ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯ

ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯ

ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯ

ಬೈಬಲ್‌ ಒಂದು ಅಪೂರ್ವ ಗ್ರಂಥ. ಇದು ದೈವಪ್ರೇರಿತ ಗ್ರಂಥವಾಗಿದೆ ಎಂದು ಅದರ ಬರಹಗಾರರು ಹೇಳುತ್ತಾರೆ. ಮತ್ತು ಈ ಹೇಳಿಕೆಯು ಸತ್ಯವಾಗಿದೆ ಎಂಬುದಕ್ಕೆ ಅದರಲ್ಲಿರುವ ವಿಷಯಗಳೇ ಬಹಳಷ್ಟು ಪುರಾವೆ ನೀಡುತ್ತವೆ. (2 ತಿಮೊಥೆಯ 3:16) ಬೈಬಲಿನಲ್ಲಿ ಅಡಕವಾಗಿರುವ ಇನ್ನಿತರ ವಿಷಯಗಳ ಜೊತೆಗೆ, ಮಾನವಕುಲವು ಎಲ್ಲಿಂದ ಬಂತು, ಜೀವಿತದ ಉದ್ದೇಶವೇನು ಮತ್ತು ಮಾನವಕುಲಕ್ಕೆ ಯಾವ ಭವಿಷ್ಯ ಇದೆ ಎಂಬುದನ್ನು ಸಹ ಅದು ತೋರಿಸುತ್ತದೆ. ಖಂಡಿತವಾಗಿಯೂ ಈ ಗ್ರಂಥವು ನಮ್ಮ ಪರಿಗಣನೆಗೆ ಅರ್ಹವಾಗಿದೆ!

ನೀವು ಸಹ ಬೈಬಲನ್ನು ಓದಲು ಪ್ರಯತ್ನಿಸಿರಬಹುದು, ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ತುಂಬ ಕಷ್ಟ ಎಂದು ನಿಮಗೆ ಅನಿಸಿರಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂಬುದು ನಿಮಗೆ ಗೊತ್ತಿಲ್ಲದಿರಬಹುದು. ಹಾಗಿರುವಲ್ಲಿ, ಇಂತಹ ಸನ್ನಿವೇಶದಲ್ಲಿರುವವರು ನೀವೊಬ್ಬರೇ ಅಲ್ಲ. ನಿಮ್ಮ ಸನ್ನಿವೇಶವು ಪ್ರಥಮ ಶತಮಾನದಲ್ಲಿ ಜೀವಿಸಿದ್ದ ಒಬ್ಬ ವ್ಯಕ್ತಿಯ ಸನ್ನಿವೇಶದಂತಿದೆ. ಅವನು ಯೆರೂಸಲೇಮಿನಿಂದ ತನ್ನ ಸ್ವಂತ ಸ್ಥಳಕ್ಕೆ ಅಂದರೆ ಐಥಿಯೋಪ್ಯ ದೇಶಕ್ಕೆ ಹೋಗಲಿಕ್ಕಾಗಿ ಒಂದು ರಥದಲ್ಲಿ ಪ್ರಯಾಣಿಸುತ್ತಿದ್ದನು. ಐಥಿಯೋಪ್ಯ ದೇಶದ ಈ ಅಧಿಕಾರಿಯು, ಬೈಬಲಿನ ಯೆಶಾಯ ಪ್ರವಾದಿಯ ಪುಸ್ತಕವನ್ನು ಗಟ್ಟಿಯಾಗಿ ಓದುತ್ತಿದ್ದನು. ಈ ಪುಸ್ತಕವು ಸುಮಾರು ಏಳುನೂರು ವರ್ಷಗಳಿಗಿಂತಲೂ ಹೆಚ್ಚು ಸಮಯದ ಹಿಂದೆ ಬರೆಯಲ್ಪಟ್ಟಿತ್ತು.

ಇದ್ದಕ್ಕಿದ್ದಂತೆ, ಈ ರಥದ ಸಂಗಡವೇ ಓಡುತ್ತಿದ್ದ ಒಬ್ಬ ಮನುಷ್ಯನು ಈ ಅಧಿಕಾರಿಯನ್ನು ವಂದಿಸಿದನು. ಇವನು ಯೇಸುವಿನ ಶಿಷ್ಯನಾದ ಫಿಲಿಪ್ಪನಾಗಿದ್ದನು. ಅವನು ಐಥಿಯೋಪ್ಯದವನಿಗೆ ಹೀಗೆ ಕೇಳಿದನು: “ನೀನು ಓದುವದು ನಿನಗೆ ತಿಳಿಯುತ್ತದೋ?” ಅದಕ್ಕೆ ಐಥಿಯೋಪ್ಯದವನು “ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು”? ಎಂದು ಉತ್ತರಿಸಿದನು. ತದನಂತರ ಅವನು ಫಿಲಿಪ್ಪನಿಗೆ ರಥವನ್ನು ಹತ್ತಿ ಕುಳಿತುಕೊಳ್ಳುವಂತೆ ಆಮಂತ್ರಿಸಿದನು. ಆಗ ಫಿಲಿಪ್ಪನು, ಆ ವ್ಯಕ್ತಿಯು ಓದುತ್ತಿದ್ದ ಗ್ರಂಥಭಾಗದ ಅರ್ಥವನ್ನು ವಿವರಿಸಿದನು ಮತ್ತು “ಯೇಸುವಿನ ವಿಷಯವಾದ ಸುವಾರ್ತೆಯನ್ನು” ಅವನಿಗೆ ಉಪದೇಶಿಸತೊಡಗಿದನು.​—ಅ. ಕೃತ್ಯಗಳು 8:​30-35.

ಬಹಳ ಸಮಯದ ಹಿಂದೆ ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಐಥಿಯೋಪ್ಯದವನಿಗೆ ಫಿಲಿಪ್ಪನು ಸಹಾಯಮಾಡಿದಂತೆಯೇ, ಇಂದು ಬೈಬಲನ್ನು ಅರ್ಥಮಾಡಿಕೊಳ್ಳಲು ಯೆಹೋವನ ಸಾಕ್ಷಿಗಳು ಜನರಿಗೆ ಸಹಾಯಮಾಡುತ್ತಾರೆ. ನಿಮಗೂ ಸಹಾಯಮಾಡಲು ಅವರು ತುಂಬ ಇಷ್ಟಪಡುತ್ತಾರೆ. ಸಾಮಾನ್ಯವಾಗಿ, ಬೈಬಲಿನ ಮೂಲಭೂತ ಶಾಸ್ತ್ರೀಯ ಬೋಧನೆಗಳಿಂದ ಆರಂಭಿಸಿ, ಅದನ್ನು ಕ್ರಮಬದ್ಧವಾಗಿ ಅಭ್ಯಾಸಿಸುವುದು ಅತ್ಯುತ್ತಮವಾಗಿದೆ. (ಇಬ್ರಿಯ 6:2) ಅಭ್ಯಾಸದಲ್ಲಿ ನೀವು ಪ್ರಗತಿಯನ್ನು ಮಾಡುತ್ತಾ ಮುಂದುವರಿಯುವಾಗ, ಅಪೊಸ್ತಲ ಪೌಲನು ಯಾವುದನ್ನು “ಗಟ್ಟಿಯಾದ ಆಹಾರ” ಎಂದು ಕರೆದನೋ ಅದನ್ನು, ಅಂದರೆ ಅಗಾಧವಾದ ಸತ್ಯಗಳನ್ನು ಜೀರ್ಣಿಸಿಕೊಳ್ಳಲು ಶಕ್ತರಾಗುವಿರಿ. (ಇಬ್ರಿಯ 5:14) ನೀವು ಬೈಬಲನ್ನೇ ಅಭ್ಯಾಸ ಮಾಡುತ್ತಿರುವುದಾದರೂ, ಬೈಬಲ್‌ ಅಧ್ಯಯನಕ್ಕೆ ಸಹಾಯಕವಾಗಿರುವ ಇತರ ಪ್ರಕಾಶನಗಳು, ಬೇರೆ ಬೇರೆ ವಿಷಯಗಳ ಕುರಿತಾದ ಬೈಬಲ್‌ ಭಾಗಗಳನ್ನು ಕಂಡುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯಮಾಡಬಲ್ಲವು.

ಸಾಮಾನ್ಯವಾಗಿ ನಿಮಗೆ ಅನುಕೂಲಕರವಾಗಿರುವ ಸಮಯದಲ್ಲಿ ಮತ್ತು ಸ್ಥಳದಲ್ಲಿ ಅಭ್ಯಾಸವನ್ನು ಏರ್ಪಡಿಸಸಾಧ್ಯವಿದೆ. ಕೆಲವರು ಟೆಲಿಫೋನ್‌ ಮೂಲಕವೂ ಬೈಬಲ್‌ ಅಭ್ಯಾಸವನ್ನು ಮಾಡುತ್ತಾರೆ. ಈ ಅಭ್ಯಾಸವು ಒಂದು ತರಗತಿಯಲ್ಲಿ ಮಾಡಲ್ಪಡುವಂತೆ ನಡೆಸಲ್ಪಡುವುದಿಲ್ಲ; ಇದು ಒಂದು ಖಾಸಗಿ ಏರ್ಪಾಡಾಗಿದ್ದು, ನಿಮ್ಮ ಹಿನ್ನೆಲೆ ಹಾಗೂ ವಿದ್ಯಾಭ್ಯಾಸವನ್ನೂ ಸೇರಿಸಿ ನಿಮ್ಮ ಇತರ ವೈಯಕ್ತಿಕ ಪರಿಸ್ಥಿತಿಗಳಿಗನುಸಾರವಾಗಿ ಏರ್ಪಡಿಸಲಾಗುತ್ತದೆ. ಈ ರೀತಿಯ ಒಂದು ಬೈಬಲ್‌ ಅಭ್ಯಾಸಕ್ಕೆ ನೀವು ಹಣ ಕೊಡಬೇಕಾಗಿಲ್ಲ. (ಮತ್ತಾಯ 10:8) ಯಾವುದೇ ರೀತಿಯ ಪರೀಕ್ಷೆಗಳು ನಡೆಸಲ್ಪಡುವುದಿಲ್ಲ. ಮತ್ತು ನಿಮಗೆ ಮುಜುಗರವಾಗುವಂತಹ ಯಾವುದೇ ಸನ್ನಿವೇಶವೂ ಇರುವುದಿಲ್ಲ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುವುದು ಮತ್ತು ದೇವರೊಂದಿಗೆ ಆಪ್ತ ಸಂಬಂಧವನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ ಎಂಬುದನ್ನು ನೀವು ಕಲಿತುಕೊಳ್ಳುವಿರಿ. ಆದರೂ, ನೀವು ಏಕೆ ಬೈಬಲ್‌ ಅಭ್ಯಾಸಮಾಡಬೇಕು? ಬೈಬಲಿನ ಅಭ್ಯಾಸವು ನಿಮ್ಮ ಜೀವಿತದಲ್ಲಿ ಏಕೆ ಹೆಚ್ಚಿನ ಆನಂದವನ್ನು ಉಂಟುಮಾಡಸಾಧ್ಯವಿದೆ ಎಂಬ ಕೆಲವು ಕಾರಣಗಳನ್ನು ಪರಿಗಣಿಸಿರಿ.