ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂದೇಹಗಳು ನಿಮ್ಮ ನಂಬಿಕೆಯನ್ನು ನುಂಗುವಂತೆ ಬಿಡಬೇಡಿ

ಸಂದೇಹಗಳು ನಿಮ್ಮ ನಂಬಿಕೆಯನ್ನು ನುಂಗುವಂತೆ ಬಿಡಬೇಡಿ

ಸಂದೇಹಗಳು ನಿಮ್ಮ ನಂಬಿಕೆಯನ್ನು ನುಂಗುವಂತೆ ಬಿಡಬೇಡಿ

ಒಂದು ದಿನ ನೀವು ಆರೋಗ್ಯವಾಗಿದ್ದೀರಿ ಎಂದು ನಿಮಗೆ ಅನಿಸುತ್ತದೆ. ಮಾರನೆಯ ದಿನ ನಿಮಗೆ ಅಸ್ವಸ್ಥ ಅನಿಸಿಕೆಯಾಗುತ್ತದೆ. ಇದ್ದಕ್ಕಿದ್ದಂತೆ ನಿಮ್ಮಲ್ಲಿ ಬಲ ಅಥವಾ ಚೈತನ್ಯವೇ ಇಲ್ಲದೆ ಹೋಗುತ್ತದೆ. ನಿಮ್ಮ ತಲೆ ನೋಯುತ್ತದೆ ಮತ್ತು ನಿಮ್ಮ ದೇಹವು ನೋವಿನಿಂದ ನರಳುತ್ತದೆ. ನಿಮಗೆ ಏನಾಗಿದೆ? ಅಪಾಯಕರವಾದ ರೋಗಾಣುಗಳು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿವೆ ಮತ್ತು ನಿಮ್ಮ ಅತ್ಯಾವಶ್ಯಕ ಅಂಗಗಳ ಮೇಲೆ ಆಕ್ರಮಣ ಮಾಡಿವೆ. ಚಿಕಿತ್ಸೆ ನೀಡದೆ ಬಿಡುವಲ್ಲಿ, ಈ ರೋಗಾಣುಗಳು ನಿಮ್ಮ ಆರೋಗ್ಯವನ್ನು ಶಾಶ್ವತವಾಗಿ ಹಾಳುಮಾಡಿಬಿಡಬಹುದು ಮತ್ತು ನಿಮ್ಮನ್ನು ಕೊಲ್ಲಲೂಬಹುದು.

ನೀವು ಈಗಾಗಲೇ ಅಸ್ವಸ್ಥರಾಗಿದ್ದು, ನಂತರ ರೋಗಾಣುಗಳೇನಾದರೂ ನಿಮ್ಮ ದೇಹವನ್ನು ಪ್ರವೇಶಿಸುವಲ್ಲಿ, ನೀವು ಇನ್ನಷ್ಟು ಬಲಹೀನರಾಗುವ ಸಾಧ್ಯತೆಯಿದೆ. ಉದಾಹರಣೆಗೆ, ಒಂದುವೇಳೆ ನಿಮ್ಮ ದೇಹವು ಪೌಷ್ಟಿಕ ಆಹಾರದ ಕೊರತೆಯಿಂದ ದುರ್ಬಲಗೊಂಡಿರುವಲ್ಲಿ, ನಿಮ್ಮ ಪ್ರತಿರೋಧಕ ಶಕ್ತಿಯು “ಎಷ್ಟು ಕಡಿಮೆಯಾಗುತ್ತದೆಂದರೆ, ತೀರ ಚಿಕ್ಕ ಸೋಂಕು ಸಹ ನಿಮ್ಮನ್ನು ಸಾವಿಗೆ ಒಳಪಡಿಸಬಹುದು,” ಎಂದು ವೈದ್ಯಕೀಯ ಲೇಖಕರಾದ ಪೀಟರ್‌ ವಿಂಗೇಟ್‌ ಹೇಳುತ್ತಾರೆ.

ಹೀಗಿರುವಾಗ, ಕ್ಷಾಮದಿಂದ ತುಂಬಿರುವಂತಹ ಪರಿಸ್ಥಿತಿಗಳ ಮಧ್ಯೆ ಜೀವಿಸಲು ಯಾರು ತಾನೇ ಇಷ್ಟಪಡುತ್ತಾರೆ? ಆದುದರಿಂದ, ನೀವು ಚೆನ್ನಾಗಿ ಆಹಾರವನ್ನು ಸೇವಿಸಿ, ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಬಹುದು. ವೈರಸ್‌ ಅಥವಾ ಬ್ಯಾಕ್ಟೀರಿಯದ ಸೋಂಕಿನಿಂದ ದೂರವಿರಲಿಕ್ಕಾಗಿ ನೀವು ಸರ್ವ ಪ್ರಯತ್ನಗಳನ್ನೂ ಮಾಡಬಹುದು. ಆದರೂ, ‘ನಂಬಿಕೆಯಲ್ಲಿ ಸ್ವಸ್ಥರಾಗಿ’ ಉಳಿಯುವ ವಿಷಯಕ್ಕೆ ಬರುವಾಗ, ಇದೇ ರೀತಿಯ ಮುನ್ನೆಚ್ಚರಿಕೆಯನ್ನು ನೀವು ತೆಗೆದುಕೊಳ್ಳುತ್ತೀರೋ? (ತೀತ 2:2) ಉದಾಹರಣೆಗೆ, ಗುಪ್ತವಾದ ಸಂದೇಹಗಳು ಒಡ್ಡುವಂತಹ ಅಪಾಯದ ಕುರಿತು ನೀವು ಜಾಗರೂಕರಾಗಿದ್ದೀರೋ? ಇವು ನಿಮ್ಮ ಹೃದಮನಗಳ ಮೇಲೆ ಸುಲಭವಾಗಿ ದಾಳಿಮಾಡಬಲ್ಲವು ಮತ್ತು ನಿಮ್ಮ ನಂಬಿಕೆಯನ್ನೂ ಯೆಹೋವನೊಂದಿಗಿನ ನಿಮ್ಮ ಸಂಬಂಧವನ್ನೂ ಹಾಳುಮಾಡಬಲ್ಲವು. ಕೆಲವರಿಗೆ ಈ ಅಪಾಯದ ಅರಿವಿಲ್ಲದಿರುವಂತೆ ತೋರುತ್ತದೆ. ಆದುದರಿಂದ ಅವರು ಆತ್ಮಿಕ ಆಹಾರವನ್ನು ಸೇವಿಸದಿರುವ ಮೂಲಕ ಸುಲಭವಾಗಿ ಸಂದೇಹಗಳಿಗೆ ಬಲಿಯಾಗುತ್ತಾರೆ. ನೀವು ಸಹ ಹೀಗೆ ಮಾಡುತ್ತಿರುವ ಸಾಧ್ಯತೆಯಿದೆಯೋ?

ಸಂದೇಹ​—ಯಾವಾಗಲೂ ಹಾನಿಕರವೋ?

ಎಲ್ಲ ರೀತಿಯ ಸಂದೇಹವು ಹಾನಿಕರವಾಗಿರುತ್ತದೆಂದು ಹೇಳಸಾಧ್ಯವಿಲ್ಲ. ಕೆಲವೊಮ್ಮೆ, ಯಾವುದಾದರೂ ವಿಷಯವನ್ನು ಅಂಗೀಕರಿಸುವ ಮುಂಚೆ ನೀವು ವಾಸ್ತವಾಂಶಗಳನ್ನು ಖಚಿತಪಡಿಸಿಕೊಳ್ಳುವ ಆವಶ್ಯಕತೆಯಿರುತ್ತದೆ. ನೀವು ಎಲ್ಲವನ್ನೂ ನಂಬಬೇಕು ಮತ್ತು ಯಾವುದನ್ನೂ ಸಂದೇಹಿಸಬಾರದು ಎಂಬ ಧಾರ್ಮಿಕ ಸಲಹೆಗಳು, ಅಪಾಯಕರವಾದವುಗಳು ಹಾಗೂ ಮೋಸಕರವಾದವುಗಳಾಗಿವೆ. ನಿಜ, ಪ್ರೀತಿಯು “ಎಲ್ಲವನ್ನೂ ನಂಬುತ್ತದೆ” ಎಂದು ಬೈಬಲ್‌ ಸಹ ಹೇಳುತ್ತದೆ. (1 ಕೊರಿಂಥ 13:7) ಒಬ್ಬ ಪ್ರೀತಿಪರ ಕ್ರೈಸ್ತನು, ಗತಕಾಲಗಳಲ್ಲಿ ಯಾರು ಭರವಸಾರ್ಹರಾಗಿ ತಮ್ಮನ್ನು ರುಜುಪಡಿಸಿಕೊಂಡಿದ್ದಾರೋ ಅವರನ್ನು ಪೂರ್ಣ ರೀತಿಯಲ್ಲಿ ನಂಬಲು ಸದಾ ಸಿದ್ಧನಿರುತ್ತಾನೆ. ಆದರೆ, ‘ಯಾವ ಮಾತನ್ನಾದರೂ ನಂಬುವುದರ’ ವಿರುದ್ಧವೂ ದೇವರ ವಾಕ್ಯವೇ ನಮಗೆ ಎಚ್ಚರಿಕೆ ನೀಡುತ್ತದೆ. (ಜ್ಞಾನೋಕ್ತಿ 14:15) ಕೆಲವೊಮ್ಮೆ ಒಬ್ಬ ವ್ಯಕ್ತಿಯ ಹಿಂದಿನ ದಾಖಲೆಯು ಅವನ ವಿಷಯದಲ್ಲಿ ಸಂದೇಹಿಸಲು ಸಮಂಜಸವಾದ ಕಾರಣವನ್ನು ಕೊಡುತ್ತದೆ. ಇದರ ಬಗ್ಗೆ ಬೈಬಲು ನಮಗೆ ಎಚ್ಚರಿಸುವುದು: “[ಮೋಸದಿಂದ ಮಾತಾಡುವವನು] ಸವಿಮಾತಾಡಿದರೂ ಅವನನ್ನು ನಂಬಬೇಡ.”​—ಜ್ಞಾನೋಕ್ತಿ 26:​24, 25.

ಮೂಢನಂಬಿಕೆಯ ವಿರುದ್ಧ ಅಪೊಸ್ತಲ ಯೋಹಾನನು ಸಹ ಕ್ರೈಸ್ತರಿಗೆ ಎಚ್ಚರಿಕೆ ನೀಡಿದನು. ‘ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬಬೇಡಿ’ ಎಂದು ಅವನು ಬರೆಯುತ್ತಾನೆ. ಅದಕ್ಕೆ ಬದಲಾಗಿ, ‘ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಿ.’ (1 ಯೋಹಾನ 4:1) ಒಂದು ‘ನುಡಿ,’ ಅಂದರೆ ಒಂದು ಬೋಧನೆ ಅಥವಾ ಅಭಿಪ್ರಾಯವು ದೇವರಿಂದ ಬಂದದ್ದಾಗಿರುವಂತೆ ತೋರಬಹುದು. ಆದರೆ ಅದು ನಿಜವಾಗಿಯೂ ಆತನಿಂದ ಬಂದಿದೆಯೋ? ಸ್ವಲ್ಪ ಸಂದೇಹಪಡುವುದು ಅಥವಾ ಅದನ್ನು ನಂಬಲು ತಡಮಾಡುವುದು ನಿಜವಾದ ರಕ್ಷಣೆಯಾಗಿರಸಾಧ್ಯವಿದೆ. ಏಕೆಂದರೆ ಅಪೊಸ್ತಲ ಯೋಹಾನನು ಹೇಳುವಂತೆ, “ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ.”​—2 ಯೋಹಾನ 7.

ನಿರಾಧಾರವಾದ ಸಂದೇಹಗಳು

ಹೌದು, ಯಾವುದೇ ವಿಷಯದ ಸತ್ಯಾಂಶವನ್ನು ಅರಿತುಕೊಳ್ಳಬೇಕಾದರೆ, ವಾಸ್ತವ ಸಂಗತಿಗಳನ್ನು ಪ್ರಾಮಾಣಿಕವಾಗಿ ಮತ್ತು ದೀನಭಾವದಿಂದ ಪರೀಕ್ಷಿಸುವ ಅಗತ್ಯವಿದೆ. ಆದರೂ, ನಿಮ್ಮ ಹೃದಮನಗಳಲ್ಲಿ ನಿರಾಧಾರವಾದ, ಹಾನಿಕರ ಸಂದೇಹಗಳನ್ನು ಬೆಳೆಸಿಕೊಳ್ಳಬೇಕು ಎಂಬುದು ಇದರ ಅರ್ಥವಲ್ಲ. ಏಕೆಂದರೆ ಇಂತಹ ಸಂದೇಹಗಳು ಆಳವಾಗಿ ಬೇರೂರಿರುವ ನಮ್ಮ ನಂಬಿಕೆಗಳು ಹಾಗೂ ಸಂಬಂಧಗಳನ್ನು ಧ್ವಂಸಮಾಡಿಬಿಡಸಾಧ್ಯವಿದೆ. ಈ ನಿರಾಧಾರವಾದ ಸಂದೇಹದ ಅರ್ಥ, ನಿರ್ಧಾರವನ್ನು ಮಾಡುವುದರ ಮೇಲೆ ಪ್ರಭಾವ ಬೀರುವಂತಹ ನಂಬಿಕೆ ಅಥವಾ ಅಭಿಪ್ರಾಯದ ಬಗ್ಗೆ ಅನಿಶ್ಚಿತತೆ ಎಂದಾಗಿದೆ. ಯೆಹೋವನ ಕುರಿತಾದ ಸಂದೇಹಗಳಿಂದ ಸೈತಾನನು ಹೇಗೆ ಹವ್ವಳ ಮನಸ್ಸಿನ ಮೇಲೆ ಪರಿಣಾಮ ಬೀರಿದನು ಎಂಬುದು ನಿಮಗೆ ನೆನಪಿದೆಯೋ? “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? ಎಂದು ಅವನು ಪ್ರಶ್ನಿಸಿದನು. (ಆದಿಕಾಂಡ 3:1) ಮುಗ್ಧವಾಗಿ ಕಂಡುಬಂದ ಆ ಪ್ರಶ್ನೆಯಿಂದ ಉಂಟುಮಾಡಲ್ಪಟ್ಟ ಅನಿಶ್ಚಿತತೆಯು, ಅವಳು ನಿರ್ಧಾರವನ್ನು ಮಾಡುವುದರ ಮೇಲೆ ಪ್ರಭಾವ ಬೀರಿತು. ಇದೇ ರೀತಿಯ ಕುತಂತ್ರಗಳನ್ನು ಸೈತಾನನು ಉಪಯೋಗಿಸುತ್ತಾನೆ. ದುರ್ಭಾಷೆಯ ಪತ್ರಗಳನ್ನು ಬರೆಯುವ ಅನಾಮಧೇಯ ಲೇಖಕನಂತೆ, ಕೊಂಕುನುಡಿಗಳು, ಅರೆಸತ್ಯಗಳು ಮತ್ತು ಸುಳ್ಳುಗಳನ್ನು ಉಪಯೋಗಿಸುವುದರಲ್ಲಿ ಸೈತಾನನು ನಿಸ್ಸೀಮ. ವಂಚನಾತ್ಮಕ ಸಂದೇಹಗಳ ಬೀಜವನ್ನು ಬಿತ್ತುವ ಮೂಲಕ ಸೈತಾನನು, ಹಿತಕರವಾದ ಹಾಗೂ ಭರವಸಾರ್ಹವಾದ ಅಸಂಖ್ಯಾತ ಸಂಬಂಧಗಳನ್ನು ಕೆಡಿಸಿದ್ದಾನೆ.​—ಗಲಾತ್ಯ 5:​7-9.

ಈ ರೀತಿಯ ಸಂದೇಹದ ಹಾನಿಕರ ಪರಿಣಾಮವನ್ನು ಶಿಷ್ಯ ಯಾಕೋಬನು ಸ್ಪಷ್ಟವಾಗಿ ಅರ್ಥಮಾಡಿಕೊಂಡನು. ಪರೀಕ್ಷೆಯ ಸಮಯಗಳಲ್ಲಿ ಸಹಾಯಕ್ಕಾಗಿ ದೇವರನ್ನು ಸ್ವತಂತ್ರವಾಗಿ ಸಮೀಪಿಸಲು ನಮಗಿರುವ ಅದ್ಭುತಕರ ಸುಯೋಗದ ಕುರಿತು ಅವನು ಬರೆಯುತ್ತಾನೆ. ಆದರೆ, ನೀವು ದೇವರಿಗೆ ಪ್ರಾರ್ಥಿಸುವಾಗ, “ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು” ಎಂದು ಯಾಕೋಬನು ಎಚ್ಚರಿಕೆ ನೀಡುತ್ತಾನೆ. ದೇವರೊಂದಿಗಿನ ನಮ್ಮ ಸಂಬಂಧದ ವಿಷಯದಲ್ಲಿ ಉಂಟಾಗುವ ಸಂದೇಹಗಳು, ನಾವು ‘ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯ ಹಾಗೆ ಅಲೆಯುತ್ತಿರುವಂತೆ’ ಮಾಡುವವು. ಮತ್ತು ನಾವು, “ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ” ಆಗಿರುವ ಮನುಷ್ಯನಂತಿರುವೆವು. (ಯಾಕೋಬ 1:​6, 8) ಹೀಗೆ, ನಮ್ಮನ್ನು ಸಂದಿಗ್ಧ ಸ್ಥಿತಿಗೆ ಒಳಪಡಿಸುವಂತಹ ರೀತಿಯ ಅನಿಶ್ಚಿತ ನಂಬಿಕೆಯನ್ನು ನಾವು ಬೆಳೆಸಿಕೊಳ್ಳುವೆವು. ತದನಂತರ, ಹವ್ವಳ ವಿಷಯದಲ್ಲಿ ಆದಂತೆ, ಎಲ್ಲ ರೀತಿಯ ದೆವ್ವಸಂಬಂಧಿತ ಬೋಧನೆಗಳು ಹಾಗೂ ತತ್ತ್ವಜ್ಞಾನಗಳಿಗೆ ನಾವು ಸುಲಭವಾಗಿ ಬಲಿಬೀಳಸಾಧ್ಯವಿದೆ.

ಒಳ್ಳೆಯ ಆತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು

ಹಾಗಾದರೆ, ಹಾನಿಕರವಾಗಿರುವ ಸಂದೇಹಗಳಿಂದ ನಾವು ನಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಸಾಧ್ಯವಿದೆ? ಇದಕ್ಕೆ ಉತ್ತರವು ತುಂಬ ಸರಳವಾಗಿದೆ: ಸೈತಾನನ ಪ್ರಾಪಗ್ಯಾಂಡವನ್ನು ಖಡಾಖಂಡಿತವಾಗಿ ತಿರಸ್ಕರಿಸುವ ಮೂಲಕ ಮತ್ತು ನಾವು “ನಂಬಿಕೆಯಲ್ಲಿ ದೃಢವಾಗಿ” ನಿಲ್ಲುವಂತೆ ಮಾಡಲಿಕ್ಕಾಗಿರುವ ದೇವರ ಒದಗಿಸುವಿಕೆಗಳನ್ನು ಪೂರ್ಣವಾಗಿ ಸದುಪಯೋಗಿಸಿಕೊಳ್ಳುವ ಮೂಲಕವೇ.​—1 ಪೇತ್ರ 5:​8-10.

ಆತ್ಮಿಕ ವಿಷಯಗಳನ್ನು ವೈಯಕ್ತಿಕ ರೀತಿಯಲ್ಲಿ ಕ್ರಮವಾಗಿ ಸೇವಿಸುವುದು ಅತ್ಯಗತ್ಯವಾದದ್ದಾಗಿದೆ. ಈ ಮುಂಚೆ ತಿಳಿಸಲ್ಪಟ್ಟಿರುವ ಲೇಖಕರಾದ ಪೀಟರ್‌ ವಿಂಗೇಟ್‌ ವಿವರಿಸುವುದು: “ನಮ್ಮ ದೇಹವು ವಿಶ್ರಾಂತಿ ಪಡೆದುಕೊಳ್ಳುತ್ತಿರುವಾಗಲೂ, ರಾಸಾಯನಿಕ ಕ್ರಿಯೆಗಾಗಿ ಮತ್ತು ಅದರ ಅತ್ಯಾವಶ್ಯಕ ಅಂಗಗಳು ಕೆಲಸಮಾಡುತ್ತಾ ಇರಲಿಕ್ಕಾಗಿ ಅದಕ್ಕೆ ಸತತವಾಗಿ ಶಕ್ತಿಯ ಸರಬರಾಯಿಯ ಅಗತ್ಯವಿದೆ; ಮತ್ತು ಅನೇಕ ಅಂಗಾಂಶಗಳ ಕೆಲವು ಭಾಗಗಳು ಸತತವಾಗಿ ಸ್ಥಾನಪಲ್ಲಟಗೊಳಿಸಲ್ಪಡುವ ಅಗತ್ಯವಿದೆ.” ನಮ್ಮ ಆತ್ಮಿಕ ಆರೋಗ್ಯದ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಸತತವಾಗಿ ಆತ್ಮಿಕ ಆಹಾರವನ್ನು ಸೇವಿಸದಿರುವಲ್ಲಿ, ಆಹಾರದ ಕೊರತೆಯಿಂದ ಸೊರಗಿರುವ ದೇಹದಂತೆ, ನಮ್ಮ ನಂಬಿಕೆಯು ಸಹ ದಿನೇ ದಿನೇ ಹಾನಿಗೊಳಗಾಗುವುದು ಮತ್ತು ಕಾಲಕ್ರಮೇಣ ಸಾಯುವುದು. ಯೇಸು ಕ್ರಿಸ್ತನು ಸಹ ಇದನ್ನು ಒತ್ತಿಹೇಳಿದನು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.”​—ಮತ್ತಾಯ 4:4.

ಇದರ ಕುರಿತು ತುಸು ಆಲೋಚಿಸಿರಿ! ಆರಂಭದಲ್ಲಿ ನಾವು ಹೇಗೆ ಬಲವಾದ ನಂಬಿಕೆಯನ್ನು ಕಟ್ಟಿದೆವು? “ಸಾರಿದ ವಾರ್ತೆಯು ನಂಬಿಕೆಗೆ ಆಧಾರ” ಎಂದು ಅಪೊಸ್ತಲ ಪೌಲನು ಬರೆಯುತ್ತಾನೆ. (ರೋಮಾಪುರ 10:17) ದೇವರ ವಾಕ್ಯದಿಂದ ಆತ್ಮಿಕ ಆಹಾರವನ್ನು ಉಣ್ಣುವ ಮೂಲಕ, ಯೆಹೋವನಲ್ಲಿ, ಆತನ ವಾಗ್ದಾನಗಳಲ್ಲಿ ಮತ್ತು ಆತನ ಸಂಸ್ಥೆಯಲ್ಲಿ ಮೊದಮೊದಲು ನಾವು ನಮ್ಮ ನಂಬಿಕೆಯನ್ನೂ ದೃಢಭರವಸೆಯನ್ನೂ ಕಟ್ಟಿದೆವು ಎಂಬುದೇ ಪೌಲನ ಮಾತುಗಳ ಅರ್ಥವಾಗಿದೆ. ಕೇಳಿಸಿಕೊಂಡ ಎಲ್ಲ ವಿಷಯಗಳನ್ನು ನಾವು ಸುಮ್ಮನೆ ನಂಬಿಬಿಡಲಿಲ್ಲ ಎಂಬುದಂತೂ ಸತ್ಯ. ಏಕೆಂದರೆ ಬೆರೋಯ ಊರಿನಲ್ಲಿ ವಾಸಿಸುತ್ತಿದ್ದ ಜನರು ಏನು ಮಾಡಿದರೋ ಅದನ್ನೇ ನಾವೂ ಮಾಡಿದೆವು. ನಾವು ‘ಈ ಮಾತುಗಳು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸಿದೆವು.’ (ಅ. ಕೃತ್ಯಗಳು 17:11) ನಾವು ‘ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಂಡೆವು’ ಮತ್ತು ನಾವು ಕೇಳಿಸಿಕೊಂಡ ವಿಷಯಗಳು ಸತ್ಯವಾಗಿದ್ದವು ಎಂಬುದನ್ನು ಪರಿಶೋಧಿಸಿ ಖಚಿತಪಡಿಸಿಕೊಂಡೆವು. (ರೋಮಾಪುರ 12:2; 1 ಥೆಸಲೊನೀಕ 5:21) ಅಂದಿನಿಂದ, ದೇವರ ವಾಕ್ಯ ಮತ್ತು ಆತನ ವಾಗ್ದಾನಗಳು ಎಂದಿಗೂ ವಿಫಲವಾಗುವುದಿಲ್ಲ ಎಂಬುದನ್ನು ನಾವು ಹೆಚ್ಚೆಚ್ಚು ಸ್ಪಷ್ಟವಾಗಿ ಅರಿತುಕೊಳ್ಳಲಾರಂಭಿಸಿದಂತೆ, ನಾವು ನಮ್ಮ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಿಕೊಂಡಿರಬಹುದು.​—ಯೆಹೋಶುವ 23:14; ಯೆಶಾಯ 55:​10, 11.

ಆತ್ಮಿಕವಾಗಿ ಉಪವಾಸ ಬೀಳುವುದರಿಂದ ದೂರವಿರಿ

ಈಗ ನಮ್ಮ ಮುಂದಿರುವ ಪಂಥಾಹ್ವಾನವು ಯಾವುದೆಂದರೆ, ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಯೆಹೋವನಲ್ಲಿ ಹಾಗೂ ಆತನ ಸಂಸ್ಥೆಯಲ್ಲಿರುವ ನಮ್ಮ ಭರವಸೆಯನ್ನು ದುರ್ಬಲಗೊಳಿಸಸಾಧ್ಯವಿರುವ ನಂಬಿಕೆಯ ಕುರಿತಾದ ಯಾವುದೇ ಅನಿಶ್ಚಿತತೆಯನ್ನು ದೂರಮಾಡುವುದೇ ಆಗಿದೆ. ಹೀಗೆ ಮಾಡಲಿಕ್ಕಾಗಿ ನಾವು ಪ್ರತಿ ದಿನ ಶಾಸ್ತ್ರವಚನಗಳನ್ನು ಪರೀಕ್ಷಿಸುತ್ತಾ ಇರಬೇಕು. ಆರಂಭದಲ್ಲಿ ಬಲವಾದ ನಂಬಿಕೆಯಿದ್ದವರಂತೆ ಕಂಡುಬಂದವರ ಕುರಿತು ಅಪೊಸ್ತಲ ಪೌಲನು ಎಚ್ಚರಿಕೆ ನೀಡುವುದು: “ಮುಂದಣ ದಿನಗಳಲ್ಲಿ ಕೆಲವರು [ಆರಂಭದಲ್ಲಿ ತುಂಬ ಬಲವಾದ ನಂಬಿಕೆಯಿದ್ದವರಂತೆ ತೋರಿದವರು] ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟ”ರಾಗುವರು. (1 ತಿಮೊಥೆಯ 4:1) ಈ ವಂಚನಾತ್ಮಕ ನುಡಿಗಳು ಹಾಗೂ ಬೋಧನೆಗಳು ಕೆಲವರ ಮನಸ್ಸುಗಳಲ್ಲಿ ಸಂದೇಹಗಳನ್ನು ಹುಟ್ಟಿಸುತ್ತವೆ ಮತ್ತು ಅವರನ್ನು ದೇವರಿಂದ ವಿಮುಖಗೊಳಿಸುತ್ತವೆ. ಇದರಿಂದ ಯಾವುದು ನಮ್ಮನ್ನು ಸಂರಕ್ಷಿಸುತ್ತದೆ? ನಾವು ‘ಅನುಸರಿಸಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದುತ್ತಾ [“ಪೋಷಿಸಲ್ಪಡುತ್ತಾ,” NW]’ ಮುಂದುವರಿಯಬೇಕಾಗಿದೆ.​—1 ತಿಮೊಥೆಯ 4:6.

ಆದರೂ, ಇಂದು ಕೆಲವರು ‘ಕ್ರಿಸ್ತ ನಂಬಿಕೆಯ ವಾಕ್ಯಗಳಿಂದ ಪೋಷಿಸಲ್ಪಡುತ್ತಾ’ ಮುಂದುವರಿಯುವ ಆಯ್ಕೆಯನ್ನು ಮಾಡುವುದಿಲ್ಲ ಎಂಬುದು ದುಃಖಕರ ಸಂಗತಿಯಾಗಿದೆ. ಇಂತಹ ಪೋಷಣೆಯು ಉಚಿತವಾಗಿ ಲಭ್ಯವಿರುವುದಾದರೂ ಅವರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಇಷ್ಟಪಡುವುದಿಲ್ಲ. ಜ್ಞಾನೋಕ್ತಿ ಪುಸ್ತಕದ ಬರಹಗಾರರಲ್ಲಿ ಒಬ್ಬನು ಸೂಚಿಸುವಂತೆ, ನಮ್ಮ ಸುತ್ತಲೂ ಒಳ್ಳೆಯ ಆತ್ಮಿಕ ಆಹಾರವು ಲಭ್ಯವಿರುವುದಾದರೂ ಅಥವಾ ಆತ್ಮಿಕ ಔತಣವು ಇರುವುದಾದರೂ, ನಾವು ಆ ಆಹಾರವನ್ನು ಸೇವಿಸದಿರುವ ಹಾಗೂ ಜೀರ್ಣಿಸಿಕೊಳ್ಳದಿರುವ ಸಾಧ್ಯತೆಯಿದೆ.​—ಜ್ಞಾನೋಕ್ತಿ 19:24; 26:15.

ಇದು ತುಂಬ ಅಪಾಯಕರವಾದದ್ದಾಗಿದೆ. ಈ ವಿಷಯದಲ್ಲಿ ಲೇಖಕರಾದ ಪೀಟರ್‌ ವಿಂಗೇಟ್‌ ಹೇಳುವುದು: “ದೇಹವು ತನ್ನಲ್ಲಿರುವಂತಹ ಪ್ರೋಟೀನನ್ನು ಬಳಸಿಕೊಳ್ಳಲು ಆರಂಭಿಸಿದ ಕೂಡಲೆ, ಆರೋಗ್ಯವು ಹದಗೆಡುತ್ತಾ ಹೋಗುತ್ತದೆ.” ನೀವು ಆಹಾರವನ್ನು ಸೇವಿಸದೆ ಹಸಿವಿನಿಂದಿರುವಾಗ, ನಿಮ್ಮ ದೇಹದಾದ್ಯಂತ ಶೇಖರವಾಗಿರುವ ಆವಶ್ಯಕ ಇಂಧನಗಳನ್ನು ದೇಹವು ಉಪಯೋಗಿಸಿಕೊಳ್ಳಲಾರಂಭಿಸುತ್ತದೆ. ಈ ಸರಬರಾಯಿಯು ಪೂರ್ಣವಾಗಿ ಮುಗಿದುಹೋದಾಗ, ದೈಹಿಕ ಬೆಳವಣಿಗೆಗೆ ಮತ್ತು ಅಂಗಾಂಶಗಳ ದುರಸ್ತಿಗೆ ಅತ್ಯಗತ್ಯವಾಗಿರುವ ಪ್ರೋಟೀನನ್ನು ದೇಹವು ಬಳಸಿಕೊಳ್ಳಲಾರಂಭಿಸುತ್ತದೆ. ಇದರಿಂದ ಅತ್ಯಾವಶ್ಯಕ ಅಂಗಗಳು ಕಾರ್ಯನಡಿಸುವುದನ್ನು ನಿಲ್ಲಿಸತೊಡಗುತ್ತವೆ. ಹೀಗೆ ನಿಮ್ಮ ಆರೋಗ್ಯವು ಬೇಗನೆ ಹಾಳಾಗಿಹೋಗುತ್ತದೆ.

ಆರಂಭದ ಕ್ರೈಸ್ತ ಸಭೆಯಲ್ಲಿದ್ದ ಕೆಲವರಿಗೆ ಆತ್ಮಿಕ ರೀತಿಯಲ್ಲಿ ಹೀಗೆಯೇ ಆಯಿತು. ಅವರು ಆರಂಭದಲ್ಲಿ ತಿಳಿದುಕೊಂಡಿದ್ದ ಆತ್ಮಿಕ ವಿಷಯಗಳ ಜ್ಞಾನದ ಆಧಾರದ ಮೇಲೆ ತಮ್ಮನ್ನು ಪೋಷಿಸಿಕೊಳ್ಳಲು ಪ್ರಯತ್ನಿಸಿದರು. ಇದರಿಂದಾಗಿ ಅವರು ತಮ್ಮ ವೈಯಕ್ತಿಕ ಅಭ್ಯಾಸವನ್ನು ಕಡೆಗಣಿಸಿದ್ದಿರಬಹುದು ಮತ್ತು ಆತ್ಮಿಕವಾಗಿ ಬಲಹೀನರಾಗಿ ಪರಿಣಮಿಸಿದ್ದಿರಬಹುದು. (ಇಬ್ರಿಯ 5:12) ಇಬ್ರಿಯ ಕ್ರೈಸ್ತರಿಗೆ ಅಪೊಸ್ತಲ ಪೌಲನು ಪತ್ರವನ್ನು ಬರೆದಾಗ, ಹಾಗೆ ಮಾಡುವುದರ ಅಪಾಯದ ಕುರಿತು ಅವನು ವಿವರಿಸಿದನು: “ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋದೇವೆಂದು ಭಯಪಟ್ಟು ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು.” ಒಂದುವೇಳೆ “ಈ ಅತ್ಯಂತವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ,” ದುರಭ್ಯಾಸಗಳಿಗೆ ಒಳಗಾಗುವುದು ಎಷ್ಟು ಸುಲಭ ಎಂಬುದು ಅವನಿಗೆ ತಿಳಿದಿತ್ತು.​—ಇಬ್ರಿಯ 2:​1, 3.

ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿರುವ ಒಬ್ಬ ವ್ಯಕ್ತಿಯು, ದುರ್ಬಲನಾಗಿ ಅಥವಾ ಬಡಕಲಾಗಿ ತೋರಲಿಕ್ಕಿಲ್ಲ ಎಂಬುದು ಆಸಕ್ತಿಕರ ಸಂಗತಿಯಾಗಿದೆ. ತದ್ರೀತಿಯಲ್ಲಿ, ಒಬ್ಬ ವ್ಯಕ್ತಿಯು ಆತ್ಮಿಕ ಹಸಿವಿನಿಂದ ಕಷ್ಟಾನುಭವಿಸುತ್ತಿದ್ದಾನೆ ಎಂಬುದು ಆ ಕೂಡಲೆ ಸ್ಪಷ್ಟವಾಗಿ ಕಂಡುಬರದಿರಬಹುದು. ನೀವು ಆತ್ಮಿಕವಾಗಿ ಪೌಷ್ಟಿಕ ಆಹಾರವನ್ನು ಯೋಗ್ಯ ರೀತಿಯಲ್ಲಿ ಸೇವಿಸದಿರುವಾಗಲೂ, ಹೊರತೋರಿಕೆಗೆ ನೀವು ಆತ್ಮಿಕವಾಗಿ ಆರೋಗ್ಯದಿಂದಿರುವಂತೆ ಕಂಡುಬರಸಾಧ್ಯವಿದೆ​—ಆದರೆ ಸ್ವಲ್ಪ ಕಾಲಾವಧಿಯ ವರೆಗೆ ಮಾತ್ರ! ಕಾಲಕ್ರಮೇಣ ನೀವು ಖಂಡಿತವಾಗಿಯೂ ಆತ್ಮಿಕವಾಗಿ ದುರ್ಬಲಗೊಳ್ಳುವಿರಿ, ನಿರಾಧಾರವಾದ ಸಂದೇಹಗಳಿಗೆ ಗುರಿಯಾಗುವಿರಿ, ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಹೋರಾಡಲು ಅಶಕ್ತರಾಗುವಿರಿ. (ಯೂದ 3) ನೀವು ವೈಯಕ್ತಿಕವಾಗಿ ಆತ್ಮಿಕ ಆಹಾರವನ್ನು ಎಷ್ಟರ ಮಟ್ಟಿಗೆ ಸೇವಿಸುತ್ತಿದ್ದೀರಿ ಎಂಬುದು ನಿಮಗಿಂತಲೂ ಹೆಚ್ಚಾಗಿ ಇನ್ಯಾರಿಗೆ ಗೊತ್ತಿರಬಲ್ಲದು?

ಆದುದರಿಂದ, ನಿಮ್ಮ ವೈಯಕ್ತಿಕ ಅಭ್ಯಾಸವನ್ನು ಕ್ರಮವಾಗಿ ಮಾಡಿರಿ. ಸಂದೇಹಗಳನ್ನು ದೂರಮಾಡಲಿಕ್ಕಾಗಿ ಹುರುಪಿನಿಂದ ಪ್ರಯಾಸಪಡಿರಿ. ತೀರ ಚಿಕ್ಕದಾಗಿ ತೋರುವ ಅಸ್ವಸ್ಥತೆಯನ್ನು ಅಸಡ್ಡೆಮಾಡುವುದು, ಅಂದರೆ ಯಾವಾಗಲೂ ಕಾಡುತ್ತಿರುವ ಸಂದೇಹಗಳನ್ನು ಬಗೆಹರಿಸಲು ಪ್ರಯತ್ನಿಸದಿರುವುದು, ವಿಪತ್ಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. (2 ಕೊರಿಂಥ 11:3) ‘ನಿಜವಾಗಿಯೂ ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೋ? ಬೈಬಲು ಹೇಳುವುದನ್ನೆಲ್ಲ ನೀವು ನಂಬಸಾಧ್ಯವಿದೆಯೋ? ಖಂಡಿತವಾಗಿಯೂ ಇದು ಯೆಹೋವನ ಸಂಸ್ಥೆಯಾಗಿದೆಯೋ?’ ಈ ರೀತಿಯ ಸಂದೇಹಗಳನ್ನು ನಿಮ್ಮ ಮನಸ್ಸಿನಲ್ಲಿ ಬಿತ್ತಲು ಸೈತಾನನು ತುಂಬ ಇಷ್ಟಪಡುತ್ತಾನೆ. ಆತ್ಮಿಕವಾಗಿ ಉಣ್ಣುವ ವಿಷಯದಲ್ಲಿ ತಾತ್ಸಾರ ಮನೋಭಾವದಿಂದಾಗಿ, ಸೈತಾನನ ವಂಚನಾತ್ಮಕ ಬೋಧನೆಗಳಿಗೆ ನೀವು ಸುಲಭವಾಗಿ ಬಲಿಬೀಳುವಂತೆ ಬಿಟ್ಟುಕೊಡಬೇಡಿ. (ಕೊಲೊಸ್ಸೆ 2:​4-7) ತಿಮೊಥೆಯನಿಗೆ ಕೊಡಲ್ಪಟ್ಟ ಬುದ್ಧಿವಾದವನ್ನು ಅನ್ವಯಿಸಿರಿ. ಅದೇನೆಂದರೆ, “ಪರಿಶುದ್ಧಗ್ರಂಥಗಳ”ನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸುವ ವಿದ್ಯಾರ್ಥಿಗಳಾಗಿರಿ; ಇದರಿಂದ ನೀವು ‘ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರಸಾಧ್ಯವಿದೆ.’​—2 ತಿಮೊಥೆಯ 3:​13-15.

ಹೀಗೆ ಮಾಡಲು ನಿಮಗೆ ಸಹಾಯದ ಅಗತ್ಯವಿರಬಹುದು. ಈ ಮುಂಚೆ ತಿಳಿಸಲ್ಪಟ್ಟಿರುವ ಲೇಖಕರು ಮುಂದುವರಿಸುತ್ತಾ ಹೇಳುವುದು: “ಒಂದುವೇಳೆ ದೀರ್ಘ ಸಮಯದ ವರೆಗೆ ದೇಹವು ಹಸಿವಿನಿಂದಿರುವಲ್ಲಿ, ವಿಟಮಿನ್‌ಗಳು ಹಾಗೂ ಇತರ ಆವಶ್ಯಕ ವಸ್ತುಗಳ ಕೊರತೆಯಿಂದ ನಮ್ಮ ಪಚನಾಂಗಗಳು ಎಷ್ಟು ಹಾನಿಗೊಳ್ಳಬಹುದೆಂದರೆ, ಮುಂದೆ ಸಾಮಾನ್ಯವಾದ ಆಹಾರವನ್ನು ನಾವು ಸೇವಿಸುವುದಾದರೂ ಅದು ಸರಿಯಾಗಿ ಜೀರ್ಣಕ್ರಿಯೆಯನ್ನು ನಡಿಸಲಾರದು. ಈ ಸ್ಥಿತಿಗೆ ಒಳಗಾಗಿರುವ ಜನರು, ಸ್ವಲ್ಪ ಕಾಲದ ವರೆಗೆ ಕಡಿಮೆ ಜೀರ್ಣಕ್ರಿಯೆಯನ್ನು ಅಗತ್ಯಪಡಿಸುವಂತಹ ಆಹಾರವನ್ನು ಸೇವಿಸಬೇಕಾಗಬಹುದು.” ದೀರ್ಘ ಕಾಲದ ಹಸಿವೆಯು ದೇಹದ ಮೇಲೆ ಬೀರಿರುವ ಪರಿಣಾಮಗಳನ್ನು ಸರಿಪಡಿಸಲು ವಿಶೇಷ ರೀತಿಯ ಕಾಳಜಿಯನ್ನು ತೋರಿಸುವ ಅಗತ್ಯವಿರುತ್ತದೆ. ಅದೇ ರೀತಿಯಲ್ಲಿ, ತನ್ನ ವೈಯಕ್ತಿಕ ಬೈಬಲ್‌ ಅಭ್ಯಾಸವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಒಬ್ಬ ವ್ಯಕ್ತಿಗೆ, ತನ್ನ ಆತ್ಮಿಕ ಹಸಿವನ್ನು ಮತ್ತೆ ಪಡೆಯಲಿಕ್ಕಾಗಿ ಅತ್ಯಧಿಕ ಸಹಾಯ ಹಾಗೂ ಉತ್ತೇಜನದ ಅಗತ್ಯವಿರಬಹುದು. ನೀವು ಈ ಸನ್ನಿವೇಶದಲ್ಲಿರುವಲ್ಲಿ, ಆ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ ಮತ್ತು ನಿಮ್ಮ ಆತ್ಮಿಕ ಆರೋಗ್ಯ ಹಾಗೂ ಬಲವನ್ನು ಪುನಃ ಕಟ್ಟಲಿಕ್ಕಾಗಿ ನಿಮಗೆ ಕೊಡಲ್ಪಡುವ ಯಾವುದೇ ಸಹಾಯವನ್ನು ಸಂತೋಷದಿಂದ ಸ್ವೀಕರಿಸಿರಿ.​—ಯಾಕೋಬ 5:​14, 15.

“ಅಪನಂಬಿಕೆಯಿಂದ ಚಂಚಲಚಿತ್ತ”ರಾಗಬೇಡಿ

ಪೂರ್ವಜನಾದ ಅಬ್ರಹಾಮನ ಸನ್ನಿವೇಶಗಳನ್ನು ಪರಿಗಣಿಸುವಾಗ, ಅವನು ಸಂದೇಹಪಡಲು ನ್ಯಾಯಸಮ್ಮತ ಕಾರಣಗಳಿದ್ದವು ಎಂದು ಕೆಲವರು ನೆನಸಬಹುದು. ದೇವರು ವಾಗ್ದಾನಿಸಿದ್ದರೂ, ತಾನು ‘ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆನೆಂಬ ನಿರೀಕ್ಷೆಗೆ ಆಸ್ಪದವಿಲ್ಲ’ ಎಂದು ಅವನು ನೆನಸಿದ್ದನು ಎಂಬ ತೀರ್ಮಾನಕ್ಕೆ ಬರುವುದು ತೀರ ಸಮಂಜಸವಾದದ್ದಾಗಿ ಕಂಡುಬರಬಹುದು. ಏಕೆ? ಏಕೆಂದರೆ, ಮಾನವ ದೃಷ್ಟಿಕೋನದಿಂದ ನೋಡುವಲ್ಲಿ, ವಿಷಯಗಳು ಅಷ್ಟೇನೂ ಆಶಾದಾಯಕವಾಗಿ ಕಂಡುಬರಲಿಲ್ಲ. ‘ತನ್ನ ದೇಹವು ಆಗಲೇ ಮೃತಪ್ರಾಯವಾಗಿತ್ತೆಂದೂ ಸಾರಳಿಗೆ ಗರ್ಭಕಾಲ ಕಳೆದು ಹೋಗಿತ್ತೆಂದೂ ಅವನು ಯೋಚಿಸಿದನು’ ಎಂದು ಬೈಬಲ್‌ ದಾಖಲೆಯು ಹೇಳುತ್ತದೆ. ಆದರೂ, ದೇವರ ಕುರಿತು ಹಾಗೂ ಆತನ ವಾಗ್ದಾನಗಳ ಕುರಿತಾದ ಸಂದೇಹಗಳು ತನ್ನ ಹೃದಮನಗಳಲ್ಲಿ ಬೇರೂರುವಂತೆ ಬಿಡಲು ಅವನು ದೃಢಸಂಕಲ್ಪದಿಂದ ನಿರಾಕರಿಸಿದನು. ಈ ವಿಷಯದಲ್ಲಿ ಅಪೊಸ್ತಲ ಪೌಲನು ಬರೆಯುವುದು: “ಅವನ ನಂಬಿಕೆಯು ಕುಂದಲಿಲ್ಲ” ಅಥವಾ ಅವನು “ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ.” ಅಬ್ರಹಾಮನು, ದೇವರು “ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢ ನಂಬಿಕೆಯುಳ್ಳವನಾದನು.” (ರೋಮಾಪುರ 4:​18-21) ಈ ಎಲ್ಲ ವರ್ಷಗಳಲ್ಲಿ ಅವನು ಯೆಹೋವನೊಂದಿಗೆ ಬಲವಾದ ವೈಯಕ್ತಿಕ, ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸಿಕೊಂಡಿದ್ದನು. ಆ ಸಂಬಂಧವನ್ನು ದುರ್ಬಲಗೊಳಿಸಬಹುದಾದ ಯಾವುದೇ ಸಂದೇಹಗಳನ್ನು ಅವನು ತಿರಸ್ಕರಿಸಿದನು.

ಒಂದುವೇಳೆ ನೀವು “ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು”ತ್ತಿರುವಲ್ಲಿ, ಒಳ್ಳೇ ರೀತಿಯಲ್ಲಿ ಆತ್ಮಿಕ ಆಹಾರವನ್ನು ಸೇವಿಸುತ್ತಿರುವಲ್ಲಿ, ನೀವು ಸಹ ಅಬ್ರಹಾಮನಂತೆ ಮಾಡಸಾಧ್ಯವಿದೆ. (2 ತಿಮೊಥೆಯ 1:13) ಸಂದೇಹಗಳು ಉಂಟುಮಾಡುವ ಅಪಾಯವನ್ನು ಗಂಭೀರವಾಗಿ ಪರಿಗಣಿಸಿರಿ. ಆತ್ಮಿಕ ರೋಗಾಣು ಯುದ್ಧ ಎಂದು ಕರೆಯಲ್ಪಡಬಹುದಾದ ಯುದ್ಧವನ್ನು ಸೈತಾನನು ನಡೆಸುತ್ತಿದ್ದಾನೆ. ಆದುದರಿಂದ, ವೈಯಕ್ತಿಕ ಬೈಬಲ್‌ ಅಭ್ಯಾಸದ ಮೂಲಕ ಹಾಗೂ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ ದೊರಕುವ ಆತ್ಮಿಕ ಆಹಾರವನ್ನು ಸೇವಿಸಲು ನೀವು ಉದಾಸೀನಭಾವವನ್ನು ತೋರಿಸುವಲ್ಲಿ, ಸೈತಾನನ ಆಕ್ರಮಣಗಳಿಗೆ ನಿಮ್ಮನ್ನು ಸುಲಭವಾಗಿ ಒಡ್ಡಿಕೊಳ್ಳುತ್ತೀರಿ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸಲ್ಪಡುವ ಉದಾರವಾದ ಹಾಗೂ ಸಮಯೋಚಿತವಾದ ಆತ್ಮಿಕ ಆಹಾರವನ್ನು ಸದುಪಯೋಗಿಸಿಕೊಳ್ಳಿರಿ. (ಮತ್ತಾಯ 24:45) ‘ಸ್ವಸ್ಥವಾದ ಮಾತುಗಳಿಗೆ ಸಮ್ಮತಿಸು’ವುದನ್ನು ಮುಂದುವರಿಸಿರಿ ಮತ್ತು ‘ನಂಬಿಕೆಯಲ್ಲಿ ಸ್ವಸ್ಥರಾಗಿ’ ಉಳಿಯಿರಿ. (1 ತಿಮೊಥೆಯ 6:3; ತೀತ 2:2) ಸಂದೇಹಗಳು ನಿಮ್ಮ ನಂಬಿಕೆಯನ್ನು ನುಂಗುವಂತೆ ಬಿಡಬೇಡಿ.

[ಪುಟ 21ರಲ್ಲಿರುವ ಚಿತ್ರಗಳು]

ಆತ್ಮಿಕವಾಗಿ ನೀವು ನಿಮ್ಮನ್ನು ಎಷ್ಟರ ಮಟ್ಟಿಗೆ ಪೋಷಿಸಿಕೊಳ್ಳುತ್ತಿದ್ದೀರಿ?