ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ವಿವಾಹ ಸಂಗಾತಿಯ ಆಯ್ಕೆಮಾಡಲು ದೈವಿಕ ಮಾರ್ಗದರ್ಶನ

ಒಬ್ಬ ವಿವಾಹ ಸಂಗಾತಿಯ ಆಯ್ಕೆಮಾಡಲು ದೈವಿಕ ಮಾರ್ಗದರ್ಶನ

ಒಬ್ಬ ವಿವಾಹ ಸಂಗಾತಿಯ ಆಯ್ಕೆಮಾಡಲು ದೈವಿಕ ಮಾರ್ಗದರ್ಶನ

“ನಿನಗೆ ಜೀವ ಮಾರ್ಗವನ್ನು ಉಪದೇಶಿಸಿ, ಮಾರ್ಗದರ್ಶನ ನೀಡುವೆನು; ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.”​—ಕೀರ್ತನೆ 32:8, ಪರಿಶುದ್ಧ ಬೈಬಲ್‌. *

1. ಸಂತೋಷಕರವಾದ ವೈವಾಹಿಕ ಜೀವನಕ್ಕಾಗಿ ಯಾವ ಅಂಶಗಳು ಅತ್ಯಗತ್ಯ?

ಉಯ್ಯಾಲೆ ದಂಡದ ಮೇಲೆ ಸಾಹಸದ ಆಟಗಳನ್ನು ತೋರಿಸುವ ಒಬ್ಬ ಕ್ರೀಡಾಪಟು, ತನ್ನ ಉಯ್ಯಾಲೆ ದಂಡದಿಂದ ಹಾರಿ, ದೇಹವನ್ನು ಮುದುರಿಕೊಂಡು ಗಾಳಿಯಲ್ಲಿ ಲೀಲಾಜಾಲವಾಗಿ ಪಲ್ಟಿಹೊಡೆಯುತ್ತಾನೆ. ನಂತರ, ಅವನು ಮಿಂಚಿನಂತೆ ತನ್ನ ದೇಹವನ್ನು ನೆಟ್ಟಗೆಮಾಡುತ್ತಾ ತನ್ನ ತೋಳುಗಳನ್ನು ಚಾಚುವಾಗ, ವಿರುದ್ಧ ದಿಕ್ಕಿನಲ್ಲಿ ತಲೆಕೆಳಗಾಗಿ ಉಯ್ಯಾಲೆಯಿಂದ ತೂಗಾಡುತ್ತಿರುವ ಇನ್ನೊಬ್ಬ ಕ್ರೀಡಾಪಟು ಅವುಗಳನ್ನು ಹಿಡಿಯುತ್ತಾನೆ. ಇನ್ನೊಂದು ಕಡೆ, ನೀರ್ಗಲ್ಲ ಮೇಲೆ ಸ್ಕೇಟಿಂಗ್‌ ಮಾಡುತ್ತಿರುವ ಒಂದು ಜೋಡಿಯು, ನೀರ್ಗಲ್ಲ ಜಾರಾಟದ ನೆಲಗಟ್ಟಿನಲ್ಲಿ ಜೊತೆಯಾಗಿ ಸರಾಗವಾಗಿ ಜಾರಿಕೊಂಡು ಹೋಗುತ್ತಿರುತ್ತಾರೆ. ಒಮ್ಮೆಲೇ, ಗಂಡಸು ತನ್ನ ಜೊತೆಗಾರ್ತಿಯನ್ನು ಎತ್ತಿ, ಗಾಳಿಯಲ್ಲಿ ಮೇಲಕ್ಕೆಸೆಯುತ್ತಾನೆ. ಅವಳು ಗಾಳಿಯಲ್ಲಿ ಗಿರಕಿಹೊಡೆಯುತ್ತಾ, ಜಾರುಮೆಟ್ಟಿನ ಮೇಲೆ ಒಂದು ಕಾಲೂರುತ್ತಾ ಕೆಳಗಿಳಿದು, ಅವನೊಂದಿಗೆ ನೀರ್ಗಲ್ಲ ಮೇಲೆ ಸುತ್ತುವುದನ್ನು ಮುಂದುವರಿಸುತ್ತಾಳೆ. ಈ ಎರಡೂ ಸಾಹಸಗಳು ಯಾವುದೇ ಪ್ರಯಾಸವಿಲ್ಲದೆ ನಡೆಯುತ್ತಿರುವಂತೆ ತೋರುತ್ತವೆ. ಆದರೆ, ಒಳ್ಳೆಯ ಅಭ್ಯಾಸ, ಒಬ್ಬ ಸಮರ್ಥ ಸಂಗಾತಿ, ಮತ್ತು ನಿರ್ದಿಷ್ಟವಾಗಿ ಸರಿಯಾದ ರೀತಿಯ ಮಾರ್ಗದರ್ಶನ ಅಥವಾ ಶಿಕ್ಷಣವಿಲ್ಲದೆ ಈ ಸಾಹಸಗಳಿಗೆ ಯಾರು ತಾನೇ ಕೈಹಾಕುವರು? ಹಾಗೆಯೇ, ಸಂತೋಷಕರವಾದ ವೈವಾಹಿಕ ಜೀವನವು ಸಹ ತನ್ನಿಂದತಾನೇ ಉಂಟಾಗುತ್ತದೆಂದು ತೋರಬಹುದು. ಆದರೆ ವಾಸ್ತವದಲ್ಲಿ ಅದು ಕೂಡ, ಒಬ್ಬ ಒಳ್ಳೆಯ ಸಂಗಾತಿ, ಅನ್ಯೋನ್ಯ ಪ್ರಯತ್ನ, ಮತ್ತು ವಿಶೇಷವಾಗಿ ವಿವೇಕಯುತ ಸಲಹೆಯ ಮೇಲೆ ಅವಲಂಬಿತವಾಗಿದೆ. ಹೌದು, ಯೋಗ್ಯವಾದ ಮಾರ್ಗದರ್ಶನವು ಅತ್ಯಾವಶ್ಯಕ.

2. (ಎ) ವಿವಾಹದ ಏರ್ಪಾಡನ್ನು ಯಾರು ಆರಂಭಿಸಿದನು, ಮತ್ತು ಯಾವ ಉದ್ದೇಶಕ್ಕಾಗಿ? (ಬಿ) ಕೆಲವೊಂದು ವಿವಾಹ ಏರ್ಪಾಡುಗಳನ್ನು ಯಾವ ರೀತಿಯಲ್ಲಿ ಮಾಡಲಾಗಿದೆ?

2 ಒಬ್ಬ ಅವಿವಾಹಿತ ಯುವಕನು ಅಥವಾ ಯುವತಿಯು, ವಿವಾಹ ಸಂಗಾತಿ ಇಲ್ಲವೇ ಬಾಳಸಂಗಾತಿಯ ಕುರಿತಾಗಿ ಯೋಚಿಸುವುದು ಸಹಜ. ಯೆಹೋವ ದೇವರು ವಿವಾಹದ ಏರ್ಪಾಡನ್ನು ಸ್ಥಾಪಿಸಿದಂದಿನಿಂದ, ಒಬ್ಬ ಪುರುಷ ಮತ್ತು ಸ್ತ್ರೀಯ ವಿವಾಹವು ಜೀವಿತದ ಸಹಜ ಭಾಗವಾಗಿಬಿಟ್ಟಿದೆ. ಆದರೆ, ಮೊದಲನೆಯ ಪುರುಷನಾದ ಆದಾಮನು ತನ್ನ ಹೆಂಡತಿಯನ್ನು ಆಯ್ಕೆಮಾಡಲಿಲ್ಲ. ಯೆಹೋವನೇ ಪ್ರೀತಿಯಿಂದ ಅವನಿಗಾಗಿ ಒಬ್ಬ ಹೆಂಡತಿಯನ್ನು ಒದಗಿಸಿದನು. (ಆದಿಕಾಂಡ 2:​18-24) ಇಡೀ ಭೂಮಿಯು ಮನುಷ್ಯರಿಂದ ತುಂಬಲಿಕ್ಕಾಗಿ, ಈ ಪ್ರಥಮ ದಂಪತಿಯು ಸಂತಾನಾಭಿವೃದ್ಧಿ ಮಾಡಬೇಕೆಂಬುದು ದೇವರ ಉದ್ದೇಶವಾಗಿತ್ತು. ಆ ಮೊದಲನೆಯ ವಿವಾಹ ಸಂಬಂಧದ ನಂತರ, ಸಾಮಾನ್ಯವಾಗಿ ವಧೂವರರ ಹೆತ್ತವರೇ ವಿವಾಹದ ಏರ್ಪಾಡುಗಳನ್ನು ಮಾಡುತ್ತಿದ್ದರು. ಆದರೆ ಕೆಲವೊಂದು ಸಂದರ್ಭಗಳಲ್ಲಿ, ಮದುವೆಯಾಗುವವರ ಸಮ್ಮತಿಯನ್ನು ಮೊದಲು ಕೇಳಲಾಗುತ್ತಿತ್ತು. (ಆದಿಕಾಂಡ 21:21; 24:​2-4, 58; 38:6; ಯೆಹೋಶುವ 15:​16, 17) ಈಗಲೂ ಕೆಲವೊಂದು ದೇಶಗಳು ಮತ್ತು ಸಂಸ್ಕೃತಿಗಳಲ್ಲಿ, ಕುಟುಂಬದ ಹಿರಿಯರಿಂದ ಏರ್ಪಡಿಸಲ್ಪಟ್ಟಿರುವ ವಿವಾಹಗಳು ತೀರ ಸಾಮಾನ್ಯವಾಗಿವೆ. ಆದರೆ ಇಂದು ಹೆಚ್ಚಿನವರು ತಮ್ಮ ವಿವಾಹ ಸಂಗಾತಿಯನ್ನು ಸ್ವತಃ ಆಯ್ಕೆಮಾಡಿಕೊಳ್ಳುತ್ತಾರೆ.

3. ಒಬ್ಬ ವಿವಾಹ ಸಂಗಾತಿಯನ್ನು ಹೇಗೆ ಆಯ್ಕೆಮಾಡಬೇಕು?

3 ಒಬ್ಬ ವಿವಾಹ ಸಂಗಾತಿಯನ್ನು ಹೇಗೆ ಆಯ್ಕೆಮಾಡಬೇಕು? ಕೆಲವರು ಹೊರತೋರಿಕೆಯನ್ನು ನೋಡುತ್ತಾರೆ. ತಮ್ಮ ದೃಷ್ಟಿಗೆ ಚೆನ್ನಾಗಿ ಕಾಣುವ ಸುಂದರವಾದ ವ್ಯಕ್ತಿಯನ್ನು ಆಯ್ಕೆಮಾಡುತ್ತಾರೆ. ಇನ್ನಿತರರು ಆರ್ಥಿಕ ಲಾಭಗಳನ್ನು, ಅಂದರೆ ತಮ್ಮನ್ನು ಚೆನ್ನಾಗಿ ನೋಡಿಕೊಂಡು, ತಮ್ಮ ಬೇಕುಬೇಡಗಳನ್ನು ಪೂರೈಸುವ ಒಬ್ಬ ವ್ಯಕ್ತಿಯನ್ನು ನೋಡುತ್ತಾರೆ. ಆದರೆ, ಕೇವಲ ಈ ದೃಷ್ಟಿಕೋನಗಳಿಂದ ಮದುವೆಯಾಗುವುದು, ಸಂತೋಷಕರ ಹಾಗೂ ತೃಪ್ತಿದಾಯಕವಾದ ಸಂಬಂಧಕ್ಕೆ ನಡೆಸಬಲ್ಲದೊ? “ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು” ಎಂದು ಜ್ಞಾನೋಕ್ತಿ 31:30 ಹೇಳುತ್ತದೆ. ಇದು ಒಂದು ಬಹುಮುಖ್ಯ ಅಂಶವನ್ನು ಎತ್ತಿತೋರಿಸುತ್ತದೆ. ಅದೇನೆಂದರೆ, ಒಬ್ಬ ಸಂಗಾತಿಯನ್ನು ಆಯ್ಕೆಮಾಡುವಾಗ, ಯೆಹೋವನ ಸಲಹೆಗೆ ಗಮನಕೊಡಿ.

ದೇವರ ಪ್ರೀತಿಪರ ಮಾರ್ಗದರ್ಶನ

4. ಒಬ್ಬ ವಿವಾಹ ಸಂಗಾತಿಯನ್ನು ಆಯ್ಕೆಮಾಡುವ ವಿಷಯದಲ್ಲಿ ದೇವರು ಯಾವ ಸಹಾಯವನ್ನು ಒದಗಿಸುತ್ತಾನೆ?

4 ಯೆಹೋವನು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಾಗಿರುವುದರಿಂದ, ಆತನು ನಮಗೆ ಪ್ರತಿಯೊಂದು ವಿಷಯದಲ್ಲಿ ಮಾರ್ಗದರ್ಶನವನ್ನು ನೀಡಲು ತನ್ನ ಲಿಖಿತ ವಾಕ್ಯವನ್ನು ಕೊಟ್ಟಿದ್ದಾನೆ. ಆತನು ಹೇಳುವುದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” (ಯೆಶಾಯ 48:17) ಆದುದರಿಂದ, ಒಬ್ಬ ವಿವಾಹ ಸಂಗಾತಿಯನ್ನು ಆಯ್ಕೆಮಾಡುವುದರ ಕುರಿತೂ ಬೈಬಲಿನಲ್ಲಿ ಸಮಯ-ಶೋಧಿತ ಮಾರ್ಗದರ್ಶನವಿರುವುದು ಆಶ್ಚರ್ಯಗೊಳಿಸುವ ಸಂಗತಿಯಾಗಿರುವುದಿಲ್ಲ. ನಮ್ಮ ವಿವಾಹ ಸಂಬಂಧಗಳು ಸಂತೋಷಕರವೂ, ಸದಾಕಾಲ ಬಾಳುವಂಥವೂ ಆಗಿರಬೇಕೆಂಬುದು ಯೆಹೋವನ ಆಶೆ. ಈ ಕಾರಣದಿಂದ, ಆ ಮಾರ್ಗದರ್ಶನವನ್ನು ಅರ್ಥಮಾಡಿಕೊಂಡು, ಅನ್ವಯಿಸಿಕೊಳ್ಳುವಂತೆ ಆತನು ಸಹಾಯವನ್ನೂ ಒದಗಿಸಿದ್ದಾನೆ. ನಮ್ಮ ಅಕ್ಕರೆಯ ಸೃಷ್ಟಿಕರ್ತನು ಹೀಗೆಯೇ ಮಾಡುವಂತೆ ನಾವು ನಿರೀಕ್ಷಿಸುತ್ತೇವಲ್ಲವೊ?​—ಕೀರ್ತನೆ 19:8.

5. ವಿವಾಹದಲ್ಲಿ ಯಾವಾಗಲೂ ಸಂತೋಷವು ಇರಬೇಕಾದರೆ ಏನು ಅತ್ಯಾವಶ್ಯಕ?

5 ಯೆಹೋವನು ವಿವಾಹದ ಏರ್ಪಾಡನ್ನು ಸ್ಥಾಪಿಸಿದಾಗ, ಅದು ಶಾಶ್ವತವಾಗಿ ಇರಬೇಕಾದ ಬಂಧವಾಗಿರಬೇಕೆಂದು ಉದ್ದೇಶಿಸಿದನು. (ಮಾರ್ಕ 10:​6-12; 1 ಕೊರಿಂಥ 7:​10, 11) ಆದುದರಿಂದಲೇ ಆತನು ‘ವಿಚ್ಛೇದವನ್ನು ಹಗೆಮಾಡುತ್ತಾನೆ.’ ಕೇವಲ “ವ್ಯಭಿಚಾರ”ದ ಆಧಾರದ ಮೇಲೆ ಆತನು ವಿಚ್ಛೇದವನ್ನು ಅನುಮತಿಸುತ್ತಾನೆ. (ಮಲಾಕಿಯ 2:​13-16, NW; ಮತ್ತಾಯ 19:9) ಹೀಗಿರುವುದರಿಂದ, ಒಬ್ಬ ವಿವಾಹ ಸಂಗಾತಿಯನ್ನು ಆಯ್ಕೆಮಾಡುವುದು ನಾವು ತೆಗೆದುಕೊಳ್ಳುವ ತುಂಬ ಗಂಭೀರವಾದ ಹೆಜ್ಜೆಯಾಗಿದೆ. ಅದನ್ನು ಹಗುರವಾಗಿ ತೆಗೆದುಕೊಳ್ಳಬಾರದು. ನಮಗೆ ಒಂದೋ ಸಂತೋಷವನ್ನು ಇಲ್ಲವೇ ದುಃಖವನ್ನು ತರುವ ಸಾಧ್ಯತೆಯಿರುವ ಕೆಲವೇ ನಿರ್ಣಯಗಳಲ್ಲಿ ಇದು ಒಂದಾಗಿದೆ. ಒಂದು ಒಳ್ಳೆಯ ಆಯ್ಕೆಯನ್ನು ಮಾಡುವಲ್ಲಿ ಅದು ನಮ್ಮ ಜೀವಿತದ ಸೊಬಗನ್ನು ಹೆಚ್ಚಿಸಬಲ್ಲದು, ಆದರೆ ಕೆಟ್ಟ ಆಯ್ಕೆಯು ಕೊನೆಯಿಲ್ಲದಷ್ಟು ದುಃಖವನ್ನು ತರಬಲ್ಲದು. (ಜ್ಞಾನೋಕ್ತಿ 21:19; 26:21) ಸಂತೋಷವು ಮುಂದುವರಿಯಬೇಕಾದರೆ, ಬುದ್ಧಿವಂತಿಕೆಯ ಆಯ್ಕೆಯನ್ನು ಮಾಡುವುದು ಮತ್ತು ಶಾಶ್ವತವಾದ ಬದ್ಧತೆಗಾಗಿ ಸಿದ್ಧರಾಗಿರುವುದು ಅತ್ಯಾವಶ್ಯಕ. ಏಕೆಂದರೆ, ವಿವಾಹವು ಸಾಮರಸ್ಯ ಮತ್ತು ಸಹಕಾರದಿಂದ ಹಸನಾಗಿ ಬೆಳೆಯುವ ಒಂದು ಸಹಭಾಗಿತ್ವವಾಗಿರುವಂತೆ ದೇವರು ಏರ್ಪಡಿಸಿದನು.​—ಮತ್ತಾಯ 19:6.

6. ವಿಶೇಷವಾಗಿ ಯುವ ಸ್ತ್ರೀಪುರುಷರು ಒಬ್ಬ ಸಂಗಾತಿಯನ್ನು ಆಯ್ಕೆಮಾಡುವಾಗ ಜಾಗರೂಕರಾಗಿರಬೇಕು ಏಕೆ, ಮತ್ತು ಅವರು ಅತ್ಯಂತ ವಿವೇಕಯುತವಾದ ನಿರ್ಣಯವನ್ನು ಹೇಗೆ ಮಾಡಬಲ್ಲರು?

6 ವಿಶೇಷವಾಗಿ ಯುವ ಪುರುಷರು ಮತ್ತು ಸ್ತ್ರೀಯರು ಒಬ್ಬ ಸಂಗಾತಿಯನ್ನು ಆಯ್ಕೆಮಾಡುವಾಗ, ದೈಹಿಕ ಆಕರ್ಷಣೆ ಮತ್ತು ಹಠಾತ್ತಾದ ಭಾವನಾತ್ಮಕ ಆವೇಗವು ಅವರ ತೀರ್ಮಾನಮಾಡುವಿಕೆಯಲ್ಲಿ ಅವರನ್ನು ಕುರುಡುಗೊಳಿಸದಂತೆ ಜಾಗ್ರತೆ ವಹಿಸಬೇಕು. ಕೇವಲ ಅಂಥ ಅಂಶಗಳ ಮೇಲೆ ಆಧಾರಿಸಲ್ಪಟ್ಟಿರುವ ಸಂಬಂಧವನ್ನು ಬೇಗನೆ ತಿರಸ್ಕಾರ ಅಥವಾ ದ್ವೇಷವು ಶಿಥಿಲಗೊಳಿಸಬಲ್ಲದು. (2 ಸಮುವೇಲ 13:15) ಆದರೆ ಇನ್ನೊಂದು ಕಡೆ, ನಾವು ನಮ್ಮ ಸಂಗಾತಿಯನ್ನು ಚೆನ್ನಾಗಿ ತಿಳಿದುಕೊಳ್ಳುವಾಗ, ಮತ್ತು ಸ್ವತಃ ನಮ್ಮನ್ನೇ ಹೆಚ್ಚು ಅರ್ಥಮಾಡಿಕೊಳ್ಳುವಾಗ ಶಾಶ್ವತವಾದ ಪ್ರೀತಿಯನ್ನು ಬೆಳೆಸಿಕೊಳ್ಳಸಾಧ್ಯವಿದೆ. ನಮಗೇನು ಹಿತಕರವೊ ಅದನ್ನೇ ನಮ್ಮ ಹೃದಯವು ಆರಂಭದಲ್ಲಿ ಆಶಿಸಲಿಕ್ಕಿಲ್ಲವೆಂಬುದನ್ನು ನಾವು ಚೆನ್ನಾಗಿ ಗ್ರಹಿಸಬೇಕು. (ಯೆರೆಮೀಯ 17:9) ಆದುದರಿಂದಲೇ ಬೈಬಲಿನಲ್ಲಿರುವ ದೈವಿಕ ಮಾರ್ಗದರ್ಶನವು ಅಷ್ಟು ಪ್ರಾಮುಖ್ಯವಾಗಿದೆ. ನಮ್ಮ ಜೀವಿತದಲ್ಲಿ ನಾವು ವಿವೇಕಯುತವಾದ ನಿರ್ಣಯಗಳನ್ನು ಹೇಗೆ ಮಾಡಬಹುದೆಂಬುದನ್ನು ವಿವೇಚಿಸುವಂತೆ ಅದು ನಮಗೆ ಸಹಾಯಮಾಡುತ್ತದೆ. ಯೆಹೋವನೇ ಹೇಳುತ್ತಿದ್ದಾನೊ ಎಂಬಂತೆ ಕೀರ್ತನೆಗಾರನು ಹೇಳುವುದು: “ನಿನಗೆ ಜೀವ ಮಾರ್ಗವನ್ನು ಉಪದೇಶಿಸಿ, ಮಾರ್ಗದರ್ಶನ ನೀಡುವೆನು; ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.” (ಕೀರ್ತನೆ 32:8, ಪರಿಶುದ್ಧ ಬೈಬಲ್‌; ಇಬ್ರಿಯ 4:12) ಪ್ರೀತಿ ಹಾಗೂ ಒಡನಾಟಕ್ಕಾಗಿರುವ ನಮ್ಮ ಸ್ವಭಾವಸಿದ್ಧ ಆವಶ್ಯಕತೆಯನ್ನು ವಿವಾಹವು ಪೂರೈಸಬಲ್ಲದು ನಿಜ. ಆದರೆ ಅದೇ ಸಮಯದಲ್ಲಿ, ಅದು ಪ್ರೌಢತೆ ಮತ್ತು ವಿವೇಚನಾಶಕ್ತಿಯನ್ನು ಅಗತ್ಯಪಡಿಸುವ ಸವಾಲುಗಳನ್ನೂ ಒಡ್ಡುತ್ತದೆ.

7. ಒಬ್ಬ ಸಂಗಾತಿಯನ್ನು ಆಯ್ಕೆಮಾಡುವುದರ ಕುರಿತಾದ ಬೈಬಲ್‌ ಆಧಾರಿತ ಸಲಹೆಯನ್ನು ಕೆಲವರು ಏಕೆ ಸ್ವೀಕರಿಸುವುದಿಲ್ಲ, ಮತ್ತು ಇದು ಎಲ್ಲಿಗೆ ನಡೆಸಸಾಧ್ಯವಿದೆ?

7 ಒಬ್ಬ ಸಂಗಾತಿಯನ್ನು ಆಯ್ಕೆಮಾಡುವುದರ ಕುರಿತು, ವಿವಾಹದ ಮೂಲಕರ್ತನು ಏನು ಹೇಳುತ್ತಾನೊ ಅದಕ್ಕೆ ಗಮನಕೊಡುವುದು ಬುದ್ಧಿವಂತಿಕೆಯಾಗಿದೆ. ಆದರೂ ಹೆತ್ತವರು ಅಥವಾ ಕ್ರೈಸ್ತ ಹಿರಿಯರು ಬೈಬಲ್‌ ಆಧಾರಿತ ಸಲಹೆಯನ್ನು ಕೊಡುವಾಗ ನಾವದನ್ನು ಅಲಕ್ಷಿಸುವ ಸಂಭವನೀಯತೆ ಇದೆ. ಅವರಿಗೆ ನಮ್ಮ ಭಾವನೆಗಳು ಅರ್ಥವಾಗುವುದಿಲ್ಲವೆಂದು ನಮಗನಿಸಬಹುದು. ಮತ್ತು ನಮ್ಮಲ್ಲಿರುವ ಬಲವಾದ ಭಾವನಾತ್ಮಕ ಬಯಕೆಗಳು, ನಾವು ನಮ್ಮ ಹೃದಯವು ಹೇಳಿದಂತೆ ನಡೆದುಕೊಳ್ಳುವಂತೆ ಒತ್ತಾಯಿಸಬಹುದು. ಆದರೆ ಮುಂದೆ ನಾವು ದೈನಂದಿನ ಜೀವಿತದ ಕಹಿ ಸತ್ಯಗಳನ್ನು ಎದುರಿಸುವಾಗ, ಅವರು ನಮ್ಮ ಒಳ್ಳೇದಕ್ಕಾಗಿಯೇ ಕೊಟ್ಟಂಥ ಸಲಹೆಯನ್ನು ಪಾಲಿಸಲಿಲ್ಲವಲ್ಲ ಎಂದು ನಾವು ವಿಷಾದಿಸಬಹುದು. (ಜ್ಞಾನೋಕ್ತಿ 23:19; 28:26) ಪರಾಮರಿಸಲು ಕಷ್ಟವಾಗಿರುವಂಥ ಮಕ್ಕಳು ಮತ್ತು ಬಹುಶಃ ಒಬ್ಬ ಅವಿಶ್ವಾಸಿ ಸಂಗಾತಿಯೂ ನಮಗಿದ್ದು, ನಾವು ಪ್ರೀತಿರಹಿತ ದಾಂಪತ್ಯದಲ್ಲಿ ಸಿಲುಕಿಕೊಳ್ಳಬಹುದು. ನಮಗೆ ತುಂಬ ಸಂತೋಷವನ್ನು ತರಸಾಧ್ಯವಿದ್ದ ಏರ್ಪಾಡು, ನಮ್ಮ ಸಂಕಟದ ಮೂಲವಾಗಿ ಪರಿಣಮಿಸುವುದಾದರೆ, ಅದೆಷ್ಟು ದುಃಖಕರ ಸಂಗತಿಯಾಗಿರುವುದು!

ದೈವಿಕ ಭಕ್ತಿ​—ಪ್ರಾಮುಖ್ಯ ಅಂಶ

8. ಒಂದು ವಿವಾಹವು ಬಾಳುವಂತೆ ಮತ್ತು ಸಂತೋಷವನ್ನು ತರುವಂತೆ ದೈವಿಕ ಭಕ್ತಿಯು ಹೇಗೆ ಸಹಾಯಮಾಡುತ್ತದೆ?

8 ಸ್ತ್ರೀಪುರುಷರಲ್ಲಿರುವ ಪರಸ್ಪರ ಆಕರ್ಷಣೆ, ವಿವಾಹವನ್ನು ಬಲಪಡಿಸಲು ಸಹಾಯಮಾಡುತ್ತದೆಂಬುದು ಒಪ್ಪತಕ್ಕ ಮಾತು. ಆದರೆ, ವಿವಾಹ ಬಂಧವು ಬಾಳಬೇಕಾದರೆ ಮತ್ತು ಸಂತೋಷವನ್ನು ತರಬೇಕಾದರೆ, ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ ಇಬ್ಬರಲ್ಲೂ ಸಮಾನವಾದ ಮೌಲ್ಯಗಳಿರಬೇಕು. ಇಬ್ಬರಿಗೂ ಯೆಹೋವ ದೇವರ ಕಡೆಗೆ ಭಕ್ತಿ ಇರುವಾಗ, ಅದು ಬೇರಾವುದೇ ಅಂಶಕ್ಕಿಂತಲೂ ಹೆಚ್ಚಾಗಿ ಶಾಶ್ವತವಾದ ಒಂದು ಬಂಧವನ್ನು ಹೆಣೆಯುತ್ತದೆ ಮತ್ತು ಐಕ್ಯತೆಗೆ ನೆರವಾಗುತ್ತದೆ. (ಪ್ರಸಂಗಿ 4:12) ಒಬ್ಬ ಕ್ರೈಸ್ತ ದಂಪತಿಯು ತಮ್ಮ ಜೀವಿತಗಳನ್ನು ಯೆಹೋವನ ಸತ್ಯಾರಾಧನೆಯ ಮೇಲೆ ಕೇಂದ್ರೀಕರಿಸುವಾಗ, ಅವರು ಆತ್ಮಿಕವಾಗಿ, ಮಾನಸಿಕವಾಗಿ ಮತ್ತು ನೈತಿಕವಾಗಿ ಐಕ್ಯರಾಗಿರುತ್ತಾರೆ. ಅವರು ದೇವರ ವಾಕ್ಯವನ್ನು ಜೊತೆಯಾಗಿ ಅಭ್ಯಾಸಮಾಡುತ್ತಾರೆ, ಜೊತೆಯಾಗಿ ಪ್ರಾರ್ಥನೆಮಾಡುತ್ತಾರೆ, ಮತ್ತು ಇದು ಅವರ ಹೃದಯಗಳನ್ನು ಒಂದುಗೂಡಿಸುತ್ತದೆ. ಅವರು ಜೊತೆಗೂಡಿ ಕ್ರೈಸ್ತ ಕೂಟಗಳಿಗೆ ಹೋಗುತ್ತಾರೆ, ಮತ್ತು ಕ್ಷೇತ್ರ ಸೇವೆಯಲ್ಲಿ ಒಟ್ಟಿಗೆ ಕೆಲಸಮಾಡುತ್ತಾರೆ. ಇದೆಲ್ಲವೂ ಅವರ ನಡುವೆ ಒಂದು ಆತ್ಮಿಕ ಬಂಧವನ್ನು ಬೆಸೆಯುತ್ತದೆ. ಮತ್ತು ಹೀಗೆ ಅವರು ಪರಸ್ಪರ ಇನ್ನೂ ಆಪ್ತರಾಗುತ್ತಾರೆ. ಅದಕ್ಕಿಂತಲೂ ಮಿಗಿಲಾಗಿ, ಅದು ಯೆಹೋವನ ಆಶೀರ್ವಾದವನ್ನು ತರುತ್ತದೆ.

9. ಇಸಾಕನಿಗಾಗಿ ಹೆಂಡತಿಯನ್ನು ಹುಡುಕುವುದರ ಸಂಬಂಧದಲ್ಲಿ ಅಬ್ರಹಾಮನು ಏನು ಮಾಡಿದನು, ಮತ್ತು ಫಲಿತಾಂಶವೇನಾಗಿತ್ತು?

9 ನಂಬಿಗಸ್ತ ಕುಲಪತಿಯಾದ ಅಬ್ರಹಾಮನು ದೈವಿಕ ಭಕ್ತಿಯ ಕಾರಣದಿಂದಲೇ, ತನ್ನ ಮಗನಿಗೆ ಹೆಂಡತಿಯನ್ನು ಆಯ್ಕೆಮಾಡುವ ವಿಷಯದಲ್ಲೂ ದೇವರನ್ನು ಸಂತೋಷಗೊಳಿಸಲು ಪ್ರಯತ್ನಿಸಿದನು. ತನ್ನ ಮನೆವಾರ್ತೆಯಲ್ಲಿನ ಅತಿ ಭರವಸಾರ್ಹನಾದ ಸೇವಕನಿಗೆ ಅಬ್ರಹಾಮನು ಹೀಗಂದನು: “ನಾನು ವಾಸವಾಗಿರುವ ಕಾನಾನ್ಯರಲ್ಲಿ ನೀನು ನನ್ನ ಮಗನಿಗೋಸ್ಕರ ಹೆಣ್ಣನ್ನು ತೆಗೆದುಕೊಳ್ಳದೆ ನನ್ನ ಸ್ವದೇಶಕ್ಕೂ ನನ್ನ ಬಂಧುಗಳ ಬಳಿಗೂ ಹೋಗಿ ಅವರಲ್ಲೇ ನನ್ನ ಮಗನಾದ ಇಸಾಕನಿಗೆ ಹೆಣ್ಣನ್ನು ತೆಗೆದುಕೊಳ್ಳಬೇಕು. . . . ಯೆಹೋವನು ನಿನ್ನ ಮುಂದೆ ತನ್ನ ದೂತನನ್ನು ಕಳುಹಿಸಿ ನೀನು ಅಲ್ಲಿಂದ ನನ್ನ ಮಗನಿಗೋಸ್ಕರ ಹೆಣ್ಣನ್ನು ತೆಗೆದುಕೊಳ್ಳುವಂತೆ ಅನುಕೂಲಮಾಡುವನು.” ರೆಬೆಕ್ಕಳು ಒಬ್ಬ ಸಮರ್ಥ ಹೆಂಡತಿಯಾಗಿ ಪರಿಣಮಿಸಿದಳು, ಮತ್ತು ಇಸಾಕನು ಅವಳನ್ನು ತುಂಬ ಪ್ರೀತಿಸಿದನು.​—ಆದಿಕಾಂಡ 24:3, 4, 7, 14-21, 67.

10. ಗಂಡಹೆಂಡತಿಯರಿಗೆ ಯಾವ ಶಾಸ್ತ್ರೀಯ ಹಂಗುಗಳು ಇವೆ?

10 ಒಂದುವೇಳೆ ನಾವು ಅವಿವಾಹಿತ ಕ್ರೈಸ್ತರಾಗಿರುವಲ್ಲಿ, ವಿವಾಹಕ್ಕಾಗಿರುವ ಶಾಸ್ತ್ರೀಯ ಆವಶ್ಯಕತೆಗಳನ್ನು ತಲಪಲು ನಮ್ಮನ್ನು ಶಕ್ತಗೊಳಿಸುವ ಗುಣಗಳನ್ನು ವಿಕಸಿಸಿಕೊಳ್ಳುವಂತೆ ದೈವಿಕ ಭಕ್ತಿಯು ನಮಗೆ ಸಹಾಯಮಾಡುವುದು. ಗಂಡಹೆಂಡತಿಯರ ಕರ್ತವ್ಯಗಳ ಕುರಿತು ತಿಳಿಸುವಾಗ ಅಪೊಸ್ತಲ ಪೌಲನು ಹೀಗಂದನು: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. . . . ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು. . . . ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. . . . ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು.” (ಎಫೆಸ 5:22-33) ಪೌಲನ ಪ್ರೇರಿತ ಮಾತುಗಳು, ಪ್ರೀತಿ ಹಾಗೂ ಗೌರವದ ಅಗತ್ಯಕ್ಕೆ ಒತ್ತನ್ನು ಕೊಡುತ್ತವೆಂಬುದನ್ನು ನಾವು ನೋಡಸಾಧ್ಯವಿದೆ. ಈ ಸಲಹೆಗೆ ಅನುಗುಣವಾಗಿ ನಡೆಯಲಿಕ್ಕಾಗಿ, ಯೆಹೋವನ ಕಡೆಗೆ ಪೂಜ್ಯಭಾವನೆಯ ಭಯವು ಬೇಕಾಗಿದೆ. ಸುಖದುಃಖದಲ್ಲಿಯೂ ಮನಃಪೂರ್ವಕವಾದ ಬದ್ಧತೆಯು ಆವಶ್ಯಕ. ಮದುವೆಯಾಗಲು ಯೋಚಿಸುತ್ತಿರುವ ಕ್ರೈಸ್ತರು ಈ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಶಕ್ತರಾಗಿರಬೇಕು.

ಯಾವಾಗ ಮದುವೆಯಾಗಬೇಕೆಂಬುದನ್ನು ನಿರ್ಣಯಿಸುವುದು

11. (ಎ) ಯಾವಾಗ ಮದುವೆಯಾಗಬೇಕೆಂಬುದರ ಕುರಿತಾಗಿ ಶಾಸ್ತ್ರವಚನಗಳಲ್ಲಿ ಯಾವ ಸಲಹೆಯು ಕೊಡಲ್ಪಟ್ಟಿದೆ? (ಬಿ) 1 ಕೊರಿಂಥ 7:36ರಲ್ಲಿ ದಾಖಲಿಸಲ್ಪಟ್ಟಿರುವ ಬೈಬಲಿನ ಸಲಹೆಯನ್ನು ಅನುಸರಿಸುವುದು ವಿವೇಕಯುತವೆಂದು ಯಾವ ಉದಾಹರಣೆಯು ತೋರಿಸುತ್ತದೆ?

11 ನಾವು ಯಾವಾಗ ಮದುವೆಯಾಗಲು ಸಿದ್ಧರಾಗಿದ್ದೇವೆಂಬುದನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಒಬ್ಬ ವ್ಯಕ್ತಿಯು ಒಂದು ವಯಸ್ಸಿನಲ್ಲಿ ಮದುವೆಯಾಗಲು ಸಿದ್ಧನಾಗಿರಬಹುದು, ಆದರೆ ಇನ್ನೊಬ್ಬನು ಅದೇ ವಯಸ್ಸಿನಲ್ಲಿ ಮದುವೆಗೆ ಸಿದ್ಧನಾಗಿರಲಿಕ್ಕಿಲ್ಲ. ಆದುದರಿಂದ ಇಂತಿಷ್ಟೇ ಪ್ರಾಯದಲ್ಲಿ ಮದುವೆಯಾಗಬೇಕೆಂದು ಶಾಸ್ತ್ರವಚನಗಳು ಹೇಳುವುದಿಲ್ಲ. ಆದರೆ, ಒಳ್ಳೆಯ ನಿರ್ಣಯವನ್ನು ಮಾಡುವುದರಲ್ಲಿ ನಮ್ಮನ್ನು ಕುರುಡುಗೊಳಿಸಸಾಧ್ಯವಿರುವ ಬಲವಾದ ಲೈಂಗಿಕ ಬಯಕೆಗಳುಳ್ಳ ‘ಪ್ರಾಯ ಕಳೆದುಹೋಗುವ’ ವರೆಗೆ ಕಾಯುವುದು ಉತ್ತಮ. (1 ಕೊರಿಂಥ 7:36) “ನನ್ನ ಸ್ನೇಹಿತೆಯರು, ಅನೇಕರು ತಮ್ಮ ಹದಿಪ್ರಾಯದಲ್ಲೇ ಡೇಟಿಂಗ್‌ ಮಾಡಿ ಮದುವೆಯಾಗುತ್ತಿರುವುದನ್ನು ನೋಡುವಾಗ, ನನಗೆ ಈ ಸಲಹೆಯನ್ನು ಅನ್ವಯಿಸುವುದು ಕಷ್ಟಕರವಾಗಿತ್ತು,” ಎಂದು ಮಿಶೆಲ್‌ ಹೇಳುತ್ತಾಳೆ. “ಆದರೆ ಈ ಸಲಹೆಯು ಯೆಹೋವನಿಂದ ಬಂದಿರುತ್ತದೆ, ಮತ್ತು ಆತನು ಹೇಳುವಂಥ ವಿಷಯಗಳು ನಮಗೆ ಪ್ರಯೋಜನಕರವಾಗಿರುತ್ತವೆ ಎಂಬುದನ್ನು ನಾನು ಗ್ರಹಿಸಿದೆ. ಮದುವೆಯಾಗಲು ಕಾಯುವ ಮೂಲಕ, ನಾನು ಯೆಹೋವನೊಂದಿಗಿನ ನನ್ನ ಸಂಬಂಧಕ್ಕೆ ಹೆಚ್ಚು ಗಮನವನ್ನು ಕೊಡಲು ಮತ್ತು ಜೀವನದಲ್ಲಿ ಸ್ವಲ್ಪ ಅನುಭವವನ್ನು ಗಳಿಸಲು ಶಕ್ತಳಾದೆ. ಈ ರೀತಿಯ ಅನುಭವವು ಹದಿಪ್ರಾಯದಲ್ಲಿ ನಮಗಿರುವುದಿಲ್ಲ. ಕೆಲವೊಂದು ವರ್ಷಗಳ ನಂತರ, ವಿವಾಹದಲ್ಲಿನ ಜವಾಬ್ದಾರಿಗಳನ್ನೂ ಏಳುವಂಥ ಸಮಸ್ಯೆಗಳನ್ನೂ ನಿರ್ವಹಿಸಲು ನಾನು ಹೆಚ್ಚು ಸಿದ್ಧಳಾಗಿದ್ದೆ.”

12. ತೀರ ಎಳೆಯರಾಗಿರುವಾಗಲೇ ಮದುವೆಯಾಗುವುದು ಏಕೆ ವಿವೇಕಯುತವಲ್ಲ?

12 ತೀರ ಎಳೆಯ ಪ್ರಾಯದಲ್ಲೇ ಮದುವೆಯಾಗಲು ಅವಸರಪಡುವವರು, ತಾವು ಪ್ರೌಢರಾಗುತ್ತಾ ಹೋದಂತೆ ತಮ್ಮ ಅಗತ್ಯಗಳು ಮತ್ತು ಬಯಕೆಗಳು ಬದಲಾಗುತ್ತಿರುವುದನ್ನು ಗ್ರಹಿಸುತ್ತಾರೆ. ಆರಂಭದಲ್ಲಿ ಅವರಿಗೆ ಅಷ್ಟೊಂದು ಅಪೇಕ್ಷಣೀಯವಾಗಿದ್ದಂಥ ಸಂಗತಿಗಳು, ಕಾಲಕ್ರಮೇಣ ಅಪ್ರಾಮುಖ್ಯವಾಗಿ ಪರಿಣಮಿಸುತ್ತವೆ. ಒಬ್ಬ ಕ್ರೈಸ್ತ ಯುವತಿಯು, 16ನೆಯ ವಯಸ್ಸಿನಲ್ಲೇ ಮದುವೆಯಾಗಬೇಕೆಂದು ಮನಸ್ಸುಮಾಡಿದಳು. ಅವಳ ಅಜ್ಜಿ, ಮತ್ತು ಅವಳ ತಾಯಿ ಸಹ ಅದೇ ಪ್ರಾಯದಲ್ಲಿ ಮದುವೆಯಾಗಿದ್ದರು. ಆದರೆ, ಅವಳಿಗೆ ಯಾರ ಮೇಲೆ ಮನಸ್ಸಿತ್ತೊ ಆ ಯುವಕನು ಆ ಸಮಯದಲ್ಲಿ ಅವಳನ್ನು ಮದುವೆಯಾಗಲು ಒಪ್ಪಲಿಲ್ಲ. ಆದುದರಿಂದ, ತನ್ನನ್ನು ಮದುವೆಯಾಗಲು ಸಿದ್ಧನಾಗಿದ್ದ ಇನ್ನೊಬ್ಬ ವ್ಯಕ್ತಿಯನ್ನು ಅವಳು ಮದುವೆಯಾದಳು. ಆದರೆ, ಅವಸರದಿಂದ ತೆಗೆದುಕೊಂಡ ಆ ನಿರ್ಣಯಕ್ಕಾಗಿ ಅವಳು ತದನಂತರ ತನ್ನ ಜೀವನದಲ್ಲಿ ಬಹಳಷ್ಟು ವಿಷಾದಿಸಿದಳು.

13. ತಕ್ಕ ಕಾಲಕ್ಕೆ ಮುಂಚೆ ಮದುವೆಯಾಗುವವರಲ್ಲಿ ಯಾವ ಕೊರತೆಯಿರುತ್ತದೆ?

13 ವಿವಾಹವಾಗುವುದರ ಕುರಿತಾಗಿ ಯೋಚಿಸುವಾಗ, ಅದರಲ್ಲಿ ಒಳಗೂಡಿರುವ ಎಲ್ಲ ವಿಷಯಗಳ ಬಗ್ಗೆ ಪ್ರೌಢ ತಿಳಿವಳಿಕೆ ಇರುವುದು ತುಂಬ ಪ್ರಾಮುಖ್ಯ. ತಕ್ಕ ಕಾಲಕ್ಕೆ ಮುಂಚೆಯೇ ಮದುವೆಯಾಗುವುದು, ಅನೇಕಾನೇಕ ಸಮಸ್ಯೆಗಳನ್ನು ಬರಮಾಡುವುದು. ಮತ್ತು ಯುವಪ್ರಾಯದ ದಂಪತಿಗೆ ಇವುಗಳನ್ನು ನಿಭಾಯಿಸಲು ಸಾಧ್ಯವಾಗಲಿಕ್ಕಿಲ್ಲ. ವಿವಾಹ ಜೀವನ ಮತ್ತು ಮಕ್ಕಳನ್ನು ಬೆಳೆಸುವುದರಲ್ಲಿ ಒಳಗೂಡಿರುವ ಮಾನಸಿಕ ಒತ್ತಡಗಳನ್ನು ನಿಭಾಯಿಸಲು ಬೇಕಾಗಿರುವ ಅನುಭವ ಮತ್ತು ಪ್ರೌಢತೆ ಅವರಲ್ಲಿ ಇಲ್ಲದಿರಬಹುದು. ಶಾಶ್ವತವಾದ ಸಹಭಾಗಿತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿಕ್ಕಾಗಿ ನಾವು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆತ್ಮಿಕವಾಗಿ ಸಿದ್ದರಾಗಿರುವಾಗ ಮಾತ್ರ ವಿವಾಹವಾಗಬೇಕು.

14. ವಿವಾಹ ಜೀವನದಲ್ಲಿ ಒತ್ತಡಭರಿತ ಸನ್ನಿವೇಶಗಳನ್ನು ನಿರ್ವಹಿಸಲಿಕ್ಕಾಗಿ ಯಾವುದರ ಅಗತ್ಯವಿದೆ?

14 ಮದುವೆಯಾಗುವವರಿಗೆ, “ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು” ಎಂದು ಪೌಲನು ಬರೆದನು. (1 ಕೊರಿಂಥ 7:28) ಇಬ್ಬರೂ ಬೇರೆ ಬೇರೆ ವ್ಯಕ್ತಿತ್ವವುಳ್ಳವರಾಗಿರುವುದರಿಂದ ಖಂಡಿತವಾಗಿಯೂ ಸಮಸ್ಯೆಗಳು ಏಳುವವು ಮತ್ತು ದೃಷ್ಟಿಕೋನಗಳೂ ಭಿನ್ನವಾಗಿರುವವು. ಅಷ್ಟುಮಾತ್ರವಲ್ಲದೆ, ಮಾನವ ಅಪರಿಪೂರ್ಣತೆಯ ಕಾರಣ ವಿವಾಹದ ಏರ್ಪಾಡಿನಲ್ಲಿ ನಮಗಿರುವ ಶಾಸ್ತ್ರೀಯ ಪಾತ್ರವನ್ನು ಪೂರೈಸುವುದೂ ಕಷ್ಟಕರವಾಗಿರಬಹುದು. (1 ಕೊರಿಂಥ 11:3; ಕೊಲೊಸ್ಸೆ 3:​18, 19; ತೀತ 2:​4, 5; 1 ಪೇತ್ರ 3:​1, 2, 7) ಒತ್ತಡಭರಿತ ಸನ್ನಿವೇಶಗಳನ್ನು ಪ್ರೀತಿಯಿಂದ ಸ್ತಿಮಿತಕ್ಕೆ ತರುವಂತೆ ದೈವಿಕ ಮಾರ್ಗದರ್ಶನವನ್ನು ಹುಡುಕಿ ಅನುಸರಿಸಲು ಪ್ರೌಢತೆ ಮತ್ತು ಆತ್ಮಿಕ ಸ್ಥಿರತೆ ಬೇಕಾಗುತ್ತದೆ.

15. ತಮ್ಮ ಮಕ್ಕಳನ್ನು ವಿವಾಹಕ್ಕಾಗಿ ಸಿದ್ಧಗೊಳಿಸುವುದರಲ್ಲಿ ಹೆತ್ತವರು ಯಾವ ಪಾತ್ರವನ್ನು ವಹಿಸಬಲ್ಲರು? ದೃಷ್ಟಾಂತಿಸಿರಿ.

15 ಹೆತ್ತವರು ತಮ್ಮ ಮಕ್ಕಳನ್ನು ವಿವಾಹಕ್ಕಾಗಿ ಸಿದ್ಧಗೊಳಿಸಬಲ್ಲರು. ಹೇಗೆ? ದೈವಿಕ ಮಾರ್ಗದರ್ಶನವನ್ನು ಅನುಸರಿಸುವುದರ ಮಹತ್ವವನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವ ಮೂಲಕವೇ. ಶಾಸ್ತ್ರವಚನಗಳು ಹಾಗೂ ಕ್ರೈಸ್ತ ಪ್ರಕಾಶನಗಳನ್ನು ನಿಪುಣತೆಯಿಂದ ಉಪಯೋಗಿಸುವ ಮೂಲಕ, ತಮ್ಮ ಮಕ್ಕಳು ಅಥವಾ ಅವರ ಭಾವೀ ಸಂಗಾತಿಗಳು ವಿವಾಹದ ವಚನಬದ್ಧತೆಗೆ ಸಿದ್ಧರಾಗಿದ್ದಾರೊ ಇಲ್ಲವೊ ಎಂಬುದನ್ನು ನಿರ್ಧರಿಸಲು ಅವರಿಗೆ ಸಹಾಯಮಾಡಬಹುದು. * ಹದಿನೆಂಟು ವರ್ಷ ಪ್ರಾಯದ ಬ್ಲಾಸಮ್‌ ಎಂಬುವವಳು, ತನ್ನ ಸಭೆಯಲ್ಲಿದ್ದ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದೇನೆಂದು ಭಾವಿಸಿದಳು. ಅವನೊಬ್ಬ ಪೂರ್ಣ ಸಮಯದ ಶುಶ್ರೂಷಕನಾಗಿದ್ದನು, ಮತ್ತು ಅವರಿಬ್ಬರೂ ವಿವಾಹವಾಗಲು ಬಯಸಿದರು. ಆದರೆ ಅವಳು ಇನ್ನೂ ಚಿಕ್ಕವಳಾಗಿರುವುದರಿಂದ, ಇನ್ನೂ ಒಂದು ವರ್ಷ ಕಾಯುವಂತೆ ಅವಳ ಹೆತ್ತವರು ಕೇಳಿಕೊಂಡರು. ತದನಂತರ ಬ್ಲಾಸಮ್‌ ಹೀಗೆ ಬರೆದಳು: “ಆ ವಿವೇಕಯುತ ಸಲಹೆಗೆ ನಾನು ಕಿವಿಗೊಟ್ಟದ್ದಕ್ಕಾಗಿ ಬಹು ಕೃತಜ್ಞಳು. ಒಂದು ವರ್ಷದ ನಂತರ ನಾನು ಇನ್ನೂ ಪ್ರೌಢಳಾದಾಗ, ಒಬ್ಬ ಒಳ್ಳೆ ವಿವಾಹ ಸಂಗಾತಿಯಾಗುವ ಗುಣಲಕ್ಷಣಗಳು ಆ ಯುವಕನಲ್ಲಿಲ್ಲ ಎಂಬುದು ನನಗೆ ಮನದಟ್ಟಾಗತೊಡಗಿತು. ಕಟ್ಟಕಡೆಗೆ ಅವನು ಯೆಹೋವನ ಸಂಸ್ಥೆಯನ್ನು ಬಿಟ್ಟುಹೋದನು, ಮತ್ತು ನಾನು ನನ್ನ ಜೀವನದಲ್ಲಿ ಯಾವುದು ಒಂದು ದುರಂತವಾಗಬಹುದಿತ್ತೊ ಅದರಿಂದ ಪಾರಾದೆ. ಯಾರ ತೀರ್ಮಾನದ ಮೇಲೆ ಆತುಕೊಳ್ಳಸಾಧ್ಯವೋ ಅಂಥ ವಿವೇಕಯುತ ಹೆತ್ತವರಿರುವುದು ಅದೆಷ್ಟು ಅದ್ಭುತಕರ!”

‘ಕರ್ತನಲ್ಲಿ ಮಾತ್ರ ವಿವಾಹವಾಗಿ’

16. (ಎ) ‘ಕರ್ತನಲ್ಲಿ ಮಾತ್ರ ವಿವಾಹವಾಗುವ’ ವಿಷಯದಲ್ಲಿ ಕ್ರೈಸ್ತರು ಹೇಗೆ ಪರೀಕ್ಷೆಗೊಳಗಾಗಬಹುದು? (ಬಿ) ಒಬ್ಬ ಅವಿಶ್ವಾಸಿ ವ್ಯಕ್ತಿಯನ್ನು ಮದುವೆಯಾಗುವ ಒತ್ತಡಕ್ಕೆ ಒಳಗಾಗುವಾಗ, ಕ್ರೈಸ್ತರು ಯಾವುದರ ಕುರಿತಾಗಿ ಯೋಚಿಸಬೇಕು?

16 ಕ್ರೈಸ್ತರಿಗಾಗಿ ಯೆಹೋವನು ಕೊಟ್ಟಿರುವ ನಿರ್ದೇಶನವು ತುಂಬ ಸ್ಪಷ್ಟವಾಗಿದೆ: ‘ಕರ್ತನಲ್ಲಿ ಮಾತ್ರ ವಿವಾಹವಾಗಿ.’ (1 ಕೊರಿಂಥ 7:​39, NW) ಈ ವಿಷಯದಲ್ಲಿ ಕ್ರೈಸ್ತ ಹೆತ್ತವರು ಮತ್ತು ಮಕ್ಕಳು ಪರೀಕ್ಷೆಗೊಳಗಾಗಬಹುದು. ಹೇಗೆ? ಯುವಕ ಯುವತಿಯರು ಮದುವೆಯಾಗಲು ಬಯಸುತ್ತಿರುವಾಗ, ಸಭೆಯೊಳಗೆ ಅವರಿಗೆ ಸಂಗಾತಿಗಳು ದೊರೆಯದಿರಬಹುದು. ಕಡಿಮೆಪಕ್ಷ ಅವರಿಗೆ ಹಾಗೆ ತೋರುತ್ತಿರಬಹುದು. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಹುಡುಗರ ಸಂಖ್ಯೆ ಕಡಿಮೆಯಿದ್ದು, ಹುಡುಗಿಯರ ಸಂಖ್ಯೆ ಹೆಚ್ಚಿರಬಹುದು. ಅಥವಾ ಆ ಕ್ಷೇತ್ರದಲ್ಲಿ ತಮಗೆ ಬೇಕಾದಂಥ ರೀತಿಯ ಜೋಡಿಯು ಇಲ್ಲದಿರುವಂತೆ ತೋರಬಹುದು. ಆದುದರಿಂದ, ಸಭೆಯಲ್ಲಿ ಒಬ್ಬ ಸಮರ್ಪಿತ ಸದಸ್ಯನಾಗಿರದಂಥ ಯುವಕನೊಬ್ಬನು, ಒಬ್ಬ ಕ್ರೈಸ್ತ ಹುಡುಗಿಯಲ್ಲಿ (ಅಥವಾ ಒಬ್ಬ ಹುಡುಗಿಯು, ಒಬ್ಬ ಕ್ರೈಸ್ತ ಹುಡುಗನಲ್ಲಿ) ಆಸಕ್ತಿಯನ್ನು ತೋರಿಸುವಾಗ, ಯೆಹೋವನು ಇಟ್ಟಿರುವ ಮಟ್ಟಗಳನ್ನು ಅಲಕ್ಷಿಸಿಬಿಡುವ ಒತ್ತಡ ಅವರ ಮೇಲೆ ಬರಬಹುದು. ಅಂಥ ಪರಿಸ್ಥಿತಿಗಳಲ್ಲಿ, ಅಬ್ರಹಾಮನ ಉದಾಹರಣೆಯ ಕುರಿತಾಗಿ ಯೋಚಿಸುವುದು ಒಳ್ಳೇದು. ದೇವರೊಂದಿಗೆ ಅವನಿಗಿದ್ದ ಒಳ್ಳೇ ಸಂಬಂಧವನ್ನು ಅವನು ಕಾಪಾಡಿಕೊಂಡ ಒಂದು ವಿಧ ಯಾವುದಾಗಿತ್ತು? ತನ್ನ ಮಗನಾದ ಇಸಾಕನು, ಯೆಹೋವನ ಸತ್ಯಾರಾಧಕಳನ್ನೇ ಮದುವೆಯಾಗುವಂತೆ ನೋಡಿಕೊಳ್ಳುವುದೇ ಆಗಿತ್ತು. ಇಸಾಕನು ಸಹ, ತನ್ನ ಮಗನಾದ ಯಾಕೋಬನ ವಿಷಯದಲ್ಲಿ ಹೀಗೆಯೇ ಮಾಡಿದನು. ಇದನ್ನು ಮಾಡಲು, ಸಂಬಂಧಪಟ್ಟವರೆಲ್ಲರೂ ಶ್ರಮಪಡಬೇಕಾಯಿತು. ಆದರೆ ಅದು ದೇವರನ್ನು ಸಂತೋಷಗೊಳಿಸಿತು ಮತ್ತು ಆತನ ಆಶೀರ್ವಾದವನ್ನು ತಂದಿತು.​—ಆದಿಕಾಂಡ 28:​1-4.

17. ಒಬ್ಬ ಅವಿಶ್ವಾಸಿಯೊಂದಿಗೆ ಮದುವೆಯಾಗುವುದು ಏಕೆ ವಿಪತ್ಕಾರಕವಾಗಿರಬಹುದು, ಮತ್ತು ‘ಕರ್ತನಲ್ಲಿ ಮಾತ್ರ ವಿವಾಹವಾಗುವ’ ಅತಿ ಪ್ರಾಮುಖ್ಯ ಕಾರಣವು ಯಾವುದು?

17 ಕೆಲವೊಂದು ಸಂದರ್ಭಗಳಲ್ಲಿ ಆ ಅವಿಶ್ವಾಸಿ ವ್ಯಕ್ತಿಯು ಕಟ್ಟಕಡೆಗೆ ಒಬ್ಬ ಕ್ರೈಸ್ತನಾಗಿ ಪರಿಣಮಿಸಿದ್ದಾನೆಂಬುದು ನಿಜ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅವಿಶ್ವಾಸಿಗಳೊಂದಿಗೆ ನಡೆದಿರುವ ವಿವಾಹಗಳು ವಿಪತ್ಕಾರಕವಾಗಿ ಪರಿಣಮಿಸಿವೆ. ಈ ರೀತಿಯಲ್ಲಿ ಸಮತೆಯಿಲ್ಲದ ನೊಗವನ್ನು ಹೊತ್ತುಕೊಂಡವರಿಗೆ ಒಂದೇ ರೀತಿಯ ನಂಬಿಕೆಗಳು, ಮಟ್ಟಗಳು ಅಥವಾ ಗುರಿಗಳಿರುವುದಿಲ್ಲ. (2 ಕೊರಿಂಥ 6:14) ಇದು ಪರಸ್ಪರ ಸಂವಾದ ಮತ್ತು ವೈವಾಹಿಕ ಸುಖದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಲ್ಲದು. ದೃಷ್ಟಾಂತಕ್ಕಾಗಿ, ಒಂದು ಬಲವರ್ಧಕ ಕೂಟದ ನಂತರ, ಮನೆಗೆ ಹೋಗಿ ತನ್ನ ಅವಿಶ್ವಾಸಿ ಗಂಡನೊಂದಿಗೆ ಆ ಆತ್ಮಿಕ ವಿಷಯಗಳ ಕುರಿತಾಗಿ ಚರ್ಚಿಸಲಾರೆನಲ್ಲ ಎಂಬ ವಿಷಯದಲ್ಲಿ ಒಬ್ಬ ಕ್ರೈಸ್ತ ಸ್ತ್ರೀಯು ತುಂಬ ದುಃಖಿಸಿದಳು. ಆದರೆ ಎಲ್ಲಕ್ಕಿಂತಲೂ ಮಹತ್ವಪೂರ್ಣ ಸಂಗತಿಯು ಯಾವುದೆಂದರೆ, ‘ಕರ್ತನಲ್ಲಿ ಮಾತ್ರ ವಿವಾಹವಾಗುವುದು,’ ಯೆಹೋವನ ಕಡೆಗೆ ನಮ್ಮ ನಿಷ್ಠೆಯ ಸಂಗತಿಯಾಗಿದೆ. ನಾವು ದೇವರ ವಾಕ್ಯಕ್ಕನುಗುಣವಾಗಿ ನಡೆಯುವಾಗ, ನಮ್ಮ ಹೃದಯಗಳು ನಮ್ಮನ್ನು ದೂಷಿಸುವುದಿಲ್ಲ, ಯಾಕೆಂದರೆ ನಾವು “ಆತನ ಎಣಿಕೆಯಲ್ಲಿ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡು”ತ್ತಿದ್ದೇವೆ.​—1 ಯೋಹಾನ 3:​21, 22.

18. ಮದುವೆಯ ಕುರಿತಾಗಿ ಯೋಚಿಸುವಾಗ, ಯಾವ ಪ್ರಮುಖ ವಿಷಯಗಳಿಗೆ ಗಮನವು ಕೊಡಲ್ಪಡಬೇಕು, ಮತ್ತು ಏಕೆ?

18 ವಿವಾಹವಾಗುವುದರ ಕುರಿತು ಯೋಚಿಸುವಾಗ, ಭಾವೀ ಸಂಗಾತಿಯ ಸದ್ಗುಣ ಮತ್ತು ಆತ್ಮಿಕತೆಯ ಕುರಿತು ಮೊದಲು ಆಸಕ್ತಿ ತೋರಿಸಬೇಕು. ಅವನಲ್ಲಿ/ಳಲ್ಲಿ ಒಂದು ಕ್ರೈಸ್ತ ವ್ಯಕ್ತಿತ್ವದೊಂದಿಗೆ, ದೇವರಿಗಾಗಿ ಪ್ರೀತಿ ಮತ್ತು ಆತನಿಗಾಗಿ ಪೂರ್ಣಪ್ರಾಣದ ಭಕ್ತಿಯು ಇದ್ದಲ್ಲಿ, ಅದು ಯಾವುದೇ ಶಾರೀರಿಕ ಆಕರ್ಷಣೆಗಿಂತಲೂ ಎಷ್ಟೋ ಹೆಚ್ಚು ಮಿಗಿಲಾದದ್ದಾಗಿದೆ. ಆತ್ಮಿಕವಾಗಿ ಬಲವಾಗಿರುವ ವಿವಾಹ ಸಂಗಾತಿಗಳಾಗಿರಲು ತಮಗಿರುವ ಕರ್ತವ್ಯವನ್ನು ಗ್ರಹಿಸಿಕೊಂಡು, ಅದನ್ನು ಪೂರೈಸುವವರು ದೈವಿಕ ಸಮ್ಮತಿಯನ್ನು ಪಡೆಯುತ್ತಾರೆ. ಮತ್ತು ಇಬ್ಬರೂ ಸೃಷ್ಟಿಕರ್ತನಿಗೆ ಭಕ್ತಿಯನ್ನು ತೋರಿಸಿ, ಆತನ ಮಾರ್ಗದರ್ಶನವನ್ನು ಯಾವುದೇ ಪ್ರಶ್ನೆಯಿಲ್ಲದೆ ಸ್ವೀಕರಿಸುವಾಗ, ಅದರಿಂದಲೇ ದಂಪತಿಗೆ ಅತ್ಯಂತ ಹೆಚ್ಚಿನ ಬಲವು ಸಿಗುವುದು. ಮತ್ತು ಈ ರೀತಿಯಲ್ಲಿ ಯೆಹೋವನು ಸನ್ಮಾನಿಸಲ್ಪಡುತ್ತಾನೆ. ಅಷ್ಟುಮಾತ್ರವಲ್ಲದೆ, ಬಾಳುವ ಬಾಂಧವ್ಯಕ್ಕೆ ನೆರವು ನೀಡುವಂಥ, ದೃಢವಾದ ಆತ್ಮಿಕ ತಳಪಾಯದ ಮೇಲೆ ವಿವಾಹವು ಕಟ್ಟಲ್ಪಡುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 2 ಫೆಬ್ರವರಿ 15, 1999ರ ಕಾವಲಿನಬುರುಜು ಪತ್ರಿಕೆಯ 4-8ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 15 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.

ನೀವು ಹೇಗೆ ಉತ್ತರಿಸುವಿರಿ?

• ಒಬ್ಬ ಒಳ್ಳೆಯ ವಿವಾಹ ಸಂಗಾತಿಯನ್ನು ಆಯ್ಕೆಮಾಡಲು ದೈವಿಕ ಮಾರ್ಗದರ್ಶನವು ಏಕೆ ಅಗತ್ಯವಾಗಿದೆ?

• ದೈವಿಕ ಭಕ್ತಿಯು ವಿವಾಹದ ಬಂಧವನ್ನು ಹೇಗೆ ಬಲಪಡಿಸುವುದು?

• ಹೆತ್ತವರು ತಮ್ಮ ಮಕ್ಕಳನ್ನು ವಿವಾಹಕ್ಕಾಗಿ ಹೇಗೆ ಸಿದ್ಧಪಡಿಸಬಹುದು?

• ‘ಕರ್ತನಲ್ಲಿ ಮಾತ್ರ ವಿವಾಹ’ವಾಗುವುದು ಏಕೆ ಪ್ರಾಮುಖ್ಯವಾಗಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ನಿಮ್ಮ ಸಂಗಾತಿಯನ್ನು ಆಯ್ಕೆಮಾಡುವಾಗ ದೇವರ ಸಲಹೆಯನ್ನು ಅನ್ವಯಿಸುವುದರಿಂದ ತುಂಬ ಸಂತೋಷವು ಫಲಿಸುವುದು

[ಪುಟ 18ರಲ್ಲಿರುವ ಚಿತ್ರಗಳು]

‘ಕರ್ತನಲ್ಲಿ ಮಾತ್ರ ವಿವಾಹವಾಗು’ವುದರಿಂದ ಹೇರಳವಾದ ಆಶೀರ್ವಾದಗಳು ಸಿಗುತ್ತವೆ