ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆನಂದಭರಿತ ಕೊಯ್ಲುಗಾರರಾಗಿರಿ!

ಆನಂದಭರಿತ ಕೊಯ್ಲುಗಾರರಾಗಿರಿ!

ಆನಂದಭರಿತ ಕೊಯ್ಲುಗಾರರಾಗಿರಿ!

“ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ [“ಕೊಯ್ಲಿನ,” NW] ಯಜಮಾನನನ್ನು​—ನಿನ್ನ ಬೆಳೆಗೆ [“ಕೊಯ್ಲಿಗೆ,” NW] ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.”​—ಮತ್ತಾಯ 9:37, 38.

1. ದೇವರ ಚಿತ್ತವನ್ನು ಮಾಡುವುದರಲ್ಲಿ ಪಟ್ಟುಹಿಡಿಯುವಂತೆ ನಮಗೆ ಯಾವುದು ಸಹಾಯಮಾಡುತ್ತದೆ?

ನಾವು ಯೆಹೋವನ ಸೇವಕರಲ್ಲಿ ಒಬ್ಬರೋಪಾದಿ ದೀಕ್ಷಾಸ್ನಾನವನ್ನು ಪಡೆದುಕೊಂಡ ದಿನ ಈಗಲೂ ನಮಗೆ ಜ್ಞಾಪಕವಿರಬಹುದು. ಅದು ಕೆಲವೇ ವರ್ಷಗಳ ಹಿಂದಿರಲಿ ಇಲ್ಲವೆ ಅನೇಕ ವರ್ಷಗಳ ಹಿಂದಿರಲಿ, ಅದನ್ನು ಜ್ಞಾಪಿಸಿಕೊಳ್ಳುವಾಗ ಅದು ನಿನ್ನೆಯೇ ಆದಂತೆ ನಮಗನಿಸಬಹುದು. ಅಂದಿನಿಂದ ಆರಂಭಿಸಿ, ಯೆಹೋವನನ್ನು ಸ್ತುತಿಸುವುದೇ ನಮ್ಮ ಸಮರ್ಪಿತ ಜೀವನದ ಮುಖ್ಯ ಅಂಶವಾಗಿಬಿಟ್ಟಿತು. ಯೆಹೋವನಿಗೆ ಆನಂದಪೂರ್ಣ ಸೇವೆಯನ್ನು ಸಲ್ಲಿಸುವುದು ನಮ್ಮ ಮುಖ್ಯ ಚಿಂತೆಯಾಗಿದ್ದುದರಿಂದ, ಬೇರೆಯವರು ರಾಜ್ಯದ ಸಂದೇಶವನ್ನು ಕೇಳಿ, ಬಹುಶಃ ಸ್ವೀಕರಿಸುವಂತೆಯೂ ಸಹಾಯಮಾಡಲು ನಾವು ಅನುಕೂಲಕರವಾದ ಸಮಯವನ್ನು ಕೊಂಡುಕೊಂಡೆವು. (ಎಫೆಸ 5:​15, 16) ನಾವು ‘ಕರ್ತನ ಸೇವೆಯಲ್ಲಿ ಪ್ರಯಾಸಪಡುತ್ತಾ’ ಕಾರ್ಯಮಗ್ನರಾಗಿರುವಾಗ, ಸಮಯವು ಹಾರಿಹೋಗುತ್ತದೆಂಬುದನ್ನು ನಾವು ಈ ದಿನದ ವರೆಗೂ ಗಮನಿಸಿದ್ದೇವೆ. (1 ಕೊರಿಂಥ 15:58) ನಾವು ಸಮಸ್ಯೆಗಳನ್ನು ಎದುರಿಸುತ್ತಿರುವುದಾದರೂ, ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ನಮಗಿರುವ ಆನಂದವು, ಕರ್ತನ ಕೆಲಸವನ್ನು ಮಾಡುತ್ತಾ ಇರುವಂತೆ ನಮ್ಮನ್ನು ಪ್ರಚೋದಿಸುತ್ತದೆ.​—ನೆಹೆಮೀಯ 8:10.

2. ಸಾಂಕೇತಿಕ ಕೊಯ್ಲಿನ ಕೆಲಸದಲ್ಲಿ ನಮಗೆ ಸಿಗುವ ಆನಂದವನ್ನು ಹೆಚ್ಚಿಸುವಂಥ ಸಂಗತಿಗಳು ಯಾವುವು?

2 ಕ್ರೈಸ್ತರೋಪಾದಿ ನಾವು ಒಂದು ಸಾಂಕೇತಿಕ ಕೊಯ್ಲಿನ ಕೆಲಸದಲ್ಲಿ ಭಾಗವಹಿಸುತ್ತಿದ್ದೇವೆ. ನಿತ್ಯ ಜೀವಕ್ಕಾಗಿ ಜನರನ್ನು ಒಟ್ಟುಗೂಡಿಸುವ ಕೆಲಸವನ್ನು ಯೇಸು ಕ್ರಿಸ್ತನು ಒಂದು ಕೊಯ್ಲಿಗೆ ಹೋಲಿಸಿದನು. (ಯೋಹಾನ 4:​35-38) ನಾವು ಇಂಥ ಕೊಯ್ಲಿನ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವುದರಿಂದ, ಆರಂಭದ ಕ್ರೈಸ್ತ ಕೊಯ್ಲುಗಾರರ ಆನಂದವನ್ನು ಪರಿಶೀಲಿಸುವುದು ಉತ್ತೇಜನದಾಯಕವಾಗಿರುವುದು. ಇಂದಿನ ಕೊಯ್ಲಿನ ಕೆಲಸದಲ್ಲಿ ನಮಗೆ ಸಿಗುವ ಆನಂದವನ್ನು ಹೆಚ್ಚಿಸುವಂಥ ಈ ಮೂರು ಅಂಶಗಳನ್ನು ನಾವು ಪುನರ್ವಿಮರ್ಶಿಸುವೆವು: (1) ನಮ್ಮ ನಿರೀಕ್ಷೆಯ ಸಂದೇಶ, (2) ಹುಡುಕುವ ಕೆಲಸದಲ್ಲಿ ಸಿಗುವ ಯಶಸ್ಸು ಮತ್ತು (3) ಕೊಯ್ಲುಗಾರರೋಪಾದಿ ಶಾಂತಿಯನ್ನು ಕಾಪಾಡಿಕೊಳ್ಳುವ ನಮ್ಮ ಮನೋಭಾವ.

ಕೊಯ್ಲುಗಾರರೋಪಾದಿ ಕಳುಹಿಸಲ್ಪಟ್ಟವರು

3. ಯೇಸುವಿನ ಆರಂಭದ ಹಿಂಬಾಲಕರು ಯಾವ ವಿಷಯದಲ್ಲಿ ಆನಂದವನ್ನು ಅನುಭವಿಸಿದರು?

3 ಆರಂಭದ ಕೊಯ್ಲುಗಾರರ, ವಿಶೇಷವಾಗಿ ಯೇಸುವಿನ 11 ಮಂದಿ ನಂಬಿಗಸ್ತ ಅಪೊಸ್ತಲರ ಜೀವಿತಗಳು ಸಾ.ಶ. 33ರ ಒಂದು ದಿನದಂದು ಎಷ್ಟು ಬದಲಾದವು! ಅಂದು ಅವರು ಪುನರುತ್ಥಿತ ಕ್ರಿಸ್ತನನ್ನು ಭೇಟಿಯಾಗಲು ಗಲಿಲಾಯದ ಒಂದು ಪರ್ವತಕ್ಕೆ ಹೋದರು. (ಮತ್ತಾಯ 28:16) ಆ ಸಂದರ್ಭದಲ್ಲಿ “ಐನೂರು ಮಂದಿಗಿಂತ ಹೆಚ್ಚು ಸಹೋದರ”ರು ಅಲ್ಲಿದ್ದಿರಬಹುದು. (1 ಕೊರಿಂಥ 15:6) ಯೇಸು ಕೊಟ್ಟ ಈ ನೇಮಕವು ಅವರ ಕಿವಿಗಳಲ್ಲಿ ಪ್ರತಿಧ್ವನಿಸುತ್ತಾ ಅವರಿಗೆ ಸದಾ ಜ್ಞಾಪಕಹುಟ್ಟಿಸುತ್ತಾ ಇತ್ತು. ಅವನು ಅವರಿಗಂದದ್ದು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 28:19, 20) ಕಡು ವಿರೋಧದ ಎದುರಿನಲ್ಲಿಯೂ ಅವರು ಕೊಯ್ಲಿನ ಕೆಲಸದಲ್ಲಿ ತುಂಬ ಆನಂದವನ್ನು ಕಂಡುಕೊಂಡರು. ಏಕೆಂದರೆ ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಕ್ರಿಸ್ತನ ಹಿಂಬಾಲಕರ ಸಭೆಗಳು ಸ್ಥಾಪಿಸಲ್ಪಡುವುದನ್ನು ಅವರು ನೋಡಿದರು. ಮತ್ತು ಕಾಲಾನಂತರ ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸುವಾರ್ತೆಯು ಸಾರಲ್ಪಟ್ಟಿತು.’​—ಕೊಲೊಸ್ಸೆ 1:23; ಅ. ಕೃತ್ಯಗಳು 1:8; 16:5.

4. ಕ್ರಿಸ್ತನ ಶಿಷ್ಯರು ಕಳುಹಿಸಲ್ಪಟ್ಟಾಗ ಪರಿಸ್ಥಿತಿಯು ಹೇಗಿತ್ತು?

4 ಗಲಿಲಾಯದಲ್ಲಿನ ತನ್ನ ಶುಶ್ರೂಷೆಯ ಆರಂಭದ ಹಂತದಲ್ಲಿ, ಯೇಸು ತನ್ನ 12 ಮಂದಿ ಅಪೊಸ್ತಲರನ್ನು ಒಟ್ಟುಗೂಡಿಸಿ, ‘ಪರಲೋಕರಾಜ್ಯವು ಸಮೀಪವಾಯಿತು’ ಎಂದು ವಿಶೇಷವಾಗಿ ಘೋಷಿಸುವಂತೆ ಅವರನ್ನು ಕಳುಹಿಸಿದನು. (ಮತ್ತಾಯ 10:​1-7) ಸ್ವತಃ ಅವನೇ, “[ಗಲಿಲಾಯದ] ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು ಅವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.” ಜನರ ಗುಂಪುಗಳು, ‘ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿವೆಯಲ್ಲ’ ಎಂದು ಯೇಸುವಿಗೆ ಕನಿಕರವು ಉಕ್ಕಿಬಂತು. (ಮತ್ತಾಯ 9:35, 36) ತನ್ನ ಮನಸ್ಸನ್ನು ಗಾಢವಾಗಿ ಪ್ರಭಾವಿಸಿದ ಈ ಸಂಗತಿಯಿಂದಾಗಿ, ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ [“ಕೊಯ್ಲಿನ,” NW] ಯಜಮಾನನನ್ನು [ಯೆಹೋವ ದೇವರನ್ನು]​—ನಿನ್ನ ಬೆಳೆಗೆ [“ಕೊಯ್ಲಿಗೆ,” NW] ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಮತ್ತಾಯ 9:37, 38) ಯೇಸುವಿನ ಶುಶ್ರೂಷೆ ಮುಗಿಯಲು ಕೇವಲ ಆರು ತಿಂಗಳುಗಳಿದ್ದಾಗಲೂ, ಯೂದಾಯದಲ್ಲಿ ಕೊಯ್ಲುಗಾರರಿಗಾಗಿದ್ದ ಅಗತ್ಯದ ಕುರಿತಾದ ಯೇಸುವಿನ ಅಂದಾಜು ಅದೇ ಆಗಿತ್ತು. (ಲೂಕ 10:2) ಈ ಎರಡೂ ಸಂದರ್ಭಗಳಲ್ಲಿ ಅವನು ತನ್ನ ಹಿಂಬಾಲಕರನ್ನು ಕೊಯ್ಲುಗಾರರೋಪಾದಿ ಕಳುಹಿಸಿದನು.​—ಮತ್ತಾಯ 10:5; ಲೂಕ 10:3.

ನಮ್ಮ ನಿರೀಕ್ಷೆಯ ಸಂದೇಶ

5. ನಾವು ಯಾವ ರೀತಿಯ ಸಂದೇಶವನ್ನು ಘೋಷಿಸುತ್ತೇವೆ?

5 ಯೆಹೋವನ ಇಂದಿನ ಸೇವಕರೋಪಾದಿ ನಾವು ಕೊಯ್ಲುಗಾರರ ಕರೆಗೆ ಆನಂದದಿಂದ ಓಗೊಡುತ್ತೇವೆ. ನಮ್ಮ ಆನಂದವನ್ನು ಮಹತ್ತರವಾಗಿ ಹೆಚ್ಚಿಸುವ ಒಂದು ಅಂಶವು, ನಾವು ಮನಗುಂದಿದವರು ಹಾಗೂ ಖಿನ್ನಾವಸ್ಥೆಯಲ್ಲಿರುವವರಿಗೆ ಕೊಂಡೊಯ್ಯುವ ನಿರೀಕ್ಷೆಯ ಸಂದೇಶವೇ ಆಗಿದೆ. ಪ್ರಥಮ ಶತಮಾನದಲ್ಲಿದ್ದ ಯೇಸುವಿನ ಶಿಷ್ಯರಂತೆ, ಸುವಾರ್ತೆಯನ್ನು ಘೋಷಿಸುವ ಎಂಥ ಮಹಾನ್‌ ಸುಯೋಗವು ನಮಗಿದೆ! ಈ ಸುವಾರ್ತೆಯು, ‘ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿರುವವರಿಗೆ’ ನಿಜವಾಗಿಯೂ ಒಂದು ನಿರೀಕ್ಷೆಯ ಸಂದೇಶವಾಗಿದೆ.

6. ಪ್ರಥಮ ಶತಮಾನದಲ್ಲಿ ಅಪೊಸ್ತಲರು ಯಾವ ಚಟುವಟಿಕೆಯಲ್ಲಿ ಭಾಗವಹಿಸಿದರು?

6 ಪ್ರಥಮ ಶತಮಾನದ ಮಧ್ಯಭಾಗದಷ್ಟಕ್ಕೆ ಅಪೊಸ್ತಲ ಪೌಲನು ಸುವಾರ್ತೆಯನ್ನು ಸಾರುವುದರಲ್ಲಿ ಕಾರ್ಯಮಗ್ನನಾಗಿದ್ದನು. ಮತ್ತು ಅವನ ಕೊಯ್ಲಿನ ಕೆಲಸವು ಖಂಡಿತವಾಗಿಯೂ ಪರಿಣಾಮಕಾರಿಯಾಗಿತ್ತು. ಏಕೆಂದರೆ ಸುಮಾರು ಸಾ.ಶ. 55ರಲ್ಲಿ ಅವನು ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಬರೆದಾಗ ಹೇಳಿದ್ದು: “ಸಹೋದರರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿದಿರಿ, ಅದರಲ್ಲಿ ನಿಂತಿದ್ದೀರಿ.” (1 ಕೊರಿಂಥ 15:1) ಅಪೊಸ್ತಲರು ಮತ್ತು ಇತರ ಆರಂಭದ ಕ್ರೈಸ್ತರು, ಕಷ್ಟಪಟ್ಟು ದುಡಿದಂಥ ಕೊಯ್ಲುಗಾರರಾಗಿದ್ದರು. ಸಾ.ಶ. 70ರಲ್ಲಿ ಯೆರೂಸಲೇಮಿನ ನಾಶನಕ್ಕೆ ನಡೆಸಿದ ಬಹು ಮುಖ್ಯ ಘಟನೆಗಳ ಸಮಯದಲ್ಲಿ, ಎಷ್ಟು ಮಂದಿ ಅಪೊಸ್ತಲರು ಜೀವಂತರಾಗಿದ್ದರೆಂದು ಬೈಬಲ್‌ ನಮಗೆ ತಿಳಿಸುವುದಿಲ್ಲ. ಆದರೆ ಸಾ.ಶ. 70ರ ನಂತರವೂ ಸುಮಾರು 25 ವರ್ಷಗಳ ವರೆಗೆ ಅಪೊಸ್ತಲ ಯೋಹಾನನು ಇನ್ನೂ ಸಾರುತ್ತಾ ಇದ್ದನೆಂದು ನಮಗೆ ತಿಳಿದಿದೆ.​—ಪ್ರಕಟನೆ 1:9.

7, 8. ಯೆಹೋವನ ಸೇವಕರು ಹಿಂದೆಂದಿಗಿಂತಲೂ ಹೆಚ್ಚಿನ ತುರ್ತು ಪ್ರಜ್ಞೆಯೊಂದಿಗೆ ಯಾವ ನಿರೀಕ್ಷೆಯ ಸಂದೇಶವನ್ನು ಘೋಷಿಸುತ್ತಿದ್ದಾರೆ?

7 ಅನಂತರ ಅನೇಕ ಶತಮಾನಗಳ ವರೆಗೆ, ಧರ್ಮಭ್ರಷ್ಟ “ಅಧರ್ಮಸ್ವರೂಪನ” ಅಂದರೆ ಕ್ರೈಸ್ತಪ್ರಪಂಚದ ಪಾದ್ರಿಗಳ ಆಧಿಪತ್ಯವು ನಡೆಯಿತು. (2 ಥೆಸಲೊನೀಕ 2:3) ಆದರೆ 19ನೆಯ ಶತಮಾನದ ಅಂತ್ಯದಲ್ಲಿ, ಆರಂಭದ ಕ್ರೈಸ್ತತ್ವಕ್ಕನುಸಾರ ತಮ್ಮ ಜೀವಿತಗಳನ್ನು ರೂಪಿಸಲು ಪ್ರಯತ್ನಿಸುತ್ತಿದ್ದವರು, ರಾಜ್ಯವನ್ನು ಘೋಷಿಸುತ್ತಾ ನಿರೀಕ್ಷೆಯ ಸಂದೇಶವನ್ನು ಮೇಲಕ್ಕೆತ್ತಿದರು. ವಾಸ್ತವದಲ್ಲಿ, ನಿಮ್ಮ ಕೈಯಲ್ಲಿರುವ ಈ ಪತ್ರಿಕೆಯ ಮೊದಲ ಸಂಚಿಕೆಯಿಂದಲೇ (ಜುಲೈ 1879, ಇಂಗ್ಲಿಷ್‌), ಅದರ ಶೀರ್ಷಿಕೆಯಲ್ಲಿ, “ಕ್ರಿಸ್ತನ ಸಾನ್ನಿಧ್ಯದ ಉದ್ಘೋಷ,” “ಕ್ರಿಸ್ತನ ರಾಜ್ಯದ ಉದ್ಘೋಷ,” ಅಥವಾ “ಯೆಹೋವನ ರಾಜ್ಯವನ್ನು ಪ್ರಕಟಿಸುವುದು” ಎಂಬ ಪದಗಳು ಸೇರಿವೆ.

8 ದೇವರ ಸ್ವರ್ಗೀಯ ರಾಜ್ಯವು 1914ರಲ್ಲಿ ಯೇಸು ಕ್ರಿಸ್ತನ ಅಧಿಕಾರದಲ್ಲಿ ಸ್ಥಾಪಿಸಲ್ಪಟ್ಟಿತು, ಮತ್ತು ನಾವಿಂದು ಹಿಂದೆಂದಿಗಿಂತಲೂ ಹೆಚ್ಚಿನ ತುರ್ತು ಪ್ರಜ್ಞೆಯೊಂದಿಗೆ ನಿರೀಕ್ಷೆಯ ಸಂದೇಶವನ್ನು ಸಾರುತ್ತಿದ್ದೇವೆ. ಏಕೆ? ಏಕೆಂದರೆ ರಾಜ್ಯಾಳ್ವಿಕೆಯು ಸಾಧಿಸಲಿರುವ ಒಳ್ಳೇ ಕೆಲಸಗಳಲ್ಲಿ ಒಂದಾದ ಸದ್ಯದ ದುಷ್ಟ ವ್ಯವಸ್ಥೆಯ ಅಂತ್ಯವು ಸನ್ನಿಹಿತವಾಗಿದೆ. (ದಾನಿಯೇಲ 2:44) ಇದಕ್ಕಿಂತಲೂ ಉತ್ತಮವಾದ ಯಾವುದೇ ಸಂದೇಶವು ಇರಸಾಧ್ಯವೊ? ಮತ್ತು ‘ಮಹಾ ಸಂಕಟವು’ ಬಂದೆರಗುವ ಮುಂಚೆ ರಾಜ್ಯದ ಕುರಿತು ಪ್ರಕಟಪಡಿಸುವುದರಲ್ಲಿ ಪಾಲ್ಗೊಳ್ಳುವುದಕ್ಕಿಂತಲೂ ಇನ್ಯಾವ ಹೆಚ್ಚಿನ ಆನಂದವು ಇದೆ?​—ಮತ್ತಾಯ 24:​21, NW; ಮಾರ್ಕ 13:10.

ಹುಡುಕುವ ಕೆಲಸದಲ್ಲಿ ಯಶಸ್ಸು

9. ಯೇಸು ತನ್ನ ಶಿಷ್ಯರಿಗೆ ಯಾವ ಸೂಚನೆಯನ್ನು ಕೊಟ್ಟನು ಮತ್ತು ಜನರು ರಾಜ್ಯದ ಸಂದೇಶಕ್ಕೆ ಹೇಗೆ ಪ್ರತಿಕ್ರಿಯಿಸಿದರು?

9 ಕೊಯ್ಲುಗಾರರೋಪಾದಿ ನಮ್ಮ ಆನಂದವನ್ನು ಹೆಚ್ಚಿಸುವ ಇನ್ನೊಂದು ಅಂಶವು, ಶಿಷ್ಯರಾಗಿ ಪರಿಣಮಿಸಿ ಕೊಯ್ಲಿನ ಕೆಲಸದಲ್ಲಿ ನಮ್ಮೊಂದಿಗೆ ಜೊತೆಗೂಡುವವರನ್ನು ಹುಡುಕುವುದರಲ್ಲಿ ಸಿಗುವ ಯಶಸ್ಸೇ ಆಗಿದೆ. ಹಿಂದೆ ಸಾ.ಶ. 31-32ರಲ್ಲಿ, ಯೇಸು ತನ್ನ ಶಿಷ್ಯರಿಗೆ ಸೂಚನೆ ಕೊಟ್ಟದ್ದು: ‘ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿರಿ [“ಹುಡುಕಿರಿ,” NW].’ (ಮತ್ತಾಯ 10:11) ಎಲ್ಲ ವ್ಯಕ್ತಿಗಳು ಯೋಗ್ಯರಾಗಿರಲಿಲ್ಲ. ಇದು ಅವರು ರಾಜ್ಯ ಸಂದೇಶಕ್ಕೆ ತೋರಿಸಿದ ಪ್ರತಿಕ್ರಿಯೆಯ ಮೂಲಕ ವ್ಯಕ್ತವಾಯಿತು. ಹಾಗಿದ್ದರೂ, ಜನರು ಎಲ್ಲೆಲ್ಲಿ ಇದ್ದರೋ ಅಲ್ಲೆಲ್ಲಾ ಯೇಸುವಿನ ಶಿಷ್ಯರು ಹುರುಪಿನಿಂದ ಸುವಾರ್ತೆಯನ್ನು ಸಾರಿದರು.

10. ಯೋಗ್ಯ ವ್ಯಕ್ತಿಗಳಿಗಾಗಿ ಹುಡುಕುವುದನ್ನು ಪೌಲನು ಹೇಗೆ ಮುಂದುವರಿಸಿದನು?

10 ಯೇಸುವಿನ ಮರಣ ಮತ್ತು ಪುನರುತ್ಥಾನದ ನಂತರ, ಯೋಗ್ಯ ವ್ಯಕ್ತಿಗಳಿಗಾಗಿ ಹುಡುಕುವ ಕೆಲಸವು ಹುರುಪಿನಿಂದ ಮುಂದುವರಿಯಿತು. ಪೌಲನು ಯೆಹೂದ್ಯರೊಂದಿಗೆ ಅವರ ಸಭಾಮಂದಿರಗಳಲ್ಲಿ ಮತ್ತು ಅಥೇನೆಯ ಪೇಟೆಯಲ್ಲಿದ್ದ ಜನರೊಂದಿಗೆ ತರ್ಕಿಸಿದನು. ಆ ಗ್ರೀಕ್‌ ನಗರದಲ್ಲಿ ಅರಿಯೊಪಾಗದ ಗುಡ್ಡದ ಮೇಲೆ ಅವನು ಸಾಕ್ಷಿಯನ್ನು ಕೊಟ್ಟಾಗ, “ಕೆಲವರು ಅವನನ್ನು ಅಂಟಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೊಪಾಗದ ಸಭೆಯವನಾದ ದಿಯೊನುಸ್ಯನೂ ದಾಮರಿಯೆಂಬಾಕೆಯೂ ಇನ್ನು ಕೆಲವರೂ ಇದ್ದರು.” ಪೌಲನು ಹೋದಲ್ಲೆಲ್ಲಾ ಅವನು “ಬಹಿರಂಗವಾಗಿ ಮತ್ತು ಮನೆಯಿಂದ ಮನೆ”ಗೆ ಸಾರುವುದರಲ್ಲಿಯೂ ಆದರ್ಶಪ್ರಾಯನಾಗಿದ್ದನು.​—ಅ. ಕೃತ್ಯಗಳು 17:​17, 34; 20:20, NW.

11. ಹಲವಾರು ವರ್ಷಗಳ ಹಿಂದೆ, ಶುಶ್ರೂಷೆಯನ್ನು ನಡೆಸಲು ಯಾವ ವಿಧಾನಗಳನ್ನು ಉಪಯೋಗಿಸಲಾಗಿತ್ತು?

11 ಹತ್ತೊಂಬತ್ತನೆಯ ಶತಮಾನದ ಅಂತಿಮ ದಶಕಗಳಲ್ಲಿ, ಯೋಗ್ಯ ವ್ಯಕ್ತಿಗಳಿಗಾಗಿ ಹುಡುಕುವ ಕೆಲಸದಲ್ಲಿ ಅಭಿಷಿಕ್ತ ಕ್ರೈಸ್ತರು ಧೈರ್ಯದಿಂದ ಭಾಗವಹಿಸಿದರು. “ಸಾರಲು ಅಭಿಷೇಕಿಸಲ್ಪಟ್ಟಿರುವುದು” ಎಂಬ ಶೀರ್ಷಿಕೆಯುಳ್ಳ ಲೇಖನದಲ್ಲಿ, ಜುಲೈ/ಆಗಸ್ಟ್‌ 1881ರ ಝಯನ್ಸ್‌ ವಾಚ್‌ ಟವರ್‌ ಹೇಳಿದ್ದು: “ಇವರೊಳಗಿಂದ ಕ್ರಿಸ್ತನ ಶರೀರವನ್ನು, ಅಂದರೆ ಜೊತೆ ಬಾಧ್ಯಸ್ಥರನ್ನು ಬೆಳೆಸಲಿಕ್ಕೋಸ್ಕರ, ‘ದೀನರಿಗೆ’ ಅಂದರೆ ಕೇಳಲು ಸಿದ್ಧರಾಗಿರುವವರು ಮತ್ತು ಶಕ್ತರಾಗಿರುವವರಿಗೆ ಸುವಾರ್ತೆಯನ್ನು ಸಾರುವ ಕೆಲಸವು ನಡೆಯುತ್ತಾ ಇದೆ.” ಅನೇಕವೇಳೆ, ಇಂಥ ಜನರು ಚರ್ಚಿನ ಆರಾಧನಾ ವಿಧಿಗಳನ್ನು ಮುಗಿಸಿ ಹೊರಬರುತ್ತಿರುವಾಗಲೇ ದೇವರ ಕೊಯ್ಲುಗಾರರು ಅವರ ಬಳಿಗೆ ಹೋಗಿ, ಯೋಗ್ಯ ವ್ಯಕ್ತಿಗಳಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಹೊರಡಿಸಲಿಕ್ಕಾಗಿ ರಚಿಸಲ್ಪಟ್ಟಿರುವ ಶಾಸ್ತ್ರೀಯ ಸಂದೇಶಗಳುಳ್ಳ ಟ್ರ್ಯಾಕ್ಟ್‌ಗಳನ್ನು ಕೊಡುತ್ತಿದ್ದರು. ಸಾಕ್ಷಿಕೊಡುವ ಈ ವಿಧಾನದ ಪರಿಣಾಮಕಾರಿತ್ವವನ್ನು ಜಾಗರೂಕತೆಯಿಂದ ಪುನಃ ಪರಿಗಣಿಸಿದ ನಂತರ, 1903, ಮೇ 15ರ ವಾಚ್‌ಟವರ್‌ ಪತ್ರಿಕೆಯು, ಕೊಯ್ಲುಗಾರರು “ಭಾನುವಾರ ಬೆಳಗ್ಗೆಗಳಂದು ಮನೆಯಿಂದ ಮನೆಗೆ ಹೋಗಿ” ಟ್ರ್ಯಾಕ್ಟ್‌ಗಳನ್ನು ವಿತರಿಸುವಂತೆ ಪ್ರೇರೇಪಿಸಿತು.

12. ನಮ್ಮ ಸಾರುವ ಕೆಲಸದ ಪರಿಣಾಮಕಾರಿತ್ವವನ್ನು ನಾವು ಹೇಗೆ ಹೆಚ್ಚಿಸಿದ್ದೇವೆ? ದೃಷ್ಟಾಂತಿಸಿರಿ.

12 ಇತ್ತೀಚಿನ ವರ್ಷಗಳಲ್ಲಿ ನಾವು ಜನರನ್ನು ಅವರ ಮನೆಗಳಲ್ಲಿ ಅಲ್ಲದೆ, ಬೇರೆ ಸ್ಥಳಗಳಲ್ಲೂ ಸಂಪರ್ಕಿಸುವ ಮೂಲಕ ನಮ್ಮ ಶುಶ್ರೂಷೆಯನ್ನು ವಿಸ್ತರಿಸಿದ್ದೇವೆ. ಆರ್ಥಿಕ ಪರಿಸ್ಥಿತಿಗಳಿಂದಾಗಿ ಮತ್ತು ವಿನೋದ ವಿಹಾರಕ್ಕಾಗಿ ಜನರು ಮನೆಯಿಂದ ದೂರಹೋಗುವುದರಿಂದ, ನಾವು ಸಾಮಾನ್ಯವಾಗಿ ಮನೆಗಳನ್ನು ಸಂದರ್ಶಿಸುವ ಸಮಯದಲ್ಲಿ ಅವರು ಮನೆಯಲ್ಲಿ ಇಲ್ಲದಿರುವ ದೇಶಗಳಲ್ಲಿ ಇದು ಅತಿ ಪರಿಣಾಮಕಾರಿಯಾಗಿ ಪರಿಣಮಿಸಿದೆ. ಇಂಗ್ಲೆಂಡ್‌ನ ಒಬ್ಬ ಸಾಕ್ಷಿ ಮತ್ತು ಅವಳ ಸಂಗಾತಿಯು, ಸಂದರ್ಶಕರು ಸಮುದ್ರ ತೀರಕ್ಕೆ ಬಂದು, ಅಲ್ಲಿ ಇಡೀ ದಿನವನ್ನು ಕಳೆದ ನಂತರ ಬಸ್‌ ಮೂಲಕ ಹಿಂದಿರುಗುತ್ತಿರುವುದನ್ನು ಗಮನಿಸಿದರು. ಅವರು ಧೈರ್ಯವನ್ನು ಒಟ್ಟುಗೂಡಿಸಿ, ಆ ಬಸ್‌ಗಳನ್ನು ಹತ್ತಿ, ಪ್ರಯಾಣಿಕರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ನೀಡಿದರು. ಒಂದೇ ತಿಂಗಳಿನಲ್ಲಿ ಅವರು 229 ಪ್ರತಿಗಳನ್ನು ವಿತರಿಸಿದರು. ಅವರು ವರದಿಸುವುದು: “ಸಮುದ್ರ ತೀರದಲ್ಲಾಗಲಿ, ವ್ಯಾಪಾರ ಕ್ಷೇತ್ರದಲ್ಲಾಗಲಿ ಸಾಕ್ಷಿನೀಡುವುದರ ಬಗ್ಗೆ ಅಥವಾ ನಮ್ಮ ಮುಂದೆ ಬರುವ ಬೇರಾವುದೇ ಪಂಥಾಹ್ವಾನದ ಬಗ್ಗೆ ನಮಗೆ ಈಗ ಸ್ವಲ್ಪವೂ ಭಯವಿಲ್ಲ, ಯಾಕೆಂದರೆ ಯೆಹೋವನು ಯಾವಾಗಲೂ ನಮ್ಮೊಂದಿಗಿದ್ದಾನೆಂದು ನಮಗೆ ಗೊತ್ತಿದೆ.” ಅವರು ಒಂದು ಪತ್ರಿಕಾ ಮಾರ್ಗವನ್ನು ಹಾಗೂ ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸಿದರು ಮತ್ತು ಅವರಿಬ್ಬರೂ ಆಕ್ಸಿಲಿಯರಿ ಪಯನೀಯರ್‌ ಸೇವೆಯಲ್ಲಿ ಭಾಗವಹಿಸಿದ್ದಾರೆ.

13. ಕೆಲವೊಂದು ಸ್ಥಳಗಳಲ್ಲಿ, ನಮ್ಮ ಶುಶ್ರೂಷೆಯಲ್ಲಿ ಈಗ ಯಾವ ಬದಲಾವಣೆಯನ್ನು ಮಾಡಬೇಕಾದ ಪರಿಸ್ಥಿತಿ ಬಂದಿದೆ?

13 ಯೋಗ್ಯ ಜನರನ್ನು ಹುಡುಕುವ ಕೆಲಸವು ಮುಂದುವರಿಯುತ್ತಾ ಹೋದಂತೆ, ಕೆಲವೊಂದು ಸ್ಥಳಗಳಲ್ಲಿ ನಮ್ಮ ಶುಶ್ರೂಷೆಯ ಬಗ್ಗೆ ನಾವು ಪುನಃ ಜಾಗರೂಕತೆಯಿಂದ ಯೋಚಿಸಬೇಕಾದೀತು. ಅನೇಕ ಸಾಕ್ಷಿಗಳು ರೂಢಿಗನುಸಾರ ಭಾನುವಾರ ಬೆಳಗ್ಗೆ ಮನೆಯಿಂದ ಮನೆಯ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಆ ಸಮಯದಲ್ಲಿ ಮನೆಯಲ್ಲಿರುವವರು ಇನ್ನೂ ಮಲಗಿರುವುದರಿಂದ, ಅಷ್ಟು ಬೇಗನೆ ಜನರ ಮನೆಗಳಿಗೆ ಹೋಗುವುದು ಕಡಿಮೆ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಆದುದರಿಂದ, ಅನೇಕ ಸಾಕ್ಷಿಗಳು ತಮ್ಮ ಶೆಡ್ಯೂಲಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ, ದಿನದ ಬೇರೊಂದು ಸಮಯದಲ್ಲಿ, ಅಂದರೆ ಪ್ರಾಯಶಃ ಕ್ರೈಸ್ತ ಕೂಟಗಳ ನಂತರ ಹುಡುಕುವ ಕೆಲಸವನ್ನು ಮಾಡುತ್ತಾರೆ. ಮತ್ತು ಈ ರೀತಿಯಲ್ಲಿ ಹುಡುಕುವುದು ಫಲಪ್ರದವಾಗಿ ಪರಿಣಮಿಸಿದೆ. ಕಳೆದ ವರ್ಷ ರಾಜ್ಯ ಘೋಷಕರ ಸಂಖ್ಯೆಯಲ್ಲಿ 2.3 ಪ್ರತಿಶತ ವೃದ್ಧಿಯಾಯಿತು. ಇದು ಕೊಯ್ಲಿನ ಯಜಮಾನನಿಗೆ ಗೌರವವನ್ನು ತರುತ್ತದೆ ಮತ್ತು ನಮಗೆ ಆನಂದವನ್ನು ಉಂಟುಮಾಡುತ್ತದೆ.

ಕೊಯ್ಲಿನ ಕೆಲಸದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ

14. ಯಾವ ಮನೋಭಾವದೊಂದಿಗೆ ನಾವು ನಮ್ಮ ಸಂದೇಶವನ್ನು ಪ್ರಸ್ತುತಪಡಿಸುತ್ತೇವೆ, ಮತ್ತು ಏಕೆ?

14 ನಮ್ಮ ಆನಂದಕ್ಕೆ ಇನ್ನೊಂದು ಕಾರಣವು, ನಾವು ಕೊಯ್ಲಿನ ಕೆಲಸದಲ್ಲಿ ತೋರಿಸುವ, ಶಾಂತಿಯನ್ನು ಕಾಪಾಡಿಕೊಳ್ಳುವ ಮನೋಭಾವವಾಗಿದೆ. ಯೇಸು ಹೇಳಿದ್ದು: “ಮನೆಯೊಳಕ್ಕೆ ಹೋಗುವಾಗ ಶುಭವಾಗಲಿ ಅನ್ನಿರಿ. ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು [“ಶಾಂತಿಯು,” NW] ಅವರಿಗೆ ಆಗಲಿ; ಅಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು [“ಶಾಂತಿಯು,” NW] ನಿಮಗೆ ಹಿಂದಕ್ಕೆ ಬರಲಿ.” (ಮತ್ತಾಯ 10:12, 13) ಹೀಬ್ರು ಭಾಷೆಯಲ್ಲಿ ಆ ಅಭಿನಂದನೆಯು ಮತ್ತು ಬೈಬಲಿನ ಗ್ರೀಕ್‌ ಭಾಷೆಯಲ್ಲಿ ಅದರ ಸಮಾನ ಪದಗಳೆರಡೂ, ‘ನಿನಗೆ ಒಳ್ಳೇದಾಗಲಿ’ ಎಂಬ ಅರ್ಥವುಳ್ಳವುಗಳಾಗಿವೆ. ನಾವು ಯಾರಿಗೆ ಸುವಾರ್ತೆಯನ್ನು ಸಾರುತ್ತೇವೊ ಅಂಥ ಜನರ ಬಳಿ ಹೋಗುವಾಗ ಆ ಮನೋಭಾವವು ನಮ್ಮನ್ನು ಮಾರ್ಗದರ್ಶಿಸುತ್ತದೆ. ಅವರು ರಾಜ್ಯ ಸಂದೇಶಕ್ಕೆ ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸುವರೆಂದು ನಾವು ಹಾರೈಸುತ್ತೇವೆ. ಹಾಗೆ ಪ್ರತಿಕ್ರಿಯಿಸುವವರು, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ತಿರುಗಿಕೊಂಡು, ದೇವರ ಚಿತ್ತವನ್ನು ಮಾಡುವಾಗ, ದೇವರೊಂದಿಗೆ ಪುನಃ ಶಾಂತಿಸಂಬಂಧವನ್ನು ಸ್ಥಾಪಿಸುವ ಪ್ರತೀಕ್ಷೆ ಅವರ ಮುಂದಿರುತ್ತದೆ. ಮತ್ತು ದೇವರೊಂದಿಗಿನ ಈ ಶಾಂತಿಯು ಅವರನ್ನು ನಿತ್ಯಜೀವಕ್ಕೆ ನಡೆಸುವುದು.​—ಯೋಹಾನ 17:3; ಅ. ಕೃತ್ಯಗಳು 3:19; 13:​38, 48; 2 ಕೊರಿಂಥ 5:​18-20.

15. ನಮ್ಮ ಸಾರುವ ಕೆಲಸದಲ್ಲಿ ಅಹಿತಕರವಾದ ಪ್ರತಿಕ್ರಿಯೆಯು ಸಿಗುವಾಗ, ನಾವು ಶಾಂತಿಪೂರ್ಣ ಮನೋಭಾವವನ್ನು ಹೇಗೆ ಕಾಪಾಡಿಕೊಳ್ಳಬಹುದು?

15 ನಮಗೆ ಸಿಗುವಂಥ ಪ್ರತಿಕ್ರಿಯೆಯು ಅಹಿತಕರವಾಗಿರುವಾಗ ನಾವು ಹೇಗೆ ಶಾಂತಿಯನ್ನು ಕಾಪಾಡಿಕೊಳ್ಳಬಹುದು? ಯೇಸು ನಿರ್ದೇಶಿಸಿದ್ದು: “ಆ ಮನೆಯವರು . . . ಅಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು [“ಶಾಂತಿಯು,” NW] ನಿಮಗೆ ಹಿಂದಕ್ಕೆ ಬರಲಿ.” (ಮತ್ತಾಯ 10:13) 70 ಮಂದಿ ಶಿಷ್ಯರನ್ನು ಸಾರಲು ಕಳುಹಿಸುವುದರ ಕುರಿತಾದ ಲೂಕನ ವೃತ್ತಾಂತದಲ್ಲಿ ಯೇಸುವಿನ ಈ ಹೇಳಿಕೆಯು ಇದೆ: “ಆಶೀರ್ವಾದಪಾತ್ರನು [“ಶಾಂತಿಯ ಮಿತ್ರನು,” NW] ಅಲ್ಲಿ ಇದ್ದರೆ ನಿಮ್ಮ ಆಶೀರ್ವಾದವು [“ಶಾಂತಿಯು,” NW] ಅವನ ಮೇಲೆ ನಿಲ್ಲುವದು; ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವದು.” (ಲೂಕ 10:6) ನಾವು ಜನರ ಬಳಿ ಸುವಾರ್ತೆಯನ್ನು ಕೊಂಡೊಯ್ಯುವಾಗ, ಅದನ್ನು ಒಂದು ಪ್ರಸನ್ನ ಮತ್ತು ಶಾಂತಿಭರಿತ ಮನೋಭಾವದೊಂದಿಗೆ ಮಾಡುವುದು ಯೋಗ್ಯವಾದದ್ದಾಗಿದೆ. ಮನೆಯವನು ಆಸಕ್ತಿಯನ್ನು ತೋರಿಸದಿರುವಾಗ, ಆಕ್ಷೇಪಿಸುವಾಗ, ಅಥವಾ ನಿರ್ದಯವಾಗಿ ಮಾತಾಡುವಾಗ, ನಮ್ಮ ಶಾಂತಿಯ ಸಂದೇಶವು ‘ನಮಗೆ ಹಿಂದಿರುಗುವಂತೆ’ ಆ ಸನ್ನಿವೇಶವು ಅನುಮತಿಸುತ್ತದೆ ಅಷ್ಟೇ. ಆದರೆ ಇದರಲ್ಲಿ ಯಾವುದೂ, ಯೆಹೋವನ ಪವಿತ್ರಾತ್ಮದ ಫಲವಾಗಿರುವ ಸಮಾಧಾನವನ್ನು ನಮ್ಮಿಂದ ಕಸಿದುಕೊಳ್ಳಲಾರದು.​—ಗಲಾತ್ಯ 5:​22, 23.

ಕೊಯ್ಲುಗಾರರಿಗಾಗಿ ಒಂದು ಒಳ್ಳೆಯ ಗುರಿ

16, 17. (ಎ) ಪುನರ್ಭೇಟಿಗಳನ್ನು ಮಾಡುವಾಗ ನಮ್ಮ ಗುರಿ ಏನಾಗಿರುತ್ತದೆ? (ಬಿ) ಬೈಬಲ್‌ ಪ್ರಶ್ನೆಗಳುಳ್ಳವರಿಗೆ ನಾವು ಹೇಗೆ ಸಹಾಯಮಾಡಬಹುದು?

16 ಕೊಯ್ಲುಗಾರರೋಪಾದಿ, ನಿತ್ಯಜೀವಕ್ಕಾಗಿ ಜನರನ್ನು ಒಟ್ಟುಗೂಡಿಸುವುದರಲ್ಲಿ ಪಾಲ್ಗೊಳ್ಳಲು ನಾವು ಹರ್ಷಿಸುತ್ತೇವೆ. ನಾವು ಒಬ್ಬ ವ್ಯಕ್ತಿಗೆ ಸುವಾರ್ತೆಯನ್ನು ಸಾರಿ, ಅವನು ಚೆನ್ನಾಗಿ ಪ್ರತಿಕ್ರಿಯಿಸಿ, ಹೆಚ್ಚನ್ನು ಕಲಿಯಲು ಬಯಸುತ್ತಾ “ಶಾಂತಿಯ ಮಿತ್ರ”ನಾಗಿ ಪರಿಣಮಿಸುವಾಗ ನಮಗೆಷ್ಟು ಆನಂದವಾಗುತ್ತದೆ! ಅವನಿಗೆ ಬೈಬಲಿನ ಕುರಿತು ಹಲವಾರು ಪ್ರಶ್ನೆಗಳಿರಬಹುದು ಮತ್ತು ಆ ಎಲ್ಲ ಪ್ರಶ್ನೆಗಳಿಗೆ ನಾವು ಒಂದೇ ಸಮಯದಲ್ಲಿ ಉತ್ತರಗಳನ್ನು ಕೊಡುವುದು ಅಸಾಧ್ಯವಾಗಿರಬಹುದು. ಮೊದಲನೆಯ ಭೇಟಿಯಲ್ಲೇ ತುಂಬ ದೀರ್ಘ ಸಮಯದ ವರೆಗೆ ಮಾತಾಡುವುದು ಅನುಚಿತವಾಗಿರುವುದರಿಂದ ನಾವೇನು ಮಾಡಬಹುದು? ಸುಮಾರು 60 ವರ್ಷಗಳ ಹಿಂದೆ ಶಿಫಾರಸ್ಸುಮಾಡಲ್ಪಟ್ಟಿದ್ದ ಒಂದು ಗುರಿಯನ್ನು ನಾವೂ ಇಡಬಹುದು.

17 “ಯೆಹೋವನ ಸಾಕ್ಷಿಗಳೆಲ್ಲರೂ, ಬೈಬಲಿನ ಆದರ್ಶ ಅಭ್ಯಾಸಗಳನ್ನು ನಡೆಸಲು ತಯಾರಾಗಿರಬೇಕು.” ಈ ಹೇಳಿಕೆಯು, 1937ರಿಂದ 1941ರ ವರೆಗೆ ಪ್ರಕಾಶಿಸಲ್ಪಟ್ಟ ಆದರ್ಶ ಅಭ್ಯಾಸ ಸೂಚನಾ ಪುಸ್ತಿಕೆಗಳ ಸರಣಿಯಲ್ಲಿ ಮೂರನೆಯ ಪುಸ್ತಿಕೆಯಲ್ಲಿತ್ತು. ಅದು ಹೀಗೆ ಮುಂದುವರಿಸಿತು: “ಎಲ್ಲ [ರಾಜ್ಯ] ಪ್ರಕಾಶಕರು ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸುವ ಸುಚಿತ್ತದ ಜನರಿಗೆ ಸಾಧ್ಯವಿರುವ ಪ್ರತಿಯೊಂದು ವಿಧದಲ್ಲಿ ಸಹಾಯಮಾಡಲು ಶ್ರದ್ಧೆಯುಳ್ಳವರಾಗಿರಬೇಕು. ವಿವಿಧ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ ಅಂಥ ವ್ಯಕ್ತಿಗಳನ್ನು ಪುನಃ ಪುನಃ ಭೇಟಿಮಾಡಬೇಕು . . . , ಮತ್ತು ಅನಂತರ . . . ಸಾಧ್ಯವಿರುವಷ್ಟು ಬೇಗನೆ ಒಂದು ಆದರ್ಶ ಅಭ್ಯಾಸವನ್ನು ಆರಂಭಿಸಬೇಕು.” ಹೌದು, ಪುನರ್ಭೇಟಿಗಳನ್ನು ಮಾಡುವ ನಮ್ಮ ಗುರಿಯು, ಒಂದು ಮನೆ ಬೈಬಲ್‌ ಅಭ್ಯಾಸವನ್ನು ಆರಂಭಿಸಿ, ಅದನ್ನು ಕ್ರಮವಾಗಿ ನಡೆಸುವುದೇ ಆಗಿದೆ. * ನಮ್ಮಲ್ಲಿ ಸ್ನೇಹಭಾವ ಮತ್ತು ಆ ಆಸಕ್ತ ವ್ಯಕ್ತಿಗಾಗಿ ಪ್ರೀತಿಭರಿತ ಚಿಂತೆಯಿರುವಲ್ಲಿ, ನಾವು ಚೆನ್ನಾಗಿ ತಯಾರಿಸಿ ಅಭ್ಯಾಸವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಅದು ನಮ್ಮನ್ನು ಪ್ರಚೋದಿಸುವುದು.

18. ಹೊಸಬರು ಯೇಸು ಕ್ರಿಸ್ತನ ಶಿಷ್ಯರಾಗುವಂತೆ ನಾವು ಹೇಗೆ ಸಹಾಯಮಾಡಬಹುದು?

18ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕ ಮತ್ತು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬಂಥ ಬ್ರೋಷರ್‌ಗಳ ಸಹಾಯದಿಂದ ನಾವು ಪರಿಣಾಮಕಾರಿ ಬೈಬಲ್‌ ಅಭ್ಯಾಸಗಳನ್ನು ನಡೆಸಿ, ಆಸಕ್ತ ವ್ಯಕ್ತಿಗಳು ಶಿಷ್ಯರಾಗುವಂತೆ ಸಹಾಯಮಾಡುವುದರಲ್ಲಿ ಪಾಲ್ಗೊಳ್ಳಬಲ್ಲೆವು. ಮಹಾ ಬೋಧಕನಾದ ಯೇಸು ಕ್ರಿಸ್ತನನ್ನು ನಾವು ಅನುಕರಿಸಲು ಪ್ರಯತ್ನಿಸುವಾಗ, ಆ ಬೈಬಲ್‌ ವಿದ್ಯಾರ್ಥಿಗಳು ನಮ್ಮ ಶಾಂತಿಪೂರ್ಣ, ಆನಂದಭರಿತ ನಡವಳಿಕೆ, ನಮ್ಮ ಪ್ರಾಮಾಣಿಕತೆ ಮತ್ತು ಯೆಹೋವನ ಮಟ್ಟಗಳು ಹಾಗೂ ನಿರ್ದೇಶನಗಳ ಕಡೆಗೆ ನಮಗಿರುವ ಗೌರವದಂಥ ಗುಣಗಳನ್ನೂ ಕಲಿಯುವರು. ನಾವು ಹೊಸಬರಿಗೆ ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಸಹಾಯಮಾಡುತ್ತಿರುವಾಗ, ಅವರನ್ನು ಪ್ರಶ್ನಿಸುವವರಿಗೆ ಅವರು ಹೇಗೆ ಉತ್ತರವನ್ನು ಕೊಡಬಹುದೆಂಬುದನ್ನೂ ಅವರಿಗೆ ಕಲಿಸೋಣ. (2 ತಿಮೊಥೆಯ 2:​1, 2; 1 ಪೇತ್ರ 2:21) ಸಾಂಕೇತಿಕ ಕೊಯ್ಲುಗಾರರೋಪಾದಿ, ಕಳೆದ ಸೇವಾ ವರ್ಷದಲ್ಲಿ ಲೋಕವ್ಯಾಪಕವಾಗಿ ಸರಾಸರಿ 47,66,631 ಮನೆ ಬೈಬಲ್‌ ಅಭ್ಯಾಸಗಳು ನಡೆಸಲ್ಪಟ್ಟದ್ದಕ್ಕಾಗಿ ನಾವು ಖಂಡಿತವಾಗಿಯೂ ಆನಂದಭರಿತರಾಗಿರಬಲ್ಲೆವು. ಮತ್ತು ಮನೆ ಬೈಬಲ್‌ ಅಭ್ಯಾಸದ ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಕೊಯ್ಲುಗಾರರಲ್ಲಿ ವೈಯಕ್ತಿಕವಾಗಿ ನಾವು ಒಬ್ಬರಾಗಿರುವಲ್ಲಿ ನಾವು ವಿಶೇಷವಾಗಿ ಆನಂದಭರಿತರಾಗಿರುವೆವು.

ಕೊಯ್ಲಿನಲ್ಲಿ ಹರ್ಷಿಸುತ್ತಾ ಇರಿ

19. ಯೇಸುವಿನ ಶುಶ್ರೂಷೆಯ ಸಮಯದಲ್ಲಿ ಮತ್ತು ತದನಂತರ ಸ್ವಲ್ಪ ಸಮಯದ ವರೆಗೆ ನಡೆದ ಕೊಯ್ಲಿನಲ್ಲಿ ಆನಂದಪಡಲು ಸಕಾರಣಗಳಿದ್ದವು ಏಕೆ?

19 ಯೇಸುವಿನ ಶುಶ್ರೂಷೆಯ ಸಮಯದಲ್ಲಿ ಮತ್ತು ತದನಂತರವೂ ಸ್ವಲ್ಪ ಸಮಯದ ವರೆಗೆ ನಡೆದ ಕೊಯ್ಲಿನ ಕುರಿತು ಆನಂದಪಡಲು ಸಕಾರಣಗಳಿದ್ದವು. ಆಗ ಅನೇಕರು ಸುವಾರ್ತೆಗೆ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸಿದರು. ವಿಶೇಷವಾಗಿ ಸಾ.ಶ. 33ರಲ್ಲಿ ಸುಮಾರು 3,000 ಮಂದಿ ಪೇತ್ರನ ನಿರ್ದೇಶನವನ್ನು ಸ್ವೀಕರಿಸಿ, ಯೆಹೋವನ ಪವಿತ್ರಾತ್ಮವನ್ನು ಪಡೆದು, ಆತ್ಮಿಕ ಇಸ್ರಾಯೇಲೆಂಬ ದೇವರ ಜನಾಂಗದ ಭಾಗವಾದಾಗ ಆ ಹರ್ಷಕ್ಕೆ ಎಲ್ಲೆಯೇ ಇರಲಿಲ್ಲ. ಹೌದು, ಅವರ ಸಂಖ್ಯೆ ಹೆಚ್ಚುತ್ತಾ ಹೋಯಿತು ಮತ್ತು “ಕರ್ತನು [“ಯೆಹೋವನು,” NW] ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲು ಅವರ ಮಂಡಲಿಗೆ” ಸೇರಿಸುತ್ತಾ ಹೋದಂತೆ, ಆನಂದವು ತುಂಬಿತುಳುಕಿತು.​—ಅ. ಕೃತ್ಯಗಳು 2:37-41, 46, 47; ಗಲಾತ್ಯ 6:16; 1 ಪೇತ್ರ 2:9.

20. ನಮ್ಮ ಕೊಯ್ಲಿನ ಕೆಲಸದಲ್ಲಿ ನಮಗೆ ಯಾವುದು ಅಪಾರವಾದ ಆನಂದವನ್ನು ಉಂಟುಮಾಡುತ್ತದೆ?

20 ಆ ಸಮಯದಲ್ಲಿ ಯೆಶಾಯನ ಈ ಪ್ರವಾದನೆಯು ನೆರವೇರುತ್ತಿತ್ತು: “ನೀನು [ಯೆಹೋವನು] ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ [“ಜನಾಂಗವನ್ನು ಜನಭರಿತಗೊಳಿಸಿದ್ದೀ,” NW] ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ; ಸುಗ್ಗಿಕಾಲದಲ್ಲಿ ಜನರು ಹರ್ಷಿಸುವ ಹಾಗೂ ಕೊಳ್ಳೆಯನ್ನು ಹಂಚಿಕೊಳ್ಳುವವರು ಹೆಚ್ಚಳಪಡುವ ಹಾಗೂ ನಿನ್ನ ಮುಂದೆ ಆನಂದಿಸುತ್ತಾರೆ.” (ಯೆಶಾಯ 9:3) ಅಭಿಷಿಕ್ತರ ‘ಜನಭರಿತ ಜನಾಂಗದ’ ಸಂಖ್ಯೆಯು ಈಗ ಕಾರ್ಯತಃ ಪೂರ್ಣಗೊಂಡಿರುವುದಾದರೂ, ಇತರ ಕೊಯ್ಲುಗಾರರ ಸಂಖ್ಯೆಯು ಪ್ರತಿ ವರ್ಷ ಬೆಳೆಯುತ್ತಾ ಇರುವುದನ್ನು ನಾವು ಗಮನಿಸುವಾಗ, ನಮಗೆ ಅಪಾರ ಆನಂದವಾಗುತ್ತದೆ.​—ಕೀರ್ತನೆ 4:7; ಜೆಕರ್ಯ 8:23; ಯೋಹಾನ 10:16.

21. ಮುಂದಿನ ಲೇಖನದಲ್ಲಿ ನಾವೇನನ್ನು ಚರ್ಚಿಸುವೆವು?

21 ಕೊಯ್ಲಿನ ಕೆಲಸದಲ್ಲಿ ಹರ್ಷಿಸುತ್ತಾ ಇರಲು ನಮ್ಮ ಬಳಿ ನಿಶ್ಚಿತವಾಗಿಯೂ ಬಲವಾದ ಕಾರಣಗಳಿವೆ. ನಮ್ಮ ನಿರೀಕ್ಷೆಯ ಸಂದೇಶ, ಯೋಗ್ಯ ವ್ಯಕ್ತಿಗಳಿಗಾಗಿರುವ ನಮ್ಮ ಹುಡುಕಾಟ, ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವ ನಮ್ಮ ಮನೋಭಾವದಂತಹ ಅಂಶಗಳು ಕೊಯ್ಲುಗಾರರಾದ ನಮಗೆ ಆನಂದವನ್ನು ತರುತ್ತವೆ. ಹೌದು, ಅನೇಕರಿಂದ ನಮಗೆ ಪ್ರತಿಕೂಲ ಪ್ರತಿಕ್ರಿಯೆಯು ಸಿಗುತ್ತದೆ. ಅಪೊಸ್ತಲ ಯೋಹಾನನು ಸಹ ಇದನ್ನು ಅನುಭವಿಸಿದನು. ‘ದೇವರ ವಾಕ್ಯ ಮತ್ತು ಯೇಸುವಿನ ವಿಷಯವಾದ ಸಾಕ್ಷಿ’ಯನ್ನು ಕೊಡುತ್ತಿದ್ದದ್ದಕ್ಕಾಗಿ ಅವನನ್ನು ಪತ್ಮೊಸ್‌ ದ್ವೀಪದಲ್ಲಿ ಬಂಧಿಸಲಾಗಿತ್ತು. (ಪ್ರಕಟನೆ 1:9) ಹಾಗಾದರೆ, ಹಿಂಸೆ ಮತ್ತು ವಿರೋಧವನ್ನು ಎದುರಿಸುವಾಗ ನಾವು ನಮ್ಮ ಆನಂದವನ್ನು ಹೇಗೆ ಕಾಪಾಡಿಕೊಳ್ಳಬಹುದು? ಇಂದು ನಾವು ಯಾರಿಗೆ ಸಾರುತ್ತೇವೊ ಅವರಲ್ಲಿ ಅನೇಕರು ತೋರಿಸುವ ಕಠೋರ ಮನೋಭಾವವನ್ನು ಎದುರಿಸುವಂತೆ ನಮಗೆ ಯಾವುದು ಸಹಾಯಮಾಡುವುದು? ನಮ್ಮ ಮುಂದಿನ ಲೇಖನವು, ಈ ಪ್ರಶ್ನೆಗಳನ್ನು ಉತ್ತರಿಸುವುದರಲ್ಲಿ ಶಾಸ್ತ್ರೀಯ ಸಹಾಯವನ್ನು ಕೊಡುವುದು.

[ಪಾದಟಿಪ್ಪಣಿ]

^ ಪ್ಯಾರ. 17 ಆರಂಭದಲ್ಲಿ, ಆಸಕ್ತ ಜನರ ಗುಂಪುಗಳು ಒಟ್ಟುಗೂಡಬಹುದಾದ ಸ್ಥಳಗಳಲ್ಲಿ ಅಭ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು. ಆದರೆ ಬೇಗನೆ, ಒಬ್ಬೊಬ್ಬ ವ್ಯಕ್ತಿಯೊಂದಿಗೂ, ಕುಟುಂಬಗಳೊಂದಿಗೂ ಅಭ್ಯಾಸಗಳನ್ನು ನಡೆಸಲಾಯಿತು.​—ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಎಂಬ ಪುಸ್ತಕದ 574ನೇ ಪುಟವನ್ನು ನೋಡಿರಿ.

ನೀವು ಹೇಗೆ ಉತ್ತರಿಸುವಿರಿ?

• ಸಾಂಕೇತಿಕ ಕೊಯ್ಲಿನ ಕೆಲಸ ಏನಾಗಿದೆ?

• ನಾವು ಯಾವ ರೀತಿಯ ಸಂದೇಶವನ್ನು ಸಾರುತ್ತೇವೆ?

• ಶಿಷ್ಯರಿಗಾಗಿ ಹುಡುಕುವ ಕೆಲಸವು ಏಕೆ ಯಶಸ್ವಿಯಾಗಿದೆ?

• ಕೊಯ್ಲಿನ ಕೆಲಸದಲ್ಲಿ ನಾವು ಹೇಗೆ ಶಾಂತಿಯನ್ನು ಕಾಪಾಡಿಕೊಳ್ಳುತ್ತೇವೆ?

• ನಾವು ಕೊಯ್ಲಿನ ಕೆಲಸದಲ್ಲಿ ಏಕೆ ಹರ್ಷಿಸುತ್ತಾ ಇರುತ್ತೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 12, 13ರಲ್ಲಿರುವ ಚಿತ್ರಗಳು]

ಮೊದಲನೆಯ ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಸಾರುವುದು

[ಪುಟ 13ರಲ್ಲಿರುವ ಚಿತ್ರಗಳು]

ಪೌಲನಂತೆ, ಸದ್ಯದ ದಿನದ ಕೊಯ್ಲುಗಾರರು ಎಲ್ಲ ಕಡೆಗಳಲ್ಲಿ ಜನರಿಗೆ ಸುವಾರ್ತೆಯನ್ನು ತಲಪಿಸಲು ಪ್ರಯತ್ನಿಸುತ್ತಾರೆ

[ಪುಟ 13ರಲ್ಲಿರುವ ಚಿತ್ರ]

ಪ್ರಸನ್ನ ಮನೋಭಾವದೊಂದಿಗೆ ಸುವಾರ್ತೆಯನ್ನು ಘೋಷಿಸಿರಿ