ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನೋಡಿರಿ! ಮಹಾ ಸಮೂಹವನ್ನು!’

‘ನೋಡಿರಿ! ಮಹಾ ಸಮೂಹವನ್ನು!’

ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಿರಿ

‘ನೋಡಿರಿ! ಮಹಾ ಸಮೂಹವನ್ನು!’

ಅನೇಕ ದಶಕಗಳಿಂದ ಒಂದು ಪ್ರಶ್ನೆಯು ಯೆಹೋವನ ಸೇವಕರಿಗೆ ಒಗಟಾಗಿತ್ತು. ಅದಕ್ಕೆ ಶಾಸ್ತ್ರೀಯವಾದ ಉತ್ತರವನ್ನು ಕಂಡುಹಿಡಿಯಲು ತುಂಬ ಸಮಯದಿಂದ ಪ್ರಯತ್ನಿಸಲಾಗಿತ್ತು. ಆ ವಿಷಯದ ಬಗ್ಗೆ ಅನೇಕ ಚರ್ಚೆಗಳು ನಡೆದವು. ಆದರೆ ಕೊನೆಯಲ್ಲಿ ಅದಕ್ಕೆ ಬೈಬಲಿನ ಉತ್ತರವನ್ನು ಕಂಡುಹಿಡಿಯಲಾಯಿತು. ಮತ್ತು ಅದರಿಂದಾಗಿ 1935ರಲ್ಲಿ ವಾಷಿಂಗ್ಟನ್‌ ಡಿ.ಸಿ.ಯಲ್ಲಿನ ಅಧಿವೇಶನದಲ್ಲಿದ್ದ ಸಭಿಕರಲ್ಲಿ ಕಾರ್ಯತಃ ಮಿಂಚು ಹರಿದಂಥ ಅನುಭವವಾಯಿತು.

ಆ ಎಲ್ಲ ಚರ್ಚೆಗಳ ಮರೆಯಲ್ಲಿದ್ದ ಸಂಗತಿಯು ಒಂದು ಸಾಮಾನ್ಯ ಪ್ರಶ್ನೆಯಾಗಿತ್ತು: ಪ್ರಕಟನೆ 7:9ರಲ್ಲಿ ತಿಳಿಸಲ್ಪಟ್ಟಿರುವ “ಮಹಾ ಜನಸ್ತೋಮವು” (ಕಿಂಗ್‌ ಜೇಮ್ಸ್‌ ವರ್ಷನ್‌) ಅಥವಾ “ಮಹಾ ಸಮೂಹವು” (ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌) ಯಾರನ್ನು ಒಳಗೊಂಡಿತ್ತು? ವಿಶ್ವಾಸಿಗಳ ಈ ಗುಂಪು ಸ್ವರ್ಗದಲ್ಲಿ ಜೀವಿಸಲಿತ್ತೊ?

ದೀರ್ಘ ಸಮಯದಿಂದ ಕೇಳಲ್ಪಟ್ಟಿರುವ ಪ್ರಶ್ನೆ

ಅಪೊಸ್ತಲ ಯೋಹಾನನ ದಿನಗಳಿಂದ ಹಿಡಿದು ನಮ್ಮ ದಿನದ ವರೆಗೆ, ಕ್ರೈಸ್ತರು “ಮಹಾ ಜನಸ್ತೋಮ”ವೆಂದರೇನು ಎಂಬುದರ ಕುರಿತಾಗಿ ಗಲಿಬಿಲಿಗೊಂಡಿದ್ದರು. ಮಹಾ ಸಮೂಹವು, ಸ್ವರ್ಗಕ್ಕೆ ಹೋಗುವ ಒಂದು ದ್ವಿತೀಯ ವರ್ಗವಾಗಿದ್ದು, ಬೈಬಲ್‌ ಸತ್ಯದ ಜ್ಞಾನವಿದ್ದರೂ ಅದನ್ನು ಹಬ್ಬಿಸಲು ಏನನ್ನೂ ಮಾಡದಂತಹ ಒಂದು ಗುಂಪು ಆಗಿತ್ತೆಂದು ಬೈಬಲ್‌ ವಿದ್ಯಾರ್ಥಿಗಳು ನಂಬುತ್ತಿದ್ದರು.

ಆದರೆ ಅಭಿಷಿಕ್ತ ಕ್ರೈಸ್ತರ ಕೆಲವು ಸಂಗಡಿಗರು, ಸಾರುವ ಕೆಲಸದಲ್ಲಿ ತುಂಬ ಹುರುಪುಳ್ಳವರಾಗಿದ್ದರು. ಮತ್ತು ಅವರಿಗೆ ಸ್ವರ್ಗಕ್ಕೆ ಹೋಗುವ ಅಭಿಲಾಷೆಗಳಿರಲಿಲ್ಲ. ಹೌದು, ಅವರ ನಿರೀಕ್ಷೆಯು, “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಎಂಬ ಬಹಿರಂಗ ಭಾಷಣಕ್ಕನುಗುಣವಾಗಿತ್ತು. ಈ ಭಾಷಣವನ್ನು ಯೆಹೋವನ ಜನರು 1918ರಿಂದ 1922ರ ವರೆಗೆ ಕೊಡುತ್ತಾ ಇದ್ದರು. ಆ ವ್ಯಕ್ತಿಗಳು ಭೂಮಿಯ ಮೇಲೆ ನಿತ್ಯ ಜೀವದೊಂದಿಗೆ ಆಶೀರ್ವದಿಸಲ್ಪಡಲಿದ್ದರು.

ಅಕ್ಟೋಬರ್‌ 15, 1923ರ ದ ವಾಚ್‌ಟವರ್‌ ಪತ್ರಿಕೆಯು, ಕುರಿ ಮತ್ತು ಆಡುಗಳ ಕುರಿತಾದ ಯೇಸುವಿನ ಸಾಮ್ಯವನ್ನು ಚರ್ಚಿಸಿ ಹೇಳಿದ್ದು: “ಕುರಿಗಳು, ಜನಾಂಗಗಳ ಎಲ್ಲ ಜನರನ್ನು ಪ್ರತಿನಿಧಿಸುತ್ತವೆ. ಇವರು ಆತ್ಮಾಭಿಷಿಕ್ತರಲ್ಲ ಆದರೆ ನೀತಿಯ ಕಡೆಗೆ ಒಲವುಳ್ಳವರಾಗಿದ್ದಾರೆ. ಅವರು ಕರ್ತನೋಪಾದಿ ಯೇಸು ಕ್ರಿಸ್ತನನ್ನು ಮಾನಸಿಕವಾಗಿ ಅಂಗೀಕರಿಸುತ್ತಾರೆ ಮತ್ತು ಅವನ ಆಳ್ವಿಕೆಯ ಕೆಳಗೆ ಸುಸಮಯಕ್ಕಾಗಿ ಎದುರುನೋಡುತ್ತಾರೆ ಮತ್ತು ನಿರೀಕ್ಷಿಸುತ್ತಾರೆ.”​—ಮತ್ತಾಯ 25:​31-46.

ಬೆಳಕಿನ ಹೆಚ್ಚಿನ ಕಿರಣಗಳು

ಇಸವಿ 1931ರಲ್ಲಿ, ನಿರ್ದೋಷೀಕರಣ (ಇಂಗ್ಲಿಷ್‌) ಪುಸ್ತಕ ಒಂದು, ಯೆಹೆಜ್ಕೇಲ ಅಧ್ಯಾಯ 9ನ್ನು ಚರ್ಚಿಸಿತು ಮತ್ತು ಲೋಕದ ಅಂತ್ಯದ ಸಮಯದಲ್ಲಿ ಸಂರಕ್ಷಿಸಲ್ಪಡಲಿಕ್ಕಾಗಿ ಹಣೆಯ ಮೇಲೆ ಗುರುತಿಸಲ್ಪಟ್ಟವರು, ಯೇಸುವಿನ ಸಾಮ್ಯದಲ್ಲಿರುವ ಕುರಿಗಳಾಗಿದ್ದಾರೆಂದು ಗುರುತಿಸಿತು. ನಿರ್ದೋಷೀಕರಣ ಪುಸ್ತಕ ಮೂರು (1932ರಲ್ಲಿ ಪ್ರಕಾಶಿಸಲ್ಪಟ್ಟದ್ದು) ಯೆಹೋನಾದಾಬನೆಂಬ ಇಸ್ರಾಯೇಲ್ಯನಲ್ಲದ ಮನುಷ್ಯನ ಯಥಾರ್ಥ ಮನೋವೃತ್ತಿಯನ್ನು ವರ್ಣಿಸಿತು. ಈ ಯೆಹೋನಾದಾಬನು, ಇಸ್ರಾಯೇಲಿನ ಅಭಿಷಿಕ್ತ ರಾಜ ಯೇಹುವಿನ ರಥವನ್ನೇರಿ, ಯೇಹು ಸುಳ್ಳು ಆರಾಧಕರನ್ನು ಹತಿಸುವುದರಲ್ಲಿ ತೋರಿಸಿದಂಥ ಹುರುಪನ್ನು ನೋಡಲಿಕ್ಕಾಗಿ ಅವನೊಂದಿಗೆ ಹೋದನು. (2 ಅರಸುಗಳು 10:​15-28) ಆ ಪುಸ್ತಕವು ಹೇಳಿದ್ದು: “ಯೆಹೋನಾದಾಬನು, ಈಗ ಭೂಮಿಯ ಮೇಲಿರುವ ಮತ್ತು ಸೈತಾನನ ಸಂಸ್ಥೆಯೊಂದಿಗೆ ಹೊಂದಾಣಿಕೆಯಲ್ಲಿಲ್ಲದ ಒಂದು ವರ್ಗವನ್ನು ಪ್ರತಿನಿಧಿಸಿದನು ಇಲ್ಲವೇ ಮುನ್‌ಚಿತ್ರಿಸಿದನು. ಈ ವರ್ಗದವರು ನೀತಿಯ ಪಕ್ಷದಲ್ಲಿ ತಮ್ಮ ನಿಲುವನ್ನು ತೆಗೆದುಕೊಳ್ಳುವವರಾಗಿದ್ದಾರೆ, ಮತ್ತು ಅರ್ಮಗೆದೋನಿನ ಸಮಯದಲ್ಲಿ ಕರ್ತನಿಂದ ಸಂರಕ್ಷಿಸಲ್ಪಡುವವರಾಗಿದ್ದಾರೆ. ಅವನು ಅವರನ್ನು ಆ ಸಂಕಟದಿಂದ ಪಾರುಗೊಳಿಸಿ, ಭೂಮಿಯ ಮೇಲೆ ನಿತ್ಯಜೀವವನ್ನು ಕೊಡುವನು. ಇವರು ‘ಕುರಿ’ ವರ್ಗದವರಾಗಿದ್ದಾರೆ.”

ಇಸವಿ 1934ರಲ್ಲಿ, ದ ವಾಚ್‌ಟವರ್‌ ಪತ್ರಿಕೆಯು ಸ್ಪಷ್ಟಪಡಿಸಿತೇನೆಂದರೆ, ಭೂಮಿಯ ಮೇಲೆ ಜೀವಿಸುವ ಕ್ರೈಸ್ತರು ಯೆಹೋವನಿಗೆ ಸಮರ್ಪಣೆಯನ್ನು ಮಾಡಬೇಕು ಮತ್ತು ದೀಕ್ಷಾಸ್ನಾನವನ್ನು ಪಡೆಯಬೇಕು. ಈ ಭೂವರ್ಗದ ಕುರಿತಾದ ಬೆಳಕು ಖಂಡಿತವಾಗಿಯೂ ಹೆಚ್ಚೆಚ್ಚು ಉಜ್ವಲವಾಗಿ ಪ್ರಕಾಶಿಸುತ್ತಿತ್ತು!​—ಜ್ಞಾನೋಕ್ತಿ 4:18.

ತಿಳುವಳಿಕೆಯ ಅತ್ಯುಜ್ವಲ ಪ್ರಕಾಶ

ಪ್ರಕಟನೆ 7:​9-17ರ ಕುರಿತಾದ ತಿಳುವಳಿಕೆಯು ಸ್ವಲ್ಪ ಸಮಯದಲ್ಲೇ ಥಳಥಳಿಸುವ ತೇಜಸ್ಸಿನೊಂದಿಗೆ ಪ್ರಕಾಶಿಸಲಿತ್ತು. (ಕೀರ್ತನೆ 97:11) ಅಮೆರಿಕದ ವಾಶಿಂಗ್ಟನ್‌ ಡಿ.ಸಿ.ಯಲ್ಲಿ 1935ರ ಮೇ 30ರಿಂದ ಜೂನ್‌ 3ರ ವರೆಗೆ ನಡೆಯಲಿದ್ದ ಒಂದು ಅಧಿವೇಶನವು, ಯೆಹೋನಾದಾಬನಿಂದ ಚಿತ್ರಿಸಲ್ಪಟ್ಟವರಿಗಾಗಿ “ನಿಜವಾದ ಸಾಂತ್ವನ ಮತ್ತು ಪ್ರಯೋಜನವಾಗಿ” ಪರಿಣಮಿಸುವುದೆಂಬ ನಿರೀಕ್ಷೆಯನ್ನು ದ ವಾಚ್‌ಟವರ್‌ ಪತ್ರಿಕೆಯು ವ್ಯಕ್ತಪಡಿಸಿತು. ಮತ್ತು ಅದು ಹಾಗೆಯೇ ಆಯಿತು!

ಜೆ. ಎಫ್‌. ರಥರ್‌ಫರ್ಡ್‌ರವರು ಸುಮಾರು 20,000 ಮಂದಿ ಅಧಿವೇಶನಗಾರರಿಗೆ “ಮಹಾ ಜನಸ್ತೋಮ” ಎಂಬ ಕುತೂಹಲ ಕೆರಳಿಸುವ ಭಾಷಣವನ್ನು ಕೊಟ್ಟರು. ಅದರಲ್ಲಿ ಅವರು, ಆಧುನಿಕ ದಿನದ “ಬೇರೆ ಕುರಿಗಳು” ಮತ್ತು ಪ್ರಕಟನೆ 7:9ರ “ಮಹಾ ಸಮೂಹವು” ಒಂದೇ ಗುಂಪಿಗೆ ಸೂಚಿತವಾಗಿದೆಯೆಂಬ ಶಾಸ್ತ್ರೀಯ ರುಜುವಾತನ್ನು ಪ್ರಸ್ತುತಪಡಿಸಿದರು. (ಯೋಹಾನ 10:16) ಈ ಭಾಷಣದ ಅಂತ್ಯದಲ್ಲಿ ಭಾಷಣಕರ್ತರು ಕೇಳಿದ್ದು: “ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳವರೆಲ್ಲರೂ ದಯಮಾಡಿ ನಿಲ್ಲುವಿರಾ?” ಸಭಿಕರಲ್ಲಿ ಹೆಚ್ಚಿನವರು ಎದ್ದು ನಿಂತಾಗ ರಥರ್‌ಫರ್ಡ್‌ರವರು ಘೋಷಿಸಿದ್ದು: “ನೋಡಿರಿ! ಮಹಾ ಜನಸ್ತೋಮ!” ಮೊದಲು ನಿಶ್ಶಬ್ದ ಆವರಿಸಿತು, ಅನಂತರ ಮಹಾ ಜಯಘೋಷವು ಹಿಂಬಾಲಿಸಿತು. ಮರುದಿನ, ಯೆಹೋವನ 840 ಮಂದಿ ಹೊಸ ಸಾಕ್ಷಿಗಳು ದೀಕ್ಷಾಸ್ನಾನ ಪಡೆದುಕೊಂಡರು. ಮತ್ತು ಇವರಲ್ಲಿ ಹೆಚ್ಚಿನವರು ತಾವು ಮಹಾ ಸಮೂಹಕ್ಕೆ ಸೇರಿದವರಾಗಿದ್ದೇವೆಂದು ಹೇಳಿದರು.

ಒಂದು ಗಮನಾರ್ಹವಾದ ಉಪಸ್ಥಿತಿ

ಇಸವಿ 1935ಕ್ಕಿಂತಲೂ ಮುಂಚೆ, ಬೈಬಲಿನ ಸಂದೇಶಕ್ಕೆ ಸ್ಪಂದಿಸಿ, ಸುವಾರ್ತೆಯನ್ನು ಸಾರುವುದರಲ್ಲಿ ಹುರುಪನ್ನು ತೋರಿಸಿದವರಲ್ಲಿ ಹೆಚ್ಚೆಚ್ಚು ಮಂದಿ, ಪರದೈಸ ಭೂಮಿಯಲ್ಲಿ ಸದಾಕಾಲ ಜೀವಿಸುವ ಅಭಿರುಚಿಯನ್ನು ವ್ಯಕ್ತಪಡಿಸಿದರು. ಅವರಿಗೆ ಸ್ವರ್ಗಕ್ಕೆ ಹೋಗುವ ಆಸೆಯೇ ಇರಲಿಲ್ಲ. ಯಾಕೆಂದರೆ ದೇವರು ಅವರಿಗೆ ಸ್ವರ್ಗೀಯ ಜೀವನದ ನಿರೀಕ್ಷೆಯನ್ನೇ ಕೊಟ್ಟಿರಲಿಲ್ಲ. ತಾವು ಬೇರೆ ಕುರಿಗಳ ಮಹಾ ಸಮೂಹದವರೆಂದು ಗುರುತಿಸಿಕೊಳ್ಳುವುದು, 1,44,000 ಮಂದಿ ಅಭಿಷಿಕ್ತ ಕ್ರೈಸ್ತರ ಕರೆಯುವಿಕೆಯು 1935ರೊಳಗೆ ಕಾರ್ಯತಃ ಮುಗಿದಿತ್ತೆಂಬುದನ್ನು ಸೂಚಿಸಿತು.​—ಪ್ರಕಟನೆ 7:4.

ಎರಡನೆಯ ಲೋಕ ಯುದ್ಧ ಆರಂಭವಾದಾಗ, ಮಹಾ ಸಮೂಹದವರ ಒಟ್ಟುಗೂಡಿಸುವಿಕೆಯನ್ನು ನಿಲ್ಲಿಸಲು ಪಿಶಾಚನಾದ ಸೈತಾನನು ತೀವ್ರ ಪ್ರಯತ್ನಗಳನ್ನು ಮಾಡಿದನು. ರಾಜ್ಯ ಸಾರುವಿಕೆಯ ಕೆಲಸವು ಅನೇಕ ದೇಶಗಳಲ್ಲಿ ನಿರ್ಬಂಧಿಸಲ್ಪಟ್ಟಿತ್ತು. ಆ ಅಂಧಕಾರದ ದಿನಗಳಲ್ಲಿ ಮತ್ತು 1942ರ ಜನವರಿ ತಿಂಗಳಿನಲ್ಲಿ ತಮ್ಮ ಮರಣಕ್ಕೆ ಮುಂಚೆ, ಜೆ. ಎಫ್‌. ರಥರ್‌ಫರ್ಡ್‌ರವರು ಹೇಳಿದ್ದು: “‘ಮಹಾ ಜನಸ್ತೋಮವು’ ಅಷ್ಟೇನೂ ಮಹಾ ಆಗಿರಲಿಕ್ಕಿಲ್ಲ ಎಂಬಂತೆ ತೋರುತ್ತದೆ.”

ಆದರೆ ದೈವಿಕ ಆಶೀರ್ವಾದದಿಂದಾಗಿ, ಸನ್ನಿವೇಶವು ಹಾಗೆ ಉಳಿಯಲಿಲ್ಲ. ‘ದೃಢನಿಶ್ಚಿತರೂ ಪೂರ್ಣರಾಗಿ ನಿಂತುಕೊಂಡವರೂ’ ಆಗಿದ್ದ ಅಭಿಷಿಕ್ತರು ಮತ್ತು ಅವರ ಸಂಗಡಿಗರಾದ ಬೇರೆ ಕುರಿಗಳು, ಶಿಷ್ಯರನ್ನಾಗಿ ಮಾಡುವ ನೇಮಕವನ್ನು ಪೂರೈಸುತ್ತಿದ್ದಾರೆ. (ಕೊಲೊಸ್ಸೆ 4:12; ಮತ್ತಾಯ 24:14; 28:​19, 20) 1946ರೊಳಗೆ ಲೋಕವ್ಯಾಪಕವಾಗಿ ಸಾರುವ ಕೆಲಸವನ್ನು ಮಾಡುತ್ತಿದ್ದ ಯೆಹೋವನ ಸಾಕ್ಷಿಗಳ ಸಂಖ್ಯೆಯು 1,76,456 ಆಗಿತ್ತು. ಮತ್ತು ಇವರಲ್ಲಿ ಹೆಚ್ಚಿನವರು ಮಹಾ ಸಮೂಹದವರಾಗಿದ್ದರು. ಇಸವಿ 2000ದಲ್ಲಿ, 60,00,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು 235 ದೇಶಗಳಲ್ಲಿ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದರು. ನಿಜವಾಗಿಯೂ ಇದು ಒಂದು ಮಹಾ ಸಮೂಹವಾಗಿದೆ! ಮತ್ತು ಈ ಸಂಖ್ಯೆಯು ಹೆಚ್ಚಾಗುತ್ತಾ ಹೋಗುತ್ತಿದೆ.