ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಯೌವನವನ್ನು ಯಶಸ್ವಿಗೊಳಿಸುವುದು

ನಿಮ್ಮ ಯೌವನವನ್ನು ಯಶಸ್ವಿಗೊಳಿಸುವುದು

ನಿಮ್ಮ ಯೌವನವನ್ನು ಯಶಸ್ವಿಗೊಳಿಸುವುದು

ಸೌಂದರ್ಯ, ಐಶ್ವರ್ಯ, ಅಥವಾ ಯೌವನ​—ಈ ಮೂರು ವಿಷಯಗಳಲ್ಲಿ ಯಾವುದಾದರೊಂದನ್ನು ಆಯ್ಕೆಮಾಡುವಂತೆ ಐರೋಪ್ಯ ದೇಶವೊಂದರ ನಿವಾಸಿಗಳಿಗೆ ಹೇಳಲಾಯಿತು. ಪ್ರಥಮ ಆಯ್ಕೆಯು ಯೌವನವಾಗಿತ್ತು. ಹೌದು, ಎಲ್ಲ ವಯೋಮಿತಿಗಳ ಜನರು, ಹದಿಪ್ರಾಯವನ್ನು ಹಾಗೂ 20ಗಳ ಆರಂಭದ ವರ್ಷಗಳನ್ನು ಜೀವಿತದ ವಿಶೇಷ ಕಾಲವಾಗಿ ಪರಿಗಣಿಸುತ್ತಾರೆ. ಇದಲ್ಲದೆ, ಯುವ ಜನರು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಯಶಸ್ವಿಕರವಾದ ಬದಲಾವಣೆಯನ್ನು ಮಾಡುವಂತೆ ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಹೇಗೆ?

ಬೈಬಲ್‌ ಸಹಾಯಮಾಡಬಲ್ಲದೋ? ಖಂಡಿತವಾಗಿಯೂ ಮಾಡಬಲ್ಲದು ಎಂಬುದೇ ಇದಕ್ಕೆ ಉತ್ತರವಾಗಿದೆ. ದೇವರ ವಾಕ್ಯವು ಬೇರೆ ಯಾವುದೇ ಪ್ರಾಯದವರಿಗಿಂತಲೂ ಹೆಚ್ಚಾಗಿ ಯುವ ಜನರಿಗೆ ವಿಶೇಷ ಸಹಾಯವಾಗಿರಸಾಧ್ಯವಿರುವ ಎರಡು ಕ್ಷೇತ್ರಗಳನ್ನು ನಾವೀಗ ಪರೀಕ್ಷಿಸೋಣ.

ಬೇರೆಯವರೊಂದಿಗೆ ಹೊಂದಿಕೊಂಡು ಹೋಗುವುದು

ಯೂಜೆಂಟ್‌ 2000 ಎಂಬುದು, ಜರ್ಮನಿಯಲ್ಲಿರುವ 5,000ಕ್ಕಿಂತಲೂ ಹೆಚ್ಚಿನ ಯುವ ಜನರ ಮನೋಭಾವಗಳು, ಮೌಲ್ಯಗಳು ಮತ್ತು ನಡವಳಿಕೆಯ ಕುರಿತಾದ ಸಮೀಕ್ಷೆಯ ವರದಿಯಾಗಿದೆ. ಯುವ ಜನರು ಸಂಗೀತವನ್ನು ಕೇಳಿಸಿಕೊಳ್ಳುವ, ಕ್ರೀಡೆಯಲ್ಲಿ ಭಾಗವಹಿಸುವ, ಅಥವಾ ಸುಮ್ಮನೆ ಅಲೆದಾಡುವಂತಹ ಬಿಡುವಿನ ವೇಳೆಯ ಚಟುವಟಿಕೆಗಳನ್ನು ಬೆನ್ನಟ್ಟುವಾಗ, ಹೆಚ್ಚಾಗಿ ಬೇರೆ ಜನರೊಂದಿಗಿರುತ್ತಾರೆ ಎಂದು ಆ ಸಮೀಕ್ಷೆಯು ಪ್ರಕಟಪಡಿಸುತ್ತದೆ. ಹೆಚ್ಚಾಗಿ ಯುವ ಜನರು ಬಹುಶಃ ಬೇರಾವುದೇ ವಯೋಮಿತಿಯ ಜನರಿಗಿಂತಲೂ ತಮ್ಮ ಸಮವಯಸ್ಕರೊಂದಿಗೇ ಇರಲು ಬಯಸುತ್ತಾರೆ. ಖಂಡಿತವಾಗಿಯೂ, ಯೌವನದಲ್ಲಿ ಯಶಸ್ಸನ್ನು ಗಳಿಸುವ ಕೀಲಿ ಕೈಗಳಲ್ಲಿ ಒಂದು, ಇತರರೊಂದಿಗೆ ಹೊಂದಿಕೊಂಡು ಹೋಗುವುದೇ ಎಂಬುದು ಇದರಿಂದ ಸಿದ್ಧವಾಗುತ್ತದೆ.

ಆದರೆ ಇತರರೊಂದಿಗೆ ಹೊಂದಿಕೊಂಡು ಹೋಗುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ವಾಸ್ತವದಲ್ಲಿ, ಮಾನವ ಸಂಬಂಧಗಳ ಕ್ಷೇತ್ರದಲ್ಲಿ ತಮಗೆ ಅನೇಕವೇಳೆ ಸಮಸ್ಯೆಗಳು ಏಳುತ್ತವೆ ಎಂದು ಯುವಕ ಯುವತಿಯರು ಒಪ್ಪಿಕೊಳ್ಳುತ್ತಾರೆ. ಈ ವಿಷಯದಲ್ಲಿ ಬೈಬಲ್‌ ನಿಜವಾದ ಸಹಾಯಕವಾಗಿರಬಲ್ಲದು. ಸಮತೂಕ ಸಂಬಂಧಗಳನ್ನು ಬೆಳೆಸಿಕೊಳ್ಳುವುದರಲ್ಲಿ ಯುವ ಜನರಿಗೆ ಸಹಾಯಮಾಡಲಿಕ್ಕಾಗಿ ದೇವರ ವಾಕ್ಯದಲ್ಲಿ ಮೂಲಭೂತ ಮಾರ್ಗದರ್ಶನಗಳಿವೆ. ಬೈಬಲ್‌ ಏನು ಹೇಳುತ್ತದೆ?

ಮಾನವ ಸಂಬಂಧಗಳ ಅತ್ಯಂತ ಪ್ರಾಮುಖ್ಯ ಮೂಲತತ್ತ್ವಗಳಲ್ಲಿ ಒಂದನ್ನು ಸುವರ್ಣ ನಿಯಮ ಎಂದು ಕರೆಯಲಾಗುತ್ತದೆ: “ಇತರರು ನಿಮ್ಮನ್ನು ಹೇಗೆ ಉಪಚರಿಸುವಂತೆ ಬಯಸುತ್ತೀರೋ ಹಾಗೆಯೇ ನೀವು ಸಹ ಯಾವಾಗಲೂ ಅವರನ್ನು ಉಪಚರಿಸಿರಿ.” ಇತರರನ್ನು ಗೌರವ, ಘನತೆ ಹಾಗೂ ದಯಾಭಾವದಿಂದ ಉಪಚರಿಸುವುದು, ಅವರು ಸಹ ನಿಮ್ಮನ್ನು ಅದೇ ರೀತಿಯಲ್ಲಿ ಉಪಚರಿಸುವಂತೆ ಉತ್ತೇಜಿಸುತ್ತದೆ. ದಯಾಪರ ನಡವಳಿಕೆಯು ಘರ್ಷಣೆ ಹಾಗೂ ಒತ್ತಡಭರಿತ ವಾತಾವರಣವನ್ನು ತಟಸ್ಥಗೊಳಿಸಬಲ್ಲದು. ಬೇರೆಯವರ ಕಡೆಗೆ ನೀವು ತುಂಬ ಪರಿಗಣನೆ ತೋರಿಸುತ್ತೀರಿ ಎಂಬ ಖ್ಯಾತಿ ನಿಮಗಿರುವಲ್ಲಿ, ನಿಮ್ಮ ಕಡೆಗೆ ಅವರು ವಿಶೇಷ ಗಮನವನ್ನು ಕೊಡುವರು ಮತ್ತು ನೀವು ಅವರ ಅಂಗೀಕಾರವನ್ನು ಪಡೆಯುವಿರಿ. ಇತರರ ಮೆಚ್ಚಿಕೆಯನ್ನು ಪಡೆಯುವುದು ನಿಮಗೆ ಸಂತೋಷವನ್ನು ತರುತ್ತದಲ್ಲವೊ?​—ಮತ್ತಾಯ 7:​12, ರಿವೈಸ್ಡ್‌ ಇಂಗ್ಲಿಷ್‌ ಬೈಬಲ್‌.

“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದು ಬೈಬಲ್‌ ನಿಮಗೆ ಸಲಹೆ ನೀಡುತ್ತದೆ. ಸ್ವತಃ ನಿಮ್ಮ ಬಗ್ಗೆ ಕಾಳಜಿ ವಹಿಸುವ ಹಾಗೂ ಸಮತೂಕ ಪ್ರಮಾಣದ​—ತೀರ ಹೆಚ್ಚೂ ಅಲ್ಲ, ತೀರ ಕಡಿಮೆಯೂ ಅಲ್ಲದ​—ಸ್ವಗೌರವವನ್ನು ಹೊಂದಿರುವ ಅರ್ಥದಲ್ಲಿ ನೀವು ನಿಮ್ಮನ್ನು ಪ್ರೀತಿಸಿಕೊಳ್ಳುವ ಅಗತ್ಯವಿದೆ. ಇದು ಏಕೆ ಸಹಾಯಕರವಾದದ್ದಾಗಿದೆ? ಒಂದುವೇಳೆ ನಿಮಗೆ ಸ್ವಗೌರವ ಇಲ್ಲದಿರುವಲ್ಲಿ, ನೀವು ಇತರರನ್ನು ತುಂಬ ಟೀಕಿಸುವವರಾಗಿರುವಿರಿ ಮತ್ತು ಇದು ಇತರರೊಂದಿಗೆ ಒಳ್ಳೆಯ ಸಂಬಂಧಗಳನ್ನು ಹೊಂದಲು ಒಂದು ತಡೆಯಂತಿರುತ್ತದೆ. ಆದರೆ ಸಮತೂಕ ಮಟ್ಟದ ಸ್ವಗೌರವವು ಒಂದು ತಳಪಾಯವಾಗಿದ್ದು, ನೀವು ಅದರ ಮೇಲೆ ಬಲವಾದ ಸ್ನೇಹಸಂಬಂಧಗಳನ್ನು ಕಟ್ಟಸಾಧ್ಯವಿದೆ.​—ಮತ್ತಾಯ 22:39.

ಒಮ್ಮೆ ಸ್ನೇಹಸಂಬಂಧವು ಆರಂಭವಾದ ಬಳಿಕ, ಎರಡೂ ಕಡೆಯಿಂದ ಪ್ರಯತ್ನವನ್ನು ಮಾಡುವ ಮೂಲಕ ಆ ಸ್ನೇಹವನ್ನು ಇನ್ನಷ್ಟು ಬಲಗೊಳಿಸುವ ಅಗತ್ಯವಿದೆ. ಒಂದು ಸ್ನೇಹಸಂಬಂಧದಲ್ಲಿ ಸಮಯವನ್ನು ಬಂಡವಾಳವಾಗಿ ಹೂಡುವುದು ನಿಮಗೆ ಸಂತೋಷವನ್ನು ತರುವುದು. ಏಕೆಂದರೆ, “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” ಒಂದು ರೀತಿಯ ಕೊಡುವಿಕೆಯು ಕ್ಷಮಾಪಣೆಯಾಗಿದೆ; ಇದರಲ್ಲಿ ಇತರರು ಮಾಡುವ ಚಿಕ್ಕಪುಟ್ಟ ತಪ್ಪುಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಮತ್ತು ಇತರರಿಂದ ಪರಿಪೂರ್ಣತೆಯನ್ನು ನಿರೀಕ್ಷಿಸದಿರುವುದು ಒಳಗೂಡಿದೆ. ಬೈಬಲು ನಮಗೆ ಹೇಳುವುದು: “ನಿಮ್ಮ ಸೈರಣೆಯು [“ವಿವೇಚನಾಶಕ್ತಿಯು,” NW] ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.” ಹೌದು, “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” ನಿಮ್ಮ ಮಿತ್ರನು ನಿಮ್ಮ ಬಲಹೀನತೆಗಳಲ್ಲಿ ಒಂದನ್ನು ನಿಮ್ಮ ಗಮನಕ್ಕೆ ತರುವಲ್ಲಿ ಆಗೇನು? ನೀವು ಹೇಗೆ ಪ್ರತಿಕ್ರಿಯಿಸುವಿರಿ? ಬೈಬಲಿನ ಈ ಪ್ರಾಯೋಗಿಕ ಸಲಹೆಯನ್ನು ಪರಿಗಣಿಸಿರಿ: ‘ನಿಮ್ಮ ಮನಸ್ಸು ಕೋಪಕ್ಕೆ ಆತುರಪಡದಿರಲಿ,’ ಏಕೆಂದರೆ “ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ.” ನಿಮ್ಮ ಆಲೋಚನೆಗಳು, ಮಾತು ಮತ್ತು ನಡವಳಿಕೆಯ ಮೇಲೆ ಮಿತ್ರರು ಪ್ರಭಾವ ಬೀರುತ್ತಾರೆ ಎಂಬುದು ನಿಜವಲ್ಲವೋ? ಆದುದರಿಂದಲೇ ಬೈಬಲ್‌ ಎಚ್ಚರಿಕೆ ನೀಡುವುದು: “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” ಇನ್ನೊಂದು ಕಡೆಯಲ್ಲಿ, “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು.”​—ಅ. ಕೃತ್ಯಗಳು 20:​35, NW; ಫಿಲಿಪ್ಪಿ 4:5; ರೋಮಾಪುರ 12:​17, 18; ಪ್ರಸಂಗಿ 7:9; ಜ್ಞಾನೋಕ್ತಿ 13:20; 27:6; 1 ಕೊರಿಂಥ 15:33.

ಅನೇಕ ಯುವಕ ಯುವತಿಯರನ್ನು ಪ್ರತಿನಿಧಿಸುತ್ತಾ ಮಾರ್ಕೊ ಹೀಗೆ ಹೇಳುತ್ತಾನೆ: “ಇತರರೊಂದಿಗೆ ಹೊಂದಿಕೊಂಡು ಹೋಗುವುದರಲ್ಲಿ ಬೈಬಲ್‌ ಮೂಲತತ್ತ್ವಗಳು ತುಂಬ ಸಹಾಯಮಾಡುತ್ತವೆ. ನನಗೆ ಗೊತ್ತಿರುವ ಕೆಲವು ಜನರು ತೀರ ಸ್ವಾರ್ಥಮಗ್ನರಾಗಿದ್ದಾರೆ ಮತ್ತು ಜೀವಿತದಿಂದ ಪಡೆದುಕೊಳ್ಳಸಾಧ್ಯವಿರುವ ವೈಯಕ್ತಿಕ ಪ್ರಯೋಜನದ ಕುರಿತು ಮಾತ್ರ ಚಿಂತಿಸುತ್ತಾರೆ. ಆದರೆ, ಸ್ವತಃ ನಮ್ಮ ಕುರಿತಾಗಿ ಅಲ್ಲ ಬದಲಾಗಿ ಇತರರ ಕುರಿತಾಗಿ ಆಲೋಚಿಸುವಂತೆ ಬೈಬಲ್‌ ನಮಗೆ ಕಲಿಸುತ್ತದೆ. ನನಗೆ ಗೊತ್ತಿರುವ ಮಟ್ಟಿಗೆ, ಒಳ್ಳೆಯ ಮಾನವ ಸಂಬಂಧಗಳಿಗೆ ಅದೇ ಅತ್ಯುತ್ತಮ ಮಾರ್ಗವಾಗಿದೆ.”

ಮಾರ್ಕೊನಂಥ ಯುವ ಜನರು ಬೈಬಲಿನಿಂದ ಕಲಿತುಕೊಳ್ಳುವ ವಿಷಯಗಳು, ಅವರ ಯುವ ಪ್ರಾಯದಲ್ಲಿ ಮಾತ್ರವಲ್ಲ ಮುಂಬರುವ ವರ್ಷಗಳಲ್ಲಿಯೂ ಅವರಿಗೆ ಸಹಾಯಮಾಡುತ್ತವೆ. ಇದಲ್ಲದೆ, ಭವಿಷ್ಯತ್ತಿನ ವಿಷಯದಲ್ಲಿ ಯುವ ಪೀಳಿಗೆಗೆ ಬೈಬಲ್‌ ವಿಶೇಷ ಸಹಾಯಕವಾಗಿರಲು ಸಾಧ್ಯವಿರುವಂತಹ ಇನ್ನೊಂದು ವಿಧವನ್ನು ನಾವು ಕಂಡುಕೊಳ್ಳುತ್ತೇವೆ.

ಭವಿಷ್ಯದ ಕುರಿತಾದ ಚಿಂತೆ

ಅನೇಕ ಯುವ ಜನರು ಕುತೂಹಲ ಸ್ವಭಾವದವರಾಗಿದ್ದಾರೆ. ಬಹುಶಃ ಬೇರೆ ಯಾವುದೇ ವಯಸ್ಸಿನ ಜನರಿಗಿಂತಲೂ ಹೆಚ್ಚಾಗಿ ಯುವ ಜನರು, ಏನು ಸಂಭವಿಸುತ್ತಿದೆ ಮತ್ತು ಏಕೆ ಸಂಭವಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಮತ್ತು ಬೇರೆ ಯಾವುದೇ ಪುಸ್ತಕಕ್ಕಿಂತಲೂ ಹೆಚ್ಚಾಗಿ ಬೈಬಲು, ಲೋಕದ ಪರಿಸ್ಥಿತಿಗಳಿಗೆ ಕಾರಣಗಳೇನು ಎಂಬುದನ್ನು ವಿವರಿಸುತ್ತದೆ ಹಾಗೂ ಭವಿಷ್ಯದಲ್ಲಿ ಏನನ್ನು ನಿರೀಕ್ಷಿಸಸಾಧ್ಯವಿದೆ ಎಂಬುದನ್ನು ಸಹ ನಮಗೆ ತಿಳಿಸುತ್ತದೆ. ಇಂದಿನ ಯುವ ಪೀಳಿಗೆಯು ಇದನ್ನೇ ತಿಳಿದುಕೊಳ್ಳಲು ಬಯಸುತ್ತದೆ. ಇದನ್ನು ನಾವು ಏಕೆ ಖಂಡಿತವಾಗಿಯೂ ಹೇಳಬಹುದು?

ಯುವ ಜನರಿಗೆ ಇವತ್ತಿಗೆ ಮಾತ್ರ ಜೀವಿಸುವ ಮನೋಭಾವವಿರುತ್ತದೆ ಎಂದು ವ್ಯಾಪಕವಾಗಿ ನಂಬಲಾಗುತ್ತದಾದರೂ, ಕೆಲವು ಸಮೀಕ್ಷೆಗಳು ಸ್ವಲ್ಪ ಭಿನ್ನವಾದ ಚಿತ್ರಣವನ್ನು ಬಯಲುಪಡಿಸುತ್ತವೆ. ಅನೇಕವೇಳೆ ಯುವ ಜನರು ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ತುಂಬ ಜಾಗರೂಕತೆಯಿಂದ ಗಮನಿಸುತ್ತಾರೆ ಮತ್ತು ಭವಿಷ್ಯದಲ್ಲಿ ಜೀವನವು ಹೇಗಿರಬಹುದು ಎಂಬುದರ ಕುರಿತು ತಮ್ಮದೇ ಆದ ನಿರ್ಣಯಗಳಿಗೆ ಬರುತ್ತಾರೆ ಎಂದು ಅವು ತೋರಿಸುತ್ತವೆ. ಇದಕ್ಕೆ ಪುರಾವೆಯೇನೆಂದರೆ, 4 ಮಂದಿ ಯುವಕ ಯುವತಿಯರಲ್ಲಿ 3 ಮಂದಿ, ಭವಿಷ್ಯದ ಕುರಿತು “ಆಗಿಂದಾಗ್ಗೆ” ಅಥವಾ “ತೀರ ಆಗಿಂದಾಗ್ಗೆ” ಆಲೋಚಿಸುತ್ತಾರೆ. ಸರ್ವಸಾಮಾನ್ಯವಾಗಿ ಯುವ ಜನರು ಆಶಾವಾದಿಗಳಾಗಿರುತ್ತಾರಾದರೂ, ಅವರಲ್ಲಿ ಅಧಿಕಾಂಶ ಮಂದಿಗೆ ಭವಿಷ್ಯದ ಬಗ್ಗೆ ಚಿಂತೆಯಿದೆ.

ಏಕೆ ಈ ಚಿಂತೆ? ಇಂದಿನ ಅನೇಕ ಯುವ ಜನರಿಗೆ ಈಗಾಗಲೇ ದುಷ್ಕೃತ್ಯ, ಹಿಂಸಾಚಾರ, ಮತ್ತು ಅಮಲೌಷಧದ ದುರುಪಯೋಗದ ವಿಷಯದಲ್ಲಿ ಸಮಸ್ಯೆಯಿದೆ. ಅತ್ಯಂತ ಸ್ಪರ್ಧಾತ್ಮಕ ಸಮಾಜದಲ್ಲಿ ಭದ್ರವಾದ ಉದ್ಯೋಗವನ್ನು ಪಡೆದುಕೊಳ್ಳುವುದರ ಕುರಿತು ಯುವ ಜನರು ಚಿಂತಿಸುತ್ತಾರೆ. ಶಾಲೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಅಥವಾ ತಮ್ಮ ಕೆಲಸದಲ್ಲಿ ತುಂಬ ಯಶಸ್ಸನ್ನು ಸಾಧಿಸುವ ಒತ್ತಡ ಅವರ ಮೇಲಿರುತ್ತದೆ. 17 ವರ್ಷ ಪ್ರಾಯದ ಒಬ್ಬ ಯುವತಿಯು ಪ್ರಲಾಪಿಸಿದ್ದು: “ತುಂಬ ಪೈಪೋಟಿಯಿರುವಂತಹ ಒಂದು ಸಮಾಜದಲ್ಲಿ ನಾವು ಜೀವಿಸುತ್ತಿದ್ದೇವೆ. ಪ್ರತಿಯೊಬ್ಬನೂ ತನಗೆ ಇಷ್ಟಬಂದದ್ದನ್ನೇ ಮಾಡಲು ಬಯಸುತ್ತಾನೆ. ನೀವೇನು ಮಾಡಲು ಶಕ್ತರಾಗಿದ್ದೀರೋ ಅದನ್ನು ನೀವು ಯಾವಾಗಲೂ ಮಾಡಿ ತೋರಿಸಬೇಕು, ಮತ್ತು ಇದರಿಂದಾಗಿ ನಾನು ರೋಸಿಹೋಗಿದ್ದೇನೆ.” 22 ವರ್ಷ ಪ್ರಾಯದ ಇನ್ನೊಬ್ಬ ಯುವಕನು ಹೇಳಿದ್ದು: “ಜಯಶಾಲಿ ವ್ಯಕ್ತಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ನೆಮ್ಮದಿಯಿಂದ ಹಾಯಾಗಿ ಬದುಕಬಲ್ಲರು. ಬೇರೆ ಬೇರೆ ಕಾರಣಗಳಿಂದಾಗಿ ಜೀವನದಲ್ಲಿ ಯಶಸ್ಸನ್ನು ಪಡೆಯದಂತಹ ನತದೃಷ್ಟ ಜನರು ಮಾತ್ರ, ಸಾಧನೆಯ ಹಾದಿಯಲ್ಲಿ ತೀರ ಹಿಂದೆ ಉಳಿದುಬಿಡುತ್ತಾರೆ.” ಜೀವನವು ಏಕೆ ಇಷ್ಟು ಸ್ಪರ್ಧಾತ್ಮಕವಾಗಿದೆ? ಜೀವನವು ಯಾವಾಗಲೂ ಇದೇ ರೀತಿ ಇರುವುದೋ?

ವಾಸ್ತವಿಕ ವಿವರಣೆ

ಯುವ ಜನರು ಸಮಾಜದ ಕಡೆಗೆ ಗಾಬರಿ ಅಥವಾ ಕಳವಳದ ನೋಟವನ್ನು ಹರಿಸುವಾಗ, ತಮಗರಿವಿದ್ದೋ ಅರಿವಿಲ್ಲದೆಯೋ ಬೈಬಲಿನೊಂದಿಗೆ ಅವರು ಸಮ್ಮತಿಸುತ್ತಿದ್ದಾರೆ. ಇಂದಿನ ‘ಪೈಪೋಟಿಯಿಂದ ಕೂಡಿರುವ ಸಮಾಜವು’ ಈ ಸಮಯಗಳ ಒಂದು ಸೂಚನೆಯಾಗಿದೆ ಎಂದು ದೇವರ ವಾಕ್ಯವು ತೋರಿಸುತ್ತದೆ. ತಿಮೊಥೆಯ ಎಂಬ ಹೆಸರಿನ ಯೌವನಸ್ಥನಿಗೆ ಅಪೊಸ್ತಲ ಪೌಲನು ಒಂದು ಪತ್ರದಲ್ಲಿ ನಮ್ಮ ದಿನದ ಕುರಿತು ಹೀಗೆ ಬರೆದನು: “ನಿಭಾಯಿಸಲು ಕಷ್ಟಕರವಾದ ಕಠಿನ ಕಾಲಗಳು ಬರುವವು.” ಅವು ಏಕೆ ಕಠಿನವೂ ನಿಭಾಯಿಸಲು ಕಷ್ಟಕರವಾದವುಗಳೂ ಆಗಿರುವವು? ಏಕೆಂದರೆ, ಪೌಲನು ಬರೆದಂತೆ, ಜನರು “ಸ್ವಾರ್ಥಿಗಳು, ಹಣದಾಸೆಯವರು, ಬಡಾಯಿಕೊಚ್ಚುವವರು, ಅಹಂಕಾರಿಗಳು, . . . ಕೃತಘ್ನರು, ದ್ರೋಹಿಗಳು, . . . ಕಠೋರರು” ಆಗಿರುವರು. ಇಂದು ಅನೇಕ ಜನರ ವರ್ತನೆಯ ನಿಷ್ಕೃಷ್ಟ ವರ್ಣನೆ ಇದಾಗಿರುವುದಿಲ್ಲವೋ?​—2 ತಿಮೊಥೆಯ 3:​1-3, NW.

“ಕಡೇ ದಿವಸಗಳಲ್ಲಿ,” ಅಂದರೆ ಇಡೀ ಮಾನವ ಸಮಾಜದ ಮೇಲೆ ಪ್ರಮುಖ ಬದಲಾವಣೆಗಳು ತರಲ್ಪಡುವ ಮುಂಚೆ ಕಷ್ಟಕರವಾದ ಈ ಕಾಲಗಳು ಸಂಭವಿಸುವವು ಎಂದು ಬೈಬಲ್‌ ಹೇಳುತ್ತದೆ. ಈ ಬದಲಾವಣೆಗಳು ಪ್ರತಿಯೊಬ್ಬರ ಮೇಲೆ, ಅಂದರೆ ಎಳೆಯರು ಹಾಗೂ ವೃದ್ಧರೆಲ್ಲರ ಮೇಲೆ ಪರಿಣಾಮ ಬೀರುತ್ತವೆ. ಯಾವ ರೀತಿಯ ಬದಲಾವಣೆಗಳು? ಸ್ವಲ್ಪದರಲ್ಲೇ, ಮಾನವ ವ್ಯವಹಾರಗಳ ಮೇಲಿನ ಆಳ್ವಿಕೆಯನ್ನು ಒಂದು ಸ್ವರ್ಗೀಯ ಸರಕಾರವು ವಹಿಸಿಕೊಳ್ಳುವುದು ಮತ್ತು ಎಲ್ಲೆಡೆಯೂ ಅದರ ಪ್ರಜೆಗಳು “ಮಹಾಸೌಖ್ಯದಿಂದ ಆನಂದಿಸುವರು.” “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” ಆ ಸಮಯದಲ್ಲಿ, ಚಿಂತೆ ಹಾಗೂ ಭಯದ ಅನಿಸಿಕೆಗಳು ಗತಕಾಲದ ಸಂಗತಿಗಳಾಗಿರುವವು.​—ಕೀರ್ತನೆ 37:​11, 29.

ಭವಿಷ್ಯದ ವಿಷಯದಲ್ಲಿ ಬೈಬಲ್‌ ಮಾತ್ರ ವಿಶ್ವಾಸಾರ್ಹ ಒಳನೋಟವನ್ನು ಕೊಡುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ಒಬ್ಬ ಯುವ ವ್ಯಕ್ತಿಯು ತಿಳಿದುಕೊಂಡಿರುವಾಗ, ಆ ಬೆಳವಣಿಗೆಗಳಿಗಾಗಿ ಅವನು ಸಿದ್ಧತೆಯನ್ನು ಮಾಡಿಕೊಳ್ಳಸಾಧ್ಯವಿದೆ ಮತ್ತು ತನ್ನ ಜೀವಿತವು ಭದ್ರವಾಗಿದೆ ಮತ್ತು ಎಲ್ಲವೂ ನಿಯಂತ್ರಣದಲ್ಲಿದೆ ಎಂಬ ಅನಿಸಿಕೆ ಅವನಿಗಿರಸಾಧ್ಯವಿದೆ. ಈ ಅನಿಸಿಕೆಯು ಒತ್ತಡ ಹಾಗೂ ಚಿಂತೆಯನ್ನು ಕಡಿಮೆಮಾಡುತ್ತದೆ. ಈ ರೀತಿಯಲ್ಲಿ, ತಮ್ಮ ಸುತ್ತಲಿರುವ ಸಮಾಜವನ್ನು ಅರ್ಥಮಾಡಿಕೊಳ್ಳುವ ಹಾಗೂ ಭವಿಷ್ಯದಲ್ಲಿ ಏನು ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳುವ ಯುವ ಪೀಳಿಗೆಯ ವಿಶೇಷ ಆವಶ್ಯಕತೆಗೆ ಬೈಬಲಿನಲ್ಲಿ ಗಮನಕೊಡಲಾಗಿದೆ.

ಯೌವನದಲ್ಲಿ ಯಶಸ್ಸು

ಒಬ್ಬ ವ್ಯಕ್ತಿಯು ಯೌವನದಲ್ಲಿ ಯಶಸ್ಸನ್ನು ಪಡೆದಿದ್ದಾನೋ ಎಂಬುದನ್ನು ಹೇಗೆ ಅಳೆಯುವಿರಿ? ಒಬ್ಬನ ಉಚ್ಚ ಮಟ್ಟದ ಶಿಕ್ಷಣದಿಂದಲೋ, ಭೌತಿಕ ಸುಖಸಂಪತ್ತುಗಳಿಂದಲೋ, ಅವನಿಗಿರುವ ಗೆಳೆಯರ ದೊಡ್ಡ ಬಳಗದಿಂದಲೋ? ಅನೇಕರು ಹೀಗೆ ನೆನಸಬಹುದು. ಹದಿಪ್ರಾಯದ ವರ್ಷಗಳು ಮತ್ತು 20ಗಳ ಆರಂಭದ ವರ್ಷಗಳು, ಮುಂದಿನ ಜೀವಿತಕ್ಕಾಗಿ ಒಬ್ಬ ವ್ಯಕ್ತಿಗೆ ಒಳ್ಳೆಯ ಆರಂಭವನ್ನು ಒದಗಿಸತಕ್ಕದ್ದು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯೌವನದಲ್ಲಿ ಪಡೆದುಕೊಳ್ಳುವ ಯಶಸ್ಸು, ಮುಂದೆ ಏನು ಸಂಭವಿಸಲಿದೆ ಎಂಬುದರ ಮುನ್ಸೂಚನೆಯಾಗಿರಬಹುದು.

ನಾವೀಗಾಗಲೇ ನೋಡಿರುವಂತೆ, ಒಬ್ಬ ಯುವ ವ್ಯಕ್ತಿಯು ತನ್ನ ಚಿಕ್ಕ ಪ್ರಾಯದಲ್ಲೇ ಯಶಸ್ಸನ್ನು ಪಡೆದುಕೊಳ್ಳುವಂತೆ ಬೈಬಲ್‌ ಅವನಿಗೆ ಸಹಾಯಮಾಡಬಲ್ಲದು. ತಮ್ಮ ಸ್ವಂತ ಜೀವಿತಗಳಲ್ಲಿ ಇದು ಸತ್ಯ ಎಂಬುದನ್ನು ಅನೇಕ ಯುವ ಜನರು ಈಗಾಗಲೇ ಕಂಡುಕೊಂಡಿದ್ದಾರೆ. ಅವರು ದಿನಾಲೂ ದೇವರ ವಾಕ್ಯವನ್ನು ಓದುತ್ತಾರೆ ಮತ್ತು ತಾವು ಕಲಿಯುವಂತಹ ವಿಷಯಗಳನ್ನು ಜೀವಿತದಲ್ಲಿ ಅನ್ವಯಿಸಿಕೊಳ್ಳುತ್ತಾರೆ. (6ನೆಯ ಪುಟದಲ್ಲಿರುವ, “ಯೆಹೋವನ ಯುವ ಸೇವಕನೊಬ್ಬನಿಂದ ಪ್ರಯೋಜನಾರ್ಹ ಸಲಹೆ” ಎಂಬ ರೇಖಾಚೌಕವನ್ನು ನೋಡಿ.) ವಾಸ್ತವದಲ್ಲಿ, ನಿಜವಾಗಿಯೂ ಬೈಬಲ್‌ ಇಂದಿನ ಯುವ ಜನರಿಗಾಗಿರುವ ಒಂದು ಪುಸ್ತಕವಾಗಿದೆ. ಏಕೆಂದರೆ ಇದು ಅವರು ‘ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧರಾಗುವಂತೆ’ ಮಾಡಬಲ್ಲದು.​—2 ತಿಮೊಥೆಯ 3:​16, 17.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೌವನದಲ್ಲಿ ಯಶಸ್ಸನ್ನು ಪಡೆಯುವ ಕೀಲಿ ಕೈಗಳಲ್ಲಿ ಒಂದು, ಇತರರೊಂದಿಗೆ ಹೊಂದಿಕೊಂಡು ಹೋಗುವುದೇ ಆಗಿದೆ

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಬಹುಶಃ ಬೇರೆ ಯಾವುದೇ ವಯಸ್ಸಿನ ಜನರಿಗಿಂತಲೂ ಹೆಚ್ಚಾಗಿ ಯುವ ಜನರು, ಏನು ಸಂಭವಿಸುತ್ತಿದೆ ಮತ್ತು ಏಕೆ ಸಂಭವಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ

[ಪುಟ 6, 7ರಲ್ಲಿರುವ ಚೌಕ]

ಯೆಹೋವನ ಯುವ ಸೇವಕನೊಬ್ಬನಿಂದ ಪ್ರಯೋಜನಾರ್ಹ ಸಲಹೆ

ಅಲೆಕ್ಸಾಂಡರ್‌ 19 ವರ್ಷ ಪ್ರಾಯದವನಾಗಿದ್ದಾನೆ. ಅವನು ಯೆಹೋವನ ಸಾಕ್ಷಿಗಳ ಒಂದು ಕುಟುಂಬದಲ್ಲಿ ಬೆಳೆಸಲ್ಪಟ್ಟಿದ್ದು, ತನ್ನ ನಂಬಿಕೆಯನ್ನು ಮನಃಪೂರ್ವಕವಾಗಿ ಅನುಸರಿಸುವುದರಲ್ಲಿ ಸಂಪೂರ್ಣವಾಗಿ ಆನಂದಿಸುತ್ತಿದ್ದಾನೆ. ಆದರೆ ಸನ್ನಿವೇಶವು ಯಾವಾಗಲೂ ಹೀಗೆಯೇ ಇರಲಿಲ್ಲ. ಅಲೆಕ್ಸಾಂಡರ್‌ ವಿವರಿಸುವುದು:

“ಏಳಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ನಾನು ಅಸ್ನಾತ ಯುವಕನೋಪಾದಿ ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸಿದೆ ಎಂಬುದು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಆ ಸಮಯದಲ್ಲಿ, ನನ್ನ ಆರಾಧನೆಯು ಅರೆಮನಸ್ಸಿನದ್ದಾಗಿತ್ತು, ಅಂದರೆ ಕೇವಲ ಯಾಂತ್ರಿಕವಾಗಿತ್ತು. ಪ್ರಾಮಾಣಿಕ ರೀತಿಯಲ್ಲಿ ನನ್ನನ್ನು ನಾನೇ ಪರೀಕ್ಷಿಸಿಕೊಳ್ಳಲು ನನಗೆ ಧೈರ್ಯವೇ ಇರಲಿಲ್ಲವೇನೋ ಎಂದು ನನಗನಿಸುತ್ತದೆ.”

ತದನಂತರ ಅಲೆಕ್ಸಾಂಡರ್‌ನ ಮನೋಭಾವವು ಬದಲಾಯಿತು. ಅವನು ಮುಂದುವರಿಸುವುದು:

“ದಿನಾಲೂ ಬೈಬಲ್‌ ಓದುವಂತೆ, ಯೆಹೋವನನ್ನು ವೈಯಕ್ತಿಕವಾಗಿ ತಿಳಿದುಕೊಳ್ಳುವಂತೆ ನನ್ನ ಹೆತ್ತವರು ಮತ್ತು ಸಭೆಯಲ್ಲಿರುವ ಸ್ನೇಹಿತರು ನನ್ನನ್ನು ಉತ್ತೇಜಿಸುತ್ತಿದ್ದರು. ಕೊನೆಗೆ ಇದನ್ನು ಪ್ರಯತ್ನಿಸಿ ನೋಡಲು ನಾನು ನಿರ್ಧರಿಸಿದೆ. ಆದುದರಿಂದ, ಟೆಲಿವಿಷನ್‌ ನೋಡುವುದನ್ನು ಕಡಿಮೆಮಾಡಿದೆ ಮತ್ತು ಬೈಬಲ್‌ ವಾಚನವನ್ನು ಪ್ರತಿ ದಿನ ಬೆಳಗ್ಗಿನ ನಿಯತಕ್ರಮದ ಒಂದು ಭಾಗವಾಗಿ ಮಾಡಿಕೊಂಡೆ. ಕೊನೆಗೂ ಬೈಬಲಿನಲ್ಲಿ ಏನೆಲ್ಲಾ ಒಳಗೂಡಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ಆರಂಭಿಸಿದೆ. ನನಗೆ ವೈಯಕ್ತಿಕವಾಗಿ ಇದು ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಮನಗಾಣಲಾರಂಭಿಸಿದೆ. ಮತ್ತು, ಎಲ್ಲಕ್ಕಿಂತಲೂ ಮಿಗಿಲಾಗಿ, ನಾನು ಆತನ ಕುರಿತು ತಿಳಿದುಕೊಳ್ಳುವಂತೆ ಯೆಹೋವನು ಬಯಸುತ್ತಾನೆ ಎಂಬುದನ್ನು ಅರಿತುಕೊಂಡೆ. ಈ ವಿಚಾರವನ್ನು ನಾನು ಹೃದಯಕ್ಕೆ ತೆಗೆದುಕೊಂಡಾಗ, ಆತನೊಂದಿಗಿನ ನನ್ನ ವೈಯಕ್ತಿಕ ಸಂಬಂಧವು ಇನ್ನಷ್ಟು ಬೆಳೆಯಲಾರಂಭಿಸಿತು ಮತ್ತು ಸಭೆಯೊಳಗಿನ ಸ್ನೇಹಸಂಬಂಧಗಳು ಸಹ ಉತ್ತಮಗೊಂಡವು. ನನ್ನ ಜೀವನದಲ್ಲಿ ಬೈಬಲ್‌ ಎಂತಹ ಒಂದು ವ್ಯತ್ಯಾಸವನ್ನು ಉಂಟುಮಾಡಿದೆ! ಯೆಹೋವನ ಪ್ರತಿಯೊಬ್ಬ ಯುವ ಸೇವಕನು ದಿನಾಲೂ ಬೈಬಲನ್ನು ಓದುವಂತೆ ನಾನು ಶಿಫಾರಸ್ಸುಮಾಡುತ್ತೇನೆ.”

ಲೋಕದಾದ್ಯಂತ ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಮಾಡುವಂತಹ ಲಕ್ಷಾಂತರ ಯುವ ಜನರಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದೀರೋ? ಬೈಬಲನ್ನು ಕ್ರಮವಾಗಿ ಓದುವ ಮೂಲಕ ನೀವು ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುವಿರೋ? ಹಾಗಾದರೆ, ಅಲೆಕ್ಸಾಂಡರನ ಮಾದರಿಯನ್ನು ನೀವು ಏಕೆ ಅನುಸರಿಸಬಾರದು? ಹೆಚ್ಚು ಪ್ರಾಮುಖ್ಯವಾಗಿರದಂತಹ ಚಟುವಟಿಕೆಗಳನ್ನು ಕಡಿಮೆಮಾಡಿರಿ ಮತ್ತು ಬೈಬಲ್‌ ವಾಚನವನ್ನು ನಿಮ್ಮ ದೈನಂದಿನ ನಿಯತಕ್ರಮದ ಒಂದು ಭಾಗವಾಗಿ ಮಾಡಿಕೊಳ್ಳಿರಿ. ಖಂಡಿತವಾಗಿಯೂ ನೀವು ಪ್ರಯೋಜನವನ್ನು ಪಡೆದುಕೊಳ್ಳುವಿರಿ.