ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಬ್ರಹಾಮ—ನಂಬಿಕೆಯ ಒಂದು ಮಾದರಿ

ಅಬ್ರಹಾಮ—ನಂಬಿಕೆಯ ಒಂದು ಮಾದರಿ

ಅಬ್ರಹಾಮ​—ನಂಬಿಕೆಯ ಒಂದು ಮಾದರಿ

‘[ಅಬ್ರಹಾಮನು] ನಂಬುವವರೆಲ್ಲರಿಗೂ ಮೂಲತಂದೆಯಾಗಿದ್ದನು.’​—ರೋಮಾಪುರ 4:11.

1, 2. (ಎ) ಇಂದು ಕ್ರೈಸ್ತರ ನಡುವೆ ಅಬ್ರಹಾಮನನ್ನು ಹೇಗೆ ಜ್ಞಾಪಿಸಿಕೊಳ್ಳಲಾಗುತ್ತದೆ? (ಬಿ) ಅಬ್ರಹಾಮನನ್ನು “ನಂಬುವವರೆಲ್ಲರಿಗೂ ಮೂಲತಂದೆ” ಎಂದು ಏಕೆ ಕರೆಯಲಾಗಿದೆ?

ಅವನು ಒಂದು ದೊಡ್ಡ ಜನಾಂಗದ ಮೂಲಪಿತನಾಗಿದ್ದನು, ಪ್ರವಾದಿಯಾಗಿದ್ದನು, ವ್ಯಾಪಾರಿಯಾಗಿದ್ದನು, ಮುಖಂಡನಾಗಿದ್ದನು. ಆದರೂ, ಆ ವ್ಯಕ್ತಿಯನ್ನು ಯೆಹೋವ ದೇವರು ಒಬ್ಬ ಸ್ನೇಹಿತನಾಗಿ ಪರಿಗಣಿಸುವಂತೆ ಪ್ರಚೋದಿಸಿದಂತಹ ಒಂದು ಗುಣಕ್ಕಾಗಿ ಅವನನ್ನು ಇಂದು ಕ್ರೈಸ್ತರು ತುಂಬ ಜ್ಞಾಪಿಸಿಕೊಳ್ಳುತ್ತಾರೆ. ಅವನ ಅಚಲ ನಂಬಿಕೆಯೇ ಆ ಗುಣವಾಗಿತ್ತು. (ಯೆಶಾಯ 41:8; ಯಾಕೋಬ 2:23) ಅಬ್ರಹಾಮನೆಂಬುದು ಅವನ ಹೆಸರಾಗಿದ್ದು, ಬೈಬಲ್‌ ಅವನನ್ನು “ನಂಬುವವರೆಲ್ಲರಿಗೂ ಮೂಲತಂದೆ” ಎಂದು ಕರೆಯುತ್ತದೆ.​—ರೋಮಾಪುರ 4:11.

2 ಅಬ್ರಹಾಮನಿಗಿಂತ ಮುಂಚೆ ಇದ್ದ ಹೇಬೆಲ, ಹನೋಕ, ಮತ್ತು ನೋಹರು ಸಹ ನಂಬಿಕೆಯನ್ನು ತೋರಿಸಲಿಲ್ಲವೋ? ಖಂಡಿತವಾಗಿಯೂ ತೋರಿಸಿದರು, ಆದರೆ ಭೂಮಿಯ ಎಲ್ಲ ಜನಾಂಗಗಳನ್ನು ಆಶೀರ್ವದಿಸುವ ಒಡಂಬಡಿಕೆಯನ್ನು ಅಬ್ರಹಾಮನೊಂದಿಗೆ ಮಾಡಲಾಗಿತ್ತು. (ಆದಿಕಾಂಡ 22:18) ಹೀಗೆ ಅವನು ವಾಗ್ದತ್ತ ಸಂತತಿಯಲ್ಲಿ ನಂಬಿಕೆಯಿಡುವವರೆಲ್ಲರಿಗೂ ಸಾಂಕೇತಿಕ ಮೂಲತಂದೆಯಾದನು. (ಗಲಾತ್ಯ 3:​8, 9) ಒಂದರ್ಥದಲ್ಲಿ ಅಬ್ರಹಾಮನನ್ನು ನಮ್ಮ ತಂದೆಯಾಗಿ ಪರಿಗಣಿಸಸಾಧ್ಯವಿದೆ, ಏಕೆಂದರೆ ಅವನ ನಂಬಿಕೆಯು ನಮಗೆ ಅನುಕರಿಸತಕ್ಕ ಮಾದರಿಯಾಗಿ ಕಾರ್ಯನಡಿಸುತ್ತದೆ. ಅವನ ಇಡೀ ಜೀವಿತವನ್ನು ನಂಬಿಕೆಯ ಒಂದು ಅಭಿವ್ಯಕ್ತಿಯಾಗಿ ಪರಿಗಣಿಸಬಹುದಾಗಿದೆ. ಏಕೆಂದರೆ ಅವನ ಜೀವನವು ಅನೇಕಾನೇಕ ಪರೀಕ್ಷೆಗಳಿಂದ ಕೂಡಿದ್ದಾಗಿತ್ತು. ವಾಸ್ತವದಲ್ಲಿ, ಯಾವುದನ್ನು ನಂಬಿಕೆಯ ಪರಮ ಪರೀಕ್ಷೆ ಎಂದು ಕರೆಯಬಹುದಾಗಿದೆಯೋ ಆ ಪರೀಕ್ಷೆಯನ್ನು, ಅಂದರೆ ತನ್ನ ಮಗನಾದ ಇಸಾಕನನ್ನು ಯಜ್ಞವಾಗಿ ಅರ್ಪಿಸುವ ಆಜ್ಞೆಗೆ ವಿಧೇಯನಾಗುವ ಪರೀಕ್ಷೆಯನ್ನು ಅಬ್ರಹಾಮನು ಎದುರಿಸುವ ಬಹಳ ಸಮಯಕ್ಕೆ ಮುಂಚೆಯೇ, ಚಿಕ್ಕಪುಟ್ಟ ಪರೀಕ್ಷೆಗಳಲ್ಲಿ ಅವನು ತನ್ನ ನಂಬಿಕೆಯನ್ನು ರುಜುಪಡಿಸಿದ್ದನು. (ಆದಿಕಾಂಡ 22:​1, 2) ಆ ಆರಂಭದ ನಂಬಿಕೆಯ ಪರೀಕ್ಷೆಗಳಲ್ಲಿ ಕೆಲವನ್ನು ನಾವೀಗ ಪರಿಶೀಲಿಸೋಣ ಮತ್ತು ಇಂದು ನಮಗೆ ಅವು ಯಾವ ಪಾಠಗಳನ್ನು ಕಲಿಸಬಲ್ಲವು ಎಂಬುದನ್ನು ನೋಡೋಣ.

ಊರ್‌ ಪಟ್ಟಣವನ್ನು ಬಿಟ್ಟುಹೋಗುವಂತೆ ಕೊಡಲ್ಪಟ್ಟ ಆಜ್ಞೆ

3. ಅಬ್ರಾಮನ ಹಿನ್ನೆಲೆಯ ಕುರಿತು ಬೈಬಲ್‌ ನಮಗೆ ಏನು ಹೇಳುತ್ತದೆ?

3ಆದಿಕಾಂಡ 11:26ರಲ್ಲಿ ಬೈಬಲ್‌ ಮೊದಲಾಗಿ ಅಬ್ರಾಮ (ಸಮಯಾನಂತರ ಅಬ್ರಹಾಮನೆಂದು ಪ್ರಸಿದ್ಧನಾದನು)ನನ್ನು ನಮಗೆ ಪರಿಚಯಿಸುತ್ತದೆ. ಆ ವಚನವು ಹೇಳುವುದು: “ತೆರಹನು ಎಪ್ಪತ್ತು ವರುಷದವನಾಗಿ ಅಬ್ರಾಮ, ನಾಹೋರ, ಹಾರಾನ ಎಂಬ ಮಕ್ಕಳನ್ನು ಪಡೆದನು.” ಅಬ್ರಾಮನು ದೇವಭಯವುಳ್ಳವನಾಗಿದ್ದ ಶೇಮನ ವಂಶದವನಾಗಿದ್ದನು. (ಆದಿಕಾಂಡ 11:​10-24) ಆದಿಕಾಂಡ 11:31ಕ್ಕನುಸಾರ, ಸಮೃದ್ಧವಾಗಿದ್ದ “ಕಲ್ದೀಯರ ಊರ್‌ ಎಂಬ ಪಟ್ಟಣ”ದಲ್ಲಿ ಅಬ್ರಾಮನು ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಒಂದು ಕಾಲದಲ್ಲಿ ಈ ಪಟ್ಟಣವು ಯೂಫ್ರೇಟೀಸ್‌ ನದಿಯ ಪೂರ್ವಭಾಗದಲ್ಲಿತ್ತು. * ಹೀಗೆ, ಅವನು ಗುಡಾರಗಳಲ್ಲಿ ವಾಸಿಸುವ ಅಲೆಮಾರಿಯಾಗಿ ಬೆಳೆಯಲಿಲ್ಲ, ಅದಕ್ಕೆ ಬದಲಾಗಿ ತುಂಬ ಐಶ್ವರ್ಯ ಮತ್ತು ಸುಖಸೌಕರ್ಯಗಳನ್ನು ಹೊಂದಿದ್ದಂತಹ ಒಂದು ಸ್ಥಳದಲ್ಲಿ ಒಬ್ಬ ನಗರವಾಸಿಯೋಪಾದಿ ಬೆಳೆದಿದ್ದನು. ಊರ್‌ನ ಮಾರುಕಟ್ಟೆಗಳಲ್ಲಿ ಹೊರದೇಶಗಳಿಂದ ಆಮದುಮಾಡಲ್ಪಟ್ಟ ಸರಕುಗಳನ್ನು ಖರೀದಿಸಸಾಧ್ಯವಿತ್ತು. ಮನೆಯೊಳಗೇ ಕೊಳಾಯಿ ವ್ಯವಸ್ಥೆಯಿರುವ ಸುಣ್ಣಬಳಿದ 14 ಕೋಣೆಗಳುಳ್ಳ ವಿಶಾಲವಾದ ಮನೆಗಳು, ಊರ್‌ನ ಬೀದಿಗಳುದ್ದಕ್ಕೂ ಇದ್ದವು.

4. (ಎ) ಸತ್ಯ ದೇವರ ಆರಾಧಕರಿಗೆ ಊರ್‌ ಪಟ್ಟಣವು ಯಾವ ಪಂಥಾಹ್ವಾನಗಳನ್ನು ಒಡ್ಡಿತು? (ಬಿ) ಅಬ್ರಾಮನು ಯೆಹೋವನಲ್ಲಿ ನಂಬಿಕೆಯನ್ನು ಇಡುವಂತಾದದ್ದು ಹೇಗೆ?

4 ಇಷ್ಟೆಲ್ಲಾ ಪ್ರಾಪಂಚಿಕ ಪ್ರಯೋಜನಗಳಿದ್ದರೂ, ಸತ್ಯ ದೇವರ ಸೇವೆಮಾಡಲು ಬಯಸುವ ಯಾರಿಗಾದರೂ ಊರ್‌ ಪಟ್ಟಣವು ಗಂಭೀರವಾದ ಪಂಥಾಹ್ವಾನವನ್ನು ಒಡ್ಡುವಂತಿತ್ತು. ಅದು ವಿಗ್ರಹಾರಾಧನೆ ಮತ್ತು ಮೂಢನಂಬಿಕೆಯಲ್ಲಿ ಆಳವಾಗಿ ಒಳಗೂಡಿದ್ದಂತಹ ಒಂದು ಪಟ್ಟಣವಾಗಿತ್ತು. ಇದಲ್ಲದೆ, ಆ ಪಟ್ಟಣದಲ್ಲಿ ಎದ್ದು ಕಾಣುವಂತಹ ಕಟ್ಟಡವು, ನನ್ನಾ ಎಂಬ ಚಂದ್ರದೇವನ ಗೌರವಾರ್ಥವಾಗಿ ಕಟ್ಟಿಸಲ್ಪಟ್ಟಿರುವ ಬಹಳ ಎತ್ತರವಾದ ದೇವಾಲಯ ಗೋಪುರವೇ ಆಗಿತ್ತು. ತೀರ ಕೀಳ್ಮಟ್ಟದ ಈ ಆರಾಧನೆಯಲ್ಲಿ ಒಳಗೂಡುವಂತೆ ಅಬ್ರಾಮನ ಮೇಲೆ ಅತ್ಯಧಿಕ ಒತ್ತಡವು ತರಲ್ಪಟ್ಟಿದ್ದಿರಬಹುದು ಎಂಬುದರಲ್ಲಿ ಸಂದೇಹವಿಲ್ಲ. ಬಹುಶಃ ಅವನ ಕೆಲವು ಸಂಬಂಧಿಕರು ಸಹ ಅವನ ಮೇಲೆ ಒತ್ತಡವನ್ನು ಹೇರಿದ್ದಿರಬಹುದು. ಕೆಲವು ಯೆಹೂದಿ ಸಂಪ್ರದಾಯಗಳಿಗನುಸಾರ, ಅಬ್ರಾಮನ ತಂದೆಯಾಗಿದ್ದ ತೆರಹನು ತಾನೇ ವಿಗ್ರಹಗಳನ್ನು ಮಾಡುವವನಾಗಿದ್ದನು. (ಯೆಹೋಶುವ 24:​2, 14, 15) ವಿಷಯವು ಏನೇ ಇರಲಿ, ಅಬ್ರಾಮನು ಮಾತ್ರ ನೀಚವಾದ ಸುಳ್ಳಾರಾಧನೆಯನ್ನು ಅನುಸರಿಸುವವನಾಗಿರಲಿಲ್ಲ. ಆ ಸಮಯದಲ್ಲಿ ಅವನ ವೃದ್ಧ ಪೂರ್ವಜನಾಗಿದ್ದ ಶೇಮನು ಇನ್ನೂ ಬದುಕಿದ್ದನು ಮತ್ತು ಸತ್ಯ ದೇವರ ಕುರಿತಾದ ಜ್ಞಾನವನ್ನು ಅಬ್ರಾಮನಿಗೆ ನೀಡಿದ್ದನೆಂಬುದರಲ್ಲಿ ಸಂದೇಹವೇ ಇಲ್ಲ. ಇದರ ಫಲಿತಾಂಶವಾಗಿ, ಅಬ್ರಾಮನು ನನ್ನಾ ದೇವನಲ್ಲಿ ಅಲ್ಲ, ಬದಲಾಗಿ ಯೆಹೋವನಲ್ಲಿ ನಂಬಿಕೆಯಿಟ್ಟನು!​—ಗಲಾತ್ಯ 3:6.

ನಂಬಿಕೆಯ ಒಂದು ಪರೀಕ್ಷೆ

5. ಅಬ್ರಾಮನು ಇನ್ನೂ ಊರ್‌ ಪಟ್ಟಣದಲ್ಲಿದ್ದಾಗಲೇ ದೇವರು ಅವನಿಗೆ ಯಾವ ಆಜ್ಞೆಯನ್ನು ಹಾಗೂ ವಾಗ್ದಾನವನ್ನು ನೀಡಿದನು?

5 ಅಬ್ರಾಮನ ನಂಬಿಕೆಯು ಪರೀಕ್ಷೆಗೆ ಒಳಗಾಗಲಿಕ್ಕಿತ್ತು. ದೇವರು ಅವನಿಗೆ ಕಾಣಿಸಿಕೊಂಡು ಆಜ್ಞಾಪಿಸಿದ್ದು: “ನೀನು ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು.”​—ಆದಿಕಾಂಡ 12:​1-3; ಅ. ಕೃತ್ಯಗಳು 7:​2, 3.

6. ಅಬ್ರಾಮನು ಊರ್‌ ಪಟ್ಟಣವನ್ನು ಬಿಟ್ಟುಹೋಗಲು ಅವನಿಗೆ ನಿಜವಾದ ನಂಬಿಕೆಯ ಅಗತ್ಯವಿತ್ತೇಕೆ?

6 ಅಬ್ರಾಮನು ಮುದುಕನಾಗಿದ್ದನು ಮತ್ತು ಅವನಿಗೆ ಸಂತಾನವಿರಲಿಲ್ಲ. ಹೀಗಿರುವಾಗ, ಅವನನ್ನು ಹೇಗೆ ಒಂದು “ದೊಡ್ಡ ಜನಾಂಗವಾಗುವಂತೆ” ಮಾಡಸಾಧ್ಯವಿತ್ತು? ಇದಲ್ಲದೆ, ಅವನು ಎಲ್ಲಿಗೆ ಹೋಗಬೇಕೆಂದು ದೇವರು ಆಜ್ಞಾಪಿಸಿದನೋ ಆ ದೇಶವು ನಿರ್ದಿಷ್ಟವಾಗಿ ಎಲ್ಲಿತ್ತು? ಆ ಸಮಯದಲ್ಲಿ ದೇವರು ಅವನಿಗೆ ಇದರ ಬಗ್ಗೆ ಹೇಳಲಿಲ್ಲ. ಆದುದರಿಂದ, ಸಮೃದ್ಧವಾಗಿದ್ದ ಊರ್‌ ಪಟ್ಟಣವನ್ನೂ ಅದರ ಎಲ್ಲ ಸುಖಸೌಕರ್ಯಗಳನ್ನೂ ತೊರೆದು ಹೋಗಲು ಅಬ್ರಾಮನಿಗೆ ನಿಜವಾದ ನಂಬಿಕೆಯ ಆವಶ್ಯಕತೆಯಿತ್ತು. ಪುರಾತನ ಸಮಯದ ಕುರಿತು ಕುಟುಂಬ, ಪ್ರೀತಿ ಮತ್ತು ಬೈಬಲ್‌ (ಇಂಗ್ಲಿಷ್‌) ಎಂಬ ಪುಸ್ತಕವು ಗಮನಿಸಿದ್ದು: “ಒಂದು ಗಂಭೀರವಾದ ಅಪರಾಧದ ದೋಷಾರೋಪಿಯಾಗುವ ಒಬ್ಬ ಕುಟುಂಬ ಸದಸ್ಯನಿಗೆ ವಿಧಿಸಸಾಧ್ಯವಿರುವ ಅತ್ಯಂತ ಘೋರ ಶಿಕ್ಷೆಗಳಲ್ಲಿ ಒಂದು, ಅವನನ್ನು ಬಹಿಷ್ಕರಿಸುವುದು, ಕುಟುಂಬದಲ್ಲಿನ ‘ಸದಸ್ಯತ್ವವು’ ಅವನಿಗೆ ಇಲ್ಲದಂತೆ ಮಾಡುವುದೇ ಆಗಿತ್ತು. . . . ಆದುದರಿಂದಲೇ, ದೈವಿಕ ಆಜ್ಞೆಯನ್ನು ಪಾಲಿಸುತ್ತಾ ಅಬ್ರಹಾಮನು ತನ್ನ ಸ್ವದೇಶವನ್ನು ಮಾತ್ರವಲ್ಲ ತನ್ನ ಬಂಧುಬಳಗವನ್ನೂ ಬಿಟ್ಟುಹೋದಾಗ, ಅದು ಸಂಪೂರ್ಣವಾದ ವಿಧೇಯತೆ ಮತ್ತು ದೇವರಲ್ಲಿ ಭರವಸೆಯ ಅಸಾಧಾರಣವಾದ ತೋರ್ಪಡಿಸುವಿಕೆಯಾಗಿತ್ತು.”

7. ಅಬ್ರಾಮನು ಎದುರಿಸಿದಂತಹ ಪರೀಕ್ಷೆಗಳನ್ನೇ ಇಂದು ಕ್ರೈಸ್ತರು ಸಹ ಹೇಗೆ ಎದುರಿಸಬಹುದು?

7 ಇಂದು ಕ್ರೈಸ್ತರು ತದ್ರೀತಿಯ ಪರೀಕ್ಷೆಗಳನ್ನು ಎದುರಿಸಬಹುದು. ಅಬ್ರಾಮನಿಗಾದಂತೆ, ದೇವಪ್ರಭುತ್ವ ವಿಷಯಗಳಿಗಿಂತಲೂ ಹೆಚ್ಚಾಗಿ ಪ್ರಾಪಂಚಿಕ ಅಭಿರುಚಿಗಳಿಗೆ ಪ್ರಾಮುಖ್ಯತೆ ನೀಡುವಂತಹ ಒತ್ತಡವು ನಮ್ಮ ಮೇಲೂ ಬರಬಹುದು. (1 ಯೋಹಾನ 2:16) ನಮ್ಮನ್ನು ಅಹಿತಕರವಾದ ಸಹವಾಸಕ್ಕೆ ಸೆಳೆಯಲು ಪ್ರಯತ್ನಿಸಬಹುದಾದ ಬಹಿಷ್ಕೃತ ಸಂಬಂಧಿಕರನ್ನೂ ಒಳಗೊಂಡು, ಅವಿಶ್ವಾಸಿಗಳಾದ ಕುಟುಂಬ ಸದಸ್ಯರಿಂದಲೂ ನಾವು ವಿರೋಧವನ್ನು ಎದುರಿಸುತ್ತಿರಬಹುದು. (ಮತ್ತಾಯ 10:​34-36; 1 ಕೊರಿಂಥ 5:​11-13; 15:33) ಹೀಗೆ ಅಬ್ರಾಮನು ನಮಗಾಗಿ ಅತ್ಯುತ್ತಮ ಮಾದರಿಯನ್ನಿಟ್ಟನು. ಅವನು ಎಲ್ಲಕ್ಕಿಂತಲೂ, ಅಂದರೆ ಕುಟುಂಬ ಸಂಬಂಧಗಳಿಗಿಂತಲೂ ಹೆಚ್ಚಾಗಿ ಯೆಹೋವನ ಸ್ನೇಹಕ್ಕೆ ಪ್ರಥಮ ಸ್ಥಾನವನ್ನು ಕೊಟ್ಟನು. ದೇವರ ವಾಗ್ದಾನಗಳು ಹೇಗೆ, ಯಾವಾಗ ಅಥವಾ ಎಲ್ಲಿ ಪೂರೈಸಲ್ಪಡುವವು ಎಂಬುದು ಅವನಿಗೆ ನಿಖರವಾಗಿ ತಿಳಿದಿರಲಿಲ್ಲ. ಆದರೂ, ಆ ವಾಗ್ದಾನಗಳಲ್ಲಿನ ಭರವಸೆಯ ಮೇಲೆ ತನ್ನ ಜೀವಿತವನ್ನು ಆಧಾರಿಸಲು ಅವನು ಮನಃಪೂರ್ವಕವಾಗಿ ಸಿದ್ಧನಿದ್ದನು. ಇಂದು ನಮ್ಮ ಸ್ವಂತ ಜೀವಿತಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡಲು ಇದು ಎಷ್ಟು ಅತ್ಯುತ್ತಮ ಉತ್ತೇಜನವಾಗಿದೆ!​—ಮತ್ತಾಯ 6:33.

8. ಅಬ್ರಾಮನ ನಂಬಿಕೆಯು ಅವನ ಸ್ವಂತ ಕುಟುಂಬ ಸದಸ್ಯರ ಮೇಲೆ ಯಾವ ಪ್ರಭಾವವನ್ನು ಬೀರಿತು, ಮತ್ತು ಇದರಿಂದ ಕ್ರೈಸ್ತರು ಯಾವ ಪಾಠವನ್ನು ಕಲಿಯಬಹುದು?

8 ಅಬ್ರಾಮನ ಸ್ವಂತ ಕುಟುಂಬ ಸದಸ್ಯರ ಕುರಿತಾಗಿ ಏನು? ಅಬ್ರಾಮನ ನಂಬಿಕೆ ಮತ್ತು ನಿಶ್ಚಿತಾಭಿಪ್ರಾಯವು ಅವರ ಮೇಲೆ ಗಂಭೀರವಾದ ಪ್ರಭಾವವನ್ನು ಬೀರಿದ್ದಿರಬಹುದು. ಏಕೆಂದರೆ ಅವನ ಪತ್ನಿಯಾದ ಸಾರಯಳೂ ತಬ್ಬಲಿಯಾಗಿದ್ದ ಅವನ ಸೋದರಳಿಯ ಲೋಟನೂ ದೇವರ ಕರೆಗೆ ಓಗೊಟ್ಟು ಊರ್‌ ಪಟ್ಟಣವನ್ನು ಬಿಟ್ಟುಹೋಗುವಂತೆ ಪ್ರಚೋದಿಸಲ್ಪಟ್ಟರು. ಸಮಯಾನಂತರ ಅಬ್ರಾಮನ ಸಹೋದರನಾದ ನಾಹೋರ ಮತ್ತು ಅವನ ಸಂತತಿಯವರಲ್ಲಿ ಕೆಲವರು ಊರ್‌ ಪಟ್ಟಣವನ್ನು ಬಿಟ್ಟು, ಖಾರಾನ್‌ ಪಟ್ಟಣದಲ್ಲಿ ನಿವಾಸಿಸತೊಡಗಿದರು ಮತ್ತು ಅಲ್ಲಿ ಯೆಹೋವನನ್ನು ಆರಾಧಿಸಿದರು. (ಆದಿಕಾಂಡ 24:​1-4, 10, 31; 27:43; 29:​4, 5) ಅಷ್ಟೇಕೆ, ಅಬ್ರಾಮನ ತಂದೆಯಾದ ತೆರಹನು ಸಹ ತನ್ನ ಮಗನೊಂದಿಗೆ ಈ ಪಟ್ಟಣವನ್ನು ಬಿಟ್ಟುಹೋಗಲು ಒಪ್ಪಿಕೊಂಡನು! ಆದುದರಿಂದ ಕಾನಾನ್‌ ದೇಶದ ಕಡೆಗೆ ಸ್ಥಳಾಂತರಿಸುವಾಗ ತೆರಹನು ತಲೆತನವನ್ನು ವಹಿಸಿಕೊಂಡನೆಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 11:31) ಒಂದುವೇಳೆ ನಾವು ನಮ್ಮ ಸಂಬಂಧಿಕರಿಗೆ ಚಾತುರ್ಯದಿಂದ ಸಾಕ್ಷಿ ನೀಡುವಲ್ಲಿ, ನಾವು ಸಹ ಸ್ವಲ್ಪ ಮಟ್ಟಿಗಿನ ಯಶಸ್ಸಿನಲ್ಲಿ ಆನಂದಿಸಬಹುದಲ್ಲವೋ?

9. ತನ್ನ ಪ್ರಯಾಣಕ್ಕಾಗಿ ಅಬ್ರಾಮನು ಯಾವ ಸಿದ್ಧತೆಗಳನ್ನು ಮಾಡಬೇಕಾಗಿತ್ತು, ಮತ್ತು ಅದರಲ್ಲಿ ಏಕೆ ತ್ಯಾಗವು ಒಳಗೊಂಡಿದ್ದಿರಬಹುದು?

9 ತನ್ನ ಪ್ರಯಾಣವನ್ನು ಆರಂಭಿಸುವುದಕ್ಕೆ ಮುಂಚೆ ಅಬ್ರಾಮನು ಬಹಳಷ್ಟು ಕೆಲಸಗಳನ್ನು ಮಾಡಲಿಕ್ಕಿತ್ತು. ಅವನು ತನ್ನ ಆಸ್ತಿಯನ್ನೂ ಸರಕುಗಳನ್ನೂ ಮಾರಬೇಕಾಗಿತ್ತು ಮತ್ತು ಗುಡಾರಗಳು, ಒಂಟೆಗಳು, ಆಹಾರ ಮತ್ತು ಅಗತ್ಯವಿರುವ ಸಲಕರಣೆಗಳನ್ನು ಖರೀದಿಸಬೇಕಾಗಿತ್ತು. ಇಂತಹ ಆತುರದಿಂದ ಕೂಡಿದ ಸಿದ್ಧತೆಗಳನ್ನು ಮಾಡುವುದರಲ್ಲಿ ಅಬ್ರಾಮನು ಆರ್ಥಿಕವಾಗಿ ನಷ್ಟವನ್ನು ಅನುಭವಿಸಿದ್ದಿರಬಹುದಾದರೂ, ಯೆಹೋವನಿಗೆ ವಿಧೇಯನಾಗಲು ಅವನು ಸಂತೋಷಪಟ್ಟನು. ಎಲ್ಲ ಸಿದ್ಧತೆಗಳು ಮುಗಿದು, ಪ್ರಯಾಣಕ್ಕಾಗಿ ಸಿದ್ಧವಾದ ಅಬ್ರಾಮನ ಪ್ರವಾಸಿ ತಂಡಗಳು (ಕ್ಯಾರವ್ಯಾನ್‌) ಊರ್‌ ಪಟ್ಟಣದ ಗೋಡೆಗಳ ಹೊರಗೆ ನಿಂತಾಗ, ಅದೆಷ್ಟು ಸ್ಮರಣೀಯ ದಿನವಾಗಿದ್ದಿರಬೇಕು! ಯೂಫ್ರೇಟೀಸ್‌ ನದಿಯ ತಿರುವಿನಲ್ಲಿ ಪ್ರವಾಸಿ ತಂಡಗಳು ವಾಯವ್ಯ ದಿಕ್ಕಿನ ಕಡೆಗೆ ಪ್ರಯಾಣ ಬೆಳೆಸಿದವು. ಅನೇಕ ವಾರಗಳ ವರೆಗೆ ಪ್ರಯಾಣ ಮಾಡಿ, ಸುಮಾರು 1,000 ಕಿಲೊಮೀಟರ್‌ಗಳಷ್ಟು ದೂರ ಬಂದಾಗ, ಉತ್ತರ ಮೆಸಪೊಟೇಮಿಯದ ಖಾರಾನ್‌ ಎಂದು ಕರೆಯಲ್ಪಡುವ ಪಟ್ಟಣಕ್ಕೆ ಅವು ಆಗಮಿಸಿದವು. ಖಾರಾನ್‌ ಪಟ್ಟಣವು ಪ್ರವಾಸಿ ತಂಡಗಳಿಗೆ ಪ್ರಮುಖ ತಂಗುದಾಣವಾಗಿತ್ತು.

10, 11. (ಎ) ಸ್ವಲ್ಪ ಕಾಲದ ವರೆಗೆ ಅಬ್ರಾಮನು ಖಾರಾನಿನಲ್ಲೇ ಏಕೆ ನೆಲೆಸಿದ್ದಿರಬಹುದು? (ಬಿ) ವೃದ್ಧ ಹೆತ್ತವರನ್ನು ನೋಡಿಕೊಳ್ಳುವಂತಹ ಕ್ರೈಸ್ತರಿಗೆ ಯಾವ ಉತ್ತೇಜನವನ್ನು ಕೊಡಸಾಧ್ಯವಿದೆ?

10 ಅಬ್ರಾಮನು ಖಾರಾನಿನಲ್ಲೇ ನೆಲೆಸತೊಡಗಿದನು. ತನ್ನ ವೃದ್ಧ ತಂದೆಯಾದ ತೆರಹನಿಗೆ ಪರಿಗಣನೆ ತೋರಿಸಲಿಕ್ಕಾಗಿ ಅವನು ಹೀಗೆ ಮಾಡಿದ್ದಿರಬಹುದು. (ಯಾಜಕಕಾಂಡ 19:32) ತದ್ರೀತಿಯಲ್ಲಿ ಇಂದು ಅನೇಕ ಕ್ರೈಸ್ತರಿಗೆ ತಮ್ಮ ವೃದ್ಧ ಅಥವಾ ಅಸ್ವಸ್ಥ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿಯಿದೆ. ಈ ಜವಾಬ್ದಾರಿಯನ್ನು ನಿರ್ವಹಿಸಲಿಕ್ಕಾಗಿ ಕೆಲವರು ಹೊಂದಾಣಿಕೆಗಳನ್ನು ಸಹ ಮಾಡಿಕೊಳ್ಳಬೇಕಾಗುತ್ತದೆ. ಇದು ಅಗತ್ಯವಾಗಿರುವಾಗ, ಇಂಥವರು ಪ್ರೀತಿಯಿಂದ ಕೂಡಿರುವ ತಮ್ಮ ತ್ಯಾಗಗಳು “ದೇವರ ದೃಷ್ಟಿಯಲ್ಲಿ ಮೆಚ್ಚಿಕೆ”ಯಾಗಿವೆ ಎಂಬ ಆಶ್ವಾಸನೆಯಿಂದಿರಸಾಧ್ಯವಿದೆ.​—1 ತಿಮೊಥೆಯ 5:4.

11 ಸಮಯ ಸಂದಿತು. “ತೆರಹನು ಇನ್ನೂರ ಐದು ವರುಷದವನಾಗಿ ಖಾರಾನಿನಲ್ಲಿ ಸತ್ತನು.” ಇದಕ್ಕಾಗಿ ಅಬ್ರಾಮನು ಖಂಡಿತವಾಗಿಯೂ ತುಂಬ ದುಃಖಿತನಾದನು, ಆದರೂ ಶೋಕಿಸುವ ಕಾಲಾವಧಿಯು ಮುಗಿದ ಕೂಡಲೆ ಅವನು ಅಲ್ಲಿಂದ ಹೊರಟನು. “ಅಬ್ರಾಮನು ಖಾರಾನ್‌ ಪಟ್ಟಣವನ್ನು ಬಿಟ್ಟು ಹೊರಟಾಗ ಎಪ್ಪತ್ತೈದು ವರುಷದವನಾಗಿದ್ದನು. ಅವನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತಾನೂ ಲೋಟನೂ ಖಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ ದಾಸದಾಸಿಯರನ್ನೂ ತೆಗೆದುಕೊಂಡು ಹೋಗಿ ಕಾನಾನ್‌ ದೇಶಕ್ಕೆ” ಪ್ರಯಾಣ ಬೆಳೆಸಿದನು.​—ಆದಿಕಾಂಡ 11:32; 12:​4, 5.

12. ಖಾರಾನಿನಲ್ಲಿ ವಾಸಿಸುತ್ತಿದ್ದಾಗ ಅಬ್ರಾಮನು ಏನು ಮಾಡಿದನು?

12 ಖಾರಾನಿನಲ್ಲಿದ್ದಾಗ ಅಬ್ರಾಮನು ‘ಸೊತ್ತುಗಳನ್ನು ಸಂಪಾದಿಸಿದನು’ ಎಂಬುದನ್ನು ಗಮನಿಸುವುದು ಆಸಕ್ತಿದಾಯಕವಾದದ್ದಾಗಿದೆ. ಊರ್‌ ಪಟ್ಟಣವನ್ನು ಬಿಟ್ಟುಬರಲಿಕ್ಕಾಗಿ ಅಬ್ರಾಮನು ಭೌತಿಕ ಸಂಪತ್ತನ್ನು ತ್ಯಾಗಮಾಡಿದ್ದರೂ, ಖಾರಾನನ್ನು ಬಿಟ್ಟುಹೋಗುವಾಗ ಅವನು ಬಹಳ ಶ್ರೀಮಂತನಾಗಿದ್ದನು. ದೇವರ ಆಶೀರ್ವಾದದಿಂದಲೇ ಹೀಗಾಯಿತೆಂಬುದು ಇದರಿಂದ ಸ್ಪಷ್ಟವಾಗುತ್ತದೆ. (ಪ್ರಸಂಗಿ 5:19) ಇಂದು ತನ್ನ ಎಲ್ಲ ಜನರಿಗೆ ದೇವರು ಐಶ್ವರ್ಯದ ವಾಗ್ದಾನವನ್ನು ಕೊಡುವುದಿಲ್ಲವಾದರೂ, ರಾಜ್ಯಕ್ಕೋಸ್ಕರ ‘ಮನೆಯನ್ನು, ಅಣ್ಣತಮ್ಮಂದಿರನ್ನು, ಅಕ್ಕತಂಗಿಯರನ್ನು ಬಿಟ್ಟುಬರುವವರ’ ಆವಶ್ಯಕತೆಗಳನ್ನು ಪೂರೈಸುವ ತನ್ನ ವಾಗ್ದಾನಕ್ಕೆ ಆತನು ನಂಬಿಗಸ್ತನಾಗಿದ್ದಾನೆ. (ಮಾರ್ಕ 10:​29, 30) ಅಬ್ರಾಮನು ಅನೇಕ ‘ದಾಸದಾಸಿಯರನ್ನೂ’ ಪಡೆದುಕೊಂಡನು. ಜೆರೂಸಲೆಮ್‌ ಟಾರ್ಗಮ್‌ ಮತ್ತು ಕಾಲ್ದೀ ಪಾರಫ್ರೇಸ್‌ ಎಂಬ ಪುಸ್ತಕಗಳು, ಅಬ್ರಾಮನು ಅವರನ್ನು ‘ಮತಾಂತರಿಸಿದನು’ ಎಂದು ಹೇಳುತ್ತವೆ. (ಆದಿಕಾಂಡ 18:19) ನಿಮ್ಮ ನೆರೆಯವರಿಗೆ, ಜೊತೆ ಕೆಲಸಗಾರರಿಗೆ ಅಥವಾ ಸಹಪಾಠಿಗಳಿಗೆ ಸಾಕ್ಷಿನೀಡುವಂತೆ ನಿಮ್ಮ ನಂಬಿಕೆಯು ನಿಮ್ಮನ್ನು ಪ್ರಚೋದಿಸುತ್ತದೋ? ಖಾರಾನಿನಲ್ಲೇ ನೆಲೆಸಿ, ದೇವರ ಆಜ್ಞೆಯನ್ನು ಮರೆತುಬಿಡುವುದಕ್ಕೆ ಬದಲಾಗಿ, ಅಲ್ಲಿ ತಾನು ಕಳೆದ ಸಮಯವನ್ನು ಅಬ್ರಾಮನು ತುಂಬ ಫಲದಾಯಕವಾಗಿ ಉಪಯೋಗಿಸಿದ್ದನು. ಆದರೆ ಈಗ ಅವನು ಅಲ್ಲಿಂದ ಹೊರಡಬೇಕಾಗಿತ್ತು. “ಯೆಹೋವನು ಹೇಳಿದ ಮೇರೆಗೆ ಅಬ್ರಾಮನು ಹೊರಟುಹೋದನು.”​—ಆದಿಕಾಂಡ 12:4.

ಯೂಫ್ರೇಟೀಸ್‌ನ ಆಚೆ ಬದಿ

13. ಅಬ್ರಾಮನು ಯೂಫ್ರೇಟೀಸ್‌ ನದಿಯನ್ನು ಯಾವಾಗ ದಾಟಿದನು, ಮತ್ತು ಇದರ ವಿಶೇಷತೆಯೇನಾಗಿತ್ತು?

13 ಪುನಃ ಒಮ್ಮೆ ಅಬ್ರಾಮನು ಪ್ರಯಾಣಿಸಬೇಕಾಗಿತ್ತು. ಖಾರಾನ್‌ನಿಂದ ಹೊರಟ ಅವನ ಪ್ರವಾಸಿ ತಂಡಗಳು ಪಶ್ಚಿಮದ ಕಡೆಗೆ ಸಾಗುತ್ತಾ, ಸುಮಾರು 90 ಕಿಲೊಮೀಟರ್‌ಗಳಷ್ಟು ದೂರ ಪ್ರಯಾಣಿಸಿದವು. ತದನಂತರ ಅಬ್ರಾಮನು, ಕರ್ಕೆಮೀಷಿನ ಪುರಾತನ ವ್ಯಾಪಾರ ಕೇಂದ್ರದ ಆಚೆ ಬದಿಯಲ್ಲಿದ್ದ ಯೂಫ್ರೇಟೀಸ್‌ ನದೀ ತೀರದಲ್ಲಿ ತಂಗಿದ್ದಿರಬಹುದು. ಇದು ಒಂದು ಪ್ರಾಮುಖ್ಯವಾದ ಸ್ಥಳವಾಗಿದ್ದು, ಪ್ರವಾಸಿ ತಂಡಗಳು ಇಲ್ಲಿಯೇ ನದಿಯನ್ನು ದಾಟುತ್ತಿದ್ದವು. * ಯಾವ ತಾರೀಖಿನಂದು ಅಬ್ರಾಮನ ಪ್ರವಾಸಿ ತಂಡಗಳು ನದಿಯನ್ನು ದಾಟಿದವು? ಸಾ.ಶ.ಪೂ. 1513ರ ನೈಸಾನ್‌ 14ರಂದು ಯೆಹೂದ್ಯರು ಐಗುಪ್ತ ದೇಶದಿಂದ ವಿಮೋಚಿಸಲ್ಪಡುವ 430 ವರ್ಷಗಳಿಗೆ ಮೊದಲು ಇದು ಸಂಭವಿಸಿತು ಎಂದು ಬೈಬಲ್‌ ಸೂಚಿಸುತ್ತದೆ. ವಿಮೋಚನಕಾಂಡ 12:41 ಹೇಳುವುದು: “ನಾನೂರಮೂವತ್ತು ವರುಷಗಳು ಕಳೆದನಂತರ ಅದೇ ದಿವಸದಲ್ಲಿ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತದೇಶವನ್ನು ಬಿಟ್ಟು ಹೊರಟುಹೋದವು.” (ಓರೆ ಅಕ್ಷರಗಳು ನಮ್ಮವು.) ಹಾಗಾದರೆ, ಸಾ.ಶ.ಪೂ. 1943ರ ನೈಸಾನ್‌ 14ರಂದು ಅಬ್ರಾಮನು ವಿಧೇಯತೆಯಿಂದ ಯೂಫ್ರೇಟೀಸ್‌ ನದಿಯನ್ನು ದಾಟಿದಾಗ, ಅಬ್ರಹಾಮಸಂಬಂಧಿತ ಒಡಂಬಡಿಕೆಯು ಕಾರ್ಯರೂಪಕ್ಕೆ ತರಲ್ಪಟ್ಟಿತು.

14. (ಎ) ತನ್ನ ಮನೋನೇತ್ರಗಳಿಂದ ಅಬ್ರಾಮನು ಏನನ್ನು ನೋಡಶಕ್ತನಾಗಿದ್ದನು? (ಬಿ) ಇಂದು ದೇವಜನರು ಯಾವ ಅರ್ಥದಲ್ಲಿ ಅಬ್ರಾಮನಿಗಿಂತಲೂ ಹೆಚ್ಚು ಆಶೀರ್ವದಿಸಲ್ಪಟ್ಟಿದ್ದಾರೆ?

14 ಅಬ್ರಾಮನು ತುಂಬ ಸಮೃದ್ಧವಾಗಿದ್ದಂತಹ ಒಂದು ಪಟ್ಟಣವನ್ನು ಬಿಟ್ಟುಬಂದಿದ್ದನು. ಆದರೂ, ಈಗ ಅವನು “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು” ಅಂದರೆ ಮಾನವಕುಲದ ಮೇಲೆ ಆಳ್ವಿಕೆ ನಡೆಸುವ ಒಂದು ನೀತಿಯ ಸರಕಾರವನ್ನು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳಲು ಶಕ್ತನಾಗಿದ್ದನು. (ಇಬ್ರಿಯ 11:10) ಹೌದು, ಆಗ ಲಭ್ಯವಿದ್ದ ಚೂರುಪಾರು ಮಾಹಿತಿಯಿಂದಲೇ ಅಬ್ರಾಮನು, ಸಾಯುತ್ತಿರುವ ಮಾನವಕುಲವನ್ನು ವಿಮೋಚಿಸುವ ದೇವರ ಉದ್ದೇಶದ ಮೂಲಭೂತ ಅಂಶಗಳನ್ನು ಗ್ರಹಿಸಲಾರಂಭಿಸಿದನು. ಇಂದು, ದೇವರ ಉದ್ದೇಶಗಳ ಕುರಿತು ಅಬ್ರಾಮನಿಗಿಂತಲೂ ಹೆಚ್ಚು ವಿಸ್ತಾರವಾದ ತಿಳಿವಳಿಕೆಯನ್ನು ಹೊಂದಿರಲು ನಾವು ಆಶೀರ್ವದಿಸಲ್ಪಟ್ಟಿದ್ದೇವೆ. (ಜ್ಞಾನೋಕ್ತಿ 4:18) ಯಾವುದರ ಬಗ್ಗೆ ಅಬ್ರಾಮನು ನಿರೀಕ್ಷಿಸಿದ್ದನೋ ಆ “ಪಟ್ಟಣ” ಅಥವಾ ರಾಜ್ಯ ಸರಕಾರವು 1914ರಿಂದ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದ್ದು, ಈಗ ಒಂದು ವಾಸ್ತವಿಕತೆಯಾಗಿದೆ. ಆದುದರಿಂದ, ಯೆಹೋವನಲ್ಲಿ ನಂಬಿಕೆ ಮತ್ತು ಭರವಸೆಯನ್ನು ತೋರಿಸುವಂತಹ ಕೆಲಸಗಳನ್ನು ಮಾಡುವಂತೆ ನಾವು ಪ್ರಚೋದಿಸಲ್ಪಡುವುದಿಲ್ಲವೋ?

ವಾಗ್ದತ್ತ ದೇಶದಲ್ಲಿ ತಾತ್ಕಾಲಿಕವಾಗಿ ತಂಗುವುದು ಆರಂಭವಾಗುತ್ತದೆ

15, 16. (ಎ) ಯೆಹೋವನಿಗೆ ಯಜ್ಞವೇದಿಯನ್ನು ಕಟ್ಟಲಿಕ್ಕಾಗಿ ಅಬ್ರಾಮನಿಗೆ ಧೈರ್ಯದ ಅಗತ್ಯವಿತ್ತೇಕೆ? (ಬಿ) ಇಂದು ಕ್ರೈಸ್ತರು ಅಬ್ರಾಮನಂತೆ ಹೇಗೆ ಧೈರ್ಯವನ್ನು ತೋರಿಸಸಾಧ್ಯವಿದೆ?

15ಆದಿಕಾಂಡ 12:​5, 6 ನಮಗೆ ಹೇಳುವುದು: ‘ಕೊನೆಗೂ ಅವರು ಕಾನಾನ್‌ ದೇಶಕ್ಕೆ ಸೇರಿದರು. ಅಬ್ರಾಮನು ಆ ದೇಶದಲ್ಲಿ ಸಂಚರಿಸುತ್ತಾ ಶೆಕೆಮ್‌ ಕ್ಷೇತ್ರದಲ್ಲಿರುವ ಮೋರೆಯೆಂಬ ವೃಕ್ಷದ ಬಳಿಗೆ ಬಂದನು.’ ಶೆಕೆಮ್‌ ಯೆರೂಸಲೇಮಿನಿಂದ ಉತ್ತರಕ್ಕೆ 50 ಕಿಲೊಮೀಟರ್‌ಗಳಷ್ಟು ದೂರದಲ್ಲಿತ್ತು ಮತ್ತು ಒಂದು ಫಲವತ್ತಾದ ಕಣಿವೆಯಲ್ಲಿ ನೆಲೆಸಿತ್ತು. ಈ ಕಣಿವೆಯನ್ನು “ಪವಿತ್ರ ದೇಶದ ಪರದೈಸ” ಎಂದು ವರ್ಣಿಸಲಾಗಿದೆ. ಹಾಗಿದ್ದರೂ, “ಆ ಕಾಲದಲ್ಲಿ ಕಾನಾನ್ಯರು ದೇಶದಲ್ಲಿದ್ದರು.” ಕಾನಾನ್ಯರು ನೈತಿಕವಾಗಿ ತುಂಬ ಕೀಳ್ಮಟ್ಟದವರಾಗಿದ್ದರಿಂದ, ಅವರ ಭ್ರಷ್ಟ ಪ್ರಭಾವದಿಂದ ತನ್ನ ಕುಟುಂಬವನ್ನು ರಕ್ಷಿಸಲಿಕ್ಕಾಗಿ ಅಬ್ರಾಮನು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದ್ದಿರಬಹುದು.​—ವಿಮೋಚನಕಾಂಡ 34:​11-16.

16 ಅಲ್ಲಿ ಎರಡನೆಯ ಬಾರಿ “ಯೆಹೋವನು ಅಬ್ರಾಮನಿಗೆ ದರ್ಶನಕೊಟ್ಟು​—ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು ಅಂದನು.” ಎಷ್ಟು ರೋಮಾಂಚಕರ ವಾಗ್ದಾನ! ತನ್ನ ಭಾವೀ ಸಂತತಿಯವರು ಮಾತ್ರ ಆನಂದಿಸಸಾಧ್ಯವಿದ್ದಂತಹ ಒಂದು ಪ್ರತೀಕ್ಷೆಯಲ್ಲಿ ಆನಂದಿಸಲು ಅಬ್ರಾಮನಿಗೆ ಖಂಡಿತವಾಗಿಯೂ ನಂಬಿಕೆಯಿರಬೇಕಾಗಿತ್ತು. ಹಾಗಿದ್ದರೂ, ಇದಕ್ಕೆ ಪ್ರತಿಕ್ರಿಯಿಸುತ್ತಾ ಅಬ್ರಾಮನು “ದರ್ಶನಕೊಟ್ಟ ಯೆಹೋವನಿಗೆ . . . ಯಜ್ಞವೇದಿಯನ್ನು ಕಟ್ಟಿಸಿದನು.” (ಆದಿಕಾಂಡ 12:7) ಒಬ್ಬ ಬೈಬಲ್‌ ವಿದ್ವಾಂಸನು ಸೂಚಿಸುವುದು: “ವಾಸ್ತವದಲ್ಲಿ ಒಂದು ಪ್ರದೇಶದಲ್ಲಿ ಯಜ್ಞವೇದಿಯನ್ನು ಕಟ್ಟುವುದು, ತನ್ನ ನಂಬಿಕೆಯ ಕಾರಣ ಸಿಕ್ಕಿದ ಹಕ್ಕಿನ ಆಧಾರದ ಮೇಲೆ ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವಂತಹ ಔಪಚಾರಿಕ ರೀತಿಯಾಗಿತ್ತು.” ಅಂತಹ ಯಜ್ಞವೇದಿಯನ್ನು ಕಟ್ಟುವುದು ಒಂದು ಧೀರ ಕೃತ್ಯವೂ ಆಗಿತ್ತು. ಈ ಯಜ್ಞವೇದಿಯು ಸಮಯಾನಂತರ ನಿಯಮದೊಡಂಬಡಿಕೆಯಲ್ಲಿ ನಿರ್ದಿಷ್ಟವಾಗಿ ತಿಳಿಸಲ್ಪಟ್ಟಿದ್ದಂತಹ ರೀತಿಯ ಯಜ್ಞವೇದಿಯಾಗಿದ್ದು, ನೈಸರ್ಗಿಕ ಕಲ್ಲುಗಳಿಂದ (ಕೆತ್ತಿರುವ ಕಲ್ಲುಗಳಿಂದಲ್ಲ) ರಚಿಸಲ್ಪಟ್ಟದ್ದಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. (ವಿಮೋಚನಕಾಂಡ 20:​24, 25) ಇದರ ತೋರಿಕೆಯು, ಕಾನಾನ್ಯರಿಂದ ಉಪಯೋಗಿಸಲ್ಪಡುತ್ತಿದ್ದ ಯಜ್ಞವೇದಿಗಳಿಗಿಂತ ತೀರ ಭಿನ್ನವಾಗಿತ್ತು. ಹೀಗೆ ಅಬ್ರಾಮನು ಸತ್ಯ ದೇವರಾದ ಯೆಹೋವನ ಆರಾಧಕನೋಪಾದಿ ಬಹಿರಂಗವಾಗಿ ಒಂದು ದಿಟ್ಟ ನಿಲುವನ್ನು ತೆಗೆದುಕೊಂಡನು ಮತ್ತು ಜನರ ದ್ವೇಷಕ್ಕೆ ಹಾಗೂ ಶಾರೀರಿಕ ಅಪಾಯಕ್ಕೆ ತನ್ನನ್ನು ಒಡ್ಡಿಕೊಂಡಿರಬಹುದು. ಇಂದು ನಮ್ಮ ಕುರಿತಾಗಿ ಏನು? ನಮ್ಮಲ್ಲಿ ಕೆಲವರು, ವಿಶೇಷವಾಗಿ ಎಳೆಯರು, ನಾವು ಯೆಹೋವನನ್ನು ಆರಾಧಿಸುತ್ತೇವೆ ಎಂಬುದನ್ನು ನಮ್ಮ ನೆರೆಯವರಿಗೆ ಅಥವಾ ಸಹಪಾಠಿಗಳಿಗೆ ತಿಳಿಸುವುದರಿಂದ ಹಿಂಜರಿಯುತ್ತೇವೋ? ಯೆಹೋವನ ಸೇವಕರಾಗಿರುವ ವಿಷಯದಲ್ಲಿ ನಾವೆಲ್ಲರೂ ಹೆಮ್ಮೆಪಡುವಂತೆ, ಅಬ್ರಾಮನ ಧೀರ ಮಾದರಿಯು ನಮ್ಮೆಲ್ಲರನ್ನೂ ಉತ್ತೇಜಿಸಲಿ!

17. ದೇವರ ನಾಮವನ್ನು ಸಾರುವವನೆಂದು ಅಬ್ರಾಮನು ಹೇಗೆ ರುಜುಪಡಿಸಿದನು, ಮತ್ತು ಇಂದು ಇದು ಕ್ರೈಸ್ತರಿಗೆ ಏನನ್ನು ನೆನಪು ಹುಟ್ಟಿಸುತ್ತದೆ?

17 ಎಲ್ಲೆಲ್ಲಾ ಅಬ್ರಾಮನು ಹೋದನೋ ಅಲ್ಲೆಲ್ಲಾ ಯೆಹೋವನ ಆರಾಧನೆಗೆ ಯಾವಾಗಲೂ ಪ್ರಥಮ ಸ್ಥಾನವನ್ನು ಕೊಟ್ಟನು. “ಅವನು ಅಲ್ಲಿಂದ ಹೊರಟು ಬೇತೇಲಿಗೆ ಮೂಡಲಲ್ಲಿರುವ ಗುಡ್ಡಕ್ಕೆ ಬಂದು ತನ್ನ ಗುಡಾರವನ್ನು ಹಾಕಿಸಿ ಇಳುಕೊಂಡನು; ಪಶ್ಚಿಮಕ್ಕೆ ಬೇತೇಲೂ ಪೂರ್ವಕ್ಕೆ ಆಯಿ ಎಂಬ ಊರೂ ಇದ್ದವು. ಅಲ್ಲಿಯೂ ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಆತನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.” (ಆದಿಕಾಂಡ 12:8) ‘ಹೆಸರನ್ನು ಹೇಳಿಕೊಳ್ಳುವುದು’ ಎಂಬ ಹೀಬ್ರು ವಾಕ್ಸರಣಿಗೆ, “ಹೆಸರನ್ನು ಘೋಷಿಸು (ಸಾರು)” ಎಂಬ ಅರ್ಥವೂ ಇದೆ. ತನ್ನ ಕಾನಾನ್ಯ ನೆರೆಹೊರೆಯವರ ನಡುವೆ ಅಬ್ರಾಮನು ಯೆಹೋವನ ಹೆಸರನ್ನು ಧೈರ್ಯದಿಂದ ಘೋಷಿಸಿದನು ಎಂಬುದರಲ್ಲಿ ಸಂದೇಹವಿಲ್ಲ. (ಆದಿಕಾಂಡ 14:​22-24) ಇಂದು “ಆತನ ನಾಮವನ್ನು ಎಲ್ಲರಿಗೂ ಪ್ರಕಟ”ಪಡಿಸುವುದರಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಮಟ್ಟಿಗೆ ಪಾಲ್ಗೊಳ್ಳುವ ನಮ್ಮ ಕರ್ತವ್ಯವನ್ನು ಇದು ನಮಗೆ ನೆನಪು ಹುಟ್ಟಿಸುತ್ತದೆ.​—ಇಬ್ರಿಯ 13:​15, NW; ರೋಮಾಪುರ 10:10.

18. ಕಾನಾನ್‌ ದೇಶದ ನಿವಾಸಿಗಳೊಂದಿಗೆ ಅಬ್ರಾಮನ ಸಂಬಂಧವು ಹೇಗಿತ್ತು?

18 ಅಬ್ರಾಮನು ಯಾವ ಸ್ಥಳದಲ್ಲಿಯೂ ಹೆಚ್ಚು ಕಾಲ ಉಳಿಯಲಿಲ್ಲ. “ತರುವಾಯ ಅಬ್ರಾಮನು ಅಲ್ಲಿಂದ ಹೊರಟು, ಒಂದು ಬಿಡಾರದಿಂದ ಇನ್ನೊಂದಕ್ಕೆ ಹೋಗುತ್ತಾ, ನೆಗೆಬ್‌ನ ಕಡೆಗೆ ಪ್ರಯಾಣ ಬೆಳೆಸಿದನು.” ನೆಗೆಬ್‌, ಯೆಹೂದದ ಪರ್ವತಮಯ ಪ್ರದೇಶದ ದಕ್ಷಿಣಕ್ಕಿರುವ ಅರೆಬಂಜರು ಭೂಮಿಯಾಗಿತ್ತು. (ಆದಿಕಾಂಡ 12:9, NW) ಯಾವಾಗಲೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಾ, ಪ್ರತಿಯೊಂದು ಹೊಸ ಸ್ಥಳದಲ್ಲಿಯೂ ತಾನು ಯೆಹೋವನ ಆರಾಧಕನು ಎಂಬುದನ್ನು ದೃಢಪಡಿಸುತ್ತಾ, ಅಬ್ರಾಮನು ಹಾಗೂ ಅವನ ಮನೆವಾರ್ತೆಯವರು “ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು.” (ಇಬ್ರಿಯ 11:13) ಈ ಎಲ್ಲ ಸಮಯಗಳಲ್ಲಿ ಅವರು ತಮ್ಮ ವಿಧರ್ಮಿ ನೆರೆಯವರೊಂದಿಗೆ ಹೆಚ್ಚು ಸ್ನೇಹವನ್ನು ಬೆಳೆಸಿಕೊಳ್ಳದಂತೆ ಜಾಗ್ರತೆ ವಹಿಸಿದರು. ತದ್ರೀತಿಯಲ್ಲಿ ಇಂದು ಸಹ ಕ್ರೈಸ್ತರು “ಲೋಕದ ಭಾಗವಾಗಿರಬಾರದು.” (ಯೋಹಾನ 17:​16, NW) ನಮ್ಮ ನೆರೆಯವರಿಗೆ ಮತ್ತು ಜೊತೆ ಕೆಲಸಗಾರರಿಗೆ ನಾವು ಕರುಣೆ ತೋರಿಸುವವರೂ ವಿನಯಶೀಲರೂ ಆಗಿರುವುದಾದರೂ, ದೇವರಿಂದ ವಿಮುಖವಾಗಿರುವ ಲೋಕದ ಮನೋಭಾವವನ್ನು ಪ್ರತಿಬಿಂಬಿಸುವ ನಡವಳಿಕೆಯಲ್ಲಿ ಸಿಕ್ಕಿಕೊಳ್ಳದಂತೆ ನಾವು ಜಾಗರೂಕರಾಗಿರಬೇಕು.​—ಎಫೆಸ 2:​2, 3.

19. (ಎ) ಅಲೆಮಾರಿ ಜೀವನವು ಅಬ್ರಾಮನಿಗೂ ಸಾರಯಳಿಗೂ ಪಂಥಾಹ್ವಾನಗಳನ್ನು ಒಡ್ಡಿದ್ದಿರಬಹುದೇಕೆ? (ಬಿ) ಅಬ್ರಾಮನಿಗೆ ಇನ್ನೂ ಯಾವ ಪಂಥಾಹ್ವಾನಗಳು ಸನ್ನಿಹಿತವಾಗಿದ್ದವು?

19 ಅಲೆಮಾರಿ ಜೀವನದ ಕಾಠಿನ್ಯಗಳಿಗೆ ಹೊಂದಿಕೊಳ್ಳುವುದು, ಅಬ್ರಾಮನಿಗಾಗಲಿ ಸಾರಯಳಿಗಾಗಲಿ ಸುಲಭದ ಸಂಗತಿಯಾಗಿರಲಿಲ್ಲ ಎಂಬುದನ್ನು ನಾವು ಮರೆಯದಿರೋಣ. ಊರ್‌ ಪಟ್ಟಣದ ಚೆನ್ನಾಗಿ ದಾಸ್ತಾನುಮಾಡಲ್ಪಟ್ಟ ಮಾರುಕಟ್ಟೆಗಳಲ್ಲಿ ಒಂದರಿಂದ ಖರೀದಿಸಲ್ಪಟ್ಟ ಆಹಾರಕ್ಕೆ ಬದಲಾಗಿ, ತಮ್ಮ ಸ್ವಂತ ಮಂದೆಗಳ ಉತ್ಪನ್ನಗಳನ್ನೇ ಅವರು ತಿಂದರು; ಸಕಲ ಸೌಕರ್ಯಗಳಿಂದ ಕೂಡಿದ ಒಂದು ಮನೆಗೆ ಬದಲಾಗಿ ಅವರು ಗುಡಾರಗಳಲ್ಲಿ ವಾಸಿಸಿದರು. (ಇಬ್ರಿಯ 11:9) ಅಬ್ರಾಮನ ಜೀವಿತವು ತುಂಬ ಚಟುವಟಿಕೆಯಿಂದ ಕೂಡಿತ್ತು; ತನ್ನ ಮಂದೆಗಳು ಹಾಗೂ ದಾಸದಾಸಿಯರನ್ನು ನೋಡಿಕೊಳ್ಳುವುದರಲ್ಲಿಯೂ ಅವನು ಬಹಳಷ್ಟನ್ನು ಮಾಡಲಿಕ್ಕಿತ್ತು. ಆ ಸಂಸ್ಕೃತಿಯ ಸ್ತ್ರೀಯರು ಸಾಂಪ್ರದಾಯಿಕವಾಗಿ ಮಾಡುತ್ತಿದ್ದ ಕೆಲಸಗಳನ್ನು ಸಾರಯಳು ಸಹ ಮಾಡಿದಳು ಎಂಬುದರಲ್ಲಿ ಸಂದೇಹವಿಲ್ಲ: ಹಿಟ್ಟನ್ನು ನಾದುವುದು, ರೊಟ್ಟಿ ಸುಡುವುದು, ಉಣ್ಣೆ ನೇಯುವುದು, ಬಟ್ಟೆಯನ್ನು ಹೊಲಿಯುವುದು. (ಆದಿಕಾಂಡ 18:​6, 7; 2 ಅರಸುಗಳು 23:7; ಜ್ಞಾನೋಕ್ತಿ 31:19; ಯೆಹೆಜ್ಕೇಲ 13:18) ಆದರೂ, ಇನ್ನೂ ಹೊಸ ಪರೀಕ್ಷೆಗಳು ಸನ್ನಿಹಿತವಾಗಿದ್ದವು. ಅತಿ ಬೇಗನೆ ತಮ್ಮ ಜೀವಗಳನ್ನು ಅಪಾಯಕ್ಕೆ ಒಡ್ಡಸಾಧ್ಯವಿರುವಂತಹ ಒಂದು ಸನ್ನಿವೇಶವನ್ನು ಅಬ್ರಾಮನೂ ಅವನ ಮನೆವಾರ್ತೆಯೂ ಎದುರಿಸಲಿಕ್ಕಿತ್ತು! ಈ ಪಂಥಾಹ್ವಾನವನ್ನು ಎದುರಿಸಲು ಅಬ್ರಾಮನ ನಂಬಿಕೆಯು ಸಾಕಷ್ಟು ಬಲವಾದುದಾಗಿತ್ತೊ?

[ಪಾದಟಿಪ್ಪಣಿಗಳು]

^ ಪ್ಯಾರ. 3 ಈಗ ಯೂಫ್ರೇಟೀಸ್‌ ನದಿಯು, ಊರ್‌ ಪಟ್ಟಣದ ಹಳೆಯ ನಿವೇಶನದಿಂದ ಸುಮಾರು 16 ಕಿಲೊಮೀಟರುಗಳಷ್ಟು ಪೂರ್ವದಲ್ಲಿ ಹರಿಯುತ್ತದಾದರೂ, ಪುರಾತನ ಕಾಲದಲ್ಲಿ ಆ ನದಿಯು ಆ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತಿತ್ತು ಎಂಬುದನ್ನು ಪುರಾವೆಯು ಸೂಚಿಸುತ್ತದೆ. ಹೀಗೆ, ಸಮಯಾನಂತರ ಅಬ್ರಾಮನು ‘[ಯೂಫ್ರೇಟೀಸ್‌] ಹೊಳೆಯ ಆಚೆಯಿಂದ’ ಬಂದವನೆಂದು ಸೂಚಿಸಸಾಧ್ಯವಾಯಿತು.​—ಯೆಹೋಶುವ 24:2.

^ ಪ್ಯಾರ. 13 ಶತಮಾನಗಳ ಬಳಿಕ, ಅಶ್ಶೂರ್ಯ ಅರಸನಾದ IIನೆಯ ಅಶ್ಶೂರ್‌ನಸಿರ್ಪಾಲನು, ಕರ್ಕೆಮೀಷಿನ ಬಳಿಯಿದ್ದ ಯೂಫ್ರೇಟೀಸ್‌ ನದಿಯನ್ನು ದಾಟಲಿಕ್ಕಾಗಿ ತೆಪ್ಪಗಳನ್ನು ಉಪಯೋಗಿಸಿದನು. ಅಬ್ರಾಮನು ಸಹ ತೆಪ್ಪಗಳನ್ನು ಕಟ್ಟಬೇಕಾಗಿತ್ತೋ ಅಥವಾ ಅವನೂ ಅವನ ಪ್ರವಾಸಿ ತಂಡಗಳೂ ನದಿಯನ್ನು ಹಾದುಹೋದವೋ ಎಂಬುದನ್ನು ಬೈಬಲ್‌ ತಿಳಿಸುವುದಿಲ್ಲ.

ನೀವು ಗಮನಿಸಿದಿರೋ?

• ಅಬ್ರಾಮನನ್ನು “ನಂಬುವವರೆಲ್ಲರಿಗೂ ಮೂಲತಂದೆ” ಎಂದು ಏಕೆ ಕರೆಯಲಾಗಿದೆ?

• ಕಲ್ದೀಯರ ಊರ್‌ ಪಟ್ಟಣವನ್ನು ಬಿಟ್ಟುಬರಲು ಅಬ್ರಾಮನಿಗೆ ನಂಬಿಕೆಯ ಆವಶ್ಯಕತೆಯಿತ್ತೇಕೆ?

• ಅಬ್ರಾಮನು ಯೆಹೋವನ ಆರಾಧನೆಗೆ ಪ್ರಥಮ ಸ್ಥಾನವನ್ನು ಕೊಟ್ಟನೆಂಬುದನ್ನು ಹೇಗೆ ತೋರ್ಪಡಿಸಿದನು?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಅಬ್ರಾಮನ ಪ್ರಯಾಣ

ಊರ್‌

ಖಾರಾನ್‌

ಕರ್ಕೆಮೀಷ್‌

ಕಾನಾನ್‌

ಮಹಾ ಸಮುದ್ರ

[ಕೃಪೆ]

Based on a map copyrighted by Pictorial Archive (Near Eastern History) Est. and Survey of Israel

[ಪುಟ 15ರಲ್ಲಿರುವ ಚಿತ್ರ]

ಊರ್‌ ಪಟ್ಟಣದಲ್ಲಿದ್ದ ಜೀವನದ ಸುಖಸೌಕರ್ಯಗಳನ್ನು ಬಿಟ್ಟುಹೋಗಲು ಅಬ್ರಾಮನಿಗೆ ನಂಬಿಕೆಯ ಅಗತ್ಯವಿತ್ತು

[ಪುಟ 18ರಲ್ಲಿರುವ ಚಿತ್ರವಿವರಣೆ]

ಗುಡಾರಗಳಲ್ಲಿ ವಾಸಿಸುವ ಮೂಲಕ, ಅಬ್ರಾಮ ಮತ್ತು ಅವನ ಮನೆವಾರ್ತೆಯವರು “ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು”