ದೀರ್ಘ ಕಾಲ ಬಾಳುವಂತಹ ಮರಗಳು
ದೀರ್ಘ ಕಾಲ ಬಾಳುವಂತಹ ಮರಗಳು
ನಿಮ್ಮ ಮನೆಯನ್ನು ಕಟ್ಟಲು ಒಂದು ಕಡಿದಾದ ಬಂಡೆಯು ಯೋಗ್ಯವಾದ ಸ್ಥಳವಾಗಿ ಕಂಡುಬರದಿರಬಹುದು. ಅದರಲ್ಲೂ ಆ ಕಡಿದಾದ ಬಂಡೆಯು ಪರ್ವತಗಳ ಮೇಲೆ ಅತಿ ಎತ್ತರದಲ್ಲಿರುವುದಾದರಂತೂ ಇದು ಇನ್ನಷ್ಟು ಸತ್ಯ. ಆದರೆ ಕೆಲವು ಮರಗಳು ಇಂತಹ ಸ್ಥಳಗಳಲ್ಲೇ ಬದುಕುತ್ತವೆ. ಇಂತಹ ಅನನುಕೂಲಕರ ಪರಿಸರದಲ್ಲಿ, ಕೆಲವು ಆ್ಯಲ್ಪೈನ್ ಮರಗಳು ಕಡಿದಾದ ಬಂಡೆಗಳಿಗೆ ಭದ್ರವಾಗಿ ಅಂಟಿಕೊಂಡಿರುತ್ತವೆ. ಅಷ್ಟುಮಾತ್ರವಲ್ಲ, ಚಳಿಗಾಲದ ಶೀತವನ್ನೂ ಬೇಸಗೆಯ ಶುಷ್ಕತೆಯನ್ನೂ ತಾಳಿಕೊಂಡು ಅನೇಕ ವರ್ಷಗಳ ಕಾಲ ಬಾಳುತ್ತವೆ.
ಸಾಮಾನ್ಯವಾಗಿ, ಕಡಿದಾದ ಬಂಡೆಯ ಮೇಲೆ ಬೆಳೆಯುವಂತಹ ಈ ಮರಗಳು ನೋಡಲು ಭವ್ಯವಾಗಿರುವುದಿಲ್ಲ. ಆದರೆ ತಗ್ಗುಪ್ರದೇಶದಲ್ಲಿ ಬೆಳೆಯುವ ಅದೇ ಜಾತಿಯ ಮರಗಳು ನೋಡಲು ತುಂಬ ಭವ್ಯವಾಗಿರುತ್ತವೆ. ಬಹಳ ಎತ್ತರ ಪ್ರದೇಶದಲ್ಲಿ ಬೆಳೆಯುವ ಮರಗಳ ಕಾಂಡಗಳು ಗಂಟುಗಂಟಾಗಿದ್ದು, ತಿರಿಚಿಮುರಿಚಿಕೊಂಡಿರುತ್ತವೆ. ಮತ್ತು ಅವುಗಳ ಬೆಳವಣಿಗೆಯು ಸಹ ತುಂಬ ಕುಂಠಿತಗೊಂಡಿರುತ್ತದೆ. ಇವುಗಳಲ್ಲಿ ಕೆಲವು, ತೀಕ್ಷ್ಣ ವಾತಾವರಣ ಮತ್ತು ಕಡಿಮೆ ಮಣ್ಣಿನಲ್ಲಿ ಬೆಳೆಯುವ ಕಾರಣ, ರೂಪಿಸಲ್ಪಟ್ಟು, ಸವರಿಸಲ್ಪಟ್ಟ ಸಹಜವಾದ ಕುಬ್ಜಿತ ಬಾನ್‌ಸೈ ಮರದಂತೆ ಕಾಣುತ್ತವೆ.
ಭೂಮಿಯ ಅತ್ಯಂತ ಪ್ರತಿಕೂಲ ಪರಿಸರಗಳಲ್ಲೊಂದರಲ್ಲಿ ಈ ಮರಗಳು ಬೆಳೆಯುತ್ತವಾದ್ದರಿಂದ, ಇಂತಹ ಮರಗಳು ಹೆಚ್ಚು ಕಾಲ ಬಾಳುವುದಿಲ್ಲ ಎಂದು ನೀವು ಊಹಿಸಬಹುದು. ಆದರೆ ಈ ಊಹೆ ತಪ್ಪಾಗಿದೆ, ಏಕೆಂದರೆ ಇಂತಹ ಮರಗಳು ದೀರ್ಘ ಕಾಲ ಬಾಳುತ್ತವೆ. ಮೆತೂಷೆಲಹ ಎಂಬ ಹೆಸರಿನ ಬ್ರಿಸ್ಟಲ್‌ಕೋನ್ ಪೈನ್ ಮರವು, ಕ್ಯಾಲಿಫೋರ್ನಿಯದ ವೈಟ್ ಮೌಂಟೆನ್ಸ್‌ನಲ್ಲಿ ಸುಮಾರು 10,000 ಅಡಿಗಳಷ್ಟು ಎತ್ತರದಲ್ಲಿ ಬೆಳೆಯುತ್ತಿದ್ದು, 4,700 ವರ್ಷ ಪ್ರಾಯದ್ದಾಗಿದೆ ಎಂದು ಕೆಲವರು ವಾದಿಸುತ್ತಾರೆ. ಇದು ನಮ್ಮ ಭೂಗ್ರಹದಲ್ಲಿರುವ ಸಜೀವ ಮರಗಳಲ್ಲೇ ಅತ್ಯಂತ ಪುರಾತನ ಮರವಾಗಿದೆ ಎಂದು ದ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ 1997 ತಿಳಿಸುತ್ತದೆ. ಈ ಪುರಾತನ ಮರಗಳ ಕುರಿತು ಅಧ್ಯಯನ ನಡೆಸಿದ ಎಡ್ಮಂಡ್ ಶೂಲ್ಮನ್ ವಿವರಿಸಿದ್ದು: “ಬ್ರಿಸ್ಟಲ್‌ಕೋನ್ ಪೈನ್ ಮರವು . . . ಈ ಪ್ರತಿಕೂಲ ವಾತಾವರಣದಿಂದಾಗಿಯೇ ಇಷ್ಟು ಕಾಲ ಬಾಳಲು ಶಕ್ತವಾಗಿರುವಂತೆ ತೋರುತ್ತದೆ. ವೈಟ್ ಮೌಂಟೆನ್ಸ್‌ನಲ್ಲಿರುವ ಎಲ್ಲ ಪುರಾತನ [ಪೈನ್ ಮರಗಳು], 10,000 ಅಡಿಗಳಷ್ಟು ಎತ್ತರದಲ್ಲಿರುವ ಒಣಗಿದ ಹಾಗೂ ಬಂಡೆಗಳಿಂದ ಕೂಡಿರುವ ಅರಣ್ಯದಲ್ಲಿ ಕಂಡುಬರುತ್ತವೆ.” ಬೇರೆ ಪೈನ್ ಮರಗಳ ಅತ್ಯಂತ ಪುರಾತನ ಜಾತಿಗಳು ಇಂತಹ ಪ್ರತಿಕೂಲ ವಾತಾವರಣದಲ್ಲೇ ಬೆಳೆಯುತ್ತವೆ ಎಂಬುದನ್ನು ಸಹ ಶೂಲ್ಮನ್ ಕಂಡುಹಿಡಿದರು.
ಈ ಮರಗಳು ಅನನುಕೂಲಕರ ಪರಿಸ್ಥಿತಿಯನ್ನು ತಾಳಿಕೊಳ್ಳುತ್ತವಾದರೂ, ತಮಗೆ ಸಿಗುವ ಎರಡು ಸಹಾಯಗಳನ್ನು ಅವು ಸದುಪಯೋಗಿಸಿಕೊಳ್ಳುತ್ತವೆ. ಮೊದಲನೆಯದಾಗಿ, ಈ ಮರವು ಏಕಾಂತವಾದ ಸ್ಥಳದಲ್ಲಿದೆ. ಇಲ್ಲಿ ಹೆಚ್ಚು ಸಸ್ಯಗಳು ಬೆಳೆಯುವುದಿಲ್ಲ. ಇದರಿಂದಾಗಿ ಬಲಿತ ಮರಗಳಿಗೆ ಒಂದು ದೊಡ್ಡ ಅಪಾಯವಾಗಿರುವ ಕಾಡ್ಗಿಚ್ಚುಗಳ ವಿರುದ್ಧ ಈ ಸ್ಥಳವು ಅವುಗಳನ್ನು ಸಂರಕ್ಷಿಸುತ್ತದೆ. ಎರಡನೆಯದಾಗಿ, ಈ ಮರಗಳ ಬೇರುಗಳು ಬಂಡೆಗಳಿಗೆ ಎಷ್ಟು ಭದ್ರವಾಗಿ ಅಂಟಿಕೊಂಡಿರುತ್ತವೆಂದರೆ, ಭೂಕಂಪ ಮಾತ್ರ ಅವುಗಳನ್ನು ಅಲುಗಾಡಿಸಬಲ್ಲದು.
ಕೀರ್ತನೆ 1:1-3; ಯೆರೆಮೀಯ 17:7, 8) ಹಲವಾರು ಪರಿಸ್ಥಿತಿಗಳ ಕಾರಣ ಇವರು ಸಹ ಕಷ್ಟತೊಂದರೆಗಳನ್ನು ಎದುರಿಸಬೇಕಾಗಬಹುದು. ಹಿಂಸೆ, ಅನಾರೋಗ್ಯ ಅಥವಾ ಕಡುಬಡತನವು ಗಂಭೀರವಾದ ರೀತಿಯಲ್ಲಿ ಅವರ ನಂಬಿಕೆಯನ್ನು ಪರೀಕ್ಷಿಸಬಲ್ಲದು. ಅದರಲ್ಲೂ ವರ್ಷಗಳು ಕಳೆದಂತೆ ಪರೀಕ್ಷೆಗಳು ಸಹ ಮುಂದುವರಿಯುವಾಗ ಇದು ವಿಶೇಷವಾಗಿ ಸತ್ಯವಾಗಿದೆ. ಆದರೂ, ತುಂಬ ಪ್ರತಿಕೂಲವಾದ ಪರಿಸ್ಥಿತಿಯನ್ನು ತಾಳಿಕೊಳ್ಳುವಂತಹ ಮರಗಳನ್ನು ರಚಿಸಿದ ಸೃಷ್ಟಿಕರ್ತನು, ತಾನು ಬೆಂಬಲ ನೀಡುವೆನೆಂದು ತನ್ನ ಆರಾಧಕರಿಗೆ ಆಶ್ವಾಸನೆ ಕೊಡುತ್ತಾನೆ. ಯಾರು ದೃಢಚಿತ್ತರಾಗಿ ಉಳಿಯುತ್ತಾರೋ ಅವರಿಗೆ ಬೈಬಲ್ ವಾಗ್ದಾನಿಸುವುದು: “ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು.”—1 ಪೇತ್ರ 5:9, 10.
ಬೈಬಲಿನಲ್ಲಿ ದೇವರ ನಂಬಿಗಸ್ತ ಸೇವಕರನ್ನು ಮರಗಳಿಗೆ ಹೋಲಿಸಲಾಗಿದೆ. (ಬೈಬಲಿನಲ್ಲಿ ಅನೇಕವೇಳೆ “ತಾಳಿಕೊ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಶಬ್ದವು, ‘ದೃಢಚಿತ್ತರಾಗಿ ಉಳಿಯುವುದು, ಸ್ಥಿರರಾಗಿ ನಿಲ್ಲುವುದು ಅಥವಾ ಸತತ ಪ್ರಯತ್ನಮಾಡುವುದು’ ಎಂಬ ಅರ್ಥಗಳನ್ನು ಕೊಡುತ್ತದೆ. ಆ್ಯಲ್ಪೈನ್ ಮರಗಳಂತೆಯೇ, ಭದ್ರವಾದ ಬೇರು ವ್ಯವಸ್ಥೆಯು ತಾಳ್ಮೆಗೆ ಕೀಲಿ ಕೈಯಾಗಿದೆ. ಕ್ರೈಸ್ತರ ವಿಷಯದಲ್ಲಿ ಹೇಳುವುದಾದರೆ, ದೃಢಚಿತ್ತರಾಗಿ ಉಳಿಯಲಿಕ್ಕಾಗಿ ಅವರು ಯೇಸು ಕ್ರಿಸ್ತನಲ್ಲಿ ಬಲವಾಗಿ ಬೇರೂರಿಕೊಂಡಿರಬೇಕಾಗಿದೆ. ಈ ವಿಷಯದಲ್ಲಿ ಪೌಲನು ಬರೆದುದು: “ನೀವು ಕರ್ತನಾದ ಯೇಸುವೆಂಬ ಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದುಕೊಳ್ಳಿರಿ. ಆತನಲ್ಲಿ ಬೇರೂರಿಕೊಂಡು ಭಕ್ತಿವೃದ್ಧಿಯನ್ನು ಹೊಂದಿ ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರಮಾಡುವವರಾಗಿರಿ.”—ಕೊಲೊಸ್ಸೆ 2:6, 7.
ಬಲವಾದ ಆತ್ಮಿಕ ಬೇರುಗಳ ಆವಶ್ಯಕತೆಯನ್ನು ಪೌಲನು ಮನಗಂಡನು. ಸ್ವತಃ ಅವನೇ ‘ಶರೀರದಲ್ಲಿ ನಾಟಿರುವ ಒಂದು ಶೂಲ’ದೊಂದಿಗೆ ಹೋರಾಡುತ್ತಿದ್ದನು ಮತ್ತು ತನ್ನ ಶುಶ್ರೂಷೆಯಾದ್ಯಂತ ಅವನು ತೀವ್ರವಾದ ಹಿಂಸೆಯನ್ನು ಸಹ ಸಹಿಸಿಕೊಂಡನು. (2 ಕೊರಿಂಥ 11:23-27; 12:7) ಆದರೆ, ದೇವರ ಬಲದಿಂದ ತಾನು ಅವೆಲ್ಲವನ್ನು ತಾಳಿಕೊಳ್ಳಲು ಶಕ್ತನಾಗಿದ್ದೇನೆ ಎಂದು ಅವನು ಕಂಡುಕೊಂಡನು. ಆದುದರಿಂದ, “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಅವನು ಹೇಳಿದನು.—ಫಿಲಿಪ್ಪಿ 4:13.
ಪೌಲನ ಉದಾಹರಣೆಯು ತೋರಿಸುವಂತೆ, ಯಶಸ್ವಿಕರವಾದ ಕ್ರೈಸ್ತ ತಾಳ್ಮೆಯು ಕೇವಲ ಅನುಕೂಲಕರವಾದ ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿರುವುದಿಲ್ಲ. ಅನೇಕ ಶತಮಾನಗಳ ವರೆಗೆ ಪ್ರತಿಕೂಲ ವಾತಾವರಣವನ್ನು ಯಶಸ್ವಿಕರವಾಗಿ ತಾಳಿಕೊಳ್ಳುವ ಆ್ಯಲ್ಪೈನ್ ಮರಗಳಂತೆ, ನಾವು ಸಹ ನಂಬಿಕೆಯಲ್ಲಿ ದೃಢವಾಗಿ ನೆಲೆನಿಲ್ಲಸಾಧ್ಯವಿದೆ. ಇದಕ್ಕಾಗಿ ನಾವು ಕ್ರಿಸ್ತನಲ್ಲಿ ಬೇರೂರಿದವರಾಗಿದ್ದು, ದೇವರು ಒದಗಿಸುವಂತಹ ಬಲದ ಮೇಲೆ ಹೊಂದಿಕೊಂಡಿರುವುದು ಅತ್ಯಗತ್ಯ. ಇದಲ್ಲದೆ, ಒಂದುವೇಳೆ ನಾವು ಕಡೇ ತನಕ ತಾಳಿಕೊಳ್ಳುವಲ್ಲಿ, ಇನ್ನೊಂದು ದೈವಿಕ ವಾಗ್ದಾನದ ನೆರವೇರಿಕೆಯನ್ನು ನಾವೇ ಅನುಭವಿಸುವ ಪ್ರತೀಕ್ಷೆ ನಮಗಿದೆ. “ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು” ಎಂಬುದೇ ಆ ವಾಗ್ದಾನವಾಗಿದೆ.—ಯೆಶಾಯ 65:22; ಮತ್ತಾಯ 24:13.