ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?”

“ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?”

“ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?”

“ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?”​—ರೋಮಾಪುರ 8:31.

1. ಇಸ್ರಾಯೇಲ್ಯರು ಐಗುಪ್ತದಿಂದ ಹೊರಟಾಗ ಯಾರು ಸಹ ಅವರೊಂದಿಗೆ ಹೋದರು, ಮತ್ತು ಹಾಗೆ ಮಾಡುವಂತೆ ಯಾವುದು ಅವರನ್ನು ಪ್ರಚೋದಿಸಿತು?

ಇಸ್ರಾಯೇಲ್ಯರು ಐಗುಪ್ತದಲ್ಲಿ ಸುಮಾರು 215 ವರ್ಷಗಳನ್ನು ಕಳೆದಿದ್ದರು; ಅವುಗಳಲ್ಲಿ ಹೆಚ್ಚಿನ ವರ್ಷಗಳನ್ನು ದಾಸತ್ವದಲ್ಲಿ ಕಳೆದ ಬಳಿಕ, ಅವರು ಬಿಡುಗಡೆಹೊಂದಿ ಅಲ್ಲಿಂದ ಹೊರಟಾಗ “ಅವರೊಂದಿಗೆ ಬಹು ಮಂದಿ ಅನ್ಯರೂ ಹೊರಟುಹೋದರು.” (ವಿಮೋಚನಕಾಂಡ 12:38) ಈ ಅನ್ಯರು, ಐಗುಪ್ತದ ಮೇಲೆ ಬರಮಾಡಲ್ಪಟ್ಟ ಹತ್ತು ಭಯಪ್ರೇರಕ ಬಾಧೆಗಳನ್ನು ಅನುಭವಿಸಿದ್ದರು. ಈ ಬಾಧೆಗಳು ಐಗುಪ್ತವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದವು ಮತ್ತು ಅದರ ಸುಳ್ಳು ದೇವತೆಗಳನ್ನು ನಗೆಗೀಡುಮಾಡಿದವು. ಅದೇ ಸಮಯದಲ್ಲಿ, ನಾಲ್ಕನೆಯ ಬಾಧೆಯಿಂದ ಆರಂಭಿಸಿ, ತನ್ನ ಜನರನ್ನು ಸಂರಕ್ಷಿಸಲಿಕ್ಕಾಗಿರುವ ಯೆಹೋವನ ಸಾಮರ್ಥ್ಯವನ್ನು ಅವರು ಕಣ್ಣಾರೆ ಕಂಡಿದ್ದರು. (ವಿಮೋಚನಕಾಂಡ 8:​23, 24) ಯೆಹೋವನ ಉದ್ದೇಶಗಳ ಕುರಿತು ಆ ಅನ್ಯರಿಗೆ ತೀರ ಕಡಿಮೆ ಜ್ಞಾನವಿತ್ತಾದರೂ, ಒಂದು ವಿಷಯದ ಬಗ್ಗೆ ಅವರಿಗೆ ತುಂಬ ಖಾತ್ರಿಯಿತ್ತು: ಐಗುಪ್ತದ ದೇವರುಗಳು ಐಗುಪ್ತ್ಯರನ್ನು ಸಂರಕ್ಷಿಸಲು ವಿಫಲಗೊಂಡಿದ್ದವು, ಆದರೆ ಇಸ್ರಾಯೇಲ್ಯರ ಪಕ್ಷದಲ್ಲಿದ್ದ ಯೆಹೋವನಾದರೋ ತಾನು ಪ್ರಬಲನಾಗಿದ್ದೇನೆ ಎಂಬುದನ್ನು ರುಜುಪಡಿಸಿದ್ದನು.

2. ಇಸ್ರಾಯೇಲ್ಯ ಗೂಢಚಾರರಿಗೆ ರಾಹಾಬಳು ಏಕೆ ಬೆಂಬಲ ನೀಡಿದಳು, ಮತ್ತು ಅವರ ದೇವರಲ್ಲಿ ಅವಳು ಇಟ್ಟಿದ್ದ ದೃಢಭರವಸೆಯು ಏಕೆ ಅನುಚಿತವಾಗಿರಲಿಲ್ಲ?

2 ನಾಲ್ವತ್ತು ವರ್ಷಗಳ ನಂತರ, ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕೆ ತುಸು ಮುಂಚೆ, ಮೋಶೆಯ ಉತ್ತರಾಧಿಕಾರಿಯಾಗಿದ್ದ ಯೆಹೋಶುವನು ಆ ದೇಶವನ್ನು ಸಂಚರಿಸಿ ನೋಡಲು ಇಬ್ಬರು ಗೂಢಚಾರರನ್ನು ಕಳುಹಿಸಿದನು. ಅಲ್ಲಿ ಅವರು ಯೆರಿಕೋ ಪಟ್ಟಣದ ನಿವಾಸಿಯಾಗಿದ್ದ ರಾಹಾಬಳನ್ನು ಸಂಧಿಸಿದರು. ಇಸ್ರಾಯೇಲ್ಯರು ಐಗುಪ್ತ ದೇಶವನ್ನು ಬಿಟ್ಟು ಹೊರಟ 40 ವರ್ಷಗಳಲ್ಲಿ, ಅವರನ್ನು ಸಂರಕ್ಷಿಸಲಿಕ್ಕಾಗಿ ಯೆಹೋವನು ಮಾಡಿದ ಅನೇಕ ಪರಾಕ್ರಮಗಳ ಕುರಿತು ರಾಹಾಬಳು ಕೇಳಿಸಿಕೊಂಡಿದ್ದಳು. ಆದುದರಿಂದ, ದೇವರ ಆಶೀರ್ವಾದವು ತನಗೆ ಸಿಗಬೇಕಾದರೆ, ದೇವಜನರಿಗೆ ತಾನು ಬೆಂಬಲವನ್ನು ನೀಡಲೇಬೇಕೆಂಬುದು ಅವಳಿಗೆ ಮನದಟ್ಟಾಗಿತ್ತು. ಸಮಯಾನಂತರ ಇಸ್ರಾಯೇಲ್ಯರು ಯೆರಿಕೋ ಪಟ್ಟಣಕ್ಕೆ ಮುತ್ತಿಗೆ ಹಾಕಿ ಅದನ್ನು ಸ್ವಾಧೀನಪಡಿಸಿಕೊಂಡಾಗ, ಅವಳ ವಿವೇಕಭರಿತ ತೀರ್ಮಾನದ ಫಲವಾಗಿ ಅವಳು ಮತ್ತು ಅವಳ ಮನೆವಾರ್ತೆಯವರು ವಿನಾಶದಿಂದ ಪಾರಾದರು. ಅವರೆಲ್ಲರೂ ಸಂರಕ್ಷಿಸಲ್ಪಟ್ಟ ಅದ್ಭುತಕರ ವಿಧವೇ, ದೇವರು ಅವರೊಂದಿಗಿದ್ದನು ಎಂಬುದಕ್ಕೆ ಸ್ಪಷ್ಟವಾದ ಪುರಾವೆಯಾಗಿತ್ತು. ಹೀಗೆ, ಇಸ್ರಾಯೇಲ್ಯರ ದೇವರಲ್ಲಿ ರಾಹಾಬಳಿಗಿದ್ದ ದೃಢಭರವಸೆಯು ಖಂಡಿತವಾಗಿಯೂ ಅನುಚಿತವಾಗಿರಲಿಲ್ಲ.​—ಯೆಹೋಶುವ 2:​1, 9-13; 6:​15-17, 25.

3. (ಎ) ಪುನಃ ಕಟ್ಟಲ್ಪಟ್ಟ ಯೆರಿಕೋ ಪಟ್ಟಣದ ಬಳಿಯಲ್ಲಿ ಯೇಸು ಯಾವ ಅದ್ಭುತಕಾರ್ಯವನ್ನು ಮಾಡಿದನು, ಮತ್ತು ಯೆಹೂದಿ ಧಾರ್ಮಿಕ ಮುಖಂಡರು ಹೇಗೆ ಪ್ರತಿಕ್ರಿಯಿಸಿದರು? (ಬಿ) ಯೆಹೂದ್ಯರಲ್ಲಿ ಕೆಲವರು ಮತ್ತು ಸಮಯಾನಂತರ ಯೆಹೂದ್ಯೇತರರು ಯಾವುದರ ಮಹತ್ವವನ್ನು ಗ್ರಹಿಸಿದರು?

3 ಹದಿನೈದು ಶತಮಾನಗಳ ಬಳಿಕ, ಯೇಸು ಕ್ರಿಸ್ತನು ಪುನಃ ಕಟ್ಟಲ್ಪಟ್ಟ ಯೆರಿಕೋ ಪಟ್ಟಣದ ಬಳಿ ಒಬ್ಬ ಕುರುಡ ಭಿಕ್ಷುಕನನ್ನು ವಾಸಿಮಾಡಿದನು. (ಮಾರ್ಕ 10:​46-52; ಲೂಕ 18:​35-43) ತನಗೆ ಕರುಣೆ ತೋರಿಸುವಂತೆ ಈ ಮನುಷ್ಯನು ಯೇಸುವನ್ನು ಬೇಡಿಕೊಂಡನು. ಅವನು ಯೇಸುವಿಗೆ ದೇವರ ಅಂಗೀಕಾರ ಹಾಗೂ ಬೆಂಬಲವಿತ್ತು ಎಂಬುದನ್ನು ಗ್ರಹಿಸಿದ್ದನು ಎಂದು ಇದು ಸೂಚಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಯೆಹೂದಿ ಧಾರ್ಮಿಕ ಮುಖಂಡರು ಹಾಗೂ ಅವರ ಹಿಂಬಾಲಕರು, ತಾನು ದೇವರ ಕೆಲಸವನ್ನು ಮಾಡುತ್ತಿದ್ದೇನೆ ಎಂಬುದನ್ನು ರುಜುಪಡಿಸಲಿಕ್ಕಾಗಿ ಯೇಸು ಮಾಡಿದ ಅದ್ಭುತಕಾರ್ಯಗಳನ್ನು ಅಂಗೀಕರಿಸಲು ನಿರಾಕರಿಸಿದರು. ಅಷ್ಟುಮಾತ್ರವಲ್ಲ, ಅವರು ಅವನಲ್ಲಿ ತಪ್ಪನ್ನು ಕಂಡುಹಿಡಿಯಲು ಪ್ರಯತ್ನಿಸಿದರು. (ಮಾರ್ಕ 2:​15, 16; 3:​1-6; ಲೂಕ 7:​31-35) ಅವರು ಯಾರ ಮರಣಕ್ಕೆ ಕಾರಣರಾಗಿದ್ದರೋ ಆ ಯೇಸು ಪುನರುತ್ಥಾನಗೊಳಿಸಲ್ಪಟ್ಟಿದ್ದಾನೆ ಎಂಬ ವಾಸ್ತವಾಂಶವು ಅವರಿಗೆ ತಿಳಿಸಲ್ಪಟ್ಟಾಗಲೂ, ಇದು ದೇವರ ಕೆಲಸವಾಗಿತ್ತು ಎಂಬುದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಅದಕ್ಕೆ ಬದಲಾಗಿ ಅವರು ಯೇಸುವಿನ ಹಿಂಬಾಲಕರನ್ನು ಹಿಂಸಿಸುವುದರಲ್ಲಿ ನಾಯಕತ್ವವನ್ನು ವಹಿಸಿದರು ಮತ್ತು “ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿ”ಸುವ ಅವರ ಕೆಲಸಕ್ಕೆ ತಡೆಯನ್ನೊಡ್ಡಲು ಪ್ರಯತ್ನಿಸಿದರು. ಆದರೆ ಯೆಹೂದ್ಯರಲ್ಲಿ ಕೆಲವರು ಮತ್ತು ಸಮಯಾನಂತರ ಯೆಹೂದ್ಯೇತರರು, ಈ ಘಟನೆಗಳನ್ನು ಗಮನಿಸಿದರು ಮತ್ತು ಅವುಗಳ ಮಹತ್ವವನ್ನು ಸರಿಯಾಗಿ ಗ್ರಹಿಸಿದರು. ಈ ಘಟನೆಗಳು ಇವರಿಗೆ, ಸ್ವನೀತಿವಂತರಾದ ಯೆಹೂದಿ ಮುಖಂಡರನ್ನು ದೇವರು ತಿರಸ್ಕರಿಸಿ, ಯೇಸು ಕ್ರಿಸ್ತನ ದೀನ ಹಿಂಬಾಲಕರಿಗೆ ಬೆಂಬಲ ನೀಡುತ್ತಿದ್ದಾನೆ ಎಂಬುದನ್ನು ಸ್ಪಷ್ಟಪಡಿಸಿದವು.​—ಅ. ಕೃತ್ಯಗಳು 11:​19-21.

ಇಂದು ಯಾರಿಗೆ ದೇವರ ಬೆಂಬಲವಿದೆ?

4, 5. (ಎ) ಒಂದು ಧರ್ಮವನ್ನು ಆಯ್ಕೆಮಾಡುವ ವಿಷಯದಲ್ಲಿ ಕೆಲವರ ಅನಿಸಿಕೆ ಏನು? (ಬಿ) ಸತ್ಯ ಧರ್ಮವನ್ನು ಗುರುತಿಸುವಾಗ, ಯಾವ ಪ್ರಾಮುಖ್ಯ ಪ್ರಶ್ನೆಯು ಏಳುತ್ತದೆ?

4 ಸತ್ಯ ಧರ್ಮದ ಕುರಿತಾದ ಪ್ರಶ್ನೆಯ ಬಗ್ಗೆ, ಇತ್ತೀಚಿನ ಟಿವಿ ಸಂದರ್ಶನದಲ್ಲಿ ಒಬ್ಬ ಪಾದ್ರಿಯು ಹೇಳಿದ್ದು: “ಒಂದು ಧರ್ಮವು ಒಬ್ಬನನ್ನು ನೈತಿಕವಾಗಿ ಉತ್ತಮ ವ್ಯಕ್ತಿಯನ್ನಾಗಿ ಮಾಡುವಾಗ ಮತ್ತು ಅವನು ಅಥವಾ ಅವಳು ಆ ಧರ್ಮಕ್ಕನುಸಾರ ಜೀವಿಸುವಾಗ, ಅದೇ ಸತ್ಯ ಧರ್ಮವಾಗಿರುತ್ತದೆ ಎಂದು ನಾನು ಒತ್ತಿಹೇಳುತ್ತೇನೆ.” ಸತ್ಯ ಧರ್ಮವು ಜನರನ್ನು ನೈತಿಕವಾಗಿ ಉತ್ತಮಗೊಳಿಸುತ್ತದೆ ಎಂಬುದು ಒಪ್ಪಿಕೊಳ್ಳತಕ್ಕ ಸಂಗತಿಯೇ. ಆದರೆ ಒಂದು ಧರ್ಮವು ಜನರನ್ನು ನೈತಿಕವಾಗಿ ಉತ್ತಮಗೊಳಿಸುತ್ತದೆ ಎಂಬ ವಾಸ್ತವಾಂಶವೇ ಆ ಧರ್ಮಕ್ಕೆ ದೇವರ ಬೆಂಬಲವಿದೆ ಎಂಬುದನ್ನು ರುಜುಪಡಿಸುತ್ತದೋ? ಒಂದು ಧರ್ಮವು ಸತ್ಯವಾಗಿದೆ ಎಂಬುದನ್ನು ನಿರ್ಧರಿಸಲು ಇದೇ ಒಂದು ನಿರ್ಣಾಯಕ ಅಂಶವಾಗಿದೆಯೋ?

5 ಪ್ರತಿಯೊಬ್ಬರೂ ವೈಯಕ್ತಿಕ ಆಯ್ಕೆಗಳನ್ನು ಮಾಡಲು ಇಷ್ಟಪಡುತ್ತಾರೆ ಮತ್ತು ಇದರಲ್ಲಿ ತಮ್ಮ ಇಷ್ಟಾನುಸಾರವಾದ ಧರ್ಮವನ್ನು ಆಯ್ಕೆಮಾಡುವುದೂ ಸೇರಿದೆ. ಆದರೆ ಆಯ್ಕೆಮಾಡುವ ಸ್ವಾತಂತ್ರ್ಯವಿರುವುದು ತಾನೇ ಒಬ್ಬ ವ್ಯಕ್ತಿಯು ಸರಿಯಾದ ಆಯ್ಕೆಯನ್ನು ಮಾಡುತ್ತಾನೆ ಎಂಬ ಖಾತ್ರಿಯನ್ನು ನೀಡುವುದಿಲ್ಲ. ಉದಾಹರಣೆಗೆ, ಒಂದು ಧರ್ಮದಲ್ಲಿರುವ ಜನರ ಸಂಖ್ಯೆ, ಸಂಪತ್ತು, ಮತಾಚರಣೆಯ ವೈಭವ ಅಥವಾ ಅವರ ಕುಟುಂಬ ಸಂಬಂಧಗಳ ಆಧಾರದ ಮೇಲೆ ಕೆಲವರು ಧರ್ಮವನ್ನು ಆಯ್ಕೆಮಾಡುತ್ತಾರೆ. ಒಂದು ಧರ್ಮವು ಸತ್ಯವಾಗಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವುದರಲ್ಲಿ, ಇಲ್ಲಿ ಕೊಡಲ್ಪಟ್ಟಿರುವ ಯಾವ ವಿಷಯಗಳೂ ನಿರ್ಣಾಯಕ ಅಂಶಗಳಾಗಿಲ್ಲ ಎಂಬುದಂತೂ ನಿಜ. ಈ ವಿಷಯದಲ್ಲಿ ಅತಿ ಪ್ರಾಮುಖ್ಯವಾದ ಈ ಪ್ರಶ್ನೆಯು ಎಬ್ಬಿಸಲ್ಪಡುತ್ತದೆ: ‘ದೇವರು ನಮ್ಮ ಕಡೆ ಇದ್ದಾನೆ’ ಎಂದು ಒಂದು ಧರ್ಮದ ಅನುಯಾಯಿಗಳು ದೃಢವಿಶ್ವಾಸದಿಂದ ಹೇಳಸಾಧ್ಯವಾಗುವಂತೆ, ಯಾವ ಧರ್ಮವು ತನ್ನ ಹಿಂಬಾಲಕರಿಗೆ ದೇವರ ಚಿತ್ತವನ್ನು ಮಾಡುವಂತೆ ಉತ್ತೇಜಿಸುತ್ತದೆ ಹಾಗೂ ದೇವರ ಬೆಂಬಲದ ಬಲವಾದ ಪುರಾವೆಯನ್ನು ನೀಡುತ್ತದೆ?

6. ಯೇಸುವಿನ ಯಾವ ಮಾತುಗಳು ಸತ್ಯ ಧರ್ಮ ಹಾಗೂ ಸುಳ್ಳು ಧರ್ಮದ ಮೇಲೆ ಬೆಳಕನ್ನು ಬೀರಿದವು?

6 ಸುಳ್ಳಾರಾಧನೆ ಹಾಗೂ ಸತ್ಯಾರಾಧನೆಯ ಮಧ್ಯೆ ಇರುವ ವ್ಯತ್ಯಾಸವನ್ನು ಕಂಡುಹಿಡಿಯಲಿಕ್ಕಾಗಿ ಯೇಸು ಒಂದು ನಿಯಮವನ್ನು ಸ್ಥಾಪಿಸಿದನು. ಅವನು ಹೇಳಿದ್ದು: “ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ. ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ.” (ಮತ್ತಾಯ 7:​15, 16 [ಓರೆ ಅಕ್ಷರಗಳು ನಮ್ಮವು.]; ಮಲಾಕಿಯ 3:18) ಸತ್ಯ ಧರ್ಮದ ‘ಫಲಗಳು’ ಅಥವಾ ಅದರ ಗುರುತುಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ. ಇದರಿಂದ, ನಿಜವಾಗಿಯೂ ಇಂದು ಯಾರಿಗೆ ದೇವರ ಬೆಂಬಲವಿದೆ ಎಂಬುದನ್ನು ನಾವು ನಿರ್ಧರಿಸಬಲ್ಲೆವು.

ದೇವರು ಯಾರಿಗೆ ಬೆಂಬಲ ನೀಡುತ್ತಿದ್ದಾನೋ ಅವರನ್ನು ಗುರುತಿಸುವ ಚಿಹ್ನೆಗಳು

7. ಕೇವಲ ಬೈಬಲಿನ ಮೇಲಾಧಾರಿತವಾದ ವಿಷಯವನ್ನು ಬೋಧಿಸುವುದು ಏನನ್ನು ಅರ್ಥೈಸುತ್ತದೆ?

7ಅವರ ಬೋಧನೆಗಳು ಬೈಬಲಿನ ಮೇಲೆ ಆಧಾರಿತವಾಗಿರುತ್ತವೆ. ಯೇಸು ಹೇಳಿದ್ದು: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು. ಆತನ ಚಿತ್ತದಂತೆ ನಡೆಯುವದಕ್ಕೆ ಯಾರಿಗೆ ಮನಸ್ಸದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೋ ನಾನೇ ಕಲ್ಪಿಸಿ ಹೇಳಿದ್ದೋ ಗೊತ್ತಾಗುವದು.” ಅಷ್ಟುಮಾತ್ರವಲ್ಲ, “ದೇವರಿಂದ ಹುಟ್ಟಿದವನು ದೇವರ ಮಾತುಗಳನ್ನು ಕೇಳುತ್ತಾನೆ.” (ಯೋಹಾನ 7:​16, 17; 8:47) ಆದುದರಿಂದ, ದೇವರ ಬೆಂಬಲವನ್ನು ಪಡೆಯಲಿಕ್ಕಾಗಿ ಒಬ್ಬನು, ದೇವರು ತನ್ನ ವಾಕ್ಯದಲ್ಲಿ ಏನನ್ನು ಪ್ರಕಟಪಡಿಸಿದ್ದಾನೋ ಅದನ್ನು ಮಾತ್ರ ಇತರರಿಗೆ ಕಲಿಸಬೇಕು ಮತ್ತು ಮಾನವ ಜ್ಞಾನ ಅಥವಾ ಸಂಪ್ರದಾಯಗಳ ಮೇಲಾಧಾರಿತವಾದ ಬೋಧನೆಗಳನ್ನು ತಿರಸ್ಕರಿಸಬೇಕು ಎಂಬುದು ತರ್ಕಬದ್ಧವಾದದ್ದಾಗಿದೆ.​—ಯೆಶಾಯ 29:13; ಮತ್ತಾಯ 15:​3-9; ಕೊಲೊಸ್ಸೆ 2:8.

8. ಆರಾಧನೆಯಲ್ಲಿ ದೇವರ ಹೆಸರನ್ನು ಉಪಯೋಗಿಸುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?

8ಅವರು ಯೆಹೋವ ಎಂಬ ದೇವರ ಹೆಸರನ್ನು ಉಪಯೋಗಿಸುತ್ತಾರೆ ಮತ್ತು ಅದನ್ನು ಇತರರಿಗೆ ಪ್ರಕಟಿಸುತ್ತಾರೆ. ಯೆಶಾಯನು ಮುಂತಿಳಿಸಿದ್ದು: “ಆ ದಿನದಲ್ಲಿ ನೀವು ಹೇಳುವದೇನಂದರೆ​—ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ, ಆತನ ನಾಮವು ಉನ್ನತೋನ್ನತವೆಂದು ಜ್ಞಾಪಕಪಡಿಸಿರಿ. ಯೆಹೋವನನ್ನು ಗಾನದಿಂದ ಸ್ತುತಿಸಿರಿ; ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.” (ಯೆಶಾಯ 12:​4, 5) “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂದು ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:10) ಆದುದರಿಂದ, ಕ್ರೈಸ್ತರು ಯೆಹೂದಿ ಹಿನ್ನೆಲೆಯಿಂದ ಬಂದವರಾಗಿರಲಿ ಅಥವಾ ಯೆಹೂದ್ಯೇತರರಾಗಿರಲಿ, ಅವರೆಲ್ಲರೂ ‘[ದೇವರ] ಹೆಸರಿಗಾಗಿರುವ ಪ್ರಜೆ’ಗಳೋಪಾದಿ ಸೇವೆಮಾಡಬೇಕಿತ್ತು. (ಅ. ಕೃತ್ಯಗಳು 15:14) ‘ತನ್ನ ಹೆಸರಿಗೆ ಪ್ರಜೆಗಳೋಪಾದಿ’ ಸೇವೆಮಾಡಲು ಹೆಮ್ಮೆಪಡುವ ಜನರಿಗೆ ಬೆಂಬಲ ನೀಡಲು ದೇವರು ಇಷ್ಟಪಡುತ್ತಾನೆ ಎಂಬುದು ಸುಸ್ಪಷ್ಟ.

9. (ಎ) ಸಂತೋಷವು ಸತ್ಯ ಧರ್ಮದ ಸದಸ್ಯರ ವೈಶಿಷ್ಟ್ಯವಾಗಿದೆ ಏಕೆ? (ಬಿ) ಸತ್ಯ ಧರ್ಮಕ್ಕೂ ಸುಳ್ಳು ಧರ್ಮಕ್ಕೂ ಇರುವ ವ್ಯತ್ಯಾಸವನ್ನು ಯೆಶಾಯನು ಹೇಗೆ ತಿಳಿಸುತ್ತಾನೆ?

9ಅವರು ದೇವರ ಸಂತೋಷಭರಿತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತಾರೆ. “ಸುವಾರ್ತೆ”ಯ ಮೂಲಕರ್ತನಾದ ಯೆಹೋವನು “ಸಂತೋಷಭರಿತ ದೇವರು” ಆಗಿದ್ದಾನೆ. (1 ತಿಮೊಥೆಯ 1:​11, NW) ಹೀಗಿರುವಾಗ, ಆತನನ್ನು ಆರಾಧಿಸುವವರು ಅಸಂತೋಷಿತರೂ ಯಾವಾಗಲೂ ನಿರಾಶಾವಾದಿಗಳೂ ಆಗಿರಲು ಹೇಗೆ ಸಾಧ್ಯ? ಲೋಕದ ಕಷ್ಟದೆಸೆಗಳು ಹಾಗೂ ವೈಯಕ್ತಿಕ ಸಮಸ್ಯೆಗಳ ಮಧ್ಯೆಯೂ ನಿಜ ಕ್ರೈಸ್ತರು ಸಂತೋಷಭರಿತ ಮನೋಭಾವವನ್ನು ಕಾಪಾಡಿಕೊಳ್ಳುತ್ತಾರೆ. ಏಕೆಂದರೆ ಅವರು ಸಮೃದ್ಧವಾದ ಆತ್ಮಿಕ ಆಹಾರವನ್ನು ಕ್ರಮವಾಗಿ ಸವಿಯುತ್ತಾರೆ. ಸುಳ್ಳು ಧರ್ಮವನ್ನು ಅನುಸರಿಸುತ್ತಿರುವ ಜನರಿಗೂ ಇವರಿಗೂ ಇರುವ ವ್ಯತ್ಯಾಸವನ್ನು ಯೆಶಾಯನು ಈ ಮಾತುಗಳಲ್ಲಿ ತಿಳಿಸುತ್ತಾನೆ: “ಕರ್ತನಾದ ಯೆಹೋವನು ಹೀಗನ್ನುತ್ತಾನೆ​—ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ. ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು ಆತ್ಮಕ್ಲೇಶದಿಂದ ಗೋಳಾಡುವಿರಿ.”​—ಯೆಶಾಯ 65:​13, 14.

10. ಯಾರು ಸತ್ಯ ಧರ್ಮವನ್ನು ಅನುಸರಿಸುತ್ತಿದ್ದಾರೋ ಅವರು, ಪರೀಕ್ಷಾ ಪ್ರಯೋಗ ಮಾಡಿ ಪಾಠವನ್ನು ಕಲಿಯುವುದರಿಂದ ಹೇಗೆ ದೂರವಿರುತ್ತಾರೆ?

10ಅವರ ನಡತೆ ಹಾಗೂ ನಿರ್ಣಯಗಳು ಬೈಬಲ್‌ ಮೂಲತತ್ವಗಳ ಮೇಲಾಧಾರಿತವಾಗಿರುತ್ತವೆ. “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:​5, 6) ದೈವಿಕ ವಿವೇಕವನ್ನು ತಾತ್ಸಾರಮಾಡುವಂಥ ಮಾನವರ ವಿರೋಧಾತ್ಮಕ ಸಿದ್ಧಾಂತಗಳ ಮೇಲೆ ಭರವಸೆಯಿಡುವುದಕ್ಕೆ ಬದಲಾಗಿ, ತನ್ನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವವರಿಗೆ ದೇವರು ಖಂಡಿತವಾಗಿಯೂ ಬೆಂಬಲವನ್ನು ನೀಡುತ್ತಾನೆ. ಒಬ್ಬ ವ್ಯಕ್ತಿಯು ಎಷ್ಟರ ಮಟ್ಟಿಗೆ ತನ್ನ ಜೀವಿತವನ್ನು ದೇವರ ವಾಕ್ಯಕ್ಕನುಸಾರ ರೂಪಿಸಿಕೊಳ್ಳಲು ಮನಃಪೂರ್ವಕವಾಗಿ ಸಿದ್ಧನಿರುತ್ತಾನೋ ಅಷ್ಟರ ಮಟ್ಟಿಗೆ ಅವನು ಪರೀಕ್ಷಾ ಪ್ರಯೋಗವನ್ನು ಮಾಡಿ ಪಾಠವನ್ನು ಕಲಿಯುವ ರೂಢಿಯಿಂದ ದೂರವಿರುತ್ತಾನೆ.​—ಕೀರ್ತನೆ 119:33; 1 ಕೊರಿಂಥ 1:​19-21.

11. (ಎ) ಸತ್ಯ ಧರ್ಮದ ಸದಸ್ಯರನ್ನು, ಪಾದ್ರಿ ವರ್ಗ ಹಾಗೂ ಸಾಮಾನ್ಯ ಜನರ ವರ್ಗ ಎಂಬ ಎರಡು ಗುಂಪುಗಳಾಗಿ ವಿಭಾಗಿಸಸಾಧ್ಯವಿಲ್ಲ ಏಕೆ? (ಬಿ) ದೇವಜನರ ನಡುವೆ ಮುಂದಾಳತ್ವವನ್ನು ವಹಿಸುವವರು ಮಂದೆಗೆ ಯಾವ ಮಾದರಿಯನ್ನು ಇಡುತ್ತಾರೆ?

11ಅವರು ಪ್ರಥಮ ಶತಮಾನದ ಕ್ರೈಸ್ತ ಸಭೆಯಂತೆಯೇ ಸಂಘಟಿತರಾಗಿದ್ದಾರೆ. ಯೇಸು ಈ ನಿಯಮವನ್ನು ನೀಡಿದನು: “ಆದರೆ ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ. ಮತ್ತು ಗುರುಗಳು ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು. ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು.” (ಮತ್ತಾಯ 23:​8-11) ಸಹೋದರರು ಕೂಡಿರುವ ಒಂದು ಸಭೆಯಲ್ಲಿ, ವಾಗಾಡಂಬರದ ಬಿರುದುಗಳಿಂದ ತಮ್ಮನ್ನು ಸನ್ಮಾನಿಸಿಕೊಳ್ಳುವ ಹಾಗೂ ಸಾಮಾನ್ಯ ಜನರಿಂದ ತಮ್ಮನ್ನು ಮೇಲೇರಿಸಿಕೊಳ್ಳುವ ದುರಹಂಕಾರದ ಪಾದ್ರಿ ವರ್ಗಕ್ಕೆ ಯಾವುದೇ ಸ್ಥಾನವಿಲ್ಲ. (ಯೋಬ 32:​21, 22) ದೇವರ ಮಂದೆಯನ್ನು ಪರಾಮರಿಸುವವರು “ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ, ಮೇಲ್ವಿಚಾರಣೆಮಾಡಿರಿ. ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.” (1 ಪೇತ್ರ 5:​2, 3) ಯಥಾರ್ಥ ಮನಸ್ಸಿನ ಕ್ರೈಸ್ತ ಕುರುಬರು, ಇತರರ ನಂಬಿಕೆಯ ವಿಷಯದಲ್ಲಿ ದೊರೆತನ ನಡಿಸಲು ಪ್ರಯತ್ನಿಸುವುದರಿಂದ ದೂರವಿರುತ್ತಾರೆ. ದೇವರ ಸೇವೆಯಲ್ಲಿ ಜೊತೆ ಕೆಲಸಗಾರರೋಪಾದಿ ಅವರು ಒಂದು ಅತ್ಯುತ್ತಮ ಮಾದರಿಯನ್ನಿಡಲು ಶ್ರಮಿಸುತ್ತಾರೆ.​—2 ಕೊರಿಂಥ 1:24.

12. ಯಾರು ದೇವರ ಬೆಂಬಲವನ್ನು ಬಯಸುತ್ತಾರೋ ಅವರು, ಮಾನವ ಸರಕಾರಗಳ ಬಗ್ಗೆ ಯಾವ ಸಮತೂಕದ ನಿಲುವನ್ನು ಹೊಂದಿರುವಂತೆ ದೇವರು ಕೇಳಿಕೊಳ್ಳುತ್ತಾನೆ?

12ಅವರು ಮಾನವ ಸರಕಾರಗಳಿಗೆ ಅಧೀನತೆ ತೋರಿಸುತ್ತಾರೆ, ಅದೇ ಸಮಯದಲ್ಲಿ ತಟಸ್ಥರಾಗಿ ಉಳಿಯುತ್ತಾರೆ. ಯಾರು “ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನ”ತೆಯನ್ನು ತೋರಿಸಲು ತಪ್ಪಿಹೋಗುತ್ತಾರೋ ಅವರು ದೇವರ ಬೆಂಬಲವನ್ನು ನಿರೀಕ್ಷಿಸಸಾಧ್ಯವಿಲ್ಲ. ಏಕೆ? ಏಕೆಂದರೆ “ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು. ಆದದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮಕವನ್ನು ಎದುರಿಸುತ್ತಾನೆ.” (ರೋಮಾಪುರ 13:​1, 2) ಆದರೂ, “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದು ಯೇಸು ಹೇಳಿದಾಗ, ಕೆಲವೊಮ್ಮೆ ದೇವರ ಆಜ್ಞೆಗಳಿಗೆ ವಿಧೇಯರಾಗಬೇಕೋ ಸರಕಾರದ ಆಜ್ಞೆಗೆ ವಿಧೇಯತೆ ತೋರಿಸಬೇಕೋ ಎಂಬ ವಿಷಯದಲ್ಲಿ ಘರ್ಷಣೆಯಾಗುವ ಸಾಧ್ಯತೆಯಿದೆ ಎಂಬುದನ್ನು ಅವನು ಮನಗಂಡನು. (ಮಾರ್ಕ 12:17) ಯಾರು ದೇವರ ಬೆಂಬಲವನ್ನು ಅಪೇಕ್ಷಿಸುತ್ತಾರೋ ಅವರು “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ”ಪಡಬೇಕು. ಅದೇ ಸಮಯದಲ್ಲಿ, ದೇವರಿಗೆ ತಮ್ಮ ಪ್ರಧಾನ ಜವಾಬ್ದಾರಿಗಳೊಂದಿಗೆ ಹೊಂದಿಕೆಯಲ್ಲಿರುವ ತಮ್ಮ ದೇಶದ ನಿಯಮಗಳಿಗೆ ಅವರು ವಿಧೇಯತೆ ತೋರಿಸಬೇಕು. (ಮತ್ತಾಯ 6:33; ಅ. ಕೃತ್ಯಗಳು 5:29) “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ” ಎಂದು ತನ್ನ ಶಿಷ್ಯರ ಕುರಿತು ಯೇಸು ಹೇಳಿದಾಗ, ಅವನು ತಾಟಸ್ಥ್ಯದ ಕುರಿತು ಒತ್ತಿಹೇಳಿದನು. ತದನಂತರ ಅವನು ಕೂಡಿಸಿ ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ.”​—ಯೋಹಾನ 17:16; 18:36.

13. ದೇವಜನರನ್ನು ಗುರುತಿಸುವುದರಲ್ಲಿ ಪ್ರೀತಿಯು ಯಾವ ಪಾತ್ರವನ್ನು ವಹಿಸುತ್ತದೆ?

13ಅವರು “ಎಲ್ಲರಿಗೆ ಒಳ್ಳೇದನ್ನು” ಮಾಡುವುದರಲ್ಲಿ ನಿಷ್ಪಕ್ಷಪಾತಿಗಳಾಗಿದ್ದಾರೆ. (ಗಲಾತ್ಯ 6:10) ಕ್ರೈಸ್ತ ಪ್ರೀತಿಯು ಪಕ್ಷಪಾತವನ್ನು ತೋರಿಸುವುದಿಲ್ಲ. ಅಂದರೆ ಜನರ ಬಣ್ಣ, ಆರ್ಥಿಕ ಅಥವಾ ಶೈಕ್ಷಣಿಕ ಅಂತಸ್ತು, ಜಾತಿ ಇಲ್ಲವೆ ಭಾಷೆಯು ಯಾವುದೇ ಇರಲಿ, ಅವರನ್ನು ಕ್ರೈಸ್ತ ಪ್ರೀತಿಯು ಮನಃಪೂರ್ವಕವಾಗಿ ಸ್ವೀಕರಿಸುತ್ತದೆ. ಎಲ್ಲರಿಗೆ, ಅದರಲ್ಲೂ ವಿಶೇಷವಾಗಿ ಕ್ರಿಸ್ತ ನಂಬಿಕೆಯಲ್ಲಿ ಒಂದೇ ಮನೆಯವರಂತಿರುವವರಿಗೆ ಒಳ್ಳೇದನ್ನು ಮಾಡಲು ಪ್ರಯತ್ನಿಸುವುದು, ಯಾರಿಗೆ ದೇವರ ಬೆಂಬಲವಿದೆ ಎಂಬುದನ್ನು ಗುರುತಿಸಲು ಸಹಾಯಮಾಡುತ್ತದೆ. ಈ ವಿಷಯದಲ್ಲಿ ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”​—ಯೋಹಾನ 13:35; ಅ. ಕೃತ್ಯಗಳು 10:​34, 35.

14. ದೇವರ ಅನುಗ್ರಹವಿರುವ ಜನರು ವ್ಯಾಪಕವಾದ ಅಂಗೀಕಾರವನ್ನು ಪಡೆಯಬೇಕೆಂದಿದೆಯೊ, ವಿವರಿಸಿರಿ.

14ಅವರು ದೇವರ ಚಿತ್ತವನ್ನು ಮಾಡುವುದಕ್ಕೋಸ್ಕರ ಹಿಂಸೆಯನ್ನು ಅನುಭವಿಸಲು ಮನಃಪೂರ್ವಕವಾಗಿ ಸಿದ್ಧರಿರುತ್ತಾರೆ. ಯೇಸು ತನ್ನ ಹಿಂಬಾಲಕರಿಗೆ ಮುನ್ನೆಚ್ಚರಿಕೆ ನೀಡಿದ್ದು: “ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು; ಅವರು ನನ್ನ ಮಾತನ್ನು ಕೈಕೊಂಡು ನಡೆದರೆ ನಿಮ್ಮ ಮಾತನ್ನು ಸಹ ಕೈಕೊಂಡು ನಡೆಯುವರು.” (ಯೋಹಾನ 15:20; ಮತ್ತಾಯ 5:​11, 12; 2 ತಿಮೊಥೆಯ 3:12) ಯಾರಿಗೆ ದೇವರ ಬೆಂಬಲವಿದೆಯೋ ಅವರು ಯಾವಾಗಲೂ ಜನರ ಮೆಚ್ಚಿಕೆಯನ್ನು ಪಡೆಯುವುದಿಲ್ಲ; ತನ್ನ ನಂಬಿಕೆಯ ಮೂಲಕ ಲೋಕದವರನ್ನು ದಂಡನೆಗೆ ಪಾತ್ರರೆಂದು ಸಮರ್ಥಿಸಿದ ನೋಹನು ಸಹ ಜನಪ್ರಿಯ ವ್ಯಕ್ತಿಯಾಗಿರಲಿಲ್ಲ. (ಇಬ್ರಿಯ 11:7) ಇಂದು, ದೇವರ ಬೆಂಬಲವನ್ನು ಬಯಸುವವರು, ದೇವರ ವಾಕ್ಯದ ಮಹತ್ವವನ್ನು ಕಡಿಮೆಮಾಡಲು ಪ್ರಯತ್ನಿಸಬಾರದು ಅಥವಾ ಹಿಂಸೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ದೈವಿಕ ಮೂಲತತ್ವಗಳೊಂದಿಗೆ ರಾಜಿಮಾಡಿಕೊಳ್ಳಬಾರದು. ಎಷ್ಟರ ತನಕ ಅವರು ನಂಬಿಗಸ್ತಿಕೆಯಿಂದ ದೇವರ ಸೇವೆಯನ್ನು ಮಾಡುತ್ತಾರೋ ಅಷ್ಟರ ತನಕ, ಜನರು ‘ಆಶ್ಚರ್ಯಪಡುವರು ಮತ್ತು ತಮ್ಮನ್ನು ದೂಷಿಸುತ್ತಿರುವರು’ ಎಂಬುದು ಅವರಿಗೆ ತಿಳಿದಿದೆ.​—1 ಪೇತ್ರ 2:12; 3:16; 4:4.

ವಾಸ್ತವಾಂಶಗಳನ್ನು ತೂಗಿನೋಡುವ ಸಮಯ

15, 16. (ಎ) ದೇವರ ಬೆಂಬಲದಲ್ಲಿ ಆನಂದಿಸುವ ಧಾರ್ಮಿಕ ಗುಂಪನ್ನು ಗುರುತಿಸಲು ಯಾವ ಪ್ರಶ್ನೆಗಳು ನಮಗೆ ಸಹಾಯಮಾಡುವವು? (ಬಿ) ಲಕ್ಷಾಂತರ ಜನರು ಯಾವ ನಿರ್ಣಯಕ್ಕೆ ಬಂದಿದ್ದಾರೆ, ಮತ್ತು ಏಕೆ?

15 ನೀವು ಸ್ವತಃ ಹೀಗೆ ಪ್ರಶ್ನಿಸಿಕೊಳ್ಳಿ: ‘ಒಂದು ಧಾರ್ಮಿಕ ಗುಂಪಿನ ಬೋಧನೆಗಳು ಅಧಿಕಾಂಶ ಜನರ ನಂಬಿಕೆಗಳಿಗಿಂತ ಭಿನ್ನವಾಗಿದ್ದರೂ, ಆ ಗುಂಪಿಗೆ ಸೇರಿದ ಜನರು ದೇವರ ವಾಕ್ಯಕ್ಕನುಸಾರ ನಡೆಯುತ್ತಾರೆ ಎಂಬ ಖ್ಯಾತಿ ಯಾರಿಗಿದೆ? ಯಾರು ದೇವರ ವೈಯಕ್ತಿಕ ಹೆಸರಿನ ಮಹತ್ವವನ್ನು ಒತ್ತಿಹೇಳುತ್ತಾರೆ ಮತ್ತು ತಮ್ಮನ್ನು ಗುರುತಿಸಿಕೊಳ್ಳಲಿಕ್ಕಾಗಿ ಆ ಹೆಸರನ್ನು ಉಪಯೋಗಿಸುತ್ತಾರೆ? ಎಲ್ಲ ಮಾನವ ಸಮಸ್ಯೆಗಳಿಗಿರುವ ಏಕಮಾತ್ರ ಪರಿಹಾರ ದೇವರ ರಾಜ್ಯವೇ ಆಗಿದೆ ಎಂಬ ಆಶಾವಾದ ಯಾರಿಗಿದೆ? ಹಳೇ ಫ್ಯಾಶನ್‌ನವರು ಎಂದು ಇತರರಿಂದ ಪರಿಗಣಿಸಲ್ಪಡುವುದಾದರೂ, ಯಾರು ಮಾತ್ರ ನಡತೆಯ ಕುರಿತಾದ ಬೈಬಲ್‌ ಮಟ್ಟಗಳನ್ನು ಎತ್ತಿಹಿಡಿಯುತ್ತಾರೆ? ಹಣವನ್ನು ವಸೂಲಿ ಮಾಡುವ ಪಾದ್ರಿಗಳಿಲ್ಲದೆ, ಎಲ್ಲ ಸದಸ್ಯರೂ ಸುವಾರ್ತೆಯನ್ನು ಸಾರುತ್ತಾರೆ ಎಂಬ ಖ್ಯಾತಿ ಯಾವ ಗುಂಪಿಗಿದೆ? ಅವರು ರಾಜಕೀಯದಲ್ಲಿ ಭಾಗವಹಿಸುವುದರಿಂದ ದೂರವಿರುತ್ತಾರಾದರೂ, ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸುವ ಪ್ರಜೆಗಳಾಗಿದ್ದಾರೆ ಎಂದು ಯಾರನ್ನು ಹೊಗಳಲಾಗುತ್ತದೆ? ದೇವರ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಕಲಿಯುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ಯಾರು ಪ್ರೀತಿಯಿಂದ ಸಮಯ ಹಾಗೂ ಹಣವನ್ನು ವ್ಯಯಿಸುತ್ತಾರೆ? ಅಷ್ಟುಮಾತ್ರವಲ್ಲ, ಈ ಎಲ್ಲ ಸಕಾರಾತ್ಮಕ ಅಂಶಗಳಿರುವುದಾದರೂ, ಯಾರನ್ನು ತುಚ್ಛವಾಗಿ ಕಾಣಲಾಗುತ್ತದೆ, ಅಪಹಾಸ್ಯಮಾಡಲಾಗುತ್ತದೆ ಮತ್ತು ಹಿಂಸಿಸಲಾಗುತ್ತದೆ?’

16 ಲೋಕದಾದ್ಯಂತ ಇರುವ ಲಕ್ಷಾಂತರ ಜನರು ಅನೇಕ ವಾಸ್ತವಾಂಶಗಳನ್ನು ತೂಗಿನೋಡಿದ್ದಾರೆ ಮತ್ತು ಯೆಹೋವನ ಸಾಕ್ಷಿಗಳು ಮಾತ್ರವೇ ಸತ್ಯ ಧರ್ಮವನ್ನು ಪಾಲಿಸುತ್ತಿದ್ದಾರೆ ಎಂಬ ಸಂಗತಿಯು ಅವರಿಗೆ ಮನದಟ್ಟಾಗಿದೆ. ಯೆಹೋವನ ಸಾಕ್ಷಿಗಳು ಏನನ್ನು ಬೋಧಿಸುತ್ತಾರೆ ಮತ್ತು ಅವರ ನಡತೆ ಹೇಗಿದೆ ಎಂಬುದರ ಆಧಾರದ ಮೇಲೆ, ಹಾಗೂ ಅವರ ಧರ್ಮವು ತಂದಿರುವ ಪ್ರಯೋಜನಗಳ ಆಧಾರದ ಮೇಲೆ ಜನರು ಈ ನಿರ್ಣಯಕ್ಕೆ ಬಂದಿದ್ದಾರೆ. (ಯೆಶಾಯ 48:17) ಜೆಕರ್ಯ 8:23ರಲ್ಲಿ ಮುಂತಿಳಿಸಲ್ಪಟ್ಟಿರುವಂತೆ, “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ” ಎಂದು ಕಾರ್ಯತಃ ಲಕ್ಷಾಂತರ ಜನರು ಹೇಳುತ್ತಿದ್ದಾರೆ.

17. ತಮ್ಮದು ಸತ್ಯ ಧರ್ಮವಾಗಿದೆ ಎಂದು ಯೆಹೋವನ ಸಾಕ್ಷಿಗಳು ಹೇಳಿಕೊಳ್ಳುವುದು, ಅವರಿಗೆ ಮಿತಿಮೀರಿದ ಭರವಸೆಯ ದುರಹಂಕಾರವಿದೆ ಎಂಬುದನ್ನು ಅರ್ಥೈಸುವುದಿಲ್ಲ ಏಕೆ?

17 ತಮಗೆ ಮಾತ್ರ ದೇವರ ಬೆಂಬಲವಿದೆ ಎಂದು ಯೆಹೋವನ ಸಾಕ್ಷಿಗಳು ಹೇಳಿಕೊಳ್ಳುವುದು, ಅವರಿಗೆ ಮಿತಿಮೀರಿದ ಭರವಸೆಯ ದುರಹಂಕಾರವಿದೆ ಎಂಬುದನ್ನು ಅರ್ಥೈಸುತ್ತದೋ? ವಾಸ್ತವದಲ್ಲಿ, ಐಗುಪ್ತ್ಯರ ನಂಬಿಕೆಗಳು ಭಿನ್ನವಾಗಿದ್ದರೂ, ಐಗುಪ್ತದಲ್ಲಿದ್ದ ಇಸ್ರಾಯೇಲ್ಯರು ತಮಗೆ ದೇವರ ಬೆಂಬಲವಿದೆಯೆಂದು ವಾದಿಸಿದಾಗ ಅಥವಾ ಒಂದನೆಯ ಶತಮಾನದಲ್ಲಿ ಕ್ರೈಸ್ತರು ಯೆಹೂದಿ ಧರ್ಮದ ಅನುಯಾಯಿಗಳನ್ನು ಬಿಟ್ಟು ತಮಗೆ ದೇವರ ಬೆಂಬಲವಿದೆಯೆಂದು ಹೇಳಿದಾಗ ಅವರಿಗೆ ಹೇಗೆ ದುರಹಂಕಾರವಿರಲಿಲ್ಲವೋ ಹಾಗೆಯೇ ಇದೂ ಇದೆ. ಈ ಸಮರ್ಥನೆಯ ಸತ್ಯತೆಯನ್ನು ವಾಸ್ತವಾಂಶಗಳು ರುಜುಪಡಿಸುತ್ತವೆ. ಅಂತ್ಯಕಾಲದಲ್ಲಿ ತನ್ನ ನಿಜ ಹಿಂಬಾಲಕರು ಯಾವ ಕೆಲಸವನ್ನು ಮಾಡುವರು ಎಂದು ಯೇಸು ಮುಂತಿಳಿಸಿದ್ದನೋ ಆ ಕೆಲಸವನ್ನು ಯೆಹೋವನ ಸಾಕ್ಷಿಗಳು 235 ದೇಶಗಳಲ್ಲಿ ಮಾಡುತ್ತಿದ್ದಾರೆ. ಅದೇನೆಂದರೆ, “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”​—ಮತ್ತಾಯ 24:14.

18, 19. (ಎ) ತಮ್ಮ ಸಾರುವ ಕೆಲಸವನ್ನು ಮಾಡುವುದರಲ್ಲಿ ಹಿಂಜರಿದು ನಿಲ್ಲಲು ಯೆಹೋವನ ಸಾಕ್ಷಿಗಳಿಗೆ ಯಾವುದೇ ಕಾರಣವಿಲ್ಲವೇಕೆ? (ಬಿ) ಸಾಕ್ಷಿಗಳಿಗೆ ದೇವರ ಬೆಂಬಲವಿದೆ ಎಂಬ ವಾಸ್ತವಾಂಶಕ್ಕೆ ಕೀರ್ತನೆ 41:11 ಹೇಗೆ ಆಧಾರ ನೀಡುತ್ತದೆ?

18 ಹಿಂಸೆಯಾಗಲಿ ವಿರೋಧವಾಗಲಿ ತಮ್ಮ ಚಟುವಟಿಕೆಗೆ ತಡೆಯೊಡ್ಡಲು ಅವಕಾಶ ನೀಡದೆ, ಯೆಹೋವನ ಸಾಕ್ಷಿಗಳು ಈ ನೇಮಕವನ್ನು ಪೂರೈಸುವುದನ್ನು ಮುಂದುವರಿಸುವರು. ಯೆಹೋವನ ಕೆಲಸವು ಮಾಡಲ್ಪಡಲೇಬೇಕು ಮತ್ತು ಖಂಡಿತವಾಗಿಯೂ ಮಾಡಲ್ಪಡುವುದು. ಕಳೆದ ಶತಮಾನದಲ್ಲಿ ದೇವರ ಕೆಲಸವನ್ನು ಪೂರೈಸುವುದರಿಂದ ಸಾಕ್ಷಿಗಳನ್ನು ತಡೆಯಲಿಕ್ಕಾಗಿ ಇತರರು ಮಾಡಿರುವ ಪ್ರತಿಯೊಂದು ಪ್ರಯತ್ನವು ಸೋಲಿನಲ್ಲಿ ಕೊನೆಗೊಂಡಿದೆ. ಏಕೆಂದರೆ ಯೆಹೋವನು ವಾಗ್ದಾನಿಸಿದ್ದು: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ.”​—ಯೆಶಾಯ 54:17.

19 ಲೋಕವ್ಯಾಪಕವಾಗಿರುವ ವಿರೋಧದ ಮಧ್ಯೆಯೂ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಯೆಹೋವನ ಸಾಕ್ಷಿಗಳು ಪ್ರಬಲರಾಗಿದ್ದಾರೆ ಮತ್ತು ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂಬ ವಾಸ್ತವಾಂಶವು, ಅವರು ಮಾಡುತ್ತಿರುವ ಕೆಲಸವು ಯೆಹೋವನ ಮೆಚ್ಚಿಗೆಯನ್ನು ಪಡೆಯುತ್ತಿದೆ ಎಂಬುದರ ಪುರಾವೆಯಾಗಿದೆ. ಅರಸನಾದ ದಾವೀದನು ಹೇಳಿದ್ದು: “ಶತ್ರುಗಳ ಜಯಧ್ವನಿ ಇಲ್ಲದ್ದರಿಂದಲೇ ನಿನ್ನ ಒಲುಮೆ ನನಗುಂಟೆಂದು ತಿಳಿದುಕೊಳ್ಳುವೆನು.” (ಕೀರ್ತನೆ 41:11; 56:​9, 11) ಯೆಹೋವನ ಜನರ ವಿರುದ್ಧ ದೇವರ ಶತ್ರುಗಳು ಜಯಧ್ವನಿಯನ್ನು ಎತ್ತಲು ಶಕ್ತರಾಗುವುದಿಲ್ಲ, ಏಕೆಂದರೆ ಅವರ ಮುಖಂಡನಾದ ಯೇಸು ಕ್ರಿಸ್ತನು ಅಂತಿಮ ಜಯವನ್ನು ಪಡೆಯಲಿಕ್ಕಾಗಿ ವೇಗವಾಗಿ ಮುಂದುವರಿಯುತ್ತಿದ್ದಾನೆ!

ನೀವು ಉತ್ತರಿಸಬಲ್ಲಿರೋ?

• ದೇವರ ಬೆಂಬಲವಿರುವ ಜನರ ಕೆಲವು ಪುರಾತನ ಉದಾಹರಣೆಗಳು ಯಾವುವು?

• ಸತ್ಯ ಧರ್ಮವನ್ನು ಗುರುತಿಸುವ ಚಿಹ್ನೆಗಳಲ್ಲಿ ಕೆಲವು ಯಾವುವು?

• ಯೆಹೋವನ ಸಾಕ್ಷಿಗಳಿಗೆ ದೇವರ ಬೆಂಬಲವಿದೆ ಎಂಬುದನ್ನು ವೈಯಕ್ತಿಕವಾಗಿ ನೀವು ಹೇಗೆ ಮನಗಂಡಿದ್ದೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರಗಳು]

ದೇವರ ಬೆಂಬಲವನ್ನು ಪಡೆದುಕೊಳ್ಳಲು ಬಯಸುವವರು, ತಮ್ಮ ಬೋಧನೆಗಳನ್ನು ಸಂಪೂರ್ಣವಾಗಿ ಆತನ ವಾಕ್ಯದ ಮೇಲೆ ಆಧಾರಿಸಬೇಕು

[ಪುಟ 15ರಲ್ಲಿರುವ ಚಿತ್ರಗಳು]

ಕ್ರೈಸ್ತ ಹಿರಿಯರು ಮಂದೆಗೆ ಮಾದರಿಗಳಾಗಿ ನಡೆಯುತ್ತಾರೆ