ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊಡುವುದರಿಂದ ಸಿಗುವ ಆನಂದದಲ್ಲಿ ಪಾಲಿಗರಾಗಿರಿ!

ಕೊಡುವುದರಿಂದ ಸಿಗುವ ಆನಂದದಲ್ಲಿ ಪಾಲಿಗರಾಗಿರಿ!

ಕೊಡುವುದರಿಂದ ಸಿಗುವ ಆನಂದದಲ್ಲಿ ಪಾಲಿಗರಾಗಿರಿ!

“ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ.”​—ಅ. ಕೃತ್ಯಗಳು 20:​35, NW.

1. ಕೊಡುವುದರಲ್ಲಿ ಸಿಗುವ ಆನಂದವನ್ನು ಯೆಹೋವನು ಹೇಗೆ ತೋರಿಸುತ್ತಾನೆ?

ಸತ್ಯವನ್ನು ತಿಳಿದುಕೊಳ್ಳುವುದರಿಂದ ಸಿಗುವ ಆನಂದ ಹಾಗೂ ಆಶೀರ್ವಾದಗಳು, ದೇವರಿಂದ ಕೊಡಲ್ಪಟ್ಟಿರುವ ಅಮೂಲ್ಯವಾದ ಕೊಡುಗೆಗಳಾಗಿವೆ. ಯೆಹೋವನ ಬಗ್ಗೆ ಯಾರು ತಿಳಿದುಕೊಂಡಿದ್ದಾರೋ ಅವರು ಅತ್ಯಾನಂದಪಡಲು ಅನೇಕ ಕಾರಣಗಳಿವೆ. ಉಡುಗೊರೆಯನ್ನು ಪಡೆದುಕೊಳ್ಳುವುದರಲ್ಲಿ ಆನಂದ ಸಿಗುತ್ತದಾದರೂ, ಉಡುಗೊರೆಯನ್ನು ಕೊಡುವುದರಲ್ಲಿಯೂ ಆನಂದ ಸಿಗುತ್ತದೆ. ಯೆಹೋವನು ‘ಎಲ್ಲಾ ಒಳ್ಳೇ ದಾನಗಳು ಹಾಗೂ ಕುಂದಿಲ್ಲದ ಎಲ್ಲಾ ವರಗಳ’ ದಾತನಾಗಿದ್ದಾನೆ ಮತ್ತು “ಸಂತೋಷಭರಿತ ದೇವರಾಗಿದ್ದಾನೆ.” (ಯಾಕೋಬ 1:17; 1 ತಿಮೊಥೆಯ 1:​11, NW) ಯಾರು ತನಗೆ ಕಿವಿಗೊಡುತ್ತಾರೋ ಅವರೆಲ್ಲರಿಗೂ ಯೆಹೋವನು ಹಿತಕರವಾದ ಬೋಧನೆಗಳನ್ನು ನೀಡುತ್ತಾನೆ. ಇದಲ್ಲದೆ, ಪ್ರೀತಿಯ ಉಪದೇಶಗಳಿಗೆ ತಮ್ಮ ಮಕ್ಕಳು ಪ್ರತಿಕ್ರಿಯೆ ತೋರಿಸುವಾಗ ಹೆತ್ತವರು ಹೇಗೆ ಆನಂದಿಸುತ್ತಾರೋ ಹಾಗೆಯೇ, ಆತನು ಯಾರಿಗೆ ಬೋಧಿಸುತ್ತಾನೋ ಅವರು ವಿಧೇಯತೆ ತೋರಿಸುವಾಗ ಆತನಿಗೆ ತುಂಬ ಸಂತೋಷವಾಗುತ್ತದೆ.​—ಜ್ಞಾನೋಕ್ತಿ 27:11.

2. (ಎ) ಕೊಡುವುದರ ವಿಷಯದಲ್ಲಿ ಯೇಸು ಏನು ಹೇಳಿದನು? (ಬಿ) ಇತರರಿಗೆ ಬೈಬಲ್‌ ಸತ್ಯವನ್ನು ಕಲಿಸುವಾಗ ನಮಗೆ ಯಾವ ಸಂತೋಷ ಸಿಗುತ್ತದೆ?

2 ತದ್ರೀತಿಯಲ್ಲಿ, ಯೇಸು ಭೂಮಿಯಲ್ಲಿದ್ದಾಗ, ಅವನ ಬೋಧನೆಗೆ ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ನೋಡಿ ತುಂಬ ಸಂತೋಷಪಟ್ಟನು. ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ” ಎಂದು ಯೇಸು ಹೇಳಿದನೆಂದು ಅಪೊಸ್ತಲ ಪೌಲನು ಉದ್ಧರಿಸಿದನು. (ಅ. ಕೃತ್ಯಗಳು 20:​35, NW) ಬೈಬಲ್‌ ಸತ್ಯವನ್ನು ಇತರರಿಗೆ ಕಲಿಸುವಾಗ ನಮಗೆ ಸಿಗುವಂತಹ ಸಂತೋಷವು, ಅವರು ನಮ್ಮ ಧಾರ್ಮಿಕ ನಂಬಿಕೆಗಳನ್ನು ಅಂಗೀಕರಿಸುವಂತೆ ಮಾಡಿದ್ದೇವೆಂಬ ಸಂತೃಪ್ತಿ ಮಾತ್ರ ಆಗಿರುವುದಿಲ್ಲ. ಅದಕ್ಕಿಂತಲೂ ಮಿಗಿಲಾಗಿ, ಯಥಾರ್ಥವಾದ ಹಾಗೂ ಶಾಶ್ವತ ಮೌಲ್ಯವುಳ್ಳ ಯಾವುದನ್ನೋ ನಾವು ಅವರಿಗೆ ಕೊಡುತ್ತಿದ್ದೇವೆ ಎಂಬುದನ್ನು ತಿಳಿದಿರುವುದರಿಂದ ಅಪಾರ ಆನಂದವಾಗುತ್ತದೆ. ಆತ್ಮಿಕವಾಗಿ ಕೊಡುವ ಮೂಲಕ, ಜನರು ಈಗ ಮತ್ತು ನಿತ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ನಾವು ಅವರಿಗೆ ಸಹಾಯಮಾಡಸಾಧ್ಯವಿದೆ.​—1 ತಿಮೊಥೆಯ 4:8.

ಕೊಡುವುದು ಆನಂದವನ್ನು ತರುತ್ತದೆ

3. (ಎ) ಇತರರಿಗೆ ಆತ್ಮಿಕವಾಗಿ ಸಹಾಯಮಾಡುವುದರಲ್ಲಿ ತಮಗೆ ಸಿಕ್ಕಿದ ಆನಂದವನ್ನು ಅಪೊಸ್ತಲ ಪೌಲ ಹಾಗೂ ಯೋಹಾನರು ಹೇಗೆ ವ್ಯಕ್ತಪಡಿಸಿದರು? (ಬಿ) ನಮ್ಮ ಮಕ್ಕಳಿಗೆ ಬೈಬಲ್‌ ಸತ್ಯವನ್ನು ನೀಡುವುದು ಏಕೆ ಪ್ರೀತಿಯ ಅಭಿವ್ಯಕ್ತಿಯಾಗಿದೆ?

3 ಯೆಹೋವನು ಹಾಗೂ ಯೇಸು ಆತ್ಮಿಕ ಕೊಡುಗೆಗಳನ್ನು ಕೊಡುವುದರಲ್ಲಿ ಆನಂದಿಸುವಂತೆಯೇ, ಕ್ರೈಸ್ತರು ಸಹ ಕೊಡುವುದರಲ್ಲಿ ಆನಂದಿಸುತ್ತಾರೆ. ದೇವರ ವಾಕ್ಯದ ಸತ್ಯವನ್ನು ಕಲಿಯುವಂತೆ ಇತರರಿಗೆ ಸಹಾಯಮಾಡಿದ್ದೇನೆ ಎಂಬುದನ್ನು ತಿಳಿದವನಾಗಿದ್ದು ಅಪೊಸ್ತಲ ಪೌಲನು ಸಂತೋಷಭರಿತನಾಗಿದ್ದನು. ಆದುದರಿಂದಲೇ, ಥೆಸಲೊನೀಕದಲ್ಲಿದ್ದ ಸಭೆಗೆ ಅವನು ಬರೆದುದು: “ನಮ್ಮ ಭರವಸವೂ ನಮ್ಮ ಸಂತೋಷವೂ ನಾವು ಹೊಗಳಿಕೊಳ್ಳುವ ಜಯಮಾಲೆಯೂ ಯಾರು? ನೀವೇ ಅಲ್ಲವೇ. ನಿಜವಾಗಿ ನೀವೇ ನಮ್ಮ ಗೌರವವೂ ಸಂತೋಷವೂ ಆಗಿದ್ದೀರಿ.” (1 ಥೆಸಲೊನೀಕ 2:​19, 20) ಅದೇ ರೀತಿಯಲ್ಲಿ ಅಪೊಸ್ತಲ ಯೋಹಾನನು ತನ್ನ ಆತ್ಮಿಕ ಮಕ್ಕಳ ಕುರಿತಾಗಿ ಬರೆದುದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.” (3 ಯೋಹಾನ 4) ನಮ್ಮ ಸ್ವಂತ ಮಕ್ಕಳು ನಮ್ಮ ಆತ್ಮಿಕ ಮಕ್ಕಳಾಗುವಂತೆ ಸಹಾಯಮಾಡುವುದರಿಂದ ಸಿಗುವ ಆನಂದದ ಕುರಿತಾಗಿಯೂ ಆಲೋಚಿಸಿರಿ! “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಮಕ್ಕಳನ್ನು ಬೆಳೆಸುವುದು, ಹೆತ್ತವರ ಪ್ರೀತಿಯ ಅಭಿವ್ಯಕ್ತಿಯಾಗಿದೆ. (ಎಫೆಸ 6:​4, NW) ಹೀಗೆ ಮಾಡುವ ಮೂಲಕ ಹೆತ್ತವರು, ತಮ್ಮ ಮಕ್ಕಳ ನಿತ್ಯ ಹಿತಕ್ಷೇಮದಲ್ಲಿ ತಮಗೆ ಆಸಕ್ತಿಯಿದೆ ಎಂಬುದನ್ನು ತೋರಿಸುತ್ತಾರೆ. ತಾವು ನೀಡುವ ತರಬೇತಿಗೆ ಮಕ್ಕಳು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸುವಾಗ, ಹೆತ್ತವರಿಗೆ ತುಂಬ ಆನಂದ ಮತ್ತು ಸಂತೃಪ್ತಿ ಸಿಗುತ್ತದೆ.

4. ಆತ್ಮಿಕ ಕೊಡುವಿಕೆಯ ಆನಂದವನ್ನು ಯಾವ ಅನುಭವವು ರುಜುಪಡಿಸುತ್ತದೆ?

4 ಡೆಲ್‌ ಪೂರ್ಣ ಸಮಯದ ಪಯನೀಯರ್‌ ಸೇವೆಯನ್ನು ಮಾಡುತ್ತಿದ್ದಾಳೆ ಮತ್ತು ಐದು ಮಕ್ಕಳ ತಾಯಿಯಾಗಿದ್ದಾಳೆ. ಅವಳು ಹೇಳುವುದು: “ನನ್ನ ಮಕ್ಕಳಲ್ಲಿ ನಾಲ್ಕು ಮಂದಿ ‘ಸತ್ಯವನ್ನನುಸರಿಸಿ ನಡೆಯುತ್ತಿರು’ವುದಕ್ಕಾಗಿ ನಾನು ತುಂಬ ಕೃತಜ್ಞಳಾಗಿರುವುದರಿಂದ, ಅಪೊಸ್ತಲ ಯೋಹಾನನ ಮಾತುಗಳಲ್ಲಿ ಅಡಗಿರುವ ಭಾವನೆಗಳನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ಕುಟುಂಬಗಳು ಸತ್ಯಾರಾಧನೆಯಲ್ಲಿ ಐಕ್ಯವಾಗಿರುವುದು ಯೆಹೋವನಿಗೆ ಘನತೆ ಹಾಗೂ ಮಹಿಮೆಯನ್ನು ತರುತ್ತದೆ ಎಂಬುದು ನನಗೆ ಗೊತ್ತಿದೆ. ಆದುದರಿಂದ, ನನ್ನ ಮಕ್ಕಳಲ್ಲಿ ಸತ್ಯವನ್ನು ಬೇರೂರಿಸಲು ನಾನು ಮಾಡುತ್ತಿರುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುತ್ತಿರುವುದನ್ನು ನೋಡಿ ನನಗೆ ತುಂಬ ತೃಪ್ತಿಯಾಗುತ್ತದೆ. ನನ್ನ ಕುಟುಂಬ ಸಮೇತವಾಗಿ ಪರದೈಸಿನಲ್ಲಿ ಅನಂತಕಾಲ ಜೀವಿಸುವ ಸುಂದರ ಪ್ರತೀಕ್ಷೆಯು ನನ್ನಲ್ಲಿ ನಿರೀಕ್ಷೆಯನ್ನು ತುಂಬುತ್ತದೆ ಮತ್ತು ಕಷ್ಟಗಳು ಹಾಗೂ ತೊಂದರೆಗಳ ಮಧ್ಯೆಯೂ ತಾಳ್ಮೆಯಿಂದ ಮುಂದುವರಿಯುವಂತೆ ನನ್ನನ್ನು ಪ್ರಚೋದಿಸುತ್ತದೆ.” ದುಃಖದ ಸಂಗತಿಯೇನೆಂದರೆ, ಅಕ್ರೈಸ್ತ ಜೀವನಮಾರ್ಗವನ್ನು ಬೆನ್ನಟ್ಟಿದ್ದರ ಕಾರಣ, ಡೆಲ್‌ಳ ಹೆಣ್ಣು ಮಕ್ಕಳಲ್ಲಿ ಒಬ್ಬಳು ಸಭೆಯಿಂದ ಬಹಿಷ್ಕರಿಸಲ್ಪಟ್ಟಿದ್ದಾಳೆ. ಹಾಗಿದ್ದರೂ, ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಡೆಲ್‌ ತುಂಬ ಕಷ್ಟಪಡುತ್ತಾಳೆ. ಅವಳು ಹೇಳುವುದು: “ಒಂದಲ್ಲ ಒಂದು ದಿನ ನನ್ನ ಮಗಳು ದೀನಭಾವದಿಂದ ಹಾಗೂ ಯಥಾರ್ಥ ಮನಸ್ಸಿನಿಂದ ಯೆಹೋವನ ಬಳಿಗೆ ಹಿಂದಿರುಗುವಳು ಎಂಬ ನಿರೀಕ್ಷೆ ನನಗಿದೆ. ಆದರೆ ನನ್ನ ಉಳಿದ ಮಕ್ಕಳು ನಂಬಿಗಸ್ತಿಕೆಯಿಂದ ದೇವರ ಸೇವೆಮಾಡುತ್ತಾ ಮುಂದುವರಿಯುತ್ತಿರುವುದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಸಲ್ಲಿಸುತ್ತೇನೆ. ನನ್ನ ಮನಸ್ಸಿನಲ್ಲಿರುವ ಆನಂದವೇ, ನನಗೆ ನಿಜವಾದ ಬಲದ ಮೂಲವಾಗಿದೆ.”​—ನೆಹೆಮೀಯ 8:10.

ಶಾಶ್ವತವಾದ ಸ್ನೇಹವನ್ನು ಬೆಳೆಸಿಕೊಳ್ಳುವುದು

5. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳುವಾಗ, ಯಾವ ತಿಳುವಳಿಕೆಯು ನಮಗೆ ಸಂತೃಪ್ತಿಯನ್ನು ನೀಡುತ್ತದೆ?

5 ಯೇಸು ತನ್ನ ಶಿಷ್ಯರಿಗೆ, ಕ್ರೈಸ್ತ ಶಿಷ್ಯರನ್ನು ಮಾಡುವಂತೆ ಹಾಗೂ ಯೆಹೋವನ ಕುರಿತು ಹಾಗೂ ಆತನ ಆವಶ್ಯಕತೆಗಳ ಕುರಿತು ಅವರಿಗೆ ಕಲಿಸುವಂತೆ ಮಾರ್ಗದರ್ಶಿಸಿದನು. (ಮತ್ತಾಯ 28:19, 20) ಯೆಹೋವನು ಹಾಗೂ ಯೇಸು ಇಬ್ಬರೂ, ಸತ್ಯ ಮಾರ್ಗದ ಕುರಿತು ತಿಳಿದುಕೊಳ್ಳುವಂತೆ ಜನರಿಗೆ ನಿಸ್ವಾರ್ಥಭಾವದಿಂದ ಸಹಾಯಮಾಡಿದ್ದಾರೆ. ಆದುದರಿಂದ, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳುವಾಗ, ಆರಂಭದ ಕ್ರೈಸ್ತರಂತೆಯೇ ನಾವು ಸಹ ಯೆಹೋವನ ಹಾಗೂ ಯೇಸುವಿನ ಮಾದರಿಯನ್ನು ಅನುಸರಿಸುತ್ತಿದ್ದೇವೆ ಎಂಬ ಸಂತೃಪ್ತಿ ನಮಗಿರುತ್ತದೆ. (1 ಕೊರಿಂಥ 11:1) ಹೀಗೆ, ಸರ್ವಶಕ್ತನಾದ ದೇವರೊಂದಿಗೆ ಹಾಗೂ ಆತನ ಪ್ರಿಯ ಕುಮಾರನೊಂದಿಗೆ ನಾವು ಸಹಕರಿಸುವಾಗ, ನಮ್ಮ ಜೀವಿತಗಳಿಗೆ ನಿಜವಾದ ಅರ್ಥವಿರುತ್ತದೆ. ದೇವರ “ಜೊತೆಕೆಲಸ”ಗಾರರಲ್ಲಿ ಒಬ್ಬರಾಗಿ ಪರಿಗಣಿಸಲ್ಪಡುವುದು ಎಂತಹ ಒಂದು ಆಶೀರ್ವಾದವಾಗಿದೆ! (1 ಕೊರಿಂಥ 3:9) ಸುವಾರ್ತೆಯನ್ನು ಸಾರುವ ಈ ಚಟುವಟಿಕೆಯಲ್ಲಿ ದೇವದೂತರು ಸಹ ಪಾಲ್ಗೊಳ್ಳುತ್ತಾರೆ ಎಂಬುದು ರೋಮಾಂಚಕ ವಿಷಯವಲ್ಲವೋ?​—ಪ್ರಕಟನೆ 14:​6, 7.

6. ಆತ್ಮಿಕ ಕೊಡುವಿಕೆಯಲ್ಲಿ ನಾವು ಪಾಲ್ಗೊಳ್ಳುವಾಗ, ಯಾರು ನಮ್ಮ ಸ್ನೇಹಿತರಾಗುತ್ತಾರೆ?

6 ವಾಸ್ತವದಲ್ಲಿ, ಆತ್ಮಿಕವಾಗಿ ಕೊಡುವಂತಹ ಈ ಕೆಲಸದಲ್ಲಿ ಭಾಗವಹಿಸುವ ಮೂಲಕ, ದೇವರ ಜೊತೆ ಕೆಲಸದವರಾಗಿರುವುದಕ್ಕಿಂತಲೂ ಹೆಚ್ಚಿನ ಸುಯೋಗ ನಮಗೆ ಸಿಗಸಾಧ್ಯವಿದೆ. ಅಂದರೆ, ಆತನೊಂದಿಗೆ ನಾವು ಶಾಶ್ವತವಾದ ಸ್ನೇಹಸಂಬಂಧವನ್ನು ಪಡೆದುಕೊಳ್ಳಸಾಧ್ಯವಿದೆ. ಅಬ್ರಹಾಮನ ನಂಬಿಕೆಯ ಕಾರಣದಿಂದ ಅವನು ಯೆಹೋವನ ಸ್ನೇಹಿತನೆಂದು ಕರೆಯಲ್ಪಟ್ಟನು. (ಯಾಕೋಬ 2:23) ನಾವು ದೇವರ ಚಿತ್ತವನ್ನು ಮಾಡಲು ಶ್ರಮಿಸುವಾಗ, ನಾವು ಸಹ ದೇವರ ಸ್ನೇಹಿತರಾಗಸಾಧ್ಯವಿದೆ. ನಾವು ಹಾಗೆ ಮಾಡುವಲ್ಲಿ, ಯೇಸುವಿನ ಸ್ನೇಹಿತರೂ ಆಗುವೆವು. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.” (ಯೋಹಾನ 15:15) ಪ್ರಸಿದ್ಧ ವ್ಯಕ್ತಿಗಳು ಅಥವಾ ಉನ್ನತ ಅಧಿಕಾರಿಗಳ ಸ್ನೇಹಿತರೆಂದು ಪರಿಗಣಿಸಲ್ಪಡುವುದರಲ್ಲಿ ಅನೇಕರು ತುಂಬ ಆನಂದಪಡುತ್ತಾರೆ. ನಾವಾದರೋ ಇಡೀ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧರಾಗಿರುವ ಇಬ್ಬರು ವ್ಯಕ್ತಿಗಳ ಸ್ನೇಹಿತರಾಗಿ ಪರಿಗಣಿಸಲ್ಪಡಸಾಧ್ಯವಿದೆ!

7. (ಎ) ಒಬ್ಬ ಸ್ತ್ರೀಯು ಯಾವ ರೀತಿಯಲ್ಲಿ ನಿಜವಾದ ಸ್ನೇಹಿತೆಯನ್ನು ಪಡೆದುಕೊಂಡಳು? (ಬಿ) ಇದೇ ರೀತಿಯ ಅನುಭವ ನಿಮಗೂ ಆಗಿದೆಯೋ?

7 ಅಷ್ಟುಮಾತ್ರವಲ್ಲ, ದೇವರ ಬಗ್ಗೆ ತಿಳಿದುಕೊಳ್ಳುವಂತೆ ನಾವು ಜನರಿಗೆ ಸಹಾಯಮಾಡುವಾಗ, ಅವರು ಸಹ ನಮ್ಮ ಸ್ನೇಹಿತರಾಗುತ್ತಾರೆ ಮತ್ತು ನಮ್ಮಲ್ಲಿ ವಿಶೇಷ ರೀತಿಯ ಸಂತೋಷವನ್ನು ಉಂಟುಮಾಡುತ್ತಾರೆ. ಅಮೆರಿಕದಲ್ಲಿ ವಾಸಿಸುತ್ತಿರುವ ಜೋನ್‌ ಎಂಬುವಳು, ಥೆಲ್ಮ ಎಂಬ ಹೆಸರಿನ ಸ್ತ್ರೀಯೊಂದಿಗೆ ಬೈಬಲ್‌ ಅಭ್ಯಾಸ ಮಾಡಲಾರಂಭಿಸಿದಳು. ಈ ಅಭ್ಯಾಸಕ್ಕೆ ಥೆಲ್ಮಳ ಕುಟುಂಬವು ತುಂಬ ವಿರೋಧವನ್ನು ವ್ಯಕ್ತಪಡಿಸಿತಾದರೂ, ಅವಳು ತನ್ನ ಅಭ್ಯಾಸವನ್ನು ಮುಂದುವರಿಸಿದಳು ಮತ್ತು ಒಂದು ವರ್ಷದ ಬಳಿಕ ದೀಕ್ಷಾಸ್ನಾನ ಪಡೆದುಕೊಂಡಳು. ಜೋನ್‌ ಬರೆದುದು: “ನಮ್ಮ ಸಹವಾಸವು ಅಷ್ಟಕ್ಕೇ ಕೊನೆಗೊಳ್ಳಲಿಲ್ಲ. ಬದಲಿಗೆ, ಅದು ಸ್ನೇಹವಾಗಿ ಬೆಳೆಯಿತು ಮತ್ತು 35 ವರ್ಷಗಳಿಂದ ಈ ಸ್ನೇಹವು ಮುಂದುವರಿಯುತ್ತಿದೆ. ಅನೇಕಬಾರಿ ನಾವಿಬ್ಬರೂ ಒಟ್ಟಿಗೆ ಸೇವೆಮಾಡಿದ್ದೇವೆ ಮತ್ತು ಒಟ್ಟಿಗೆ ಅಧಿವೇಶನಗಳಿಗೆ ಹೋಗಿದ್ದೇವೆ. ಸಮಯಾನಂತರ, 800 ಕಿಲೊಮೀಟರ್‌ಗಳಷ್ಟು ದೂರವಿರುವ ಒಂದು ಹೊಸ ಜಾಗಕ್ಕೆ ನಾನು ಸ್ಥಳಾಂತರಿಸಿದೆ. ಆದರೂ, ಥೆಲ್ಮಳು ನನಗೆ ತುಂಬ ಪ್ರೀತಿಯಿಂದ ಕೂಡಿದ ಹಾಗೂ ಹೃದಯಸ್ಪರ್ಶಿಯಾದ ಪತ್ರಗಳನ್ನು ಬರೆಯುವುದನ್ನು ಮಾತ್ರ ನಿಲ್ಲಿಸಿಲ್ಲ. ನಿನ್ನನ್ನು ತುಂಬ ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತೇನೆ, ನೀನು ನನಗೆ ಸ್ನೇಹಿತೆಯೂ ಮಾದರಿಯೂ ಆಗಿರುವುದಕ್ಕಾಗಿ ಮತ್ತು ನನಗೆ ಬೈಬಲಿನಿಂದ ಸತ್ಯವನ್ನು ಕಲಿಸಿರುವುದಕ್ಕಾಗಿ ನಿನಗೆ ತುಂಬ ಉಪಕಾರ ಎಂದು ಅವಳು ಪತ್ರದಲ್ಲಿ ಬರೆಯುತ್ತಾಳೆ. ಅಂತಹ ಒಬ್ಬ ಆಪ್ತ ಹಾಗೂ ಆತ್ಮೀಯ ಸ್ನೇಹಿತೆಯನ್ನು ಪಡೆದುಕೊಂಡಿರುವುದು, ಯೆಹೋವನ ಕುರಿತು ಕಲಿಯುವಂತೆ ಅವಳಿಗೆ ಸಹಾಯಮಾಡಲು ನಾನು ಮಾಡಿದ ಪ್ರಯತ್ನಗಳಿಗೆ ಸಿಕ್ಕಿದ ಅದ್ಭುತಕರ ಪ್ರತಿಫಲವಾಗಿದೆ.”

8. ಯಾವ ಸಕಾರಾತ್ಮಕ ಮನೋಭಾವವು ಶುಶ್ರೂಷೆಯಲ್ಲಿ ನಮಗೆ ಸಹಾಯಮಾಡುವುದು?

8 ಒಂದುವೇಳೆ ನಾವು ಭೇಟಿಯಾಗುವ ಜನರಲ್ಲಿ ಅನೇಕರು ಯೆಹೋವನ ವಾಕ್ಯದಲ್ಲಿ ಸ್ವಲ್ಪ ಆಸಕ್ತಿಯನ್ನು ಮಾತ್ರ ತೋರಿಸುವುದಾದರೂ ಅಥವಾ ಆಸಕ್ತಿಯನ್ನೇ ತೋರಿಸದಿದ್ದರೂ, ಸತ್ಯವನ್ನು ಕಲಿಯಲು ಬಯಸುವಂತಹ ಯಾರಾದರೊಬ್ಬರನ್ನು ಕಂಡುಕೊಳ್ಳುವ ಪ್ರತೀಕ್ಷೆಯು ನಾವು ತಾಳಿಕೊಳ್ಳುವಂತೆ ಸಹಾಯಮಾಡಬಲ್ಲದು. ಜನರು ತೋರಿಸುವ ಉದಾಸೀನತೆಯು ನಮ್ಮ ನಂಬಿಕೆ ಹಾಗೂ ತಾಳ್ಮೆಗೆ ಸವಾಲನ್ನು ಒಡ್ಡಸಾಧ್ಯವಿದೆ. ಆದರೂ, ಸಕಾರಾತ್ಮಕ ಮನೋಭಾವವು ನಮಗೆ ಸಹಾಯಮಾಡುವುದು. ಗ್ವಾಟೆಮಾಲದ ಫೌಸ್ಟೊ ಎಂಬವರು ಹೇಳಿದ್ದು: “ನಾನು ಇತರರಿಗೆ ಸಾಕ್ಷಿನೀಡುವಾಗ, ನಾನು ಯಾರೊಂದಿಗೆ ಮಾತಾಡುತ್ತಿದ್ದೇನೋ ಆ ವ್ಯಕ್ತಿ ಒಬ್ಬ ಆತ್ಮಿಕ ಸಹೋದರ ಅಥವಾ ಸಹೋದರಿಯಾಗುವಲ್ಲಿ ಎಷ್ಟು ಅದ್ಭುತಕರವಾಗಿರುವುದು ಎಂಬುದರ ಕುರಿತು ಆಲೋಚಿಸುತ್ತೇನೆ. ನಾನು ಭೇಟಿಯಾಗುವಂತಹ ವ್ಯಕ್ತಿಗಳಲ್ಲಿ ಕಡಿಮೆಪಕ್ಷ ಒಬ್ಬನಾದರೂ ಸಮಯಾನಂತರ ದೇವರ ವಾಕ್ಯದ ಸತ್ಯವನ್ನು ಸ್ವೀಕರಿಸಬಹುದು ಎಂದು ನಾನು ತರ್ಕಿಸುತ್ತೇನೆ. ಈ ಆಲೋಚನೆಯೇ ನಾನು ಸಾಕ್ಷಿಕಾರ್ಯವನ್ನು ಮುಂದುವರಿಸುವಂತೆ ಸಹಾಯಮಾಡುತ್ತದೆ ಮತ್ತು ನನಗೆ ನಿಜವಾದ ಆನಂದವನ್ನು ಉಂಟುಮಾಡುತ್ತದೆ.”

ಪರಲೋಕದಲ್ಲಿ ಗಂಟುಮಾಡಿಟ್ಟುಕೊಳ್ಳುವುದು

9. ಪರಲೋಕದಲ್ಲಿ ಗಂಟುಮಾಡಿಟ್ಟುಕೊಳ್ಳುವುದರ ಕುರಿತು ಯೇಸು ಏನು ಹೇಳಿದನು, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?

9 ನಮ್ಮ ಮಕ್ಕಳನ್ನೇ ಆಗಲಿ ಅಥವಾ ಬೇರೆ ವ್ಯಕ್ತಿಗಳನ್ನೇ ಆಗಲಿ ಶಿಷ್ಯರನ್ನಾಗಿ ಮಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಇದು ಸಮಯ, ತಾಳ್ಮೆ ಹಾಗೂ ಸತತ ಪ್ರಯತ್ನವನ್ನು ಅಗತ್ಯಪಡಿಸುತ್ತದೆ. ಆದರೂ, ತಮಗೆ ಆನಂದವನ್ನು ನೀಡದಂತಹ ಹಾಗೂ ಶಾಶ್ವತವಾಗಿ ಉಳಿಯದಂತಹ ಭೌತಿಕ ಸಂಪತ್ತನ್ನು ಅತ್ಯಧಿಕ ಪ್ರಮಾಣದಲ್ಲಿ ಗಂಟುಮಾಡಿಟ್ಟುಕೊಳ್ಳಲಿಕ್ಕಾಗಿ, ಅನೇಕರು ಕಷ್ಟಪಟ್ಟು ಕೆಲಸಮಾಡಲು ಸಿದ್ಧರಿರುತ್ತಾರೆ ಎಂಬುದು ನಿಮಗೆ ನೆನಪಿರಲಿ. ಅದಕ್ಕಿಂತಲೂ ಹೆಚ್ಚಾಗಿ ಆತ್ಮಿಕ ಸಂಪತ್ತನ್ನು ಗಂಟುಮಾಡಿಟ್ಟುಕೊಳ್ಳಲಿಕ್ಕಾಗಿ ಶ್ರಮಿಸುವುದು ಪ್ರಯೋಜನಾರ್ಹವಾಗಿದೆ ಎಂದು ಯೇಸು ತನ್ನ ಕೇಳುಗರಿಗೆ ಹೇಳಿದನು. ಅವನಂದದ್ದು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬು ಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ.” (ಮತ್ತಾಯ 6:​19, 20) ಶಿಷ್ಯರನ್ನಾಗಿ ಮಾಡುವಂತಹ ಪ್ರಾಮುಖ್ಯ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ಆತ್ಮಿಕ ಗುರಿಗಳನ್ನು ಬೆನ್ನಟ್ಟಬೇಕು. ಇದರಿಂದ ನಾವು ದೇವರ ಚಿತ್ತವನ್ನು ಮಾಡುತ್ತಿದ್ದೇವೆ ಮತ್ತು ಆತನು ನಮಗೆ ಪ್ರತಿಫಲ ನೀಡುತ್ತಾನೆ ಎಂಬುದನ್ನು ತಿಳಿದವರಾಗಿರುವ ಸಂತೃಪ್ತಿಯನ್ನು ನಾವು ಪಡೆದುಕೊಳ್ಳಸಾಧ್ಯವಿದೆ. ಈ ವಿಷಯದಲ್ಲಿ ಅಪೊಸ್ತಲ ಪೌಲನು ಬರೆದುದು: ‘ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನು ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.’​—ಇಬ್ರಿಯ 6:10.

10. (ಎ) ಯೇಸು ಏಕೆ ಆತ್ಮಿಕ ಸಂಪತ್ತನ್ನು ಹೊಂದಿದ್ದನು? (ಬಿ) ಯಾವ ರೀತಿಯಲ್ಲಿ ಯೇಸು ತನ್ನನ್ನೇ ಒಪ್ಪಿಸಿಕೊಟ್ಟನು, ಮತ್ತು ಇದರಿಂದ ಇತರರಿಗೆ ಯಾವ ಮಹಾನ್‌ ಪ್ರಯೋಜನವಿದೆ?

10 ಶಿಷ್ಯರನ್ನಾಗಿ ಮಾಡುವುದರಲ್ಲಿ ನಾವು ಶ್ರದ್ಧಾಪೂರ್ವಕವಾಗಿ ಕೆಲಸಮಾಡುವಲ್ಲಿ, ಯೇಸು ಏನು ಹೇಳಿದನೋ ಅದಕ್ಕೆ ಹೊಂದಿಕೆಯಲ್ಲಿ, ನಮಗೋಸ್ಕರ “ಪರಲೋಕದಲ್ಲಿ ಗಂಟು”ಮಾಡಿಟ್ಟುಕೊಳ್ಳುವೆವು. ಇದು, ತೆಗೆದುಕೊಳ್ಳುವುದರಿಂದ ಸಿಗುವ ಆನಂದವನ್ನು ನಮಗೆ ನೀಡುತ್ತದೆ. ನಿಸ್ವಾರ್ಥಭಾವದಿಂದ ನಾವು ಇತರರಿಗೆ ಕೊಡುವಲ್ಲಿ, ಸ್ವತಃ ನಾವೇ ಸಂಪದ್ಭರಿತರಾಗುತ್ತೇವೆ. ಸ್ವತಃ ಯೇಸುವೇ ಅಸಂಖ್ಯಾತ ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡಿದ್ದನು. ಪರಲೋಕದಲ್ಲಿ ಅವನು ಕೂಡಿಸಿಟ್ಟುಕೊಂಡ ಆತ್ಮಿಕ ಸಂಪತ್ತಿನ ಕುರಿತು ತುಸು ಆಲೋಚಿಸಿರಿ! ಆದರೂ, ಯೇಸು ತನ್ನ ಸ್ವಂತ ಅಭಿರುಚಿಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಲಿಲ್ಲ. ಅಪೊಸ್ತಲ ಪೌಲನು ಬರೆದುದು: “[ಯೇಸು] ನಮ್ಮನ್ನು ಕೆಟ್ಟದ್ದಾಗಿರುವ ಈಗಿನ ದುಷ್ಟಯುಗದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕೆ ಅನುಸಾರವಾಗಿ ನಮ್ಮ ಪಾಪಗಳ ದೆಸೆಯಿಂದ ತನ್ನನ್ನು ಮರಣಕ್ಕೆ ಒಪ್ಪಿಸಿದನು.” (ಗಲಾತ್ಯ 1:​4, ಓರೆ ಅಕ್ಷರಗಳು ನಮ್ಮವು.) ತನ್ನ ಶುಶ್ರೂಷೆಯಲ್ಲಿ ಯೇಸು ನಿಸ್ವಾರ್ಥಭಾವದಿಂದ ತನ್ನನ್ನು ನೀಡಿಕೊಂಡನು ಮಾತ್ರವಲ್ಲ, ಇತರರು ಸಹ ಪರಲೋಕದಲ್ಲಿ ಗಂಟುಮಾಡಿಟ್ಟುಕೊಳ್ಳಲು ಸಾಧ್ಯವಾಗುವಂತೆ ತನ್ನ ಸ್ವಂತ ಜೀವವನ್ನೇ ಪ್ರಾಯಶ್ಚಿತ್ತ ಯಜ್ಞವಾಗಿ ಅರ್ಪಿಸಿದನು.

11. ಭೌತಿಕ ಉಡುಗೊರೆಗಳಿಗಿಂತಲೂ ಆತ್ಮಿಕ ಉಡುಗೊರೆಗಳು ಏಕೆ ಅತ್ಯುತ್ತಮವಾಗಿವೆ?

11 ಜನರಿಗೆ ದೇವರ ಕುರಿತು ಕಲಿಸುವ ಮೂಲಕ, ಅವರು ಸಹ ನಾಶವಾಗದಂತಹ ಆತ್ಮಿಕ ಸಂಪತ್ತನ್ನು ಹೇಗೆ ಗಂಟುಮಾಡಿಟ್ಟುಕೊಳ್ಳಬಹುದೆಂದು ತಿಳಿದುಕೊಳ್ಳುವಂತೆ ನಾವು ಅವರಿಗೆ ಸಹಾಯಮಾಡುತ್ತೇವೆ. ಇದಕ್ಕಿಂತ ಅಮೂಲ್ಯವಾದ ಯಾವ ಉಡುಗೊರೆಯನ್ನು ನೀವು ಕೊಡಸಾಧ್ಯವಿದೆ? ಒಬ್ಬ ಸ್ನೇಹಿತನಿಗೆ ನೀವು ತುಂಬ ಬೆಲೆಬಾಳುವಂತಹ ಒಂದು ಗಡಿಯಾರವನ್ನೋ, ಕಾರನ್ನೋ, ಮನೆಯನ್ನೋ ಕೊಡುತ್ತೀರಿ ಎಂದಿಟ್ಟುಕೊಳ್ಳಿ. ಆಗ ಆ ಸ್ನೇಹಿತನಿಗೆ ತುಂಬ ಸಂತೋಷವಾಗುತ್ತದೆ ಮತ್ತು ಅವನು ನಿಮಗೆ ಕೃತಜ್ಞತೆ ಸಲ್ಲಿಸುತ್ತಾನೆ. ಅದೇ ಸಮಯದಲ್ಲಿ, ಅವನಿಗೆ ಏನನ್ನೋ ಕೊಟ್ಟಿದ್ದೇನೆ ಎಂಬ ಸಂತೋಷ ನಿಮಗೂ ಇರುತ್ತದೆ. ಆದರೆ 20 ವರ್ಷಗಳೋ, 200 ವರ್ಷಗಳೋ, ಅಥವಾ 2,000 ವರ್ಷಗಳ ನಂತರ ಆ ಉಡುಗೊರೆ ಯಾವ ಸ್ಥಿತಿಯಲ್ಲಿರುವುದು? ಇನ್ನೊಂದು ಕಡೆಯಲ್ಲಿ, ಯೆಹೋವನ ಸೇವೆಮಾಡುವಂತೆ ಒಬ್ಬ ವ್ಯಕ್ತಿಗೆ ಸಹಾಯಮಾಡಲು ನಿಮ್ಮನ್ನು ನೀವು ನೀಡಿಕೊಳ್ಳುವುದಾದರೆ, ಅವನು ಅಥವಾ ಅವಳು ನಿಮ್ಮ ಉಡುಗೊರೆಯಿಂದ ಸದಾಕಾಲ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ.

ಸತ್ಯವನ್ನು ತಿಳಿದುಕೊಳ್ಳಲು ಬಯಸುವವರನ್ನು ಹುಡುಕುವುದು

12. ಆತ್ಮಿಕವಾಗಿ ಇತರರಿಗೆ ಸಹಾಯಮಾಡಲಿಕ್ಕಾಗಿ ಅನೇಕರು ತಮ್ಮನ್ನು ಹೇಗೆ ನೀಡಿಕೊಂಡಿದ್ದಾರೆ?

12 ಆತ್ಮಿಕ ಕೊಡುವಿಕೆಯಿಂದ ಸಿಗುವ ಆನಂದವನ್ನು ಪಡೆದುಕೊಳ್ಳಲಿಕ್ಕಾಗಿ ಯೆಹೋವನ ಜನರು ಭೂಮಿಯ ಮೂಲೆಮೂಲೆಗಳಲ್ಲಿಯೂ ಸುವಾರ್ತೆಯನ್ನು ಸಾರುತ್ತಿದ್ದಾರೆ. ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳು ತಮ್ಮ ಮನೆಗಳನ್ನೂ ಕುಟುಂಬಗಳನ್ನೂ ಬಿಟ್ಟು, ಬೇರೆ ದೇಶಗಳಿಗೆ ಹೋಗಿ ಮಿಷನೆರಿ ಸೇವೆಯನ್ನು ಮಾಡುತ್ತಿದ್ದಾರೆ. ಅವರು ಹೊಸ ಭಾಷೆಗಳನ್ನು ಕಲಿತಿದ್ದಾರೆ ಮತ್ತು ಅಲ್ಲಿನ ಸಂಸ್ಕೃತಿಗಳಿಗೆ ಹೊಂದಿಕೊಂಡಿದ್ದಾರೆ. ಇನ್ನಿತರರು ತಮ್ಮ ಸ್ವಂತ ದೇಶಗಳಲ್ಲೇ ರಾಜ್ಯ ಪ್ರಚಾರಕರ ಆವಶ್ಯಕತೆಯು ಹೆಚ್ಚಾಗಿರುವಂಥ ಕ್ಷೇತ್ರಗಳಿಗೆ ಸ್ಥಳಾಂತರಿಸಿದ್ದಾರೆ. ಇನ್ನೂ ಅನೇಕರು ಒಂದು ವಿದೇಶೀ ಭಾಷೆಯನ್ನು ಕಲಿತುಕೊಂಡಿದ್ದು, ಅವರು ವಾಸಿಸುತ್ತಿರುವ ಸ್ಥಳಗಳಲ್ಲೇ ಬಂದು ನೆಲೆಸಿರುವ ವಲಸೆಗಾರರಿಗೆ ಸುವಾರ್ತೆಯನ್ನು ಸಾರುವ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ. ಉದಾಹರಣೆಗೆ, ಅಮೆರಿಕದ ನ್ಯೂ ಜೆರ್ಸಿಯ ಒಬ್ಬ ದಂಪತಿಯು ಇಬ್ಬರು ಗಂಡುಮಕ್ಕಳನ್ನು ಬೆಳೆಸಿದರು ಮತ್ತು ಆ ಮಕ್ಕಳು ಈಗ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಸೇವೆಮಾಡುತ್ತಿದ್ದಾರೆ. ಸಮಯಾನಂತರ ಈ ದಂಪತಿಯು ಪಯನೀಯರ್‌ ಸೇವೆಯನ್ನು ಆರಂಭಿಸಿದರು. ಇದಕ್ಕಾಗಿ ಅವರು ಚೀನೀ ಭಾಷೆಯನ್ನು ಸಹ ಕಲಿತುಕೊಂಡರು. ಮೂರೇ ವರ್ಷಗಳಲ್ಲಿ ಅವರು, ಸಮೀಪದಲ್ಲೇ ಇದ್ದ ಕಾಲೇಜಿಗೆ ಹೋಗುತ್ತಿದ್ದ ಚೀನೀ ಭಾಷೆಯನ್ನಾಡುವ 74 ಮಂದಿಯೊಂದಿಗೆ ಬೈಬಲ್‌ ಅಭ್ಯಾಸಗಳನ್ನು ನಡೆಸತೊಡಗಿದರು. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಇನ್ನಷ್ಟು ಆನಂದವನ್ನು ಪಡೆದುಕೊಳ್ಳಲಿಕ್ಕಾಗಿ, ನಿಮ್ಮ ಶುಶ್ರೂಷೆಯನ್ನು ಬೇರೆ ಯಾವ ರೀತಿಯಲ್ಲಾದರೂ ಹೆಚ್ಚಿಸಲು ನೀವು ಶಕ್ತರಾಗಿದ್ದೀರೋ?

13. ನೀವು ಇನ್ನೂ ಹೆಚ್ಚು ಫಲದಾಯಕವಾದ ಶುಶ್ರೂಷೆಯನ್ನು ಬಯಸುವಲ್ಲಿ, ಏನು ಮಾಡಬಹುದು?

13 ಒಂದು ಬೈಬಲ್‌ ಅಭ್ಯಾಸವನ್ನು ನಡೆಸಲು ನೀವು ಹಂಬಲಿಸುತ್ತಿರುವುದಾದರೂ, ಹಾಗೆ ಮಾಡಲು ನೀವು ಅಶಕ್ತರಾಗಿರಬಹುದು. ಕೆಲವು ದೇಶಗಳಲ್ಲಿ ಆಸಕ್ತ ಜನರನ್ನು ಕಂಡುಕೊಳ್ಳುವುದು ತುಂಬ ಕಷ್ಟ. ನೀವು ಭೇಟಿಯಾಗುವಂತಹ ಜನರು ಬೈಬಲಿನಲ್ಲಿ ಆಸಕ್ತಿಯನ್ನು ತೋರಿಸದಿರಬಹುದು. ಸನ್ನಿವೇಶವು ಹೀಗಿರುವಲ್ಲಿ, ಈ ಕೆಲಸದಲ್ಲಿ ಯೆಹೋವನೂ ಯೇಸು ಕ್ರಿಸ್ತನೂ ತುಂಬ ಆಸಕ್ತರಾಗಿದ್ದಾರೆ ಎಂಬುದನ್ನು ತಿಳಿದವರಾಗಿದ್ದು, ನಿಮ್ಮ ಬಯಕೆಯನ್ನು ನೀವು ಆಗಿಂದಾಗ್ಗೆ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಬಹುದು. ಆಗ ಅವರು ಕುರಿಗಳಂಥ ವ್ಯಕ್ತಿಗಳ ಬಳಿಗೆ ನಿಮ್ಮನ್ನು ಮಾರ್ಗದರ್ಶಿಸುವರು. ನಿಮ್ಮ ಸಭೆಯಲ್ಲಿ ಯಾರಿಗೆ ಕ್ಷೇತ್ರ ಸೇವೆಯಲ್ಲಿ ತುಂಬ ಅನುಭವವಿದೆಯೋ ಅಥವಾ ಯಾರ ಸೇವೆಯು ತುಂಬ ಫಲದಾಯಕವಾಗಿದೆಯೋ ಅಂತಹವರಿಂದ ಸಲಹೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಸಭಾ ಕೂಟಗಳಲ್ಲಿ ಕೊಡಲ್ಪಡುವ ತರಬೇತಿ ಹಾಗೂ ಸಲಹೆಗಳನ್ನು ಕಾರ್ಯರೂಪಕ್ಕೆ ಹಾಕಿರಿ. ಸಂಚರಣ ಮೇಲ್ವಿಚಾರಕರು ಹಾಗೂ ಅವರ ಪತ್ನಿಯರಿಂದ ಕೊಡಲ್ಪಡುವ ಸಲಹೆಯಿಂದ ಪ್ರಯೋಜನಗಳನ್ನು ಪಡೆದುಕೊಳ್ಳಿರಿ. ಎಲ್ಲಕ್ಕಿಂತಲೂ ಮಿಗಿಲಾಗಿ, ಬೈಬಲ್‌ ಅಭ್ಯಾಸವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಎಂದಿಗೂ ನಿಲ್ಲಿಸದಿರಿ. ಒಬ್ಬ ಜ್ಞಾನಿಯು ಬರೆದುದು: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” (ಪ್ರಸಂಗಿ 11:6) ಈ ಮಧ್ಯೆ, ನೋಹ ಹಾಗೂ ಯೆರೆಮೀಯರಂತಹ ನಂಬಿಗಸ್ತ ಪುರುಷರನ್ನು ಜ್ಞಾಪಿಸಿಕೊಳ್ಳುತ್ತಾ ಇರಿ. ಅವರ ಸಾರುವಿಕೆಗೆ ಕೆಲವೇ ಮಂದಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೂ, ಅವರ ಶುಶ್ರೂಷೆಯು ಯಶಸ್ವಿಯಾಯಿತು. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ಶುಶ್ರೂಷೆಯು ಯೆಹೋವನನ್ನು ಸಂತೋಷಪಡಿಸಿತು.

ನಿಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡುವುದು

14. ಈ ವರೆಗೂ ತನ್ನ ಸೇವೆಯನ್ನು ಮಾಡಿ, ಈಗ ವೃದ್ಧರಾಗಿರುವವರ ಬಗ್ಗೆ ಯೆಹೋವನ ದೃಷ್ಟಿಕೋನವೇನು?

14 ನಿಮ್ಮ ಜೀವಿತದಲ್ಲಿ ಎದ್ದಿರುವ ಕೆಲವು ಸನ್ನಿವೇಶಗಳ ಕಾರಣ, ನೀವು ಶುಶ್ರೂಷೆಯಲ್ಲಿ ಎಷ್ಟನ್ನು ಮಾಡಲು ಬಯಸುತ್ತೀರೋ ಅಷ್ಟನ್ನು ಮಾಡಲು ಅಸಾಧ್ಯವಾಗಿರಬಹುದು. ಉದಾಹರಣೆಗೆ, ವೃದ್ಧಾಪ್ಯದ ಕಾರಣದಿಂದ ನೀವು ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಅಸಮರ್ಥರಾಗಿರಬಹುದು. ಆದರೂ, ಒಬ್ಬ ಜ್ಞಾನಿಯು ಏನು ಬರೆದನೋ ಅದನ್ನು ನೆನಪಿನಲ್ಲಿಟ್ಟುಕೊಳ್ಳಿರಿ: “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.” (ಜ್ಞಾನೋಕ್ತಿ 16:31) ಯೆಹೋವನಾದರೋ, ತನ್ನ ಸೇವೆಯಲ್ಲಿ ಯಾರು ತಮ್ಮ ಜೀವಿತವನ್ನು ಕಳೆದಿದ್ದಾರೋ ಅವರ ವಿಷಯದಲ್ಲಿ ತುಂಬ ಸಂತೋಷಪಡುತ್ತಾನೆ. ಇದಲ್ಲದೆ, ಇನ್ನೊಂದು ಶಾಸ್ತ್ರವಚನವು ಹೇಳುವುದು: “ನಿಮ್ಮ ಮುಪ್ಪಿನ ತನಕ ನಾನೇ [ಯೆಹೋವನೇ] ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.” (ಯೆಶಾಯ 46:4) ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು, ತನ್ನ ನಿಷ್ಠಾವಂತ ಜನರನ್ನು ಪೋಷಿಸುವ ಹಾಗೂ ಬೆಂಬಲಿಸುವ ವಾಗ್ದಾನ ನೀಡುತ್ತಾನೆ.

15. ಯೆಹೋವನು ನಿಮ್ಮ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳುತ್ತಾನೆಂಬ ನಂಬಿಕೆ ನಿಮಗಿದೆಯೋ? ಏಕೆ?

15 ಅಸ್ವಸ್ಥತೆ, ಅವಿಶ್ವಾಸಿ ಸಂಗಾತಿಯಿಂದ ವಿರೋಧ, ಕುಟುಂಬದ ಜವಾಬ್ದಾರಿಗಳು ಅಥವಾ ಇನ್ನಿತರ ಕಷ್ಟಕರ ಸಮಸ್ಯೆಗಳನ್ನು ನೀವು ತಾಳಿಕೊಳ್ಳುತ್ತಿರಬಹುದು. ನಮ್ಮ ಇತಿಮಿತಿಗಳು ಹಾಗೂ ಸನ್ನಿವೇಶಗಳನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ, ಮತ್ತು ಆತನ ಸೇವೆಯಲ್ಲಿ ನಾವು ಮಾಡುವ ಶ್ರದ್ಧಾಪೂರ್ವಕ ಪ್ರಯತ್ನಗಳಿಗಾಗಿ ಆತನು ನಮ್ಮನ್ನು ಪ್ರೀತಿಸುತ್ತಾನೆ. ಇತರರಿಗೆ ಹೋಲಿಸುವಾಗ ನಾವು ಮಾಡುತ್ತಿರುವ ಸೇವೆಯು ಕಡಿಮೆಯಾಗಿರುವುದಾದರೂ, ಆತನು ನಮಗೆ ಪರಿಗಣನೆ ತೋರಿಸುತ್ತಾನೆಂಬುದು ಖಂಡಿತ. (ಗಲಾತ್ಯ 6:4) ನಾವು ಅಪರಿಪೂರ್ಣರಾಗಿದ್ದೇವೆ ಎಂಬುದು ಯೆಹೋವನಿಗೆ ಗೊತ್ತು ಮತ್ತು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೋ ಅದರಲ್ಲಿ ಆತನು ವಾಸ್ತವಿಕ ದೃಷ್ಟಿಕೋನವುಳ್ಳವನಾಗಿದ್ದಾನೆ. (ಕೀರ್ತನೆ 147:11) ಒಂದುವೇಳೆ ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ನಾವು ಮಾಡುವಲ್ಲಿ, ದೇವರ ದೃಷ್ಟಿಯಲ್ಲಿ ನಾವು ಅಮೂಲ್ಯರಾಗಿದ್ದೇವೆ ಮತ್ತು ನಮ್ಮ ನಂಬಿಕೆಯ ಕೃತ್ಯಗಳನ್ನು ಆತನು ಎಂದಿಗೂ ಮರೆಯುವುದಿಲ್ಲ ಎಂಬ ಪೂರ್ಣ ಭರವಸೆ ನಮಗಿರಸಾಧ್ಯವಿದೆ.​—ಲೂಕ 21:​1-4.

16. ಒಬ್ಬ ವ್ಯಕ್ತಿಯನ್ನು ಶಿಷ್ಯನನ್ನಾಗಿ ಮಾಡುವುದರಲ್ಲಿ ಇಡೀ ಸಭೆಯು ಹೇಗೆ ಪಾಲ್ಗೊಳ್ಳುತ್ತದೆ?

16 ಶಿಷ್ಯರನ್ನಾಗಿ ಮಾಡುವ ಕೆಲಸವು, ಒಂದು ತಂಡವು ಒಟ್ಟುಗೂಡಿ ಮಾಡುವಂತಹ ಕೆಲಸವಾಗಿದೆ ಎಂಬುದನ್ನು ಸಹ ಮರೆಯದಿರಿ. ಒಂದೇ ಒಂದು ಮಳೆ ಹನಿಯು ಸಸ್ಯವೊಂದನ್ನು ಹೇಗೆ ಪೋಷಿಸಸಾಧ್ಯವಿಲ್ಲವೋ ಅದೇ ರೀತಿಯಲ್ಲಿ ಏಕಮಾತ್ರ ವ್ಯಕ್ತಿಯ ಪ್ರಯತ್ನದಿಂದ ಒಬ್ಬ ವ್ಯಕ್ತಿಯನ್ನು ಶಿಷ್ಯನನ್ನಾಗಿ ಮಾಡಸಾಧ್ಯವಿಲ್ಲ. ಒಬ್ಬ ಸಾಕ್ಷಿಯು ಆಸಕ್ತ ವ್ಯಕ್ತಿಯನ್ನು ಕಂಡುಕೊಂಡು, ಅವನೊಂದಿಗೆ ಬೈಬಲ್‌ ಅಭ್ಯಾಸವನ್ನು ಆರಂಭಿಸುತ್ತಾನೆ ಎಂಬುದೇನೋ ನಿಜ. ಆದರೆ ಆ ಹೊಸ ವ್ಯಕ್ತಿಯು ಒಂದು ಸಲ ರಾಜ್ಯ ಸಭಾಗೃಹಕ್ಕೆ ಬಂದ ನಂತರ, ಅವನು ಅಥವಾ ಅವಳು ಸತ್ಯವನ್ನು ಗ್ರಹಿಸುವಂತೆ ಇಡೀ ಸಭೆಯೇ ಅವರಿಗೆ ಸಹಾಯಮಾಡುತ್ತದೆ. ಸಹೋದರ ಬಳಗದ ಆದರಣೆಯು, ದೇವರಾತ್ಮದ ಪ್ರಭಾವವನ್ನು ತೋರಿಸುತ್ತದೆ. (1 ಕೊರಿಂಥ 14:​24, 25) ಸಭೆಯಲ್ಲಿ ಮಕ್ಕಳು ಹಾಗೂ ಹದಿವಯಸ್ಕರು ಪ್ರಚೋದನಾತ್ಮಕ ರೀತಿಯಲ್ಲಿ ಉತ್ತರಗಳನ್ನು ಕೊಡುತ್ತಾರೆ. ಇದು, ಇಲ್ಲಿರುವ ಯುವಜನರು ಲೋಕದ ಯುವಜನರಿಗಿಂತ ತುಂಬ ಭಿನ್ನರಾಗಿದ್ದಾರೆ ಎಂಬುದನ್ನು ಹೊಸ ವ್ಯಕ್ತಿಯು ಗ್ರಹಿಸುವಂತೆ ಮಾಡುತ್ತದೆ. ಸಭೆಯಲ್ಲಿರುವ ಅಸ್ವಸ್ಥರು, ಶಾರೀರಿಕವಾಗಿ ಬಲಹೀನರಾಗಿರುವವರು ಹಾಗೂ ವೃದ್ಧರು, ತಾಳಿಕೊಳ್ಳುವುದರಲ್ಲಿ ಏನೆಲ್ಲಾ ಒಳಗೂಡಿದೆ ಎಂಬುದನ್ನು ಆ ಹೊಸ ವ್ಯಕ್ತಿಗೆ ಕಲಿಸುತ್ತಾರೆ. ನಮ್ಮ ವಯಸ್ಸು ಹಾಗೂ ಇತಿಮತಿಗಳು ಏನೇ ಇರಲಿ, ಹೊಸ ವ್ಯಕ್ತಿಗೆ ಸಹಾಯಮಾಡುವುದರಲ್ಲಿ ನಾವೆಲ್ಲರೂ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತೇವೆ. ಇದರಿಂದ ಬೈಬಲ್‌ ಸತ್ಯಕ್ಕಾಗಿರುವ ಅವರ ಪ್ರೀತಿಯು ಇನ್ನಷ್ಟು ಗಾಢವಾಗುತ್ತದೆ ಮತ್ತು ಅವರು ದೀಕ್ಷಾಸ್ನಾನದ ಕಡೆಗೆ ಪ್ರಗತಿಯನ್ನು ಮಾಡುತ್ತಾ ಮುಂದುವರಿಯುತ್ತಾರೆ. ಶುಶ್ರೂಷೆಯಲ್ಲಿ ನಾವು ಕಳೆಯುವ ಪ್ರತಿಯೊಂದು ತಾಸು, ಮಾಡುವ ಪ್ರತಿಯೊಂದು ಪುನರ್ಭೇಟಿ, ರಾಜ್ಯ ಸಭಾಗೃಹದಲ್ಲಿ ಆಸಕ್ತ ವ್ಯಕ್ತಿಯೊಂದಿಗೆ ಮಾಡಲ್ಪಡುವ ಪ್ರತಿಯೊಂದು ಸಂಭಾಷಣೆಯು, ನಮ್ಮ ದೃಷ್ಟಿಯಲ್ಲಿ ತುಂಬ ಕ್ಷುಲ್ಲಕವಾಗಿ ಕಂಡುಬರಬಹುದು. ಆದರೆ ಅದೆಲ್ಲವೂ ಯೆಹೋವನು ಪೂರೈಸುತ್ತಿರುವ ಅದ್ಭುತ ಕೆಲಸದ ಭಾಗವಾಗಿದೆ.

17, 18. (ಎ) ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಒಳಗೂಡುವುದರ ಜೊತೆಗೆ, ಕೊಡುವುದರಿಂದ ಸಿಗುವ ಆನಂದದಲ್ಲಿ ನಾವು ಹೇಗೆ ಪಾಲ್ಗೊಳ್ಳಬಹುದು? (ಬಿ) ಕೊಡುವುದರಿಂದ ಸಿಗುವ ಆನಂದದಲ್ಲಿ ಪಾಲ್ಗೊಳ್ಳುವ ಮೂಲಕ, ನಾವು ಯಾರನ್ನು ಅನುಕರಿಸುತ್ತೇವೆ?

17 ಶಿಷ್ಯರನ್ನಾಗಿ ಮಾಡುವ ತುಂಬ ಪ್ರಾಮುಖ್ಯವಾದ ಕೆಲಸದಲ್ಲಿ ನಾವು ಪಾಲ್ಗೊಳ್ಳುತ್ತೇವೆ ಎಂಬುದಂತೂ ಖಂಡಿತ. ಅಷ್ಟುಮಾತ್ರವಲ್ಲ, ಕ್ರೈಸ್ತರೋಪಾದಿ ನಾವು ಬೇರೆ ರೀತಿಯ ಕೊಡುವಿಕೆಯಿಂದ ಸಿಗುವ ಸಂತೋಷದಲ್ಲಿಯೂ ಪಾಲ್ಗೊಳ್ಳುತ್ತೇವೆ. ಶುದ್ಧಾರಾಧನೆಯನ್ನು ಬೆಂಬಲಿಸಲಿಕ್ಕಾಗಿಯೂ ಅಗತ್ಯದಲ್ಲಿರುವವರಿಗೆ ಸಹಾಯಮಾಡಲಿಕ್ಕಾಗಿಯೂ ನಾವು ಹಣಕಾಸನ್ನು ದಾನಮಾಡಸಾಧ್ಯವಿದೆ. (ಲೂಕ 16:9; 1 ಕೊರಿಂಥ 16:​1, 2) ಇತರರಿಗೆ ಅತಿಥಿಸತ್ಕಾರವನ್ನು ತೋರಿಸಲಿಕ್ಕಾಗಿರುವ ಸಂದರ್ಭಗಳನ್ನು ಸದುಪಯೋಗಿಸಿಕೊಳ್ಳಸಾಧ್ಯವಿದೆ. (ರೋಮಾಪುರ 12:13) ಇದಲ್ಲದೆ, ‘ಎಲ್ಲರಿಗೆ, ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಒಳ್ಳೇದನ್ನು ಮಾಡಲು’ ನಾವು ಶ್ರಮಿಸಸಾಧ್ಯವಿದೆ. (ಗಲಾತ್ಯ 6:10) ಮತ್ತು, ಸರಳವಾದರೂ ಪ್ರಾಮುಖ್ಯವಾದ ರೀತಿಯಲ್ಲಿ, ಅಂದರೆ ಒಂದು ಪತ್ರ, ಒಂದು ಫೋನ್‌ ಕಾಲ್‌, ಒಂದು ಉಡುಗೊರೆ, ಪ್ರಾಯೋಗಿಕ ನೆರವು, ಪ್ರೋತ್ಸಾಹದ ಮಾತುಗಳ ಮೂಲಕ ನಾವು ಇತರರಿಗೆ ಕೊಡಸಾಧ್ಯವಿದೆ.

18 ಹೀಗೆ ಕೊಡುವ ಮೂಲಕ, ನಮ್ಮ ಸ್ವರ್ಗೀಯ ತಂದೆಯನ್ನು ನಾವು ಅನುಕರಿಸುತ್ತಿದ್ದೇವೆ ಎಂಬುದನ್ನು ತೋರಿಸುತ್ತೇವೆ. ಅಷ್ಟುಮಾತ್ರವಲ್ಲ, ಸತ್ಯ ಕ್ರೈಸ್ತರ ಗುರುತು ಚಿಹ್ನೆಯಾಗಿರುವ ಸಹೋದರ ಪ್ರೀತಿಯನ್ನು ಸಹ ನಾವು ತೋರಿಸುತ್ತೇವೆ. (ಯೋಹಾನ 13:35) ಈ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು, ಕೊಡುವುದರಿಂದ ಸಿಗುವ ಆನಂದದಲ್ಲಿ ಪಾಲ್ಗೊಳ್ಳುವಂತೆ ನಮಗೆ ಸಹಾಯಮಾಡಸಾಧ್ಯವಿದೆ.

ನೀವು ವಿವರಿಸಬಲ್ಲಿರೋ?

• ಆತ್ಮಿಕವಾಗಿ ಕೊಡುವುದರಲ್ಲಿ ಯೆಹೋವನು ಮತ್ತು ಯೇಸು ಹೇಗೆ ಮಾದರಿಯನ್ನಿಟ್ಟಿದ್ದಾರೆ?

• ನಾವು ಶಾಶ್ವತವಾದ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಹುದು?

• ನಮ್ಮ ಶುಶ್ರೂಷೆಯನ್ನು ಇನ್ನಷ್ಟು ಯಶಸ್ವಿಕರವಾಗಿ ಮಾಡಲಿಕ್ಕಾಗಿ ನಾವು ಯಾವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು?

• ಸಭೆಯಲ್ಲಿರುವ ಎಲ್ಲರೂ ಕೊಡುವುದರಿಂದ ಸಿಗುವ ಆನಂದದಲ್ಲಿ ಹೇಗೆ ಪಾಲ್ಗೊಳ್ಳಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರಗಳು]

ತಮ್ಮ ತರಬೇತಿಗೆ ಮಕ್ಕಳು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯೆಯನ್ನು ತೋರಿಸುವಾಗ, ಹೆತ್ತವರಿಗೆ ತುಂಬ ಆನಂದ ಮತ್ತು ಸಂತೃಪ್ತಿ ಸಿಗುತ್ತದೆ

[ಪುಟ 15ರಲ್ಲಿರುವ ಚಿತ್ರ]

ಇತರರನ್ನು ಶಿಷ್ಯರನ್ನಾಗಿ ಮಾಡುವಾಗ, ನಾವು ನಿಜವಾದ ಸ್ನೇಹಿತರನ್ನು ಮಾಡಿಕೊಳ್ಳಸಾಧ್ಯವಿದೆ

[ಪುಟ 16ರಲ್ಲಿರುವ ಚಿತ್ರ]

ವೃದ್ಧಾಪ್ಯದಲ್ಲಿ ಯೆಹೋವನು ನಮ್ಮನ್ನು ಹೊತ್ತು ಸಹಿಸುವನು

[ಪುಟ 17ರಲ್ಲಿರುವ ಚಿತ್ರಗಳು]

ಸರಳವಾದರೂ ಪ್ರಾಮುಖ್ಯವಾದ ವಿಧಗಳಲ್ಲಿ ಕೊಡುವುದರಿಂದ ನಾವು ಆನಂದವನ್ನು ಪಡೆದುಕೊಳ್ಳುತ್ತೇವೆ