ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆರಿಜನ್‌ ಅವನ ಬೋಧನೆಯು ಚರ್ಚಿನ ಮೇಲೆ ಹೇಗೆ ಪ್ರಭಾವ ಬೀರಿತು?

ಆರಿಜನ್‌ ಅವನ ಬೋಧನೆಯು ಚರ್ಚಿನ ಮೇಲೆ ಹೇಗೆ ಪ್ರಭಾವ ಬೀರಿತು?

ಆರಿಜನ್‌ ಅವನ ಬೋಧನೆಯು ಚರ್ಚಿನ ಮೇಲೆ ಹೇಗೆ ಪ್ರಭಾವ ಬೀರಿತು?

“ಅಪೊಸ್ತಲರ ನಂತರ ಚರ್ಚಿನ ಅತಿ ಮಹಾನ್‌ ಶಿಕ್ಷಕ.” ಲ್ಯಾಟಿನ್‌ ವಲ್ಗೇಟ್‌ ಬೈಬಲಿನ ತರ್ಜುಮೆಗಾರನಾದ ಜೆರೋಮ್‌, ಈ ಮಾತುಗಳಿಂದ ಮೂರನೆಯ ಶತಮಾನದ ದೇವತಾಶಾಸ್ತ್ರಜ್ಞನಾಗಿದ್ದ ಆರಿಜನ್‌ನನ್ನು ಹೊಗಳಿದನು. ಆದರೆ ಎಲ್ಲರೂ ಆರಿಜನ್‌ನಿಗೆ ಇಷ್ಟೊಂದು ಮಾನವನ್ನು ಕೊಡುತ್ತಿರಲಿಲ್ಲ. ಕೆಲವರು ಅವನನ್ನು, ಯಾವುದರಿಂದ ಪಾಷಂಡ ತತ್ವಗಳು ಚಿಗುರಿ ಬೆಳೆದವೊ ಆ ದುಷ್ಟ ಬೇರಿನಂತೆ ದೃಷ್ಟಿಸಿದರು. 17ನೆಯ ಶತಮಾನದ ಒಬ್ಬ ಲೇಖಕನ ಮಾತುಗಳಿಂದ, ಆರಿಜನ್‌ನ ಟೀಕಾಕಾರರು ಹೀಗೆ ಹೇಳುತ್ತಿದ್ದರೆಂದು ತಿಳಿದುಬರುತ್ತದೆ: “ಅವನ ಬೋಧನೆಯಲ್ಲಿ ಹೆಚ್ಚಿನದ್ದು ಅಸಂಬದ್ಧವೂ ಹಾನಿಕರವೂ ಆಗಿದ್ದು, ಹಾವಿನಂಥ ಪ್ರಾಣಾಂತಕ ವಿಷವಾಗಿದೆ ಮತ್ತು ಇದನ್ನು ಅವನು ಲೋಕದೊಳಗೆ ಕಾರಿದನು.” ಅವನ ಮರಣದ ಸುಮಾರು ಮೂರು ಶತಮಾನಗಳ ನಂತರ, ಆರಿಜನ್‌ ಒಬ್ಬ ಪಾಷಂಡವಾದಿ ಎಂದು ಘೋಷಿಸಲಾಯಿತು.

ಆದರೆ ಆರಿಜನ್‌ ಜನರ ಮೆಚ್ಚುಗೆ ಹಾಗೂ ದ್ವೇಷಕ್ಕೆ ಗುರಿಯಾದದ್ದು ಏಕೆ? ಚರ್ಚಿನ ಬೋಧನೆಯ ವಿಕಸನದ ಮೇಲೆ ಅವನು ಯಾವ ಪ್ರಭಾವವನ್ನು ಬೀರಿದನು?

ಚರ್ಚ್‌ಗಾಗಿ ಹುರುಪುಳ್ಳವನು

ಸುಮಾರು ಸಾ.ಶ. 185ರಲ್ಲಿ, ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ನಗರದಲ್ಲಿ ಆರಿಜನ್‌ ಹುಟ್ಟಿದನು. ಅವನು ಗ್ರೀಕ್‌ ಸಾಹಿತ್ಯದಲ್ಲಿ ಸಮಗ್ರವಾದ ಶಿಕ್ಷಣವನ್ನು ಪಡೆದನು. ಆದರೆ ಅವನ ತಂದೆಯಾದ ಲೀಯೊನಾಡಿಸನು, ಅವನು ಶಾಸ್ತ್ರವಚನಗಳನ್ನು ಅಭ್ಯಾಸಮಾಡುವುದರಲ್ಲೂ ಅಷ್ಟೇ ಪ್ರಯತ್ನವನ್ನು ಮಾಡುವಂತೆ ಅವನನ್ನು ಬಲವಂತಪಡಿಸಿದನು. ಆರಿಜನ್‌ 17 ವರ್ಷ ಪ್ರಾಯದವನಾಗಿದ್ದಾಗ, ಒಬ್ಬ ವ್ಯಕ್ತಿಯು ತನ್ನ ಧರ್ಮವನ್ನು ಬದಲಾಯಿಸುವುದು ಒಂದು ಅಪರಾಧ ಎಂಬ ನಿಯಮವನ್ನು ರೋಮನ್‌ ಸಾಮ್ರಾಟನು ಜಾರಿಗೆ ತಂದನು. ಆರಿಜನ್‌ನ ತಂದೆಯು ಒಬ್ಬ ಕ್ರೈಸ್ತನಾಗಿ ಮತಾಂತರಗೊಂಡಿದ್ದರಿಂದ, ಅವನನ್ನು ಸೆರೆಮನೆಗೆ ದೊಬ್ಬಲಾಯಿತು. ಯೌವನದ ಹುರುಪಿನಿಂದ ಆರಿಜನ್‌ ಸಹ ಅವನೊಂದಿಗೆ ಸೆರೆಮನೆಯಲ್ಲಿ ಜೊತೆಗೂಡಿ, ಹುತಾತ್ಮನಾಗಬೇಕೆಂದು ದೃಢಸಂಕಲ್ಪಮಾಡಿದನು. ಇದನ್ನು ನೋಡಿ, ಆರಿಜನ್‌ನ ತಾಯಿ ಅವನು ಮನೆಯನ್ನು ಬಿಟ್ಟುಹೋಗದಂತೆ ಅವನ ಬಟ್ಟೆಗಳನ್ನು ಬಚ್ಚಿಟ್ಟಳು. ಪತ್ರದ ಮೂಲಕ ಆರಿಜನ್‌ ತನ್ನ ತಂದೆಗೆ ಹೀಗೆ ಬೇಡಿಕೊಂಡನು: “ನಮಗೋಸ್ಕರ ನಿಮ್ಮ ಮನಸ್ಸನ್ನು ಬದಲಾಯಿಸದಂತೆ ಜಾಗರೂಕರಾಗಿರಿ.” ಲೀಯೊನಾಡಿಸ್‌ ದೃಢವಾಗಿ ನಿಂತನು ಮತ್ತು ಹತಿಸಲ್ಪಟ್ಟನು. ಆದುದರಿಂದ ಅವನ ಕುಟುಂಬವು ನಿರ್ಗತಿಕವಾಯಿತು. ಆದರೆ ಆರಿಜನ್‌ ಈಗಾಗಲೇ ತುಂಬ ಶಿಕ್ಷಣವನ್ನು ಪಡೆದುಕೊಂಡಿದ್ದದರಿಂದ, ಗ್ರೀಕ್‌ ಸಾಹಿತ್ಯವನ್ನು ಕಲಿಸುವ ಮೂಲಕ, ತನ್ನ ತಾಯಿ ಮತ್ತು ಆರು ಮಂದಿ ತಮ್ಮಂದಿರನ್ನು ಪೋಷಿಸಲು ಶಕ್ತನಾಗಿದ್ದನು.

ಕ್ರೈಸ್ತತ್ವವು ಹಬ್ಬದಂತೆ ತಡೆಗಟ್ಟುವುದೇ ಸಾಮ್ರಾಟನ ಉದ್ದೇಶವಾಗಿತ್ತು. ಸಾಮ್ರಾಟನ ನಿಯಮಕ್ಕೆ, ವಿದ್ಯಾರ್ಥಿಗಳಲ್ಲದೆ ಶಿಕ್ಷಕರೂ ಗುರಿಯಾಗಿದ್ದದರಿಂದ, ಎಲ್ಲ ಕ್ರೈಸ್ತ ಧಾರ್ಮಿಕ ಶಿಕ್ಷಕರು ಅಲೆಕ್ಸಾಂಡ್ರಿಯವನ್ನು ಬಿಟ್ಟು ಪಲಾಯನಗೈದರು. ಶಾಸ್ತ್ರೀಯ ಬೋಧನೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದ ಕ್ರೈಸ್ತೇತರರು, ಸಹಾಯಕ್ಕಾಗಿ ಯುವ ಆರಿಜನ್‌ನ ಬಳಿ ಬಂದಾಗ, ಇದು ತನಗೆ ದೇವರಿಂದ ಸಿಕ್ಕಿರುವ ನೇಮಕವೆಂದೆಣಿಸುತ್ತಾ ಅವನು ಆ ಕೆಲಸವನ್ನು ಸ್ವೀಕರಿಸಿದನು. ಅವನ ವಿದ್ಯಾರ್ಥಿಗಳಲ್ಲಿ ಅನೇಕರು ಹುತಾತ್ಮರಾದರು. ಇವರಲ್ಲಿ ಕೆಲವರು ತಮ್ಮ ಅಭ್ಯಾಸವನ್ನು ಇನ್ನೂ ಮುಗಿಸಿರಲಿಲ್ಲ. ಆರಿಜನ್‌ ತನ್ನ ಸ್ವಂತ ಜೀವವನ್ನು ಅಪಾಯಕ್ಕೊಡ್ಡುತ್ತಾ, ತನ್ನ ವಿದ್ಯಾರ್ಥಿಗಳು ಒಬ್ಬ ನ್ಯಾಯಾಧೀಶನ ಮುಂದಿರಲಿ, ಸೆರೆಮನೆಯಲ್ಲಿರಲಿ, ಅಥವಾ ಇನ್ನೇನು ಹತಿಸಲ್ಪಡಲಿಕ್ಕಿರಲಿ, ಅವರನ್ನು ಬಹಿರಂಗವಾಗಿ ಉತ್ತೇಜಿಸಿದನು. ಅವರನ್ನು ಕೊಲ್ಲಲು ಕೊಂಡೊಯ್ಯಲಾಗುತ್ತಿದ್ದಾಗ, ಆರಿಜನ್‌ “ತುಂಬ ಧೈರ್ಯದಿಂದ ಅವರಿಗೆ ಒಂದು ಮುತ್ತನ್ನು ಕೊಟ್ಟು ಅಭಿವಂದಿಸುತ್ತಿದ್ದನು” ಎಂದು ನಾಲ್ಕನೆಯ ಶತಮಾನದ ಇತಿಹಾಸಗಾರನಾದ ಯುಸೀಬಿಯಸ್‌ ವರದಿಸುತ್ತಾನೆ.

ಕ್ರೈಸ್ತರಲ್ಲದ ಅನೇಕರು ಆರಿಜನ್‌ನ ಮೇಲೆ ಸಿಟ್ಟಿಗೆದ್ದರು. ತಮ್ಮ ಸ್ನೇಹಿತರ ಮತಾಂತರ ಮತ್ತು ಮರಣಕ್ಕೆ ಅವನನ್ನೇ ಜವಾಬ್ದಾರನನ್ನಾಗಿ ಮಾಡಿದರು. ಎಷ್ಟೋ ಸಾರಿ ಅವನು ದೊಂಬಿಗಳಿಂದ ಮತ್ತು ಹಿಂಸಾತ್ಮಕ ಮರಣದಿಂದ ಕೂದಲೆಳೆಯಷ್ಟರಲ್ಲಿ ತಪ್ಪಿಸಿಕೊಂಡನು. ಅವನನ್ನು ಬೆನ್ನಟ್ಟಿಕೊಂಡು ಬರುತ್ತಿದ್ದವರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅವನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡುತ್ತಾ ಇರಬೇಕಾಗಿತ್ತಾದರೂ, ಆರಿಜನ್‌ ತನ್ನ ಕಲಿಸುವ ಕೆಲಸವನ್ನು ಬಿಟ್ಟುಕೊಡಲಿಲ್ಲ. ಅಂಥ ನಿರ್ಭೀತಿ ಮತ್ತು ಸಮರ್ಪಣಾಭಾವವು, ಅಲೆಕ್ಸಾಂಡ್ರಿಯದ ಬಿಷಪನಾಗಿದ್ದ ಡಿಮೆಟ್ರಿಯಸ್‌ನನ್ನು ತುಂಬ ಪ್ರಭಾವಿಸಿತು. ಹೀಗಿರುವುದರಿಂದ, ಆರಿಜನ್‌ ಕೇವಲ 18 ವರ್ಷದವನಾಗಿದ್ದಾಗ, ಡಿಮೆಟ್ರಿಯಸ್‌ ಅವನನ್ನು ಅಲೆಕ್ಸಾಂಡ್ರಿಯದಲ್ಲಿದ್ದ ಧಾರ್ಮಿಕ ಶಿಕ್ಷಣದ ಶಾಲೆಯ ಮುಖ್ಯಸ್ಥನನ್ನಾಗಿ ನೇಮಿಸಿದನು.

ಕಟ್ಟಕಡೆಗೆ, ಆರಿಜನ್‌ ಒಬ್ಬ ವಿಖ್ಯಾತ ವಿದ್ವಾಂಸನೂ, ಅನೇಕಾನೇಕ ಕೃತಿಗಳನ್ನು ಬರೆದ ಲೇಖಕನೂ ಆದನು. ಅವನು 6,000 ಪುಸ್ತಕಗಳನ್ನು ಬರೆದಿದ್ದಾನೆಂದು ಕೆಲವರು ಹೇಳುತ್ತಾರಾದರೂ, ಇದು ಒಂದು ಅತಿಶಯೋಕ್ತಿಯಾಗಿರಬಹುದು. ಹೆಕ್ಸಪ್ಲಾ ಎಂಬ ಹೀಬ್ರು ಶಾಸ್ತ್ರವಚನಗಳ 50 ಸಂಪುಟಗಳ ಬೃಹತ್ಗಾತ್ರದ ಆವೃತ್ತಿಗಾಗಿ ಅವನು ಸುಪ್ರಸಿದ್ಧನಾಗಿದ್ದಾನೆ. ಆರಿಜನ್‌ನು ಹೆಕ್ಸಪ್ಲಾವನ್ನು ಆರು ಸಮಾಂತರ ಕಾಲಮ್‌ಗಳಾಗಿ ವಿಭಾಗಿಸಿದನು. ಅವುಗಳಲ್ಲಿ, (1) ಹೀಬ್ರು ಮತ್ತು ಅರಮೇಯೀಕ್‌ ಪಾಠ, (2) ಆ ಪಾಠದ ಗ್ರೀಕ್‌ ಲಿಪ್ಯಂತರ, (3) ಅಕ್ವಿಲ್ಲನ ಗ್ರೀಕ್‌ ಭಾಷಾಂತರ, (4) ಸಿಮಕಸ್‌ನ ಗ್ರೀಕ್‌ ಭಾಷಾಂತರ, (5) ಹೀಬ್ರು ಪಾಠದೊಂದಿಗೆ ಹೆಚ್ಚು ನಿಖರವಾಗಿ ಹೊಂದಿಕೊಳ್ಳಲು ಆರಿಜನ್‌ನು ತಿದ್ದುಪಡಿ ಮಾಡಿದಂಥ ಗ್ರೀಕ್‌ ಸೆಪ್ಟ್ಯುಅಜಿಂಟ್‌, ಮತ್ತು (6) ಥೀಯಡೋಟೀಯಸನ ಗ್ರೀಕ್‌ ಭಾಷಾಂತರ ಅಡಕವಾಗಿತ್ತು. “ಈ ಎಲ್ಲ ಗ್ರಂಥಪಾಠಗಳನ್ನು ಒಟ್ಟಿಗೆ ಜೋಡಿಸಿಡುವ ಮೂಲಕ, ಒಬ್ಬ ಗ್ರೀಕ್‌ ವಾಚಕನು ಕೇವಲ ಸೆಪ್ಟ್ಯುಅಜಿಂಟನ್ನು ಓದಿದರೆ ಗಲಿಬಿಲಿಗೊಳ್ಳುವ ಅಥವಾ ತಪ್ಪಭಿಪ್ರಾಯಪಡಬಹುದಾದ ಅನೇಕ ವಚನಭಾಗಗಳ ಅರ್ಥದ ಮೇಲೆ ಬೆಳಕನ್ನು ಪ್ರಕಾಶಿಸುವಂತೆ ಆರಿಜನ್‌ ನಿರೀಕ್ಷಿಸಿದನು” ಎಂದು ಬೈಬಲ್‌ ವಿದ್ವಾಂಸ ಜಾನ್‌ ಹಾರ್ಟ್‌ ಬರೆದನು.

‘ಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗುವುದು’

ಹಾಗಿದ್ದರೂ, ಮೂರನೆಯ ಶತಮಾನದಲ್ಲಿದ್ದ ಅಸ್ತವ್ಯಸ್ತ ಧಾರ್ಮಿಕ ವಾತಾವರಣವು, ಶಾಸ್ತ್ರಗಳನ್ನು ಕಲಿಸುವುದರ ಕುರಿತಾದ ಆರಿಜನ್‌ನ ದೃಷ್ಟಿಕೋನವನ್ನು ತುಂಬ ಪ್ರಭಾವಿಸಿತು. ಕ್ರೈಸ್ತಪ್ರಪಂಚವು ಇನ್ನೂ ಶೈಶವಾವಸ್ಥೆಯಲ್ಲಿದ್ದರೂ, ಅದು ಈಗಾಗಲೇ ಅಶಾಸ್ತ್ರೀಯವಾದ ನಂಬಿಕೆಗಳಿಂದ ಮಲಿನಗೊಂಡಿತ್ತು ಮತ್ತು ಅದರ ಚೆದರಿಹೋಗಿದ್ದ ಚರ್ಚುಗಳು ಭಿನ್ನಭಿನ್ನವಾದ ಬೋಧನೆಗಳನ್ನು ಕಲಿಸುತ್ತಿದ್ದವು.

ಆರಿಜನ್‌ನು ಈ ಅಶಾಸ್ತ್ರೀಯವಾದ ಬೋಧನೆಗಳಲ್ಲಿ ಕೆಲವೊಂದನ್ನು ಸ್ವೀಕರಿಸುತ್ತಾ, ಅವುಗಳನ್ನು ಅಪೊಸ್ತಲರ ಬೋಧನೆ ಎಂದು ಕರೆದನು. ಆದರೆ ಬೇರೆ ಪ್ರಶ್ನೆಗಳಿಗೆ ಅವನು ತನ್ನ ಊಹೆಗನುಸಾರ ಉತ್ತರಗಳನ್ನು ಕೊಡಲು ಹಿಂಜರಿಯುತ್ತಿರಲಿಲ್ಲ. ಆ ಸಮಯದಲ್ಲಿ ಅವನ ಅನೇಕ ವಿದ್ಯಾರ್ಥಿಗಳು, ಸಮಕಾಲೀನ ತತ್ವಜ್ಞಾನ ಸಂಬಂಧಿತ ವಿವಾದಾಂಶಗಳೊಂದಿಗೆ ಹೋರಾಡುತ್ತಿದ್ದರು. ಅವರಿಗೆ ಸಹಾಯಮಾಡುವ ಪ್ರಯತ್ನದಲ್ಲಿ, ತನ್ನ ಎಳೆಯ ವಿದ್ಯಾರ್ಥಿಗಳ ವಿಚಾರಗಳನ್ನು ರೂಪಿಸುತ್ತಿದ್ದ, ವಿವಿಧ ತತ್ವಜ್ಞಾನಿ ಗುಂಪುಗಳನ್ನು ಆರಿಜನ್‌ ಜಾಗರೂಕತೆಯಿಂದ ಅಭ್ಯಾಸಮಾಡಿದನು. ತನ್ನ ವಿದ್ಯಾರ್ಥಿಗಳಿಗಿದ್ದ ತತ್ವಜ್ಞಾನ ಸಂಬಂಧಿತ ಪ್ರಶ್ನೆಗಳಿಗೆ ಅವನು ತೃಪ್ತಿದಾಯಕ ಉತ್ತರಗಳನ್ನು ಕೊಡಲಾರಂಭಿಸಿದನು.

ಬೈಬಲ್‌ ಮತ್ತು ತತ್ವಜ್ಞಾನವನ್ನು ಒಂದಕ್ಕೊಂದು ಸರಿಹೊಂದಿಸುವ ಪ್ರಯತ್ನದಲ್ಲಿ, ಶಾಸ್ತ್ರಗಳ ಅರ್ಥವನ್ನು ತಿಳಿಸುವುದಕ್ಕಾಗಿ ಆರಿಜನ್‌ನು, ವಚನಗಳ ಗೂಢಾರ್ಥವನ್ನು ತಿಳಿಸುವ ವಿಧಾನದ ಮೇಲೆ ತುಂಬ ಅವಲಂಬಿಸಿದನು. ಶಾಸ್ತ್ರಗಳಿಗೆ ಅಕ್ಷರಶಃ ಅರ್ಥವಿರಬೇಕೆಂದೇನಿಲ್ಲ, ಅದಕ್ಕೆ ಯಾವಾಗಲೂ ಆತ್ಮಿಕ ಅರ್ಥವಿರುತ್ತದೆಂದು ಅವನು ನೆನಸುತ್ತಿದ್ದನು. ಒಬ್ಬ ವಿದ್ವಾಂಸನು ಹೇಳಿದಂತೆ, ಆರಿಜನ್‌ನು “ಬೈಬಲಿನ ಅರ್ಥವನ್ನು ತಿಳಿಸುತ್ತಿರುವಾಗ ತನ್ನ ಸ್ವಂತ ದೇವತಾಶಾಸ್ತ್ರಜ್ಞ ಪದ್ಧತಿಗೆ ಸರಿಹೋಗುತ್ತಿದ್ದ ಬೈಬಲೇತರ ವಿಚಾರಗಳನ್ನು ಸೇರಿಸುವ ಮಾಧ್ಯಮವನ್ನು” ಇದು ಒದಗಿಸಿತು. ಮತ್ತು ಇದು, ಆರಿಜನ್‌ “ತಾನು ಬೈಬಲಿನ ವಿಚಾರವನ್ನು ವಿಶೇಷ ಉತ್ಸಾಹ ಮತ್ತು ನಂಬಿಗಸ್ತಿಕೆಯಿಂದ ಅರ್ಥವಿವರಣೆ ಮಾಡುವವನು ಎಂದು ಹೇಳಿಕೊಳ್ಳುವಂತೆ (ಮತ್ತು ಯಥಾರ್ಥವಾಗಿ ಭಾವಿಸುವಂತೆ) ಮಾಡಿತು.”

ಆರಿಜನ್‌ ತನ್ನ ವಿದ್ಯಾರ್ಥಿಗಳಲ್ಲೊಬ್ಬನಿಗೆ ಬರೆದ ಒಂದು ಪತ್ರವು, ಅವನ ಯೋಚನಾಧಾಟಿಯ ಕುರಿತು ಒಳನೋಟವನ್ನು ಕೊಡುತ್ತದೆ. ಆರಿಜನ್‌ ಹೇಳಿದ್ದೇನೆಂದರೆ, ಐಗುಪ್ತದಿಂದ ತಂದ ಚಿನ್ನದಿಂದ ಇಸ್ರಾಯೇಲ್ಯರು ಯೆಹೋವನ ಆಲಯಕ್ಕಾಗಿ ಪಾತ್ರೆಗಳನ್ನು ತಯಾರಿಸಿದರು. ತಾನು ಕ್ರೈಸ್ತತ್ವವನ್ನು ಕಲಿಸಲು ಗ್ರೀಕ್‌ ತತ್ವಜ್ಞಾನವನ್ನು ಬಳಸುತ್ತಿರುವುದಕ್ಕೆ ಅದರಲ್ಲಿ ಗೂಢಾರ್ಥದ ಬೆಂಬಲವಿದೆಯೆಂದು ಅವನು ಹೇಳಿದನು. ಅವನು ಬರೆದುದು: “ಐಗುಪ್ತ್ಯರು ಸರಿಯಾದ ರೀತಿಯಲ್ಲಿ ಬಳಸದಿದ್ದ ವಸ್ತುಗಳನ್ನು ಐಗುಪ್ತದಿಂದ ತಂದದ್ದು ಇಸ್ರಾಯೇಲ್ಯರಿಗೆ ಎಷ್ಟು ಉಪಯುಕ್ತವಾಗಿತ್ತು. ಹೀಬ್ರು ಜನರು ದೇವರ ವಿವೇಕದಿಂದ ಮಾರ್ಗದರ್ಶಿಸಲ್ಪಟ್ಟು, ಅವುಗಳನ್ನು ದೇವರ ಸೇವೆಗಾಗಿ ಉಪಯೋಗಿಸಿದರು.” ಹೀಗೆ ಆರಿಜನ್‌ನು ತನ್ನ ವಿದ್ಯಾರ್ಥಿಯು, “ಕ್ರೈಸ್ತತ್ವಕ್ಕಾಗಿ ತಯಾರಿಯೋಪಾದಿ ಅಥವಾ ಅಭ್ಯಾಸಮಾಡಲಿಕ್ಕಾಗಿರುವ ಒಂದು ವಿಷಯದೋಪಾದಿ ಯಾವುದೇ ಸಂಗತಿಯನ್ನು ಗ್ರೀಕರ ತತ್ವಜ್ಞಾನದಿಂದ ಹೀರಿ ತೆಗೆಯುವಂತೆ” ಉತ್ತೇಜಿಸಿದನು.

ಬೈಬಲಿನ ಅರ್ಥವಿವರಣೆಯ ಕುರಿತಾದ ಈ ಅನಿರ್ಬಂಧಿತ ದೃಷ್ಟಿಕೋನದಿಂದಾಗಿ, ಕ್ರೈಸ್ತ ಬೋಧನೆ ಮತ್ತು ಗ್ರೀಕ್‌ ತತ್ವಜ್ಞಾನದ ನಡುವಣ ವ್ಯತ್ಯಾಸವನ್ನು ಗುರುತಿಸುವುದು ಕಷ್ಟಕರವಾಯಿತು. ಉದಾಹರಣೆಗಾಗಿ, ಪ್ರಥಮ ತತ್ವಗಳ ಮೇಲೆ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಆರಿಜನ್‌, ‘ಯಾವುದೇ ಆರಂಭವಿಲ್ಲದೆ ಹುಟ್ಟಿದ ಏಕಜಾತ ಪುತ್ರನೆಂದು’ ಯೇಸುವಿನ ಕುರಿತು ವರ್ಣಿಸಿದನು. ಮತ್ತು ಅವನು ಕೂಡಿಸಿದ್ದು: ‘ಅವನ ಉತ್ಪತ್ತಿಯು ನಿತ್ಯವೂ ಸದಾಕಾಲದ್ದೂ ಆಗಿದೆ. ಅವನು ಒಬ್ಬ ಪುತ್ರನಾಗಿ ಮಾಡಲ್ಪಟ್ಟಿರುವುದು ಯಾವುದೇ ಬಾಹ್ಯ ಕೃತ್ಯದಿಂದ, ಅಂದರೆ ಜೀವಶ್ವಾಸವನ್ನು ಪಡೆದಿರುವುದರಿಂದ ಅಲ್ಲ, ಬದಲಾಗಿ ದೇವರ ಜೀವಾಳವಾಗಿರುವುದರಿಂದಲೇ.’

ಆರಿಜನ್‌ನಿಗೆ ಬೈಬಲಿನಲ್ಲೆಲ್ಲೂ ಈ ವಿಚಾರವು ಕಂಡುಬರಲಿಲ್ಲ. ಏಕೆಂದರೆ ಯೆಹೋವನ ಏಕಜಾತ ಮಗನು ‘ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನು’ ಮತ್ತು “ದೇವರ ಸೃಷ್ಟಿಗೆ ಮೂಲನೂ” ಆಗಿದ್ದಾನೆಂದು ಶಾಸ್ತ್ರಗಳು ಕಲಿಸುತ್ತವೆ. (ಕೊಲೊಸ್ಸೆ 1:15; ಪ್ರಕಟನೆ 3:14) ಧಾರ್ಮಿಕ ಇತಿಹಾಸಗಾರನಾದ ಅಗಸ್ಟಸ್‌ ನೀಯಾಂಡರ್‌ಗನುಸಾರ, ಆರಿಜನ್‌ನಿಗೆ “ನಿತ್ಯ ಉತ್ಪತ್ತಿಯ” ಈ ಕಲ್ಪನೆ ಬಂದದ್ದು, “ಪ್ಲೇಟೊ ಸಂಬಂಧಿತ ಶಾಲೆಯಲ್ಲಿ ಅವನಿಗೆ ಸಿಕ್ಕಿದ್ದ ತತ್ವಜ್ಞಾನಸಂಬಂಧಿತ ಶಿಕ್ಷಣದ” ಮೂಲಕವೇ. ಹೀಗೆ ಆರಿಜನ್‌ನು ‘ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿಹೋಗಬಾರದು’ ಎಂಬ ಮೂಲಭೂತ ಶಾಸ್ತ್ರೀಯ ತತ್ವವನ್ನು ಉಲ್ಲಂಘಿಸಿದನು.​—1 ಕೊರಿಂಥ 4:6.

ಒಬ್ಬ ಪಾಷಂಡಿಯೋಪಾದಿ ಖಂಡಿಸಲ್ಪಟ್ಟದ್ದು

ಒಬ್ಬ ಶಿಕ್ಷಕನೋಪಾದಿ ಆರಿಜನ್‌ನು ಕಳೆದ ಆರಂಭದ ವರ್ಷಗಳಲ್ಲಿ, ಅಲೆಕ್ಸಾಂಡ್ರಿಯದ ಒಂದು ಆಡಳಿತ ಸಭೆಯು ಅವನನ್ನು ಪಾದ್ರಿಯ ಸ್ಥಾನದಿಂದ ತೆಗೆದುಹಾಕಿತು. ಆರಿಜನ್‌ನ ಬೆಳೆಯುತ್ತಿದ್ದ ಪ್ರಸಿದ್ಧಿಯು ಬಿಷಪ್‌ ಡಿಮೆಟ್ರಿಯಸನ ಕಣ್ಣು ಕುಕ್ಕಿದ್ದರಿಂದ ಹೀಗಾಗಿರಬಹುದು. ಅಲ್ಲಿಂದ ಆರಿಜನ್‌ ಪ್ಯಾಲೆಸ್ಟೀನ್‌ಗೆ ಸ್ಥಳಾಂತರಿಸಿದನು. ಅಲ್ಲಿ, ಕ್ರೈಸ್ತ ಬೋಧನೆಯ ಹೆಸರುವಾಸಿ ಸಮರ್ಥಕನೆಂದು ಅವನಿಗೆ ಸಿಕ್ಕಿದ ಅಪಾರವಾದ ಮೆಚ್ಚುಗೆ ಹಾಗೆಯೇ ಉಳಿಯಿತು ಮತ್ತು ಅವನು ಅಲ್ಲಿಯೇ ಒಬ್ಬ ಪಾದ್ರಿಯಾಗಿ ಮುಂದುವರಿದನು. ವಾಸ್ತವದಲ್ಲಿ, ಯೂರೋಪಿನಲ್ಲಿ “ಪಾಷಂಡವಾದಗಳು” ಎದ್ದಾಗ, ತಪ್ಪುಮಾಡಿರುವ ಪಾದ್ರಿಗಳು ಸಾಂಪ್ರದಾಯಿಕತೆಗೆ ಹಿಂದಿರುಗುವಂತೆ ಮನಗಾಣಿಸಲು ಆರಿಜನ್‌ನನ್ನು ಕರೆಸಲಾಗುತ್ತಿತ್ತು. ಸಾ.ಶ. 254ರಲ್ಲಿ ಆರಿಜನ್‌ನ ಮರಣದ ಬಳಿಕ, ಅವನ ಹೆಸರು ವಿಶೇಷವಾಗಿ ಅಪಕೀರ್ತಿಗೊಳಗಾಯಿತು. ಏಕೆ?

ನಾಮಮಾತ್ರದ ಕ್ರೈಸ್ತ ಧರ್ಮವು ಒಂದು ಪ್ರಮುಖ ಧರ್ಮವಾದ ಬಳಿಕ, ಚರ್ಚು ಯಾವುದನ್ನು ಸಾಂಪ್ರದಾಯಿಕ ಬೋಧನೆಯೆಂದು ಅಂಗೀಕರಿಸಿತೊ ಅದನ್ನು ಹೆಚ್ಚು ನಿಖರವಾಗಿ ಅರ್ಥನಿರೂಪಿಸಲಾಯಿತು. ಹೀಗೆ, ದೇವತಾಶಾಸ್ತ್ರಜ್ಞರ ಮುಂದಿನ ಪೀಳಿಗೆಗಳು, ಆರಿಜನ್‌ನ ಊಹಾತ್ಮಕ ಮತ್ತು ಕೆಲವೊಮ್ಮೆ ನಿಖರವಲ್ಲದ ತತ್ವಜ್ಞಾನಿ ದೃಷ್ಟಿಕೋನಗಳನ್ನು ಅಂಗೀಕರಿಸಲಿಲ್ಲ. ಈ ಕಾರಣದಿಂದ ಅವನ ಬೋಧನೆಗಳು ಚರ್ಚಿನೊಳಗೆ ಕಟುವಾದ ವಾಗ್ವಾದಗಳನ್ನು ಉಂಟುಮಾಡಿದವು. ಈ ವಾದವಿವಾದಗಳನ್ನು ಇತ್ಯರ್ಥಗೊಳಿಸಿ, ಚರ್ಚ್‌ನ ಐಕ್ಯವನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ಚರ್ಚು ಆರಿಜನ್‌ನ ಮೇಲೆ ಪಾಷಂಡವಾದದ ಅಪವಾದವನ್ನು ಹೊರಿಸಿತು.

ಆರಿಜನ್‌ ಒಬ್ಬನೇ ಈ ತಪ್ಪುಗಳನ್ನು ಮಾಡಲಿಲ್ಲ. ವಾಸ್ತವದಲ್ಲಿ, ಕ್ರಿಸ್ತನ ಶುದ್ಧ ಬೋಧನೆಗಳಿಂದ ಪಥಭ್ರಷ್ಟವಾಗುವುದರ ಬಗ್ಗೆ ಬೈಬಲ್‌ ಮುಂತಿಳಿಸಿತ್ತು. ಈ ಧರ್ಮಭ್ರಷ್ಟತೆಯು ಪ್ರಥಮ ಶತಮಾನದ ಅಂತ್ಯದಷ್ಟಕ್ಕೆ, ಯೇಸುವಿನ ಅಪೊಸ್ತಲರೆಲ್ಲರೂ ಸತ್ತಬಳಿಕ ಹುಲುಸಾಗಿ ಬೆಳೆಯಲಾರಂಭಿಸಿತು. (2 ಥೆಸಲೊನೀಕ 2:​6, 7) ಕಟ್ಟಕಡೆಗೆ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಕೆಲವರು ತಮ್ಮನ್ನು “ಸಂಪ್ರದಾಯವಾದಿಗಳು” ಎಂದು ಹೇಳಿಕೊಳ್ಳುತ್ತಾ, ಬೇರೆಯವರೆಲ್ಲರನ್ನೂ “ಪಾಷಂಡವಾದಿಗಳು” ಎಂದು ಘೋಷಿಸಿದರು. ಆದರೆ ವಾಸ್ತವದಲ್ಲಿ, ಕ್ರೈಸ್ತಪ್ರಪಂಚವೇ ನಿಜ ಕ್ರೈಸ್ತತ್ವವನ್ನು ಬಿಟ್ಟು ಅಡ್ಡಹಾದಿಯನ್ನು ಹಿಡಿದಿತ್ತು.

“ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆ”

ಆರಿಜನ್‌ನ ಅನೇಕ ಊಹಾಪೋಹಗಳ ಮಧ್ಯೆ, ಅವನ ಕೃತಿಗಳಲ್ಲಿ ಉಪಯುಕ್ತವಾದ ಅಂಶಗಳೂ ಇದ್ದವು. ಉದಾಹರಣೆಗಾಗಿ, ಹೆಕ್ಸಪ್ಲಾದಲ್ಲಿ ದೇವರ ಹೆಸರನ್ನು, ಟೆಟ್ರಗ್ರಾಮಟನ್‌ ಎಂದು ಕರೆಯಲಾಗುವ ಅದರ ಮೂಲ ನಾಲ್ಕು ಅಕ್ಷರಗಳುಳ್ಳ ಹೀಬ್ರು ಶಬ್ದರೂಪವನ್ನು ಹಾಗೆಯೇ ಇಡಲಾಗಿದೆ. ಆದಿ ಕ್ರೈಸ್ತರಿಗೆ ಯೆಹೋವ ಎಂಬ ದೇವರ ವೈಯಕ್ತಿಕ ಹೆಸರಿನ ಬಗ್ಗೆ ತಿಳಿದಿತ್ತು ಮತ್ತು ಅವರು ಅದನ್ನು ಉಪಯೋಗಿಸುತ್ತಿದ್ದರೆಂಬ ಪುರಾವೆಯನ್ನು ಇದು ಕೊಡುತ್ತದೆ. ಹಾಗಿದ್ದರೂ, ಥಿಯಾಫಿಲಸ್‌ ಎಂಬ ಐದನೆಯ ಶತಮಾನದ ಒಬ್ಬ ಚರ್ಚ್‌ ಪ್ರಮುಖನು ಒಮ್ಮೆ ಎಚ್ಚರಿಸಿದ್ದು: “ಆರಿಜನ್‌ನ ಕೃತಿಗಳು, ಪ್ರತಿಯೊಂದು ವಿಧದ ಹೂವು ಇರುವ ಒಂದು ಹುಲ್ಲುಗಾವಲಿನಂತಿದೆ. ನಾನು ಅಲ್ಲಿ ಯಾವುದೇ ಸುಂದರ ಹೂವನ್ನು ನೋಡುವಲ್ಲಿ ಅದನ್ನು ಕಿತ್ತುಕೊಳ್ಳುತ್ತೇನೆ. ಆದರೆ ಅದು ಮುಳ್ಳಿನಿಂದ ಕೂಡಿದ್ದಾಗಿ ತೋರುವಲ್ಲಿ, ವಿಷದ ಮುಳ್ಳಿನಂತೆ ನಾನು ಅದರಿಂದ ಸಾಧ್ಯವಿರುವಷ್ಟು ದೂರವಿರುತ್ತೇನೆ.”

ಬೈಬಲ್‌ ಬೋಧನೆಗಳನ್ನು ಗ್ರೀಕ್‌ ತತ್ವಜ್ಞಾನದೊಂದಿಗೆ ಬೆರೆಸುವ ಮೂಲಕ, ಆರಿಜನ್‌ನ ದೇವತಾಶಾಸ್ತ್ರವು ತಪ್ಪುಗಳಿಂದ ಅಸ್ತವ್ಯಸ್ತವಾಯಿತು, ಮತ್ತು ಕ್ರೈಸ್ತಪ್ರಪಂಚಕ್ಕೆ ಅದರ ಫಲಿತಾಂಶಗಳು ವಿಪತ್ಕಾರಕವಾಗಿದ್ದವು. ಉದಾಹರಣೆಗಾಗಿ, ಆರಿಜನ್‌ನ ಹುಚ್ಚಾಬಟ್ಟೆ ಊಹಾಪೋಹಗಳಲ್ಲಿ ಹೆಚ್ಚಿನವುಗಳನ್ನು ಅನಂತರ ತಿರಸ್ಕರಿಸಲಾಗಿದ್ದರೂ, “ನಿತ್ಯ ಉತ್ಪತ್ತಿಯ” ಕುರಿತಾದ ಅವನ ಅಭಿಪ್ರಾಯಗಳು, ತ್ರಯೈಕ್ಯದ ಬೈಬಲೇತರ ಬೋಧನೆಗೆ ತಳಪಾಯವನ್ನು ಹಾಕಲು ಸಹಾಯಮಾಡಿದವು. ಮೊದಲನೆಯ ಮೂರು ಶತಮಾನಗಳ ಚರ್ಚು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “[ಆರಿಜನ್‌ನಿಂದ ಪರಿಚಯಿಸಲ್ಪಟ್ಟ] ತತ್ವಜ್ಞಾನದ ರುಚಿಯು, ಬೇಗನೆ ಆರಿಹೋಗುವಂತೆ ಉದ್ದೇಶಿಸಲ್ಪಟ್ಟಿರಲಿಲ್ಲ.” ಫಲಿತಾಂಶವೇನಾಗಿತ್ತು? “ಕ್ರೈಸ್ತ ನಂಬಿಕೆಯ ಸರಳತೆಯು ಭ್ರಷ್ಟಗೊಳಿಸಲ್ಪಟ್ಟಿತು ಮತ್ತು ತಪ್ಪುಗಳ ಮಹಾಪೂರವು ಚರ್ಚಿನೊಳಗೆ ಹರಿಯಿತು.”

ಆರಿಜನ್‌ನಾದರೊ, ಅಪೊಸ್ತಲ ಪೌಲನ ಬುದ್ಧಿವಾದಕ್ಕೆ ಕಿವಿಗೊಟ್ಟು, ‘ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆಮಾತುಗಳಿಗೂ ವಿವಾದಗಳಿಗೂ ದೂರವಾಗಿರುವ’ ಮೂಲಕ ಈ ಧರ್ಮಭ್ರಷ್ಟತೆಯನ್ನು ಹೆಚ್ಚಿಸುವುದನ್ನು ತಪ್ಪಿಸಬಹುದಿತ್ತು. ಅದರ ಬದಲು, ತನ್ನ ಬೋಧನೆಯಲ್ಲಿ ಹೆಚ್ಚಿನದ್ದನ್ನು ಅಂಥ ‘ಜ್ಞಾನದ’ ಮೇಲೆ ಆಧರಿಸುವ ಮೂಲಕ, ಆರಿಜನ್‌ನು ‘ಕ್ರಿಸ್ತನಂಬಿಕೆಯಿಂದ ಭ್ರಷ್ಟನಾದನು.’​—1 ತಿಮೊಥೆಯ 6:20, 21; ಕೊಲೊಸ್ಸೆ 2:8.

[ಪುಟ 31ರಲ್ಲಿರುವ ಚಿತ್ರ]

ಆರಿಜನ್‌ನ “ಹೆಕ್ಸಪ್ಲಾ,” ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ದೇವರ ಹೆಸರು ಉಪಯೋಗಿಸಲ್ಪಟ್ಟಿತ್ತೆಂಬುದನ್ನು ತೋರಿಸುತ್ತದೆ

[ಕೃಪೆ]

Published by permission of the Syndics of Cambridge University Library, T-S 12.182

[ಪುಟ 29ರಲ್ಲಿರುವ ಚಿತ್ರ ಕೃಪೆ]

Culver Pictures