ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಅವಳ ಕಣ್ಣೀರನ್ನು ಒರಸಿದ್ದಾನೆ

ದೇವರು ಅವಳ ಕಣ್ಣೀರನ್ನು ಒರಸಿದ್ದಾನೆ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ದೇವರು ಅವಳ ಕಣ್ಣೀರನ್ನು ಒರಸಿದ್ದಾನೆ

ತಮ್ಮ ಜೀವನಗಳನ್ನು ಯೆಹೋವನ ನಿಯಮಗಳು ಮತ್ತು ಮೂಲತತ್ವಗಳೊಂದಿಗೆ ಹೊಂದಿಕೆಯಲ್ಲಿ ತರುವಂಥ ಜನರು ಹೇರಳವಾಗಿ ಆಶೀರ್ವದಿಸಲ್ಪಡುತ್ತಾರೆ. ಅಗತ್ಯವಿರುವ ಬದಲಾವಣೆಗಳನ್ನು ಮಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಅದನ್ನು ಮಾಡಲು ಬೇಕಾಗಿರುವ ಸಹಾಯ ಮತ್ತು ಉತ್ತೇಜನವು ಯಾವಾಗಲೂ ಲಭ್ಯವಿರುತ್ತದೆ. (ಕೀರ್ತನೆ 84:11) ಇದರ ಒಂದು ಉದಾಹರಣೆಯು ನೈರುತ್ಯ ಏಷಿಯಾದಿಂದ ಬಂದಿರುವ ಈ ಅನುಭವವಾಗಿದೆ.

ಫ್ರಾನ್ಸ್‌ನಿಂದ ರಜೆಯಲ್ಲಿ ಬಂದಿದ್ದ ಸಾಕ್ಷಿಯೊಬ್ಬಳು, ಕಿಮ್‌ * ಎಂಬ ಹೆಸರಿನ ಅಂಗಡಿ ಮಾಲಿಕಳೊಂದಿಗೆ, ಈ ಭೂಮಿಗಾಗಿರುವ ಯೆಹೋವ ದೇವರ ಉದ್ದೇಶದ ಕುರಿತಾಗಿ ಮಾತಾಡಿದಳು. ಅವಳು ಕಿಮ್‌ಳೊಂದಿಗೆ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಒಂದು ಪ್ರತಿಯನ್ನೂ ಬಿಟ್ಟುಹೋದಳು. ಆ ಪುಸ್ತಕವನ್ನು ಮೇಲಿಂದ ಮೇಲೆ ನೋಡುತ್ತಿದ್ದಾಗ, ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು” ಎಂಬ ಶಬ್ದಗಳ ಮೇಲೆ ಕಿಮ್‌ಳ ದೃಷ್ಟಿ ಬಿತ್ತು. (ಪ್ರಕಟನೆ 21:4) “ಈ ವಚನವು ನಿಜವಾಗಿಯೂ ನನ್ನ ಮನಮುಟ್ಟಿತು,” ಎಂದು ಕಿಮ್‌ ಜ್ಞಾಪಿಸಿಕೊಳ್ಳುತ್ತಾಳೆ. “ಇಡೀ ದಿನ ನಾನು ಅಂಗಡಿಯಲ್ಲಿರುವಾಗ ನಗುನಗುತ್ತಾ ಎಲ್ಲರೊಂದಿಗೆ ಮಾತಾಡುವುದನ್ನು ನೋಡಿ, ನಾನು ಸಂಜೆ ಮನೆಗೆ ಹೋದಾಗಿನಿಂದ ನಿದ್ದೆಹೋಗುವವರೆಗೂ ಅಳುತ್ತಾ ಇರುತ್ತೇನೆಂದು ಯಾರಿಗಾದರೂ ಹೇಗೆ ಗೊತ್ತಾದೀತು?” ಆ ದುಃಖಕ್ಕೆ ಕಾರಣವೇನಾಗಿತ್ತೆಂಬುದನ್ನು ಅವಳು ತಿಳಿಸುತ್ತಾಳೆ: “ನಾನು 18 ವರ್ಷಗಳಿಂದ ಒಬ್ಬ ಪುರುಷನೊಂದಿಗೆ ಜೀವಿಸುತ್ತಿದ್ದೆ. ಆದರೆ ಅವನು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದದ್ದರಿಂದ ನಾನು ತುಂಬ ದುಃಖಿತಳಾಗಿದ್ದೆ. ಈ ಜೀವನ ರೀತಿಯನ್ನು ನಾನು ಅಂತ್ಯಗೊಳಿಸಲು ಬಯಸುತ್ತಿದ್ದೆ. ಆದರೆ ನಾನು ಇಷ್ಟು ದೀರ್ಘ ಸಮಯದಿಂದ ಅವನೊಂದಿಗೆ ಬಾಳಿದ್ದರಿಂದ, ಹಾಗೆ ಮಾಡುವ ಧೈರ್ಯ ನನಗಿರಲಿಲ್ಲ.”

ಸ್ವಲ್ಪ ಸಮಯದ ನಂತರ, ಲಿನ್‌ ಎಂಬ ಹೆಸರಿನ ಒಬ್ಬ ಯೆಹೋವನ ಸಾಕ್ಷಿಯೊಂದಿಗೆ ಬೈಬಲ್‌ ಅಭ್ಯಾಸವನ್ನು ಮಾಡಲು ಕಿಮ್‌ ಒಪ್ಪಿಕೊಂಡಳು. “ಬೈಬಲಿನ ಬೋಧನೆಯನ್ನು ಅನ್ವಯಿಸಿಕೊಳ್ಳಲು ನಾನು ಕಾತರಳಾಗಿದ್ದೆ,” ಅನ್ನುತ್ತಾಳೆ ಕಿಮ್‌. “ಉದಾಹರಣೆಗಾಗಿ, ನನ್ನ ಕುಟುಂಬದಿಂದ ಬಂದ ವಿರೋಧವನ್ನು ಲೆಕ್ಕಿಸದೇ, ನನ್ನ ಪೂರ್ವಜರ ಆರಾಧನೆಮಾಡುವುದನ್ನು ನಾನು ನಿಲ್ಲಿಸಿದೆ. ಅಲ್ಲದೆ, ಆ ಪುರುಷನೊಂದಿಗಿನ ನನ್ನ ಸಂಬಂಧವನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸಿದೆ, ಆದರೆ ಅವನು ಅದನ್ನು ನಿರಾಕರಿಸಿದ. ಈ ಕಷ್ಟಕರ ಸಮಯದಲ್ಲಿ, ಫ್ರಾನ್ಸ್‌ನ ಆ ಸಾಕ್ಷಿಯು ನನಗೆ ಬೈಬಲ್‌ ಪ್ರಕಾಶನಗಳನ್ನು ಕಳುಹಿಸುತ್ತಾ ಇದ್ದಳು, ಮತ್ತು ಲಿನ್‌ ಸಹ ನನಗೆ ಬಹಳಷ್ಟು ಪ್ರೋತ್ಸಾಹವನ್ನು ಕೊಡುತ್ತಾ ಇದ್ದಳು. ಈ ಸಹೋದರಿಯರ ತಾಳ್ಮೆ ಮತ್ತು ಪ್ರೀತಿಪೂರ್ವಕ ಬೆಂಬಲವು, ನಾನು ನನ್ನ ಸಂಗಡಿಗನ ನಿಜ ಬಣ್ಣವನ್ನು ನೋಡಲು ಸಾಧ್ಯವಾಗುವ ವರೆಗೂ ತಾಳಿಕೊಂಡು ಹೋಗುವಂತೆ ಸಹಾಯಮಾಡಿತು. ಅವನಿಗೆ ಈಗಾಗಲೇ 5 ಮಂದಿ ‘ಹೆಂಡತಿಯರು’ ಮತ್ತು 25 ಮಕ್ಕಳು ಇದ್ದರೆಂದು ನನಗೆ ತಿಳಿದುಬಂತು! ಇದು ನನಗೆ, ಅವನನ್ನು ಬಿಟ್ಟುಬಿಡುವ ಧೈರ್ಯವನ್ನು ಕೊಟ್ಟಿತು.

“ಎಲ್ಲ ಸುಖಸೌಕರ್ಯಗಳಿಂದ ಕೂಡಿದ್ದ ದೊಡ್ಡ ಮನೆಯನ್ನು ಬಿಟ್ಟು, ಒಂದು ಚಿಕ್ಕ ಅಪಾರ್ಟ್‌ಮೆಂಟ್‌ಗೆ ಹೋಗುವುದು ಸುಲಭವಾಗಿರಲಿಲ್ಲ. ಅಷ್ಟುಮಾತ್ರವಲ್ಲದೆ, ನನ್ನ ಮಾಜಿ ಸಂಗಡಿಗನು, ನಾನು ಅವನೊಂದಿಗೆ ಜೀವಿಸಲು ಹಿಂದೆ ಬರುವಂತೆ ಒತ್ತಡವನ್ನು ಹಾಕಿದನು. ನಾನು ನಿರಾಕರಿಸಿದ್ದರಿಂದ, ನನ್ನನ್ನು ವಿರೂಪಗೊಳಿಸಲು ಆ್ಯಸಿಡ್‌ ಎರಚುವೆನೆಂದೂ ಅವನು ಬೆದರಿಸಿದನು. ಆದರೆ ಯೆಹೋವನ ಸಹಾಯದಿಂದ, ನಾನು ಸರಿಯಾದದ್ದನ್ನು ಮಾಡಲು ಶಕ್ತಳಾದೆ.” ಕಿಮ್‌ ಪ್ರಗತಿಮಾಡುತ್ತಾ ಮುಂದುವರಿದಳು ಮತ್ತು ಕೊನೆಗೆ ಏಪ್ರಿಲ್‌ 1998ರಲ್ಲಿ ದೀಕ್ಷಾಸ್ನಾನಪಡೆದಳು. ಅವಳ ಇಬ್ಬರು ಸಹೋದರಿಯರು ಮತ್ತು ಹದಿವಯಸ್ಕ ಮಗನು ಸಹ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಭ್ಯಾಸಮಾಡಲು ಆರಂಭಿಸಿದರು.

“ನನ್ನ ಜೀವಿತದಲ್ಲಿ ಇನ್ನೇನೂ ಉಳಿದಿಲ್ಲ ಎಂದು ನಾನು ನೆನಸುತ್ತಿದ್ದೆ. ಈಗಲಾದರೊ, ನಾನು ಸಂತೋಷದಿಂದಿದ್ದೇನೆ. ಈಗ ನಾನು ರಾತ್ರಿ ಸಮಯದಲ್ಲಿ ಅಳುವುದಿಲ್ಲ. ಯೆಹೋವನು ಈಗಾಗಲೇ ನನ್ನ ಕಣ್ಣೀರನ್ನು ಒರಸಿದ್ದಾನೆ” ಎಂದು ಕಿಮ್‌ ಹೇಳುತ್ತಾಳೆ.

[ಪಾದಟಿಪ್ಪಣಿ]

^ ಪ್ಯಾರ. 4 ಹೆಸರುಗಳನ್ನು ಬದಲಾಯಿಸಲಾಗಿದೆ.