ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಕ್ಯವನ್ನು ಕೇಳಿ ಅದನ್ನು ಮರೆಯುವವರಾಗಬೇಡಿ

ವಾಕ್ಯವನ್ನು ಕೇಳಿ ಅದನ್ನು ಮರೆಯುವವರಾಗಬೇಡಿ

ವಾಕ್ಯವನ್ನು ಕೇಳಿ ಅದನ್ನು ಮರೆಯುವವರಾಗಬೇಡಿ

“ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ.”​—ಯಾಕೋಬ 1:22.

1. ಪುರಾತನ ಇಸ್ರಾಯೇಲಿನ ಜನರಿಗೆ, ಯಾವ ಅದ್ಭುತಗಳನ್ನು ಕಣ್ಣಾರೆ ನೋಡುವ ಸುಯೋಗ ಸಿಕ್ಕಿತು?

“ಅವಿಸ್ಮರಣೀಯ!” ಪುರಾತನ ಐಗುಪ್ತದಲ್ಲಿ ಯೆಹೋವನು ನಡೆಸಿದಂಥ ಅದ್ಭುತಗಳನ್ನು ಆ ಒಂದೇ ಶಬ್ದದಲ್ಲಿ ವರ್ಣಿಸಬಹುದು. ಹತ್ತು ಬಾಧೆಗಳಲ್ಲಿ ಒಂದೊಂದು ಬಾಧೆಯೂ ಭಯಪ್ರೇರಕವಾಗಿತ್ತೆಂಬುದು ನಿರಾಕರಿಸಲಾಗದ ಸಂಗತಿ. ಆ ಬಾಧೆಗಳ ನಂತರ, ಇಸ್ರಾಯೇಲ್‌ ಜನಾಂಗವು ಎರಡು ಭಾಗಗಳಾಗಿ ವಿಭಾಗಿಸಲ್ಪಟ್ಟ ಕೆಂಪು ಸಮುದ್ರವನ್ನು ದಾಟಿ, ಆಶ್ಚರ್ಯಕರವಾದ ರೀತಿಯಲ್ಲಿ ಬಿಡುಗಡೆ ಹೊಂದಿತು. (ಧರ್ಮೋಪದೇಶಕಾಂಡ 34:​10-12) ಆ ಘಟನೆಗಳನ್ನು ನೀವು ಕಣ್ಣಾರೆ ನೋಡುತ್ತಿದ್ದಲ್ಲಿ, ಅವುಗಳನ್ನು ನಡೆಸಿದವನನ್ನು ಬಹುಶಃ ಎಂದಿಗೂ ಮರೆಯುತ್ತಿರಲಿಲ್ಲ. ಆದರೆ, ಕೀರ್ತನೆಗಾರನು ಹಾಡಿದಂತೆ “ಐಗುಪ್ತದಲ್ಲಿ ಮಹತ್ತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡಿಸಿದ ತಮ್ಮ ರಕ್ಷಕನಾದ ದೇವರನ್ನು [ಇಸ್ರಾಯೇಲ್ಯರು] ಮರತೇ ಬಿಟ್ಟರು.”​—ಕೀರ್ತನೆ 106:​21, 22.

2. ದೇವರ ಶಕ್ತಿಶಾಲಿ ಕೃತ್ಯಗಳಿಗಾಗಿ ಇಸ್ರಾಯೇಲ್ಯರಿಗಿದ್ದ ಗಣ್ಯತೆಯು ಅಲ್ಪಕಾಲದ್ದಾಗಿತ್ತೆಂದು ಯಾವುದು ತೋರಿಸುತ್ತದೆ?

2 ಕೆಂಪು ಸಮುದ್ರವನ್ನು ದಾಟಿದ ನಂತರ, ಇಸ್ರಾಯೇಲ್ಯರು ‘ಯೆಹೋವನಿಗೆ ಭಯಪಟ್ಟು ಆತನಲ್ಲಿ ನಂಬಿಕೆಯಿಟ್ಟರು.’ (ವಿಮೋಚನಕಾಂಡ 14:31) ಇಸ್ರಾಯೇಲಿನ ಪುರುಷರು, ಯೆಹೋವನಿಗೆ ವಿಜಯ ಗೀತೆಯನ್ನು ಹಾಡುವುದರಲ್ಲಿ ಮೋಶೆಯೊಂದಿಗೆ ಜೊತೆಗೂಡಿದರು. ಮತ್ತು ಮಿರ್ಯಾಮಳೂ ಬೇರೆ ಸ್ತ್ರೀಯರೂ, ದಮ್ಮಡಿಗಳನ್ನು ಹಿಡಿದು ನಾಟ್ಯವಾಡಿದರು. (ವಿಮೋಚನಕಾಂಡ 15:​1, 20) ಹೌದು, ಯೆಹೋವನ ಶಕ್ತಿಶಾಲಿ ಕೃತ್ಯಗಳನ್ನು ನೋಡಿ ದೇವಜನರು ತುಂಬ ಪ್ರಭಾವಿತರಾಗಿದ್ದರು. ಆದರೆ, ಆ ಕೃತ್ಯಗಳನ್ನು ನಡೆಸುವಾತನಿಗಾಗಿದ್ದ ಅವರ ಗಣ್ಯತೆಯು ಅಲ್ಪಕಾಲದ್ದಾಗಿತ್ತು. ತದನಂತರ ಸ್ವಲ್ಪ ಸಮಯದೊಳಗೆಯೇ, ಅವರಲ್ಲಿ ಹೆಚ್ಚಿನವರು ತಮ್ಮ ಜ್ಞಾಪಕಶಕ್ತಿಗೆ ಲಕ್ವಹೊಡೆದಿತ್ತೊ ಎಂಬಂತೆ ನಡೆದುಕೊಂಡರು. ಅವರು ಯೆಹೋವನ ವಿರುದ್ಧ ಗುಣುಗುಟ್ಟುವವರೂ, ದೂರುಹೇಳುವವರೂ ಆಗಿ ಪರಿಣಮಿಸಿದರು. ಕೆಲವರು ವಿಗ್ರಹಾರಾಧನೆ ಮತ್ತು ಲೈಂಗಿಕ ಅನೈತಿಕತೆಯನ್ನೂ ನಡೆಸಿದರು.​—ಅರಣ್ಯಕಾಂಡ 14:27; 25:​1-9.

ನಾವು ಮರೆತುಬಿಡುವಂತೆ ಯಾವುದು ಮಾಡಬಹುದು?

3. ನಮ್ಮ ಅಪರಿಪೂರ್ಣ ಸ್ವಭಾವದಿಂದಾಗಿ ನಾವೇನನ್ನು ಮರೆತುಬಿಡಸಾಧ್ಯವಿದೆ?

3 ಇಸ್ರಾಯೇಲ್ಯರ ಗಣ್ಯತೆಯ ಕೊರತೆಯು ನಿಜವಾಗಿಯೂ ಗಲಿಬಿಲಿಗೊಳಿಸುವಂಥ ಸಂಗತಿಯಾಗಿದೆ. ಆದರೆ ನಮಗೂ ಹಾಗೆಯೇ ಆಗಬಹುದು. ನಾವು ಅಂಥ ದೈವಿಕ ಅದ್ಭುತಕಾರ್ಯಗಳನ್ನು ಕಣ್ಣಾರೆ ನೋಡಿಲ್ಲವೆಂಬುದು ನಿಜ. ಹಾಗಿದ್ದರೂ, ನಮ್ಮ ಜೀವಿತದಲ್ಲೂ ಖಂಡಿತವಾಗಿಯೂ ಅವಿಸ್ಮರಣೀಯವಾದ ಸಂದರ್ಭಗಳು ಇರಬಹುದು. ನಾವು ಬೈಬಲಿನ ಸತ್ಯವನ್ನು ಸ್ವೀಕರಿಸಿದಂಥ ಸಮಯ ನಮ್ಮಲ್ಲಿ ಕೆಲವರಿಗೆ ಈಗಲೂ ನೆನಪಿರಬಹುದು. ನಾವು ಯೆಹೋವನಿಗೆ ಸಮರ್ಪಣೆಯನ್ನು ಮಾಡುತ್ತಾ ಹೇಳಿದ ಪ್ರಾರ್ಥನೆ ಮತ್ತು ಸತ್ಕ್ರೈಸ್ತರೋಪಾದಿ ನಾವು ನೀರಿನಲ್ಲಿ ದೀಕ್ಷಾಸ್ನಾನವನ್ನು ತೆಗೆದುಕೊಂಡದ್ದು ಆನಂದಭರಿತವಾಗಿದ್ದ ಸಮಯಗಳಾಗಿದ್ದವು. ನಮ್ಮಲ್ಲಿ ಅನೇಕರು ನಮ್ಮ ಜೀವಿತದ ಒಂದಲ್ಲ ಒಂದು ಹಂತದಲ್ಲಿ ಯೆಹೋವನ ಸಹಾಯಹಸ್ತವನ್ನು ಅನುಭವಿಸಿದ್ದೇವೆ. (ಕೀರ್ತನೆ 118:15) ಎಲ್ಲಕ್ಕಿಂತಲೂ ಹೆಚ್ಚಾಗಿ, ದೇವರ ಸ್ವಂತ ಮಗನಾದ ಯೇಸು ಕ್ರಿಸ್ತನ ಮೂಲಕ ನಾವು ರಕ್ಷಣೆಯ ನಿರೀಕ್ಷೆಯನ್ನು ಪಡೆದಿದ್ದೇವೆ. (ಯೋಹಾನ 3:16) ಹಾಗಿದ್ದರೂ, ನಮ್ಮ ಅಪರಿಪೂರ್ಣ ಸ್ವಭಾವದಿಂದಾಗಿ ನಾವು ಕೆಟ್ಟ ಅಭಿಲಾಷೆಗಳು ಮತ್ತು ಜೀವನದ ಚಿಂತೆಗಳನ್ನು ಎದುರಿಸುತ್ತಿರುವಾಗ, ಯೆಹೋವನು ನಮಗಾಗಿ ಮಾಡಿರುವ ಎಲ್ಲ ಒಳ್ಳೆಯ ಕಾರ್ಯಗಳನ್ನು ನಾವು ಸಹ ಸುಲಭವಾಗಿ ಮರೆತುಬಿಡಬಹುದು.

4, 5. (ಎ) ವಾಕ್ಯವನ್ನು ಕೇಳಿ ಮರೆಯುವವರಾಗುವ ಅಪಾಯದ ಕುರಿತಾಗಿ ಯಾಕೋಬನು ಹೇಗೆ ಎಚ್ಚರಿಸುತ್ತಾನೆ? (ಬಿ) ಒಬ್ಬ ಮನುಷ್ಯ ಮತ್ತು ಕನ್ನಡಿಯ ಕುರಿತಾದ ಯಾಕೋಬನ ದೃಷ್ಟಾಂತವನ್ನು ನಾವು ಹೇಗೆ ಅನ್ವಯಿಸಬಹುದು?

4 ಯೇಸುವಿನ ಮಲತಮ್ಮನಾದ ಯಾಕೋಬನು, ಜೊತೆ ಕ್ರೈಸ್ತರಿಗೆ ಬರೆದ ಪತ್ರದಲ್ಲಿ, ವಾಕ್ಯವನ್ನು ಕೇಳಿ ಅದನ್ನು ಮರೆಯುವವರಾಗುವ ಅಪಾಯದ ಕುರಿತಾಗಿ ಎಚ್ಚರಿಸಿದನು. ಅವನು ಬರೆದುದು: “ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ. ಯಾವನಾದರೂ ವಾಕ್ಯವನ್ನು ಕೇಳುವವನಾದರೂ ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು; ಇವನು ತನ್ನನ್ನು ನೋಡಿಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು.” (ಯಾಕೋಬ 1:22-24) ಯಾಕೋಬನ ಈ ಮಾತುಗಳ ಅರ್ಥವೇನಾಗಿತ್ತು?

5 ನಾವು ಬೆಳಗ್ಗೆ ಎದ್ದಾಕ್ಷಣ, ಸಾಮಾನ್ಯವಾಗಿ ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿ, ನಮ್ಮ ತೋರಿಕೆಯಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಬೇಕಾದಲ್ಲಿ ಅದನ್ನು ಮಾಡುತ್ತೇವೆ. ಆದರೆ ಇಡೀ ದಿನ ನಾವು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿರುವಾಗ, ನಮ್ಮ ಮನಸ್ಸು ಬೇರೆ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ನಾವು ಕನ್ನಡಿಯಲ್ಲಿ ಏನನ್ನು ನೋಡಿದ್ದೇವೊ ಅದರ ಕುರಿತು ಯೋಚಿಸುವುದಿಲ್ಲ. ಇದು ಆತ್ಮಿಕ ಅರ್ಥದಲ್ಲೂ ಆಗಬಲ್ಲದು. ನಾವು ದೇವರ ವಾಕ್ಯದಲ್ಲಿ ನೋಡುವಾಗ, ಯೆಹೋವನು ನಾವು ಹೇಗಿರುವಂತೆ ಅಪೇಕ್ಷಿಸುತ್ತಾನೆ ಮತ್ತು ನಾವು ನಿಜವಾಗಿ ಹೇಗಿದ್ದೇವೆಂಬುದನ್ನು ಹೋಲಿಸಿ ನೋಡಲು ಶಕ್ತರಾಗುತ್ತೇವೆ. ಹೀಗೆ ನಾವು ನಮ್ಮ ಬಲಹೀನತೆಗಳೊಂದಿಗೆ ಮುಖಾಮುಖಿಯಾಗಿ ನಿಂತಿರುತ್ತೇವೆ. ಈ ಅರಿವು, ನಾವು ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ಮಾಡುವಂತೆ ಪ್ರಚೋದಿಸಬೇಕು. ಆದರೆ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಮುಳುಗಿ, ನಮ್ಮ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವಾಗ, ನಾವು ಆತ್ಮಿಕ ವಿಷಯಗಳ ಕುರಿತಾಗಿ ಯೋಚಿಸುವುದನ್ನು ಸುಲಭವಾಗಿ ನಿಲ್ಲಿಸಿಬಿಡಬಹುದು. (ಮತ್ತಾಯ 5:3; ಲೂಕ 21:34) ಇದು, ನಮ್ಮ ಪರವಾಗಿ ದೇವರು ಮಾಡಿರುವ ಪ್ರೀತಿಯ ಕಾರ್ಯಗಳನ್ನು ನಾವು ಮರೆತುಬಿಟ್ಟಂತೆ ಆಗುತ್ತದೆ. ಹೀಗೆ ಆಗುವಾಗ, ನಾವು ಪಾಪಪೂರ್ಣ ಪ್ರವೃತ್ತಿಗಳಿಗೆ ಸುಲಭವಾಗಿ ಬಲಿಬೀಳುವ ಸಾಧ್ಯತೆಗಳಿರುತ್ತವೆ.

6. ಯಾವ ಶಾಸ್ತ್ರೀಯ ಚರ್ಚೆಯು ನಾವು ಯೆಹೋವನ ವಾಕ್ಯವನ್ನು ಮರೆಯದಂತೆ ಸಹಾಯಮಾಡಬಲ್ಲದು?

6 ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದ ತನ್ನ ಪ್ರಥಮ ಪ್ರೇರಿತ ಪತ್ರದಲ್ಲಿ, ಅರಣ್ಯದಲ್ಲಿದ್ದ ಮರೆಯುವ ಸ್ವಭಾವದ ಇಸ್ರಾಯೇಲ್ಯರ ಕುರಿತಾಗಿ ತಿಳಿಸುತ್ತಾನೆ. ಪ್ರಥಮ ಶತಮಾನದ ಕ್ರೈಸ್ತರು ಪೌಲನ ಮಾತುಗಳಿಂದ ಪ್ರಯೋಜನಹೊಂದಿದಂತೆ, ಅವನು ಬರೆದಂಥ ವಿಷಯವನ್ನು ಪುನರ್ವಿಮರ್ಶಿಸುವುದರಿಂದ, ಯೆಹೋವನ ವಾಕ್ಯವನ್ನು ಮರೆಯದಂತೆ ನಮಗೂ ಸಹಾಯ ಸಿಗುವುದು. ಆದುದರಿಂದ ನಾವು ಈಗ 1 ಕೊರಿಂಥ 10:​1-12ನ್ನು ಪರಿಗಣಿಸೋಣ.

ಲೌಕಿಕ ಆಸೆಗಳನ್ನು ತೊರೆಯಿರಿ

7. ಯೆಹೋವನಿಗೆ ತಮ್ಮ ಮೇಲಿದ್ದ ಪ್ರೀತಿಯ ಯಾವ ಅಲ್ಲಗಳೆಯಲಾಗದಂಥ ಪುರಾವೆಯನ್ನು ಇಸ್ರಾಯೇಲ್ಯರು ಪಡೆದುಕೊಂಡರು?

7 ಇಸ್ರಾಯೇಲ್ಯರ ಕುರಿತಾಗಿ ಪೌಲನು ಏನು ಹೇಳಿದನೊ ಅದು ಕ್ರೈಸ್ತರಿಗಾಗಿ ಒಂದು ಎಚ್ಚರಿಕೆಯಾಗಿದೆ. ಪೌಲನು ಬರೆದ ವಿಷಯದಲ್ಲಿ ಒಂದು ಭಾಗವು ಹೀಗಿದೆ: “ಸಹೋದರರೇ, ಮುಂದಿನ ಸಂಗತಿಯಲ್ಲಿ ನೀವು ಲಕ್ಷ್ಯವಿಡಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅದೇನಂದರೆ, ನಮ್ಮ ಪಿತೃಗಳೆಲ್ಲರೂ ಮೇಘದ ನೆರಳಿನಲ್ಲಿದ್ದರು; ಅವರೆಲ್ಲರೂ ಸಮುದ್ರವನ್ನು ದಾಟಿಹೋದರು; ಅವರೆಲ್ಲರೂ ಮೋಶೆಯ ಶಿಷ್ಯರಾಗುವದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು.” (1 ಕೊರಿಂಥ 10:1-4) ಮೋಶೆಯ ದಿನದ ಇಸ್ರಾಯೇಲ್ಯರು, ದೇವರ ಶಕ್ತಿಯ ಮಹಾ ಪ್ರದರ್ಶನಗಳನ್ನು ನೋಡಿದ್ದರು. ಇವುಗಳಲ್ಲಿ, ಅವರನ್ನು ದಿನದ ಹೊತ್ತಿನಲ್ಲಿ ನಡೆಸಿದಂಥ ಮತ್ತು ಕೆಂಪು ಸಮುದ್ರದ ಮೂಲಕ ತಪ್ಪಿಸಿಕೊಂಡು ಹೋಗಲು ಸಹಾಯಮಾಡಿದ ದೇವರ ಅದ್ಭುತಕರ ಮೇಘಸ್ತಂಭವು ಒಂದಾಗಿತ್ತು. (ವಿಮೋಚನಕಾಂಡ 13:21; 14:​21, 22) ಹೌದು, ಯೆಹೋವನು ಅವರನ್ನು ಪ್ರೀತಿಸುತ್ತಾನೆಂಬುದನ್ನು ತೋರಿಸಿದ ಅಲ್ಲಗಳೆಯಲಾಗದಂಥ ಪುರಾವೆ ಅವರಿಗೆ ಕೊಡಲ್ಪಟ್ಟಿತ್ತು.

8. ಇಸ್ರಾಯೇಲ್ಯರಿಗಿದ್ದ ಆತ್ಮಿಕವಾದ ಮರೆಯುವ ಸ್ವಭಾವದ ಫಲಿತಾಂಶಗಳೇನಾಗಿದ್ದವು?

8 “ಆದರೂ ಅವರೊಳಗೆ ಬಹುಮಂದಿಯ ವಿಷಯದಲ್ಲಿ ದೇವರು ಸಂತೋಷಿಸಲಿಲ್ಲ. ಅವರು ಅಡವಿಯಲ್ಲಿ ಸಂಹರಿಸಲ್ಪಟ್ಟರೆಂದು” ಪೌಲನು ಮುಂದುವರಿಸುತ್ತಾನೆ. (1 ಕೊರಿಂಥ 10:5) ಎಷ್ಟು ದುಃಖಕರವಾದ ಸಂಗತಿ! ಐಗುಪ್ತವನ್ನು ಬಿಟ್ಟುಬಂದಿದ್ದ ಇಸ್ರಾಯೇಲ್ಯರಲ್ಲಿ ಹೆಚ್ಚಿನವರು, ವಾಗ್ದತ್ತ ದೇಶವನ್ನು ಪ್ರವೇಶಿಸಲು ತಮ್ಮನ್ನೇ ಅಯೋಗ್ಯರನ್ನಾಗಿ ಮಾಡಿಕೊಂಡರು. ಅವರು ನಂಬಿಕೆಯ ಕೊರತೆಯನ್ನು ತೋರಿಸಿ, ದೇವರ ಅಸಮ್ಮತಿಗೆ ಗುರಿಯಾದದ್ದರಿಂದ, ಅರಣ್ಯದಲ್ಲೇ ಸತ್ತರು. (ಇಬ್ರಿಯ 3:​16-19) ಇದರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? ಪೌಲನು ಹೇಳುವುದು: “ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ.”​—1 ಕೊರಿಂಥ 10:6.

9. ಯೆಹೋವನು ತನ್ನ ಜನರಿಗಾಗಿ ಯಾವ ಏರ್ಪಾಡುಗಳನ್ನು ಮಾಡಿದ್ದನು, ಮತ್ತು ಇಸ್ರಾಯೇಲ್‌ ಹೇಗೆ ಪ್ರತಿಕ್ರಿಯಿಸಿತು?

9 ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ, ತಮ್ಮ ಆತ್ಮಿಕ ಗಮನವನ್ನು ಕೇಂದ್ರೀಕರಿಸಲಿಕ್ಕಾಗಿ ಅವರಿಗೆ ಅನೇಕಾನೇಕ ಸಂಗತಿಗಳಿದ್ದವು. ಅವರು ಯೆಹೋವನೊಂದಿಗೆ ಒಂದು ಒಡಂಬಡಿಕೆಯೊಳಗೆ ಸೇರಿದ್ದರು ಮತ್ತು ಆತನಿಗೆ ಸಮರ್ಪಿತರಾಗಿದ್ದ ಒಂದು ಜನಾಂಗವಾಗಿದ್ದರು. ಅದಲ್ಲದೆ, ಅವರಿಗೆ ಯಾಜಕತ್ವವು, ಆರಾಧನಾ ಕೇಂದ್ರವಾಗಿ ದೇವಗುಡಾರ ಮತ್ತು ಯೆಹೋವನಿಗೆ ಬಲಿಯರ್ಪಿಸಲಿಕ್ಕಾಗಿ ಒಂದು ಏರ್ಪಾಡು ಕೊಡಲ್ಪಟ್ಟಿತ್ತು. ಆದರೆ ಈ ಎಲ್ಲ ಆತ್ಮಿಕ ಕೊಡುಗೆಗಳಿಗಾಗಿ ಸಂತೋಷಿಸುವುದರ ಬದಲು, ದೇವರು ಅವರಿಗೆ ಭೌತಿಕವಾಗಿ ಕೊಟ್ಟಂಥ ಸಂಗತಿಗಳೊಂದಿಗೆ ಅತೃಪ್ತರಾದರು.​—ಅರಣ್ಯಕಾಂಡ 11:​4-6.

10. ನಾವು ಯಾವಾಗಲೂ ನಮ್ಮ ಯೋಚನೆಗಳಲ್ಲಿ ದೇವರನ್ನು ಇಟ್ಟುಕೊಳ್ಳಬೇಕು ಏಕೆ?

10 ಇಂದು ಯೆಹೋವನ ಸೇವಕರು, ಅರಣ್ಯದಲ್ಲಿದ್ದ ಇಸ್ರಾಯೇಲ್ಯರಂತಿಲ್ಲ. ಅವರು ದೇವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ನಾವು ವ್ಯಕ್ತಿಗತವಾಗಿ ಒಬ್ಬೊಬ್ಬರೂ, ನಮ್ಮ ಯೋಚನೆಗಳಲ್ಲಿ ದೇವರನ್ನು ಇಟ್ಟುಕೊಳ್ಳುವುದು ಅತ್ಯಾವಶ್ಯಕ. ಹಾಗೆ ಮಾಡುವುದರಿಂದ, ನಮ್ಮ ಆತ್ಮಿಕ ದೃಷ್ಟಿಯನ್ನು ಮಬ್ಬುಗೊಳಿಸಸಾಧ್ಯವಿರುವ ಸ್ವಾರ್ಥಪರ ಹಂಬಲಗಳನ್ನು ತಳ್ಳಿಹಾಕಲು ನಮಗೆ ಸಹಾಯ ಸಿಗುವುದು. “ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ . . . ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ”ಲು ದೃಢಸಂಕಲ್ಪದಿಂದಿರಬೇಕು. (ತೀತ 2:12) ನಮ್ಮಲ್ಲಿ ಕೆಲವರು, ಬಾಲ್ಯದಿಂದಲೇ ಕ್ರೈಸ್ತ ಸಭೆಯೊಂದಿಗೆ ಸಹವಾಸಮಾಡುತ್ತಿದ್ದೇವೆ. ಆದರೆ ನಾವು ಜೀವನದ ಆನಂದದ ರುಚಿನೋಡಿಲ್ಲವೆಂದು ಎಂದಿಗೂ ನೆನಸಬಾರದು. ಅಂಥ ಯೋಚನೆಗಳು ಎಂದಾದರೂ ನಮ್ಮ ಮನಸ್ಸಿಗೆ ಬಂದರೂ, ನಾವು ಯೆಹೋವನ ಕುರಿತು ಮತ್ತು ಆತನು ನಮಗಾಗಿ ಕಾದಿರಿಸಿರುವ ಅದ್ಭುತಕರ ಆಶೀರ್ವಾದಗಳ ಕುರಿತು ಜ್ಞಾಪಿಸಿಕೊಳ್ಳುವುದು ಒಳ್ಳೇದು.​—ಇಬ್ರಿಯ 12:​2, 3.

ಯೆಹೋವನಿಗೆ ಸಂಪೂರ್ಣ ವಿಧೇಯತೆ

11, 12. ವಿಗ್ರಹಗಳನ್ನು ಪೂಜಿಸದೆಯೇ ಒಬ್ಬ ವ್ಯಕ್ತಿಯು ಹೇಗೆ ವಿಗ್ರಹಾರಾಧಕನಾಗಬಲ್ಲನು?

11 ಪೌಲನು ಹೀಗೆ ಬರೆಯುವಾಗ ಇನ್ನೊಂದು ಎಚ್ಚರಿಕೆಯ ಮಾತನ್ನು ಕೊಡುತ್ತಾನೆ: “ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು; ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು, ಕುಣಿದಾಡುವದಕ್ಕೆ ಎದ್ದರು ಎಂದು ಬರೆದದೆಯಲ್ಲಾ; ನೀವು ವಿಗ್ರಹಾರಾಧಕರಾಗಬೇಡಿರಿ.” (1 ಕೊರಿಂಥ 10:7) ಆರೋನನು ಒಂದು ಚಿನ್ನದ ಬಸವನನ್ನು ಮಾಡುವಂತೆ ಇಸ್ರಾಯೇಲ್ಯರು ಅವನ ಮನವೊಲಿಸಿದ ಸಂದರ್ಭದ ಕುರಿತಾಗಿ ಪೌಲನು ಸೂಚಿಸುತ್ತಾನೆ. (ವಿಮೋಚನಕಾಂಡ 32:​1-4) ಅವರು ಮಾಡಿದಂತೆ ನಾವು ಇಂದು ನೇರವಾಗಿ ವಿಗ್ರಹಾರಾಧನೆಯನ್ನು ಖಂಡಿತವಾಗಿಯೂ ಮಾಡಲಿಕ್ಕಿಲ್ಲ. ಆದರೆ ಒಂದುವೇಳೆ ನಮ್ಮ ಸ್ವಾರ್ಥಪರ ಆಸೆಗಳು ನಾವು ಯೆಹೋವನನ್ನು ಪೂರ್ಣಪ್ರಾಣದಿಂದ ಆರಾಧಿಸುವುದರಿಂದ ನಮ್ಮನ್ನು ಅಪಕರ್ಷಿಸುವಂತೆ ಬಿಡುವುದಾದರೆ, ನಾವು ವಿಗ್ರಹಾರಾಧಕರಾಗಸಾಧ್ಯವಿದೆ.​—ಕೊಲೊಸ್ಸೆ 3:5.

12 ಪೌಲನು ಇನ್ನೊಂದು ಸಂದರ್ಭದಲ್ಲಿ, ಆತ್ಮಿಕ ವಿಷಯಗಳಿಗಿಂತಲೂ ಹೆಚ್ಚಾಗಿ ಭೌತಿಕ ವಿಷಯಗಳ ಕುರಿತಾಗಿ ಮುಖ್ಯವಾಗಿ ಚಿಂತಿತರಾಗಿದ್ದವರ ಕುರಿತಾಗಿ ಬರೆದನು. “ಕ್ರಿಸ್ತನ ಶಿಲುಬೆಗೆ [“ಯಾತನಾ ಕಂಭಕ್ಕೆ,” NW] ವಿರೋಧಿಗಳಾಗಿ ನಡೆಯು”ವವರ ಕುರಿತಾಗಿ ಅವನು ಬರೆದುದು: “ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು.” (ಫಿಲಿಪ್ಪಿ 3:​18, 19) ಅವರು ಕೆತ್ತಲ್ಪಟ್ಟ ಒಂದು ವಿಗ್ರಹವನ್ನು ಪೂಜಿಸುವುದಿಲ್ಲ. ಅದರ ಬದಲು, ಶಾರೀರಿಕ ವಸ್ತುಗಳಿಗಾಗಿರುವ ಅವರ ಆಸೆಯನ್ನು ಪೂಜಿಸುತ್ತಿದ್ದಾರೆ. ಎಲ್ಲ ಆಸೆಗಳು ತಪ್ಪಾಗಿರುವುದಿಲ್ಲ ನಿಜ. ನಮ್ಮನ್ನು ಸೃಷ್ಟಿಸುವಾಗ ಯೆಹೋವನೇ ನಮ್ಮಲ್ಲಿ ಕೆಲವೊಂದು ಅಗತ್ಯಗಳು ಮತ್ತು ವಿವಿಧ ಭೋಗಗಳನ್ನು ಆನಂದಿಸುವ ಸಾಮರ್ಥ್ಯವನ್ನು ಇಟ್ಟನು. ಆದರೆ ಯಾರು ಸುಖಭೋಗದ ಬೆನ್ನಟ್ಟುವಿಕೆಯನ್ನು ದೇವರೊಂದಿಗಿನ ತಮ್ಮ ಸಂಬಂಧಕ್ಕಿಂತಲೂ ಮೇಲಿನ ಸ್ಥಾನದಲ್ಲಿಡುತ್ತಾರೊ ಅವರು, ವಿಗ್ರಹಾರಾಧಕರಾಗುತ್ತಾರೆ.​—2 ತಿಮೊಥೆಯ 3:​1-5.

13. ಚಿನ್ನದ ಬಸವನ ವೃತ್ತಾಂತದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

13 ಇಸ್ರಾಯೇಲ್ಯರು ಐಗುಪ್ತದಿಂದ ಹೊರಬಂದ ನಂತರ, ಆರಾಧನೆಗಾಗಿ ಒಂದು ಚಿನ್ನದ ಬಸವನನ್ನು ತಯಾರಿಸಿದರು. ಈ ವೃತ್ತಾಂತದಿಂದ ವಿಗ್ರಹಾರಾಧನೆಯ ವಿರುದ್ಧ ನಮಗೆ ಎಚ್ಚರಿಕೆ ಸಿಗುತ್ತದೆ ಮಾತ್ರವಲ್ಲದೆ ನಾವು ಇನ್ನೊಂದು ಪ್ರಾಮುಖ್ಯ ಪಾಠವನ್ನೂ ಕಲಿಯಬಲ್ಲೆವು. ಇಸ್ರಾಯೇಲ್ಯರು ಯೆಹೋವನು ಕೊಟ್ಟಂಥ ಸ್ಪಷ್ಟವಾದ ನಿರ್ದೇಶನಕ್ಕೆ ಅವಿಧೇಯರಾದರು. (ವಿಮೋಚನಕಾಂಡ 20:​4-6) ಆದರೆ ಯೆಹೋವನನ್ನು ತಮ್ಮ ದೇವರೋಪಾದಿ ತಿರಸ್ಕರಿಸುವುದು ಅವರ ಉದ್ದೇಶವಾಗಿರಲಿಲ್ಲ. ಅವರು ಆ ಲೋಹದ ಬಸವನಿಗೆ ಬಲಿಗಳನ್ನು ಅರ್ಪಿಸಿ, ಆ ಸಂದರ್ಭವನ್ನು ‘ಯೆಹೋವನಿಗೆ ಉತ್ಸವ’ ಎಂದು ಕರೆದರು. ದೇವರು ತಮ್ಮ ಅವಿಧೇಯತೆಯನ್ನು ಅಲಕ್ಷಿಸುವನೆಂದು ಯೋಚಿಸುವಂತೆ ಅವರು ಆತ್ಮವಂಚನೆ ಮಾಡಿದರು. ಅವರ ಈ ಅವಿಧೇಯತೆಯು ಯೆಹೋವನಿಗೆ ಒಂದು ಅವಮಾನವಾಗಿತ್ತು, ಮತ್ತು ಅವನಿಗೆ ತುಂಬ ಸಿಟ್ಟು ಬರಿಸಿತು.​—ವಿಮೋಚನಕಾಂಡ 32:​5, 7-10; ಕೀರ್ತನೆ 106:​19, 20.

14, 15. (ಎ) ವಾಕ್ಯವನ್ನು ಕೇಳಿ ಮರೆಯುವವರಾಗಲು ಇಸ್ರಾಯೇಲ್ಯರಿಗೆ ಯಾವುದೇ ನೆಪವಿರಲಿಲ್ಲ ಏಕೆ? (ಬಿ) ನಾವು ವಾಕ್ಯವನ್ನು ಕೇಳಿ ಮರೆಯುವವರಾಗಬಾರದೆಂಬ ದೃಢಸಂಕಲ್ಪವನ್ನು ಮಾಡಿರುವಲ್ಲಿ, ಯೆಹೋವನ ಆಜ್ಞೆಗಳ ಸಂಬಂಧದಲ್ಲಿ ಏನು ಮಾಡುವೆವು?

14 ಒಬ್ಬ ಯೆಹೋವನ ಸಾಕ್ಷಿಯು, ಒಂದು ಸುಳ್ಳು ಧರ್ಮಕ್ಕೆ ಸೇರಿಕೊಳ್ಳುವುದು ತೀರ ಅಸಾಮಾನ್ಯ ಸಂಗತಿಯಾಗಿರುವುದು. ಆದರೆ ಕೆಲವರು ಸಭೆಯೊಳಗೆ ಇದ್ದುಕೊಂಡೇ, ಬೇರೆ ವಿಧಗಳಲ್ಲಿ ಯೆಹೋವನ ನಿರ್ದೇಶನವನ್ನು ತಿರಸ್ಕರಿಸಬಹುದು. ಇಸ್ರಾಯೇಲಿನ ಜನರು, ವಾಕ್ಯವನ್ನು ಕೇಳಿ ಮರೆಯುವವರಾಗಿರಲು ಯಾವುದೇ ನೆಪವನ್ನು ಕೊಡಲು ಸಾಧ್ಯವಿರಲಿಲ್ಲ. ಯಾಕೆಂದರೆ ಅವರು ದಶಾಜ್ಞೆಗಳನ್ನು ಕೇಳಿದ್ದರು ಮಾತ್ರವಲ್ಲದೆ, “ನೀವು ಬೆಳ್ಳಿಬಂಗಾರಗಳಿಂದ ದೇವರುಗಳನ್ನು ಮಾಡಿಕೊಂಡು ನನ್ನ ಜೊತೆಯಲ್ಲಿ ಸೇರಿಸಕೂಡದು” ಎಂಬ ದೇವರ ಆಜ್ಞೆಯನ್ನು ಮೋಶೆಯು ಅವರಿಗೆ ಕೊಟ್ಟಾಗ ಉಪಸ್ಥಿತರಿದ್ದರು. (ವಿಮೋಚನಕಾಂಡ 20:​18, 19, 22, 23) ಹೀಗಿದ್ದರೂ, ಆ ಇಸ್ರಾಯೇಲ್ಯರು ಚಿನ್ನದ ಬಸವನನ್ನು ಆರಾಧಿಸಿದರು.

15 ನಾವು ವಾಕ್ಯವನ್ನು ಕೇಳಿ ಮರೆಯುವವರಾಗುವಲ್ಲಿ, ನಾವು ಕೂಡ ಯಾವುದೇ ಸಮಂಜಸವಾದ ನೆಪವನ್ನು ಕೊಡಲು ಸಾಧ್ಯವಾಗಲಿಕ್ಕಿಲ್ಲ. ಶಾಸ್ತ್ರಗಳಲ್ಲಿ ಜೀವಿತದ ಅನೇಕ ಕ್ಷೇತ್ರಗಳ ಬಗ್ಗೆ ದೇವರ ನಿರ್ದೇಶನವು ಕೊಡಲ್ಪಟ್ಟಿದೆ. ಉದಾಹರಣೆಗಾಗಿ, ಬೇರೆಯವರಿಂದ ಸಾಲ ತೆಗೆದುಕೊಂಡು ಅದನ್ನು ಹಿಂದಿರುಗಿಸದೇ ಇರುವ ಅಭ್ಯಾಸವನ್ನು ಯೆಹೋವನ ವಾಕ್ಯವು ಸ್ಪಷ್ಟವಾಗಿ ಖಂಡಿಸುತ್ತದೆ. (ಕೀರ್ತನೆ 37:21) ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗಿರಬೇಕೆಂದು ಆಜ್ಞಾಪಿಸಲಾಗಿದೆ. ಮತ್ತು ತಂದೆಯರು ತಮ್ಮ ಮಕ್ಕಳನ್ನು “ಯೆಹೋವನ ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸುವಂತೆ ಅಪೇಕ್ಷಿಸಲಾಗುತ್ತದೆ. (ಎಫೆಸ 6:​1-4, NW) ಅವಿವಾಹಿತ ಕ್ರೈಸ್ತರು, ‘ಕರ್ತನಲ್ಲಿ ಮಾತ್ರ’ ವಿವಾಹವಾಗುವಂತೆ ಸೂಚಿಸಲಾಗಿದೆ ಮತ್ತು ದೇವರ ವಿವಾಹಿತ ಸೇವಕರಿಗೆ ಹೀಗನ್ನಲಾಗಿದೆ: “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” (1 ಕೊರಿಂಥ 7:39; ಇಬ್ರಿಯ 13:4) ನಾವು ವಾಕ್ಯವನ್ನು ಕೇಳಿ ಮರೆಯುವವರಾಗಬಾರದೆಂಬ ದೃಢಸಂಕಲ್ಪವನ್ನು ಮಾಡಿರುವಲ್ಲಿ, ನಾವು ಇವುಗಳನ್ನು ಮತ್ತು ದೇವರಿಂದ ಬಂದಿರುವ ಇನ್ನಿತರ ನಿರ್ದೇಶನಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳಿಗೆ ತಕ್ಕಂತೆ ಜೀವಿಸುವೆವು.

16. ಚಿನ್ನದ ಬಸವನನ್ನು ಆರಾಧಿಸುವುದರ ಫಲಿತಾಂಶಗಳೇನಾಗಿದ್ದವು?

16 ಇಸ್ರಾಯೇಲ್ಯರು ತಮ್ಮ ಸ್ವಂತ ಷರತ್ತುಗಳ ಮೇರೆಗೆ ಯೆಹೋವನನ್ನು ಆರಾಧಿಸಲು ಪ್ರಯತ್ನಿಸಿದಾಗ, ಆತನು ಅದನ್ನು ಸ್ವೀಕರಿಸಲಿಲ್ಲ. ಅದರ ಬದಲು 3,000 ಮಂದಿ ನಾಶವಾದರು. ಇವರು ಚಿನ್ನದ ಬಸವನನ್ನು ಆರಾಧಿಸುವ ದಂಗೆಕೋರ ಕೃತ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಕ್ಕಾಗಿಯೇ ನಾಶವಾಗಿರಬಹುದು. ಇನ್ನುಳಿದ ತಪ್ಪಿತಸ್ಥರು, ಯೆಹೋವನಿಂದ ಬಂದ ವ್ಯಾಧಿಯಿಂದ ಬಾಧಿಸಲ್ಪಟ್ಟರು. (ವಿಮೋಚನಕಾಂಡ 32:​28, 35) ದೇವರ ವಾಕ್ಯವನ್ನು ಓದಿ, ತಾವು ಯಾವುದಕ್ಕೆ ವಿಧೇಯರಾಗುವೆವು ಎಂದು ಸ್ವತಃ ಆಯ್ಕೆಮಾಡುವ ಯಾವುದೇ ವ್ಯಕ್ತಿಗೂ ಇದು ಒಂದು ಒಳ್ಳೆಯ ಪಾಠವಾಗಿದೆ!

“ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ”

17. ಒಂದನೆಯ ಕೊರಿಂಥ 10:8 ಯಾವ ಘಟನೆಗೆ ಸೂಚಿಸಿತು?

17 ಶರೀರದಾಶೆಗಳು, ನಮ್ಮಲ್ಲಿ ಆತ್ಮಿಕ ಮರೆಗುಳಿತನವನ್ನು ಉಂಟುಮಾಡಬಲ್ಲ ಒಂದು ಕ್ಷೇತ್ರವನ್ನು ಪೌಲನು ತಿಳಿಸುತ್ತಾನೆ: “ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವಮಾಡದೆ ಇರೋಣ.” (1 ಕೊರಿಂಥ 10:8) ಅರಣ್ಯದಲ್ಲಿ ಇಸ್ರಾಯೇಲ್‌ ಜನಾಂಗದ 40 ವರ್ಷಗಳ ಪ್ರಯಾಣದ ಅಂತ್ಯದಲ್ಲಿ ಮೋವಾಬ್‌ ಬಯಲಿನಲ್ಲಿ ನಡೆದ ಘಟನೆಗೆ ಪೌಲನು ಇಲ್ಲಿ ಸೂಚಿಸಿದನು. ಯೊರ್ದನ್‌ ಹೊಳೆಯ ಪೂರ್ವದಲ್ಲಿರುವ ದೇಶಗಳನ್ನು ಜಯಿಸುವುದರಲ್ಲಿ ಸ್ವಲ್ಪ ಸಮಯದ ಹಿಂದೆಯೇ ಇಸ್ರಾಯೇಲ್ಯರು ಯೆಹೋವನಿಂದ ಸಹಾಯವನ್ನು ಪಡೆದಿದ್ದರು. ಆದರೆ ಅನೇಕರು ಅದನ್ನು ಮರೆತುಬಿಟ್ಟರು ಮತ್ತು ಗಣ್ಯತೆಯಿಲ್ಲದವರಾಗಿ ಪರಿಣಮಿಸಿದರು. ವಾಗ್ದತ್ತ ದೇಶದ ಗಡಿಯಲ್ಲಿದ್ದಾಗಲೇ, ಅವರು ಲೈಂಗಿಕ ಅನೈತಿಕತೆ ಮತ್ತು ಪಿಯೋರಿನ ಬಾಳನ ಅಶುದ್ಧ ಆರಾಧನೆಯ ಕಡೆಗೆ ಸೆಳೆಯಲ್ಪಟ್ಟರು. ಸುಮಾರು 24,000 ಮಂದಿ ನಾಶವಾದರು, ಮತ್ತು ಇವರಲ್ಲಿ 1,000 ಮಂದಿ ಮುಖಂಡರಾಗಿದ್ದರು.​—ಅರಣ್ಯಕಾಂಡ 25:9.

18. ಯಾವ ರೀತಿಯ ನಡತೆಯು ಲೈಂಗಿಕ ಅನೈತಿಕತೆಗೆ ನಡೆಸಬಲ್ಲದು?

18 ಇಂದು ಯೆಹೋವನ ಜನರು ಉಚ್ಚ ನೈತಿಕ ಮಟ್ಟಗಳನ್ನು ಪಾಲಿಸುವುದಕ್ಕಾಗಿ ಸುಪ್ರಸಿದ್ಧರಾಗಿದ್ದಾರೆ. ಆದರೆ ಕೆಲವು ಕ್ರೈಸ್ತರು ಲೈಂಗಿಕ ಅನೈತಿಕತೆಯ ಪ್ರಲೋಭನೆಗೊಳಗಾದಾಗ, ದೇವರು ಮತ್ತು ಆತನ ಮೂಲತತ್ವಗಳ ಕುರಿತಾಗಿ ಯೋಚಿಸುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಅವರು ವಾಕ್ಯವನ್ನು ಕೇಳಿ ಮರೆಯುವವರಾಗಿಬಿಟ್ಟಿದ್ದಾರೆ. ಅಂಥ ಪ್ರಲೋಭನೆಯ ಆರಂಭದಲ್ಲೇ ವ್ಯಭಿಚಾರದ ಕೃತ್ಯವು ಒಳಗೂಡಿರಲಿಕ್ಕಿಲ್ಲ. ಅಶ್ಲೀಲ ಸಾಹಿತ್ಯ ಅಥವಾ ಚಿತ್ರಗಳನ್ನು ಕೌತುಕದಿಂದ ನೋಡಲು, ಅಯೋಗ್ಯವಾದ ತಮಾಷೆಮಾತು ಅಥವಾ ವಿರುದ್ಧಲಿಂಗದವರೊಂದಿಗೆ ಚೆಲ್ಲಾಟವಾಡಲು, ಅಥವಾ ನೈತಿಕವಾಗಿ ದುರ್ಬಲವಾಗಿರುವ ವ್ಯಕ್ತಿಗಳೊಂದಿಗೆ ಸಹವಾಸಮಾಡಲು ಇಷ್ಟಪಡುವ ಪ್ರವೃತ್ತಿಯೊಂದಿಗೆ ಅದು ಶುರುವಾಗಬಹುದು. ಇದೆಲ್ಲವೂ ಅನಂತರ ಕ್ರೈಸ್ತರನ್ನು ಪಾಪಪೂರ್ಣ ನಡತೆಗೆ ನಡೆಸಿದೆ.​—1 ಕೊರಿಂಥ 15:33; ಯಾಕೋಬ 4:4.

19. ‘ಜಾರತ್ವಕ್ಕೆ ದೂರವಾಗಿ ಓಡಿಹೋಗಲು’ ನಮಗೆ ಯಾವ ಶಾಸ್ತ್ರೀಯ ಸಲಹೆಯು ಸಹಾಯಮಾಡುತ್ತದೆ?

19 ಅನೈತಿಕ ನಡತೆಯಲ್ಲಿ ಒಳಗೂಡುವ ಪ್ರಲೋಭನೆಗೊಳಗಾಗುವಲ್ಲಿ, ನಾವು ಯೆಹೋವನ ಕುರಿತಾಗಿ ಯೋಚಿಸುವುದನ್ನು ನಿಲ್ಲಿಸಬಾರದು. ಅದರ ಬದಲು, ನಾವು ಆತನ ವಾಕ್ಯದಲ್ಲಿರುವ ಮರುಜ್ಞಾಪನಗಳನ್ನು ಪಾಲಿಸಬೇಕು. (ಕೀರ್ತನೆ 119:​1, 2) ಕ್ರೈಸ್ತರೋಪಾದಿ ನಮ್ಮಲ್ಲಿ ಹೆಚ್ಚಿನವರು, ನೈತಿಕವಾಗಿ ಶುದ್ಧರಾಗಿರಲು ನಮ್ಮಿಂದಾಗುವುದೆಲ್ಲವನ್ನು ಮಾಡುತ್ತೇವೆ. ಆದರೆ ದೇವರ ದೃಷ್ಟಿಯಲ್ಲಿ ಸರಿಯಾಗಿರುವ ಕಾರ್ಯಗಳನ್ನು ಮಾಡಲಿಕ್ಕಾಗಿ ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಾ ಇರಬೇಕು. (1 ಕೊರಿಂಥ 9:27) ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದುದು: “ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾದದರಿಂದ ಇದನ್ನು ಬರೆದಿದ್ದೇನೆ; ನಿಮ್ಮ ವಿಷಯದಲ್ಲಿ ಆನಂದಪಡುತ್ತೇನೆ. ನೀವು ಒಳ್ಳೇತನದ ವಿಷಯದಲ್ಲಿ ಜಾಣರೂ ಕೆಟ್ಟತನದ ವಿಷಯದಲ್ಲಿ ಕಳಂಕವಿಲ್ಲದವರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ.” (ರೋಮಾಪುರ 16:19) ಆ 24,000 ಮಂದಿ ಇಸ್ರಾಯೇಲ್ಯರು, ತಮ್ಮ ಪಾಪಗಳಿಗಾಗಿ ಹತಿಸಲ್ಪಟ್ಟಂತೆ, ವ್ಯಭಿಚಾರಿಗಳು ಮತ್ತು ಬೇರೆ ತಪ್ಪಿತಸ್ಥರು ಬೇಗನೆ ಯೆಹೋವನ ಪ್ರತಿಕೂಲ ನ್ಯಾಯತೀರ್ಪಿಗೆ ಗುರಿಯಾಗಲಿದ್ದಾರೆ. (ಎಫೆಸ 5:​3-6) ಆದುದರಿಂದ ವಾಕ್ಯವನ್ನು ಕೇಳಿಸಿಕೊಂಡ ಬಳಿಕ ಮರೆಯುವವರಾಗಿರದೆ, ನಾವು ‘ಜಾರತ್ವಕ್ಕೆ ದೂರವಾಗಿ ಓಡಿಹೋಗೋಣ.’​—1 ಕೊರಿಂಥ 6:18.

ಯೆಹೋವನ ಒದಗಿಸುವಿಕೆಗಳನ್ನು ಯಾವಾಗಲೂ ಗಣ್ಯಮಾಡಿರಿ

20. ಇಸ್ರಾಯೇಲ್ಯರು ಯೆಹೋವನನ್ನು ಪರೀಕ್ಷಿಸಿದ್ದು ಹೇಗೆ, ಮತ್ತು ಫಲಿತಾಂಶವೇನಾಗಿತ್ತು?

20 ಕ್ರೈಸ್ತರಲ್ಲಿ ಅಧಿಕಾಂಶ ಮಂದಿ ಲೈಂಗಿಕ ಅನೈತಿಕತೆಯ ಮುಂದೆ ಎಂದೂ ಬಾಗುವುದಿಲ್ಲ. ಆದರೆ, ನಮಗೆ ಗುಣುಗುಟ್ಟುತ್ತಾ ಇರುವ ಅಭ್ಯಾಸವಾಗದಂತೆಯೂ ಜಾಗ್ರತೆವಹಿಸುವುದು ಅಗತ್ಯ. ಯಾಕೆಂದರೆ ಇದು ಕೂಡ ದೇವರ ಅಸಮ್ಮತಿಯನ್ನು ಬರಮಾಡುವುದು. ಪೌಲನು ನಮಗೆ ಬುದ್ಧಿಹೇಳುವುದು: “ಅವರಲ್ಲಿ [ಇಸ್ರಾಯೇಲ್ಯರಲ್ಲಿ] ಕೆಲವರು ಕರ್ತನನ್ನು [“ಯೆಹೋವನನ್ನು,” NW] ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ ನಾವು ಪರೀಕ್ಷಿಸದೆ ಇರೋಣ. ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ.” (1 ಕೊರಿಂಥ 10:9, 10) ಅದ್ಭುತಕರವಾಗಿ ಒದಗಿಸಲಾದ ಮನ್ನದ ಕುರಿತಾಗಿ ದೂರುತ್ತಾ, ಇಸ್ರಾಯೇಲ್ಯರು ಮೋಶೆ ಆರೋನರ ವಿರುದ್ಧ ಮತ್ತು ಸ್ವತಃ ದೇವರ ವಿರುದ್ಧ ಗುಣುಗುಟ್ಟಿದರು. (ಅರಣ್ಯಕಾಂಡ 16:41; 21:5) ಅವರು ವ್ಯಭಿಚಾರವನ್ನು ಮಾಡಿದಾಗ ಯೆಹೋವನಿಗೆ ಉಂಟಾದ ಕೋಪಕ್ಕಿಂತಲೂ, ಈಗ ಅವರು ಗುಣುಗುಟ್ಟಿದಾಗ ಆತನ ಕೋಪವು ಕಡಿಮೆಯಾಗಿತ್ತೊ? ಗುಣುಗುಟ್ಟಿದವರಲ್ಲಿ ಅನೇಕರು ಸರ್ಪಗಳಿಂದ ಕೊಲ್ಲಲ್ಪಟ್ಟರೆಂದು ಬೈಬಲ್‌ ವೃತ್ತಾಂತ ತೋರಿಸುತ್ತದೆ. (ಅರಣ್ಯಕಾಂಡ 21:6) ಹಿಂದಿನ ಸಂದರ್ಭವೊಂದರಲ್ಲಿ, 14,700ಕ್ಕಿಂತಲೂ ಹೆಚ್ಚು ಮಂದಿ ದಂಗೆಕೋರ ಗುಣುಗುಟ್ಟುವವರು ನಾಶಗೊಳಿಸಲ್ಪಟ್ಟರೆಂದು ಬೈಬಲ್‌ ವೃತ್ತಾಂತವು ತೋರಿಸುತ್ತದೆ. (ಅರಣ್ಯಕಾಂಡ 16:49) ಆದುದರಿಂದ, ಯೆಹೋವನ ಒದಗಿಸುವಿಕೆಗಳನ್ನು ಅಗೌರವದಿಂದ ಕಾಣುವ ಮೂಲಕ ನಾವು ಆತನ ತಾಳ್ಮೆಯನ್ನು ಪರೀಕ್ಷಿಸದಿರೋಣ.

21. (ಎ) ಯಾವ ಬುದ್ಧಿವಾದವನ್ನು ಬರೆಯಲು ಪೌಲನು ಪ್ರೇರಿಸಲ್ಪಟ್ಟನು? (ಬಿ) ಯಾಕೋಬ 1:25ಕ್ಕನುಸಾರ, ನಾವು ಹೇಗೆ ನಿಜವಾಗಿಯೂ ಸಂತೋಷವಾಗಿರಬಲ್ಲೆವು?

21 ಜೊತೆ ಕ್ರೈಸ್ತರಿಗೆ ಬರೆಯುತ್ತಾ, ಪೌಲನು ಎಚ್ಚರಿಕೆಗಳ ಆ ಪಟ್ಟಿಯನ್ನು ಈ ಬುದ್ಧಿವಾದದೊಂದಿಗೆ ಕೊನೆಗೊಳಿಸುತ್ತಾನೆ: “ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ. ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” (1 ಕೊರಿಂಥ 10:11, 12) ಇಸ್ರಾಯೇಲ್ಯರಂತೆ ನಾವು ಯೆಹೋವನಿಂದ ಅನೇಕ ಆಶೀರ್ವಾದಗಳನ್ನು ಪಡೆದಿದ್ದೇವೆ. ಆದರೆ ಅವರಂತಿರದೆ, ದೇವರು ನಮಗಾಗಿ ಮಾಡುತ್ತಿರುವ ಎಲ್ಲ ಒಳ್ಳೇ ಸಂಗತಿಗಳನ್ನು ನಾವು ಎಂದೂ ಮರೆಯದಿರೋಣ ಮತ್ತು ಗಣ್ಯಮಾಡಲು ತಪ್ಪದಿರೋಣ. ಜೀವನದ ಚಿಂತೆಗಳು ನಮ್ಮನ್ನು ಜಜ್ಜಿಹಾಕುತ್ತಿರುವಾಗ, ಆತನ ವಾಕ್ಯದಲ್ಲಿರುವ ಅದ್ಭುತಕರ ವಾಗ್ದಾನಗಳ ಕುರಿತು ಪರ್ಯಾಲೋಚಿಸೋಣ. ಯೆಹೋವನೊಂದಿಗೆ ನಮಗಿರುವ ಅಮೂಲ್ಯವಾದ ಸಂಬಂಧವನ್ನು ಮತ್ತು ನಮಗೆ ಕೊಡಲ್ಪಟ್ಟಿರುವ ರಾಜ್ಯ ಸಾರುವಿಕೆಯ ಕೆಲಸವನ್ನು ಮಾಡುತ್ತಾ ಇರಬೇಕೆಂಬುದನ್ನು ನಾವು ನೆನಪಿನಲ್ಲಿಡೋಣ. (ಮತ್ತಾಯ 24:14; 28:​19, 20) ಹಾಗೆ ಮಾಡುವುದು ಖಂಡಿತವಾಗಿಯೂ ನಮಗೆ ನಿಜ ಸಂತೋಷವನ್ನು ತರುವುದು, ಯಾಕೆಂದರೆ ಶಾಸ್ತ್ರವಚನಗಳು ಹೀಗೆ ವಾಗ್ದಾನಿಸುತ್ತವೆ: “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತುಹೋಗುವವನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.”​—ಯಾಕೋಬ 1:25.

ನೀವು ಹೇಗೆ ಉತ್ತರಿಸುವಿರಿ?

• ವಾಕ್ಯವನ್ನು ಕೇಳಿಸಿಕೊಂಡ ಬಳಿಕ, ನಾವು ಮರೆಯುವವರಾಗುವಂತೆ ಮಾಡುವಂಥದ್ದು ಯಾವುದು?

• ದೇವರಿಗೆ ಸಂಪೂರ್ಣ ವಿಧೇಯತೆಯು ಏಕೆ ಅತ್ಯಾವಶ್ಯಕ?

• ನಾವು ಹೇಗೆ ‘ಜಾರತ್ವದಿಂದ ದೂರ ಓಡಬಲ್ಲೆವು’?

• ಯೆಹೋವನ ಒದಗಿಸುವಿಕೆಗಳ ಕಡೆಗೆ ನಮ್ಮ ಮನೋಭಾವವು ಏನಾಗಿರಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ತಮ್ಮ ಪರವಾಗಿ ಯೆಹೋವನು ಮಾಡಿದಂಥ ಬಲಶಾಲಿ ಕಾರ್ಯಗಳನ್ನು ಇಸ್ರಾಯೇಲ್ಯರು ಮರೆತುಬಿಟ್ಟರು

[ಪುಟ 16ರಲ್ಲಿರುವ ಚಿತ್ರ]

ಯೆಹೋವನ ಜನರು ಉಚ್ಚ ನೈತಿಕ ಮಟ್ಟಗಳನ್ನು ಕಾಪಾಡಿಕೊಳ್ಳುವ ದೃಢಸಂಕಲ್ಪವುಳ್ಳವರಾಗಿದ್ದಾರೆ