ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲನ್ನು ಏಕೆ ಅಭ್ಯಾಸಮಾಡಬೇಕು?

ಬೈಬಲನ್ನು ಏಕೆ ಅಭ್ಯಾಸಮಾಡಬೇಕು?

ಬೈಬಲನ್ನು ಏಕೆ ಅಭ್ಯಾಸಮಾಡಬೇಕು?

ಬಿಲ್‌ ಒಬ್ಬ ಯುವಕನೂ, ಕ್ರೀಡಾಪಟುವೂ, ಸುಶಿಕ್ಷಿತನೂ, ಆರ್ಥಿಕವಾಗಿ ಸ್ಥಿತಿವಂತನೂ ಆಗಿದ್ದನು. ಇಷ್ಟೆಲ್ಲಾ ಇದ್ದರೂ ಅವನಿಗೆ ಜೀವನದಲ್ಲಿ ತೃಪ್ತಿಯಿರಲಿಲ್ಲ. ಅವನ ಜೀವಿತಕ್ಕೆ ಗೊತ್ತುಗುರಿಯಿರಲಿಲ್ಲ; ಇದರಿಂದಾಗಿ ಅವನು ಮಾನಸಿಕವಾಗಿ ತುಂಬ ಗೊಂದಲಮಯ ಸ್ಥಿತಿಯಲ್ಲಿದ್ದನು. ಜೀವನದಲ್ಲಿ ಉದ್ದೇಶವನ್ನು ಕಂಡುಕೊಳ್ಳುವ ಪ್ರಯತ್ನದಿಂದ ಅವನು ಬೇರೆ ಬೇರೆ ಧರ್ಮಗಳನ್ನು ಪರೀಕ್ಷಿಸಿ ನೋಡಿದನು. ಆದರೆ ಅವನು ಏನನ್ನು ಹುಡುಕುತ್ತಿದ್ದನೋ ಅದು ಆ ಧರ್ಮಗಳಲ್ಲಿ ಸಿಗಲಿಲ್ಲ. 1991ರಲ್ಲಿ ಅವನು ಒಬ್ಬ ಯೆಹೋವನ ಸಾಕ್ಷಿಯನ್ನು ಸಂಧಿಸಿದನು. ಈ ಸಾಕ್ಷಿಯು ಅವನಿಗೆ ಒಂದು ಪುಸ್ತಕವನ್ನು ಕೊಟ್ಟನು, ಮತ್ತು ಅದರಲ್ಲಿ ಜೀವಿತದ ಅರ್ಥದ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂಬುದರ ಕುರಿತು ಚರ್ಚಿಸಲಾಗಿತ್ತು. ಬಿಲ್‌ನೊಂದಿಗೆ ಒಂದು ಬೈಬಲ್‌ ಅಭ್ಯಾಸವು ಏರ್ಪಡಿಸಲ್ಪಟ್ಟಿತು ಮತ್ತು ಈ ವಿಷಯದ ಕಡೆಗೆ ಹಾಗೂ ಇನ್ನಿತರ ವಿಷಯಗಳ ಕಡೆಗೆ ಅವನ ಗಮನವು ಸೆಳೆಯಲ್ಪಟ್ಟಿತು.

ಬಿಲ್‌ ಜ್ಞಾಪಿಸಿಕೊಳ್ಳುವುದು: “ನಮ್ಮ ಪ್ರಥಮ ಅಭ್ಯಾಸವು ನಡೆದಾಗ, ಪದೇ ಪದೇ ಬೈಬಲನ್ನು ಆಧಾರವಾಗಿ ಉಪಯೋಗಿಸಲಾಯಿತು. ಆದುದರಿಂದ, ಇದನ್ನೇ ಕಂಡುಕೊಳ್ಳಲು ಇಷ್ಟರ ತನಕ ನಾನು ಹುಡುಕಾಟ ನಡೆಸುತ್ತಿದ್ದೆ ಎಂಬುದು ನನಗೆ ಮನದಟ್ಟಾಯಿತು. ಬೈಬಲಿನಲ್ಲಿ ಕೊಡಲ್ಪಟ್ಟಿದ್ದ ಉತ್ತರಗಳು ನನ್ನನ್ನು ತುಂಬ ಪುಳಕಗೊಳಿಸಿದವು. ಆ ಅಭ್ಯಾಸದ ಬಳಿಕ, ನನ್ನ ಟ್ರಕ್‌ನಲ್ಲಿ ನಾನು ಒಂದು ಬೆಟ್ಟದ ಮೇಲೆ ಹೋಗಿ, ಟ್ರಕ್‌ನಿಂದ ಕೆಳಗಿಳಿದು, ಗಟ್ಟಿಯಾಗಿ ಕೂಗಾಡುವ ಮೂಲಕ ನನ್ನ ಮನಸ್ಸಿಗಾದ ಸಂತೋಷವನ್ನು ವ್ಯಕ್ತಪಡಿಸಿದೆ. ಕೊನೆಗೂ ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳುತ್ತಿದ್ದೇನಲ್ಲ ಎಂಬ ಸಂಗತಿಯೇ ನನ್ನನ್ನು ರೋಮಾಂಚನಗೊಳಿಸಿತು.”

ಬೈಬಲ್‌ ಸತ್ಯವನ್ನು ಕಂಡುಕೊಳ್ಳುವ ಪ್ರತಿಯೊಬ್ಬರೂ ಆನಂದದಿಂದ ಕೂಗಾಡುತ್ತಾರೆಂದು ಹೇಳಸಾಧ್ಯವಿಲ್ಲ ಎಂಬುದು ಖಂಡಿತ. ಆದರೂ, ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದು ಅನೇಕರಿಗೆ ಒಂದು ಆನಂದಮಯ ಅನುಭವವಾಗಿರುತ್ತದೆ. ಯೇಸುವಿನ ಸಾಮ್ಯದಲ್ಲಿ, ಹೊಲದಲ್ಲಿ ಹೂಳಿಡಲ್ಪಟ್ಟಿದ್ದ ದ್ರವ್ಯವನ್ನು ಕಂಡುಕೊಂಡ ಒಬ್ಬ ವ್ಯಕ್ತಿಗಾದ ಅನಿಸಿಕೆಯೇ ಇವರಿಗೂ ಆಗುತ್ತದೆ. ಯೇಸು ಹೇಳಿದ್ದು: “ಅದರಿಂದಾದ ಸಂತೋಷದಿಂದ ತನ್ನ ಬದುಕನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.”​—ಮತ್ತಾಯ 13:44.

ಅರ್ಥಭರಿತ ಜೀವನಕ್ಕೆ ಬೇಕಾಗಿರುವ ಕೀಲಿ ಕೈ

ಜೀವಿತದ ಉದ್ದೇಶವೇನು? ಎಂಬ ಮೂಲಭೂತ ಪ್ರಶ್ನೆಯ ವಿಷಯದಲ್ಲಿ ಬಿಲ್‌ ಗಂಭೀರವಾಗಿ ಯೋಚಿಸುತ್ತಿದ್ದನು. ಸಹಸ್ರಾರು ವರ್ಷಗಳಿಂದ ತತ್ತ್ವಜ್ಞಾನಿಗಳು, ದೇವತಾಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಅತ್ಯಧಿಕ ಪ್ರಯತ್ನವನ್ನು ಮಾಡಿದ್ದಾರೆ. ಇದನ್ನು ಉತ್ತರಿಸಲು ಪ್ರಯತ್ನಿಸುತ್ತಾ ಅನೇಕ ವ್ಯಕ್ತಿಗಳು ಅಸಂಖ್ಯಾತ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪ್ರಯತ್ನಗಳು ವ್ಯರ್ಥವಾಗಿವೆ, ಮತ್ತು ಈ ಪ್ರಶ್ನೆಗೆ ಉತ್ತರ ನೀಡುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಅನೇಕರು ಬಂದಿದ್ದಾರೆ. ಆದರೂ, ಖಂಡಿತವಾಗಿಯೂ ಇದಕ್ಕೆ ಉತ್ತರವಿದೆ. ಇದರ ಉತ್ತರವು ತುಂಬ ಗಹನವಾಗಿದೆ, ಆದರೆ ಅಷ್ಟೇನೂ ಜಟಿಲವಾದದ್ದಲ್ಲ. ಇದು ಬೈಬಲಿನಲ್ಲಿ ವಿವರಿಸಲ್ಪಟ್ಟಿದೆ. ಸಂತೋಷಭರಿತ ಹಾಗೂ ಅರ್ಥಭರಿತವಾದ ಜೀವನಕ್ಕೆ ಬೇಕಾಗಿರುವ ಕೀಲಿ ಕೈ ಇದಾಗಿದೆ: ನಮ್ಮ ಸೃಷ್ಟಿಕರ್ತನೂ ಸ್ವರ್ಗೀಯ ತಂದೆಯೂ ಆಗಿರುವ ಯೆಹೋವನೊಂದಿಗೆ ನಾವು ಯೋಗ್ಯವಾದ ಸಂಬಂಧವನ್ನು ಹೊಂದಿರಬೇಕು. ಯೆಹೋವನೊಂದಿಗೆ ಇಂತಹ ಸಂಬಂಧವನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ?

ದೇವರೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದರಲ್ಲಿ ಎರಡು ಅಂಶಗಳು ಒಳಗೂಡಿವೆ. ಇವು ಪರಸ್ಪರ ವಿರುದ್ಧವಾಗಿ ತೋರುತ್ತಿರಬಹುದು. ಯಾರು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೋ ಅವರು ಆತನಿಗೆ ಭಯಪಡಬೇಕು ಮತ್ತು ಆತನನ್ನು ಪ್ರೀತಿಸಬೇಕು. ಈ ಹೇಳಿಕೆಯನ್ನು ಸಮರ್ಥಿಸುವಂತಹ ಎರಡು ಶಾಸ್ತ್ರವಚನಗಳನ್ನು ನಾವೀಗ ಪರಿಗಣಿಸೋಣ. ಬಹಳ ಸಮಯದ ಹಿಂದೆ, ಜ್ಞಾನಿಯಾಗಿದ್ದ ರಾಜ ಸೊಲೊಮೋನನು ಮಾನವಕುಲದ ಕುರಿತು ಜಾಗರೂಕವಾದ ಅಧ್ಯಯನವನ್ನು ನಡೆಸಿದನು. ಮತ್ತು ತನ್ನ ಕಂಡುಹಿಡಿತಗಳನ್ನು ಬೈಬಲಿನ ಪ್ರಸಂಗಿ ಪುಸ್ತಕದಲ್ಲಿ ದಾಖಲಿಸಿದನು. ತಾನು ಗಮನಿಸಿದ ವಿಷಯಗಳನ್ನು ಸಾರಾಂಶವಾಗಿ ತಿಳಿಸುತ್ತಾ ಅವನು ಬರೆದುದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” (ಪ್ರಸಂಗಿ 12:13) ಅನೇಕ ಶತಮಾನಗಳ ನಂತರ, ಮೋಶೆಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಯಾವುದು ಮುಖ್ಯವಾದ ಆಜ್ಞೆಯಾಗಿತ್ತು ಎಂದು ಒಬ್ಬ ವ್ಯಕ್ತಿ ಕೇಳಿದಾಗ ಯೇಸು ಉತ್ತರಿಸಿದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:​37, ಓರೆ ಅಕ್ಷರಗಳು ನಮ್ಮವು.) ನಾವು ದೇವರಿಗೆ ಭಯಪಡಬೇಕು ಮತ್ತು ಅದೇ ಸಮಯದಲ್ಲಿ ಆತನನ್ನು ಪ್ರೀತಿಸಬೇಕು ಎಂಬುದು ನಿಮಗೆ ವಿಚಿತ್ರವಾಗಿ ಕಾಣುತ್ತದೋ? ಭಯ ಹಾಗೂ ಪ್ರೀತಿಯ ಪ್ರಮುಖತೆಯನ್ನು ಹಾಗೂ ದೇವರೊಂದಿಗೆ ಸಂತೃಪ್ತಿಕರವಾದ ಸಂಬಂಧವನ್ನು ಪಡೆದುಕೊಳ್ಳಲು ಭಯ ಹಾಗೂ ಪ್ರೀತಿಯು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ನಾವೀಗ ಪರೀಕ್ಷಿಸೋಣ.

ದೇವರ ಭಯ ಎಂದರೇನು?

ದೇವರಿಗೆ ಮೆಚ್ಚಿಗೆಯಾಗುವಂತಹ ರೀತಿಯಲ್ಲಿ ನಾವು ಆತನನ್ನು ಆರಾಧಿಸಬೇಕಾದರೆ, ಗೌರವದಿಂದ ಕೂಡಿದ ಭಯವು ಅತ್ಯಗತ್ಯ. “ಯೆಹೋವನ ಭಯವೇ ಜ್ಞಾನಕ್ಕೆ ಮೂಲ” ಎಂದು ಬೈಬಲು ಹೇಳುತ್ತದೆ. (ಕೀರ್ತನೆ 111:10) ಅಪೊಸ್ತಲ ಪೌಲನು ಸಹ ಹೀಗೆ ಬರೆದನು: “ಯಾರೂ ಕದಲಿಸಲಾರದ ರಾಜ್ಯವನ್ನು ಹೊಂದುವವರಾದ ನಾವು ಕೃತಜ್ಞತೆಯುಳ್ಳವರಾಗಿದ್ದು ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಭಯದಿಂದಲೂ ಮಾಡೋಣ.” (ಇಬ್ರಿಯ 12:28) ತದ್ರೀತಿಯಲ್ಲಿ, ಅಪೊಸ್ತಲ ಯೋಹಾನನು ದರ್ಶನದಲ್ಲಿ ಕಂಡ ಆಕಾಶಮಧ್ಯದಲ್ಲಿ ಹಾರಿಹೋಗುತ್ತಿದ್ದ ದೇವದೂತನು, “ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ” ಎಂಬ ಮಾತುಗಳಿಂದ ಸುವಾರ್ತೆಯನ್ನು ಪ್ರಕಟಿಸಲು ಆರಂಭಿಸಿದನು.​—ಪ್ರಕಟನೆ 14:​6, 7.

ಅರ್ಥಭರಿತವಾದ ಜೀವನಕ್ಕೆ ತುಂಬ ಅತ್ಯಗತ್ಯವಾಗಿರುವ ಈ ದೇವರ ಭಯವು, ಅಹಿತಕರವಾದ ಅಂಜಿಕೆಯಾಗಿರುವುದಿಲ್ಲ. ಒಬ್ಬ ಕ್ರೂರ ಹಾಗೂ ಅಪಾಯಕಾರಿ ಅಪರಾಧಿಯು ನಮ್ಮನ್ನು ಬೆದರಿಸುವಲ್ಲಿ ನಮಗೆ ತುಂಬ ಭಯವಾಗಬಹುದು. ಆದರೆ ದೇವರ ಭಯ ಅಥವಾ ದೈವಿಕ ಭಯವು, ಸೃಷ್ಟಿಕರ್ತನಿಗೆ ತೋರಿಸಲ್ಪಡುವ ಭಯಭಕ್ತಿ ಹಾಗೂ ಗಾಢವಾದ ಪೂಜ್ಯಭಾವನೆಯಾಗಿದೆ. ದೇವರಿಗೆ ಅಸಂತೋಷವನ್ನುಂಟುಮಾಡುವ ಯೋಗ್ಯವಾದ ಭಯವೂ ಇದರಲ್ಲಿ ಒಳಗೂಡಿದೆ. ಏಕೆಂದರೆ ಆತನು ಪರಮ ನ್ಯಾಯಾಧಿಪತಿಯೂ ಸರ್ವಶಕ್ತನೂ ಆಗಿದ್ದು, ಯಾರು ಆತನಿಗೆ ಅವಿಧೇಯರಾಗುತ್ತಾರೋ ಅವರನ್ನು ಶಿಕ್ಷಿಸುವ ಶಕ್ತಿಯನ್ನೂ ಅಧಿಕಾರವನ್ನೂ ಹೊಂದಿದವನಾಗಿದ್ದಾನೆ.

ಭಯ ಹಾಗೂ ಪ್ರೀತಿಯ ಮಧ್ಯೆ ನಿಕಟ ಸಂಬಂಧವಿದೆ

ಆದರೂ, ಕೇವಲ ತನ್ನ ಕಡೆಗಿನ ಭಯದಿಂದ ಜನರು ತನ್ನ ಸೇವೆಮಾಡಬೇಕೆಂದು ಯೆಹೋವನು ಬಯಸುವುದಿಲ್ಲ. ಮಹೋನ್ನತ ರೀತಿಯಲ್ಲಿ ಯೆಹೋವನು ಪ್ರೀತಿಯ ದೇವರಾಗಿದ್ದಾನೆ. ಆದುದರಿಂದಲೇ ಅಪೊಸ್ತಲ ಪೌಲನು “ದೇವರು ಪ್ರೀತಿಸ್ವರೂಪಿಯು” ಎಂದು ಬರೆಯುವಂತೆ ಪ್ರಚೋದಿಸಲ್ಪಟ್ಟನು. (1 ಯೋಹಾನ 4:8) ಯೆಹೋವ ದೇವರು ಮಾನವಕುಲದೊಂದಿಗೆ ತುಂಬ ಪ್ರೀತಿಯಿಂದ ವ್ಯವಹರಿಸಿದ್ದಾನೆ. ಪ್ರತಿಯಾಗಿ, ಜನರು ತನ್ನನ್ನು ಪ್ರೀತಿಸುವ ಮೂಲಕ ಇದಕ್ಕೆ ಪ್ರತಿಕ್ರಿಯೆ ತೋರಿಸಬೇಕೆಂದು ಆತನು ಬಯಸುತ್ತಾನೆ. ಆದರೂ, ಅಂತಹ ಪ್ರೀತಿಯು ಯಾವ ರೀತಿಯಲ್ಲಿ ದೈವಿಕ ಭಯದೊಂದಿಗೆ ಹೊಂದಿಕೊಂಡು ಹೋಗುತ್ತದೆ? ಈ ಎರಡು ಗುಣಗಳ ನಡುವೆ ನಿಕಟವಾದ ಸಂಬಂಧವಿದೆ. ಈ ವಿಷಯದಲ್ಲಿ ಕೀರ್ತನೆಗಾರನು ಬರೆದುದು: “ಯೆಹೋವನು ತನ್ನ ಸದ್ಭಕ್ತರಿಗೆ [“ತನಗೆ ಭಯಪಡುವವರಿಗೆ,” NW] ಆಪ್ತಮಿತ್ರನಂತಿರುವನು.”​—ಕೀರ್ತನೆ 25:14.

ಇದರ ಕುರಿತು ತುಸು ಆಲೋಚಿಸಿರಿ: ಶಾರೀರಿಕವಾಗಿ ಗಟ್ಟಿಮುಟ್ಟಾಗಿರುವ ಹಾಗೂ ಬುದ್ಧಿವಂತನಾಗಿರುವ ಒಬ್ಬ ತಂದೆಯ ಕಡೆಗೆ ಒಂದು ಮಗುವಿಗೆ ಗೌರವ ಹಾಗೂ ಭಯಭಕ್ತಿ ಇರುತ್ತದೆ. ಅದೇ ಸಮಯದಲ್ಲಿ, ಆ ಮಗು ತಂದೆಯ ಪ್ರೀತಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತದೆ. ಆ ಮಗು ತಂದೆಯನ್ನು ನಂಬಿಕೊಂಡಿರುತ್ತದೆ ಮತ್ತು ಅವನಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತದೆ. ಮತ್ತು ಈ ಮಾರ್ಗದರ್ಶನೆಯು ತನಗೆ ಪ್ರಯೋಜನಗಳನ್ನು ತರುತ್ತದೆ ಎಂಬ ನಂಬಿಕೆ ಅದಕ್ಕಿರುತ್ತದೆ. ತದ್ರೀತಿಯಲ್ಲಿ, ನಾವು ಯೆಹೋವನನ್ನು ಪ್ರೀತಿಸಿ ಆತನಿಗೆ ಭಯಪಡುವಲ್ಲಿ, ನಾವು ಆತನ ಮಾರ್ಗದರ್ಶನಕ್ಕನುಸಾರ ನಡೆಯುವೆವು ಮತ್ತು ಇದು ನಮಗೆ ಪ್ರಯೋಜನವನ್ನು ತರುವುದು. ಇಸ್ರಾಯೇಲ್ಯರ ಕುರಿತು ಯೆಹೋವನು ಏನು ಹೇಳಿದನೆಂಬುದನ್ನು ಗಮನಿಸಿರಿ: “ನನ್ನಲ್ಲಿ ಭಯಭಕ್ತಿಯುಳ್ಳವರಾಗಿ ನನ್ನ ಆಜ್ಞೆಗಳನ್ನು ಅನುಸರಿಸುವ ಮನಸ್ಸು ಯಾವಾಗಲೂ ಅವರಲ್ಲಿ ಇದ್ದರೆ ಎಷ್ಟೋ ಮೇಲು; ಆಗ ಅವರಿಗೂ ಅವರ ಸಂತತಿಯವರಿಗೂ ಯಾವಾಗಲೂ ಶುಭವುಂಟಾಗುವದು.”​—ಧರ್ಮೋಪದೇಶಕಾಂಡ 5:29.

ಹೌದು, ದೇವರ ಭಯವು ನಮ್ಮನ್ನು ನಿರ್ಬಂಧಕ್ಕೆ ಗುರಿಮಾಡುವುದಿಲ್ಲ, ಬದಲಾಗಿ ಸ್ವಾತಂತ್ರ್ಯವನ್ನು ನೀಡುತ್ತದೆ. ದುಃಖವನ್ನಲ್ಲ, ಆನಂದವನ್ನು ಉಂಟುಮಾಡುತ್ತದೆ. ಯೇಸುವಿನ ಕುರಿತು ಯೆಶಾಯನು ಪ್ರವಾದಿಸಿದ್ದು: “ಯೆಹೋವನ ಭಯದಲ್ಲಿ ಅವನಿಗೆ ಆನಂದವಿರುವುದು.” (ಯೆಶಾಯ 11:3, NW) ಮತ್ತು ಕೀರ್ತನೆಗಾರನು ಬರೆದುದು: “ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು [“ಸಂತೋಷಭರಿತನು,” NW].”​—ಕೀರ್ತನೆ 112:1.

ನಮಗೆ ದೇವರ ಬಗ್ಗೆ ಏನೂ ಗೊತ್ತಿರದಿದ್ದಲ್ಲಿ, ನಾವು ಆತನ ಬಗ್ಗೆ ಭಯಪಡಲೂ ಸಾಧ್ಯವಿಲ್ಲ ಆತನನ್ನು ಪ್ರೀತಿಸಲೂ ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟ. ಆದುದರಿಂದಲೇ, ಬೈಬಲನ್ನು ಅಭ್ಯಾಸಿಸುವುದು ಅತಿ ಪ್ರಾಮುಖ್ಯವಾಗಿದೆ. ಅಂತಹ ಅಭ್ಯಾಸವು, ದೇವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಆತನ ಮಾರ್ಗದರ್ಶನವನ್ನು ಅನುಸರಿಸುವುದರ ವಿವೇಕವನ್ನು ಗಣ್ಯಮಾಡಲು ನಮಗೆ ಸಹಾಯಮಾಡುತ್ತದೆ. ನಾವು ದೇವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವಾಗ, ಆತನ ಆಜ್ಞೆಗಳು ನಮಗೆ ಪ್ರಯೋಜನವನ್ನು ಉಂಟುಮಾಡುತ್ತವೆ ಎಂಬುದನ್ನು ಅರಿತವರಾಗಿದ್ದು, ನಾವು ಆತನ ಚಿತ್ತವನ್ನು ಮಾಡಲು ಬಯಸುತ್ತೇವೆ ಮತ್ತು ಆತನ ಆಜ್ಞೆಗಳಿಗನುಸಾರ ನಡೆಯುವಂತೆ ಪ್ರಚೋದಿಸಲ್ಪಡುತ್ತೇವೆ.​—1 ಯೋಹಾನ 5:3.

ಜೀವನದಲ್ಲಿ ಒಬ್ಬನು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ನಿಜವಾಗಿಯೂ ಆನಂದದ ಸಂಗತಿಯಾಗಿದೆ. ಈ ಮುಂಚೆ ತಿಳಿಸಲ್ಪಟ್ಟಿರುವ ಬಿಲ್‌ನ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಇತ್ತೀಚೆಗೆ ಅವನು ಹೇಳಿದ್ದು: “ನನ್ನ ಮೊದಲ ಬೈಬಲ್‌ ಅಭ್ಯಾಸವು ಆರಂಭಿಸಿದಂದಿನಿಂದ ಗತಿಸಿರುವ ಒಂಬತ್ತು ವರ್ಷಗಳಲ್ಲಿ, ಯೆಹೋವನೊಂದಿಗಿನ ನನ್ನ ಸಂಬಂಧವು ಇನ್ನಷ್ಟು ಬೆಳೆದಿದೆ. ಆರಂಭದಲ್ಲಿ ಮೊದಲ ಬಾರಿ ನನಗಾದ ಹರ್ಷಾನಂದವು, ನಿಜವಾಗಿಯೂ ಆನಂದದಿಂದ ಕೂಡಿರುವ ಜೀವನಮಾರ್ಗವಾಗಿ ಬೆಳೆದಿದೆ. ಅಂದಿನಿಂದ ನಾನು ಜೀವಿತದ ಕುರಿತು ಯಾವಾಗಲೂ ಸಕಾರಾತ್ಮಕವಾದ ಹೊರನೋಟವನ್ನು ಇಟ್ಟುಕೊಂಡಿದ್ದೇನೆ. ನಾನು ಈಗ ಸುಖಾನುಭೋಗಕ್ಕಾಗಿ ಗೊತ್ತುಗುರಿಯಿಲ್ಲದೆ ಹುಡುಕಾಟ ನಡೆಸುತ್ತಿಲ್ಲ, ಬದಲಾಗಿ ನನ್ನ ದಿನಗಳು ಅರ್ಥಭರಿತ ಚಟುವಟಿಕೆಗಳಿಂದ ತುಂಬಿವೆ. ಯೆಹೋವನು ನನಗೆ ನೈಜ ವ್ಯಕ್ತಿಯಾಗಿ ಪರಿಣಮಿಸಿದ್ದಾನೆ, ಮತ್ತು ಆತನು ನನ್ನ ಹಿತಕ್ಷೇಮದಲ್ಲಿ ನಿಜವಾಗಿಯೂ ಆಸಕ್ತನಾಗಿದ್ದಾನೆ ಎಂಬುದು ಸಹ ನನಗೆ ಗೊತ್ತಿದೆ.”

ಮುಂದಿನ ಲೇಖನದಲ್ಲಿ, ಯಾರು ಯೆಹೋವನ ಜ್ಞಾನವನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುತ್ತಾರೋ ಅವರು, ಇದರಿಂದ ಹೇಗೆ ಆನಂದ ಹಾಗೂ ಪ್ರಯೋಜನಗಳನ್ನು ಪಡೆದುಕೊಳ್ಳುವರು ಎಂಬುದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪರಿಗಣಿಸುವೆವು.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವುದರ ಅರ್ಥ, ನಾವು ಆತನನ್ನು ಪ್ರೀತಿಸಬೇಕು ಹಾಗೂ ಆತನಿಗೆ ಭಯಪಡಬೇಕು

[ಪುಟ 6ರಲ್ಲಿರುವ ಚಿತ್ರ]

ಯೆಹೋವನಿಗೆ ಭಯಪಡುವುದರಲ್ಲಿ ಯೇಸು ಆನಂದವನ್ನು ಕಂಡುಕೊಂಡನು