ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!

ಯೆಹೋವನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!

ಯೆಹೋವನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!

“ನನ್ನ ಪ್ರಾಣವು ಕರ್ತನನ್ನು [“ಯೆಹೋವನನ್ನು,” NW] ಕೊಂಡಾಡುತ್ತದೆ . . . ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು [“ಮಹತ್ಕಾರ್ಯಗಳನ್ನು,” NW] ಮಾಡಿದ್ದಾನೆ.”​—ಲೂಕ 1:46-49.

1. ಯಾವ ಮಹತ್ಕಾರ್ಯಗಳಿಗಾಗಿ ನಾವು ಯೆಹೋವನನ್ನು ಸ್ತುತಿಸುವುದು ಯೋಗ್ಯವಾಗಿದೆ?

ಯೆಹೋವನ ಮಹತ್ಕಾರ್ಯಗಳಿಂದಾಗಿ ಖಂಡಿತವಾಗಿಯೂ ಆತನು ಸ್ತುತಿಗೆ ಅರ್ಹನಾಗಿದ್ದಾನೆ. ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆಯಾದದ್ದನ್ನು ಪುನಃ ಜ್ಞಾಪಿಸಿಕೊಳ್ಳುವಾಗ ಪ್ರವಾದಿಯಾದ ಮೋಶೆಯು ಘೋಷಿಸಿದ್ದು: “ಯೆಹೋವನು ನಡಿಸಿದ ಆ ವಿಶೇಷಕಾರ್ಯಗಳನ್ನು ಪ್ರತ್ಯಕ್ಷವಾಗಿ ನೋಡಿದವರಾದ ನಿಮಗೇ ಹೇಳುತ್ತಾ ಇದ್ದೇನೆ.” (ಧರ್ಮೋಪದೇಶಕಾಂಡ 11:1-7) ಅದೇ ರೀತಿಯಲ್ಲಿ, ದೇವದೂತನಾದ ಗಬ್ರಿಯೇಲನು ಯೇಸುವಿನ ಜನನದ ಕುರಿತಾಗಿ ಕನ್ಯೆಯಾದ ಮರಿಯಳಿಗೆ ತಿಳಿಸಿದಾಗ ಅವಳು ಹೀಗಂದಳು: “ನನ್ನ ಪ್ರಾಣವು ಕರ್ತನನ್ನು [“ಯೆಹೋವನನ್ನು,” NW] ಕೊಂಡಾಡುತ್ತದೆ, . . . ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು [“ಮಹತ್ಕಾರ್ಯಗಳನ್ನು,” NW] ಮಾಡಿದ್ದಾನೆ.” (ಲೂಕ 1:46-49) ಐಗುಪ್ತದ ಬಂಧಿವಾಸದಿಂದ ಇಸ್ರಾಯೇಲ್ಯರ ಬಿಡುಗಡೆ ಮತ್ತು ಅದ್ಭುತಕರವಾಗಿ ಆತನ ಪ್ರಿಯ ಮಗನು ಮರಿಯಳಲ್ಲಿ ಗರ್ಭತಾಳಿದಂಥ ರೀತಿಯ ಮಹತ್ಕಾರ್ಯಗಳಿಗಾಗಿ ಯೆಹೋವನ ಸಾಕ್ಷಿಗಳಾದ ನಾವು ಸಹ ಆತನನ್ನು ಕೊಂಡಾಡುತ್ತೇವೆ.

2. (ಎ) ವಿಧೇಯ ಮಾನವಕುಲಕ್ಕಾಗಿ ದೇವರ ‘ನಿತ್ಯ ಉದ್ದೇಶವು’ ಏನನ್ನು ಅರ್ಥೈಸುತ್ತದೆ? (ಬಿ) ಪತ್ಮೋಸ್‌ ದ್ವೀಪದಲ್ಲಿ ಯೋಹಾನನು ಏನನ್ನು ಅನುಭವಿಸಿದನು?

2 ಯೆಹೋವನ ಅನೇಕ ಮಹತ್ಕಾರ್ಯಗಳು, ಮೆಸ್ಸೀಯ ಮತ್ತು ಅವನ ರಾಜ್ಯದ ಆಳ್ವಿಕೆಯ ಮೂಲಕ ವಿಧೇಯ ಮಾನವಕುಲವನ್ನು ಆಶೀರ್ವದಿಸುವ ಆತನ ‘ನಿತ್ಯ ಉದ್ದೇಶ’ದೊಂದಿಗೆ ಸಂಬಂಧಿಸಲ್ಪಟ್ಟಿವೆ. (ಎಫೆಸ 3:​8-13, NW) ಆ ಉದ್ದೇಶವು ಪ್ರಗತಿಪರವಾಗಿ ನೆರವೇರುತ್ತಿದ್ದಂತೆಯೇ, ವೃದ್ಧ ಅಪೊಸ್ತಲನಾದ ಯೋಹಾನನು ಒಂದು ದರ್ಶನದ ಮೂಲಕ ಸ್ವರ್ಗದಲ್ಲಿ ತೆರೆದಿರುವ ಬಾಗಿಲಿನಿಂದ ಇಣಿಕಿನೋಡುವ ಅವಕಾಶವನ್ನು ಪಡೆದನು. ಆಗ, ತುತೂರಿಯಂಥ ಒಂದು ಧ್ವನಿಯು ಅವನಿಗೆ “ಇಲ್ಲಿಗೆ ಏರಿಬಾ, ಮುಂದೆ ಆಗಬೇಕಾದವುಗಳನ್ನು ನಿನಗೆ ತೋರಿಸುವೆನು” ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡನು. (ಪ್ರಕಟನೆ 4:1) ಯೋಹಾನನು ‘ದೇವರ ವಾಕ್ಯಕ್ಕೋಸ್ಕರ ಮತ್ತು ಯೇಸುವಿನ ವಿಷಯವಾದ ಸಾಕ್ಷಿ’ ಕೊಡುತ್ತಿದ್ದದ್ದರಿಂದ, ರೋಮನ್‌ ಸರಕಾರವು ಅವನನ್ನು ‘ಪತ್ಮೋಸ್‌ ದ್ವೀಪಕ್ಕೆ’ ಗಡೀಪಾರುಮಾಡಿತ್ತು. ಅಲ್ಲಿ ಅವನಿಗೆ “ಯೇಸು ಕ್ರಿಸ್ತನ ಪ್ರಕಟನೆಯು” ಕೊಡಲ್ಪಟ್ಟಿತು. ಆ ಸಮಯದಲ್ಲಿ ಅವನು ನೋಡಿದ ಮತ್ತು ಕೇಳಿಸಿಕೊಂಡಂತಹ ವಿಷಯಗಳು ದೇವರ ನಿತ್ಯ ಉದ್ದೇಶದ ಕುರಿತಾಗಿ ಬಹಳಷ್ಟನ್ನು ಪ್ರಕಟಪಡಿಸಿದವು. ಇದು, ಎಲ್ಲ ಸತ್ಕ್ರೈಸ್ತರಿಗೆ ಆತ್ಮಿಕ ಜ್ಞಾನೋದಯ ಮತ್ತು ಸಮಯೋಚಿತವಾದ ಉತ್ತೇಜನವನ್ನು ಒದಗಿಸಿತು.​—ಪ್ರಕಟನೆ 1:​1, 9, 10.

3. ದರ್ಶನದಲ್ಲಿ ಯೋಹಾನನು ನೋಡಿದ 24 ಮಂದಿ ಹಿರಿಯರು ಯಾರನ್ನು ಪ್ರತಿನಿಧಿಸುತ್ತಾರೆ?

3 ಸ್ವರ್ಗದಲ್ಲಿ ಆ ತೆರೆದಿದ್ದ ಬಾಗಿಲಿನ ಮೂಲಕ ಯೋಹಾನನು 24 ಮಂದಿ ಹಿರಿಯರನ್ನು ನೋಡಿದನು. ಅವರು ರಾಜರಂತೆ ಸಿಂಹಾಸನಗಳ ಮೇಲೆ ಕುಳಿತುಕೊಂಡಿದ್ದು, ಕಿರೀಟಗಳನ್ನು ಧರಿಸಿದ್ದರು. ಅವರು ದೇವರ ಮುಂದೆ ಅಡ್ಡಬಿದ್ದು, “ಕರ್ತನೇ, [“ಯೆಹೋವನೇ,” NW] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳಿದರು. (ಪ್ರಕಟನೆ 4:11) ಆ ಹಿರಿಯರು, ಯೆಹೋವನು ವಾಗ್ದಾನಿಸಿದಂಥ ಉನ್ನತ ಸ್ಥಾನಗಳಲ್ಲಿರುವ ಎಲ್ಲ ಪುನರುತ್ಥಿತ ಅಭಿಷಿಕ್ತ ಕ್ರೈಸ್ತರನ್ನು ಪ್ರತಿನಿಧಿಸುತ್ತಾರೆ. ಸೃಷ್ಟಿಯೊಂದಿಗೆ ಸಂಬಂಧಿಸಿರುವ ಯೆಹೋವನ ಮಹತ್ಕಾರ್ಯಗಳಿಂದಾಗಿ ಅವರು ಆತನನ್ನು ಸ್ತುತಿಸಲು ಪ್ರಚೋದಿಸಲ್ಪಡುತ್ತಾರೆ. ನಾವು ಸಹ ಅವರಂತೆಯೇ ‘ದೇವರ ನಿತ್ಯಶಕ್ತಿ ಮತ್ತು ದೇವತ್ವದ’ ರುಜುವಾತನ್ನು ನೋಡಿ ಮೂಕವಿಸ್ಮಿತರಾಗುತ್ತೇವೆ. (ರೋಮಾಪುರ 1:20) ಮತ್ತು ನಾವು ಯೆಹೋವನ ಬಗ್ಗೆ ಹೆಚ್ಚನ್ನು ಕಲಿಯುತ್ತಾ ಹೋಗುವಾಗ, ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಲು ನಮಗೆ ಇನ್ನೂ ಹೆಚ್ಚು ಕಾರಣಗಳು ಸಿಗುತ್ತವೆ.

ಯೆಹೋವನ ಸ್ತುತಿಗೆ ಅರ್ಹವಾದ ಕಾರ್ಯಗಳ ಕುರಿತು ಘೋಷಿಸಿರಿ!

4, 5. ದಾವೀದನು ಯೆಹೋವನನ್ನು ಹೇಗೆ ಸ್ತುತಿಸಿದನೆಂಬುದರ ಉದಾಹರಣೆಗಳನ್ನು ಕೊಡಿರಿ.

4 ಕೀರ್ತನೆಗಾರನಾದ ದಾವೀದನು ದೇವರನ್ನು ಆತನ ಮಹತ್ಕಾರ್ಯಗಳಿಗಾಗಿ ಸ್ತುತಿಸಿದನು. ಉದಾಹರಣೆಗಾಗಿ ದಾವೀದನು ಹೀಗೆ ಹಾಡಿದನು: “ಚೀಯೋನಿನಲ್ಲಿ ವಾಸಿಸುವ ಯೆಹೋವನನ್ನು ಕೀರ್ತಿಸಿರಿ; ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ. ಯೆಹೋವನೇ, ಮರಣದ್ವಾರದೊಳಗೆ ಸೇರದಂತೆ ನನ್ನನ್ನು ಉದ್ಧರಿಸುವವನೇ, ಕನಿಕರಿಸು; ಹಗೆಗಳಿಂದ ನನಗುಂಟಾದ ಬಾಧೆಯನ್ನು ಲಕ್ಷ್ಯಕ್ಕೆ ತಂದುಕೋ. ಆಗ ನಾನು ನಿನ್ನ ಸ್ತೋತ್ರವನ್ನು ಪ್ರಸಿದ್ಧಪಡಿಸುವೆನು; ನಿನ್ನಿಂದಾದ ರಕ್ಷಣೆಗಾಗಿ ಚೀಯೋನೆಂಬ ಕುಮಾರಿಯ ಬಾಗಲುಗಳಲ್ಲಿ ಹರ್ಷಿಸುವೆನು.” (ಕೀರ್ತನೆ 9:11, 13, 14) ದೇವಾಲಯವನ್ನು ಕಟ್ಟುವುದಕ್ಕೆ ಸಂಬಂಧಿಸಿದ ವಾಸ್ತುಶಿಲ್ಪ ಯೋಜನೆಗಳನ್ನು ತನ್ನ ಮಗನಾದ ಸೊಲೊಮೋನನಿಗೆ ಒಪ್ಪಿಸಿಕೊಟ್ಟ ನಂತರ ದಾವೀದನು ದೇವರನ್ನು ಸ್ತುತಿಸುತ್ತಾ ಹೇಳಿದ್ದು: “ಯೆಹೋವಾ, ಮಹಿಮಪ್ರತಾಪವೈಭವ ಪರಾಕ್ರಮಪ್ರಭಾವಗಳು ನಿನ್ನವು; . . . ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ. . . . ಆದದರಿಂದ ನಮ್ಮ ದೇವರೇ, ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ.”​—1 ಪೂರ್ವಕಾಲವೃತ್ತಾಂತ 29:​10-13.

5 ನಾವು ದಾವೀದನಂತೆಯೇ ದೇವರನ್ನು ಸ್ತುತಿಸುವಂತೆ ಶಾಸ್ತ್ರವಚನಗಳು ಪದೇ ಪದೇ ಹೇಳುತ್ತವೆ, ಹೌದು ಪ್ರೇರಿಸುತ್ತವೆ. ಬೈಬಲಿನ ಕೀರ್ತನೆ ಪುಸ್ತಕವು, ಯೆಹೋವನ ಸ್ತುತಿಯ ಅನೇಕಾನೇಕ ಅಭಿವ್ಯಕ್ತಿಗಳನ್ನು ಒದಗಿಸುತ್ತದೆ. ಈ ಸ್ತುತಿಗೀತೆಗಳಲ್ಲಿ ಅರ್ಧದಷ್ಟನ್ನು ದಾವೀದನೇ ರಚಿಸಿದ್ದಾನೆ. ಅವನು ಸತತವಾಗಿ ಯೆಹೋವನನ್ನು ಸ್ತುತಿಸಿದನು ಮತ್ತು ಆತನಿಗೆ ಉಪಕಾರ ಸಲ್ಲಿಸಿದನು. (ಕೀರ್ತನೆ 69:30) ಅಷ್ಟುಮಾತ್ರವಲ್ಲದೆ, ಪ್ರಾಚೀನ ಸಮಯದಿಂದಲೂ ದಾವೀದನ ಮತ್ತು ಇತರರ ದೈವಿಕವಾಗಿ ಪ್ರೇರಿತವಾದ ಗೀತ ಸಂಯೋಜನೆಗಳು, ಯೆಹೋವನನ್ನು ಸ್ತುತಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿವೆ.

6. ಪ್ರೇರಿತ ಕೀರ್ತನೆಗಳು ನಮಗೆ ಹೇಗೆ ಉಪಯುಕ್ತವಾಗಿವೆ?

6 ಯೆಹೋವನ ಆರಾಧಕರಿಗೆ ಕೀರ್ತನೆಗಳು ಎಷ್ಟು ಉಪಯುಕ್ತವಾಗಿವೆ! ಯೆಹೋವನು ನಮ್ಮ ಪರವಾಗಿ ನಡೆಸಿರುವ ಎಲ್ಲ ಮಹತ್ಕಾರ್ಯಗಳಿಗಾಗಿ ನಾವು ಆತನಿಗೆ ಉಪಕಾರವನ್ನು ಹೇಳಬಯಸುವಾಗಲೆಲ್ಲಾ, ಇಂದು ಸಹ ನಮ್ಮ ಗಮನವು ಸ್ವಾಭಾವಿಕವಾಗಿಯೇ ಕೀರ್ತನೆಗಳಲ್ಲಿರುವ ಸೊಗಸಾದ ಸ್ತುತಿಪದಗಳ ಕಡೆಗೆ ಹೋಗುತ್ತದೆ. ಉದಾಹರಣೆಗೆ, ಒಂದು ಹೊಸ ದಿನದಂದು ಬೆಳಗ್ಗೆ ಎದ್ದಾಕ್ಷಣ ನಾವು ಇಂಥ ಅಭಿವ್ಯಕ್ತಿಗಳನ್ನು ಉಪಯೋಗಿಸಲು ಪ್ರಚೋದಿಸಲ್ಪಡಬಹುದು: “ಯೆಹೋವನೇ, ನಿನ್ನನ್ನು ಕೊಂಡಾಡುವದೂ ಪರಾತ್ಪರನೇ, ನಿನ್ನ ನಾಮವನ್ನು ಸಂಕೀರ್ತಿಸುವದೂ ಯುಕ್ತವಾಗಿದೆ. . . . ಹೊತ್ತಾರೆಯಲ್ಲಿ ನಿನ್ನ ಪ್ರೇಮವನ್ನೂ ರಾತ್ರಿಯಲ್ಲಿ ನಿನ್ನ ಸತ್ಯತೆಯನ್ನೂ ವರ್ಣಿಸುವದು ಉಚಿತವಾಗಿದೆ. ಯೆಹೋವನೇ, ನಿನ್ನ ಕ್ರಿಯೆಗಳಿಂದ ನನ್ನನ್ನು ಸಂತೋಷಪಡಿಸಿದ್ದೀ; ನಿನ್ನ ಕೆಲಸಗಳ ದೆಸೆಯಿಂದ ಉತ್ಸಾಹಧ್ವನಿಮಾಡುತ್ತೇನೆ.” (ಕೀರ್ತನೆ 92:​1-4) ನಮ್ಮ ಆತ್ಮಿಕ ಪ್ರಗತಿಗೆ ಅಡ್ಡಬರುವ ಯಾವುದೇ ಅಡೆತಡೆಯನ್ನು ತೆಗೆದುಹಾಕುವುದರಲ್ಲಿ ನಾವು ಸಫಲರಾಗುವಾಗ, ಕೀರ್ತನೆಗಾರನಂತೆಯೇ ನಾವೂ ಪ್ರಾರ್ಥನೆಯಲ್ಲಿ ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಮನಸ್ಸುಳ್ಳವರಾಗಿರಬಹುದು: “ಬನ್ನಿರಿ, ಯೆಹೋವನಿಗೆ ಉತ್ಸಾಹಧ್ವನಿ ಗೈಯುವಾ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ. ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ; ಕೀರ್ತನೆಗಳಿಂದ ಆತನಿಗೆ ಜಯಘೋಷಮಾಡೋಣ.”​—ಕೀರ್ತನೆ 95:​1, 2.

7. (ಎ) ಕ್ರೈಸ್ತರು ಹಾಡುವಂಥ ಅನೇಕ ಗೀತೆಗಳ ವಿಷಯದಲ್ಲಿ ಒಂದು ಗಮನಾರ್ಹ ಸಂಗತಿ ಏನಾಗಿದೆ? (ಬಿ) ಕೂಟಗಳು ಆರಂಭವಾಗುವ ಮುಂಚೆ ಬೇಗನೆ ಬಂದು, ಅವು ಮುಗಿಯುವ ವರೆಗೂ ಉಳಿಯಲಿಕ್ಕಾಗಿ ಒಂದು ಕಾರಣವೇನು?

7 ಹೆಚ್ಚಾಗಿ ನಾವು ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವುದು, ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿಯೇ. ಈ ಸ್ತುತಿಗೀತೆಗಳಲ್ಲಿ ಹೆಚ್ಚಿನವು, ಕೀರ್ತನೆಗಳ ಪುಸ್ತಕದಿಂದ ತೆಗೆಯಲ್ಪಟ್ಟಿರುವ ಪ್ರೇರಿತ ವಿಚಾರಗಳ ಮೇಲೆ ಆಧಾರಿಸಲ್ಪಟ್ಟಿವೆ ಎಂಬ ಸಂಗತಿಯು ಗಮನಾರ್ಹ. ಹೃದಯೋಲ್ಲಾಸಗೊಳಿಸುವಂಥ ಯೆಹೋವನ ಸ್ತುತಿಗೀತೆಗಳ ಒಂದು ಆಧುನಿಕ ಸಂಗ್ರಹವು ನಮ್ಮ ಬಳಿ ಇರುವುದಕ್ಕಾಗಿ ನಾವೆಷ್ಟು ಸಂತೋಷಿತರು! ಕೂಟಗಳು ಆರಂಭವಾಗುವುದಕ್ಕೆ ಮುಂಚೆಯೇ ಬಂದು, ಅವು ಮುಗಿಯುವ ವರೆಗೂ ನಾವು ಉಪಸ್ಥಿತರಿರಲಿಕ್ಕಾಗಿರುವ ತುಂಬ ಒಳ್ಳೆಯ ಕಾರಣವು, ದೇವರಿಗೆ ಸ್ತುತಿಗಳನ್ನು ಹಾಡುವುದೇ ಆಗಿದೆ. ಹೀಗೆ ನಾವು ಹಾಡು ಮತ್ತು ಪ್ರಾರ್ಥನೆಯ ಮೂಲಕ ಯೆಹೋವನನ್ನು ಸ್ತುತಿಸುವುದರಲ್ಲಿ ಜೊತೆ ಆರಾಧಕರೊಂದಿಗೆ ಜೊತೆಗೂಡಬಹುದು.

“ಯಾಹುವಿಗೆ ಸ್ತೋತ್ರ”

8. “ಹಲ್ಲೆಲೂಯಾ” ಎಂಬ ಪದದಲ್ಲಿ ಏನು ಅಡಕವಾಗಿದೆ, ಮತ್ತು ಸಾಮಾನ್ಯವಾಗಿ ಆ ಪದವನ್ನು ಹೇಗೆ ಭಾಷಾಂತರಿಸಲಾಗುತ್ತದೆ?

8 “ಹಲ್ಲೆಲೂಯಾ” ಎಂಬ ಪದದಲ್ಲಿ, ಯೆಹೋವನನ್ನು ಸ್ತುತಿಸುವುದು ಅಡಕವಾಗಿದೆ. ಆ ಪದವು, “ಯಾಹುವಿಗೆ ಸ್ತೋತ್ರ” ಎಂದೇ ಯಾವಾಗಲೂ ಭಾಷಾಂತರಿಸಲ್ಪಡುವ ಒಂದು ಹೀಬ್ರು ಅಭಿವ್ಯಕ್ತಿಯಾಗಿದೆ. ಉದಾಹರಣೆಗಾಗಿ, ಕೀರ್ತನೆ 135:​1-3ರಲ್ಲಿ, ನಾವು ಯೆಹೋವನನ್ನು ಸ್ತುತಿಸುವಂತೆ ಕರೆಕೊಡುವ ಈ ಹೃತ್ಪೂರ್ವಕವಾದ, ಆದರೆ ಪ್ರಬಲವಾದ ಆಮಂತ್ರಣವು ಇದೆ: “ಯಾಹುವಿಗೆ ಸ್ತೋತ್ರ! ಯೆಹೋವನಾಮವನ್ನು ಸ್ತುತಿಸಿರಿ. ಯೆಹೋವನ ಸೇವಕರೇ, ಯೆಹೋವನ ಮಂದಿರದಲ್ಲಿಯೂ ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ, ಆತನನ್ನು ಕೀರ್ತಿಸಿರಿ. ಯಾಹುವಿಗೆ ಸ್ತೋತ್ರ! ಯೆಹೋವನು ಒಳ್ಳೆಯವನು. ಆತನ ನಾಮವನ್ನು ಕೊಂಡಾಡಿರಿ; ಅದು ಮನೋಹರವಾಗಿದೆ.”

9. ಯೆಹೋವನನ್ನು ಸ್ತುತಿಸುವಂತೆ ನಮ್ಮನ್ನು ಯಾವುದು ಪ್ರಚೋದಿಸುತ್ತದೆ?

9 ದೇವರ ಸೃಷ್ಟಿಯ ಅದ್ಭುತಕಾರ್ಯಗಳು ಮತ್ತು ನಮ್ಮ ಪರವಾಗಿ ಆತನು ಮಾಡಿರುವ ಕಾರ್ಯಗಳ ಕುರಿತು ನಾವು ಆಲೋಚಿಸುವಾಗ, ನಮ್ಮ ಹೃದಯದಾಳದಿಂದ ಹೊಮ್ಮುವ ಗಣ್ಯತೆಯು ನಾವು ಆತನನ್ನು ಸ್ತುತಿಸುವಂತೆ ಪ್ರಚೋದಿಸುತ್ತದೆ. ಹಿಂದಿನ ಸಮಯಗಳಲ್ಲಿ ಆತನು ತನ್ನ ಜನರ ಪರವಾಗಿ ನಡೆಸಿರುವ ಅದ್ಭುತಕಾರ್ಯಗಳ ಕುರಿತು ನಾವು ಯೋಚಿಸುವಾಗ ಆತನನ್ನು ಕೊಂಡಾಡುವಂತೆ ನಮ್ಮ ಹೃದಯಗಳು ನಮ್ಮನ್ನು ಪ್ರೇರಿಸುತ್ತವೆ. ಮತ್ತು ಯೆಹೋವನು ಇನ್ನು ಮುಂದೆಯೂ ಮಾಡಲಿರುವ ಅದ್ಭುತಕರ ಸಂಗತಿಗಳ ಕುರಿತಾದ ವಾಗ್ದಾನಗಳ ಬಗ್ಗೆ ಮನನ ಮಾಡುವಾಗ, ನಾವು ಆತನಿಗೆ ಸ್ತುತಿ ಮತ್ತು ಗಣ್ಯತೆಯನ್ನು ವ್ಯಕ್ತಪಡಿಸಬಹುದಾದ ಮಾರ್ಗಗಳನ್ನು ಹುಡುಕುತ್ತಾ ಇರುವೆವು.

10, 11. ನಮ್ಮ ಅಸ್ತಿತ್ವವೇ ದೇವರನ್ನು ಸ್ತುತಿಸಲು ನಮಗೆ ಹೇಗೆ ಕಾರಣವನ್ನು ಕೊಡುತ್ತದೆ?

10 ನಮ್ಮ ಸ್ವಂತ ಅಸ್ತಿತ್ವವೇ ಯಾಹುವನ್ನು ಸ್ತುತಿಸಲಿಕ್ಕಾಗಿ ಕಾರಣವನ್ನು ಕೊಡುತ್ತದೆ. ದಾವೀದನು ಹೀಗೆ ಹಾಡಿದನು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು [ಯೆಹೋವನನ್ನು] ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” (ಕೀರ್ತನೆ 139:14) ಹೌದು ನಾವು ‘ಅದ್ಭುತವಾಗಿ ರಚಿಸಲ್ಪಟ್ಟಿದ್ದೇವೆ’ ಮತ್ತು ನಮಗೆ ದೃಷ್ಟಿಶಕ್ತಿ, ಶ್ರವಣಶಕ್ತಿ, ಹಾಗೂ ಯೋಚನಾ ಸಾಮರ್ಥ್ಯದಂತಹ ಅಮೂಲ್ಯ ವರದಾನಗಳಿವೆ. ಆದುದರಿಂದ ನಾವು ನಮ್ಮ ನಿರ್ಮಾಣಿಕನಿಗೆ ಸ್ತುತಿಯನ್ನು ತರುವಂಥ ರೀತಿಯಲ್ಲಿ ಜೀವಿಸಬೇಕಲ್ಲವೊ? “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ” ಎಂದು ಪೌಲನು ಬರೆದಾಗ ಅವನು ಅದೇ ವಿಚಾರವನ್ನು ವ್ಯಕ್ತಪಡಿಸಿದನು.​—1 ಕೊರಿಂಥ 10:31.

11 ನಾವು ಯೆಹೋವನನ್ನು ನಿಜವಾಗಿಯೂ ಪ್ರೀತಿಸುವುದಾದರೆ, ನಾವು ಪ್ರತಿಯೊಂದು ಕೆಲಸವನ್ನು ಆತನ ಮಹಿಮೆಗಾಗಿಯೇ ಮಾಡುವೆವು. “ನಿನ್ನ ದೇವರಾದ ಕರ್ತನನ್ನು [“ಯೆಹೋವನನ್ನು,” NW] ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು” ಎಂಬುದೇ ಮೊದಲ ಆಜ್ಞೆ ಎಂದು ಯೇಸು ಹೇಳಿದನು. (ಮಾರ್ಕ 12:30; ಧರ್ಮೋಪದೇಶಕಾಂಡ 6:5) ನಾವು ಖಂಡಿತವಾಗಿಯೂ ಯೆಹೋವನನ್ನು ಪ್ರೀತಿಸಬೇಕು ಮತ್ತು ನಮ್ಮ ನಿರ್ಮಾಣಿಕನೂ, ‘ಎಲ್ಲಾ ಒಳ್ಳೇ ದಾನಗಳ ಮತ್ತು ಕುಂದಿಲ್ಲದ ಎಲ್ಲಾ ವರಗಳ’ ದಾತನೂ ಆಗಿರುವವನೋಪಾದಿ ಆತನನ್ನು ಸ್ತುತಿಸಬೇಕು. (ಯಾಕೋಬ 1:17; ಯೆಶಾಯ 51:13; ಅ. ಕೃತ್ಯಗಳು 17:28) ನಮ್ಮ ತರ್ಕ ಸಾಮರ್ಥ್ಯಗಳು, ನಮ್ಮ ಆತ್ಮಿಕ ಸಾಮರ್ಥ್ಯ ಹಾಗೂ ನಮ್ಮ ಶಾರೀರಿಕ ಶಕ್ತಿ, ಹೀಗೆ ನಮ್ಮ ಎಲ್ಲ ಗುಣಗಳು ಮತ್ತು ಸಾಮರ್ಥ್ಯಗಳು ಯೆಹೋವನಿಂದ ಬಂದವುಗಳಾಗಿವೆ. ಆದುದರಿಂದ ನಮ್ಮ ಸೃಷ್ಟಿಕರ್ತನೋಪಾದಿ ಆತನೊಬ್ಬನೇ ನಮ್ಮ ಸ್ತುತಿಗೆ ಅರ್ಹನು.

12. ಯೆಹೋವನ ಮಹತ್ಕಾರ್ಯಗಳು ಮತ್ತು ಕೀರ್ತನೆ 40:5ರ ಮಾತುಗಳ ಕುರಿತಾಗಿ ನಿಮಗೆ ಹೇಗನಿಸುತ್ತದೆ?

12 ಯೆಹೋವನ ಮಹತ್ಕಾರ್ಯಗಳು, ನಾವು ಆತನನ್ನು ಪ್ರೀತಿಸಿ, ಸ್ತುತಿಸಲಿಕ್ಕಾಗಿ ಅಸಂಖ್ಯಾತ ಕಾರಣಗಳನ್ನು ಕೊಡುತ್ತವೆ! “ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ” ಎಂದು ದಾವೀದನು ಹಾಡಿದನು. (ಕೀರ್ತನೆ 40:5) ದಾವೀದನು ಯೆಹೋವನು ಮಾಡಿದ ಎಲ್ಲ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಲು ಶಕ್ತನಾಗಿರಲಿಲ್ಲ ಮತ್ತು ನಾವು ಸಹ ಹಾಗೆ ಮಾಡಶಕ್ತರಲ್ಲ. ಆದರೆ ಆತನ ಯಾವುದೇ ಮಹತ್ಕಾರ್ಯವು ನಮ್ಮ ಗಮನಕ್ಕೆ ತರಲ್ಪಟ್ಟಾಗ, ನಾವು ಆತನನ್ನು ಯಾವಾಗಲೂ ಸ್ತುತಿಸೋಣ.

ದೇವರ ನಿತ್ಯ ಉದ್ದೇಶಕ್ಕೆ ಸಂಬಂಧಿತ ಕಾರ್ಯಗಳು

13. ದೇವರ ಮಹತ್ಕಾರ್ಯಗಳೊಂದಿಗೆ ನಮ್ಮ ನಿರೀಕ್ಷೆಯು ಹೇಗೆ ಹೆಣೆಯಲ್ಪಟ್ಟಿದೆ?

13 ಭವಿಷ್ಯಕ್ಕಾಗಿರುವ ನಮ್ಮ ನಿರೀಕ್ಷೆಯು, ದೇವರ ನಿತ್ಯ ಉದ್ದೇಶದೊಂದಿಗೆ ಸಂಬಂಧಿತವಾದ ಮಹಾನ್‌ ಹಾಗೂ ಸ್ತುತಿಗೆ ಅರ್ಹವಾದ ಕ್ರಿಯೆಗಳೊಂದಿಗೆ ಹೆಣೆಯಲ್ಪಟ್ಟಿದೆ. ಏದೆನಿನಲ್ಲಿನ ದಂಗೆಯ ನಂತರ, ಯೆಹೋವನು ನಿರೀಕ್ಷೆಯ ಪ್ರಪ್ರಥಮ ಪ್ರವಾದನೆಯನ್ನು ಕೊಟ್ಟನು. ಸರ್ಪಕ್ಕೆ ದಂಡನೆಯನ್ನು ವಿಧಿಸುತ್ತಾ, ದೇವರು ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಭೌಗೋಲಿಕ ಜಲಪ್ರಳಯದ ಮೂಲಕ ದುಷ್ಟ ಲೋಕವನ್ನು ಅಳಿಸಿಹಾಕಿ, ನೋಹ ಮತ್ತು ಅವನ ಕುಟುಂಬವನ್ನು ಸಂರಕ್ಷಿಸುವ ಮೂಲಕ ಯೆಹೋವನು ಒಂದು ಮಹತ್ಕಾರ್ಯವನ್ನು ನಡೆಸಿದನು. ಅದರ ನಂತರವೂ ನಂಬಿಗಸ್ತ ಮಾನವರ ಹೃದಯಗಳಲ್ಲಿ ಆ ಸ್ತ್ರೀಯ ವಾಗ್ದತ್ತ ಸಂತಾನದ ಕುರಿತಾದ ನಿರೀಕ್ಷೆಯ ದೀಪವು ಉರಿಯುತ್ತಾ ಇತ್ತು. (2 ಪೇತ್ರ 2:5) ಅಬ್ರಹಾಮ ಮತ್ತು ದಾವೀದರಂಥ ನಂಬಿಕೆಯ ಪುರುಷರಿಗೆ ಕೊಡಲ್ಪಟ್ಟ ಪ್ರವಾದನಾತ್ಮಕ ವಾಗ್ದಾನಗಳು, ಆ ಸಂತಾನದ ಮೂಲಕ ಯೆಹೋವನು ಪೂರೈಸಲಿದ್ದ ವಿಷಯಗಳ ಕುರಿತಾಗಿ ಹೆಚ್ಚಿನ ಒಳನೋಟವನ್ನು ಕೊಟ್ಟವು.​—ಆದಿಕಾಂಡ 22:​15-18; 2 ಸಮುವೇಲ 7:12.

14. ಮಾನವಕುಲದ ಪರವಾಗಿ ಯೆಹೋವನು ನಡೆಸಿರುವ ಮಹತ್ಕಾರ್ಯಗಳ ಪರಮೋಚ್ಚ ಉದಾಹರಣೆಯು ಯಾವುದು?

14 ಯೆಹೋವನು ಮಾನವಕುಲಕ್ಕಾಗಿ ಮಹತ್ಕಾರ್ಯಗಳನ್ನು ನಡೆಸುವಾತನಾಗಿದ್ದಾನೆ ಎಂಬುದರ ಪರಮೋಚ್ಚ ಸಾಕ್ಷ್ಯವು, ಆತನು ತನ್ನ ಏಕಜಾತ ಪುತ್ರನೂ, ವಾಗ್ದತ್ತ ಸಂತಾನವೂ ಆದ ಯೇಸು ಕ್ರಿಸ್ತನನ್ನು ಒಂದು ಪ್ರಾಯಶ್ಚಿತ್ತ ಯಜ್ಞದೋಪಾದಿ ಕೊಟ್ಟಾಗ ಪ್ರಕಟವಾಯಿತು. (ಯೋಹಾನ 3:16; ಅ. ಕೃತ್ಯಗಳು 2:29-36) ಈ ಪ್ರಾಯಶ್ಚಿತ್ತವು ದೇವರೊಂದಿಗೆ ಸಮಾಧಾನವನ್ನು ಮಾಡಿಕೊಳ್ಳಲು ಆಧಾರವನ್ನು ಒದಗಿಸಿತು. (ಮತ್ತಾಯ 20:28; ರೋಮಾಪುರ 5:11) ಪ್ರಥಮವಾಗಿ ಸಮಾಧಾನ ಮಾಡಿಕೊಂಡವರನ್ನು ಯೆಹೋವನು, ಸಾ.ಶ. 33ರ ಪಂಚಾಶತ್ತಮದಂದು ಸ್ಥಾಪಿಸಲ್ಪಟ್ಟ ಕ್ರೈಸ್ತ ಸಭೆಯೊಳಗೆ ಒಟ್ಟುಗೂಡಿಸಿದನು. ಪವಿತ್ರಾತ್ಮದ ಸಹಾಯದೊಂದಿಗೆ ಅವರು ಎಲ್ಲ ಕಡೆಗಳಲ್ಲಿ ಸುವಾರ್ತೆಯನ್ನು ಸಾರಿದರು. ಯೇಸುವಿನ ಮರಣ ಮತ್ತು ಪುನರುತ್ಥಾನವು, ದೇವರ ಸ್ವರ್ಗೀಯ ರಾಜ್ಯದಾಳಿಕೆಯ ಕೆಳಗೆ ವಿಧೇಯ ಮಾನವಕುಲವು ನಿತ್ಯ ಆಶೀರ್ವಾದಗಳನ್ನು ಅನುಭವಿಸುವಂತೆ ಹೇಗೆ ಮಾರ್ಗವನ್ನು ತೆರೆಯುತ್ತದೆಂದು ಅವರು ತೋರಿಸಿದರು.

15. ಯೆಹೋವನು ನಮ್ಮ ದಿನದಲ್ಲಿ ಹೇಗೆ ಅದ್ಭುತವಾದ ರೀತಿಯಲ್ಲಿ ಕ್ರಿಯೆಗೈದಿದ್ದಾನೆ?

15 ಅಭಿಷಿಕ್ತ ಕ್ರೈಸ್ತರಲ್ಲಿ ಕೊನೆಯವರನ್ನು ಒಟ್ಟುಗೂಡಿಸಲಿಕ್ಕಾಗಿ ಯೆಹೋವನು ನಮ್ಮ ದಿನದಲ್ಲಿ ಅದ್ಭುತಕರವಾದ ರೀತಿಯಲ್ಲಿ ಕ್ರಿಯೆಗೈದಿದ್ದಾನೆ. ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲಿರುವ 1,44,000 ಮಂದಿಯಲ್ಲಿ ಉಳಿದವರ ಮುದ್ರೆಯೊತ್ತುವಿಕೆಯಾಗುವಂತೆ ನಾಶನದ ಗಾಳಿಗಳನ್ನು ತಡೆದುಹಿಡಿಯಲಾಗಿದೆ. (ಪ್ರಕಟನೆ 7:​1-4; 20:6) ಅಭಿಷಿಕ್ತ ಕ್ರೈಸ್ತರು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲ್‌’ನ ಆತ್ಮಿಕ ಬಂಧಿವಾಸದಿಂದ ಬಿಡುಗಡೆ ಹೊಂದುವಂತೆ ದೇವರು ನೋಡಿಕೊಂಡಿದ್ದಾನೆ. (ಪ್ರಕಟನೆ 17:​1-5) 1919ರಲ್ಲಾದ ಆ ಬಿಡುಗಡೆ ಮತ್ತು ಅಂದಿನಿಂದ ಅಭಿಷಿಕ್ತ ಕ್ರೈಸ್ತರು ಅನುಭವಿಸಿರುವ ದೈವಿಕ ಸಂರಕ್ಷಣೆಯು ಅವರೇನನ್ನು ಮಾಡುವಂತೆ ಅನುಮತಿಸಿದೆ? “ಮಹಾ ಸಂಕಟ”ದಲ್ಲಿ ಯೆಹೋವನು ಸೈತಾನನ ದುಷ್ಟ ವ್ಯವಸ್ಥೆಯನ್ನು ಅಂತ್ಯಗೊಳಿಸುವ ಮುಂಚೆ, ಅವರು ರಾಷ್ಟ್ರಗಳಿಗೆ ಕೊನೆಯ ಬಾರಿ ಸಾಕ್ಷಿಕೊಡುವ ಮೂಲಕ ತಮ್ಮ ಬೆಳಕನ್ನು ಪ್ರಕಾಶಿಸುವ ಅವಕಾಶವನ್ನು ಕೊಟ್ಟಿದೆ.​—ಮತ್ತಾಯ 24:​21, NW; ದಾನಿಯೇಲ 12:3; ಪ್ರಕಟನೆ 7:14.

16. ಸದ್ಯದ ದಿನದ ಲೋಕವ್ಯಾಪಕ ರಾಜ್ಯ ಸಾರುವಿಕೆಯ ಕೆಲಸದಿಂದಾಗಿ ಏನು ನಡೆಯುತ್ತಿದೆ?

16 ಯೆಹೋವನ ಅಭಿಷಿಕ್ತ ಸಾಕ್ಷಿಗಳು ಹುರುಪಿನಿಂದ ಲೋಕವ್ಯಾಪಕವಾಗಿ ರಾಜ್ಯವನ್ನು ಸಾರುವ ಕೆಲಸದ ನೇತೃತ್ವ ವಹಿಸಿದ್ದಾರೆ. ಫಲಿತಾಂಶವಾಗಿ, “ಬೇರೆ ಕುರಿ”ಗಳಾಗಿರುವ ಹೆಚ್ಚೆಚ್ಚು ಮಂದಿ ಈಗ ಯೆಹೋವನ ಆರಾಧಕರಾಗುತ್ತಿದ್ದಾರೆ. (ಯೋಹಾನ 10:16) ಯೆಹೋವನನ್ನು ಸ್ತುತಿಸುವುದರಲ್ಲಿ ನಮ್ಮೊಂದಿಗೆ ಜೊತೆಗೂಡಲು, ಭೂಮಿಯ ದೀನರಿಗೆ ಅವಕಾಶದ ಬಾಗಿಲು ಈಗಲೂ ತೆರೆದಿರುವುದಕ್ಕಾಗಿ ನಾವು ಹರ್ಷಿಸುತ್ತೇವೆ. “ಬಾ” ಎಂಬ ಆಮಂತ್ರಣಕ್ಕೆ ಓಗೊಟ್ಟು, ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವುದರಲ್ಲಿ ಜೊತೆಗೂಡುವವರಿಗೆ, ಮಹಾ ಸಂಕಟದಿಂದ ವಿಮೋಚಿಸಲ್ಪಟ್ಟು, ಎಲ್ಲ ನಿತ್ಯತೆಗೂ ಯೆಹೋವನನ್ನು ಸ್ತುತಿಸುತ್ತಾ ಇರುವ ಪ್ರತೀಕ್ಷೆಗಳಿವೆ.​—ಪ್ರಕಟನೆ 22:17.

ಸಾವಿರಾರು ಮಂದಿ ಸತ್ಯಾರಾಧನೆಗೆ ಹಿಂಡುಹಿಂಡಾಗಿ ಬರುತ್ತಿದ್ದಾರೆ

17. (ಎ) ನಮ್ಮ ಸಾರುವ ಚಟುವಟಿಕೆಯ ಸಂಬಂಧದಲ್ಲಿ ಯೆಹೋವನು ಹೇಗೆ ಮಹತ್ಕಾರ್ಯಗಳನ್ನು ನಡೆಸುತ್ತಿದ್ದಾನೆ? (ಬಿ) ಜೆಕರ್ಯ 8:23 ಹೇಗೆ ನೆರವೇರುತ್ತಿದೆ?

17 ಯೆಹೋವನು ಇಂದು ನಮ್ಮ ಸಾರುವ ಚಟುವಟಿಕೆಯ ಸಂಬಂಧದಲ್ಲಿ ಮಹಾನ್‌ ಮತ್ತು ಸ್ತುತಿಗೆ ಅರ್ಹವಾದ ಕಾರ್ಯಗಳನ್ನು ನಡೆಸುತ್ತಿದ್ದಾನೆ. (ಮಾರ್ಕ 13:10) ಇತ್ತೀಚಿನ ವರ್ಷಗಳಲ್ಲಿ ‘ಚಟುವಟಿಕೆಗೆ ನಡೆಸುವ ದೊಡ್ಡ ಬಾಗಿಲುಗಳನ್ನು’ ತೆರೆದಿದ್ದಾನೆ. (1 ಕೊರಿಂಥ 16:9, NW) ಇದರಿಂದಾಗಿ, ಈ ಹಿಂದೆ ಸತ್ಯದ ವಿರೋಧಿಗಳು ತಡೆಯನ್ನೊಡ್ಡುತ್ತಿದ್ದಂತಹ ವಿಸ್ತಾರವಾದ ಕ್ಷೇತ್ರಗಳಲ್ಲೂ ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯು ಸಾರಲ್ಪಡುವಂತೆ ಮಾರ್ಗವು ಸುಗಮಗೊಳಿಸಲ್ಪಟ್ಟಿದೆ. ಒಂದು ಸಮಯದಲ್ಲಿ ಆತ್ಮಿಕ ಅಂಧಕಾರದಲ್ಲಿದ್ದವರು ಈಗ ಯೆಹೋವನನ್ನು ಸ್ತುತಿಸುವ ಆಮಂತ್ರಣಕ್ಕೆ ಓಗೊಡುತ್ತಿದ್ದಾರೆ! ಅವರು ಈ ಪ್ರವಾದನಾತ್ಮಕ ಮಾತುಗಳನ್ನು ನೆರವೇರಿಸುತ್ತಿದ್ದಾರೆ: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ​—ಆ ಕಾಲದಲ್ಲಿ ಜನಾಂಗಗಳ ವಿವಿಧ ಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು⁠—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕರ್ಯ 8:23) ಈ ಹತ್ತು ಜನರು ಯಾರನ್ನು ಸಂಬೋಧಿಸಿ ಮಾತಾಡುತ್ತಾರೊ ಅವರು ಆತ್ಮಿಕ ಯೆಹೂದ್ಯರಾಗಿದ್ದಾರೆ, ಅಂದರೆ ಸದ್ಯದ ದಿನದ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರಾಗಿದ್ದಾರೆ. ಹತ್ತು ಎಂಬ ಸಂಖ್ಯೆಯು, ಭೂವಿಷಯಗಳ ಸಂಬಂಧದಲ್ಲಿ ಸಂಪೂರ್ಣತೆಯನ್ನು ಪ್ರತಿನಿಧಿಸುತ್ತದೆ. ಆದುದರಿಂದ, ಆ “ಹತ್ತು ಜನರು,” “ಮಹಾ ಸಮೂಹ”ವನ್ನು ಪ್ರತಿನಿಧಿಸುತ್ತಾರೆ. ಇವರು ‘ದೇವರ ಇಸ್ರಾಯೇಲಿನೊಂದಿಗೆ’ ಜೊತೆಗೂಡಿಸಲ್ಪಟ್ಟಿದ್ದಾರೆ ಮತ್ತು ಅವರು ‘ಒಂದು ಹಿಂಡಾಗುತ್ತಾರೆ.’ (ಪ್ರಕಟನೆ 7:​9, 10; ಗಲಾತ್ಯ 6:16) ಯೆಹೋವ ದೇವರ ಆರಾಧಕರೋಪಾದಿ ಈಗ ಇಷ್ಟೊಂದು ಜನರು ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವುದನ್ನು ನೋಡುವುದು ಎಷ್ಟು ಆನಂದವನ್ನು ತರುತ್ತದೆ!

18, 19. ಯೆಹೋವನು ಸಾರುವ ಕೆಲಸವನ್ನು ಆಶೀರ್ವದಿಸುತ್ತಿದ್ದಾನೆಂಬುದಕ್ಕೆ ಯಾವ ರುಜುವಾತು ಇದೆ?

18 ಒಂದು ಕಾಲದಲ್ಲಿ ಸುಳ್ಳು ಧರ್ಮದ ಬಲವಾದ ಹಿಡಿತದೊಳಗಿದ್ದ ದೇಶಗಳಲ್ಲಿ, ಅಲ್ಲಿನ ಜನರು ರಾಜ್ಯದ ಸುವಾರ್ತೆಗೆ ಎಂದೂ ಪ್ರತಿಕ್ರಿಯೆಯನ್ನು ತೋರಿಸಲಿಕ್ಕಿಲ್ಲವೆಂದು ನೆನಸಲಾಗಿತ್ತು. ಆದರೆ ಇಂದು ಅಂಥ ದೇಶಗಳಲ್ಲೇ ಸಾವಿರಾರು ಮಂದಿ, ಹೌದು ಲಕ್ಷಾಂತರ ಜನರು ಸತ್ಯಾರಾಧನೆಯನ್ನು ಸ್ವೀಕರಿಸುತ್ತಿದ್ದಾರೆ. ಈ ವರ್ಷದ ಯಿಯರ್‌ಬುಕ್‌ ಆಫ್‌ ಜೆಹೋವಾಸ್‌ ವಿಟ್ನೆಸಸ್‌ ಅನ್ನು ಪರಿಶೀಲಿಸಿ, 1,00,000ದಿಂದ ಹಿಡಿದು ಬಹುಮಟ್ಟಿಗೆ 10,00,000 ರಾಜ್ಯ ಪ್ರಚಾರಕರ ವರದಿಯನ್ನು ಹಾಕುತ್ತಿರುವ ದೇಶಗಳನ್ನು ಗಮನಿಸಿರಿ. ರಾಜ್ಯ ಸಾರುವಿಕೆಯ ಕೆಲಸವು ಯೆಹೋವನಿಂದ ಆಶೀರ್ವದಿಸಲ್ಪಡುತ್ತಿದೆ ಎಂಬುದಕ್ಕೆ ಇದು ಬಲವಾದ ಪುರಾವೆಯಾಗಿದೆ.​—ಜ್ಞಾನೋಕ್ತಿ 10:22.

19 ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನು, ನಮಗೆ ಜೀವಿತದಲ್ಲಿ ನಿಜವಾದ ಉದ್ದೇಶ, ಆತನ ಸೇವೆಯಲ್ಲಿ ಪ್ರತಿಫಲದಾಯಕ ಕೆಲಸ, ಮತ್ತು ಭವಿಷ್ಯಕ್ಕಾಗಿ ಉಜ್ವಲವಾದ ಹೊರನೋಟವನ್ನು ಕೊಟ್ಟಿದ್ದಾನೆ. ಯೆಹೋವನ ಜನರೋಪಾದಿ ನಾವು ಇವೆಲ್ಲವುಗಳಿಗಾಗಿ ಆತನನ್ನು ಸ್ತುತಿಸುತ್ತೇವೆ ಮತ್ತು ಆತನಿಗೆ ಉಪಕಾರ ಹೇಳುತ್ತೇವೆ. ಎಲ್ಲ ದೈವಿಕ ವಾಗ್ದಾನಗಳ ನೆರವೇರಿಕೆಗಾಗಿ ನಾವು ಕಾತುರದಿಂದ ಎದುರುನೋಡುತ್ತೇವೆ, ಮತ್ತು ‘ನಿತ್ಯಜೀವವನ್ನು ಎದುರುನೋಡುತ್ತಾ, ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಲು’ ದೃಢಸಂಕಲ್ಪವುಳ್ಳವರಾಗಿದ್ದೇವೆ. (ಯೂದ 20, 21) ಯೆಹೋವನನ್ನು ಸ್ತುತಿಸುತ್ತಿರುವ ಆ ಮಹಾ ಸಮೂಹದ ಸಂಖ್ಯೆಯು ಈಗ ಸುಮಾರು 60,00,000 ಆಗಿರುವುದನ್ನು ನೋಡಲು ನಮಗೆಷ್ಟು ಆನಂದವಾಗುತ್ತದೆ! ಯೆಹೋವನ ಆಶೀರ್ವಾದದಿಂದ ಬೇರೆ ಕುರಿಗಳ ತಮ್ಮ ಸಂಗಡಿಗರೊಂದಿಗೆ ಅಭಿಷಿಕ್ತ ಉಳಿಕೆಯವರು, 235 ದೇಶಗಳಲ್ಲಿ ಸುಮಾರು 91,000 ಸಭೆಗಳಲ್ಲಿ ಸಂಘಟಿಸಲ್ಪಟ್ಟಿದ್ದಾರೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಅವಿಶ್ರಾಂತ ಪ್ರಯತ್ನಗಳಿಂದಾಗಿ ನಾವೆಲ್ಲರೂ ಆತ್ಮಿಕ ರೀತಿಯಲ್ಲಿ ಚೆನ್ನಾಗಿ ಉಣಿಸಲ್ಪಟ್ಟಿದ್ದೇವೆ. (ಮತ್ತಾಯ 24:45) ತನ್ನ ಜನರು ‘ತಮ್ಮ ಅಮೂಲ್ಯ ವಸ್ತುಗಳಿಂದ ತನ್ನನ್ನು ಸನ್ಮಾನಿಸುವಂತೆ’ ಯೆಹೋವನು ಪ್ರಚೋದಿಸಿದ್ದಕ್ಕಾಗಿ ನಾವು ಆತನಿಗೆ ಆಭಾರಿಗಳಾಗಿದ್ದೇವೆ. (ಜ್ಞಾನೋಕ್ತಿ 3:​9, 10, NW) ಇದರಿಂದಾಗಿ, ನಮ್ಮ ಸಾರುವ ಕೆಲಸವು ಮುಂದುವರಿಯುತ್ತಿದೆ. ಅಷ್ಟುಮಾತ್ರವಲ್ಲದೆ ಅಗತ್ಯಕ್ಕನುಸಾರವಾಗಿ ಮುದ್ರಣ ಸೌಕರ್ಯಗಳು, ಬೆತೆಲ್‌ ಮತ್ತು ಮಿಷನೆರಿ ಗೃಹಗಳು, ರಾಜ್ಯ ಸಭಾಗೃಹಗಳು, ಮತ್ತು ಎಸೆಂಬ್ಲಿ ಹಾಲ್‌ಗಳು ಕಟ್ಟಲ್ಪಡುತ್ತಿವೆ.

20. ಯೆಹೋವನ ಮಹಾ ಹಾಗೂ ಸ್ತುತ್ಯಾರ್ಹ ಕಾರ್ಯಗಳ ಕುರಿತು ಚಿಂತಿಸುವುದು ನಮ್ಮನ್ನು ಹೇಗೆ ಪ್ರಭಾವಿಸಬೇಕು?

20 ನಮ್ಮ ಸ್ವರ್ಗೀಯ ತಂದೆಯ ಎಲ್ಲ ಮಹಾ ಮತ್ತು ಸ್ತುತ್ಯಾರ್ಹ ಕಾರ್ಯಗಳನ್ನು ತಿಳಿಸುವುದು ಅಸಾಧ್ಯವಾದ ಸಂಗತಿಯಾಗಿದೆ. ಯಥಾರ್ಥ ಹೃದಯವುಳ್ಳ ಯಾವುದೇ ವ್ಯಕ್ತಿ ಯೆಹೋವನ ಸ್ತುತಿಗಾರರ ಸಮೂಹವನ್ನು ಸೇರದೇ ಇರಬಲ್ಲನೊ? ಖಂಡಿತವಾಗಿಯೂ ಇಲ್ಲ! ಆದುದರಿಂದ, ದೇವರನ್ನು ಪ್ರೀತಿಸುವವರೆಲ್ಲರೂ ಆನಂದದಿಂದ ಹೀಗೆ ಕೂಗಿಹೇಳಲಿ: “ಯಾಹುವಿಗೆ ಸ್ತೋತ್ರ! ಆಕಾಶಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ; ಮಹೋನ್ನತದಲ್ಲಿ ಆತನ ಸ್ತೋತ್ರವು ಕೇಳಿಸಲಿ. ಆತನ ಎಲ್ಲಾ ದೂತರೇ, ಆತನನ್ನು ಸ್ತುತಿಸಿರಿ; . . . ಪ್ರಾಯಸ್ಥರಾದ ಸ್ತ್ರೀಪುರುಷರೂ ಮುದುಕರೂ ಹುಡುಗರೂ ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು; ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಮೆರೆಯುತ್ತದೆ.” (ಕೀರ್ತನೆ 148:1, 2, 12, 13) ಹೌದು, ಈಗಲೂ ಸದಾಕಾಲಕ್ಕೂ ನಾವು ಯೆಹೋವನನ್ನು ಆತನ ಮಹತ್ಕಾರ್ಯಗಳಿಗಾಗಿ ಸ್ತುತಿಸುತ್ತಿರೋಣ!

ನೀವು ಹೇಗೆ ಉತ್ತರಿಸುವಿರಿ?

• ಯೆಹೋವನ ಸ್ತುತ್ಯಾರ್ಹ ಕಾರ್ಯಗಳಲ್ಲಿ ಕೆಲವು ಯಾವುವು?

• ಯೆಹೋವನನ್ನು ಸ್ತುತಿಸಲು ನೀವು ಏಕೆ ಪ್ರಚೋದಿಸಲ್ಪಡುತ್ತೀರಿ?

• ದೇವರ ಮಹತ್ಕಾರ್ಯಗಳೊಂದಿಗೆ ನಮ್ಮ ನಿರೀಕ್ಷೆಯು ಹೇಗೆ ಸಂಬಂಧಿಸುತ್ತದೆ?

• ರಾಜ್ಯ ಸಾರುವಿಕೆಯ ಕೆಲಸದ ಸಂಬಂಧದಲ್ಲಿ ಯೆಹೋವನು ಸ್ತುತ್ಯಾರ್ಹ ಕಾರ್ಯಗಳನ್ನು ಹೇಗೆ ನಡೆಸುತ್ತಿದ್ದಾನೆ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವುದರಲ್ಲಿ ನೀವು ಮನಃಪೂರ್ವಕವಾಗಿ ನಿಮ್ಮ ಸ್ವರವನ್ನು ಕೂಡಿಸುತ್ತೀರೊ?

[ಪುಟ 13ರಲ್ಲಿರುವ ಚಿತ್ರಗಳು]

ಯೆಹೋವನನ್ನು ಸ್ತುತಿಸಲು ದೀನರಿಗಾಗಿ ಅವಕಾಶದ ಬಾಗಿಲು ಈಗಲೂ ತೆರೆದಿರುವುದಕ್ಕಾಗಿ ನಾವು ಹರ್ಷಿಸುತ್ತೇವೆ