ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರಿ

ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರಿ

ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರಿ

“ಒಳ್ಳೇದನ್ನು ಮಾಡುವುದನ್ನು ನಾವು ನಿಲ್ಲಿಸದಿರೋಣ, ಏಕೆಂದರೆ ಒಂದುವೇಳೆ ನಾವು ಮನಗುಂದದಿದ್ದರೆ ತಕ್ಕ ಕಾಲದಲ್ಲಿ ಬೆಳೆಯನ್ನು ಕೊಯ್ಯುವೆವು.”​—ಗಲಾತ್ಯ 6:​9, NW.

1, 2. (ಎ) ದೇವರ ಸೇವೆಮಾಡಲಿಕ್ಕಾಗಿ ತಾಳ್ಮೆಯ ಆವಶ್ಯಕತೆಯಿದೆ ಏಕೆ? (ಬಿ) ಅಬ್ರಹಾಮನು ಹೇಗೆ ತಾಳ್ಮೆಯನ್ನು ತೋರಿಸಿದನು, ಮತ್ತು ಹಾಗೆ ಮಾಡುವಂತೆ ಅವನಿಗೆ ಯಾವುದು ಸಹಾಯಮಾಡಿತು?

ಯೆಹೋವನ ಸಾಕ್ಷಿಗಳಾಗಿರುವ ನಾವು ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಆನಂದಿಸುತ್ತೇವೆ. ಶಿಷ್ಯತ್ವದ “ನೊಗವನ್ನು” ತೆಗೆದುಕೊಳ್ಳುವುದರಲ್ಲಿಯೂ ನಾವು ನವಚೈತನ್ಯವನ್ನು ಕಂಡುಕೊಳ್ಳುತ್ತೇವೆ. (ಮತ್ತಾಯ 11:29) ಆದರೂ, ಕ್ರಿಸ್ತನೊಂದಿಗೆ ಯೆಹೋವನ ಸೇವೆಮಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ತನ್ನ ಜೊತೆ ಕ್ರೈಸ್ತರನ್ನು ಉತ್ತೇಜಿಸಿದಾಗ ಅಪೊಸ್ತಲ ಪೌಲನು ಇದನ್ನು ಸ್ಪಷ್ಟಪಡಿಸಿದನು: “ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು.” (ಇಬ್ರಿಯ 10:36) ದೇವರ ಸೇವೆಮಾಡುವುದು ಪಂಥಾಹ್ವಾನದಾಯಕ ಆಗಿರುವುದರಿಂದ ತಾಳ್ಮೆಯು ಅತ್ಯಗತ್ಯವಾಗಿದೆ.

2 ಅಬ್ರಹಾಮನ ಜೀವಿತವು ಆ ವಾಸ್ತವಾಂಶಕ್ಕೆ ರುಜುವಾತಾಗಿದೆ ಎಂಬುದಂತೂ ಖಂಡಿತ. ಅನೇಕ ಬಾರಿ ಅವನು ಕಷ್ಟಕರವಾದ ಆಯ್ಕೆಗಳನ್ನು ಮತ್ತು ಒತ್ತಡಭರಿತ ಸನ್ನಿವೇಶಗಳನ್ನು ಎದುರಿಸಿದನು. ಊರ್‌ ಪಟ್ಟಣದಲ್ಲಿ ಸುಖಸೌಕರ್ಯಗಳಿಂದ ಕೂಡಿದ್ದ ಜೀವಿತವನ್ನು ಬಿಟ್ಟುಬರುವಂತೆ ಆಜ್ಞಾಪಿಸಲ್ಪಟ್ಟಾಗ, ಅದು ಕೇವಲ ಆರಂಭವಾಗಿತ್ತು. ಅತಿ ಬೇಗನೆ ಅವನು ಕ್ಷಾಮವನ್ನು ಎದುರಿಸಿದನು, ತನ್ನ ನೆರೆಯವರ ಹಗೆತನಕ್ಕೆ ಗುರಿಯಾದನು, ಇನ್ನೇನು ತನ್ನ ಪತ್ನಿಯನ್ನೇ ಕಳೆದುಕೊಳ್ಳಲಿಕ್ಕಿದ್ದನು, ಸಂಬಂಧಿಕರಲ್ಲಿ ಕೆಲವರಿಂದ ಬದ್ಧ ದ್ವೇಷವನ್ನು ಮತ್ತು ಯುದ್ಧದ ಪಾಶವೀಯತೆಯನ್ನು ಎದುರಿಸಿದನು. ಇನ್ನೂ ಹೆಚ್ಚಿನ ಪರೀಕ್ಷೆಗಳು ಮುಂದೆ ಬರಲಿಕ್ಕಿದ್ದವು. ಆದರೆ ಒಳ್ಳೇದನ್ನು ಮಾಡುವುದನ್ನು ಅಬ್ರಹಾಮನು ಎಂದೂ ನಿಲ್ಲಿಸಲಿಲ್ಲ. ಇಂದು ನಮ್ಮ ಬಳಿ ಇರುವಂತೆ ದೇವರ ಇಡೀ ವಾಕ್ಯವು ಅವನ ಬಳಿ ಇರಲಿಲ್ಲ ಎಂಬುದನ್ನು ನೀವು ಪರಿಗಣಿಸುವಾಗ, ಇದು ಇನ್ನಷ್ಟು ಗಮನಾರ್ಹವಾಗಿದೆ. ಆದರೂ, ದೇವರು ತಿಳಿಸಿದ್ದಂತಹ “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು” ಎಂಬ ಪ್ರಥಮ ಪ್ರವಾದನೆಯು ಅವನಿಗೆ ತಿಳಿದಿತ್ತೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. (ಆದಿಕಾಂಡ 3:15) ಅಬ್ರಹಾಮನ ಮೂಲಕವೇ ಈ ಸಂತಾನವು ಬರಲಿಕ್ಕಿದ್ದದ್ದರಿಂದ, ಸಹಜವಾಗಿಯೇ ಅವನು ಸೈತಾನನ ಹಗೆತನದ ಕೇಂದ್ರಬಿಂದುವಾಗಲಿದ್ದನು. ಈ ಅಂಶವನ್ನು ಅಬ್ರಹಾಮನು ಮನಗಂಡಿದ್ದರಿಂದ, ತನ್ನ ಪರೀಕ್ಷೆಗಳನ್ನು ಸಂತೋಷದಿಂದ ತಾಳಿಕೊಳ್ಳುವಂತೆ ಅದು ಅವನಿಗೆ ಸಹಾಯಮಾಡಿತು.

3. (ಎ) ಇಂದು ಯೆಹೋವನ ಜನರು ಕಷ್ಟಸಂಕಟಗಳನ್ನು ನಿರೀಕ್ಷಿಸಸಾಧ್ಯವಿದೆ ಏಕೆ? (ಬಿ) ಗಲಾತ್ಯ 6:9 ನಮಗೆ ಯಾವ ಉತ್ತೇಜನವನ್ನು ನೀಡುತ್ತದೆ?

3 ಇಂದು ಯೆಹೋವನ ಜನರು ಸಹ ಕಷ್ಟಸಂಕಟಗಳನ್ನು ನಿರೀಕ್ಷಿಸಬೇಕು. (1 ಪೇತ್ರ 1:​6, 7) ಏಕೆಂದರೆ, ಸೈತಾನನು ಅಭಿಷಿಕ್ತ ಉಳಿಕೆಯವರೊಂದಿಗೆ ‘ಯುದ್ಧಮಾಡುತ್ತಿದ್ದಾನೆ’ ಎಂದು ಪ್ರಕಟನೆ 12:17 ನಮ್ಮನ್ನು ಎಚ್ಚರಿಸುತ್ತದೆ. “ಬೇರೆ ಕುರಿಗಳು” ಅಭಿಷಿಕ್ತ ಉಳಿಕೆಯವರೊಂದಿಗೆ ನಿಕಟವಾಗಿ ಸಹವಾಸಮಾಡುವುದರಿಂದ, ಅವರು ಸಹ ಸೈತಾನನ ಕೋಪಕ್ಕೆ ಗುರಿಹಲಗೆಯಾಗಿದ್ದಾರೆ. (ಯೋಹಾನ 10:16) ತಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಕ್ರೈಸ್ತರು ವಿರೋಧವನ್ನು ಎದುರಿಸಬೇಕಾಗಬಹುದು ಮಾತ್ರವಲ್ಲ, ತಮ್ಮ ವೈಯಕ್ತಿಕ ಜೀವಿತಗಳಲ್ಲೂ ಅವರು ಪರೀಕ್ಷಾತ್ಮಕ ಒತ್ತಡಗಳನ್ನು ಅನುಭವಿಸಬೇಕಾಗಬಹುದು. ಪೌಲನು ನಮ್ಮನ್ನು ಹೀಗೆ ಪ್ರೋತ್ಸಾಹಿಸುತ್ತಾನೆ: “ಒಳ್ಳೇದನ್ನು ಮಾಡುವುದನ್ನು ನಾವು ನಿಲ್ಲಿಸದಿರೋಣ, ಏಕೆಂದರೆ ಒಂದುವೇಳೆ ನಾವು ಮನಗುಂದದಿದ್ದರೆ ತಕ್ಕ ಕಾಲದಲ್ಲಿ ಬೆಳೆಯನ್ನು ಕೊಯ್ಯುವೆವು.” (ಗಲಾತ್ಯ 6:9, NW) ಹೌದು, ಸೈತಾನನಿಗೆ ನಮ್ಮ ನಂಬಿಕೆಯನ್ನು ನಾಶಮಾಡುವ ಉದ್ದೇಶವಿರುವುದಾದರೂ, ನಾವು ನಂಬಿಕೆಯಲ್ಲಿ ದೃಢರಾಗಿದ್ದು ಅವನನ್ನು ಎದುರಿಸಬೇಕು. (1 ಪೇತ್ರ 5:​8, 9) ನಮ್ಮ ನಂಬಿಗಸ್ತ ಮಾರ್ಗಕ್ರಮದಿಂದ ಯಾವ ಫಲಿತಾಂಶವು ದೊರೆಯಸಾಧ್ಯವಿದೆ? ಯಾಕೋಬ 1:​2, 3 ಹೀಗೆ ವಿವರಿಸುತ್ತದೆ: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು [“ಬೇರೆ ಬೇರೆ ಪರೀಕ್ಷೆಗಳು,” NW] ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.”

ನೇರವಾದ ಆಕ್ರಮಣ

4. ದೇವಜನರ ಯಥಾರ್ಥತೆಯನ್ನು ಮುರಿಯುವ ಪ್ರಯತ್ನದಿಂದ ಸೈತಾನನು ನೇರವಾದ ಆಕ್ರಮಣಗಳನ್ನು ಹೇಗೆ ಉಪಯೋಗಿಸಿದ್ದಾನೆ?

4 ಇಂದು ಒಬ್ಬ ಕ್ರೈಸ್ತನು ಎದುರಿಸಬಹುದಾದ ‘ಬೇರೆ ಬೇರೆ ಪರೀಕ್ಷೆಗಳನ್ನು’ ಅಬ್ರಹಾಮನ ಜೀವಿತವು ಖಂಡಿತವಾಗಿಯೂ ದೃಷ್ಟಾಂತಿಸುತ್ತದೆ. ಉದಾಹರಣೆಗೆ, ಶಿನಾರಿನಿಂದ ಬಂದ ಆಕ್ರಮಣಗಾರರ ದಾಳಿಗೆ ಅವನು ಪ್ರತಿಕ್ರಿಯಿಸಬೇಕಾಗಿತ್ತು. (ಆದಿಕಾಂಡ 14:​11-16) ಸೈತಾನನು ಹಿಂಸೆಯ ರೂಪದಲ್ಲಿ ನೇರವಾದ ಆಕ್ರಮಣಗಳನ್ನು ಉಪಯೋಗಿಸುತ್ತಾ ಇದ್ದಾನೆಂಬುದರಲ್ಲಿ ಆಶ್ಚರ್ಯವೇನಿಲ್ಲ. IIನೆಯ ಲೋಕ ಯುದ್ಧವು ಕೊನೆಗೊಂಡಂದಿನಿಂದ, ಡಸನ್‌ಗಟ್ಟಲೆ ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಕ್ರೈಸ್ತ ಶಿಕ್ಷಣಾ ಕೆಲಸದ ಮೇಲೆ ಸರಕಾರವು ನಿಷೇಧವನ್ನು ತಂದಿದೆ. 2001 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ವು, ಅಂಗೋಲ ದೇಶದ ಕ್ರೈಸ್ತರು ವೈರಿಗಳ ಕೈಕೆಳಗೆ ತಾಳಿಕೊಳ್ಳಬೇಕಾಗಿದ್ದ ಹಿಂಸಾಚಾರದ ಕುರಿತು ವರದಿಸುತ್ತದೆ. ಅಂತಹ ದೇಶಗಳಲ್ಲಿರುವ ನಮ್ಮ ಸಹೋದರರು, ಯೆಹೋವನ ಮೇಲೆ ಆತುಕೊಳ್ಳುವ ಮೂಲಕ, ತಮ್ಮ ಕೆಲಸವನ್ನು ನಿಲ್ಲಿಸಲು ದೃಢಮನಸ್ಸಿನಿಂದ ನಿರಾಕರಿಸಿದ್ದಾರೆ! ಹಿಂಸಾಚಾರ ಅಥವಾ ದಂಗೆಯನ್ನು ಅವಲಂಬಿಸುವ ಮೂಲಕವಾಗಿ ಅಲ್ಲ, ಬದಲಾಗಿ ಸಾರುವ ಕೆಲಸವನ್ನು ವಿವೇಕದಿಂದ ಮುಂದುವರಿಸುವ ಮೂಲಕ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.​—ಮತ್ತಾಯ 24:14.

5. ಕ್ರೈಸ್ತ ಯುವ ಜನರು ಶಾಲೆಯಲ್ಲಿ ಹೇಗೆ ಹಿಂಸೆಗೆ ಬಲಿಪಶುಗಳಾಗಬಹುದು?

5 ಆದರೂ, ಹಿಂಸೆಯಲ್ಲಿ ಕೇವಲ ಹಿಂಸಾಚಾರವೇ ಒಳಗೂಡಿರಬೇಕೆಂದೇನಿಲ್ಲ. ಕಾಲಕ್ರಮೇಣ ಅಬ್ರಹಾಮನು ಇಷ್ಮಾಯೇಲ ಮತ್ತು ಇಸಾಕ ಎಂಬ ಇಬ್ಬರು ಗಂಡುಮಕ್ಕಳಿಂದ ಆಶೀರ್ವದಿಸಲ್ಪಟ್ಟನು. ಆದಿಕಾಂಡ 21:​8-12 ನಮಗೆ ಹೇಳುವುದೇನೆಂದರೆ, ಒಂದು ಸಂದರ್ಭದಲ್ಲಿ ಇಷ್ಮಾಯೇಲನು ಇಸಾಕನನ್ನು ನೋಡಿ ‘ನಗುತ್ತಿದ್ದನು.’ ಆದರೆ ಇದು ಮಕ್ಕಳಾಟಕ್ಕಿಂತಲೂ ಹೆಚ್ಚು ಗಂಭೀರವಾದ ಒಂದು ಸಂಗತಿಯಾಗಿತ್ತು ಎಂದು ಗಲಾತ್ಯದವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ತೋರಿಸಿದನು. ಏಕೆಂದರೆ ಇಷ್ಮಾಯೇಲನು ಇಸಾಕನನ್ನು ಹಿಂಸೆಪಡಿಸುತ್ತಿದ್ದನು ಎಂದು ಅವನು ಆ ವಚನದಲ್ಲಿ ವರ್ಣಿಸುತ್ತಾನೆ! (ಗಲಾತ್ಯ 4:29) ಸಹಪಾಠಿಗಳ ಅಪಹಾಸ್ಯ ಮತ್ತು ವಿರೋಧಿಗಳಿಂದ ಬರುವ ಮಾತಿನ ದಾಳಿಯನ್ನು ಸಹ ಹಿಂಸೆಯೆಂದು ಕರೆಯಸಾಧ್ಯವಿದೆ. ರೈಅನ್‌ ಎಂಬ ಹೆಸರಿನ ಒಬ್ಬ ಎಳೆಯ ಕ್ರೈಸ್ತನು, ತನ್ನ ಸಹಪಾಠಿಗಳಿಂದ ಅನುಭವಿಸಿದ ಚಿತ್ರಹಿಂಸೆಯನ್ನು ಜ್ಞಾಪಿಸಿಕೊಳ್ಳುತ್ತಾನೆ: “ಶಾಲೆಯಿಂದ ಮನೆಗೆ ಹೋಗಲು ಮತ್ತು ಬರಲು 15 ನಿಮಿಷಗಳ ಬಸ್‌ ಪ್ರಯಾಣ ಮಾಡಬೇಕಾಗಿತ್ತು. ಆದರೆ ಈ ಸಮಯದಲ್ಲಿ ಅವರು ನನ್ನನ್ನು ಮಾತುಗಳ ಮೂಲಕ ನಿಂದಿಸುತ್ತಿದ್ದದ್ದರಿಂದ, ನಾನು ತಾಸುಗಟ್ಟಲೆ ಪ್ರಯಾಣಿಸುತ್ತಿರುವಂತೆ ನನಗನಿಸುತ್ತಿತ್ತು. ಅವರು ಸಿಗರೇಟ್‌ ಲೈಟರ್‌ನಿಂದ ಪೇಪರ್‌ ಕ್ಲಿಪ್‌ಗಳನ್ನು ಕಾಯಿಸಿ ನನಗೆ ಬರೆ ಹಾಕಿದರು.” ಈ ಕ್ರೂರ ವರ್ತನೆಗೆ ಕಾರಣವೇನಾಗಿತ್ತು? “ದೇವರ ಸಂಸ್ಥೆಯ ಮೂಲಕ ನಾನು ಪಡೆದುಕೊಂಡ ತರಬೇತಿಯು, ಶಾಲೆಯಲ್ಲಿದ್ದ ಇತರ ಯುವ ಜನರಿಗಿಂತ ನಾನು ಭಿನ್ನವಾಗಿ ಕಂಡುಬರುವಂತೆ ಮಾಡಿದ್ದೇ.” ಆದರೂ, ತನ್ನ ಹೆತ್ತವರ ಬೆಂಬಲದಿಂದ ರೈಅನ್‌ ಈ ಕಿರುಕುಳವನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳಲು ಶಕ್ತನಾದನು. ಎಳೆಯರೇ, ನಿಮ್ಮ ಸಮವಯಸ್ಕರ ಮೂದಲಿಕೆಗಳು ನಿಮಗೆ ನಿರಾಶೆಯನ್ನು ಉಂಟುಮಾಡಿವೆಯೋ? ಖಂಡಿತವಾಗಿಯೂ ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರಿ! ನಂಬಿಗಸ್ತಿಕೆಯಿಂದ ತಾಳಿಕೊಳ್ಳುವ ಮೂಲಕ ನೀವು ಯೇಸುವಿನ ಈ ಮಾತುಗಳ ನೆರವೇರಿಕೆಯನ್ನು ಅನುಭವಿಸುವಿರಿ: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.”​—ಮತ್ತಾಯ 5:11.

ದೈನಂದಿನ ಚಿಂತೆಗಳು

6. ಇಂದು ಜೊತೆ ಕ್ರೈಸ್ತರ ನಡುವೆ ಯಾವ ವಿಷಯಗಳು ಆಪ್ತ ಸಂಬಂಧಗಳನ್ನು ಹಾಳುಮಾಡಿಬಿಡಸಾಧ್ಯವಿದೆ?

6 ಇಂದು ನಾವು ಎದುರಿಸುವ ಪರೀಕ್ಷೆಗಳಲ್ಲಿ ಹೆಚ್ಚಿನವು ದೈನಂದಿನ ಚಿಂತೆಗಳನ್ನು ಒಳಗೊಂಡಿವೆ. ಸ್ವತಃ ಅಬ್ರಹಾಮನೇ ತನ್ನ ದನಕಾಯುವವರು ಮತ್ತು ತನ್ನ ಸೋದರಳಿಯನಾದ ಲೋಟನ ದನಕಾಯುವವರ ನಡುವೆ ಉಂಟಾದ ಜಗಳವನ್ನು ತಾಳಿಕೊಳ್ಳಬೇಕಾಗಿತ್ತು. (ಆದಿಕಾಂಡ 13:​5-7) ತದ್ರೀತಿಯಲ್ಲಿ ಇಂದು, ವ್ಯಕ್ತಿತ್ವದ ಭಿನ್ನಾಭಿಪ್ರಾಯಗಳು ಮತ್ತು ಚಿಕ್ಕಪುಟ್ಟ ಮತ್ಸರಗಳು ಆಪ್ತ ಸಂಬಂಧಗಳನ್ನು ಹಾಳುಮಾಡಿಬಿಡಸಾಧ್ಯವಿದೆ ಮತ್ತು ಸಭೆಯ ಶಾಂತಿಗೂ ಬೆದರಿಕೆಯನ್ನೊಡ್ಡಸಾಧ್ಯವಿದೆ. “ಮತ್ಸರವೂ ಪಕ್ಷಭೇದವೂ ಇರುವ ಕಡೆ ಗಲಿಬಿಲಿಯೂ ಸಕಲವಿಧ ನೀಚಕೃತ್ಯಗಳೂ ಇರುವವು.” (ಯಾಕೋಬ 3:16) ಅಬ್ರಹಾಮನಂತೆ, ನಾವು ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದೆ, ಅಹಂಕಾರಕ್ಕೆ ಬದಲಾಗಿ ಶಾಂತಿಗೆ ಪ್ರಥಮ ಸ್ಥಾನವನ್ನು ಕೊಡುತ್ತಾ, ಇತರರ ಅಭಿರುಚಿಗಳಿಗೆ ಆದ್ಯತೆ ನೀಡುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ!​—1 ಕೊರಿಂಥ 13:5; ಯಾಕೋಬ 3:17.

7. (ಎ) ಒಬ್ಬ ವ್ಯಕ್ತಿಯು ಜೊತೆ ಕ್ರೈಸ್ತನಿಂದ ನೋಯಿಸಲ್ಪಟ್ಟಿರುವಲ್ಲಿ ಅವನೇನು ಮಾಡಬೇಕು? (ಬಿ) ಇತರರೊಂದಿಗೆ ಒಳ್ಳೆಯ ಸಂಬಂಧಗಳನ್ನು ಕಾಪಾಡಿಕೊಳ್ಳುವುದರಲ್ಲಿ ಅಬ್ರಹಾಮನು ಹೇಗೆ ಒಂದು ಅತ್ಯುತ್ತಮ ಮಾದರಿಯನ್ನಿಟ್ಟನು?

7 ಒಬ್ಬ ಜೊತೆ ಕ್ರೈಸ್ತನು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂದು ನಮಗನಿಸುವಾಗ, ಅಂತಹ ವ್ಯಕ್ತಿಯೊಂದಿಗೆ ಶಾಂತಿಯಿಂದಿರುವುದು ಒಂದು ಪಂಥಾಹ್ವಾನವಾಗಿರಸಾಧ್ಯವಿದೆ. ಜ್ಞಾನೋಕ್ತಿ 12:18 ಹೇಳುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮುದ್ದು.” ದುಡುಕಿ ಮಾತಾಡುವ ಮಾತುಗಳು ಒಂದುವೇಳೆ ಮುಗ್ಧವಾಗಿ ಮಾತಾಡಲ್ಪಟ್ಟರೂ, ಇತರರಿಗೆ ಆಳವಾದ ನೋವನ್ನು ಉಂಟುಮಾಡಬಲ್ಲವು. ನಮ್ಮ ಬಗ್ಗೆ ಸುಳ್ಳಾರೋಪ ಹೊರಿಸಲಾಗಿದೆ ಅಥವಾ ನಾವು ಕ್ರೂರವಾದ ಹರಟೆಮಾತಿಗೆ ತುತ್ತಾಗಿದ್ದೇವೆ ಎಂದು ನಮಗನಿಸುವಾಗ, ಆ ನೋವು ಇನ್ನೂ ಅತ್ಯಧಿಕವಾಗಿರುತ್ತದೆ. (ಕೀರ್ತನೆ 6:​6, 7) ಆದರೆ ನೋವಿನ ಅನಿಸಿಕೆಗಳು ಒಳ್ಳೇದನ್ನು ಮಾಡುವುದರಿಂದ ತನ್ನನ್ನು ತಡೆಯುವಂತೆ ಒಬ್ಬ ಕ್ರೈಸ್ತನು ಅನುಮತಿಸಸಾಧ್ಯವಿಲ್ಲ! ಒಂದುವೇಳೆ ನೀವು ಇಂತಹ ಸನ್ನಿವೇಶದಲ್ಲಿರುವಲ್ಲಿ, ತಪ್ಪುಮಾಡಿರುವಂತಹ ವ್ಯಕ್ತಿಯೊಂದಿಗೆ ವಿನಯಪೂರ್ವಕವಾಗಿ ಮಾತಾಡುವ ಮೂಲಕ, ವಿಷಯಗಳನ್ನು ಸರಿಪಡಿಸಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿರಿ. (ಮತ್ತಾಯ 5:​23, 24; ಎಫೆಸ 4:26) ಆ ವ್ಯಕ್ತಿಯನ್ನು ಕ್ಷಮಿಸುವ ಮನೋಭಾವವುಳ್ಳವರಾಗಿರಿ. (ಕೊಲೊಸ್ಸೆ 3:13) ಮನಸ್ಸಿನಿಂದ ಅಸಮಾಧಾನವನ್ನು ಹೋಗಲಾಡಿಸುವ ಮೂಲಕ, ನಮ್ಮ ಸ್ವಂತ ಭಾವನೆಗಳನ್ನು ಗುಣಪಡಿಸಲು ಮತ್ತು ನಮ್ಮ ಸಹೋದರನೊಂದಿಗಿನ ನಮ್ಮ ಸಂಬಂಧವನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಲೋಟನ ಕುರಿತು ಅಬ್ರಹಾಮನಿಗೆ ಸ್ವಲ್ಪ ಕೋಪ ಬಂದಿದ್ದಿರಬಹುದಾದರೂ, ಅವನು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಲಿಲ್ಲ. ಅಷ್ಟೇಕೆ, ಲೋಟನೂ ಅವನ ಕುಟುಂಬವೂ ಸಂಕಷ್ಟದಲ್ಲಿದ್ದಾಗ ಅಬ್ರಹಾಮನು ಅವರನ್ನು ಕಾಪಾಡಲಿಕ್ಕಾಗಿ ತ್ವರಿತಗತಿಯಿಂದ ಕ್ರಿಯೆಗೈದನು!​—ಆದಿಕಾಂಡ 14:​12-16.

ನಾವೇ ಬರಮಾಡಿಕೊಳ್ಳುವ ಪರೀಕ್ಷೆಗಳು

8. (ಎ) ಕ್ರೈಸ್ತರು ‘ಅನೇಕ ವೇದನೆಗಳಿಂದ ತಮ್ಮನ್ನು ಹೇಗೆ ತಿವಿಸಿಕೊಳ್ಳಬಹುದು’? (ಬಿ) ಅಬ್ರಹಾಮನು ಪ್ರಾಪಂಚಿಕ ಸೊತ್ತುಗಳ ವಿಷಯದಲ್ಲಿ ಸಮತೂಕವಾದ ನೋಟವನ್ನು ಇಟ್ಟುಕೊಳ್ಳಲು ಏಕೆ ಶಕ್ತನಾಗಿದ್ದನು?

8 ಕೆಲವು ಪರೀಕ್ಷೆಗಳು ನಾವೇ ಬರಮಾಡಿಕೊಳ್ಳುವಂಥವುಗಳಾಗಿವೆ ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಉದಾಹರಣೆಗೆ, ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬು ಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು.” (ಮತ್ತಾಯ 6:19) ಆದರೂ, ಕೆಲವು ಸಹೋದರರು ರಾಜ್ಯಾಭಿರುಚಿಗಳಿಗಿಂತಲೂ ಹೆಚ್ಚಾಗಿ ಪ್ರಾಪಂಚಿಕ ಅಭಿರುಚಿಗಳಿಗೆ ಪ್ರಮುಖತೆ ನೀಡುವ ಮೂಲಕ ‘ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.’ (1 ತಿಮೊಥೆಯ 6:​9, 10) ದೇವರಿಗೆ ಸಂತೋಷವನ್ನು ಉಂಟುಮಾಡಲಿಕ್ಕಾಗಿ ಅಬ್ರಹಾಮನು ಪ್ರಾಪಂಚಿಕ ಸುಖಸೌಕರ್ಯಗಳನ್ನು ಮನಃಪೂರ್ವಕವಾಗಿ ತ್ಯಾಗಮಾಡಲು ಸಿದ್ಧನಿದ್ದನು. “ನಂಬಿಕೆಯಿಂದಲೇ ಅವನು ವಾಗ್ದಾತ್ತದೇಶಕ್ಕೆ ಬಂದಾಗ ಅಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಡೇರೆಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಬಾಧ್ಯರಾಗಿದ್ದ ಇಸಾಕನೂ ಯಾಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. ಯಾಕಂದರೆ ಅವನು ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.” (ಇಬ್ರಿಯ 11:​9, 10) ಭಾವೀ “ಪಟ್ಟಣ”ದಲ್ಲಿ ಅಥವಾ ದೈವಿಕ ಸರಕಾರದಲ್ಲಿ ಅಬ್ರಹಾಮನಿಗಿದ್ದ ನಂಬಿಕೆಯು, ಧನಸಂಪತ್ತುಗಳ ಮೇಲೆ ಅವಲಂಬಿಸದಂತೆ ಅವನಿಗೆ ಸಹಾಯಮಾಡಿತು. ನಾವು ಸಹ ಹಾಗೆ ಮಾಡುವುದು ವಿವೇಕಯುತವಾಗಿರುವುದಿಲ್ಲವೋ?

9, 10. (ಎ) ಖ್ಯಾತಿ ಪಡೆಯಲಿಕ್ಕಾಗಿರುವ ಬಯಕೆಯು ಹೇಗೆ ಒಂದು ಪರೀಕ್ಷೆಯನ್ನು ತರಸಾಧ್ಯವಿದೆ? (ಬಿ) ಇಂದು ಒಬ್ಬ ಸಹೋದರನು ಹೇಗೆ ತನ್ನನ್ನು ‘ಚಿಕ್ಕವನಾಗಿ’ ನಡೆಸಿಕೊಳ್ಳಬಹುದು?

9 ಇನ್ನೊಂದು ಅಂಶವನ್ನು ಪರಿಗಣಿಸಿರಿ. ಬೈಬಲು ಈ ಬಲವಾದ ಮಾರ್ಗದರ್ಶನವನ್ನು ನೀಡುತ್ತದೆ: “ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿದವನಾಗಿದ್ದಾನೆ.” (ಗಲಾತ್ಯ 6:3) ಇದಲ್ಲದೆ, ‘ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬರು ದೀನಭಾವದಿಂದ’ ವರ್ತಿಸುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ. (ಫಿಲಿಪ್ಪಿ 2:3) ಕೆಲವರು ಈ ಸಲಹೆಯನ್ನು ಅನ್ವಯಿಸಿಕೊಳ್ಳಲು ತಪ್ಪಿಹೋಗುವ ಮೂಲಕ ತಮ್ಮ ಮೇಲೆ ಪರೀಕ್ಷೆಗಳನ್ನು ಬರಮಾಡಿಕೊಳ್ಳುತ್ತಾರೆ. “ಒಳ್ಳೇ ಕೆಲಸವನ್ನು” ಮಾಡುವ ಬಯಕೆಗೆ ಬದಲಾಗಿ, ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುವ ಬಯಕೆಗೆ ಬಲಿಯಾಗುವ ಅವರು, ಸಭೆಯಲ್ಲಿ ತಾವು ಬಯಸಿದ್ದ ಸುಯೋಗಗಳನ್ನು ಪಡೆದುಕೊಳ್ಳದಿರುವಾಗ ತುಂಬ ನಿರುತ್ಸಾಹಗೊಳ್ಳುತ್ತಾರೆ ಮತ್ತು ಅತೃಪ್ತರಾಗುತ್ತಾರೆ.​—1 ತಿಮೊಥೆಯ 3:1.

10 ‘ಸ್ವತಃ ತಮ್ಮ ಬಗ್ಗೆ ಯೋಗ್ಯತೆಗೆ ಮೀರಿ ಭಾವಿಸಿಕೊಳ್ಳದಿರುವ’ ವಿಷಯದಲ್ಲಿ ಅಬ್ರಹಾಮನು ಅತ್ಯುತ್ತಮ ಮಾದರಿಯನ್ನಿಟ್ಟನು. (ರೋಮಾಪುರ 12:3) ಅಬ್ರಹಾಮನು ಮೆಲ್ಕೀಚೆದೆಕನನ್ನು ಎದುರುಗೊಂಡಾಗ, ತಾನು ದೇವರ ಅನುಗ್ರಹ ಪಡೆದವನಾಗಿರುವುದರಿಂದ ತಾನು ತುಂಬ ಶ್ರೇಷ್ಠನು ಎಂಬಂತೆ ವರ್ತಿಸಲಿಲ್ಲ. ಅದಕ್ಕೆ ಬದಲಾಗಿ, ಮೆಲ್ಕೀಚೆದೆಕನಿಗೆ ದಶಮಭಾಗವನ್ನು ಕೊಡುವ ಮೂಲಕ, ಯಾಜಕನೋಪಾದಿ ಅವನ ಶ್ರೇಷ್ಠ ಸ್ಥಾನವನ್ನು ಅಬ್ರಹಾಮನು ಅಂಗೀಕರಿಸಿದನು. (ಇಬ್ರಿಯ 7:​4-7) ತದ್ರೀತಿಯಲ್ಲಿ ಇಂದು ಕ್ರೈಸ್ತರು ತಮ್ಮನ್ನು ‘ಚಿಕ್ಕವರಾಗಿ’ ನಡೆಸಿಕೊಳ್ಳಲು ಮನಃಪೂರ್ವಕವಾಗಿ ಸಿದ್ಧರಾಗಿರಬೇಕು ಮತ್ತು ಪ್ರಸಿದ್ಧಿಯನ್ನು ಪಡೆದುಕೊಳ್ಳಲು ಹಾತೊರೆಯುವವರಾಗಿರಬಾರದು. (ಲೂಕ 9:48) ಸಭೆಯಲ್ಲಿ ಮುಂದಾಳುತ್ವವನ್ನು ವಹಿಸುವವರು ಕೆಲವೊಂದು ಸುಯೋಗಗಳನ್ನು ನಿಮಗೆ ನೀಡಲು ಹಿಂಜರಿಯುತ್ತಿರುವಂತೆ ಕಂಡುಬರುವಲ್ಲಿ, ನಿಮ್ಮ ವ್ಯಕ್ತಿತ್ವದಲ್ಲಿ ಅಥವಾ ಕೆಲಸಗಳನ್ನು ನಿರ್ವಹಿಸುವ ರೀತಿಯಲ್ಲಿ ಯಾವ ಅಭಿವೃದ್ಧಿಯನ್ನು ನೀವು ಮಾಡಸಾಧ್ಯವಿದೆ ಎಂಬುದನ್ನು ಕಂಡುಹಿಡಿಯಲು ಪ್ರಾಮಾಣಿಕ ರೀತಿಯಲ್ಲಿ ಸ್ವತಃ ಪರೀಕ್ಷಿಸಿಕೊಳ್ಳಿ. ನಿಮಗಿಲ್ಲದಿರುವಂತಹ ಸುಯೋಗಗಳ ಕುರಿತು ಕಹಿಮನೋಭಾವವನ್ನು ತಾಳುವುದಕ್ಕೆ ಬದಲಾಗಿ, ನಿಮಗೆ ಇರುವಂತಹ ಸುಯೋಗವನ್ನು, ಅಂದರೆ ಯೆಹೋವನ ಕುರಿತು ತಿಳಿದುಕೊಳ್ಳುವಂತೆ ಇತರರಿಗೆ ಸಹಾಯಮಾಡುವ ಮೂಲಕ ಆತನ ಸೇವೆಮಾಡುವ ಸದವಕಾಶವನ್ನು ಪೂರ್ಣ ರೀತಿಯಲ್ಲಿ ಸದುಪಯೋಗಿಸಿರಿ. ಹೌದು, “ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು.”​—1 ಪೇತ್ರ 5:6.

ಅಗೋಚರ ವಿಷಯಗಳಲ್ಲಿ ನಂಬಿಕೆ

11, 12. (ಎ) ಸಭೆಯಲ್ಲಿರುವ ಕೆಲವರು ಏಕೆ ತಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳಬಹುದು? (ಬಿ) ದೇವರ ವಾಗ್ದಾನಗಳಲ್ಲಿನ ನಂಬಿಕೆಯ ಮೇಲೆ ತನ್ನ ಜೀವಿತವನ್ನು ಕೇಂದ್ರೀಕರಿಸುವುದರಲ್ಲಿ ಅಬ್ರಹಾಮನು ಹೇಗೆ ಒಂದು ಅತ್ಯುತ್ತಮ ಮಾದರಿಯನ್ನಿಟ್ಟನು?

11 ಇನ್ನೊಂದು ಪರೀಕ್ಷೆಯು, ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವು ತುಂಬ ತಡವಾಗುತ್ತಿರುವಂತೆ ತೋರುವುದರಲ್ಲಿ ಒಳಗೂಡಿರಬಹುದು. 2 ಪೇತ್ರ 3:12ಕ್ಕನುಸಾರ, ಕ್ರೈಸ್ತರು “ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ” ಇರಬೇಕಾಗಿದೆ. ಆದರೂ, ಅನೇಕರು ತುಂಬ ವರ್ಷಗಳಿಂದ, ಕೆಲವರು ಅನೇಕ ದಶಕಗಳಿಂದ ಈ “ದಿನ”ಕ್ಕಾಗಿ ಕಾದಿದ್ದಾರೆ. ಇದರ ಫಲಿತಾಂಶವಾಗಿ, ಕೆಲವರು ನಿರಾಶೆಗೊಂಡು ತಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳಬಹುದು.

12 ಪುನಃ ಅಬ್ರಹಾಮನ ಮಾದರಿಯನ್ನು ಪರಿಗಣಿಸಿರಿ. ದೇವರ ವಾಗ್ದಾನಗಳು ಅಬ್ರಹಾಮನ ಜೀವಮಾನಕಾಲದಲ್ಲಿ ನೆರವೇರಿಸಲ್ಪಡುವ ಸಾಧ್ಯತೆಯು ಸ್ವಲ್ಪವೂ ಇರಲಿಲ್ಲವಾದರೂ, ಅವನು ತನ್ನ ಇಡೀ ಜೀವಿತವನ್ನು ದೇವರ ವಾಗ್ದಾನಗಳಲ್ಲಿನ ನಂಬಿಕೆಯ ಮೇಲೆ ಕೇಂದ್ರೀಕರಿಸಿದನು. ತನ್ನ ಮಗನಾದ ಇಸಾಕನು ಬೆಳೆದು ದೊಡ್ಡವನಾಗುವುದನ್ನು ನೋಡುವಷ್ಟು ಸಮಯ ಅವನು ಬದುಕಿದ್ದನು ಎಂಬುದು ನಿಜ. ಆದರೆ ಅಬ್ರಹಾಮನ ಸಂತತಿಯನ್ನು ‘ಆಕಾಶದ ನಕ್ಷತ್ರಗಳಿಗೆ’ ಅಥವಾ ‘ಸಮುದ್ರತೀರದಲ್ಲಿರುವ ಉಸುಬಿನ’ ಕಣಗಳಿಗೆ ಹೋಲಿಸಲು ಸಾಧ್ಯವಾಗುವ ಮುಂಚೆ ಶತಮಾನಗಳು ಸರಿಯಲಿದ್ದವು. (ಆದಿಕಾಂಡ 22:17) ಆದರೂ, ಇದರಿಂದ ಅಬ್ರಹಾಮನು ಅಸಮಾಧಾನಗೊಳ್ಳಲಿಲ್ಲ ಅಥವಾ ನಿರಾಶನಾಗಲಿಲ್ಲ. ಹೀಗೆ, ಅಬ್ರಹಾಮನ ಕುರಿತು ಮತ್ತು ಇತರ ಪೂರ್ವಜರ ಕುರಿತು ಅಪೊಸ್ತಲ ಪೌಲನು ಹೇಳಿದ್ದು: “ಇವರೆಲ್ಲರು ವಾಗ್ದಾನದ ಫಲಗಳನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳೂ [“ತಾತ್ಕಾಲಿಕ ನಿವಾಸಿಗಳೂ,” NW] ಆಗಿದ್ದೇವೆಂದು ಒಪ್ಪಿಕೊಂಡರು.”​—ಇಬ್ರಿಯ 11:13.

13. (ಎ) ಇಂದು ಕ್ರೈಸ್ತರು ಯಾವ ರೀತಿಯಲ್ಲಿ ‘ತಾತ್ಕಾಲಿಕ ನಿವಾಸಿಗಳಂತೆ’ ಇದ್ದಾರೆ? (ಬಿ) ಯೆಹೋವನು ಈ ವಿಷಯಗಳ ವ್ಯವಸ್ಥೆಗೆ ಏಕೆ ಅಂತ್ಯವನ್ನು ತರುವನು?

13 ಯಾವ ವಾಗ್ದಾನಗಳ ನೆರವೇರಿಕೆಯು “ದೂರ”ವಾಗಿತ್ತೋ ಅಂತಹ ವಾಗ್ದಾನಗಳಲ್ಲಿ ಅಬ್ರಹಾಮನು ತನ್ನ ಜೀವಿತವನ್ನು ಕೇಂದ್ರೀಕರಿಸಶಕ್ತನಾಗಿದ್ದಲ್ಲಿ, ಇಂದು ಈ ವಿಷಯಗಳ ನೆರವೇರಿಕೆಯು ತುಂಬ ಹತ್ತಿರವಾಗಿರುವಂತಹ ಸಮಯದಲ್ಲಿ ನಾವು ಇನ್ನೂ ಎಷ್ಟು ಹೆಚ್ಚಿನ ಮಟ್ಟಿಗೆ ಹಾಗೆ ಮಾಡಬೇಕಾಗಿದೆ! ಅಬ್ರಹಾಮನಂತೆ, ನಾವು ಸಹ ನಮ್ಮನ್ನು ಸೈತಾನನ ವ್ಯವಸ್ಥೆಯಲ್ಲಿ ‘ತಾತ್ಕಾಲಿಕ ನಿವಾಸಿಗಳಂತೆ’ ಪರಿಗಣಿಸಿಕೊಳ್ಳಬೇಕು ಮತ್ತು ಭೋಗಾಸಕ್ತ ಜೀವನ ಶೈಲಿಯಲ್ಲಿ ನೆಲೆಯೂರಲು ನಿರಾಕರಿಸಬೇಕು. ಈ “ಎಲ್ಲವುಗಳ ಅಂತ್ಯವು” ಕೇವಲ ಹತ್ತಿರವಲ್ಲ, ಬದಲಾಗಿ ಕೂಡಲೆ ಸಂಭವಿಸಲಿ ಎಂದು ನಾವೆಲ್ಲರೂ ಬಯಸುವುದು ಸಹಜ. (1 ಪೇತ್ರ 4:7) ನಾವು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿರಬಹುದು. ಅಥವಾ ಹಣಕಾಸಿನ ಸಮಸ್ಯೆಗಳು ನಮ್ಮ ಮೇಲೆ ಒತ್ತಡವನ್ನು ಹೇರುತ್ತಿರಬಹುದು. ಆದರೆ, ಕೇವಲ ಕೆಟ್ಟ ಪರಿಸ್ಥಿತಿಗಳಿಂದ ನಮ್ಮನ್ನು ಕಾಪಾಡಲಿಕ್ಕಾಗಿ ಮಾತ್ರವಲ್ಲ, ತನ್ನ ಸ್ವಂತ ಹೆಸರನ್ನು ಪವಿತ್ರೀಕರಿಸಲಿಕ್ಕಾಗಿಯೂ ಯೆಹೋವನು ಇದಕ್ಕೆಲ್ಲಾ ಅಂತ್ಯವನ್ನು ತರುವನು ಎಂಬುದನ್ನು ನಾವು ಮರೆಯಬಾರದು. (ಯೆಹೆಜ್ಕೇಲ 36:23; ಮತ್ತಾಯ 6:​9, 10) ಅಂತ್ಯವು ಬಂದೇ ಬರುವುದು. ಅದು ನಮಗೆ ಅನುಕೂಲಕರವಾದ ಸಮಯದಲ್ಲಿ ಬರಬೇಕೆಂದೇನಿಲ್ಲ, ಬದಲಾಗಿ ಯೆಹೋವನ ಉದ್ದೇಶಗಳನ್ನು ಅತ್ಯುತ್ತಮವಾಗಿ ಪೂರೈಸಸಾಧ್ಯವಿರುವಂತಹ ಸಮಯದಲ್ಲಿ ಬರುವುದು.

14. ದೇವರ ದೀರ್ಘಶಾಂತಿಯು ಇಂದು ಕ್ರೈಸ್ತರಿಗೆ ಹೇಗೆ ಪ್ರಯೋಜನವನ್ನು ತರುತ್ತದೆ?

14 “ಕರ್ತನು [“ಯೆಹೋವನು,” NW] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ” ಎಂಬುದನ್ನು ಸಹ ನೆನಪಿನಲ್ಲಿಡಿ. (2 ಪೇತ್ರ 3:9) ದೇವರು, ಕ್ರೈಸ್ತ ಸಭೆಯ ಸದಸ್ಯರಾಗಿರುವ “ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ” ಎಂಬುದನ್ನು ಗಮನಿಸಿ. ಏಕೆಂದರೆ, ‘ಶಾಂತರಾಗಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವುದಕ್ಕಾಗಿ’ ಬದಲಾವಣೆಗಳನ್ನು ಹಾಗೂ ಹೊಂದಾಣಿಕೆಗಳನ್ನು ಮಾಡಲು ನಮ್ಮಲ್ಲಿ ಕೆಲವರಿಗೆ ಹೆಚ್ಚು ಸಮಯ ಬೇಕಾಗಿರಬಹುದು. (2 ಪೇತ್ರ 3:14) ಹೀಗಿರುವುದರಿಂದ, ದೇವರು ಇಂತಹ ದೀರ್ಘಶಾಂತಿಯನ್ನು ತೋರಿಸಿರುವುದಕ್ಕೆ ನಾವು ಕೃತಜ್ಞರಾಗಿರಬಾರದೋ?

ಅಡ್ಡಿತಡೆಗಳ ಮಧ್ಯೆಯೂ ಆನಂದವನ್ನು ಕಂಡುಕೊಳ್ಳುವ ವಿಧ

15. ಪರೀಕ್ಷೆಗಳ ಎದುರಿನಲ್ಲಿಯೂ ಯೇಸು ತನ್ನ ಆನಂದವನ್ನು ಹೇಗೆ ಕಾಪಾಡಿಕೊಳ್ಳಶಕ್ತನಾಗಿದ್ದನು, ಮತ್ತು ಅವನನ್ನು ಅನುಕರಿಸುವುದು ಇಂದು ಕ್ರೈಸ್ತರಿಗೆ ಹೇಗೆ ಪ್ರಯೋಜನವನ್ನು ತರುತ್ತದೆ?

15 ಅಬ್ರಹಾಮನ ಜೀವಿತವು ಇಂದಿನ ಕ್ರೈಸ್ತರಿಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಅವನು ಕೇವಲ ನಂಬಿಕೆಯನ್ನು ಮಾತ್ರವಲ್ಲ, ತಾಳ್ಮೆ, ಬುದ್ಧಿವಂತಿಕೆ, ಧೈರ್ಯ, ಮತ್ತು ನಿಸ್ವಾರ್ಥ ಪ್ರೀತಿಯನ್ನು ಸಹ ತೋರಿಸಿದನು. ಅವನು ತನ್ನ ಜೀವಿತದಲ್ಲಿ ಯೆಹೋವನ ಆರಾಧನೆಗೆ ಪ್ರಥಮ ಸ್ಥಾನವನ್ನು ಕೊಟ್ಟನು. ಆದರೂ, ನಾವು ಅನುಕರಿಸಬೇಕಾದ ಅತ್ಯುತ್ತಮ ಮಾದರಿಯು ಯೇಸು ಕ್ರಿಸ್ತನಿಂದ ಇಡಲ್ಪಟ್ಟಿತು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವನು ಸಹ ಅನೇಕ ಪರೀಕ್ಷೆಗಳನ್ನು ಎದುರಿಸಿದನಾದರೂ, ಅವುಗಳನ್ನು ಎದುರಿಸುವಾಗ ಅವನೆಂದೂ ತನ್ನ ಆನಂದವನ್ನು ಕಳೆದುಕೊಳ್ಳಲಿಲ್ಲ. ಏಕೆ? ಏಕೆಂದರೆ ಅವನು ಮುಂದಿರುವ ನಿರೀಕ್ಷೆಯ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸಿದನು. (ಇಬ್ರಿಯ 12:​2, 3) ಈ ಕಾರಣದಿಂದ ಪೌಲನು ಪ್ರಾರ್ಥಿಸಿದ್ದು: “ಆ ಸ್ಥಿರಚಿತ್ತವನ್ನೂ ಆದರಣೆಯನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ನಿಮಗೆ ದಯಪಾಲಿಸಲಿ.” (ರೋಮಾಪುರ 15:5) ಸರಿಯಾದ ಮನೋಭಾವವುಳ್ಳವರಾಗಿರುವಲ್ಲಿ, ಸೈತಾನನು ನಮ್ಮ ಮೇಲೆ ತರುವಂತಹ ಯಾವುದೇ ಅಡ್ಡಿತಡೆಗಳ ಮಧ್ಯೆಯೂ ನಾವು ಆನಂದವನ್ನು ಕಂಡುಕೊಳ್ಳಸಾಧ್ಯವಿದೆ.

16. ನಮ್ಮ ಸಮಸ್ಯೆಗಳು ಮನಸ್ಥೈರ್ಯವನ್ನು ಕುಂದಿಸುತ್ತಿರುವಂತೆ ತೋರುವಾಗ ನಾವೇನು ಮಾಡಸಾಧ್ಯವಿದೆ?

16 ಸಮಸ್ಯೆಗಳು ನಿಮ್ಮ ಮನಸ್ಥೈರ್ಯವನ್ನು ಕುಂದಿಸುತ್ತಿರುವಂತೆ ತೋರುವಾಗ, ಯೆಹೋವನು ಅಬ್ರಹಾಮನನ್ನು ಪ್ರೀತಿಸಿದಂತೆಯೇ ನಿಮ್ಮನ್ನೂ ಪ್ರೀತಿಸುತ್ತಾನೆ ಎಂಬುದನ್ನು ಮರೆಯದಿರಿ. ನೀವು ಯಶಸ್ಸನ್ನು ಪಡೆಯಬೇಕೆಂದು ಆತನು ಬಯಸುತ್ತಾನೆ. (ಫಿಲಿಪ್ಪಿ 1:6) “ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು” ಎಂಬ ದೃಢವಿಶ್ವಾಸವುಳ್ಳವರಾಗಿದ್ದು, ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಡಿರಿ. (1 ಕೊರಿಂಥ 10:13) ದೇವರ ವಾಕ್ಯವನ್ನು ದಿನಾಲೂ ಓದುವ ರೂಢಿಯನ್ನು ಬೆಳೆಸಿಕೊಳ್ಳಿರಿ. (ಕೀರ್ತನೆ 1:2) ತಾಳಿಕೊಳ್ಳಲು ನಿಮಗೆ ಸಹಾಯಮಾಡುವಂತೆ ಯೆಹೋವನನ್ನು ಬೇಡಿಕೊಳ್ಳುತ್ತಾ, ಪ್ರಾರ್ಥನೆಯಲ್ಲಿ ನಿರತರಾಗಿರಿ. (ಫಿಲಿಪ್ಪಿ 4:6) ಆತನು ‘ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು.’ (ಲೂಕ 11:13) ನಮ್ಮ ಬೈಬಲಾಧಾರಿತ ಪ್ರಕಾಶನಗಳಂತಹ, ನಿಮ್ಮನ್ನು ಆತ್ಮಿಕವಾಗಿ ಪೋಷಿಸಲಿಕ್ಕಾಗಿ ಯೆಹೋವನು ಮಾಡಿರುವ ಒದಗಿಸುವಿಕೆಗಳನ್ನು ಸದುಪಯೋಗಿಸಿಕೊಳ್ಳಿರಿ. ಅಷ್ಟುಮಾತ್ರವಲ್ಲ, ಸಹೋದರರ ಬಳಗದ ಬೆಂಬಲವನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. (1 ಪೇತ್ರ 2:17) ನಂಬಿಗಸ್ತಿಕೆಯಿಂದ ಕ್ರೈಸ್ತ ಕೂಟಗಳಿಗೆ ಹಾಜರಾಗಿ, ಏಕೆಂದರೆ ತಾಳಿಕೊಳ್ಳಲು ನಿಮಗೆ ಅಗತ್ಯವಿರುವ ಉತ್ತೇಜನವನ್ನು ನೀವು ಅಲ್ಲಿಯೇ ಪಡೆದುಕೊಳ್ಳುವಿರಿ. (ಇಬ್ರಿಯ 10:​24, 25) ನಿಮ್ಮ ತಾಳ್ಮೆಯು ದೇವರ ದೃಷ್ಟಿಯಲ್ಲಿ ಅಂಗೀಕೃತ ಸ್ಥಿತಿಗೆ ನಡಿಸುತ್ತದೆ ಮತ್ತು ನಿಮ್ಮ ನಂಬಿಗಸ್ತಿಕೆಯು ಆತನ ಹೃದಯವನ್ನು ಸಂತೋಷಪಡಿಸುತ್ತದೆ ಎಂಬ ನಿಶ್ಚಿತಾಭಿಪ್ರಾಯದಲ್ಲಿ ಆನಂದಿಸಿರಿ!​—ಜ್ಞಾನೋಕ್ತಿ 27:11; ರೋಮಾಪುರ 5:​3-5.

17. ಕ್ರೈಸ್ತರು ಏಕೆ ಹತಾಶರಾಗುವುದಿಲ್ಲ?

17 ದೇವರು ಅಬ್ರಹಾಮನನ್ನು ತನ್ನ ‘ಸ್ನೇಹಿತನೋಪಾದಿ’ ಪ್ರೀತಿಸಿದನು. (ಯಾಕೋಬ 2:23) ಹಾಗಿದ್ದರೂ, ಅಬ್ರಹಾಮನ ಜೀವಿತದಲ್ಲಿ ಒಂದಾದ ನಂತರ ಇನ್ನೊಂದು ಒತ್ತಡಭರಿತ ಪರೀಕ್ಷೆಗಳು ಹಾಗೂ ಕಷ್ಟಸಂಕಟಗಳು ಬಂದವು. ಆದುದರಿಂದ, ಈ “ಕಡೇ ದಿವಸಗಳಲ್ಲಿ” ಕ್ರೈಸ್ತರು ಸಹ ಅದೇ ರೀತಿಯ ಅನುಭವಗಳನ್ನು ನಿರೀಕ್ಷಿಸಸಾಧ್ಯವಿದೆ. ವಾಸ್ತವದಲ್ಲಿ, “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು” ಎಂದು ಬೈಬಲ್‌ ನಮ್ಮನ್ನು ಎಚ್ಚರಿಸುತ್ತದೆ. (2 ತಿಮೊಥೆಯ 3:​1, 13) ಹತಾಶರಾಗುವ ಬದಲು ಸೈತಾನನ ದುಷ್ಟ ವ್ಯವಸ್ಥೆಯ ಅಂತ್ಯವು ಸಮೀಪಿಸಿದೆ ಎಂಬುದಕ್ಕೆ, ನಾವು ಎದುರಿಸುತ್ತಿರುವ ಒತ್ತಡಗಳೇ ರುಜುವಾತನ್ನು ಕೊಡುತ್ತವೆ ಎಂಬುದನ್ನು ಗ್ರಹಿಸಿರಿ. ಆದರೆ ಯೇಸು ನಮಗೆ ಹೀಗೆ ನೆನಪು ಹುಟ್ಟಿಸುತ್ತಾನೆ: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ಆದುದರಿಂದ, ‘ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರಿ!’ ಅಬ್ರಹಾಮನನ್ನು ಅನುಕರಿಸಿರಿ, ಮತ್ತು ಯಾರು “ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು” ಪಡೆದುಕೊಳ್ಳುತ್ತಾರೋ ಅವರ ನಡುವೆ ನೀವೂ ಇರಿ.​—ಇಬ್ರಿಯ 6:​12, NW.

ನೀವು ಗಮನಿಸಿದಿರೋ?

• ಇಂದು ಯೆಹೋವನ ಜನರು ಪರೀಕ್ಷೆಗಳು ಮತ್ತು ಕಷ್ಟಸಂಕಟಗಳನ್ನು ಏಕೆ ನಿರೀಕ್ಷಿಸತಕ್ಕದ್ದು?

• ಯಾವ ರೀತಿಯಲ್ಲಿ ಸೈತಾನನು ನೇರವಾದ ಆಕ್ರಮಣಗಳನ್ನು ಉಪಯೋಗಿಸಬಹುದು?

• ಕ್ರೈಸ್ತರ ಮಧ್ಯೆ ಉಂಟಾಗುವ ವೈಯಕ್ತಿಕ ಘರ್ಷಣೆಗಳನ್ನು ಹೇಗೆ ಬಗೆಹರಿಸಸಾಧ್ಯವಿದೆ?

• ಅಹಂಕಾರ ಮತ್ತು ಸ್ವಾರ್ಥಭಾವವು ಹೇಗೆ ಪರೀಕ್ಷೆಗಳನ್ನು ತರಬಲ್ಲದು?

• ದೇವರ ವಾಗ್ದಾನಗಳ ನೆರವೇರಿಕೆಗಾಗಿ ಕಾಯುವುದರಲ್ಲಿ ಅಬ್ರಹಾಮನು ಯಾವ ರೀತಿಯಲ್ಲಿ ಒಂದು ಒಳ್ಳೇ ಮಾದರಿಯನ್ನು ಇಟ್ಟನು?

[ಅಧ್ಯಯನ ಪ್ರಶ್ನೆಗಳು]

[ಪುಟ 26ರಲ್ಲಿರುವ ಚಿತ್ರ]

ಅನೇಕ ಕ್ರೈಸ್ತ ಯುವ ಜನರು, ತಮ್ಮ ಸಮವಯಸ್ಕರಿಂದ ಮೂದಲಿಸಲ್ಪಡುವುದರ ಮೂಲಕ ಹಿಂಸೆಯನ್ನು ಅನುಭವಿಸುತ್ತಾರೆ

[ಪುಟ 29ರಲ್ಲಿರುವ ಚಿತ್ರ]

ಅಬ್ರಹಾಮನ ದಿನದಲ್ಲಿ ದೇವರ ವಾಗ್ದಾನಗಳ ನೆರವೇರಿಕೆಯು ‘ದೂರವಿತ್ತಾದರೂ,’ ಅವನು ಅವುಗಳ ಮೇಲೆ ತನ್ನ ಜೀವಿತವನ್ನು ಕೇಂದ್ರೀಕರಿಸಿದನು