ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನೀತಿವಂತನು ಆಶೀರ್ವಾದದ ನೆಲೆ’

‘ನೀತಿವಂತನು ಆಶೀರ್ವಾದದ ನೆಲೆ’

‘ನೀತಿವಂತನು ಆಶೀರ್ವಾದದ ನೆಲೆ’

“ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ” ಎಂದು ಕೀರ್ತನೆಗಾರನಾದ ದಾವೀದನು ತನ್ನ ವೃದ್ಧ ಪ್ರಾಯದಲ್ಲಿ ಹೇಳಿದನು. (ಕೀರ್ತನೆ 37:25) ಯೆಹೋವ ದೇವರು ನೀತಿವಂತರನ್ನು ಪ್ರೀತಿಸುತ್ತಾನೆ ಮತ್ತು ಪ್ರೀತಿಯಿಂದ ಅವರ ಆರೈಕೆಮಾಡುತ್ತಾನೆ. ತನ್ನ ವಾಕ್ಯವಾದ ಬೈಬಲಿನಲ್ಲಿ, ಸತ್ಯಾರಾಧಕರು ನೀತಿಯನ್ನು ಹುಡುಕುವಂತೆ ಅವನು ಬುದ್ಧಿವಾದವನ್ನು ಕೊಡುತ್ತಾನೆ.​—ಚೆಫನ್ಯ 2:3.

ನೀತಿವಂತರಾಗಿರುವುದರ ಅರ್ಥ, ಒಳ್ಳೇದರ ಮತ್ತು ಕೆಟ್ಟದ್ದರ ಕುರಿತಾದ ದೇವರ ಮಟ್ಟಗಳಿಗನುಸಾರ ನಡೆಯುವದೇ ಆಗಿದೆ. ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಜೀವಿಸುವಂತೆ ಉತ್ತೇಜಿಸುತ್ತಾ, ಜ್ಞಾನೋಕ್ತಿ ಪುಸ್ತಕದ 10ನೆಯ ಅಧ್ಯಾಯವು, ಹಾಗೆ ಮಾಡುವವರಿಂದ ಅನುಭವಿಸಲ್ಪಡುವ ಹೇರಳವಾದ ಆತ್ಮಿಕ ಆಶೀರ್ವಾದಗಳ ಕುರಿತು ತಿಳಿಸುತ್ತದೆ. ಈ ಆಶೀರ್ವಾದಗಳಲ್ಲಿ, ಆತ್ಮಿಕವಾಗಿ ಪೋಷಿಸುವಂಥ ಆಹಾರದ ಹೇರಳವಾದ ಸರಬರಾಯಿ, ಪ್ರತಿಫಲದಾಯಕ ಹಾಗೂ ತೃಪ್ತಿಕರವಾದ ಕೆಲಸ ಮತ್ತು ದೇವರು ಹಾಗೂ ಮನುಷ್ಯರೊಂದಿಗೆ ಒಳ್ಳೇ ಸಂಬಂಧವು ಸೇರಿದೆ. ಹೀಗಿರುವುದರಿಂದ ನಾವೀಗ ಜ್ಞಾನೋಕ್ತಿ 10:​1-14ನ್ನು ಪರಿಗಣಿಸೋಣ.

ಅತ್ಯುತ್ತಮ ಉತ್ತೇಜನ

ಆ ಅಧ್ಯಾಯದ ಆರಂಭದ ಪದಗಳು, ಜ್ಞಾನೋಕ್ತಿ ಪುಸ್ತಕದ ಮುಂದಿನ ವಿಭಾಗದ ಲೇಖಕನು ಯಾರೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಅವು ಹೀಗನ್ನುತ್ತವೆ: “ಸೊಲೊಮೋನನ ಜ್ಞಾನೋಕ್ತಿಗಳು.” ಸರಿಯಾದ ಮಾರ್ಗವನ್ನು ಅನುಸರಿಸಲು ಅತ್ಯುತ್ತಮವಾದ ಉತ್ತೇಜನವು ಯಾವುದೆಂಬುದನ್ನು ಗುರುತಿಸುತ್ತಾ, ಪ್ರಾಚೀನ ಇಸ್ರಾಯೇಲಿನ ರಾಜ ಸೊಲೊಮೋನನು ಹೇಳುವುದು: “ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ.”​—ಜ್ಞಾನೋಕ್ತಿ 10:1, ಓರೆ ಅಕ್ಷರಗಳು ನಮ್ಮವು.

ತಮ್ಮ ಮಕ್ಕಳಲ್ಲಿ ಯಾರಾದರೊಬ್ಬರು ಸತ್ಯವನ್ನು ಹಾಗೂ ಜೀವಂತ ದೇವರ ಆರಾಧನೆಯನ್ನು ತೊರೆದುಬಿಡುವಾಗ ಹೆತ್ತವರಿಗೆ ಎಷ್ಟೊಂದು ದುಃಖವಾಗುತ್ತದೆ! ಆ ವಿವೇಕಿ ರಾಜನು ವಿಶೇಷವಾಗಿ ತಾಯಿಯ ದುಃಖದ ಕುರಿತಾಗಿ ತಿಳಿಸುತ್ತಾನೆ. ಇದು, ಅವಳು ಹೆಚ್ಚು ಗಾಢವಾಗಿ ದುಃಖಿಸುತ್ತಾಳೆಂಬುದನ್ನು ಸೂಚಿಸಲಿಕ್ಕಾಗಿರಬಹುದು. ಇದು ಡಾರಿಸ್‌ * ಎಂಬುವವರ ವಿಷಯದಲ್ಲಿ ಸತ್ಯವಾಗಿತ್ತು. ಅವರು ತಿಳಿಸುವುದು: “ನಮ್ಮ 21 ವರ್ಷ ಪ್ರಾಯದ ಮಗನು ಸತ್ಯವನ್ನು ಬಿಟ್ಟು ಹೋದಾಗ, ದುಃಖದಿಂದ ನನ್ನ ಗಂಡ ಫ್ರ್ಯಾಂಕ್‌ ಮತ್ತು ನನ್ನ ಎದೆಯೊಡೆಯಿತು. ಫ್ರ್ಯಾಂಕ್‌ಗಿಂತಲೂ ನನಗೆ ಆ ಭಾವನಾತ್ಮಕ ನೋವು ಹೆಚ್ಚು ತೀವ್ರವಾಗಿದೆ. 12 ವರ್ಷಗಳು ಗತಿಸಿಹೋದರೂ ಆ ಗಾಯವು ಇನ್ನೂ ವಾಸಿಯಾಗಿಲ್ಲ.”

ಮಕ್ಕಳು ತಮ್ಮ ತಂದೆಯ ಸಂತೋಷದ ಮೇಲೆ ಪ್ರಭಾವ ಬೀರಬಲ್ಲರು ಮತ್ತು ತಾಯಿಗೆ ಮನೋವೇದನೆಯನ್ನು ಉಂಟುಮಾಡಬಲ್ಲರು. ಆದುದರಿಂದ ನಾವು ವಿವೇಕವನ್ನು ತೋರಿಸಿ, ನಮ್ಮ ಹೆತ್ತವರಿಗೆ ಆನಂದವನ್ನು ತರುವಂತಾಗಲಿ. ಮತ್ತು ಇನ್ನೂ ಹೆಚ್ಚು ಪ್ರಾಮುಖ್ಯವಾಗಿ, ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಹೃದಯವನ್ನು ಸಂತೋಷಪಡಿಸೋಣ.

‘ನೀತಿವಂತನು ತೃಪ್ತಿಪಡಿಸಲ್ಪಡುತ್ತಾನೆ’

“ಅನ್ಯಾಯದ ಹಣವು ನಿಷ್ಪ್ರಯೋಜಕವಾಗಿದೆ. ನೀತಿಯ ಜೀವಿತವು ಮರಣದಿಂದ ರಕ್ಷಿಸಬಲ್ಲದು” ಎಂದು ರಾಜನು ಹೇಳುತ್ತಾನೆ. (ಜ್ಞಾನೋಕ್ತಿ 10:2, ಪರಿಶುದ್ಧ ಬೈಬಲ್‌, * ಓರೆ ಅಕ್ಷರಗಳು ನಮ್ಮವು.) ಅಂತ್ಯ ಕಾಲದ ಕೊನೆಯ ಭಾಗದಲ್ಲಿ ಜೀವಿಸುತ್ತಿರುವ ಸತ್ಕ್ರೈಸ್ತರಿಗೆ ಈ ಮಾತುಗಳು ನಿಜವಾಗಿಯೂ ಅಮೂಲ್ಯವಾಗಿವೆ. (ದಾನಿಯೇಲ 12:4) ಭಕ್ತಿಹೀನ ಲೋಕದ ನಾಶನವು ತುಂಬ ಹತ್ತಿರವಿದೆ. ಮನುಷ್ಯನಿರ್ಮಿತ ಸುರಕ್ಷೆಯ ಯಾವುದೇ ಮಾಧ್ಯಮವು​—ಅದು ಭೌತಿಕವಾಗಿರಲಿ, ಆರ್ಥಿಕವಾಗಿರಲಿ ಅಥವಾ ಮಿಲಿಟರಿ ಸಂಬಂಧಿತವಾಗಿರಲಿ​—ಬರುತ್ತಿರುವ “ಮಹಾ ಸಂಕಟದಲ್ಲಿ” ಸಂರಕ್ಷಣೆಯನ್ನು ನೀಡಲಾರದು. (ಪ್ರಕಟನೆ 7:​9, 10, 13, 14, NW) ಕೇವಲ “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.” (ಜ್ಞಾನೋಕ್ತಿ 2:21) ಆದುದರಿಂದ, ನಾವು “ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ”ಪಡುತ್ತಾ ಇರೋಣ.​—ಮತ್ತಾಯ 6:33.

ಯೆಹೋವನ ಸೇವಕರು, ದೇವರ ಆಶೀರ್ವಾದಗಳನ್ನು ಅನುಭವಿಸಲಿಕ್ಕಾಗಿ ವಾಗ್ದತ್ತ ಹೊಸ ಲೋಕವು ಬರುವ ವರೆಗೆ ಕಾಯಬೇಕಾಗಿಲ್ಲ. “ಯೆಹೋವನು ನೀತಿವಂತನನ್ನು ಹಸಿವೆಗೊಳಿಸನು; ದುಷ್ಟನ ಆಶೆಯನ್ನು ಭಂಗಪಡಿಸುತ್ತಾನೆ.” (ಜ್ಞಾನೋಕ್ತಿ 10:​3, ಓರೆ ಅಕ್ಷರಗಳು ನಮ್ಮವು.) ಯೆಹೋವನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಹೇರಳವಾಗಿ ಆತ್ಮಿಕ ಆಹಾರವನ್ನು ಒದಗಿಸಿದ್ದಾನೆ. (ಮತ್ತಾಯ 24:45) “ಹೃದಯಾನಂದದಿಂದ ಹರ್ಷಧ್ವನಿಗೈ”ಯಲು ನೀತಿವಂತನಿಗೆ ಖಂಡಿತವಾಗಿಯೂ ಕಾರಣಗಳಿವೆ. (ಯೆಶಾಯ 65:14) ಜ್ಞಾನವು ಅವನಿಗೆ ಆಹ್ಲಾದಕರವಾಗಿದೆ. ಆತ್ಮಿಕ ನಿಧಿಗಳಿಗಾಗಿ ಹುಡುಕುವುದು ಅವನಿಗೆ ಹರ್ಷವನ್ನುಂಟುಮಾಡುತ್ತದೆ. ದುಷ್ಟನಿಗಾದರೊ ಈ ಎಲ್ಲ ಸುಖಾನುಭವಗಳ ರುಚಿಯೇ ಇಲ್ಲ.

“ಚುರುಕುಗೈ ಐಶ್ವರ್ಯ”

ನೀತಿವಂತನು ಇನ್ನೊಂದು ವಿಧದಲ್ಲೂ ಆಶೀರ್ವದಿಸಲ್ಪಟ್ಟಿದ್ದಾನೆ. “ಜೋಲುಗೈ ದಾರಿದ್ರ್ಯ; ಚುರುಕುಗೈ ಐಶ್ವರ್ಯ. ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತನು; ಕೊಯ್ಲಿನಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.”​—ಜ್ಞಾನೋಕ್ತಿ 10:4, 5, ಓರೆ ಅಕ್ಷರಗಳು ನಮ್ಮವು.

ರಾಜನ ಈ ಮಾತುಗಳು, ವಿಶೇಷವಾಗಿ ಕೊಯ್ಲಿನ ಸಮಯದಲ್ಲಿ ಕೆಲಸಗಾರರಿಗೆ ಅರ್ಥಭರಿತವಾಗಿವೆ. ಕೊಯ್ಲಿನ ಸಮಯವು, ನಿದ್ರೆಮಾಡುವ ಸಮಯವಾಗಿರುವುದಿಲ್ಲ. ಅದು ಚುರುಕಾಗಿ ಮತ್ತು ಅನೇಕ ತಾಸುಗಳ ವರೆಗೆ ಕೆಲಸಮಾಡುವ ಸಮಯವಾಗಿರುತ್ತದೆ. ಹೌದು, ಅದು ತುರ್ತಿನ ಸಮಯವಾಗಿದೆ.

ಧಾನ್ಯದ ಕೊಯ್ಲನ್ನಲ್ಲ ಬದಲಾಗಿ ಜನರ ಕೊಯ್ಲನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿದ್ದು, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಬೆಳೆಯು [“ಕೊಯ್ಲು,” NW] ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ [“ಕೊಯ್ಲಿನ,” NW] ಯಜಮಾನನನ್ನು [ಯೆಹೋವ ದೇವರನ್ನು]​—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಮತ್ತಾಯ 9:35-38) ಇಸವಿ 2000ದಲ್ಲಿ, 1.4 ಕೋಟಿಗಿಂತಲೂ ಹೆಚ್ಚು ಜನರು ಯೇಸುವಿನ ಮರಣದ ಜ್ಞಾಪಕಾಚರಣೆಗೆ ಹಾಜರಾದರು. ಈ ಸಂಖ್ಯೆಯು ಯೆಹೋವನ ಸಾಕ್ಷಿಗಳ ಸಂಖ್ಯೆಗಿಂತ ಇಮ್ಮಡಿಯಾಗಿತ್ತು. ಆದುದರಿಂದ, ‘ಹೊಲಗಳು ಬೆಳ್ಳಗಾಗಿ ಕೊಯ್ಲಿಗೆ ಬಂದಿವೆ’ ಎಂಬುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? (ಯೋಹಾನ 4:35) ಸತ್ಯಾರಾಧಕರು ಯಜಮಾನನ ಬಳಿ ಹೆಚ್ಚಿನ ಕೆಲಸಗಾರರಿಗಾಗಿ ಕೇಳಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, ತಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಅವರು ಸ್ವತಃ ಪರಿಶ್ರಮಪಡುತ್ತಾರೆ. (ಮತ್ತಾಯ 28:​19, 20) ಮತ್ತು ಯೆಹೋವನು ಅವರ ಪ್ರಯತ್ನಗಳ ಮೇಲೆ ಎಷ್ಟೊಂದು ಆಶೀರ್ವಾದಗಳನ್ನು ಸುರಿಸಿದ್ದಾನೆ! 2000 ಸೇವಾ ವರ್ಷದಲ್ಲಿ, 2,80,000 ಹೊಸ ವ್ಯಕ್ತಿಗಳು ದೀಕ್ಷಾಸ್ನಾನ ಪಡೆದುಕೊಂಡರು. ಇವರು ಸಹ ದೇವರ ವಾಕ್ಯದ ಬೋಧಕರಾಗಲು ಪ್ರಯತ್ನಿಸುತ್ತಾರೆ. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹೆಚ್ಚು ಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ ಈ ಕೊಯ್ಲಿನ ಸಮಯದಲ್ಲಿ ನಾವು ಆನಂದ ಮತ್ತು ತೃಪ್ತಿಯನ್ನು ಅನುಭವಿಸೋಣ.

‘ಅವನ ತಲೆ ಆಶೀರ್ವಾದಗಳ ನೆಲೆ’

“ನೀತಿವಂತನ ತಲೆ ಆಶೀರ್ವಾದದ ನೆಲೆ; ಆದರೆ ದುಷ್ಟನ ಬಾಯಿ ಹಿಂಸಾಚಾರವನ್ನು ಮುಚ್ಚಿಹಾಕುತ್ತದೆ” ಎಂದು ಸೊಲೊಮೋನನು ಮುಂದುವರಿಸುತ್ತಾನೆ.​—ಜ್ಞಾನೋಕ್ತಿ 10:6, NW.

ಶುದ್ಧಮನಸ್ಸುಳ್ಳವನೂ ನೀತಿವಂತನೂ ಆಗಿರುವ ಒಬ್ಬ ವ್ಯಕ್ತಿಯು ತನ್ನ ನೀತಿಯ ವಿಷಯದಲ್ಲಿ ಬಹಳಷ್ಟು ಪುರಾವೆಯನ್ನು ಕೊಡುತ್ತಾನೆ. ಅವನ ಮಾತುಕತೆಯು ದಯಾಪರವೂ, ಭಕ್ತಿವೃದ್ಧಿಮಾಡುವಂಥದ್ದೂ ಆಗಿದೆ, ಅವನ ಕಾರ್ಯಗಳು ರಚನಾತ್ಮಕವೂ, ಉದಾರಭಾವದವುಗಳೂ ಆಗಿರುತ್ತವೆ. ಬೇರೆಯವರು ಅವನನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ. ಅಂಥ ವ್ಯಕ್ತಿಯು ಅವರ ಆಶೀರ್ವಾದಗಳನ್ನು ಅಂದರೆ ಅವರ ಗಣ್ಯತೆಯನ್ನು ಸಂಪಾದಿಸುತ್ತಾನೆ. ಅವರು ಅವನ ಬಗ್ಗೆ ಒಳ್ಳೇದನ್ನೇ ಮಾತಾಡುತ್ತಾರೆ.

ಆದರೆ ಇನ್ನೊಂದು ಬದಿಯಲ್ಲಿ, ಒಬ್ಬ ದುಷ್ಟ ವ್ಯಕ್ತಿಯು ದ್ವೇಷಪೂರ್ಣನೂ ಅಥವಾ ಹಗೆತನವುಳ್ಳವನೂ ಮತ್ತು ಮೂಲತಃ ಬೇರೆಯವರಿಗೆ ಹಾನಿಯನ್ನುಂಟುಮಾಡುವ ಪ್ರವೃತ್ತಿಯುಳ್ಳವನೂ ಆಗಿದ್ದಾನೆ. ಅವನ ಮಾತು ಮಧುರವಾದದ್ದಾಗಿರಬಹುದು ಮತ್ತು ಅವನು ತನ್ನ ಹೃದಯದಲ್ಲಿ ಅಡಗಿಸಿಟ್ಟುಕೊಂಡಿರುವ ‘ಹಿಂಸಾಚಾರವನ್ನು ಮುಚ್ಚಿಹಾಕಬಹುದು.’ ಆದರೆ ಕಟ್ಟಕಡೆಗೆ ಅವನದನ್ನು ಶಾರೀರಿಕ ಅಥವಾ ಮೌಖಿಕ ದಾಳಿಗಳ ಮೂಲಕ ಪ್ರಕಟಪಡಿಸುತ್ತಾನೆ. (ಮತ್ತಾಯ 12:​34, 35) ಅಥವಾ ಕನ್ನಡ ಬೈಬಲಿನಲ್ಲಿ ಹೇಳಿರುವಂತೆ, “ದುಷ್ಟನ ಬಾಯಿಗೆ ಬಲಾತ್ಕಾರವೇ [“ಹಿಂಸಾಚಾರವೇ,” NW] ಮುಚ್ಚಳ.” (ಜ್ಞಾನೋಕ್ತಿ 10:6) ಇದು, ದುಷ್ಟನು ಬೇರೆಯವರಿಗೆ ಏನನ್ನು ತೋರಿಸುತ್ತಾನೊ ಅದನ್ನೇ, ಅಂದರೆ ವೈರತ್ವವನ್ನೇ ಹಿಂದೆ ಪಡೆಯುತ್ತಾನೆಂಬುದನ್ನು ಸೂಚಿಸುತ್ತದೆ. ಇದು ಅವನ ಬಾಯಿಯನ್ನು ಮುಚ್ಚಿಸಿ, ಮಾತಡಗಿಸುತ್ತದೊ ಎಂಬಂತಿದೆ. ಇಂಥ ವ್ಯಕ್ತಿಯು ಬೇರೆಯವರಿಂದ ಯಾವುದೇ ರೀತಿಯ ಆಶೀರ್ವಾದಗಳನ್ನು ನಿರೀಕ್ಷಿಸಬಲ್ಲನೊ?

“ಶಿಷ್ಟರ [“ನೀತಿವಂತರ,” NW] ಸ್ಮರಣೆಯು ಆಶೀರ್ವಾದಕ್ಕಾಸ್ಪದ; ದುಷ್ಟರ ನಾಮವು ನಿರ್ನಾಮ” ಎಂದು ಇಸ್ರಾಯೇಲಿನ ರಾಜನು ಬರೆಯುತ್ತಾನೆ. (ಜ್ಞಾನೋಕ್ತಿ 10:7, ಓರೆ ಅಕ್ಷರಗಳು ನಮ್ಮವು.) ನೀತಿವಂತ ವ್ಯಕ್ತಿಯನ್ನು ಇತರರು, ವಿಶೇಷವಾಗಿ ಯೆಹೋವ ದೇವರು ಒಳ್ಳೇ ರೀತಿಯಲ್ಲಿ ಸ್ಮರಿಸುತ್ತಾನೆ. ಮರಣದ ವರೆಗೆ ನಂಬಿಗಸ್ತನಾಗಿರುವ ಮೂಲಕ ಯೇಸು ದೇವದೂತರಿಗಿಂತಲೂ “ಶ್ರೇಷ್ಠವಾದ ಹೆಸರನ್ನು” ಪಡೆದುಕೊಂಡನು. (ಇಬ್ರಿಯ 1:​3, 4) ಕ್ರೈಸ್ತಪೂರ್ವ ನಂಬಿಗಸ್ತ ಸ್ತ್ರೀಪುರುಷರನ್ನು ಅನುಕರಣೆಗೆ ಯೋಗ್ಯರಾದ ಮಾದರಿಗಳೋಪಾದಿ ಇಂದು ಸತ್ಯ ಕ್ರೈಸ್ತರು ಜ್ಞಾಪಿಸಿಕೊಳ್ಳುತ್ತಾರೆ. (ಇಬ್ರಿಯ 12:​1, 2) ಇದು ದುಷ್ಟರ ಹೆಸರಿಗಿಂತ ಎಷ್ಟು ಭಿನ್ನವಾಗಿದೆ. ಅವರ ಹೆಸರು, ಅಸಹ್ಯವಾದದ್ದೂ, ಕೊಳೆತು ನಾರುವಂಥದ್ದೂ ಆಗಿರುತ್ತದೆ! ಹೌದು, “ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.” (ಜ್ಞಾನೋಕ್ತಿ 22:1) ನಾವು ಯೆಹೋವನೊಂದಿಗೆ ಮತ್ತು ಜೊತೆಮಾನವರೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿಕೊಳ್ಳೋಣ.

“ನಿರ್ದೋಷದ ನಡತೆಯವನು ನಿರ್ಭಯವಾಗಿ ನಡೆಯುವನು”

ಬುದ್ಧಿವಂತರು ಮತ್ತು ಮೂರ್ಖರ ನಡುವಣ ವ್ಯತ್ಯಾಸವನ್ನು ತೋರಿಸುತ್ತಾ ಸೊಲೊಮೋನನು ತಿಳಿಸುವುದು: “ಜ್ಞಾನಹೃದಯನು ಆಜ್ಞೆಗಳನ್ನು ವಹಿಸುವನು; ಹರಟೆಯ ಮೂರ್ಖನು ಕೆಡವಲ್ಪಡುವನು.” (ಜ್ಞಾನೋಕ್ತಿ 10:​8, ಓರೆ ಅಕ್ಷರಗಳು ನಮ್ಮವು.) “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂದು ಒಬ್ಬ ವಿವೇಕಿಗೆ ಚೆನ್ನಾಗಿ ಗೊತ್ತಿರುತ್ತದೆ. (ಯೆರೆಮೀಯ 10:23) ಯೆಹೋವನಿಂದ ಮಾರ್ಗದರ್ಶನವನ್ನು ಪಡೆಯುವ ಅಗತ್ಯವನ್ನು ಅವನು ಗ್ರಹಿಸುತ್ತಾನೆ ಮತ್ತು ದೇವರ ಆಜ್ಞೆಗಳನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸುತ್ತಾನೆ. ಆದರೆ ಇನ್ನೊಂದು ಕಡೆ, ಮೂರ್ಖನು ಈ ಮೂಲಭೂತ ವಾಸ್ತವಾಂಶವನ್ನು ಅರ್ಥಮಾಡಿಕೊಳ್ಳಲಾರನು. ಅವನ ಅರ್ಥಹೀನ ವಟಗುಟ್ಟುವಿಕೆಯು, ಅವನನ್ನು ನಾಶನದ ಅಂಚಿಗೆ ತಳ್ಳುತ್ತದೆ.

ಒಬ್ಬ ನೀತಿವಂತ ವ್ಯಕ್ತಿಯು ದುಷ್ಟರಿಗೆ ಸಿಗದಂಥ ಸುರಕ್ಷೆಯನ್ನೂ ಆನಂದಿಸುತ್ತಾನೆ. “ನಿರ್ದೋಷದ ನಡತೆಯವನು ನಿರ್ಭಯವಾಗಿ ನಡೆಯುವನು; ವಕ್ರಮಾರ್ಗಿಯು ಬೈಲಿಗೆ ಬೀಳುವನು. ಕಣ್ಣುಮಿಟಕಿಸುವವನು ಕಷ್ಟಕರನು; ಧೈರ್ಯದಿಂದ ಗದರಿಸುವವನು ಸಮಾಧಾನಕರನು.”​—ಜ್ಞಾನೋಕ್ತಿ 10:9, 10, ಓರೆ ಅಕ್ಷರಗಳು ನಮ್ಮವು.

ನಿರ್ದೋಷ ನಡತೆಯ ಒಬ್ಬ ವ್ಯಕ್ತಿಯು ತನ್ನ ವ್ಯವಹಾರಗಳಲ್ಲಿ ಪ್ರಾಮಾಣಿಕನಾಗಿರುತ್ತಾನೆ. ಅವನು ಇತರರ ಗೌರವ ಮತ್ತು ಭರವಸೆಯನ್ನು ಸಂಪಾದಿಸಿಕೊಳ್ಳುತ್ತಾನೆ. ಒಬ್ಬ ಪ್ರಾಮಾಣಿಕ ವ್ಯಕ್ತಿಯು ತುಂಬ ಅಮೂಲ್ಯವಾದ ನೌಕರನಾಗಿರುತ್ತಾನೆ ಮತ್ತು ಅನೇಕವೇಳೆ ಅವನಿಗೆ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಡಲಾಗುತ್ತದೆ. ಒಬ್ಬ ಪ್ರಾಮಾಣಿಕ ವ್ಯಕ್ತಿ ಎಂದು ಅವನಿಗಿರುವ ಖ್ಯಾತಿಯು, ಉದ್ಯೋಗಗಳು ವಿರಳವಾಗಿರುವ ಸಮಯದಲ್ಲೂ ಅವನು ಉದ್ಯೋಗವನ್ನು ಗಿಟ್ಟಿಸಿಕೊಳ್ಳುವಂತೆ ಮಾಡುವುದು. ಅಷ್ಟುಮಾತ್ರವಲ್ಲದೆ, ಅವನ ಪ್ರಾಮಾಣಿಕತೆಯು, ಮನೆಯಲ್ಲೂ ಒಂದು ಸಂತೋಷಕರ ಹಾಗೂ ಸಮಾಧಾನದ ವಾತಾವರಣಕ್ಕೆ ನೆರವನ್ನು ನೀಡುತ್ತದೆ. (ಕೀರ್ತನೆ 34:​13, 14) ತನ್ನ ಕುಟುಂಬದ ಸದಸ್ಯರೊಂದಿಗಿನ ಸಂಬಂಧದಲ್ಲಿ ಅವನಿಗೆ ಸುರಕ್ಷೆಯ ಅನಿಸಿಕೆಯಾಗುತ್ತದೆ. ಈ ಸುರಕ್ಷೆ ಅಥವಾ ನಿರ್ಭಯದ ಅನಿಸಿಕೆಯು, ನಿರ್ದೋಷ ನಡತೆಯ ಫಲವಾಗಿದೆ.

ಆದರೆ ಸ್ವಾರ್ಥ ಲಾಭಕ್ಕಾಗಿ ಅಪ್ರಾಮಾಣಿಕತೆಗೆ ಶರಣಾಗತನಾಗುವ ಒಬ್ಬ ವ್ಯಕ್ತಿಯೊಂದಿಗೆ ಪರಿಸ್ಥಿತಿಯು ಭಿನ್ನವಾಗಿರುತ್ತದೆ. ಒಬ್ಬ ವಂಚಕನು ತನ್ನ ಅಸತ್ಯವನ್ನು, ಸೊಟ್ಟು ಮಾತು ಅಥವಾ ದೇಹ ಭಾಷೆಯೊಂದಿಗೆ ಮರೆಮಾಚಲು ಪ್ರಯತ್ನಿಸಬಹುದು. (ಜ್ಞಾನೋಕ್ತಿ 6:​12-14) ದುರುದ್ದೇಶ ಅಥವಾ ವಂಚನಾತ್ಮಕ ಉದ್ದೇಶದಿಂದ ಅವನ ಕಣ್ಣು ಮಿಟುಕಿಸುವಿಕೆಯು, ಅವನ ವಂಚನೆಗೆ ಬಲಿಬೀಳುವವರಿಗೆ ಬಹಳಷ್ಟು ಮಾನಸಿಕ ಬೇಗುದಿಯನ್ನು ಉಂಟುಮಾಡಬಹುದು. ಆದರೆ ಒಂದಲ್ಲ ಒಂದು ಸಮಯ, ಅಂಥ ವ್ಯಕ್ತಿಯ ವಕ್ರತೆಯು ಬಯಲಾಗುವುದು. ಅಪೊಸ್ತಲ ಪೌಲನು ಬರೆದುದು: “ಕೆಲವರ ಪಾಪಕೃತ್ಯಗಳು ಪ್ರಸಿದ್ಧವಾಗಿದ್ದು ಅವರು ಇಂಥವರೆಂದು ಮೊದಲೇ ತಿಳಿಯಪಡಿಸುತ್ತವೆ; ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ. ಹಾಗೆಯೇ ಕೆಲವರ ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ, ಬೇರೆ ಕೆಲವರ ಸತ್ಕ್ರಿಯೆಗಳು ಅಪ್ರಸಿದ್ಧವಾಗಿದ್ದರೂ ಮರೆಯಾಗಿರಲಾರವು.” (1 ತಿಮೊಥೆಯ 5:24, 25) ಅಪ್ರಾಮಾಣಿಕತೆಯಲ್ಲಿ ಯಾರೇ ಒಳಗೂಡಿರಲಿ, ಅಂದರೆ ಹೆತ್ತವನಾಗಿರಲಿ, ಸ್ನೇಹಿತನಾಗಿರಲಿ, ವಿವಾಹ ಸಂಗತಿಯಾಗಿರಲಿ ಅಥವಾ ಒಬ್ಬ ಪರಿಚಯಸ್ಥನಾಗಿರಲಿ, ಅದು ಕಟ್ಟಕಡೆಗೆ ಖಂಡಿತವಾಗಿಯೂ ಬಯಲಾಗುವುದು. ಮತ್ತು ಅಪ್ರಾಮಾಣಿಕನೆಂಬ ಹೆಸರುಳ್ಳ ವ್ಯಕ್ತಿಯನ್ನು ಯಾರು ತಾನೇ ನಂಬುವರು?

‘ಅವನ ಬಾಯಿ ಜೀವದ ಬುಗ್ಗೆ’

“ಶಿಷ್ಟನ [“ನೀತಿವಂತನ,” NW] ಬಾಯಿ ಜೀವದ ಬುಗ್ಗೆ; ದುಷ್ಟನ ಬಾಯಲ್ಲಿ ಬಲಾತ್ಕಾರವು ತುಂಬಿ ತುಳುಕುತ್ತದೆ” ಎಂದು ಸೊಲೊಮೋನನು ಹೇಳುತ್ತಾನೆ. (ಜ್ಞಾನೋಕ್ತಿ 10:​11, ಓರೆ ಅಕ್ಷರಗಳು ನಮ್ಮವು.) ಮಾತುಗಳು ಒಂದೊ ಒಬ್ಬನನ್ನು ಗುಣಪಡಿಸಬಲ್ಲವು ಇಲ್ಲವೆ ಮನಸ್ಸನ್ನು ನೋಯಿಸಬಲ್ಲವು. ಅವು ಒಬ್ಬ ವ್ಯಕ್ತಿಯಲ್ಲಿ ನವಚೈತನ್ಯವನ್ನುಂಟುಮಾಡಿ ಗೆಲುವನ್ನು ಮೂಡಿಸಬಲ್ಲವು, ಇಲ್ಲವೆ ಅವನನ್ನು ಸಂಪೂರ್ಣವಾಗಿ ಎದೆಗುಂದಿಸಬಲ್ಲವು.

ಆಡಲ್ಪಡುವ ಮಾತುಗಳ ಹಿಂದಿರುವ ಪ್ರೇರಣೆಯನ್ನು ಗುರುತಿಸುತ್ತಾ, ಇಸ್ರಾಯೇಲಿನ ಆ ರಾಜನು ತಿಳಿಸುವುದು: “ದ್ವೇಷವು ಜಗಳಗಳನ್ನೆಬ್ಬಿಸುತ್ತದೆ; ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ.” (ಜ್ಞಾನೋಕ್ತಿ 10:12, ಓರೆ ಅಕ್ಷರಗಳು ನಮ್ಮವು.) ದ್ವೇಷವು ಮಾನವ ಸಮಾಜದಲ್ಲಿ ಜಗಳಗಳನ್ನು ಉಂಟುಮಾಡುತ್ತದೆ, ಕಲಹವನ್ನೆಬ್ಬಿಸುತ್ತದೆ. ಯೆಹೋವನನ್ನು ಪ್ರೀತಿಸುವವರಾದರೋ, ತಮ್ಮ ಜೀವಿತಗಳಿಂದ ದ್ವೇಷವನ್ನು ಕಿತ್ತೆಸೆಯಬೇಕು. ಹೇಗೆ? ಅದರ ಸ್ಥಾನದಲ್ಲಿ ಪ್ರೀತಿಯನ್ನು ತುಂಬಿಸುವ ಮೂಲಕವೇ. “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ಪ್ರೀತಿಯು “ಎಲ್ಲವನ್ನು ಅಡಗಿಸಿಕೊಳ್ಳುತ್ತದೆ,” ಅಂದರೆ ಎಲ್ಲವನ್ನೂ ಮುಚ್ಚುತ್ತದೆ. (1 ಕೊರಿಂಥ 13:7) ದೈವಿಕ ಪ್ರೀತಿಯು, ಅಪರಿಪೂರ್ಣ ಜನರಿಂದ ಪರಿಪೂರ್ಣತೆಯನ್ನು ನಿರೀಕ್ಷಿಸುವುದಿಲ್ಲ. ಅಂಥ ಪ್ರೀತಿಯು, ಬೇರೆಯವರ ತಪ್ಪುಗಳು ಗಂಭೀರವಾದ ಪಾಪವಾಗಿರದಿದ್ದಲ್ಲಿ, ಅವುಗಳ ಕುರಿತಾಗಿ ಡಂಗುರ ಹೊಡೆಯುವ ಬದಲು ಅವರ ದೋಷಗಳನ್ನು ಅಲಕ್ಷಿಸುವಂತೆ ನಮಗೆ ಸಹಾಯಮಾಡುತ್ತದೆ. ಕ್ಷೇತ್ರ ಸೇವೆಯಲ್ಲಿ, ನಮ್ಮ ಉದ್ಯೋಗದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಯಾರಾದರೂ ನಮ್ಮನ್ನು ದುರುಪಚರಿಸಿದರೂ ಪ್ರೀತಿಯು ಸಹಿಸಿಕೊಳ್ಳುತ್ತದೆ.

ಆ ವಿವೇಕಿ ರಾಜನು ಮುಂದುವರಿಸುವುದು: “ವಿವೇಕಿಯ [“ತಿಳುವಳಿಕೆಯುಳ್ಳವನ,” NW] ತುಟಿಗಳಿಂದ ಜ್ಞಾನ [“ವಿವೇಕ,” NW]; ಬುದ್ಧಿಹೀನನ ಬೆನ್ನಿಗೆ ಬೆತ್ತ.” (ಜ್ಞಾನೋಕ್ತಿ 10:13, ಓರೆ ಅಕ್ಷರಗಳು ನಮ್ಮವು.) ತಿಳುವಳಿಕೆಯುಳ್ಳ ವ್ಯಕ್ತಿಯೊಬ್ಬನ ವಿವೇಕವು ಅವನ ಹೆಜ್ಜೆಗಳನ್ನು ಮಾರ್ಗದರ್ಶಿಸುತ್ತದೆ. ಅವನ ತುಟಿಗಳಿಂದ ಹೊರಡುವ ಭಕ್ತಿವೃದ್ಧಿದಾಯಕ ಮಾತುಗಳು, ಬೇರೆಯವರಿಗೆ ನೀತಿಯ ಮಾರ್ಗದಲ್ಲಿ ನಡೆಯುವಂತೆ ಸಹಾಯಮಾಡುತ್ತವೆ. ಅವನಾಗಲಿ ಅವನಿಗೆ ಕಿವಿಗೊಡುವವರಾಗಲಿ, ಒತ್ತಾಯದಿಂದ ಅಂದರೆ ಶಿಸ್ತಿನ ಬೆತ್ತದಿಂದಲೇ ಸರಿಯಾದ ದಿಕ್ಕಿನಲ್ಲಿ ನಡೆಸಲ್ಪಡುವುದರ ಅಗತ್ಯವಿರುವುದಿಲ್ಲ.

“ಜ್ಞಾನವನ್ನು ಶೇಖರಿಸು”

ಕೆಲಸಕ್ಕೆ ಬಾರದ ಸಂಗತಿಗಳ ಕುರಿತಾಗಿ ಮಾತಾಡುವವರಾಗಿರದೆ, ನಮ್ಮ ಮಾತುಗಳು ‘ವಿವೇಕದ ಹರಿಯುವ ತೊರೆಯಾಗಿರುವಂತೆ’ ಯಾವುದು ಸಹಾಯಮಾಡುವುದು? (ಜ್ಞಾನೋಕ್ತಿ 18:​4, NW) ಸೊಲೊಮೋನನು ಉತ್ತರಿಸುವುದು: “ಜ್ಞಾನಿಗಳು ತಿಳಿದ ಸಂಗತಿಯನ್ನು ಹೊರಪಡಿಸುವದಿಲ್ಲ [“ವಿವೇಕಿಗಳು ಜ್ಞಾನವನ್ನು ಶೇಖರಿಸುತ್ತಾರೆ,” NW], ಮೂರ್ಖನ ಭಾಷಣ ಸಮೀಪನಾಶನ.”​—ಜ್ಞಾನೋಕ್ತಿ 10:14, ಓರೆ ಅಕ್ಷರಗಳು ನಮ್ಮವು.

ಮೊದಲನೆಯ ಆವಶ್ಯಕತೆಯು, ನಮ್ಮ ಮನಸ್ಸನ್ನು ಭಕ್ತಿವೃದ್ಧಿಮಾಡುವಂಥ ದೇವರ ಕುರಿತಾದ ಜ್ಞಾನದಿಂದ ತುಂಬಿಸುವುದು ಆಗಿದೆ. ಮತ್ತು ಆ ಜ್ಞಾನದ ಮೂಲ ಒಂದೇ ಆಗಿದೆ. ಅಪೊಸ್ತಲ ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ನಾವು ಜ್ಞಾನವನ್ನು ಶೇಖರಿಸಬೇಕು, ಮತ್ತು ಗುಪ್ತವಾದ ಧನಕ್ಕಾಗಿ ಹುಡುಕುತ್ತಿದ್ದೇವೊ ಎಂಬಂತೆ ದೇವರ ವಾಕ್ಯವನ್ನು ಶೋಧಿಸಬೇಕು. ಅಂಥ ಹುಡುಕುವಿಕೆಯು ಎಷ್ಟು ಉತ್ತೇಜನದಾಯಕ ಮತ್ತು ಪ್ರತಿಫಲದಾಯಕವಾಗಿರುತ್ತದೆ!

ನಮ್ಮ ತುಟಿಗಳ ಮೇಲೆ ವಿವೇಕವು ಇರಬೇಕಾದರೆ, ಶಾಸ್ತ್ರಗಳ ಜ್ಞಾನವು ನಮ್ಮ ಹೃದಯದ ವರೆಗೂ ತಲಪಬೇಕು. ಯೇಸು ತನ್ನ ಕೇಳುಗರಿಗೆ ಹೇಳಿದ್ದು: “ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಲೂಕ 6:45) ಆದುದರಿಂದ, ನಾವೇನನ್ನು ಕಲಿಯುತ್ತೇವೊ ಅದರ ಕುರಿತು ಮನನಮಾಡುವ ಅಭ್ಯಾಸವನ್ನು ಮಾಡಬೇಕು. ಹೌದು, ಅಭ್ಯಾಸಮಾಡಲು ಮತ್ತು ಮನನಮಾಡಲು ಪ್ರಯತ್ನದ ಅಗತ್ಯವಿದೆ. ಆದರೆ ಅಂಥ ಅಭ್ಯಾಸವು ನಮ್ಮನ್ನು ಆತ್ಮಿಕವಾಗಿ ಎಷ್ಟು ಸಂಪದ್ಭರಿತರನ್ನಾಗಿ ಮಾಡುವುದು! ವಿಚಾರಹೀನ ಮಾತುಗಳನ್ನಾಡುವ ಬಾಯಿಬಡುಕರ ವಿನಾಶಕರ ಮಾರ್ಗವನ್ನು ಯಾರೂ ಅನುಸರಿಸಬೇಕಾಗಿಲ್ಲ.

ಹೌದು, ಒಬ್ಬ ವಿವೇಕಿಯು ದೇವರ ದೃಷ್ಟಿಯಲ್ಲಿ ಸರಿಯಾಗಿರುವುದನ್ನೇ ಮಾಡುತ್ತಾನೆ ಮತ್ತು ಇತರರ ಮೇಲೆ ಒಳ್ಳೆಯ ಪ್ರಭಾವವನ್ನು ಬೀರುತ್ತಾನೆ. ಅವನು ಆತ್ಮಿಕ ಆಹಾರದ ಸಮೃದ್ಧ ಸರಬರಾಯಿಯಲ್ಲಿ ಆನಂದಿಸುತ್ತಾನೆ ಮತ್ತು ಕರ್ತನ ಪ್ರತಿಫಲದಾಯಕ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುತ್ತಾನೆ. (1 ಕೊರಿಂಥ 15:58) ನಿರ್ದೋಷ ನಡತೆಯ ಮನುಷ್ಯನಾಗಿರುವುದರಿಂದ ಅವನು ನಿರ್ಭಯವಾಗಿ ನಡೆಯುತ್ತಾನೆ ಮತ್ತು ದೇವರ ಮೆಚ್ಚಿಗೆಗೆ ಪಾತ್ರನಾಗುತ್ತಾನೆ. ಹೌದು, ನೀತಿವಂತನ ಆಶೀರ್ವಾದಗಳು ನಿಜಕ್ಕೂ ಅನೇಕ. ಒಳ್ಳೆಯದರ ಮತ್ತು ಕೆಟ್ಟದ್ದರ ಕುರಿತಾದ ದೇವರ ಮಟ್ಟಗಳಿಗನುಗುಣವಾಗಿ ನಮ್ಮ ಜೀವಿತಗಳನ್ನು ನಡೆಸುವ ಮೂಲಕ, ನಾವು ಸಹ ನೀತಿಯನ್ನು ಹುಡುಕುವವರಾಗಿರೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 6 ಹೆಸರು ಬದಲಾಯಿಸಲ್ಪಟ್ಟಿದೆ.

^ ಪ್ಯಾರ. 9 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.

[ಪುಟ 25ರಲ್ಲಿರುವ ಚಿತ್ರ]

ಪ್ರಾಮಾಣಿಕತೆಯು ಸಂತೋಷಭರಿತ ಕುಟುಂಬ ಜೀವನವನ್ನು ನಡೆಸಲು ಸಹಾಯಮಾಡುತ್ತದೆ

[ಪುಟ 26ರಲ್ಲಿರುವ ಚಿತ್ರ]

‘ವಿವೇಕಿಗಳು ಜ್ಞಾನವನ್ನು ಶೇಖರಿಸುತ್ತಾರೆ’