ಅಂತಿಮ ವಿಜಯದ ಕಡೆಗೆ ಸಾಗುವುದು!
ಅಂತಿಮ ವಿಜಯದ ಕಡೆಗೆ ಸಾಗುವುದು!
“ಇಗೋ, ಒಂದು ಬಿಳಿ ಕುದುರೆ ಕಾಣಿಸಿತು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ಬಿಲ್ಲು ಇತ್ತು; ಅವನಿಗೆ ಜಯಮಾಲೆ ಕೊಡಲ್ಪಟ್ಟಿತು; ಅವನು ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ ಹೊರಟನು.”—ಪ್ರಕಟನೆ 6:2.
1. ದರ್ಶನದಲ್ಲಿ ಯೋಹಾನನು ಭವಿಷ್ಯತ್ತಿನ ಯಾವ ಘಟನೆಗಳನ್ನು ಮುನ್ನೋಡಿದನು?
ದೈವಿಕ ಪ್ರೇರಣೆಯಿಂದ ಅಪೊಸ್ತಲ ಯೋಹಾನನು, 1,800 ವರ್ಷಗಳ ನಂತರದ ಭವಿಷ್ಯತ್ತಿನಲ್ಲಿ ಏನು ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ಅರಸನೋಪಾದಿ ಕ್ರಿಸ್ತನ ಸಿಂಹಾಸನಾರೋಹಣವನ್ನು ವರ್ಣಿಸಲು ಶಕ್ತನಾದನು. ದರ್ಶನದಲ್ಲಿ ತಾನು ಕಂಡ ಭವಿಷ್ಯತ್ತಿನ ಘಟನೆಗಳ ಮೇಲೆ ವಿಶ್ವಾಸವಿಡಲು ಯೋಹಾನನಿಗೆ ನಂಬಿಕೆಯ ಅಗತ್ಯವಿತ್ತು. ಅವನು ಮುಂತಿಳಿಸಿದ ಸಿಂಹಾಸನಾರೋಹಣವು 1914ರಲ್ಲಿ ಸಂಭವಿಸಿತು ಎಂಬುದಕ್ಕೆ ನಮಗೆ ಇಂದು ಸ್ಪಷ್ಟವಾದ ಪುರಾವೆಯಿದೆ. ಯೇಸು ಕ್ರಿಸ್ತನು “ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ” ಹೋಗುತ್ತಿರುವುದನ್ನು ನಾವು ನಂಬಿಕೆಯ ಕಣ್ಣುಗಳಿಂದ ನೋಡುತ್ತೇವೆ.
2. ಸ್ವರ್ಗದಲ್ಲಿ ರಾಜ್ಯದ ಸ್ಥಾಪನೆಯಾದಾಗ ಪಿಶಾಚನು ಹೇಗೆ ಪ್ರತಿಕ್ರಿಯಿಸಿದನು, ಮತ್ತು ಇದು ಯಾವುದರ ಪುರಾವೆಯಾಗಿದೆ?
ಪ್ರಕಟನೆ 12:7-12) ಅವನ ಕೋಪವು, ಲೋಕದ ಪರಿಸ್ಥಿತಿಗಳು ಇನ್ನಷ್ಟು ವಿಷಮ ಸ್ಥಿತಿಯನ್ನು ತಲಪುವಂತೆ ಮಾಡಿದೆ. ಮಾನವ ಸಮಾಜವು ಅವನತಿಹೊಂದುತ್ತಿರುವಂತೆ ಕಂಡುಬರುತ್ತಿದೆ. ಯೆಹೋವನ ಸಾಕ್ಷಿಗಳಿಗಾದರೋ, ತಮ್ಮ ಅರಸನು ‘ಜಯಿಸುವುದಕ್ಕೋಸ್ಕರ’ ಮುಂದೆ ಸಾಗುತ್ತಿದ್ದಾನೆ ಎಂಬುದಕ್ಕೆ ಇದು ಸ್ಪಷ್ಟವಾದ ಪುರಾವೆಯಾಗಿದೆ.
2 ಸ್ವರ್ಗದಲ್ಲಿ ರಾಜ್ಯದ ಸ್ಥಾಪನೆಯಾದ ಬಳಿಕ, ಸೈತಾನನು ಅಲ್ಲಿಂದ ಭೂಮಿಗೆ ದೊಬ್ಬಲ್ಪಟ್ಟನು. ಇದು ಅವನು ಅತ್ಯಧಿಕ ರೋಷದಿಂದ ಇನ್ನೂ ತೀವ್ರವಾದ ಹೋರಾಟವನ್ನು ನಡಿಸುವಂತೆ ಮಾಡಿದೆಯಾದರೂ, ಅವನು ಯಶಸ್ವಿಯಾಗುವ ಅವಕಾಶಗಳು ಇಲ್ಲವೇ ಇಲ್ಲ. (ಒಂದು ಹೊಸ ಲೋಕ ಸಮಾಜವು ರೂಪಿಸಲ್ಪಡುತ್ತಿದೆ
3, 4. (ಎ) ರಾಜ್ಯದ ಸ್ಥಾಪನೆಯಾದಂದಿನಿಂದ ಕ್ರೈಸ್ತ ಸಭೆಯ ಏರ್ಪಾಡಿನಲ್ಲಿ ಯಾವ ಬದಲಾವಣೆಗಳು ಮಾಡಲ್ಪಟ್ಟಿವೆ, ಮತ್ತು ಅವುಗಳು ಏಕೆ ಅಗತ್ಯವಾಗಿದ್ದವು? (ಬಿ) ಯೆಶಾಯನಿಂದ ಮುಂತಿಳಿಸಲ್ಪಟ್ಟಂತೆ ಈ ಬದಲಾವಣೆಗಳಿಂದ ಯಾವ ಪ್ರಯೋಜನವಾಯಿತು?
3 ರಾಜ್ಯವು ಸ್ಥಾಪಿಸಲ್ಪಟ್ಟ ಬಳಿಕ, ಈಗ ರಾಜ್ಯದ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿಗಳಿದ್ದ ಪುನಸ್ಸ್ಥಾಪಿತ ಕ್ರೈಸ್ತ ಸಭೆಯನ್ನು, ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿದ್ದ ಏರ್ಪಾಡುಗಳಿಗೆ ಹೊಂದಿಕೆಯಲ್ಲಿ ತರುವ ಸಮಯವಾಗಿತ್ತು. ಹೀಗೆ, 1938ರ ದ ವಾಚ್‌ಟವರ್ ಪತ್ರಿಕೆಯ ಜೂನ್ 1 ಮತ್ತು 15ರ ಸಂಚಿಕೆಗಳಲ್ಲಿ, ಕ್ರೈಸ್ತ ಸಂಸ್ಥೆಯು ಹೇಗೆ ಕಾರ್ಯನಡಿಸಬೇಕು ಎಂಬ ವಿಷಯದ ಕುರಿತು ವಿವರವಾಗಿ ಪರೀಕ್ಷಿಸಲಾಯಿತು. ತದನಂತರ, ಅದೇ ಪತ್ರಿಕೆಯ 1971, ಡಿಸೆಂಬರ್ 15ರ ಸಂಚಿಕೆಯು, “ಕಾನೂನುಬದ್ಧ ಸಂಘಟನೆಗಿಂತ ಭಿನ್ನವಾಗಿರುವ ಒಂದು ಆಡಳಿತ ಮಂಡಲಿ” ಎಂಬ ಲೇಖನದಲ್ಲಿ ಆಧುನಿಕ ದಿನದ ಆಡಳಿತ ಮಂಡಲಿಯನ್ನು ಹೆಚ್ಚು ಸ್ಪಷ್ಟವಾಗಿ ಗುರುತಿಸಿತು. 1972ರಲ್ಲಿ, ಸ್ಥಳಿಕ ಸಭೆಗಳಿಗೆ ಸಹಾಯ ಮತ್ತು ಮಾರ್ಗದರ್ಶನವನ್ನು ಒದಗಿಸಲಿಕ್ಕಾಗಿ ಹಿರಿಯರ ಮಂಡಲಿಯನ್ನು ನೇಮಿಸಲಾಯಿತು.
4 ಸೂಕ್ತವಾದ ಮೇಲ್ವಿಚಾರಣೆಯನ್ನು ಪುನಸ್ಸ್ಥಾಪಿಸುವ ಮೂಲಕ, ಕ್ರೈಸ್ತ ಸಭೆಯು ಬಹಳಷ್ಟು ಬಲಗೊಳಿಸಲ್ಪಟ್ಟಿತು. ಇದಲ್ಲದೆ, ಹಿರಿಯರು ತಮ್ಮ ಕರ್ತವ್ಯಗಳನ್ನು ಯೋಗ್ಯವಾಗಿ ನಿರ್ವಹಿಸಲಿಕ್ಕಾಗಿ ಅವರಿಗೆ ಉಪದೇಶಗಳನ್ನು ನೀಡುವಂತೆ ಮತ್ತು ನ್ಯಾಯವಿಧಾಯಕ (ಜುಡಿಷಿಯಲ್) ವಿಷಯಗಳಲ್ಲಿ ಅವರಿಗೆ ತರಬೇತಿಯನ್ನು ನೀಡುವಂತೆ ಆಡಳಿತ ಮಂಡಲಿಯು ಏರ್ಪಾಡುಗಳನ್ನು ಮಾಡಿತು. ದೇವರ ಭೂಸಂಸ್ಥೆಯ ಏರ್ಪಾಡಿನಲ್ಲಿ ಕ್ರಮೇಣವಾಗಿ ಮಾಡಲ್ಪಟ್ಟ ಅಭಿವೃದ್ಧಿಗಳು ಹಾಗೂ ಅವುಗಳಿಂದ ಉಂಟಾದ ಯೆಶಾಯ 60:17ರಲ್ಲಿ ಮುಂತಿಳಿಸಲ್ಪಟ್ಟಿದ್ದವು: “ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.” ಈ ಸಕಾರಾತ್ಮಕ ಬದಲಾವಣೆಗಳು ದೇವರ ಆಶೀರ್ವಾದವನ್ನು ಪ್ರತಿಬಿಂಬಿಸಿದವು ಮತ್ತು ಯಾರು ಬಹಿರಂಗವಾಗಿ ಮತ್ತು ಹುರುಪಿನಿಂದ ತನ್ನ ರಾಜ್ಯಕ್ಕೆ ಬೆಂಬಲ ನೀಡಿದರೋ ಅವರನ್ನು ದೇವರು ಮೆಚ್ಚಿಕೊಂಡಿದ್ದಾನೆ ಎಂಬುದರ ಪುರಾವೆಯಾಗಿದ್ದವು.
ಪ್ರಯೋಜನಕರ ಫಲಿತಾಂಶಗಳು,5. (ಎ) ತನ್ನ ಜನರನ್ನು ಯೆಹೋವನು ಆಶೀರ್ವದಿಸಿದ್ದಕ್ಕಾಗಿ ಸೈತಾನನು ಹೇಗೆ ಪ್ರತಿಕ್ರಿಯಿಸಿದನು? (ಬಿ) ಫಿಲಿಪ್ಪಿ 1:7ಕ್ಕೆ ಹೊಂದಿಕೆಯಲ್ಲಿ, ಸೈತಾನನ ಕೋಪಕ್ಕೆ ಯೆಹೋವನ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ?
5 ರಾಜ್ಯದ ಸ್ಥಾಪನೆಯಾದ ಬಳಿಕ ದೇವರು ತನ್ನ ಜನರ ಕಡೆಗೆ ನೀಡಿದ ಪ್ರೀತಿಯ ಗಮನ ಹಾಗೂ ಮಾರ್ಗದರ್ಶನೆಗಳು ಸೈತಾನನ ಕಣ್ಣಿಗೂ ಬಿದ್ದವು. ಉದಾಹರಣೆಗೆ, 1931ರಲ್ಲಿ ಕ್ರೈಸ್ತರ ಈ ಚಿಕ್ಕ ಗುಂಪು, ತಾವು ಕೇವಲ ಬೈಬಲ್ ವಿದ್ಯಾರ್ಥಿಗಳಲ್ಲ ಎಂಬುದನ್ನು ಬಹಿರಂಗವಾಗಿ ಪ್ರಕಟಿಸಿದರು. ಏಕೆಂದರೆ ಯೆಶಾಯ 43:10ಕ್ಕೆ ಹೊಂದಿಕೆಯಲ್ಲಿ ಅವರು ಯೆಹೋವನ ಸಾಕ್ಷಿಗಳಾಗಿದ್ದರು! ಕಾಕತಾಳೀಯವಾಗಿಯೋ ಇಲ್ಲವೋ, ಆದರೆ ಅದೇ ಸಮಯದಲ್ಲಿ ಪಿಶಾಚನು ಅಸಾಮಾನ್ಯವಾದ ರೀತಿಯಲ್ಲಿ ಲೋಕವ್ಯಾಪಕವಾಗಿ ಹಿಂಸೆಯ ಅಲೆಯನ್ನು ಎಬ್ಬಿಸಿದನು. ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೆಸರುವಾಸಿಯಾಗಿದ್ದ ಅಮೆರಿಕ, ಕೆನಡ ಹಾಗೂ ಜರ್ಮನಿಯಂತಹ ದೇಶಗಳಲ್ಲಿ ಸಹ, ಸಾಕ್ಷಿಗಳು ತಮ್ಮ ಆರಾಧನಾ ಸ್ವಾತಂತ್ರ್ಯವನ್ನು ಪುನಃ ಪಡೆದುಕೊಳ್ಳಲಿಕ್ಕಾಗಿ ಆಗಿಂದಾಗ್ಗೆ ಕಾನೂನುಬದ್ಧ ಹೋರಾಟಗಳನ್ನು ನಡಿಸುವಂತೆ ಒತ್ತಾಯಿಸಲ್ಪಟ್ಟರು. 1988ರಷ್ಟಕ್ಕೆ, ಯೆಹೋವನ ಸಾಕ್ಷಿಗಳ ಕುರಿತಾದ ಮೊಕದ್ದಮೆಗಳನ್ನು ಒಳಗೊಂಡಿದ್ದ 71 ಕೇಸ್‌ಗಳು ಅಮೆರಿಕದ ಸುಪ್ರೀಮ್ ಕೋರ್ಟ್‌ನಲ್ಲಿ ಪುನಃ ಪರಿಶೀಲಿಸಲ್ಪಟ್ಟವು. ಅಷ್ಟುಮಾತ್ರವಲ್ಲ, ಈ ಕೇಸ್‌ಗಳಲ್ಲಿ ಮೂರನೇ ಎರಡು ಭಾಗದಷ್ಟು ಕೇಸ್‌ಗಳು ಸಾಕ್ಷಿಗಳ ಪರವಾಗಿ ನಿರ್ಣಯಿಸಲ್ಪಟ್ಟವು. ಪ್ರಥಮ ಶತಮಾನದಲ್ಲಿದ್ದಂತೆ, ಇಂದು ಲೋಕದಾದ್ಯಂತ “ಸುವಾರ್ತೆಯ ಪರವಾಗಿ ವಾದಿಸಲಿಕ್ಕಾಗಿ ಮತ್ತು ಅದನ್ನು ನ್ಯಾಯಬದ್ಧವಾಗಿ ಸ್ಥಾಪಿಸ”ಸಾಧ್ಯವಾಗುವಂತೆ ಕಾನೂನುಬದ್ಧ ಹೋರಾಟಗಳು ಮುಂದುವರಿಯುತ್ತಾ ಇವೆ.—ಫಿಲಿಪ್ಪಿ 1:7, NW.
6. ನಿಷೇಧಗಳು ಮತ್ತು ನಿರ್ಬಂಧಗಳು, ಯೆಹೋವನ ಜನರು ತಮ್ಮ ಕೆಲಸವನ್ನು ಮುಂದುವರಿಸದಂತೆ ಮಾಡಿದವೋ? ದೃಷ್ಟಾಂತಿಸಿರಿ.
6 ಇಸವಿ 1930ಗಳಲ್ಲಿ, ಅಂದರೆ IIನೆಯ ಲೋಕ ಯುದ್ಧವು ಆರಂಭವಾಗಲಿಕ್ಕಿದ್ದ ದಿನಗಳಲ್ಲಿ, ನಿರಂಕುಶಾಧಿಕಾರಿ ಸರಕಾರಗಳು ಜರ್ಮನಿ, ಸ್ಪೆಯ್ನ್ ಮತ್ತು ಜಪಾನಿನಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ನಿಷೇಧಿಸಿದವು ಅಥವಾ ಅವರ ಕೆಲಸದ ಮೇಲೆ ನಿರ್ಬಂಧಗಳನ್ನು ಹಾಕಿದವು. ಆದರೆ 2000 ಇಸವಿಯಲ್ಲಿ, ಈ ಮೂರು ದೇಶಗಳಲ್ಲಿ ದೇವರ ರಾಜ್ಯದ ಸುಮಾರು 5,00,000 ಮಂದಿ ಕ್ರಿಯಾಶೀಲ ಘೋಷಕರಿದ್ದರು. ಇದು, 1936ರಲ್ಲಿ ಇಡೀ ಲೋಕದಲ್ಲಿದ್ದ ಸಾಕ್ಷಿಗಳ ಸಂಖ್ಯೆಗಿಂತ ಹೆಚ್ಚುಕಡಿಮೆ ಹತ್ತುಪಟ್ಟು ಅಧಿಕವಾಗಿತ್ತು! ನಿಷೇಧಗಳು ಹಾಗೂ ನಿರ್ಬಂಧಗಳು, ಯೆಹೋವನ ಜನರು ತಮ್ಮ ವಿಜಯಿ ಮುಖಂಡನಾದ ಯೇಸು ಕ್ರಿಸ್ತನ ನಾಯಕತ್ವದ ಕೆಳಗೆ ಮುಂದುವರಿಯುವುದರಿಂದ ಅವರನ್ನು ಖಂಡಿತವಾಗಿಯೂ ತಡೆಯಲಾರವು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
7. ಇಸವಿ 1958ರಲ್ಲಿ ಯಾವ ಪ್ರಮುಖ ಘಟನೆಯು ನಡೆಯಿತು, ಮತ್ತು ಅಂದಿನಿಂದ ಯಾವ ನಾಟಕೀಯ ಬದಲಾವಣೆಯು ಸಂಭವಿಸಿದೆ?
7 ಇಸವಿ 1958ರಲ್ಲಿ, ನ್ಯೂ ಯಾರ್ಕ್ ಸಿಟಿಯಲ್ಲಿ ಯೆಹೋವನ ಸಾಕ್ಷಿಗಳ ಅತಿ ದೊಡ್ಡ ಅಧಿವೇಶನವು ನಡೆಸಲ್ಪಟ್ಟಾಗ, ಇದು ನಿಜವಾಗಿಯೂ ಅವರ ಮುನ್ನಡೆಯ ಒಂದು ರುಜುವಾತಾಗಿತ್ತು. ಇದರ ಮುಖ್ಯ ವಿಷಯ ದೈವಿಕ ಚಿತ್ತ ಅಂತಾರಾಷ್ಟ್ರೀಯ ಸಮ್ಮೇಳನ ಎಂಬುದಾಗಿದ್ದು, 2,53,922 ಮಂದಿ ಇದಕ್ಕೆ ಹಾಜರಾಗಿದ್ದರು. 1970ರಷ್ಟಕ್ಕೆ ಜರ್ಮನಿ, ಸ್ಪೆಯ್ನ್ ಮತ್ತು ಜಪಾನ್ ದೇಶಗಳಲ್ಲಿ ಅವರ ಕೆಲಸವು ಪುನಃ ಆರಂಭವಾಗಿತ್ತು. ಆದರೆ ಆ ಸಮಯದಲ್ಲಿ ಪೂರ್ವ ಜರ್ಮನಿಯೆಂದು ಕರೆಯಲ್ಪಡುತ್ತಿದ್ದ ಸ್ಥಳದಲ್ಲಿ ಮಾತ್ರ ಸಾಕ್ಷಿಕಾರ್ಯವು ಆರಂಭವಾಗಿರಲಿಲ್ಲ. ಇದಲ್ಲದೆ, ವಿಸ್ತಾರವಾದ ಸೋವಿಯಟ್ ಒಕ್ಕೂಟದಲ್ಲಿ ಹಾಗೂ ವಾರ್ಸಾ ಒಪ್ಪಂದಕ್ಕೆ ಸಹಿಹಾಕಿದ್ದ ಮಿತ್ರ ರಾಷ್ಟ್ರಗಳಲ್ಲಿ ಜೀವಿಸುತ್ತಿದ್ದ ಸಾಕ್ಷಿಗಳು ಇನ್ನೂ ನಿಷೇಧದ ಕೆಳಗಿದ್ದರು. ಈ ಮುಂಚೆ ಕಮ್ಯೂನಿಸ್ಟ್ ಆಡಳಿತವಿದ್ದ ಈ ದೇಶಗಳಲ್ಲಿ, ಇಂದು ಐದು ಲಕ್ಷಕ್ಕಿಂತಲೂ ಹೆಚ್ಚು ಕ್ರಿಯಾಶೀಲ ಸಾಕ್ಷಿಗಳಿದ್ದಾರೆ.
8. ಯೆಹೋವನು ತನ್ನ ಜನರನ್ನು ಆಶೀರ್ವದಿಸಿದ್ದರ ಫಲಿತಾಂಶವೇನಾಗಿದೆ, ಮತ್ತು 1950ರ ಕಾವಲಿನಬುರುಜು ಪತ್ರಿಕೆಯು ಇದರ ಕುರಿತು ಏನು ಹೇಳಿತು?
8 ಯೆಹೋವನ ಸಾಕ್ಷಿಗಳು ಅಭಿವೃದ್ಧಿಯಾಗುವಂತೆ ದೇವರು ಅವರನ್ನು ಆಶೀರ್ವದಿಸಿದ್ದಾನೆ, ಏಕೆಂದರೆ ಅವರು ‘ದೇವರ ರಾಜ್ಯವನ್ನೂ ನೀತಿಯನ್ನೂ’ ಹುಡುಕುತ್ತಾ ಮುಂದುವರಿದಿದ್ದಾರೆ. (ಮತ್ತಾಯ 6:33) ಅಕ್ಷರಾರ್ಥ ರೀತಿಯಲ್ಲಿ ಯೆಶಾಯನ ಪ್ರವಾದನೆಯು ಈಗಾಗಲೇ ನೆರವೇರಿಕೆಯನ್ನು ಪಡೆದಿದೆ: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾಯ 60:22) ಮತ್ತು ಆ ಅಭಿವೃದ್ಧಿಯು ಇನ್ನೂ ಕೊನೆಗೊಂಡಿಲ್ಲ. ಕಳೆದ ದಶಕದಲ್ಲೇ, ರಾಜ್ಯದಾಳಿಕೆಯ ಕ್ರಿಯಾಶೀಲ ಪ್ರತಿಪಾದಕರ ಸಂಖ್ಯೆಯು 17,50,000 ವ್ಯಕ್ತಿಗಳಿಗಿಂತ ಹೆಚ್ಚು ಅಧಿಕಗೊಂಡಿತು! ಇವರೆಲ್ಲರೂ ಸ್ವಇಚ್ಛೆಯಿಂದ, ಯಾವ ಗುಂಪಿನ ಕುರಿತು 1950ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯು ಈ ಕೆಳಗಿನಂತೆ ಹೇಳಿತೋ ಆ ಗುಂಪಿನ ಭಾಗವಾಗಿದ್ದಾರೆ: “ದೇವರು ಈಗ ಒಂದು ಹೊಸ ಲೋಕ ಸಮಾಜವನ್ನು ಸಿದ್ಧಗೊಳಿಸುತ್ತಿದ್ದಾನೆ. . . . ಈ ಗುಂಪು ಅರ್ಮಗೆದೋನ್‌ನಿಂದ ಪಾರಾಗಿ ಉಳಿಯುವುದು, . . . ‘ಹೊಸ ಭೂಮಿ’ಯಲ್ಲಿ ಕಾರ್ಯನಡಿಸುವವರಲ್ಲಿ ಇವರೇ ಮೊದಲಿಗರಾಗಿದ್ದಾರೆ . . . , ಇವರು ದೇವಪ್ರಭುತ್ವಕ್ಕನುಸಾರ ಸಂಘಟಿತರಾಗಿದ್ದಾರೆ, ಸಂಸ್ಥೆಯ ಕಾರ್ಯಕಲಾಪಗಳು ಇವರಿಗೆ ಚಿರಪರಿಚಿತವಾಗಿವೆ ಮತ್ತು ಇವುಗಳಲ್ಲಿ ಅನುಭವವೂ ಇದೆ.” ಆ ಲೇಖನವು ಈ ಮಾತುಗಳಿಂದ ಮುಕ್ತಾಯಗೊಂಡಿತು: “ಆದುದರಿಂದ, ನಾವೆಲ್ಲರೂ ಒಟ್ಟಿಗೆ ಒಂದು ಹೊಸ ಲೋಕ ಸಮಾಜದೋಪಾದಿ ಏಕಪ್ರಕಾರವಾಗಿ ಮುಂದೆ ಸಾಗೋಣ!”
9. ಅನೇಕ ವರ್ಷಗಳಿಂದ ಯೆಹೋವನ ಸಾಕ್ಷಿಗಳು ಕಲಿತಿರುವ ವಿಷಯಗಳು ಹೇಗೆ ಪ್ರಯೋಜನದಾಯಕವಾಗಿ ರುಜುವಾಗಿವೆ?
9 ಈ ಮಧ್ಯೆ, ಸದಾ ಅಭಿವೃದ್ಧಿಹೊಂದುತ್ತಿರುವ ಈ ಹೊಸ ಲೋಕ ಸಮಾಜವು ಸರಾಗವಾಗಿ ಮತ್ತು ದಕ್ಷತೆಯಿಂದ ಕಾರ್ಯನಡಿಸುವ ವಿಧಗಳನ್ನು ಕಲಿತುಕೊಂಡಿದೆ. ಇದರಿಂದ ಇಂದು ಸಹ ಅಮೂಲ್ಯವಾದ ಪ್ರಯೋಜನವಿದೆ ಮತ್ತು ಅರ್ಮಗೆದೋನ್ ನಂತರದ ಪುನಸ್ಸ್ಥಾಪನಾ ಕಾರ್ಯದಲ್ಲಿ ಇದು ಪ್ರಯೋಜನಕ್ಕೆ ಬರುವುದು. ಉದಾಹರಣೆಗೆ, ಸಾಕ್ಷಿಗಳು ದೊಡ್ಡ ದೊಡ್ಡ ಅಧಿವೇಶನಗಳನ್ನು ಏರ್ಪಡಿಸಲು, ಅತ್ಯಂತ ತ್ವರಿತಗತಿಯಲ್ಲಿ ಪರಿಹಾರದ ಕೆಲಸಗಳನ್ನು ನಿರ್ವಹಿಸಲು ಮತ್ತು ಅತಿ ಬೇಗನೆ ಕಟ್ಟಡಗಳನ್ನು ನಿರ್ಮಿಸಲು ಕಲಿತಿದ್ದಾರೆ. ಈ ಚಟುವಟಿಕೆಯು, ಅನೇಕರು ಯೆಹೋವನ ಸಾಕ್ಷಿಗಳನ್ನು ಹೊಗಳುವಂತೆ ಹಾಗೂ ಅವರನ್ನು ಗೌರವದ ದೃಷ್ಟಿಯಿಂದ ನೋಡುವಂತೆ ಮಾಡಿದೆ.
ತಪ್ಪು ಅಭಿಪ್ರಾಯಗಳನ್ನು ಸರಿಪಡಿಸುವುದು
10, 11. ಯೆಹೋವನ ಸಾಕ್ಷಿಗಳ ಕುರಿತಾದ ತಪ್ಪು ಅಭಿಪ್ರಾಯಗಳು ಹೇಗೆ ಸರಿಪಡಿಸಲ್ಪಟ್ಟಿವೆ ಎಂಬುದನ್ನು ದೃಷ್ಟಾಂತಿಸಿರಿ.
10 ಆದರೂ, ಯೆಹೋವನ ಸಾಕ್ಷಿಗಳು ಮಾನವ ಸಮಾಜಕ್ಕೆ ಹೊಂದಿಕೆಯಲ್ಲಿ ಜೀವಿಸುವುದಿಲ್ಲ ಎಂದು ಅಪವಾದ ಹೊರಿಸುವ ಜನರೂ ಇದ್ದಾರೆ. ರಕ್ತಪೂರಣಗಳು, ತಾಟಸ್ಥ್ಯ, ಧೂಮಪಾನ ಹಾಗೂ ನೈತಿಕತೆಯ ವಿಷಯಗಳಲ್ಲಿ ಸಾಕ್ಷಿಗಳ ಬೈಬಲ್ ಆಧಾರಿತ ನಿಲುವೇ ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಈ ವಿಷಯಗಳಲ್ಲಿ ಸಾಕ್ಷಿಗಳಿಗಿರುವ ದೃಷ್ಟಿಕೋನವು ಪರಿಗಣನೆಗೆ ಅರ್ಹವಾದದ್ದಾಗಿದೆ ಎಂದು ಹೆಚ್ಚೆಚ್ಚು ಜನರು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಉದಾಹರಣೆಗೆ, ಪೋಲೆಂಡ್‌ನ ಒಬ್ಬ ವೈದ್ಯೆಯು ಯೆಹೋವನ ಸಾಕ್ಷಿಗಳ ಆಡಳಿತ ಕಛೇರಿಗೆ ಫೋನ್ ಮಾಡಿದಳು ಮತ್ತು ತಾನು ಹಾಗೂ ಆಸ್ಪತ್ರೆಯಲ್ಲಿ ಕೆಲಸಮಾಡುವ ತನ್ನ ಜೊತೆಕೆಲಸಗಾರರು ಅನೇಕ ತಾಸುಗಳ ವರೆಗೆ ರಕ್ತಪೂರಣಗಳ ಬಗ್ಗೆಯೇ ಚರ್ಚೆ ನಡೆಸಿದ್ದೇವೆ ಎಂದು ಹೇಳಿದಳು. ಜೇನ್‌ನೀಕ್ ಸಾಹೊಡ್‌ನೀ ಎಂಬ ಪೋಲಿಷ್ ಭಾಷೆಯ ದಿನಪತ್ರಿಕೆಯಲ್ಲಿ ಮುದ್ರಿತವಾದ ಒಂದು ಲೇಖನದ ಕಾರಣದಿಂದಲೇ ಈ ಚರ್ಚೆಯು ಆರಂಭವಾಯಿತು. ಆ ವೈದ್ಯೆ ಒಪ್ಪಿಕೊಂಡದ್ದು: “ವೈದ್ಯಕೀಯ ಕ್ಷೇತ್ರದಲ್ಲಿ ರಕ್ತವು ಅತಿಯಾಗಿ ಉಪಯೋಗಿಸಲ್ಪಡುತ್ತಿದೆ ಎಂಬ ಸಂಗತಿಯಿಂದ ವೈಯಕ್ತಿಕವಾಗಿ ನನಗೇ ವಿಷಾದವೆನಿಸುತ್ತದೆ. ಈ ಸನ್ನಿವೇಶವು ಖಂಡಿತವಾಗಿಯೂ ಬದಲಾಗಬೇಕು ಮತ್ತು ಯಾರೋ ಒಬ್ಬರು ಈ ವಿಷಯವನ್ನು ಪ್ರಸ್ತಾಪಿಸಿರುವುದು ನನಗೆ ಸಂತೋಷವನ್ನು ನೀಡಿದೆ. ಇದರ ಬಗ್ಗೆ ನನಗೆ ಇನ್ನೂ ಹೆಚ್ಚಿನ ಮಾಹಿತಿಯು ಬೇಕಾಗಿದೆ.”
11 ಕಳೆದ ವರ್ಷ ನಡೆದ ಒಂದು ಕೂಟ (ಕಾನ್ಫರೆನ್ಸ್)ದಲ್ಲಿ, ಅಮೆರಿಕ, ಇಸ್ರೇಲ್, ಕೆನಡ ಮತ್ತು ಯೂರೋಪ್‌ನಿಂದ ಬಂದ
ವೈದ್ಯಕೀಯ ಅಧಿಕಾರಿಗಳು, ವೈದ್ಯರು ರಕ್ತವನ್ನು ಉಪಯೋಗಿಸದೆ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸಹಾಯಮಾಡಲು ಸಿದ್ಧಪಡಿಸಲಾದ ವಿಷಯದ ಕುರಿತು ಚರ್ಚಿಸಿದರು. ಸ್ವಿಟ್ಸರ್‌ಲೆಂಡ್‌ನಲ್ಲಿ ನಡೆದ ಈ ಕೂಟದಲ್ಲಿ, ಜನಪ್ರಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ಅಂಶವು ತಿಳಿಸಲ್ಪಟ್ಟಿತು. ಯಾವ ರೋಗಿಗಳು ರಕ್ತಪೂರಣವನ್ನು ತೆಗೆದುಕೊಳ್ಳಲಿಲ್ಲವೋ ಅವರಿಗಿಂತ ಯಾರು ರಕ್ತಪೂರಣವನ್ನು ತೆಗೆದುಕೊಂಡರೋ ಆ ರೋಗಿಗಳ ಮರಣ ಸಂಖ್ಯೆಯು ಅತ್ಯಧಿಕವಾಗಿತ್ತು ಎಂಬುದೇ ಆ ಅಂಶವಾಗಿತ್ತು. ಸಾಮಾನ್ಯವಾಗಿ ರಕ್ತವನ್ನು ಉಪಯೋಗಿಸಿ ಚಿಕಿತ್ಸೆ ಪಡೆದುಕೊಂಡವರಿಗಿಂತಲೂ ಸಾಕ್ಷಿ ರೋಗಿಗಳು ಆಸ್ಪತ್ರೆಯಿಂದ ಬೇಗನೆ ಮನೆಗೆ ಹೋಗಲು ಶಕ್ತರಾಗಿದ್ದರು. ಇದರ ಫಲಿತಾಂಶವಾಗಿ ಚಿಕಿತ್ಸೆಯ ಖರ್ಚುವೆಚ್ಚವೂ ಕಡಿಮೆಯಾಗುತ್ತಿತ್ತು.12. ರಾಜಕೀಯ ತಾಟಸ್ಥ್ಯದ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ತೆಗೆದುಕೊಂಡ ನಿಲುವನ್ನು ಪ್ರಸಿದ್ಧ ವ್ಯಕ್ತಿಗಳು ಹೇಗೆ ಪ್ರಶಂಸಿಸಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆಯನ್ನು ಕೊಡಿರಿ.
12 ಎರಡನೆಯ ಲೋಕ ಯುದ್ಧಕ್ಕೆ ಮುಂಚೆ ಮತ್ತು ಯುದ್ಧದ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ನಾಝಿ ಆಕ್ರಮಣವನ್ನು ಸಹಿಸಿಕೊಂಡಾಗ, ಅವರು ತೆಗೆದುಕೊಂಡ ತಟಸ್ಥ ನಿಲುವಿನ ಕುರಿತು ಅನೇಕ ಸಕಾರಾತ್ಮಕ ಹೇಳಿಕೆಗಳು ಮಾಡಲ್ಪಟ್ಟಿವೆ. ಯೆಹೋವನ ಸಾಕ್ಷಿಗಳು ನಾಝಿ ಆಕ್ರಮಣದ ವಿರುದ್ಧ ದೃಢವಾಗಿ ನಿಲ್ಲುತ್ತಾರೆ (ಇಂಗ್ಲಿಷ್) ಎಂಬ ವಿಡಿಯೋ ಯೆಹೋವನ ಸಾಕ್ಷಿಗಳಿಂದ ಸಿದ್ಧಗೊಳಿಸಲ್ಪಟ್ಟು, 1996ರ ನವೆಂಬರ್ 6ರಂದು ಜರ್ಮನಿಯಲ್ಲಿರುವ ರಾವೆನ್ಸ್‌ಬ್ರೂಕ್ ಕೂಟ ಶಿಬಿರದಲ್ಲಿ ಪ್ರಥಮ ಬಾರಿಗೆ ಪ್ರದರ್ಶಿಸಲ್ಪಟ್ಟಿತು. ಇದರಿಂದಾಗಿ ಅನೇಕರು ಸಾಕ್ಷಿಗಳ ಬಗ್ಗೆ ಒಳ್ಳೇ ಹೇಳಿಕೆಗಳನ್ನು ನೀಡಿದ್ದಾರೆ. 1998ರ ಏಪ್ರಿಲ್ 18ರಂದು, ಬೆರ್ಗನ್-ಬೆಲ್ಸನ್‌ನಲ್ಲಿರುವ ಕುಪ್ರಸಿದ್ಧ ಕೂಟ ಶಿಬಿರದಲ್ಲಿ ಇದೇ ರೀತಿಯ ಪ್ರದರ್ಶನದ ಆರಂಭದಲ್ಲಿ, ಲೋವರ್ ಸ್ಯಾಕ್ಸನಿಯ ರಾಜಕೀಯ ಶಿಕ್ಷಣ ಕೇಂದ್ರದ ನಿರ್ದೇಶಕರಾದ ಡಾ. ವುಲ್ಫ್‌ಗ್ಯಾಂಗ್ ಶೀಲ್ ಹೀಗೆ ಒಪ್ಪಿಕೊಂಡರು: “ಇತಿಹಾಸದಲ್ಲೇ ಪೇಚಾಟವನ್ನುಂಟುಮಾಡಿರುವ ಸತ್ಯತೆಗಳಲ್ಲಿ ಒಂದು, ಕ್ರೈಸ್ತ ಚರ್ಚುಗಳಿಗಿಂತಲೂ ಹೆಚ್ಚು ದೃಢನಿರ್ಧಾರದಿಂದ ಯೆಹೋವನ ಸಾಕ್ಷಿಗಳು ರಾಷ್ಟ್ರೀಯ ಸಮಾಜವಾದವನ್ನು ತಿರಸ್ಕರಿಸಿರುವುದೇ ಆಗಿದೆ. . . . ಯೆಹೋವನ ಸಾಕ್ಷಿಗಳ ಬೋಧನೆಗಳು ಹಾಗೂ ಧಾರ್ಮಿಕತೆಯ ಕುರಿತು ನಮಗೆ ಯಾವುದೇ ಅನಿಸಿಕೆಗಳಿರಲಿ, ನಾಝಿ ಆಳ್ವಿಕೆಯ ಸಮಯದಲ್ಲಿ ಅವರು ತೋರಿಸಿದ ದೃಢ ನಿಷ್ಠೆಯು ಖಂಡಿತವಾಗಿಯೂ ಪ್ರಶಂಸೆಗೆ ಯೋಗ್ಯವಾದದ್ದಾಗಿದೆ.”
13, 14. (ಎ) ಆರಂಭದ ಕ್ರೈಸ್ತರ ವಿಷಯದಲ್ಲಿ ಅನಿರೀಕ್ಷಿತ ಮೂಲದಿಂದ ವಿವೇಕಭರಿತವಾದ ಯಾವ ವಿಷಯವು ತಿಳಿಸಲ್ಪಟ್ಟಿತು? (ಬಿ) ಇಂದು ದೇವಜನರ ಬಗ್ಗೆ ಹೇಳಲ್ಪಟ್ಟಿರುವ ಮೆಚ್ಚುಗೆಯ ಮಾತುಗಳ ಉದಾಹರಣೆಗಳನ್ನು ಕೊಡಿ.
13 ಪ್ರಸಿದ್ಧ ವ್ಯಕ್ತಿಗಳು ಅಥವಾ ಕೋರ್ಟ್ ನಿರ್ಣಯಗಳು ವಿವಾದಾಸ್ಪದ ವಿಷಯಗಳಲ್ಲಿ ಯೆಹೋವನ ಸಾಕ್ಷಿಗಳ ಪರವಹಿಸುವಾಗ, ಸಾಕ್ಷಿಗಳ ಕುರಿತಾದ ಪೂರ್ವಕಲ್ಪಿತ ಅಭಿಪ್ರಾಯಗಳು ಸ್ವಲ್ಪವಾದರೂ ಕಡಿಮೆಯಾಗಬಹುದು ಮತ್ತು ಜನರು ಅವರ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವುಳ್ಳವರಾಗಬಹುದು. ಇದು, ಈ ಮುಂಚೆ ಅವರ ಸಂದೇಶಕ್ಕೆ ಕಿವಿಗೊಡಲು ನಿರಾಕರಿಸಿದಂತಹ ಜನರೊಂದಿಗೆ ಮಾತಾಡುವಂತೆ ಮಾರ್ಗವನ್ನು ತೆರೆಯುತ್ತದೆ. ಪ್ರಸಿದ್ಧ ವ್ಯಕ್ತಿಗಳು ಅಥವಾ ಕೋರ್ಟ್ ನಿರ್ಣಯಗಳಿಂದ ಮಾಡಲ್ಪಡುವ ಈ ರೀತಿಯ ಹೇಳಿಕೆಗಳು ನಿಜವಾಗಿಯೂ ಉಪಯುಕ್ತವಾಗಿವೆ ಮತ್ತು ಯೆಹೋವನ ಸಾಕ್ಷಿಗಳು ಅವುಗಳನ್ನು ಖಂಡಿತವಾಗಿಯೂ ಗಣ್ಯಮಾಡುತ್ತಾರೆ. ಇದು ಪ್ರಥಮ ಶತಮಾನದಲ್ಲಿ ಯೆರೂಸಲೇಮಿನಲ್ಲಿ ಏನು ಸಂಭವಿಸಿತೋ ಅದನ್ನು ನಮ್ಮ ನೆನಪಿಗೆ ತರುತ್ತದೆ. ಕ್ರೈಸ್ತರು ಹುರುಪಿನಿಂದ ಸುವಾರ್ತೆಯನ್ನು ಸಾರಿದ್ದಕ್ಕಾಗಿ, ಸನ್ಹೇದ್ರಿನ್ ಅಂದರೆ ಯೆಹೂದಿ ಹಿರೀ ಸಭೆಯು ಅವರನ್ನು ಕೊಲ್ಲಲು ಬಯಸಿತು. ಆಗ, “ಎಲ್ಲಾ ಜನರಿಂದ ಮಾನಹೊಂದಿದ ನ್ಯಾಯಶಾಸ್ತ್ರಿಯಾದ” ಗಮಲಿಯೇಲನು ಅವರಿಗೆ ಎಚ್ಚರಿಕೆ ನೀಡುತ್ತಾ ಹೇಳಿದ್ದು: “ಇಸ್ರಾಯೇಲ್ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ಮಾಡಬೇಕೆಂದಿರುವದನ್ನು ಕುರಿತು ಎಚ್ಚರಿಕೆಯುಳ್ಳವರಾಗಿರ್ರಿ. . . . ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಯಾಕಂದರೆ ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವದು; ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. ನೀವು ಒಂದು ವೇಳೆ ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ.”—ಅ. ಕೃತ್ಯಗಳು 5:33-39.
14 ಗಮಲಿಯೇಲನಂತೆ, ಪ್ರಸಿದ್ಧ ವ್ಯಕ್ತಿಗಳು ಇತ್ತೀಚೆಗೆ ಯೆಹೋವನ ಸಾಕ್ಷಿಗಳ ಧಾರ್ಮಿಕ ಸ್ವಾತಂತ್ರ್ಯದ ಪಕ್ಷವನ್ನು ವಹಿಸಿ ಮಾತಾಡಿದ್ದಾರೆ. ಉದಾಹರಣೆಗೆ, ಧರ್ಮ ಹಾಗೂ ನಂಬಿಕೆಯ ಸ್ವಾತಂತ್ರ್ಯಕ್ಕಾಗಿರುವ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರು ವಾದಿಸಿದ್ದು: “ಒಂದು ಧರ್ಮದ ನಿಶ್ಚಿತಾಭಿಪ್ರಾಯಗಳನ್ನು ಸಮಾಜವು ಅನಂಗೀಕೃತವಾಗಿ ಅಥವಾ ಸಂಪ್ರದಾಯಬದ್ಧವಲ್ಲದ್ದಾಗಿ ಪರಿಗಣಿಸುತ್ತದೆ ಎಂದ ಮಾತ್ರಕ್ಕೆ, ಆ ಧರ್ಮದ ಧಾರ್ಮಿಕ ಹಕ್ಕುಗಳನ್ನು ಅಲ್ಲಗಳೆಯಬಾರದು.” ಮತ್ತು ಲೈಪ್‌ಸಿಗ್ ವಿಶ್ವವಿದ್ಯಾನಿಲಯದಲ್ಲಿ ಧರ್ಮದ ಕುರಿತಾದ ವೈಜ್ಞಾನಿಕ ಅಧ್ಯಯನದ ಪ್ರೊಫೆಸರರೊಬ್ಬರು, ಧಾರ್ಮಿಕ ಪಂಥಗಳೆಂದು ಕರೆದುಕೊಳ್ಳುವ ಗುಂಪುಗಳ ಬಗ್ಗೆ ತನಿಖೆ ನಡೆಸಲಿಕ್ಕಾಗಿ ಸ್ಥಾಪಿಸಲ್ಪಟ್ಟಿರುವ ಜರ್ಮನ್ ಸರಕಾರೀ ನಿಯೋಜಿತ ಮಂಡಲಿಯ ಕುರಿತು ಈ ಪ್ರಶ್ನೆಯನ್ನು ಕೇಳಿದರು: “ಎರಡು ಅತಿ ದೊಡ್ಡ ಚರ್ಚುಗಳ [ರೋಮನ್ ಕ್ಯಾಥೊಲಿಕ್ ಚರ್ಚ್ ಮತ್ತು ಲ್ಯೂತರನ್ ಚರ್ಚ್] ಬಗ್ಗೆ ತನಿಖೆ ನಡೆಸಲ್ಪಡದಿರುವಾಗ, ಕೇವಲ ಚಿಕ್ಕ ಚಿಕ್ಕ ಧಾರ್ಮಿಕ ಗುಂಪುಗಳ ಬಗ್ಗೆ ಏಕೆ ತನಿಖೆ ನಡೆಸಲಾಗುತ್ತಿದೆ?” ಒಬ್ಬ ಮಾಜಿ ಜರ್ಮನ್ ಅಧಿಕಾರಿಯ ಮಾತುಗಳಲ್ಲಿ ನಾವು ಈ ಪ್ರಶ್ನೆಗೆ ಉತ್ತರವನ್ನು ಸುಲಭವಾಗಿ ಕಂಡುಕೊಳ್ಳಸಾಧ್ಯವಿದೆ. ಅವನು ಬರೆದುದು: “ಪರದೆಯ ಹಿಂದೆ ಚರ್ಚಿನ ಮತಾಂಧರ ಕೈವಾಡವಿದೆ ಎಂಬುದರಲ್ಲಿ ಸಂದೇಹವೇ ಇಲ್ಲ; ಸರಕಾರೀ ನಿಯೋಜಿತ ಮಂಡಲಿಯು ಕೈಗೊಂಡಿರುವ ರಾಜಕೀಯ ಕೆಲಸವನ್ನು ಮಾಡುವಂತೆ ಪ್ರೇರಿಸಿದ್ದು ಇವರೇ.”
ವಿಮೋಚನೆಗಾಗಿ ನಾವು ಯಾರ ಕಡೆಗೆ ನೋಡುತ್ತೇವೆ?
15, 16. (ಎ) ಗಮಲಿಯೇಲನ ಕೃತ್ಯವು ಪೂರ್ಣ ರೀತಿಯಲ್ಲಿ ಪರಿಣಾಮಕಾರಿಯಾಗಿರಲಿಲ್ಲವೇಕೆ? (ಬಿ) ಇನ್ನೂ ಮೂವರು ಪ್ರಭಾವಶಾಲಿ ವ್ಯಕ್ತಿಗಳು ಯೇಸುವಿನ ಪರವಾಗಿ ಕಾರ್ಯನಡಿಸಲು ಹೇಗೆ ಅಸಮರ್ಥರಾಗಿದ್ದರು?
15 ಗಮಲಿಯೇಲನು ಹೇಳಿದ ವಿಷಯವು, ದೈವಿಕ ಬೆಂಬಲವಿರುವ ಒಂದು ಕೆಲಸವು ಖಂಡಿತವಾಗಿಯೂ ಅಪಜಯಹೊಂದುವುದಿಲ್ಲ ಎಂಬ ವಾಸ್ತವಾಂಶವನ್ನೇ ಒತ್ತಿಹೇಳುತ್ತದೆ. ಅವನು ಸನ್ಹೇದ್ರಿನ್‌ಗೆ ಹೇಳಿದ ಮಾತುಗಳಿಂದ ಆದಿಕ್ರೈಸ್ತರು ಪ್ರಯೋಜನವನ್ನು ಪಡೆದುಕೊಂಡರು ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ, ತನ್ನ ಹಿಂಬಾಲಕರು ಹಿಂಸಿಸಲ್ಪಡುವರು ಎಂಬ ಯೇಸುವಿನ ಮಾತುಗಳು ಸಹ ಸತ್ಯವಾಗಿದ್ದವು ಎಂಬುದನ್ನು ಅವರೆಂದೂ ಮರೆಯಲಿಲ್ಲ. ಗಮಲಿಯೇಲನಿಂದಾಗಿ ಧಾರ್ಮಿಕ ಮುಖಂಡರು ಆ ಕ್ರೈಸ್ತರನ್ನು ಮುಗಿಸಿಬಿಡುವ ಯೋಜನೆಗಳನ್ನು ನಿಲ್ಲಿಸಿಬಿಟ್ಟರಾದರೂ, ಎಲ್ಲ ಹಿಂಸೆಯನ್ನು ಅವರು ಸಂಪೂರ್ಣವಾಗಿ ನಿಲ್ಲಿಸಿಬಿಡಲಿಲ್ಲ. ಏಕೆಂದರೆ ನಾವು ಓದುವುದು: “ಅವರು ಅವನ ಮಾತಿಗೆ ಒಪ್ಪಿ ಅಪೊಸ್ತಲರನ್ನು ಕರೆಸಿ ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತಾಡಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು.”—ಅ. ಕೃತ್ಯಗಳು 5:40.
16 ಯೇಸುವನ್ನು ವಿಚಾರಣೆಗೆ ಒಳಪಡಿಸಲಾಗಿದ್ದಾಗ, ಪೊಂತ್ಯ ಪಿಲಾತನು ಅವನಲ್ಲಿ ಯಾವ ಅಪರಾಧವನ್ನೂ ಕಂಡುಕೊಳ್ಳಲಿಲ್ಲವಾದ್ದರಿಂದ, ಅವನು ಯೇಸುವನ್ನು ಬಿಡುಗಡೆಮಾಡಲು ಪ್ರಯತ್ನಿಸಿದನು. ಆದರೆ ಅವನು ಅದರಲ್ಲಿ ಯಶಸ್ವಿಯಾಗಲಿಲ್ಲ. (ಯೋಹಾನ 18:38, 39; 19:4, 6, 12-16) ಹಿರೀ ಸಭೆಯ ಇಬ್ಬರು ಸದಸ್ಯರಾಗಿದ್ದು, ಯೇಸುವಿನ ಪರವಹಿಸುತ್ತಿದ್ದ ನಿಕೊದೇಮ ಹಾಗೂ ಅರಿಮಥಾಯದ ಯೋಸೇಫರು ಸಹ, ಯೇಸುವಿನ ವಿರುದ್ಧ ಇತರರು ಕ್ರಿಯೆಗೈಯದಂತೆ ತಡೆಯಲು ಅಸಮರ್ಥರಾಗಿದ್ದರು. (ಲೂಕ 23:50-52; ಯೋಹಾನ 7:45-52; 19:38-40) ಯೆಹೋವನ ಜನರ ಪರವಾಗಿ ಯಾವುದೇ ಕಾರಣದಿಂದ ಅವರಿಗೆ ಒಳ್ಳೇದನ್ನು ಮಾಡಲು ಮಾನವರು ಹೋರಾಡುವಾಗ, ಅವರು ಸಾಧಿಸುವ ಉಪಶಮನವು ಎಷ್ಟೆಂದರೂ ಪರಿಮಿತವಾಗಿರುವುದು. ಲೋಕವು ಯೇಸುವನ್ನು ದ್ವೇಷಿಸಿದಂತೆಯೇ, ಈ ಲೋಕವು ಸಹ ಆತನ ನಿಜ ಹಿಂಬಾಲಕರನ್ನು ದ್ವೇಷಿಸುವುದನ್ನು ಮುಂದುವರಿಸುವುದು. ಸಂಪೂರ್ಣ ಬಿಡುಗಡೆಯು ಯೆಹೋವನಿಂದ ಮಾತ್ರ ಬರಸಾಧ್ಯವಿದೆ.—ಅ. ಕೃತ್ಯಗಳು 2:24.
17. ಯೆಹೋವನ ಸಾಕ್ಷಿಗಳಿಗೆ ಯಾವ ವಾಸ್ತವಿಕ ನೋಟವಿದೆ, ಆದರೆ ಸುವಾರ್ತೆ ಸಾರುವುದನ್ನು ಮುಂದುವರಿಸುವ ತಮ್ಮ ದೃಢನಿರ್ಧಾರದಲ್ಲಿ ಅವರು ಅಚಲರಾಗಿದ್ದಾರೆ ಏಕೆ?
17 ಯೆಹೋವನ ಸಾಕ್ಷಿಗಳು ವಾಸ್ತವಿಕ ನೋಟವುಳ್ಳವರಾಗಿದ್ದಾರೆ ಮತ್ತು ಹಿಂಸೆಯು ಇನ್ನೂ ಮುಂದುವರಿಯುವುದನ್ನು ಅವರು ನಿರೀಕ್ಷಿಸುತ್ತಾರೆ. ಅಂತಿಮವಾಗಿ ಸೈತಾನನ ವ್ಯವಸ್ಥೆಯು ಸಂಪೂರ್ಣವಾಗಿ ಸೋಲಿಸಲ್ಪಡುವಾಗ ಮಾತ್ರ ವಿರೋಧವು ನಿಲ್ಲಿಸಲ್ಪಡುವುದು. ಈ ಹಿಂಸೆಯನ್ನು ಅನುಭವಿಸುವುದು ಅಹಿತಕರವಾಗಿರುವುದಾದರೂ, ರಾಜ್ಯದ ಕುರಿತು ಸಾರಲಿಕ್ಕಾಗಿ ಅವರಿಗೆ ಕೊಡಲ್ಪಟ್ಟಿರುವ ನೇಮಕವನ್ನು ಪೂರೈಸುವುದರಿಂದ ಇದು ಸಾಕ್ಷಿಗಳನ್ನು ಖಂಡಿತವಾಗಿ ತಡೆಯಲಾರದು. ಅವರಿಗೆ ದೈವಿಕ ಬೆಂಬಲವಿರುವಾಗ ಅವರನ್ನು ಯಾರು ತಡೆಯಶಕ್ತರು? ಅವರು ತಮ್ಮ ಧೈರ್ಯಶಾಲಿ ನಾಯಕನಾದ ಯೇಸು ಕ್ರಿಸ್ತನನ್ನು ಯೋಗ್ಯವಾದ ಮಾದರಿಯಾಗಿ ಪರಿಗಣಿಸುತ್ತಾರೆ.—ಅ. ಕೃತ್ಯಗಳು 5:17-21, 27-32.
18. ಯೆಹೋವನ ಜನರಿಗೆ ಮುಂದೆ ಯಾವ ಕಷ್ಟವು ಕಾದಿದೆ, ಆದರೆ ಯಾವ ಪ್ರತಿಫಲವು ತಮಗೆ ಸಿಗುತ್ತದೆ ಎಂದು ಅವರಿಗೆ ಮನವರಿಕೆಯಾಗಿದೆ?
18 ಸತ್ಯ ಧರ್ಮದ ಆರಂಭದಿಂದಲೂ, ಅದು ಬಲವಾದ ವಿರೋಧವನ್ನು ಎದುರಿಸಿದೆ. ಅತಿ ಬೇಗನೆ ಗೋಗನು ಅಂದರೆ ಪರಲೋಕದಿಂದ ಭೂಮಿಗೆ ದೊಬ್ಬಲ್ಪಟ್ಟಂದಿನಿಂದ ಹೀನವಾದ ಸ್ಥಿತಿಯಲ್ಲಿರುವ ಸೈತಾನನು, ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿ ಈ ಸತ್ಯ ಧರ್ಮದ ಮೇಲೆ ಆಕ್ರಮಣಮಾಡುವನು. ಆದರೆ ಸತ್ಯ ಧರ್ಮವು ಆ ಆಕ್ರಮಣದಿಂದ ಪಾರಾಗಿ ಉಳಿಯುವುದು. (ಯೆಹೆಜ್ಕೇಲ 38:14-16) ಸೈತಾನನ ಮಾರ್ಗದರ್ಶನದ ಕೆಳಗೆ ‘ಭೂಲೋಕದಲ್ಲೆಲ್ಲೆಲ್ಲಿಯೂ ಇರುವ ರಾಜರು,’ “ಯಜ್ಞದ ಕುರಿಯಾದಾತನ ಮೇಲೆ ಯುದ್ಧಮಾಡುವರು, ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವದರಿಂದ ಅವರನ್ನು ಜಯಿಸುವನು.” (ಪ್ರಕಟನೆ 16:14; 17:14) ಹೌದು, ನಮ್ಮ ರಾಜನು ಅಂತಿಮ ವಿಜಯದ ಕಡೆಗೆ ಸಾಗುತ್ತಿದ್ದಾನೆ ಮತ್ತು ಬೇಗನೆ ಅವನು ತನ್ನ ಹೋರಾಟವನ್ನು ಪೂರ್ಣಗೊಳಿಸುವನು. ತದನಂತರ, ‘ದೇವರು ನಮ್ಮ ಕಡೆ ಇದ್ದಾನೆ’ ಎಂದು ಯೆಹೋವನ ಆರಾಧಕರು ಹೇಳುವಾಗ, ಯಾರೂ ಅವರನ್ನು ವಿರೋಧಿಸುವುದಿಲ್ಲ; ಈ ವಿಷಯವನ್ನು ತಿಳಿದವರಾಗಿದ್ದು, ನಮ್ಮ ರಾಜನೊಂದಿಗೆ ಮುಂದುವರಿಯುವುದು ಎಂತಹ ಒಂದು ಸುಯೋಗವಾಗಿದೆ!—ರೋಮಾಪುರ 8:31; ಫಿಲಿಪ್ಪಿ 1:27, 28.
ನೀವು ವಿವರಿಸಬಲ್ಲಿರೋ?
• ರಾಜ್ಯವು ಸ್ಥಾಪನೆಯಾದಂದಿನಿಂದ ಕ್ರೈಸ್ತ ಸಭೆಯನ್ನು ಬಲಗೊಳಿಸಲಿಕ್ಕಾಗಿ ಯೆಹೋವನು ಏನು ಮಾಡಿದ್ದಾನೆ?
• ಕ್ರಿಸ್ತನು ತನ್ನ ವಿಜಯವನ್ನು ಪೂರ್ಣಗೊಳಿಸದಂತೆ ತಡೆಯಲು ಪ್ರಯತ್ನಿಸಲಿಕ್ಕಾಗಿ ಸೈತಾನನು ಏನು ಮಾಡಿದ್ದಾನೆ, ಮತ್ತು ಇದರ ಫಲಿತಾಂಶಗಳೇನು?
• ಸಾಕ್ಷಿಗಳಲ್ಲದ ಜನರು ಸಾಕ್ಷಿಗಳ ವಿಷಯದಲ್ಲಿ ಅನುಕೂಲಕರವಾಗಿ ಕಾರ್ಯನಡಿಸುವಾಗ, ಅವರ ಬಗ್ಗೆ ನಾವು ಯಾವ ಸಮತೂಕ ನೋಟವನ್ನು ಇಟ್ಟುಕೊಳ್ಳಬೇಕು?
• ಅತಿ ಬೇಗನೆ ಸೈತಾನನು ಏನು ಮಾಡುವನು, ಮತ್ತು ಅದರ ಫಲಿತಾಂಶವೇನು?
[ಅಧ್ಯಯನ ಪ್ರಶ್ನೆಗಳು]
[ಪುಟ 18ರಲ್ಲಿರುವ ಚಿತ್ರ]
ಅಧಿವೇಶನಗಳು, ಯೆಹೋವನ ಜನರು ಮುಂದುವರಿಯುತ್ತಿದ್ದಾರೆ ಎಂಬದಕ್ಕೆ ಪುರಾವೆಯಾಗಿವೆ
[ಪುಟ 20ರಲ್ಲಿರುವ ಚಿತ್ರಗಳು]
ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಸಾಕ್ಷಿಗಳು ತೋರಿಸಿದ ತಾಟಸ್ಥ್ಯದಿಂದ, ಇಂದು ಸಹ ಯೆಹೋವನಿಗೆ ಸ್ತುತಿಯು ಸಲ್ಲುತ್ತಿದೆ