ಆತ್ಮಿಕ ವಾಸಿಯಾಗುವಿಕೆಗೆ ನಡೆಸುವಂಥ
ಆತ್ಮಿಕ ವಾಸಿಯಾಗುವಿಕೆಗೆ ನಡೆಸುವಂಥ
“ನಾನು [ನನ್ನ ಪಾಪವನ್ನು] ಅರಿಕೆಮಾಡದೆ ಇದ್ದಾಗ ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು. ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು; ಬೇಸಿಗೆಯ ನೀರಿನಂತೆ ನನ್ನ ಶರೀರದ ಸಾರವೆಲ್ಲಾ ಬತ್ತಿಹೋಯಿತು.” (ಕೀರ್ತನೆ 32:3, 4) ಮನಮುಟ್ಟುವ ಆ ಮಾತುಗಳು, ಪ್ರಾಚೀನ ಇಸ್ರಾಯೇಲಿನ ರಾಜನಾದ ದಾವೀದನ ಮನಸ್ಸಿನಲ್ಲಿದ್ದ ಗಾಢವಾದ ಭಾವನಾತ್ಮಕ ನೋವನ್ನು ಪ್ರತಿಬಿಂಬಿಸುತ್ತವೆ. ಅವನು ಮಾಡಿದ ಗಂಭೀರವಾದ ಪಾಪವನ್ನು ಅರಿಕೆಮಾಡುವ ಬದಲು, ಅದನ್ನು ಮುಚ್ಚಿಡುವ ಮೂಲಕ ಈ ನೋವನ್ನು ಅವನು ಸ್ವತಃ ತನ್ನ ಮೇಲೆ ಬರಮಾಡಿಕೊಂಡಿದ್ದನು.
ದಾವೀದನಿಗೆ ಗಮನಾರ್ಹವಾದ ಎಷ್ಟೋ ಸಾಮರ್ಥ್ಯಗಳಿದ್ದವು. ಅವನೊಬ್ಬ ಸಾಹಸಿ ಯೋಧನು, ಒಬ್ಬ ನಿಪುಣ ರಾಜ್ಯನೀತಿಜ್ಞನು, ಒಬ್ಬ ಕವಿ ಮತ್ತು ಒಬ್ಬ ಸಂಗೀತಗಾರನಾಗಿದ್ದನು. ಹೀಗಿದ್ದರೂ, ಅವನು ತನ್ನ ಸ್ವಂತ ಸಾಮರ್ಥ್ಯಗಳ ಮೇಲಲ್ಲ, ಬದಲಾಗಿ ತನ್ನ ದೇವರ ಮೇಲೆ ಆತುಕೊಂಡನು. (1 ಸಮುವೇಲ 17:45, 46) ಅವನು ‘ಯೆಹೋವನಲ್ಲಿ ಯಥಾರ್ಥಭಕ್ತಿಯನ್ನಿಟ್ಟಿದ್ದನು’ ಎಂದು ಹೇಳಲಾಗಿದೆ. (1 ಅರಸುಗಳು 11:4) ಆದರೆ ಅವನು ಮಾಡಿದಂಥ ಒಂದು ಪಾಪವು ತುಂಬ ನಿಂದನೀಯವಾಗಿತ್ತು. ಮತ್ತು ಇದರ ಕುರಿತಾಗಿಯೇ ಅವನು 32ನೇ ಕೀರ್ತನೆಯಲ್ಲಿ ಸೂಚಿಸುತ್ತಿರಬಹುದು. ಅವನು ಪಾಪಮಾಡುವಂತೆ ನಡೆಸಿದಂಥ ಪರಿಸ್ಥಿತಿಗಳನ್ನು ಪರೀಕ್ಷಿಸುವ ಮೂಲಕ ನಾವು ಬಹಳಷ್ಟನ್ನು ಕಲಿಯಬಲ್ಲೆವು. ನಾವು ತಪ್ಪಿಸಿಕೊಳ್ಳಬೇಕಾದ ಅಪಾಯಗಳ ಕುರಿತು ಕಲಿಯಬಹುದು ಮಾತ್ರವಲ್ಲ, ದೇವರೊಂದಿಗಿನ ನಮ್ಮ ಸಂಬಂಧವನ್ನು ಪುನಸ್ಸ್ಥಾಪಿಸಲಿಕ್ಕಾಗಿ ನಮ್ಮ ಪಾಪಗಳನ್ನು ಅರಿಕೆಮಾಡುವ ಅಗತ್ಯದ ಕುರಿತೂ ನೋಡುವೆವು.
ಒಬ್ಬ ನಿಷ್ಠಾವಂತ ರಾಜನು ಪಾಪಕ್ಕೆ ಬಲಿಬೀಳುತ್ತಾನೆ
ಇಸ್ರಾಯೇಲ್ ಜನಾಂಗವು, ಅಮ್ಮೋನಿಯರೊಂದಿಗಿನ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಆದರೆ ರಾಜನಾದ ದಾವೀದನು ಯೆರೂಸಲೇಮಿನಲ್ಲೇ ಇದ್ದನು. ಒಂದು ಸಾಯಂಕಾಲ, ತನ್ನ ಅರಮನೆಯ ಮಾಳಿಗೆಯ ಮೇಲೆ ಅಡ್ಡಾಡುತ್ತಿದ್ದಾಗ, ಪಕ್ಕದ ಮನೆಯೊಂದರಲ್ಲಿ ಒಬ್ಬ ಸುಂದರ ಸ್ತ್ರೀ ಸ್ನಾನಮಾಡುತ್ತಿರುವುದು ಅವನ ದೃಷ್ಟಿಗೆ ಬಿತ್ತು. ತನ್ನನ್ನೇ ನಿಯಂತ್ರಿಸಿಕೊಳ್ಳುವ ಬದಲಾಗಿ ಅವನು ಕಾಮಾತುರತೆಯಿಂದ ಅವಳನ್ನು ಆಶಿಸಿದನು. ಅವಳು, ತನ್ನ ಸೈನ್ಯದಲ್ಲಿ ಒಬ್ಬ ಸೈನಿಕನಾಗಿದ್ದ ಊರೀಯನ ಹೆಂಡತಿಯೆಂದು ದಾವೀದನಿಗೆ ಗೊತ್ತಾದಾಗ, ಅವನು ಅವಳನ್ನು ಕರೆತಂದು ಅವಳೊಂದಿಗೆ ಹಾದರ ಮಾಡಿದನು. ಸಮಯಾನಂತರ, ಬತ್ಷೆಬೆಯು ತಾನು ಗರ್ಭವತಿಯಾಗಿದ್ದೇನೆಂದು ದಾವೀದನಿಗೆ ಸುದ್ದಿ ಮುಟ್ಟಿಸಿದಳು.—2 ಸಮುವೇಲ 11:1-5.
ದಾವೀದನು ಈಗ ಸಿಕ್ಕಿಬಿದ್ದಿದ್ದನು. ತಮ್ಮ ಪಾಪವು ಬಯಲಾಗುವಲ್ಲಿ, ಇಬ್ಬರಿಗೂ ಮರಣ ದಂಡನೆಯಾಗುತ್ತಿತ್ತು. (ಯಾಜಕಕಾಂಡ 20:10) ಆದುದರಿಂದ ಅವನೊಂದು ಯೋಜನೆ ಮಾಡಿದನು. ಅವನು ಬತ್ಷೆಬೆಯ ಗಂಡನಾದ ಊರೀಯನನ್ನು ರಣರಂಗದಿಂದ ಹಿಂದಿರುಗಿ ಬರುವಂತೆ ಕರೆ ಕಳುಹಿಸಿದನು. ಯುದ್ಧದ ಕುರಿತಾಗಿ ಅವನನ್ನು ಸರಿಯಾಗಿ ಪ್ರಶ್ನಿಸಿದ ನಂತರ, ಊರೀಯನು ತನ್ನ ಮನೆಗೆ ಹೋಗುವಂತೆ ದಾವೀದನು ಹೇಳಿದನು. ಹೀಗೆ ಮಾಡುವುದರಿಂದ, ಬತ್ಷೆಬೆಯ ಮಗುವಿನ ತಂದೆ ಊರೀಯನಾಗಿದ್ದಾನೆಂಬಂತೆ ತೋರುವುದೆಂದು ದಾವೀದನು ನಿರೀಕ್ಷಿಸಿದನು.—2 ಸಮುವೇಲ 11:6-9.
ಆದರೆ ದಾವೀದನ ನಿರೀಕ್ಷೆಯನ್ನು ಹುಸಿಗೊಳಿಸುತ್ತಾ, ಊರೀಯನು ತನ್ನ ಹೆಂಡತಿಯನ್ನು ಭೇಟಿಯಾಗಲು ಹೋಗಲಿಲ್ಲ. ಸೈನ್ಯವು ರಣರಂಗದಲ್ಲಿ ಹೆಣಗಾಡುತ್ತಿರುವಾಗ ತಾನು ಮನೆಗೆ ಹೋಗುವುದರ ಕುರಿತು ಯೋಚಿಸಲೂ ಸಾಧ್ಯವಿಲ್ಲವೆಂದು ಊರೀಯನು ಹೇಳಿದನು. ಇಸ್ರಾಯೇಲಿನ ಸೈನ್ಯವು ಒಂದು ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿರುತ್ತಿದ್ದಾಗ, ಪುರುಷರು ತಮ್ಮ ಸ್ವಂತ ಪತ್ನಿಯರೊಂದಿಗೂ ಲೈಂಗಿಕ ಸಂಬಂಧವನ್ನು ಇಡುತ್ತಿರಲಿಲ್ಲ. ಅವರು ವಿಧಿಗನುಸಾರ ಶುದ್ಧರಾಗಿರಬೇಕಿತ್ತು. (1 ಸಮುವೇಲ 21:5) ಅನಂತರ ದಾವೀದನು ಊರೀಯನನ್ನು ಒಂದು ಊಟಕ್ಕೆ ಕರೆದು ಅವನನ್ನು ಪಾನಮತ್ತನಾಗಿ ಮಾಡಿಸಿದನು. ಆದರೂ ಊರೀಯನು ತನ್ನ ಹೆಂಡತಿಯ ಬಳಿ ಮನೆಗೆ ಹೋಗಲಿಲ್ಲ. ಊರೀಯನ ಈ ನಂಬಿಗಸ್ತ ನಡತೆಯು, ದಾವೀದನ ಘೋರ ಪಾಪವನ್ನು ಖಂಡಿಸಿತು.—2 ಸಮುವೇಲ 11:10-13.
ತನ್ನ ಸ್ವಂತ ಪಾಪದಿಂದಾಗಿ ಹೆಣೆಯಲ್ಪಟ್ಟ ಪಾಶವು ಈಗ ದಾವೀದನ ಸುತ್ತ ಬಿಗಿಯಾಗುತ್ತಾ ಇತ್ತು. ಹತಾಶನಾಗಿ, ಈಗ ಅವನ ಮುಂದೆ ಒಂದೇ ಒಂದು ಮಾರ್ಗವಿರುವಂತೆ ತೋರಿತು. ಅವನು ಊರೀಯನನ್ನು ರಣರಂಗಕ್ಕೆ ಪುನಃ ಕಳುಹಿಸಿದನು ಮತ್ತು ಅವನ ಕೈಯಲ್ಲಿ ತನ್ನ ಸೇನಾಪತಿ ಯೋವಾಬನಿಗೆ ಒಂದು ಪತ್ರವನ್ನು ಕಳುಹಿಸಿದನು. ಆ ಚೀಟಿಯ ಉದ್ದೇಶವು ತುಂಬ ಸ್ಪಷ್ಟವಾಗಿತ್ತು: “ಊರೀಯನು ಗಾಯಹೊಂದಿ ಸಾಯುವಂತೆ ಅವನನ್ನು ಘೋರಯುದ್ಧ ನಡೆಯುತ್ತಿರುವ ಕಡೆಗೆ ಮುಂಭಾಗದಲ್ಲಿ ನಿಲ್ಲಿಸಿ ನೀವು ಹಿಂದಕ್ಕೆ ಸರಿದುಕೊಳ್ಳಿರಿ.” ಆ ಚೀಟಿಯ ಮುಖಾಂತರ, ಈ ಶಕ್ತಿಶಾಲಿ ರಾಜನು ಊರೀಯನನ್ನು ಸಾಯಿಸಿ, ತನ್ನ ಪಾಪವನ್ನು ಮುಚ್ಚಿಕೊಂಡಂತೆ ತೋರಿತು.—2 ಸಮುವೇಲ 11:14-17.
ಬತ್ಷೆಬೆಯು ತನ್ನ ಗಂಡನಿಗಾಗಿ ಶೋಕಿಸುವ ಅವಧಿಯು ಮುಗಿದಾಗ, ದಾವೀದನು ಅವಳನ್ನು ಮದುವೆಯಾದನು. ಸಮಯ ದಾಟಿತು ಯೆರೆಮೀಯ 17:9; 2 ಸಮುವೇಲ 11:25.
ಮತ್ತು ಅವರ ಮಗು ಹುಟ್ಟಿತು. ಇದೆಲ್ಲವೂ ನಡೆದ ಸಮಯದಲ್ಲಿ, ದಾವೀದನು ತನ್ನ ಪಾಪಗಳ ಕುರಿತಾಗಿ ಬಾಯಿಮುಚ್ಚಿಕೊಂಡಿದ್ದನು. ಪ್ರಾಯಶಃ ಅವನು ತನ್ನ ಕೃತ್ಯಗಳು ನ್ಯಾಯವಾದದ್ದಾಗಿವೆ ಎಂದು ತನಗೇ ಹೀಗೆ ಸಮರ್ಥಿಸಿ ಹೇಳಿಕೊಳ್ಳುತ್ತಿದ್ದಿರಬಹುದು: ಬೇರೆಯವರಂತೆಯೇ ಊರೀಯನು ಸಹ ರಣರಂಗದಲ್ಲಿ ಗೌರವದಿಂದ ಕೂಡಿದ ಸಾವನ್ನಪ್ಪಿದನಲ್ಲವೊ? ಅದಲ್ಲದೆ, ತನ್ನ ಹೆಂಡತಿಯ ಬಳಿ ಹೋಗುವಂತೆ ರಾಜನು ಹೇಳಿದರೂ ಅವನೇ ಅವಿಧೇಯನಾದನಲ್ಲವೊ? ‘ವಂಚಕ ಹೃದಯವು’ ಪಾಪವನ್ನು ನ್ಯಾಯವಾದದ್ದೆಂದು ಸಮರ್ಥಿಸಲು ಎಲ್ಲ ರೀತಿಯ ತರ್ಕವಾದಗಳನ್ನು ಉಪಯೋಗಿಸುತ್ತದೆ.—ಪಾಪಕ್ಕೆ ನಡೆಸುವ ತಪ್ಪು ಹೆಜ್ಜೆಗಳು
ಆದರೆ ನೀತಿಯನ್ನು ಪ್ರೀತಿಸುವವನಾಗಿದ್ದ ದಾವೀದನು, ವ್ಯಭಿಚಾರ ಮತ್ತು ಕೊಲೆಯನ್ನು ಮಾಡುವಷ್ಟು ನೀಚ ಸ್ಥಿತಿಗೆ ಇಳಿದದ್ದು ಹೇಗೆ? ಅವನಲ್ಲಿ ಪಾಪದ ಬೀಜಗಳು ಬಿತ್ತಲ್ಪಟ್ಟು ಬಹಳಷ್ಟು ಸಮಯವು ಕಳೆದಿರಬಹುದು. ದಾವೀದನು, ಯೆಹೋವನ ಶತ್ರುಗಳ ವಿರುದ್ಧ ನಡೆಯುತ್ತಿದ್ದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಸೈನಿಕರನ್ನು ಬೆಂಬಲಿಸುತ್ತಾ ಅವರೊಂದಿಗೆ ಇರಬೇಕಾಗಿತ್ತು. ಆದರೆ ಅವನು ಏಕೆ ಅವರೊಂದಿಗಿರಲಿಲ್ಲ ಎಂಬುದು ಕೌತುಕದ ಸಂಗತಿಯಾಗಿದೆ. ಅದರ ಬದಲು, ಎಲ್ಲಿ ಯುದ್ಧದ ಕುರಿತಾದ ಚಿಂತೆಗಳು ಇಡೀ ಮನಸ್ಸನ್ನು ವ್ಯಾಪಿಸಿ, ಒಬ್ಬ ನಂಬಿಗಸ್ತ ಸೈನಿಕನ ಹೆಂಡತಿಗಾಗಿದ್ದ ಅವನ ದುರಾಸೆಯನ್ನು ಅಳಿಸಿಹಾಕಲು ಸಾಧ್ಯವಿರಲಿಲ್ಲವೊ ಆ ಅರಮನೆಯಲ್ಲಿ ಅವನು ಹಾಯಾಗಿದ್ದನು. ಇಂದು, ಸತ್ಯ ಕ್ರೈಸ್ತರು ತಮ್ಮ ಸಭೆಗಳೊಂದಿಗೆ ಆತ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಒಳಗೂಡಿರುವುದು ಮತ್ತು ಸಾರುವ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು ಅವರಿಗೆ ಒಂದು ಸಂರಕ್ಷಣೆಯಾಗಿದೆ.—1 ತಿಮೊಥೆಯ 6:12.
ಇಸ್ರಾಯೇಲಿನ ಆ ರಾಜನಿಗೆ, ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಮಾಡಿ, ಅದನ್ನು ದಿನಾಲೂ ಓದುವಂತೆ ಸೂಚನೆಯನ್ನು ಕೊಡಲಾಗಿತ್ತು. ಇದರ ಕಾರಣವನ್ನು ಬೈಬಲ್ ಕೊಡುತ್ತದೆ: “ಅವನು ಮದದಿಂದ ತನ್ನ ಸ್ವದೇಶದವರನ್ನು ಹಿಯ್ಯಾಳಿಸದೆ ಯೆಹೋವನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳದೆ ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸಮಾಡಿಕೊಳ್ಳುವಂತೆ ಈ ಗ್ರಂಥವು ಅವನ ಬಳಿಯಲ್ಲೇ ಇರಬೇಕು; ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರಬೇಕು. ಹೀಗಾದರೆ ಅವನೂ ಅವನ ಸಂತತಿಯವರೂ ಬಹುಕಾಲ ರಾಜ್ಯಾಧಿಕಾರವನ್ನು ನಡಿಸುತ್ತಾ ಇಸ್ರಾಯೇಲ್ಯರ ನಡುವೆ ಬಾಳುವರು.” (ಧರ್ಮೋಪದೇಶಕಾಂಡ 17:18-20) ದಾವೀದನು ಈ ಗಂಭೀರವಾದ ಪಾಪಗಳನ್ನು ಮಾಡಿದಂಥ ಸಮಯದಲ್ಲಿ ಆ ಸೂಚನೆಯನ್ನು ಪಾಲಿಸದೇ ಇದ್ದಿರುವ ಸಾಧ್ಯತೆ ಇದೆ. ದೇವರ ವಾಕ್ಯದ ಕ್ರಮವಾದ ಅಭ್ಯಾಸ ಮತ್ತು ಅದರ ಕುರಿತಾದ ಮನನವು, ಈ ಕಷ್ಟಕರ ಸಮಯಗಳಲ್ಲಿ ತಪ್ಪುಗೈಯುವುದರಿಂದ ನಿಶ್ಚಯವಾಗಿಯೂ ನಮಗೆ ಸಹಾಯಮಾಡುವುದು.—ಜ್ಞಾನೋಕ್ತಿ 2:10-12.
ಅದಲ್ಲದೆ, ದಶಾಜ್ಞೆಗಳಲ್ಲಿ ಕೊನೆಯದ್ದು ನಿರ್ದಿಷ್ಟವಾಗಿ ಹೀಗೆ ತಿಳಿಸಿತ್ತು: ‘ಮತ್ತೊಬ್ಬನ ಹೆಂಡತಿಯನ್ನು ಆಶಿಸಬಾರದು.’ (ವಿಮೋಚನಕಾಂಡ 20:17) ಈ ಸಮಯದೊಳಗೆ, ದಾವೀದನಿಗೆ ಅನೇಕ ಹೆಂಡತಿಯರು ಮತ್ತು ಉಪಪತ್ನಿಯರಿದ್ದರು. (2 ಸಮುವೇಲ 3:2-5) ಹೀಗಿದ್ದರೂ, ಇನ್ನೊಬ್ಬ ಆಕರ್ಷಕ ಸ್ತ್ರೀಯನ್ನು ಆಶಿಸುವುದರಿಂದ ಅದು ಅವನನ್ನು ತಡೆಯಲಿಲ್ಲ. “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು” ಎಂಬ ಯೇಸುವಿನ ಮಾತುಗಳ ಗಂಭೀರತೆಯನ್ನು ಈ ವೃತ್ತಾಂತವು ನಮಗೆ ನೆನಪುಹುಟ್ಟಿಸುತ್ತದೆ. (ಮತ್ತಾಯ 5:28) ಅಂಥ ಅಯೋಗ್ಯವಾದ ಆಶೆಗಳನ್ನು ಇಟ್ಟುಕೊಳ್ಳುವ ಬದಲು, ಅವುಗಳನ್ನು ನಮ್ಮ ಹೃದಮನಗಳಿಂದ ಕಿತ್ತುಹಾಕಲು ಸ್ವಲ್ಪವೂ ತಡಮಾಡದಿರೋಣ.
ಪಶ್ಚಾತ್ತಾಪ ಮತ್ತು ಕರುಣೆ
ದಾವೀದನ ಪಾಪದ ಕುರಿತಾದ ಈ ಮುಚ್ಚುಮರೆಯಿಲ್ಲದ ವೃತ್ತಾಂತವು, ಒಬ್ಬ ವ್ಯಕ್ತಿಯ ಲೈಂಗಿಕ ಆಸೆಗಳನ್ನು ತೃಪ್ತಿಪಡಿಸಲಿಕ್ಕಾಗಿ ಖಂಡಿತವಾಗಿಯೂ ಕೊಡಲ್ಪಟ್ಟಿಲ್ಲ. ಅದರ ಬದಲು, ಯೆಹೋವನ ಗಮನಾರ್ಹವಾದ ಗುಣಗಳಲ್ಲಿ ಒಂದಾಗಿರುವ ಕರುಣೆಯ, ಸಕ್ರಿಯ ಹಾಗೂ ಮನಮುಟ್ಟುವ ವ್ಯಕ್ತಪಡಿಸುವಿಕೆಯನ್ನು ನೋಡಲು ಈ ದಾಖಲೆಯು ನಮಗೊಂದು ಅವಕಾಶವನ್ನು ಕೊಡುತ್ತದೆ.—ವಿಮೋಚನಕಾಂಡ 34:6, 7.
ಬತ್ಷೆಬೆಯು ಒಂದು ಗಂಡು ಮಗುವಿಗೆ ಜನ್ಮವಿತ್ತ ಬಳಿಕ, ಯೆಹೋವನು ನಾತಾನನೆಂಬ ಪ್ರವಾದಿಯನ್ನು ದಾವೀದನ ಬಳಿ ಕಳುಹಿಸಿದನು. ಇದು ಕರುಣೆಯ ಕೃತ್ಯವಾಗಿತ್ತು. ನಾತಾನನು ದಾವೀದನ ಬಳಿ ಹೋಗದಿದ್ದರೆ ಮತ್ತು ದಾವೀದನು ತನ್ನ ಪಾಪದ ಕುರಿತಾಗಿ ಮೌನಿಯಾಗಿರುತ್ತಿದ್ದರೆ, ಅವನು ಪಾಪದ ಮಾರ್ಗದಲ್ಲಿ ನಡೆಯುತ್ತಾ ಕಠಿನನಾಗುವ ಸಾಧ್ಯತೆ ಇತ್ತು. (ಇಬ್ರಿಯ 3:13) ಸಂತೋಷಕರವಾಗಿ ದಾವೀದನು ದೇವರ ಕರುಣೆಗೆ ಸ್ಪಂದಿಸಿದನು. ನಾತಾನನ ಕುಶಲ ಆದರೆ ಸ್ಪಷ್ಟವಾದ ಮಾತುಗಳು ದಾವೀದನ ಮನಸ್ಸಾಕ್ಷಿಯನ್ನು ಚುಚ್ಚಿದವು. ತಾನು ದೇವರ ವಿರುದ್ಧ ಪಾಪಮಾಡಿದ್ದೇನೆಂದು ನಮ್ರತೆಯಿಂದ ಅಂಗೀಕರಿಸಿದನು. ವಾಸ್ತವದಲ್ಲಿ, ದಾವೀದನು ಬತ್ಷೆಬೆಯೊಂದಿಗೆ ಪಾಪಮಾಡುವುದರ ಕುರಿತಾಗಿ ತಿಳಿಸುವ 51ನೇ ಕೀರ್ತನೆ, ಅವನು ಪಶ್ಚಾತ್ತಾಪಪಟ್ಟು, ತನ್ನ ಗಂಭೀರವಾದ ಪಾಪವನ್ನು ಅರಿಕೆಮಾಡಿದ ನಂತರವೇ ರಚಿಸಲ್ಪಟ್ಟಿತು. ನಾವು ಒಂದು ಗಂಭೀರ ಪಾಪವನ್ನು ಮಾಡಿರುವಲ್ಲಿ, ನಮ್ಮ ಹೃದಯವು ಕಠಿನವಾಗುವಂತೆ ಎಂದಿಗೂ ಬಿಡದಿರೋಣ.—2 ಸಮುವೇಲ 12:1-13.
ದಾವೀದನನ್ನು ಕ್ಷಮಿಸಲಾಯಿತಾದರೂ, ಅವನಿಗೆ ಶಿಸ್ತನ್ನು ಕೊಡದೆ ಅಥವಾ ತನ್ನ ಪಾಪದ ಫಲವನ್ನು ಅನುಭವಿಸದೇ ಇರುವಂತೆ ಬಿಡಲಾಗಲಿಲ್ಲ. (ಜ್ಞಾನೋಕ್ತಿ 6:27) ಹಾಗೆ ಮಾಡುವುದಾದರೂ ಹೇಗೆ? ಏಕೆಂದರೆ ದೇವರು ಒಂದುವೇಳೆ ಅದೆಲ್ಲವನ್ನೂ ಅಲಕ್ಷಿಸುತ್ತಿದ್ದಲ್ಲಿ, ಆತನ ಸ್ವಂತ ಮಟ್ಟಗಳ ನಿಂದೆಯಾಗುತ್ತಿತ್ತು. ತನ್ನ ದುಷ್ಟ ಪುತ್ರರನ್ನು ಸೌಮ್ಯ ರೀತಿಯಲ್ಲಿ ಗದರಿಸಿ, ಅವರು ತಮ್ಮ ಕೆಟ್ಟ ಕೆಲಸಗಳನ್ನು ಮುಂದುವರಿಸುತ್ತಾ ಇರುವಂತೆ ಬಿಟ್ಟ ಮಹಾ ಯಾಜಕನಾದ ಏಲಿಯಂತೆ ದೇವರು ನಿಷ್ಫಲನಾಗಿರುತ್ತಿದ್ದನು. (1 ಸಮುವೇಲ 2:22-25) ಆದರೆ, ಯಾರು ಪಶ್ಚಾತ್ತಾಪಪಡುತ್ತಾರೊ ಅವರಿಂದ ಯೆಹೋವನು ತನ್ನ ಪ್ರೀತಿದಯೆಯನ್ನು ತಡೆದಿಡುವುದಿಲ್ಲ. ಆತನ ಕರುಣೆಯು ಚೈತನ್ಯಕರವಾದ, ತಂಪಾದ ನೀರಿನಂತೆ, ತಪ್ಪುಮಾಡಿದವನು ಪಾಪದ ಫಲಿತಾಂಶಗಳನ್ನು ತಾಳಿಕೊಳ್ಳಲು ಸಹಾಯಮಾಡುವುದು. ದೇವರ ಕ್ಷಮೆ ಮತ್ತು ಜೊತೆ ಆರಾಧಕರೊಂದಿಗಿನ ಆತ್ಮೋನ್ನತಿ ಮಾಡುವ ಸಹವಾಸವು, ಆ ವ್ಯಕ್ತಿಯ ಆತ್ಮಿಕತೆಯನ್ನು ಪುನಸ್ಸ್ಥಾಪಿಸಬಲ್ಲದು. ಹೌದು, ಪಶ್ಚಾತ್ತಾಪಪಟ್ಟಿರುವ ಒಬ್ಬ ವ್ಯಕ್ತಿಯು ಕ್ರಿಸ್ತನ ಪ್ರಾಯಶ್ಚಿತ್ತದ ಆಧಾರದ ಮೇಲೆ ‘ದೇವರ ಕೃಪಾತಿಶಯವನ್ನು’ ಅನುಭವಿಸಸಾಧ್ಯವಿದೆ.—ಎಫೆಸ 1:7.
“ಶುದ್ಧಹೃದಯ” ಮತ್ತು “ಒಂದು ಹೊಸ ಆತ್ಮ”
ದಾವೀದನು ತನ್ನ ಪಾಪವನ್ನು ಅರಿಕೆಮಾಡಿದ ನಂತರ, ತಾನು ಪ್ರಯೋಜನಕ್ಕೆ ಬಾರದವನು ಎಂಬ ನಕಾರಾತ್ಮಕ ಭಾವನೆಗಳಲ್ಲಿ ಮುಳುಗಿಹೋಗಲಿಲ್ಲ. ಪಾಪ ಅರಿಕೆಗಳ ಕುರಿತಾಗಿ ಅವನು ಬರೆದ ಕೀರ್ತನೆಗಳಲ್ಲಿನ ಅವನ ಅಭಿವ್ಯಕ್ತಿಗಳು, ಅವನು ಅನುಭವಿಸಿದ ಉಪಶಮನ ಮತ್ತು ನಂಬಿಗಸ್ತಿಕೆಯಿಂದ ದೇವರ ಸೇವೆಮಾಡುವ ಅವನ ದೃಢಸಂಕಲ್ಪವನ್ನು ವ್ಯಕ್ತಪಡಿಸುತ್ತವೆ. ಉದಾಹರಣೆಗಾಗಿ 32ನೇ ಕೀರ್ತನೆಯನ್ನು ನೋಡಿ. 1ನೆಯ ವಚನದಲ್ಲಿ ನಾವು ಹೀಗೆ ಓದುತ್ತೇವೆ: “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು.” ಒಬ್ಬ ವ್ಯಕ್ತಿಯು ಮಾಡಿರುವ ಪಾಪವು ಎಷ್ಟೇ ಗಂಭೀರವಾಗಿರಲಿ, ಅವನು ನಿಜವಾಗಿಯೂ ಪಶ್ಚತ್ತಾಪಪಡುವಲ್ಲಿ, ಅವನಿಗೆ ಸಂತೋಷಕರವಾದ ಫಲಿತಾಂಶವು ಸಿಗುವುದು. ಈ ರೀತಿಯ ಪಶ್ಚಾತ್ತಾಪವನ್ನು ತೋರಿಸುವ ಒಂದು ವಿಧವು, ದಾವೀದನು ಮಾಡಿದಂತೆ, ತನ್ನ ಕೃತ್ಯಗಳಿಗಾಗಿ ಸ್ವತಃ ತಾನೇ ಜವಾಬ್ದಾರನೆಂದು ಒಪ್ಪಿಕೊಳ್ಳುವುದಾಗಿದೆ. (2 ಸಮುವೇಲ 12:13) ದಾವೀದನು, ತಾನು ಮಾಡಿದಂಥ ಕೆಲಸವು ನ್ಯಾಯವಾದದ್ದೆಂದು ಯೆಹೋವನ ಮುಂದೆ ಸಮರ್ಥಿಸಲು ಅಥವಾ ದೋಷವನ್ನು ಬೇರೆಯವರ ಮೇಲೆ ಹೊರಿಸಲು ಪ್ರಯತ್ನಿಸಲಿಲ್ಲ. 5ನೆಯ ವಚನವು ಹೇಳುವುದು: “ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.” ಪ್ರಾಮಾಣಿಕವಾಗಿ ಪಾಪ ಅರಿಕೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯು ಅವನ ಗತಕಾಲದ ತಪ್ಪುಗಳಿಗಾಗಿ ಅವನನ್ನು ಕಾಡುವುದಿಲ್ಲ.
ಯೆಹೋವನ ಕ್ಷಮಾಪಣೆಗಾಗಿ ಯಾಚಿಸಿದ ಬಳಿಕ ದಾವೀದನು ವಿನಂತಿಸಿದ್ದು: “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು [“ಒಂದು ಹೊಸ ಆತ್ಮವನ್ನು,” NW] ಅನುಗ್ರಹಿಸಿ ನನ್ನನ್ನು ನೂತನಪಡಿಸು.” (ಕೀರ್ತನೆ 51:10) ದಾವೀದನು ಒಂದು “ಶುದ್ಧ ಹೃದಯ” ಮತ್ತು “ಒಂದು ಹೊಸ ಆತ್ಮ”ಕ್ಕಾಗಿ ವಿನಂತಿಸಿದ್ದು, ಅವನಿಗೆ ತನ್ನೊಳಗಿದ್ದ ಪಾಪಪೂರ್ಣ ಪ್ರವೃತ್ತಿಯ ಕುರಿತಾಗಿ ಮತ್ತು ತನ್ನ ಹೃದಯವನ್ನು ಶುದ್ಧಗೊಳಿಸಿ, ಹೊಸ ಆರಂಭವನ್ನು ಮಾಡುವ ಅಗತ್ಯದ ಕುರಿತಾಗಿ ಅರಿವಿತ್ತೆಂಬುದನ್ನು ತೋರಿಸುತ್ತದೆ. ಸ್ವಾನುಕಂಪಕ್ಕೆ ತುತ್ತಾಗುವ ಬದಲು, ದೇವರಿಗೆ ತಾನು ಸಲ್ಲಿಸಲಿರುವ ಸೇವೆಯಲ್ಲಿ ಮುಂದೊತ್ತಲು ಅವನು ದೃಢನಿರ್ಧಾರವನ್ನು ಮಾಡಿದ್ದನು. ಅವನು ಪ್ರಾರ್ಥಿಸಿದ್ದು: “ಕರ್ತನೇ, [“ಯೆಹೋವನೇ,” NW] ನನ್ನ ಬಾಯಿ ನಿನ್ನನ್ನು ಸ್ತೋತ್ರಮಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.”—ಕೀರ್ತನೆ 51:15.
ದಾವೀದನ ಹೃತ್ಪೂರ್ವಕ ಪಶ್ಚಾತ್ತಾಪ ಮತ್ತು ದೇವರಿಗೆ ಸೇವೆಸಲ್ಲಿಸುವ ಅವನ ದೃಢಸಂಕಲ್ಪದ ಪ್ರಯತ್ನಕ್ಕಾಗಿ ಯೆಹೋವನು ಯಾವ ಪ್ರತಿಕ್ರಿಯೆಯನ್ನು ತೋರಿಸಿದನು? ಆತನು ದಾವೀದನಿಗೆ ಈ ಉಲ್ಲಾಸಗೊಳಿಸುವ ಆಶ್ವಾಸನೆಯನ್ನು ಕೊಟ್ಟನು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” (ಕೀರ್ತನೆ 32:8) ಪಶ್ಚಾತ್ತಾಪಪಡುವ ವ್ಯಕ್ತಿಯೊಬ್ಬನ ಭಾವನೆಗಳ ಮತ್ತು ಅಗತ್ಯಗಳ ಕಡೆಗೆ ಯೆಹೋವನು ತೋರಿಸುವ ವೈಯಕ್ತಿಕ ಗಮನದ ಆಶ್ವಾಸನೆಯು ಇಲ್ಲಿದೆ. ದಾವೀದನಿಗೆ ಹೆಚ್ಚಿನ ಒಳನೋಟವನ್ನು ಅಂದರೆ ವಿಷಯಗಳನ್ನು ಕೇವಲ ಮೇಲಿಂದ ಮೇಲೆ ನೋಡುವುದಕ್ಕಿಂತಲೂ ಹೆಚ್ಚನ್ನು ನೋಡುವ ಸಾಮರ್ಥ್ಯವನ್ನು ಕೊಡಲು, ದೇವರು ಕ್ರಮಗಳನ್ನು ತೆಗೆದುಕೊಂಡನು. ಭವಿಷ್ಯದಲ್ಲಿ ಎಂದಾದರೂ ಅವನು ಪ್ರಲೋಭನಕ್ಕೊಳಗಾದರೆ, ತನ್ನ ಕೃತ್ಯಗಳ ಪರಿಣಾಮವೇನಾಗಿರುವುದು ಮತ್ತು ಅದು ಬೇರೆಯವರ ಮೇಲೆ ಯಾವ ಪ್ರಭಾವವನ್ನು ಬೀರುವುದೆಂಬುದನ್ನು ಅವನು ಗ್ರಹಿಸಿ, ವಿವೇಚನೆಯಿಂದ ಕ್ರಿಯೆಗೈಯಲು ಶಕ್ತನಾಗಿರುತ್ತಿದ್ದನು.
ದಾವೀದನ ಜೀವಿತದಲ್ಲಿನ ಈ ಪ್ರಸಂಗವು, ಗಂಭೀರವಾದ ಪಾಪವನ್ನು ಮಾಡಿರುವವರೆಲ್ಲರಿಗೆ ಉತ್ತೇಜನವನ್ನು ಕೊಡುತ್ತದೆ. ನಮ್ಮ ಪಾಪವನ್ನು ಅರಿಕೆಮಾಡುವ ಮೂಲಕ ಮತ್ತು ನಿಜವಾದ ಪಶ್ಚಾತ್ತಾಪವನ್ನು ತೋರಿಸುವ ಮೂಲಕ, ನಮ್ಮ ಅತ್ಯಮೂಲ್ಯವಾದ ಸ್ವತ್ತಾಗಿರುವ, ಯೆಹೋವ ದೇವರೊಂದಿಗಿನ ನಮ್ಮ ಸಂಬಂಧವನ್ನು ನಾವು ಪುನಃ ಪಡೆಯಸಾಧ್ಯವಿದೆ. ಕ್ಷಣಿಕವಾಗಿ ನಾವು ತಾಳಿಕೊಳ್ಳಬೇಕಾಗುವ ನೋವು ಮತ್ತು ಅವಮಾನವು, ಮೌನವಾಗಿರುವುದರಿಂದ ಉಂಟಾಗುವ ಸಂಕಟ, ಅಥವಾ ದಂಗೆಕೋರ ಮಾರ್ಗಕ್ರಮದಲ್ಲಿ ನಾವು ಕಠಿನ ಹೃದಯದವರಾಗುವುದರಿಂದ ಪರಿಣಮಿಸುವ ಕೆಟ್ಟ ಫಲಿತಾಂಶಕ್ಕಿಂತಲೂ ಎಷ್ಟೋ ಉತ್ತಮವಾಗಿದೆ. (ಕೀರ್ತನೆ 32:9) ಆಗ ನಾವು ‘ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿರುವ’ ಪ್ರೀತಿಪರ, ಕರುಣಾಭರಿತ ದೇವರ ಬೆಚ್ಚಗಿನ ಕ್ಷಮೆಯನ್ನು ಅನುಭವಿಸುವೆವು.—2 ಕೊರಿಂಥ 1:3.
[ಪುಟ 31ರಲ್ಲಿರುವ ಚಿತ್ರ]
ದಾವೀದನು ಊರೀಯನನ್ನು ಸಾಯಿಸುವ ಮೂಲಕ, ತನ್ನ ಪಾಪದ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ನಿರೀಕ್ಷಿಸಿದನು