ವೈಧವ್ಯವು ಇಬ್ಬರು ಸ್ತ್ರೀಯರ ಮೇಲೆ ಯಾವ ಪರಿಣಾಮವನ್ನು ಬೀರಿತು?
ವೈಧವ್ಯವು ಇಬ್ಬರು ಸ್ತ್ರೀಯರ ಮೇಲೆ ಯಾವ ಪರಿಣಾಮವನ್ನು ಬೀರಿತು?
ಆಸ್ಟ್ರೇಲಿಯದಲ್ಲಿ ವಾಸಿಸುತ್ತಿರುವ ಸ್ಯಾಂಡ್ರ ಒಬ್ಬ ವಿಧವೆಯಾಗಿದ್ದಾಳೆ. ಕೆಲವು ವರ್ಷಗಳ ಹಿಂದೆ ಅವಳ ಪತಿ ಮೃತಪಟ್ಟಾಗ, ಆ ಕೂಡಲೆ ಸ್ಯಾಂಡ್ರಳ ಮನಸ್ಸಿಗೆ ದೊಡ್ಡ ಆಘಾತವಾಯಿತು. “ನನ್ನ ಸಂಗಾತಿಯೂ ಆಪ್ತ ಮಿತ್ರನೂ ಆಗಿದ್ದ ನನ್ನ ಪತಿಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡಿದ್ದೇನೆ ಎಂಬ ಅರಿವಾದಾಗ, ನನಗೆ ತಡೆಯಲಸಾಧ್ಯವಾದಷ್ಟು ದುಃಖವಾಯಿತು. ಆ ದಿನ ನಾನು ಆಸ್ಪತ್ರೆಯಿಂದ ಹೇಗೆ ಮನೆಗೆ ಬಂದೆ ಮತ್ತು ನಂತರ ಏನು ಮಾಡಿದೆ ಎಂಬುದು ನನಗೆ ಸ್ವಲ್ಪವೂ ನೆನಪಿಲ್ಲ. ಮುಂದಿನ ಕೆಲವು ವಾರಗಳಲ್ಲಿ ನನ್ನ ಮಾನಸಿಕ ಭಯವು ಸತತವಾದ ಶಾರೀರಿಕ ವೇದನೆಯಾಗಿ ಪರಿಣಮಿಸಿತು.”
ಸ್ಯಾಂಡ್ರಳಿಗೆ ಒಬ್ಬ ಹಿರಿಯ ಸ್ನೇಹಿತೆಯಿದ್ದಾಳೆ. ಅವಳ ಹೆಸರು ಇಲೇನ್. ಅವಳು ಸುಮಾರು ಆರು ವರ್ಷಗಳಿಂದ ವಿಧವೆಯಾಗಿದ್ದಾಳೆ. ತನ್ನ ಪತಿಯಾಗಿದ್ದ ಡೇವಿಡ್ ಕ್ಯಾನ್ಸರ್‌ನಿಂದ ಸಾಯುವ ಮುಂಚೆ, ಸುಮಾರು ಆರು ತಿಂಗಳುಗಳ ವರೆಗೆ ಇಲೇನ್ ಅವರ ಸೇವೆಮಾಡಿದಳು. ಅವಳ ದುಃಖವು ಎಷ್ಟು ತೀವ್ರವಾಗಿತ್ತೆಂದರೆ, ತನ್ನ ಪತಿಯ ಮರಣದ ಬಳಿಕ ಸ್ವಲ್ಪ ಸಮಯದ ವರೆಗೆ ಅವಳು ತಾತ್ಕಾಲಿಕ ಕುರುಡುತನವನ್ನು ಅನುಭವಿಸಿದಳು. ಎರಡು ವರ್ಷಗಳ ಬಳಿಕ, ಅವಳು ಒಂದು ಸಾರ್ವಜನಿಕ ಸ್ಥಳದಲ್ಲಿ ಕುಸಿದುಬಿದ್ದಳು. ಯಾವುದೇ ರೀತಿಯ ಶಾರೀರಿಕ ಅಸ್ವಸ್ಥತೆಯು ಅವಳಿಗಿಲ್ಲ ಎಂಬುದು ವೈದ್ಯರಿಗೆ ಗೊತ್ತಾಯಿತು. ಆದರೂ, ಇಲೇನ್ ತನ್ನೆಲ್ಲಾ ದುಃಖವನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದಾಳೆ ಎಂಬುದು ವೈದ್ಯರ ಗಮನಕ್ಕೆ ಬಂತು. ಆದುದರಿಂದ, ಮನೆಗೆ ಹೋಗಿ ಸಾಧ್ಯವಾದಷ್ಟು ಮಟ್ಟಿಗೆ ಅಳಲು ಪ್ರಯತ್ನಿಸಿ, ತನ್ನ ಎದೆಯ ಭಾರವನ್ನು ಹಗುರಗೊಳಿಸಿಕೊಳ್ಳುವಂತೆ ವೈದ್ಯರು ಹೇಳಿದರು. “ನನ್ನ ದುಃಖವನ್ನು ನಿಭಾಯಿಸಲು ತುಂಬ ಸಮಯ ಹಿಡಿಯಿತು. ನಾನು ಒಂಟಿಯಾಗಿದ್ದಾಗ ಮಲಗುವ ಕೋಣೆಗೆ ಹೋಗಿ, ಡೇವಿಡ್‌ನ ಬಟ್ಟೆಗಳಲ್ಲಿ ನನ್ನ ಮುಖವನ್ನು ಹುದುಗಿಸಿ ಅಳುತ್ತಿದ್ದೆ” ಎಂದು ಇಲೇನ್ ಹೇಳುತ್ತಾಳೆ.
ಹೌದು, ಪ್ರೀತಿಯ ಸಂಗಾತಿಯ ಮರಣವು ಜನರಲ್ಲಿ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ. ಏಕೆಂದರೆ ಒಬ್ಬ ಪತಿಯಿಲ್ಲದೆ ಜೀವಿಸುವುದಕ್ಕಿಂತಲೂ ಹೆಚ್ಚಿನದ್ದು ವೈಧವ್ಯದಲ್ಲಿ ಒಳಗೂಡಿದೆ. ಉದಾಹರಣೆಗೆ, ಸ್ವಲ್ಪ ಕಾಲದ ವರೆಗೆ ತನ್ನ ಗುರುತನ್ನೇ ಕಳೆದುಕೊಂಡಿದ್ದೇನೆ ಎಂಬ ಅನಿಸಿಕೆ ಸ್ಯಾಂಡ್ರಳಿಗಾಯಿತು. ಇತ್ತೀಚೆಗೆ ತಮ್ಮ ಗಂಡಂದಿರನ್ನು ಕಳೆದುಕೊಂಡಿರುವ ಅನೇಕ ವಿಧವೆಯರಂತೆ, ಅವಳಿಗೂ ಅಭದ್ರತೆಯ ಅನಿಸಿಕೆಯಾಯಿತು. ಸ್ಯಾಂಡ್ರಳು ಜ್ಞಾಪಿಸಿಕೊಳ್ಳುವುದು: “ಇಷ್ಟರ ತನಕ ನನ್ನ ಪತಿಯೇ ಯಾವಾಗಲೂ ಎಲ್ಲ ಅಂತಿಮ ನಿರ್ಧಾರಗಳನ್ನು ಮಾಡುತ್ತಿದ್ದರು, ಆದರೆ ಅನಿರೀಕ್ಷಿತವಾಗಿ ಈಗ ಅಂತಹ ನಿರ್ಣಯಗಳನ್ನು ಮಾಡುವ ಜವಾಬ್ದಾರಿ ನನ್ನೊಬ್ಬಳ ಮೇಲೇ ಬಿತ್ತು. ನನಗೆ ನಿದ್ರೆಯೇ ಬರುತ್ತಿರಲಿಲ್ಲ. ನಾನು ತುಂಬ ಆಯಾಸಗೊಳ್ಳುತ್ತಿದ್ದೆ ಮತ್ತು ಬಳಲಿಕೆಯಾಗುತ್ತಿತ್ತು. ನಾನು ಏನು ಮಾಡಬೇಕು ಎಂಬುದೇ ತೋಚುತ್ತಿರಲಿಲ್ಲ.”
ಸ್ಯಾಂಡ್ರ ಹಾಗೂ ಇಲೇನ್‌ಳಂತಹದ್ದೇ ಅನುಭವಗಳು, ಲೋಕದಾದ್ಯಂತ ದಿನಾಲೂ ಸಂಭವಿಸುತ್ತವೆ. ಸಾಮಾನ್ಯವಾಗಿ ಅಸ್ವಸ್ಥತೆ, ಅಪಘಾತಗಳು, ಯುದ್ಧಗಳು, ಕುಲಸಂಬಂಧಿತ ಹತ್ಯೆಗಳು ಹಾಗೂ ಹಿಂಸಾಚಾರವು, ವಿಧವೆಯರ ಸಂಖ್ಯೆಯು ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆ. * ಇಂತಹ ಸ್ತ್ರೀಯರಲ್ಲಿ ಅನೇಕರು ತಮ್ಮ ದುಃಖವನ್ನು ನುಂಗಿಕೊಂಡು ಮೂಕವೇದನೆಯನ್ನು ಅನುಭವಿಸುತ್ತಾರೆ, ಏಕೆಂದರೆ ಏನು ಮಾಡಬೇಕೆಂಬುದೇ ಅವರಿಗೆ ತೋಚುವುದಿಲ್ಲ. ವಿಧವೆಯ ಸ್ಥಾನಕ್ಕೆ ಹೊಂದಿಕೊಳ್ಳಲು ಶ್ರಮಿಸುತ್ತಿರುವವರಿಗೆ, ಸ್ನೇಹಿತರು ಹಾಗೂ ಸಂಬಂಧಿಕರು ಯಾವ ರೀತಿಯಲ್ಲಿ ಸಹಾಯಮಾಡಸಾಧ್ಯವಿದೆ? ಮುಂದಿನ ಲೇಖನದಲ್ಲಿ ಕೆಲವು ಸಲಹೆಗಳು ಕೊಡಲ್ಪಟ್ಟಿವೆ ಮತ್ತು ಅವು ಸಹಾಯಕರವಾಗಿ ಕಂಡುಬರಬಹುದು.
[ಪಾದಟಿಪ್ಪಣಿ]
^ ಪ್ಯಾರ. 5 ಗಂಡಂದಿರಿಂದ ತೊರೆದುಬಿಡಲ್ಪಟ್ಟಿರುವ ಅನೇಕ ಸ್ತ್ರೀಯರ ಸ್ಥಿತಿಯೂ ವಿಧವೆಯರ ಸನ್ನಿವೇಶಕ್ಕೆ ಸಮನಾಗಿರಬಹುದು. ಪ್ರತ್ಯೇಕವಾಸ ಹಾಗೂ ವಿವಾಹ ವಿಚ್ಛೇದವು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದಾದರೂ, ಮುಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವ ಅನೇಕ ಮೂಲತತ್ವಗಳು, ಇಂತಹ ಸನ್ನಿವೇಶಗಳ ಕೆಳಗಿರುವ ಸ್ತ್ರೀಯರಿಗೂ ಸಹಾಯಕರವಾಗಿರಬಹುದು.