ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮೇಲಿನ ನಿಮ್ಮ ಭರವಸೆಯನ್ನು ಬಲಪಡಿಸಿರಿ

ಯೆಹೋವನ ಮೇಲಿನ ನಿಮ್ಮ ಭರವಸೆಯನ್ನು ಬಲಪಡಿಸಿರಿ

ಯೆಹೋವನ ಮೇಲಿನ ನಿಮ್ಮ ಭರವಸೆಯನ್ನು ಬಲಪಡಿಸಿರಿ

ಕೊಲೆಯ ಸಂಚೊಂದು ನಡೆಯುತ್ತಾ ಇದೆ. ದೇಶದ ಎಲ್ಲ ಉನ್ನತ ಅಧಿಕಾರಿಗಳು ಸಮಾಲೋಚನೆ ಮಾಡಿ, ಒಂದು ಹೊಸ ಕಾನೂನನ್ನು ಜಾರಿಗೆ ತರುವ ಪ್ರಸ್ತಾಪವನ್ನು ಸಿದ್ಧಗೊಳಿಸಿದ್ದಾರೆ. ಸರಕಾರದ ಸಮ್ಮತಿಯಿಲ್ಲದ ಯಾವುದೇ ಆರಾಧನೆಯಲ್ಲಿ ಯಾವನಾದರೂ ತೊಡಗುವಲ್ಲಿ, ಅದು ಮರಣದಂಡನೆಗೆ ಯೋಗ್ಯವಾಗಿರುವ ಒಂದು ಅಪರಾಧವಾಗಬೇಕೆಂದು ಅವರು ಬಯಸುತ್ತಾರೆ.

ಇದು ಒಂದು ಚಿರಪರಿಚಿತ ವಿಷಯದಂತೆ ಧ್ವನಿಸುತ್ತದೊ? ಇತಿಹಾಸವು, ನಿಯಮವನ್ನು ಉಪಯೋಗಿಸಿ ಕೇಡನ್ನು ಕಲ್ಪಿಸಿದಂಥ ಜನರ ಉದಾಹರಣೆಗಳಿಂದ ತುಂಬಿಹೋಗಿದೆ. ಮೇಲೆ ತಿಳಿಸಲ್ಪಟ್ಟಿರುವ ಘಟನೆಯು, ಪ್ರವಾದಿಯಾದ ದಾನಿಯೇಲನ ದಿನಗಳಲ್ಲಿ ಪಾರಸಿಯ ಸಾಮ್ರಾಜ್ಯದಲ್ಲಿ ನಡೆಯಿತು. ರಾಜ ದಾರ್ಯಾವೆಷನು ಜಾರಿಗೆ ತಂದ ಆ ನಿಯಮವು, ಹೀಗೆ ಆಜ್ಞಾಪಿಸಿತು: “ಯಾವನಾದರೂ ಮೂವತ್ತು ದಿನಗಳ ತನಕ ರಾಜನಾದ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆ ಮಾಡಿಕೊಂಡರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು.”​—ದಾನಿಯೇಲ 6:7-9.

ಈಗ ಮರಣದ ಬೆದರಿಕೆಯ ಎದುರಿನಲ್ಲಿ ದಾನಿಯೇಲನು ಏನು ಮಾಡುವನು? ತನ್ನ ದೇವರಾದ ಯೆಹೋವನಲ್ಲಿ ಭರವಸೆಯಿಡುವುದನ್ನು ಮುಂದುವರಿಸುವನೊ, ಅಥವಾ ರಾಜಿಮಾಡಿಕೊಂಡು ರಾಜನು ಹೇಳಿದಂತೆಯೇ ಮಾಡುವನೊ? ದಾಖಲೆಯು ನಮಗೆ ಹೀಗನ್ನುತ್ತದೆ: “ಶಾಸನಕ್ಕೆ ರುಜುವಾದದ್ದು ದಾನಿಯೇಲನಿಗೆ ತಿಳಿದಾಗ ಅವನು ತನ್ನ ಮನೆಗೆ ಹೋಗಿ ಯೆರೂಸಲೇಮಿನ ಕಡೆಗೆ ಕದವಿಲ್ಲದ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ಯಥಾಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆಮಾಡಿ ಸ್ತೋತ್ರಸಲ್ಲಿಸಿದನು.” (ದಾನಿಯೇಲ 6:10) ಮುಂದೆ ಏನಾಯಿತೆಂಬುದು ಎಲ್ಲರಿಗೆ ತಿಳಿದಿರುವ ಸಂಗತಿಯಾಗಿದೆ. ದಾನಿಯೇಲನ ನಂಬಿಕೆಗಾಗಿ ಅವನನ್ನು ಸಿಂಹಗಳ ಗವಿಯಲ್ಲಿ ಎಸೆಯಲಾಯಿತು. ಆದರೆ ಯೆಹೋವನು “ಸಿಂಹಗಳ ಬಾಯಿ ಕಟ್ಟಿ,” ತನ್ನ ನಿಷ್ಠಾವಂತ ಸೇವಕನನ್ನು ರಕ್ಷಿಸಿದನು.​—ಇಬ್ರಿಯ 11:34; ದಾನಿಯೇಲ 6:​16-22.

ಸ್ವಪರೀಕ್ಷೆಯ ಸಮಯ

ಇಂದು, ಯೆಹೋವನ ಸೇವಕರು ತಮ್ಮನ್ನು ದ್ವೇಷಿಸುತ್ತಿರುವ ಲೋಕವೊಂದರಲ್ಲಿ ಜೀವಿಸುತ್ತಿರುವುದರಿಂದ, ಅವರ ಶಾರೀರಿಕ ಹಾಗೂ ಆತ್ಮಿಕ ಹಿತವು ಅನೇಕ ಬೆದರಿಕೆಗಳಿಗೆ ಒಳಗಾಗಿದೆ. ಉದಾಹರಣೆಗೆ, ನಿರ್ದಿಷ್ಟ ದೇಶಗಳಲ್ಲಿ ಜಾತೀಯ ದ್ವೇಷದ ಘೋರ ಸ್ಫೋಟದಿಂದಾಗಿ, ಅನೇಕ ಸಾಕ್ಷಿಗಳು ಕೊಲ್ಲಲ್ಪಟ್ಟಿದ್ದಾರೆ. ಬೇರೆ ಕಡೆಗಳಲ್ಲಿ, ಯೆಹೋವನ ಸೇವಕರು ಆಹಾರದ ಅಭಾವಗಳು, ಆರ್ಥಿಕ ಕಷ್ಟಗಳು, ನೈಸರ್ಗಿಕ ವಿಪತ್ತುಗಳು, ಗಂಭೀರ ಕಾಯಿಲೆ, ಮತ್ತು ಇತರ ಜೀವಘಾತಕ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಇದಲ್ಲದೆ, ಅವರು ಹಿಂಸೆ, ಕೆಲಸದ ಸ್ಥಳದಲ್ಲಿ ಒತ್ತಡಗಳು, ಮತ್ತು ತಪ್ಪುಮಾಡುವ ವಿಭಿನ್ನ ಪ್ರಲೋಭನೆಗಳನ್ನು ತಾಳಿಕೊಳ್ಳಬೇಕಾಗುತ್ತದೆ. ಇವೆಲ್ಲವೂ ಅವರ ಆತ್ಮಿಕತೆಗೆ ಬೆದರಿಕೆಯನ್ನೊಡ್ಡಬಹುದು. ಅವರ ಮಹಾ ಶತ್ರುವಾಗಿರುವ ಸೈತಾನನು, ಯಶಸ್ವಿಯಾಗಬಲ್ಲ ಯಾವುದೇ ವಿಧಾನದಿಂದಲಾದರೂ ಯೆಹೋವನ ಸೇವಕರನ್ನು ನಾಶಮಾಡಲು ಪಟ್ಟುಹಿಡಿದಿದ್ದಾನೆ.​—1 ಪೇತ್ರ 5:8.

ನಾವು ಇಂಥ ಪರಿಸ್ಥಿತಿಗಳಲ್ಲಿರುವಾಗ ಏನು ಮಾಡಬಲ್ಲೆವು? ಜೀವಕ್ಕೆ ಬೆದರಿಕೆಹಾಕಲ್ಪಟ್ಟಾಗ, ಭಯಭೀತರಾಗುವುದು ಸಹಜವೇ. ಆದರೆ ಅದೇ ಸಮಯದಲ್ಲಿ, ನಾವು ಅಪೊಸ್ತಲ ಪೌಲನ ಈ ಪುನರಾಶ್ವಾಸಕ ಮಾತುಗಳನ್ನು ಮನಸ್ಸಿನಲ್ಲಿಡಬಹುದು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ. ಆದದರಿಂದ​—ಕರ್ತನು [“ಯೆಹೋವನು,” NW] ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.” (ಇಬ್ರಿಯ 13:5, 6) ಇಂದಿನ ತನ್ನ ಸೇವಕರ ಕುರಿತೂ ಯೆಹೋವನಿಗೆ ಹಾಗೆಯೇ ಅನಿಸುತ್ತದೆಂದು ನಾವು ಭರವಸೆಯಿಂದಿರಬಲ್ಲೆವು. ಆದರೆ ಯೆಹೋವನ ವಾಗ್ದಾನದ ಕುರಿತಾಗಿ ತಿಳಿದಿರುವುದು ಒಂದು ಸಂಗತಿ, ಮತ್ತು ಆತನು ನಮ್ಮ ಪರವಾಗಿ ನಿಜವಾಗಿಯೂ ಕ್ರಿಯೆಗೈಯುವನೆಂಬ ಮನವರಿಕೆ ಇರುವುದು ಇನ್ನೊಂದು ಸಂಗತಿಯಾಗಿದೆ. ಆದುದರಿಂದ ಯೆಹೋವನ ಮೇಲಣ ಭರವಸೆಯು ಯಾವ ಆಧಾರದ ಮೇಲೆ ಕಟ್ಟಲ್ಪಟ್ಟಿದೆ ಎಂಬುದನ್ನು ನಾವು ಪರಿಶೀಲಿಸಿ, ಆ ಭರವಸೆಯನ್ನು ಬಲಪಡಿಸಿ, ಕಾಪಾಡಿಕೊಂಡು ಹೋಗುವುದು ಅತಿ ಪ್ರಾಮುಖ್ಯ. ನಾವು ಹಾಗೆ ಮಾಡುವಲ್ಲಿ, “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು [ನಮ್ಮ] ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:7) ಆಗ, ನಮ್ಮ ಮೇಲೆ ಕಷ್ಟಗಳು ಬಂದರೂ, ನಾವು ಸರಿಯಾಗಿ ಯೋಚಿಸಿ, ವಿವೇಕದಿಂದ ಅವುಗಳನ್ನು ನಿಭಾಯಿಸಲು ಶಕ್ತರಾಗಿರುವೆವು.

ಯೆಹೋವನಲ್ಲಿ ಭರವಸೆಯಿಡಲು ಆಧಾರ

ನಮ್ಮ ಸೃಷ್ಟಿಕರ್ತನಾದ ಯೆಹೋವನಲ್ಲಿ ಭರವಸೆಯಿಡಲು ಖಂಡಿತವಾಗಿಯೂ ಅನೇಕ ಕಾರಣಗಳಿವೆ. ಅವುಗಳಲ್ಲಿ ಮೊದಲನೆಯ ಕಾರಣವೇನೆಂದರೆ, ಯೆಹೋವನು ತನ್ನ ಸೇವಕರ ಕುರಿತು ನಿಜವಾಗಿಯೂ ಕಾಳಜಿ ವಹಿಸುವ ಪ್ರೀತಿಯ ದೇವರಾಗಿದ್ದಾನೆ. ಯೆಹೋವನು ತನ್ನ ಸೇವಕರಿಗೆ ಪ್ರೀತಿಯಿಂದ ಆರೈಕೆಮಾಡಿರುವ ಅಸಂಖ್ಯಾತ ಉದಾಹರಣೆಗಳು ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ. ಯೆಹೋವನ ಆಯ್ದ ಜನಾಂಗವಾದ ಇಸ್ರಾಯೇಲಿನೊಂದಿಗೆ ಆತನ ವ್ಯವಹಾರಗಳ ಕುರಿತಾಗಿ ವರ್ಣಿಸುತ್ತಾ ಮೋಶೆಯು ಬರೆದುದು: “ಆತನು ಅವರನ್ನು ಶೂನ್ಯವೂ ಭಯಂಕರವೂ ಆಗಿರುವ ಮರಳುಕಾಡಿನಲ್ಲಿ ಕಂಡು ಪರಾಮರಿಸಿ ಪ್ರೀತಿಯಿಂದ ಆವರಿಸಿಕೊಂಡು ಕಣ್ಣುಗುಡ್ಡಿನಂತೆ ಕಾಪಾಡಿ”ದನು. (ಧರ್ಮೋಪದೇಶಕಾಂಡ 32:10) ಆಧುನಿಕ ಸಮಯಗಳಲ್ಲಿ, ಯೆಹೋವನು ತನ್ನ ಸೇವಕರನ್ನು ಒಂದು ಗುಂಪಿನೋಪಾದಿಯೂ, ವ್ಯಕ್ತಿಗತವಾಗಿ ಒಬ್ಬೊಬ್ಬರನ್ನೂ ಚೆನ್ನಾಗಿ ಪರಾಮರಿಸುತ್ತಾ ಇದ್ದಾನೆ. ಉದಾಹರಣೆಗೆ, ಬಾಸ್ನಿಯದಲ್ಲಿ ನಡೆಯುತ್ತಿದ್ದ ಅಂತರ್‌ಯುದ್ಧದಿಂದಾಗಿ ಕೆಲವು ಸಾಕ್ಷಿಗಳು ವಿಪರೀತವಾದ ಆಹಾರದ ಅಭಾವಕ್ಕೆ ತುತ್ತಾದರು. ಆ ಸಮಯದಲ್ಲಿ ಅವರಿಗೆ ಅತ್ಯಾವಶ್ಯಕವಾಗಿದ್ದ ಸರಬರಾಯಿಗಳು ದೊರಕುವಂತೆ ಯೆಹೋವನು ನೋಡಿಕೊಂಡನು. ಹೇಗೆ? ಕ್ರೊಏಷಿಯ ಮತ್ತು ಆಸ್ಟ್ರಿಯದ ಸಹೋದರರ ಧೀರ ಪ್ರಯತ್ನಗಳ ಮೂಲಕವೇ. ಇವರು, ಬಾಸ್ನಿಯದಲ್ಲಿದ್ದ ತಮ್ಮ ಸಹೋದರರಿಗೆ ಪರಿಹಾರ ಸಾಮಗ್ರಿಗಳನ್ನು ತಲಪಿಸಲಿಕ್ಕಾಗಿ ತುಂಬ ಅಪಾಯಕರವಾದ ಕ್ಷೇತ್ರವನ್ನು ದಾಟಿಹೋಗಲು ತಮ್ಮ ಜೀವಗಳನ್ನು ಗಂಡಾಂತರಕ್ಕೊಡ್ಡಿದರು. *

ಯೆಹೋವ ದೇವರು ಸರ್ವಶಕ್ತನಾಗಿರುವುದರಿಂದ, ತನ್ನ ಸೇವಕರನ್ನು ಯಾವುದೇ ಪರಿಸ್ಥಿತಿಯಲ್ಲಿ ಸಂರಕ್ಷಿಸುವ ಸಾಮರ್ಥ್ಯ ಆತನಿಗಿದೆ. (ಯೆಶಾಯ 33:22; ಪ್ರಕಟನೆ 4:8) ಆದರೆ ಕೆಲವೊಮ್ಮೆ ಯೆಹೋವನು, ತನ್ನ ಸೇವಕರು ತಮ್ಮ ನಂಬಿಗಸ್ತಿಕೆಯನ್ನು ರುಜುಪಡಿಸಲು, ಅವರು ಸಾಯುವಂತೆಯೂ ಅನುಮತಿಸುತ್ತಾನೆ. ಹೀಗಿದ್ದರೂ, ಅವರು ಅಂತ್ಯದ ವರೆಗೆ ಸ್ಥಿರಚಿತ್ತರೂ, ಆನಂದಭರಿತರೂ ಮತ್ತು ಶಾಂತರೂ ಆಗಿರುವಂತೆ ಶಕ್ತಗೊಳಿಸುತ್ತಾ ಆತನು ಅವರನ್ನು ಪೋಷಿಸುತ್ತಾನೆ ಮತ್ತು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತಾನೆ. ಆದುದರಿಂದ ನಮಗೆ ಕೀರ್ತನೆಗಾರನಿಗಿದ್ದಂಥ ಭರವಸೆಯೇ ಇರಬಲ್ಲದು: “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು. ಆದದರಿಂದ ಭೂಮಿಯು ಮಾರ್ಪಟ್ಟರೂ ಬೆಟ್ಟಗಳು ಸಮುದ್ರದಲ್ಲಿ ಮುಣುಗಿಹೋದರೂ ನಮಗೇನೂ ಭಯವಿಲ್ಲ.”​—ಕೀರ್ತನೆ 46:1, 2.

ಯೆಹೋವನು, ಸತ್ಯವನ್ನಾಡುವ ದೇವರಾಗಿದ್ದಾನೆಂದೂ ಬೈಬಲ್‌ ಪ್ರಕಟಪಡಿಸುತ್ತದೆ. ಇದರರ್ಥ, ಆತನು ಯಾವಾಗಲೂ ತನ್ನ ವಾಗ್ದಾನಗಳನ್ನು ಪೂರೈಸುತ್ತಾನೆ. ವಾಸ್ತವದಲ್ಲಿ, ಬೈಬಲ್‌ ಆತನನ್ನು “ಸುಳ್ಳಾಡದ ದೇವರು” ಎಂದು ಕರೆಯುತ್ತದೆ. (ತೀತ 1:1) ತನ್ನ ಸೇವಕರನ್ನು ಕಾಪಾಡಲು ಮತ್ತು ರಕ್ಷಿಸಲು ತಾನು ಸಿದ್ಧನಾಗಿದ್ದೇನೆಂಬುದನ್ನು ಯೆಹೋವನು ಪದೇ ಪದೇ ಹೇಳಿರುವುದರಿಂದ, ಆತನು ತನ್ನ ವಾಗ್ದಾನಗಳನ್ನು ಪೂರೈಸಲು ಶಕ್ತನಾಗಿದ್ದಾನೆ ಮಾತ್ರವಲ್ಲ, ಅದಕ್ಕಾಗಿ ಸದಾ ಸಿದ್ಧನೂ ಆಗಿದ್ದಾನೆಂಬ ವಿಷಯದಲ್ಲಿ ನಮಗೆ ಸಂಪೂರ್ಣ ಖಾತ್ರಿಯಿರಬಲ್ಲದು.​—ಯೋಬ 42:2.

ನಮ್ಮ ಭರವಸೆಯನ್ನು ಬಲಪಡಿಸಲು ಮಾರ್ಗಗಳು

ಯೆಹೋವನಲ್ಲಿ ಭರವಸೆಯಿಡಲು ನಮಗೆ ಅನೇಕ ಕಾರಣಗಳಿರುವುದಾದರೂ, ಆ ಭರವಸೆಯು ಯಾವಾಗಲೂ ಇರುವುದೆಂದು ನಾವು ಭಾವಿಸಿಕೊಳ್ಳಬಾರದು. ಏಕೆಂದರೆ ಲೋಕದಲ್ಲಿ ಸಾಮಾನ್ಯವಾಗಿ ದೇವರಲ್ಲಿನ ನಂಬಿಕೆಯು ಕಡಿಮೆಯಾಗಿಬಿಟ್ಟಿದೆ, ಮತ್ತು ಇಂಥ ಮನೋಭಾವವು, ಯೆಹೋವನಲ್ಲಿ ನಮಗಿರುವ ಭರವಸೆಯನ್ನು ಸುಲಭವಾಗಿ ದುರ್ಬಲಗೊಳಿಸಬಲ್ಲದು. ಆದುದರಿಂದ ಆ ಭರವಸೆಯನ್ನು ಬಲಪಡಿಸಿ, ಕಾಪಾಡಿಕೊಂಡು ಹೋಗಲು ನಾವು ಬಹಳಷ್ಟು ಪ್ರಯತ್ನಮಾಡಬೇಕು. ಯೆಹೋವನಿಗೆ ಇದರ ಕುರಿತಾಗಿ ಚೆನ್ನಾಗಿ ತಿಳಿದಿದೆ. ಮತ್ತು ಈ ಕಾರಣದಿಂದ ಇದನ್ನು ಮಾಡುವ ಮಾಧ್ಯಮವನ್ನು ಆತನು ನಮಗೆ ಒದಗಿಸಿದ್ದಾನೆ.

ಮೊದಲನೆಯದಾಗಿ, ಆತನು ತನ್ನ ಲಿಖಿತ ವಾಕ್ಯವಾದ ಬೈಬಲನ್ನು ಒದಗಿಸಿದ್ದಾನೆ. ಅದರಲ್ಲಿ ತನ್ನ ಸೇವಕರ ಪರವಾಗಿ ಆತನು ಮಾಡಿರುವ ಅಸಂಖ್ಯಾತ ಮಹತ್ಕಾರ್ಯಗಳ ಕುರಿತಾಗಿ ದಾಖಲಿಸಲಾಗಿದೆ. ಸ್ವಲ್ಪ ಯೋಚಿಸಿ, ನಿಮಗೆ ಒಬ್ಬ ವ್ಯಕ್ತಿಯ ಹೆಸರು ಮಾತ್ರ ಗೊತ್ತಿದ್ದು, ಅವನ ಬಗ್ಗೆ ಬೇರೇನೂ ಗೊತ್ತಿರದಿದ್ದರೆ, ನೀವು ಅವನಲ್ಲಿ ಎಷ್ಟು ಭರವಸೆಯನ್ನಿಡುವಿರಿ? ಬಹುಶಃ ತುಂಬ ಕಡಿಮೆ ಭರವಸೆಯಿಡುವಿರಿ ಇಲ್ಲವೇ ಭರವಸೆಯನ್ನೇ ಇಡಲಿಕ್ಕಿಲ್ಲ. ಅವನಲ್ಲಿ ಭರವಸೆಯಿಡಬೇಕಾದರೆ, ಅವನು ಹೇಗೆ ಕೆಲಸಮಾಡುತ್ತಾನೆಂಬುದರ ಕುರಿತಾಗಿ ನಿಮಗೆ ಗೊತ್ತಿರಬೇಕು, ಅಲ್ಲವೇ? ಯೆಹೋವನ ಮಹತ್ಕಾರ್ಯಗಳ ಕುರಿತಾದ ಅಂಥ ಬೈಬಲ್‌ ವೃತ್ತಾಂತಗಳನ್ನು ಓದಿ, ಅವುಗಳ ಕುರಿತಾಗಿ ಮನನ ಮಾಡುವಾಗ, ಯೆಹೋವ ಮತ್ತು ಆತನ ಅದ್ಭುತ ಮಾರ್ಗಗಳ ಕುರಿತಾದ ನಮ್ಮ ಜ್ಞಾನವು ಹೆಚ್ಚಾಗುವುದು, ಮತ್ತು ಆತನು ಎಷ್ಟು ಭರವಸಯೋಗ್ಯನು ಆಗಿದ್ದಾನೆಂಬುದನ್ನು ನಾವು ಹೆಚ್ಚೆಚ್ಚು ಗಣ್ಯಮಾಡಲಾರಂಭಿಸುವೆವು. ಹೀಗೆ ಆತನಲ್ಲಿ ನಮಗಿರುವ ಭರವಸೆಯು ಬಲವಾಗುತ್ತದೆ. ಕೀರ್ತನೆಗಾರನು ಈ ವಿಷಯದಲ್ಲಿ ಅತ್ಯುತ್ಕೃಷ್ಟ ಮಾದರಿಯನ್ನು ಇಡುತ್ತಾ, ದೇವರಿಗೆ ಮಾಡಿದ ಮನಃಪೂರ್ವಕವಾದ ಪ್ರಾರ್ಥನೆಯಲ್ಲಿ ಹೇಳಿದ್ದು: “ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು. ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.”​—ಕೀರ್ತನೆ 77:11, 12.

ಬೈಬಲಿಗೆ ಕೂಡಿಸುತ್ತಾ, ಯೆಹೋವನ ಸಂಸ್ಥೆಯು ತಯಾರಿಸುವ ಬೈಬಲ್‌ ಪ್ರಕಾಶನಗಳಿಂದಲೂ ನಮಗೆ ಸಮೃದ್ಧವಾದ ಆತ್ಮಿಕ ಆಹಾರವು ಸಿಗುತ್ತದೆ. ಬೇರೆ ವಿಷಯಗಳೊಂದಿಗೆ ಈ ಪ್ರಕಾಶನಗಳಲ್ಲಿ, ಆಧುನಿಕ ಸಮಯಗಳಲ್ಲಿನ ದೇವರ ಸೇವಕರ ಮನಮುಟ್ಟುವಂಥ ಜೀವನ ಕಥೆಗಳಿರುತ್ತವೆ. ವಿಷಮ ಪರಿಸ್ಥಿತಿಗಳಲ್ಲಿದ್ದಾಗ, ಯೆಹೋವನು ಅವರಿಗೆ ಹೇಗೆ ಸಹಾಯ ಮತ್ತು ಪರಿಹಾರವನ್ನು ಒದಗಿಸಿದ್ದಾನೆಂಬುದನ್ನು ಅವು ತೋರಿಸುತ್ತವೆ. ಉದಾಹರಣೆಗಾಗಿ, ಸಮಯಾನಂತರ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿದ್ದ ಮಾರ್ಟಿನ್‌ ಪೋಯೆಟ್‌ಸಿಂಗರ್‌ರವರು, ತಮ್ಮ ಸ್ವದೇಶದಿಂದ ದೂರದಲ್ಲಿದ್ದ ಯೂರೋಪಿನ ಕ್ಷೇತ್ರಗಳಲ್ಲಿ ಪಯನೀಯರರೋಪಾದಿ ಕೆಲಸಮಾಡುತ್ತಿದ್ದಾಗ, ಗಂಭೀರವಾಗಿ ರೋಗಗ್ರಸ್ತರಾದರು. ಅವರ ಬಳಿ ಸ್ವಲ್ಪವೂ ಹಣವಿರಲಿಲ್ಲ, ಮತ್ತು ಯಾವುದೇ ಡಾಕ್ಟರನು ಅವರ ತಪಾಸಣೆಮಾಡಲು ಸಿದ್ಧನಾಗಿರಲಿಲ್ಲ. ಆದರೆ ಯೆಹೋವನು ಅವರ ಕೈಬಿಡಲಿಲ್ಲ. ಕೊನೆಯಲ್ಲಿ ಸ್ಥಳಿಕ ಆಸ್ಪತ್ರೆಯ ಹಿರಿಯ ಸಲಹೆಗಾರರನ್ನು ಸಂಪರ್ಕಿಸಲಾಯಿತು. ಅವರು ಬೈಬಲಿನಲ್ಲಿ ದೃಢವಾಗಿ ನಂಬುವವರಾಗಿದ್ದರು. ಈ ವ್ಯಕ್ತಿಯು, ಬಿಡಿಗಾಸನ್ನೂ ತೆಗೆದುಕೊಳ್ಳದೇ, ಸಹೋದರ ಪೋಯೆಟ್‌ಸಿಂಗರ್‌ರನ್ನು ಒಬ್ಬ ಮಗನಂತೆ ನೋಡಿಕೊಂಡರು. ಅಂಥ ವೈಯಕ್ತಿಕ ಕಥೆಗಳನ್ನು ಓದುವುದು, ನಮ್ಮ ಸ್ವರ್ಗೀಯ ತಂದೆಯಲ್ಲಿನ ನಮ್ಮ ಭರವಸೆಯನ್ನು ನಿಶ್ಚಯವಾಗಿಯೂ ಬಲಪಡಿಸುವುದು.

ಆತನಲ್ಲಿನ ನಮ್ಮ ಭರವಸೆಯನ್ನು ಬಲಪಡಿಸಲು ಯೆಹೋವನು ಕೊಡುವ ಇನ್ನೊಂದು ನೆರವು, ಪ್ರಾರ್ಥನೆಯೆಂಬ ಅಮೂಲ್ಯ ಸುಯೋಗವೇ ಆಗಿದೆ. ಅಪೊಸ್ತಲ ಪೌಲನು ನಮಗೆ ಪ್ರೀತಿಯಿಂದ ಹೇಳುವುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ.” (ಫಿಲಿಪ್ಪಿ 4:6) “ಸರ್ವವಿಷಯ” ಎಂದು ಹೇಳುವಾಗ, ಅದರಲ್ಲಿ ನಮ್ಮ ಭಾವನೆಗಳು, ಅಗತ್ಯಗಳು, ಭಯಗಳು ಮತ್ತು ಚಿಂತೆಗಳು ಒಳಗೂಡಿರುತ್ತವೆ. ನಾವೆಷ್ಟು ಸಲ ಪ್ರಾರ್ಥನೆ ಮಾಡುತ್ತೇವೊ ಮತ್ತು ಎಷ್ಟು ಮನಃಪೂರ್ವಕವಾಗಿ ಅದನ್ನು ಮಾಡುತ್ತೇವೊ, ಯೆಹೋವನಲ್ಲಿನ ನಮ್ಮ ಭರವಸೆಯೂ ಅಷ್ಟೇ ಬಲವಾಗುವುದು.

ಯೇಸು ಕ್ರಿಸ್ತನು ಭೂಮಿಯ ಮೇಲಿದ್ದಾಗ ಕೆಲವೊಮ್ಮೆ, ಅವನಿಗೆ ಯಾವುದೇ ರೀತಿಯ ತೊಂದರೆಯಾಗದಂಥ ಏಕಾಂತ ಸ್ಥಳಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದನು. (ಮತ್ತಾಯ 14:23; ಮಾರ್ಕ 1:35) ಗಂಭೀರವಾದ ನಿರ್ಣಯಗಳನ್ನು ಮಾಡುವ ಮುಂಚೆ, ಅವನು ಇಡೀ ರಾತ್ರಿ ತನ್ನ ತಂದೆಗೆ ಪ್ರಾರ್ಥನೆಮಾಡುತ್ತಾ ಕಳೆದಿರುವ ಸಂದರ್ಭಗಳೂ ಇವೆ. (ಲೂಕ 6:​12, 13) ಯೇಸುವಿಗೆ ಯೆಹೋವನ ಮೇಲಿದ್ದ ಭರವಸೆಯು ಎಷ್ಟು ಬಲವಾಗಿತ್ತೆಂದರೆ, ಈ ವರೆಗೂ ಯಾರೂ ಅನುಭವಿಸಿರದಷ್ಟು ಘೋರವಾದ ಪರೀಕ್ಷೆಯನ್ನು ಆತನು ತಾಳಿಕೊಂಡನು. ಯಾತನಾ ಕಂಬದ ಮೇಲೆ ಆತನ ಕೊನೆಯ ಮಾತುಗಳು ಹೀಗಿದ್ದವು: “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ.” ಈ ಮಾತುಗಳು, ಯೆಹೋವನು ಅವನನ್ನು ರಕ್ಷಿಸಲು ಮಧ್ಯಬರದಿದ್ದರೂ, ಕೊನೆವರೆಗೂ ತನ್ನ ತಂದೆಯಲ್ಲಿದ್ದ ಅವನ ಭರವಸೆಯು ಕುಂದಲಿಲ್ಲವೆಂಬುದನ್ನು ಪ್ರದರ್ಶಿಸಿದವು.​—ಲೂಕ 23:46.

ಯೆಹೋವನಲ್ಲಿ ನಮ್ಮ ಭರವಸೆಯನ್ನು ಕಟ್ಟುವ ಇನ್ನೊಂದು ವಿಧಾನವು, ಆತನ ಮೇಲೆ ಪೂರ್ಣಮನಸ್ಸಿನಿಂದ ಭರವಸೆಯಿಡುವವರೊಂದಿಗೆ ಕ್ರಮವಾಗಿ ಸಹವಾಸಿಸುವುದೇ ಆಗಿದೆ. ಆತನ ಕುರಿತಾಗಿ ಹೆಚ್ಚನ್ನು ಕಲಿಯಲು ಮತ್ತು ಪರಸ್ಪರರನ್ನು ಪ್ರೋತ್ಸಾಹಿಸಲು ಕ್ರಮವಾಗಿ ಒಟ್ಟುಗೂಡುವಂತೆ ಯೆಹೋವನು ತನ್ನ ಜನರಿಗೆ ಆಜ್ಞಾಪಿಸಿದನು. (ಧರ್ಮೋಪದೇಶಕಾಂಡ 31:12; ಇಬ್ರಿಯ 10:​24, 25) ಅಂಥ ಸಹವಾಸವು ಯೆಹೋವನಲ್ಲಿ ಅವರಿಗಿದ್ದ ಭರವಸೆಯನ್ನು ಬಲಪಡಿಸಿ, ನಂಬಿಕೆಯ ಅತಿ ಪ್ರಮುಖ ಪರೀಕ್ಷೆಗಳನ್ನು ತಾಳಿಕೊಳ್ಳಲು ಶಕ್ತಗೊಳಿಸಿತು. ಆಫ್ರಿಕದ ಒಂದು ದೇಶದಲ್ಲಿ ಸಾರುವ ಕೆಲಸವನ್ನು ನಿಷೇಧಿಸಲಾಗಿತ್ತು. ಆದುದರಿಂದ ಅಲ್ಲಿ ಯೆಹೋವನ ಸಾಕ್ಷಿಗಳಿಗೆ, ಪೊಲೀಸ್‌ ಸಂರಕ್ಷಣೆ, ಪ್ರಯಾಣ ದಸ್ತಾವೇಜುಗಳು, ವಿವಾಹದ ಸರ್ಟಿಫಿಕೇಟುಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಉದ್ಯೋಗಗಳನ್ನು ಕೊಡಲಾಗುತ್ತಿರಲಿಲ್ಲ. ಒಂದು ಕ್ಷೇತ್ರದಲ್ಲಿ ಅಂತರ್‌ಯುದ್ಧ ಶುರುವಾದಾಗ, ಹತ್ತಿರದಲ್ಲಿದ್ದ ಒಂದು ಸಭೆಯ 39 ಸದಸ್ಯರು, ಮಕ್ಕಳನ್ನು ಸೇರಿಸಿ, ಮರುಭೂಮಿಯಲ್ಲಿ ಒಂದು ತಗ್ಗಾದ ಸೇತುವೆಯ ಕೆಳಗೆ ಸುಮಾರು ನಾಲ್ಕು ತಿಂಗಳುಗಳ ವರೆಗೆ ಜೀವಿಸಿದರು. ತಮ್ಮ ಪಟ್ಟಣದಲ್ಲಿ ನಡೆಯುತ್ತಿದ್ದ ಸಿಡಿಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ಹೀಗೆ ಮಾಡಬೇಕಾಯಿತು. ಅಂಥ ಕಷ್ಟಕರ ಸಮಯದಲ್ಲೂ ಅವರು ದಿನಾಲೂ ಒಂದು ಬೈಬಲ್‌ ವಚನವನ್ನು ಚರ್ಚಿಸುತ್ತಿದ್ದರು ಮತ್ತು ಇತರ ಕೂಟಗಳನ್ನು ನಡೆಸುತ್ತಿದ್ದರು. ಇದೇ ಅವರಿಗೆ ತುಂಬ ಬಲವನ್ನು ಕೊಟ್ಟಿತು. ಹೀಗೆ ಆ ಕಷ್ಟದ ಅವಧಿಯಾದ್ಯಂತ ಅವರ ಆತ್ಮಿಕತೆಗೆ ಯಾವುದೇ ಹಾನಿ ತಟ್ಟಲಿಲ್ಲ. ಯೆಹೋವನ ಜನರೊಂದಿಗೆ ಕ್ರಮವಾಗಿ ಕೂಡಿಬರುವುದು ಎಷ್ಟು ಮಹತ್ವಪೂರ್ಣ ಎಂಬುದನ್ನು ಈ ಅನುಭವವು ಸ್ಪಷ್ಟವಾಗಿ ತೋರಿಸುತ್ತದೆ.

ಕೊನೆಯಲ್ಲಿ, ಯೆಹೋವನ ಮೇಲಿನ ನಮ್ಮ ಭರವಸೆಯನ್ನು ಬಲಪಡಿಸಲಿಕ್ಕಾಗಿ, ನಾವು ರಾಜ್ಯದ ಕುರಿತು ಸಾರುವ ಕೆಲಸದಲ್ಲಿ ಸಕ್ರಿಯರಾಗಿರಬೇಕು. ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ನಾವು ಯಾವಾಗಲೂ ಸಿದ್ಧರಿರಬೇಕು. ಇದನ್ನು ಕೆನಡದಲ್ಲಿದ್ದ ಒಬ್ಬ ಹುರುಪಿನ ಪ್ರಚಾರಕಳ ಮನಸ್ಪರ್ಶಿಸುವ ಅನುಭವದಿಂದ ಕಲಿಯಬಹುದು. ಅವಳಿಗೆ ಲುಕೇಮಿಯ ರೋಗವಿದ್ದು, ಸ್ವಲ್ಪ ಸಮಯದಲ್ಲೇ ಸಾಯಲಿದ್ದಳು. ಅವಳಿಗೆ ಈ ಗಂಭೀರವಾದ ಕಾಯಿಲೆಯಿದ್ದರೂ, ಅವಳು ಒಬ್ಬ ರೆಗ್ಯುಲರ್‌ ಪಯನೀಯರ್‌, ಅಂದರೆ ಪೂರ್ಣ ಸಮಯದ ಶುಶ್ರೂಷಕಿಯಾಗಲು ಬಯಸಿದಳು. ಅವಳ ಕಾಯಿಲೆಯು ಸ್ವಲ್ಪ ಸಮಯಕ್ಕೆ ಕಡಿಮೆಯಾಯಿತು. ಆಗ ಅವಳು ಒಂದು ತಿಂಗಳು, ಆಕ್ಸಿಲಿಯರಿ ಪಯನೀಯರ್‌ ಸೇವೆಯಲ್ಲಿ ಪಾಲ್ಗೊಳ್ಳುವಷ್ಟು ಆರೋಗ್ಯವಂತಳಾಗಿದ್ದಳು. ಅನಂತರ, ಅವಳ ಪರಿಸ್ಥಿತಿಯು ಹದಗೆಟ್ಟಿತು, ಮತ್ತು ಕೆಲವೇ ತಿಂಗಳುಗಳೊಳಗೆ ಸತ್ತುಹೋದಳು. ಆದರೂ ಕೊನೆಯುಸಿರಿರುವ ವರೆಗೂ ಅವಳು ಆತ್ಮಿಕವಾಗಿ ಬಲವಾಗಿದ್ದಳು. ಒಂದು ಕ್ಷಣವೂ ಯೆಹೋವನಲ್ಲಿ ಅವಳಿಗಿದ್ದ ಭರವಸೆಯು ಕದಲಲಿಲ್ಲ. ಅವಳ ತಾಯಿ ಜ್ಞಾಪಿಸಿಕೊಳ್ಳುವುದು: “ಅಂತ್ಯದ ವರೆಗೂ ಅವಳು ತನಗಿಂತಲೂ ಇತರರ ಕುರಿತಾಗಿಯೇ ಚಿಂತಿತಳಾಗಿದ್ದಳು. ‘ನಾವು ಪರದೈಸಿನಲ್ಲಿ ಜೊತೆಯಾಗಿರುವೆವು’ ಎಂದು ಹೇಳುತ್ತಾ, ಅವಳು ಅವರಿಗೆ ಬೈಬಲನ್ನು ಅಭ್ಯಾಸಮಾಡಲು ಉತ್ತೇಜಿಸುತ್ತಿದ್ದಳು.”

ಯೆಹೋವನಲ್ಲಿನ ನಮ್ಮ ಭರವಸೆಯನ್ನು ರುಜುಪಡಿಸುವುದು

“ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.” (ಯಾಕೋಬ 2:26) ಯಾಕೋಬನು ಈ ಮಾತುಗಳನ್ನು ದೇವರಲ್ಲಿನ ನಂಬಿಕೆಯ ಕುರಿತಾಗಿ ಹೇಳಿದನು. ಆದರೆ ಅದನ್ನು ದೇವರ ಮೇಲಣ ನಮ್ಮ ಭರವಸೆಯ ಕುರಿತಾಗಿಯೂ ಹೇಳಬಹುದು. ದೇವರಲ್ಲಿ ನಮಗಿರುವ ಭರವಸೆಯ ಕುರಿತಾಗಿ ನಾವು ಮಾತಿನಲ್ಲಿ ಬಹಳಷ್ಟನ್ನು ಹೇಳುತ್ತಿರಬಹುದು. ಆದರೆ ಅದನ್ನು ನಾವು ನಮ್ಮ ಕಾರ್ಯಗಳಲ್ಲಿ ತೋರಿಸಿದ ಹೊರತು ಅದೆಲ್ಲವೂ ಅರ್ಥಹೀನ. ಅಬ್ರಹಾಮನು, ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆಯನ್ನಿಟ್ಟನು. ಮತ್ತು ಆತನ ಆಜ್ಞೆಗಳಿಗೆ ಹಿಂಜರಿಕೆ ಅಥವಾ ಸಂದೇಹವಿಲ್ಲದೆ ವಿಧೇಯರಾಗುವ ಮೂಲಕ ತನ್ನ ಮಗನಾದ ಇಸಾಕನನ್ನು ಯಜ್ಞಕ್ಕಾಗಿ ಸಿದ್ಧಗೊಳಿಸುವ ಮಟ್ಟಿಗೆ ಹೋಗುವ ಮೂಲಕ, ಆ ಭರವಸೆಯನ್ನು ರುಜುಪಡಿಸಿದನು. ಗಮನಾರ್ಹವಾದ ಆ ಭರವಸೆ ಮತ್ತು ವಿಧೇಯತೆಯಿಂದಾಗಿ, ಅಬ್ರಹಾಮನು ಯೆಹೋವನ ಸ್ನೇಹಿತನೆಂದು ಪ್ರಸಿದ್ಧನಾದನು.​—ಇಬ್ರಿಯ 11:​8-10, 17-19; ಯಾಕೋಬ 2:23.

ಯೆಹೋವನಲ್ಲಿ ನಮಗೆ ಎಷ್ಟು ಭರವಸೆಯಿದೆ ಎಂಬುದನ್ನು, ನಮ್ಮ ಮೇಲೆ ಯಾವುದೊ ಕಠಿನ ಪರೀಕ್ಷೆ ಬಂದಾಗ ತೋರಿಸುವೆವು ಎಂದು ಕಾದುಕೊಂಡಿರುವ ಅಗತ್ಯವಿಲ್ಲ. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು.” (ಲೂಕ 16:10) ನಮ್ಮ ದಿನನಿತ್ಯದ ಎಲ್ಲ ಚಟುವಟಿಕೆಗಳಲ್ಲಿ ಯೆಹೋವನ ಮೇಲೆ ಭರವಸೆಯಿಡಲು ನಾವು ಕಲಿಯಬೇಕು. ತೀರ ಚಿಕ್ಕದ್ದಾಗಿ ತೋರುವ ಸಂಗತಿಗಳಲ್ಲೂ ಆತನಿಗೆ ವಿಧೇಯರಾಗಿರಬೇಕು. ಅಂಥ ವಿಧೇಯತೆಯಿಂದ ಬರುವ ಪ್ರಯೋಜನಗಳನ್ನು ನಾವು ಗಮನಿಸುವಾಗ, ನಮ್ಮ ಸ್ವರ್ಗೀಯ ತಂದೆಯಲ್ಲಿರುವ ನಮ್ಮ ಭರವಸೆಯು ಬಲಹೊಂದುತ್ತದೆ, ಮತ್ತು ಇದು ನಾವು ಹೆಚ್ಚು ದೊಡ್ಡ ಹಾಗೂ ದುಸ್ಸಾಧ್ಯವಾದ ಪರೀಕ್ಷೆಗಳನ್ನು ಎದುರಿಸುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ.

ಲೋಕವು ಅದರ ವಿಪತ್ಕಾರಕ ಅಂತ್ಯವನ್ನು ಸಮೀಪಿಸುತ್ತಿರುವಾಗ, ಯೆಹೋವನ ಜನರು ಖಂಡಿತವಾಗಿಯೂ ಹೆಚ್ಚು ಪರೀಕ್ಷೆಗಳು ಮತ್ತು ಅಪಾಯಗಳನ್ನು ಅನುಭವಿಸಲಿದ್ದಾರೆ. (ಅ. ಕೃತ್ಯಗಳು 14:22; 2 ತಿಮೊಥೆಯ 3:12) ಯೆಹೋವನಲ್ಲಿ ಈಗಲೇ ಬಲವಾದ ಹಾಗೂ ಸಂಪೂರ್ಣವಾದ ಭರವಸೆಯನ್ನು ಕಟ್ಟುವ ಮೂಲಕ, ಆತನ ವಾಗ್ದತ್ತ ಹೊಸ ಲೋಕಕ್ಕೆ ಪಾರಾಗಿ ಹೋಗಲು ನಾವು ಎದುರುನೋಡಬಹುದು. ಒಂದೋ ನಾವು ಜೀವಂತವಾಗಿ ಮಹಾ ಸಂಕಟವನ್ನು ಪಾರಾಗಿ ಹೋಗುವೆವು, ಇಲ್ಲವೇ ಪುನರುತ್ಥಾನದ ಮೂಲಕ ಅಲ್ಲಿ ತಲಪಬಹುದು. (2 ಪೇತ್ರ 3:13) ಭರವಸೆಯ ಕೊರತೆಯು, ಯೆಹೋವನೊಂದಿಗಿನ ನಮ್ಮ ಅಮೂಲ್ಯವಾದ ಸಂಬಂಧವನ್ನು ಹಾನಿಗೊಳಿಸುವಂತೆ ನಾವೆಂದಿಗೂ ಬಿಡದಿರೋಣ. ಆಗ, ದಾನಿಯೇಲನು ಸಿಂಹಗಳ ಗವಿಯಿಂದ ಮೇಲೆತ್ತಲ್ಪಟ್ಟ ನಂತರ ಅವನ ಕುರಿತಾಗಿ ಏನು ಹೇಳಲ್ಪಟ್ಟಿತ್ತೊ, ಅದು ನಮ್ಮ ಕುರಿತಾಗಿಯೂ ಹೇಳಲ್ಪಡಬಹುದು: “ಅವನು ತನ್ನ ದೇವರಲ್ಲಿ ಭರವಸವಿಟ್ಟಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ.”​—ದಾನಿಯೇಲ 6:23.

[ಪಾದಟಿಪ್ಪಣಿ]

^ ಪ್ಯಾರ. 9 ವಿವರಗಳಿಗಾಗಿ, ಕಾವಲಿನಬುರುಜು ಪತ್ರಿಕೆಯ 1994, ನವೆಂಬರ್‌ 1ರ ಸಂಚಿಕೆ, ಪುಟ 23-7ನ್ನು ನೋಡಿರಿ.

[ಪುಟ 9ರಲ್ಲಿರುವ ಚಿತ್ರ]

ಮಾರ್ಟಿನ್‌ ಪೋಯೆಟ್‌ಸಿಂಗರ್‌ರಂಥ ಯೆಹೋವನ ನಂಬಿಗಸ್ತ ಸೇವಕರ ಜೀವನ ಕಥೆಗಳನ್ನು ಓದುವುದು, ನಂಬಿಕೆಯನ್ನು ತುಂಬ ಬಲಪಡಿಸುತ್ತದೆ