ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವನ ಆತ್ಮಿಕ ಅಗತ್ಯಗಳು ತೃಪ್ತಿಪಡಿಸಲ್ಪಟ್ಟವು

ಅವನ ಆತ್ಮಿಕ ಅಗತ್ಯಗಳು ತೃಪ್ತಿಪಡಿಸಲ್ಪಟ್ಟವು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಅವನ ಆತ್ಮಿಕ ಅಗತ್ಯಗಳು ತೃಪ್ತಿಪಡಿಸಲ್ಪಟ್ಟವು

ಸೈಪ್ರಸ್‌, ಮೆಡಿಟರೇನಿಯನ್‌ ಸಮುದ್ರದ ಈಶಾನ್ಯ ದಿಕ್ಕಿನ ಮೂಲೆಯಲ್ಲಿರುವ ಒಂದು ದ್ವೀಪವಾಗಿದೆ. ಬೈಬಲ್‌ ಸಮಯಗಳಲ್ಲಿ ಸೈಪ್ರಸ್‌ (ಕುಪ್ರದ್ವೀಪ), ತಾಮ್ರ ಮತ್ತು ಉಚ್ಚ ಗುಣಮಟ್ಟದ ಮರಕ್ಕಾಗಿ ಸುಪ್ರಸಿದ್ಧವಾಗಿತ್ತು. ಪೌಲಬಾರ್ನಬರು, ತಮ್ಮ ಪ್ರಥಮ ಮಿಷನೆರಿ ಸಂಚಾರದಲ್ಲಿ ಅಲ್ಲಿ ರಾಜ್ಯದ ಸುವಾರ್ತೆಯನ್ನು ಘೋಷಿಸಿದರು. (ಅ. ಕೃತ್ಯಗಳು 13:​4-12) ಇಂದು ಕೂಡ ಸುವಾರ್ತೆಯು, ಸೈಪ್ರಸ್‌ ನಿವಾಸಿಗಳ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತಿದೆ. 40ರ ಪ್ರಾಯದಲ್ಲಿರುವ ಲೂಕಸ್‌ನ ವಿಷಯದಲ್ಲಂತೂ ಇದು ಖಂಡಿತವಾಗಿಯೂ ಸತ್ಯವಾಗಿದೆ. ಅವನು ಹೇಳುವುದು:

“ನಾನು ದನಕರುಗಳ ಒಂದು ಫಾರ್ಮ್‌ನಲ್ಲಿ ಜನಿಸಿದೆ. ನಮ್ಮ ಕುಟುಂಬದಲ್ಲಿ ಏಳು ಮಂದಿ ಮಕ್ಕಳಿದ್ದರು. ಚಿಕ್ಕಂದಿನಿಂದಲೂ, ನನಗೆ ಓದುವ ಹುಚ್ಚು ಇತ್ತು. ನನ್ನ ಅಚ್ಚುಮೆಚ್ಚಿನ ಪುಸ್ತಕವು, ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಪಾಕೆಟ್‌-ಸೈಸ್‌ ಎಡಿಷನ್‌ ಆಗಿತ್ತು. ನಾನು ಹತ್ತು ವರ್ಷದವನಾಗಿದ್ದಾಗ, ಕೆಲವು ಸ್ನೇಹಿತರೊಂದಿಗೆ ಸೇರಿ ಒಂದು ಚಿಕ್ಕ ಬೈಬಲ್‌ ಅಭ್ಯಾಸ ಗುಂಪನ್ನು ರಚಿಸಿದೆವು. ಆದರೆ ಆ ಹಳ್ಳಿಯಲ್ಲಿದ್ದ ಕೆಲವು ಹಿರಿಯ ವ್ಯಕ್ತಿಗಳು ನಮ್ಮನ್ನು ಪಾಷಂಡವಾದಿಗಳೆಂದು ಕರೆದದ್ದರಿಂದ, ಆ ಗುಂಪು ಹೆಚ್ಚು ಸಮಯ ಉಳಿಯಲಿಲ್ಲ.

“ತದನಂತರ, ನಾನು ಅಮೆರಿಕದಲ್ಲಿ ಶಾಲೆಗೆ ಹೋಗುತ್ತಿದ್ದಾಗ, ಅನೇಕ ಧರ್ಮಗಳ ಜನರನ್ನು ಭೇಟಿಯಾದೆ. ಇದು ಆತ್ಮಿಕ ವಿಷಯಗಳಿಗಾಗಿದ್ದ ನನ್ನ ಆಸೆಯನ್ನು ಪುನಃ ಹೊತ್ತಿಸಿತು. ಬೇರೆ ಬೇರೆ ಧರ್ಮಗಳನ್ನು ಅಭ್ಯಾಸಮಾಡುತ್ತಾ ಯೂನಿವರ್ಸಿಟಿಯ ಲೈಬ್ರರಿಯಲ್ಲಿ ನಾನು ಹಲವಾರು ದಿನಗಳನ್ನು ಕಳೆದೆ. ನಾನು ಹಲವಾರು ಚರ್ಚುಗಳಿಗೂ ಹೋದೆ. ಆದರೆ ಇಷ್ಟೆಲ್ಲ ಪ್ರಯತ್ನವನ್ನು ಮಾಡಿದ ನಂತರವೂ ನಾನು ಆತ್ಮಿಕವಾಗಿ ತೃಪ್ತನಾಗಲಿಲ್ಲ.

“ನನ್ನ ವ್ಯಾಸಂಗವನ್ನು ಮುಗಿಸಿದ ನಂತರ, ನಾನು ಸೈಪ್ರಸ್‌ಗೆ ಹಿಂದಿರುಗಿದಾಗ, ವೈದ್ಯಕೀಯ ಪ್ರಯೋಗಶಾಲೆಯೊಂದರಲ್ಲಿ ಡೈರಕ್ಟರ್‌ನ ಉದ್ಯೋಗವನ್ನು ಪಡೆದೆ. ಯೆಹೋವನ ಸಾಕ್ಷಿಯಾಗಿದ್ದ ಆಂಡಾನೀಸ್‌ ಎಂಬ ಒಬ್ಬ ವೃದ್ಧ ವ್ಯಕ್ತಿ, ನನ್ನನ್ನು ನನ್ನ ಕೆಲಸದ ಸ್ಥಳದಲ್ಲಿ ಭೇಟಿಮಾಡುತ್ತಿದ್ದರು. ಆದರೆ ಅವರ ಈ ಭೇಟಿಗಳು ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನ ಗಮನಕ್ಕೆ ಬರದೇ ಇರಲಿಲ್ಲ.

“ಸ್ವಲ್ಪ ಸಮಯದೊಳಗೆ, ಒಬ್ಬ ದೇವತಾಶಾಸ್ತ್ರಜ್ಞನು ನನ್ನನ್ನು ಭೇಟಿಮಾಡಿ, ನಾನು ಯೆಹೋವನ ಸಾಕ್ಷಿಗಳೊಂದಿಗೆ ಮಾತಾಡುವುದನ್ನು ನಿರುತ್ತೇಜಿಸಿದನು. ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನಲ್ಲಿ ಸತ್ಯ ಇದೆಯೆಂದು ನನಗೆ ಚಿಕ್ಕಂದಿನಿಂದಲೂ ಕಲಿಸಲಾಗಿತ್ತು. ಆದುದರಿಂದ ಅವರು ಹೇಳಿದಂತೆ ಮಾಡಿದೆ. ಆಂಡಾನೀಸ್‌ರೊಂದಿಗೆ ಮಾತಾಡುವುದನ್ನು ನಿಲ್ಲಿಸಿ, ಆ ದೇವತಾಶಾಸ್ತ್ರಜ್ಞನೊಂದಿಗೆ ಬೈಬಲ್‌ ಚರ್ಚಿಸುವುದನ್ನು ಆರಂಭಿಸಿದೆ. ಸೈಪ್ರಸ್‌ನಲ್ಲಿರುವ ಅನೇಕ ಕ್ರೈಸ್ತ ಸಂನ್ಯಾಸಿಮಠಗಳನ್ನೂ ಸಂದರ್ಶಿಸಿದೆ. ನಾನು ಉತ್ತರ ಗ್ರೀಸ್‌ ವರೆಗೆ ಹೋಗಿ, ಮೌಂಟ್‌ ಆತೋಸ್‌ಗೆ ಭೇಟಿನೀಡಿದೆ. ಇದನ್ನು ಆರ್ತೊಡಾಕ್ಸ್‌ ಕ್ರೈಸ್ತ ಜಗತ್ತಿನಲ್ಲಿ ಅತಿ ಪವಿತ್ರವಾದ ಪರ್ವತವೆಂದು ಮಾನ್ಯಮಾಡಲಾಗುತ್ತದೆ. ಆದರೆ, ನನಗಿದ್ದ ಬೈಬಲ್‌ ಪ್ರಶ್ನೆಗಳಿಗೆ ಆಗಲೂ ಉತ್ತರಗಳು ಸಿಗಲಿಲ್ಲ.

“ಅನಂತರ ನಾನು ಸತ್ಯವನ್ನು ಕಂಡುಹಿಡಿಯಲು ಸಹಾಯಮಾಡುವಂತೆ ದೇವರಿಗೆ ಪ್ರಾರ್ಥಿಸಿದೆ. ಸ್ವಲ್ಪ ಸಮಯದೊಳಗೆ, ಆಂಡಾನೀಸ್‌ ಪುನಃ ನನ್ನ ಕೆಲಸದ ಸ್ಥಳದಲ್ಲಿ ಭೇಟಿನೀಡಿದರು. ನನ್ನ ಪ್ರಾರ್ಥನೆಗೆ ಇದೇ ಉತ್ತರವಾಗಿದೆಯೆಂದು ನನಗನಿಸಿತು. ಆದುದರಿಂದ ಈಗ ನಾನು ಆ ದೇವತಾಶಾಸ್ತ್ರಜ್ಞನನ್ನು ಭೇಟಿಯಾಗುವುದನ್ನು ನಿಲ್ಲಿಸಿ, ಆಂಡಾನೀಸ್‌ರೊಂದಿಗೆ ಬೈಬಲನ್ನು ಅಭ್ಯಾಸಮಾಡಲು ಆರಂಭಿಸಿದೆ. ನಾನು ಪ್ರಗತಿ ಮಾಡುತ್ತಾ ಇದ್ದೆ, ಮತ್ತು 1997ರ ಅಕ್ಟೋಬರ್‌ ತಿಂಗಳಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ, ಯೆಹೋವನಿಗೆ ನಾನು ಮಾಡಿದ ಸಮರ್ಪಣೆಯನ್ನು ಬಹಿರಂಗವಾಗಿ ಸಂಕೇತಿಸಿದೆ.

“ನನ್ನ ಹೆಂಡತಿ, ಮತ್ತು ಆ ಸಮಯದಲ್ಲಿ 14 ಹಾಗೂ 10 ವಯಸ್ಸಿನವರಾಗಿದ್ದ ಹಿರಿಯ ಹೆಣ್ಣುಮಕ್ಕಳು ಆರಂಭದಲ್ಲಿ ನನ್ನನ್ನು ವಿರೋಧಿಸಿದರು. ಆದರೆ ನನ್ನ ಒಳ್ಳೆಯ ನಡತೆಯಿಂದಾಗಿ, ನನ್ನ ಹೆಂಡತಿ ರಾಜ್ಯ ಸಭಾಗೃಹದಲ್ಲಿ ಒಂದು ಕೂಟಕ್ಕೆ ಹಾಜರಾಗಲು ನಿರ್ಣಯಿಸಿದಳು. ಸಾಕ್ಷಿಗಳ ದಯೆ ಮತ್ತು ಅವರು ಅವಳಲ್ಲಿ ತೋರಿಸಿದ ವೈಯಕ್ತಿಕ ಆಸಕ್ತಿಯು ಅವಳ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಲ್ಪಟ್ಟಿತು. ಅವಳು ವಿಶೇಷವಾಗಿ ಪ್ರಭಾವಿತಳಾದದ್ದು, ಅವರು ಬೈಬಲನ್ನು ಉಪಯೋಗಿಸುವ ರೀತಿಯಿಂದಲೇ. ಇದರ ಫಲಿತಾಂಶವಾಗಿ, ನನ್ನ ಹೆಂಡತಿ ಮತ್ತು ಇಬ್ಬರು ಹಿರಿಯ ಹೆಣ್ಣುಮಕ್ಕಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಭ್ಯಾಸವನ್ನು ಆರಂಭಿಸಿದರು. ಅವರೆಲ್ಲರೂ 1999ರ “ದೇವರ ಪ್ರವಾದನಾ ವಾಕ್ಯ” ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದಾಗ, ನನಗೆಷ್ಟು ಸಂತೋಷವಾಯಿತೆಂಬುದನ್ನು ಊಹಿಸಿರಿ!

“ಹೌದು, ಸತ್ಯಕ್ಕಾಗಿರುವ ನನ್ನ ಅನ್ವೇಷಣೆಯು ಕೊನೆಗೊಂಡಿತು. ಈಗ ನನ್ನ ಹೆಂಡತಿ ಮತ್ತು ನಾಲ್ಕು ಮಂದಿ ಮಕ್ಕಳು ಸೇರಿ, ಹೀಗೆ ನನ್ನ ಇಡೀ ಕುಟುಂಬವು ಯೆಹೋವನ ಶುದ್ಧಾರಾಧನೆಯಲ್ಲಿ ಐಕ್ಯರಾಗಿದ್ದೇವೆ.”