ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮರಣದ ನಂತರ ಜೀವನ ಇದೆಯೋ?

ಮರಣದ ನಂತರ ಜೀವನ ಇದೆಯೋ?

ಮರಣದ ನಂತರ ಜೀವನ ಇದೆಯೋ?

“ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಎಂದು ಸುಮಾರು 3,500 ವರ್ಷಗಳ ಹಿಂದೆ ಮೂಲಪಿತನಾದ ಯೋಬನು ಪ್ರಶ್ನಿಸಿದನು. (ಯೋಬ 14:14) ಸಾವಿರಾರು ವರ್ಷಗಳಿಂದ ಈ ಪ್ರಶ್ನೆಯು ಮಾನವರನ್ನು ಗೊಂದಲಕ್ಕೀಡುಮಾಡಿದೆ. ಗತ ಯುಗಗಳಲ್ಲಿ, ಪ್ರತಿಯೊಂದು ಸಂಸ್ಕೃತಿಯ ಜನರು ಈ ವಿಷಯದ ಕುರಿತು ಪರಿಶೀಲನೆ ನಡೆಸಿ, ಬೇರೆ ಬೇರೆ ಸಿದ್ಧಾಂತಗಳನ್ನು ರಚಿಸಿದ್ದಾರೆ.

ನಾಮಮಾತ್ರದ ಕ್ರೈಸ್ತರಾಗಿರುವ ಅನೇಕರು, ಸ್ವರ್ಗ ಮತ್ತು ನರಕದಲ್ಲಿ ನಂಬಿಕೆಯಿಡುತ್ತಾರೆ. ಇನ್ನೊಂದು ಕಡೆ, ಹಿಂದೂಗಳು ಪುನರ್ಜನ್ಮದಲ್ಲಿ ನಂಬಿಕೆಯಿಡುತ್ತಾರೆ. ಮುಸ್ಲಿಮರ ದೃಷ್ಟಿಕೋನದ ಬಗ್ಗೆ ಮಾತಾಡುತ್ತಾ, ಇಸ್ಲಾಮ್‌ ಮತದ ಧಾರ್ಮಿಕ ಕೇಂದ್ರದ ಒಬ್ಬ ಸಹಾಯಕರಾದ ಎಮಿರ್‌ ಮುಆವೀಆ ಅವರು ಹೇಳುವುದು: “ಮರಣಾನಂತರ ನ್ಯಾಯತೀರ್ಪಿನ ದಿನವು ಇರುವುದೆಂದು ನಾವು ನಂಬುತ್ತೇವೆ, ಆಗ ನೀವು ಅಲ್ಲಾಹನ ಮುಂದೆ ತರಲ್ಪಡುವಿರಿ. ಇದು ಹೆಚ್ಚುಕಡಿಮೆ ನ್ಯಾಯಾಲಯಕ್ಕೆ ಹೋಗುವಂತೆಯೇ ಇರುತ್ತದೆ.” ಇಸ್ಲಾಮ್‌ ಮತದ ನಂಬಿಕೆಗನುಸಾರ, ಆ ಸಮಯದಲ್ಲಿ ಅಲ್ಲಾಹನು ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ತೂಗಿನೋಡಿ, ಆ ವ್ಯಕ್ತಿಯನ್ನು ಪರದೈಸಿಗೆ ಅಥವಾ ನರಕಾಗ್ನಿಗೆ ಕಳುಹಿಸುವನು.

ಶ್ರೀಲಂಕಾದಲ್ಲಿ, ಬೌದ್ಧರು ಹಾಗೂ ಕ್ಯಾಥೊಲಿಕರ ಮನೆಗಳಲ್ಲಿ ಯಾರಾದರೂ ಮರಣಹೊಂದುವುದಾದರೆ, ಅವರು ತಮ್ಮ ಮನೆ ಬಾಗಿಲುಗಳನ್ನು ಮತ್ತು ಕಿಟಕಿಗಳನ್ನು ತೆರೆದಿಡುತ್ತಾರೆ. ಎಣ್ಣೆ ದೀಪವನ್ನು ಹೊತ್ತಿಸಿಡುತ್ತಾರೆ ಮತ್ತು ಮೃತ ವ್ಯಕ್ತಿಯ ಪಾದಗಳು ಮನೆಯ ಮುಂಬಾಗಿಲ ಕಡೆಗಿರುವಂತೆ ಶವಪೆಟ್ಟಿಗೆಯನ್ನು ಇರಿಸಲಾಗುತ್ತದೆ. ಈ ಕ್ರಮಗಳು ಮೃತ ವ್ಯಕ್ತಿಯ ಆತ್ಮವು ಸುಲಭವಾಗಿ ಹೊರಗೆ ಹೋಗಲು ಅವಕಾಶಮಾಡಿಕೊಡುತ್ತವೆ ಎಂಬುದು ಅವರ ನಂಬಿಕೆಯಾಗಿದೆ.

ಯೂನಿವರ್ಸಿಟಿ ಆಫ್‌ ವೆಸ್ಟರ್ನ್‌ ಆಸ್ಟ್ರೇಲಿಯದ ರಾನಲ್ಡ್‌ ಎಮ್‌. ಬರ್‌ನ್ಟ್‌ರಿಗನುಸಾರ, “ಮಾನವರಲ್ಲಿ ಒಂದು ಆತ್ಮಿಕ ಭಾಗವಿದೆ, ಅದು ಎಂದೂ ಸಾಯುವುದಿಲ್ಲ” ಎಂಬುದು ಆಸ್ಟ್ರೇಲಿಯದ ಮೂಲನಿವಾಸಿಗಳ ನಂಬಿಕೆಯಾಗಿದೆ. ಆಫ್ರಿಕದ ಕೆಲವು ಬುಡಕಟ್ಟುಗಳಿಗೆ ಸೇರಿದ ಜನರ ನಂಬಿಕೆಯೇನೆಂದರೆ, ಮರಣಾನಂತರ ಸಾಮಾನ್ಯ ಜನರು ದೆವ್ವಗಳಾಗುತ್ತಾರೆ ಮತ್ತು ಪ್ರಸಿದ್ಧ ವ್ಯಕ್ತಿಗಳು ಪೂರ್ವಜ ಆತ್ಮಗಳಾಗುತ್ತಾರೆ; ಇವರನ್ನು ಸಮಾಜದ ಅದೃಶ್ಯ ನಾಯಕರೋಪಾದಿ ಗೌರವಿಸಲಾಗುತ್ತದೆ ಮತ್ತು ಅವರಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಕೆಲವು ದೇಶಗಳಲ್ಲಿ, ಮೃತರ ಸ್ಥಿತಿಯ ಕುರಿತಾದ ನಂಬಿಕೆಗಳು ಸ್ಥಳಿಕ ಸಂಪ್ರದಾಯ ಹಾಗೂ ನಾಮಮಾತ್ರದ ಕ್ರೈಸ್ತತ್ವದ ಮಿಶ್ರಣವಾಗಿವೆ. ಉದಾಹರಣೆಗಾಗಿ, ಪಶ್ಚಿಮ ಆಫ್ರಿಕದಲ್ಲಿರುವ ಅನೇಕ ಕ್ಯಾಥೊಲಿಕ್‌ ಮತ್ತು ಪ್ರಾಟೆಸ್ಟಂಟ್‌ ಜನರ ಮನೆಗಳಲ್ಲಿ ಯಾರಾದರೂ ಮರಣಪಟ್ಟರೆ, ಯಾರೊಬ್ಬರೂ ಕನ್ನಡಿಯಲ್ಲಿ ಮೃತ ವ್ಯಕ್ತಿಯ ಆತ್ಮವನ್ನು ನೋಡಬಾರದೆಂಬ ಕಾರಣಕ್ಕಾಗಿ, ಮನೆಯಲ್ಲಿರುವ ಎಲ್ಲ ಕನ್ನಡಿಗಳನ್ನು ಮುಚ್ಚಿಬಿಡಲಾಗುತ್ತದೆ.

ವಾಸ್ತವದಲ್ಲಿ, ‘ನಾವು ಸತ್ತಾಗ ನಮಗೆ ಏನು ಸಂಭವಿಸುತ್ತದೆ?’ ಎಂಬ ಪ್ರಶ್ನೆಗೆ ಜನರು ಬೇರೆ ಬೇರೆ ಉತ್ತರಗಳನ್ನು ಕೊಡುತ್ತಾರೆ. ಆದರೆ, ಈ ಬೇರೆ ಬೇರೆ ಉತ್ತರಗಳಲ್ಲಿ ಈ ಒಂದೇ ಮೂಲಭೂತ ವಿಚಾರವು ಅಡಕವಾಗಿದೆ: ಒಬ್ಬ ವ್ಯಕ್ತಿಯ ಒಳಗೆ ಯಾವುದೋ ಒಂದು ವಸ್ತು ಅಮರವಾಗಿದೆ ಮತ್ತು ಮರಣಾನಂತರ ಅದು ಬದುಕಿ ಉಳಿಯುತ್ತದೆ. ಆ “ವಸ್ತು” ಆತ್ಮವೇ ಆಗಿದೆ ಎಂದು ಕೆಲವು ಜನರು ನಂಬುತ್ತಾರೆ. ಉದಾಹರಣೆಗೆ, ಆಫ್ರಿಕ ಮತ್ತು ಏಷಿಯಾದ ಕೆಲವು ಭಾಗಗಳಲ್ಲಿ ಹಾಗೂ ಪೊಲಿನೇಷಿಯ, ಮೆಲನೇಷಿಯ ಮತ್ತು ಮೈಕ್ರೊನೇಷಿಯದ ಪೆಸಿಫಿಕ್‌ ಪ್ರಾಂತಗಳಲ್ಲಿರುವ ಅನೇಕರು, ಪ್ರಾಣವಲ್ಲ ಬದಲಾಗಿ ಆತ್ಮವು ಅಮರವಾಗಿದೆ ಎಂದು ನಂಬುತ್ತಾರೆ. ವಾಸ್ತವದಲ್ಲಿ, ಕೆಲವೊಂದು ಭಾಷೆಗಳಲ್ಲಿ “ಪ್ರಾಣ” ಎಂಬ ಶಬ್ದವೇ ಇಲ್ಲ.

ಒಬ್ಬ ಜೀವಂತ ವ್ಯಕ್ತಿಯಲ್ಲಿ ಆತ್ಮವಿದೆಯೋ? ಮರಣಾನಂತರ ನಿಜವಾಗಿಯೂ ಆ ಆತ್ಮವು ದೇಹವನ್ನು ಬಿಟ್ಟು ಹೊರಗೆ ಹೋಗುತ್ತದೋ? ಹಾಗಿರುವಲ್ಲಿ, ಆ ಆತ್ಮಕ್ಕೆ ಏನು ಸಂಭವಿಸುತ್ತದೆ? ಮೃತರಿಗೆ ಯಾವ ನಿರೀಕ್ಷೆಯಿದೆ? ಈ ಪ್ರಶ್ನೆಗಳನ್ನು ಅಲಕ್ಷಿಸಬಾರದು. ನಿಮ್ಮ ಸಂಸ್ಕೃತಿ ಅಥವಾ ಧಾರ್ಮಿಕ ಹಿನ್ನೆಲೆಯು ಏನೇ ಆಗಿರಲಿ, ಮರಣವು ಎಲ್ಲರೂ ಎದುರಿಸಬೇಕಾಗಿರುವಂತಹ ಒಂದು ವಾಸ್ತವಿಕತೆಯಾಗಿದೆ. ಹೀಗೆ, ವೈಯಕ್ತಿಕವಾದ ರೀತಿಯಲ್ಲಿ ನೀವೂ ಈ ವಿವಾದದಲ್ಲಿ ಒಳಗೂಡಿದ್ದೀರಿ. ಈ ವಿಷಯವನ್ನು ಪರೀಕ್ಷಿಸಿ ನೋಡುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.