ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಪ್ರಗತಿಗೆ ಅಡ್ಡಬರುವ ತಡೆಗಳನ್ನು ಜಯಿಸಿರಿ!

ನಿಮ್ಮ ಪ್ರಗತಿಗೆ ಅಡ್ಡಬರುವ ತಡೆಗಳನ್ನು ಜಯಿಸಿರಿ!

ನಿಮ್ಮ ಪ್ರಗತಿಗೆ ಅಡ್ಡಬರುವ ತಡೆಗಳನ್ನು ಜಯಿಸಿರಿ!

ನಿಮ್ಮ ಕಾರ್‌ ಗೇರ್‌ನಲ್ಲಿದೆ, ಮತ್ತು ಎಂಜಿನ್‌ ಸಹ ಓಡುತ್ತಾ ಇದೆ, ಆದರೆ ಕಾರ್‌ ಮಾತ್ರ ಮುಂದಕ್ಕೆ ಚಲಿಸುತ್ತಾ ಇಲ್ಲ. ಯಾಂತ್ರಿಕ ಸಮಸ್ಯೆಯೇನಾದರೂ ಇದೆಯೊ? ಇಲ್ಲ. ಅದರ ಚಕ್ರಗಳಲ್ಲೊಂದರ ಮುಂದೆ ಒಂದು ದೊಡ್ಡ ಕಲ್ಲುಬಂಡೆ ಸಿಕ್ಕಿಬಿದ್ದಿದೆ. ಕಾರ್‌ ಮುಂದಕ್ಕೆ ಚಲಿಸಬೇಕಾದರೆ ಅದನ್ನು ಅಲ್ಲಿಂದ ತೆಗೆದುಹಾಕಬೇಕು, ಅಷ್ಟೇ.

ಅದೇ ರೀತಿಯಲ್ಲಿ, ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸಮಾಡುತ್ತಿರುವ ಕೆಲವರಿಗೆ ಅವರ ಆತ್ಮಿಕ ಪ್ರಗತಿಯನ್ನು ಅಡ್ಡಗಟ್ಟುತ್ತಿರುವ ಕೆಲವು ಅಡೆತಡೆಗಳಿವೆ. ಉದಾಹರಣೆಗಾಗಿ, ‘ಪ್ರಪಂಚದ ಚಿಂತೆ, ಐಶ್ವರ್ಯದಿಂದುಂಟಾಗುವ ಮೋಸ’ದಂಥ ವಿಷಯಗಳು, ಸತ್ಯದ ‘ವಾಕ್ಯವನ್ನು ಅಡಗಿಸಿ’ ಬೆಳವಣಿಗೆಯನ್ನು ತಡೆಗಟ್ಟಬಲ್ಲವೆಂದು ಯೇಸು ಎಚ್ಚರಿಸಿದ್ದನು.​—ಮತ್ತಾಯ 13:22.

ಇತರರಿಗಾದರೊ, ಗಟ್ಟಿಯಾಗಿ ಬೇರೂರಿರುವ ಅಭ್ಯಾಸಗಳು ಅಥವಾ ಬಲಹೀನತೆಗಳು ಅವರ ಪ್ರಗತಿಗೆ ತಡೆಯನ್ನು ಹಾಕುತ್ತಿರಬಹುದು. ಯೂಟಾಕಾ ಎಂಬ ಹೆಸರಿನ ಒಬ್ಬ ಜಪಾನೀ ವ್ಯಕ್ತಿಗೆ ಬೈಬಲಿನ ಸಂದೇಶವು ತುಂಬ ಇಷ್ಟವಾಯಿತು. ಆದರೆ ಅವನಿಗೆ ಜೂಜಾಟದ ಗಂಭೀರ ಸಮಸ್ಯೆಯಿತ್ತು. ಈ ಕೆಟ್ಟ ಚಾಳಿಯನ್ನು ನಿಲ್ಲಿಸಲು ಅವನು ಎಷ್ಟೋ ಸಲ ಪ್ರಯತ್ನಿಸಿದರೂ, ಸೋತುಹೋಗಿದ್ದನು. ತನ್ನ ಈ ಚಟದಿಂದಾಗಿ ಅವನು ಬಹಳಷ್ಟು ಹಣವನ್ನು, ಮೂರು ಮನೆಗಳನ್ನು, ತನ್ನ ಕುಟುಂಬದ ಗೌರವವನ್ನು ಮತ್ತು ತನ್ನ ಸ್ವಂತ ಮಾನವನ್ನು ಕಳೆದುಕೊಂಡಿದ್ದನು. ಅಡ್ಡಿಯನ್ನುಂಟುಮಾಡುತ್ತಿದ್ದ ಈ ತಡೆಯನ್ನು ಜಯಿಸಿ ಅವನೊಬ್ಬ ಕ್ರೈಸ್ತನಾಗಲು ಸಾಧ್ಯವಾಯಿತೊ?

ಕೀಕೊ ಎಂಬ ಹೆಸರಿನ ಸ್ತ್ರೀಯೊಬ್ಬಳನ್ನು ಪರಿಗಣಿಸಿರಿ. ಬೈಬಲಿನ ಸಹಾಯದಿಂದ ಅವಳು ವಿಗ್ರಹಾರಾಧನೆ, ಅನೈತಿಕತೆ ಮತ್ತು ಕಣಿಹೇಳುವಂಥ ದುರಭ್ಯಾಸಗಳನ್ನು ನಿಲ್ಲಿಸಿಬಿಟ್ಟಳು. ಆದರೆ “ನನಗಿದ್ದ ಅತಿ ದೊಡ್ಡ ತಡೆಯು ಧೂಮಪಾನವಾಗಿತ್ತು. ಅದನ್ನು ನಿಲ್ಲಿಸಲು ನಾನು ಅನೇಕಸಲ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ” ಎಂದು ಕೀಕೊ ಒಪ್ಪಿಕೊಳ್ಳುತ್ತಾಳೆ.

ನಿಮ್ಮ ಪ್ರಗತಿಯ ಮಾರ್ಗದಲ್ಲಿ ಅಡ್ಡಬಂದು, ಜಗ್ಗದೆ ಇರುವ ಅಂಥದ್ದೇ ತಡೆಯು ಇರುವಂತೆ ನಿಮಗೂ ತೋರಿರಬಹುದು. ಆದರೆ ಅದೇನೇ ಆಗಿರಲಿ, ದೇವರ ಸಹಾಯದೊಂದಿಗೆ ಅದನ್ನು ಜಯಿಸಬಲ್ಲಿರೆಂಬ ಆಶ್ವಾಸನೆ ನಿಮಗಿರಲಿ.

ಯೇಸುವಿನ ಶಿಷ್ಯರು ಮೂರ್ಛೆರೋಗವಿದ್ದ ಒಬ್ಬ ವ್ಯಕ್ತಿಯಿಂದ ದೆವ್ವವನ್ನು ಬಿಡಿಸಲು ಸೋತುಹೋದಾಗ, ಯೇಸು ಅವರಿಗೆ ಕೊಟ್ಟ ಸಲಹೆಯನ್ನು ನೆನಪಿಗೆ ತನ್ನಿರಿ. ಅವರು ಮಾಡಲು ಸೋತುಹೋದ ಕೆಲಸವನ್ನು ಯೇಸು ಮಾಡಿದಾಗ, ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಸಾಸಿವೇಕಾಳಷ್ಟು ನಂಬಿಕೆ ನಿಮಗೆ ಇರುವದಾದರೆ ನೀವು ಈ ಬೆಟ್ಟಕ್ಕೆ​—ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವದು; ಮತ್ತು ನಿಮ್ಮ ಕೈಯಿಂದಾಗದಂಥದು ಒಂದೂ ಇರುವದಿಲ್ಲ.” (ಮತ್ತಾಯ 17:​14-20; ಮಾರ್ಕ 9:​17-29) ಹೌದು ನಮ್ಮ ಮುಂದೆ ಒಂದು ದೊಡ್ಡ ಪರ್ವತದಂತೆ ತೋರುತ್ತಿರುವ ಸಮಸ್ಯೆಯು, ನಮ್ಮ ಸರ್ವಶಕ್ತನಾದ ಸೃಷ್ಟಿಕರ್ತನ ದೃಷ್ಟಿಯಲ್ಲಿ ತೀರ ಚಿಕ್ಕದು ಮತ್ತು ಕ್ಷುಲ್ಲಕವಾದದ್ದಾಗಿರುತ್ತದೆ.​—ಆದಿಕಾಂಡ 18:14; ಮಾರ್ಕ 10:27.

ಪ್ರಗತಿಗೆ ಅಡ್ಡಬರುವ ಅಡಚಣೆಗಳನ್ನು ಗುರುತಿಸುವುದು

ನಿಮಗಿರುವ ತಡೆಗಳನ್ನು ಜಯಿಸುವ ಮುಂಚೆ, ಆ ತಡೆಗಳು ಯಾವುವು ಎಂಬುದನ್ನು ನೀವು ಮೊದಲು ಗುರುತಿಸಬೇಕು. ಅದನ್ನು ಹೇಗೆ ಮಾಡಬಲ್ಲಿರಿ? ಕೆಲವೊಮ್ಮೆ ಒಬ್ಬ ಹಿರಿಯನು ಅಥವಾ ನಿಮ್ಮೊಂದಿಗೆ ಬೈಬಲನ್ನು ಅಭ್ಯಾಸಮಾಡುತ್ತಿರುವಂಥ ಸಭೆಯ ಸದಸ್ಯನೊಬ್ಬನು, ಯಾವುದಾದರೊಂದು ವಿಷಯವನ್ನು ನಿಮ್ಮ ಗಮನಕ್ಕೆ ತರಬಹುದು. ಅಂಥ ಪ್ರೀತಿಪರ ಸಲಹೆಯ ಕುರಿತು ಅಸಮಾಧಾನಪಡುವ ಬದಲಿಗೆ, ನೀವು ನಮ್ರತೆಯಿಂದ ‘ಉಪದೇಶವನ್ನು ಕೇಳಿ, ಅದನ್ನು ಬಿಡದೆ ಜ್ಞಾನವಂತರಾಗಬೇಕು.’ (ಜ್ಞಾನೋಕ್ತಿ 8:33) ಬೇರೆ ಸಮಯಗಳಲ್ಲಿ, ನಿಮ್ಮ ಬಲಹೀನತೆಗಳು ನಿಮ್ಮ ಬೈಬಲ್‌ ಅಭ್ಯಾಸದ ಮೂಲಕ ನಿಮ್ಮ ಅರಿವಿಗೆ ಬರಬಹುದು. ಹೌದು, ದೇವರ ವಾಕ್ಯವು ‘ಸಜೀವವಾದದ್ದು ಮತ್ತು ಕಾರ್ಯಸಾಧಕವಾದದ್ದಾಗಿದೆ.’ (ಇಬ್ರಿಯ 4:12) ಬೈಬಲನ್ನು ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಓದುವುದು, ನಿಮ್ಮ ಅಂತರಂಗದಲ್ಲಿ ಅಡಗಿಕೊಂಡಿರುವ ಯೋಚನೆಗಳು, ಭಾವನೆಗಳು ಮತ್ತು ಉದ್ದೇಶಗಳನ್ನು ಬಯಲುಗೊಳಿಸಬಲ್ಲದು. ನೀವು ಯೆಹೋವನ ಅತ್ಯುನ್ನತವಾದ ಮಟ್ಟಗಳಿಗೆ ಹೊಂದಿಕೆಯಲ್ಲಿ ಬರುವಂತೆ ಅದು ನಿಮಗೆ ಸಹಾಯಮಾಡುತ್ತದೆ. ನಿಮ್ಮ ಆತ್ಮಿಕ ಪ್ರಗತಿಗೆ ಅಡ್ಡಿಯನ್ನು ಉಂಟುಮಾಡಬಲ್ಲ ವಿಷಯಗಳನ್ನು ಅದು ಪ್ರಕಟಪಡಿಸಿ, ಗುರುತಿಸುತ್ತದೆ.​—ಯಾಕೋಬ 1:​23-25.

ಉದಾಹರಣೆಗಾಗಿ, ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಅನೈತಿಕ ಹಗಲುಗನಸುಗಳನ್ನು ನೋಡುತ್ತಾ ಇರುವ ಅಭ್ಯಾಸವಿದೆಯೆಂದು ಇಟ್ಟುಕೊಳ್ಳಿ. ತಾನು ಯಾವುದೇ ತಪ್ಪನ್ನು ಮಾಡದೇ ಇರುವುದರಿಂದ, ಹಾಗೆ ಕನಸುಕಾಣುವುದರಲ್ಲಿ ಏನೂ ಹಾನಿಯಿಲ್ಲ ಎಂದು ಅವನು ತರ್ಕಿಸಬಹುದು. ಆದರೆ ಅಧ್ಯಯನ ಮಾಡುತ್ತಿರುವಾಗ ಅವನು ಯಾಕೋಬ 1:14, 15ರಲ್ಲಿರುವ ಮಾತುಗಳನ್ನು ಓದುತ್ತಾನೆ: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” ಹಾಗೆ ಮಾಡುವುದು ತನ್ನ ಪ್ರಗತಿಗೆ ಎಷ್ಟು ಹಾನಿಕರವಾಗಿರಬಲ್ಲದೆಂಬುದು ಈಗ ಅವನಿಗೆ ತಿಳಿದುಬರುತ್ತದೆ! ಆದರೆ ಈ ಅಡ್ಡಿಯನ್ನು ಅವನು ಹೇಗೆ ತೆಗೆದುಹಾಕಬಲ್ಲನು?​—ಮಾರ್ಕ 7:​21-23.

ತಡೆಗಳನ್ನು ಜಯಿಸುವುದು

ಬಹುಶಃ ಒಬ್ಬ ಪ್ರೌಢ ಕ್ರೈಸ್ತನ ಸಹಾಯದೊಂದಿಗೆ ಈ ವಿದ್ಯಾರ್ಥಿಯು, ವಾಚ್‌ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ * ಅನ್ನು ಉಪಯೋಗಿಸುತ್ತಾ ದೇವರ ವಾಕ್ಯದಲ್ಲಿ ಇನ್ನೂ ಸ್ವಲ್ಪ ಸಂಶೋಧನೆಯನ್ನು ಮಾಡಬಹುದು. ಉದಾಹರಣೆಗಾಗಿ, “ಯೋಚನೆಗಳು” ಎಂಬ ಶೀರ್ಷಿಕೆಯ ಕೆಳಗೆ, ಹಾನಿಕರವಾದ ಕನಸುಕಾಣುವಿಕೆಯ ಅಭ್ಯಾಸವನ್ನು ಜಯಿಸುವ ವಿಷಯವನ್ನು ಚರ್ಚಿಸುತ್ತಿರುವ ಅನೇಕ ಪ್ರಕಾಶಿತ ಲೇಖನಗಳ ಕಡೆಗೆ ಇದು ವಾಚಕನನ್ನು ನಿರ್ದೇಶಿಸುತ್ತದೆ. ಈ ಲೇಖನಗಳು ಸಹಾಯಕಾರಿಯಾದ ಬೈಬಲ್‌ ವಚನಗಳನ್ನು ಎತ್ತಿತೋರಿಸುತ್ತವೆ. ಇವುಗಳಲ್ಲಿ ಒಂದು ಫಿಲಿಪ್ಪಿ 4:8 ಆಗಿದೆ. ಅದು ಹೇಳುವುದು: “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.” ಹೌದು, ಅನೈತಿಕ ವಿಚಾರಗಳ ಸ್ಥಾನದಲ್ಲಿ, ಶುದ್ಧವಾದ, ಭಕ್ತಿವೃದ್ಧಿಮಾಡುವ ಯೋಚನೆಗಳು ತುಂಬಿಸಲ್ಪಡಬೇಕು!

ಸಂಶೋಧನೆಯನ್ನು ಮಾಡುತ್ತಿರುವಾಗ ವಿದ್ಯಾರ್ಥಿಗೆ, ತನ್ನ ಸಮಸ್ಯೆಯನ್ನು ಹೆಚ್ಚಿಸುವುದರಿಂದ ದೂರವಿರುವಂತೆ ಸಹಾಯಮಾಡುವ ಇನ್ನಿತರ ಬೈಬಲ್‌ ತತ್ವಗಳೂ ನಿಸ್ಸಂದೇಹವಾಗಿಯೂ ಸಿಗುವವು. ಉದಾಹರಣೆಗಾಗಿ, ಜ್ಞಾನೋಕ್ತಿ 6:27 ಮತ್ತು ಮತ್ತಾಯ 5:​28ನೆಯ ವಚನಗಳು, ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಕಾಮೋದ್ರೇಕಕರ ವಿಷಯಗಳನ್ನು ತುಂಬಿಸುವುದರ ವಿರುದ್ಧ ಎಚ್ಚರಿಸುತ್ತವೆ. “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು,” ಎಂದು ಕೀರ್ತನೆಗಾರನು ಪ್ರಾರ್ಥಿಸಿದನು. (ಕೀರ್ತನೆ 119:37) ಆದರೆ ಬೈಬಲಿನ ಈ ವಚನಗಳನ್ನು ಸುಮ್ಮನೆ ಓದುತ್ತಾ ಹೋಗುವುದು ಸಾಕಾಗುವುದಿಲ್ಲವೆಂಬುದು ನಿಜ. “ಶಿಷ್ಟನ ಹೃದಯ ವಿವೇಚಿಸಿ [“ಮನನಮಾಡಿ,” NW] ಉತ್ತರಕೊಡುತ್ತದೆ,” ಎಂದು ಒಬ್ಬ ಬುದ್ಧಿವಂತ ವ್ಯಕ್ತಿಯು ಹೇಳಿದನು. (ಜ್ಞಾನೋಕ್ತಿ 15:28) ದೇವರು ಏನನ್ನು ಆಜ್ಞಾಪಿಸುತ್ತಾನೆ ಎಂಬುದರ ಕುರಿತು ಮಾತ್ರವಲ್ಲದೆ, ಆತನು ಏಕೆ ಹಾಗೆ ಆಜ್ಞಾಪಿಸುತ್ತಾನೆಂಬುದರ ಕುರಿತು ಯೋಚಿಸುವುದರ ಮೂಲಕ, ವಿದ್ಯಾರ್ಥಿಯು ಯೆಹೋವನ ಮಾರ್ಗಗಳು ಎಷ್ಟು ವಿವೇಕಭರಿತವಾಗಿವೆ ಮತ್ತು ಸಮಂಜಸವಾಗಿವೆ ಎಂಬುದರ ಹೆಚ್ಚು ಗಾಢವಾದ ತಿಳಿವಳಿಕೆಯನ್ನು ಪಡೆದುಕೊಳ್ಳುವನು.

ಕೊನೆಗೆ, ಈ ತಡೆಯನ್ನು ಜಯಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯು, ಯಾವುದೇ ಹಿಂಜರಿಕೆಯಿಲ್ಲದೆ ಯೆಹೋವನ ಸಹಾಯಕ್ಕಾಗಿ ಕೋರಬೇಕು. ಎಷ್ಟೆಂದರೂ ನಾವು ಅಪರಿಪೂರ್ಣರಾಗಿದ್ದೇವೆ, ಧೂಳಿನಿಂದ ಮಾಡಲ್ಪಟ್ಟವರಾಗಿದ್ದೇವೆ ಎಂಬ ನಮ್ಮ ರಚನೆಯು ದೇವರಿಗೆ ಚೆನ್ನಾಗಿ ತಿಳಿದಿದೆ. (ಕೀರ್ತನೆ 103:14) ಸಹಾಯಕ್ಕಾಗಿ ಸತತವಾಗಿ ದೇವರಿಗೆ ಪ್ರಾರ್ಥನೆಗಳನ್ನು ಮಾಡುವುದರೊಂದಿಗೆ, ಅನೈತಿಕ ವಿಷಯಗಳ ಬಗ್ಗೆ ಕನಸುಕಾಣುವುದರಿಂದ ದೂರವಿರಲು ಕಠಿನವಾದ ಪ್ರಯತ್ನಗಳನ್ನು ಮಾಡುವುದರಿಂದ, ಒಂದು ಅಪೇಕ್ಷಣೀಯ ಫಲಿತಾಂಶವು ದೊರಕುವುದು. ಅದೇನೆಂದರೆ ಒಂದು ಶುದ್ಧವಾದ, ಭಾರವಿಲ್ಲದ ಮನಸ್ಸಾಕ್ಷಿಯೇ.​—ಇಬ್ರಿಯ 9:14.

ಬಿಟ್ಟುಕೊಡಬೇಡಿ

ನೀವು ಹೋರಾಡುತ್ತಿರುವ ಬಲಹೀನತೆಯು ಯಾವುದೇ ರೀತಿಯದ್ದಾಗಿರಲಿ, ಕೆಲವೊಮ್ಮೆ ಅದು ಮರುಕಳಿಸುವ ಸಂಭಾವ್ಯತೆಗಳಿವೆ ಎಂಬುದು ನಿಮಗೆ ತಿಳಿದಿರಲಿ. ಅದು ಸಂಭವಿಸುವಾಗ, ನಿಮಗೆ ಜಿಗುಪ್ಸೆ ಮತ್ತು ನಿರಾಶೆಯಾಗುವುದು ಸಹಜವೇ. ಆದರೆ ಗಲಾತ್ಯ 6:9ರ ಮಾತುಗಳನ್ನು ನೆನಪಿನಲ್ಲಿಡಿರಿ: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ [“ಬಿಟ್ಟುಕೊಡದಿರೋಣ,” NW]. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.” ದಾವೀದ ಮತ್ತು ಪೇತ್ರರಂಥ ದೇವರ ನಂಬಿಗಸ್ತ ಸೇವಕರು ಸಹ ಕೆಲವೊಮ್ಮೆ ಅವಮಾನಕರವಾದ ರೀತಿಗಳಲ್ಲಿ ಸೋತುಹೋದರು. ಆದರೆ ಅವರು ಬಿಟ್ಟುಕೊಡಲಿಲ್ಲ. ಅವರು ನಮ್ರಭಾವದಿಂದ ಸಲಹೆಯನ್ನು ಸ್ವೀಕರಿಸಿ, ಬೇಕಾದಂಥ ಬದಲಾವಣೆಗಳನ್ನು ಮಾಡಿ, ಎದ್ದುಕಾಣುವಂಥ ರೀತಿಯಲ್ಲಿ ತಮ್ಮನ್ನು ದೇವರ ಸೇವಕರೋಪಾದಿ ರುಜುಪಡಿಸಿಕೊಂಡರು. (ಜ್ಞಾನೋಕ್ತಿ 24:16) ದಾವೀದನು ತಪ್ಪುಗಳನ್ನು ಮಾಡಿದರೂ, ಯೆಹೋವನು ಅವನನ್ನು ‘ನನಗೆ ಒಪ್ಪುವ ಮನುಷ್ಯನು, ನನ್ನ ಇಷ್ಟವನ್ನೆಲ್ಲಾ ನೆರವೇರಿಸುವವನು’ ಎಂದು ಕರೆದನು. (ಅ. ಕೃತ್ಯಗಳು 13:22) ಅಂತೆಯೇ ಪೇತ್ರನು ಸಹ ತನ್ನ ತಪ್ಪುಗಳಿಂದ ಚೇತರಿಸಿಕೊಂಡು, ಅನಂತರ ಕ್ರೈಸ್ತ ಸಭೆಯ ಒಂದು ಸ್ತಂಭವಾದನು.

ಇಂದು ಸಹ ಅನೇಕರು ಅವರಂತೆಯೇ ತಡೆಗಳನ್ನು ಜಯಿಸುವುದರಲ್ಲಿ ಯಶಸ್ವಿಗಳಾಗಿದ್ದಾರೆ. ಈ ಹಿಂದೆ ತಿಳಿಸಲ್ಪಟ್ಟಿದ್ದ ಯೂಟಾಕಾ ಬೈಬಲ್‌ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡನು. ಅವನು ಹೇಳುವುದು: “ನಾನು ಮುಂದಿಟ್ಟ ಪ್ರತಿಯೊಂದು ಹೆಜ್ಜೆಯಲ್ಲಿ ಯೆಹೋವನ ಬೆಂಬಲ ಮತ್ತು ಆಶೀರ್ವಾದವು, ನಾನು ಜೂಜಾಟದ ಸಮಸ್ಯೆಯನ್ನು ಜಯಿಸುವಂತೆ ನನಗೆ ಸಹಾಯ ಮಾಡಿತು. ನಂಬಿಕೆಯ ಸಹಾಯದಿಂದ ‘ಪರ್ವತಗಳನ್ನು’ ಸಹ ಅಲ್ಲಾಡಿಸಬಹುದು.” ಸಮಯಾನಂತರ ಯೂಟಾಕಾ, ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾದನು.

ಮತ್ತು ತಂಬಾಕಿನ ಚಟವಿದ್ದ ಕೀಕೊ ಏನು ಮಾಡಿದಳು? ಅವಳೊಂದಿಗೆ ಅಭ್ಯಾಸಮಾಡುತ್ತಿದ್ದ ಸಹೋದರಿಯು, ತಂಬಾಕು ವ್ಯಸನದ ಕುರಿತಾದ ವಿಭಿನ್ನ ಅವೇಕ್‌! ಲೇಖನಗಳನ್ನು ಓದುವಂತೆ ಅವಳಿಗೆ ಸಲಹೆಯನ್ನು ಕೊಟ್ಟಳು. ಯೆಹೋವನ ದೃಷ್ಟಿಯಲ್ಲಿ ಶುದ್ಧಳಾಗಿರಲು ಪ್ರತಿ ದಿನ ತನಗೆ ಜ್ಞಾಪನದೋಪಾದಿ, ಅವಳು ತನ್ನ ವಾಹನದಲ್ಲಿ 2 ಕೊರಿಂಥ 7:1ರ ಮಾತುಗಳನ್ನು ಕೂಡ ಅಂಟಿಸಿದಳು. ಆದರೂ, ಅವಳಿಗೆ ಅದನ್ನು ನಿಲ್ಲಿಸಲಾಗಲಿಲ್ಲ. “ನನ್ನ ಮೇಲೆಯೇ ನನಗೆ ಜಿಗುಪ್ಸೆ ಹುಟ್ಟಿಕೊಂಡಿತು. ಆದುದರಿಂದ, ನನಗೆ ನಿಜವಾಗಿ ಏನು ಬೇಕು​—ನಾನು ಯೆಹೋವನನ್ನು ಸೇವಿಸಲು ಬಯಸುತ್ತೇನೊ, ಸೈತಾನನನ್ನೊ ಎಂದು ನನ್ನನ್ನೇ ಕೇಳಿಕೊಳ್ಳತೊಡಗಿದೆ” ಎಂದು ಅವಳು ಹೇಳುತ್ತಾಳೆ. ತಾನು ಯೆಹೋವನನ್ನು ಸೇವಿಸಲು ಬಯಸುತ್ತೇನೆಂದು ಅವಳು ತೀರ್ಮಾನವನ್ನು ಮಾಡಿದಾಗ, ಸಹಾಯಕ್ಕಾಗಿ ಅವಳು ಮನಃಪೂರ್ವಕವಾಗಿ ಪ್ರಾರ್ಥಿಸಿದಳು. “ಆಶ್ಚರ್ಯದ ಸಂಗತಿಯೇನೆಂದರೆ, ನಾನು ಹೆಚ್ಚು ಕಷ್ಟವಿಲ್ಲದೆ ಧೂಮಪಾನಮಾಡುವುದನ್ನು ನಿಲ್ಲಿಸಶಕ್ತಳಾದೆ. ನಾನು ಇದನ್ನು ಈ ಹಿಂದೆಯೇ ಏಕೆ ಮಾಡಲಿಲ್ಲವೆಂದು ವಿಷಾದಿಸುತ್ತೇನೆ” ಎಂದು ಅವಳು ಜ್ಞಾಪಿಸಿಕೊಳ್ಳುತ್ತಾಳೆ.

ನಿಮ್ಮ ಪ್ರಗತಿಗೆ ಅಡ್ಡಬರುವ ತಡೆಗಳನ್ನು ಜಯಿಸುವುದರಲ್ಲಿ ನೀವು ಸಹ ಯಶಸ್ವಿಯಾಗಬಲ್ಲಿರಿ. ನಿಮ್ಮ ಯೋಚನೆಗಳನ್ನು, ಆಶೆಗಳನ್ನು, ಮಾತುಗಳನ್ನು ಮತ್ತು ಕ್ರಿಯೆಗಳನ್ನು ನೀವು ಎಷ್ಟರ ಮಟ್ಟಿಗೆ ಬೈಬಲಿನ ಮಟ್ಟಗಳಿಗೆ ಹೊಂದಿಕೆಯಲ್ಲಿ ತರುತ್ತೀರೊ, ಅಷ್ಟೇ ಹೆಚ್ಚು ಸ್ವಗೌರವ ಮತ್ತು ಭರವಸೆಯ ಪ್ರಜ್ಞೆಯನ್ನು ನೀವು ಗಳಿಸುವಿರಿ. ನಿಮ್ಮ ಆತ್ಮಿಕ ಸಹೋದರ ಸಹೋದರಿಯರು ಹಾಗೂ ಕುಟುಂಬದ ಸದಸ್ಯರು ನಿಮ್ಮೊಂದಿಗೆ ಸಹವಾಸಮಾಡುವಾಗ ಚೈತನ್ಯವನ್ನು ಪಡೆಯುವರು ಮತ್ತು ಉತ್ತೇಜಿಸಲ್ಪಡುವರು. ಎಲ್ಲಕ್ಕಿಂತಲೂ ಹೆಚ್ಚಾಗಿ, ಯೆಹೋವ ದೇವರೊಂದಿಗಿನ ನಿಮ್ಮ ಸಂಬಂಧವನ್ನು ನೀವು ಹೆಚ್ಚು ಗಾಢಗೊಳಿಸುವಿರಿ. ಸೈತಾನನ ನಿಯಂತ್ರಣದಿಂದ ತಪ್ಪಿಸಿಕೊಂಡು ಓಡಿಹೋಗುತ್ತಿರುವಾಗ, ತಾನು ‘ತನ್ನ ಜನರ ದಾರಿಯೊಳಗಿಂದ ಆಟಂಕವನ್ನು ಎತ್ತಿಹಾಕುವನು’ ಎಂದು ಆತನು ವಾಗ್ದಾನಿಸಿದ್ದನು. (ಯೆಶಾಯ 57:14) ಮತ್ತು ನಿಮ್ಮ ಆತ್ಮಿಕ ಪ್ರಗತಿಗೆ ಅಡ್ಡಬರುವ ಯಾವುದೇ ತಡೆಗಳನ್ನು ತೆಗೆದುಹಾಕಿ ಮುಂದೆ ಹೋಗಲು ನೀವು ಪ್ರಯತ್ನವನ್ನು ಮಾಡುತ್ತಾ ಇರುವಲ್ಲಿ, ಯೆಹೋವನು ನಿಮ್ಮನ್ನು ಸಮೃದ್ಧವಾಗಿ ಆಶೀರ್ವದಿಸುವನು ಎಂಬ ಆಶ್ವಾಸನೆಯು ನಿಮಗಿರಬಲ್ಲದು.

[ಪಾದಟಿಪ್ಪಣಿ]

^ ಪ್ಯಾರ. 12 ಯೆಹೋವನ ಸಾಕ್ಷಿಗಳಿಂದ ಅನೇಕ ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿದೆ.

[ಪುಟ 28ರಲ್ಲಿರುವ ಚಿತ್ರ]

ನಂಬಿಕೆಯ ಸಹಾಯದಿಂದ, ಪರ್ವತಸದೃಶವಾದ ತಡೆಗಳನ್ನು ಜಯಿಸಸಾಧ್ಯವಿದೆ ಎಂದು ಯೇಸು ವಾಗ್ದಾನಿಸಿದನು

[ಪುಟ 30ರಲ್ಲಿರುವ ಚಿತ್ರ]

ಬೈಬಲನ್ನು ಓದುವುದು, ಆತ್ಮಿಕ ದೋಷಗಳನ್ನು ಜಯಿಸುವ ನಮ್ಮ ಪ್ರಯತ್ನವನ್ನು ಬಲಪಡಿಸುತ್ತದೆ