ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಂದನೆಯ ಪೇತ್ರ 4:3ರಲ್ಲಿ (NW), ಒಂದು ಕಾಲದಲ್ಲಿ ಕೆಲವು ಕ್ರೈಸ್ತರು “ನ್ಯಾಯವಿರುದ್ಧವಾದ ವಿಗ್ರಹಾರಾಧನೆಗಳಲ್ಲಿ” ಪಾಲ್ಗೊಂಡಿದ್ದರೆಂದು ಹೇಳಲಾಗಿದೆ. ಎಲ್ಲ ವಿಗ್ರಹಾರಾಧನೆಗಳು ದೇವರಿಂದ ಖಂಡಿಸಲ್ಪಟ್ಟು, ನಿಷೇಧಿಸಲ್ಪಟ್ಟಿರುವುದರಿಂದ, ಅವೆಲ್ಲವೂ ನ್ಯಾಯವಿರುದ್ಧವಾಗಿಲ್ಲವೊ?

ಹೌದು, ದೇವರ ದೃಷ್ಟಿಕೋನದಲ್ಲಿ ಎಲ್ಲ ರೀತಿಯ ವಿಗ್ರಹಾರಾಧನೆಯು ನ್ಯಾಯವಿರುದ್ಧವಾಗಿದೆ. ಆದುದರಿಂದ ಆತನ ಅನುಗ್ರಹವನ್ನು ಪಡೆಯಲು ಪ್ರಯತ್ನಿಸುವವರು ವಿಗ್ರಹಾರಾಧನೆ ಮಾಡಬಾರದು.​—1 ಕೊರಿಂಥ 5:11; ಪ್ರಕಟನೆ 21:8.

ಆದರೆ ಅಪೊಸ್ತಲ ಪೇತ್ರನು ಇಲ್ಲಿ ಒಂದು ಭಿನ್ನ ದೃಷ್ಟಿಕೋನದಿಂದ ವಿಗ್ರಹಾರಾಧನೆಗೆ ಸೂಚಿಸುತ್ತಿದ್ದಂತೆ ತೋರುತ್ತದೆ. ಒಂದು ಕಾರಣವೇನೆಂದರೆ, ಅನೇಕ ಪ್ರಾಚೀನ ಜನಾಂಗಗಳಲ್ಲಿ, ವಿಗ್ರಹಾರಾಧನೆಯು ಸರ್ವಸಾಮಾನ್ಯವಾಗಿತ್ತು ಮತ್ತು ಅದಕ್ಕೆ ಅಧಿಕಾರಿಗಳಿಂದ ಯಾವುದೇ ಕಾನೂನುಬದ್ಧ ಪ್ರತಿಬಂಧವಿರಲಿಲ್ಲ. ಅಂದರೆ, ದೇಶದ ಕಾನೂನು ಅಂಥ ವಿಗ್ರಹಾರಾಧನೆಯನ್ನು ನಿಷೇಧಿಸುತ್ತಿರಲಿಲ್ಲ. ಕೆಲವೊಮ್ಮೆ ವಿಗ್ರಹಾರಾಧನೆಯು, ರಾಷ್ಟ್ರೀಯ ಅಥವಾ ಸರಕಾರಿ ಕಾರ್ಯನೀತಿಯ ಭಾಗವೂ ಆಗಿರುತ್ತಿತ್ತು. ಆ ಅರ್ಥದಲ್ಲಿ ಕೆಲವರು ಕ್ರೈಸ್ತರಾಗುವ ಮುಂಚೆ, ‘ಕಾನೂನಿನ ಪ್ರತಿಬಂಧವಿಲ್ಲದ ವಿಗ್ರಹಾರಾಧನೆಗಳಲ್ಲಿ’ ಪಾಲ್ಗೊಂಡಿದ್ದರು. (ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌, 1950ರ ಆವೃತ್ತಿ) ಉದಾಹರಣೆಗಾಗಿ, ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಆರಾಧನೆಗಾಗಿ ಒಂದು ಚಿನ್ನದ ವಿಗ್ರಹವನ್ನು ಮಾಡಿಸಿದನು. ಆದರೆ ಯೆಹೋವನ ಸೇವಕರಾದ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಅದನ್ನು ಆರಾಧಿಸಲು ನಿರಾಕರಿಸಿದರು.​—ದಾನಿಯೇಲ 3:​1-12.

ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ, ವಿಗ್ರಹಾರಾಧನೆಯ ಅನೇಕ ಸಂಸ್ಕಾರಗಳಲ್ಲಿ, ಯಾವುದೇ ಸ್ವಾಭಾವಿಕ ನಿಯಮ ಅಥವಾ ಬಾಧ್ಯತೆಯಾಗಿ ಬರುವ ಮನಸ್ಸಾಕ್ಷಿಯಿಂದ ಹೊಮ್ಮುವ ನೈತಿಕ ಪ್ರಜ್ಞೆಗೆ ತೀರ ವಿರುದ್ಧವಾಗಿದ್ದ ಕೃತ್ಯಗಳು ಸೇರಿರುತ್ತಿದ್ದವು. (ರೋಮಾಪುರ 2:​14, 15) ಅಪೊಸ್ತಲ ಪೌಲನು “ಸ್ವಭಾವಕ್ಕೆ ವಿರುದ್ಧವಾದ” ಮತ್ತು “ಅವಲಕ್ಷಣವಾದ” ಕೀಳ್ಮಟ್ಟದ ಆಚರಣೆಗಳ ಕುರಿತಾಗಿ ಬರೆದನು, ಮತ್ತು ಅನೇಕವೇಳೆ ಇವು ಧಾರ್ಮಿಕ ಮತಸಂಸ್ಕಾರಗಳಲ್ಲಿ ಒಳಗೂಡಿರುತ್ತಿದ್ದವು. (ರೋಮಾಪುರ 1:​26, 27) ನ್ಯಾಯವಿರುದ್ಧವಾದ ವಿಗ್ರಹಾರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದ ಸ್ತ್ರೀಪುರುಷರು, ಮಾನವ ಸ್ವಭಾವದ ನ್ಯಾಯಬದ್ಧ ಪ್ರತಿಬಂಧವನ್ನು ಪಾಲಿಸುತ್ತಿರಲಿಲ್ಲ. ಆದುದರಿಂದ ಕ್ರೈಸ್ತರಾಗುತ್ತಿದ್ದವರು, ಆ ಭ್ರಷ್ಟ ಆಚರಣೆಗಳನ್ನು ಬಿಟ್ಟದ್ದು ಖಂಡಿತವಾಗಿಯೂ ಉಚಿತವಾಗಿತ್ತು.

ಅಷ್ಟುಮಾತ್ರವಲ್ಲದೆ, ಯೆಹೂದ್ಯೇತರರ ನಡುವೆ ಸಾಮಾನ್ಯವಾಗಿದ್ದ ಅಂಥ ವಿಗ್ರಹಾರಾಧನೆಗಳು ಯೆಹೋವ ದೇವರಿಂದ ಖಂಡಿಸಲ್ಪಟ್ಟಿದ್ದವು. ಹೀಗಿರುವುದರಿಂದ ಅವುಗಳು ನ್ಯಾಯವಿರುದ್ಧವಾಗಿದ್ದವು. *​—ಕೊಲೊಸ್ಸೆ 3:​5-7.

[ಪಾದಟಿಪ್ಪಣಿ]

^ ಪ್ಯಾರ. 6 ಒಂದನೆಯ ಪೇತ್ರ 4:3ರಲ್ಲಿರುವ ಗ್ರೀಕ್‌ ಪಾಠದ ಅಕ್ಷರಾರ್ಥವು, “ನ್ಯಾಯವಲ್ಲದ ವಿಗ್ರಹಾರಾಧನೆಗಳು” ಎಂದಾಗಿದೆ. ಈ ವಾಕ್ಸರಣಿಯನ್ನು, “ಕಾನೂನುಬಾಹಿರ ವಿಗ್ರಹಾರಾಧನೆ,” “ವಿಗ್ರಹಗಳ ನಿಷೇಧಿತ ಆರಾಧನೆ,” ಮತ್ತು “ಕಾನೂನನ್ನು ಉಲ್ಲಂಘಿಸುವ ವಿಗ್ರಹಾರಾಧನೆಗಳು” ಎಂಬಂಥ ವಿವರಣಾತ್ಮಕ ಪದಗಳಲ್ಲಿ ಇಂಗ್ಲಿಷ್‌ ಬೈಬಲ್‌ಗಳಲ್ಲಿ ಭಿನ್ನಭಿನ್ನವಾಗಿ ಭಾಷಾಂತರಿಸಲಾಗಿದೆ.