ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಧವೆಯರಿಗೆ ಬರುವ ಪರೀಕ್ಷೆಗಳ ಸಮಯಗಳಲ್ಲಿ ಅವರಿಗೆ ಸಹಾಯಮಾಡುವುದು

ವಿಧವೆಯರಿಗೆ ಬರುವ ಪರೀಕ್ಷೆಗಳ ಸಮಯಗಳಲ್ಲಿ ಅವರಿಗೆ ಸಹಾಯಮಾಡುವುದು

ವಿಧವೆಯರಿಗೆ ಬರುವ ಪರೀಕ್ಷೆಗಳ ಸಮಯಗಳಲ್ಲಿ ಅವರಿಗೆ ಸಹಾಯಮಾಡುವುದು

ವಿಧವೆಯರ ಕುರಿತಾದ ಅತಿ ಪ್ರಸಿದ್ಧ ಕಥೆಗಳಲ್ಲಿ ಒಂದು, ರೂತ್‌ ಹಾಗೂ ಅವಳ ಅತ್ತೆಯಾದ ನೊವೊಮಿಯ ಕುರಿತಾದ ಬೈಬಲ್‌ ವೃತ್ತಾಂತವೇ ಆಗಿದೆ. ಈ ಇಬ್ಬರೂ ಸ್ತ್ರೀಯರು ವಿಧವೆಯರಾಗಿದ್ದರು. ನೊವೊಮಿಯು ತನ್ನ ಗಂಡನನ್ನು ಮಾತ್ರವಲ್ಲ ತನ್ನ ಇಬ್ಬರು ಗಂಡುಮಕ್ಕಳನ್ನು ಸಹ ಕಳೆದುಕೊಂಡಿದ್ದಳು. ಅವಳ ಗಂಡುಮಕ್ಕಳಲ್ಲಿ ಒಬ್ಬನು ರೂತಳ ಗಂಡನಾಗಿದ್ದನು. ಅವರು ವ್ಯವಸಾಯ ಮಾಡುತ್ತಿದ್ದ ಸಮಾಜದಲ್ಲಿ ಜೀವಿಸುತ್ತಿದ್ದರು ಮತ್ತು ಆ ಸಮಾಜವು ಪುರುಷರ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಆದುದರಿಂದ, ಅವರ ಸನ್ನಿವೇಶವು ನಿಜವಾಗಿಯೂ ದುಃಖಕರವಾಗಿತ್ತು.​—ರೂತಳು 1:​1-5, 20, 21.

ಆದರೂ, ಸೊಸೆಯಾಗಿದ್ದ ರೂತಳು ನೊವೊಮಿಯೊಂದಿಗೆ ಆಪ್ತ ಸ್ನೇಹಿತೆಯಂತೆ ವರ್ತಿಸಿದಳು ಮತ್ತು ಅವಳನ್ನು ಸಂತೈಸಿದಳು. ಅಷ್ಟುಮಾತ್ರವಲ್ಲ, ಅವಳು ತನ್ನ ಅತ್ತೆಯನ್ನು ಬಿಟ್ಟುಹೋಗಲು ಖಡಾಖಂಡಿತವಾಗಿ ನಿರಾಕರಿಸಿದಳು. ಈ ಮಧ್ಯೆ, ರೂತಳು ‘[ನೊವೊಮಿಗೆ] ಏಳು ಮಂದಿ ಮಕ್ಕಳಿಗಿಂತ ಉತ್ತಮಳಾಗಿ’ ಕಂಡುಬಂದಳು. ಏಕೆಂದರೆ ನೊವೊಮಿಯ ಬಗ್ಗೆ ಅವಳಿಗೆ ಆಳವಾದ ಪ್ರೀತಿಯಿತ್ತು ಮತ್ತು ದೇವರನ್ನೂ ಅವಳು ತುಂಬ ಪ್ರೀತಿಸುತ್ತಿದ್ದಳು. (ರೂತಳು 4:​15) ರೂತಳು ಅವಳ ಮೋವಾಬ್ಯ ಕುಟುಂಬಕ್ಕೆ ಹಾಗೂ ಸ್ನೇಹಿತರ ಬಳಿಗೆ ಹಿಂದಿರುಗುವುದು ಒಳ್ಳೇದು ಎಂದು ನೊವೊಮಿಯು ಅವಳಿಗೆ ಹೇಳಿದಾಗ, ರೂತಳು ಕೊಟ್ಟ ಉತ್ತರವು, ನಿಷ್ಠೆಯ ಸಂಬಂಧದಲ್ಲಿ ದಾಖಲಿಸಲ್ಪಟ್ಟಿರುವ ಅತ್ಯಂತ ಹೃದಯಸ್ಪರ್ಶಿ ಅಭಿವ್ಯಕ್ತಿಗಳಲ್ಲಿ ಒಂದಾಗಿತ್ತು: “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು; ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ.”​—ರೂತಳು 1:​16, 17.

ರೂತಳ ಮನೋಭಾವವು ಯೆಹೋವ ದೇವರ ದೃಷ್ಟಿಗೆ ಬಿತ್ತು. ನೊವೊಮಿ ಹಾಗೂ ರೂತಳ ಚಿಕ್ಕ ಮನೆವಾರ್ತೆಯನ್ನು ಆತನು ಆಶೀರ್ವದಿಸಿದನು ಮತ್ತು ಕಾಲಕ್ರಮೇಣ ರೂತಳು ಇಸ್ರಾಯೇಲ್ಯನಾಗಿದ್ದ ಬೋವಜನನ್ನು ಮದುವೆಯಾದಳು. ಯೇಸು ಕ್ರಿಸ್ತನ ಪೂರ್ವಜನಾಗಲಿದ್ದ ಅವರ ಮಗುವನ್ನು, ನೊವೊಮಿಯು ತನ್ನ ಸ್ವಂತ ಮಗುವಿನಂತೆ ನೋಡಿಕೊಂಡಳು. ತನ್ನೊಂದಿಗೆ ಹತ್ತಿರದ ಸಂಬಂಧವನ್ನು ಬೆಳೆಸುವ ಹಾಗೂ ತನ್ನ ಮೇಲೆ ಭರವಸೆಯಿಡುವ ವಿಧವೆಯರನ್ನು ಯೆಹೋವನು ಎಷ್ಟು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದಕ್ಕೆ ಈ ವೃತ್ತಾಂತವು ಒಂದು ಉದಾಹರಣೆಯಾಗಿದೆ. ಇದಲ್ಲದೆ, ವಿಧವೆಯರು ಪರೀಕ್ಷೆಗಳನ್ನು ಅನುಭವಿಸುತ್ತಿರುವಾಗ ಅವರಿಗೆ ಪ್ರೀತಿಯಿಂದ ಸಹಾಯಮಾಡುವವರನ್ನು ಯೆಹೋವನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂದು ಸಹ ಬೈಬಲು ನಮಗೆ ಹೇಳುತ್ತದೆ. ಹಾಗಾದರೆ, ಇಂದು ನಮ್ಮ ಮಧ್ಯದಲ್ಲಿರುವ ವಿಧವೆಯರಿಗೆ ನಾವು ಹೇಗೆ ಬೆಂಬಲ ನೀಡಸಾಧ್ಯವಿದೆ?​—ರೂತಳು 4:​13, 16-​22; ಕೀರ್ತನೆ 68:5.

ನಿರ್ದಿಷ್ಟ ರೀತಿಯ ಸಹಾಯವನ್ನು ನೀಡಿ, ಆದರೆ ದರ್ಪದಿಂದಲ್ಲ

ಒಬ್ಬ ವಿಧವೆಗೆ ಸಹಾಯಮಾಡಲು ಹೋಗುವಲ್ಲಿ, ಯಾವ ಸಹಾಯವನ್ನು ನೀವು ನೀಡಸಾಧ್ಯವಿದೆ ಎಂಬುದನ್ನು ಸ್ಪಷ್ಟವಾಗಿ ಹಾಗೂ ನಿರ್ದಿಷ್ಟವಾಗಿ ವ್ಯಕ್ತಪಡಿಸಿರಿ, ಆದರೆ ದರ್ಪದಿಂದ ವ್ಯವಹರಿಸಬೇಡಿ. “ನಿಮಗೆ ಏನಾದರೂ ಸಹಾಯ ಬೇಕಾದಾಗ ನನಗೆ ಹೇಳಿ” ಎಂಬಂಥ ಅನಿಶ್ಚಿತ ಮಾತುಗಳನ್ನಾಡಬೇಡಿ. ಹೀಗೆ ಮಾತಾಡುವಲ್ಲಿ, ಅದು ಚಳಿಯಿಂದ ನಡುಗುತ್ತಿರುವ ಹಾಗೂ ಹಸಿದಿರುವ ಒಬ್ಬ ವ್ಯಕ್ತಿಗೆ “ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆತುಂಬಿಸಿಕೊಳ್ಳಿ” ಎಂದು ಸುಮ್ಮನೆ ಹೇಳಿ, ಅವನಿಗೆ ಬೇಕಾದದ್ದನ್ನು ಒದಗಿಸಲು ಯಾವ ಪ್ರಯತ್ನವನ್ನೂ ಮಾಡದಿರುವುದಕ್ಕೆ ಸಮಾನವಾಗಿರುವುದು. (ಯಾಕೋಬ 2:​16) ತಮಗೆ ಸಹಾಯದ ಅಗತ್ಯವಿರುವಾಗ ಅನೇಕರು ಇತರರ ಬಳಿ ಹೋಗಿ ಸಹಾಯ ಯಾಚಿಸುವುದಿಲ್ಲ; ಬದಲಾಗಿ ಮೂಕವೇದನೆಯನ್ನು ಅನುಭವಿಸುತ್ತಾರೆ. ಇಂತಹ ಜನರಿಗೆ ಏನು ಅಗತ್ಯವಿದೆ ಎಂಬುದನ್ನು ಗ್ರಹಿಸಿ, ಅವರಿಗೆ ಸಹಾಯಮಾಡಲು ವಿವೇಚನಾಶಕ್ತಿಯ ಆವಶ್ಯಕತೆಯಿದೆ. ಇನ್ನೊಂದು ಕಡೆಯಲ್ಲಿ, ಒಬ್ಬ ವಿಧವೆಗೆ ಸಹಾಯಮಾಡುವುದರಲ್ಲಿ ಅತಿರೇಕ ಆಸಕ್ತಿಯನ್ನು ತೆಗೆದುಕೊಳ್ಳುವ ಮೂಲಕ, ನಾವು ಅವರ ದುಃಖ ಹಾಗೂ ಹೋರಾಟವನ್ನು ಇನ್ನೂ ಹೆಚ್ಚಿಸಬಹುದು. ಮತ್ತು ನಾವೇ ಅವರ ಜೀವಿತವನ್ನು ನಿಯಂತ್ರಿಸುತ್ತಿದ್ದೇವೆ ಎಂದು ಅವರಿಗನಿಸಬಹುದು. ಆದುದರಿಂದ, ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ಸಮತೂಕ ಮನೋಭಾವವನ್ನು ಇರಿಸಿಕೊಳ್ಳುವಂತೆ ಬೈಬಲು ಉತ್ತೇಜಿಸುತ್ತದೆ. ಜನರಲ್ಲಿ ನಿಸ್ವಾರ್ಥವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವಂತೆ ಅದು ಪ್ರೋತ್ಸಾಹಿಸುತ್ತದಾದರೂ, ಅಧಿಕಪ್ರಸಂಗಿಗಳಾಗಿರುವುದರ ವಿರುದ್ಧ ಅದು ನಮಗೆ ಎಚ್ಚರಿಕೆ ನೀಡುತ್ತದೆ.​—ಫಿಲಿಪ್ಪಿ 2:4; 1 ಪೇತ್ರ 4:​15.

ನೊವೊಮಿಯ ಕಡೆಗೆ ರೂತಳು ಅಂತಹ ಸಮತೂಕ ಮನೋಭಾವವನ್ನು ತೋರಿಸಿದಳು. ರೂತಳು ತನ್ನ ಅತ್ತೆಗೆ ನಿಷ್ಠಳಾಗಿ ಉಳಿದಳಾದರೂ, ಎಂದೂ ಅವಳ ಮೇಲೆ ಒತ್ತಡವನ್ನು ಹೇರಲಿಲ್ಲ ಅಥವಾ ದಬ್ಬಾಳಿಕೆ ನಡೆಸಲಿಲ್ಲ. ತನಗೆ ಹಾಗೂ ನೊವೊಮಿಗೋಸ್ಕರ ಆಹಾರವನ್ನು ಸಂಪಾದಿಸುವಂತಹ ವಿವೇಕದ ಮುನ್ನೆಜ್ಜೆಗಳನ್ನು ಅವಳು ತೆಗೆದುಕೊಂಡಳಾದರೂ, ನೊವೊಮಿಯ ಸಲಹೆಗಳನ್ನು ಕೂಡ ಅನುಸರಿಸಿದಳು.​—ರೂತಳು 2:​2, 22, 23; 3:​1-6.

ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ರೀತಿಯ ಆವಶ್ಯಕತೆಗಳಿರುತ್ತವೆ ಎಂಬುದಂತೂ ಖಂಡಿತ. ಈ ಮುಂಚೆ ತಿಳಿಸಲ್ಪಟ್ಟಿರುವ ಸ್ಯಾಂಡ್ರಳು ಹೇಳುವುದು: “ನನ್ನ ದುಃಖದ ಸಮಯದಲ್ಲಿ ನನಗೆ ಏನು ಅಗತ್ಯವಾಗಿತ್ತೋ ಅದು ನನಗೆ ಸಿಕ್ಕಿತ್ತು; ಅಂದರೆ ತುಂಬ ಆತ್ಮೀಯ ಹಾಗೂ ಪ್ರೀತಿಯ ಸ್ನೇಹಿತರು ಯಾವಾಗಲೂ ನನ್ನ ಸುತ್ತಲಿರುತ್ತಿದ್ದರು.” ಇನ್ನೊಂದು ಕಡೆಯಲ್ಲಾದರೋ, ಈ ಮುಂಚೆ ತಿಳಿಸಲ್ಪಟ್ಟಿರುವ ಇಲೇನಳಿಗೆ ಏಕಾಂತತೆಯ ಅಗತ್ಯವಿತ್ತು. ಆದುದರಿಂದ, ಇತರರಿಗೆ ಸಹಾಯಮಾಡುವಾಗ ವಿವೇಚನಾಶೀಲರಾಗಿರಬೇಕು; ಅಂದರೆ ಇನ್ನೊಬ್ಬ ವ್ಯಕ್ತಿಯ ಏಕಾಂತತೆಗೆ ಅವಕಾಶಮಾಡಿಕೊಡುವುದು ಹಾಗೂ ಅಗತ್ಯವಿರುವಾಗ ಸಹಾಯಮಾಡಲು ಸಿದ್ಧರಿರುವುದು ಇವೆರಡರ ನಡುವೆ ಸಮತೂಕವುಳ್ಳವರಾಗಿರಬೇಕು.

ಕುಟುಂಬದಿಂದ ಬೆಂಬಲ

ಆದರಣೆ ತೋರಿಸುವ ಪ್ರೀತಿಯ ಕುಟುಂಬವು​—ಒಂದುವೇಳೆ ಅಂಥ ಕುಟುಂಬವು ಇರುವಲ್ಲಿ​—ಒಬ್ಬ ವಿಧವೆಯು ತನ್ನ ಸನ್ನಿವೇಶವನ್ನು ಯಶಸ್ವಿಕರವಾಗಿ ನಿಭಾಯಿಸಲು ಹೆಚ್ಚನ್ನು ಮಾಡಸಾಧ್ಯವಿದೆ. ಕುಟುಂಬದ ಕೆಲವು ಸದಸ್ಯರು ಇತರರಿಗಿಂತ ಹೆಚ್ಚು ಸಹಾಯವನ್ನು ನೀಡಶಕ್ತರಾಗಿರಬಹುದಾದರೂ, ಎಲ್ಲರೂ ಒಟ್ಟುಗೂಡಿ ಸಹಾಯಮಾಡಸಾಧ್ಯವಿದೆ. “ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.”​—1 ತಿಮೊಥೆಯ 5:4.

ಅನೇಕ ವಿಧವೆಯರಿಗೆ ಹಣಕಾಸಿನ ಬೆಂಬಲವಾಗಲಿ ಅಥವಾ “ಪರಿಹಾರಧನವಾಗಲಿ” ಬೇಕಾಗಿರುವುದಿಲ್ಲ. ತಮ್ಮ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಕೆಲವು ವಿಧವೆಯರ ಬಳಿ ಸಾಕಷ್ಟು ಹಣವಿರುತ್ತದೆ ಮತ್ತು ಇನ್ನೂ ಕೆಲವು ದೇಶಗಳಲ್ಲಿ ವಿಧವೆಯರಿಗೆ ಸರಕಾರಿ ಹಣಸಹಾಯವು ಲಭ್ಯವಿರುತ್ತದೆ. ಆದರೆ ಅವರಿಗೆ ಬೇರೆ ಸಹಾಯದ ಅಗತ್ಯವಿರುವಲ್ಲಿ, ಕುಟುಂಬದ ಸದಸ್ಯರು ಸಹಾಯಮಾಡಬೇಕು. ಒಂದುವೇಳೆ ಒಬ್ಬ ವಿಧವೆಗೆ ಬೆಂಬಲ ನೀಡಲು ಯಾವುದೇ ಸಂಬಂಧಿಕರಿಲ್ಲದಿರುವಲ್ಲಿ ಅಥವಾ ಅಂತಹ ಸಂಬಂಧಿಕರು ಸಹಾಯಮಾಡಲು ಅಶಕ್ತರಾಗಿರುವಲ್ಲಿ, ಜೊತೆ ವಿಶ್ವಾಸಿಗಳು ಅವಳ ಸಹಾಯಕ್ಕೆ ಬರಬೇಕು ಎಂದು ಶಾಸ್ತ್ರವಚನಗಳು ಪ್ರೋತ್ಸಾಹಿಸುತ್ತವೆ: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.”​—ಯಾಕೋಬ 1:​27.

ಈ ಬೈಬಲ್‌ ಮೂಲತತ್ವಗಳನ್ನು ಅನುಸರಿಸುವವರು, ನಿಜವಾಗಿಯೂ “ವಿಧವೆಯರನ್ನು ಸನ್ಮಾನಿಸು”ವವರಾಗಿದ್ದಾರೆ. (1 ತಿಮೊಥೆಯ 5:3, NW) ಒಬ್ಬ ವ್ಯಕ್ತಿಯನ್ನು ಸನ್ಮಾನಿಸುವುದೆಂದರೆ, ಕಾರ್ಯತಃ ಆ ವ್ಯಕ್ತಿಗೆ ಗೌರವವನ್ನು ತೋರಿಸುವುದಾಗಿದೆ. ಯಾರನ್ನು ಸನ್ಮಾನಿಸಲಾಗುತ್ತದೋ ಆ ವ್ಯಕ್ತಿಗಳು, ತಾವು ಅಮೂಲ್ಯರು, ತಮ್ಮನ್ನು ಇಷ್ಟಪಡಲಾಗುತ್ತದೆ, ತಮಗೆ ಘನತೆ ತೋರಿಸಲಾಗುತ್ತದೆ ಎಂದು ನೆನಸುತ್ತಾರೆ. ಕೇವಲ ಕರ್ತವ್ಯಪ್ರಜ್ಞೆಯಿಂದ ಇತರರು ತಮಗೆ ಸಹಾಯಮಾಡುತ್ತಿದ್ದಾರೆ ಎಂದು ಅವರಿಗನಿಸುವುದಿಲ್ಲ. ರೂತಳು ಸ್ವತಃ ವಿಧವೆಯಾಗಿದ್ದರೂ, ನೊಮೊಮಿಯ ಶಾರೀರಿಕ ಹಾಗೂ ಭಾವನಾತ್ಮಕ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಸಿದ್ಧಮನಸ್ಸಿನಿಂದ ಹಾಗೂ ಪ್ರೀತಿಯಿಂದ ಕಾರ್ಯನಡಿಸುವ ಮೂಲಕ ನೊವೊಮಿಯನ್ನು ಸನ್ಮಾನಿಸಿದಳು. ವಾಸ್ತವದಲ್ಲಿ, ರೂತಳ ಈ ಮನೋಭಾವವು ಅತಿ ಬೇಗನೆ ಅವಳಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಆದುದರಿಂದಲೇ ಅವಳ ಭಾವೀ ಪತಿ ಅವಳಿಗೆ ಹೇಳಿದ್ದು: “ನೀನು ಗುಣವಂತೆಯೆಂಬದು ಊರಿನವರಿಗೆಲ್ಲಾ ಗೊತ್ತದೆ.” (ರೂತಳು 3:​11) ಅದೇ ಸಮಯದಲ್ಲಿ, ದೇವರ ಕಡೆಗೆ ನೊವೊಮಿಗಿದ್ದ ಪ್ರೀತಿ, ತಗಾದೆಮಾಡದಂತಹ ಅವಳ ಸ್ವಭಾವ ಹಾಗೂ ತನ್ನ ಪರವಾಗಿ ರೂತಳು ಮಾಡುತ್ತಿರುವ ಪ್ರಯತ್ನಗಳಿಗಾಗಿರುವ ಅವಳ ಆಳವಾದ ಗಣ್ಯತೆಯು, ರೂತಳು ಸಂತೋಷದಿಂದ ಅವಳಿಗೆ ಸಹಾಯಮಾಡುವಂತೆ ಪ್ರಚೋದಿಸಿತು ಎಂಬುದರಲ್ಲಿ ಸಂದೇಹವೇ ಇಲ್ಲ. ಇಂದಿನ ವಿಧವೆಯರಿಗೆ ನೊವೊಮಿಯು ಎಂತಹ ಅತ್ಯುತ್ತಮ ಮಾದರಿಯನ್ನಿಟ್ಟಿದ್ದಾಳೆ!

ದೇವರಿಗೆ ಸಮೀಪವಾಗಿ

ಒಬ್ಬ ಸಂಗಾತಿಯ ಮರಣದಿಂದ ಉಂಟಾಗಿರುವ ಶೂನ್ಯತೆಯನ್ನು, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ತುಂಬಲಾರರು ಎಂಬುದಂತೂ ನಿಶ್ಚಯ. ಆದುದರಿಂದಲೇ, ಸಂಗಾತಿಯನ್ನು ಕಳೆದುಕೊಂಡಿರುವ ವ್ಯಕ್ತಿಯು, “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸು”ವಾತನಿಗೆ ನಿಕಟವಾಗುವುದು ಅತಿ ಪ್ರಾಮುಖ್ಯವಾಗಿದೆ. (2 ಕೊರಿಂಥ 1:​3, 4) ಅನ್ನಳ ಉದಾಹರಣೆಯನ್ನು ಪರಿಗಣಿಸಿರಿ. ಇವಳು ದೇವಭಕ್ತ ವಿಧವೆಯಾಗಿದ್ದು, ಯೇಸುವಿನ ಜನನದ ಸಮಯದಲ್ಲಿ 84 ವರ್ಷ ಪ್ರಾಯದವಳಾಗಿದ್ದಳು.

ಅನ್ನಳು ವಿವಾಹವಾಗಿ ಕೇವಲ ಏಳು ವರ್ಷಗಳು ಕಳೆದ ಬಳಿಕ ಅವಳ ಗಂಡನು ಮೃತಪಟ್ಟಾಗ, ಸಾಂತ್ವನಕ್ಕಾಗಿ ಅವಳು ಯೆಹೋವನ ಕಡೆಗೆ ತಿರುಗಿದಳು. “ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರ ಸೇವೆಯನ್ನು ಮಾಡುತ್ತಿದ್ದಳು.” (ಲೂಕ 2:​36, 37) ಅನ್ನಳ ದೇವಭಕ್ತಿಗೆ ಯೆಹೋವನು ಪ್ರತಿಕ್ರಿಯಿಸಿದನೋ? ಹೌದು! ಲೋಕದ ರಕ್ಷಕನಾಗಿ ಬೆಳೆಯಲಿದ್ದ ಶಿಶುವನ್ನು ಅವಳು ನೋಡುವಂತೆ ಅನುಮತಿಸುವ ಮೂಲಕ, ಅವಳಿಗಾಗಿದ್ದ ತನ್ನ ಪ್ರೀತಿಯನ್ನು ಆತನು ತುಂಬ ವಿಶೇಷ ರೀತಿಯಲ್ಲಿ ತೋರ್ಪಡಿಸಿದನು. ಇದು ಅನ್ನಳನ್ನು ಎಷ್ಟು ಪುಳಕಗೊಳಿಸಿತು ಹಾಗೂ ಸಂತೈಸಿತು! ಸ್ಪಷ್ಟವಾಗಿಯೇ, ಕೀರ್ತನೆ 37:4ರ ಸತ್ಯತೆಯ ಅನುಭವ ಅವಳಿಗಾಯಿತು: “ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.”

ಜೊತೆ ಕ್ರೈಸ್ತರ ಮೂಲಕ ದೇವರು ಕಾರ್ಯನಡಿಸುತ್ತಾನೆ

ಇಲೇನಳು ಹೇಳುವುದು: “ಡೇವಿಡ್‌ ಮರಣಪಟ್ಟ ನಂತರ ಬಹಳ ಸಮಯದ ವರೆಗೆ ನನಗೆ ದೈಹಿಕ ವೇದನೆಯಾಗುತ್ತಿತ್ತು. ನನ್ನ ಪಕ್ಕೆಗೂಡಿನ ಮಧ್ಯೆ ಚಾಕು ಆಡಿಸಿದಂತೆ ಅನಿಸುತ್ತಿತ್ತು. ಇದು ಅಜೀರ್ಣವಿರಬಹುದು ಎಂದು ನಾನು ನೆನಸಿದೆ. ಒಂದು ದಿನ ಈ ನೋವು ಎಷ್ಟು ತೀವ್ರವಾಯಿತೆಂದರೆ, ನಾನು ವೈದ್ಯರ ಬಳಿಗೆ ಹೋಗುವುದೇ ಒಳ್ಳೇದು ಎಂಬ ಅನಿಸಿಕೆ ನನಗಾಯಿತು. ಆಗ ವಿವೇಚನಾಶೀಲಳಾಗಿದ್ದ ಆತ್ಮಿಕ ಸಹೋದರಿ ಹಾಗೂ ಸ್ನೇಹಿತೆಯೊಬ್ಬಳು ನನಗೆ ಒಂದು ಸಲಹೆಯನ್ನು ಕೊಟ್ಟಳು. ನಿನ್ನ ಮನಸ್ಸಿನಲ್ಲಿರುವ ದುಃಖವೇ ಇದಕ್ಕೆ ಕಾರಣವಾಗಿರಬಹುದು ಎಂದು ಅವಳು ಹೇಳಿದಳು ಮತ್ತು ಸಹಾಯ ಹಾಗೂ ಸಾಂತ್ವನಕ್ಕಾಗಿ ಯೆಹೋವನ ಬಳಿ ಬೇಡಿಕೊಳ್ಳುವಂತೆ ಪ್ರೋತ್ಸಾಹಿಸಿದಳು. ಆ ಕೂಡಲೆ ನಾನು ಅವಳ ಸಲಹೆಗೆ ಕಿವಿಗೊಟ್ಟೆ ಮತ್ತು ದುಃಖದ ಸಮಯದಲ್ಲಿ ನನಗೆ ಆಸರೆಯಾಗಿರುವಂತೆ ಯೆಹೋವನ ಬಳಿ ಬೇಡಿಕೊಳ್ಳುತ್ತಾ, ಮೌನವಾಗಿ ಹೃತ್ಪೂರ್ವಕ ಪ್ರಾರ್ಥನೆಯನ್ನು ಮಾಡಿದೆ. ಆತನು ನನಗೆ ಸಹಾಯಮಾಡಿದನು!” ತದನಂತರ ಇಲೇನಳು ಸುಧಾರಿಸಿಕೊಂಡಳು ಮತ್ತು ಅವಳ ದೈಹಿಕ ವೇದನೆಯು ಸಹ ನಿಂತುಹೋಯಿತು.

ವಿಶೇಷವಾಗಿ ಸಭೆಯ ಹಿರಿಯರು, ದುಃಖಿತ ವಿಧವೆಯರೊಂದಿಗೆ ದಯಾಭಾವದಿಂದ ಸ್ನೇಹವನ್ನು ತೋರಿಸಬಹುದು. ಜಾಣ್ಮೆ ಹಾಗೂ ವಿವೇಚನೆಯನ್ನು ಉಪಯೋಗಿಸುತ್ತಾ, ಕ್ರಮವಾದ ಆತ್ಮಿಕ ಬೆಂಬಲ ಹಾಗೂ ಸಾಂತ್ವನವನ್ನು ನೀಡುವ ಮೂಲಕ, ತಮ್ಮ ಪರೀಕ್ಷೆಗಳ ಮಧ್ಯೆಯೂ ಅವರು ಯೆಹೋವನಿಗೆ ನಿಕಟವಾಗಿ ಉಳಿಯುವಂತೆ ಹಿರಿಯರು ಸಹಾಯಮಾಡಸಾಧ್ಯವಿದೆ. ಅಗತ್ಯವಿರುವಾಗ, ಹಣಕಾಸಿನ ಏರ್ಪಾಡನ್ನು ಮಾಡುವುದರಲ್ಲಿಯೂ ಹಿರಿಯರು ನೆರವು ನೀಡಸಾಧ್ಯವಿದೆ. ಸಹಾನುಭೂತಿಯುಳ್ಳ ಹಾಗೂ ವಿವೇಚನಾಶೀಲರಾದ ಅಂತಹ ಹಿರಿಯರು, ನಿಜವಾಗಿಯೂ “ಗಾಳಿಯಲ್ಲಿ ಮರೆಯಂತೆ” ಕಂಡುಬರುವರು.​—ಯೆಶಾಯ 32:2; ಅ. ಕೃತ್ಯಗಳು 6:1-3.

ಭೂಮಿಯ ಹೊಸ ಅರಸನಿಂದ ಶಾಶ್ವತ ಸಾಂತ್ವನ

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಯಾರನ್ನು ನೋಡಿ ಅನ್ನಳು ಆನಂದಿಸಿದಳೋ ಅವನು ಈಗ, ದೇವರ ಸ್ವರ್ಗೀಯ ರಾಜ್ಯದ ಮೆಸ್ಸೀಯ ರಾಜನಾಗಿದ್ದಾನೆ. ಈ ಸರಕಾರವು, ದುಃಖ ಹಾಗೂ ಮರಣವನ್ನು ಉಂಟುಮಾಡುವ ಎಲ್ಲಾ ಮೂಲಗಳನ್ನು ಅತಿ ಬೇಗನೆ ತೆಗೆದುಹಾಕಲಿದೆ. ಈ ವಿಷಯದಲ್ಲಿ ಪ್ರಕಟನೆ 21:​3, 4 ಹೇಳುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಈ ವಚನವು “ಮನುಷ್ಯ”ರಿಗೆ ಸೂಚಿತವಾಗಿದೆ ಎಂಬುದನ್ನು ನೀವು ಗಮನಿಸಿದಿರೋ? ಹೌದು, ಮನುಷ್ಯರು ಮರಣದಿಂದ ಹಾಗೂ ಅದು ತರುವಂತಹ ಎಲ್ಲ ರೀತಿಯ ದುಃಖ ಹಾಗೂ ಗೋಳಾಟದಿಂದ ಬಿಡುಗಡೆಮಾಡಲ್ಪಡುವರು.

ಇಷ್ಟೇ ಅಲ್ಲ, ಇನ್ನೂ ಹೆಚ್ಚು ಶುಭವರ್ತಮಾನಗಳಿವೆ! ಅದೇನೆಂದರೆ, ಬೈಬಲು ಮೃತರ ಪುನರುತ್ಥಾನದ ವಾಗ್ದಾನವನ್ನೂ ನೀಡುತ್ತದೆ. “ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:​28, 29) ಯಾರನ್ನು ಮೃತ ಸ್ಥಿತಿಯಿಂದ ಯೇಸು ಪುನರುತ್ಥಾನಗೊಳಿಸಿದನೋ ಆ ಲಾಜರನಂತೆ, ಇವರು ಸಹ ಮನುಷ್ಯರೋಪಾದಿ ಹೊರಗೆ ಬರುತ್ತಾರೆ, ಆತ್ಮ ಜೀವಿಗಳೋಪಾದಿಯಲ್ಲ. (ಯೋಹಾನ 11:​43, 44) ತದನಂತರ ಯಾರು ‘ಒಳ್ಳೇದನ್ನು ಮಾಡುತ್ತಾರೋ’ ಅವರು ಮಾನವ ಪರಿಪೂರ್ಣತೆಗೆ ತರಲ್ಪಡುವರು ಮತ್ತು ಯೆಹೋವನು ‘ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುವಾಗ,’ ಆತನ ಪಿತೃಸಮಾನವಾದ ಆರೈಕೆಯನ್ನು ವೈಯಕ್ತಿಕವಾಗಿ ಅನುಭವಿಸುವರು.​—ಕೀರ್ತನೆ 145:16.

ಮರಣದಲ್ಲಿ ತಮ್ಮ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಿದ್ದು, ಈ ನಿಶ್ಚಿತ ನಿರೀಕ್ಷೆಯಲ್ಲಿ ನಂಬಿಕೆಯನ್ನಿಡುವವರು, ಇದನ್ನು ಸಾಂತ್ವನದ ಮೂಲವಾಗಿ ಕಂಡುಕೊಳ್ಳುವರು. (1 ಥೆಸಲೊನೀಕ 4:​13) ಆದುದರಿಂದ, ನೀವು ಒಂದುವೇಳೆ ವಿಧವೆಯಾಗಿರುವಲ್ಲಿ, ನಿಮ್ಮ ಬೇರೆ ಬೇರೆ ಹೊರೆಗಳನ್ನು ಹೊರಲಿಕ್ಕಾಗಿ ದಿನಾಲೂ ನಿಮಗೆ ಅಗತ್ಯವಿರುವ ಸಾಂತ್ವನ ಹಾಗೂ ಸಹಾಯಕ್ಕಾಗಿ ‘ಎಡೆಬಿಡದೆ ಪ್ರಾರ್ಥಿಸಲು’ ಮರೆಯದಿರಿ. (1 ಥೆಸಲೊನೀಕ 5:​17; 1 ಪೇತ್ರ 5:7) ದೇವರ ಆಲೋಚನೆಗಳು ನಿಮ್ಮನ್ನು ಸಂತೈಸಸಾಧ್ಯವಾಗುವಂತೆ, ದೇವರ ವಾಕ್ಯವನ್ನು ಪ್ರತಿ ದಿನ ಓದಲಿಕ್ಕಾಗಿ ಸಮಯವನ್ನು ಮಾಡಿಕೊಳ್ಳಿರಿ. ನೀವು ಈ ಎಲ್ಲ ಸಲಹೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ, ಒಬ್ಬ ವಿಧವೆಯೋಪಾದಿ ನೀವು ಎಷ್ಟೇ ಪರೀಕ್ಷೆಗಳು ಹಾಗೂ ಪಂಥಾಹ್ವಾನಗಳನ್ನು ಎದುರಿಸುವುದಾದರೂ, ಸಮಾಧಾನವನ್ನು ಕಂಡುಕೊಳ್ಳಲಿಕ್ಕಾಗಿ ಯೆಹೋವನು ನಿಜವಾಗಿಯೂ ನಿಮಗೆ ಹೇಗೆ ಸಹಾಯಮಾಡುವನು ಎಂಬುದನ್ನು ವೈಯಕ್ತಿಕವಾಗಿ ನೋಡಸಾಧ್ಯವಿದೆ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇತರರಿಗೆ ಸಹಾಯಮಾಡುವುದರ ಅರ್ಥ, ಇನ್ನೊಬ್ಬ ವ್ಯಕ್ತಿಯ ಏಕಾಂತತೆಗೆ ಅವಕಾಶಮಾಡಿಕೊಡುವುದು ಹಾಗೂ ಅಗತ್ಯವಿರುವಾಗ ಸಹಾಯಮಾಡಲು ಸಿದ್ಧರಿರುವುದು ಇವೆರಡರ ನಡುವೆ ಸಮತೂಕರಾಗಿರುವುದೇ ಆಗಿದೆ

[ಪುಟ 7ರಲ್ಲಿರುವ ಚಿತ್ರ]

ವೃದ್ಧ ವಿಧವೆಯಾಗಿದ್ದ ಅನ್ನಳನ್ನು ದೇವರು ಆಶೀರ್ವದಿಸಿದನು