ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಭ್ಯಾಸಬಲವು ನಿಮಗೆ ಪ್ರಯೋಜನವನ್ನು ತರಲಿ

ಅಭ್ಯಾಸಬಲವು ನಿಮಗೆ ಪ್ರಯೋಜನವನ್ನು ತರಲಿ

ಅಭ್ಯಾಸಬಲವು ನಿಮಗೆ ಪ್ರಯೋಜನವನ್ನು ತರಲಿ

ಒಬ್ಬ ಮನುಷ್ಯನು ಅಥೆನ್ಸ್‌ನ ಒಂದು ಉಪನಗರದಲ್ಲಿ 12 ವರ್ಷಗಳಿಂದ ವಾಸಿಸುತ್ತಿದ್ದನು. ಪ್ರತಿ ದಿನ ಕೆಲಸದಿಂದ ಮನೆಗೆ ಹಿಂದಿರುಗುವಾಗ ಅವನು ಯಾವಾಗಲೂ ಒಂದೇ ಮಾರ್ಗದಲ್ಲಿ ಬರುತ್ತಿದ್ದನು. ಅನಂತರ ಅವನು ಪಟ್ಟಣದ ಇನ್ನೊಂದು ಬದಿಯಲ್ಲಿರುವ ಮತ್ತೊಂದು ಉಪನಗರಕ್ಕೆ ಸ್ಥಳಾಂತರಿಸಿದನು. ಒಂದು ದಿನ ಕೆಲಸದ ನಂತರ ಅವನು ಮನೆಗೆ ಹೊರಟನು. ಆದರೆ ತಾನು ತಪ್ಪಾದ ದಿಕ್ಕಿನಲ್ಲಿ ಹೋಗಿದ್ದೇನೆಂಬುದು, ಅವನು ತನ್ನ ಹಳೆಯ ನೆರೆಹೊರೆಯನ್ನು ತಲಪಿದಾಗಲೇ ಗೊತ್ತಾಯಿತು. ಅಭ್ಯಾಸಬಲದಿಂದ ಅವನು ತನ್ನ ಹಿಂದಿನ ಮನೆಗೆ ಹೋಗಿದ್ದನು!

ನಮ್ಮ ಜೀವನದ ಮೇಲೆ ತುಂಬ ಪ್ರಭಾವಶಾಲಿ ರೀತಿಗಳಲ್ಲಿ ಪರಿಣಾಮಬೀರುವ ಅಭ್ಯಾಸಬಲವು, ಎರಡನೆಯ ಸ್ವಭಾವ ಎಂದು ಕೆಲವೊಮ್ಮೆ ಕರೆಯಲ್ಪಡುವುದರಲ್ಲಿ ಆಶ್ಚರ್ಯವೇನಿಲ್ಲ. ಈ ಅರ್ಥದಲ್ಲಿ, ಅಭ್ಯಾಸಗಳನ್ನು ಬೆಂಕಿಗೆ ಹೋಲಿಸಬಹುದು. ಕತ್ತಲೆಯಲ್ಲಿ ಬೆಳಕನ್ನು ಪ್ರಕಾಶಿಸಲು, ನಮ್ಮ ದೇಹವನ್ನು ಬೆಚ್ಚಗೆಮಾಡಲು ಮತ್ತು ನಮ್ಮ ಊಟವನ್ನು ತಯಾರಿಸಲಿಕ್ಕಾಗಿ ಬೆಂಕಿ ನಮಗೆಲ್ಲರಿಗೂ ಅಗತ್ಯವಾಗಿದೆ. ಆದರೆ ಅದೇ ಸಮಯದಲ್ಲಿ, ಬೆಂಕಿಯು ಜೀವಗಳನ್ನೂ ಸ್ವತ್ತುಗಳನ್ನೂ ನಷ್ಟಗೊಳಿಸಬಲ್ಲ ಒಂದು ಕ್ರೂರ ಶತ್ರುವೂ ಆಗಿರಬಲ್ಲದು. ಅಭ್ಯಾಸಗಳ ಕುರಿತಾಗಿಯೂ ಇದನ್ನೇ ಹೇಳಬಹುದು. ಅವುಗಳನ್ನು ಸರಿಯಾಗಿ ಬೆಳೆಸುವುದಾದರೆ, ಅವು ತುಂಬ ಪ್ರಯೋಜನವನ್ನು ತರಬಲ್ಲವು. ಆದರೆ ಅವು ವಿನಾಶಕಾರಿಯೂ ಆಗಿರಬಲ್ಲವು.

ಆರಂಭದಲ್ಲಿ ತಿಳಿಸಲ್ಪಟ್ಟಿರುವ ಮನುಷ್ಯನ ವಿಷಯದಲ್ಲಿ ಹೇಳುವುದಾದರೆ, ಅವನ ಅಭ್ಯಾಸಬಲದಿಂದ ಅವನಿಗೆ ಕೇವಲ ಸಮಯ ನಷ್ಟವಾಯಿತು, ಏಕೆಂದರೆ ಅವನು ಅನಂತರ ಒಂದು ಟ್ರ್ಯಾಫಿಕ್‌ ಜ್ಯಾಮ್‌ನಲ್ಲಿ ಸಿಲುಕಿದನು. ಆದರೆ ಹೆಚ್ಚು ಪ್ರಾಮುಖ್ಯ ವಿಷಯಗಳಿಗೆ ಬರುವಾಗ, ಅಭ್ಯಾಸಗಳು ನಮಗೆ ಯಶಸ್ಸೆಂಬ ಪ್ರತಿಫಲವನ್ನು ತರಬಲ್ಲವು ಅಥವಾ ವಿನಾಶಕ್ಕೆ ನಡೆಸಬಲ್ಲವು. ಅಭ್ಯಾಸಗಳು ನಾವು ದೇವರಿಗೆ ಸಲ್ಲಿಸುವ ಸೇವೆಯಲ್ಲಿ ಮತ್ತು ಆತನೊಂದಿಗಿನ ನಮ್ಮ ಸಂಬಂಧದಲ್ಲಿ ಹೇಗೆ ಸಹಾಯಮಾಡಬಲ್ಲವು ಇಲ್ಲವೇ ಅಡ್ಡಿಮಾಡಬಲ್ಲವು ಎಂಬುದನ್ನು ತೋರಿಸುವ, ಬೈಬಲಿನ ಕೆಲವೊಂದು ನಿಜ ಜೀವನದ ಉದಾಹರಣೆಗಳನ್ನು ಪರಿಗಣಿಸಿರಿ.

ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ಕುರಿತಾದ ಬೈಬಲ್‌ ಉದಾಹರಣೆಗಳು

ನೋಹ, ಯೋಬ ಮತ್ತು ದಾನಿಯೇಲರಿಗೆ, ದೇವರೊಂದಿಗೆ ಒಂದು ಆಪ್ತವಾದ ಸಂಬಂಧವನ್ನು ಹೊಂದುವ ಆಶೀರ್ವಾದವಿತ್ತು. ಅವರ “ಸದಾಚಾರ”ಕ್ಕಾಗಿ ಬೈಬಲ್‌ ಅವರನ್ನು ಕೊಂಡಾಡುತ್ತದೆ. (ಯೆಹೆಜ್ಕೇಲ 14:14) ಈ ಮೂರು ಮಂದಿ ಪುರುಷರ ಜೀವನಕ್ರಮವು, ಅವರು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದರೆಂಬುದನ್ನು ತೋರಿಸಿತು.

ನೋಹನಿಗೆ ಒಂದು ನಾವೆಯನ್ನು ಕಟ್ಟುವಂತೆ ಹೇಳಲಾಯಿತು. ಅದು ಒಂದು ಕಾಲ್ಚೆಂಡಾಟದ ಮೈದಾನಕ್ಕಿಂತಲೂ ಉದ್ದವಾದ ನೌಕೆಯಾಗಿದ್ದು, ಐದು ಮಾಳಿಗೆಗಳ ಕಟ್ಟಡಕ್ಕಿಂತಲೂ ಎತ್ತರವಾಗಿತ್ತು. ಆ ಕೆಲಸವು, ಪ್ರಾಚೀನ ಕಾಲಗಳ ಯಾವುದೇ ನೌಕಾ ಶಿಲ್ಪಿಯ ಚಿತ್ತಸ್ಥೈರ್ಯವನ್ನು ಕುಂದಿಸುವಷ್ಟು ಬೃಹತ್‌ಗಾತ್ರದ್ದಾಗಿತ್ತು. ಆದರೆ ನೋಹನು ಮತ್ತು ಅವನ ಕುಟುಂಬದ ಏಳು ಮಂದಿ ಸದಸ್ಯರು, ಯಾವುದೇ ಆಧುನಿಕ ಸಲಕರಣೆಗಳಿಲ್ಲದೆ ಆ ನಾವೆಯನ್ನು ಕಟ್ಟಿದರು. ಅದರ ಜೊತೆಯಲ್ಲಿ, ನೋಹನು ತನ್ನ ಸಮಕಾಲೀನರಿಗೆ ಸಾರುತ್ತಾ ಇದ್ದನು. ಅವನು ತನ್ನ ಕುಟುಂಬದ ಆತ್ಮಿಕ ಮತ್ತು ಶಾರೀರಿಕ ಅಗತ್ಯಗಳನ್ನು ಸಹ ಪೂರೈಸುತ್ತಿದ್ದನು ಎಂಬುದರ ಕುರಿತು ನಾವು ನಿಶ್ಚಯದಿಂದಿರಬಲ್ಲೆವು. (2 ಪೇತ್ರ 2:5) ಇದೆಲ್ಲವನ್ನೂ ಪೂರೈಸಲಿಕ್ಕಾಗಿ, ನೋಹನಿಗೆ ಕೆಲಸಮಾಡುವ ಒಳ್ಳೆಯ ಅಭ್ಯಾಸಗಳಿದ್ದಿರಬೇಕು. ಅದಲ್ಲದೆ, ನೋಹನ ಕುರಿತಾಗಿ ಬೈಬಲ್‌ ಇತಿಹಾಸದಲ್ಲಿ ಹೀಗೆ ದಾಖಲಿಸಲಾಯಿತು: “ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು. . . . ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.” (ಆದಿಕಾಂಡ 6:9, 22; 7:5) ಅವನು ‘ತಪ್ಪಿಲ್ಲದವನು ಆಗಿದ್ದನು’ ಎಂದು ಬೈಬಲಿನಲ್ಲಿ ಘೋಷಿಸಲ್ಪಟ್ಟಿರುವುದರಿಂದ, ಅವನು ಜಲಪ್ರಳಯದ ನಂತರವೂ ಮತ್ತು ಯೆಹೋವನ ವಿರುದ್ಧ ಬಾಬೆಲಿನಲ್ಲಿ ತಲೆದೋರಿದ ದಂಗೆಯು ಆರಂಭವಾದ ನಂತರವೂ ದೇವರೊಂದಿಗೆ ನಡೆಯುತ್ತಾ ಮುಂದುವರಿದಿದ್ದಿರಬೇಕು. ವಾಸ್ತವದಲ್ಲಿ, ನೋಹನು 950 ವರ್ಷ ಪ್ರಾಯದವನಾಗಿ ಸಾಯುವ ವರೆಗೆ ದೇವರೊಂದಿಗೆ ನಡೆಯುತ್ತಾ ಇದ್ದನು.​—ಆದಿಕಾಂಡ 9:29.

ಯೋಬನಿಗಿದ್ದ ಒಳ್ಳೆಯ ಅಭ್ಯಾಸಗಳು, ಅವನೊಬ್ಬ ‘ನಿರ್ದೋಷಿಯೂ ಯಥಾರ್ಥಚಿತ್ತ’ ವ್ಯಕ್ತಿಯೂ ಆಗುವಂತೆ ಸಹಾಯಮಾಡಿದವು. (ಯೋಬ 1:​1, 8; 2:3) ಅವನ ಮಕ್ಕಳು ತಮ್ಮ ಒಂದೊಂದು ಔತಣಗಳನ್ನು ನಡೆಸಿದ ನಂತರ, ತನ್ನ ಮಕ್ಕಳು ‘ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು’ ಎಂಬ ಕಾರಣಕ್ಕಾಗಿ ಅವನು, ತನ್ನ ಪದ್ಧತಿಗನುಸಾರ ಅಥವಾ ರೂಢಿಗನುಸಾರ ಅವರ ಪರವಾಗಿ ಯಜ್ಞಗಳನ್ನು ಅರ್ಪಿಸಿ ಕುಟುಂಬದ ಯಾಜಕನಾಗಿ ಕಾರ್ಯನಡೆಸುತ್ತಿದ್ದನು. “ಹೀಗೆ ಯೋಬನು ಕ್ರಮವಾಗಿ ಮಾಡುತ್ತಿದ್ದನು.” (ಯೋಬ 1:​5, ಓರೆ ಅಕ್ಷರಗಳು ನಮ್ಮವು.) ಯೋಬನ ಕುಟುಂಬದಲ್ಲಿ, ಯೆಹೋವನ ಆರಾಧನೆಯ ಮೇಲೆ ಕೇಂದ್ರೀಕೃತವಾಗಿದ್ದ ಪದ್ಧತಿಗಳು ನಿಸ್ಸಂದೇಹವಾಗಿಯೂ ತುಂಬ ಪ್ರಮುಖವಾಗಿದ್ದವು.

ದಾನಿಯೇಲನು, ತನ್ನ ದೀರ್ಘ ಸಮಯದ ಜೀವನದುದ್ದಕ್ಕೂ ಯೆಹೋವನನ್ನು “ನಿತ್ಯವೂ” ಸೇವಿಸಿದನು. (ದಾನಿಯೇಲ 6:​16, 20) ದಾನಿಯೇಲನಿಗಿದ್ದ ಒಳ್ಳೆಯ ಆತ್ಮಿಕ ಅಭ್ಯಾಸಗಳು ಯಾವುವು? ಒಂದು, ಅವನು ಯೆಹೋವನಿಗೆ ಕ್ರಮವಾಗಿ ಪ್ರಾರ್ಥನೆಮಾಡುತ್ತಿದ್ದನು. ಇದನ್ನು ಮಾಡುವುದರ ವಿರುದ್ಧ ಒಂದು ರಾಜಾಜ್ಞೆ ಹೊರಡಿಸಲ್ಪಟ್ಟರೂ, ದಾನಿಯೇಲನು “ಯಥಾಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆಮಾಡಿ ಸ್ತೋತ್ರಸಲ್ಲಿಸಿದನು.” (ದಾನಿಯೇಲ 6:​10, ಓರೆ ಅಕ್ಷರಗಳು ನಮ್ಮವು.) ತನ್ನ ಜೀವಕ್ಕೆ ಅಪಾಯವಿದ್ದಾಗಲೂ ಅವನು ದೇವರಿಗೆ ಪ್ರಾರ್ಥನೆಮಾಡುವ ತನ್ನ ಅಭ್ಯಾಸವನ್ನು ಬಿಟ್ಟುಬಿಡಲಿಲ್ಲ. ಈ ಅಭ್ಯಾಸವೇ, ದೇವರ ಕಡೆಗೆ ಅಸಾಮಾನ್ಯವಾಗಿದ್ದಂಥ ರೀತಿಯ ಸಮಗ್ರತೆಯನ್ನು ತೋರಿಸಿದ ಜೀವನಕ್ರಮವನ್ನು ನಡೆಸುವಂತೆ ದಾನಿಯೇಲನನ್ನು ಬಲಪಡಿಸಿತೆಂಬುದರಲ್ಲಿ ಸಂದೇಹವಿಲ್ಲ. ದೇವರ ರೋಮಾಂಚಕ ವಾಗ್ದಾನಗಳ ಕುರಿತಾಗಿ ಅಧ್ಯಯನಮಾಡಿ, ಅವುಗಳ ಕುರಿತಾಗಿ ಯೋಚಿಸುತ್ತಾ ಇರುವ ಒಳ್ಳೇ ಅಭ್ಯಾಸವು ದಾನಿಯೇಲನಿಗಿದ್ದಂತೆ ತೋರುತ್ತದೆ. (ಯೆರೆಮೀಯ 25:​11, 12; ದಾನಿಯೇಲ 9:2) ಈ ಒಳ್ಳೆಯ ಅಭ್ಯಾಸಗಳು, ಅವನು ಕೊನೆಯ ವರೆಗೂ ತಾಳಿಕೊಂಡು, ಜೀವಿತದ ಓಟದಲ್ಲಿ ಅಂತಿಮ ರೇಖೆಯ ವರೆಗೆ ನಂಬಿಗಸ್ತಿಕೆಯಿಂದ ಓಡಲು ಅವನಿಗೆ ಸಹಾಯಮಾಡಿದವು.

ಇದಕ್ಕೆ ವ್ಯತಿರಿಕ್ತವಾಗಿ, ದೀನಳಿಗಿದ್ದ ದುರಭ್ಯಾಸದಿಂದಾಗಿ ಅವಳು ಒಂದು ವಿಪತ್ಕಾರಕ ಫಲಿತಾಂಶವನ್ನು ಪಡೆದಳು. ದೀನಳಿಗೆ ಯೆಹೋವನ ಆರಾಧಕರಾಗಿರದಿದ್ದ “ದೇಶದ ಸ್ತ್ರೀಯರನ್ನು ನೋಡಲು ಹೋಗುವ ರೂಢಿ” ಇತ್ತು. (ಆದಿಕಾಂಡ 34:​1, NW) ನಿರಪಾಯಕಾರಿಯಾಗಿ ತೋರಿದಂಥ ಈ ಅಭ್ಯಾಸವು ವಿಪತ್ತಿಗೆ ನಡೆಸಿತು. ಮೊದಲು, “ತನ್ನ ತಂದೆಯ ಮನೆಯವರೆಲ್ಲರಲ್ಲಿ ಘನವಂತ”ನೆಂದು ಪರಿಗಣಿಸಲ್ಪಡುತ್ತಿದ್ದ ಶೆಕೆಮನೆಂಬ ಯೌವನಸ್ಥನು ಅವಳ ಶೀಲಭಂಗಮಾಡಿದನು. ಅನಂತರ, ಅವಳ ಇಬ್ಬರು ಸಹೋದರರ ಪ್ರತೀಕಾರಾತ್ಮಕ ಕೃತ್ಯವು ಆ ಇಡೀ ನಗರದಲ್ಲಿನ ಗಂಡಸರೆಲ್ಲರ ಸಂಹಾರಕ್ಕೆ ನಡೆಸಿತು. ಎಷ್ಟು ಭೀಕರ ಫಲಿತಾಂಶ!​—ಆದಿಕಾಂಡ 34:​19, 25-29.

ನಮ್ಮ ಅಭ್ಯಾಸಗಳು ನಮಗೆ ಹಾನಿಯನ್ನಲ್ಲ ಬದಲಾಗಿ ಪ್ರಯೋಜನವನ್ನು ತರುವಂತೆ ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು?

ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು

“ಅಭ್ಯಾಸಗಳು ಅದೃಷ್ಟದಲ್ಲಿರುತ್ತವೆ” ಎಂದು ಒಬ್ಬ ತತ್ವಜ್ಞಾನಿಯು ಬರೆದನು. ಆದರೆ ಹಾಗಿರಬೇಕೆಂದೇನಿಲ್ಲ. ನಮ್ಮ ಕೆಟ್ಟ ಅಭ್ಯಾಸಗಳನ್ನು ಬದಲಾಯಿಸಿ, ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಆಯ್ಕೆಯನ್ನು ನಾವು ಮಾಡಸಾಧ್ಯವಿದೆಯೆಂದು ಬೈಬಲ್‌ ಸ್ಪಷ್ಟವಾಗಿ ತೋರಿಸುತ್ತದೆ.

ಒಳ್ಳೆಯ ಅಭ್ಯಾಸಗಳಿರುವಾಗ, ಕ್ರೈಸ್ತ ಜೀವನ ರೀತಿಯನ್ನು ಹೆಚ್ಚು ದಕ್ಷತೆಯಿಂದ ಮತ್ತು ಸುಲಭವಾಗಿ ಪಾಲಿಸಲು ಸಾಧ್ಯವಾಗುತ್ತದೆ. ಗ್ರೀಸ್‌ನಲ್ಲಿರುವ ಆಲೆಕ್ಸ್‌ ಎಂಬ ಕ್ರೈಸ್ತನೊಬ್ಬನು ಹೇಳುವುದು: “ಬೇರೆ ಬೇರೆ ಕೆಲಸಗಳನ್ನು ಪೂರೈಸಲಿಕ್ಕಾಗಿ ಒಂದು ಶೆಡ್ಯೂಲ್‌ಗೆ ಅಂಟಿಕೊಳ್ಳುವ ಅಭ್ಯಾಸದಿಂದಾಗಿ, ನನ್ನ ಅಮೂಲ್ಯ ಸಮಯವನ್ನು ಉಳಿಸಲು ಸಾಧ್ಯವಾಗುತ್ತದೆ.” ಯೋಜನೆಮಾಡುವ ಅಭ್ಯಾಸವು, ತಾನು ಪರಿಣಾಮಕಾರಿಯಾಗಿರುವಂತೆ ಸಹಾಯಮಾಡುತ್ತದೆ ಎಂದು ಒಬ್ಬ ಕ್ರೈಸ್ತ ಹಿರಿಯನಾಗಿರುವ ತಿಯೊಫಿಲಸ್‌ ಹೇಳುತ್ತಾನೆ. ಅವನನ್ನುವುದು: “ಒಳ್ಳೆಯ ಯೋಜನೆಯನ್ನು ಮಾಡುವ ಅಭ್ಯಾಸವು ನನಗಿಲ್ಲದಿರುತ್ತಿದ್ದಲ್ಲಿ, ನನ್ನ ಕ್ರೈಸ್ತ ಕರ್ತವ್ಯಗಳನ್ನು ಯಶಸ್ವಿಕರವಾಗಿ ನಿಭಾಯಿಸಲು ನನ್ನಿಂದಾಗುತ್ತಿರಲಿಲ್ಲವೆಂಬ ಪೂರ್ತಿ ನಿಶ್ಚಯ ನನಗಿದೆ.”

ಕ್ರೈಸ್ತರೋಪಾದಿ ನಾವು “ಯಾವ ಸೂತ್ರವನ್ನನುಸರಿಸಿ [“ರೂಢಿಯನ್ನನುಸರಿಸಿ,” NW] ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆ”ಯುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದೇವೆ. (ಫಿಲಿಪ್ಪಿ 3:​16, ಓರೆ ಅಕ್ಷರಗಳು ನಮ್ಮವು.) ಒಂದು ರೂಢಿಯಲ್ಲಿ, “ವಾಡಿಕೆಗನುಸಾರ . . . ಒಂದು ಸ್ಥಾಪಿತ ಕಾರ್ಯವಿಧಾನದ ನಿರ್ವಹಣೆ” ಸೇರಿರುತ್ತದೆ. ಅಂಥ ಒಳ್ಳೇ ಅಭ್ಯಾಸಗಳಿಂದ ನಮಗೆ ಪ್ರಯೋಜನವಿದೆ. ಯಾಕೆಂದರೆ ಪ್ರತಿಯೊಂದು ಹೆಜ್ಜೆಯನ್ನು ತೆಗೆದುಕೊಳ್ಳುವಾಗ, ಅದನ್ನು ಮಾಡಬೇಕೊ ಇಲ್ಲವೊ ಎಂಬುದನ್ನು ನಿರ್ಣಯಿಸುವುದರಲ್ಲಿ ನಾವು ಸಮಯವನ್ನು ಕಳೆಯುವುದಿಲ್ಲ. ನಾವು ಅಭ್ಯಾಸಬಲದಿಂದ ಅನುಸರಿಸುವ ಒಂದು ಒಳ್ಳೆಯ ನಮೂನೆ ಈಗಾಗಲೇ ಸ್ಥಾಪಿಸಲ್ಪಟ್ಟಿರುತ್ತದೆ. ಬಲವಾದ ಅಭ್ಯಾಸಗಳು ಬಹುಮಟ್ಟಿಗೆ ಪ್ರಯಾಸವಿಲ್ಲದೆ ನಡೆಯುತ್ತವೆ. ವಾಹನ ಚಲಾಯಿಸುವ ಸುರಕ್ಷಿತ ಅಭ್ಯಾಸಗಳು, ಒಬ್ಬ ವಾಹನ ಚಾಲಕನು ರಸ್ತೆಯ ಮೇಲೆ ಅಪಾಯಗಳನ್ನು ಎದುರಿಸುತ್ತಿರುವಾಗ ಜೀವರಕ್ಷಕವಾದ ದಿಢೀರ್‌ ನಿರ್ಣಯಗಳನ್ನು ಮಾಡುವಂತೆ ಅವನನ್ನು ಮಾರ್ಗದರ್ಶಿಸುತ್ತವೆ. ಅದೇ ರೀತಿಯಲ್ಲಿ ಒಳ್ಳೆಯ ಅಭ್ಯಾಸಗಳು, ನಾವು ನಮ್ಮ ಕ್ರೈಸ್ತ ಜೀವನಕ್ರಮದಲ್ಲಿ ವೇಗದಿಂದ ಸಾಗುತ್ತಿರುವಾಗ ಸರಿಯಾದ ನಿರ್ಣಯಗಳನ್ನು ಮಾಡುವಂತೆ ಸಹಾಯಮಾಡುವವು.

ಜೆರೆಮಿ ಟೇಲರ್‌ ಎಂಬ ಆಂಗ್ಲ ಲೇಖಕನು ಹೇಳಿದಂತೆ, “ಅಭ್ಯಾಸಗಳು ಕ್ರಿಯೆಗಳನ್ನು ಹೆರುತ್ತವೆ.” ನಮ್ಮ ಅಭ್ಯಾಸಗಳು ಒಳ್ಳೇದಾಗಿರುವಲ್ಲಿ, ಯಾವುದೇ ಕಷ್ಟವಿಲ್ಲದೆ ನಾವು ಒಳ್ಳೆಯ ಕೆಲಸಗಳನ್ನು ಮಾಡಬಲ್ಲೆವು. ಉದಾಹರಣೆಗಾಗಿ, ಕ್ರೈಸ್ತ ಶುಶ್ರೂಷಕರೋಪಾದಿ ನಮಗೆ ಸಾರುವ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುವ ಅಭ್ಯಾಸವಿರುವಲ್ಲಿ, ಕ್ಷೇತ್ರ ಸೇವೆಯಲ್ಲಿ ಹೋಗುವುದು ನಮಗೆ ಹೆಚ್ಚು ಸುಲಭ ಮತ್ತು ಆನಂದದಾಯಕವಾಗಿರುವುದು. ಅಪೊಸ್ತಲರು “ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು” ಎಂದು ನಾವು ಓದುತ್ತೇವೆ. (ಅ. ಕೃತ್ಯಗಳು 5:​42; 17:​2, ಓರೆ ಅಕ್ಷರಗಳು ನಮ್ಮವು.) ಇನ್ನೊಂದು ಬದಿಯಲ್ಲಿ, ನಾವು ಶುಶ್ರೂಷೆಯಲ್ಲಿ ಯಾವಾಗಲಾದರೂ ಅಪರೂಪಕ್ಕೊಮ್ಮೆ ಹೋಗುತ್ತಿರುವುದಾದರೆ, ನಾವು ಆತಂಕಪಡಬಹುದು ಮತ್ತು ಈ ಅತ್ಯಾವಶ್ಯಕವಾದ ಕ್ರೈಸ್ತ ಚಟುವಟಿಕೆಯನ್ನು ಭರವಸೆಯಿಂದ ನಡೆಸಲಿಕ್ಕಾಗಿ ನಿರಾತಂಕರಾಗಲು ನಮಗೆ ಸ್ವಲ್ಪ ಸಮಯ ಹಿಡಿಯಬಹುದು.

ಇದು ನಮ್ಮ ಕ್ರೈಸ್ತ ರೂಢಿಯ ಇನ್ನಿತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಒಳ್ಳೆಯ ಅಭ್ಯಾಸಗಳು, ನಾವು ‘ದೇವರ ವಾಕ್ಯವನ್ನು ಹಗಲಿರುಳು ಓದುವುದರಲ್ಲಿ’ ಕ್ರಮವಾಗಿರುವಂತೆ ಸಹಾಯಮಾಡುವವು. (ಯೆಹೋಶುವ 1:​8; ಕೀರ್ತನೆ 1:2) ಒಬ್ಬ ಕ್ರೈಸ್ತನಿಗೆ, ರಾತ್ರಿ ಮಲಗುವ ಮುಂಚೆ 20ರಿಂದ 30 ನಿಮಿಷಗಳ ವರೆಗೆ ಬೈಬಲನ್ನು ಓದುವ ಅಭ್ಯಾಸವಿದೆ. ಅವನು ತುಂಬ ದಣಿದು, ಬೈಬಲ್‌ ಓದದೇ ಮಲಗಲು ಹೋದಾಗಲೆಲ್ಲ ಅವನಿಗೆ ಒಳ್ಳೇ ನಿದ್ರೆ ಬರುವುದಿಲ್ಲ. ಆದುದರಿಂದ ಅವನು ಎದ್ದು, ಆ ಆತ್ಮಿಕ ಅಗತ್ಯವನ್ನು ಪೂರೈಸಲೇಬೇಕು. ಈ ಒಳ್ಳೇ ಅಭ್ಯಾಸವು, ಹಲವಾರು ವರ್ಷಗಳಿಂದ ಅವನು ವರ್ಷಕ್ಕೊಮ್ಮೆ ಇಡೀ ಬೈಬಲನ್ನು ಓದಿ ಮುಗಿಸಲು ಸಹಾಯಮಾಡಿದೆ.

ನಮ್ಮ ಆದರ್ಶ ವ್ಯಕ್ತಿಯಾಗಿರುವ ಯೇಸು ಕ್ರಿಸ್ತನಿಗೆ, ಎಲ್ಲಿ ಬೈಬಲಿನ ಕುರಿತಾಗಿ ಚರ್ಚಿಸಲಾಗುತ್ತಿತ್ತೋ ಆ ಕೂಟಗಳಿಗೆ ಹಾಜರಾಗುವ ಅಭ್ಯಾಸವಿತ್ತು. “ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದು ನಿಂತನು.” (ಲೂಕ 4:16) ಒಂದು ದೊಡ್ಡ ಕುಟುಂಬವಿರುವುದರಿಂದ ಅನೇಕ ತಾಸುಗಳ ವರೆಗೆ ದುಡಿಯಬೇಕಾಗುವ ಜೋ ಎಂಬ ಹಿರಿಯನಿಗೆ ಅಭ್ಯಾಸಬಲವು, ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಅಗತ್ಯವನ್ನೂ ಆಸೆಯನ್ನೂ ಹುಟ್ಟಿಸಿದೆ. ಅವನು ಹೇಳುವುದು: “ಈ ಅಭ್ಯಾಸವೇ ನನಗೆ ಮುಂದುವರಿಯುತ್ತಾ ಇರುವಂತೆ ಮಾಡುತ್ತಾ, ನಾನು ಪಂಥಾಹ್ವಾನಗಳನ್ನೂ ಸಮಸ್ಯೆಗಳನ್ನೂ ಯಶಸ್ವಿಯಾಗಿ ಎದುರಿಸಲು ತುಂಬ ಅಗತ್ಯವಿರುವ ಆತ್ಮಿಕ ಬಲವನ್ನು ಕೊಡುತ್ತದೆ.”​—ಇಬ್ರಿಯ 10:​24, 25.

ಇಂಥ ಅಭ್ಯಾಸಗಳು ಜೀವಕ್ಕಾಗಿರುವ ಕ್ರೈಸ್ತ ಓಟದಲ್ಲಿ ತೀರ ಅವಶ್ಯವಾದ ಸಂಗತಿಗಳಾಗಿವೆ. ಎಲ್ಲಿ ಯೆಹೋವನ ಸಾಕ್ಷಿಗಳನ್ನು ಹಿಂಸಿಸಲಾಗಿದೆಯೊ ಆ ಒಂದು ದೇಶದಿಂದ ಬಂದಿರುವ ವರದಿಯಲ್ಲಿ ಹೀಗೆ ತಿಳಿಸಲಾಗಿತ್ತು: “ಒಳ್ಳೆಯ ಆತ್ಮಿಕ ಅಭ್ಯಾಸಗಳು ಮತ್ತು ಸತ್ಯಕ್ಕಾಗಿ ಗಾಢವಾದ ಗಣ್ಯತೆಯುಳ್ಳವರಿಗೆ, ಪರೀಕ್ಷೆಗಳು ಬಂದಾಗ ದೃಢವಾಗಿ ನಿಲ್ಲಲು ಏನೂ ಕಷ್ಟವಾಗುವುದಿಲ್ಲ. ಆದರೆ ‘ಅನುಕೂಲವಾದ ಕಾಲದಲ್ಲಿಯೂ’ ಕೂಟಗಳಿಗೆ ತಪ್ಪಿಸಿಕೊಳ್ಳುವವರು, ಕ್ಷೇತ್ರ ಸೇವೆಗೆ ಕ್ರಮವಾಗಿ ಹೋಗದಿರುವವರು ಮತ್ತು ಚಿಕ್ಕಪುಟ್ಟ ವಿಷಯಗಳಲ್ಲಿ ರಾಜಿಮಾಡಿಕೊಳ್ಳುವವರೇ, ಆಗಾಗ್ಗೆ ‘ಬೆಂಕಿಯಂಥ’ ಪರೀಕ್ಷೆಯಲ್ಲಿ ಬಿದ್ದುಹೋಗುತ್ತಾರೆ.”​—2 ತಿಮೊಥೆಯ 4:2.

ಕೆಟ್ಟ ಅಭ್ಯಾಸಗಳಿಂದ ದೂರವಿದ್ದು, ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಳ್ಳಿರಿ

‘ಒಬ್ಬ ಮನುಷ್ಯನು ತನ್ನನ್ನು ನಿಯಂತ್ರಿಸುವಂತೆ ಬಿಡಲು ಸಿದ್ಧನಾಗಿರುವಂಥ ಅಭ್ಯಾಸಗಳನ್ನು ಮಾತ್ರ ಬೆಳೆಸಿಕೊಳ್ಳಬೇಕು’ ಎಂದು ಹೇಳಲಾಗುತ್ತದೆ. ಕೆಟ್ಟ ಅಭ್ಯಾಸಗಳು ನಿಜವಾಗಿಯೂ ದಬ್ಬಾಳಿಕೆ ನಡಿಸುವ ಒಬ್ಬ ಒಡೆಯನಂತಿರುತ್ತವೆ. ಹಾಗಿದ್ದರೂ, ಅಂಥ ಅಭ್ಯಾಸಗಳನ್ನು ಮುರಿಯಸಾಧ್ಯವಿದೆ.

ಸ್ಟೆಲ್ಲಾ ಎಂಬುವವಳಿಗೆ ಸ್ವಲ್ಪ ಸಮಯದ ವರೆಗೆ ಟಿವಿ ನೋಡುವ ಚಟ ಹಿಡಿದಿತ್ತು. ಅವಳು ಒಪ್ಪಿಕೊಳ್ಳುವುದು: “ನಾನು ಬಲಿಬಿದ್ದಿರುವ ಪ್ರತಿಯೊಂದು ಕೆಟ್ಟ ಅಭ್ಯಾಸದ ಮರೆಯಲ್ಲಿ, ಸಾಮಾನ್ಯವಾಗಿ ಒಂದು ‘ಮುಗ್ಧ’ ಕಾರಣವಿರುತ್ತಿತ್ತು.” ವಿಪರೀತವಾಗಿ ಟಿವಿಯನ್ನು ನೋಡುವ ಅವಳ ಅಭ್ಯಾಸದ ವಿಷಯದಲ್ಲೂ ಇದು ಸತ್ಯವಾಗಿತ್ತು. “ಸ್ವಲ್ಪ ಆರಾಮಕ್ಕಾಗಿ” ಅಥವಾ “ದಿನ ನಿತ್ಯದ ರೂಢಿಯಿಂದ ಸ್ವಲ್ಪ ಬದಲಾವಣೆಗಾಗಿ” ಮಾತ್ರ ತಾನು ಟಿವಿ ನೋಡುವೆನೆಂದು ಅವಳು ತನ್ನಷ್ಟಕ್ಕೇ ಹೇಳಿಕೊಳ್ಳುತ್ತಿದ್ದಳು. ಆದರೆ ಅವಳ ಅಭ್ಯಾಸವು ಹತೋಟಿ ಮೀರಿ, ಅವಳು ಗಂಟಾನುಗಟ್ಟಲೆ ಟಿವಿ ಮುಂದೆ ಕುಳಿತುಕೊಳ್ಳಲಾರಂಭಿಸಿದಳು. “ಈ ಕೆಟ್ಟ ಅಭ್ಯಾಸವು ನನ್ನ ಆತ್ಮಿಕ ಪ್ರಗತಿಯನ್ನು ವಿಳಂಬಿಸಿತು” ಎಂದು ಅವಳು ಹೇಳುತ್ತಾಳೆ. ಆದರೆ ದೃಢಸಂಕಲ್ಪದ ಪ್ರಯತ್ನದೊಂದಿಗೆ, ಟಿವಿ ನೋಡುವ ಸಮಯವನ್ನು ಅವಳು ಕಡಿಮೆಮಾಡಿದಳು ಮತ್ತು ಏನನ್ನು ವೀಕ್ಷಿಸಬೇಕೆಂಬುದರ ಕುರಿತು ಹೆಚ್ಚು ಜಾಗ್ರತೆಯಿಂದ ಆಯ್ಕೆಮಾಡಲಾರಂಭಿಸಿದಳು. “ನಾನು ಏಕೆ ಈ ಅಭ್ಯಾಸವನ್ನು ಮುರಿಯಲು ಬಯಸುತ್ತೇನೆಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ, ಮತ್ತು ನನ್ನ ದೃಢನಿರ್ಧಾರಕ್ಕೆ ಅಂಟಿಕೊಳ್ಳಲು ಯೆಹೋವನ ಮೇಲೆ ಆತುಕೊಳ್ಳುತ್ತೇನೆ” ಎಂದು ಸ್ಟೆಲ್ಲಾ ಹೇಳುತ್ತಾಳೆ.

ಕಾರಾಲಾಂಬೊಸ್‌ ಎಂಬ ಕ್ರೈಸ್ತನೊಬ್ಬನು, ಆತ್ಮಿಕ ಅಭಿವೃದ್ಧಿಯನ್ನು ಮಾಡುವುದರಿಂದ ಅವನನ್ನು ತಡೆಗಟ್ಟಿದ್ದ ಒಂದು ಕೆಟ್ಟ ಅಭ್ಯಾಸದ ಕುರಿತಾಗಿ ಹೇಳುತ್ತಾನೆ. ಅದು ಕಾಲವಿಳಂಬಮಾಡುವುದೇ ಆಗಿತ್ತು. “ಯಾವುದೇ ಕಾರ್ಯವನ್ನು ಮುಂದೆಹಾಕುವ ನನ್ನ ಅಭ್ಯಾಸವು ಹಾನಿಕರವಾಗಿದೆಯೆಂದು ನಾನು ಗ್ರಹಿಸಿದಾಗ, ನಾನು ನನ್ನ ಜೀವನವನ್ನು ಬದಲಾಯಿಸಲು ಪ್ರಯತ್ನಿಸಿದೆ. ಯಾವುದೇ ಗುರಿಗಳನ್ನಿಡುವಾಗ, ಅವುಗಳನ್ನು ಸಾಧಿಸಲಿಕ್ಕಾಗಿ ನಾನು ಯಾವಾಗ ಮತ್ತು ಹೇಗೆ ಆರಂಭಿಸುವೆನೆಂಬುದನ್ನು ನಿರ್ದಿಷ್ಟವಾಗಿ ಯೋಜಿಸಲಾರಂಭಿಸಿದೆ. ನನ್ನ ನಿರ್ಣಯಗಳನ್ನು ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ಹಾಕುವುದರಲ್ಲಿ ಕ್ರಮವಾಗಿರುವುದೇ ಇದಕ್ಕೆ ತಕ್ಕ ಔಷಧವಾಗಿತ್ತು, ಮತ್ತು ಈಗಲೂ ಅದು ಒಂದು ಒಳ್ಳೇ ಅಭ್ಯಾಸವಾಗಿ ಉಳಿದಿದೆ.” ಹೌದು, ಕೆಟ್ಟ ಅಭ್ಯಾಸಗಳ ಸ್ಥಾನದಲ್ಲಿ ಒಳ್ಳೆಯ ಅಭ್ಯಾಸಗಳನ್ನು ತುಂಬಿಸುವುದೇ ಅತ್ಯುತ್ತಮ.

ನಮ್ಮ ಒಡನಾಡಿಗಳು ಸಹ, ನಾವು ಒಳ್ಳೆಯ ಇಲ್ಲವೇ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಕಾರಣರಾಗಿರಬಲ್ಲರು. ಕೆಟ್ಟ ಅಭ್ಯಾಸಗಳು ಹೇಗೆ ಪರಸ್ಪರ ಅಂಟಿಕೊಳ್ಳಬಲ್ಲವೊ, ಹಾಗೆಯೇ ಒಳ್ಳೆಯ ಅಭ್ಯಾಸಗಳು ಸಹ ಅಂಟಿಕೊಳ್ಳಬಲ್ಲವು. “ದುಸ್ಸಹವಾಸವು ಸದಾಚಾರವನ್ನು ಕೆಡಿಸು”ವಂತೆಯೇ, ಒಳ್ಳೆಯ ಸಹವಾಸವು, ನಾವು ಅನುಕರಿಸಬೇಕಾದ ಒಳ್ಳೆಯ ಅಭ್ಯಾಸಗಳ ಮಾದರಿಗಳನ್ನು ನಮಗೆ ಕೊಡಬಲ್ಲದು. (1 ಕೊರಿಂಥ 15:33) ಎಲ್ಲಕ್ಕಿಂತಲೂ ಮಿಗಿಲಾಗಿ, ಅಭ್ಯಾಸಗಳು ದೇವರೊಂದಿಗಿನ ನಮ್ಮ ಸಂಬಂಧವನ್ನು ಒಂದೋ ಬಲಗೊಳಿಸಬಲ್ಲವು ಇಲ್ಲವೇ ದುರ್ಬಲಗೊಳಿಸಬಲ್ಲವು. ಸ್ಟೆಲ್ಲಾ ಹೇಳುವುದು: “ನಮ್ಮ ಅಭ್ಯಾಸಗಳು ಒಳ್ಳೆಯವುಗಳಾಗಿರುವಲ್ಲಿ, ಯೆಹೋವನ ಸೇವೆಮಾಡಲು ನಾವು ನಡೆಸುವ ಹೋರಾಟವು ಹೆಚ್ಚು ಸುಲಭವಾಗುವುದು. ಅವು ಹಾನಿಕರವಾಗಿರುವಲ್ಲಿ, ನಮ್ಮ ಪ್ರಯತ್ನಗಳಿಗೆ ಅಡ್ಡಿಯಾಗಬಲ್ಲವು.”

ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಂಡು, ಅವುಗಳು ನಿಮ್ಮನ್ನು ಮಾರ್ಗದರ್ಶಿಸುವಂತೆ ಬಿಡಿರಿ. ಅವು ಶಕ್ತಿಶಾಲಿಯಾಗಿದ್ದು, ನಿಮ್ಮ ಜೀವಿತದಲ್ಲಿ ಒಂದು ಉಪಯುಕ್ತ ಪ್ರಭಾವವಾಗಿರಬಲ್ಲವು.

[ಪುಟ 19ರಲ್ಲಿರುವ ಚಿತ್ರ]

ಬೆಂಕಿಯಂತೆ, ಅಭ್ಯಾಸಗಳು ಉಪಯುಕ್ತಕರವಾಗಿರಬಲ್ಲವು ಇಲ್ಲವೇ ವಿನಾಶಕಾರಿಯಾಗಿರಬಲ್ಲವು

[ಪುಟ 21ರಲ್ಲಿರುವ ಚಿತ್ರ]

ಸಬ್ಬತ್‌ದಿನದಂದು ದೇವರ ವಾಕ್ಯದ ವಾಚನಕ್ಕಾಗಿ ಸಭಾಮಂದಿರಕ್ಕೆ ಹೋಗುವುದು ಯೇಸುವಿನ ವಾಡಿಕೆಯಾಗಿತ್ತು

[ಪುಟ 22ರಲ್ಲಿರುವ ಚಿತ್ರಗಳು]

ಒಳ್ಳೆಯ ಆತ್ಮಿಕ ಅಭ್ಯಾಸಗಳು ದೇವರೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುತ್ತವೆ