ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷಭರಿತ ದೇವರೊಂದಿಗೆ ಆನಂದಿಸಿರಿ

ಸಂತೋಷಭರಿತ ದೇವರೊಂದಿಗೆ ಆನಂದಿಸಿರಿ

ಸಂತೋಷಭರಿತ ದೇವರೊಂದಿಗೆ ಆನಂದಿಸಿರಿ

“ಕಡೇ ಮಾತೇನಂದರೆ ಸಹೋದರರೇ ಸಂತೋಷಪಡಿರಿ, . . . ಆಗ ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರು ನಿಮ್ಮ ಸಂಗಡ ಇರುವನು.”​—2 ಕೊರಿಂಥ 13:11.

1, 2. (ಎ) ಅನೇಕರು ಜೀವಿತದಲ್ಲಿ ಏಕೆ ಸಂತೋಷವನ್ನು ಕಂಡುಕೊಳ್ಳುವುದಿಲ್ಲ? (ಬಿ) ಆನಂದ ಎಂದರೇನು, ಮತ್ತು ಅದನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ?

ಈ ಅಂಧಕಾರದ ದಿನಗಳಲ್ಲಿ, ಅಧಿಕಾಂಶ ಜನರು ಸಂತೋಷಿಸಲಿಕ್ಕಾಗಿ ಯಾವುದೇ ಕಾರಣಗಳನ್ನು ಕಂಡುಕೊಳ್ಳಲು ಅಸಮರ್ಥರಾಗಿದ್ದಾರೆ. ಅವರಿಗೆ ಅಥವಾ ಅವರ ಪ್ರಿಯ ಜನರಿಗೆ ದುರಂತವು ಸಂಭವಿಸುವಾಗ, ಪುರಾತನ ಸಮಯದ ಯೋಬನಿಗೆ ಅನಿಸಿದಂತೆ ಇವರಿಗೂ ಅನಿಸಬಹುದು. ಯೋಬನು ಹೇಳಿದ್ದು: “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.” (ಯೋಬ 14:1) “ನಿಭಾಯಿಸಲು ಕಷ್ಟಕರವಾಗಿರುವ ಈ ಕಠಿನ ಕಾಲಗಳ” ಜಂಜಾಟಗಳು ಹಾಗೂ ಒತ್ತಡಗಳನ್ನು ಕ್ರೈಸ್ತರು ಸಹ ಎದುರಿಸುತ್ತಾರೆ. ಅಷ್ಟುಮಾತ್ರವಲ್ಲ, ಇದರಿಂದಾಗಿ ಯೆಹೋವನ ನಂಬಿಗಸ್ತ ಸೇವಕರು ಸಹ ಕೆಲವೊಮ್ಮೆ ನಿರುತ್ಸಾಹಗೊಳ್ಳುತ್ತಾರೆ ಎಂಬುದರಲ್ಲೇನೂ ಆಶ್ಚರ್ಯವಿಲ್ಲ.​—2 ತಿಮೊಥೆಯ 3:​1, NW.

2 ಆದರೂ, ಪರೀಕ್ಷೆಗಳನ್ನು ಎದುರಿಸುತ್ತಿರುವಾಗಲೂ ಕ್ರೈಸ್ತರು ಆನಂದದಿಂದಿರಸಾಧ್ಯವಿದೆ. (ಅ. ಕೃತ್ಯಗಳು 5:​40, 41) ಇದು ಹೇಗೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ, ಮೊದಲಾಗಿ ಆನಂದವು ಏನಾಗಿದೆ ಎಂಬುದನ್ನು ಪರಿಗಣಿಸಿರಿ. “ಈಗ ಒಳ್ಳೇದನ್ನು ಅನುಭವಿಸುತ್ತಿರುವಲ್ಲಿ ಅಥವಾ ಭವಿಷ್ಯತ್ತಿನಲ್ಲಿ ಏನಾದರೂ ಒಳ್ಳೇದನ್ನು ನಿರೀಕ್ಷಿಸುತ್ತಿರುವಲ್ಲಿ ಉಂಟಾಗುವಂತಹ ಅನಿಸಿಕೆ”ಯನ್ನೇ ಆನಂದವೆಂದು ಕರೆಯಸಾಧ್ಯವಿದೆ. * ಆದುದರಿಂದ, ನಾವು ಸದ್ಯದಲ್ಲಿ ಅನುಭವಿಸುತ್ತಿರುವ ಆಶೀರ್ವಾದಗಳನ್ನು ಲೆಕ್ಕಿಸಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳುತ್ತಾ, ಅದೇ ಸಮಯದಲ್ಲಿ ದೇವರ ಹೊಸ ಲೋಕದಲ್ಲಿ ನಮಗಾಗಿ ಕಾದಿರಿಸಲ್ಪಟ್ಟಿರುವ ಸಂತೋಷಭರಿತ ಸಂಗತಿಗಳ ಕುರಿತು ಮನನಮಾಡುತ್ತಿರುವುದಾದರೆ, ನಾವು ಆನಂದಭರಿತರಾಗಿರಸಾಧ್ಯವಿದೆ.

3. ಸಂತೋಷಿಸಲು ಪ್ರತಿಯೊಬ್ಬರಿಗೂ ಕೆಲವಾದರೂ ಕಾರಣಗಳಿವೆ ಎಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ?

3 ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಆಶೀರ್ವಾದಗಳು ಕೊಡಲ್ಪಟ್ಟಿರುತ್ತವೆ ಮತ್ತು ಅದಕ್ಕಾಗಿ ಎಲ್ಲರೂ ಕೃತಜ್ಞರಾಗಿರಬೇಕಾಗಿದೆ. ಕುಟುಂಬದ ತಲೆಯಾಗಿರುವಂಥ ಒಬ್ಬನು ತನ್ನ ಉದ್ಯೋಗವನ್ನು ಕಳೆದುಕೊಳ್ಳಬಹುದು. ಇಂಥ ಸಮಯದಲ್ಲಿ ಅವನು ಚಿಂತಿಸುವುದು ಸಹಜ. ಏಕೆಂದರೆ ಅವನು ತನ್ನ ಪ್ರಿಯ ಜನರ ಆವಶ್ಯಕತೆಗಳನ್ನು ಪೂರೈಸಲು ಬಯಸುತ್ತಾನೆ. ಆದರೂ, ಅವನು ಶಾರೀರಿಕವಾಗಿ ಗಟ್ಟಿಮುಟ್ಟಾಗಿದ್ದು, ಒಳ್ಳೆಯ ಆರೋಗ್ಯದಿಂದಿರುವಲ್ಲಿ, ಅದಕ್ಕಾಗಿ ಅವನು ಕೃತಜ್ಞನಾಗಿರಸಾಧ್ಯವಿದೆ. ಒಂದುವೇಳೆ ಕೆಲಸವನ್ನು ಕಂಡುಕೊಳ್ಳುವಲ್ಲಿ, ಅವನು ಕಷ್ಟಪಟ್ಟು ಕೆಲಸಮಾಡಲು ಶಕ್ತನಾಗಿರುವನು. ಇನ್ನೊಂದು ಕಡೆಯಲ್ಲಿ, ಒಬ್ಬ ಕ್ರೈಸ್ತ ಸ್ತ್ರೀಯು ಇದ್ದಕ್ಕಿದ್ದಂತೆ ಒಂದು ಅಸ್ವಸ್ಥತೆಯಿಂದ ಪೀಡಿತಳಾಗಿದ್ದು, ಅದು ಅವಳನ್ನು ತುಂಬ ದುರ್ಬಲಗೊಳಿಸಬಹುದು. ಆದರೂ, ತನ್ನ ಅಸ್ವಸ್ಥತೆಯನ್ನು ದಿಟ್ಟತನ ಮತ್ತು ಧೈರ್ಯದಿಂದ ಎದುರಿಸುವಂತೆ ಸಹಾಯಮಾಡುವ ಪ್ರೀತಿಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರ ಬೆಂಬಲಕ್ಕೆ ಅವಳು ಕೃತಜ್ಞತೆಯನ್ನು ಸಲ್ಲಿಸಬಹುದು. ಮತ್ತು ಯಾವುದೇ ಸನ್ನಿವೇಶಗಳ ಕೆಳಗೆ ಇರುವುದಾದರೂ ಎಲ್ಲ ಸತ್ಯ ಕ್ರೈಸ್ತರು, “ಸಂತೋಷಭರಿತ ದೇವರಾಗಿರುವ” (NW) ಯೆಹೋವನನ್ನು ಹಾಗೂ “ಸಂತೋಷಭರಿತನೂ ಏಕಾಧಿಪತಿಯೂ” (NW) ಆಗಿರುವ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವ ಸುಯೋಗದಲ್ಲಿ ಆನಂದಿಸಸಾಧ್ಯವಿದೆ. (1 ತಿಮೊಥೆಯ 1:11; 6:15) ಹೌದು, ಯೆಹೋವ ದೇವರೂ ಯೇಸು ಕ್ರಿಸ್ತನೂ ಪರಮಾನಂದದಿಂದಿದ್ದಾರೆ. ಭೂಮಿಯ ಪರಿಸ್ಥಿತಿಗಳು, ಆರಂಭದಲ್ಲಿ ಯೆಹೋವನು ಉದ್ದೇಶಿಸಿದಕ್ಕಿಂತಲೂ ತೀರ ಭಿನ್ನವಾಗಿವೆ ಎಂಬ ವಾಸ್ತವಿಕತೆಯ ಮಧ್ಯೆಯೂ ಅವರು ತಮ್ಮ ಆನಂದವನ್ನು ಕಾಪಾಡಿಕೊಂಡಿದ್ದಾರೆ. ನಮ್ಮ ಆನಂದವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ವಿಷಯದಲ್ಲಿ ಅವರ ಮಾದರಿಯು ನಮಗೆ ಹೆಚ್ಚನ್ನು ಕಲಿಸಬಲ್ಲದು.

ಅವರೆಂದೂ ತಮ್ಮ ಆನಂದವನ್ನು ಕಳೆದುಕೊಂಡಿಲ್ಲ

4, 5. (ಎ) ಪ್ರಥಮ ಮಾನವರು ದಂಗೆಯೆದ್ದಾಗ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? (ಬಿ) ಯಾವ ವಿಧದಲ್ಲಿ ಯೆಹೋವನು ಮಾನವಕುಲದ ಕುರಿತು ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಂಡಿದ್ದನು?

4 ಏದೆನ್‌ ತೋಟದಲ್ಲಿ ಆದಾಮ ಹವ್ವರು ಪರಿಪೂರ್ಣ ಆರೋಗ್ಯ ಹಾಗೂ ಪರಿಪೂರ್ಣ ಮನಸ್ಸುಳ್ಳವರಾಗಿದ್ದರು. ಅವರಿಗೆ ಉತ್ಪಾದಕ ಕೆಲಸವನ್ನು ಮಾಡಲಿಕ್ಕಿತ್ತು ಮತ್ತು ಆ ಕೆಲಸವನ್ನು ಮಾಡಲು ಅನುರೂಪವಾದ ಪರಿಸರವೂ ಇತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ, ಕ್ರಮವಾಗಿ ಯೆಹೋವನೊಂದಿಗೆ ಸಂವಾದಿಸುವ ಅಪೂರ್ವ ಸುಯೋಗವೂ ಅವರಿಗಿತ್ತು. ಅವರು ಸಂತೋಷಭರಿತ ಭವಿಷ್ಯತ್ತನ್ನು ಪಡೆಯಬೇಕೆಂಬುದೇ ದೇವರ ಉದ್ದೇಶವಾಗಿತ್ತು. ಆದರೆ ದೇವರ ಈ ಎಲ್ಲ ಒಳ್ಳೇ ಒದಗಿಸುವಿಕೆಗಳಿಂದ ನಮ್ಮ ಪ್ರಥಮ ಹೆತ್ತವರು ತೃಪ್ತರಾಗಿರಲಿಲ್ಲ; “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ”ದಿಂದ ನಿಷೇಧಿತ ಹಣ್ಣನ್ನು ಅವರು ಕದ್ದರು. ಈ ಅವಿಧೇಯ ಕೃತ್ಯವು, ಅವರ ಸಂತತಿಯವರಾಗಿರುವ ನಾವು ಇಂದು ಅನುಭವಿಸುತ್ತಿರುವ ಎಲ್ಲಾ ಅಸಂತೋಷಕ್ಕೆ ತಳಪಾಯವನ್ನು ಹಾಕಿತು.​—ಆದಿಕಾಂಡ 2:​15-17; 3:6; ರೋಮಾಪುರ 5:12.

5 ಆದರೂ, ಆದಾಮ ಹವ್ವರ ಕೃತಘ್ನ ಮನೋಭಾವವು ತನ್ನ ಆನಂದವನ್ನು ಕಸಿದುಕೊಳ್ಳುವಂತೆ ಯೆಹೋವನು ಬಿಡಲಿಲ್ಲ. ಅವರ ಸಂತತಿಯವರಲ್ಲಿ ಕಡಿಮೆಪಕ್ಷ ಕೆಲವರ ಹೃದಯಗಳು ತನ್ನ ಸೇವೆ ಮಾಡುವಂತೆ ಪ್ರಚೋದಿಸಲ್ಪಡುವವು ಎಂಬ ದೃಢಭರವಸೆ ಆತನಿಗಿತ್ತು. ಆತನು ಎಷ್ಟು ದೃಢಭರವಸೆಯುಳ್ಳವನಾಗಿದ್ದನೆಂದರೆ, ಆದಾಮ ಹವ್ವರ ಮೊದಲ ಮಗು ಜನಿಸುವುದಕ್ಕೆ ಮೊದಲೇ, ಅವರ ಸಂತತಿಯಲ್ಲಿ ಯಾರು ವಿಧೇಯರಾಗಿರುತ್ತಾರೋ ಅವರನ್ನು ವಿಮೋಚಿಸುವ ತನ್ನ ಉದ್ದೇಶವನ್ನು ಮುಂತಿಳಿಸಿದ್ದನು! (ಆದಿಕಾಂಡ 1:31; 3:15) ತದನಂತರದ ಶತಮಾನಗಳಲ್ಲಿ, ಮಾನವಕುಲದಲ್ಲಿ ಅಧಿಕಾಂಶ ಮಂದಿ ಆದಾಮ ಹವ್ವರ ಹೆಜ್ಜೆಜಾಡಿನಲ್ಲಿ ನಡೆದರೂ, ಅಂತಹ ವ್ಯಾಪಕ ಅವಿಧೇಯತೆಯ ಕಾರಣದಿಂದ ಯೆಹೋವನು ಮಾನವ ಕುಟುಂಬವನ್ನು ತಿರಸ್ಕರಿಸಲಿಲ್ಲ. ಅದಕ್ಕೆ ಬದಲಾಗಿ, ಯಾರು ‘ಆತನ ಮನಸ್ಸನ್ನು ಸಂತೋಷಪಡಿಸಿದರೋ’ ಹಾಗೂ ತಾವು ಆತನನ್ನು ಪ್ರೀತಿಸಿದ ಕಾರಣ ಆತನ ಮನಸ್ಸನ್ನು ಸಂತೋಷಪಡಿಸಲು ನಿಜವಾಗಿಯೂ ಪ್ರಯತ್ನಿಸಿದರೋ, ಅಂತಹ ಸ್ತ್ರೀಪುರುಷರ ಮೇಲೆ ಯೆಹೋವನು ತನ್ನ ಗಮನವನ್ನು ಕೇಂದ್ರೀಕರಿಸಿದನು.​—ಜ್ಞಾನೋಕ್ತಿ 27:11; ಇಬ್ರಿಯ 6:10.

6, 7. ಆನಂದವನ್ನು ಕಾಪಾಡಿಕೊಳ್ಳುವಂತೆ ಯಾವ ಅಂಶಗಳು ಯೇಸುವಿಗೆ ಸಹಾಯಮಾಡಿದವು?

6 ಯೇಸುವಿನ ಕುರಿತಾಗಿ ಏನು? ಅವನು ತನ್ನ ಆನಂದವನ್ನು ಹೇಗೆ ಕಾಪಾಡಿಕೊಂಡನು? ಸ್ವರ್ಗದಲ್ಲಿ ಒಬ್ಬ ಬಲಿಷ್ಠ ಆತ್ಮಜೀವಿಯಾಗಿದ್ದ ಯೇಸುವಿಗೆ, ಭೂಮಿಯಲ್ಲಿರುವ ಸ್ತ್ರೀಪುರುಷರ ಪ್ರತಿಯೊಂದು ಚಟುವಟಿಕೆಗಳನ್ನು ಗಮನಿಸುವ ಸದವಕಾಶವಿತ್ತು. ಅವರ ಅಪರಿಪೂರ್ಣತೆಗಳು ತುಂಬ ಸ್ಪಷ್ಟವಾಗಿ ಕಂಡುಬರುತ್ತಿದ್ದರೂ ಯೇಸು ಅವರನ್ನು ಪ್ರೀತಿಸಿದನು. (ಜ್ಞಾನೋಕ್ತಿ 8:31) ಸಮಯಾನಂತರ, ಅವನು ಭೂಮಿಗೆ ಬಂದು ಮಾನವರ “ಮಧ್ಯದಲ್ಲಿ ವಾಸಮಾಡಿ”ದಾಗಲೂ ಮಾನವಕುಲದ ಕುರಿತಾದ ಅವನ ದೃಷ್ಟಿಕೋನವು ಬದಲಾಗಲಿಲ್ಲ. (ಯೋಹಾನ 1:14) ಪಾಪಪೂರ್ಣ ಮಾನವ ಕುಟುಂಬದ ಕುರಿತು ಅಂತಹ ಸಕಾರಾತ್ಮಕ ನೋಟವನ್ನು ಕಾಪಾಡಿಕೊಳ್ಳುವಂತೆ ಪರಿಪೂರ್ಣನಾದ ದೇವಕುಮಾರನನ್ನು ಯಾವುದು ಶಕ್ತನನ್ನಾಗಿ ಮಾಡಿತು?

7 ಮೊದಲಾಗಿ, ಸ್ವತಃ ತನ್ನಿಂದ ಹಾಗೂ ಇತರರಿಂದ ಅಗತ್ಯವಿರುವುದಕ್ಕಿಂತಲೂ ಹೆಚ್ಚನ್ನು ಯೇಸು ನಿರೀಕ್ಷಿಸುತ್ತಿರಲಿಲ್ಲ. ತಾನು ಲೋಕವನ್ನು ಪರಿವರ್ತಿಸಲು ಹೋಗುತ್ತಿಲ್ಲ ಎಂಬುದು ಅವನಿಗೆ ಗೊತ್ತಿತ್ತು. (ಮತ್ತಾಯ 10:​32-39) ಆದುದರಿಂದ, ಪ್ರಾಮಾಣಿಕ ಹೃದಯದ ಒಬ್ಬ ವ್ಯಕ್ತಿಯು ರಾಜ್ಯದ ಸಂದೇಶಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸಿದಾಗ ಅವನು ಸಂತೋಷಪಟ್ಟನು. ತನ್ನ ಶಿಷ್ಯರ ನಡತೆ ಹಾಗೂ ಮನೋಭಾವವು ಯಾವಾಗಲೂ ಸಂತೃಪ್ತಿಕರವಾಗಿರಲಿಲ್ಲವಾದರೂ, ಹೃದಯದಲ್ಲಿ ಅವರಿಗೆ ದೇವರ ಚಿತ್ತವನ್ನು ಮಾಡುವ ಬಯಕೆಯಿದೆ ಎಂಬುದು ಯೇಸುವಿಗೆ ತಿಳಿದಿತ್ತು. ಆದುದರಿಂದಲೇ ಅವನು ಅವರನ್ನು ಪ್ರೀತಿಸಿದನು. (ಲೂಕ 9:46; 22:​24, 28-32, 60-62) ಗಮನಾರ್ಹವಾಗಿಯೇ, ತನ್ನ ಸ್ವರ್ಗೀಯ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು, ಈ ಹಂತದ ವರೆಗೆ ತನ್ನ ಶಿಷ್ಯರು ಸಕಾರಾತ್ಮಕ ರೀತಿಯಲ್ಲಿ ಕ್ರಿಯೆಗೈದಿದ್ದರ ಕುರಿತು ಸಾರಾಂಶವಾಗಿ ತಿಳಿಸಿದ್ದು: “ಇವರು ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ.”​—ಯೋಹಾನ 17:6.

8. ನಮ್ಮ ಆನಂದವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ, ನಾವು ಯೆಹೋವನನ್ನು ಹಾಗೂ ಯೇಸುವನ್ನು ಅನುಕರಿಸಬಲ್ಲ ಕೆಲವು ವಿಧಗಳನ್ನು ಹೆಸರಿಸಿರಿ.

8 ಈ ವಿಷಯದಲ್ಲಿ ಯೆಹೋವ ದೇವರು ಹಾಗೂ ಯೇಸು ಕ್ರಿಸ್ತನಿಂದ ಇಡಲ್ಪಟ್ಟಿರುವ ಮಾದರಿಯನ್ನು ಜಾಗರೂಕತೆಯಿಂದ ಪರಿಗಣಿಸುವುದು ನಮ್ಮೆಲ್ಲರಿಗೂ ಪ್ರಯೋಜನದಾಯಕವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ನಾವು ನಿರೀಕ್ಷಿಸಿದಂತಹ ರೀತಿಯಲ್ಲಿ ವಿಷಯಗಳು ಸಂಭವಿಸದಿರುವಾಗ ಅದರ ಬಗ್ಗೆ ಅತಿಯಾಗಿ ಚಿಂತಿಸದಿರುವ ಮೂಲಕ, ನಾವು ಯೆಹೋವನನ್ನು ಇನ್ನೂ ಹೆಚ್ಚು ಪೂರ್ಣವಾಗಿ ಅನುಸರಿಸಸಾಧ್ಯವಿದೆಯೋ? ನಮ್ಮ ಸದ್ಯದ ಸನ್ನಿವೇಶಗಳ ಕಡೆಗೆ ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳುವ ಮೂಲಕ, ಹಾಗೂ ಸ್ವತಃ ನಮ್ಮಿಂದ ಹಾಗೂ ಇತರರಿಂದ ನಾವು ನಿರೀಕ್ಷಿಸುವಂಥ ವಿಷಯಗಳಲ್ಲಿ ವಿವೇಚನಾಶೀಲರಾಗಿರುವ ಮೂಲಕ, ನಾವು ಇನ್ನೂ ಹೆಚ್ಚು ನಿಕಟವಾಗಿ ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯಸಾಧ್ಯವಿದೆಯೋ? ಈ ಮೂಲತತ್ವಗಳಲ್ಲಿ ಕೆಲವನ್ನು, ಎಲ್ಲೆಡೆಯೂ ಇರುವ ಹುರುಪಿನ ಕ್ರೈಸ್ತರ ಹೃದಯಗಳಿಗೆ ತುಂಬ ಇಷ್ಟಕರವಾಗಿರುವ ಒಂದು ಕ್ಷೇತ್ರದಲ್ಲಿ, ಅಂದರೆ ಕ್ಷೇತ್ರ ಸೇವೆಯಲ್ಲಿ ಹೇಗೆ ಪ್ರಾಯೋಗಿಕ ರೀತಿಯಲ್ಲಿ ಅನ್ವಯಿಸಬಹುದು ಎಂಬುದನ್ನು ನಾವೀಗ ಪರಿಗಣಿಸುವೆವು.

ಶುಶ್ರೂಷೆಯ ವಿಷಯದಲ್ಲಿ ಸಕಾರಾತ್ಮಕ ನೋಟವನ್ನು ಕಾಪಾಡಿಕೊಳ್ಳಿರಿ

9. ಯೆರೆಮೀಯನು ಆನಂದವನ್ನು ಪುನಃ ಹೇಗೆ ಪಡೆದುಕೊಂಡನು, ಮತ್ತು ಅವನ ಮಾದರಿಯು ನಮಗೆ ಹೇಗೆ ಸಹಾಯಮಾಡಬಲ್ಲದು?

9 ತನ್ನ ಸೇವೆಯಲ್ಲಿ ನಾವೆಲ್ಲರೂ ಆನಂದಿಸುವಂತೆ ಯೆಹೋವನು ಬಯಸುತ್ತಾನೆ. ನಮ್ಮ ಆನಂದವು, ನಾವು ಪಡೆದುಕೊಳ್ಳುವಂತಹ ಫಲಿತಾಂಶಗಳ ಮೇಲೆ ಅವಲಂಬಿಸಿರಬಾರದಾಗಿದೆ. (ಲೂಕ 10:​17, 20) ಪ್ರವಾದಿಯಾದ ಯೆರೆಮೀಯನು ಯಾವುದೇ ಫಲವು ಸಿಗದಿದ್ದಂಥ ಕ್ಷೇತ್ರದಲ್ಲಿ ಅನೇಕ ವರ್ಷಗಳ ವರೆಗೆ ಸುವಾರ್ತೆಯನ್ನು ಸಾರಿದನು. ಜನರ ನಕಾರಾತ್ಮಕ ಪ್ರತಿಕ್ರಿಯೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದಾಗ, ಅವನು ಆನಂದವನ್ನು ಕಳೆದುಕೊಂಡನು. (ಯೆರೆಮೀಯ 20:8) ಆದರೆ ಆ ಸಂದೇಶವು ಏಕೆ ಅಷ್ಟೊಂದು ಒಳ್ಳೇದಾಗಿದೆ ಎಂಬ ವಿಷಯದ ಕುರಿತು ಮನನಮಾಡಿದಾಗ, ಅವನು ಪುನಃ ಆನಂದಿಸತೊಡಗಿದನು. ಯೆರೆಮೀಯನು ಯೆಹೋವನಿಗೆ ಹೇಳಿದ್ದು: “ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು; ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೆ!” (ಯೆರೆಮೀಯ 15:16) ದೇವರ ವಾಕ್ಯವನ್ನು ಸಾರುವ ತನ್ನ ಸುಯೋಗದಲ್ಲಿ ಯೆರೆಮೀಯನು ಸಂತೋಷವನ್ನು ಕಂಡುಕೊಂಡನು. ನಾವು ಸಹ ಹೀಗೆ ಮಾಡುವುದರಲ್ಲಿ ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆ.

10. ಸದ್ಯಕ್ಕೆ ನಮ್ಮ ಟೆರಿಟೊರಿಯಲ್ಲಿ ಯಾವುದೇ ಪ್ರತಿಫಲವು ಸಿಗುತ್ತಿಲ್ಲವಾದರೂ, ಕ್ಷೇತ್ರ ಸೇವೆಯಲ್ಲಿ ನಾವು ಆನಂದವನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?

10 ಅಧಿಕಾಂಶ ಜನರು ಸುವಾರ್ತೆಗೆ ಪ್ರತಿಕ್ರಿಯಿಸಲು ನಿರಾಕರಿಸುವುದಾದರೂ, ಕ್ಷೇತ್ರ ಸೇವೆಯಲ್ಲಿ ನಾವು ಭಾಗವಹಿಸುವಾಗ ಆನಂದಭರಿತರಾಗಿರಲು ಸರ್ವ ಕಾರಣಗಳು ಇವೆ. ಕೆಲವು ಮಾನವರು ತನ್ನ ಸೇವೆಮಾಡುವಂತೆ ಪ್ರಚೋದಿಸಲ್ಪಡುವರು ಎಂಬ ವಿಷಯದಲ್ಲಿ ಯೆಹೋವನು ಪೂರ್ಣ ಭರವಸೆಯುಳ್ಳವನಾಗಿದ್ದಾನೆ ಎಂಬುದು ನೆನಪಿರಲಿ. ಯೆಹೋವನಂತೆಯೇ, ಕಡಿಮೆಪಕ್ಷ ಕೆಲವರಾದರೂ ವಿಶ್ವ ಪರಮಾಧಿಕಾರದ ವಾದಾಂಶವನ್ನು ಅರಿತುಕೊಳ್ಳುವರು ಮತ್ತು ರಾಜ್ಯ ಸಂದೇಶವನ್ನು ಸ್ವೀಕರಿಸುವರು ಎಂಬ ನಿರೀಕ್ಷೆಯನ್ನು ನಾವು ಬಿಟ್ಟುಬಿಡಬಾರದಾಗಿದೆ. ಜನರ ಸನ್ನಿವೇಶಗಳು ಬದಲಾಗುತ್ತವೆ ಎಂಬುದನ್ನು ನಾವೆಂದಿಗೂ ಮರೆಯಬಾರದು. ಅನಿರೀಕ್ಷಿತವಾದ ನಷ್ಟ ಅಥವಾ ಬಿಕ್ಕಟ್ಟನ್ನು ಎದುರಿಸುವಾಗ, ಸ್ವಸಂತುಷ್ಟನಾಗಿರುವಂಥ ವ್ಯಕ್ತಿಯು ಸಹ ಜೀವಿತದ ಅರ್ಥದ ಬಗ್ಗೆ ಗಂಭೀರವಾಗಿ ಯೋಚಿಸಲು ಆರಂಭಿಸಬಹುದು. ಅಂತಹ ಒಬ್ಬ ವ್ಯಕ್ತಿಯು ‘ತನ್ನ ಆತ್ಮಿಕ ಆವಶ್ಯಕತೆಯ ಅರುಹುಳ್ಳವನಾಗುವಾಗ’ ಅವನಿಗೆ ಸಹಾಯಮಾಡಲು ನೀವು ಇರುವಿರೋ? (ಮತ್ತಾಯ 5:​3, NW) ಅಷ್ಟೇಕೆ, ಮುಂದಿನ ಬಾರಿಯೇ ನೀವು ನಿಮ್ಮ ಟೆರಿಟೊರಿಗೆ ಹೋದಾಗ, ಅಲ್ಲಿನ ಯಾರಾದರೊಬ್ಬರು ಸುವಾರ್ತೆಗೆ ಕಿವಿಗೊಡಲು ಸಿದ್ಧರಾಗಿರಬಹುದು!

11, 12. ಒಂದು ಚಿಕ್ಕ ಪಟ್ಟಣದಲ್ಲಿ ಏನು ಸಂಭವಿಸಿತು, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?

11 ನಮ್ಮ ಟೆರಿಟೊರಿಯ ಸ್ಥಿತಿಗತಿಯು ಸಹ ಬದಲಾಗಸಾಧ್ಯವಿದೆ. ಒಂದು ಉದಾಹರಣೆಯನ್ನು ಪರಿಗಣಿಸಿರಿ. ಒಂದು ಚಿಕ್ಕ ಪಟ್ಟಣದಲ್ಲಿ, ಯುವ ವಿವಾಹಿತ ದಂಪತಿಗಳು ಹಾಗೂ ಮಕ್ಕಳಿಂದ ಕೂಡಿದ್ದ ಒಂದು ಗುಂಪು ಅನ್ಯೋನ್ಯವಾಗಿ ಜೀವಿಸುತ್ತಿತ್ತು. ಯೆಹೋವನ ಸಾಕ್ಷಿಗಳು ಅಲ್ಲಿಗೆ ಭೇಟಿ ನೀಡಿದಾಗ, ಪ್ರತಿಯೊಂದು ಮನೆಯಲ್ಲಿಯೂ “ಈ ವಿಷಯದಲ್ಲಿ ನಮಗೆ ಆಸಕ್ತಿಯಿಲ್ಲ” ಎಂಬ ಪ್ರತಿಕ್ರಿಯೆಯೇ ಸಿಕ್ಕಿತು. ಒಂದುವೇಳೆ ಯಾರಾದರೂ ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದಲ್ಲಿ, ಆ ಕೂಡಲೆ ನೆರೆಯವರು ಸಾಕ್ಷಿಗಳೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕವನ್ನು ಮಾಡದಂತೆ ಅಂತಹ ವ್ಯಕ್ತಿಗಳನ್ನು ನಿರುತ್ತೇಜಿಸುತ್ತಿದ್ದರು. ಅಲ್ಲಿ ಸುವಾರ್ತೆಯನ್ನು ಸಾರುವುದು ಖಂಡಿತವಾಗಿಯೂ ಒಂದು ಪಂಥಾಹ್ವಾನವಾಗಿತ್ತು ಎಂಬುದನ್ನು ಹೇಳುವ ಆವಶ್ಯಕತೆಯಿಲ್ಲ. ಆದರೂ, ಸಾಕ್ಷಿಗಳು ತಮ್ಮ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ; ಅವರು ಸಾರುವುದನ್ನು ಮುಂದುವರಿಸಿದರು. ಇದರ ಫಲಿತಾಂಶವೇನಾಗಿತ್ತು?

12 ಸಕಾಲದಲ್ಲಿ, ಆ ಪಟ್ಟಣದಲ್ಲಿದ್ದ ಅನೇಕ ಮಕ್ಕಳು ಬೆಳೆದು ದೊಡ್ಡವರಾದರು, ಮದುವೆಮಾಡಿಕೊಂಡರು ಮತ್ತು ಅಲ್ಲೇ ಸ್ವಂತ ಮನೆಗಳನ್ನೂ ಕಟ್ಟಿಸಿಕೊಂಡರು. ತಮ್ಮ ಜೀವನ ರೀತಿಯಿಂದ ಅವರಿಗೆ ನಿಜವಾದ ಸಂತೋಷವು ಸಿಗದಿದ್ದಾಗ, ಈ ಯೌವನಸ್ಥರಲ್ಲಿ ಕೆಲವರು ಸತ್ಯಕ್ಕಾಗಿರುವ ತಮ್ಮ ಹುಡುಕಾಟವನ್ನು ಆರಂಭಿಸಿದರು. ಸಾಕ್ಷಿಗಳಿಂದ ಸಾರಲ್ಪಟ್ಟ ಸುವಾರ್ತೆಗೆ ಅನುಕೂಲಕರವಾಗಿ ಪ್ರತಿಕ್ರಿಯಿಸಿದಾಗ ಅವರು ಸತ್ಯವನ್ನು ಕಂಡುಕೊಂಡರು. ಹೀಗೆ, ಅನೇಕ ವರ್ಷಗಳ ಬಳಿಕ ಅಲ್ಲಿ ಒಂದು ಚಿಕ್ಕ ಸಭೆಯು ಅಭಿವೃದ್ಧಿಹೊಂದಲಾರಂಭಿಸಿತು. ತಮ್ಮ ಪ್ರಯತ್ನವನ್ನು ಬಿಟ್ಟುಬಿಡದಿದ್ದಂಥ ರಾಜ್ಯ ಪ್ರಚಾರಕರ ಆನಂದವನ್ನು ತುಸು ಊಹಿಸಿ ನೋಡಿ! ಮಹಿಮೆಯುಳ್ಳ ರಾಜ್ಯ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿನ ನಮ್ಮ ಪಟ್ಟುಹಿಡಿಯುವಿಕೆಯು ನಮಗೂ ಆನಂದವನ್ನು ತರಲಿ!

ಜೊತೆವಿಶ್ವಾಸಿಗಳು ನಿಮಗೆ ಬೆಂಬಲ ನೀಡುವರು

13. ನಾವು ನಿರುತ್ಸಾಹಗೊಂಡಾಗ ಸಹಾಯಕ್ಕಾಗಿ ಯಾರ ಕಡೆಗೆ ತಿರುಗಸಾಧ್ಯವಿದೆ?

13 ಒತ್ತಡಗಳು ಅತಿಯಾದಾಗ ಅಥವಾ ಯಾವುದಾದರೂ ವಿಪತ್ತು ಬಂದೆರಗುವಾಗ, ಸಾಂತ್ವನಕ್ಕಾಗಿ ನೀವು ಯಾರ ಕಡೆಗೆ ತಿರುಗಸಾಧ್ಯವಿದೆ? ಯೆಹೋವನ ಲಕ್ಷಾಂತರ ಸಮರ್ಪಿತ ಸೇವಕರು, ಮೊದಲಾಗಿ ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗುತ್ತಾರೆ, ತದನಂತರ ಕ್ರೈಸ್ತ ಸಹೋದರ ಸಹೋದರಿಯರ ಬಳಿಗೆ ಹೋಗುತ್ತಾರೆ. ಯೇಸು ಭೂಮಿಯಲ್ಲಿದ್ದಾಗ, ತನ್ನ ಶಿಷ್ಯರ ಬೆಂಬಲವನ್ನು ಅಮೂಲ್ಯವಾಗಿ ಪರಿಗಣಿಸಿದನು. ತನ್ನ ಮರಣಕ್ಕೆ ಮುಂಚಿನ ರಾತ್ರಿಯಂದು, “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು” ಎಂದು ಅವರ ಕುರಿತು ಮಾತಾಡಿದನು. (ಲೂಕ 22:28) ಆ ಶಿಷ್ಯರು ಅಪರಿಪೂರ್ಣರಾಗಿದ್ದರು ಎಂಬುದು ನಿಜ, ಆದರೂ ಅವರು ತೋರಿಸಿದ ನಿಷ್ಠೆಯು ದೇವಕುಮಾರನಿಗೆ ಒಂದು ಸಾಂತ್ವನವಾಗಿತ್ತು. ನಾವು ಸಹ ಜೊತೆ ಆರಾಧಕರಿಂದ ಬಲವನ್ನು ಪಡೆದುಕೊಳ್ಳಸಾಧ್ಯವಿದೆ.

14, 15. ತಮ್ಮ ಮಗನ ಮರಣದ ದುಃಖವನ್ನು ತಾಳಿಕೊಳ್ಳುವಂತೆ ಒಬ್ಬ ದಂಪತಿಗೆ ಯಾವುದು ಸಹಾಯಮಾಡಿತು, ಮತ್ತು ಅವರ ಅನುಭವದಿಂದ ನೀವು ಯಾವ ಪಾಠವನ್ನು ಕಲಿತುಕೊಳ್ಳುತ್ತೀರಿ?

14 ಮೀಶಲ್‌ ಮತ್ತು ಡೈಆನ್‌ ಎಂಬ ಕ್ರೈಸ್ತ ದಂಪತಿಯು, ತಮ್ಮ ಸಹೋದರ ಸಹೋದರಿಯರ ಬೆಂಬಲವು ಎಷ್ಟು ಅಮೂಲ್ಯವಾದದ್ದಾಗಿದೆ ಎಂಬುದನ್ನು ಕಂಡುಕೊಂಡರು. ಅವರಿಗೆ ಸೋನಟಾನ್‌ ಎಂಬ ಹೆಸರಿನ 20 ವರ್ಷ ಪ್ರಾಯದ ಮಗನಿದ್ದನು. ಅವನು ತುಂಬ ಲವಲವಿಕೆಯಿಂದ ಕೂಡಿದ್ದ ಕ್ರೈಸ್ತನಾಗಿದ್ದನು ಹಾಗೂ ಅವನಿಗೆ ಉಜ್ವಲ ಪ್ರತೀಕ್ಷೆಗಳಿದ್ದವು. ಆದರೆ ಅವನ ಮಿದುಳಿನಲ್ಲಿ ಟ್ಯೂಮರ್‌ ಇದೆಯೆಂದು ರೋಗಪರೀಕ್ಷೆಯಿಂದ ತಿಳಿದುಬಂತು. ವೈದ್ಯರು ಅವನನ್ನು ಬದುಕಿಸಲು ಎಷ್ಟೇ ಪ್ರಯತ್ನಿಸಿದರೂ, ಸೋನಟಾನ್‌ನ ಸ್ಥಿತಿಯು ತೀರ ಹದಗೆಟ್ಟಿತು. ಮತ್ತು ಒಂದು ದಿನ ಸಂಜೆ ಅವನು ಮೃತಪಟ್ಟನು. ಮೀಶಲ್‌ ಮತ್ತು ಡೈಆನ್‌ರಿಗೆ ಮಾನಸಿಕವಾಗಿ ತುಂಬ ಆಘಾತವಾಯಿತು. ಅದೇ ದಿನ ಸಾಯಂಕಾಲ ನಡೆಯಲಿದ್ದ ಸೇವಾ ಕೂಟವು ಇನ್ನೇನು ಮುಗಿಯುತ್ತಾ ಬಂದಿರಬಹುದು ಎಂಬುದು ಅವರ ಮನಸ್ಸಿಗೆ ಬಂತು. ಆದರೂ, ಅವರಿಗೆ ಸಾಂತ್ವನದ ಅತ್ಯಧಿಕ ಅಗತ್ಯವಿದ್ದುದರಿಂದ, ತಮ್ಮನ್ನು ರಾಜ್ಯ ಸಭಾಗೃಹಕ್ಕೆ ಕರೆದುಕೊಂಡು ಹೋಗುವಂತೆ ತಮ್ಮೊಂದಿಗಿದ್ದ ಹಿರಿಯರಿಗೆ ಕೇಳಿಕೊಂಡರು. ಸೋನಟಾನ್‌ನ ಮರಣದ ಕುರಿತು ಸಭೆಗೆ ತಿಳಿಸುತ್ತಿರುವಾಗಲೇ ಇವರು ರಾಜ್ಯ ಸಭಾಗೃಹವನ್ನು ತಲಪಿದರು. ಕೂಟದ ಬಳಿಕ, ಅಳುತ್ತಿದ್ದ ಹೆತ್ತವರ ಸುತ್ತಲೂ ಸಹೋದರ ಸಹೋದರಿಯರು ಒಟ್ಟುಗೂಡಿದರು ಹಾಗೂ ಅವರನ್ನು ತಬ್ಬಿಕೊಂಡು ಸಾಂತ್ವನದ ಮಾತುಗಳನ್ನಾಡಿದರು. ಡೈಆನ್‌ ಜ್ಞಾಪಿಸಿಕೊಳ್ಳುವುದು: “ನಾವು ಸಭಾಗೃಹಕ್ಕೆ ಆಗಮಿಸಿದಾಗ ನಮ್ಮಲ್ಲಿ ಶೂನ್ಯತೆಯಿತ್ತು, ಆದರೆ ಸಹೋದರರಿಂದ ನಾವು ಎಂತಹ ಸಾಂತ್ವನವನ್ನು ಪಡೆದುಕೊಂಡೆವು​—ಅವರು ನಮಗೆ ಎಷ್ಟು ಧೈರ್ಯ ಹಾಗೂ ಬಲವನ್ನು ನೀಡಿದರು! ಅವರು ನಮ್ಮ ನೋವನ್ನು ಶಮನಮಾಡಲು ಅಸಮರ್ಥರಾಗಿದ್ದರೂ, ಒತ್ತಡಭರಿತ ಸನ್ನಿವೇಶವನ್ನು ತಾಳಿಕೊಳ್ಳಲು ನಮಗೆ ಸಹಾಯಮಾಡಿದರು!”​—ರೋಮಾಪುರ 1:​11, 12; 1 ಕೊರಿಂಥ 12:​21-26.

15 ದುಸ್ಥಿತಿಯು, ಮೀಶಲ್‌ ಮತ್ತು ಡೈಆನ್‌ ತಮ್ಮ ಸಹೋದರರಿಗೆ ಹೆಚ್ಚು ಆಪ್ತರಾಗುವಂತೆ ಮಾಡಿತು. ಅಷ್ಟುಮಾತ್ರವಲ್ಲ, ಪತಿಪತ್ನಿಯರು ಇನ್ನಷ್ಟು ಹತ್ತಿರವಾಗುವಂತೆ ಸಹ ಇದು ಮಾಡಿತು. ಮೀಶಲ್‌ ಹೇಳುವುದು: “ನನ್ನ ಪ್ರೀತಿಯ ಪತ್ನಿಯನ್ನು ಇನ್ನೂ ಹೆಚ್ಚು ಆದರಿಸಲು ನಾನು ಕಲಿತಿದ್ದೇನೆ. ನಿರುತ್ಸಾಹದ ಕ್ಷಣಗಳು ಎದುರಾಗುವಾಗ, ಬೈಬಲ್‌ ಸತ್ಯತೆಯ ಕುರಿತು ಹಾಗೂ ಯೆಹೋವನು ನಮ್ಮನ್ನು ಹೇಗೆ ಸಲಹುತ್ತಿದ್ದಾನೆ ಎಂಬುದರ ಕುರಿತು ಪರಸ್ಪರ ಮಾತಾಡಿಕೊಳ್ಳುತ್ತೇವೆ.” ಡೈಆನ್‌ ಕೂಡಿಸಿ ಹೇಳಿದ್ದು: “ಈಗ ರಾಜ್ಯದ ನಿರೀಕ್ಷೆಯು ನಮಗೆ ಇನ್ನಷ್ಟು ಮಹತ್ವಭರಿತವಾದದ್ದಾಗಿದೆ.”

16. ನಮ್ಮ ಆವಶ್ಯಕತೆಗಳ ಕುರಿತು ನಮ್ಮ ಸಹೋದರರಿಗೆ ತಿಳಿಯಪಡಿಸುವುದರಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?

16 ಹೌದು, ಜೀವಿತದ ಕಷ್ಟಕರ ಸಮಯಗಳಲ್ಲಿ ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ನಮಗೆ “ಬಲವರ್ಧಕ ಸಹಾಯ”ವಾಗಿರಸಾಧ್ಯವಿದೆ. (ಕೊಲೊಸ್ಸೆ 4:​11, NW) ನಮ್ಮ ಮನಸ್ಸಿನಲ್ಲಿ ಏನಿದೆಯೆಂದು ಅವರು ತಿಳಿದುಕೊಳ್ಳಸಾಧ್ಯವಿಲ್ಲ ಎಂಬುದು ಖಂಡಿತ. ಆದುದರಿಂದ, ನಮಗೆ ಸಹಾಯದ ಅಗತ್ಯವಿರುವಾಗ, ನಮ್ಮ ಆವಶ್ಯಕತೆಗಳ ಬಗ್ಗೆ ಅವರಿಗೆ ತಿಳಿಸುವುದು ಒಳ್ಳೇದು. ಅಷ್ಟುಮಾತ್ರವಲ್ಲ, ನಮ್ಮ ಸಹೋದರರು ನಮಗೆ ನೀಡಲು ಶಕ್ತರಾಗಿರುವ ಯಾವುದೇ ರೀತಿಯ ಸಾಂತ್ವನವನ್ನು, ಅದು ಯೆಹೋವನಿಂದಲೇ ಬಂದದ್ದಾಗಿದೆ ಎಂದು ಪರಿಗಣಿಸುವ ಮೂಲಕ, ಅದಕ್ಕಾಗಿ ನಿಜವಾದ ಗಣ್ಯತೆಯನ್ನು ವ್ಯಕ್ತಪಡಿಸಸಾಧ್ಯವಿದೆ.​—ಜ್ಞಾನೋಕ್ತಿ 12:25; 17:17.

ನಿಮ್ಮ ಸಭೆಯನ್ನು ನೋಡಿರಿ

17. ಒಬ್ಬ ಒಂಟಿ ತಾಯಿಯು ಯಾವ ಪಂಥಾಹ್ವಾನಗಳನ್ನು ಎದುರಿಸಿದಳು, ಮತ್ತು ಅವಳಂತಹ ಜನರನ್ನು ನಾವು ಹೇಗೆ ಪರಿಗಣಿಸುತ್ತೇವೆ?

17 ನೀವು ಜೊತೆ ವಿಶ್ವಾಸಿಗಳನ್ನು ಹೆಚ್ಚು ನಿಕಟವಾಗಿ ಗಮನಿಸುವಾಗ, ಅವರನ್ನು ಹೆಚ್ಚು ಗಣ್ಯಮಾಡಲಾರಂಭಿಸುವಿರಿ ಮತ್ತು ಅವರ ಸಹವಾಸದಲ್ಲಿ ಆನಂದವನ್ನು ಕಂಡುಕೊಳ್ಳುವಿರಿ. ನಿಮ್ಮ ಸಭೆಯನ್ನು ನೋಡಿರಿ. ನೀವು ಏನನ್ನು ಗಮನಿಸುತ್ತೀರಿ? ಸತ್ಯದ ಮಾರ್ಗದಲ್ಲಿ ತನ್ನ ಮಕ್ಕಳನ್ನು ಬೆಳೆಸಲಿಕ್ಕಾಗಿ ಸತತವಾಗಿ ಹೋರಾಡುತ್ತಿರುವ ಒಂಟಿ ತಾಯಿಯೊಬ್ಬಳಿದ್ದಾಳೋ? ಅವಳು ಇಡುವಂತಹ ಅತ್ಯುತ್ತಮ ಮಾದರಿಯ ಕುರಿತು ನೀವೆಂದಾದರೂ ಆಲೋಚಿಸಿದ್ದೀರೋ? ಅವಳು ಎದುರಿಸುವಂತಹ ಕೆಲವು ಸಮಸ್ಯೆಗಳನ್ನು ಊಹಿಸಿಕೊಳ್ಳಲು ಪ್ರಯತ್ನಿಸಿರಿ. ಜನೀನ್‌ ಎಂಬ ಹೆಸರಿನ ಒಬ್ಬ ಒಂಟಿ ತಾಯಿ ಕೆಲವು ಸಮಸ್ಯೆಗಳನ್ನು ತಿಳಿಸುತ್ತಾಳೆ: ಒಂಟಿತನ, ಕೆಲಸದ ಸ್ಥಳದಲ್ಲಿ ಪುರುಷರಿಂದ ಅನಪೇಕ್ಷಿತ ಲೈಂಗಿಕ ಪ್ರಸ್ತಾಪಗಳು, ಹಣಕಾಸಿನ ಬಿಕ್ಕಟ್ಟು. ಇವುಗಳಿಗಿಂತ ಇನ್ನೂ ಕಷ್ಟಕರವಾಗಿರುವ ಒಂದು ಸಮಸ್ಯೆ ಯಾವುದೆಂದರೆ, ತನ್ನ ಮಕ್ಕಳ ಭಾವನಾತ್ಮಕ ಆವಶ್ಯಕತೆಗಳನ್ನು ನೋಡಿಕೊಳ್ಳುವುದೇ. ಏಕೆಂದರೆ ಪ್ರತಿಯೊಂದು ಮಗುವಿನ ಭಾವನಾತ್ಮಕ ರಚನೆ ಭಿನ್ನವಾಗಿರುತ್ತದೆ ಎಂದು ಅವಳು ಹೇಳುತ್ತಾಳೆ. ಜನೀನ್‌ ಇನ್ನೊಂದು ಸಮಸ್ಯೆಯ ಕುರಿತು ತಿಳಿಸುತ್ತಾಳೆ: “ಪತಿಯು ಇಲ್ಲದಿರುವಾಗ, ಅವನ ಸ್ಥಾನವನ್ನು ತುಂಬಲಿಕ್ಕೋಸ್ಕರ ನಿಮ್ಮ ಮಗನನ್ನು ಮನೆಯ ಯಜಮಾನನನ್ನಾಗಿ ಮಾಡುವ ಪ್ರವೃತ್ತಿಯನ್ನು ತಳ್ಳಿಹಾಕುವುದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿರಸಾಧ್ಯವಿದೆ. ನನಗೆ ಒಬ್ಬ ಮಗಳಿದ್ದಾಳೆ. ನನ್ನ ಅಂತರಂಗದ ಸಮಸ್ಯೆಗಳನ್ನು ಅವಳಿಗೆ ಹೇಳಿ ಅವಳ ಮನಸ್ಸನ್ನು ಭಾರಗೊಳಿಸಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬ ಕಷ್ಟ.” ದೇವಭಯವುಳ್ಳ ಸಾವಿರಾರು ಒಂಟಿ ಹೆತ್ತವರಂತೆ, ಜನೀನ್‌ ಸಹ ಇಡೀ ದಿನ ಕೆಲಸಮಾಡುತ್ತಾಳೆ ಮತ್ತು ತನ್ನ ಮನೆವಾರ್ತೆಯನ್ನು ನೋಡಿಕೊಳ್ಳುತ್ತಾಳೆ. ತನ್ನ ಮಕ್ಕಳೊಂದಿಗೆ ಅವಳು ಬೈಬಲ್‌ ಅಭ್ಯಾಸವನ್ನೂ ಮಾಡುತ್ತಾಳೆ, ಕ್ಷೇತ್ರ ಸೇವೆಯಲ್ಲಿ ಅವರಿಗೆ ತರಬೇತಿ ನೀಡುತ್ತಾಳೆ ಮತ್ತು ಅವರನ್ನು ಸಭಾ ಕೂಟಗಳಿಗೆ ಕರೆತರುತ್ತಾಳೆ. (ಎಫೆಸ 6:4) ಸಮಗ್ರತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಈ ಕುಟುಂಬವು ಮಾಡುವ ಪ್ರಯತ್ನಗಳನ್ನು ಯೆಹೋವನು ದಿನಾಲೂ ಗಮನಿಸುವಾಗ, ಆತನೆಷ್ಟು ಸಂತೋಷಿತನಾಗುವನು! ನಮ್ಮ ಮಧ್ಯದಲ್ಲಿ ಅಂಥವರು ಇರುವುದು ನಮ್ಮ ಹೃದಯಗಳಿಗೆ ಆನಂದವನ್ನು ಉಂಟುಮಾಡುವುದಿಲ್ಲವೋ? ಹೌದು, ಖಂಡಿತವಾಗಿಯೂ ಉಂಟುಮಾಡುತ್ತದೆ.

18, 19. ಸಭೆಯ ಸದಸ್ಯರಿಗಾಗಿ ನಮ್ಮ ಗಣ್ಯತೆಯನ್ನು ನಾವು ಹೇಗೆ ಆಳಗೊಳಿಸಸಾಧ್ಯವಿದೆ ಎಂಬುದನ್ನು ದೃಷ್ಟಾಂತಿಸಿರಿ.

18 ನಿಮ್ಮ ಸಭೆಯ ಕಡೆಗೆ ಪುನಃ ದೃಷ್ಟಿಹರಿಸಿರಿ. ಕೂಟಗಳಿಗೆ “ಎಂದೂ ತಪ್ಪಿಸಿ”ಕೊಳ್ಳದಿರುವಂಥ (NW) ನಂಬಿಗಸ್ತ ವಿಧವೆಯರನ್ನು ಹಾಗೂ ವಿಧುರರನ್ನು ನೀವು ಕಾಣಬಹುದು. (ಲೂಕ 2:37) ಕೆಲವೊಮ್ಮೆ ಅವರಿಗೆ ಒಂಟಿತನದ ಅನಿಸಿಕೆಯಾಗುತ್ತದೋ? ಖಂಡಿತವಾಗಿಯೂ ಆಗುತ್ತದೆ. ತಮ್ಮ ಸಂಗಾತಿಗಳಿಲ್ಲ ಎಂಬ ಕೊರತೆಯಿಂದ ಅವರು ತುಂಬ ಪರಿತಪಿಸುತ್ತಾರೆ! ಆದರೆ ಯೆಹೋವನ ಸೇವೆಯಲ್ಲಿ ಅವರು ಕಾರ್ಯಮಗ್ನರಾಗಿರುತ್ತಾರೆ ಮತ್ತು ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುತ್ತಾರೆ. ಅವರ ಸ್ಥಿರವಾದ, ಸಕಾರಾತ್ಮಕ ಮನೋಭಾವವು, ಸಭೆಯ ಆನಂದವನ್ನು ಹೆಚ್ಚಿಸುತ್ತದೆ! 30ಕ್ಕಿಂತಲೂ ಹೆಚ್ಚು ವರ್ಷ ಪೂರ್ಣ-ಸಮಯದ ಸೇವೆಯನ್ನು ಮಾಡಿರುವ ಒಬ್ಬ ಕ್ರೈಸ್ತ ಸ್ತ್ರೀ ಹೇಳಿದ್ದು: “ಅನೇಕ ಪರೀಕ್ಷೆಗಳನ್ನು ಅನುಭವಿಸಿರುವ ಹಿರಿಯ ಸಹೋದರರು ಹಾಗೂ ಸಹೋದರಿಯರು, ಈಗಲೂ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿರುವುದನ್ನು ನೋಡುವುದೇ ನನಗೆ ಅತ್ಯಾನಂದವನ್ನು ಉಂಟುಮಾಡುತ್ತದೆ!” ಹೌದು, ನಮ್ಮ ಮಧ್ಯೆ ಇರುವ ವೃದ್ಧ ಕ್ರೈಸ್ತರು ನಿಜವಾಗಿಯೂ ಎಳೆಯರಿಗೆ ಪ್ರೋತ್ಸಾಹದ ಮೂಲವಾಗಿದ್ದಾರೆ.

19 ಸಭೆಯೊಂದಿಗೆ ಇತ್ತೀಚೆಗೆ ಸಹವಾಸಮಾಡಲು ಆರಂಭಿಸಿರುವ ಹೊಸಬರ ಕುರಿತಾಗಿ ಏನು? ಅವರು ಕೂಟಗಳಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸುವಾಗ ನಾವು ಪುಳಕಿತರಾಗುವುದಿಲ್ಲವೋ? ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಂದಿನಿಂದ ಅವರು ಮಾಡಿರುವ ಪ್ರಗತಿಯ ಕುರಿತು ತುಸು ಆಲೋಚಿಸಿರಿ. ಯೆಹೋವನು ಅವರ ಪ್ರಗತಿಯನ್ನು ನೋಡಿ ಖಂಡಿತವಾಗಿಯೂ ಸಂತೋಷಗೊಂಡಿರಬೇಕು. ನಮಗೂ ಸಂತೋಷವಾಗಿದೆಯೋ? ಅವರ ಪ್ರಯತ್ನಗಳನ್ನು ಪ್ರಶಂಸಿಸುತ್ತಾ, ನಮ್ಮ ಒಪ್ಪಿಗೆಯನ್ನು ನಾವು ವ್ಯಕ್ತಪಡಿಸುತ್ತೇವೋ?

20. ಸಭೆಯಲ್ಲಿ ಪ್ರತಿಯೊಬ್ಬ ಸಭಾ ಸದಸ್ಯನು ಪ್ರಮುಖ ಪಾತ್ರವನ್ನು ವಹಿಸುತ್ತಾನೆ ಎಂದು ಏಕೆ ಹೇಳಸಾಧ್ಯವಿದೆ?

20 ನೀವು ವಿವಾಹಿತರೋ, ಅವಿವಾಹಿತರೋ, ಅಥವಾ ಒಂಟಿ ಹೆತ್ತವರೋ? ನೀವು ತಂದೆ (ಅಥವಾ ತಾಯಿ) ಇಲ್ಲದ ತಬ್ಬಲಿಗಳೋ? ವಿಧವೆಯರೋ ಅಥವಾ ವಿಧುರರೋ? ನೀವು ಅನೇಕ ವರ್ಷಗಳಿಂದ ಸಭೆಯೊಂದಿಗೆ ಸಹವಾಸಮಾಡುತ್ತಿದ್ದೀರೋ ಅಥವಾ ಇತ್ತೀಚಿಗೆ ಸಹವಾಸಮಾಡಲು ಆರಂಭಿಸಿದ್ದೀರೋ? ನಿಮ್ಮ ನಂಬಿಗಸ್ತ ಮಾದರಿಯು, ನಮ್ಮೆಲ್ಲರಿಗೂ ತುಂಬ ಉತ್ತೇಜನದಾಯಕವಾದದ್ದಾಗಿದೆ ಎಂಬ ಆಶ್ವಾಸನೆ ನಿಮಗಿರಲಿ. ಮತ್ತು ರಾಜ್ಯ ಸಂಗೀತವನ್ನು ಹಾಡುವುದರಲ್ಲಿ ನೀವು ಜೊತೆಗೂಡುವಾಗ, ಕೂಟದಲ್ಲಿ ಉತ್ತರ ನೀಡುವಾಗ ಅಥವಾ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ವಿದ್ಯಾರ್ಥಿ ಭಾಷಣವನ್ನು ಮಾಡುವಾಗ, ನಿಮ್ಮ ಸಹಾಯವು ನಮ್ಮ ಆನಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದಕ್ಕಿಂತಲೂ ಮಿಗಿಲಾಗಿ, ಅದು ಯೆಹೋವನ ಹೃದಯಕ್ಕೆ ಆನಂದವನ್ನು ಉಂಟುಮಾಡುತ್ತದೆ.

21. ಏನು ಮಾಡುವುದಕ್ಕೆ ನಮಗೆ ಅನೇಕ ಸಕಾರಣಗಳು ಇವೆ, ಆದರೆ ಯಾವ ಪ್ರಶ್ನೆಗಳು ಏಳುತ್ತವೆ?

21 ಹೌದು, ಈ ತೊಂದರೆಭರಿತ ಸಮಯಗಳಲ್ಲಿಯೂ, ನಮ್ಮ ಸಂತೋಷಭರಿತ ದೇವರನ್ನು ಆರಾಧಿಸುವುದರಲ್ಲಿ ನಾವು ಆನಂಧಭರಿತರಾಗಿರಸಾಧ್ಯವಿದೆ. “ಸಂತೋಷಪಡಿರಿ, . . . ಆಗ ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರು ನಿಮ್ಮ ಸಂಗಡ ಇರುವನು” ಎಂಬ ಪೌಲನ ಉತ್ತೇಜನಕ್ಕೆ ಪ್ರತಿಕ್ರಿಯಿಸಲು ನಮಗೆ ಅನೇಕ ಕಾರಣಗಳಿವೆ. (2 ಕೊರಿಂಥ 13:11) ಆದರೂ, ನೈಸರ್ಗಿಕ ವಿಪತ್ತು, ಹಿಂಸೆ ಅಥವಾ ಗಂಭೀರವಾದ ಆರ್ಥಿಕ ಕಷ್ಟತೊಂದರೆಗಳನ್ನು ನಾವು ಎದುರಿಸುತ್ತಿರುವಲ್ಲಿ ಆಗೇನು? ಇಂತಹ ಸನ್ನಿವೇಶಗಳಲ್ಲೂ ನಾವು ಆನಂದವನ್ನು ಕಾಪಾಡಿಕೊಳ್ಳಸಾಧ್ಯವಿದೆಯೋ? ಮುಂದಿನ ಲೇಖನವನ್ನು ನೀವು ಪರಿಗಣಿಸುವಾಗ ಇದನ್ನು ನೀವೇ ತೀರ್ಮಾನಿಸಿರಿ.

[ಪಾದಟಿಪ್ಪಣಿ]

ನೀವು ಉತ್ತರಿಸಬಲ್ಲಿರೋ?

• ಯಾವುದನ್ನು ಆನಂದವೆಂದು ಕರೆಯಸಾಧ್ಯವಿದೆ?

• ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವುದು, ಆನಂದದಿಂದ ಇರುವಂತೆ ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ?

• ನಮ್ಮ ಸಭೆಯ ಟೆರಿಟೊರಿಯ ವಿಷಯದಲ್ಲಿ ಸಕಾರಾತ್ಮಕ ನೋಟವನ್ನು ಇಟ್ಟುಕೊಳ್ಳುವಂತೆ ಯಾವುದು ನಮಗೆ ಸಹಾಯಮಾಡಬಲ್ಲದು?

• ನಿಮ್ಮ ಸಭೆಯಲ್ಲಿರುವ ಸಹೋದರ ಸಹೋದರಿಯರನ್ನು ನೀವು ಯಾವ ವಿಧಗಳಲ್ಲಿ ಗಣ್ಯಮಾಡುತ್ತೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರಗಳು]

ನಮ್ಮ ಟೆರಿಟೊರಿಯಲ್ಲಿರುವ ಜನರು ಬದಲಾಗಸಾಧ್ಯವಿದೆ

[ಪುಟ 12ರಲ್ಲಿರುವ ಚಿತ್ರ]

ನಿಮ್ಮ ಸಭೆಯಲ್ಲಿರುವವರು ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಾರೆ?