ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯದ ನಿರೀಕ್ಷೆಯಲ್ಲಿ ಹರ್ಷಿಸಿರಿ!

ರಾಜ್ಯದ ನಿರೀಕ್ಷೆಯಲ್ಲಿ ಹರ್ಷಿಸಿರಿ!

ರಾಜ್ಯದ ನಿರೀಕ್ಷೆಯಲ್ಲಿ ಹರ್ಷಿಸಿರಿ!

ಅದು ಒಂದು ಆನಂದಮಯ ಸಮಾರಂಭವಾಗಿತ್ತು. 2001ರ ಮಾರ್ಚ್‌ 10ರಂದು, ನ್ಯೂ ಯಾರ್ಕ್‌ ಸ್ಟೇಟ್‌ನಲ್ಲಿರುವ ದೊಡ್ಡ ಬೆತೆಲ್‌ ಕುಟುಂಬದಿಂದ ಉಪಯೋಗಿಸಲ್ಪಡುವ ಮೂರು ಸ್ಥಳಗಳಲ್ಲಿ, 5,784 ಮಂದಿ ಸಭಿಕರು ಈ ಸಮಾರಂಭಕ್ಕಾಗಿ ಒಟ್ಟುಗೂಡಿದ್ದರು. ಗಿಲ್ಯಡ್‌ ಮಿಷನೆರಿ ಶಾಲೆಯ 110ನೆಯ ತರಗತಿಯು ಪದವಿಯನ್ನು ಪಡೆದುಕೊಳ್ಳುವುದೇ ಈ ಸಮಾರಂಭದ ವಿಶೇಷತೆಯಾಗಿತ್ತು.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಕ್ಯಾರಿ ಬಾರ್ಬರ್‌ ಎಲ್ಲರನ್ನೂ ಸ್ವಾಗತಿಸಿದರು ಮತ್ತು ಈ ಮಾತುಗಳಿಂದ ಕಾರ್ಯಕ್ರಮವನ್ನು ಆರಂಭಿಸಿದರು: “ಇಷ್ಟರ ತನಕ 110 ತರಗತಿಗಳ ಗಿಲ್ಯಡ್‌ ವಿದ್ಯಾರ್ಥಿಗಳು ಮಿಷನೆರಿ ತರಬೇತಿಯನ್ನು ಪಡೆದುಕೊಂಡಿದ್ದಾರೆ ಮತ್ತು ಭೂಮಿಯಾದ್ಯಂತ ಇರುವ ಬೇರೆ ಬೇರೆ ದೇಶಗಳಿಗೆ ನೇಮಿಸಲ್ಪಟ್ಟಿದ್ದಾರೆ ಎಂಬುದನ್ನು ತಿಳಿಯುವುದು ನಮಗೆ ನಿಜವಾಗಿಯೂ ಸಂತೋಷವನ್ನು ಉಂಟುಮಾಡುತ್ತದೆ.”

ಆನಂದವನ್ನು ಕಾಪಾಡಿಕೊಳ್ಳುವುದು

ಸಹೋದರ ಬಾರ್ಬರ್‌ ಅವರ ಆರಂಭದ ಮಾತುಗಳ ಬಳಿಕ, ಹಾಜರಿದ್ದ ಸಭಿಕರು ಹಾಗೂ ಪದವಿಯನ್ನು ಪಡೆದುಕೊಳ್ಳುತ್ತಿದ್ದ 48 ಮಂದಿ ವಿದ್ಯಾರ್ಥಿಗಳನ್ನು ಸಂಬೋಧಿಸುತ್ತಾ, “ಯೆಹೋವನ ಆಶೀರ್ವಾದವು ಭಾಗ್ಯದಾಯಕ” ಎಂಬ ವಿಷಯದ ಕುರಿತು ಡಾನ್‌ ಆ್ಯಡಮ್ಸ್‌ ಮಾತಾಡಿದರು. ಅವರ ಭಾಷಣವು ಜ್ಞಾನೋಕ್ತಿ 10:22ರ ಮೇಲೆ ಆಧಾರಿತವಾಗಿತ್ತು. ಯೆಹೋವನ ಸೇವಕರು ತಮ್ಮ ಜೀವಿತಗಳಲ್ಲಿ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವಾಗ, ಆತನೇ ಅವರನ್ನು ಪೋಷಿಸುತ್ತಾನೆ ಮತ್ತು ಆಶೀರ್ವದಿಸುತ್ತಾನೆ ಎಂದು ಅವರು ಸಭಿಕರಿಗೆ ನೆನಪು ಹುಟ್ಟಿಸಿದರು. ‘ಮಕೆದೋನ್ಯಕ್ಕೆ ಬಂದು ನೆರವಾಗಬೇಕೆಂದು’ ಅಪೊಸ್ತಲ ಪೌಲನು ಆಮಂತ್ರಿಸಲ್ಪಟ್ಟಾಗ ಅವನು ಯಾವ ರೀತಿಯ ಸಿದ್ಧಮನಸ್ಸನ್ನು ತೋರಿಸಿದನೋ ಅಂತಹದ್ದೇ ಸಿದ್ಧಮನಸ್ಸಿನೊಂದಿಗೆ ತಮ್ಮ ಹೊಸ ನೇಮಕಗಳನ್ನು ಅಂಗೀಕರಿಸುವಂತೆ ಅವರು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. (ಅ. ಕೃತ್ಯಗಳು 16:9) ಪೌಲನು ಅನೇಕ ಕಷ್ಟತೊಂದರೆಗಳನ್ನು ಎದುರಿಸಬೇಕಾಗಿತ್ತಾದರೂ, ಅವನನ್ನು ಎಲ್ಲಿಗೆ ಕಳುಹಿಸಲಾಗುತ್ತದೋ ಅಲ್ಲಿಗೆ ಹೋಗಿ ಸುವಾರ್ತೆಯನ್ನು ಸಾರಲು ಅವನು ಮನಃಪೂರ್ವಕವಾಗಿ ಸಿದ್ಧನಿದ್ದುದರಿಂದ, ಅವನಿಗೆ ಅನೇಕ ಆಶೀರ್ವಾದಗಳು ಸಿಕ್ಕಿದವು.

ಪದವಿಯನ್ನು ಪಡೆದುಕೊಳ್ಳುತ್ತಿದ್ದ ತರಗತಿಯ ಸದಸ್ಯರು ತಮ್ಮ ಐದು ತಿಂಗಳ ಬೈಬಲ್‌ ಅಭ್ಯಾಸವನ್ನು ಹಾಗೂ ಮಿಷನೆರಿ ಕೆಲಸಕ್ಕಾಗಿರುವ ಸಿದ್ಧತೆಯ ತರಬೇತಿಯನ್ನು ಮುಗಿಸಿದ್ದರು. ಆದರೂ, ಅವರು ಹೀಗೆಯೇ ಕಲಿಯುತ್ತಾ ಮುಂದುವರಿಯುವಂತೆ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಡ್ಯಾನಿಯೆಲ್‌ ಸಿಡ್ಲಿಕ್‌ ಅವರನ್ನು ಪ್ರೋತ್ಸಾಹಿಸಿದರು. “ನಿಜವಾದ ಶಿಷ್ಯರಾಗಿರಿ” ಎಂಬ ಮುಖ್ಯ ವಿಷಯದ ಕುರಿತಾಗಿ ಮಾತಾಡುತ್ತಾ ಅವರು ಹೇಳಿದ್ದು: “ಶಿಷ್ಯರಾಗಿರುವುದು ಎಂಬುದರ ಅರ್ಥ ಯೇಸುವಿನ ಮಾತುಗಳಿಗೆ ಯಾವಾಗಲೂ ವಿಧೇಯತೆ ತೋರಿಸುತ್ತಾ ಇರುವುದು ಎಂದಾಗಿದೆ. ಅವನ ಮಾತುಗಳಿಗೆ, ಅವನ ಸಂದೇಶಕ್ಕೆ, ಅವನ ಬೋಧನೆಗಳಿಗೆ ಕಿವಿಗೊಡಲು ನಾವು ಯಾವಾಗಲೂ ಸಿದ್ಧರಾಗಿರುವುದು ಇದರಲ್ಲಿ ಒಳಗೂಡಿದೆ.” ಅವರು ಹೇಳಿದ್ದೇನೆಂದರೆ, ಕ್ರಿಸ್ತನ ಶಿಷ್ಯರು ತಮ್ಮ ಯಜಮಾನನ ಮಾತಿಗೆ ಕಿವಿಗೊಡದೆ ಯಾವ ನಿರ್ಣಯಗಳನ್ನೂ ಮಾಡುವುದಿಲ್ಲ; ಏಕೆಂದರೆ ದೇವರ ಜ್ಞಾನವು ಕ್ರಿಸ್ತನ ಜೀವಿತದಲ್ಲಿ ಅಡಕವಾಗಿದೆ. (ಕೊಲೊಸ್ಸೆ 2:2-3) ನಮ್ಮಲ್ಲಿ ಯಾರೂ ಒಂದು ಬಾರಿ ಮಾತ್ರ ಯೇಸುವಿನ ಮಾತುಗಳಿಗೆ ಕಿವಿಗೊಟ್ಟು, ಅವನ ಕುರಿತು ಈಗ ನಮಗೆ ಎಲ್ಲಾ ತಿಳಿದಿದೆ ಎಂಬ ತೀರ್ಮಾನಕ್ಕೆ ಬರಸಾಧ್ಯವಿಲ್ಲ. ಆದುದರಿಂದ, ಪದವೀಧರರು ಕ್ರೈಸ್ತ ಸತ್ಯವನ್ನು ಕಲಿಯುತ್ತಾ, ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುತ್ತಾ, ಅದನ್ನು ಇತರರಿಗೆ ಬೋಧಿಸುತ್ತಾ ಮುಂದುವರಿಯುವಂತೆ ಸಹೋದರ ಸಿಡ್ಲಿಕ್‌ ಉತ್ತೇಜಿಸಿದರು.​—ಯೋಹಾನ 8:​31, 32.

ದೇವರ ಸೇವೆಯಲ್ಲಿ ಆನಂದವನ್ನು ಕಾಪಾಡಿಕೊಳ್ಳಬೇಕಾದರೆ, ಒಬ್ಬನು ಶಿಸ್ತನ್ನೂ ತಿದ್ದುಪಾಟನ್ನೂ ಅಂಗೀಕರಿಸಲು ಸಿದ್ಧನಿರಬೇಕು. ಗಿಲ್ಯಡ್‌ ಶಾಲೆಯ ಶಿಕ್ಷಕರಾದ ಲಾರನ್ಸ್‌ ಬೊವೆನ್‌ ಅವರು “ನಿಮ್ಮ ಅಂತರಿಂದ್ರಿಯವು ನಿಮ್ಮನ್ನು ತಿದ್ದುತ್ತದೋ?” ಎಂಬ ಪ್ರಶ್ನೆಯನ್ನು ಕೇಳಿದರು. ಬೈಬಲಿನಲ್ಲಿ ಸಾಂಕೇತಿಕ ಅಂತರಿಂದ್ರಿಯವು (ಮೂತ್ರಕೋಶಗಳು), ಒಬ್ಬನ ಗಾಢವಾದ ಆಲೋಚನೆಗಳು ಹಾಗೂ ಭಾವನೆಗಳನ್ನು ಸೂಚಿಸುತ್ತವೆ ಎಂಬುದನ್ನು ಅವರು ತೋರಿಸಿದರು. ದೇವರ ವಾಕ್ಯದ ಪ್ರೇರಿತ ಬುದ್ಧಿವಾದವು ಒಬ್ಬನ ವ್ಯಕ್ತಿತ್ವದ ಆಂತರ್ಯವನ್ನು ಪ್ರವೇಶಿಸಿರುವಲ್ಲಿ, ಅಂತರಿಂದ್ರಿಯವು ಅವನನ್ನು ತಿದ್ದಬಲ್ಲದು. (ಕೀರ್ತನೆ 16:7; ಯೆರೆಮೀಯ 17:10) ಒಬ್ಬ ವ್ಯಕ್ತಿಯ ನಂಬಿಗಸ್ತ ಜೀವನಮಾರ್ಗವು ಯೆಹೋವನ ಮೇಲೆ ಗಾಢವಾದ ಪರಿಣಾಮವನ್ನು ಬೀರಸಾಧ್ಯವಿದೆ. ಜ್ಞಾನೋಕ್ತಿ 23:​15, 16ನ್ನು ಓದಿದ ಬಳಿಕ ಭಾಷಣಕರ್ತರು ಕೇಳಿದ್ದು: “ನಿಮ್ಮ ಅಂತರಿಂದ್ರಿಯವು ನಿಮ್ಮನ್ನು ತಿದ್ದುತ್ತದೋ?” ತದನಂತರ ಅವರು ಕೂಡಿಸಿದ್ದು: “ಅದು ನಿಮ್ಮನ್ನು ತಿದ್ದಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಹೀಗೆ ನೀವು ಯೆಹೋವನು ಅತ್ಯಧಿಕವಾದ ಸಂತೋಷವನ್ನು ಅನುಭವಿಸುವಂತೆ ಮಾಡುವಿರಿ. ಆತನ ಹೃದಯಾಂತರಾಳದ ಭಾವನೆಗಳನ್ನು ಪ್ರಚೋದಿಸುವಿರಿ. ಹೌದು, ನೀವು ನಿಮ್ಮ ನೇಮಕಗಳಿಗೆ ನಿಷ್ಠೆಯಿಂದ ಅಂಟಿಕೊಳ್ಳುವಾಗ, ದೇವರ ಅಂತರಿಂದ್ರಿಯವು ಅತ್ಯಾನಂದಪಡುವಂತೆ ಮಾಡುವಿರಿ.”

ಈ ಕಾರ್ಯಕ್ರಮದ ಅಂತಿಮ ಭಾಷಣವು ಮಾರ್ಕ್‌ ನ್ಯೂಮರ್‌ ಅವರಿಂದ ಕೊಡಲ್ಪಟ್ಟಿತು. ಇವರು ಗಿಲ್ಯಡ್‌ ಶಾಲೆಯ ಶಿಕ್ಷಕರಾಗುವುದಕ್ಕೆ ಮೊದಲು ಕೆನ್ಯದಲ್ಲಿ ಮಿಷನೆರಿಯಾಗಿ ಸೇವೆಮಾಡುತ್ತಿದ್ದರು. “ಕಣ್ಣೆದುರಿಗಿರುವುದನ್ನು ಅನುಭವಿಸುವುದೇ ಲೇಸು” ಎಂಬುದು ಇವರ ಭಾಷಣದ ಮೇಲ್ವಿಷಯವಾಗಿದ್ದು, ಇರುವುದರಲ್ಲೇ ತೃಪ್ತಿಪಡುವುದರ ಪ್ರಮುಖತೆಯನ್ನು ಇದು ಒತ್ತಿಹೇಳಿತು. ಪ್ರಸಂಗಿ 6:9ಕ್ಕೆ ಹೊಂದಿಕೆಯಲ್ಲಿ, ಸಹೋದರ ನ್ಯೂಮರ್‌ ಅವರು ಶಿಫಾರಸ್ಸುಮಾಡಿದ್ದು: “ವಾಸ್ತವಿಕತೆಯನ್ನು ಅಂಗೀಕರಿಸಿ. ಅದೇ ‘ಕಣ್ಣೆದುರಿಗಿರುವುದನ್ನು ಅನುಭವಿಸುವಂತಿದೆ.’ ನೀವು ಏನನ್ನಾದರೂ ಮಾಡಲು ಬಯಸಿದ್ದು, ಅದನ್ನು ಮಾಡುತ್ತಿಲ್ಲವಾದಲ್ಲಿ, ಅದರ ಬಗ್ಗೆ ಕನಸು ಕಾಣುತ್ತಾ ಇರುವ ಬದಲು, ನಿಮ್ಮ ಸದ್ಯದ ಸನ್ನಿವೇಶಗಳನ್ನೇ ಅತ್ಯುತ್ತಮವಾಗಿ ಸದುಪಯೋಗಿಸಿಕೊಳ್ಳುವುದರ ಬಗ್ಗೆ ಗಮನಕೊಡಿ. ಕನಸಿನ ಲೋಕದಲ್ಲಿ ಜೀವಿಸುವುದು, ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದು, ಅಥವಾ ನಿಮ್ಮ ನೇಮಕದ ನಕಾರಾತ್ಮಕ ಅಂಶಗಳ ಬಗ್ಗೆ ಯಾವಾಗಲೂ ಚಿಂತಿಸುವುದು, ನಿಮ್ಮನ್ನು ಅಸಂತೋಷಗೊಳಿಸುವುದು ಮತ್ತು ನಿಮ್ಮಲ್ಲಿ ಅತೃಪ್ತಿಯನ್ನುಂಟುಮಾಡುವುದು.” ಹೌದು, ನಾವು ಎಲ್ಲೇ ಇರಲಿ ಅಥವಾ ಯಾವುದೇ ಸನ್ನಿವೇಶಗಳ ಕೆಳಗಿರಲಿ, ಇರುವ ಸನ್ನಿವೇಶಗಳಲ್ಲೇ ದೈವಿಕ ತೃಪ್ತಿಯನ್ನು ಬೆಳೆಸಿಕೊಳ್ಳುವುದಾದರೆ, ನಮ್ಮ ಮಹಾನ್‌ ಸೃಷ್ಟಿಕರ್ತನ ಸೇವೆಮಾಡುವುದರಲ್ಲಿ ನಾವು ಆನಂದವನ್ನು ಕಾಪಾಡಿಕೊಳ್ಳುವಂತೆ ಅದು ಮಾಡುವುದು.

ರಾಜ್ಯದ ಸೇವೆಯಲ್ಲಿ ಮತ್ತು ಗಿಲ್ಯಡ್‌ನಲ್ಲಿ ಆನಂದಭರಿತ ಅನುಭವಗಳು

ಆ ಭಾಷಣಗಳಿಂದ ಪ್ರಾಯೋಗಿಕ ಸಲಹೆಯನ್ನು ಪಡೆದುಕೊಂಡ ಬಳಿಕ, ತಮ್ಮ ಐದು ತಿಂಗಳ ಅಭ್ಯಾಸದ ಸಮಯದಲ್ಲಿ ಸಾರ್ವಜನಿಕ ಶುಶ್ರೂಷೆಯಲ್ಲಿ ಒಳಗೂಡಿದ್ದಾಗ ತಾವು ಆನಂದಿಸಿದ ಕೆಲವು ಅನುಭವಗಳನ್ನು ವಿದ್ಯಾರ್ಥಿಗಳು ತಿಳಿಸಿದರು. ಗಿಲ್ಯಡ್‌ ಶಾಲೆಯ ರೆಜಿಸ್ಟ್ರಾರ್‌ ಆಗಿರುವ ವಾಲೆಸ್‌ ಲಿವರೆನ್ಸ್‌ರ ಮಾರ್ಗದರ್ಶನದ ಕೆಳಗೆ, ದೇವರ ಶುಶ್ರೂಷಕರೋಪಾದಿ ತಾವು ಹೇಗೆ ಯೋಗ್ಯ ರೀತಿಯಲ್ಲಿ ನಡೆದುಕೊಂಡಿದ್ದೇವೆ ಎಂಬುದನ್ನು ಪದವಿ ಪಡೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳು ತಿಳಿಸಿದರು. (2 ಕೊರಿಂಥ 4:​2, NW) ದೇವದತ್ತ ಮನಸ್ಸಾಕ್ಷಿಯುಳ್ಳ ಕೆಲವರು ಸುವಾರ್ತೆಗೆ ಪ್ರತಿಕ್ರಿಯಿಸುವಂತೆ ಮಾಡಲು ಅವರು ಶಕ್ತರಾಗಿದ್ದರು. ಬೀದಿಯಲ್ಲಿ, ಮನೆಮನೆಯ ಸೇವೆಯಲ್ಲಿ ಮತ್ತು ಇನ್ನಿತರ ಸನ್ನಿವೇಶಗಳಲ್ಲಿ ತಾವು ಭೇಟಿಯಾದ ಪ್ರಾಮಾಣಿಕ ಹೃದಯದ ವ್ಯಕ್ತಿಗಳೊಂದಿಗೆ ಹೇಗೆ ಬೈಬಲ್‌ ಅಭ್ಯಾಸಗಳು ಆರಂಭಿಸಲ್ಪಟ್ಟವು ಎಂಬುದನ್ನು ವಿದ್ಯಾರ್ಥಿಗಳ ಅನುಭವಗಳು ತೋರಿಸಿದವು. ಬೇರೆ ಬೇರೆ ಸಂದರ್ಭಗಳಲ್ಲಿ, ಯೆಹೋವನ ಸಂಸ್ಥೆಯ ಬೈಬಲ್‌ ಆಧಾರಿತ ಪ್ರಕಾಶನಗಳಲ್ಲಿ ಸತ್ಯವು ಒಳಗೂಡಿದೆ ಎಂದು ಆಸಕ್ತ ಜನರು ಹೇಳಿದರು. ಒಬ್ಬ ಸ್ತ್ರೀಯು ಬೈಬಲಿನ ಒಂದು ನಿರ್ದಿಷ್ಟ ವಚನಕ್ಕೆ ತುಂಬ ಸಕಾರಾತ್ಮಕವಾದ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಿದಳು. ಈಗ ಅವಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದಾಳೆ.

ತದನಂತರ, ಜೊಅಲ್‌ ಆ್ಯಡಮ್ಸ್‌ ಅವರು ಹಿಂದಿನ ತರಗತಿಗಳ ಗಿಲ್ಯಡ್‌ ಪದವೀಧರರ ಇಂಟರ್‌ವ್ಯೂ ಮಾಡಿದರು. “ಕಲಿಯುತ್ತಾ ಇರ್ರಿ, ಯೆಹೋವನ ಸೇವೆಮಾಡುತ್ತಾ ಇರ್ರಿ” ಎಂಬುದು ಅವರ ಭಾಷಣದ ಮೇಲ್ವಿಷಯವಾಗಿತ್ತು. ಯಾರನ್ನು ಇಂಟರ್‌ವ್ಯೂ ಮಾಡಲಾಯಿತೋ ಅವರು, ಹೊಸ ಮಿಷನೆರಿಗಳಿಗೆ ಸಮಯೋಚಿತವಾದ ಬುದ್ಧಿವಾದವನ್ನು ನೀಡಿದರು. ಗಿಲ್ಯಡ್‌ನ 26ನೆಯ ತರಗತಿಯ ಸದಸ್ಯರಾಗಿದ್ದ ಹ್ಯಾರೀ ಜಾನ್‌ಸನ್‌ ಅವರು ತಮ್ಮ ದಿನಗಳ ಕುರಿತು ಜ್ಞಾಪಿಸಿಕೊಳ್ಳುತ್ತಾ ಹೇಳಿದ್ದು: “ಯಾವಾಗಲೂ ಯೆಹೋವನು ತನ್ನ ಜನರನ್ನು ಮುನ್ನಡಿಸಿದ್ದಾನೆ ಮತ್ತು ಈಗಲೂ ಮುನ್ನಡಿಸುವನು ಎಂದು ನಮಗೆ ಕಲಿಸಲಾಗಿತ್ತು. ಆ ದೃಢಭರವಸೆಯು ಈ ಎಲ್ಲ ವರ್ಷಗಳಲ್ಲಿ ನಮಗೆ ಉತ್ತೇಜನದಾಯಕವಾಗಿ ಕಾರ್ಯನಡೆಸಿದೆ.” ಗಿಲ್ಯಡ್‌ನ 53ನೆಯ ತರಗತಿಯ ಸದಸ್ಯರಾಗಿದ್ದ ವಿಲ್ಯಮ್‌ ನಾನ್‌ಕೀಸ್‌ ಅವರು ಪದವೀಧರರಿಗೆ ಸಲಹೆ ನೀಡಿದ್ದು: “ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ ಬೈಬಲಿನ ಮೂಲತತ್ತ್ವಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಿ, ಮತ್ತು ನಿಮ್ಮ ಜೀವಿತದಲ್ಲಿ ಈಗ ಹಾಗೂ ಸದಾಕಾಲಕ್ಕೂ ನೀವು ಮಾಡಲಿರುವ ಎಲ್ಲ ನಿರ್ಣಯಗಳಿಗೆ ಅವುಗಳನ್ನು ಅನ್ವಯಿಸಿರಿ. ಇದರ ಫಲಿತಾಂಶವಾಗಿ, ನಿಮ್ಮ ನೇಮಕಗಳಿಗೆ ನೀವು ಭದ್ರವಾಗಿ ಅಂಟಿಕೊಂಡಿರುವಿರಿ ಮತ್ತು ಯೆಹೋವನ ಹೇರಳವಾದ ಆಶೀರ್ವಾದವು ನಿಮ್ಮ ಮೇಲಿರುವುದು.”

ಕಾರ್ಯಕ್ರಮದಲ್ಲಿನ ತಮ್ಮ ಭಾಗಕ್ಕಾಗಿ ರಿಚರ್ಡ್‌ ರೈಅನ್‌ ಅವರು, “ಯೆಹೋವನ ಚಿತ್ತವನ್ನು ಮಾಡಲು ಬಲಪಡಿಸಲ್ಪಟ್ಟವರು” ಎಂಬ ಮೇಲ್ವಿಷಯವನ್ನು ಆಯ್ಕೆಮಾಡಿಕೊಂಡಿದ್ದರು. ಅವರು ಇಂಟರ್‌ವ್ಯೂ ಮಾಡಿದವರಲ್ಲಿ ಜಾನ್‌ ಕುರ್ಟ್ಸ್‌ ಎಂಬ ಸಹೋದರರು ಒಬ್ಬರಾಗಿದ್ದರು. ಜಾನ್‌ ಕುರ್ಟ್ಸ್‌ ಅವರು 30ನೆಯ ತರಗತಿಯ ಪದವೀಧರರಾಗಿದ್ದು, ಸ್ಪೆಯ್ನ್‌ನಲ್ಲಿ ಒಬ್ಬ ಮಿಷನೆರಿಯೋಪಾದಿ 41ಕ್ಕಿಂತಲೂ ಹೆಚ್ಚಿನ ವರ್ಷಗಳನ್ನು ಕಳೆದಿದ್ದರು. ಗಿಲ್ಯಡ್‌ ವ್ಯಾಸಂಗಕ್ರಮದ ಕುರಿತು ಕೇಳಿದಾಗ ಸಹೋದರ ಕುರ್ಟ್ಸ್‌ ಹೇಳಿದ್ದು: “ಮುಖ್ಯ ಪಠ್ಯಪುಸ್ತಕವು ಬೈಬಲ್‌ ಆಗಿದೆ. ಮತ್ತು ಬೈಬಲನ್ನು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯಮಾಡಲಿಕ್ಕಾಗಿ ಬೈಬಲ್‌ ಅಭ್ಯಾಸ ಸಹಾಯಕಗಳಿವೆ. ಇವು ಎಲ್ಲರಿಗೂ ಲಭ್ಯಗೊಳಿಸಲ್ಪಟ್ಟಿವೆ. ಗಿಲ್ಯಡ್‌ನಲ್ಲಿ ರಹಸ್ಯವಾದ ಯಾವುದೇ ಮಾಹಿತಿಯು ಒದಗಿಸಲ್ಪಡುವುದಿಲ್ಲ. ಗಿಲ್ಯಡ್‌ನಲ್ಲಿ ಒದಗಿಸಲ್ಪಡುವ ಮಾಹಿತಿಯು ಎಲ್ಲ ಸಾಕ್ಷಿಗಳಿಗೂ ಒದಗಿಸಲ್ಪಡುತ್ತದೆ ಎಂಬುದನ್ನು ನಾನು ಯಾವಾಗಲೂ ಒತ್ತಿಹೇಳುತ್ತೇನೆ.”

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಸಹೋದರ ಗೆರಿಟ್‌ ಲಾಶ್‌ ಅವರು, “ಯೆಹೋವನ ರೆಕ್ಕೆಗಳ ಕೆಳಗೆ ಆಶ್ರಯಿಸುವುದು” ಎಂಬ ವಿಷಯದ ಕುರಿತು ಮಾತಾಡುವ ಮೂಲಕ ಆ ಆತ್ಮಿಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ದೇವರು ತನ್ನ ನಂಬಿಗಸ್ತ ಸೇವಕರನ್ನು ಹೇಗೆ ಸಂರಕ್ಷಿಸುತ್ತಾನೆ ಮತ್ತು ಅವರಿಗೆ ಬೆಂಬಲ ನೀಡುತ್ತಾನೆ ಎಂಬುದು ಬೈಬಲಿನಲ್ಲಿ ಹದ್ದಿನ ರೆಕ್ಕೆಗಳ ಮೂಲಕ ದೃಷ್ಟಾಂತಿಸಲ್ಪಟ್ಟಿದೆ ಎಂಬುದನ್ನು ಅವರು ವಿವರಿಸಿದರು. (ಧರ್ಮೋಪದೇಶಕಾಂಡ 32:​11, 12; ಕೀರ್ತನೆ 91:4) ಕೆಲವೊಮ್ಮೆ ಒಂದು ದೊಡ್ಡ ಹದ್ದು ಅನೇಕ ತಾಸುಗಳ ವರೆಗೆ ತನ್ನ ರೆಕ್ಕೆಗಳನ್ನು ಅಗಲಿಸಿಕೊಂಡು ಅದರ ಕೆಳಗೆ ತನ್ನ ಮರಿಗಳನ್ನು ಕಾಪಾಡುತ್ತದೆ. ಅನೇಕವೇಳೆ, ತಣ್ಣಗಿನ ಗಾಳಿಯಿಂದ ತನ್ನ ಮರಿಗಳನ್ನು ರಕ್ಷಿಸಲಿಕ್ಕಾಗಿ ತಾಯಿ ಹದ್ದು ತನ್ನ ರೆಕ್ಕೆಗಳನ್ನು ಮರಿಗಳ ಸುತ್ತಲೂ ಹೊದಿಸಬಹುದು. ಇದೇ ರೀತಿಯಲ್ಲಿ ಮತ್ತು ತನ್ನ ಉದ್ದೇಶಕ್ಕೆ ಅನುಸಾರವಾಗಿ ಯೆಹೋವನು ತನ್ನ ನಂಬಿಗಸ್ತ ಸೇವಕರ ಸಹಾಯಕ್ಕೆ ಬರಬಲ್ಲನು; ಅದರಲ್ಲೂ ವಿಶೇಷವಾಗಿ ಅವರು ಆತ್ಮಿಕ ಪರೀಕ್ಷೆಗಳನ್ನು ಎದುರಿಸುವಾಗ ಯೆಹೋವನ ಸಹಾಯ ಖಂಡಿತವಾಗಿಯೂ ಅವರಿಗೆ ಸಿಗುತ್ತದೆ. ತನ್ನ ಸೇವಕರು ಸಹಿಸಬಹುದಾದ ಶೋಧನೆಗಿಂತ ಹೆಚ್ಚಿನದ್ದನ್ನು ಯೆಹೋವನು ಅನುಮತಿಸುವುದಿಲ್ಲ ಮತ್ತು ಆ ಶೋಧನೆಯನ್ನು ಸಹಿಸಿಕೊಳ್ಳಲು ಶಕ್ತರಾಗುವಂತೆ ಅದರಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಆತನು ಸಿದ್ಧಮಾಡುತ್ತಾನೆ. (1 ಕೊರಿಂಥ 10:13) ಸಹೋದರ ಲಾಶ್‌ ಹೀಗೆ ಹೇಳುತ್ತಾ ತಮ್ಮ ಭಾಷಣವನ್ನು ಮುಗಿಸಿದರು: “ಆತ್ಮಿಕವಾಗಿ ಸಂರಕ್ಷಿಸಲ್ಪಡುತ್ತಾ ಉಳಿಯಬೇಕಾದರೆ ನಾವು ಯೆಹೋವನ ರೆಕ್ಕೆಗಳ ಕೆಳಗೆ ಆಶ್ರಯವನ್ನು ಪಡೆದುಕೊಳ್ಳಬೇಕು. ನಾವು ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳಬಾರದು ಎಂಬುದೇ ಇದರ ಅರ್ಥ. ನಾವು ಯಾವಾಗಲೂ ಯೆಹೋವನಿಗೆ ಮತ್ತು ಆತನ ತಾಯಿಸದೃಶ ಸಂಸ್ಥೆಗೆ ನಿಕಟವಾಗಿರೋಣ. ಅವರ ಮಾರ್ಗದರ್ಶನ ಹಾಗೂ ಪ್ರೀತಿಯ ಸಲಹೆಯಿಂದ ನಮ್ಮನ್ನು ಎಂದೂ ಪ್ರತ್ಯೇಕಿಸಿಕೊಳ್ಳದಿರೋಣ.”

ಲೋಕದಾದ್ಯಂತ ಇರುವ ಹಿತೈಷಿಗಳಿಂದ ಬಂದ ಟೆಲಿಗ್ರಾಮ್‌ಗಳು ಹಾಗೂ ಪತ್ರಗಳನ್ನು ಕಾರ್ಯಕ್ರಮದ ಅಧ್ಯಕ್ಷರು ಓದಿದರು. ತದನಂತರ ಡಿಪ್ಲೋಮಗಳನ್ನು ಹಂಚುವ ಸಮಯ ಬಂತು. ಆರಂಭದಲ್ಲಿ ಗಿಲ್ಯಡ್‌ ಶಾಲೆಯು ಸ್ಥಾಪಿಸಲ್ಪಟ್ಟಾಗ, ಐದು ವರ್ಷಗಳ ವರೆಗೆ ಮಾತ್ರ ನಿಗದಿತ ಸಂಖ್ಯೆಯ ತರಗತಿಗಳನ್ನು ನಡೆಸುವ ಯೋಜನೆಯನ್ನು ಮಾಡಲಾಗಿತ್ತು. ಆದರೆ ಸುಮಾರು 58 ವರ್ಷಗಳ ವರೆಗೆ ಈ ಶಾಲೆ ಕಾರ್ಯನಡಿಸುವಂತೆ ಯೆಹೋವ ದೇವರು ಮಾಡಿದ್ದಾನೆ. ತಮ್ಮ ಆರಂಭದ ಹೇಳಿಕೆಯಲ್ಲಿ ಸಹೋದರ ಬಾರ್ಬರ್‌ ಹೀಗೆ ಹೇಳಿದ್ದರು: “1943ರಲ್ಲಿ ಗಿಲ್ಯಡ್‌ ಶಾಲೆಯ ಪ್ರಾರಂಭೋತ್ಸವವು ನಡೆದಂದಿನಿಂದ, ಗಿಲ್ಯಡ್‌ ಪದವೀಧರರು ನಿಜವಾಗಿಯೂ ಎಷ್ಟು ಅದ್ಭುತಕರವಾದ ದಾಖಲೆಯನ್ನು ಸ್ಥಾಪಿಸಿದ್ದಾರೆ! ಅವರೆಲ್ಲರ ಪ್ರಯತ್ನಗಳ ಫಲಿತಾಂಶವಾಗಿ, ಭೂಮಿಯ ನೂರಾರು ಸಾವಿರ ದೀನ ಜನರು ಯೆಹೋವನ ಮಹಿಮಾಭರಿತ ಸಂಸ್ಥೆಗೆ ಸೇರುವಂತಾಗಿದೆ.” ಹೌದು, ಲಕ್ಷಾಂತರ ಜನರು ರಾಜ್ಯದ ನಿರೀಕ್ಷೆಯಿಂದ ಆನಂದಭರಿತರಾಗಿರುವಂತೆ ಈ ಮಿಷನೆರಿ ಶಾಲೆಯು ಸಹಾಯಮಾಡಿದೆ.

[ಪುಟ 24ರಲ್ಲಿರುವ ಚೌಕ]

ತರಗತಿಯ ಸಂಖ್ಯಾಸಂಗ್ರಹಣಗಳು

ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 8

ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 18

ವಿದ್ಯಾರ್ಥಿಗಳ ಸಂಖ್ಯೆ: 48

ಸರಾಸರಿ ಪ್ರಾಯ: 34

ಸತ್ಯದಲ್ಲಿ ಸರಾಸರಿ ವರ್ಷಗಳು: 18

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13

[ಪುಟ 25ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 110ನೆಯ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.

(1) ವ್ಯಾಚೆಕ್‌, ಈ.; ಮ್ಯಾಡಲಿನ್‌, ಎಲ್‌.; ಎವನ್ಸ್‌, ಜಿ.; ವಾಟಾನಾಬೆ, ಕೆ. (2) ಟ್ರ್ಯಾಫರ್ಡ್‌, ಪಿ.; ಟರ್ಫ, ಜೆ.; ವಿಲ್ಸನ್‌, ಪಿ.; ವಿಲ್ಯಮ್ಸ್‌, ಆರ್‌.; ವೇಬರ್‌, ಎ. (3) ಜಾನ್ಸನ್‌, ಟಿ.; ಹನಾವ್‌, ಕೆ.; ಮಾರ್ಲೂ, ಎಫ್‌.; ಶಾರ್ಪಾಂಟ್ಯೆ, ಎಫ್‌.; ಪೆಕಮ್‌, ಆರ್‌.; ಆ್ಯಂಡ್ರಸಾಫ್‌, ಪಿ. (4) ಸೀಗರ್ಸ್‌, ಟಿ.; ಸೀಗರ್ಸ್‌, ಡಿ.; ಬೇಲಿ, ಪಿ.; ಬೇಲಿ, ಎಮ್‌.; ಮ್ಯಾಡಲಿನ್‌, ಕೆ.; ಲಿಪೋಲ್ಡ್‌, ಇ.; ಲಿಪೋಲ್ಡ್‌, ಟಿ. (5) ಎವನ್ಸ್‌, ಎನ್‌.; ಗೋಲ್ಡ್‌, ಆರ್‌.; ಬೋಲ್‌ಮನ್‌, ಐ.; ವ್ಯಾಚೆಕ್‌, ಆರ್‌.; ಊನ್‌ಜೀನ್‌, ಜೆ.; ವಿಲ್ಸನ್‌, ಎನ್‌. (6) ಟರ್ಫ, ಜೆ.; ಸೂಡೀಮ, ಎಲ್‌.; ಸೂಡೀಮ, ಆರ್‌.; ಬೇಂಟ್‌ಸಾನ್‌, ಸಿ.; ಬೇಂಟ್‌ಸಾನ್‌, ಜೆ.; ಗಲಾನೋ, ಎಮ್‌.; ಗಲಾನೋ, ಎಲ್‌. (7) ಪೆಕಮ್‌, ಟಿ.; ಮಾರ್ಲೂ, ಜೆ.; ಶಾರ್ಪಾಂಟ್ಯೆ, ಸಿ.; ಗೋಲ್ಡ್‌, ಎಮ್‌.; ಬೋಲ್‌ಮನ್‌, ಆರ್‌.; ಊನ್‌ಜೀನ್‌, ಎಫ್‌. (8) ವೇಬರ್‌, ಆರ್‌.; ಜಾನ್ಸನ್‌, ಬಿ.; ಹನಾವ್‌, ಡಿ.; ವಾಟಾನಾಬೆ, ವೈ.; ವಿಲ್ಯಮ್ಸ್‌, ಆರ್‌.; ಟ್ರ್ಯಾಫರ್ಡ್‌, ಜಿ.; ಆ್ಯಂಡ್ರಸಾಫ್‌, ಟಿ.