ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ತಿಳಿಯಬಲ್ಲಿರೊ?

“ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ತಿಳಿಯಬಲ್ಲಿರೊ?

“ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ತಿಳಿಯಬಲ್ಲಿರೊ?

“ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ.”​—ಎಫೆಸ 5:10.

1. ಇಂದು ಯಾವ ರೀತಿಯಲ್ಲಿ ಜೀವನವು ಗೊಂದಲಮಯವಾಗಿರಬಲ್ಲದು, ಮತ್ತು ಏಕೆ?

“ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಯೆರೆಮೀಯನು ಗ್ರಹಿಸಿದ ಈ ಪ್ರಾಮುಖ್ಯ ವಾಸ್ತವಾಂಶವು ಇಂದು ಜೀವಿಸುತ್ತಿರುವ ನಮಗೆ ಹೆಚ್ಚು ಅರ್ಥಪೂರ್ಣವಾಗಿದೆ. ಏಕೆ? ಏಕೆಂದರೆ ಬೈಬಲ್‌ ಮುಂತಿಳಿಸಿದಂತೆ ನಾವು ‘ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಕಾಲಗಳಲ್ಲಿ’ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1, NW) ಪ್ರತಿ ದಿನ, ದೊಡ್ಡ ಅಥವಾ ಚಿಕ್ಕ ನಿರ್ಣಯಗಳನ್ನು ಮಾಡಬೇಕಾದ ಗೊಂದಲಮಯ ಸನ್ನಿವೇಶಗಳು ನಮ್ಮ ಮುಂದೆ ಬರುತ್ತವೆ. ಮತ್ತು ಈ ನಿರ್ಣಯಗಳು ನಮ್ಮ ಶಾರೀರಿಕ, ಭಾವನಾತ್ಮಕ ಹಾಗೂ ಆತ್ಮಿಕ ಯೋಗಕ್ಷೇಮದ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲವು.

2. ಯಾವ ಆಯ್ಕೆಗಳನ್ನು ಕ್ಷುಲ್ಲಕವೆಂದು ಪರಿಗಣಿಸಲಾಗುತ್ತಿರಬಹುದು, ಆದರೆ ಸಮರ್ಪಿತ ಕ್ರೈಸ್ತರೋಪಾದಿ ಅವುಗಳ ಬಗ್ಗೆ ನಮ್ಮ ದೃಷ್ಟಿಕೋನವೇನು?

2 ನಮ್ಮ ದೈನಂದಿನ ಜೀವನದಲ್ಲಿ ನಾವು ಮಾಡುವ ಅನೇಕ ಆಯ್ಕೆಗಳು ರೂಢಿಯಾಗಿಬಿಟ್ಟಿವೆ ಅಥವಾ ಅವುಗಳಿಗೆ ನಾವು ತುಂಬ ಮಹತ್ವವನ್ನು ಕೊಡದಿರಬಹುದು. ಉದಾಹರಣೆಗಾಗಿ, ಯಾವ ಬಟ್ಟೆಯನ್ನು ಧರಿಸುವೆವು, ಏನು ಊಟಮಾಡುವೆವು, ಯಾವ ಜನರನ್ನು ಭೇಟಿಯಾಗುವೆವು, ಇನ್ನು ಮುಂತಾದ ವಿಷಯಗಳ ಕುರಿತು ನಾವು ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಈ ಎಲ್ಲ ಆಯ್ಕೆಗಳನ್ನು ನಾವು ಹೆಚ್ಚು ಯೋಚಿಸದೇ, ಯಾಂತ್ರಿಕವಾಗಿ ಮಾಡಿಬಿಡುತ್ತೇವೆ. ಆದರೆ ಅಂಥ ವಿಷಯಗಳು ನಿಜವಾಗಿ ಕ್ಷುಲ್ಲಕವಾಗಿವೆಯೊ? ಸಮರ್ಪಿತ ಕ್ರೈಸ್ತರೋಪಾದಿ ನಮ್ಮ ಉಡುಗೆತೊಡುಗೆ ಮತ್ತು ವೇಷಭೂಷಣ, ತಿನ್ನುವಿಕೆ ಮತ್ತು ಕುಡಿಯುವಿಕೆ, ಹಾಗೂ ನಮ್ಮ ನಡೆನುಡಿಯ ವಿಷಯದಲ್ಲಿ ನಾವು ಮಾಡುವ ಆಯ್ಕೆಗಳು, ನಾವು ಸರ್ವೋನ್ನತ ಯೆಹೋವ ದೇವರ ಸೇವಕರಾಗಿದ್ದೇವೆಂಬುದನ್ನು ಯಾವಾಗಲೂ ಪ್ರತಿಬಿಂಬಿಸಬೇಕೆಂಬುದರ ಕುರಿತು ನಾವು ತುಂಬ ಆಸಕ್ತರಾಗಿದ್ದೇವೆ. ನಮಗೆ ಅಪೊಸ್ತಲ ಪೌಲನ ಮಾತುಗಳು ಜ್ಞಾಪಕಕ್ಕೆ ಬರುತ್ತವೆ: “ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.”​—1 ಕೊರಿಂಥ 10:31; ಕೊಲೊಸ್ಸೆ 4:6; 1 ತಿಮೊಥೆಯ 2:9, 10.

3. ನಿಜವಾಗಿಯೂ ಗಂಭೀರವಾಗಿ ಚಿಂತಿಸಿ ಮಾಡಬೇಕಾದ ಆಯ್ಕೆಗಳು ಯಾವುವು?

3 ನಾವು ಹೆಚ್ಚು ಗಂಭೀರವಾಗಿ ಚಿಂತಿಸಿ ಮಾಡಬೇಕಾದ ಆಯ್ಕೆಗಳೂ ಇವೆ. ಉದಾಹರಣೆಗೆ, ಮದುವೆಯಾಗಬೇಕೊ ಅವಿವಾಹಿತರಾಗಿ ಉಳಿಯಬೇಕೊ ಎಂಬ ನಿರ್ಣಯವು ಒಬ್ಬ ವ್ಯಕ್ತಿಯ ಜೀವಿತದ ಮೇಲೆ ಬಹುದೊಡ್ಡ ಪರಿಣಾಮವನ್ನು ಬೀರಬಲ್ಲದು. ಮದುವೆಯಾಗಲು ಸರಿಯಾದ ವ್ಯಕ್ತಿಯನ್ನು ಆಯ್ಕೆಮಾಡಿ, ಜೀವನಪರ್ಯಂತವೂ ಆ ವ್ಯಕ್ತಿಯ ಸಂಗಾತಿಯಾಗಿರುವುದು ಒಂದು ಚಿಕ್ಕ ವಿಷಯವೇನಲ್ಲ. * (ಜ್ಞಾನೋಕ್ತಿ 18:22) ಅಷ್ಟುಮಾತ್ರವಲ್ಲದೆ, ಸ್ನೇಹಿತರು ಹಾಗೂ ಒಡನಾಡಿಗಳು, ಶಿಕ್ಷಣ, ಉದ್ಯೋಗ ಮತ್ತು ಮನೋರಂಜನೆಯ ವಿಷಯದಲ್ಲಿ ನಾವು ಮಾಡುವ ಆಯ್ಕೆಯು, ನಮ್ಮ ಆತ್ಮಿಕತೆಯ ಸಂಬಂಧದಲ್ಲಿ ಮತ್ತು ಹೀಗೆ ನಮ್ಮ ಅನಂತಕಾಲದ ಕ್ಷೇಮದಲ್ಲಿ ತುಂಬ ಪ್ರಭಾವಶಾಲಿ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.​—ರೋಮಾಪುರ 13:​13, 14; ಎಫೆಸ 5:​3, 4.

4. (ಎ) ಯಾವ ಸಾಮರ್ಥ್ಯವು ತುಂಬ ಉಪಯುಕ್ತವಾಗಿರುವುದು? (ಬಿ) ಯಾವ ಪ್ರಶ್ನೆಗಳು ಚರ್ಚಿಸಲ್ಪಡಬೇಕು?

4 ಈ ಎಲ್ಲ ನಿರ್ಣಯಗಳನ್ನು ಮಾಡಲಿಕ್ಕಿರುವುದರಿಂದ, ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು, ಅಥವಾ ಯಾವುದು ಕೇವಲ ಒಳ್ಳೇದೆಂದು ತೋರುತ್ತದೊ ಮತ್ತು ಯಾವುದು ನಿಜವಾಗಿಯೂ ಒಳ್ಳೇದಾಗಿದೆಯೊ ಅದರ ನಡುವಿನ ಭೇದವನ್ನು ತಿಳಿಯುವ ಸಾಮರ್ಥ್ಯವನ್ನು ಹೊಂದಿರುವುದು ಖಂಡಿತವಾಗಿಯೂ ಉಪಯುಕ್ತವಾಗಿದೆ. “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ” ಎಂದು ಬೈಬಲ್‌ ಎಚ್ಚರಿಸುತ್ತದೆ. (ಜ್ಞಾನೋಕ್ತಿ 14:12) ಆದುದರಿಂದ ನಾವು ಹೀಗೆ ಪ್ರಶ್ನಿಸಿಕೊಳ್ಳಬಹುದು: ‘ಒಳ್ಳೇದರ ಮತ್ತು ಕೆಟ್ಟದ್ದರ ನಡುವಿನ ಭೇದವನ್ನು ಮಾಡುವ ಸಾಮರ್ಥ್ಯವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? ನಾವು ನಿರ್ಣಯಗಳನ್ನು ಮಾಡುವಾಗ ಬೇಕಾಗುವಂಥ ಮಾರ್ಗದರ್ಶನಕ್ಕಾಗಿ ಎಲ್ಲಿ ಹೋಗಬಹುದು? ಈ ವಿಷಯದಲ್ಲಿ ಗತಕಾಲದ ಜನರು ಮತ್ತು ಇಂದಿನ ಜನರು ಏನು ಮಾಡಿದ್ದಾರೆ, ಮತ್ತು ಫಲಿತಾಂಶವೇನಾಗಿರುತ್ತದೆ?’

ಲೋಕದ ‘ಮೋಸಕರವಾದ ನಿರರ್ಥಕ ತತ್ವಜ್ಞಾನ’

5. ಆದಿ ಕ್ರೈಸ್ತರು ಯಾವ ರೀತಿಯ ಜಗತ್ತಿನಲ್ಲಿ ಜೀವಿಸಿದರು?

5 ಪ್ರಥಮ ಶತಮಾನದ ಕ್ರೈಸ್ತರು, ಗ್ರೀಕ್‌ ಹಾಗೂ ರೋಮನ್‌ ಜನರ ಮೌಲ್ಯಗಳು ಮತ್ತು ಆದರ್ಶಗಳಿಂದ ನಿಯಂತ್ರಿಸಲ್ಪಟ್ಟಿದ್ದ ಒಂದು ಜಗತ್ತಿನಲ್ಲಿ ಜೀವಿಸುತ್ತಿದ್ದರು. ಒಂದು ಕಡೆಯಲ್ಲಿ, ಸುಖಸೌಕರ್ಯಗಳು ಮತ್ತು ಐಷಾರಾಮಗಳಿಂದ ಕೂಡಿದ್ದ ರೋಮನ್‌ ಜೀವನರೀತಿಯಿತ್ತು. ಇದನ್ನು ಅನೇಕರು ಆಶಿಸತಕ್ಕ ವಿಷಯವಾಗಿ ಪರಿಗಣಿಸುತ್ತಿದ್ದರು. ಇನ್ನೊಂದು ಬದಿಯಲ್ಲಿ, ಆ ಸಮಯದ ಜ್ಞಾನವಂತರು ಪ್ಲೇಟೊ ಮತ್ತು ಅರಿಸ್ಟಾಟಲರ ತತ್ವಜ್ಞಾನಸಂಬಂಧಿತ ವಿಚಾರಗಳಿಂದ ಮಾತ್ರವಲ್ಲ, ಎಪಿಕೂರಿಯರು ಮತ್ತು ಸ್ತೋಯಿಕರಂಥ ಹೊಸ ಗುಂಪುಗಳ ವಿಚಾರಗಳ ಕುರಿತಾಗಿಯೂ ಉತ್ಸಾಹದಿಂದಿದ್ದರು. ಅಪೊಸ್ತಲ ಪೌಲನು ತನ್ನ ಎರಡನೆಯ ಮಿಷನೆರಿ ಸಂಚಾರದ ಸಮಯದಲ್ಲಿ ಅಥೇನೆಗೆ ಬಂದಾಗ, “ಈ ಮಾತಾಳಿ” ಪೌಲನಿಗಿಂತಲೂ ತಾವು ಶ್ರೇಷ್ಠರೆಂದೆಣಿಸಿದಂಥ ಎಪಿಕೂರಿಯರ ಮತ್ತು ಸ್ತೋಯಿಕರ ತತ್ವಜ್ಞಾನಿಗಳಿಂದ ಎದುರಿಸಲ್ಪಟ್ಟನು.​—ಅ. ಕೃತ್ಯಗಳು 17:18.

6. (ಎ) ಆದಿ ಕ್ರೈಸ್ತರಲ್ಲಿ ಕೆಲವರು ಏನನ್ನು ಮಾಡುವಂತೆ ಪ್ರಲೋಭಿಸಲ್ಪಟ್ಟರು? (ಬಿ) ಪೌಲನು ಯಾವ ಎಚ್ಚರಿಕೆಯನ್ನು ಕೊಟ್ಟನು?

6 ಹೀಗಿರುವುದರಿಂದ, ಆದಿ ಕ್ರೈಸ್ತರಲ್ಲಿ ಕೆಲವರು, ತಮ್ಮ ಸುತ್ತಲಿನ ಜನರ ಆಡಂಬರದ ರೀತಿನೀತಿಗಳು ಮತ್ತು ಜೀವನಶೈಲಿಗಳಿಂದ ಏಕೆ ಆಕರ್ಷಿಸಲ್ಪಟ್ಟಿದ್ದರೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಲ್ಲ. (2 ತಿಮೊಥೆಯ 4:10) ಆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದವರು, ಅನೇಕ ಲಾಭಗಳು ಮತ್ತು ಪ್ರಯೋಜನಗಳಲ್ಲಿ ಆನಂದಿಸುತ್ತಿದ್ದಂತೆ ತೋರುತ್ತಿತ್ತು. ಸಮರ್ಪಿತ ಕ್ರೈಸ್ತ ಜೀವನ ರೀತಿಯು ನೀಡದೇ ಇದ್ದ ಯಾವುದೋ ಅಮೂಲ್ಯ ಸಂಗತಿಯನ್ನು ಲೋಕವು ನೀಡುತ್ತಿರುವಂತೆ ತೋರುತ್ತಿತ್ತು. ಆದರೆ ಅಪೊಸ್ತಲ ಪೌಲನು ಹೀಗೆ ಎಚ್ಚರಿಸಿದನು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.” (ಕೊಲೊಸ್ಸೆ 2:8) ಪೌಲನು ಹೀಗೇಕೆ ಹೇಳಿದನು?

7. ಲೋಕದ ವಿವೇಕವು ನಿಜವಾಗಿ ಏನಾಗಿದೆ?

7 ಪೌಲನು ಆ ಎಚ್ಚರಿಕೆಯನ್ನು ಕೊಡಲು ಕಾರಣವೇನೆಂದರೆ, ಲೋಕದ ಕಡೆಗೆ ಆಕರ್ಷಿಸಲ್ಪಟ್ಟವರ ಯೋಚನಾಧಾಟಿಯ ಮರೆಯಲ್ಲಿ ಒಂದು ದೊಡ್ಡ ಅಪಾಯವು ಸುಳಿದಾಡುತ್ತಿದೆ ಎಂಬುದನ್ನು ಅವನು ಗ್ರಹಿಸಿದನು. ಅವನು, “ಮೋಸವಾದ ನಿರರ್ಥಕ ತತ್ವಜ್ಞಾನ” ಎಂಬ ಪದಗಳನ್ನು ಬಳಸಿದ್ದು ವಿಶೇಷವಾಗಿ ಮಹತ್ವಪೂರ್ಣವಾಗಿದೆ. “ತತ್ವಜ್ಞಾನ” ಎಂಬ ಪದದ ಅಕ್ಷರಾರ್ಥವು, “ವಿವೇಕವನ್ನು ಪ್ರೀತಿಸಿ ಬೆನ್ನಟ್ಟುವುದು” ಎಂದಾಗಿದೆ. ಇದು ತಾನೇ ತಪ್ಪಾಗಿರಲಿಕ್ಕಿಲ್ಲ. ವಾಸ್ತವದಲ್ಲಿ ಬೈಬಲ್‌, ವಿಶೇಷವಾಗಿ ಜ್ಞಾನೋಕ್ತಿಗಳ ಪುಸ್ತಕದಲ್ಲಿ, ಸರಿಯಾದ ಜ್ಞಾನ ಮತ್ತು ವಿವೇಕವನ್ನು ಬೆನ್ನಟ್ಟುವಂತೆ ಪ್ರೋತ್ಸಾಹಿಸುತ್ತದೆ. (ಜ್ಞಾನೋಕ್ತಿ 1:​1-7; 3:​13-18) ಆದರೆ ಪೌಲನು “ತತ್ವಜ್ಞಾನ”ಕ್ಕೆ ‘ಮೋಸಕರವಾದ ನಿರರ್ಥಕ’ ಎಂಬ ಪದಗಳನ್ನು ಜೋಡಿಸಿದನು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಲೋಕವು ನೀಡುತ್ತಿದ್ದ ವಿವೇಕವನ್ನು, ನಿರರ್ಥಕ ಹಾಗೂ ಮೋಸಕರವಾದದ್ದಾಗಿ ದೃಷ್ಟಿಸಿದನು. ಗಾಳಿ ತುಂಬಿರುವ ಒಂದು ಬಲೂನಿನಂತೆ, ಅದು ಸ್ಥಿರವಾಗಿ ತೋರುತ್ತಿತ್ತಾದರೂ ಅದಕ್ಕೆ ಪ್ರಾಯೋಗಿಕ ಮಹತ್ವವಿರಲಿಲ್ಲ. ಈ ಲೋಕದ “ಮೋಸವಾದ ನಿರರ್ಥಕ ತತ್ವಜ್ಞಾನ”ದಂಥ ಸತ್ತ್ವಹೀನ ವಿಷಯದ ಆಧಾರದ ಮೇಲೆ, ಒಳ್ಳೇದು ಮತ್ತು ಕೆಟ್ಟದ್ದರ ಆಯ್ಕೆಯನ್ನು ಮಾಡುವುದು ಖಂಡಿತವಾಗಿಯೂ ವ್ಯರ್ಥ ಮಾತ್ರವಲ್ಲ ವಿಪತ್ಕಾರಕವೂ ಆಗಿರುವುದು.

“ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ” ಹೇಳುವವರು

8. (ಎ) ಇಂದು ಜನರು ಸಲಹೆಗಾಗಿ ಯಾರ ಬಳಿ ಹೋಗುತ್ತಾರೆ? (ಬಿ) ಯಾವ ರೀತಿಯ ಸಲಹೆಯನ್ನು ಕೊಡಲಾಗುತ್ತದೆ?

8 ಇಂದು ಸಹ ವಿಷಯಗಳೇನೂ ಭಿನ್ನವಾಗಿಲ್ಲ. ಮಾನವ ಪ್ರಯತ್ನದ ಕಾರ್ಯತಃ ಪ್ರತಿಯೊಂದು ಕ್ಷೇತ್ರದಲ್ಲಿ ಪರಿಣತರ ಕೊರತೆಯಿಲ್ಲ. ವಿವಾಹ ಮತ್ತು ಕುಟುಂಬದ ಸಲಹೆಗಾರರು, ಅಂಕಣಗಾರರು, ಸ್ವಯಂ ನಿಯೋಜಿತ ಚಿಕಿತ್ಸಕರು, ಜ್ಯೋತಿಷಿಗಳು, ಪ್ರೇತಾತ್ಮವಾದಿಗಳು ಮತ್ತು ಇತರರು, ನೀವು ಹಣಕೊಟ್ಟರೆ ಸಲಹೆಯನ್ನು ಕೊಡಲು ಸದಾ ಸಿದ್ಧರಿದ್ದಾರೆ. ಆದರೆ ಅವರು ಯಾವ ರೀತಿಯ ಸಲಹೆಯನ್ನು ಕೊಡುತ್ತಾರೆ? ಹೆಚ್ಚಾಗಿ, ನೈತಿಕತೆಯ ಕುರಿತಾದ ಬೈಬಲ್‌ ಮಟ್ಟಗಳನ್ನು ಬದಿಗೆ ಸರಿಸಿ, ಹೊಸ ನೈತಿಕತೆಯೆಂದು ಕರೆಯಲಾಗುವ ಮಟ್ಟಗಳಿಗೆ ಅವಕಾಶವನ್ನು ಮಾಡಿಕೊಡಲಾಗುತ್ತದೆ. ಉದಾಹರಣೆಗೆ, “ಸಮಲಿಂಗದವರ ವಿವಾಹಗಳನ್ನು” ನೋಂದಾಯಿಸಲು ಸರಕಾರದ ನಿರಾಕರಣೆಯ ಕುರಿತಾಗಿ ಮಾತಾಡುತ್ತಾ, ದ ಗ್ಲೋಬ್‌ ಆ್ಯಂಡ್‌ ಮೇಲ್‌ ಎಂಬ ಕೆನಡದ ಪ್ರಮುಖ ವಾರ್ತಾಪತ್ರಿಕೆಯಲ್ಲಿನ ಸಂಪಾದಕೀಯವು ಪ್ರಕಟಿಸುವುದು: “ಈ 2000 ಇಸವಿಯಲ್ಲಿ, ಪರಸ್ಪರ ಪ್ರೀತಿಸಿ ಒಮ್ಮತದಿಂದಿರುವ ಒಂದು ಜೋಡಿಯು, ಒಂದೇ ಲಿಂಗದವರೆಂಬ ಮಾತ್ರಕ್ಕೆ ತಮ್ಮ ನೆಚ್ಚಿನ ಮನದಾಸೆಯನ್ನು ಪೂರೈಸುವಂತೆ ಅನುಮತಿಸದಿರುವುದು ಅಪಹಾಸ್ಯಕರ ಸಂಗತಿಯೇ ಸರಿ.” ಇಂದಿನ ಪ್ರವೃತ್ತಿಯು, ಟೀಕಾಕಾರರಾಗಿರುವುದಲ್ಲ ಬದಲಾಗಿ ಸಹಿಷ್ಣುಗಳಾಗಿರುವುದೇ ಆಗಿದೆ. ಸಂಪೂರ್ಣವಾಗಿ ಒಳ್ಳೇದು ಮತ್ತು ಕೆಟ್ಟದ್ದು ಎಂದು ಹೇಳಬಹುದಾದ ಸಂಗತಿಯೇ ಇಲ್ಲ; ಎಲ್ಲವೂ ನಿಮ್ಮ ದೃಷ್ಟಿಕೋನದ ಮೇಲೆ ಹೊಂದಿಕೊಂಡಿದೆ ಎಂಬ ಅಭಿಪ್ರಾಯ ಇಂದು ಚಾಲ್ತಿಯಲ್ಲಿದೆ.​—ಕೀರ್ತನೆ 10:​3, 4.

9. ಸಮಾಜದಲ್ಲಿ ಗಣ್ಯರೆಂದು ಎಣಿಸಲಾಗುವ ಜನರು ಹೆಚ್ಚಾಗಿ ಏನು ಮಾಡುತ್ತಾರೆ?

9 ನಿರ್ಣಯಮಾಡುವ ವಿಷಯದಲ್ಲಿ ಇನ್ನಿತರರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಯಶಸ್ವಿಗಳಾಗಿರುವ ಶ್ರೀಮಂತರೂ ಪ್ರಸಿದ್ಧರೂ ಆದ ವ್ಯಕ್ತಿಗಳೆಡೆಗೆ ನೋಡುತ್ತಾರೆ. ಇಂದಿನ ಸಮಾಜದಲ್ಲಿ ಶ್ರೀಮಂತರೂ ಪ್ರಸಿದ್ಧರೂ ಆಗಿರುವ ಜನರನ್ನು ಗಣ್ಯರೆಂದು ಎಣಿಸಲಾಗುತ್ತದಾದರೂ, ಹೆಚ್ಚಾಗಿ ಇವರು ಪ್ರಾಮಾಣಿಕತೆ ಮತ್ತು ಭರವಸೆಯಂಥ ಸದ್ಗುಣಗಳನ್ನು ಬರೇ ಮಾತಿನಲ್ಲಿ ತೋರಿಸುತ್ತಾರಷ್ಟೇ. ಅಧಿಕಾರ ಮತ್ತು ಲಾಭದ ಹಿಂದೆ ಓಡುತ್ತಿರುವಾಗ, ನೈತಿಕ ಸೂತ್ರಗಳನ್ನು ಅಲಕ್ಷಿಸುವ ಅಥವಾ ಅವುಗಳನ್ನು ತುಳಿದುಹಾಕುವ ವಿಷಯದಲ್ಲಿ ಅನೇಕರಿಗೆ ಕಿಂಚಿತ್ತೂ ಅಳುಕಿಲ್ಲ. ಪ್ರಸಿದ್ಧಿ ಮತ್ತು ಜನಪ್ರಿಯತೆಯನ್ನು ಗಳಿಸಲಿಕ್ಕಾಗಿ ಕೆಲವರು, ಯಾವುದೇ ಚಿಂತೆಯಿಲ್ಲದೆ, ಸ್ವೀಕೃತಿಪಡೆದಿರುವ ಮೌಲ್ಯಗಳು ಮತ್ತು ಮಟ್ಟಗಳನ್ನು ಧಿಕ್ಕರಿಸಿ, ವಿಲಕ್ಷಣವಾದ ಮತ್ತು ತಲ್ಲಣಿಸುವಂಥ ನಡವಳಿಕೆಯನ್ನು ಇಷ್ಟಪಡುತ್ತಾರೆ. ಇದರ ಫಲಿತಾಂಶವೇನು? ಲಾಭದಿಂದ ಪ್ರಚೋದಿತವಾಗಿರುವ, ಸ್ವೇಚ್ಛಾಚಾರದ ಒಂದು ಸಮಾಜವೇ. ಮತ್ತು ಈ ಸಮಾಜದ ಧ್ಯೇಯಮಂತ್ರವು, “ಏನು ಮಾಡಿದರೂ ನಡಿಯುತ್ತದೆ” ಎಂಬುದೇ ಆಗಿದೆ. ಹೀಗಿರುವಾಗ, ಒಳ್ಳೇದರ ಮತ್ತು ಕೆಟ್ಟದ್ದರ ವಿಷಯದಲ್ಲಿ ಜನರು ಇಷ್ಟೊಂದು ಗಲಿಬಿಲಿಗೊಂಡಿರುವುದು ಆಶ್ಚರ್ಯದ ಸಂಗತಿಯೊ?​—ಲೂಕ 6:39.

10. ಒಳ್ಳೇದು ಮತ್ತು ಕೆಟ್ಟದ್ದರ ಕುರಿತಾದ ಯೆಶಾಯನ ಮಾತುಗಳು ಹೇಗೆ ಸತ್ಯವಾಗಿ ರುಜುವಾಗಿವೆ?

10 ತಪ್ಪು ಮಾರ್ಗದರ್ಶನದ ಆಧಾರದ ಮೇಲೆ ಮಾಡಲ್ಪಟ್ಟಿರುವ ಕೆಟ್ಟ ನಿರ್ಣಯಗಳ ದುರಂತಕರ ಫಲಿತಾಂಶಗಳನ್ನು ನಮ್ಮ ಸುತ್ತಲೂ ಎಲ್ಲೆಲ್ಲೂ ನೋಡಬಹುದು. ಮುರಿದುಬಿದ್ದಿರುವ ವಿವಾಹಗಳು ಮತ್ತು ಕುಟುಂಬಗಳು, ಅಮಲೌಷಧ ಮತ್ತು ಮದ್ಯದ ದುರುಪಯೋಗ, ಹಿಂಸಾತ್ಮಕ ಯುವಕರ ಗ್ಯಾಂಗ್‌ಗಳು, ಸ್ವೇಚ್ಛಾಚಾರ, ರತಿ ರವಾನಿತ ರೋಗಗಳು ಇವುಗಳಲ್ಲಿ ಕೆಲವು. ಒಳ್ಳೇದು ಯಾವುದು ಕೆಟ್ಟದ್ದು ಯಾವುದು ಎಂಬುದನ್ನು ತೀರ್ಮಾನಿಸುವ ಎಲ್ಲ ಮಟ್ಟಗಳನ್ನು ಅಥವಾ ಸಹಾಯಕಗಳನ್ನು ಜನರು ತೊರೆಯುತ್ತಿರುವಾಗ, ಇವುಗಳನ್ನು ಬಿಟ್ಟು ಬೇರೆ ಫಲಿತಾಂಶಗಳನ್ನು ನಾವು ಹೇಗೆ ತಾನೇ ನಿರೀಕ್ಷಿಸಬಹುದು? (ರೋಮಾಪುರ 1:​28-32) ಈ ಸನ್ನಿವೇಶವು ಪ್ರವಾದಿಯಾದ ಯೆಶಾಯನು ಘೋಷಿಸಿದಂತೆಯೇ ಇದೆ: “ಅಯ್ಯೋ, ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ ಬೋಧಿಸಿ ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸಿ ಕಹಿಯು ಸಿಹಿ, ಸಿಹಿಯು ಕಹಿ ಎಂದು ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ! ಅಯ್ಯೋ, ತಮ್ಮಲ್ಲಿ ತಾವೇ ಜ್ಞಾನಿಗಳೆಂದೂ ಸ್ವಂತ ಗಣನೆಯಲ್ಲಿ ವಿವೇಕಿಗಳೆಂದೂ ಭಾವಿಸಿಕೊಳ್ಳುವವರ ಪಾಡು ಏನು ಹೇಳಲಿ!”​—ಯೆಶಾಯ 5:20, 21.

11. ಒಳ್ಳೇದು ಮತ್ತು ಕೆಟ್ಟದ್ದು ಯಾವುದೆಂಬುದನ್ನು ನಿರ್ಧರಿಸುವಾಗ, ಸ್ವತಃ ನಮ್ಮ ಮೇಲೆಯೇ ಆತುಕೊಳ್ಳುವುದು ಏಕೆ ಅಸಮಂಜಸವಾದದ್ದಾಗಿದೆ?

11 “ತಾವೇ ಜ್ಞಾನಿ”ಗಳೆಂದು ನೆನಸಿದ ಆ ಪುರಾತನ ಯೆಹೂದ್ಯರು ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕಾಯಿತು. ಈ ವಾಸ್ತವಾಂಶವು, ಒಳ್ಳೇದು ಮತ್ತು ಕೆಟ್ಟದ್ದನ್ನು ನಿರ್ಧರಿಸುವ ವಿಷಯದಲ್ಲಿ ನಾವು ಸ್ವತಃ ನಮ್ಮ ಮೇಲೆಯೇ ಆತುಕೊಳ್ಳುವುದರಿಂದ ದೂರವಿರುವುದನ್ನು ಹೆಚ್ಚು ಮಹತ್ವಪೂರ್ಣವಾಗಿ ಮಾಡುತ್ತದೆ. “ನಿನ್ನ ಹೃದಯ ಏನು ಹೇಳುತ್ತದೋ ಅದಕ್ಕೆ ಕಿವಿಗೊಡು,” ಅಥವಾ “ನಿನಗೆ ಯಾವುದು ಸರಿಯೆಂದು ಅನಿಸುತ್ತದೋ ಅದನ್ನೇ ಮಾಡು” ಎಂಬ ವಿಚಾರವನ್ನು ಇಂದು ಹೆಚ್ಚಿನ ಜನರು ಸಮ್ಮತಿಸುತ್ತಾರೆ. ಇದು ಸಮಂಜಸವೊ? ಬೈಬಲ್‌ ಇದನ್ನು ಒಪ್ಪುವುದಿಲ್ಲ. ಅದು ಸ್ಪಷ್ಟವಾಗಿ ಹೇಳುವುದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ನೀವು ನಿರ್ಣಯ ಮಾಡುವಾಗ, ಒಬ್ಬ ವಂಚನಾತ್ಮಕ ವ್ಯಕ್ತಿಯು ಮಾರ್ಗದರ್ಶನ ಕೊಡುವಂತೆ ಅವನ ಮೇಲೆ ಅವಲಂಬಿಸುವಿರೊ? ಖಂಡಿತವಾಗಿಯೂ ಇಲ್ಲ. ವಾಸ್ತವದಲ್ಲಿ ಬಹುಶಃ ಅಂಥ ವ್ಯಕ್ತಿಯು ನಿಮಗೆ ಹೇಳಿದ ವಿಷಯಕ್ಕೆ ತದ್ವಿರುದ್ಧವಾದದ್ದನ್ನೇ ನೀವು ಮಾಡುವಿರಿ. ಆದುದರಿಂದಲೇ ಬೈಬಲ್‌ ನಮಗೆ ಜ್ಞಾಪಕ ಹುಟ್ಟಿಸುವುದು: “ತನ್ನಲ್ಲೇ ಭರವಸವಿಡುವವನು ಮೂಢನು; ಜ್ಞಾನದಿಂದ ನಡೆಯುವವನು ಉದ್ಧಾರವನ್ನು ಪಡೆಯುವನು.”​—ಜ್ಞಾನೋಕ್ತಿ 3:​5-7; 28:26.

ದೇವರಿಗೆ ಮೆಚ್ಚಿಗೆಯಾಗುವಂಥ ಸಂಗತಿಗಳ ಕುರಿತು ಕಲಿಯುವುದು

12. “ದೇವರ ಚಿತ್ತ” ಏನೆಂಬುದನ್ನು ನಾವೇಕೆ ವಿವೇಚಿಸಿ ತಿಳಿದುಕೊಳ್ಳಬೇಕು?

12 ಒಳ್ಳೇದು ಮತ್ತು ಕೆಟ್ಟದ್ದು ಯಾವುದೆಂಬುದರ ವಿಷಯದಲ್ಲಿ ನಾವು ಲೋಕದ ವಿವೇಕದ ಮೇಲಾಗಲಿ, ಸ್ವತಃ ನಮ್ಮ ಮೇಲಾಗಲಿ ಆತುಕೊಳ್ಳಬಾರದ ಕಾರಣ, ನಾವೇನು ಮಾಡಬೇಕು? ಅಪೊಸ್ತಲ ಪೌಲನು ಕೊಡುವ ಈ ಸ್ಪಷ್ಟ ಮತ್ತು ನಿಶ್ಚಿತವಾದ ಸಲಹೆಯನ್ನು ಗಮನಿಸಿರಿ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಗೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ದೇವರ ಚಿತ್ತವೇನೆಂಬುದನ್ನು ನಾವೇಕೆ ವಿವೇಚಿಸಿ ತಿಳಿದುಕೊಳ್ಳಬೇಕು? ಬೈಬಲ್‌ನಲ್ಲಿ ಯೆಹೋವನು ಒಂದು ಮುಚ್ಚುಮರೆಯಿಲ್ಲದಂಥ ಆದರೆ ಪ್ರಬಲವಾದ ಕಾರಣವನ್ನು ಕೊಡುತ್ತಾನೆ: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.” (ಯೆಶಾಯ 55:9) ಹೀಗೆ, ಸಾಮಾನ್ಯ ಪ್ರಜ್ಞೆ ಎಂದು ಯಾವುದನ್ನು ಕರೆಯಲಾಗುತ್ತದೊ ಅದರ ಮೇಲೆ ಅಥವಾ ನಮ್ಮ ಸ್ವಂತ ಅನಿಸಿಕೆಗಳ ಮೇಲೆ ಆತುಕೊಳ್ಳುವುದರ ಬದಲು, ನಮಗೆ ಈ ಬುದ್ಧಿವಾದವನ್ನು ಕೊಡಲಾಗಿದೆ: “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ.”​—ಎಫೆಸ 5:10.

13. ಯೋಹಾನ 17:3ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು, ದೇವರಿಗೆ ಮೆಚ್ಚಿಗೆಯಾಗುವಂಥ ಸಂಗತಿಗಳ ಕುರಿತಾಗಿ ತಿಳಿಯುವುದರ ಅಗತ್ಯವನ್ನು ಹೇಗೆ ಒತ್ತಿಹೇಳುತ್ತವೆ?

13 ಇದರ ಅಗತ್ಯವನ್ನು ಯೇಸು ಕ್ರಿಸ್ತನು ಈ ಮಾತುಗಳಲ್ಲಿ ಒತ್ತಿಹೇಳಿದನು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ‘ತಿಳಿಯುವುದು’ ಎಂದು ಭಾಷಾಂತರಿಸಲ್ಪಟ್ಟಿರುವ ಪದದ ಮೂಲ ಗ್ರೀಕ್‌ ಅಭಿವ್ಯಕ್ತಿಗೆ, ಬರೇ “ತಿಳಿಯುವುದಕ್ಕಿಂತ” ತುಂಬ ಗಾಢವಾದ ಅರ್ಥವಿದೆ. ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿಗನುಸಾರ, ಅದು “ತಿಳಿದುಕೊಳ್ಳುತ್ತಿರುವ ವ್ಯಕ್ತಿ ಮತ್ತು ಯಾರ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆಯೊ ಆ ವ್ಯಕ್ತಿಯ ನಡುವೆ ಒಂದು ಸಂಬಂಧವನ್ನು ಸೂಚಿಸುತ್ತದೆ; ಈ ವಿಷಯದಲ್ಲಿ ಏನನ್ನು ತಿಳಿಯಲಾಗುತ್ತದೊ ಅದು, ತಿಳಿದುಕೊಳ್ಳುತ್ತಿರುವವನಿಗೆ ಅಮೂಲ್ಯವಾದದ್ದಾಗಿದೆ ಅಥವಾ ಪ್ರಾಮುಖ್ಯವಾಗಿದೆ ಮತ್ತು ಈ ಕಾರಣದಿಂದ ಸ್ಥಾಪಿಸಲ್ಪಟ್ಟ ಸಂಬಂಧವೂ ಅಮೂಲ್ಯವಾದದ್ದೂ ಪ್ರಾಮುಖ್ಯವಾದದ್ದೂ ಆಗಿದೆ.” ಒಬ್ಬ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಿರುವುದು, ಆ ವ್ಯಕ್ತಿಯು ಯಾರು ಅಥವಾ ಅವನ ಹೆಸರೇನೆಂದು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಆ ವ್ಯಕ್ತಿಗೆ ಇಷ್ಟವಾಗುವ ಮತ್ತು ಇಷ್ಟವಾಗದಿರುವ ವಿಷಯಗಳನ್ನು ತಿಳಿದಿರುವುದು, ಅವನ ಮೌಲ್ಯಗಳನ್ನು, ಮಟ್ಟಗಳನ್ನು ತಿಳಿದಿರುವುದು ಮತ್ತು ಅವುಗಳನ್ನು ಗೌರವಿಸುವುದನ್ನು ಸಹ ಅದು ಒಳಗೂಡಿರುತ್ತದೆ.​—1 ಯೋಹಾನ 2:3; 4:8.

ನಮ್ಮ ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳೋಣ

14. ಆತ್ಮಿಕ ಕೂಸುಗಳು ಮತ್ತು ಪ್ರಾಯಸ್ಥರ ನಡುವೆ ಇರುವ ಮುಖ್ಯ ವ್ಯತ್ಯಾಸವು ಏನಾಗಿದೆಯೆಂದು ಪೌಲನು ಹೇಳಿದನು?

14 ಹಾಗಾದರೆ, ಒಳ್ಳೇದು ಮತ್ತು ಕೆಟ್ಟದ್ದರ ನಡುವಣ ಭೇದವನ್ನು ಮಾಡುವ ಸಾಮರ್ಥ್ಯವನ್ನು ನಾವು ಹೇಗೆ ಪಡೆಯಬಲ್ಲೆವು? ಪ್ರಥಮ ಶತಮಾನದ ಇಬ್ರಿಯ ಕ್ರೈಸ್ತರಿಗೆ ಪೌಲನು ಬರೆದ ಈ ಮಾತುಗಳು ಉತ್ತರವನ್ನು ಕೊಡುತ್ತವೆ: “ಹಾಲು ಬೇಕಾದವನು ಕೂಸಿನಂತಿದ್ದು ನೀತಿವಾಕ್ಯದಲ್ಲಿ ಅನುಭವವಿಲ್ಲದವನಾಗಿದ್ದಾನೆ. ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” ಹಿಂದಿನ ವಚನದಲ್ಲಿ ಪೌಲನು ಆ “ಹಾಲು,” ‘ದೈವೋಕ್ತಿಗಳ ಮೂಲಪಾಠಗಳು’ ಆಗಿದೆ ಎಂದು ವರ್ಣಿಸಿದನು. ಇದು, ಮತ್ತು “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರ” ಅಂದರೆ ‘ಪ್ರಾಯಸ್ಥರಿಗೋಸ್ಕರ’ ಇರುವ “ಗಟ್ಟಿಯಾದ ಆಹಾರ”ದ ನಡುವೆ ಇರುವ ವ್ಯತ್ಯಾಸವನ್ನು ಪೌಲನು ತೋರಿಸಿದನು.​—ಇಬ್ರಿಯ 5:​12-14.

15. ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆಯಲಿಕ್ಕಾಗಿ ಕಠಿನವಾದ ಪ್ರಯಾಸವು ಏಕೆ ಅಗತ್ಯ?

15 ಇದರರ್ಥ, ಎಲ್ಲಕ್ಕಿಂತಲೂ ಮುಂಚೆ, ದೇವರ ವಾಕ್ಯವಾಗಿರುವ ಬೈಬಲಿನಲ್ಲಿರುವ ಆತನ ಮಟ್ಟಗಳ ಕುರಿತಾದ ನಿಷ್ಕೃಷ್ಟವಾದ ತಿಳಿವಳಿಕೆಯನ್ನು ಪಡೆಯಲು ನಾವು ಕಠಿನವಾಗಿ ಪ್ರಯಾಸಪಡಬೇಕೆಂಬುದೇ. ನಾವೇನು ಮಾಡಬಹುದು ಅಥವಾ ಮಾಡಬಾರದೆಂಬುದನ್ನು ಹೇಳುವ ನಿಯಮಗಳ ಒಂದು ಪಟ್ಟಿಗಾಗಿ ನಾವು ಹುಡುಕುವುದಿಲ್ಲ. ಏಕೆಂದರೆ ಬೈಬಲ್‌ ಅಂಥ ಪುಸ್ತಕವಲ್ಲ. ಅದಕ್ಕೆ ಬದಲು, ಪೌಲನು ವಿವರಿಸಿದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ಆ ಉಪದೇಶ, ಖಂಡನೆ ಮತ್ತು ತಿದ್ದುಪಾಟಿನಿಂದ ಪ್ರಯೋಜನ ಪಡೆದುಕೊಳ್ಳಲು ನಾವು ನಮ್ಮ ಮನಸ್ಸು ಮತ್ತು ಯೋಚನಾ ಸಾಮರ್ಥ್ಯವನ್ನು ಉಪಯೋಗಿಸಬೇಕು. ಇದಕ್ಕಾಗಿ ಪ್ರಯತ್ನ ಅಗತ್ಯ. ಆದರೆ ಅದರಿಂದ ಸಿಗುವ ಫಲಿತಾಂಶವು, ಅಂದರೆ ನಾವು ‘ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧರಾಗುವುದು,’ ಆ ಪ್ರಯತ್ನವನ್ನು ಸಾರ್ಥಕಗೊಳಿಸುತ್ತದೆ.​—ಜ್ಞಾನೋಕ್ತಿ 2:​3-6.

16. ಒಬ್ಬನ ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳುವುದರ ಅರ್ಥವೇನು?

16 ಮತ್ತು ಪೌಲನು ಸೂಚಿಸಿದಂತೆ, ಪ್ರಾಯಸ್ಥರು ತಮ್ಮ “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವ”ರಾಗಿರುತ್ತಾರೆ. ಇದೇ, ವಿಷಯದ ತಿರುಳಾಗಿದೆ. ‘ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳುವುದು’ ಎಂಬ ಅಭಿವ್ಯಕ್ತಿಯ ಅಕ್ಷರಾರ್ಥವು, ‘(ಅಂಗಸಾಧಕನಂತೆ) ತರಬೇತಿಗೊಳಿಸಲ್ಪಟ್ಟಿರುವ ಪಂಚೇಂದ್ರಿಯಗಳು’ ಎಂದಾಗಿದೆ. (ಕಿಂಗ್‌ಡಂ ಇಂಟರ್‌ಲೀನಿಯರ್‌ ಟ್ರಾನ್ಸ್‌ಲೇಶನ್‌) ರಿಂಗುಗಳು ಅಥವಾ ಒಂದು ನಿರ್ದಿಷ್ಟ ಸಲಕರಣೆಯಲ್ಲಿ ಒಬ್ಬ ಅನುಭವೀ ಅಂಗಸಾಧಕನು, ಕ್ಷಣಾರ್ಧದಲ್ಲಿಯೇ ಗುರುತ್ವಾಕರ್ಷಣೆ ಅಥವಾ ಇನ್ನಿತರ ನೈಸರ್ಗಿಕ ನಿಯಮಗಳನ್ನು ಉಲ್ಲಂಘಿಸುತ್ತಿರುವಂತೆ ತೋರುವ ಚಲನೆಗಳನ್ನು ವೇಗದಿಂದ ಮಾಡುತ್ತಾನೆ. ಎಲ್ಲ ಸಮಯದಲ್ಲೂ ಅವನ ಅಂಗಗಳು ಅವನ ಪೂರ್ಣ ಸ್ವಾಧೀನದಲ್ಲಿರುತ್ತವೆ. ಮತ್ತು ತನ್ನ ಕಸರತ್ತನ್ನು ಯಶಸ್ವಿಪೂರ್ವಕವಾಗಿ ಮಾಡಿಮುಗಿಸಲಿಕ್ಕಾಗಿ ಯಾವ ಚಲನೆಗಳನ್ನು ಮಾಡಬೇಕೆಂಬುದನ್ನು ಅವನು ಬಹುಮಟ್ಟಿಗೆ ಸಹಜವಾಗಿ ಗ್ರಹಿಸುತ್ತಾನೆ. ಇದೆಲ್ಲವೂ ಕಠಿನ ತರಬೇತಿ ಮತ್ತು ನಿರಂತರ ಅಭ್ಯಾಸದ ಫಲವಾಗಿದೆ.

17. ನಾವು ಯಾವ ಅರ್ಥದಲ್ಲಿ ಅಂಗಸಾಧಕರಂತೆ ಇರಬೇಕು?

17 ನಮ್ಮ ನಿರ್ಣಯಗಳು ಮತ್ತು ಆಯ್ಕೆಗಳು ಯಾವಾಗಲೂ ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ನಾವು ಸಹ ಒಬ್ಬ ಅಂಗಸಾಧಕನಂತೆ ಆತ್ಮಿಕ ಅರ್ಥದಲ್ಲಿ ಶಿಕ್ಷಿಸಲ್ಪಡಬೇಕು. ಎಲ್ಲ ಸಮಯದಲ್ಲಿ ನಮ್ಮ ಇಂದ್ರಿಯಗಳು ಮತ್ತು ಅಂಗಗಳು ನಮ್ಮ ಪೂರ್ಣ ನಿಯಂತ್ರಣದ ಕೆಳಗಿರಬೇಕು. (ಮತ್ತಾಯ 5:​29, 30; ಕೊಲೊಸ್ಸೆ 3:​5-10) ಉದಾಹರಣೆಗಾಗಿ, ಅನೈತಿಕವಾದ ವಿಷಯಗಳನ್ನು ನೋಡದಂತೆ ನಿಮ್ಮ ಕಣ್ಣುಗಳನ್ನು ಮತ್ತು ಕೀಳ್ಮಟ್ಟದ ಸಂಗೀತ ಹಾಗೂ ಮಾತುಗಳಿಗೆ ಕಿವಿಗೊಡದಂತೆ ನಿಮ್ಮ ಕಿವಿಗಳನ್ನು ನೀವು ಶಿಸ್ತುಗೊಳಿಸುತ್ತೀರೊ? ನಮ್ಮ ಸುತ್ತಲೂ ಅಹಿತಕರವಾದ ವಿಷಯಗಳಿವೆ ಎಂಬುದು ನಿಜ. ಆದರೆ, ಅದು ನಮ್ಮ ಹೃದಮನಗಳಲ್ಲಿ ಬೇರೂರುವಂತೆ ಅನುಮತಿಸುವುದು ಇಲ್ಲವೇ ಅನುಮತಿಸದಿರುವುದು ನಮ್ಮ ಕೈಯಲ್ಲಿದೆ. “ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವದಿಲ್ಲ; ದುರಾಚಾರವನ್ನು ಹಗೆಮಾಡುತ್ತೇನೆ, ಅದರ ಗೊಡವೆಯೇ ನನಗೆ ಬೇಡ. . . . ಮೋಸಗಾರನು ನನ್ನ ಮನೆಯಲ್ಲಿರಲೇ ಬಾರದು; ಸುಳ್ಳುಗಾರನು ನನ್ನ ಮುಂದೆ ನಿಲ್ಲಕೂಡದು” ಎಂದು ಹೇಳಿದ ಕೀರ್ತನೆಗಾರನನ್ನು ನಾವು ಅನುಕರಿಸಬಹುದು.​—ಕೀರ್ತನೆ 101:​3, 7.

ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಳ್ಳುವುದು

18. ನಮ್ಮ ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳುವುದರ ಕುರಿತಾದ ಪೌಲನ ವಿವರಣೆಯಲ್ಲಿ, “ಸಾಧನೆಯಿಂದ” ಎಂದು ಉಪಯೋಗಿಸಲ್ಪಟ್ಟಿರುವ ಅಭಿವ್ಯಕ್ತಿಯಿಂದ ಏನು ಸೂಚಿಸಲ್ಪಟ್ಟಿದೆ?

18 ಒಳ್ಳೇದು ಮತ್ತು ಕೆಟ್ಟದ್ದರ ನಡುವಿನ ಭೇದವನ್ನು ತಿಳಿಯಲು, ನಮ್ಮ ಜ್ಞಾನೇಂದ್ರಿಯಗಳನ್ನು ನಾವು ‘ಸಾಧನೆಯಿಂದ’ ಶಿಕ್ಷಿಸಸಾಧ್ಯವಿದೆ ಎಂಬುದನ್ನು ಮನಸ್ಸಿನಲ್ಲಿಡಿ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಒಂದು ನಿರ್ಣಯವನ್ನು ಮಾಡಬೇಕಾದಾಗೆಲ್ಲ, ಅದರಲ್ಲಿ ಯಾವ ಬೈಬಲ್‌ ತತ್ವಗಳು ಒಳಗೂಡಿವೆ ಮತ್ತು ಅವುಗಳನ್ನು ಹೇಗೆ ಅನ್ವಯಿಸಿಕೊಳ್ಳಬಹುದೆಂಬುದನ್ನು ವಿವೇಚಿಸಲು ನಮ್ಮ ಮಾನಸಿಕ ಸಾಮರ್ಥ್ಯಗಳನ್ನು ಉಪಯೋಗಿಸಲು ನಾವು ಕಲಿಯಬೇಕು. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸಲ್ಪಡುತ್ತಿರುವ ಬೈಬಲ್‌ ಪ್ರಕಾಶನಗಳಲ್ಲಿ ಸಂಶೋಧನೆಯನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿರಿ. (ಮತ್ತಾಯ 24:45) ಮತ್ತು ಖಂಡಿತವಾಗಿಯೂ ನಾವು ಪ್ರೌಢ ಕ್ರೈಸ್ತರ ಸಹಾಯವನ್ನೂ ಪಡೆದುಕೊಳ್ಳಬಹುದು. ಹಾಗಿದ್ದರೂ, ದೇವರ ವಾಕ್ಯವನ್ನು ಅಭ್ಯಾಸಮಾಡಲು ನಾವು ಮಾಡುವ ವೈಯಕ್ತಿಕ ಪ್ರಯತ್ನದೊಂದಿಗೆ, ಆತನ ಮಾರ್ಗದರ್ಶನ ಮತ್ತು ಆತ್ಮಕ್ಕಾಗಿ ನಾವು ಯೆಹೋವನಿಗೆ ಮಾಡುವ ಪ್ರಾರ್ಥನೆಯು, ಕಟ್ಟಕಡೆಗೆ ಹೇರಳವಾದ ಪ್ರತಿಫಲವನ್ನು ನೀಡುವುದು.​—ಎಫೆಸ 3:​14-19.

19. ನಾವು ನಮ್ಮ ಜ್ಞಾನೇಂದ್ರಿಯಗಳನ್ನು ಪ್ರಗತಿಪರವಾಗಿ ತರಬೇತಿಗೊಳಿಸಿದರೆ ನಮಗೆ ಯಾವ ಆಶೀರ್ವಾದಗಳು ಸಿಗುವವು?

19 ನಾವು ಪ್ರಗತಿಪರವಾಗಿ ನಮ್ಮ ಜ್ಞಾನೇಂದ್ರಿಯಗಳನ್ನು ತರಬೇತಿಗೊಳಿಸುವಾಗ, “ನಾವು ಇನ್ನು ಮೇಲೆ ಕೂಸುಗಳಾಗಿರಬಾರದು; ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರು ಹಾಗಿರಬಾರದು” ಎಂಬುದೇ ನಮ್ಮ ಉದ್ದೇಶವಾಗಿರಬೇಕು. (ಎಫೆಸ 4:14) ಅದಕ್ಕೆ ಬದಲಾಗಿ, ದೇವರಿಗೆ ಮೆಚ್ಚಿಗೆಯಾಗುವಂಥ ಸಂಗತಿಗಳ ಕುರಿತು ನಮಗಿರುವ ಜ್ಞಾನ ಮತ್ತು ತಿಳಿವಳಿಕೆಯ ಮೇಲಾಧರಿಸಿ, ನಾವು ವಿವೇಕಯುತ ನಿರ್ಣಯಗಳನ್ನು ಮಾಡಲು ಶಕ್ತರಾಗುತ್ತೇವೆ. ಆ ನಿರ್ಣಯಗಳು ಚಿಕ್ಕವಾಗಿರಲಿ ದೊಡ್ಡವಾಗಿರಲಿ, ಅವು ನಮಗೆ ಉಪಯುಕ್ತಕರವಾಗಿರುತ್ತವೆ, ನಮ್ಮ ಜೊತೆ ಆರಾಧಕರ ಭಕ್ತಿವೃದ್ಧಿಮಾಡುತ್ತವೆ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮ ಸ್ವರ್ಗೀಯ ತಂದೆಗೆ ಸಂತೋಷವನ್ನು ತರುತ್ತವೆ. (ಜ್ಞಾನೋಕ್ತಿ 27:11) ಈ ಕಠಿನವಾದ ಸಮಯಗಳಲ್ಲಿ ಇದು ಎಂಥ ಆಶೀರ್ವಾದ ಮತ್ತು ಸಂರಕ್ಷಣೆಯಾಗಿದೆ!

[ಪಾದಟಿಪ್ಪಣಿ]

^ ಪ್ಯಾರ. 3 ಥಾಮಸ್‌ ಹೋಮ್ಸ್‌ ಮತ್ತು ರಿಚರ್ಡ್‌ ರಹೇ ಎಂಬ ಡಾಕ್ಟರರು, ಜನರ ಜೀವಿತಗಳಲ್ಲಿ ಅತಿ ಹೆಚ್ಚು ಮಾನಸಿಕ ಒತ್ತಡವನ್ನು ತರುವಂಥ 40ಕ್ಕಿಂತಲೂ ಹೆಚ್ಚು ಅನುಭವಗಳ ಕುರಿತು ತಯಾರಿಸಿದ ಪಟ್ಟಿಯಲ್ಲಿ, ಒಬ್ಬ ಪತಿ ಅಥವಾ ಪತ್ನಿಯ ಮರಣ, ವಿವಾಹ ವಿಚ್ಛೇದ, ಮತ್ತು ಪ್ರತ್ಯೇಕವಾಸವು ಮೊದಲ ಮೂರು ಸ್ಥಾನಗಳಲ್ಲಿವೆ. ಮದುವೆಮಾಡಿಕೊಳ್ಳುವುದು, ಏಳನೆಯ ಸ್ಥಾನದಲ್ಲಿ ಬರುತ್ತದೆ.

ನೀವು ವಿವರಿಸಬಲ್ಲಿರೊ?

• ಸರಿಯಾದ ನಿರ್ಣಯಗಳನ್ನು ಮಾಡಲಿಕ್ಕಾಗಿ ಯಾವ ಸಾಮರ್ಥ್ಯವು ಅಗತ್ಯವಾಗಿದೆ?

• ಒಳ್ಳೇದು ಮತ್ತು ಕೆಟ್ಟದ್ದು ಯಾವುದು ಎಂಬುದನ್ನು ನಿರ್ಣಯಿಸುವಾಗ, ಗಣ್ಯ ವ್ಯಕ್ತಿಗಳ ಕಡೆಗೆ ನೋಡುವುದು ಅಥವಾ ನಮ್ಮ ಸ್ವಂತ ಅನಿಸಿಕೆಗಳ ಮೇಲೆ ಆತುಕೊಳ್ಳುವುದು ಏಕೆ ಅವಿವೇಕದ ಸಂಗತಿಯಾಗಿದೆ?

• ನಿರ್ಣಯಗಳನ್ನು ಮಾಡುವಾಗ, ದೇವರಿಗೆ ಮೆಚ್ಚಿಗೆಯಾಗುವಂಥ ಸಂಗತಿಗಳನ್ನು ನಾವು ಏಕೆ ಖಚಿತಪಡಿಸಿಕೊಳ್ಳಬೇಕು, ಮತ್ತು ನಾವದನ್ನು ಹೇಗೆ ಮಾಡಬಹುದು?

• ‘ನಮ್ಮ ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳುವುದರ’ ಅರ್ಥವೇನು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಮಾರ್ಗದರ್ಶನಕ್ಕಾಗಿ ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಗಳ ಕಡೆಗೆ ನೋಡುವುದು ವ್ಯರ್ಥ

[ಪುಟ 10ರಲ್ಲಿರುವ ಚಿತ್ರ]

ಒಬ್ಬ ಅಂಗಸಾಧಕನಂತೆ, ನಮ್ಮ ಎಲ್ಲ ಇಂದ್ರಿಯಗಳು ಮತ್ತು ಅಂಗಗಳು ಪೂರ್ಣವಾಗಿ ನಮ್ಮ ನಿಯಂತ್ರಣದ ಕೆಳಗಿರಬೇಕು