ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊಯ್ಲಿನ ಕೆಲಸದೊಂದಿಗೆ ಮುಂದೊತ್ತಿರಿ!

ಕೊಯ್ಲಿನ ಕೆಲಸದೊಂದಿಗೆ ಮುಂದೊತ್ತಿರಿ!

ಕೊಯ್ಲಿನ ಕೆಲಸದೊಂದಿಗೆ ಮುಂದೊತ್ತಿರಿ!

“ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು.”​—ಕೀರ್ತನೆ 126:5.

1. ಇಂದು, ‘ಕೊಯ್ಲಿಗೆ ಕೆಲಸದವರನ್ನು ಕಳುಹಿಸಬೇಕೆಂದು ಯಜಮಾನನನ್ನು ಬೇಡಿಕೊಳ್ಳಬೇಕು’ ಏಕೆ?

ಯೇಸು ಕ್ರಿಸ್ತನು ಗಲಿಲಾಯದಲ್ಲಿ ತನ್ನ ಮೂರನೆಯ ಸಾರುವಿಕೆಯ ಸಂಚಾರವನ್ನು ಮುಗಿಸಿದ ನಂತರ ತನ್ನ ಶಿಷ್ಯರಿಗೆ ಹೀಗಂದನು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ.” (ಮತ್ತಾಯ 9:37) ಯೂದಾಯದಲ್ಲೂ ಸ್ಥಿತಿಯು ಹೀಗೆಯೇ ಇತ್ತು. (ಲೂಕ 10:2) ಇದು ಸುಮಾರು 2,000 ವರ್ಷಗಳ ಹಿಂದಿನ ಮಾತಾಗಿರುವುದರಿಂದ, ಇಂದು ಸ್ಥಿತಿಯು ಹೇಗಿದೆ? ಕಳೆದ ಸೇವಾ ವರ್ಷದಲ್ಲಿ, 60,00,000ಕ್ಕಿಂತಲೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳು, ಲೋಕದ 600,00,00,000 ಜನರ ನಡುವೆ ಕೊಯ್ಲಿನ ಕೆಲಸದಲ್ಲಿ ಮುಂದೊತ್ತಿದರು. ಮತ್ತು ಈ ಲೋಕದ ಜನರಲ್ಲಿ ಅನೇಕರು, “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ” ಹೋಗಿದ್ದಾರೆ. ಆದುದರಿಂದಲೇ, ‘ಯಜಮಾನನನ್ನು​—ನಿನ್ನ ಬೆಳೆಗೆ [“ಕೊಯ್ಲಿಗೆ,” NW] ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳುವಂತೆ’ ಯೇಸು ಕೊಟ್ಟ ಉತ್ತೇಜನವು ಶತಮಾನಗಳ ಹಿಂದೆ ಎಷ್ಟು ಪ್ರಾಮುಖ್ಯವಾಗಿತ್ತೊ, ಈಗಲೂ ಅಷ್ಟೇ ಪ್ರಾಮುಖ್ಯವಾಗಿದೆ.​—ಮತ್ತಾಯ 9:​36, 38.

2. ಯಾವುದು ಜನರ ಗಮನವನ್ನು ನಮ್ಮತ್ತ ಸೆಳೆಯುತ್ತದೆ?

2 ಬೆಳೆಯ ಯಜಮಾನನಾಗಿರುವ ಯೆಹೋವ ದೇವರು, ಹೆಚ್ಚಿನ ಕೆಲಸಗಾರರನ್ನು ಕಳುಹಿಸುವಂತೆ ಮಾಡಿದ ಬೇಡಿಕೆಯನ್ನು ಉತ್ತರಿಸಿದ್ದಾನೆ. ದೇವರಿಂದ ನಿರ್ದೇಶಿಸಲ್ಪಟ್ಟಿರುವ ಈ ಕೊಯ್ಲಿನ ಕೆಲಸದಲ್ಲಿ ಪಾಲ್ಗೊಳ್ಳುವುದು ಎಷ್ಟು ಆನಂದದಾಯಕವಾದದ್ದಾಗಿದೆ! ರಾಷ್ಟ್ರಗಳಿಗೆ ಹೋಲಿಸುವಾಗ ನಮ್ಮ ಸಂಖ್ಯೆಯು ತೀರ ಕಡಿಮೆಯಾಗಿರುವುದಾದರೂ, ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಚಟುವಟಿಕೆಯಲ್ಲಿ ನಮ್ಮ ಹುರುಪಿನ ಪಾಲ್ಗೊಳ್ಳುವಿಕೆಯು, ಲೋಕವು ನಮ್ಮತ್ತ ಗಮನವನ್ನು ಹರಿಸುವಂತೆ ಮಾಡುತ್ತದೆ. ಅನೇಕ ದೇಶಗಳ ವಾರ್ತಾಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಪದೇ ಪದೇ ತಿಳಿಸಲಾಗುತ್ತದೆ. ಉದಾಹರಣೆಗಾಗಿ, ಒಂದು ಟೆಲಿವಿಷನ್‌ ನಾಟಕದಲ್ಲಿ ಬಾಗಿಲಿನ ಕರೆಗಂಟೆ ಒತ್ತಲ್ಪಟ್ಟರೆ, ‘ಯೆಹೋವನ ಸಾಕ್ಷಿಗಳು ಬಂದಿರಬೇಕು’ ಎಂದು ಪಾತ್ರಧಾರಿಗಳಲ್ಲಿ ಯಾರಾದರೊಬ್ಬರು ಹೇಳುತ್ತಾರೆ. ಹೌದು, ಸಾಂಕೇತಿಕ ಕೊಯ್ಲುಗಾರರೋಪಾದಿ ನಾವು ನಡೆಸುವ ಕ್ರೈಸ್ತ ಚಟುವಟಿಕೆಯು, ಈ 21ನೆಯ ಶತಮಾನದಲ್ಲಿ ಸುಪ್ರಸಿದ್ಧವಾಗಿದೆ.

3. (ಎ) ಪ್ರಥಮ ಶತಮಾನದಲ್ಲಿ ನಡೆದ ರಾಜ್ಯ ಸಾರುವಿಕೆಯ ಚಟುವಟಿಕೆಯನ್ನೂ ಗಮನಿಸಲಾಗಿತ್ತೆಂದು ನಮಗೆ ಹೇಗೆ ಗೊತ್ತು? (ಬಿ) ದೇವದೂತರು ನಮ್ಮ ಶುಶ್ರೂಷೆಯನ್ನು ಬೆಂಬಲಿಸುತ್ತಾರೆಂದು ನಾವು ಏಕೆ ಹೇಳಬಹುದು?

3 ಲೋಕವು, ಪ್ರಥಮ ಶತಮಾನದ ರಾಜ್ಯ ಸಾರುವಿಕೆಯ ಚಟುವಟಿಕೆಗಳನ್ನು ಸಹ ಗಮನಿಸಿತು ಮತ್ತು ಸುವಾರ್ತೆಯ ಆ ಘೋಷಕರನ್ನು ಹಿಂಸಿಸಿತು. ಹೀಗಿರುವುದರಿಂದ, ಅಪೊಸ್ತಲ ಪೌಲನು ಬರೆದುದು: “ದೇವರು ಅಪೊಸ್ತಲರಾದ ನಮ್ಮನ್ನು ಮರಣವಿಧಿ ಹೊಂದಿದವರನ್ನೋ ಎಂಬಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ; ನಾವು [ಅಪೊಸ್ತಲರು] ದೇವದೂತರಿಗೂ ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ನೋಟವಾದೆವು.” (1 ಕೊರಿಂಥ 4:9) ಹಾಗೆಯೇ, ಹಿಂಸೆಯ ಎದುರಿನಲ್ಲೂ ರಾಜ್ಯ ಘೋಷಕರೋಪಾದಿ ನಾವು ಪಟ್ಟುಬಿಡದೇ ಮುಂದುವರಿಯುವುದರಿಂದ, ಲೋಕದ ಗಮನವು ನಮ್ಮ ಮೇಲೆ ಬೀಳುತ್ತದೆ ಮತ್ತು ಇದು ದೇವದೂತರಿಗೂ ಮಹತ್ವಪೂರ್ಣ ಸಂಗತಿಯಾಗಿಬಿಡುತ್ತದೆ. ಪ್ರಕಟನೆ 14:6 ಹೇಳುವುದು: “ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು [ಅಪೊಸ್ತಲ ಯೋಹಾನನು] ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.” ಹೌದು, ನಮ್ಮ ಕೊಯ್ಲಿನ ಕೆಲಸದಲ್ಲಿ ಅಂದರೆ ನಮ್ಮ ಶುಶ್ರೂಷೆಯಲ್ಲಿ ನಮಗೆ ದೇವದೂತರ ಬೆಂಬಲವಿದೆ!​—ಇಬ್ರಿಯ 1:​13, 14.

‘ನಿಮ್ಮನ್ನು ಹಗೆಮಾಡುವರು’

4, 5. (ಎ) ಯೇಸು ತನ್ನ ಶಿಷ್ಯರಿಗೆ ಯಾವ ಎಚ್ಚರಿಕೆಯನ್ನು ಕೊಟ್ಟನು? (ಬಿ) ದೇವರ ಸದ್ಯದ ದಿನದ ಸೇವಕರನ್ನು ಏಕೆ ‘ಹಗೆಮಾಡಲಾಗುತ್ತದೆ’?

4 ಯೇಸುವಿನ ಅಪೊಸ್ತಲರು ಕೊಯ್ಲುಗಾರರೋಪಾದಿ ಕೆಲಸಮಾಡಲು ಕಳುಹಿಸಲ್ಪಟ್ಟಾಗ, ‘ಸರ್ಪಗಳಂತೆ ಜಾಣರೂ, ಪಾರಿವಾಳಗಳಂತೆ ನಿಷ್ಕಪಟಿಗಳೂ’ ಆಗಿರುವಂತೆ ಅವನು ಕೊಟ್ಟ ಸೂಚನೆಯನ್ನು ಪಾಲಿಸಿದರು. ಯೇಸು ಕೂಡಿಸಿ ಹೇಳಿದ್ದು: “ಜನರ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ; ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. . . . ಮತ್ತು ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.”​—ಮತ್ತಾಯ 10:16-22.

5 ಇಂದು ‘ನಮ್ಮನ್ನು ಹಗೆಮಾಡಲಾಗುತ್ತದೆ,’ ಏಕೆಂದರೆ “ಲೋಕವೆಲ್ಲವು ಕೆಡುಕನ” ಅಂದರೆ ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿದೆ.” ಮತ್ತು ಇವನು ದೇವರ ಹಾಗೂ ಆತನ ಜನರ ಮುಖ್ಯ ಶತ್ರುವಾಗಿದ್ದಾನೆ. (1 ಯೋಹಾನ 5:19) ನಮ್ಮ ಶತ್ರುಗಳು ನಮ್ಮ ಆತ್ಮಿಕ ಸಮೃದ್ಧಿಯನ್ನು ಗಮನಿಸುತ್ತಾರಾದರೂ, ಅದಕ್ಕಾಗಿ ಯೆಹೋವನಿಗೆ ಕೀರ್ತಿಯನ್ನು ಸಲ್ಲಿಸಲು ನಿರಾಕರಿಸುತ್ತಾರೆ. ನಾವು ಕೊಯ್ಲಿನ ಕೆಲಸದಲ್ಲಿ ಆನಂದದಿಂದ ಪಾಲ್ಗೊಳ್ಳುತ್ತಿರುವಾಗ, ನಮ್ಮ ಸಂತೋಷಭರಿತ, ನಗುಮುಖಗಳನ್ನು ವಿರೋಧಿಗಳು ಗಮನಿಸುತ್ತಾರೆ. ನಮ್ಮ ಒಗ್ಗಟ್ಟನ್ನು ನೋಡಿ ಅವರು ಬೆರಗಾಗುತ್ತಾರೆ! ವಾಸ್ತವದಲ್ಲಿ, ಅವರು ಬೇರೊಂದು ದೇಶಕ್ಕೆ ಹೋಗುವಾಗ, ಅಲ್ಲಿಯೂ ಯೆಹೋವನ ಸಾಕ್ಷಿಗಳು ತಮ್ಮ ಸ್ವಂತ ನಾಡಿನಲ್ಲಿ ತಾವು ನೋಡಿದ ಕೆಲಸವನ್ನೇ ಮಾಡುತ್ತಿರುವುದನ್ನು ನೋಡುವಾಗ, ಅವರು ಒಲ್ಲದ ಮನಸ್ಸಿನಿಂದ ನಮ್ಮಲ್ಲಿರುವ ಒಗ್ಗಟ್ಟನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ನಮ್ಮನ್ನು ಬೆಂಬಲಿಸುವವನೂ ನಮ್ಮ ಐಕ್ಯದ ಮೂಲನೂ ಆಗಿರುವ ಯೆಹೋವನು ಯಾರೆಂಬುದು ನಮ್ಮ ಶತ್ರುಗಳಿಗೂ ತಕ್ಕ ಸಮಯದಲ್ಲಿ ತಿಳಿದುಬರುವುದೆಂದು ನಮಗೆ ಗೊತ್ತಿದೆ.​—ಯೆಹೆಜ್ಕೇಲ 38:​10-12, 23.

6. ಕೊಯ್ಲಿನ ಕೆಲಸದಲ್ಲಿ ಪಾಲ್ಗೊಳ್ಳುತ್ತಿರುವಾಗ ನಮಗೆ ಯಾವ ಆಶ್ವಾಸನೆ ಇದೆ, ಆದರೆ ಯಾವ ಪ್ರಶ್ನೆ ಏಳುತ್ತದೆ?

6 ಕೊಯ್ಲಿನ ಯಜಮಾನನು ತನ್ನ ಮಗನಾದ ಯೇಸು ಕ್ರಿಸ್ತನಿಗೆ “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ”ವನ್ನು ಕೊಟ್ಟಿದ್ದಾನೆ. (ಮತ್ತಾಯ 28:18) ಹೀಗೆ, ಸ್ವರ್ಗೀಯ ದೇವದೂತರು ಮತ್ತು ಭೂಮಿಯ ಮೇಲಿನ ಅಭಿಷಿಕ್ತ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಕೊಯ್ಲಿನ ಕೆಲಸವನ್ನು ನಿರ್ದೇಶಿಸಲಿಕ್ಕಾಗಿ ಯೆಹೋವನು ಯೇಸುವನ್ನು ಉಪಯೋಗಿಸುತ್ತಾನೆ. (ಮತ್ತಾಯ 24:​45-47; ಪ್ರಕಟನೆ 14:​6, 7) ಆದರೆ ನಾವು ಶತ್ರುಗಳ ವಿರೋಧವನ್ನು ಎದುರಿಸುತ್ತಾ, ಅದೇ ಸಮಯದಲ್ಲಿ ಕೊಯ್ಲಿನ ಕೆಲಸದಲ್ಲಿ ಮುಂದೊತ್ತುತ್ತಾ ನಮ್ಮ ಆನಂದವನ್ನು ಹೇಗೆ ಕಾಪಾಡಿಕೊಳ್ಳಬಹುದು?

7. ವಿರೋಧಿಸಲ್ಪಟ್ಟಾಗ ಅಥವಾ ಹಿಂಸಿಸಲ್ಪಟ್ಟಾಗ ನಾವು ಯಾವ ರೀತಿಯ ಮನೋಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು?

7 ನಾವು ವಿರೋಧವನ್ನು ಅಥವಾ ನೇರವಾದ ಹಿಂಸೆಯನ್ನೂ ಎದುರಿಸುವಾಗ, ಪೌಲನಿಗಿದ್ದಂಥ ಈ ರೀತಿಯ ಮನೋಭಾವವನ್ನು ಕಾಪಾಡಿಕೊಳ್ಳಲಿಕ್ಕಾಗಿ ದೇವರ ಸಹಾಯವನ್ನು ಕೋರೋಣ. ಅವನು ಬರೆದುದು: “ಬೈಸಿಕೊಂಡು ಹರಸುತ್ತೇವೆ; ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ; ಅಪಕೀರ್ತಿಹೊಂದಿ ಆದರಿಸುತ್ತೇವೆ.” (1 ಕೊರಿಂಥ 4:12, 13) ಈ ಮನೋಭಾವದೊಂದಿಗೆ ನಾವು ನಮ್ಮ ಸಾರ್ವಜನಿಕ ಶುಶ್ರೂಷೆಯನ್ನು ಜಾಣ್ಮೆಯಿಂದ ನಡೆಸಿದರೆ, ಅದು ಕೆಲವೊಮ್ಮೆ ನಮ್ಮ ವಿರೋಧಿಗಳ ಮನೋಭಾವವನ್ನು ಬದಲಾಯಿಸಬಲ್ಲದು.

8. ಮತ್ತಾಯ 10:28ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳಿಂದ ನೀವು ಯಾವ ಪುನರಾಶ್ವಾಸನೆಯನ್ನು ಪಡೆದುಕೊಳ್ಳುತ್ತೀರಿ?

8 ಕೊಯ್ಲುಗಾರರೋಪಾದಿ ನಮ್ಮ ಹುರುಪನ್ನು ಮರಣದ ಬೆದರಿಕೆ ಸಹ ಕುಗ್ಗಿಸಲಾರದು. ಸಾಧ್ಯವಿರುವಷ್ಟು ಬಹಿರಂಗವಾಗಿ ನಾವು ನಿರ್ಭೀತಿಯಿಂದ ರಾಜ್ಯ ಸಂದೇಶವನ್ನು ಘೋಷಿಸುತ್ತೇವೆ. ಮತ್ತು ಯೇಸುವಿನ ಈ ಮಾತುಗಳಿಂದ ನಾವು ಉತ್ತೇಜನದಾಯಕ ಪುನರಾಶ್ವಾಸನೆಯನ್ನು ಪಡೆದುಕೊಳ್ಳುತ್ತೇವೆ: “ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.” (ಮತ್ತಾಯ 10:28) ನಮ್ಮ ಸ್ವರ್ಗೀಯ ದೇವರು ಜೀವದಾತನಾಗಿದ್ದಾನೆಂದು ನಮಗೆ ಗೊತ್ತಿದೆ. ತನ್ನ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಂಡು, ಕೊಯ್ಲಿನ ಕೆಲಸದಲ್ಲಿ ನಂಬಿಗಸ್ತಿಕೆಯಿಂದ ಮುಂದೊತ್ತುವವರಿಗೆ ಅವನು ಪ್ರತಿಫಲವನ್ನು ಕೊಡುತ್ತಾನೆ.

ಒಂದು ಜೀವರಕ್ಷಕ ಸಂದೇಶ

9. ಯೆಹೆಜ್ಕೇಲನ ಮಾತುಗಳಿಗೆ ಕೆಲವರು ಹೇಗೆ ಪ್ರತಿಕ್ರಿಯೆ ತೋರಿಸಿದರು, ಮತ್ತು ಇಂದು ಸಹ ಹೇಗೆ ಅದೇ ರೀತಿ ಸಂಭವಿಸುತ್ತದೆ?

9 ಪ್ರವಾದಿಯಾದ ಯೆಹೆಜ್ಕೇಲನು, ‘ದ್ರೋಹಮಾಡಿದ ಜನಾಂಗದವರಾದ’ ಇಸ್ರಾಯೇಲ್‌ ಮತ್ತು ಯೆಹೂದದ ರಾಜ್ಯಗಳಿಗೆ ಯೆಹೋವನ ಸಂದೇಶಗಳನ್ನು ಧೈರ್ಯದಿಂದ ಘೋಷಿಸಿದಾಗ, ಅವನು ಹೇಳುತ್ತಿದ್ದ ವಿಷಯವನ್ನು ಕೇಳಿ ಕೆಲವರು ಸಂತೋಷಪಟ್ಟರು. (ಯೆಹೆಜ್ಕೇಲ 2:3) ಯೆಹೋವನಂದದ್ದು: “ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತಕ್ಕೆ ಸಮಾನವಾಗಿದೆ.” (ಯೆಹೆಜ್ಕೇಲ 33:32) ಅವರು ಯೆಹೆಜ್ಕೇಲನ ಮಾತುಗಳನ್ನು ಇಷ್ಟಪಟ್ಟರೂ, ಅವುಗಳಿಗನುಸಾರ ಕ್ರಿಯೆಗೈಯಲು ತಪ್ಪಿಹೋದರು. ಇಂದು ಏನು ಸಂಭವಿಸುತ್ತಿದೆ? ಅಭಿಷಿಕ್ತ ಉಳಿಕೆಯವರು ಮತ್ತು ಅವರ ಸಂಗಾತಿಗಳು ಧೈರ್ಯದಿಂದ ಯೆಹೋವನ ಸಂದೇಶಗಳನ್ನು ಘೋಷಿಸುತ್ತಿರುವಾಗ, ಕೆಲವರು ರಾಜ್ಯದ ಆಶೀರ್ವಾದಗಳ ಕುರಿತಾಗಿ ಕೇಳಲು ಇಷ್ಟಪಡುತ್ತಾರಾದರೂ, ಅವರು ಗಣ್ಯತಾಭಾವದಿಂದ ಪ್ರತಿಕ್ರಿಯೆ ತೋರಿಸಿ, ಶಿಷ್ಯರಾಗಿ, ಕೊಯ್ಲಿನ ಕೆಲಸದಲ್ಲಿ ಜೊತೆಗೂಡುವುದಿಲ್ಲ.

10, 11. ಇಪ್ಪತ್ತನೆಯ ಶತಮಾನದ ಮೊದಲನೆಯ ಅರ್ಧ ಭಾಗದಲ್ಲಿ, ಜೀವರಕ್ಷಕ ಸಂದೇಶವನ್ನು ಪ್ರಚುರಪಡಿಸಲು ಏನನ್ನು ಮಾಡಲಾಯಿತು, ಮತ್ತು ಫಲಿತಾಂಶಗಳೇನಾಗಿದ್ದವು?

10 ಇನ್ನೊಂದು ಬದಿಯಲ್ಲಿ, ಅನೇಕರು ಕೊಯ್ಲಿನ ಕೆಲಸಕ್ಕೆ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸಿದ್ದಾರೆ ಮತ್ತು ದೇವರ ಸಂದೇಶಗಳನ್ನು ಘೋಷಿಸುವುದರಲ್ಲಿ ಪಾಲ್ಗೊಂಡಿದ್ದಾರೆ. ದೃಷ್ಟಾಂತಕ್ಕಾಗಿ, 1922ರಿಂದ 1928ರ ವರೆಗೆ ನಡೆದ ಕ್ರೈಸ್ತ ಅಧಿವೇಶನಗಳ ಸರಣಿಯಲ್ಲಿ, ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ನ್ಯಾಯತೀರ್ಪಿನ ಸಂದೇಶಗಳು ಸ್ಪಷ್ಟವಾಗಿ ಘೋಷಿಸಲ್ಪಟ್ಟವು. ಆ ಸಮ್ಮೇಳನಗಳಲ್ಲಿ ಪ್ರಸ್ತುತಪಡಿಸಲ್ಪಟ್ಟ ಖಂಡನೆಯ ಸಂದೇಶಗಳನ್ನು ರೇಡಿಯೊ ಸ್ಟೇಷನ್‌ಗಳು ಪ್ರಸಾರಮಾಡಿದವು. ತದನಂತರ ದೇವರ ಜನರು ಇವುಗಳ ಕೋಟಿಗಟ್ಟಲೆ ಮುದ್ರಿತ ಪ್ರತಿಗಳನ್ನು ಹಂಚಿದರು.

11 ಸಾವಿರದ ಒಂಬೈನೂರ ಮೂವತ್ತರ ದಶಕದ ಕೊನೆಯ ಭಾಗದಲ್ಲಿ, ಇನ್ನೊಂದು ವಿಧದ ಸಾಕ್ಷಿ ಚಟುವಟಿಕೆಯನ್ನು ಆರಂಭಿಸಲಾಯಿತು. ಅದೇನೆಂದರೆ, ಮಾಹಿತಿ ನಡಿಗೆಗಳೇ (ಇನ್‌ಫರ್ಮೇಶನ್‌ ಮಾರ್ಚಸ್‌). ಆರಂಭದಲ್ಲಿ ಯೆಹೋವನ ಜನರು, ಬಹಿರಂಗ ಭಾಷಣಗಳ ಕುರಿತಾಗಿ ಪ್ರಕಟಿಸುತ್ತಿದ್ದ ಭಿತ್ತಿಪತ್ರಗಳನ್ನು ಧರಿಸಿಕೊಳ್ಳುತ್ತಿದ್ದರು. ಅನಂತರ ಅವರು ಈ ಭಿತ್ತಿಪತ್ರಗಳನ್ನು ಎತ್ತಿಕೊಂಡು ನಡೆದರು. ಅವುಗಳ ಮೇಲೆ, “ಧರ್ಮವು ಒಂದು ಪಾಶ ಮತ್ತು ಹೂಟವಾಗಿದೆ” ಮತ್ತು “ದೇವರನ್ನೂ, ರಾಜನಾದ ಕ್ರಿಸ್ತನನ್ನೂ ಸೇವಿಸಿರಿ” ಎಂಬಂಥ ಗುರಿನುಡಿಗಳಿರುತ್ತಿದ್ದವು. ಅವರು ಬೀದಿಗಳ ಮಧ್ಯದಿಂದ ದಾಟಿಹೋಗುತ್ತಿದ್ದಾಗ, ಇದು ದಾರಿಹೋಕರ ಗಮನವನ್ನು ಸೆಳೆಯುತ್ತಿತ್ತು. ‘ಇದು ಯೆಹೋವನ ಸಾಕ್ಷಿಗಳನ್ನು ಬೆಳಕಿಗೆ ತರಲು ಮತ್ತು ಧೈರ್ಯತುಂಬಿಸಲು ಬಹಳಷ್ಟನ್ನು ಮಾಡಿತು’ ಎಂದು, ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಜನಸಂದಣಿಯ ಬೀದಿಗಳಲ್ಲಿ ಆ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುತ್ತಿದ್ದ ಒಬ್ಬ ಸಹೋದರರು ಹೇಳಿದರು.

12. ದೇವರ ತೀರ್ಪಿನ ಸಂದೇಶಗಳ ಜೊತೆಯಲ್ಲಿ ನಾವು ಶುಶ್ರೂಷೆಯಲ್ಲಿ ಇನ್ನೇನನ್ನು ತಿಳಿಸುತ್ತೇವೆ, ಮತ್ತು ಸುವಾರ್ತೆಯನ್ನು ಸಾರುವುದರಲ್ಲಿ ಈಗ ಯಾರು ಐಕ್ಯರಾಗಿದ್ದಾರೆ?

12 ನಾವು ದೇವರ ನ್ಯಾಯತೀರ್ಪಿನ ಸಂದೇಶಗಳನ್ನು ಘೋಷಿಸುತ್ತಿರುವಾಗ, ಆ ರಾಜ್ಯ ಸಂದೇಶದ ಸಕಾರಾತ್ಮಕ ಅಂಶಗಳನ್ನೂ ತಿಳಿಸುತ್ತೇವೆ. ಲೋಕ ರಂಗದ ಮೇಲೆ ನಮ್ಮ ಧೈರ್ಯಶಾಲಿ ಸಾಕ್ಷಿಕಾರ್ಯವು, ನಾವು ಯೋಗ್ಯ ವ್ಯಕ್ತಿಗಳನ್ನು ಹುಡುಕುವಂತೆ ಸಹಾಯಮಾಡುತ್ತದೆ. (ಮತ್ತಾಯ 10:11) ಅಭಿಷಿಕ್ತ ವರ್ಗದ ಕೊನೆಯ ಸದಸ್ಯರಲ್ಲಿ ಹೆಚ್ಚಿನವರು, 1920 ಮತ್ತು 1930ರ ದಶಕಗಳ ಸಮಯದಲ್ಲಿ ಕೊಯ್ಲಿನ ಸ್ಪಷ್ಟ ಹಾಗೂ ಗಟ್ಟಿಯಾದ ಕರೆಗೆ ಓಗೊಟ್ಟರು. ಅನಂತರ, 1935ರಲ್ಲಿನ ಒಂದು ಅಧಿವೇಶನದಲ್ಲಿ, “ಬೇರೆ ಕುರಿಗಳ” “ಮಹಾ ಸಮೂಹದ”ವರಿಗಾಗಿ ಪರದೈಸ್‌ ಭೂಮಿಯಲ್ಲಿರುವ ಆಶೀರ್ವದಿತ ಭವಿಷ್ಯತ್ತಿನ ಕುರಿತಾದ ಅದ್ಭುತ ವಾರ್ತೆಯು ಸಿಕ್ಕಿತು. (ಪ್ರಕಟನೆ 7:9; ಯೋಹಾನ 10:16) ಅವರು ದೇವರ ತೀರ್ಪಿನ ಸಂದೇಶಗಳಿಗೆ ಕಿವಿಗೊಟ್ಟಿದ್ದಾರೆ, ಮತ್ತು ಜೀವರಕ್ಷಕ ಸುವಾರ್ತೆಯನ್ನು ಸಾರುವುದರಲ್ಲಿ ಅಭಿಷಿಕ್ತರೊಂದಿಗೆ ಐಕ್ಯರಾಗಿದ್ದಾರೆ.

13, 14. (ಎ) ಕೀರ್ತನೆ 126:​5, 6ರಿಂದ ನಾವು ಯಾವ ಸಾಂತ್ವನವನ್ನು ಪಡೆದುಕೊಳ್ಳಬಹುದು? (ಬಿ) ನಾವು ಬಿತ್ತುವುದನ್ನು ಮತ್ತು ನೀರು ಹಾಕುವುದನ್ನು ಮುಂದುವರಿಸಿದರೆ ಏನಾಗಬಹುದು?

13 ದೇವರ ಕೊಯ್ಲುಗಾರರಿಗೆ ಮತ್ತು ವಿಶೇಷವಾಗಿ ಹಿಂಸೆಯನ್ನು ಅನುಭವಿಸುತ್ತಿರುವವರಿಗೆ, ಕೀರ್ತನೆ 126:​5, 6ರ ಈ ಮಾತುಗಳು ತುಂಬ ಸಾಂತ್ವನವನ್ನು ಕೊಡುತ್ತವೆ: “ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು. ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.” ಬಿತ್ತುವ ಮತ್ತು ಕೊಯ್ಯುವುದರ ಕುರಿತಾದ ಕೀರ್ತನೆಗಾರನ ಮಾತುಗಳು, ಪುರಾತನ ಬಾಬೆಲಿನಲ್ಲಿ ಬಂದಿವಾಸದಿಂದ ಹಿಂದಿರುಗಿದ ಉಳಿಕೆಯವರಿಗೆ ಯೆಹೋವನು ತೋರಿಸಿದ ಆರೈಕೆ ಮತ್ತು ಆಶೀರ್ವದಿಸಿದ ರೀತಿಯನ್ನು ದೃಷ್ಟಾಂತಿಸುತ್ತವೆ. ಬಿಡುಗಡೆ ಹೊಂದಿದ್ದಕ್ಕಾಗಿ ಅವರು ತುಂಬ ಸಂತೋಷಪಟ್ಟರು. ಆದರೆ ಅವರ 70 ವರ್ಷಗಳ ಬಂದಿವಾಸದ ಸಮಯದಲ್ಲಿ ಕೃಷಿಮಾಡದೇ ಬಿಡಲ್ಪಟ್ಟಿದ್ದ ಸ್ವದೇಶದ ನಿರ್ಜನ ಭೂಮಿಯಲ್ಲಿ ಅವರು ಪುನಃ ಬೀಜವನ್ನು ಬಿತ್ತಿದಾಗ ಅವರು ಅತ್ತಿರಬೇಕು. ಆದರೆ, ತಮ್ಮ ಬೀಜಬಿತ್ತುವ ಮತ್ತು ಕಟ್ಟುವ ಕೆಲಸಗಳನ್ನು ಮುಂದುವರಿಸಿಕೊಂಡು ಹೋದವರು, ತಮ್ಮ ಶ್ರಮದ ಫಲವನ್ನು ಮತ್ತು ತೃಪ್ತಿಯನ್ನು ಅನುಭವಿಸಿದರು.

14 ಸಂಕಷ್ಟದಲ್ಲಿರುವಾಗ ಅಥವಾ ನಾವು ಇಲ್ಲವೆ ನಮ್ಮ ಜೊತೆ ವಿಶ್ವಾಸಿಗಳು ನೀತಿಯ ನಿಮಿತ್ತ ಕಷ್ಟಪಡುವಾಗ ನಾವು ಕಣ್ಣೀರು ಸುರಿಸುತ್ತಿರಬಹುದು. (1 ಪೇತ್ರ 3:14) ಆರಂಭದಲ್ಲಿ ನಮ್ಮ ಕೊಯ್ಲಿನ ಕೆಲಸದಲ್ಲಿ ನಮಗೆ ತುಂಬ ಕಷ್ಟವಾಗಬಹುದು. ಯಾಕೆಂದರೆ ನಾವು ಶುಶ್ರೂಷೆಯಲ್ಲಿ ಮಾಡುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತಿವೆ ಎಂದು ತೋರಿಸಲು ಯಾವುದೇ ಪುರಾವೆ ಇರಲಿಕ್ಕಿಲ್ಲ. ಆದರೆ ನಾವು ಬಿತ್ತುವುದನ್ನು ಮತ್ತು ನೀರು ಹಾಕುವುದನ್ನು ಮುಂದುವರಿಸಿದರೆ, ನಮ್ಮ ನಿರೀಕ್ಷೆಗಳಿಗೂ ಮೀರಿ ದೇವರು ಅದನ್ನು ಬೆಳೆಸುವನು. (1 ಕೊರಿಂಥ 3:6) ನಾವು ಬೈಬಲುಗಳನ್ನು ಮತ್ತು ಶಾಸ್ತ್ರೀಯ ಪ್ರಕಾಶನಗಳನ್ನು ಹಂಚುವುದರಿಂದ ಸಿಗುವ ಫಲಿತಾಂಶಗಳಿಂದ ಇದು ಚೆನ್ನಾಗಿ ದೃಷ್ಟಾಂತಿಸಲ್ಪಟ್ಟಿದೆ.

15. ಕೊಯ್ಲಿನ ಕೆಲಸದಲ್ಲಿ ಕ್ರೈಸ್ತ ಪ್ರಕಾಶನಗಳ ಉಪಯುಕ್ತತೆಯ ಕುರಿತು ಒಂದು ಉದಾಹರಣೆಯನ್ನು ಕೊಡಿರಿ.

15 ಜಿಮ್‌ ಎಂಬ ಹೆಸರಿನ ವ್ಯಕ್ತಿಯನ್ನು ತೆಗೆದುಕೊಳ್ಳಿ. ಅವನ ತಾಯಿ ಸತ್ತ ನಂತರ, ಅವಳ ಸ್ವತ್ತುಗಳ ನಡುವೆ ಅವನಿಗೆ, ಜೀವ​—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್‌) * ಎಂಬ ಪುಸ್ತಕದ ಪ್ರತಿಯು ಸಿಕ್ಕಿತು. ಅವನದನ್ನು ಆಸಕ್ತಿಯಿಂದ ಓದಿದನು. ಬೀದಿಯಲ್ಲಿ ತನ್ನೊಂದಿಗೆ ಮಾತಾಡಲು ಬಂದ ಒಬ್ಬ ಸಾಕ್ಷಿಯೊಂದಿಗೆ ಚರ್ಚೆಯನ್ನು ನಡೆಸಿದ ಬಳಿಕ ಜಿಮ್‌ ಒಂದು ಪುನರ್ಭೇಟಿಗೆ ಒಪ್ಪಿಕೊಂಡನು. ಇದು ಒಂದು ಬೈಬಲ್‌ ಅಭ್ಯಾಸಕ್ಕೆ ನಡೆಸಿತು. ಅವನು ಬೇಗನೆ ಆತ್ಮಿಕ ಪ್ರಗತಿಯನ್ನು ಮಾಡಿ, ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡು, ದೀಕ್ಷಾಸ್ನಾನ ಪಡೆದನು. ತಾನು ಕಲಿತಂಥ ಸಂಗತಿಗಳನ್ನು ತನ್ನ ಕುಟುಂಬದ ಇತರ ಸದಸ್ಯರಿಗೂ ತಿಳಿಸಿದನು. ಫಲಿತಾಂಶವಾಗಿ, ಅವನ ಅಕ್ಕ ಮತ್ತು ಅಣ್ಣ ಯೆಹೋವನ ಸಾಕ್ಷಿಗಳಾದರು, ಮತ್ತು ಅನಂತರ ಜಿಮ್‌ ಲಂಡನ್‌ ಬೆತೆಲ್‌ನಲ್ಲಿ ಒಬ್ಬ ಪೂರ್ಣ ಸಮಯದ ಸ್ವಯಂಸೇವಕನಾಗಿ ಸೇವೆಸಲ್ಲಿಸುವ ಸುಯೋಗದಲ್ಲಿ ಆನಂದಿಸಿದನು.

ಹಿಂಸಿಸಲ್ಪಟ್ಟರೂ ಆನಂದಿತರು

16. (ಎ) ಕೊಯ್ಲಿನ ಕೆಲಸದಲ್ಲಿ ಯಾವ ಯಶಸ್ಸು ಸಿಕ್ಕಿದೆ? (ಬಿ) ಸುವಾರ್ತೆಯು ಬೀರುವ ಪರಿಣಾಮದ ಕುರಿತಾಗಿ ಯೇಸು ಯಾವ ಎಚ್ಚರಿಕೆಯನ್ನು ಕೊಟ್ಟನು, ಆದರೆ ನಾವು ಯಾವ ಮನೋಭಾವದಿಂದ ಜನರೊಂದಿಗೆ ಮಾತಾಡಬೇಕು?

16 ಕೊಯ್ಲಿನ ಕೆಲಸದಲ್ಲಿ ಇಷ್ಟೊಂದು ಯಶಸ್ಸು ಸಿಗಲು ಕಾರಣವೇನು? ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಾತಿಗಳು ಯೇಸುವಿನ ಈ ಸೂಚನೆಗಳನ್ನು ಪಾಲಿಸಿದ್ದಾರೆ: “ನಾನು ಕತ್ತಲಲ್ಲಿ ನಿಮಗೆ ಹೇಳುವದನ್ನು ನೀವು ಬೆಳಕಿನಲ್ಲಿ ಹೇಳಿರಿ, ಮತ್ತು ಕಿವಿಯಲ್ಲಿ ಕೇಳಿದ್ದನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ.” (ಮತ್ತಾಯ 10:27) ಆದರೆ ನಾವು ಕಷ್ಟಗಳನ್ನು ನಿರೀಕ್ಷಿಸಬೇಕು, ಯಾಕೆಂದರೆ ಯೇಸು ಹೀಗೆ ಎಚ್ಚರಿಸಿದ್ದನು: “ಇದಲ್ಲದೆ ಅಣ್ಣನು ತಮ್ಮನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು.” ಯೇಸು ಮುಂದುವರಿಸುತ್ತಾ ಹೇಳಿದ್ದು: “ಭೂಲೋಕದ ಮೇಲೆ ಸಮಾಧಾನ ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು.” (ಮತ್ತಾಯ 10:21, 34) ಯೇಸು ಬೇಕುಬೇಕೆಂದೇ ಕುಟುಂಬಗಳನ್ನು ವಿಭಜಿಸಲಿಲ್ಲ. ಆದರೆ ಕೆಲವೊಮ್ಮೆ ಸುವಾರ್ತೆಯು ಆ ಪರಿಣಾಮವನ್ನು ಬೀರುತ್ತಿತ್ತು. ಇಂದು ದೇವರ ಸೇವಕರ ವಿಷಯದಲ್ಲೂ ಇದು ಸತ್ಯವಾಗಿದೆ. ನಾವು ಕುಟುಂಬಗಳನ್ನು ಸಂದರ್ಶಿಸುವಾಗ, ವಿಭಜನೆಯನ್ನು ಉಂಟುಮಾಡುವುದು ನಮ್ಮ ಉದ್ದೇಶವಾಗಿರುವುದಿಲ್ಲ. ಎಲ್ಲರೂ ಸುವಾರ್ತೆಯನ್ನು ಸ್ವೀಕರಿಸಬೇಕೆಂಬುದು ನಮ್ಮ ಇಚ್ಛೆ. ಆದುದರಿಂದ, ಒಂದು ಕುಟುಂಬದಲ್ಲಿರುವ ಎಲ್ಲ ಸದಸ್ಯರೊಂದಿಗೆ ನಾವು ದಯಾಪರವಾಗಿ ಹಾಗೂ ಸಹಾನುಭೂತಿಯಿಂದ ಮಾತಾಡಲು ಪ್ರಯತ್ನಿಸುತ್ತೇವೆ. ಇದರಿಂದಾಗಿ, ನಮ್ಮ ಸಂದೇಶವು “ನಿತ್ಯಜೀವಕ್ಕಾಗಿ ಸರಿಯಾದ ಮನಃಪ್ರವೃತ್ತಿ” ಉಳ್ಳವರನ್ನು ಆಕರ್ಷಿಸುವುದು.​—ಅ. ಕೃತ್ಯಗಳು 13:​48, NW.

17. ದೇವರ ಪರಮಾಧಿಕಾರವನ್ನು ಎತ್ತಿಹಿಡಿಯುವವರು ಹೇಗೆ ಭಿನ್ನರಾಗಿ ಗುರುತಿಸಲ್ಪಡುತ್ತಾರೆ, ಮತ್ತು ಇದರ ಒಂದು ಉದಾಹರಣೆ ಯಾವುದು?

17 ರಾಜ್ಯ ಸಂದೇಶವು, ದೇವರ ಪರಮಾಧಿಕಾರವನ್ನು ಎತ್ತಿಹಿಡಿಯುವವರನ್ನು ಭಿನ್ನರಾಗಿ ಗುರುತಿಸುತ್ತದೆ. ದೃಷ್ಟಾಂತಕ್ಕಾಗಿ, ಜರ್ಮನಿಯಲ್ಲಿ ರಾಷ್ಟ್ರೀಯ ಸಮಾಜವಾದವು ಪ್ರಭುತ್ವವನ್ನು ನಡೆಸುತ್ತಿದ್ದ ದಿನಗಳಲ್ಲಿ ಜೀವಿಸುತ್ತಿದ್ದ ನಮ್ಮ ಜೊತೆ ಆರಾಧಕರನ್ನು ಪರಿಗಣಿಸಿರಿ. ಅವರು ‘ಕೈಸರನದನ್ನು ಕೈಸರನಿಗೆ ಕೊಟ್ಟು, ದೇವರದನ್ನು ದೇವರಿಗೆ ಕೊಟ್ಟದ್ದರಿಂದ’ ಭಿನ್ನ ಜನರೋಪಾದಿ ಎದ್ದುಕಾಣುತ್ತಿದ್ದರು. (ಲೂಕ 20:25) ಕ್ರೈಸ್ತಪ್ರಪಂಚದ ಚರ್ಚುಗಳೊಂದಿಗೆ ಸಂಬಂಧವಿರುವ ಧಾರ್ಮಿಕ ಮುಖಂಡರು ಹಾಗೂ ನಾಮಮಾತ್ರದ ಕ್ರೈಸ್ತರಂತಿರದೆ, ಯೆಹೋವನ ಸಾಕ್ಷಿಗಳು ಬೈಬಲ್‌ ಮೂಲತತ್ವಗಳನ್ನು ಉಲ್ಲಂಘಿಸಲು ನಿರಾಕರಿಸುತ್ತಾ ದೃಢರಾಗಿ ನಿಂತರು. (ಯೆಶಾಯ 2:4; ಮತ್ತಾಯ 4:10; ಯೋಹಾನ 17:16) ನಾಸಿ ರಾಜ್ಯ ಮತ್ತು ಹೊಸ ಧರ್ಮಗಳು (ಇಂಗ್ಲಿಷ್‌) ಎಂಬ ಪುಸ್ತಕದ ಲೇಖಕಿ ಪ್ರೊಫೆಸರ್‌ ಕ್ರಿಸ್ಟೀನ್‌ ಕಿಂಗ್‌ ಹೀಗೆ ಹೇಳಿದರು: “[ನಾಸಿ] ಸರಕಾರವು ಕೇವಲ ಸಾಕ್ಷಿಗಳ ವಿಷಯದಲ್ಲಿ ಸೋಲನ್ನು ಅನುಭವಿಸಿತು. ಯಾಕೆಂದರೆ ಅವರು ಸಾವಿರಾರು ಮಂದಿ ಸಾಕ್ಷಿಗಳನ್ನು ಕೊಂದರೂ, ಅವರ ಕೆಲಸವು ಮುಂದುವರಿಯುತ್ತಾ ಹೋಯಿತು. ಮತ್ತು ಮೇ 1945ರಲ್ಲಿ ರಾಷ್ಟ್ರೀಯ ಸಮಾಜವಾದವು ಅಸ್ತಿತ್ವದಲ್ಲಿ ಇಲ್ಲದೇ ಹೋದಾಗ, ಯೆಹೋವನ ಸಾಕ್ಷಿಗಳ ಚಳುವಳಿಯಾದರೊ ಇನ್ನೂ ಅಸ್ತಿತ್ವದಲ್ಲಿತ್ತು.”

18. ಹಿಂಸೆಯ ಎದುರಿನಲ್ಲೂ ಯೆಹೋವನ ಜನರು ಯಾವ ರೀತಿಯ ಮನೋಭಾವವನ್ನು ತೋರಿಸುತ್ತಾರೆ?

18 ಹಿಂಸೆಯನ್ನು ಎದುರಿಸುವಾಗ ಯೆಹೋವನ ಜನರು ತೋರಿಸುವ ಮನೋಭಾವವು ನಿಜವಾಗಿಯೂ ಗಮನಾರ್ಹವಾದದ್ದು. ನಮ್ಮ ನಂಬಿಕೆಯನ್ನು ನೋಡಿ ಲೌಕಿಕ ಅಧಿಕಾರಿಗಳು ಪ್ರಭಾವಿತರಾಗಬಹುದಾದರೂ, ನಾವು ಯಾವುದೇ ಹಗೆ ಅಥವಾ ವೈರತ್ವವನ್ನು ತೋರಿಸದಿರುವುದು ಅವರನ್ನು ಬೆರಗುಗೊಳಿಸುತ್ತದೆ. ಉದಾಹರಣೆಗಾಗಿ, ಸಾಮೂಹಿಕ ಹತ್ಯಾಕಾಂಡದಿಂದ ಪಾರಾಗಿ ಉಳಿದ ಸಾಕ್ಷಿಗಳು ತಮ್ಮ ಅನುಭವಗಳನ್ನು ಜ್ಞಾಪಿಸಿಕೊಳ್ಳುವಾಗ, ಪದೇ ಪದೇ ಆನಂದ ಮತ್ತು ಸಂತೃಪ್ತಿಯನ್ನು ವ್ಯಕ್ತಪಡಿಸುತ್ತಾರೆ. ಯೆಹೋವನು ಅವರಿಗೆ ‘ಬಲಾಧಿಕ್ಯವನ್ನು’ ಕೊಟ್ಟನೆಂದು ಅವರಿಗೆ ತಿಳಿದಿದೆ. (2 ಕೊರಿಂಥ 4:7) ನಮ್ಮ ಮಧ್ಯೆಯಿರುವ ಅಭಿಷಿಕ್ತರಿಗೆ, ತಮ್ಮ “ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ” ಎಂಬ ಆಶ್ವಾಸನೆಯಿದೆ. (ಲೂಕ 10:20) ಅವರ ತಾಳ್ಮೆಯು, ನಿರಾಶೆಗೆ ನಡೆಸದಂಥ ನಿರೀಕ್ಷೆಯನ್ನು ಉಂಟುಮಾಡುತ್ತದೆ. ಮತ್ತು ಭೂನಿರೀಕ್ಷೆಯುಳ್ಳ ನಂಬಿಗಸ್ತ ಕೊಯ್ಲುಗಾರರಿಗೂ ಅದೇ ರೀತಿಯ ನಿಶ್ಚಿತಾಭಿಪ್ರಾಯವಿದೆ.​—ರೋಮಾಪುರ 5:​4, 5.

ಕೊಯ್ಲಿನ ಕೆಲಸದಲ್ಲಿ ಪಟ್ಟುಹಿಡಿಯಿರಿ

19. ಕ್ರೈಸ್ತ ಶುಶ್ರೂಷೆಯಲ್ಲಿ ಯಾವ ಪರಿಣಾಮಕಾರಿ ವಿಧಾನಗಳನ್ನು ಉಪಯೋಗಿಸಲಾಗಿದೆ?

19 ಸಾಂಕೇತಿಕ ಕೊಯ್ಲಿನ ಕೆಲಸದಲ್ಲಿ ನಾವು ಇನ್ನೆಷ್ಟು ಸಮಯ ಪಾಲ್ಗೊಳ್ಳುವಂತೆ ಯೆಹೋವನು ಅನುಮತಿಸುವನೆಂಬುದನ್ನು ನಾವು ಕಾದುನೋಡಬೇಕು. ಆದರೆ ಅಷ್ಟರ ವರೆಗೆ, ಕೊಯ್ಲುಗಾರರು ತಮ್ಮ ಕೆಲಸವನ್ನು ಮಾಡಲು ನಿರ್ದಿಷ್ಟ ವಿಧಾನಗಳನ್ನು ಉಪಯೋಗಿಸುತ್ತಾರೆಂಬುದನ್ನು ನಾವು ಮನಸ್ಸಿನಲ್ಲಿಡಬೇಕು. ತದ್ರೀತಿಯಲ್ಲಿ, ಪರೀಕ್ಷಿಸಲ್ಪಟ್ಟಿರುವ ಸಾರುವ ವಿಧಾನಗಳನ್ನು ನಾವು ನಂಬಿಗಸ್ತಿಕೆಯಿಂದ ಉಪಯೋಗಿಸುವಲ್ಲಿ, ಅವು ಪರಿಣಾಮಕಾರಿಯಾಗಿರುವವು ಎಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಬಲ್ಲೆವು. ಪೌಲನು ಜೊತೆ ಕ್ರೈಸ್ತರಿಗೆ ಹೀಗಂದನು: “ನನ್ನನ್ನು ಅನುಸರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (1 ಕೊರಿಂಥ 4:16) ಪೌಲನು ಮಿಲೇತದಲ್ಲಿ ಎಫೆಸದ ಹಿರಿಯರನ್ನು ಭೇಟಿಯಾದಾಗ, ತಾನು ಅವರಿಗೆ ‘ಬಹಿರಂಗವಾಗಿ ಮತ್ತು ಮನೆಯಿಂದ ಮನೆಯಲ್ಲಿ’ ಕಲಿಸುವುದರಿಂದ ಹಿಮ್ಮೆಟ್ಟಿರಲಿಲ್ಲವೆಂದು ಜ್ಞಾಪಕಹುಟ್ಟಿಸಿದನು. (ಅ. ಕೃತ್ಯಗಳು 20:​20, 21, NW) ಪೌಲನ ಸಂಗಡಿಗನಾದ ತಿಮೊಥೆಯನು ಅಪೊಸ್ತಲನ ಆ ವಿಧಾನಗಳನ್ನು ಕಲಿತುಕೊಂಡಿದ್ದನು ಮತ್ತು ಈ ಕಾರಣದಿಂದ ಕೊರಿಂಥದವರಿಗೆ ಅವುಗಳನ್ನು ತಿಳಿಸಲು ಶಕ್ತನಾಗಿದ್ದನು. (1 ಕೊರಿಂಥ 4:17) ದೇವರು ಪೌಲನ ಕಲಿಸುವ ವಿಧಾನಗಳನ್ನು ಆಶೀರ್ವದಿಸಿದನು. ಮತ್ತು ನಾವು ಸಹ ಬಹಿರಂಗವಾಗಿ ಮನೆಯಿಂದ ಮನೆಗೆ, ಪುನರ್ಭೇಟಿಗಳಲ್ಲಿ, ಮನೆ ಬೈಬಲ್‌ ಅಭ್ಯಾಸಗಳಲ್ಲಿ ಮತ್ತು ಜನರು ಇರುವಲ್ಲೆಲ್ಲಾ ಸಾರುವುದರಲ್ಲಿ ಪಟ್ಟುಹಿಡಿಯುವಾಗ, ಖಂಡಿತವಾಗಿಯೂ ಆತನು ನಮ್ಮನ್ನು ಆಶೀರ್ವದಿಸುವನು.​—ಅ. ಕೃತ್ಯಗಳು 17:17.

20. ಸಮೃದ್ಧವಾದ ಆತ್ಮಿಕ ಕೊಯ್ಲಿನ ಕೆಲಸವು ನಡೆಯಲಿದೆಯೆಂದು ಯೇಸು ಹೇಗೆ ಸೂಚಿಸಿದನು, ಮತ್ತು ಇದು ಇತ್ತೀಚಿನ ವರ್ಷಗಳಲ್ಲಿ ಹೇಗೆ ನಿಜವಾಗಿ ಪರಿಣಮಿಸಿದೆ?

20 ಸಾ.ಶ. 30ರಲ್ಲಿ ಸುಖರೆಂಬ ಊರಿನ ಬಳಿ ಸಮಾರ್ಯದ ಸ್ತ್ರೀಯೊಬ್ಬಳಿಗೆ ಸಾಕ್ಷಿಯನ್ನು ಕೊಟ್ಟ ಬಳಿಕ, ಯೇಸು ಆತ್ಮಿಕ ಕೊಯ್ಲಿನ ಕುರಿತಾಗಿ ಮಾತಾಡಿದನು. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಬೆಳ್ಳಗಾಗಿ ಕೊಯ್ಲಿಗೆ ಬಂದವೆಂದು ನಿಮಗೆ ಹೇಳುತ್ತೇನೆ. ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ; ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ; ಹೀಗೆ ಬಿತ್ತುವವನಿಗೂ ಕೊಯ್ಯುವವನಿಗೂ ಕೂಡ ಸಂತೋಷವಾಗುವದು.” (ಯೋಹಾನ 4:​34-36) ಸಮಾರ್ಯದ ಸ್ತ್ರೀಯೊಂದಿಗಿನ ತನ್ನ ಸಂಭಾಷಣೆಯ ಪರಿಣಾಮವನ್ನು ಯೇಸು ಈಗಾಗಲೇ ನೋಡಿದ್ದಿರಬಹುದು. ಯಾಕೆಂದರೆ ಅವಳ ಮಾತಿನಿಂದಾಗಿ ಅನೇಕರು ಅವನಲ್ಲಿ ನಂಬಿಕೆಯನ್ನಿಡುತ್ತಿದ್ದರು. (ಯೋಹಾನ 4:39) ಇತ್ತೀಚಿನ ವರ್ಷಗಳಲ್ಲಿ, ವಿವಿಧ ದೇಶಗಳು ಯೆಹೋವನ ಸಾಕ್ಷಿಗಳ ಮೇಲಿದ್ದ ನಿರ್ಬಂಧಗಳನ್ನು ತೆಗೆದುಹಾಕಿವೆ, ಅಥವಾ ಅವರಿಗೆ ಕಾನೂನುಬದ್ಧ ಮನ್ನಣೆಯನ್ನು ದಯಪಾಲಿಸಿವೆ. ಹೀಗೆ ಕೊಯ್ಲಿಗಾಗಿ ಹೊಸ ಕ್ಷೇತ್ರಗಳು ತೆರೆದಿವೆ. ಫಲಿತಾಂಶವಾಗಿ, ಸಮೃದ್ಧವಾದ ಆತ್ಮಿಕ ಕೊಯ್ಲಿನ ಕೆಲಸವು ನಡೆಯುತ್ತಾ ಇದೆ. ವಾಸ್ತವದಲ್ಲಿ, ಲೋಕದಾದ್ಯಂತ ನಾವು ಆತ್ಮಿಕ ಕೊಯ್ಲಿನ ಕೆಲಸದಲ್ಲಿ ಆನಂದದಿಂದ ಪಾಲ್ಗೊಳ್ಳುವುದನ್ನು ಮುಂದುವರಿಸಿದಂತೆ, ಸಂಪದ್ಭರಿತ ಆಶೀರ್ವಾದಗಳನ್ನು ಅನುಭವಿಸುತ್ತಿದ್ದೇವೆ.

21. ಆನಂದಭರಿತ ಕೊಯ್ಲುಗಾರರೋಪಾದಿ ಮುಂದೊತ್ತಲು ನಮಗೆ ಕಾರಣವಿದೆ ಏಕೆ?

21 ಬೆಳೆಗಳು ಮಾಗಿ ಕೊಯ್ಲಿಗಾಗಿ ತಯಾರಾಗಿರುವಾಗ, ಕಾರ್ಮಿಕರು ತುರ್ತಿನಿಂದ ಕೆಲಸಮಾಡಬೇಕು. ಅವರು ತಡಮಾಡದೆ ಶ್ರಮಿಸಬೇಕು. ಇಂದು ನಾವು ಕಷ್ಟಪಟ್ಟು, ತುರ್ತುಭಾವದೊಂದಿಗೆ ಕೆಲಸಮಾಡಬೇಕು. ಯಾಕೆಂದರೆ ನಾವು ‘ಅಂತ್ಯಕಾಲದಲ್ಲಿ’ ಜೀವಿಸುತ್ತಿದ್ದೇವೆ. (ದಾನಿಯೇಲ 12:4) ಹೌದು, ನಾವು ಸಂಕಷ್ಟಗಳನ್ನು ಎದುರಿಸುತ್ತೇವೆ. ಆದರೆ ಯೆಹೋವನ ಆರಾಧಕರ ಕೊಯ್ಲು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಹೀಗಿರುವುದರಿಂದ, ಇದು ಹರ್ಷಿಸುವ ದಿನವಾಗಿದೆ. (ಯೆಶಾಯ 9:3) ಹಾಗಾದರೆ, ಆನಂದಭರಿತ ಕೆಲಸಗಾರರೋಪಾದಿ ಕೊಯ್ಲಿನ ಕೆಲಸದಲ್ಲಿ ಮುಂದೊತ್ತೋಣ!

[ಪಾದಟಿಪ್ಪಣಿ]

^ ಪ್ಯಾರ. 15 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟು, ವಿತರಿಸಲ್ಪಡುತ್ತದೆ.

ನೀವು ಹೇಗೆ ಉತ್ತರಿಸುವಿರಿ?

ಹೆಚ್ಚಿನ ಕೆಲಸಗಾರರಿಗಾಗಿ ಮಾಡಲ್ಪಟ್ಟಿರುವ ವಿನಂತಿಗೆ ಬೆಳೆಯ ಯಜಮಾನನು ಹೇಗೆ ಉತ್ತರಿಸಿದ್ದಾನೆ?

ನಾವು ‘ಹಗೆಮಾಡಲ್ಪಟ್ಟರೂ’ ಯಾವ ಮನೋಭಾವವನ್ನು ಇಟ್ಟುಕೊಳ್ಳುತ್ತೇವೆ?

ನಾವು ಹಿಂಸಿಸಲ್ಪಟ್ಟರೂ ಆನಂದಭರಿತರಾಗಿದ್ದೇವೆ ಏಕೆ?

ನಾವು ತುರ್ತುಭಾವದಿಂದ ಕೊಯ್ಲಿನ ಕೆಲಸದಲ್ಲಿ ಪಟ್ಟುಹಿಡಿಯಬೇಕು ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 16, 17ರಲ್ಲಿರುವ ಚಿತ್ರಗಳು]

ಆತ್ಮಿಕ ಕೊಯ್ಲಿನ ಕೆಲಸದಲ್ಲಿ ಪಾಲ್ಗೊಳ್ಳುವವರಿಗೆ ದೇವದೂತರ ಬೆಂಬಲವಿದೆ

[ಪುಟ 18ರಲ್ಲಿರುವ ಚಿತ್ರ]

ಮಾಹಿತಿಯ ನಡಿಗೆಗಳು, ಅನೇಕರ ಗಮನವನ್ನು ರಾಜ್ಯ ಸಂದೇಶದ ಕಡೆಗೆ ಸೆಳೆದವು

[ಪುಟ 18ರಲ್ಲಿರುವ ಚಿತ್ರ]

ನಾವು ಬೀಜ ಬಿತ್ತಿ ನೀರು ಹಾಕುತ್ತೇವೆ, ಆದರೆ ಬೆಳೆಸುವವನು ದೇವರು