನ್ನು ಕಾಪಾಡಿಕೊಳ್ಳಶಕ್ತರಾಗುವೆವು.

9. ತಮ್ಮ ನಂಬಿಕೆಯ ಕಾರಣದಿಂದ ಕೆಲವು ಸಹೋದರರು ಸೆರೆಮನೆಗೆ ಹಾಕಲ್ಪಟ್ಟಾಗ, ಆನಂದಿಸಲು ಕಾರಣಗಳನ್ನು ಕಂಡುಕೊಳ್ಳುವಂತೆ ಅವರಿಗೆ ಯಾವುದು ಸಹಾಯಮಾಡಿತು?

9 ನಾವು ಅತ್ಯಂತ ದಾರುಣ ಸನ್ನಿವೇಶಗಳ ಕೆಳಗಿರುವಾಗಲೂ, ಆನಂದಿಸಲು ಕಾರಣಗಳನ್ನು ಕಂಡುಕೊಳ್ಳಸಾಧ್ಯವಿದೆ. ಆಡೋಲ್ಫ್‌ ಎಂಬ ಹೆಸರಿನ ಕ್ರೈಸ್ತನೊಬ್ಬನು ಇದನ್ನು ಸತ್ಯವಾದದ್ದಾಗಿ ಕಂಡುಕೊಂಡನು. ಯೆಹೋವನ ಸಾಕ್ಷಿಗಳ ಕೆಲಸವು ಅನೇಕ ವರ್ಷಗಳಿಂದ ನಿಷೇಧಕ್ಕೊಳಗಾಗಿರುವ ಒಂದು ದೇಶದಲ್ಲಿ ಇವನು ಜೀವಿಸುತ್ತಿದ್ದಾನೆ. ಆಡೋಲ್ಫ್‌ ಹಾಗೂ ಅವನ ಹಲವಾರು ಸಂಗಡಿಗರು ತಮ್ಮ ಬೈಬಲ್‌ ಆಧಾರಿತ ನಂಬಿಕೆಗಳನ್ನು ತೊರೆಯಲು ನಿರಾಕರಿಸಿದ್ದರಿಂದ, ಅವರನ್ನು ಬಂಧಿಸಿ ದೀರ್ಘಾವಧಿಯ ಸೆರೆವಾಸವನ್ನು ಅನುಭವಿಸುವ ಶಿಕ್ಷೆಯನ್ನು ನೀಡಲಾಯಿತು. ಸೆರೆವಾಸವು ತುಂಬ ಕಷ್ಟಕರವಾಗಿತ್ತು. ಆದರೆ ಪೌಲ ಹಾಗೂ ಸೀಲರಂತೆ, ಆಡೋಲ್ಫ್‌ ಮತ್ತು ಅವನ ಸಂಗಡಿಗರು ದೇವರನ್ನು ಸ್ತುತಿಸಲು ಕಾರಣಗಳನ್ನು ಕಂಡುಕೊಂಡರು. ಸೆರೆಮನೆಯಲ್ಲಿ ತಮಗಾದ ಅನುಭವವು, ತಮ್ಮ ನಂಬಿಕೆಯನ್ನು ಬಲಗೊಳಿಸಲು ಹಾಗೂ ಉದಾರಭಾವ, ಸಹಾನುಭೂತಿ ಮತ್ತು ಸಹೋದರ ಪ್ರೀತಿಯಂತಹ ಅಮೂಲ್ಯವಾದ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳಲು ತಮಗೆ ಸಹಾಯಮಾಡಿತು ಎಂದು ಅವರು ಹೇಳಿದರು. ಉದಾಹರಣೆಗೆ, ಒಬ್ಬ ಸೆರೆವಾಸಿಗೆ ಮನೆಯಿಂದ ಏನಾದರೂ ಕಳುಹಿಸಲ್ಪಟ್ಟಾಗ, ಅದನ್ನು ಜೊತೆ ವಿಶ್ವಾಸಿಗಳೊಂದಿಗೆ ಹಂಚಿಕೊಂಡನು. ಮತ್ತು ಜೊತೆ ವಿಶ್ವಾಸಿಗಳು ಈ ಒದಗಿಸುವಿಕೆಗಳನ್ನು ಯೆಹೋವನಿಂದ ಬಂದವುಗಳಾಗಿ ಪರಿಗಣಿಸಿದರು. ಏಕೆಂದರೆ ‘ಎಲ್ಲಾ ಒಳ್ಳೇ ದಾನಗಳು ಹಾಗೂ ಕುಂದಿಲ್ಲದ ಎಲ್ಲಾ ವರಗಳನ್ನು’ ಕೊಡುವಾತನು ಆತನೇ ಆಗಿದ್ದಾನೆ. ಇಂತಹ ದಯಾಪರ ಕೃತ್ಯಗಳು, ಕೊಡುವವನಿಗೆ ಹಾಗೂ ಪಡೆದುಕೊಳ್ಳುವವರಿಗೆ ಆನಂದವನ್ನು ನೀಡಿದವು. ಆದುದರಿಂದ, ನಂಬಿಕೆಯನ್ನು ಮುರಿಯುವ ಉದ್ದೇಶದಿಂದ ಅವರು ಸೆರೆಮನೆಗೆ ಹಾಕಲ್ಪಟ್ಟಿದ್ದರೂ, ಇದೇ ಅನುಭವವು ಅವರನ್ನು ಆತ್ಮಿಕವಾಗಿ ಇನ್ನಷ್ಟು ಬಲಗೊಳಿಸಿತು!​—ಯಾಕೋಬ 1:17; ಅ. ಕೃತ್ಯಗಳು 20:35.

10, 11. ಸತತವಾದ ವಿಚಾರಣೆ ಹಾಗೂ ತದನಂತರ ದೀರ್ಘಾವಧಿಯ ಸೆರೆಮನೆವಾಸವನ್ನು ಒಬ್ಬ ಸಹೋದರಿಯು ಹೇಗೆ ನಿಭಾಯಿಸಿದಳು?

10 ಇಲ ಎಂಬ ಸಹೋದರಿಯು ಸಹ ದೀರ್ಘ ಸಮಯದಿಂದ ರಾಜ್ಯದ ಕೆಲಸವು ನಿಷೇಧಕ್ಕೆ ಒಳಗಾಗಿರುವಂಥ ದೇಶದಲ್ಲಿ ವಾಸಿಸುತ್ತಿದ್ದಾಳೆ. ತನ್ನ ಕ್ರೈಸ್ತ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಂಡದ್ದಕ್ಕಾಗಿ ಅವಳನ್ನು ಬಂಧಿಸಲಾಯಿತು. ಸತತವಾಗಿ ಎಂಟು ತಿಂಗಳುಗಳ ವರೆಗೆ ಅವಳು ವಿಚಾರಣೆಗೆ ಒಳಪಡಿಸಲ್ಪಟ್ಟಳು. ಕಟ್ಟಕಡೆಗೆ ಅವಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಹತ್ತು ವರ್ಷಗಳ ಸೆರೆವಾಸದ ಶಿಕ್ಷೆಯು ಅವಳಿಗೆ ವಿಧಿಸಲ್ಪಟ್ಟಿತು ಮತ್ತು ಅವಳು ಹಾಕಲ್ಪಡಲಿದ್ದ ಆ ಸೆರೆಮನೆಯಲ್ಲಿ ಯೆಹೋವನ ಆರಾಧಕರು ಯಾರೂ ಇರಲಿಲ್ಲ. ಆ ಸಮಯದಲ್ಲಿ ಇಲ ಕೇವಲ 24 ವರ್ಷದವಳಾಗಿದ್ದಳು.

11 ತನ್ನ ಯೌವನ ಪ್ರಾಯದ ಅಧಿಕಾಂಶ ಸಮಯವನ್ನು ಸೆರೆಮನೆಯಲ್ಲಿ ಕಳೆಯಲು ಇಲಳು ನಿರೀಕ್ಷಿಸಿರಲಿಲ್ಲ ಎಂಬುದು ನಿಜ. ಆದರೆ ಅವಳು ತನ್ನ ಸನ್ನಿವೇಶವನ್ನು ಬದಲಾಯಿಸಲು ಅಸಮರ್ಥಳಾಗಿದ್ದುದರಿಂದ, ತನ್ನ ದೃಷ್ಟಿಕೋನವನ್ನೇ ಬದಲಾಯಿಸಲು ನಿರ್ಧರಿಸಿದಳು. ಆದುದರಿಂದ, ಸೆರೆಮನೆಯನ್ನು ಸಾಕ್ಷಿನೀಡಲಿಕ್ಕಾಗಿರುವ ತನ್ನ ವೈಯಕ್ತಿಕ ಟೆರಿಟೊರಿಯಾಗಿ ಪರಿಗಣಿಸಿದಳು. “ಎಷ್ಟು ಸಾಕ್ಷಿಕಾರ್ಯವನ್ನು ಮಾಡಲಿಕ್ಕಿತ್ತೆಂದರೆ, ವರ್ಷಗಳು ಸರಿದದ್ದೇ ಗೊತ್ತಾಗಲಿಲ್ಲ” ಎಂದು ಅವಳು ಹೇಳುತ್ತಾಳೆ. ಐದು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದ ಬಳಿಕ ಇಲಳನ್ನು ಪುನಃ ವಿಚಾರಣೆಗೆ ಒಳಪಡಿಸಲಾಯಿತು. ಸೆರೆಮನೆಯ ಕಂಬಿಗಳು ಅವಳ ನಂಬಿಕೆಯನ್ನು ಮುರಿದಿಲ್ಲ ಎಂಬುದನ್ನು ಗ್ರಹಿಸಿದ ವಿಚಾರಣೆಗಾರರು ಅವಳಿಗೆ ಹೇಳಿದ್ದು: “ನಾವು ನಿನ್ನನ್ನು ಸೆರೆಯಿಂದ ಬಿಡುಗಡೆಮಾಡಲಾರೆವು; ನೀನು ಸ್ವಲ್ಪವೂ ಬದಲಾಗಿಲ್ಲ.” ಇದಕ್ಕೆ ಇಲಳು ದೃಢವಾಗಿ ಉತ್ತರಿಸಿದ್ದು: “ಆದರೆ ನಾನು ಬದಲಾಗಿದ್ದೇನೆ! ನಾನು ಮೊದಲು ಸೆರೆಮನೆಗೆ ಬಂದ ಸಮಯಕ್ಕಿಂತಲೂ ಈಗ ನನ್ನ ಮನೋಭಾವವು ಹೆಚ್ಚು ಉತ್ತಮಗೊಂಡಿದೆ ಮತ್ತು ನನ್ನ ನಂಬಿಕೆಯು ಮುಂಚಿಗಿಂತ ಇನ್ನಷ್ಟು ಬಲಗೊಂಡಿದೆ!” ಅಷ್ಟುಮಾತ್ರವಲ್ಲ, ಅವಳು ಇನ್ನೂ ಹೇಳಿದ್ದು: “ನೀವು ನನ್ನನ್ನು ಬಿಡುಗಡೆಮಾಡಲು ಇಷ್ಟಪಡದಿರುವಲ್ಲಿ, ಯೆಹೋವನು ನನ್ನನ್ನು ಯಾವಾಗ ಬಿಡುಗಡೆಗೆ ಯೋಗ್ಯಳೆಂದು ನೆನಸುತ್ತಾನೋ ಅಷ್ಟರ ತನಕ ಕಾಯುವೆನು.” ಐದೂವರೆ ವರ್ಷಗಳ ಸೆರೆವಾಸವು ಇಲಳ ಆನಂದವನ್ನು ಕಸಿದುಕೊಂಡಿರಲಿಲ್ಲ! ತಾನಿದ್ದ ಸನ್ನಿವೇಶಗಳಲ್ಲೇ ತೃಪ್ತಿಯನ್ನು ಕಂಡುಕೊಳ್ಳಲು ಅವಳು ಕಲಿತಳು. ಅವಳ ಮಾದರಿಯಿಂದ ನೀವು ಏನಾದರೂ ಪಾಠವನ್ನು ಕಲಿಯಸಾಧ್ಯವಿದೆಯೋ?​—ಇಬ್ರಿಯ 13:5.

12. ಕಷ್ಟಕರ ಸನ್ನಿವೇಶಗಳ ಕೆಳಗಿರುವ ಕ್ರೈಸ್ತನಿಗೆ ಯಾವುದು ಮನಶ್ಶಾಂತಿಯನ್ನು ತರಬಲ್ಲದು?

12 ಇಲಳಿಗೆ ಅಸಾಮಾನ್ಯವಾದ ವರದಾನವಿದೆ, ಆದುದರಿಂದಲೇ ಅವಳು ಅಂತಹ ಪಂಥಾಹ್ವಾನಗಳನ್ನು ಎದುರಿಸಲು ಶಕ್ತಳಾಗಿದ್ದಾಳೆ ಎಂಬ ತೀರ್ಮಾನಕ್ಕೆ ಬರಬೇಡಿ. ತನಗೆ ಸೆರೆಮನೆಯ ಶಿಕ್ಷೆಯು ಸಿಗುವುದಕ್ಕೆ ಮುಂಚಿನ ತಿಂಗಳುಗಳಲ್ಲಿ ತಾನು ಒಳಪಟ್ಟ ವಿಚಾರಣೆಯ ಬಗ್ಗೆ ಹೇಳುತ್ತಾ ಇಲಳು ಒಪ್ಪಿಕೊಳ್ಳುವುದು: “ನನ್ನ ಹಲ್ಲುಗಳು ಕಟಕಟಿಸುತ್ತಿದ್ದದ್ದು ನನಗೆ ಇನ್ನೂ ಜ್ಞಾಪಕವಿದೆ, ಮತ್ತು ಬೆದರಿದ ಗುಬ್ಬಚ್ಚಿಯಂತಾಗಿತ್ತು ನನ್ನ ಸ್ಥಿತಿ.” ಆದರೂ, ಇಲಳಿಗೆ ಯೆಹೋವನಲ್ಲಿ ಬಲವಾದ ನಂಬಿಕೆಯಿತ್ತು. ಆತನಲ್ಲಿ ತನ್ನ ಭರವಸೆಯಿಡಲು ಅವಳು ಕಲಿತಿದ್ದಾಳೆ. (ಜ್ಞಾನೋಕ್ತಿ 3:​5-7) ಇದರ ಫಲಿತಾಂಶವಾಗಿ, ಹಿಂದೆಂದಿಗಿಂತಲೂ ಈಗ ದೇವರು ಅವಳಿಗೆ ಹೆಚ್ಚು ನೈಜನಾಗಿದ್ದಾನೆ. ಅವಳು ವಿವರಿಸುವುದು: “ಪ್ರತಿ ಸಲ ನಾನು ವಿಚಾರಣೆಯ ಕೋಣೆಯನ್ನು ಪ್ರವೇಶಿಸಿದಾಗ, ನನ್ನ ಮನಸ್ಸು ನೆಮ್ಮದಿಯಾಗಿರುತ್ತಿತ್ತು . . . ಸನ್ನಿವೇಶವು ಹೆಚ್ಚೆಚ್ಚು ಭೀಕರವಾದಂತೆ, ನನ್ನ ಮಾನಸಿಕ ಶಾಂತಿಯೂ ಅಧಿಕಗೊಂಡಿತು.” ಯೆಹೋವನೇ ಆ ಶಾಂತಿಯ ಮೂಲನಾಗಿದ್ದನು. ಈ ವಿಷಯದಲ್ಲಿ ಅಪೊಸ್ತಲ ಪೌಲನು ವಿವರಿಸುವುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”​—ಫಿಲಿಪ್ಪಿ 4:​6, 7.

13. ಒಂದುವೇಳೆ ನಾವು ಸಂಕಟವನ್ನು ಅನುಭವಿಸಬೇಕಾಗಿರುವಲ್ಲಿ, ಸಹಿಸಿಕೊಳ್ಳಲು ಬೇಕಾದ ಬಲವು ನಮ್ಮಲ್ಲಿರುವುದು ಎಂಬ ಆಶ್ವಾಸನೆಯನ್ನು ಯಾವುದು ನೀಡುತ್ತದೆ?

13 ಈಗ ಸೆರೆಯಿಂದ ಬಿಡುಗಡೆಯಾಗಿರುವ ಇಲಳು, ಕಷ್ಟತೊಂದರೆಯ ಮಧ್ಯೆಯೂ ತನ್ನ ಆನಂದವನ್ನು ಕಾಪಾಡಿಕೊಂಡಿದ್ದಾಳೆ. ತನ್ನ ಸ್ವಂತ ಬಲದಿಂದಲ್ಲ, ಬದಲಿಗೆ ಯೆಹೋವನು ಅವಳಿಗೆ ಒದಗಿಸಿದ ಬಲದಿಂದ ಅವಳು ಹೀಗೆ ಮಾಡಸಾಧ್ಯವಾಯಿತು. ಅಪೊಸ್ತಲ ಪೌಲನ ವಿಷಯದಲ್ಲಿಯೂ ಇದು ಸತ್ಯವಾಗಿತ್ತು. ಅವನು ಬರೆದುದು: “ಆದದರಿಂದ ಕ್ರಿಸ್ತನ ನಿಮಿತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.”​—2 ಕೊರಿಂಥ 12:​9, 10.

14. ಕಷ್ಟಕರ ಸನ್ನಿವೇಶದಲ್ಲಿ ಒಬ್ಬ ಕ್ರೈಸ್ತನು ಹೇಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಸಾಧ್ಯವಿದೆ ಮತ್ತು ಇದರ ಫಲಿತಾಂಶವೇನಾಗಿರಬಹುದು ಎಂಬುದನ್ನು ದೃಷ್ಟಾಂತಿಸಿರಿ.

14 ಇಂದು ನೀವು ವೈಯಕ್ತಿಕವಾಗಿ ಎದುರಿಸುವ ಒತ್ತಡಗಳು, ಇಲ್ಲಿ ನಾವು ಪರಿಗಣಿಸಿರುವಂತಹ ಒತ್ತಡಗಳಿಗಿಂತ ಭಿನ್ನವಾಗಿರಬಹುದು. ಆದರೂ, ಒತ್ತಡಗಳು ಯಾವುದೇ ರೂಪದಲ್ಲಿ ಬರಲಿ, ಅವುಗಳನ್ನು ತಾಳಿಕೊಳ್ಳುವುದು ತುಂಬ ಕಷ್ಟಕರ. ಉದಾಹರಣೆಗೆ, ನಿಮ್ಮ ಧಣಿಯು ನಿಮ್ಮ ಕೆಲಸದ ಬಗ್ಗೆ ಯಾವಾಗಲೂ ಕೀಳಾಗಿ ಮಾತಾಡಬಹುದು; ಬೇರೆ ಧಾರ್ಮಿಕ ಗುಂಪುಗಳಿಗೆ ಸೇರಿರುವ ಉದ್ಯೋಗಸ್ಥರ ಕೆಲಸಕ್ಕಿಂತಲೂ ಹೆಚ್ಚಾಗಿ ನಿಮ್ಮ ಕೆಲಸವನ್ನು ಟೀಕಿಸಬಹುದು. ಇನ್ನೊಂದು ಉದ್ಯೋಗವನ್ನು ಹುಡುಕುವುದು ನಿಮಗೆ ಅಸಾಧ್ಯವಾಗಿರಬಹುದು. ಇಂತಹ ಸನ್ನಿವೇಶದಲ್ಲಿ ನೀವು ಆನಂದವನ್ನು ಹೇಗೆ ಕಾಪಾಡಿಕೊಳ್ಳಬಹುದು? ಆಡೋಲ್ಫ್‌ ಮತ್ತು ಅವನ ಸಂಗಡಿಗರನ್ನು ಜ್ಞಾಪಿಸಿಕೊಳ್ಳಿರಿ. ಸೆರೆಮನೆಯಲ್ಲಿ ಅವರಿಗಾದ ಅನುಭವವು ಅತ್ಯಾವಶ್ಯಕ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಕಲಿಸಿತು. ನಿಮ್ಮ ಧಣಿಯನ್ನು, ಅದರಲ್ಲೂ ವಿಶೇಷವಾಗಿ “ಮೆಚ್ಚಿಸಲು ಕಷ್ಟಕರವಾಗಿರುವಂಥ”ವನನ್ನು (NW) ತೃಪ್ತಿಪಡಿಸಲಿಕ್ಕಾಗಿ ನೀವು ಪ್ರಾಮಾಣಿಕ ಪ್ರಯತ್ನವನ್ನು ಮಾಡುವಲ್ಲಿ, ತಾಳ್ಮೆ ಹಾಗೂ ದೀರ್ಘಶಾಂತಿಯಂಥ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳುವಿರಿ. (1 ಪೇತ್ರ 2:18) ಇದಲ್ಲದೆ, ಒಬ್ಬ ಉದ್ಯೋಗಸ್ಥರೋಪಾದಿ ನೀವು ಹೆಚ್ಚು ಅಮೂಲ್ಯರಾಗಿ ಪರಿಣಮಿಸಬಲ್ಲಿರಿ; ಇದರಿಂದಾಗಿ ಭವಿಷ್ಯತ್ತಿನಲ್ಲಿ ಎಂದಾದರೂ ಹೆಚ್ಚು ಸಂತೃಪ್ತಿಕರವಾದ ಉದ್ಯೋಗವನ್ನು ಪಡೆದುಕೊಳ್ಳಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ಯೆಹೋವನ ಸೇವೆಯಲ್ಲಿ ನಮ್ಮ ಆನಂದವನ್ನು ಕಾಪಾಡಿಕೊಳ್ಳಸಾಧ್ಯವಿರುವ ಇನ್ನಿತರ ಮಾರ್ಗಗಳ ಬಗ್ಗೆ ನಾವೀಗ ಚರ್ಚಿಸೋಣ.

ನಿಮ್ಮ ಜೀವಿತವನ್ನು ಸರಳಗೊಳಿಸುವುದು ಸಂತೋಷಕ್ಕೆ ನಡೆಸುತ್ತದೆ

15-17. ಒತ್ತಡದ ಮೂಲವನ್ನು ಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿರಲಿಲ್ಲವಾದರೂ, ಅದರಿಂದ ಬಿಡುಗಡೆ ಪಡೆಯಸಾಧ್ಯವಿದೆ ಎಂಬ ವಿಷಯದಲ್ಲಿ ಒಬ್ಬ ದಂಪತಿಯು ಯಾವ ಪಾಠವನ್ನು ಕಲಿತುಕೊಂಡರು?

15 ನೀವು ಯಾವ ರೀತಿಯ ಐಹಿಕ ಕೆಲಸವನ್ನು ಮಾಡಬೇಕು ಅಥವಾ ಎಲ್ಲಿ ಕೆಲಸ ಮಾಡಬೇಕು ಎಂಬ ವಿಷಯದಲ್ಲಿ ನಿಮಗೆ ಹೆಚ್ಚು ಆಯ್ಕೆಗಳಿಲ್ಲದಿರಬಹುದಾದರೂ, ನಿಮ್ಮ ಜೀವಿತದ ಬೇರೆ ಕ್ಷೇತ್ರಗಳಲ್ಲಿ ನೀವು ಸ್ವಲ್ಪ ಹಿಡಿತವನ್ನು ಮಾಡಸಾಧ್ಯವಿದೆ. ಈ ಕೆಳಗಿನ ಅನುಭವವನ್ನು ಪರಿಗಣಿಸಿರಿ.

16 ಒಬ್ಬ ಕ್ರೈಸ್ತ ದಂಪತಿಯು ಹಿರಿಯನೊಬ್ಬನನ್ನು ಊಟಕ್ಕೆ ಮನೆಗೆ ಆಹ್ವಾನಿಸಿದರು. ನಂತರ, ಅದೇ ಸಾಯಂಕಾಲ, ಇತ್ತೀಚಿಗೆ ಜೀವನದ ಒತ್ತಡಗಳು ಅತ್ಯಧಿಕಗೊಳ್ಳುತ್ತಿವೆ ಎಂಬ ಅನಿಸಿಕೆ ನಮಗಾಗುತ್ತಿದೆ ಎಂದು ಆ ಸಹೋದರನೂ ಅವನ ಹೆಂಡತಿಯೂ ಅಂತರಂಗದ ಮಾತುಗಳನ್ನು ಹೇಳಿಕೊಂಡರು. ಅವರಿಬ್ಬರಿಗೂ ಇಡೀ ದಿನ ಕಷ್ಟಪಟ್ಟು ದುಡಿಯಬೇಕಾದಂತಹ ಉದ್ಯೋಗಗಳಿದ್ದರಿಂದ, ಅವರು ಇನ್ನೊಂದು ಕೆಲಸವನ್ನು ಹುಡುಕುವ ಸ್ಥಿತಿಯಲ್ಲಿ ಇರಲಿಲ್ಲ. ಈ ಸನ್ನಿವೇಶವು ಎಷ್ಟರ ತನಕ ಹೀಗೆ ಮುಂದುವರಿಯುವುದು ಎಂಬ ವಿಷಯದಲ್ಲಿ ಅವರು ಚಿಂತಿತರಾಗಿದ್ದರು.

17 ಈ ವಿಷಯದಲ್ಲಿ ಸಲಹೆಯನ್ನು ನೀಡುವಂತೆ ಹಿರಿಯನನ್ನು ಕೇಳಿಕೊಂಡಾಗ, ಆ ಹಿರಿಯನು ಉತ್ತರಿಸಿದ್ದು, “ನಿಮ್ಮ ಜೀವಿತವನ್ನು ಸರಳವಾಗಿಡಿರಿ.” ಹೇಗೆ? ಕೆಲಸಕ್ಕೆ ಹೋಗಲು ಮತ್ತು ಬರಲು ಈ ಪತಿಪತ್ನಿಯರಿಗೆ ಸುಮಾರು ಮೂರು ತಾಸುಗಳು ಹಿಡಿಯುತ್ತಿದ್ದವು. ಅವರು ಕೆಲಸಮಾಡುತ್ತಿದ್ದ ಸ್ಥಳದ ಹತ್ತಿರವೇ ಎಲ್ಲಿಯಾದರೂ ಮನೆಯನ್ನು ಸ್ಥಳಾಂತರಿಸುವುದರ ಬಗ್ಗೆ ಆಲೋಚಿಸುವುದು ಒಳ್ಳೇದು ಎಂದು, ಈ ದಂಪತಿಗಳ ಬಗ್ಗೆ ಚೆನ್ನಾಗಿ ಗೊತ್ತಿದ್ದ ಆ ಹಿರಿಯನು ಹೇಳಿದನು. ಹೀಗೆ ಮಾಡುವಲ್ಲಿ ಪ್ರತಿ ದಿನ ಕೆಲಸಕ್ಕೆ ಹೋಗಲು ಮತ್ತು ಬರಲಿಕ್ಕಾಗಿ ಅವರು ವ್ಯಯಿಸುತ್ತಿದ್ದ ಸಮಯವನ್ನು ಉಳಿತಾಯಮಾಡಲು ಅವರು ಶಕ್ತರಾಗುತ್ತಿದ್ದರು. ಉಳಿತಾಯಮಾಡಿದಂತಹ ಸಮಯವನ್ನು ಪ್ರಾಮುಖ್ಯವಾದ ಇನ್ನಿತರ ಕೆಲಸಗಳನ್ನು ಮಾಡಲಿಕ್ಕಾಗಿ ಅಥವಾ ವಿಶ್ರಾಂತಿಯನ್ನು ಪಡೆದುಕೊಳ್ಳಲಿಕ್ಕಾಗಿ ಉಪಯೋಗಿಸಸಾಧ್ಯವಿತ್ತು. ಜೀವಿತದ ಒತ್ತಡಗಳು ಸ್ವಲ್ಪಮಟ್ಟಿಗೆ ನಿಮ್ಮ ಆನಂದವನ್ನು ಕಸಿದುಕೊಳ್ಳುತ್ತಿರುವಲ್ಲಿ, ಕೆಲವು ಹೊಂದಾಣಿಕೆಗಳನ್ನು ಮಾಡುವ ಮೂಲಕ ನೀವು ಒತ್ತಡದಿಂದ ಬಿಡುಗಡೆಯನ್ನು ಪಡೆಯಸಾಧ್ಯವಿದೆಯೋ ಎಂಬುದನ್ನು ಪರೀಕ್ಷಿಸಿ ನೋಡಬಾರದೇಕೆ?

18. ನಿರ್ಣಯಗಳನ್ನು ಮಾಡುವುದಕ್ಕೆ ಮೊದಲು ಜಾಗರೂಕತೆಯಿಂದ ಆಲೋಚಿಸುವುದು ಏಕೆ ಅತ್ಯಾವಶ್ಯಕವಾದದ್ದಾಗಿದೆ?

18 ಒತ್ತಡವನ್ನು ಕಡಿಮೆಮಾಡಸಾಧ್ಯವಿರುವ ಇನ್ನೊಂದು ವಿಧವು, ನಿರ್ಣಯಗಳನ್ನು ಮಾಡುವ ಮೊದಲು ಜಾಗರೂಕತೆಯಿಂದ ಆಲೋಚಿಸುವುದೇ ಆಗಿದೆ. ಉದಾಹರಣೆಗೆ, ಒಬ್ಬ ಕ್ರೈಸ್ತನು ಒಂದು ಮನೆಯನ್ನು ಕಟ್ಟಲು ನಿರ್ಧರಿಸಿದನು. ಈ ಮುಂಚೆ ಅವನು ಮನೆಯನ್ನೇ ಕಟ್ಟಿರದಿದ್ದರೂ, ತುಂಬ ಜಟಿಲವಾದಂತಹ ವಿನ್ಯಾಸವನ್ನು ಅವನು ಆಯ್ಕೆಮಾಡಿದನು. ತನ್ನ ಮನೆಗಾಗಿರುವ ವಿನ್ಯಾಸವನ್ನು ಆಯ್ಕೆಮಾಡುವುದಕ್ಕೆ ಮೊದಲು ‘ತನ್ನ ಹೆಜ್ಜೆಗಳನ್ನು ಪರಿಗಣಿಸು’ತ್ತಿದ್ದಲ್ಲಿ, ಅನಗತ್ಯವಾದ ಸಮಸ್ಯೆಗಳನ್ನು ದೂರಮಾಡಸಾಧ್ಯವಿತ್ತು ಎಂಬುದು ಅವನಿಗೆ ಈಗ ಅರ್ಥವಾಗಿದೆ. (ಜ್ಞಾನೋಕ್ತಿ 14:​15, NW) ಇನ್ನೊಬ್ಬ ಕ್ರೈಸ್ತನು ತನ್ನ ಜೊತೆ ವಿಶ್ವಾಸಿಯ ಸಾಲದ ಜವಾಬ್ದಾರಿಯನ್ನು ಹೊರಲು ಒಪ್ಪಿಕೊಂಡನು. ಒಪ್ಪಂದಕ್ಕನುಸಾರ, ಸಾಲ ಪಡೆದವನು ಸಾಲವನ್ನು ಪಾವತಿಮಾಡಲು ಅಶಕ್ತನಾಗುವಲ್ಲಿ, ಜಾಮೀನುದಾರನು ಆ ಹಣವನ್ನು ಹಿಂದಿರುಗಿಸುವ ಹಂಗಿಗೆ ಒಳಗಾಗಿದ್ದನು. ಮೊದಮೊದಲು ಎಲ್ಲವೂ ಸರಿಯಾಗಿಯೇ ಸಾಗಿತು, ಆದರೆ ಇದ್ದಕ್ಕಿದ್ದಂತೆ ಸಾಲಗಾರನು ತನ್ನ ಒಪ್ಪಂದವನ್ನು ಪೂರೈಸಲು ತಪ್ಪಿಹೋದನು. ಸಾಲವನ್ನು ಕೊಟ್ಟಂಥ ವ್ಯಕ್ತಿಯು ಗಾಬರಿಗೊಂಡನು ಮತ್ತು ಜಾಮೀನುದಾರನು ಸಂಪೂರ್ಣ ಸಾಲವನ್ನು ಪಾವತಿಮಾಡುವಂತೆ ತಗಾದೆಮಾಡಿದನು. ಇದು ಜಾಮೀನುದಾರನ ಮೇಲೆ ತುಂಬ ಒತ್ತಡವನ್ನು ಉಂಟುಮಾಡಿತು. ಒಂದುವೇಳೆ ಜಾಮೀನುದಾರನು ಸಾಲದ ಜವಾಬ್ದಾರಿಯನ್ನು ಹೊರಲು ಒಪ್ಪಿಗೆ ನೀಡುವುದಕ್ಕೆ ಮೊದಲು ಎಲ್ಲ ಅಂಶಗಳನ್ನು ಜಾಗರೂಕತೆಯಿಂದ ಪರಿಗಣಿಸುತ್ತಿದ್ದಲ್ಲಿ, ಈ ತೊಂದರೆಯಿಂದ ತಪ್ಪಿಸಿಕೊಳ್ಳಸಾಧ್ಯವಿತ್ತಲ್ಲವೇ?​—ಜ್ಞಾನೋಕ್ತಿ 17:18.

19. ನಮ್ಮ ಜೀವಿತಗಳಲ್ಲಿ ಒತ್ತಡವನ್ನು ಕಡಿಮೆಮಾಡಸಾಧ್ಯವಿರುವ ಕೆಲವು ವಿಧಗಳು ಯಾವುವು?

19 ನಮಗೆ ತುಂಬ ಆಯಾಸವಾಗಿರುವಾಗ, ವೈಯಕ್ತಿಕ ಬೈಬಲ್‌ ಅಭ್ಯಾಸ, ಕ್ಷೇತ್ರ ಸೇವೆ ಹಾಗೂ ಕೂಟದ ಹಾಜರಿಗಾಗಿ ವಿನಿಯೋಗಿಸುವ ಸಮಯವನ್ನು ನಾವು ಕಡಿಮೆಮಾಡಬಹುದು ಎಂಬ ನಿರ್ಧಾರಕ್ಕೆ ಎಂದಿಗೂ ಬರದಿರೋಣ. ಏಕೆಂದರೆ ನಾವು ಯೆಹೋವನ ಪವಿತ್ರಾತ್ಮವನ್ನು ಪಡೆದುಕೊಳ್ಳಸಾಧ್ಯವಿರುವ ಅತ್ಯಾವಶ್ಯಕ ಮಾರ್ಗಗಳು ಇವಾಗಿವೆ ಮತ್ತು ಈ ಪವಿತ್ರಾತ್ಮದ ಫಲವೇ ಆನಂದವಾಗಿದೆ. (ಗಲಾತ್ಯ 5:22) ಕ್ರೈಸ್ತ ಚಟುವಟಿಕೆಗಳು ಯಾವಾಗಲೂ ಚೈತನ್ಯದಾಯಕವಾಗಿವೆ ಮತ್ತು ಅವೆಂದೂ ವಿಪರೀತ ಆಯಾಸಕರವಾಗಿರುವುದಿಲ್ಲ. (ಮತ್ತಾಯ 11:​28-30) ಆತ್ಮಿಕ ಚಟುವಟಿಕೆಗಳಲ್ಲ, ಬದಲಾಗಿ ಐಹಿಕ ಅಥವಾ ಮನೋರಂಜನೆಗೆ ಸಂಬಂಧಿಸಿದ ಚಟುವಟಿಕೆಗಳೇ ಹೆಚ್ಚು ಆಯಾಸವನ್ನು ಉಂಟುಮಾಡುತ್ತವೆ. ಸೂಕ್ತವಾದ ಸಮಯದಲ್ಲಿ ಮಲಗಲು ಕಲಿಯುವುದು ಸಹ ದಣಿವಾರಿಸಿಕೊಳ್ಳಲು ಸಹಾಯಮಾಡಬಹುದು. ತುಸು ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದು ತುಂಬ ಪ್ರಯೋಜನದಾಯಕವಾಗಿರಸಾಧ್ಯವಿದೆ. ತಮ್ಮ ಮರಣದ ತನಕ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿ ಸೇವೆಮಾಡಿದ ಎನ್‌. ಏಚ್‌. ನಾರ್‌ ಅವರು ಯಾವಾಗಲೂ ಮಿಷನೆರಿಗಳಿಗೆ ಹೀಗೆ ಹೇಳುವುದಿತ್ತು: “ನಿಮಗೆ ತುಂಬ ನಿರುತ್ಸಾಹವಾದಾಗ, ನೀವು ಮಾಡಬೇಕಾಗಿರುವ ಮೊದಲ ಕೆಲಸ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳುವುದೇ. ರಾತ್ರಿ ಚೆನ್ನಾಗಿ ನಿದ್ರಿಸಿ ಎದ್ದಾಗ, ಯಾವುದೇ ಸಮಸ್ಯೆಯನ್ನು ಬಗೆಹರಿಸುವುದು ಎಷ್ಟು ಸುಲಭವಾದದ್ದಾಗಿ ಕಂಡುಬರುತ್ತದೆ ಎಂಬುದನ್ನು ನೋಡಿ ನೀವೇ ಆಶ್ಚರ್ಯಚಕಿತರಾಗುವಿರಿ!”

20. (ಎ) ನಮ್ಮ ಆನಂದವನ್ನು ಕಾಪಾಡಿಕೊಳ್ಳಸಾಧ್ಯವಿರುವ ಕೆಲವು ವಿಧಗಳನ್ನು ಸಾರಾಂಶವಾಗಿ ತಿಳಿಸಿರಿ. (ಬಿ) ಆನಂದಭರಿತರಾಗಿರಲು ಯಾವ ಕಾರಣಗಳ ಕುರಿತು ನೀವು ಆಲೋಚಿಸಬಹುದಾಗಿದೆ? (17ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.)

20 “ಸಂತೋಷಭರಿತ ದೇವರ” (NW) ಸೇವೆಮಾಡುವ ವಿಶೇಷ ಸುಯೋಗ ಕ್ರೈಸ್ತರಾದ ನಮಗಿದೆ. (1 ತಿಮೊಥೆಯ 1:11) ಈಗಾಗಲೇ ನಾವು ನೋಡಿರುವಂತೆ, ಗಂಭೀರವಾದ ಸಮಸ್ಯೆಗಳಿಂದ ನಾವು ಆವರಿಸಲ್ಪಟ್ಟಿರುವಾಗಲೂ ನಮ್ಮ ಆನಂದವನ್ನು ಕಾಪಾಡಿಕೊಳ್ಳಸಾಧ್ಯವಿದೆ. ನಾವೆಲ್ಲರೂ ರಾಜ್ಯದ ನಿರೀಕ್ಷೆಯ ಮೇಲೆ ದೃಷ್ಟಿಯಿಡೋಣ, ಅಗತ್ಯವಿರುವಲ್ಲಿ ನಮ್ಮ ದೃಷ್ಟಿಕೋನವನ್ನು ಸರಿಹೊಂದಿಸಿಕೊಳ್ಳೋಣ ಮತ್ತು ನಮ್ಮ ಜೀವನವನ್ನು ಸರಳವಾಗಿಟ್ಟುಕೊಳ್ಳೋಣ. ಆಗ, ನಾವು ಯಾವುದೇ ಸನ್ನಿವೇಶದಲ್ಲಿದ್ದರೂ ಅಪೊಸ್ತಲ ಪೌಲನ ಈ ಮಾತುಗಳಿಗೆ ಪ್ರತಿಕ್ರಿಯಿಸುವೆವು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ.”​—ಫಿಲಿಪ್ಪಿ 4:4.

ಈ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿರಿ:

• ಕ್ರೈಸ್ತರು ರಾಜ್ಯದ ನಿರೀಕ್ಷೆಯನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡಿರಬೇಕು ಏಕೆ?

• ಕಷ್ಟಕರ ಸನ್ನಿವೇಶಗಳಲ್ಲಿ ನಮ್ಮ ಆನಂದವನ್ನು ಕಾಪಾಡಿಕೊಳ್ಳುವಂತೆ ಯಾವುದು ನಮಗೆ ಸಹಾಯಮಾಡಬಲ್ಲದು?

• ನಮ್ಮ ಜೀವಿತಗಳನ್ನು ಸರಳವಾಗಿಡಲು ಏಕೆ ಪ್ರಯತ್ನಿಸಬೇಕು?

• ಕೆಲವರು ತಮ್ಮ ಜೀವಿತದ ಯಾವ ಕ್ಷೇತ್ರಗಳಲ್ಲಿ ಸರಳತೆಯನ್ನು ಅಳವಡಿಸಿಕೊಂಡಿದ್ದಾರೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚೌಕ/ಚಿತ್ರಗಳು]

ಆನಂದಭರಿತರಾಗಿ ಇರಲಿಕ್ಕಾಗಿ ಇನ್ನೂ ಹೆಚ್ಚಿನ ಕಾರಣಗಳು

ಕ್ರೈಸ್ತರಾಗಿರುವ ನಮಗೆ ಆನಂದಿಸಲು ಅನೇಕ ಕಾರಣಗಳಿವೆ. ಈ ಕೆಳಗಿನ ಕಾರಣಗಳನ್ನು ಪರಿಗಣಿಸಿರಿ:

1. ಯೆಹೋವನ ಬಗ್ಗೆ ನಾವು ತಿಳಿದುಕೊಂಡಿದ್ದೇವೆ.

2. ದೇವರ ವಾಕ್ಯದ ಸತ್ಯವನ್ನು ನಾವು ಕಲಿತುಕೊಂಡಿದ್ದೇವೆ.

3. ಯೇಸುವಿನ ಯಜ್ಞದಲ್ಲಿನ ನಮ್ಮ ನಂಬಿಕೆಯ ಮೂಲಕ ನಮ್ಮ ಪಾಪಗಳು ಕ್ಷಮಿಸಲ್ಪಡಸಾಧ್ಯವಿದೆ.

4. ದೇವರ ರಾಜ್ಯವು ಆಳ್ವಿಕೆ ನಡೆಸುತ್ತಿದೆ ಮತ್ತು ಅತಿ ಬೇಗನೆ ಹೊಸ ಲೋಕವು ಬರಲಿದೆ!

5. ಯೆಹೋವನು ನಮ್ಮನ್ನು ಆತ್ಮಿಕ ಪರದೈಸಕ್ಕೆ ತಂದಿದ್ದಾನೆ.

6. ಹಿತಕರವಾದ ಕ್ರೈಸ್ತ ಸಹವಾಸದಲ್ಲಿ ನಾವು ಆನಂದಿಸುತ್ತೇವೆ.

7. ಸಾರುವ ಕೆಲಸದಲ್ಲಿ ಭಾಗವಹಿಸುವ ಸುಯೋಗ ನಮಗಿದೆ.

8. ನಾವು ಬದುಕಿದ್ದೇವೆ ಮತ್ತು ಸಾಕಷ್ಟು ಬಲ ನಮ್ಮಲ್ಲಿದೆ.

ಆನಂದಿಸಲಿಕ್ಕಾಗಿರುವ ಇನ್ನೆಷ್ಟು ಕಾರಣಗಳನ್ನು ನೀವು ತಿಳಿಸಬಲ್ಲಿರಿ?

[ಪುಟ 13ರಲ್ಲಿರುವ ಚಿತ್ರ]

ಪೌಲ ಮತ್ತು ಸೀಲರು ಸೆರೆಮನೆಯಲ್ಲಿಯೂ ಆನಂದದಿಂದಿದ್ದರು

[ಪುಟ 15ರಲ್ಲಿರುವ ಚಿತ್ರಗಳು]

ದೇವರ ಹೊಸ ಲೋಕದ ಕುರಿತಾದ ಪ್ರತೀಕ್ಷೆಯ ಮೇಲೆ ನೀವು ದೃಷ್ಟಿಯನ್ನು ನೆಟ್ಟಿದ್ದೀರೋ?