ದೇವರು ಕಷ್ಟಸಂಕಟಕ್ಕೆ ಕೊಟ್ಟಿರುವ ಸಮಯವು ಇನ್ನೇನು ಕೊನೆಗೊಳ್ಳಲಿದೆ
ದೇವರು ಕಷ್ಟಸಂಕಟಕ್ಕೆ ಕೊಟ್ಟಿರುವ ಸಮಯವು ಇನ್ನೇನು ಕೊನೆಗೊಳ್ಳಲಿದೆ
ಇಂದು ಎಲ್ಲ ಕಡೆಗಳಲ್ಲಿಯೂ ಜನರು ಕಷ್ಟಸಂಕಟಗಳಿಂದ ನರಳುತ್ತಿರುವುದನ್ನು ನಾವು ನೋಡಬಹುದು. ಕೆಲವು ಜನರು ಅದನ್ನು ಬೇಕುಬೇಕೆಂದೇ ತಮ್ಮ ಮೇಲೆ ಬರಮಾಡಿಕೊಳ್ಳುತ್ತಾರೆ. ಉದಾಹರಣೆಗೆ, ಅವರು ರತಿರವಾನಿತ ರೋಗಗಳನ್ನು ಪಡೆದುಕೊಳ್ಳುತ್ತಾರೆ ಅಥವಾ ಅಮಲೌಷಧ ಇಲ್ಲವೇ ಮದ್ಯಪಾನದ ದುರುಪಯೋಗ ಇಲ್ಲವೇ ಧೂಮಪಾನದ ದುಷ್ಪರಿಣಾಮಗಳಿಗೆ ಒಳಗಾಗುತ್ತಾರೆ. ಇಲ್ಲವೇ, ನ್ಯೂನವಾದ ತಿನ್ನುವ ಅಭ್ಯಾಸಗಳಿಂದಾಗಿ ಅವರಿಗೆ ಆರೋಗ್ಯದ ಸಮಸ್ಯೆಗಳು ಏಳಬಹುದು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯ ಹಿಡಿತದಲ್ಲಿರದ ಅಂಶಗಳು ಅಥವಾ ಘಟನೆಗಳಿಂದಲೂ, ಅಂದರೆ ಯುದ್ಧ, ಬುಡಕಟ್ಟು ಹಿಂಸಾಚಾರ, ಪಾತಕ, ಬಡತನ, ಕ್ಷಾಮ ಮತ್ತು ರೋಗದಿಂದಲೂ ಕಷ್ಟಸಂಕಟಗಳು ಉಂಟಾಗುತ್ತವೆ. ಮನುಷ್ಯರು ಮೂಲತಃ ನಿಯಂತ್ರಿಸಲಾಗದ ಇನ್ನೊಂದು ಸಂಗತಿಯು, ವಯಸ್ಸಾಗುವಿಕೆ ಮತ್ತು ಮರಣದಿಂದ ಬರುವ ಕಷ್ಟಸಂಕಟವೇ ಆಗಿದೆ.
“ದೇವರು ಪ್ರೀತಿಸ್ವರೂಪಿ” ಎಂದು ಬೈಬಲ್ ನಮಗೆ ಆಶ್ವಾಸನೆ ನೀಡುತ್ತದೆ. (1 ಯೋಹಾನ 4:8) ಹಾಗಾದರೆ, ಒಬ್ಬ ಪ್ರೀತಿಸ್ವರೂಪಿ ದೇವರು ಇಷ್ಟೊಂದು ಶತಮಾನಗಳ ವರೆಗೆ ಈ ಎಲ್ಲ ಕಷ್ಟಸಂಕಟಗಳನ್ನು ಏಕೆ ಅನುಮತಿಸಿದ್ದಾನೆ? ಈ ಪರಿಸ್ಥಿತಿಯನ್ನು ಆತನು ಯಾವಾಗ ಸರಿಪಡಿಸುವನು? ಈ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲಿಕ್ಕಾಗಿ, ಮಾನವರ ಬಗ್ಗೆ ದೇವರ ಉದ್ದೇಶವೇನಾಗಿತ್ತೆಂಬುದನ್ನು ನಾವು ಮೊದಲಾಗಿ ಪರಿಶೀಲಿಸಬೇಕು. ಇದು, ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸಿದ್ದಾನೆ ಮತ್ತು ಅದರ ಕುರಿತು ಆತನು ಏನು ಮಾಡಲಿದ್ದಾನೆಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುವುದು.
ಇಚ್ಛಾ ಸ್ವಾತಂತ್ರ್ಯ ಎಂಬ ವರದಾನ
ದೇವರು ಪ್ರಥಮ ಮನುಷ್ಯನನ್ನು ಸೃಷ್ಟಿಸಿದಾಗ, ಒಂದು ಮಿದುಳಿರುವ ದೇಹಕ್ಕಿಂತಲೂ ಹೆಚ್ಚನ್ನು ರಚಿಸಿದನು. ಆತನು ಆದಾಮಹವ್ವರನ್ನು ಬುದ್ಧಿಯಿಲ್ಲದ ಯಂತ್ರಮಾನವರಂತೆ ಸೃಷ್ಟಿಸಲಿಲ್ಲ. ಆತನು ಅವರಲ್ಲಿ ಇಚ್ಛಾ ಸ್ವಾತಂತ್ರ್ಯದ ಸಾಮರ್ಥ್ಯವನ್ನು ಇಟ್ಟನು. ಮತ್ತು ಅದು ಒಂದು ಅತ್ಯುತ್ಕೃಷ್ಟ ವರದಾನವಾಗಿತ್ತು. ಯಾಕೆಂದರೆ, “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹಳ ಒಳ್ಳೇದಾಗಿತ್ತು.” (ಆದಿಕಾಂಡ 1:31) ಹೌದು, “ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ.” (ಧರ್ಮೋಪದೇಶಕಾಂಡ 32:4) ನಮಗೆಲ್ಲರಿಗೂ ಇಚ್ಛಾ ಸ್ವಾತಂತ್ರ್ಯದ ಈ ವರದಾನವು ಅತ್ಯಮೂಲ್ಯವಾದದ್ದಾಗಿದೆ. ಯಾಕೆಂದರೆ ಯಾವುದೇ ವಿಷಯದ ಕುರಿತು ನಾವು ಸ್ವತಃ ಆಯ್ಕೆಮಾಡಲಾಗದಂಥ ರೀತಿಯಲ್ಲಿ ನಮ್ಮ ಪ್ರತಿಯೊಂದು ವಿಚಾರವನ್ನೂ ಕ್ರಿಯೆಯನ್ನೂ ಬೇರೆ ಯಾರೋ ನಿಯಂತ್ರಿಸುವುದು ನಮಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.
ಆದರೆ ಇಚ್ಛಾ ಸ್ವಾತಂತ್ರ್ಯವೆಂಬ ಈ ಒಳ್ಳೆಯ ವರದಾನವನ್ನು ಉಪಯೋಗಿಸುವುದರಲ್ಲಿ ಯಾವುದೇ ಮಿತಿಗಳಿರಲಿಲ್ಲವೊ? ದೇವರ ವಾಕ್ಯವು, ಆರಂಭದ ಕ್ರೈಸ್ತರಿಗೆ ಕೊಡಲ್ಪಟ್ಟ ನಿರ್ದೇಶನಗಳ ಮೂಲಕ ಉತ್ತರಿಸುವುದು: “ಸ್ವತಂತ್ರರಂತೆ ನಡೆದುಕೊಳ್ಳಿರಿ; ಆದರೆ ಕೆಟ್ಟತನವನ್ನು ಮರೆಮಾಜುವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; ನೀವು ದೇವರ ದಾಸರಾಗಿದ್ದೀರಲ್ಲಾ.” (1 ಪೇತ್ರ 2:16) ಎಲ್ಲರ ಒಳಿತಿಗೋಸ್ಕರ ಮಿತಿಗಳು ಇರಲೇಬೇಕು. ಆದುದರಿಂದಲೇ ಇಚ್ಛಾ ಸ್ವಾತಂತ್ರ್ಯವು ಸಹ ನಿಯಮಕ್ಕನುಸಾರ ನಿಯಂತ್ರಿಸಲ್ಪಡಲಿತ್ತು. ಇಲ್ಲದಿದ್ದರೆ ಅರಾಜಕತೆ ಫಲಿಸಸಾಧ್ಯವಿತ್ತು.
ಯಾರ ನಿಯಮ?
ಆದರೆ ಯಾರ ನಿಯಮವು ಸ್ವಾತಂತ್ರ್ಯಕ್ಕೆ ಸರಿಯಾದ ಮಿತಿಗಳನ್ನು ಸ್ಥಾಪಿಸುವುದು? ಈ ಪ್ರಶ್ನೆಯ ಉತ್ತರಕ್ಕೂ, ಕಷ್ಟಸಂಕಟಗಳಿಗೆ ದೇವರು ಏಕೆ ಅನುಮತಿಯನ್ನು ಕೊಟ್ಟಿದ್ದಾನೆಂಬ ಮೂಲಭೂತ ಕಾರಣಕ್ಕೂ ಸಂಬಂಧವಿದೆ. ಮನುಷ್ಯನನ್ನು ಸೃಷ್ಟಿಸಿದವನು ದೇವರು. ಆದುದರಿಂದ, ಮಾನವರು ತಮ್ಮ ಹಾಗೂ ಇತರರ ಒಳಿತಿಗಾಗಿ ಯಾವ ನಿಯಮಗಳಿಗೆ ವಿಧೇಯರಾಗಬೇಕೆಂಬುದನ್ನು ಆತನಿಗಿಂತಲೂ ಹೆಚ್ಚು ಚೆನ್ನಾಗಿ ತಿಳಿದವನು ಬೇರೆ ಯಾರೂ ಇಲ್ಲ. ಬೈಬಲ್ ಅದನ್ನು ಹೀಗೆ ತಿಳಿಸುತ್ತದೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17.
ಸ್ಪಷ್ಟವಾಗಿ ಇದು ಒಂದು ಮುಖ್ಯ ವಿಷಯವಾಗಿದೆ: ಮನುಷ್ಯರು ದೇವರಿಂದ ಸ್ವತಂತ್ರರಾಗಿ ಜೀವಿಸಲು ಸೃಷ್ಟಿಸಲ್ಪಟ್ಟಿರಲಿಲ್ಲ. ಅವರ ಯಶಸ್ಸು ಮತ್ತು ಸಂತೋಷವು, ತನ್ನ ನೀತಿಯ ನಿಯಮಗಳಿಗೆ ವಿಧೇಯತೆಯನ್ನು ತೋರಿಸುವುದರ ಮೇಲೆಯೇ ಅವಲಂಬಿಸುವಂಥ ರೀತಿಯಲ್ಲಿ ಆತನು ಅವರನ್ನು ಸೃಷ್ಟಿಸಿದನು. ದೇವರ ಪ್ರವಾದಿಯಾದ ಯೆರೆಮೀಯನು ಹೇಳಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23.
ಮನುಷ್ಯರು, ಗುರುತ್ವಾಕರ್ಷಣೆಯಂಥ ತನ್ನ ಭೌತಿಕ ನಿಯಮಗಳಿಗೆ ಅಧೀನರಾಗಿರುವಂತೆ ದೇವರು ಮಾಡಿದನು. ಹಾಗೆಯೇ, ತನ್ನ ನೈತಿಕ ನಿಯಮಗಳಿಗೂ ಅವರು ಅಧೀನರಾಗಿರುವಂಥ ರೀತಿಯಲ್ಲಿ ಅವರನ್ನು ನಿರ್ಮಿಸಿದನು. ಇದರಿಂದ ಪರಸ್ಪರ ಹೊಂದಿಕೊಂಡು ಹೋಗುವ ಒಂದು ಸಮಾಜವು ಫಲಿಸುವಂತೆ ಅವು ರಚಿಸಲ್ಪಟ್ಟವು. ಹೀಗಿರುವುದರಿಂದ ದೇವರ ವಾಕ್ಯವು ಸಕಾರಣದೊಂದಿಗೆ ಹೀಗೆ ಪ್ರೇರೇಪಿಸುತ್ತದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು.”—ಜ್ಞಾನೋಕ್ತಿ 3:5.
ಈ ಕಾರಣದಿಂದ, ದೇವರ ಆಳ್ವಿಕೆಯಿಲ್ಲದೆ ಮನುಷ್ಯರು ತಮ್ಮನ್ನೇ ನಿಯಂತ್ರಿಸಿಕೊಳ್ಳುವುದರಲ್ಲಿ ಎಂದೂ ಯಶಸ್ವಿಯನ್ನು ಪಡೆಯಲು ಸಾಧ್ಯವಿರಲಿಲ್ಲ. ಜನರು ಆತನಿಂದ ಸ್ವತಂತ್ರರಾಗಿರುವ ಪ್ರಯತ್ನದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ರಚಿಸಿದರು. ಆದರೆ ಇವು ಪರಸ್ಪರ ತಿಕ್ಕಾಟಕ್ಕೊಳಗಾಗಿ, ಮನುಷ್ಯನು ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದನು.’—ಪ್ರಸಂಗಿ 8:9.
ಎಲ್ಲಿ ತಪ್ಪಾಯಿತು?
ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರಿಗೆ ದೇವರು ಒಳ್ಳೆಯ, ಪರಿಪೂರ್ಣವಾದ ಆರಂಭವನ್ನು ಕೊಟ್ಟನು. ಅವರಿಗೆ ಪರಿಪೂರ್ಣ ದೇಹ ಮತ್ತು ಮನಸ್ಸುಗಳಿದ್ದವು. ಮತ್ತು ಅವರ ಮನೆ ಒಂದು ಪರದೈಸ ತೋಟವಾಗಿತ್ತು. ಒಂದುವೇಳೆ ಅವರು ದೇವರ ಆಳ್ವಿಕೆಗೆ ಅಧೀನರಾಗಿ ಮುಂದುವರಿಯುತ್ತಿದ್ದಿದ್ದರೆ, ಅವರು ಪರಿಪೂರ್ಣರೂ, ಸಂತೋಷಿತರೂ ಆಗಿ ಉಳಿಯುತ್ತಿದ್ದರು. ಕಾಲಾನಂತರ ಅವರು ಪರದೈಸ ಭೂಮಿಯಲ್ಲಿ ಜೀವಿಸುತ್ತಿರುವ ಪರಿಪೂರ್ಣ, ಸಂತೋಷಭರಿತ ಮಾನವ ಕುಟುಂಬದ ಹೆತ್ತವರಾಗಿರುತ್ತಿದ್ದರು. ಮತ್ತು ಇದೇ ಮಾನವಜಾತಿಗಾಗಿರುವ ದೇವರ ಉದ್ದೇಶವಾಗಿತ್ತು.—ಆದಿಕಾಂಡ 1:27-29; 2:15.
ಆದರೆ ನಮ್ಮ ಆ ಪೂರ್ವಜರು, ತಮಗೆ ಕೊಡಲ್ಪಟ್ಟಿದ್ದ ಇಚ್ಛಾ ಸ್ವಾತಂತ್ರ್ಯವನ್ನು ದುರುಪಯೋಗಿಸಿದರು. ತಾವು ದೇವರಿಂದ ಸ್ವತಂತ್ರರಾಗುವುದಾದರೆ ಯಶಸ್ಸು ದೊರೆಯುವುದೆಂದು ಅವರು ತಪ್ಪಾಗಿ ನೆನಸಿದರು. ತಮ್ಮ ಸ್ವಂತ ಇಚ್ಛಾ ಸ್ವಾತಂತ್ರ್ಯದಿಂದಲೇ ಅವರು ಆತನ ನಿಯಮಗಳ ಮೇರೆಗಳ ಹೊರಗೆ ಕಾಲಿಟ್ಟರು. (ಆದಿಕಾಂಡ, ಅಧ್ಯಾಯ 3) ಅವರು ದೇವರ ಆಳ್ವಿಕೆಯನ್ನು ತಿರಸ್ಕರಿಸಿದ್ದರಿಂದ, ಅವರನ್ನು ಪರಿಪೂರ್ಣಾವಸ್ಥೆಯಲ್ಲೇ ಇಡುವ ಹಂಗು ಈಗ ಆತನಿಗಿರಲಿಲ್ಲ. ‘ಅವರು ದ್ರೋಹಿಗಳಾದರು, ಮಕ್ಕಳಲ್ಲ; ಇದು ಅವರ ದೋಷ.’—ಧರ್ಮೋಪದೇಶಕಾಂಡ 32:5.
ಆದಾಮಹವ್ವರು ದೇವರಿಗೆ ಅವಿಧೇಯರಾದ ಸಮಯದಿಂದ ಅವರ ದೇಹ ಮತ್ತು ಮನಸ್ಸುಗಳು ಕೆಡಲಾರಂಭಿಸಿದವು. ಯೆಹೋವನು ಜೀವದ ಬುಗ್ಗೆಯಾಗಿದ್ದಾನೆ. (ಕೀರ್ತನೆ 36:9) ಹೀಗೆ, ಪ್ರಥಮ ಮಾನವ ದಂಪತಿಯು ಯೆಹೋವನಿಂದ ತಮ್ಮನ್ನೇ ಪ್ರತ್ಯೇಕಿಸಿಕೊಂಡ ಕಾರಣ, ಅಪರಿಪೂರ್ಣರಾಗಿ, ಕೊನೆಯಲ್ಲಿ ಮೃತಪಟ್ಟರು. (ಆದಿಕಾಂಡ 3:19) ವಂಶವಾಹಿಗಳ ಮೂಲಕ ದಾಟಿಸಲ್ಪಡುವ ಬಾಧ್ಯತೆಯ ನಿಯಮಗಳಿಗನುಸಾರ, ಅವರ ಸಂತತಿಯು ತಮ್ಮ ಹೆತ್ತವರ ಬಳಿ ಏನಿತ್ತೋ ಅದನ್ನು ಮಾತ್ರ ಪಡೆಯಸಾಧ್ಯವಿತ್ತು. ಅದೇನಾಗಿತ್ತು? ಅಪರಿಪೂರ್ಣತೆ ಮತ್ತು ಮರಣವೇ. ಆದುದರಿಂದ ಅಪೊಸ್ತಲ ಪೌಲನು ಬರೆದುದು: “ಒಬ್ಬ ಮನುಷ್ಯ [ಆದಾಮ]ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12.
ಮುಖ್ಯ ವಿವಾದಾಂಶ—ಪರಮಾಧಿಕಾರ
ಆದಾಮಹವ್ವರು ದೇವರ ವಿರುದ್ಧ ದಂಗೆಯೆದ್ದಾಗ, ಅವರು ಆತನ ಪರಮಾಧಿಕಾರವನ್ನು ಅಂದರೆ ಆತನ ಆಳುವ ಹಕ್ಕಿಗೆ ಸವಾಲೊಡ್ಡಿದರು. ಯೆಹೋವನು ಬಯಸಿದ್ದಲ್ಲಿ ಅವರನ್ನು ಆ ಕ್ಷಣವೇ ನಾಶಮಾಡಿ, ಇನ್ನೊಂದು ದಂಪತಿಯನ್ನು ಸೃಷ್ಟಿಸಿ ಒಂದು ಹೊಸ ಆರಂಭವನ್ನು ಕೊಡಬಹುದಿತ್ತು. ಆದರೆ ಹಾಗೆ ಮಾಡಿದ್ದಲ್ಲಿ, ಮನುಷ್ಯರಿಗಾಗಿ ಯಾರ ಆಳ್ವಿಕೆಯು ಸೂಕ್ತವಾದದ್ದೂ ಅತ್ಯುತ್ತಮವಾದದ್ದೂ ಆಗಿದೆ ಎಂಬ ವಿವಾದಾಂಶವು ಇತ್ಯರ್ಥವಾಗುತ್ತಿರಲಿಲ್ಲ. ಅದರ ಬದಲು, ಮನುಷ್ಯರು ತಮ್ಮ ಸ್ವಂತ ವಿಚಾರಗಳಿಗನುಸಾರ ತಮ್ಮ ಸಮಾಜಗಳನ್ನು ವಿಕಸಿಸುವಂತೆ ಅವರಿಗೆ ಸಮಯ ಕೊಟ್ಟರೆ, ದೇವರಿಂದ ಸ್ವತಂತ್ರವಾಗಿರುವ ಆಳ್ವಿಕೆಯು ಯಶಸ್ವಿಯಾಗಬಲ್ಲದೊ ಇಲ್ಲವೊ ಎಂಬುದನ್ನು ಅವರು ಸ್ಪಷ್ಟವಾಗಿ ಪ್ರದರ್ಶಿಸಲು ಅವಕಾಶ ಸಿಗುತ್ತಿತ್ತು.
ಸಾವಿರಾರು ವರ್ಷಗಳ ಮಾನವ ಇತಿಹಾಸವು ಏನನ್ನು ಪ್ರಕಟಪಡಿಸುತ್ತದೆ? ಆ ಎಲ್ಲ ಶತಮಾನಗಳಲ್ಲಿ, ಜನರು ಎಲ್ಲ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ಪ್ರಯತ್ನಿಸಿ ನೋಡಿದ್ದಾರೆ. ಆದರೂ, ದುಷ್ಟತನ ಮತ್ತು ಕಷ್ಟಸಂಕಟಗಳು ಹಾಗೆಯೇ ಉಳಿದಿವೆ. ವಾಸ್ತವದಲ್ಲಿ, ‘ದುಷ್ಟರು ಹೆಚ್ಚಾದ ಕೆಟ್ಟತನಕ್ಕೆ ಹೋಗುತ್ತಿದ್ದಾರೆ.’ ಮತ್ತು ಇದು ವಿಶೇಷವಾಗಿ ನಮ್ಮ ಸಮಯದಲ್ಲಿ ಸತ್ಯವಾಗಿದೆ.—2 ತಿಮೊಥೆಯ 3:13.
20ನೆಯ ಶತಮಾನದಲ್ಲಿ ವೈಜ್ಞಾನಿಕ ಮತ್ತು ಔದ್ಯೋಗಿಕ ಸಾಧನೆಗಳು ಉತ್ತುಂಗಕ್ಕೇರಿದವು. ಆದರೆ ಅದೇ ಸಮಯದಲ್ಲಿ, ಆ ಶತಮಾನವು ಮಾನವಜಾತಿಯ ಇಡೀ ಇತಿಹಾಸದಲ್ಲಿ ಅತೀ ಭಯಂಕರವಾದ ನರಳಾಟವನ್ನೂ ನೋಡಿತು. ಮತ್ತು ವೈದ್ಯಕೀಯ ರಂಗದಲ್ಲಿ ಬಹಳಷ್ಟು ಪ್ರಗತಿ ಮಾಡಲ್ಪಟ್ಟರೂ, ದೇವರ ಈ ನಿಯಮವು ಇನ್ನೂ ಸತ್ಯವಾಗಿದೆ: ಜೀವದ ಬುಗ್ಗೆಯಾಗಿರುವ ದೇವರಿಂದ ಪ್ರತ್ಯೇಕಗೊಂಡಿರುವ ಮನುಷ್ಯರು ಅಸ್ವಸ್ಥರಾಗುತ್ತಾರೆ, ವೃದ್ಧರಾಗುತ್ತಾರೆ ಮತ್ತು ಸಾಯುತ್ತಾರೆ. ಮನುಷ್ಯರು ‘ಸರಿಯಾದ ಕಡೆಗೆ ತಮ್ಮ ಹೆಜ್ಜೆಯನ್ನಿಡಲಾರರು’ ಎಂಬ ಮಾತು ಎಷ್ಟು ಸ್ಪಷ್ಟವಾಗಿ ರುಜುಪಡಿಸಲ್ಪಟ್ಟಿದೆ!
ದೇವರ ಪರಮಾಧಿಕಾರವು ಎತ್ತಿಹಿಡಿಯಲ್ಪಟ್ಟದ್ದು
ದೇವರಿಂದ ಸ್ವತಂತ್ರವಾಗಿರುವ ವಿಷಯದಲ್ಲಿ ನಡೆಸಲಾಗಿರುವ ಈ ದುರಂತಮಯ ಪ್ರಯೋಗವು, ಮನುಷ್ಯರು ದೇವರಿಂದ ಸ್ವತಂತ್ರರಾಗಿ ನಡೆಸುವ ಆಳ್ವಿಕೆಯು ಎಂದೂ ಯಶಸ್ವಿಯಾಗದು ಎಂಬುದನ್ನು ಎಲ್ಲ ಸಮಯಕ್ಕೂ ಪ್ರದರ್ಶಿಸಿದೆ. ಕೇವಲ ದೇವರ ಆಳ್ವಿಕೆಯೇ ಸಂತೋಷ, ಐಕ್ಯಭಾವ, ಆರೋಗ್ಯ ಮತ್ತು ನಿತ್ಯ ಜೀವವನ್ನು ಕೊಡಸಾಧ್ಯವಿದೆ. ಅಷ್ಟುಮಾತ್ರವಲ್ಲದೆ, ಯೆಹೋವ ದೇವರ ವಿಫಲವೇ ಆಗದ ವಾಕ್ಯವಾದ ಪವಿತ್ರ ಬೈಬಲು, ನಾವು ದೇವರಿಂದ ಸ್ವತಂತ್ರವಾಗಿರುವ ಮಾನವಾಳ್ವಿಕೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂಬುದನ್ನು ತೋರಿಸುತ್ತದೆ. (2 ತಿಮೊಥೆಯ 3:1-5) ಯೆಹೋವನು, ಮಾನವಾಳ್ವಿಕೆ, ದುಷ್ಟತನ ಹಾಗೂ ಕಷ್ಟಸಂಕಟಗಳನ್ನು ಇಷ್ಟರ ವರೆಗೂ ಸಹಿಸಿಕೊಂಡು ಬಂದಿದ್ದಾನೆ. ಆದರೆ ಆ ಸಮಯವು ಈಗ ಮುಗಿಯುತ್ತಾ ಬಂದಿದೆ.
ಅತಿ ಬೇಗನೆ ದೇವರು ಮಾನವ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡಲಿದ್ದಾನೆ. ಶಾಸ್ತ್ರವಚನಗಳು ನಮಗನ್ನುವುದು: “ಆ ರಾಜರ [ಈಗ ಅಸ್ತಿತ್ವದಲ್ಲಿರುವ ಮಾನವ ಆಳ್ವಿಕೆಗಳು] ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಪರಲೋಕದಲ್ಲಿ] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು [ಇನ್ನೆಂದಿಗೂ ಮಾನವರು ಭೂಮಿಯನ್ನು ಆಳುವುದಿಲ್ಲ], ಆ ರಾಜ್ಯಗಳನ್ನೆಲ್ಲಾ [ಸದ್ಯದ ಆಳ್ವಿಕೆಗಳು] ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಬೈಬಲಿನ ಮುಖ್ಯ ವಿಷಯವು, ಸ್ವರ್ಗೀಯ ರಾಜ್ಯದ ಮೂಲಕ ಯೆಹೋವ ದೇವರ ಪರಮಾಧಿಕಾರದ ನಿರ್ದೋಷೀಕರಣವೇ ಆಗಿದೆ. ಇದನ್ನೇ ಯೇಸು ತನ್ನ ಅತಿ ಪ್ರಾಮುಖ್ಯ ಬೋಧನೆಯಾಗಿ ಮಾಡಿದನು. ಅವನಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.
ಮಾನವಾಳ್ವಿಕೆಯ ಸ್ಥಾನದಲ್ಲಿ ದೇವರ ಆಳ್ವಿಕೆಯು ಬರುವಾಗ, ಯಾರು ಪಾರಾಗುವರು ಮತ್ತು ಯಾರು ಪಾರಾಗದಿರುವರು? ಜ್ಞಾನೋಕ್ತಿ 2:21, 22ರಲ್ಲಿ ನಮಗೆ ಹೀಗೆ ಆಶ್ವಾಸನೆಯನ್ನು ಕೊಡಲಾಗಿದೆ: “ಯಥಾರ್ಥವಂತರು [ದೇವರ ಆಳ್ವಿಕೆಯನ್ನು ಸಮರ್ಥಿಸುವವರು] ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ [ದೇವರ ಆಳ್ವಿಕೆಯನ್ನು ಸಮರ್ಥಿಸದವರು] ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” ದೈವಿಕವಾಗಿ ಪ್ರೇರಿತನಾದ ಕೀರ್ತನೆಗಾರನು ಹಾಡಿದ್ದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:10, 11, 29.
ಅದ್ಭುತವಾದ ಹೊಸ ಲೋಕ
ದೇವರ ರಾಜ್ಯದ ಆಳ್ವಿಕೆಯ ಕೆಳಗೆ, ಸದ್ಯದ ವಿಷಯಗಳ ವ್ಯವಸ್ಥೆಯಿಂದ ಪಾರಾಗಿ ಉಳಿಯುವವರು, ದುಷ್ಟತನ ಮತ್ತು ಕಷ್ಟಸಂಕಟಗಳಿಂದ ಮುಕ್ತವಾಗಿರುವ ಒಂದು ಲೋಕದೊಳಗೆ ಸೇರಿಸಲ್ಪಡುವರು. ಮಾನವಕುಲಕ್ಕೆ ದೇವರು ಸೂಚನೆಗಳನ್ನು ಕೊಡುವನು, ಮತ್ತು ಸಕಾಲದಲ್ಲಿ “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ಈ ಬಲವರ್ಧಕ, ಸಕಾರಾತ್ಮಕ ಬೋಧನೆಯು, ನಿಜವಾದ ಶಾಂತಿ ಮತ್ತು ಸಾಮರಸ್ಯದಿಂದ ಕೂಡಿರುವ ಮಾನವ ಸಮಾಜವನ್ನು ಉಂಟುಮಾಡುವುದು. ಹೀಗೆ ಅಂದಿನಿಂದ ಯುದ್ಧ, ಕೊಲೆ, ಹಿಂಸಾಚಾರ, ಬಲಾತ್ಕಾರ ಸಂಭೋಗ, ಕಳ್ಳತನ ಅಥವಾ ಇನ್ನಾವುದೇ ಪಾತಕವು ಇರದು.
ದೇವರ ಹೊಸ ಲೋಕದಲ್ಲಿ ಜೀವಿಸುತ್ತಿರುವ ವಿಧೇಯ ಮಾನವರಿಗೆ ಅದ್ಭುತವಾದ ಶಾರೀರಿಕ ಪ್ರಯೋಜನಗಳೂ ಆಗುವವು. ದೇವರಾಳ್ವಿಕೆಯ ವಿರುದ್ಧ ನಡೆಸಲಾದ ದಂಗೆಯ ದುಷ್ಪರಿಣಾಮಗಳನ್ನು ತೆಗೆದುಹಾಕಲಾಗುವುದು. ಅಪರಿಪೂರ್ಣತೆ, ಅಸ್ವಸ್ಥತೆ, ವೃದ್ಧಾಪ್ಯ, ಮತ್ತು ಮರಣವು ಗತಕಾಲದ ವಿಷಯವಾಗಿರುವುದು. ಬೈಬಲ್ ನಮಗೆ ಈ ಆಶ್ವಾಸನೆಯನ್ನು ಕೊಡುತ್ತದೆ: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಇದಲ್ಲದೆ, ಶಾಸ್ತ್ರವಚನಗಳು ಹೀಗೆ ವಾಗ್ದಾನಿಸುತ್ತವೆ: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 33:24; 35:5, 6) ಸದಾಕಾಲಕ್ಕೂ ಪ್ರತಿ ದಿನ ಉತ್ತಮ ಆರೋಗ್ಯದಿಂದ ನಳನಳಿಸುತ್ತಿರುವುದು ಎಷ್ಟು ರೋಮಾಂಚಕವಾಗಿರುವುದು!
ದೇವರ ಪ್ರೀತಿಯ ನಿರ್ದೇಶನದ ಮೇರೆಗೆ, ಆ ಹೊಸ ಲೋಕದ ನಿವಾಸಿಗಳು ಲೋಕವ್ಯಾಪಕವಾಗಿ ಒಂದು ಪರದೈಸವನ್ನು ನಿರ್ಮಿಸುವುದರಲ್ಲಿ ತಮ್ಮ ಶಕ್ತಿ ಮತ್ತು ಕೌಶಲಗಳನ್ನು ಉಪಯೋಗಿಸುವರು. ಬಡತನ, ಹಸಿವು, ಮತ್ತು ಮನೆಗಳಿಲ್ಲದಿರುವ ಸಮಸ್ಯೆಯು ಸದಾಕಾಲಕ್ಕೂ ಇಲ್ಲವಾಗುವುದು. ಯೆಶಾಯನ ಪ್ರವಾದನೆಯು ತಿಳಿಸುವುದು: “ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.” (ಯೆಶಾಯ 65:21, 22) ಹೌದು, “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.
ದೇವರ ಮತ್ತು ವಿಧೇಯ ಮಾನವರ ಪ್ರೀತಿಪರ ಆರೈಕೆಗೆ ಭೂಮಿಯು ಸ್ಪಂದಿಸುವುದು. ನಮಗೆ ಈ ಶಾಸ್ತ್ರೀಯ ಆಶ್ವಾಸನೆಗಳಿವೆ: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. . . . ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು.” (ಯೆಶಾಯ 35:1, 6) “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿ”ಯಾಗುವುದು.—ಕೀರ್ತನೆ 72:16.
ಮರಣಪಟ್ಟಿರುವ ನೂರಾರು ಕೋಟಿಗಟ್ಟಲೆ ಜನರ ಬಗ್ಗೆ ಏನು? ದೇವರ ಸ್ಮರಣೆಯಲ್ಲಿರುವವರು ಉಜ್ಜೀವಿಸಲ್ಪಡುವರು. ಯಾಕೆಂದರೆ ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ (ಅ. ಕೃತ್ಯಗಳು 24:15) ಹೌದು, ಸತ್ತುಹೋದವರು ಪುನಃ ಜೀವಕ್ಕೆ ಉಜ್ಜೀವಿಸಲ್ಪಡುವರು. ದೇವರ ಆಳ್ವಿಕೆಯ ಕುರಿತಾದ ಅದ್ಭುತ ಸತ್ಯಗಳನ್ನು ಅವರಿಗೆ ಕಲಿಸಲಾಗುವುದು ಮತ್ತು ಅವರು ಪರದೈಸದಲ್ಲಿ ಸದಾಕಾಲ ಜೀವಿಸುವ ಅವಕಾಶವನ್ನು ಪಡೆಯುವರು.—ಯೋಹಾನ 5:28, 29.
ಈ ರೀತಿಯಲ್ಲಿ, ಸಾವಿರಾರು ವರ್ಷಗಳಿಂದ ಮನುಷ್ಯರನ್ನು ತನ್ನ ಬಿಗಿಹಿಡಿತದಲ್ಲಿಟ್ಟುಕೊಂಡಿರುವ ಕಷ್ಟಸಂಕಟ, ಅಸ್ವಸ್ಥತೆ, ಮತ್ತು ಮರಣವೆಂಬ ಘೋರ ಸ್ಥಿತಿಯನ್ನು ಯೆಹೋವ ದೇವರು ಸಂಪೂರ್ಣವಾಗಿ ತಲೆಕೆಳಗಾಗಿಸುವನು. ಇನ್ನು ಮುಂದೆ ಅಸ್ವಸ್ಥತೆ ಇಲ್ಲ! ಅಂಗವಿಕಲತೆಗಳು ಇಲ್ಲ! ಮರಣವಿಲ್ಲ! ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.
ಆ ರೀತಿಯಲ್ಲಿ ದೇವರು ಕಷ್ಟಸಂಕಟಗಳನ್ನು ಅಂತ್ಯಗೊಳಿಸುವನು. ಈ ಭ್ರಷ್ಟ ಲೋಕವನ್ನು ಆತನು ನಾಶಗೊಳಿಸಿ, ಸಂಪೂರ್ಣವಾಗಿ ಹೊಸದಾಗಿರುವ ವಿಷಯಗಳ ವ್ಯವಸ್ಥೆಯನ್ನು ತರುವನು. ಮತ್ತು ಅದರಲ್ಲಿ “ನೀತಿಯು ವಾಸವಾಗಿರುವದು.” (2 ಪೇತ್ರ 3:13) ಇದು ಎಂಥ ಸುವಾರ್ತೆಯಾಗಿದೆ! ನಮಗೆ ಆ ಹೊಸ ಲೋಕವು ತುರ್ತಾಗಿ ಬೇಕೇ ಬೇಕು. ಆದರೆ ಅದನ್ನು ನೋಡಲಿಕ್ಕಾಗಿ ನಾವು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಬೈಬಲ್ ಪ್ರವಾದನೆಗಳು ನೆರವೇರುತ್ತಿರುವುದನ್ನು ನೋಡುವಾಗ, ಆ ಹೊಸ ಲೋಕವು ಬಾಗಿಲ ಬಳಿಯೇ ಇದೆ, ಮತ್ತು ಕಷ್ಟಸಂಕಟಗಳಿಗೆ ದೇವರು ಕೊಟ್ಟಿರುವ ಸಮಯವು ಇನ್ನೇನು ಕೊನೆಗೊಳ್ಳಲಿದೆ ಎಂಬುದು ನಮಗೆ ತಿಳಿದಿದೆ.—ಮತ್ತಾಯ 24:3-14.
[ಪುಟ 8ರಲ್ಲಿರುವ ಚೌಕ]
ಮಾನವ ಆಳ್ವಿಕೆಯ ವೈಫಲ್ಯ
ಮಾನವ ಆಳ್ವಿಕೆಯ ಕುರಿತಾಗಿ, ಮಾಜಿ ಜರ್ಮನ್ ಚಾನ್ಸಲರ್ ಹೆಲ್ಮಟ್ ಶ್ಮಿಟ್ ತಿಳಿಸಿದ್ದು: “ಮನುಷ್ಯರಾದ ನಾವು . . . ಇಡೀ ಲೋಕದ ಮೇಲೆ ಪೂರ್ಣವಾಗಿ ಆಧಿಪತ್ಯ ನಡೆಸಿಲ್ಲ, ಮತ್ತು ಆಧಿಪತ್ಯ ನಡೆಸಿರುವಾಗಲೂ ಹೆಚ್ಚಿನ ಸಮಯ ತೀರ ಕೆಟ್ಟದ್ದಾಗಿ ನಡೆಸಿದ್ದೇವೆ. . . . ನಾವು ಎಂದೂ ಸಂಪೂರ್ಣ ಶಾಂತಿಯಿಂದ ಆಧಿಪತ್ಯ ನಡಿಸಿಲ್ಲ.” 1999ರ ಮಾನವ ಅಭಿವೃದ್ಧಿ ವರದಿ ಗಮನಿಸಿದ್ದು: “ಸಾಮಾಜಿಕ ಗಲಭೆ, ಹೆಚ್ಚಿನ ಪಾತಕ, ಮನೆಯಲ್ಲಿ ಹೆಚ್ಚಿನ ಹಿಂಸಾಚಾರದಿಂದಾಗಿ ತಮ್ಮ ಸಾಮಾಜಿಕ ಚೌಕಟ್ಟು ಸವೆದುಹೋಗುತ್ತಿರುವುದರ ಬಗ್ಗೆ ಎಲ್ಲ ದೇಶಗಳು ವರದಿಮಾಡುತ್ತವೆ. . . . ಭೌಗೋಲಿಕ ಬೆದರಿಕೆಗಳು ಬೆಳೆಯುತ್ತಾ ಇವೆ, ಅವುಗಳನ್ನು ನಿಭಾಯಿಸುವ ರಾಷ್ಟ್ರೀಯ ಸಾಮರ್ಥ್ಯವನ್ನು ಮೀರುತ್ತಿವೆ ಮತ್ತು ಅಂತಾರಾಷ್ಟ್ರೀಯ ಪರಿಹಾರಗಳಿಗಿಂತಲೂ ವೇಗವಾಗಿ ಹೆಚ್ಚುತ್ತಿವೆ.”
[ಪುಟ 8ರಲ್ಲಿರುವ ಚಿತ್ರಗಳು]
“ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11
[ಪುಟ 5ರಲ್ಲಿರುವ ಚಿತ್ರ ಕೃಪೆ]
ಮೇಲಿನಿಂದ ಮೂರನೆಯದ್ದು, ತಾಯಿ ಮತ್ತು ಮಗು: FAO photo/B. Imevbore; ಕೆಳಗೆ, ವಿಸ್ಫೋಟ: U.S. National Archives photo