ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಕಟದಲ್ಲಿ ಬಿದ್ದಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸಿರಿ

ಸಂಕಟದಲ್ಲಿ ಬಿದ್ದಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸಿರಿ

ಸಂಕಟದಲ್ಲಿ ಬಿದ್ದಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸಿರಿ

ಪ್ರೀತಿರಹಿತವಾದ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ಗ್ರಹಿಸುವುದು ಕಷ್ಟಕರವೇನಲ್ಲ. “ಕಡೇ ದಿವಸಗಳಲ್ಲಿ” ಎಂತಹ ರೀತಿಯ ಜನರು ಇರುತ್ತಾರೆ ಎಂಬುದನ್ನು ಸೂಚಿಸುತ್ತಾ ಅಪೊಸ್ತಲ ಪೌಲನು ಬರೆದುದು: “ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ . . . ಮಮತೆಯಿಲ್ಲದವರೂ” ಆಗಿರುವರು. (2 ತಿಮೊಥೆಯ 3:​1-3) ಈ ಮಾತುಗಳು ಎಷ್ಟು ಸತ್ಯವಾಗಿವೆ!

ನಮ್ಮ ಸಮಯಗಳಲ್ಲಿ ನೈತಿಕ ಸ್ಥಿತಿಯು ಎಷ್ಟು ಹೀನಮಟ್ಟವನ್ನು ತಲಪಿದೆಯೆಂದರೆ, ಇದು ಅನೇಕರ ಹೃದಯಗಳಲ್ಲಿ ಸಹಾನುಭೂತಿಯೇ ಇಲ್ಲದಂತೆ ಮಾಡಿಬಿಟ್ಟಿದೆ. ಇತರರ ಹಿತಕ್ಷೇಮದಲ್ಲಿ ಜನರು ತೋರಿಸುವ ಆಸಕ್ತಿಯು ದಿನೇ ದಿನೇ ಕಡಿಮೆಯಾಗುತ್ತಿದೆ. ಕೆಲವು ಸನ್ನಿವೇಶಗಳಲ್ಲಾದರೋ ತಮ್ಮ ಸ್ವಂತ ಕುಟುಂಬದ ಸದಸ್ಯರ ಬಗ್ಗೆ ಹಿತಾಸಕ್ತಿಯನ್ನು ತೋರಿಸುವುದೂ ಕ್ರಮೇಣ ಕಡಿಮೆಯಾಗುತ್ತಿದೆ.

ಬೇರೆ ಬೇರೆ ಪರಿಸ್ಥಿತಿಗಳ ಕಾರಣದಿಂದ ನಿರ್ಗತಿಕರಾಗಿ ಪರಿಣಮಿಸಿರುವಂತಹ ಅನೇಕರ ಮೇಲೆ ಇದು ಪ್ರತಿಕೂಲ ಪರಿಣಾಮವನ್ನು ಬೀರಿದೆ. ಯುದ್ಧಗಳು, ನೈಸರ್ಗಿಕ ವಿಪತ್ತುಗಳು, ಆಶ್ರಯವನ್ನು ಹುಡುಕಿಕೊಂಡು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಪ್ರಯಾಣಿಸುವುದು ಇನ್ನು ಮುಂತಾದ ಕಾರಣಗಳಿಂದ ವಿಧವೆಯರು ಹಾಗೂ ಅನಾಥರ ಸಂಖ್ಯೆಯು ಏಕಪ್ರಕಾರವಾಗಿ ಬೆಳೆಯುತ್ತಿದೆ. (ಪ್ರಸಂಗಿ 3:19) “ಯುದ್ಧದ ಫಲಿತಾಂಶವಾಗಿ, 10 ಲಕ್ಷಕ್ಕಿಂತಲೂ ಹೆಚ್ಚು [ಮಕ್ಕಳು] ಅನಾಥರಾಗಿದ್ದಾರೆ ಅಥವಾ ತಮ್ಮ ಕುಟುಂಬಗಳಿಂದ ಅಗಲಿಸಲ್ಪಟ್ಟಿದ್ದಾರೆ” ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿಯಿಂದ ಬಂದ ವರದಿಯು ತಿಳಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಒಂಟಿಯಾದ, ಪತಿಯಿಂದ ತ್ಯಜಿಸಲ್ಪಟ್ಟಿರುವ ಅಥವಾ ವಿವಾಹ ವಿಚ್ಛೇದವನ್ನು ಪಡೆದುಕೊಂಡಿರುವ ತಾಯಂದಿರ ಬಗ್ಗೆ ನಿಮಗೂ ಗೊತ್ತಿರಬಹುದು. ಇವರು ಬದುಕನ್ನು ಮುಂದುವರಿಸಲು ಮತ್ತು ಪತಿಯ ಬೆಂಬಲವಿಲ್ಲದೆ ತಮ್ಮ ಕುಟುಂಬಗಳನ್ನು ಪೋಷಿಸಲು ತುಂಬ ಕಷ್ಟಪಡುತ್ತಾರೆ. ಕೆಲವು ದೇಶಗಳು ಗಂಭೀರವಾದ ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಈ ದೇಶಗಳ ಪ್ರಜೆಗಳು ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ ಎಂಬ ವಾಸ್ತವಾಂಶದಿಂದಾಗಿ ಪರಿಸ್ಥಿತಿಯು ಇನ್ನೂ ಹದಗೆಟ್ಟಿದೆ.

ಈ ಸಂಗತಿಗಳನ್ನೆಲ್ಲ ಪರಿಗಣಿಸುವಾಗ, ಸಂಕಟವನ್ನು ಅನುಭವಿಸುತ್ತಿರುವವರಿಗೆ ಯಾವುದಾದರೂ ನಿರೀಕ್ಷೆಯಿದೆಯೋ? ವಿಧವೆಯರು ಹಾಗೂ ಅನಾಥರ ಸಂಕಷ್ಟವನ್ನು ಹೇಗೆ ಕಡಿಮೆಮಾಡಸಾಧ್ಯವಿದೆ? ಈ ಸಮಸ್ಯೆಯು ಎಂದಾದರೂ ಕೊನೆಗೊಳ್ಳುವುದೋ?

ಬೈಬಲ್‌ ಸಮಯಗಳಲ್ಲಿ ಪ್ರೀತಿಯ ಪರಾಮರಿಕೆ

ವಿಧವೆಯರು ಹಾಗೂ ಅನಾಥರ ಶಾರೀರಿಕ ಹಾಗೂ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವುದು, ದೀರ್ಘ ಸಮಯದಿಂದಲೂ ದೇವರ ಆರಾಧನೆಯ ಅವಿಭಾಜ್ಯ ಅಂಗವಾಗಿತ್ತು. ಇಸ್ರಾಯೇಲ್ಯರು ತಮ್ಮ ಹೊಲಗಳಲ್ಲಿ ಪೈರುಗಳನ್ನು ಕೊಯ್ಯುವಾಗ, ಕೆಲವು ಸಿವುಡುಗಳನ್ನು ಹೊಲದಲ್ಲೇ ಮರೆತುಬಂದರೆ, ಅದನ್ನು ಒಟ್ಟುಗೂಡಿಸಲಿಕ್ಕಾಗಿ ಹಿಂದೆ ಹೋಗಬಾರದಾಗಿತ್ತು. ಆ ಸಿವುಡುಗಳನ್ನು, “ಪರದೇಶಿ, ತಂದೆತಾಯಿಯಿಲ್ಲದವ, ವಿಧವೆ ಇಂಥವರಿಗೋಸ್ಕರ” ಬಿಡಬೇಕಾಗಿತ್ತು. (ಧರ್ಮೋಪದೇಶಕಾಂಡ 24:​19-21) ಮೋಶೆಯ ಧರ್ಮಶಾಸ್ತ್ರವು ಈ ನಿರ್ದಿಷ್ಟ ನಿಯಮವನ್ನು ಒಳಗೊಂಡಿತ್ತು: ‘ನೀವು ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು.’ (ವಿಮೋಚನಕಾಂಡ 22:​22, 23) ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವಿಧವೆಯರು ಹಾಗೂ ಅನಾಥರು, ಕಡುಬಡತನದಲ್ಲಿ ಜೀವಿಸುತ್ತಿದ್ದ ಜನರಿಗೆ ಯೋಗ್ಯವಾಗಿಯೇ ಸೂಚಿತರಾದರು. ಏಕೆಂದರೆ, ಗಂಡ ಹಾಗೂ ತಂದೆ ಅಥವಾ ಇಬ್ಬರೂ ಹೆತ್ತವರು ಮೃತಪಟ್ಟ ಬಳಿಕ, ಕುಟುಂಬದ ಉಳಿದ ಸದಸ್ಯರು ಒಂಟಿಯಾಗಿ ಮತ್ತು ನಿರ್ಗತಿಕರಾಗಿ ಉಳಿಯುತ್ತಿರಬಹುದಿತ್ತು. ಆದುದರಿಂದಲೇ, ಪೂರ್ವಜನಾದ ಯೋಬನು ಹೇಳಿದ್ದು: “ಅಂಗಲಾಚುವ ಬಡವನನ್ನೂ ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು.”​—ಯೋಬ 29:12.

ಕ್ರೈಸ್ತ ಸಭೆಯ ಆರಂಭದ ದಿನಗಳಲ್ಲಿ, ಹೆತ್ತವರು ಅಥವಾ ಗಂಡನ ಮರಣದಿಂದ ಬಾಧಿತರಾಗಿರುವವರಿಗೆ ಮತ್ತು ನಿಜವಾಗಿಯೂ ಅಗತ್ಯದಲ್ಲಿರುವವರಿಗೆ ಸಹಾಯಮಾಡುವುದು ಸತ್ಯಾರಾಧನೆಯ ವೈಶಿಷ್ಟ್ಯವಾಗಿತ್ತು. ಇಂಥವರ ಹಿತಕ್ಷೇಮದಲ್ಲಿ ತೀವ್ರವಾದ ಆಸಕ್ತಿಯುಳ್ಳವನಾಗಿದ್ದ ಶಿಷ್ಯ ಯಾಕೋಬನು ಬರೆದುದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.”​—ಯಾಕೋಬ 1:27.

ಅನಾಥರು ಮತ್ತು ವಿಧವೆಯರ ಬಗ್ಗೆ ಮಾತ್ರವಲ್ಲದೆ, ಕಡುಬಡವರು ಹಾಗೂ ನಿರ್ಗತಿಕರ ವಿಷಯದಲ್ಲಿಯೂ ಯಾಕೋಬನು ತೀವ್ರವಾದ ಚಿಂತೆಯನ್ನು ತೋರಿಸಿದನು. (ಯಾಕೋಬ 2:​5, 6, 15, 16) ಅಪೊಸ್ತಲ ಪೌಲನು ಸಹ ಇದೇ ರೀತಿಯ ಕಾಳಜಿಯನ್ನು ತೋರಿಸಿದನು. ಪೌಲನಿಗೆ ಮತ್ತು ಬಾರ್ನಬನಿಗೆ ಸಾರುವ ನೇಮಕವು ಕೊಡಲ್ಪಟ್ಟಾಗ, ಅವರು ಪಡೆದುಕೊಂಡ ಸೂಚನೆಗಳಲ್ಲಿ ‘ಬಡವರನ್ನು ಜ್ಞಾಪಕಮಾಡಿಕೊಂಡು’ ಎಂಬ ಸೂಚನೆಯೂ ಒಳಗೂಡಿತ್ತು. ಆದುದರಿಂದಲೇ, “ಇದನ್ನು ಮಾಡುವದರಲ್ಲಿ ನಾನೂ ಆಸಕ್ತನಾಗಿದ್ದೆನು” ಎಂದು ಪೌಲನು ಶುದ್ಧವಾದ ಮನಸ್ಸಾಕ್ಷಿಯಿಂದ ಹೇಳಸಾಧ್ಯವಿತ್ತು. (ಗಲಾತ್ಯ 2:​9, 10) ಕ್ರೈಸ್ತ ಸಭೆಯು ಸ್ಥಾಪನೆಯಾದ ಸ್ವಲ್ಪ ಸಮಯಾನಂತರ ಯಾವ ಚಟುವಟಿಕೆಗಳು ಪೂರೈಸಲ್ಪಟ್ಟವು ಎಂಬುದರ ಕುರಿತು ಈ ವರದಿಯಿದೆ: “ಅವರಲ್ಲಿ ಕೊರತೆಪಡುವವನು ಒಬ್ಬನೂ ಇರಲಿಲ್ಲ, . . . ಪ್ರತಿಯೊಬ್ಬನಿಗೆ ಅವನವನ ಅವಶ್ಯದಂತೆ ಹಂಚಿಕೊಡುತ್ತಿದ್ದರು.” (ಅ. ಕೃತ್ಯಗಳು 4:​34, 35) ಹೌದು, ಅನಾಥರು, ವಿಧವೆಯರು ಮತ್ತು ನಿರ್ಗತಿಕರನ್ನು ನೋಡಿಕೊಳ್ಳಲಿಕ್ಕಾಗಿ ಪುರಾತನ ಇಸ್ರಾಯೇಲ್‌ನಲ್ಲಿ ಆರಂಭಿಸಲ್ಪಟ್ಟ ಏರ್ಪಾಡು, ಕ್ರೈಸ್ತ ಸಭೆಯಲ್ಲಿಯೂ ಮುಂದುವರಿಸಲ್ಪಟ್ಟಿತು.

ಕ್ರೈಸ್ತ ಸಭೆಯಿಂದ ಒದಗಿಸಲ್ಪಟ್ಟ ಸಹಾಯವು ಮಿತವಾಗಿತ್ತು ಮತ್ತು ಪ್ರತಿಯೊಂದು ಸಭೆಯ ಆವಶ್ಯಕತೆಗನುಸಾರ ನೀಡಲ್ಪಡುತ್ತಿತ್ತು ಎಂಬುದಂತೂ ಸತ್ಯ. ಹಣವು ಹಾಳುಮಾಡಲ್ಪಡಲಿಲ್ಲ ಮತ್ತು ಯಾರಿಗೆ ಸಹಾಯವು ನೀಡಲ್ಪಟ್ಟಿತ್ತೋ ಅವರು ನಿಜವಾಗಿಯೂ ಕಷ್ಟದಲ್ಲಿದ್ದು ಹಣದ ಆವಶ್ಯಕತೆಯಿದ್ದವರಾಗಿದ್ದರು. ಯಾವ ಕ್ರೈಸ್ತನೂ ಈ ಏರ್ಪಾಡನ್ನು ಅನುಚಿತವಾಗಿ ಉಪಯೋಗಿಸಿಕೊಳ್ಳಬಾರದಿತ್ತು ಮತ್ತು ಸಭೆಯ ಮೇಲೆ ಅನಗತ್ಯವಾದ ಯಾವುದೇ ರೀತಿಯ ಹೊರೆಯನ್ನು ಹೊರಿಸಬಾರದಿತ್ತು. 1 ತಿಮೊಥೆಯ 5:​3-16ರಲ್ಲಿ ತಿಳಿಸಲ್ಪಟ್ಟಿರುವ ಪೌಲನ ಸೂಚನೆಗಳಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅಲ್ಲಿ ನಾವು ನೋಡುವುದೇನೆಂದರೆ, ಅಗತ್ಯದಲ್ಲಿರುವವರ ಸಂಬಂಧಿಕರು ಇವರಿಗೆ ಸಹಾಯಮಾಡಲು ಶಕ್ತರಾಗಿರುವಲ್ಲಿ, ಈ ಸಂಬಂಧಿಕರೇ ಇವರ ಜವಾಬ್ದಾರಿಯನ್ನು ಹೊರಬೇಕಾಗಿತ್ತು. ಅಗತ್ಯದಲ್ಲಿರುವ ವಿಧವೆಯರು ಸಹಾಯಕ್ಕೆ ಅರ್ಹರಾಗಬೇಕಾದರೆ, ಅವರು ಕೆಲವೊಂದು ಆವಶ್ಯಕತೆಗಳನ್ನು ಮುಟ್ಟಬೇಕಾಗಿತ್ತು. ಇದೆಲ್ಲವೂ, ಅಗತ್ಯದಲ್ಲಿರುವವರಿಗೆ ಸಹಾಯಮಾಡಲಿಕ್ಕಾಗಿ ಯೆಹೋವನು ಉಪಯೋಗಿಸುವ ವಿವೇಕಯುತವಾದ ಏರ್ಪಾಡನ್ನು ಪ್ರತಿಬಿಂಬಿಸುತ್ತದೆ. ಆದರೂ, ತೋರಿಸಲ್ಪಡುವ ಕರುಣೆಯನ್ನು ಯಾರೊಬ್ಬರೂ ಅನುಚಿತವಾಗಿ ಉಪಯೋಗಿಸಿಕೊಳ್ಳದಂತೆ ಸಮತೂಕವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ಸಹ ಇದು ತೋರಿಸುತ್ತದೆ.​—2 ಥೆಸಲೊನೀಕ 3:​10-12.

ಇಂದು ಅನಾಥರು ಹಾಗೂ ವಿಧವೆಯರನ್ನು ಪರಾಮರಿಸುವುದು

ಸಂಕಟವನ್ನು ಅನುಭವಿಸುತ್ತಿರುವವರನ್ನು ನೋಡಿಕೊಳ್ಳುವುದು ಹಾಗೂ ಅವರಿಗೆ ಸಹಾಯ ನೀಡುವುದರಲ್ಲಿ, ಗತ ಕಾಲಗಳಲ್ಲಿ ದೇವರ ಸೇವಕರು ಅನುಸರಿಸಿದ ಮೂಲತತ್ತ್ವಗಳನ್ನೇ ಇಂದಿನ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿಯೂ ಅನ್ವಯಿಸಲಾಗುತ್ತದೆ. ಯೇಸು ಹೇಳಿದಂತೆಯೇ, ಅವರ ನಡುವೆ ಸಹೋದರರ ಪ್ರೀತಿಯು ಒಂದು ವಿಶೇಷ ಗುಣವಾಗಿದೆ: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಕೆಲವರು ಕಷ್ಟದಲ್ಲಿರುವುದಾದರೆ, ವಿಪತ್ತಿಗೆ ಬಲಿಯಾಗಿರುವುದಾದರೆ, ಯುದ್ಧ ಅಥವಾ ಅಂತರ್ಯುದ್ಧದ ಪರಿಣಾಮಗಳಿಗೆ ತುತ್ತಾಗಿರುವುದಾದರೆ, ಈ ಅಂತಾರಾಷ್ಟ್ರೀಯ ಸಹೋದರರ ಬಳಗದಲ್ಲಿ ಉಳಿದವರು, ಅಂತಹವರಿಗೆ ಆತ್ಮಿಕವಾಗಿಯೂ ಭೌತಿಕವಾಗಿಯೂ ಸಹಾಯಮಾಡಲು ತವಕಪಡುತ್ತಾರೆ. ಈ ವಿಷಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತೋರಿಸುವಂತಹ ಆಧುನಿಕ ದಿನದ ಅನುಭವಗಳಲ್ಲಿ ಕೆಲವನ್ನು ನಾವೀಗ ಗಮನಿಸೋಣ.

ಪೆಡ್ರೋಗೆ ತನ್ನ ತಾಯಿಯ ಕುರಿತು ಹೆಚ್ಚೇನೂ ನೆನಪಿಲ್ಲ. ಏಕೆಂದರೆ ಅವನು ಒಂದೂವರೆ ವರ್ಷದವನಾಗಿದ್ದಾಗ ಅವನ ತಾಯಿ ತೀರಿಕೊಂಡರು. ಪೆಡ್ರೋ ಐದು ವರ್ಷದವನಾಗಿದ್ದಾಗ, ಅವನ ತಂದೆ ಸಹ ತೀರಿಹೋದರು. ಆದುದರಿಂದ ಪೆಡ್ರೋ ತನ್ನ ಅಣ್ಣಂದಿರೊಟ್ಟಿಗೆ ಒಂಟಿಯಾಗಿ ಜೀವಿಸಿದನು. ಇದಕ್ಕೆ ಮುಂಚೆಯೇ ಯೆಹೋವನ ಸಾಕ್ಷಿಗಳು ಅವನ ತಂದೆಯನ್ನು ಭೇಟಿಯಾಗಲು ಬರುತ್ತಿದ್ದುದರಿಂದ, ಪೆಡ್ರೋ ಮತ್ತು ಅವನ ಅಣ್ಣಂದಿರು ಸಹ ಬೈಬಲ್‌ ಅಭ್ಯಾಸವನ್ನು ಮಾಡಲು ಆರಂಭಿಸಿದರು.

ಪೆಡ್ರೋ ಹೇಳುವುದು: “ನಂತರದ ವಾರವೇ ನಾವು ಕೂಟಗಳಿಗೆ ಹಾಜರಾಗಲು ಆರಂಭಿಸಿದೆವು. ನಾವು ಸಭೆಯ ಸಹೋದರರೊಂದಿಗೆ ಸಹವಾಸಮಾಡಲು ಆರಂಭಿಸಿದಂತೆ, ನಮ್ಮ ಕಡೆಗೆ ಅವರು ವ್ಯಕ್ತಪಡಿಸುತ್ತಿದ್ದ ಪ್ರೀತಿಯನ್ನು ಅನುಭವಿಸತೊಡಗಿದೆವು. ಸಭೆಯು ನನಗೆ ಒಂದು ಆಶ್ರಯದಾಣದಂತಿತ್ತು. ಏಕೆಂದರೆ ಸಹೋದರ ಸಹೋದರಿಯರು ನನಗೆ ಪ್ರೀತಿಯನ್ನೂ ಮಮತೆಯನ್ನೂ ತೋರಿಸಿದರು; ಅವರೇ ನನ್ನ ಹೆತ್ತವರು ಎಂಬ ಅನಿಸಿಕೆಯನ್ನು ಇದು ನನ್ನಲ್ಲಿ ಉಂಟುಮಾಡಿತು.” ಪೆಡ್ರೋ ಜ್ಞಾಪಿಸಿಕೊಳ್ಳುವುದೇನೆಂದರೆ, ಕ್ರೈಸ್ತ ಹಿರಿಯರಲ್ಲಿ ಒಬ್ಬರು ಅವನನ್ನು ತಮ್ಮ ಮನೆಗೆ ಆಮಂತ್ರಿಸುತ್ತಿದ್ದರು. ಅಲ್ಲಿ ಪೆಡ್ರೋ ಅವರ ಕುಟುಂಬದೊಂದಿಗೆ ಮಾತುಕತೆಯಲ್ಲಿ ಒಳಗೂಡುತ್ತಿದ್ದನು ಮತ್ತು ಮನೋರಂಜನೆಯನ್ನೂ ಪಡೆದುಕೊಳ್ಳುತ್ತಿದ್ದನು. “ಈ ಸವಿನೆನಪುಗಳನ್ನು ನಾನು ಈಗಲೂ ಮನಸ್ಸಿನಲ್ಲಿ ಜೋಪಾನವಾಗಿ ಕಾಪಾಡಿಕೊಂಡಿದ್ದೇನೆ” ಎಂದು ಪೆಡ್ರೋ ಹೇಳುತ್ತಾನೆ. ಇವನು 11 ವರ್ಷದವನಾಗಿದ್ದಾಗ ತನ್ನ ನಂಬಿಕೆಯ ವಿಷಯದಲ್ಲಿ ಇತರರಿಗೆ ಸಾಕ್ಷಿನೀಡಲು ಆರಂಭಿಸಿದನು ಮತ್ತು 15ರ ಪ್ರಾಯದಲ್ಲಿ ದೀಕ್ಷಾಸ್ನಾನ ಪಡೆದುಕೊಂಡನು. ಅದೇ ರೀತಿಯಲ್ಲಿ ಅವನ ಅಣ್ಣಂದಿರು ಸಹ ಸಭೆಯವರ ಸಹಾಯದಿಂದ ಆತ್ಮಿಕ ಮಾರ್ಗದಲ್ಲಿ ಹೆಚ್ಚೆಚ್ಚು ಪ್ರಗತಿಯನ್ನು ಮಾಡಿದರು.

ಡೇವಿಡ್‌ನ ಉದಾಹರಣೆಯನ್ನು ಸಹ ಪರಿಗಣಿಸಿರಿ. ಅವನ ಹೆತ್ತವರು ಪ್ರತ್ಯೇಕವಾದಾಗ, ಅವರು ಅವನನ್ನೂ ಅವನ ಅವಳಿ ಸಹೋದರಿಯನ್ನೂ ಬಿಟ್ಟುಹೋದರು. ಅವರ ಅಜ್ಜ ಅಜ್ಜಿ ಮತ್ತು ಆಂಟಿಯು ಅವರನ್ನು ಬೆಳೆಸಿದರು. “ನಾವು ದೊಡ್ಡವರಾಗಿ ನಮ್ಮ ಸನ್ನಿವೇಶದ ಬಗ್ಗೆ ಅರ್ಥಮಾಡಿಕೊಂಡಾಗ, ನಮಗೆ ತುಂಬ ಅಭದ್ರತೆ ಹಾಗೂ ದುಃಖದ ಅನಿಸಿಕೆಯಾಯಿತು. ನಮಗೆ ಬೇರೆಯವರ ಬೆಂಬಲದ ಅಗತ್ಯವಿದೆ ಎಂದೆನಿಸುತ್ತಿತ್ತು. ನನ್ನ ಆಂಟಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದರು ಮತ್ತು ಈ ಕಾರಣದಿಂದ ನಮಗೂ ಬೈಬಲ್‌ ಸತ್ಯತೆಯು ಕಲಿಸಲ್ಪಟ್ಟಿತು. ಸಭೆಯ ಸಹೋದರರು ನಮಗೆ ಮಮತೆಯನ್ನು ತೋರಿಸಿದರು ಮತ್ತು ನಮ್ಮೊಂದಿಗೆ ಸ್ನೇಹವನ್ನು ಬೆಳೆಸಿದರು. ಅವರು ನಮ್ಮನ್ನು ತುಂಬ ಇಷ್ಟಪಡುತ್ತಿದ್ದರು ಮತ್ತು ನಮ್ಮ ಗುರಿಗಳನ್ನು ಸಾಧಿಸುವಂತೆಯೂ ಯೆಹೋವನ ಕೆಲಸವನ್ನು ಮಾಡುತ್ತಾ ಮುಂದುವರಿಯುವಂತೆಯೂ ನಮ್ಮನ್ನು ಉತ್ತೇಜಿಸಿದರು. ನಾನು ಹತ್ತು ವರ್ಷದವನಾದಾಗ, ಒಬ್ಬ ಶುಶ್ರೂಷಾ ಸೇವಕನು ನನ್ನ ಮನೆಗೆ ಬಂದು ನನ್ನನ್ನು ಕ್ಷೇತ್ರ ಸೇವೆಗೆ ಕರೆದೊಯ್ಯುತ್ತಿದ್ದನು. ಇನ್ನೊಬ್ಬ ಸಹೋದರನು, ನಾನು ಅಧಿವೇಶನಗಳಿಗೆ ಹಾಜರಾದಾಗ ನನ್ನ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದನು. ಇನ್ನೂ ಒಬ್ಬ ಸಹೋದರನು, ರಾಜ್ಯ ಸಭಾಗೃಹದಲ್ಲಿ ಕಾಣಿಕೆಗಳನ್ನು ನೀಡಲು ನನಗೆ ಸಹಾಯಮಾಡಿದನು.”

ಡೇವಿಡ್‌ 17 ವರ್ಷದವನಾಗಿದ್ದಾಗ ದೀಕ್ಷಾಸ್ನಾನ ಪಡೆದುಕೊಂಡನು. ತದನಂತರ ಅವನು ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆಮಾಡಲಾರಂಭಿಸಿದನು. ಈಗಲೂ ಅವನು ಒಪ್ಪಿಕೊಳ್ಳುವುದು: “ನನಗೆ ಶಿಕ್ಷಣ ನೀಡುವ ಮೂಲಕ ಮತ್ತು ಸಹಾಯಕರವಾದ ಸಲಹೆಗಳನ್ನು ಕೊಡುವ ಮೂಲಕ ಅನೇಕ ಹಿರಿಯರು ನನಗೆ ಸಹಾಯಮಾಡಿದ್ದಾರೆ. ಈ ರೀತಿಯಲ್ಲಿ ಅಭದ್ರತೆ ಹಾಗೂ ಒಂಟಿತನದ ಭಾವನೆಯನ್ನು ಜಯಿಸಲು ಶಕ್ತನಾಗಿದ್ದೇನೆ.”

ಮೆಕ್ಸಿಕೊದಲ್ಲಿರುವ ಒಂದು ಸಭೆಯಲ್ಲಿ ಸಹಾಯದ ಅಗತ್ಯವಿರುವಂತಹ ಅನೇಕ ವಿಧವೆಯರಿದ್ದಾರೆ. ಆ ಸಭೆಯ ಹಿರಿಯರಾದ ಏಬೆಲ್‌ ಹೇಳುವುದು: “ವಿಧವೆಯರಿಗೆ ಇರುವ ಅತಿ ದೊಡ್ಡ ಆವಶ್ಯಕತೆ, ಭಾವನಾತ್ಮಕವಾದ ಬೆಂಬಲವೇ ಎಂಬುದು ನನಗೆ ಚೆನ್ನಾಗಿ ಗೊತ್ತಾಗಿದೆ. ಕೆಲವೊಮ್ಮೆ ಅವರು ತುಂಬ ಖಿನ್ನತೆಯನ್ನು ಅನುಭವಿಸುತ್ತಾರೆ; ಅವರಿಗೆ ಒಂಟಿತನದ ಅನಿಸಿಕೆಯಾಗುತ್ತದೆ. ಆದುದರಿಂದ, ಅವರಿಗೆ ಬೆಂಬಲ ನೀಡುವುದು, ಕಿವಿಗೊಡುವುದು ತುಂಬ ಪ್ರಾಮುಖ್ಯವಾದದ್ದಾಗಿದೆ. ನಾವು [ಸಭಾ ಹಿರಿಯರು] ಆಗಿಂದಾಗ್ಗೆ ಅವರನ್ನು ಭೇಟಿಮಾಡುತ್ತಿರುತ್ತೇವೆ. ಅವರ ಸಮಸ್ಯೆಗಳಿಗೆ ಗಮನಕೊಡಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳುವುದು ಒಳ್ಳೇದಾಗಿದೆ. ಇದು ಅವರಿಗೆ ಆತ್ಮಿಕ ಸಾಂತ್ವನವನ್ನು ನೀಡುವುದರಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ.” ಆದರೂ, ಕೆಲವೊಮ್ಮೆ ಹಣಕಾಸಿನ ಸಹಾಯವೂ ಬೇಕಾಗಿರುತ್ತದೆ. “ವಿಧವೆಯಾಗಿರುವ ಒಬ್ಬ ಸಹೋದರಿಗೋಸ್ಕರ ನಾವು ಈಗ ಮನೆಯನ್ನು ಕಟ್ಟುತ್ತಿದ್ದೇವೆ. ಕೆಲವು ಶನಿವಾರಗಳಂದು ಹಾಗೂ ವಾರದ ಕೆಲವು ಮಧ್ಯಾಹ್ನಗಳಲ್ಲಿ ನಾವು ಅವಳ ಮನೆಯನ್ನು ಕಟ್ಟುವ ಕೆಲಸದಲ್ಲಿ ಭಾಗವಹಿಸುತ್ತೇವೆ” ಎಂದು ಏಬೆಲ್‌ ಹೇಳಿದರು.

ಅನಾಥರು ಮತ್ತು ವಿಧವೆಯರಿಗೆ ಸಹಾಯಮಾಡುವುದರಲ್ಲಿ ತನಗಾದ ಸ್ವಂತ ಅನುಭವದ ಕುರಿತು ಇನ್ನೊಬ್ಬ ಸಭಾ ಹಿರಿಯನು ಹೇಳುವುದು: “ವಿಧವೆಯರಿಗಿಂತಲೂ ಅನಾಥರಿಗೆ ಕ್ರೈಸ್ತ ಪ್ರೀತಿಯ ಆವಶ್ಯಕತೆ ಹೆಚ್ಚು ಇರುತ್ತದೆ ಎಂಬುದು ನನ್ನ ಅಭಿಪ್ರಾಯ. ತಂದೆತಾಯಿಯರಿರುವ ಮಕ್ಕಳು ಹಾಗೂ ಹದಿವಯಸ್ಕರಿಗಿಂತಲೂ ಹೆಚ್ಚಾಗಿ ಅನಾಥರು, ತಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಸಂಕಟಪಡುವುದನ್ನು ನಾನು ಗಮನಿಸಿದ್ದೇನೆ. ಸಹೋದರ ಸಹೋದರಿಯರು ಅವರಿಗೆ ಬಹಳಷ್ಟು ಮಮತೆಯನ್ನು ತೋರಿಸುವ ಅಗತ್ಯವಿದೆ. ಕೂಟಗಳ ಬಳಿಕ ಅವರನ್ನು ಸಂಧಿಸಿ, ಅವರ ಹಿತಕ್ಷೇಮದ ಕುರಿತು ವಿಚಾರಿಸುವುದು ಒಳ್ಳೇದು. ಚಿಕ್ಕ ಹುಡುಗನಾಗಿದ್ದಾಗ ಅನಾಥನಾಗಿದ್ದು, ಈಗ ವಿವಾಹಿತನಾಗಿರುವ ಒಬ್ಬ ಸಹೋದರನು ನಮ್ಮ ಸಭೆಯಲ್ಲಿದ್ದಾನೆ. ಕೂಟಗಳಲ್ಲಿ ನಾನು ಯಾವಾಗಲೂ ಅವನನ್ನು ಹೃತ್ಪೂರ್ವಕವಾಗಿ ಅಭಿವಂದಿಸುತ್ತೇನೆ, ಮತ್ತು ನನ್ನನ್ನು ನೋಡಿದಾಗಲೆಲ್ಲಾ ಅವನು ನನ್ನನ್ನು ಅಪ್ಪಿಕೊಳ್ಳುತ್ತಾನೆ. ಇದು ನಿಜವಾದ ಸಹೋದರ ಪ್ರೀತಿಯ ಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ.”

ಯೆಹೋವನು ‘ಬಡವರನ್ನು ಉದ್ಧರಿಸುವನು’

ವಿಧವೆಯರು ಹಾಗೂ ಅನಾಥರ ಸನ್ನಿವೇಶವನ್ನು ಯಶಸ್ವಿಕರವಾಗಿ ನಿಭಾಯಿಸಲು, ಯೆಹೋವನಲ್ಲಿ ಪೂರ್ಣ ಭರವಸೆಯು ಮೂಲಭೂತವಾದ ಆವಶ್ಯಕತೆಯಾಗಿದೆ. ಆತನ ಕುರಿತು ಹೀಗೆ ಹೇಳಲಾಗಿದೆ: “ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ. ಆತನು ಅನಾಥರಿಗೂ ವಿಧವೆಯರಿಗೂ ಆಧಾರವಾಗಿದ್ದಾನೆ.” (ಕೀರ್ತನೆ 146:9) ಈ ರೀತಿಯ ಸಮಸ್ಯೆಗಳಿಗಿರುವ ಪೂರ್ಣ ಪರಿಹಾರವು, ಯೇಸು ಕ್ರಿಸ್ತನ ಆಳ್ವಿಕೆಯ ಕೆಳಗೆ ಬರಲಿರುವ ದೇವರ ರಾಜ್ಯದ ಮೂಲಕವಾಗಿ ಮಾತ್ರ ಸಿಗಲಿದೆ. ಮೆಸ್ಸೀಯನಿಂದ ನಡೆಸಲ್ಪಡುವ ಆ ಆಳ್ವಿಕೆಯನ್ನು ಪ್ರವಾದನಾತ್ಮಕವಾಗಿ ವರ್ಣಿಸುತ್ತಾ ಕೀರ್ತನೆಗಾರನು ಬರೆದುದು: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.”​—ಕೀರ್ತನೆ 72:​12, 13.

ಈ ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯವು ಹತ್ತಿರವಾದಂತೆ, ಕ್ರೈಸ್ತರು ಎದುರಿಸುವ ಒತ್ತಡಗಳು ಸಹ ಅಧಿಕಗೊಳ್ಳುತ್ತವೆ ಎಂಬುದಂತೂ ಖಂಡಿತ. (ಮತ್ತಾಯ 24:​9-13) ಪ್ರತಿ ದಿನ ಕ್ರೈಸ್ತರು ಪರಸ್ಪರ ಹಿತಾಸಕ್ತಿಯನ್ನು ತೋರಿಸುವ ಹಾಗೂ ‘ಅವರ ಮಧ್ಯೆ ಯಥಾರ್ಥವಾದ ಪ್ರೀತಿಯಿರುವ’ ಆವಶ್ಯಕತೆಯಿದೆ. (1 ಪೇತ್ರ 4:​7-10) ಕ್ರೈಸ್ತ ಪುರುಷರು, ವಿಶೇಷವಾಗಿ ಹಿರಿಯರು, ಅನಾಥರಾಗಿರುವವರ ಬಗ್ಗೆ ಚಿಂತಿಸುವ ಹಾಗೂ ಅವರಿಗೆ ಸಹಾನುಭೂತಿಯನ್ನು ತೋರಿಸುವ ಅಗತ್ಯವಿದೆ. ಇದಲ್ಲದೆ, ಸಭೆಯಲ್ಲಿರುವ ಪ್ರೌಢ ಸ್ತ್ರೀಯರು, ವಿಧವೆಯರಿಗೆ ಬೇಕಾದ ಬೆಂಬಲವನ್ನು ಒದಗಿಸಸಾಧ್ಯವಿದೆ ಮತ್ತು ಅವರಿಗೆ ಸಾಂತ್ವನದ ಮೂಲವಾಗಿರಸಾಧ್ಯವಿದೆ. (ತೀತ 2:​3-5) ವಾಸ್ತವದಲ್ಲಿ, ಸಂಕಟವನ್ನು ಅನುಭವಿಸುತ್ತಿರುವ ಇತರರ ಬಗ್ಗೆ ಕಾಳಜಿ ತೋರಿಸುವ ಮೂಲಕ ಪ್ರತಿಯೊಬ್ಬರೂ ಅವರಿಗೆ ಸಹಾಯಮಾಡಸಾಧ್ಯವಿದೆ.

ನಿಜ ಕ್ರೈಸ್ತರು ‘ಕೊರತೆಯಲ್ಲಿ ಬಿದ್ದಿರುವ ತಮ್ಮ ಸಹೋದರನನ್ನು’ ನೋಡಿದಾಗ, ‘ಅವನನ್ನು ಕರುಣಿಸದೆ ಬಿಡುವುದಿಲ್ಲ.’ ಅಪೊಸ್ತಲ ಯೋಹಾನನ ಈ ಬುದ್ಧಿವಾದಕ್ಕೆ ಕಿವಿಗೊಡಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ: “ಪ್ರಿಯರಾದ ಮಕ್ಕಳೇ, ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು.” (1 ಯೋಹಾನ 3:​17, 18) ಆದುದರಿಂದ, ‘ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರನ್ನೂ [“ಅನಾಥರನ್ನೂ,” NW] ವಿಧವೆಯರನ್ನೂ ಪರಾಮರಿಸೋಣ.’​—ಯಾಕೋಬ 1:27.

[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು.”—1 ಯೋಹಾನ 3:​18

[ಪುಟ 10ರಲ್ಲಿರುವ ಚಿತ್ರಗಳು]

ನಿಜ ಕ್ರೈಸ್ತರು ಅನಾಥರನ್ನೂ ವಿಧವೆಯರನ್ನೂ ಭೌತಿಕವಾಗಿಯೂ ಆತ್ಮಿಕವಾಗಿಯೂ ಭಾವನಾತ್ಮಕವಾಗಿಯೂ ಪರಾಮರಿಸುತ್ತಾರೆ