ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಕುರಿತಾದ ಜ್ಞಾನದಲ್ಲಿ ಆನಂದಿಸಿರಿ

ಯೆಹೋವನ ಕುರಿತಾದ ಜ್ಞಾನದಲ್ಲಿ ಆನಂದಿಸಿರಿ

ಯೆಹೋವನ ಕುರಿತಾದ ಜ್ಞಾನದಲ್ಲಿ ಆನಂದಿಸಿರಿ

“ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು [“ಸಂತೋಷಿತರು,” NW].”​—ಲೂಕ 11:28.

1. ಯಾವಾಗ ಯೆಹೋವನು ಮಾನವರೊಂದಿಗೆ ಸಂಪರ್ಕಮಾಡಲು ಆರಂಭಿಸಿದನು?

ಯೆಹೋವನು ಮಾನವರನ್ನು ಪ್ರೀತಿಸುತ್ತಾನೆ ಮತ್ತು ಅವರ ಹಿತಕ್ಷೇಮದಲ್ಲಿ ಬಹಳಷ್ಟು ಆಸಕ್ತನಾಗಿದ್ದಾನೆ. ಆದುದರಿಂದಲೇ ಆತನು ಅವರಿಗೆ ಮಾಹಿತಿಯನ್ನು ಕೊಡುತ್ತಾ ಇರುತ್ತಾನೆ. ಇದನ್ನು ಏದೆನ್‌ ತೋಟದಲ್ಲೇ ಆರಂಭಿಸಿದನು. ಆದಿಕಾಂಡ 3:8ಕ್ಕನುಸಾರ, ಒಂದು ಸಂದರ್ಭದಲ್ಲಿ, “ಸಂಜೆಯ ತಂಗಾಳಿಯಲ್ಲಿ” ಆದಾಮಹವ್ವರು “ಆತನ [ಯೆಹೋವ ದೇವರ] ಸಪ್ಪಳವನ್ನು ಕೇಳಿ”ಸಿಕೊಂಡರು. ಹೆಚ್ಚುಕಡಿಮೆ ಪ್ರತಿ ದಿನ, ಇದೇ ಸಮಯದಲ್ಲಿ ಆದಾಮನೊಂದಿಗೆ ಮಾತುಕತೆ ನಡೆಸುವುದು ಯೆಹೋವನ ರೂಢಿಯಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ, ಎಂದು ಕೆಲವರು ಹೇಳುತ್ತಾರೆ. ಅದೇನೇ ಇರಲಿ, ಪ್ರಥಮ ಮಾನವನಿಗೆ ನಿಯಮಗಳನ್ನು ನೀಡಲಿಕ್ಕಾಗಿ ಮಾತ್ರವಲ್ಲ, ಬದಲಿಗೆ ತನ್ನ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಲಿಕ್ಕಾಗಿ ಅವನು ತಿಳಿದುಕೊಳ್ಳಬೇಕಾಗಿರುವಂತಹ ವಿಷಯಗಳನ್ನು ಅವನಿಗೆ ಕಲಿಸಲಿಕ್ಕಾಗಿಯೂ ದೇವರು ಸಮಯವನ್ನು ಬದಿಗಿರಿಸಿದನು ಎಂಬುದನ್ನು ಬೈಬಲ್‌ ಸ್ಪಷ್ಟಪಡಿಸುತ್ತದೆ.​—ಆದಿಕಾಂಡ 1:​28-30.

2. ಪ್ರಥಮ ಮಾನವ ದಂಪತಿಯು ಯೆಹೋವನ ಮಾರ್ಗದರ್ಶನದಿಂದ ತಮ್ಮನ್ನು ಹೇಗೆ ಸಂಪೂರ್ಣವಾಗಿ ಪ್ರತ್ಯೇಕಿಸಿಕೊಂಡರು, ಮತ್ತು ಇದರ ಫಲಿತಾಂಶವೇನಾಗಿತ್ತು?

2 ಯೆಹೋವನು ಆದಾಮಹವ್ವರಿಗೆ ಜೀವವನ್ನು ಕೊಟ್ಟನು, ಪ್ರಾಣಿಗಳ ಮೇಲೆ ದೊರೆತನಮಾಡುವಂತೆ ಅನುಮತಿ ಕೊಟ್ಟನು, ಹಾಗೂ ಇಡೀ ಭೂಮಿಯ ಮೇಲಿನ ಅಧಿಕಾರವನ್ನೂ ಕೊಟ್ಟನು. ಆದರೆ ಒಂದೇ ಒಂದು ನಿಷೇಧವು ಹಾಕಲ್ಪಟ್ಟಿತ್ತು. ಅದೇನೆಂದರೆ, ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಅವರು ತಿನ್ನಬಾರದಾಗಿತ್ತು. ಆದರೆ ಸೈತಾನನಿಂದ ಪ್ರಭಾವಿತರಾದ ಆದಾಮಹವ್ವರು ದೇವರ ಆಜ್ಞೆಗೆ ಅವಿಧೇಯರಾದರು. (ಆದಿಕಾಂಡ 2:​16, 17; 3:​1-6) ಅವರು ದೇವರ ಮಾರ್ಗದರ್ಶನವಿಲ್ಲದೆ ಸ್ವತಂತ್ರರಾಗಿ ಕ್ರಿಯೆಗೈಯುವ ಆಯ್ಕೆಮಾಡಿದರು. ಅಂದರೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಸ್ವತಃ ತಾವೇ ನಿರ್ಧರಿಸಲು ಬಯಸಿದರು. ಹೀಗೆ ಮಾಡುವ ಮೂಲಕ ಅವರು, ಮೂರ್ಖತನದಿಂದ ತಮ್ಮ ಪ್ರೀತಿಯ ಸೃಷ್ಟಿಕರ್ತನ ಮಾರ್ಗದರ್ಶನದಿಂದ ತಮ್ಮನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಕೊಂಡರು. ಇದರ ಪರಿಣಾಮಗಳು, ಅವರಿಗೂ, ಇನ್ನೂ ಜನಿಸಿರದ ಅವರ ಸಂತತಿಯವರಿಗೂ ಬಹಳ ವಿಪತ್ಕಾರಕವಾಗಿದ್ದವು. ಆದಾಮಹವ್ವರು ಮುದುಕರಾದರು ಮತ್ತು ಕಾಲಕ್ರಮೇಣ ಪುನರುತ್ಥಾನದ ಯಾವುದೇ ನಿರೀಕ್ಷೆಯಿಲ್ಲದೆ ಮೃತಪಟ್ಟರು. ಅವರ ಸಂತತಿಯವರು ಪಾಪ ಮತ್ತು ಅದರ ಫಲವಾದ ಮರಣವನ್ನು ಬಳುವಳಿಯಾಗಿ ಪಡೆದರು.​—ರೋಮಾಪುರ 5:12.

3. ಯೆಹೋವನು ಕಾಯಿನನನ್ನು ಏಕೆ ಸಂಪರ್ಕಿಸಿದನು, ಮತ್ತು ಕಾಯಿನನು ಹೇಗೆ ಪ್ರತಿಕ್ರಿಯಿಸಿದನು?

3 ಏದೆನಿನಲ್ಲಿ ನಡೆದ ದಂಗೆಯ ಬಳಿಕವೂ ಯೆಹೋವನು ತನ್ನ ಮಾನವ ಸೃಷ್ಟಿಯೊಂದಿಗೆ ಸಂಪರ್ಕಮಾಡುವುದನ್ನು ಮುಂದುವರಿಸಿದನು. ಆದಾಮಹವ್ವರ ಚೊಚ್ಚಲು ಮಗನಾದ ಕಾಯಿನನು, ಪಾಪಕ್ಕೆ ಬಲಿಯಾಗುವ ಅಪಾಯದಲ್ಲಿದ್ದನು. ಆಗ ಯೆಹೋವನು, ನೀನು ಅಪಾಯದ ಕಡೆಗೆ ಮುನ್ನುಗ್ಗುತ್ತಿದ್ದೀ ಎಂದು ಅವನನ್ನು ಎಚ್ಚರಿಸಿದನು ಮತ್ತು ‘ಒಳ್ಳೇ ಕೆಲಸಮಾಡುವಂತೆ’ ಬುದ್ಧಿಹೇಳಿದನು. ಈ ಪ್ರೀತಿಯ ಸಲಹೆಯನ್ನು ಕಾಯಿನನು ಧಿಕ್ಕರಿಸಿದನು ಮತ್ತು ತನ್ನ ತಮ್ಮನನ್ನು ಕೊಂದುಹಾಕಿದನು. (ಆದಿಕಾಂಡ 4:​3-8) ಹೀಗೆ, ಭೂಮಿಯಲ್ಲಿದ್ದ ಮೊದಲ ಮೂವರು ಮಾನವರು, ತನ್ನ ಜನರು ಪ್ರಯೋಜನ ಪಡೆದುಕೊಳ್ಳುವಂತೆ ವೃದ್ಧಿಮಾರ್ಗವನ್ನು ಬೋಧಿಸುವಂತಹ ದೇವರಿಂದ, ಅಂದರೆ ತಮ್ಮ ಜೀವದಾತನಿಂದ ಒದಗಿಸಲ್ಪಟ್ಟ ಸ್ಪಷ್ಟವಾದ ಮಾರ್ಗದರ್ಶನವನ್ನು ತಿರಸ್ಕರಿಸಿದರು. (ಯೆಶಾಯ 48:17) ಇದು ಯೆಹೋವನಿಗೆ ಎಷ್ಟು ನೋವನ್ನು ಉಂಟುಮಾಡಿದ್ದಿರಬಹುದು!

ನಂಬಿಗಸ್ತ ಪೂರ್ವಜರಿಗೆ ಯೆಹೋವನು ತನ್ನನ್ನು ಪ್ರಕಟಪಡಿಸಿಕೊಳ್ಳುತ್ತಾನೆ

4. ಆದಾಮನ ಸಂತತಿಯವರ ವಿಷಯದಲ್ಲಿ, ಯಾವುದರ ಬಗ್ಗೆ ಯೆಹೋವನು ದೃಢಭರವಸೆಯುಳ್ಳವನಾಗಿದ್ದನು, ಮತ್ತು ಇದನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಆತನು ನಿರೀಕ್ಷೆಯ ಯಾವ ಸಂದೇಶವನ್ನು ಪ್ರಕಟಪಡಿಸಿದನು?

4 ಮಾನವರೊಂದಿಗಿನ ತನ್ನ ಸಂಪರ್ಕವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವ ಹಕ್ಕು ಯೆಹೋವನಿಗಿತ್ತಾದರೂ, ಆತನು ಹಾಗೆ ಮಾಡಲಿಲ್ಲ. ಆದಾಮನ ಸಂತತಿಯವರಲ್ಲಿ ಕೆಲವರು ವಿವೇಕದಿಂದ ತನ್ನ ಮಾರ್ಗದರ್ಶನವನ್ನು ಅನುಸರಿಸುವರು ಎಂಬ ದೃಢಭರವಸೆ ಆತನಿಗಿತ್ತು. ಉದಾಹರಣೆಗೆ, ಯೆಹೋವನು ಆದಾಮಹವ್ವರಿಗೆ ತೀರ್ಪಿನ ಸಂದೇಶವನ್ನು ತಿಳಿಸುವಾಗ, ಸರ್ಪ ಅಂದರೆ ಪಿಶಾಚನಾದ ಸೈತಾನನಿಗೆ ವಿರುದ್ಧವಾಗಿ ನಿಲ್ಲುವಂತಹ ಒಂದು “ಸಂತಾನ”ವು ಬರಲಿಕ್ಕಿದೆ ಎಂಬುದನ್ನು ಮುಂತಿಳಿಸಿದನು. ಕಾಲಕ್ರಮೇಣ, ಸೈತಾನನ ತಲೆಯು ಮಾರಕ ರೀತಿಯಲ್ಲಿ ಜಜ್ಜಲ್ಪಡಲಿಕ್ಕಿತ್ತು. (ಆದಿಕಾಂಡ 3:15) “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವ”ರಿಗೆ ಈ ಪ್ರವಾದನೆಯು, ನಿರೀಕ್ಷೆಯನ್ನು ನೀಡುವಂತಹ ಆನಂದಮಯ ಸಂದೇಶವಾಗಿತ್ತು.​—ಲೂಕ 11:28.

5, 6. ಸಾ.ಶ. ಒಂದನೇ ಶತಮಾನಕ್ಕೆ ಮುಂಚೆ ಯೆಹೋವನು ತನ್ನ ಜನರೊಂದಿಗೆ ಹೇಗೆ ಸಂಪರ್ಕಮಾಡಿದನು, ಮತ್ತು ಇದು ಅವರಿಗೆ ಹೇಗೆ ಪ್ರಯೋಜನದಾಯಕವಾಗಿತ್ತು?

5 ನೋಹ, ಅಬ್ರಹಾಮ, ಇಸಾಕ, ಯಾಕೋಬ ಹಾಗೂ ಯೋಬರಂತಹ ನಂಬಿಗಸ್ತ ಪೂರ್ವಜರಿಗೆ ಯೆಹೋವನು ತನ್ನ ಚಿತ್ತವನ್ನು ತಿಳಿಯಪಡಿಸಿದನು. (ಆದಿಕಾಂಡ 6:13; ವಿಮೋಚನಕಾಂಡ 33:1; ಯೋಬ 38:​1-3) ಸಮಯಾನಂತರ, ಮೋಶೆಯ ಮೂಲಕ ಆತನು ಇಸ್ರಾಯೇಲ್‌ ಜನಾಂಗಕ್ಕೋಸ್ಕರ ನಿಯಮಾವಳಿಯನ್ನು ಒದಗಿಸಿದನು. ಮೋಶೆಯ ಧರ್ಮಶಾಸ್ತ್ರವು ಅನೇಕ ವಿಧಗಳಲ್ಲಿ ಅವರಿಗೆ ಪ್ರಯೋಜನವನ್ನು ತಂದಿತು. ಧರ್ಮಶಾಸ್ತ್ರಕ್ಕೆ ವಿಧೇಯತೆ ತೋರಿಸುವ ಮೂಲಕ, ಇಸ್ರಾಯೇಲ್‌ ಜನಾಂಗವು ಇತರ ಎಲ್ಲ ಜನಾಂಗಗಳಿಂದ ಪ್ರತ್ಯೇಕಿಸಲ್ಪಟ್ಟು, ದೇವರಾದುಕೊಂಡ ವಿಶೇಷ ಜನಾಂಗವಾಗಿ ಪರಿಗಣಿಸಲ್ಪಟ್ಟಿತು. ಅವರು ಧರ್ಮಶಾಸ್ತ್ರಕ್ಕೆ ವಿಧೇಯರಾಗಿ ನಡೆಯುವಲ್ಲಿ, ಆತನು ಅವರನ್ನು ಪ್ರಾಪಂಚಿಕವಾಗಿ ಮಾತ್ರವಲ್ಲ ಆತ್ಮಿಕವಾಗಿಯೂ ಆಶೀರ್ವದಿಸಿ, ಅವರನ್ನು ಯಾಜಕರಾಜ್ಯವಾಗಿಯೂ ಪರಿಶುದ್ಧ ಜನವಾಗಿಯೂ ಮಾಡುತ್ತೇನೆಂದು ದೇವರು ವಚನಕೊಟ್ಟಿದ್ದನು. ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಲು ಬೇಕಾಗಿದ್ದ ಆಹಾರಪಥ್ಯ ಹಾಗೂ ನೈರ್ಮಲ್ಯದ ನಿಬಂಧನೆಗಳನ್ನು ಸಹ ಧರ್ಮಶಾಸ್ತ್ರವು ಒದಗಿಸಿತು. ಅಷ್ಟುಮಾತ್ರವಲ್ಲ, ಇದಕ್ಕೆ ಅವಿಧೇಯತೆ ತೋರಿಸುವುದರಿಂದ ಉಂಟಾಗುವ ದುರಂತಮಯ ಪರಿಣಾಮಗಳ ಬಗ್ಗೆಯೂ ಯೆಹೋವನು ಅವರಿಗೆ ಎಚ್ಚರಿಕೆ ನೀಡಿದ್ದನು.​—ವಿಮೋಚನಕಾಂಡ 19:​5, 6; ಧರ್ಮೋಪದೇಶಕಾಂಡ 28:​1-68.

6 ಈ ಮಧ್ಯೆ ಇತರ ಪ್ರೇರಿತ ಪುಸ್ತಕಗಳು ಸಹ ಬೈಬಲ್‌ ಪ್ರಮಾಣಗ್ರಂಥಕ್ಕೆ ಕೂಡಿಸಲ್ಪಟ್ಟವು. ಐತಿಹಾಸಿಕ ವೃತ್ತಾಂತಗಳು, ಜನಾಂಗಗಳ ಹಾಗೂ ಜನರೊಂದಿಗಿನ ಯೆಹೋವನ ವ್ಯವಹಾರಗಳ ಕುರಿತು ತಿಳಿಸಿದವು. ಕವಿತಾ ಶೈಲಿಯ ಪುಸ್ತಕಗಳು, ಆತನ ಗುಣಗಳನ್ನು ಸುಂದರವಾಗಿ ವರ್ಣಿಸಿದವು. ಪ್ರವಾದನ ಪುಸ್ತಕಗಳು ಭವಿಷ್ಯತ್ತಿನಲ್ಲಿ ಯೆಹೋವನ ಚಿತ್ತವು ಹೇಗೆ ನೆರವೇರಿಸಲ್ಪಡುವುದು ಎಂಬುದನ್ನು ಮುಂತಿಳಿಸಿದವು. ಪುರಾತನ ಸಮಯದ ನಂಬಿಗಸ್ತ ಪುರುಷರು ಈ ಪ್ರೇರಿತ ಬರಹಗಳನ್ನು ಜಾಗರೂಕತೆಯಿಂದ ಅಭ್ಯಾಸಿಸಿದರು ಮತ್ತು ತಮ್ಮ ಜೀವನದಲ್ಲಿ ಅನ್ವಯಿಸಿಕೊಂಡರು. ಒಬ್ಬನು ಬರೆದುದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಕೀರ್ತನೆ 119:105) ಯಾರು ತನಗೆ ಪೂರ್ಣ ಮನಸ್ಸಿನಿಂದ ಕಿವಿಗೊಡಲು ಸಿದ್ಧರಿದ್ದರೋ ಅವರಿಗೆ ಯೆಹೋವನು ಶಿಕ್ಷಣವನ್ನೂ ಜ್ಞಾನೋದಯವನ್ನೂ ನೀಡಿದನು.

ಬೆಳಕು ಇನ್ನಷ್ಟು ಪ್ರಕಾಶಮಾನವಾಗುತ್ತದೆ

7. ಯೇಸು ಅದ್ಭುತಕಾರ್ಯಗಳನ್ನು ನಡಿಸಿದನಾದರೂ, ಹೆಚ್ಚಾಗಿ ಅವನು ಯಾವುದಕ್ಕೆ ಪ್ರಸಿದ್ಧನಾಗಿದ್ದನು, ಮತ್ತು ಏಕೆ?

7 ಪ್ರಥಮ ಶತಮಾನದಷ್ಟಕ್ಕೆ, ಯೆಹೂದಿ ಧಾರ್ಮಿಕ ಗುಂಪುಗಳು ಧರ್ಮಶಾಸ್ತ್ರಕ್ಕೆ ಇನ್ನೂ ಹೆಚ್ಚಿನ ಮಾನವ ಸಂಪ್ರದಾಯಗಳನ್ನು ಕೂಡಿಸಿದ್ದವು. ಹೀಗೆ ಧರ್ಮಶಾಸ್ತ್ರವು ದುರುಪಯೋಗಿಸಲ್ಪಟ್ಟಿತು. ಅಷ್ಟುಮಾತ್ರವಲ್ಲ, ಆ ಸಂಪ್ರದಾಯಗಳ ಕಾರಣದಿಂದ ಇದು ಜ್ಞಾನದ ಮೂಲವಾಗುವುದಕ್ಕೆ ಬದಲಾಗಿ, ಭಾರವಾದ ಹೊರೆಯಾಗಿ ಪರಿಣಮಿಸಿತ್ತು. (ಮತ್ತಾಯ 23:​2-4) ಆದರೂ, ಸಾ.ಶ. 29ರಲ್ಲಿ ಯೇಸು ಮೆಸ್ಸೀಯನಾಗಿ ಪ್ರತ್ಯಕ್ಷನಾದನು. ಮಾನವಕುಲಕ್ಕೋಸ್ಕರ ತನ್ನ ಜೀವವನ್ನು ಕೊಡುವುದು ಮಾತ್ರವಲ್ಲ, “ಸತ್ಯದ ವಿಷಯದಲ್ಲಿ ಸಾಕ್ಷಿಕೊಡು”ವುದೂ ಅವನಿಗೆ ನೇಮಿಸಲ್ಪಟ್ಟ ಕೆಲಸವಾಗಿತ್ತು. ಅವನು ಅನೇಕ ಅದ್ಭುತಕಾರ್ಯಗಳನ್ನು ನಡಿಸಿದನಾದರೂ, ಹೆಚ್ಚಾಗಿ ಅವನು “ಬೋಧಕ” ಎಂದೇ ಪ್ರಸಿದ್ಧನಾಗಿದ್ದನು. ಅವನ ಬೋಧನೆಯು, ಜನರ ಮನಸ್ಸುಗಳ ಮೇಲೆ ಕವಿದಿದ್ದ ಆತ್ಮಿಕ ಅಂಧಕಾರದೊಳಗಿಂದ ತೂರಿಬರುತ್ತಿರುವ ಬೆಳಕಿನಂತಿತ್ತು. ಆದುದರಿಂದ, “ನಾನೇ ಲೋಕಕ್ಕೆ ಬೆಳಕು” ಎಂದು ಸ್ವತಃ ಯೇಸುವೇ ಹೇಳಿದ್ದು ಸೂಕ್ತವಾದದ್ದಾಗಿತ್ತು.​—ಯೋಹಾನ 8:12; 11:​28, NW; 18:37.

8. ಸಾ.ಶ. ಒಂದನೇ ಶತಮಾನದಲ್ಲಿ ಯಾವ ಪ್ರೇರಿತ ಪುಸ್ತಕಗಳು ಬರೆಯಲ್ಪಟ್ಟವು, ಮತ್ತು ಆರಂಭದ ಕ್ರೈಸ್ತರು ಅವುಗಳಿಂದ ಹೇಗೆ ಪ್ರಯೋಜನವನ್ನು ಪಡೆದುಕೊಂಡರು?

8 ತದನಂತರ, ಸುವಾರ್ತಾ ಪುಸ್ತಕಗಳು ಅಂದರೆ ಯೇಸುವಿನ ಜೀವನದ ಕುರಿತಾದ ನಾಲ್ಕು ಲಿಖಿತ ವೃತ್ತಾಂತಗಳು ಬರೆಯಲ್ಪಟ್ಟವು. ಮತ್ತು ಯೇಸುವಿನ ಮರಣಾನಂತರ ಕ್ರೈಸ್ತಮತದ ಹಬ್ಬುವಿಕೆಯ ಕುರಿತಾದ ಇತಿಹಾಸವನ್ನು ಒಳಗೊಂಡಿದ್ದ ಅಪೊಸ್ತಲರ ಕೃತ್ಯಗಳು ಪುಸ್ತಕ ಸಹ ಬೈಬಲ್‌ ಪ್ರಮಾಣಗ್ರಂಥಕ್ಕೆ ಕೂಡಿಸಲ್ಪಟ್ಟಿತು. ಇದಲ್ಲದೆ, ಯೇಸುವಿನ ಶಿಷ್ಯರಿಂದ ಬರೆಯಲ್ಪಟ್ಟ ಪ್ರೇರಿತ ಪತ್ರಗಳು ಸಹ ಇದ್ದವು ಹಾಗೂ ಪ್ರಕಟನೆಯ ಪ್ರವಾದನ ಪುಸ್ತಕವು ಬರೆಯಲ್ಪಟ್ಟಿತು. ಹೀಬ್ರು ಶಾಸ್ತ್ರದೊಂದಿಗೆ ಈ ಬರಹಗಳು ಸೇರಿಸಲ್ಪಟ್ಟು, ಬೈಬಲ್‌ ಪ್ರಮಾಣಗ್ರಂಥವು ಪೂರ್ಣಗೊಳಿಸಲ್ಪಟ್ಟಿತು. ಈ ಪ್ರೇರಿತ ಗ್ರಂಥಾಲಯದ ಸಹಾಯದಿಂದ, ಕ್ರೈಸ್ತರು ಸತ್ಯದ ‘ಅಗಲ ಉದ್ದ ಎತ್ತರ ಆಳ ಎಷ್ಟೆಂಬುದನ್ನು ಗ್ರಹಿಸಲು’ ಸಾಧ್ಯವಿತ್ತು. (ಎಫೆಸ 3:​14-18) ಅವರು ‘ಕ್ರಿಸ್ತನ ಮನಸ್ಸನ್ನು’ ಪಡೆದುಕೊಳ್ಳಸಾಧ್ಯವಿತ್ತು. (1 ಕೊರಿಂಥ 2:16) ಆದರೂ, ಆರಂಭದ ಆ ಕ್ರೈಸ್ತರು ಯೆಹೋವನ ಉದ್ದೇಶಗಳ ಪ್ರತಿಯೊಂದು ಅಂಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳಿಗೆ ಹೀಗೆ ಬರೆದನು: “ಈಗ ಕಂಚಿನ ದರ್ಪಣದಲ್ಲಿ ಕಾಣಿಸುವಂತೆ [ದೇವರ ಮುಖವು] ನಮಗೆ ಮೊಬ್ಬಾಗಿ ಕಾಣಿಸುತ್ತದೆ.” (1 ಕೊರಿಂಥ 13:12) ಅಂತಹ ಒಂದು ದರ್ಪಣವು (ಕನ್ನಡಿಯು) ಕೇವಲ ಹೊರಮೇರೆಯನ್ನು ಮಾತ್ರ ಪ್ರತಿಬಿಂಬಿಸುತ್ತದೆ, ಆದರೆ ಪ್ರತಿಯೊಂದು ಸೂಕ್ಷ್ಮ ವಿವರವು ಅದರಲ್ಲಿ ಕಂಡುಬರುವುದಿಲ್ಲ. ಅದೇ ರೀತಿಯಲ್ಲಿ, ದೇವರ ವಾಕ್ಯದ ಇನ್ನೂ ಹೆಚ್ಚಿನ ಗ್ರಹಿಕೆಯು ಸಮಯಾನಂತರ ಸಿಗಲಿಕ್ಕಿತ್ತು.

9. ‘ಕಡೇ ದಿವಸಗಳಲ್ಲಿ’ ಯಾವ ಜ್ಞಾನೋದಯವು ಕೊಡಲ್ಪಟ್ಟಿದೆ?

9 ಇಂದು ನಾವು ‘ಕಡೇ ದಿವಸಗಳು’ ಎಂದು ಕರೆಯಲ್ಪಡುವಂತಹ ಒಂದು ಯುಗದಲ್ಲಿ ಜೀವಿಸುತ್ತಿದ್ದೇವೆ. ‘ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಕಾಲಗಳಿಂದ’ ಈ ಯುಗವು ಗುರುತಿಸಲ್ಪಟ್ಟಿದೆ. (2 ತಿಮೊಥೆಯ 3:​1, NW) ಈ ಸಮಯದಲ್ಲಿ “ನಿಜವಾದ ಜ್ಞಾನವು ತುಂಬಿತುಳುಕುವುದು” ಎಂದು ಪ್ರವಾದಿಯಾದ ದಾನಿಯೇಲನು ಮುಂತಿಳಿಸಿದನು. (ದಾನಿಯೇಲ 12:​4, NW) ಆದುದರಿಂದ, ಮಹಾ ಸಂವಾಹಕನಾದ ಯೆಹೋವನು, ತನ್ನ ವಾಕ್ಯದ ಅರ್ಥವನ್ನು ಗ್ರಹಿಸುವಂತೆ ಪ್ರಾಮಾಣಿಕ ಹೃದಯದ ಜನರಿಗೆ ಸಹಾಯಮಾಡಿದ್ದಾನೆ. 1914ರಲ್ಲಿ, ಅದೃಶ್ಯ ಪರಲೋಕದಲ್ಲಿ ಯೇಸು ಕ್ರಿಸ್ತನು ಸಿಂಹಾಸನವೇರಿದನು ಎಂಬುದನ್ನು ಈಗ ಅಸಂಖ್ಯಾತ ಜನರು ಅರ್ಥಮಾಡಿಕೊಂಡಿದ್ದಾರೆ. ಸ್ವಲ್ಪದರಲ್ಲೇ ಅವನು ಎಲ್ಲ ದುಷ್ಟತನಕ್ಕೆ ಅಂತ್ಯವನ್ನು ತಂದು, ಭೂಮಿಯನ್ನು ಒಂದು ಭೌಗೋಲಿಕ ಪರದೈಸಾಗಿ ಮಾರ್ಪಡಿಸುವನು ಎಂಬುದು ಸಹ ಅವರಿಗೆ ಗೊತ್ತಿದೆ. ರಾಜ್ಯದ ಸುವಾರ್ತೆಯ ಈ ಪ್ರಾಮುಖ್ಯ ವಿಷಯವು ಇಂದು ಭೂಮಿಯಾದ್ಯಂತ ಸಾರಲ್ಪಡುತ್ತಿದೆ.​—ಮತ್ತಾಯ 24:14.

10. ಅನೇಕ ಶತಮಾನಗಳಿಂದ ಜನರು ಯೆಹೋವನ ಸಲಹೆಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ?

10 ಹೌದು, ಇತಿಹಾಸದಾದ್ಯಂತ ಯೆಹೋವನು ಭೂಮಿಯಲ್ಲಿರುವ ಜನರಿಗೆ ತನ್ನ ಚಿತ್ತ ಹಾಗೂ ಉದ್ದೇಶದ ಬಗ್ಗೆ ತಿಳಿಯಪಡಿಸಿದ್ದಾನೆ. ಇದಕ್ಕೆ ಕಿವಿಗೊಟ್ಟು, ದೈವಿಕ ವಿವೇಕವನ್ನು ಅನ್ವಯಿಸಿಕೊಂಡು, ದೇವರಿಂದ ಆಶೀರ್ವಾದವನ್ನು ಪಡೆದುಕೊಂಡ ಅನೇಕರ ದಾಖಲೆಯು ಬೈಬಲಿನಲ್ಲಿದೆ. ದೇವರ ಪ್ರೀತಿಯ ಸಲಹೆಯನ್ನು ತಿರಸ್ಕರಿಸಿ, ಆದಾಮಹವ್ವರ ವಿನಾಶಕರ ಮಾರ್ಗವನ್ನು ಅನುಸರಿಸಿದಂತಹ ಇತರರ ಕುರಿತು ಸಹ ಅದು ದಾಖಲಿಸುತ್ತದೆ. ಎರಡು ಸಾಂಕೇತಿಕ ಮಾರ್ಗಗಳ ಕುರಿತು ಮಾತಾಡಿದಾಗ ಯೇಸು ಈ ಸನ್ನಿವೇಶವನ್ನು ದೃಷ್ಟಾಂತಿಸಿದನು. ಅವುಗಳಲ್ಲಿ ಒಂದು ಮಾರ್ಗವು ನಾಶಕ್ಕೆ ನಡಿಸುತ್ತದೆ. ಅದು ವಿಶಾಲವಾಗಿದೆ ಮತ್ತು ಅದರ ದಾರಿ ಅಗಲವಾಗಿದೆ, ಆದುದರಿಂದ ದೇವರ ವಾಕ್ಯವನ್ನು ತಿರಸ್ಕರಿಸುವಂತಹ ಅನೇಕರು ಅದರಲ್ಲಿ ನಡೆಯುತ್ತಾರೆ. ಇನ್ನೊಂದು ಮಾರ್ಗವು ನಿತ್ಯಜೀವಕ್ಕೆ ನಡಿಸುತ್ತದೆ. ಇದು ಇಕ್ಕಟ್ಟಾಗಿರುವುದರಿಂದ ಕೆಲವೇ ಜನರು ಇದರಲ್ಲಿ ನಡೆಯುತ್ತಾರೆ. ಬೈಬಲ್‌ ದೇವರ ವಾಕ್ಯವಾಗಿದೆ ಎಂದು ಅವರು ಅಂಗೀಕರಿಸುತ್ತಾರೆ ಮತ್ತು ಅದಕ್ಕನುಸಾರ ಜೀವಿಸುತ್ತಾರೆ.​—ಮತ್ತಾಯ 7:​13, 14.

ನಮ್ಮ ಬಳಿ ಏನಿದೆಯೋ ಅದಕ್ಕಾಗಿ ನಾವು ಕೃತಜ್ಞರು

11. ಬೈಬಲಿನ ಕುರಿತಾದ ನಮ್ಮ ಜ್ಞಾನ ಹಾಗೂ ನಂಬಿಕೆಯು ಯಾವುದರ ಪುರಾವೆಯಾಗಿದೆ?

11 ನಿತ್ಯಜೀವಕ್ಕೆ ನಡಿಸುವ ಮಾರ್ಗವನ್ನು ಆಯ್ಕೆಮಾಡಿರುವವರಲ್ಲಿ ನೀವೂ ಇದ್ದೀರೋ? ಹಾಗಿರುವಲ್ಲಿ, ಇದೇ ಮಾರ್ಗದಲ್ಲಿ ಉಳಿಯಲು ನೀವು ಬಯಸುತ್ತೀರಿ ಎಂಬುದರಲ್ಲಿ ಸಂಶಯವೇ ಇಲ್ಲ. ನೀವು ಹೇಗೆ ಇದೇ ಮಾರ್ಗದಲ್ಲಿ ಉಳಿಯಸಾಧ್ಯವಿದೆ? ಬೈಬಲ್‌ ಸತ್ಯತೆಗಳನ್ನು ತಿಳಿದುಕೊಂಡಿರುವುದರಿಂದ ನೀವು ಪಡೆದುಕೊಂಡಿರುವ ಪ್ರಯೋಜನಗಳ ಕುರಿತು ಕ್ರಮವಾಗಿ ಮನನಮಾಡಿರಿ ಮತ್ತು ಅದಕ್ಕಾಗಿ ಕೃತಜ್ಞರಾಗಿರಿ. ನೀವು ಸುವಾರ್ತೆಗೆ ಪ್ರತಿಕ್ರಿಯಿಸಿದ್ದೀರಿ ಎಂಬ ಸಂಗತಿಯು ತಾನೇ, ದೇವರು ನಿಮ್ಮನ್ನು ಆಶೀರ್ವದಿಸಿದ್ದಾನೆ ಎಂಬುದರ ಪುರಾವೆಯಾಗಿದೆ. ಈ ಕೆಳಗಿನ ಮಾತುಗಳಲ್ಲಿ ತನ್ನ ತಂದೆಗೆ ಪ್ರಾರ್ಥಿಸಿದಾಗ ಯೇಸು ಸಹ ಇದನ್ನೇ ಸೂಚಿಸಿದನು: “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದೂ ನಿನ್ನನ್ನು ಕೊಂಡಾಡುತ್ತೇನೆ.” (ಮತ್ತಾಯ 11:25) ಬೆಸ್ತರು ಮತ್ತು ಸುಂಕದವರು ಯೇಸುವಿನ ಬೋಧನೆಯನ್ನು ಅರ್ಥಮಾಡಿಕೊಂಡರೂ, ಉಚ್ಚ ಶಿಕ್ಷಣವನ್ನು ಪಡೆದುಕೊಂಡಿದ್ದ ಧಾರ್ಮಿಕ ಮುಖಂಡರು ಅದನ್ನು ಅರ್ಥಮಾಡಿಕೊಳ್ಳಲಿಲ್ಲ. ಯೇಸು ಇನ್ನೂ ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ಒಂದುವೇಳೆ ನೀವು ಬೈಬಲಿನ ಬಗ್ಗೆ ತಿಳಿದುಕೊಂಡಿರುವಲ್ಲಿ ಮತ್ತು ಅದರ ಬೋಧನೆಗಳನ್ನು ನಂಬಿ ಅದಕ್ಕನುಸಾರ ಜೀವಿಸುತ್ತಿರುವಲ್ಲಿ, ಯೆಹೋವನು ನಿಮ್ಮನ್ನು ತನ್ನ ಕಡೆಗೆ ಸೆಳೆದಿದ್ದಾನೆ ಎಂಬುದಕ್ಕೆ ಇದೇ ರುಜುವಾತಾಗಿದೆ. ಇದು ಹರ್ಷಿಸಲು ಒಂದು ಕಾರಣವಾಗಿದೆ.

12. ಯಾವ ವಿಷಯಗಳಲ್ಲಿ ಬೈಬಲು ನಮಗೆ ಜ್ಞಾನೋದಯವನ್ನು ನೀಡುತ್ತದೆ?

12 ಸುಳ್ಳು ವಿಷಯಗಳಿಂದ ನಮ್ಮನ್ನು ಸ್ವತಂತ್ರಗೊಳಿಸುವ ಸತ್ಯಗಳು ದೇವರ ವಾಕ್ಯದಲ್ಲಿ ಒಳಗೂಡಿದ್ದು, ಈ ವಾಕ್ಯವೇ ನಮಗೆ ಜ್ಞಾನವನ್ನು ನೀಡುತ್ತದೆ. ಬೈಬಲ್‌ ಜ್ಞಾನಕ್ಕನುಸಾರ ಜೀವಿಸುವವರು, ಕೋಟಿಗಟ್ಟಲೆ ಜನರ ಜೀವನಗಳನ್ನು ನಿಯಂತ್ರಿಸುತ್ತಿರುವ ಮೂಢನಂಬಿಕೆಗಳು, ಸುಳ್ಳು ಬೋಧನೆಗಳು, ಮತ್ತು ಅಜ್ಞಾನದಿಂದ ಸ್ವತಂತ್ರರಾಗಿದ್ದಾರೆ. ಉದಾಹರಣೆಗೆ, ಮೃತರ ಸ್ಥಿತಿಯ ಕುರಿತಾದ ಸತ್ಯವನ್ನು ತಿಳಿದುಕೊಂಡಿರುವುದು, ಮೃತರು ನಮಗೆ ಹಾನಿಮಾಡಬಲ್ಲರು ಅಥವಾ ನಮ್ಮ ಮೃತ ಪ್ರಿಯ ಜನರು ನರಳುತ್ತಿದ್ದಾರೆ ಎಂಬ ಯಾವುದೇ ಭಯದಿಂದ ನಮ್ಮನ್ನು ಸ್ವತಂತ್ರಗೊಳಿಸುವುದು. (ಯೆಹೆಜ್ಕೇಲ 18:4) ದುಷ್ಟ ದೇವದೂತರ ಕುರಿತಾದ ಸತ್ಯವನ್ನು ತಿಳಿದುಕೊಳ್ಳುವುದರಿಂದ, ಆತ್ಮವ್ಯವಹಾರವಾದದ ಅಪಾಯಕ್ಕೆ ಸಿಕ್ಕಿಕೊಳ್ಳುವುದರಿಂದ ನಾವು ದೂರವಿರಸಾಧ್ಯವಿದೆ. ತಮ್ಮ ಪ್ರಿಯ ಜನರನ್ನು ಮರಣದಲ್ಲಿ ಕಳೆದುಕೊಂಡಿರುವವರಿಗೆ, ಪುನರುತ್ಥಾನದ ಕುರಿತಾದ ಬೋಧನೆಯು ತುಂಬ ಸಾಂತ್ವನದಾಯಕವಾಗಿದೆ. (ಯೋಹಾನ 11:25) ಕಾಲಪ್ರವಾಹದಲ್ಲಿ ನಾವು ಎಲ್ಲಿದ್ದೇವೆ ಎಂಬುದನ್ನು ಬೈಬಲ್‌ ಪ್ರವಾದನೆಗಳು ನಮಗೆ ತೋರಿಸುತ್ತವೆ ಮತ್ತು ಭವಿಷ್ಯತ್ತಿಗಾಗಿರುವ ದೇವರ ವಾಗ್ದಾನಗಳಲ್ಲಿ ಭರವಸೆಯನ್ನು ಮೂಡಿಸುತ್ತವೆ. ಅಷ್ಟುಮಾತ್ರವಲ್ಲ, ಸದಾಕಾಲ ಜೀವಿಸುವ ನಮ್ಮ ನಿರೀಕ್ಷೆಯನ್ನು ಸಹ ಅವು ಬಲಪಡಿಸುತ್ತವೆ.

13. ದೇವರ ವಾಕ್ಯಕ್ಕೆ ಕಿವಿಗೊಡುವುದರಿಂದ ನಾವು ಹೇಗೆ ಶಾರೀರಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?

13 ಬೈಬಲಿನಲ್ಲಿರುವ ದೈವಿಕ ಮೂಲತತ್ತ್ವಗಳು, ಶಾರೀರಿಕ ಪ್ರಯೋಜನಗಳನ್ನು ತರುವಂತಹ ರೀತಿಯಲ್ಲಿ ನಾವು ಜೀವಿಸುವಂತೆ ನಮಗೆ ಕಲಿಸುತ್ತವೆ. ಉದಾಹರಣೆಗೆ, ನಮ್ಮ ದೇಹಗಳನ್ನು ಕಲುಷಿತಗೊಳಿಸುವ ಹೊಗೆಸೊಪ್ಪು ಹಾಗೂ ಇತರ ಅಮಲೌಷಧಗಳ ಸೇವನೆಯಂತಹ ದುರಭ್ಯಾಸಗಳಿಂದ ನಾವು ದೂರವಿರಲು ಕಲಿಯುತ್ತೇವೆ. ಮದ್ಯಪಾನದ ಚಟದಿಂದಲೂ ನಾವು ದೂರವಿರುತ್ತೇವೆ. (2 ಕೊರಿಂಥ 7:1) ದೇವರ ನೈತಿಕ ನಿಯಮಗಳನ್ನು ಅನುಸರಿಸುವುದು, ಲೈಂಗಿಕವಾಗಿ ಹಬ್ಬುವಂತಹ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ. (1 ಕೊರಿಂಥ 6:18) ಹಣದಾಸೆಯಿಂದ ದೂರವಿರುವಂತೆ ಕೊಡಲ್ಪಟ್ಟ ದೇವರ ಸಲಹೆಗೆ ಅನುಸಾರವಾಗಿ ನಡೆಯುವ ಮೂಲಕ, ಅನೇಕರಂತೆ ಐಶ್ವರ್ಯವನ್ನು ಬೆನ್ನಟ್ಟುತ್ತಾ ನಾವು ನಮ್ಮ ಮನಶ್ಶಾಂತಿಯನ್ನು ಕೆಡಿಸಿಕೊಳ್ಳುವುದಿಲ್ಲ. (1 ತಿಮೊಥೆಯ 6:10) ನಿಮ್ಮ ಜೀವಿತದಲ್ಲಿ ದೇವರ ವಾಕ್ಯವನ್ನು ಅನ್ವಯಿಸಿದ್ದರಿಂದ ಬೇರೆ ಯಾವ ರೀತಿಯಲ್ಲಿ ನೀವು ಶಾರೀರಿಕವಾಗಿ ಪ್ರಯೋಜನವನ್ನು ಪಡೆದುಕೊಂಡಿದ್ದೀರಿ?

14. ನಮ್ಮ ಜೀವಿತಗಳ ಮೇಲೆ ಪವಿತ್ರಾತ್ಮವು ಯಾವ ಪ್ರಭಾವವನ್ನು ಬೀರುತ್ತದೆ?

14 ನಾವು ದೇವರ ವಾಕ್ಯಕ್ಕನುಸಾರ ಜೀವಿಸುವಲ್ಲಿ, ಯೆಹೋವನ ಪವಿತ್ರಾತ್ಮವನ್ನು ಸಹ ನಾವು ಪಡೆದುಕೊಳ್ಳುತ್ತೇವೆ. ನಾವು ಕರುಣೆ ಮತ್ತು ಸಹಾನುಭೂತಿಯಂತಹ ಆಕರ್ಷಕ ಗುಣಗಳನ್ನು ತೋರ್ಪಡಿಸುವವರಾಗಿದ್ದು, ಕ್ರಿಸ್ತನಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತೇವೆ. (ಎಫೆಸ 4:​24, 32) ದೇವರಾತ್ಮವು ನಮ್ಮಲ್ಲಿ ಅದರ ಫಲಗಳನ್ನು, ಅಂದರೆ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ ಹಾಗೂ ಶಮೆದಮೆಯಂತಹ ಗುಣಗಳನ್ನು ಸಹ ಉಂಟುಮಾಡುತ್ತದೆ. (ಗಲಾತ್ಯ 5:​22, 23) ಕುಟುಂಬದ ಸದಸ್ಯರನ್ನೂ ಸೇರಿಸಿ ಇತರರೊಂದಿಗೆ ನಾವು ಸಂತೋಷಭರಿತ ಹಾಗೂ ಅರ್ಥಭರಿತವಾದ ಸಂಬಂಧಗಳನ್ನು ಪಡೆದುಕೊಳ್ಳುವಂತೆ ಈ ಗುಣಗಳು ಸಹಾಯಮಾಡುತ್ತವೆ. ಕಷ್ಟಸಂಕಟಗಳನ್ನು ಧೈರ್ಯದಿಂದ ಎದುರಿಸುವಂತೆ ನಮಗೆ ಸಹಾಯಮಾಡುವ ಆಂತರಿಕ ಬಲವನ್ನು ಸಹ ನಾವು ಪಡೆದುಕೊಳ್ಳುತ್ತೇವೆ. ಪವಿತ್ರಾತ್ಮವು ನಿಮ್ಮ ಜೀವಿತವನ್ನು ಯಾವ ರೀತಿಯಲ್ಲಿ ಉತ್ತಮಗೊಳಿಸಿದೆ ಎಂಬುದನ್ನು ನೀವು ಸ್ಪಷ್ಟವಾಗಿ ಗ್ರಹಿಸಿದ್ದೀರೋ?

15. ನಾವು ದೇವರ ಚಿತ್ತದೊಂದಿಗೆ ನಮ್ಮ ಜೀವಿತಗಳನ್ನು ಹೊಂದಿಸಿಕೊಳ್ಳುವಾಗ, ನಮಗೆ ಹೇಗೆ ಪ್ರಯೋಜನ ಉಂಟಾಗುತ್ತದೆ?

15 ನಮ್ಮ ಜೀವಿತಗಳನ್ನು ನಾವು ಯೆಹೋವನ ಚಿತ್ತಕ್ಕೆ ಹೊಂದಿಸಿಕೊಂಡಂತೆ, ಆತನೊಂದಿಗಿನ ನಮ್ಮ ಸಂಬಂಧವನ್ನು ಸಹ ನಾವು ಬಲಗೊಳಿಸುತ್ತೇವೆ. ಆಗ, ಆತನು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಮ್ಮನ್ನು ಪ್ರೀತಿಸುತ್ತಾನೆ ಎಂಬ ವಾಸ್ತವಾಂಶವು ನಮಗೆ ಹೆಚ್ಚೆಚ್ಚು ಮನದಟ್ಟಾಗುತ್ತದೆ. ಕಷ್ಟಕರ ಸಮಯಗಳಲ್ಲಿ ಆತನು ಬೆಂಬಲ ನೀಡುತ್ತಾನೆ ಎಂಬುದನ್ನು ನಾವು ಅನುಭವದ ಮೂಲಕ ಕಂಡುಕೊಳ್ಳುತ್ತೇವೆ. (ಕೀರ್ತನೆ 18:18) ನಿಜವಾಗಿಯೂ ಆತನು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ ಎಂಬುದನ್ನು ನಾವು ಗ್ರಹಿಸುತ್ತೇವೆ. (ಕೀರ್ತನೆ 65:2) ನಾವು ಆತನ ಮಾರ್ಗದರ್ಶನದ ಮೇಲೆ ಆತುಕೊಳ್ಳಲಾರಂಭಿಸುತ್ತೇವೆ ಮತ್ತು ಅದು ನಮಗೆ ಪ್ರಯೋಜನವನ್ನು ತರುತ್ತದೆ ಎಂಬ ದೃಢವಿಶ್ವಾಸ ನಮಗಿರುತ್ತದೆ. ಅಷ್ಟುಮಾತ್ರವಲ್ಲ, ನೇಮಿತ ಸಮಯದಲ್ಲಿ ದೇವರು ತನ್ನ ನಂಬಿಗಸ್ತ ಜನರನ್ನು ಪರಿಪೂರ್ಣತೆಗೇರಿಸುವನು ಮತ್ತು ತನ್ನ ನಿತ್ಯಜೀವದ ಉಡುಗೊರೆಯನ್ನು ಅವರಿಗೆ ದಯಪಾಲಿಸುವನು ಎಂಬ ಅದ್ಭುತ ನಿರೀಕ್ಷೆ ನಮಗಿದೆ. (ರೋಮಾಪುರ 6:23) ಆದುದರಿಂದ, “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಶಿಷ್ಯನಾದ ಯಾಕೋಬನು ಬರೆದನು. (ಯಾಕೋಬ 4:8) ನೀವು ಯೆಹೋವನಿಗೆ ಸಮೀಪವಾದಂತೆ, ಆತನೊಂದಿಗಿನ ನಿಮ್ಮ ಸಂಬಂಧವು ಸಹ ಇನ್ನಷ್ಟು ಬಲಗೊಳಿಸಲ್ಪಟ್ಟಿದೆ ಎಂದು ನಿಮಗನಿಸಿದೆಯೋ?

ಹೋಲಿಕೆಗೆ ಮೀರಿದ ಒಂದು ನಿಕ್ಷೇಪ

16. ಪ್ರಥಮ ಶತಮಾನದ ಕ್ರೈಸ್ತರಲ್ಲಿ ಕೆಲವರು ಯಾವ ಬದಲಾವಣೆಗಳನ್ನು ಮಾಡಿದರು?

16 ಪ್ರಥಮ ಶತಮಾನದ ಆತ್ಮಾಭಿಷಿಕ್ತ ಕ್ರೈಸ್ತರು ಸಹ ಒಂದುಕಾಲದಲ್ಲಿ ಜಾರರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು, ಲೋಭಿಗಳು, ಕುಡಿಕರು, ಬೈಯುವವರು ಮತ್ತು ಸುಲುಕೊಳ್ಳುವವರು ಆಗಿದ್ದರು ಎಂದು ಪೌಲನು ಅವರಿಗೆ ಜ್ಞಾಪಕಹುಟ್ಟಿಸಿದನು. (1 ಕೊರಿಂಥ 6:​9-11) ತಮ್ಮ ಜೀವಿತಗಳಲ್ಲಿ ಅತಿ ದೊಡ್ಡ ಬದಲಾವಣೆಗಳನ್ನು ಮಾಡುವಂತೆ ಬೈಬಲ್‌ ಸತ್ಯವು ಅವರನ್ನು ಪ್ರಚೋದಿಸಿತು; ಮತ್ತು ಅವರು ತಮ್ಮನ್ನು ‘ತೊಳೆದುಕೊಂಡರು.’ ಸುಳ್ಳು ಧರ್ಮದಿಂದ ನಿಮ್ಮನ್ನು ಸ್ವತಂತ್ರಗೊಳಿಸಿದ ಕೆಲವು ಬೈಬಲ್‌ ಸತ್ಯತೆಗಳನ್ನು ನೀವು ಕಲಿಯದಿರುತ್ತಿದ್ದಲ್ಲಿ, ನಿಮ್ಮ ಜೀವಿತವು ಹೇಗಿರುತ್ತಿತ್ತು ಎಂಬುದನ್ನು ತುಸು ಊಹಿಸಿಕೊಳ್ಳಲು ಪ್ರಯತ್ನಿಸಿ. ಸತ್ಯವು ಹೋಲಿಕೆಗೆ ಮೀರಿದ ಒಂದು ನಿಕ್ಷೇಪವಾಗಿದೆ ಎಂಬುದು ನೂರಕ್ಕೆ ನೂರರಷ್ಟು ನಿಜವಾಗಿದೆ. ಯೆಹೋವನು ನಮಗೆ ಮಾಹಿತಿ ನೀಡುತ್ತಿರುವುದಕ್ಕೆ ನಾವೆಷ್ಟು ಆನಂದಿತರಾಗಿದ್ದೇವೆ!

17. ಯೆಹೋವನ ಸಾಕ್ಷಿಗಳು ಕ್ರೈಸ್ತ ಕೂಟಗಳಲ್ಲಿ ಹೇಗೆ ಆತ್ಮಿಕವಾಗಿ ಚೆನ್ನಾಗಿ ಉಣಿಸಲ್ಪಟ್ಟಿದ್ದಾರೆ?

17 ಇದಲ್ಲದೆ, ನಮ್ಮ ಬಹುಜನಾಂಗೀಯ ಸಹೋದರರ ಬಳಗದಲ್ಲಿ ನಮಗೆ ಸಿಕ್ಕಿರುವ ಆಶೀರ್ವಾದದ ಕುರಿತು ಸ್ವಲ್ಪ ಆಲೋಚಿಸಿರಿ! ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು’ ಹೊತ್ತುಹೊತ್ತಿಗೆ ಬೇಕಾಗಿರುವ ಆತ್ಮಿಕ ಆಹಾರವನ್ನು ಒದಗಿಸುತ್ತದೆ. ಈ ಒದಗಿಸುವಿಕೆಯಲ್ಲಿ, ಸಾವಿರಾರು ಭಾಷೆಗಳಲ್ಲಿ ಬೈಬಲ್‌ಗಳು, ಪತ್ರಿಕೆಗಳು ಹಾಗೂ ಇತರ ಪ್ರಕಾಶನಗಳು ಸಹ ಒಳಗೂಡಿವೆ. (ಮತ್ತಾಯ 24:​45-47) 2000 ಇಸವಿಯಲ್ಲಿ ನಡೆದ ಸಭಾ ಕೂಟಗಳಲ್ಲಿ, ಅನೇಕ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು, ಹೀಬ್ರು ಶಾಸ್ತ್ರವಚನದ ಎಂಟು ಪ್ರಮುಖ ಪುಸ್ತಕಗಳ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿದರು. ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಪುಸ್ತಕದಲ್ಲಿ ಚರ್ಚಿಸಲ್ಪಟ್ಟಿರುವ ಬೈಬಲ್‌ ವ್ಯಕ್ತಿಗಳಲ್ಲಿ ಸುಮಾರು 40 ಮಂದಿಯ ಜೀವಿತಗಳ ಬಗ್ಗೆ ಅವರು ಮನನಮಾಡಿದರು. ಅವರು ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕದ ಸುಮಾರು ನಾಲ್ಕನೇ ಒಂದು ಭಾಗವನ್ನು ಹಾಗೂ ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ ಇಡೀ ಭಾಗವನ್ನು ಅಭ್ಯಾಸಿಸಿದರು. ಅಷ್ಟುಮಾತ್ರವಲ್ಲ, ಕಾವಲಿನಬುರುಜು ಪತ್ರಿಕೆಯ 52 ಅಭ್ಯಾಸ ಲೇಖನಗಳನ್ನೂ, 36 ಇತರ ಲೇಖನಗಳನ್ನೂ ಪರಿಗಣಿಸಲಾಯಿತು. ಇದಲ್ಲದೆ, ನಮ್ಮ ರಾಜ್ಯದ ಸೇವೆಯ 12 ಸಂಚಿಕೆಗಳಿಂದಲೂ, ಬೈಬಲಿನ ವಿವಿಧ ವಿಷಯಗಳ ಕುರಿತಾದ ಸಾಪ್ತಾಹಿಕ ಬಹಿರಂಗ ಭಾಷಣಗಳಿಂದಲೂ ಯೆಹೋವನ ಸಾಕ್ಷಿಗಳು ಆತ್ಮಿಕವಾಗಿ ಪೋಷಿಸಲ್ಪಟ್ಟರು. ಆತ್ಮಿಕ ಜ್ಞಾನವು ಎಷ್ಟು ಸಮೃದ್ಧವಾಗಿ ಲಭ್ಯಗೊಳಿಸಲ್ಪಟ್ಟಿದೆ!

18. ಕ್ರೈಸ್ತ ಸಭೆಯೊಳಗೆ ಯಾವ ರೀತಿಯಲ್ಲಿ ನಮಗೆ ಸಹಾಯ ಸಿಕ್ಕಿದೆ?

18 ಲೋಕದಾದ್ಯಂತ ಸುಮಾರು 91,000ಕ್ಕಿಂತಲೂ ಹೆಚ್ಚಿನ ಸಭೆಗಳು, ಕೂಟಗಳು ಹಾಗೂ ಸಹವಾಸದ ಮೂಲಕ ಅಗತ್ಯವಿರುವ ಬೆಂಬಲ ಹಾಗೂ ಉತ್ತೇಜನವನ್ನು ಒದಗಿಸುತ್ತವೆ. ನಮಗೆ ಆತ್ಮಿಕವಾಗಿ ಸಹಾಯಮಾಡಲು ಮನಃಪೂರ್ವಕವಾಗಿ ಸಿದ್ಧರಿರುವ ಪ್ರೌಢ ಜೊತೆ ಕ್ರೈಸ್ತರ ಬೆಂಬಲದಲ್ಲಿಯೂ ನಾವು ಆನಂದಿಸುತ್ತೇವೆ. (ಎಫೆಸ 4:​11-13) ಹೌದು, ಸತ್ಯದ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ನಾವು ಬಹಳವಾಗಿ ಪ್ರಯೋಜನವನ್ನು ಪಡೆದುಕೊಂಡಿದ್ದೇವೆ. ಯೆಹೋವನ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಆತನ ಸೇವೆಮಾಡುವುದು ಖಂಡಿತವಾಗಿಯೂ ಸಂತೋಷಭರಿತ ಸಂಗತಿಯಾಗಿದೆ. “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು [“ಸಂತೋಷಿತರು,” NW]” ಎಂದು ಬರೆದ ಕೀರ್ತನೆಗಾರನ ಮಾತುಗಳು ಎಷ್ಟು ಸತ್ಯವಾಗಿವೆ!​—ಕೀರ್ತನೆ 144:15.

ನಿಮಗೆ ನೆನಪಿದೆಯೋ?

• ಕ್ರೈಸ್ತಪೂರ್ವ ಸಮಯಗಳಲ್ಲಿ ಯೆಹೋವನು ಯಾರನ್ನು ಸಂಪರ್ಕಿಸಿದನು?

• ಪ್ರಥಮ ಶತಮಾನದಲ್ಲಿ ಆತ್ಮಿಕ ಬೆಳಕು ಹೇಗೆ ಹೆಚ್ಚು ಪ್ರಕಾಶಮಾನವಾಯಿತು? ಆಧುನಿಕ ಸಮಯಗಳಲ್ಲಿ ಹೇಗೆ ಪ್ರಕಾಶಮಾನವಾಗುತ್ತಿದೆ?

• ಯೆಹೋವನ ಜ್ಞಾನಕ್ಕೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ಯಾವ ಪ್ರಯೋಜನಗಳು ದೊರಕುತ್ತವೆ?

• ದೇವರ ಕುರಿತಾಗಿ ನಮಗಿರುವ ಜ್ಞಾನದಲ್ಲಿ ನಾವು ಏಕೆ ಆನಂದಿಸುತ್ತೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 8, 9ರಲ್ಲಿರುವ ಚಿತ್ರಗಳು]

ಮೋಶೆ, ನೋಹ ಹಾಗೂ ಅಬ್ರಹಾಮರಿಗೆ ಯೆಹೋವನು ತನ್ನ ಚಿತ್ತವನ್ನು ತಿಳಿಯಪಡಿಸಿದನು

[ಪುಟ 9ರಲ್ಲಿರುವ ಚಿತ್ರ]

ನಮ್ಮ ದಿನದಲ್ಲಿ ಯೆಹೋವನು ತನ್ನ ವಾಕ್ಯದ ಮೇಲೆ ಬೆಳಕು ಬೀರಿದ್ದಾನೆ

[ಪುಟ 10ರಲ್ಲಿರುವ ಚಿತ್ರಗಳು]

ನಮ್ಮ ಬಹುಜನಾಂಗೀಯ ಸಹೋದರರ ಬಳಗದಲ್ಲಿ ನಮಗೆ ಸಿಕ್ಕಿರುವ ಆಶೀರ್ವಾದಗಳ ಕುರಿತು ಸ್ವಲ್ಪ ಆಲೋಚಿಸಿರಿ!