ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅತಿ ದುಃಖಕರ ನಷ್ಟದ ಮಧ್ಯೆಯೂ ಆನಂದಿತಳು ಹಾಗೂ ಕೃತಜ್ಞಳು

ಅತಿ ದುಃಖಕರ ನಷ್ಟದ ಮಧ್ಯೆಯೂ ಆನಂದಿತಳು ಹಾಗೂ ಕೃತಜ್ಞಳು

ಜೀವನ ಕಥೆ

ಅತಿ ದುಃಖಕರ ನಷ್ಟದ ಮಧ್ಯೆಯೂ ಆನಂದಿತಳು ಹಾಗೂ ಕೃತಜ್ಞಳು

ನ್ಯಾನ್ಸಿ ಈ. ಪೋರ್ಟರ್‌ ಅವರು ಹೇಳಿದಂತೆ

ಇಸವಿ 1947, ಜೂನ್‌ 5ರಂದು, ಅಮೆರಿಕದ ನೈರುತ್ಯ ದಿಕ್ಕಿನಲ್ಲಿರುವ ಬಹಾಮಸ್‌ ದ್ವೀಪದಲ್ಲಿ, ಸಾಯಂಕಾಲದ ವಾತಾವರಣವು ಸ್ವಲ್ಪ ಬೆಚ್ಚಗಿತ್ತು. ಒಬ್ಬ ಇಮಿಗ್ರೇಷನ್‌ ಆಫಿಸರ್‌ ನನ್ನನ್ನೂ ನನ್ನ ಗಂಡನಾದ ಜಾರ್ಜ್‌ರನ್ನೂ ಅನಿರೀಕ್ಷಿತವಾಗಿ ಭೇಟಿಮಾಡಲು ಬಂದರು. ಅವರು ಒಂದು ಪತ್ರವನ್ನು ನಮ್ಮ ಕೈಗಿತ್ತರು. ಅದರಲ್ಲಿ, ನಾವು ಈ ದ್ವೀಪಗಳಲ್ಲಿ ಇರಬಾರದು ಮತ್ತು “ಒಡನೇ ಇಲ್ಲಿಂದ ಹೊರಡುವಂತೆ” ಹೇಳಲಾಗಿತ್ತು!

ಜಾರ್ಜ್‌ ಮತ್ತು ನಾನು, ಬಹಾಮಸ್‌ನಲ್ಲೇ ಅತಿ ದೊಡ್ಡ ನಗರವಾಗಿರುವ ನಾಸ್ಸಾವುಗೆ ಬಂದಿರುವ ಯೆಹೋವನ ಸಾಕ್ಷಿಗಳ ಮಿಷನೆರಿಗಳಲ್ಲಿ ಮೊದಲಿಗರು. ಗಿಲ್ಯಡ್‌, ಅಂದರೆ ಮಿಷನೆರಿಗಳಿಗಾಗಿ ನ್ಯೂ ಯಾರ್ಕ್‌ನಲ್ಲಿರುವ ಒಂದು ಶಾಲೆಯ ಎಂಟನೆಯ ತರಗತಿಯಿಂದ ಪದವಿಪಡೆದು ನಾವು ಇಲ್ಲಿಗೆ ನೇಮಿಸಲ್ಪಟ್ಟಿದ್ದೆವು. ಆದರೆ ಕೇವಲ ಮೂರೇ ತಿಂಗಳುಗಳೊಳಗೆ, ಮೇಲೆ ತಿಳಿಸಲ್ಪಟ್ಟಿರುವ ತೀಕ್ಷ್ಣ ಪ್ರತಿಕ್ರಿಯೆಯನ್ನು ಬರಮಾಡಿಕೊಳ್ಳುವಂಥ ಯಾವ ತಪ್ಪನ್ನು ಮಾಡಿದ್ದೆವು? ಮತ್ತು ಈಗಲೂ, ಅಂದರೆ 50 ವರ್ಷಗಳ ನಂತರವೂ ನಾನು ಇಲ್ಲಿಯೇ ಉಳಿದಿರುವುದು ಹೇಗೆ?

ಶುಶ್ರೂಷೆಗಾಗಿ ತರಬೇತಿ

ನನ್ನ ಜೀವಿತದ ಮೇಲೆ ಅತಿ ಪ್ರಬಲವಾದ ಪ್ರಭಾವವನ್ನು ಬೀರಿದವರು, ನನ್ನ ತಂದೆ ಹ್ಯಾರಿ ಕಿಲ್ನರ್‌ ಆಗಿದ್ದರು. ಅವರು ನನ್ನ ಮುಂದೆ ಅತ್ಯುತ್ಕೃಷ್ಟವಾದ ಮಾದರಿಯನ್ನಿಟ್ಟರು. ಯೆಹೋವನ ಸಾಕ್ಷಿಯಾಗಲು ಅವರು ಅನೇಕಾನೇಕ ತ್ಯಾಗಗಳನ್ನು ಮಾಡಬೇಕಾಯಿತು. ಅವರ ಆರೋಗ್ಯವು ಯಾವಾಗಲೂ ಒಳ್ಳೇದ್ದಾಗಿರದಿದ್ದರೂ, ಬಹುಮಟ್ಟಿಗೆ ಪ್ರತಿ ವಾರಾಂತ್ಯದಲ್ಲಿ ಅವರು ಸಾರುವುದಕ್ಕಾಗಿ ಹೋಗುತ್ತಿದ್ದರು. ಅವರು ರಾಜ್ಯದ ಅಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿಟ್ಟರು. (ಮತ್ತಾಯ 6:33) ನಮ್ಮ ಆರ್ಥಿಕ ಸ್ಥಿತಿಯು ಅಷ್ಟೇನೂ ಒಳ್ಳೇದಾಗಿರಲಿಲ್ಲ. ಆದರೂ ಅವರ ಪಾದರಕ್ಷೆಗಳ ಅಂಗಡಿಯು, 1930ರ ದಶಕದಲ್ಲಿ, ಕೆನಡದ ಆಲ್ಬರ್ಟದ ಲೆತ್‌ಬ್ರಿಜ್‌ನಲ್ಲಿ ಆತ್ಮಿಕ ಚಟುವಟಿಕೆಯ ಕೇಂದ್ರವಾಗಿತ್ತು. ಪಯನೀಯರರೆಂದು ಕರೆಯಲಾಗುವ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೇವಕರು ನಮ್ಮ ಮನೆಗೆ ಬಂದು ಅನುಭವಗಳನ್ನು ತಿಳಿಸುತ್ತಿದ್ದದ್ದು, ನನ್ನ ಬಾಲ್ಯದ ಸವಿನೆನಪುಗಳಲ್ಲಿ ಒಂದಾಗಿದೆ.

ಇಸವಿ 1943ರಲ್ಲಿ, ನಾನು ಆಲ್ಬರ್ಟದ ಫೋರ್ಟ್‌ ಮ್ಯಾಕ್ಲೌಡ್‌ ಮತ್ತು ಕ್ಲ್ಯಾರ್ಸ್‌ಹೋಮ್‌ ಪಟ್ಟಣಗಳಲ್ಲಿ ನನ್ನ ಪಯನೀಯರ್‌ ಸೇವೆಯನ್ನು ಆರಂಭಿಸಿದೆ. ಅಷ್ಟರೊಳಗೆ ಕೆನಡದಲ್ಲಿ ವಿರೋಧಿಗಳು IIನೆಯ ವಿಶ್ವ ಯುದ್ಧದ ಸಮಯದಲ್ಲಿ ನಮ್ಮ ಕುರಿತಾಗಿ ಮಾಡುತ್ತಿದ್ದ ಸುಳ್ಳು ಪ್ರಚಾರದಿಂದಾಗಿ, ಸಾರುವ ಕೆಲಸವು ನಿಷೇಧಿಸಲ್ಪಟ್ಟಿತು. ನಮ್ಮ ಟೆರಿಟೊರಿಯು, ಒಂದು ಮೂಲೆಯಿಂದ ಇನ್ನೊಂದು ಮೂಲೆಯ ವರೆಗೆ 50 ಕಿಲೊಮೀಟರ್‌ಗಳಷ್ಟಾಗಿತ್ತು. ಆದರೆ ಆಗ ನಾವು ಯುವಪ್ರಾಯದವರೂ, ಚುರುಕುಳ್ಳವರೂ ಆಗಿದ್ದುದರಿಂದ, ಆ ಕ್ಷೇತ್ರದಲ್ಲಿದ್ದ ಚಿಕ್ಕಚಿಕ್ಕ ಸಮುದಾಯಗಳನ್ನು ತಲಪಲು ಸೈಕಲ್‌ ಸವಾರಿ ಅಥವಾ ನಡೆದುಕೊಂಡು ಹೋಗುವುದರಿಂದ ನಮಗೇನೂ ತೊಂದರೆಯಾಗುತ್ತಿರಲಿಲ್ಲ. ಈ ಸಮಯದಲ್ಲೇ, ನನಗೆ ಕೆಲವೊಂದು ಗಿಲ್ಯಡ್‌ ಮಿಷನೆರಿಗಳೊಂದಿಗೆ ಮಾತಾಡುವ ಅವಕಾಶ ಸಿಕ್ಕಿತು. ಅವರಿಂದ ನಾನು ಕೇಳಿದ ಅನುಭವಗಳಿಂದಾಗಿ, ಒಬ್ಬ ಮಿಷನೆರಿಯಾಗುವ ಆಸೆಯು ನನ್ನಲ್ಲಿ ಮೊಳೆಯಿತು.

ಇಸವಿ 1945ರಲ್ಲಿ ನಾನು ಜಾರ್ಜ್‌ ಪೋರ್ಟರ್‌ ಎಂಬುವರನ್ನು ಮದುವೆಯಾದೆ. ಅವರು ಕೆನಡದ ಸಾಸ್ಕಾಚೆವಾನ್‌ನವರಾಗಿದ್ದರು. ಅವರ ಹೆತ್ತವರು, 1916ರಂದಿನಿಂದ ಹುರುಪಿನ ಸಾಕ್ಷಿಗಳಾಗಿದ್ದರು, ಮತ್ತು ಜಾರ್ಜ್‌ ಸಹ ಪೂರ್ಣ ಸಮಯದ ಸೇವೆಯನ್ನು ತಮ್ಮ ಜೀವನ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ನಮ್ಮ ಮೊದಲ ನೇಮಕವು, ಕೆನಡದ ನಾರ್ತ್‌ ವ್ಯಾಂಕೂವರ್‌ನಲ್ಲಿದ್ದ ಸುಂದರವಾದ ಲಿನ್‌ ವ್ಯಾಲಿ ಆಗಿತ್ತು. ತದನಂತರ ಸ್ವಲ್ಪ ಸಮಯದಲ್ಲೇ ನಮ್ಮನ್ನು ಗಿಲ್ಯಡ್‌ ಶಾಲೆಗೆ ಆಮಂತ್ರಿಸಲಾಯಿತು.

ಈ ಎಲ್ಲ ವರ್ಷಗಳಲ್ಲಿ, ದೇವತಾಶಾಸ್ತ್ರದ ಭಿನ್ನಭಿನ್ನ ಸೆಮಿನರಿಗಳ ಪದವೀಧರರೊಂದಿಗೆ ನಾನು ಮಾತಾಡಿದ್ದೇನೆ. ಅವರಿಗೆ ಸಿಕ್ಕಿದಂಥ ತರಬೇತಿಯು, ದೇವರಲ್ಲಿ ಮತ್ತು ಆತನ ವಾಕ್ಯವಾದ ಬೈಬಲಿನಲ್ಲಿ ಅವರಿಗಿದ್ದ ನಂಬಿಕೆಯನ್ನು ತಿಂದುಹಾಕಿದೆಯೆಂಬುದನ್ನು ನಾನು ನೋಡಶಕ್ತಳಾದೆ. ಆದರೆ ಇದಕ್ಕೆ ವಿರುದ್ಧವಾಗಿ, ನಾವು ಗಿಲ್ಯಡ್‌ ಶಾಲೆಯಲ್ಲಿ ಕಲಿತಂಥ ಸಂಗತಿಗಳು, ನಮ್ಮ ಯೋಚನಾ ಸಾಮರ್ಥ್ಯವನ್ನು ಹರಿತಗೊಳಿಸಿದವು ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವ ದೇವರ ಮತ್ತು ಆತನ ವಾಕ್ಯದಲ್ಲಿನ ನಮ್ಮ ನಂಬಿಕೆಯನ್ನು ಬಲಪಡಿಸಿದವು. ನಮ್ಮ ಸಹಪಾಠಿಗಳು ಚೀನಾ, ಸಿಂಗಾಪುರ್‌, ಭಾರತ, ಅಫ್ರಿಕದ ದೇಶಗಳು, ದಕ್ಷಿಣ ಅಮೆರಿಕ ಮತ್ತು ಬೇರೆ ಕಡೆಗಳಿಗೆ ನೇಮಿಸಲ್ಪಟ್ಟರು. ನಮ್ಮ ನೇಮಕವು, ಉಷ್ಣವಲಯದ ಬಹಾಮಸ್‌ ದ್ವೀಪಗಳಾಗಿದೆ ಎಂದು ನಮಗೆ ತಿಳಿದಾಗ ನಾವೆಷ್ಟು ಸಂಭ್ರಮಪಟ್ಟೆವು ಎಂಬುದು ನನಗೆ ಈಗಲೂ ನೆನಪಿದೆ.

ನಾವು ಹೇಗೆ ಅಲ್ಲಿಯೇ ಉಳಿಯಲು ಶಕ್ತರಾದೆವು?

ನಮ್ಮ ಸಹಪಾಠಿಗಳಿಗೆ ತಮ್ಮ ನೇಮಕದ ದೇಶಗಳನ್ನು ತಲಪಲು ದೀರ್ಘವಾದ ಪ್ರಯಾಣಗಳನ್ನು ಮಾಡಬೇಕಾಯಿತು. ಅವರೊಂದಿಗೆ ಹೋಲಿಸುವಾಗ, ಬಹಾಮಸ್‌ ತಲಪಲು ನಮಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಸ್ವಲ್ಪ ಸಮಯದೊಳಗೇ ನಾವು ಅಲ್ಲಿನ ಬೆಚ್ಚಗಿನ ಹವಾಮಾನ, ನೀಲಿ ಆಕಾಶಗಳು, ಹಸುರು ಛಾಯೆಯ ನೀಲವರ್ಣದ ನೀರು, ಉಜ್ವಲ ಬಣ್ಣಗಳ ಕಟ್ಟಡಗಳು, ಮತ್ತು ಅಸಂಖ್ಯಾತ ಸೈಕಲುಗಳನ್ನು ನೋಡಿ ಆನಂದಿಸುತ್ತಿದ್ದೆವು. ನಮ್ಮ ದೋಣಿ ಅಲ್ಲಿ ತಲಪಿದಾಗ, ನಮ್ಮನ್ನು ಸ್ವಾಗತಿಸಲು ಐದು ಸಾಕ್ಷಿಗಳ ಒಂದು ಚಿಕ್ಕ ತಂಡವು ಕಾದುಕೊಂಡಿತ್ತು. ಇದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಅತ್ಯಾರಂಭದ ನೆನಪುಗಳಲ್ಲಿ ಒಂದಾಗಿದೆ. ಇಲ್ಲಿನ ಸಂಸ್ಕೃತಿಗೂ, ನಮಗೆ ರೂಢಿಯಾಗಿದ್ದ ಸಂಸ್ಕೃತಿಗೂ ಅಜಗಜಾಂತರವಿದೆಯೆಂದು ನಮಗೆ ಬೇಗನೆ ತಿಳಿದುಬಂತು. ಉದಾಹರಣೆಗಾಗಿ, ನನ್ನನ್ನು ಎಲ್ಲರ ಮುಂದೆ ‘ಪ್ರಿಯೆ’ ಎಂದು ಕರೆಯದಂತೆ ನನ್ನ ಗಂಡನಿಗೆ ಹೇಳಲಾಯಿತು. ಯಾಕೆಂದರೆ ಆ ಪದವನ್ನು ಸಾಮಾನ್ಯವಾಗಿ ವಿವಾಹೇತರ ಸಂಬಂಧಕ್ಕಾಗಿ ಉಪಯೋಗಿಸಲಾಗುತ್ತಿತ್ತು.

ಆದರೆ ಸ್ವಲ್ಪ ಸಮಯದಲ್ಲೇ, ನಾವು ಜನರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದದ್ದನ್ನು ನೋಡಿ, ಪಾದ್ರಿಗಳಿಗೆ ತಮ್ಮ ಸ್ಥಾನವು ಅಪಾಯದಲ್ಲಿದೆಯೆಂದು ಅನಿಸಿದ್ದಿರಬಹುದು. ಆದುದರಿಂದ ನಾವು ಕಮ್ಯೂನಿಸ್ಟ್‌ ಜನರೆಂದು ಅವರು ನಮ್ಮ ಮೇಲೆ ತಪ್ಪು ಆರೋಪವನ್ನು ಹಾಕಿದರು. ಈ ಕಾರಣದಿಂದಲೇ, ನಾವು ಆ ದೇಶವನ್ನು ಬಿಟ್ಟುಹೋಗುವ ಆ ಅಪ್ಪಣೆಯನ್ನು ಪಡೆದೆವು. ಆದರೆ, ಆ ದಿನಗಳಲ್ಲಿ 20ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿದ್ದ ಸಾಕ್ಷಿಗಳು, ನಾವು ಉಳಿಯುವಂತೆ ಅನುಮತಿಕೊಡುವ ಒಂದು ಮನವಿಗಾಗಿ ಸಾವಿರಾರು ಸಹಿಗಳನ್ನು ಪಡೆದುಕೊಂಡರು. ಈ ರೀತಿಯಲ್ಲಿ ನಮ್ಮನ್ನು ಅಲ್ಲಿಂದ ಉಚ್ಚಾಟಿಸುವ ಅಪ್ಪಣೆಯು ತಲೆಕೆಳಗಾಯಿತು.

ಒಂದು ಹೊಸ ಟೆರಿಟೊರಿ

ದೇವರನ್ನು ಪ್ರೀತಿಸುತ್ತಿದ್ದವರ ಹೃದಯಗಳಲ್ಲಿ ಬೈಬಲ್‌ ಸತ್ಯವು ಶೀಘ್ರವಾಗಿ ಚಿಗುರುತ್ತಿತ್ತು. ಆದುದರಿಂದ ಇನ್ನೂ ಹೆಚ್ಚಿನ ಮಿಷನೆರಿಗಳನ್ನು ಬಹಾಮಸ್‌ಗೆ ಕಳುಹಿಸಲಾಯಿತು. ಅನಂತರ 1950ರಲ್ಲಿ ಒಂದು ಬ್ರಾಂಚ್‌ ಆಫೀಸನ್ನು ಸ್ಥಾಪಿಸಲಾಯಿತು. ಹತ್ತು ವರ್ಷಗಳ ಬಳಿಕ, ಬ್ರೂಕ್ಲಿನ್‌ ನ್ಯೂ ಯಾರ್ಕ್‌ನಲ್ಲಿರುವ ಮುಖ್ಯಕಾರ್ಯಾಲಯದ ಒಬ್ಬ ಸದಸ್ಯರಾಗಿದ್ದ ಮಿಲ್ಟನ್‌ ಹೆನ್ಶಲ್‌ರವರು ಬಹಾಮಸ್‌ಗೆ ಭೇಟಿಯಿತ್ತರು. ಆಗ, ಬಹಾಮಸ್‌ನ ಇನ್ನೊಂದು ದ್ವೀಪಕ್ಕೆ ಹೋಗಿ ಅಲ್ಲಿ ಸಾರುವ ಕೆಲಸವನ್ನು ಆರಂಭಿಸಲು ಯಾರಾದರೂ ಸಿದ್ಧರಾಗಿದ್ದೀರೊ ಎಂದವರು ಕೇಳಿದರು. ನಾನು ಮತ್ತು ಜಾರ್ಜ್‌ ಅದನ್ನು ಮಾಡಲು ಮುಂದೆಬಂದೆವು. ಹೀಗೆ, ಲಾಂಗ್‌ ಐಲೆಂಡ್‌ನಲ್ಲಿನ 11 ವರ್ಷಗಳುದ್ದದ ವಾಸವು ಆರಂಭವಾಯಿತು.

ಅನೇಕ ದ್ವೀಪಗಳಿಂದ ರಚಿಸಲ್ಪಟ್ಟಿರುವ ಬಹಾಮಸ್‌ನಲ್ಲಿ, ಲಾಂಗ್‌ ಐಲೆಂಡ್‌ ಸಹ ಒಂದು ದ್ವೀಪವಾಗಿದೆ. ಇದು 140 ಕಿಲೊಮೀಟರ್‌ ಉದ್ದ ಮತ್ತು 6 ಕಿಲೊಮೀಟರ್‌ ಅಗಲವಾಗಿದೆ. ಮತ್ತು ಆ ಕಾಲದಲ್ಲಿ ನಿಜವಾಗಿ ಪಟ್ಟಣಗಳೆಂಬುದೇನೂ ಇರಲಿಲ್ಲ. ರಾಜಧಾನಿಯಾಗಿದ್ದ ಕ್ಲ್ಯಾರೆನ್ಸ್‌ ಟೌನ್‌ನಲ್ಲಿ ಸುಮಾರು 50 ಮನೆಗಳಿದ್ದವು. ಜೀವನವು ಹಳೆಯ ಕಾಲದ್ದಾಗಿತ್ತು​—ವಿದ್ಯುಚ್ಛಕ್ತಿಯಿರಲಿಲ್ಲ, ನಲ್ಲಿ ನೀರಿರಲಿಲ್ಲ, ಅಥವಾ ಮನೆಯೊಳಗೆ ಅಡಿಗೆಮಾಡುವ ವ್ಯವಸ್ಥೆ ಇಲ್ಲವೇ ಕೊಳಾಯಿ ವ್ಯವಸ್ಥೆ ಇರಲಿಲ್ಲ. ಆದುದರಿಂದ ನಾವು, ಈ ದ್ವೀಪದಲ್ಲಿನ ಹೊರಾಂಗಣ ಜೀವನಕ್ಕೆ ಹೊಂದಿಕೊಳ್ಳಬೇಕಾಯಿತು. ಇಲ್ಲಿ ಸಾಮಾನ್ಯವಾಗಿ ಮಾತುಕತೆಯ ಅಚ್ಚುಮೆಚ್ಚಿನ ವಿಷಯವು, ಜನರ ಆರೋಗ್ಯವಾಗಿದೆ. ನಾವು ಮನೆಯವನನ್ನು ವಂದಿಸುವಾಗ, “ನೀವು ಇವತ್ತು ಹೇಗಿದ್ದೀರಿ?” ಎಂದು ಕೇಳಬಾರದೆಂದು ಕಲಿತುಕೊಂಡೆವು. ಯಾಕೆಂದರೆ ಒಂದುವೇಳೆ ನಾವು ಹಾಗೆ ಮಾಡಿದರೆ, ಆ ವ್ಯಕ್ತಿಯು ತನ್ನ ಇಡೀ ವೈದ್ಯಕೀಯ ಚರಿತ್ರೆಯನ್ನೇ ಹೇಳಿಬಿಡುತ್ತಿದ್ದನು.

ನಮ್ಮ ಹೆಚ್ಚಿನ ಸಾಕ್ಷಿಕಾರ್ಯವು ಅಡಿಗೆಮನೆಯಿಂದ ಅಡಿಗೆಮನೆಗೆ ಆಗಿರುತ್ತಿತ್ತು. ಯಾಕೆಂದರೆ ಹೆಚ್ಚಾಗಿ ಜನರು, ಹುಲ್ಲಿನ ಛಾವಣಿಯಿದ್ದು, ಕಟ್ಟಿಗೆ ಉರಿಯುತ್ತಿರುವ ಬೆಂಕಿಗೂಡಿನ ಬಳಿ, ಅಂದರೆ ತಮ್ಮ ಹೊರಾಂಗಣದ ಅಡಿಗೆಮನೆಯಲ್ಲಿ ಇರುತ್ತಿದ್ದರು. ಈ ಸಮುದಾಯಗಳಲ್ಲಿ ಹೆಚ್ಚಿನವರು ಮುಖ್ಯವಾಗಿ ರೈತರು ಇಲ್ಲವೇ ಬೆಸ್ತರಾಗಿರುತ್ತಿದ್ದರು. ಅವರು ಬಡವರಾದರೂ ತುಂಬ ದಯಾಪರರಾಗಿದ್ದರು. ಅವರಲ್ಲಿ ಅಧಿಕಾಂಶ ಮಂದಿ ಮತಶ್ರದ್ಧೆಯವರು ಮಾತ್ರವಲ್ಲ ತುಂಬ ಮೂಢನಂಬಿಕೆಯುಳ್ಳವರೂ ಆಗಿದ್ದರು. ಯಾವುದೇ ಅಸಾಮಾನ್ಯ ಘಟನೆ ಸಂಭವಿಸುತ್ತಿದ್ದಲ್ಲಿ, ಅದು ಯಾವುದರದ್ದೋ ಸಂಕೇತವಾಗಿದೆಯೆಂದು ಸಾಮಾನ್ಯವಾಗಿ ನೆನಸಲಾಗುತ್ತಿತ್ತು.

ಪಾದ್ರಿಗಳು ಆಮಂತ್ರಿಸಲ್ಪಡದೇ ಜನರ ಮನೆಗಳೊಳಗೆ ನುಗ್ಗಿ, ನಾವು ಅಲ್ಲಿ ಬಿಟ್ಟುಹೋಗಿದ್ದ ಬೈಬಲ್‌ ಸಾಹಿತ್ಯವನ್ನು ಹರಿದುಬಿಸಾಡುವುದರಲ್ಲಿ ಕಿಂಚಿತ್ತೂ ಅಳುಕುತ್ತಿರಲಿಲ್ಲ. ಈ ರೀತಿಯಲ್ಲಿ ಅವರು ಪುಕ್ಕಲು ಸ್ವಭಾವದವರನ್ನು ಹೆದರಿಸುತ್ತಿದ್ದರು. ಆದರೆ ಎಲ್ಲರೂ ಅವರಿಗೆ ಬಗ್ಗಲಿಲ್ಲ. ಉದಾಹರಣೆಗೆ, 70 ವರ್ಷ ಪ್ರಾಯದ ಒಬ್ಬ ಧೀರ ಮಹಿಳೆಯು, ಆ ಪಾದ್ರಿಗಳಿಗೆ ಹೆದರಲಿಲ್ಲ. ಅವಳು ಸ್ವತಃ ಬೈಬಲನ್ನು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದಳು. ಕಟ್ಟಕಡೆಗೆ, ಇನ್ನೂ ಅನೇಕ ವ್ಯಕ್ತಿಗಳೊಂದಿಗೆ ಅವಳು ಸಹ ಒಬ್ಬ ಯೆಹೋವನ ಸಾಕ್ಷಿಯಾದಳು. ಜನರಲ್ಲಿ ನಾವು ಹೆಚ್ಚೆಚ್ಚು ಆಸಕ್ತಿಯನ್ನು ಕಂಡುಹಿಡಿದಾಗ, ಅಂಥವರು ನಮ್ಮ ಕೂಟಗಳಿಗೆ ಹಾಜರಾಗುವಂತೆ ಸಹಾಯಮಾಡಲಿಕ್ಕಾಗಿ, ಕೆಲವು ಭಾನುವಾರಗಳಂದು ಜಾರ್ಜ್‌ 300 ಕಿಲೊಮೀಟರ್‌ಗಳಷ್ಟು ದೂರ ಗಾಡಿಯನ್ನು ಚಲಾಯಿಸಬೇಕಾಗುತ್ತಿತ್ತು.

ಆರಂಭದ ತಿಂಗಳುಗಳಲ್ಲಿ ಅಲ್ಲಿ ಬೇರಾವ ಸಾಕ್ಷಿಯೂ ಇರಲಿಲ್ಲ. ಆದರೂ ಜಾರ್ಜ್‌ ಮತ್ತು ನಾನು, ಕ್ರಮವಾಗಿ ಎಲ್ಲ ಕ್ರೈಸ್ತ ಕೂಟಗಳನ್ನು ನಡೆಸುವ ಮೂಲಕ ನಮ್ಮ ಆತ್ಮಿಕತೆಯನ್ನು ಕಾಪಾಡಿಕೊಂಡೆವು. ಅದಲ್ಲದೆ, ಪ್ರತಿ ಸೋಮವಾರ ರಾತ್ರಿಯಂದು, ಕಾವಲಿನಬುರುಜು ಪತ್ರಿಕೆಯಲ್ಲಿ ಒಂದು ಪಾಠವನ್ನು ಅಭ್ಯಾಸ ಮಾಡಿದೆವು ಹಾಗೂ ನಮ್ಮ ಬೈಬಲ್‌ ವಾಚನದ ಶ್ರದ್ಧಾಪೂರ್ವಕವಾದ ಕಾರ್ಯಕ್ರಮವನ್ನು ಅನುಸರಿಸಿಕೊಂಡು ಹೋದೆವು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಎಲ್ಲ ಸಂಚಿಕೆಗಳನ್ನು ಪಡೆದ ಕೂಡಲೇ ಅವುಗಳನ್ನು ಓದಿದೆವು.

ನಾವು ಲಾಂಗ್‌ ಐಲೆಂಡ್‌ನಲ್ಲಿದ್ದಾಗ ನನ್ನ ತಂದೆಯವರು ತೀರಿಹೋದರು. ಮುಂದಿನ ವರ್ಷ 1963ರ ಬೇಸಗೆಕಾಲದಲ್ಲಿ ತಾಯಿಯವರು ಬಂದು ನಮ್ಮ ಹತ್ತಿರದಲ್ಲೇ ಜೀವಿಸುವಂತೆ ನಾವು ಏರ್ಪಾಡು ಮಾಡಿದೆವು. ಅವರಿಗೆ ತುಂಬ ಪ್ರಾಯವಾಗಿತ್ತಾದರೂ, ಅವರು ಬಹುಮಟ್ಟಿಗೆ ಚೆನ್ನಾಗಿ ಹೊಂದಿಕೊಂಡು, ಲಾಂಗ್‌ ಐಲೆಂಡ್‌ನಲ್ಲಿ ಜೀವಿಸಿದರು. ಆದರೆ 1971ರಲ್ಲಿ ಅವರು ತೀರಿಹೋದರು. ಇಂದು ಲಾಂಗ್‌ ಐಲೆಂಡ್‌ನಲ್ಲಿ ಒಂದು ಸಭೆ ಹಾಗೂ ಹೊಸದಾದ ರಾಜ್ಯ ಸಭಾಗೃಹವಿದೆ.

ಅತಿ ದುಃಖಕರ ಸವಾಲು

ಇಸವಿ 1980ರಲ್ಲಿ, ತನ್ನ ಆರೋಗ್ಯವು ಕೆಡುತ್ತಿರುವುದನ್ನು ಜಾರ್ಜ್‌ ಗಮನಿಸಿದರು. ಅಂದಿನಿಂದಲೇ ನನ್ನ ಜೀವಿತದಲ್ಲಿ ಅತಿ ವೇದನಾಮಯವಾದ ಅನುಭವಗಳಲ್ಲೊಂದು ಶುರುವಾಯಿತು​—ನನ್ನ ಪ್ರಿಯ ಗಂಡನು, ಸಹಕರ್ಮಿ ಮತ್ತು ಸಂಗಾತಿ ಆಲ್‌ಸೈಮರ್ಸ್‌ ರೋಗಕ್ಕೆ ಒಳಗಾಗುವುದನ್ನು ನೋಡುವುದು. ಅವರ ಇಡೀ ವ್ಯಕ್ತಿತ್ವವೇ ಬದಲಾಯಿತು. ಆ ರೋಗದ ಕೊನೆಯ ಮತ್ತು ಅತಿ ಧ್ವಂಸಕಾರಿ ಭಾಗವು, ಅವರ ಮರಣಕ್ಕಿಂತ ಮುಂಚೆ ಸುಮಾರು ನಾಲ್ಕು ವರ್ಷಗಳ ವರೆಗೆ ಇತ್ತು. ಅನಂತರ ಅವರು 1987ರಲ್ಲಿ ತೀರಿಹೋದರು. ಅವರಿಂದ ಸಾಧ್ಯವಿದ್ದಷ್ಟು ಸಮಯ ಅವರು ನನ್ನೊಂದಿಗೆ ಸೇವೆಗೆ ಮತ್ತು ಕೂಟಗಳಿಗೆ ಬರುತ್ತಿದ್ದರು. ಇದಕ್ಕಾಗಿ ಅವರು ಎಷ್ಟು ಪ್ರಯಾಸಪಡುತ್ತಿದ್ದರೆಂದರೆ ಅದನ್ನು ನೋಡಿ ಎಷ್ಟೋ ಬಾರಿ ನಾನು ಅತ್ತುಬಿಟ್ಟಿದ್ದೇನೆ. ಅವರ ಮರಣದ ನಂತರ, ನಮ್ಮ ಕ್ರೈಸ್ತ ಸಹೋದರರು ನನಗಾಗಿ ಪ್ರೀತಿಯ ಮಹಾಪೂರವನ್ನೇ ಸುರಿಸಿದ್ದಾರೆ. ಇದು ನನಗೆ ನಿಜವಾಗಿ ತುಂಬ ಸಾಂತ್ವನವನ್ನು ಕೊಟ್ಟಿದೆ. ಆದರೂ, ಅವರು ಇಲ್ಲದಿರುವುದಕ್ಕಾಗಿ ನಾನು ಈಗಲೂ ತುಂಬ ನೊಂದುಕೊಳ್ಳುತ್ತೇನೆ.

ನನ್ನ ಮತ್ತು ಜಾರ್ಜ್‌ರ ವೈವಾಹಿಕ ಜೀವನದ ಅತ್ಯಮೂಲ್ಯವಾದ ಅಂಶವು, ನಮ್ಮ ನಡುವೆ ಪದೇ ಪದೇ ನಡೆಯುತ್ತಿದ್ದ ಮತ್ತು ಹಿತಕರವಾಗಿದ್ದ ಸಂವಾದವಾಗಿತ್ತು. ಈಗ ಜಾರ್ಜ್‌ ಇಲ್ಲದಿರುವುದರಿಂದ, ಯೆಹೋವನು ತನ್ನ ಸೇವಕರಿಗೆ, “ಎಡೆಬಿಡದೆ ಪ್ರಾರ್ಥನೆಮಾಡಿರಿ,” “ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ” ಮತ್ತು “ಸಕಲವಿಧವಾದ ಪ್ರಾರ್ಥನೆ”ಯನ್ನು ಮಾಡುವಂತೆ ಆಮಂತ್ರಿಸುವುದಕ್ಕಾಗಿ ಹಿಂದೆಂದಿಗಿಂತಲೂ ಈಗ ಹೆಚ್ಚು ಆಭಾರಿಯಾಗಿದ್ದೇನೆ. (1 ಥೆಸಲೊನೀಕ 5:17; ರೋಮಾಪುರ 12:12; ಎಫೆಸ 6:18) ಯೆಹೋವನಿಗೆ ನಮ್ಮ ಕ್ಷೇಮದ ಬಗ್ಗೆ ಚಿಂತೆಯಿದೆ ಎಂಬ ಅರಿವು ಎಷ್ಟೊಂದು ಸಾಂತ್ವನದಾಯಕವಾಗಿದೆ. “ಅನುದಿನವೂ ನಮ್ಮ ಭಾರವನ್ನು ಹೊರುವ ಕರ್ತನಿಗೆ [“ಯೆಹೋವನಿಗೆ,” NW] ಸ್ತೋತ್ರವಾಗಲಿ” ಎಂದು ಹಾಡಿದ ಕೀರ್ತನೆಗಾರನಂತೆಯೇ ನನಗನಿಸುತ್ತದೆ. (ಕೀರ್ತನೆ 68:19) ಆಯಾ ದಿನದ ಸಮಸ್ಯೆಗಳನ್ನು ಆಯಾ ದಿನದಲ್ಲಿ ನಿಭಾಯಿಸುವುದು, ನನ್ನ ಇತಿಮಿತಿಗಳನ್ನು ಅಂಗೀಕರಿಸುವುದು ಮತ್ತು ಯೇಸು ಸಲಹೆಕೊಟ್ಟಂತೆ ಪ್ರತಿ ದಿನದ ಆಶೀರ್ವಾದಗಳಿಗಾಗಿ ಕೃತಜ್ಞರಾಗಿರುವುದು, ಜೀವಿಸಲಿಕ್ಕಾಗಿರುವ ಅತ್ಯುತ್ತಮ ವಿಧವಾಗಿದೆ.​—ಮತ್ತಾಯ 6:34.

ಶುಶ್ರೂಷೆಯ ಆನಂದಕರ ಪ್ರತಿಫಲಗಳು

ಕ್ರೈಸ್ತ ಶುಶ್ರೂಷೆಯಲ್ಲಿ ಕಾರ್ಯಮಗ್ನಳಾಗಿರುವುದು, ಗತಕಾಲದ ಕುರಿತಾಗಿ ಅತಿಯಾಗಿ ಚಿಂತಿಸದಂತೆ ನನಗೆ ಸಹಾಯಮಾಡಿದೆ. ಹೀಗೆ, ಖಿನ್ನತೆಗೆ ನಡೆಸಸಾಧ್ಯವಿರುವ ಭಾವನೆಗಳನ್ನು ನಾನು ಜಯಿಸಲು ಶಕ್ತಳಾಗಿರುವೆ. ಇತರರಿಗೆ ಬೈಬಲ್‌ ಸತ್ಯವನ್ನು ಕಲಿಸುವುದು ವಿಶೇಷವಾದ ಆನಂದದ ಮೂಲವಾಗಿದೆ. ಇದು, ನನ್ನ ಜೀವಿತಕ್ಕೆ ರೂಪ ಮತ್ತು ಸ್ಥಿರತೆಯನ್ನು ಕೊಟ್ಟಿರುವ ಕ್ರಮಬದ್ಧವಾದ ಆತ್ಮಿಕ ರೂಢಿಯನ್ನು ಕೊಟ್ಟಿದೆ.​—ಫಿಲಿಪ್ಪಿ 3:16.

ಒಮ್ಮೆ, ಸುಮಾರು 47 ವರ್ಷಗಳ ಹಿಂದೆ ನನ್ನಿಂದ ರಾಜ್ಯ ಸಂದೇಶವನ್ನು ಪಡೆದಿದ್ದ ಒಬ್ಬ ಮಹಿಳೆಯು ನನಗೆ ಫೋನ್‌ ಮಾಡಿದಳು. ಅವಳು, ನಾವು 1947ರಲ್ಲಿ ಬಹಾಮಸ್‌ಗೆ ಆಗಮಿಸಿದಾಗ ನಮಗಿದ್ದ ಆರಂಭದ ಬೈಬಲ್‌ ವಿದ್ಯಾರ್ಥಿಗಳಲ್ಲಿ ಒಬ್ಬರ ಮಗಳಾಗಿದ್ದಳು. ಅವಳ ತಂದೆ, ತಾಯಿ, ಎಲ್ಲ ಸಹೋದರ ಸಹೋದರಿಯರು ಮತ್ತು ಅವರ ಮಕ್ಕಳು ಹಾಗೂ ಮೊಮ್ಮಕ್ಕಳಲ್ಲಿಯೂ ಹೆಚ್ಚಿನವರು ಯೆಹೋವನ ಸಾಕ್ಷಿಗಳಾಗಿಬಿಟ್ಟಿದ್ದರು. ಈ ಮಹಿಳೆಯ ಕುಟುಂಬದಲ್ಲಿ ಈಗ 60ಕ್ಕಿಂತಲೂ ಹೆಚ್ಚು ಸದಸ್ಯರು ಸಾಕ್ಷಿಗಳಾಗಿದ್ದಾರೆ. ಆದರೆ ಸ್ವತಃ ಅವಳು ಸತ್ಯವನ್ನು ಸ್ವೀಕರಿಸಿರಲಿಲ್ಲ. ಈಗಲಾದರೊ, ಅವಳು ಕೊನೆಗೆ ಯೆಹೋವ ದೇವರ ಒಬ್ಬ ಸೇವಕಿಯಾಗಲು ಸಿದ್ಧಳಾಗಿದ್ದಳು. ಜಾರ್ಜ್‌ ಮತ್ತು ನಾನು ಬಹಾಮಸ್‌ಗೆ ಬಂದಾಗ ಅಲ್ಲಿದ್ದ ಕೈಬೆರಳೆಣಿಕೆಯಷ್ಟು ಸಾಕ್ಷಿಗಳು ಈಗ 1,400ಕ್ಕಿಂತಲೂ ಹೆಚ್ಚು ಸಂಖ್ಯೆಗೇರಿರುವುದನ್ನು ನೋಡುವುದು ಎಷ್ಟೊಂದು ಆನಂದದ ಸಂಗತಿ!

ನನ್ನ ಸ್ವಂತ ಮಕ್ಕಳಿಲ್ಲದಿರುವುದರಿಂದ ನನಗೆ ದುಃಖವಾಗುವುದಿಲ್ಲವೊ ಎಂದು ಕೆಲವೊಮ್ಮೆ ಜನರು ನನ್ನನ್ನು ಕೇಳುತ್ತಾರೆ. ಮಕ್ಕಳನ್ನು ಪಡೆಯುವುದು ಒಂದು ಆಶೀರ್ವಾದವಾಗಿದೆ ನಿಜ. ಆದರೆ ನನ್ನ ಆತ್ಮಿಕ ಮಕ್ಕಳು, ಮೊಮ್ಮಕ್ಕಳು, ಮತ್ತು ಮರಿಮಕ್ಕಳು ನಿರಂತರವಾಗಿ ತೋರಿಸಿರುವ ಪ್ರೀತಿಯು, ಬಹುಶಃ ಎಲ್ಲ ಶಾರೀರಿಕ ಹೆತ್ತವರಿಗೂ ಸಿಗುವುದಿಲ್ಲ. “ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ” ಆಗಿರುವವರು ನಿಜವಾಗಿಯೂ ಅತ್ಯಂತ ಆನಂದಿತ ಜನರಾಗಿದ್ದಾರೆ. (1 ತಿಮೊಥೆಯ 6:18) ಆದುದರಿಂದ ನನ್ನ ಆರೋಗ್ಯವು ಅನುಮತಿಸುವಷ್ಟರ ಮಟ್ಟಿಗೆ ನಾನು ಶುಶ್ರೂಷೆಯಲ್ಲಿ ಕಾರ್ಯಮಗ್ನಳಾಗಿರುತ್ತೇನೆ.

ಒಂದು ದಿನ ನಾನು ದಂತವೈದ್ಯನ ಬಳಿ ಹೋಗಿದ್ದಾಗ, ಒಬ್ಬ ಯುವತಿ ನನ್ನ ಹತ್ತಿರ ಬಂದು, “ನಿಮಗೆ ನನ್ನ ಪರಿಚಯವಿಲ್ಲದಿರಬಹುದು. ಆದರೆ ನನಗೆ ನಿಮ್ಮ ಪರಿಚಯವಿದೆ, ಮತ್ತು ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ಹೇಳಲು ಬಯಸುತ್ತೇನೆ ಅಷ್ಟೇ.” ನಂತರ ಅವಳು, ತಾನು ಬೈಬಲ್‌ನಿಂದ ಸತ್ಯವನ್ನು ಕಲಿತುಕೊಂಡ ವಿಧ ಮತ್ತು ಮಿಷನೆರಿಗಳು ಬಹಾಮಸ್‌ಗೆ ಬಂದದ್ದಕ್ಕಾಗಿ ಅವಳೆಷ್ಟು ಆಭಾರಿಯಾಗಿದ್ದಾಳೆಂಬುದನ್ನು ಹೇಳಿದಳು.

ಇನ್ನೊಂದು ಸಂದರ್ಭದಲ್ಲಿ ನಾನು ರಜೆಗೆ ಹೋಗಿ ಬಂದಾಗ, ನಾಸ್ಸಾವುನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿನ ನನ್ನ ಕೋಣೆಯ ಬಾಗಿಲಿನ ಬಳಿ, ಒಂದು ಗುಲಾಬಿ ಹೂವನ್ನು ಇಡಲಾಗಿತ್ತು. ಅದರೊಂದಿಗೆ ಒಂದು ಚೀಟಿ ಇತ್ತು. “ನೀವು ಹಿಂದಿರುಗಿ ಬಂದಿರುವುದಕ್ಕಾಗಿ ನಮಗೆ ತುಂಬ ಸಂತೋಷ” ಎಂದು ಬರೆಯಲಾಗಿತ್ತು. ನನ್ನ ಹೃದಯವು ಕೃತಜ್ಞತೆಯಿಂದ ತುಂಬಿತುಳುಕುತ್ತದೆ! ಅಷ್ಟುಮಾತ್ರವಲ್ಲದೆ, ಯೆಹೋವನ ವಾಕ್ಯ, ಸಂಸ್ಥೆ ಮತ್ತು ಆತ್ಮವು ಯಾವ ರೀತಿಯ ವ್ಯಕ್ತಿಗಳನ್ನು ರೂಪಿಸಿದೆ ಎಂಬುದನ್ನು ನೋಡುವಾಗ ನಾನು ಆತನನ್ನು ಬಹಳಷ್ಟು ಪ್ರೀತಿಸುವಂತೆ ಮಾಡುತ್ತದೆ. ನಿಜವಾಗಿಯೂ ಯೆಹೋವನ ಆರೈಕೆಯ ಹಸ್ತವು ಅನೇಕವೇಳೆ ನಮ್ಮ ಸುತ್ತಲಿರುವವರ ಮೂಲಕ ವ್ಯಕ್ತವಾಗುತ್ತದೆ.

ಕೃತಜ್ಞತಾಭಾವದಿಂದ ತುಂಬಿತುಳುಕುತ್ತಿರುವುದು

ನನ್ನ ಜೀವಿತವು ಯಾವಾಗಲೂ ಸುಗಮವಾಗಿ ಸಾಗಿದೆ ಎಂದು ಹೇಳಲಾಗುವುದಿಲ್ಲ. ಮತ್ತು ಈಗಲೂ ಅದರ ಕೆಲವೊಂದು ಅಂಶಗಳು ಸುಲಭವಲ್ಲ. ಆದರೆ ಅದಕ್ಕಿಂತಲೂ ಹೆಚ್ಚಾಗಿ, ನಾನು ಕೃತಜ್ಞಳಾಗಿರಲು ಎಷ್ಟೋ ವಿಷಯಗಳು ಇವೆ​—ಶುಶ್ರೂಷೆಯ ಆನಂದಗಳು, ಅನೇಕಾನೇಕ ಸಹೋದರ ಸಹೋದರಿಯರ ಪ್ರೀತಿವಾತ್ಸಲ್ಯ, ಯೆಹೋವನ ಸಂಸ್ಥೆಯ ಪ್ರೀತಿಯ ಪರಾಮರಿಕೆ, ಬೈಬಲಿನಲ್ಲಿರುವ ಸುಂದರ ಸತ್ಯಗಳು, ನಮ್ಮ ಪ್ರಿಯ ಜನರು ಪುನರುತ್ಥಾನಗೊಳಿಸಲ್ಪಟ್ಟಾಗ ಅವರೊಂದಿಗಿರುವ ನಿರೀಕ್ಷೆ ಮತ್ತು ಯೆಹೋವನ ಒಬ್ಬ ನಂಬಿಗಸ್ತ ಸೇವಕನೊಂದಿಗೆ 42 ವರ್ಷಗಳ ವೈವಾಹಿಕ ಜೀವನದ ಸವಿನೆನಪುಗಳು. ನಮ್ಮ ಮದುವೆಯ ಮುಂಚೆ, ನನ್ನ ಗಂಡನಿಗೆ ಅತಿ ಪ್ರಿಯವಾಗಿದ್ದ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಉಳಿಯುವಂತೆ ನಾನು ಅವರಿಗೆ ಯಾವಾಗಲೂ ಸಹಾಯಮಾಡಲು ಶಕ್ತಳಾಗಿರಬೇಕೆಂದು ಪ್ರಾರ್ಥಿಸಿದ್ದೆ. ಯೆಹೋವನು ದಯಾಪೂರ್ವಕವಾಗಿ ಆ ಪ್ರಾರ್ಥನೆಯನ್ನು ಉತ್ತರಿಸಿದನು. ಆದುದರಿಂದ, ಯೆಹೋವನಿಗೆ ಯಾವಾಗಲೂ ನಂಬಿಗಸ್ತಳಾಗಿರುವ ಮೂಲಕ ನಾನು ಆತನಿಗಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.

ಬಹಾಮಸ್‌, ಪ್ರವಾಸಿಗರ ಜನಪ್ರಿಯ ತಾಣವಾಗಿದೆ. ಅವರು ಇಲ್ಲಿಗೆ ಬಂದು, ಇಲ್ಲಿನ ಉಷ್ಣವಲಯದ ಆನಂದಗಳನ್ನು ಸವಿಯಲಿಕ್ಕಾಗಿ ಸಾವಿರಾರು ಡಾಲರುಗಳನ್ನು ಖರ್ಚುಮಾಡುತ್ತಾರೆ. ಆದರೆ ನಾನು ಯೆಹೋವನ ಸಂಸ್ಥೆಯು ಎಲ್ಲಿ ಹೇಳುತ್ತದೊ ಅಲ್ಲಿ ಸೇವೆಮಾಡುವ ಆಯ್ಕೆಮಾಡಿರುವುದರಿಂದ, ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಈ ದ್ವೀಪಗಳ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ವರೆಗೂ ಪ್ರಯಾಣಿಸುವ ಸಂತೋಷಕರ ಅನುಭವದಲ್ಲಿ ಆನಂದಿಸಿದ್ದೇನೆ. ಆದರೆ ಎಲ್ಲದಕ್ಕಿಂತಲೂ ಹೆಚ್ಚಾಗಿ, ಸ್ನೇಹಮಯಿಗಳಾಗಿರುವ ಬಹಾಮಸ್‌ ದ್ವೀಪನಿವಾಸಿಗಳಲ್ಲಿ ಅತಿ ಶ್ರೇಷ್ಠ ವ್ಯಕ್ತಿಗಳ ಪರಿಚಯವಾಗಿ, ಅವರ ಪ್ರೀತಿಯು ನನಗೆ ಸಿಕ್ಕಿದೆ.

ನನ್ನ ಹೆತ್ತವರಿಗೆ ಸತ್ಯವನ್ನು ತಂದು ಕೊಟ್ಟವರಿಗೆ ನಾನು ತುಂಬ ಕೃತಜ್ಞಳಾಗಿದ್ದೇನೆ. ಮತ್ತು ನನ್ನ ಹೆತ್ತವರು ನನ್ನ ಎಳೆಯ ಹೃದಮನದಲ್ಲಿ, ದೇವರ ರಾಜ್ಯವನ್ನು ಪ್ರಥಮವಾಗಿ ಹುಡುಕುವ ತೀವ್ರಾಭಿಲಾಷೆಯನ್ನು ಬೇರೂರಿಸಿದರು. ಇಂದಿನ ಯೆಹೋವನ ಯುವ ಸೇವಕರು ಸಹ ವಿಸ್ತಾರವಾದ ಶುಶ್ರೂಷೆಯ ಭವ್ಯ ಸದವಕಾಶಗಳಿಗೆ ನಡೆಸುವ ‘ದೊಡ್ಡ ಬಾಗಿಲಿನೊಳಗೆ’ ಪ್ರವೇಶಿಸಿದರೆ, ಇದೇ ರೀತಿಯಲ್ಲಿ ಅನೇಕ ಆಶೀರ್ವಾದಗಳನ್ನು ಪಡೆಯಬಲ್ಲರು. (1 ಕೊರಿಂಥ 16:9, NW) ‘ದೇವಾಧಿದೇವನು’ ಆಗಿರುವ ಯೆಹೋವನನ್ನು ಸನ್ಮಾನಿಸಲು ನೀವು ನಿಮ್ಮ ಜೀವನವನ್ನು ಉಪಯೋಗಿಸುವುದಾದರೆ, ನಿಮ್ಮಲ್ಲೂ ಕೃತಜ್ಞತೆಯು ಉಕ್ಕಿಹರಿಯುವುದು.​—ಧರ್ಮೋಪದೇಶಕಾಂಡ 10:17; ದಾನಿಯೇಲ 2:47.

[ಪುಟ 24ರಲ್ಲಿರುವ ಚಿತ್ರ]

1944ರಲ್ಲಿ, ವಿಕ್ಟೋರಿಯ ಬಿ.ಸಿ.ಯಲ್ಲಿ ಬೀದಿ ಸಾಕ್ಷಿಕಾರ್ಯ ಮಾಡುತ್ತಿರುವುದು

[ಪುಟ 24ರಲ್ಲಿರುವ ಚಿತ್ರ]

ನಾನು ಮತ್ತು ಜಾರ್ಜ್‌ 1946ರಲ್ಲಿ ಗಿಲ್ಯಡ್‌ ಶಾಲೆಗೆ ಹಾಜರಾದೆವು

[ಪುಟ 25ರಲ್ಲಿರುವ ಚಿತ್ರ]

1955ರಲ್ಲಿ, ಬಹಾಮಸ್‌ನ ನಾಸ್ಸಾವುನಲ್ಲಿರುವ ಮಿಷನೆರಿ ಗೃಹದ ಮುಂದೆ ಜಾರ್ಜ್‌ರೊಂದಿಗೆ

[ಪುಟ 26ರಲ್ಲಿರುವ ಚಿತ್ರ]

1961-72ರ ವರೆಗೆ ನಾವು ಸೇವೆ ಸಲ್ಲಿಸಿದ ಡೆಡ್‌ಮಾನ್ಸ್‌ ಕೇ ಎಂಬಲ್ಲಿನ ಮಿಷನೆರಿ ಗೃಹ