ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನುಷ್ಯರ ಕಷ್ಟಸಂಕಟ ಎಂಬ ಸಮಸ್ಯೆ

ಮನುಷ್ಯರ ಕಷ್ಟಸಂಕಟ ಎಂಬ ಸಮಸ್ಯೆ

ಮನುಷ್ಯರ ಕಷ್ಟಸಂಕಟ ಎಂಬ ಸಮಸ್ಯೆ

“ಅಯ್ಯೋ ದೇವರೇ ಹೀಗೇಕೆ?” ಏಷಿಯಾ ಮೈನರ್‌ನಲ್ಲಿ ನಡೆದ ಒಂದು ದೊಡ್ಡ ವಿಧ್ವಂಸಕ ಭೂಕಂಪದ ನಂತರ, ಬಹಳಷ್ಟು ವಿಕ್ರಯವಾಗುತ್ತಿದ್ದ ಒಂದು ವಾರ್ತಾಪತ್ರಿಕೆಯ ಮುಖಪುಟದಲ್ಲಿ ಆ ಪದಗಳು ದೊಡ್ಡ ಅಕ್ಷರಗಳಲ್ಲಿ ತೋರಿಬಂದವು. ಅದರ ಜೊತೆಗೆ ಕೊಡಲ್ಪಟ್ಟಿದ್ದ ಚಿತ್ರದಲ್ಲಿ, ದುಗುಡಗೊಂಡ ಒಬ್ಬ ತಂದೆಯು, ಕುಸಿದುಹೋಗಿದ್ದ ತಮ್ಮ ಮನೆಯಿಂದ ಗಾಯಗೊಂಡಿದ್ದ ತನ್ನ ಮಗಳನ್ನು ಎತ್ತಿ ಹೊರತರುವುದನ್ನು ತೋರಿಸಲಾಗಿತ್ತು.

ಯುದ್ಧಗಳು, ಕ್ಷಾಮಗಳು, ವ್ಯಾಧಿಗಳು, ಮತ್ತು ನೈಸರ್ಗಿಕ ವಿಪತ್ತುಗಳು ಅಪಾರ ನೋವು, ಎಣಿಸಲಾಗದಷ್ಟು ಕಣ್ಣೀರು ಮತ್ತು ಅಸಂಖ್ಯಾತ ಮರಣಗಳಿಗೆ ಕಾರಣವಾಗಿವೆ. ಇದರೊಂದಿಗೆ, ಬಲಾತ್ಕಾರ ಸಂಭೋಗ, ಮಕ್ಕಳ ಮೇಲಿನ ಶಾರೀರಿಕ ಹಾಗೂ ಲೈಂಗಿಕ ದೌರ್ಜನ್ಯ ಮತ್ತು ಇನ್ನಿತರ ಅಪರಾಧಗಳನ್ನು ಸಹ ಕೂಡಿಸಬಹುದು. ಅಪಘಾತಗಳಿಂದಾಗಿಯೂ ಅನೇಕಾನೇಕ ಜನರು ಗಾಯಗಳು ಮತ್ತು ಸಾವಿಗೆ ತುತ್ತಾಗಿದ್ದಾರೆ. ಅಷ್ಟುಮಾತ್ರವಲ್ಲದೆ, ರೋಗರುಜಿನಗಳು, ವೃದ್ಧಾಪ್ಯ, ಮತ್ತು ಪ್ರಿಯ ಜನರ ಸಾವಿನಿಂದಾಗಿ ಕೋಟ್ಯಾನುಕೋಟಿ ಜನರು ಸಂಕಟಪಡುತ್ತಿದ್ದಾರೆ.

ಇಪ್ಪತ್ತನೆಯ ಶತಮಾನದಲ್ಲಿನ ಕಷ್ಟಸಂಕಟಗಳಾದರೊ, ಹಿಂದೆಂದೂ ಇರದಷ್ಟು ಪ್ರಮಾಣದಲ್ಲಿದ್ದವು. 1914ರಿಂದ 1918ರ ವರೆಗೆ ನಡೆದ Iನೆಯ ಲೋಕ ಯುದ್ಧದಲ್ಲಿ ಸುಮಾರು ಒಂದು ಕೋಟಿ ಸೈನಿಕರು ಕೊಲ್ಲಲ್ಪಟ್ಟರು. ಕೆಲವು ಇತಿಹಾಸಗಾರರ ಹೇಳಿಕೆಗನುಸಾರ, ಅಷ್ಟೇ ಸಂಖ್ಯೆಯ ನಾಗರಿಕರು ಸಹ ಕೊಲ್ಲಲ್ಪಟ್ಟರು. IIನೆಯ ಲೋಕ ಯುದ್ಧದ ಸಮಯದಲ್ಲಿ ಸುಮಾರು ಐದು ಕೋಟಿ ಸೈನಿಕರು ಮತ್ತು ನಾಗರಿಕರು ಕೊಲ್ಲಲ್ಪಟ್ಟರು. ಇವರಲ್ಲಿ ಯಾವುದೇ ರಕ್ಷಣೆಯಿಲ್ಲದ ಸ್ತ್ರೀಯರು, ಮಕ್ಕಳು ಮತ್ತು ವೃದ್ಧ ಪುರುಷರು ಸೇರಿದ್ದರು. ಹಿಂದಿನ ಶತಮಾನದಾದ್ಯಂತ ಹೆಚ್ಚಿನ ಜನರು, ಜನಹತ್ಯೆ, ಕ್ರಾಂತಿ, ಬುಡಕಟ್ಟು ಹಿಂಸಾಚಾರ, ಹಸಿವೆ ಮತ್ತು ಬಡತನಕ್ಕೆ ಬಲಿಯಾಗಿಬಿಟ್ಟಿದ್ದಾರೆ. ಇಪ್ಪತ್ತನೆಯ ಶತಮಾನದ ಐತಿಹಾಸಿಕ ಭೂಪಟ (ಇಂಗ್ಲಿಷ್‌) ಎಂಬ ಪುಸ್ತಕವು ಅಂದಾಜುಮಾಡುವಂತೆ ಅಂತಹ “ಸಾಮೂಹಿಕ ಜಗಳ”ದಿಂದ 18 ಕೋಟಿಗಿಂತಲೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ.

ಇಸವಿ 1918/19ರ ಸ್ಪ್ಯಾನಿಷ್‌ ಇನ್‌ಫ್ಲೂಎನ್ಸಾದಿಂದ ಎರಡು ಕೋಟಿ ಜನರು ಅಸುನೀಗಿದರು. ಕಳೆದ ಎರಡು ದಶಕಗಳಲ್ಲಿ, ಸುಮಾರು 1.9 ಕೋಟಿ ಜನರು ಏಡ್ಸ್‌ ರೋಗದಿಂದ ಸತ್ತರು ಮತ್ತು ಆ ರೋಗಕ್ಕೆ ಕಾರಣವಾಗಿರುವ ವೈರಸ್‌ ಈಗ ಸುಮಾರು 3.5 ಕೋಟಿ ಜನರಲ್ಲಿದೆ. ಲಕ್ಷಗಟ್ಟಲೆ ಮಕ್ಕಳಿಗೆ ತಂದೆತಾಯಿಗಳಿಲ್ಲ. ಏಕೆ? ಅವರ ಹೆತ್ತವರು ಏಡ್ಸ್‌ ರೋಗದಿಂದಾಗಿ ಸತ್ತುಹೋಗಿದ್ದಾರೆ. ಮತ್ತು ಎಷ್ಟೋ ಅಸಂಖ್ಯಾತ ಶಿಶುಗಳು ಏಡ್ಸ್‌ ರೋಗದಿಂದಾಗಿ ಸಾಯುತ್ತಿವೆ, ಏಕೆಂದರೆ ಅವು ಗರ್ಭದಲ್ಲಿದ್ದಾಗಲೇ ಆ ರೋಗವು ಅವುಗಳಿಗೆ ದಾಟಿಸಲ್ಪಟ್ಟಿತ್ತು.

ಬೇರೆ ರೀತಿಯಲ್ಲೂ ಮಕ್ಕಳನ್ನು ದುಃಖಕ್ಕೆ ಗುರಿಪಡಿಸಲಾಗುತ್ತದೆ. 1995ರ ಅಂತ್ಯದಲ್ಲಿ, ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯೂನಿಸೆಫ್‌)ನಿಂದ ಒದಗಿಸಲಾದ ಮಾಹಿತಿಯನ್ನು ಉಲ್ಲೇಖಿಸುತ್ತಾ, ಇಂಗ್ಲೆಂಡಿನ ಮ್ಯಾಂಚೆಸ್ಟರ್‌ ಗಾರ್ಡಿಯನ್‌ ವೀಕ್ಲಿ ಎಂಬ ವಾರ್ತಾಪತ್ರಿಕೆಯು ತಿಳಿಸಿದ್ದು: “ಕಳೆದ ದಶಕದಲ್ಲಿ ನಡೆದಿರುವ ಯುದ್ಧಗಳಲ್ಲಿ 20 ಲಕ್ಷ ಮಕ್ಕಳು ಹತರಾದರು, 40ರಿಂದ 50 ಲಕ್ಷ ಮಕ್ಕಳು ಅಂಗವಿಕಲರಾದರು, 1.2 ಕೋಟಿ ಮಕ್ಕಳು ನಿರ್ಗತಿಕರಾದರು, 10 ಲಕ್ಷಕ್ಕಿಂತಲೂ ಹೆಚ್ಚಿನವರು ಅನಾಥರಾದರು ಅಥವಾ ತಮ್ಮ ಹೆತ್ತವರಿಂದ ಪ್ರತ್ಯೇಕಿಸಲ್ಪಟ್ಟರು ಮತ್ತು 1 ಕೋಟಿ ಮಕ್ಕಳು ಮಾನಸಿಕವಾಗಿ ಘಾಸಿಗೊಂಡಿದ್ದಾರೆ.” ಮತ್ತು ಈ ಸಂಖ್ಯೆಗೆ ಲೋಕವ್ಯಾಪಕವಾಗಿ ಪ್ರತಿ ವರ್ಷ ನಡೆಸಲಾಗುವ 4ರಿಂದ 5 ಕೋಟಿ ಗರ್ಭಪಾತಗಳನ್ನು ಸಹ ಕೂಡಿಸಿ!

ಭವಿಷ್ಯದಲ್ಲಿ ಏನು ಕಾದಿದೆ?

ಭವಿಷ್ಯದ ಕುರಿತಾಗಿ ಯೋಚಿಸುವಾಗ, ಭಯಂಕರವಾದದ್ದೇನೊ ನಡೆಯಲಿದೆ ಎಂಬ ಅನಿಸಿಕೆ ಅನೇಕರಿಗಿದೆ. ವಿಜ್ಞಾನಿಗಳ ಒಂದು ಗುಂಪು ಹೇಳಿದ್ದು: “ಮಾನವ ಚಟುವಟಿಕೆಗಳು . . . ಈಗಿನ ಜಗತ್ತನ್ನು ಎಷ್ಟು ಬದಲಾಯಿಸಬಹುದೆಂದರೆ, ನಮಗೀಗ ಗೊತ್ತಿರುವ ವಿಧದಲ್ಲಿ ಅದು ಜೀವಿತವನ್ನು ಪೋಷಿಸಲು ಅಶಕ್ತವಾಗಿರುವುದು.” ಅವರು ಕೂಡಿಸಿದ್ದು: “ಈ ಕ್ಷಣದಲ್ಲೂ, ಐದು ಜನರಲ್ಲಿ ಒಬ್ಬ ವ್ಯಕ್ತಿಯು, ತಿನ್ನಲು ಸಾಕಷ್ಟು ಇಲ್ಲದಿರುವಂಥ ಕಡು ಬಡತನದಲ್ಲಿ ಜೀವಿಸುತ್ತಿದ್ದಾನೆ, ಮತ್ತು ಹತ್ತು ಜನರಲ್ಲಿ ಒಬ್ಬನು ನ್ಯೂನಪೋಷಣೆಯಿಂದ ನರಳುತ್ತಿದ್ದಾನೆ.” ಈ ವಿಜ್ಞಾನಿಗಳು, “ಮುಂದೇನು ಕಾದಿದೆಯೊ ಅದರ ಕುರಿತಾಗಿ ಇಡೀ ಮಾನವಜಾತಿಯನ್ನು ಎಚ್ಚರಿಸಲಿಕ್ಕಾಗಿ” ಈ ಅವಕಾಶವನ್ನು ಉಪಯೋಗಿಸುತ್ತಾ ಹೇಳಿದ್ದು: “ವ್ಯಾಪಕವಾದ ಮಾನವ ದುರವಸ್ಥೆಯನ್ನು ತಪ್ಪಿಸಿಕೊಳ್ಳಬೇಕಾದರೆ, ಮತ್ತು ಈ ಗ್ರಹದಲ್ಲಿರುವ ನಮ್ಮ ಈ ಭೌಗೋಲಿಕ ಬೀಡು ಸರಿಪಡಿಸಲಾಗದಂಥ ರೀತಿಯಲ್ಲಿ ನಾಶವಾಗದೇ ಇರಬೇಕಾದರೆ, ಭೂಮಿ ಮತ್ತು ಅದರಲ್ಲಿರುವ ಜೀವವನ್ನು ನಾವು ನೋಡಿಕೊಳ್ಳುವ ವಿಧದಲ್ಲಿ ಒಂದು ದೊಡ್ಡ ಮಾರ್ಪಾಡು ಅತ್ಯಾವಶ್ಯಕ.”

ದೇವರು ಇಷ್ಟೊಂದು ಕಷ್ಟಸಂಕಟ ಮತ್ತು ದುಷ್ಟತನವನ್ನು ಏಕೆ ಹೀಗೆಯೇ ಬಿಟ್ಟುಬಿಟ್ಟಿದ್ದಾನೆ? ಆತನು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಲಿದ್ದಾನೆ? ಮತ್ತು ಯಾವಾಗ?

[ಪುಟ 3ರಲ್ಲಿರುವ ಚಿತ್ರ ಕೃಪೆ]

ಮೇಲೆ, ಗಾಲಿಕುರ್ಚಿ: UN/DPI Photo 186410C by P.S. Sudhakaran; ಮಧ್ಯದಲ್ಲಿ, ಹಸಿದಿರುವ ಮಕ್ಕಳು: WHO/OXFAM; ಕೆಳಗೆ, ಬಡಕಲಾಗಿರುವ ಮನುಷ್ಯ: FAO photo/B. Imevbore