ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೆಳಕಿನ ನಗರದಲ್ಲಿ ಜ್ಯೋತಿರ್ಮಂಡಲಗಳಾಗಿ ಹೊಳೆಯುವುದು

ಬೆಳಕಿನ ನಗರದಲ್ಲಿ ಜ್ಯೋತಿರ್ಮಂಡಲಗಳಾಗಿ ಹೊಳೆಯುವುದು

ಬೆಳಕಿನ ನಗರದಲ್ಲಿ ಜ್ಯೋತಿರ್ಮಂಡಲಗಳಾಗಿ ಹೊಳೆಯುವುದು

ಫ್ಲ್ಯುಕ್‌ಟುವಾಟ್‌ ನೆಕ್‌ ಮೆರ್‌ಗೀಟುರ್‌, ಅಥವಾ “ಅಲೆಗಳಿಂದ ಅಪ್ಪಳಿಸಲ್ಪಟ್ಟರೂ ಅವಳು ಮುಳುಗಿಹೋಗುವುದಿಲ್ಲ” ಎಂಬುದೇ ಪ್ಯಾರಿಸ್‌ ನಗರದ ಧ್ಯೇಯಮಂತ್ರವಾಗಿದೆ.

ಪ್ಯಾರಿಸ್‌ ನಗರವು ಒಂದು ನೌಕೆಯಂತೆ, ಗತ 2,000 ವರ್ಷಗಳಲ್ಲಿ, ಎಣಿಸಲಾಗದಷ್ಟು ಚಂಡಮಾರುತಗಳೋಪಾದಿ ಬಂದ ವಿದೇಶೀಯರ ಆಕ್ರಮಣಗಳನ್ನು ಮತ್ತು ಆಂತರಿಕ ದಂಗೆಗಳನ್ನು ಧೈರ್ಯದಿಂದ ಎದುರಿಸಿಕೊಂಡು ಪಾರಾಗಿ ಉಳಿದಿದೆ. ಈಗ ಲೋಕದ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದಾದ ಪ್ಯಾರಿಸ್‌, ಅದರ ಭವ್ಯವಾದ ವಾಸ್ತುಶಿಲ್ಪ, ಸಾಲುಮರಗಳುಳ್ಳ ವಿಶಾಲವಾದ ಹೆದ್ದಾರಿಗಳು, ಮತ್ತು ಜಗತ್ಪ್ರಸಿದ್ಧ ಮ್ಯೂಸಿಯಮ್‌ಗಳಿಗಾಗಿ ಜನಪ್ರಿಯವಾಗಿದೆ. ಇದು ಕವಿಗಳಿಂದ, ಚಿತ್ರಕಾರರಿಂದ, ಮತ್ತು ತತ್ತ್ವಜ್ಞಾನಿಗಳಿಂದ ಪದೇ ಪದೇ ಸಂದರ್ಶಿಸಲ್ಪಡುವ ಸ್ಥಳವಾಗಿದೆ ಎಂಬುದು ಕೆಲವರ ಅನಿಸಿಕೆಯಾಗಿದೆ. ಇನ್ನಿತರರು, ಅದರ ರುಚಿಕರ ಆಹಾರವನ್ನು ಆಸ್ವಾದಿಸುತ್ತಾರೆ ಮತ್ತು ಅದರ ಉತ್ತಮ ಫ್ಯಾಷನ್‌ನ ಉಡುಪುಗಳ ತಯಾರಿಕೆಯನ್ನು ಮೆಚ್ಚುತ್ತಾರೆ.

ಐತಿಹಾಸಿಕವಾಗಿ, ಪ್ಯಾರಿಸ್‌ ಕ್ಯಾಥೊಲಿಕ್‌ ಧರ್ಮದ ಸುಭದ್ರ ನೆಲೆಯಾಗಿತ್ತು. ಇನ್ನೂರು ವರ್ಷಗಳ ಹಿಂದೆ, ದಿ ಎನ್‌ಲೈಟನ್‌ಮೆಂಟ್‌ ಎಂಬ ಯೂರೋಪಿಯನ್‌ ಜ್ಞಾನವಂತರ ಚಳುವಳಿಯಲ್ಲಿ ಪ್ಯಾರಿಸ್‌ ಒಂದು ಬಹುಪ್ರಾಮುಖ್ಯವಾದ ಪಾತ್ರವನ್ನು ವಹಿಸಿದ್ದ ಕಾರಣ, ಅದಕ್ಕೆ ಬೆಳಕಿನ ನಗರವೆಂಬ ಹೆಸರು ಬಂತು. ಇಂದು, ತಿಳಿದೊ ತಿಳಿಯದೆಯೋ, ಪ್ಯಾರಿಸ್‌ನ ಜನರಲ್ಲಿ ಅನೇಕರು ಧರ್ಮಕ್ಕಿಂತಲೂ ಹೆಚ್ಚಾಗಿ ಆ ಕಾಲಾವಧಿಯ ತತ್ತ್ವಜ್ಞಾನದಿಂದ ಪ್ರಭಾವಿಸಲ್ಪಟ್ಟಿದ್ದಾರೆ.

ಆದರೂ, ಮಾನವನ ವಿವೇಕವು ನಿರೀಕ್ಷಿಸಲ್ಪಟ್ಟಂಥ ರೀತಿಯಲ್ಲಿ ಜನರ ಜೀವಿತಗಳನ್ನು ಬೆಳಗಿಸಿಲ್ಲ. ಆದುದರಿಂದ, ಇಂದು ಅನೇಕರು ಬೇರೊಂದು ಮೂಲದಿಂದ ಜ್ಞಾನೋದಯಕ್ಕಾಗಿ ಹುಡುಕುತ್ತಿದ್ದಾರೆ. ಸುಮಾರು 90 ವರ್ಷಗಳಿಂದ, ಯೆಹೋವನ ಸಾಕ್ಷಿಗಳು ಪ್ಯಾರಿಸ್‌ನಲ್ಲಿ ‘ಜ್ಯೋತಿರ್ಮಂಡಲಗಳಂತೆ ಹೊಳೆಯುತ್ತಿದ್ದಾರೆ.’ (ಫಿಲಿಪ್ಪಿ 2:16) ‘ಸಮಸ್ತಜನಾಂಗಗಳ ಇಷ್ಟವಸ್ತುಗಳನ್ನು’ ನಾವೆಯಲ್ಲಿ ತುಂಬಿಸಿಕೊಳ್ಳಲಿಕ್ಕಾಗಿ, ಅವರು ನಿಪುಣ ನಾವಿಕರಂತೆ ಸದಾ ಬದಲಾಗುತ್ತಿರುವ ಪ್ರವಾಹಗಳಿಗೆ ಅಥವಾ ಸನ್ನಿವೇಶಗಳಿಗೆ ತಕ್ಕ ಹಾಗೆ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಿತ್ತು.​—ಹಗ್ಗಾಯ 2:7.

ಪಂಥಾಹ್ವಾನವನ್ನೊಡ್ಡುವ ನಗರ

ಹಿಂದೆ 1850ರಲ್ಲಿ, ಪ್ಯಾರಿಸ್‌ 6,00,000 ಮಂದಿ ನಿವಾಸಿಗಳಿಂದ ಕೂಡಿದ್ದ ಒಂದು ನಗರವಾಗಿತ್ತು. ಉಪನಗರಗಳನ್ನೂ ಸೇರಿಸಿ, ಅದರ ಇಂದಿನ ಜನಸಂಖ್ಯೆ, 90 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಈ ಬೆಳವಣಿಗೆಯು ಪ್ಯಾರಿಸನ್ನು, ಫ್ರಾನ್ಸ್‌ನ ಅತಿ ವೈವಿಧ್ಯಮಯ ನಗರವಾಗಿ ಮಾಡಿದೆ. ಅದು ಉಚ್ಚ ಶಿಕ್ಷಣದ ಲೋಕ ಕೇಂದ್ರವಾಗಿದೆ, ಲೋಕದ ಅತಿ ಪುರಾತನ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಅಲ್ಲಿದೆ, ಮತ್ತು ಸುಮಾರು 2,50,000 ವಿದ್ಯಾರ್ಥಿಗಳಿಗೆ ಅದು ನೆಲೆಯಾಗಿದೆ. ಬಹುಮಹಡಿ ಕಟ್ಟಡಗಳಿಂದ ಕೂಡಿರುವ ಪ್ಯಾರಿಸ್‌ನ ಕೆಲವು ಉಪನಗರಗಳು, ಅಪರಾಧಕೃತ್ಯ ಮತ್ತು ನಿರುದ್ಯೋಗದಿಂದ ಗುರುತಿಸಲ್ಪಟ್ಟು, ಪ್ಯಾರಿಸ್‌ನ ಕರಾಳ ಭಾಗವನ್ನು ಪ್ರತಿನಿಧಿಸುತ್ತವೆ. ಎಲ್ಲ ಮನುಷ್ಯರಿಗೆ ಮನತಟ್ಟುವಂಥ ರೀತಿಯಲ್ಲಿ ಸುವಾರ್ತೆಯನ್ನು ಸಾರುವುದಕ್ಕಾಗಿ ಯೆಹೋವನ ಸಾಕ್ಷಿಗಳಿಗೆ ನಿಪುಣತೆ ಮತ್ತು ಹೊಂದಿಕೊಳ್ಳುವ ಗುಣ ಬೇಕಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.​—1 ತಿಮೊಥೆಯ 4:10.

ಪ್ರತಿ ವರ್ಷ, ಎರಡು ಕೋಟಿಗಿಂತಲೂ ಹೆಚ್ಚು ಪ್ರವಾಸಿಗರು ಪ್ಯಾರಿಸ್‌ಗೆ ಭೇಟಿನೀಡುತ್ತಾರೆ. ಅವರು ಉದ್ವೇಗದಿಂದ ಐಫಲ್‌ ಟವರನ್ನು ಹತ್ತಬಹುದು, ಸೇನ್‌ ನದೀ ತೀರದಲ್ಲಿ ನಡೆಯಬಹುದು ಅಥವಾ ರಸ್ತೆಬದಿಯಲ್ಲಿರುವ ಕೆಫೆಗಳಲ್ಲಿ ಮತ್ತು ಉಪಾಹಾರ ಮಂದಿರಗಳಲ್ಲಿ ಕಾಲಕಳೆಯುತ್ತಾ ಪರಿಸರದ ಸೌಂದರ್ಯವನ್ನು ಆಸ್ವಾದಿಸಬಹುದು. ಆದರೆ, ಪ್ಯಾರಿಸ್‌ನಲ್ಲೇ ಇರುವವರ ದಿನನಿತ್ಯದ ಜೀವನಗತಿಯು ಅತಿ ಬಿರುಸಿನದ್ದಾಗಿರಬಲ್ಲದು.

“ಜನರು ಯಾವಾಗಲೂ ತರಾತುರಿಯಲ್ಲಿರುತ್ತಾರೆ” ಎಂದು ಒಬ್ಬ ಪೂರ್ಣ ಸಮಯದ ಸೇವಕನಾಗಿರುವ ಕ್ರಿಸ್ಟ್‌ಯನ್‌ ವಿವರಿಸುತ್ತಾನೆ. “ಅವರು ಕೆಲಸದಿಂದ ಹಿಂದಿರುಗುವಾಗ, ತುಂಬ ದಣಿದುಹೋಗಿರುತ್ತಾರೆ.” ಈ ಕಾರ್ಯಮಗ್ನ ಜನರೊಂದಿಗೆ ಮಾತಾಡುವುದು ಸುಲಭವಾಗಿರುವುದಿಲ್ಲ.

ಪ್ಯಾರಿಸ್‌ನಲ್ಲಿರುವ ಯೆಹೋವನ ಸಾಕ್ಷಿಗಳು ಎದುರಿಸುವಂಥ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದು, ಜನರನ್ನು ಅವರ ಮನೆಗಳಲ್ಲಿ ಸಂಪರ್ಕಿಸುವುದೇ ಆಗಿದೆ. ಕೆಲವು ಕಟ್ಟಡಗಳಿಗೆ ಇಂಟರ್‌ಕಾಮ್‌ನ ಸೌಲಭ್ಯವಿದೆ. ಆದರೆ ದುಷ್ಕೃತ್ಯವು ಹೆಚ್ಚುತ್ತಿರುವ ಕಾರಣ, ಕೆಲವು ಕಟ್ಟಡಗಳ ಪ್ರವೇಶದ್ವಾರಗಳಲ್ಲಿ ಇಲೆಕ್ಟ್ರಾನಿಕ್‌ ಭದ್ರತಾ ವ್ಯವಸ್ಥೆಗಳಿವೆ, ಆದುದರಿಂದ ಅವುಗಳೊಳಗೆ ಪ್ರವೇಶಿಸುವುದು ಅಸಾಧ್ಯ. ಕೆಲವು ಕ್ಷೇತ್ರಗಳಲ್ಲಿ 1,400 ವ್ಯಕ್ತಿಗಳಿಗೆ ಒಬ್ಬ ಸಾಕ್ಷಿಯ ಪ್ರಮಾಣವು ಏಕೆ ಇದೆ ಎಂಬುದನ್ನು ಇದು ಸ್ಪಷ್ಟವಾಗಿ ವಿವರಿಸುತ್ತದೆ. ಆದುದರಿಂದ, ಟೆಲಿಫೋನ್‌ ಸಾಕ್ಷಿಕಾರ್ಯ ಮತ್ತು ಅನೌಪಚಾರಿಕ ಸಾಕ್ಷಿಯು ಹೆಚ್ಚಾಗಿ ಉಪಯೋಗಿಸಲ್ಪಡುತ್ತದೆ. ಯೆಹೋವನ ಸಾಕ್ಷಿಗಳು ಬೇರಾವುದೇ ವಿಧಗಳಲ್ಲಿ ತಮ್ಮ ‘ಬೆಳಕನ್ನು ಪ್ರಕಾಶಿಸಲು’ ಸಾಧ್ಯವಾಗಿದೆಯೋ?​—ಮತ್ತಾಯ 5:16.

ಅನೌಪಚಾರಿಕ ಸಾಕ್ಷಿಯನ್ನು ಕೊಡಲು ಸಂದರ್ಭಗಳು ಮತ್ತು ಸ್ಥಳಗಳು ಅತ್ಯಧಿಕವಾಗಿವೆ. ಮಾರ್ಟೀನ್‌ ಎಂಬವಳು ಬಸ್‌ ನಿಲ್ದಾಣದಲ್ಲಿ ದುಃಖಿತಳಾಗಿ ನಿಂತಿದ್ದ ಒಬ್ಬ ಸ್ತ್ರೀಯನ್ನು ನೋಡಿದಳು. ಆ ಸ್ತ್ರೀಯು ತನ್ನ ಒಬ್ಬಳೇ ಮಗಳನ್ನು ಇತ್ತೀಚೆಗೆ ಮರಣದಲ್ಲಿ ಕಳೆದುಕೊಂಡಿದ್ದಳು. ಬೈಬಲಿನ ಪುನರುತ್ಥಾನದ ನಂಬಿಕೆಯನ್ನು ಹೊಂದಿರುವ ಒಂದು ಬ್ರೋಷರನ್ನು ಮಾರ್ಟೀನ್‌ ಅವಳಿಗೆ ಕೊಟ್ಟಳು. ನಂತರ ಕೆಲವು ತಿಂಗಳುಗಳಲ್ಲಿ ಮಾರ್ಟೀನ್‌ ಮತ್ತು ಆ ಸ್ತ್ರೀಗೆ ಸಂಪರ್ಕವಿರಲಿಲ್ಲ. ಮಾರ್ಟೀನ್‌ ಆ ಸ್ತ್ರೀಯನ್ನು ಪುನಃ ಭೇಟಿಯಾಗಲು ಸಾಧ್ಯವಾದಾಗ, ಅವಳೊಂದಿಗೆ ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸಲು ಸಾಧ್ಯವಾಯಿತು. ತನ್ನ ಗಂಡನ ವಿರೋಧದ ಮಧ್ಯೆಯೂ, ಆ ಸ್ತ್ರೀಯು ಒಬ್ಬ ಸಾಕ್ಷಿಯಾದಳು.

ಪ್ರತಿಫಲದಾಯಕ ಅನೌಪಚಾರಿಕ ಸಾಕ್ಷಿಕಾರ್ಯ

ಲೋಕದ ಅತಿ ದಕ್ಷ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ, ಪ್ಯಾರಿಸ್‌ನ ಸಾರಿಗೆ ವ್ಯವಸ್ಥೆ ಒಂದಾಗಿದೆ. ಪ್ರಖ್ಯಾತವಾದ ಭೂಗರ್ಭ ರೈಲ್ವೇ ವ್ಯವಸ್ಥೆ (ಮೆಟ್ರೊ)ಯು ದಿನನಿತ್ಯ 50,00,000 ಪ್ರಯಾಣಿಕರನ್ನು ಕೊಂಡೊಯ್ಯುತ್ತದೆ. ಪ್ಯಾರಿಸ್‌ನ ಸೆಂಟ್ರಲ್‌ ಭೂಗರ್ಭ ನಿಲ್ದಾಣವಾದ ಶಾಟ್ಲೇಲೇಆಲ್‌, ಲೋಕದ ಅತಿದೊಡ್ಡ ಮತ್ತು ಅತಿಕಾರ್ಯನಿರತ ನಿಲ್ದಾಣವಾಗಿದೆ ಎಂದು ಹೇಳಲಾಗುತ್ತದೆ. ಜನರನ್ನು ಅಲ್ಲಿ ಭೇಟಿಯಾಗಲು ಹೆಚ್ಚು ಸಂದರ್ಭಗಳಿವೆ. ಅಲೆಕ್ಸಾಂಡ್ರಳು ದಿನನಿತ್ಯ ಭೂಗರ್ಭ ರೈಲ್ವೇ ವ್ಯವಸ್ಥೆಯ ಮೂಲಕ ಕೆಲಸಕ್ಕೆ ಹೋಗುತ್ತಾಳೆ. ಒಂದು ದಿನ ಅವಳು, ಲೂಕೀಮಿಯದಿಂದ ಮಾರಕವಾಗಿ ಅಸ್ವಸ್ಥನಾಗಿದ್ದ ಒಬ್ಬ ಯುವಕನೊಂದಿಗೆ ಮಾತಾಡಿದಳು. ಪರದೈಸಿನ ನಿರೀಕ್ಷೆಯ ಕುರಿತಾದ ಒಂದು ಟ್ರ್ಯಾಕ್ಟನ್ನು ಅಲೆಕ್ಸಾಂಡ್ರ ಅವನಿಗೆ ಕೊಟ್ಟಳು. ಬೈಬಲ್‌ ಚರ್ಚೆಯು ಅದೇ ಸಮಯ ಮತ್ತು ಅದೇ ಸ್ಥಳದಲ್ಲಿ ಪ್ರತಿನಿತ್ಯ, ಸುಮಾರು ಆರು ವಾರಗಳ ವರೆಗೆ ನಡೆಸಲ್ಪಟ್ಟಿತು. ತದನಂತರ, ಒಂದು ದಿನ, ಆ ಮನುಷ್ಯನು ಬರುವುದನ್ನು ನಿಲ್ಲಿಸಿಬಿಟ್ಟನು. ಸ್ವಲ್ಪ ಸಮಯದ ಬಳಿಕ, ಅವನ ಹೆಂಡತಿ ಅಲೆಕ್ಸಾಂಡ್ರಳಿಗೆ ಫೋನ್‌ ಮಾಡಿ, ತನ್ನ ಗಂಡನು ವಿಷಮ ಸ್ಥಿತಿಯಲ್ಲಿರುವುದರಿಂದ ಆಸ್ಪತ್ರೆಗೆ ಬರುವಂತೆ ಹೇಳಿದಳು. ದುಃಖಕರವಾಗಿ, ಅಲೆಕ್ಸಾಂಡ್ರಳು ಅಲ್ಲಿ ತಲಪುವಷ್ಟರಲ್ಲಿ ಅವನು ತೀರಿಕೊಂಡನು. ಅವನ ಮರಣದ ನಂತರ, ಆ ವ್ಯಕ್ತಿಯ ಹೆಂಡತಿ ಫ್ರಾನ್ಸ್‌ನ ನೈರುತ್ಯದಲ್ಲಿರುವ ಬಾರ್‌ಡೂವ್‌ಗೆ ಸ್ಥಳಾಂತರಿಸಿದಳು. ಇಲ್ಲಿ, ಸ್ಥಳಿಕ ಸಾಕ್ಷಿಗಳಿಂದ ಅವಳು ಸಂಪರ್ಕಿಸಲ್ಪಟ್ಟಳು. ಈ ವಿಧವೆಯು, ತನ್ನ ಗಂಡನು ಪುನರುತ್ಥಾನಹೊಂದಿ ಬರುವುದನ್ನು ನೋಡುವ ನಿರೀಕ್ಷೆಯಿರುವ ಒಬ್ಬ ದೀಕ್ಷಾಸ್ನಾನ ಪಡೆದ ಕ್ರೈಸ್ತ ಸಾಕ್ಷಿಯಾಗಿದ್ದಾಳೆ ಎಂಬುದನ್ನು ಒಂದು ವರ್ಷದ ನಂತರ ಕೇಳಿಸಿಕೊಳ್ಳುವುದು ಅಲೆಕ್ಸಾಂಡ್ರಳಿಗೆ ಎಂಥ ಅದ್ಭುತಕರ ಸುದ್ದಿಯಾಗಿತ್ತು!​—ಯೋಹಾನ 5:28, 29.

ಫ್ರಾನ್ಸ್‌ನ ಮಧ್ಯಭಾಗದಲ್ಲಿ, ಪ್ಯಾರಿಸ್‌ನಿಂದ ಲೀಮೊಸ್‌ಗೆ ಪ್ರಯಾಣಿಸುತ್ತಿದ್ದ ರೆನಾಟಾಳೊಂದಿಗೆ ಒಬ್ಬ ವೃದ್ಧ ಕ್ರೈಸ್ತ ಸ್ತ್ರೀಯು ಮಾತಾಡಿದಳು. ತನ್ನ ಸ್ವದೇಶವಾದ ಪೋಲೆಂಡ್‌ನಲ್ಲಿ ರೆನಾಟಾ ದೇವತಾಶಾಸ್ತ್ರ, ಹೀಬ್ರು ಮತ್ತು ಗ್ರೀಕ್‌ ಭಾಷೆಗಳನ್ನು ಅಭ್ಯಾಸಿಸಿದ್ದಳು, ಆದರೆ ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಳು. ಮೂರು ತಿಂಗಳುಗಳ ಮುಂಚೆ ಅವಳು ದೇವರಿಗೆ ಪ್ರಾರ್ಥಿಸಿದ್ದಳು. ಆ ವೃದ್ಧ ಸಹೋದರಿಯು ಏನು ಹೇಳಲಿಕ್ಕಿದೆ ಎಂಬುದರಲ್ಲಿ ನಿಜವಾಗಿಯೂ ಆಸಕ್ತಳಾಗಿರದಿದ್ದರೂ, ಹೇಗೂ ಅವಳೊಂದಿಗೆ ಮಾತನಾಡುವ ಅವಕಾಶ ಪುನಃ ಎಂದೂ ಬರುವುದಿಲ್ಲ ಎಂದು ಭಾವಿಸಿಕೊಂಡು, ರೆನಾಟಾ ಆ ಸಹೋದರಿಗೆ ತನ್ನ ಟೆಲಿಫೋನ್‌ ನಂಬರನ್ನು ಕೊಟ್ಟಳು. ಆದರೆ ಆ ಸಹೋದರಿಯು ಪ್ರಯತ್ನವನ್ನು ಬಿಟ್ಟುಬಿಡದೆ, ಶೀಘ್ರದಲ್ಲೇ ಯಾರಾದರೂ ರೆನಾಟಾಳನ್ನು ಭೇಟಿಮಾಡುವಂತೆ ಖಚಿತಪಡಿಸಿಕೊಂಡಳು. ಒಬ್ಬ ಕ್ರೈಸ್ತ ದಂಪತಿಯು ಅವಳನ್ನು ಭೇಟಿಯಾಗಲು ಬಂದಾಗ, ರೆನಾಟಾ ತನ್ನ ಮನಸ್ಸಿನಲ್ಲಿ, ‘ಅವರು ನನಗೆ ಕಲಿಸಿಕೊಡುವಂಥದ್ದು ಏನಿದೆ?’ ಎಂದು ಅಂದುಕೊಂಡಳು. ತನ್ನ ಸೆಮಿನೆರಿ ತರಬೇತಿಯ ಹೊರತೂ, ರೆನಾಟಾ ನಮ್ರತೆಯಿಂದ ಬೈಬಲ್‌ ಸತ್ಯದೆಡೆಗೆ ಸೆಳೆಯಲ್ಪಟ್ಟಳು. “ಇದೇ ಸತ್ಯ ಎಂಬುದನ್ನು ನಾನು ಒಡನೆಯೇ ಅರ್ಥಮಾಡಿಕೊಂಡೆ,” ಎಂದು ಅವಳು ವಿವರಿಸುತ್ತಾಳೆ. ಈಗ ಬೈಬಲಿನ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ಅವಳು ಸಂತೋಷಿಸುತ್ತಾಳೆ.

ಮೀಶೆಲ್‌ ಎಂಬವಳು ಡ್ರೈವಿಂಗ್‌ ಪಾಠಗಳನ್ನು ಪಡೆಯುತ್ತಿದ್ದಳು. ತನ್ನ ಡ್ರೈವಿಂಗ್‌ ಥಿಯರಿ ಕ್ಲಾಸ್‌ನಲ್ಲಿದ್ದ ಇನ್ನಿತರ ವಿದ್ಯಾರ್ಥಿಗಳು ಮದುವೆಯ ಮುಂಚಿನ ಸೆಕ್ಸ್‌ನ ಕುರಿತು ಮಾತನಾಡಲು ಆರಂಭಿಸಿದರು. ಆದರೆ ಮೀಶೆಲ್‌ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದಳು. ಒಂದು ವಾರದ ನಂತರ, ಅವಳ ಡ್ರೈವಿಂಗ್‌ ಇನ್‌ಸ್ಟ್ರಕ್ಟರ್‌ರಾಗಿದ್ದ ಸಿಲ್ವೀ ಅವಳನ್ನು, “ನೀನೊಬ್ಬ ಯೆಹೋವನ ಸಾಕ್ಷಿಯೋ?” ಎಂದು ಕೇಳಿದಳು. ಸಿಲ್ವೀ ಮೀಶೆಲ್‌ನ ಬೈಬಲ್‌ ಆಧಾರಿತ ದೃಷ್ಟಿಕೋನದಿಂದ ಪ್ರಭಾವಿತಳಾದ ಕಾರಣ, ಒಂದು ಬೈಬಲ್‌ ಅಭ್ಯಾಸವು ಆರಂಭಿಸಲ್ಪಟ್ಟಿತು. ಒಂದು ವರ್ಷದ ನಂತರ ಸಿಲ್ವೀ ದೀಕ್ಷಾಸ್ನಾನ ಪಡೆದುಕೊಂಡಳು.

ಪ್ಯಾರಿಸ್‌ನಲ್ಲಿರುವ ಅಸಂಖ್ಯಾತ ಪಾರ್ಕ್‌ಗಳು ಮತ್ತು ತೋಟಗಳು, ಜನರೊಂದಿಗೆ ಸಂಭಾಷಿಸಲು ಮನೋಹರವಾದ ಸನ್ನಿವೇಶವನ್ನು ಒದಗಿಸಿಕೊಡುತ್ತವೆ. ಸ್ವಲ್ಪ ಬಿಡುವು ಸಿಕ್ಕಿದ್ದನ್ನು ಸದುಪಯೋಗಿಸುತ್ತಾ, ಸೊಸೆಟ್‌ ಒಂದು ಪಾರ್ಕ್‌ಗೆ ಹೋದಳು. ಅಲ್ಲಿ ಆಲೀನ್‌ ಎಂಬ ವೃದ್ಧ ಸ್ತ್ರೀ, ಆರಾಮವಾಗಿ ವಾಕಿಂಗ್‌ ಮಾಡುತ್ತಾ ಇದ್ದರು. ಬೈಬಲಿನಲ್ಲಿ ಕಂಡುಕೊಳ್ಳಬಹುದಾದ ಅತ್ಯಾಶ್ಚರ್ಯಕರ ವಾಗ್ದಾನಗಳ ಕುರಿತಾಗಿ ಸೊಸೆಟ್‌ ಅವರಿಗೆ ವಿವರಿಸಿದಳು. ಬೈಬಲ್‌ ಅಭ್ಯಾಸವೊಂದು ಏರ್ಪಡಿಸಲ್ಪಟ್ಟಿತು, ಮತ್ತು ಆಲೀನ್‌ ದೀಕ್ಷಾಸ್ನಾನ ಪಡೆದುಕೊಳ್ಳುವ ಹಂತದ ವರೆಗೆ ಶೀಘ್ರ ಪ್ರಗತಿಯನ್ನು ಮಾಡಿದರು. ಈಗ 74 ವರ್ಷ ಪ್ರಾಯದವರಾಗಿರುವ ಆಲೀನ್‌, ಕ್ರೈಸ್ತ ಸತ್ಯವನ್ನು ಇತರರೊಂದಿಗೆ ಸಂತೋಷದಿಂದ ಹಂಚಿಕೊಳ್ಳುತ್ತಾ, ತುಂಬ ಫಲದಾಯಕವಾಗಿರುವ ಒಬ್ಬ ರೆಗ್ಯುಲರ್‌ ಪಯನೀಯರ್‌ ಶುಶ್ರೂಷಕಿಯಾಗಿದ್ದಾರೆ.

ಎಲ್ಲ ಜನಾಂಗಗಳಿಗೆ ಬೆಳಕು

ಪ್ಯಾರಿಸ್‌ನಲ್ಲಿರುವ ಸಾಕ್ಷಿಗಳು ಸಮೃದ್ಧ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನುಭವಿಸಲಿಕ್ಕಾಗಿ ದೂರ ದೇಶಗಳಿಗೆ ಪ್ರಯಾಣಮಾಡಬೇಕಾದ ಆವಶ್ಯಕತೆಯಿಲ್ಲ. ಏಕೆಂದರೆ ಜನಸಂಖ್ಯೆಯಲ್ಲಿ ಬಹುಮಟ್ಟಿಗೆ 20 ಪ್ರತಿಶತ ಮಂದಿ ಪರದೇಶಿಗಳಾಗಿದ್ದಾರೆ. ಅಲ್ಲಿ ಸುಮಾರು 25 ವಿಭಿನ್ನ ಭಾಷೆಗಳ ಕ್ರೈಸ್ತ ಸಭೆಗಳು ಮತ್ತು ಗುಂಪುಗಳಿವೆ.

ಸಹಜ ಸಾಮರ್ಥ್ಯ ಮತ್ತು ಕಲ್ಪನಾಶಕ್ತಿ, ಈ ವಿಶೇಷ ಸೌವಾರ್ತಿಕ ನೇಮಕದಲ್ಲಿ ಒಳ್ಳೆಯ ಫಲಿತಾಂಶಗಳನ್ನು ತರುವುದರಲ್ಲಿ ಅನೇಕ ವೇಳೆ ಸಹಾಯ ಮಾಡುತ್ತದೆ. ಫಿಲಿಪೀನ್ಸ್‌ ದೇಶದ ಒಬ್ಬ ಸಾಕ್ಷಿ ತನ್ನ ಸ್ವಂತ ವಿಶೇಷ ಟೆರಿಟೊರಿಯನ್ನು ಏರ್ಪಡಿಸಿಕೊಂಡಳು. ಶಾಪಿಂಗ್‌ ಮಾಡುತ್ತಿರುವಾಗ ಫಿಲಿಪೀನ್ಸ್‌ ದೇಶದ ಇತರರೊಂದಿಗೆ ಒಂದು ಸಂಭಾಷಣೆಯನ್ನು ಪ್ರಾರಂಭಿಸುವ ಮೂಲಕ ಅವಳಿಗೆ ಅನೇಕ ಬೈಬಲ್‌ ಅಭ್ಯಾಸಗಳನ್ನು ಆರಂಭಿಸಲು ಸಾಧ್ಯವಾಗಿದೆ.

ನಾವು ಸಾರುವುದರಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದು ಸಾರ್ಥಕವಾಗುತ್ತದೆ. 1996ರ ಡಿಸೆಂಬರ್‌ ತಿಂಗಳಿನಲ್ಲಿ, ಒಂದು ಲೋಕ ಪ್ರಸಿದ್ಧ ಸರ್ಕಸ್‌ ತಮ್ಮ ಊರಿಗೆ ಬರುತ್ತಿದೆ ಎಂಬುದನ್ನು ತಿಳಿದುಕೊಂಡ ಒಂದು ವಿದೇಶೀ ಭಾಷೆಯ ಸಭೆಯು, ಅದರ ಕಲಾವಿದರನ್ನು ಭೇಟಿಮಾಡಲು ತೀರ್ಮಾನಿಸಿತು. ಒಂದು ಸಂಜೆ ಪ್ರದರ್ಶನದ ನಂತರ ತಮ್ಮ ಹೊಟೇಲಿಗೆ ಹಿಂದಿರುಗುತ್ತಿದ್ದ ಕಲಾವಿದರೊಂದಿಗೆ ಮಾತಾಡಲು ಅವರಿಗೆ ಸಾಧ್ಯವಾಯಿತು. ಇದರ ಫಲಿತಾಂಶವಾಗಿ, 28 ಬೈಬಲ್‌ಗಳು, 59 ಕ್ರಿಸ್ತೀಯ ಪುಸ್ತಕಗಳು, 131 ಬ್ರೋಷರ್‌ಗಳು, ಮತ್ತು 290 ಪತ್ರಿಕೆಗಳನ್ನು ವಿತರಿಸಲು ಸಾಧ್ಯವಾಯಿತು. ಮೂರು ವಾರಗಳ ಅಂತ್ಯದಲ್ಲಿ, ಲಾಗಪಟುಗಳಲ್ಲಿ ಒಬ್ಬನು ಕೇಳಿದ್ದು: “ನಾನು ಹೇಗೆ ಒಬ್ಬ ಯೆಹೋವನ ಸಾಕ್ಷಿಯಾಗಬಲ್ಲೆ?” ಮತ್ತೊಬ್ಬನು ಹೇಳಿದ್ದು: “ನಾನು ನನ್ನ ದೇಶದಲ್ಲಿ ಪ್ರಚಾರಮಾಡುವೆ!”

ಕಂಡುಹಿಡಿಯಬೇಕಾದ ಬಚ್ಚಿಡಲ್ಪಟ್ಟಿರುವ ನಿಧಿಗಳು

ಯಾವ ಕಡೆ ನೋಡಿದರೂ, ಪ್ಯಾರಿಸನ್ನು ಸಂದರ್ಶಿಸುತ್ತಿರುವವರು ಗತಕಾಲಗಳ ಮನೋಹರವಾದ ವಾಸ್ತುಶಿಲ್ಪ ನಿಧಿಗಳನ್ನು ಕಂಡುಕೊಳ್ಳುತ್ತಾರೆ. ಆದರೂ, ಇನ್ನೂ ಅಧಿಕವಾದ ಅಮೂಲ್ಯ ವಸ್ತುಗಳು, ಕಂಡುಹಿಡಿಯಲ್ಪಡಲು ಕಾಯುತ್ತಿವೆ. ಅನೀಸಾ, ರಾಜತಂತ್ರಜ್ಞನಾಗಿದ್ದ ತನ್ನ ಸೋದರಮಾವನ ಜೊತೆಯಲ್ಲಿ ಫ್ರಾನ್ಸ್‌ಗೆ ಬಂದಿದ್ದಳು. ಮನೆಯಲ್ಲಿ ಅವಳು ಕ್ರಮವಾಗಿ ಬೈಬಲನ್ನು ಓದುತ್ತಿದ್ದಳು. ಒಂದು ದಿನ ಅವಳು ಮನೆಯಿಂದ ಅವಸರದಿಂದ ಹೊರಡುತ್ತಿರುವಾಗ, ಒಬ್ಬ ಪಯನೀಯರ್‌ ಸಹೋದರಿ ಅವಳಿಗೆ ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ ಎಂಬ ಟ್ರ್ಯಾಕ್ಟನ್ನು ಕೊಟ್ಟಳು. ಮುಂದಿನ ವಾರದ ಒಂದು ಭೇಟಿಗಾಗಿ ಸಮಯವನ್ನು ಗೊತ್ತುಪಡಿಸಲಾಯಿತು ಮತ್ತು ಆಗ ಒಂದು ಬೈಬಲ್‌ ಅಭ್ಯಾಸವು ಆರಂಭಿಸಲ್ಪಟ್ಟಿತು. ಅನೀಸಾ, ತನ್ನ ಕುಟುಂಬದಿಂದ ತುಂಬ ವಿರೋಧವನ್ನು ಎದುರಿಸಿದಳು. ಅವಳು ತನ್ನ ಅಭ್ಯಾಸದಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವ ಹಂತದ ವರೆಗೆ ಪ್ರಗತಿಯನ್ನು ಮಾಡಿದಳು. ಇತರರೊಂದಿಗೆ ಸತ್ಯವನ್ನು ಹಂಚಿಕೊಳ್ಳುವ ಸುಯೋಗವನ್ನು ಅವಳು ಹೇಗೆ ವೀಕ್ಷಿಸುತ್ತಾಳೆ? “ನಾನು ನಾಚಿಕೆ ಸ್ವಭಾವದವಳಾಗಿದ್ದುದರಿಂದ, ಆರಂಭದಲ್ಲಿ ಸಾರುವ ಕೆಲಸವು ನನಗೆ ಕಷ್ಟಕರವಾಗಿತ್ತು. ಆದರೂ, ನಾನು ಬೈಬಲನ್ನು ಓದುವಾಗ, ಅದು ನನ್ನನ್ನು ಉದ್ದೀಪಿಸುತ್ತದೆ. ಏನೂ ಮಾಡದೆ ಸುಮ್ಮನಿರುವುದಕ್ಕೆ ನನ್ನಿಂದಾಗುವುದಿಲ್ಲ.” ಈ ಮನೋಭಾವವು, ‘ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುತ್ತಿರುವ’ ಪ್ಯಾರಿಸ್‌ನ ಅನೇಕ ಸಾಕ್ಷಿಗಳ ಗುಣಲಕ್ಷಣವಾಗಿದೆ.​—1 ಕೊರಿಂಥ 15:58.

ಬೈಬಲ್‌ ಸತ್ಯವು ಪ್ಯಾರಿಸ್‌ನ ಹೊರವಲಯಗಳಲ್ಲಿರುವ ವಸತಿ ಯೋಜನೆಗಳ ಮೇಲೆಯೂ ಪ್ರಕಾಶಿಸುತ್ತಿದೆ ಮತ್ತು ಹೀಗೆ ಇನ್ನಿತರ “ರತ್ನಗಳನ್ನು” ಪ್ರಕಟಪಡಿಸುತ್ತಿದೆ. ಬ್ರೂಸ್‌ ಎಂಬವನು, ಕೆಲವು ಸಂಗೀತದ ರೆಕಾರ್ಡ್‌ಗಳನ್ನು ತೆಗೆದುಕೊಂಡುಹೋಗಲು, ಆಗ ತಾನೇ ಒಬ್ಬ ಯೆಹೋವನ ಸಾಕ್ಷಿಯಾಗಿದ್ದ ತನ್ನ ಸ್ನೇಹಿತನನ್ನು ಭೇಟಿಮಾಡಿದನು. ಬ್ರೂಸ್‌ಗೆ ಪರಿಚಯವಿದ್ದ ಕೆಲವರೊಂದಿಗೆ ತನ್ನ ಸ್ನೇಹಿತನು ಮಾತಾಡುತ್ತಿರುವುದನ್ನು ನೋಡಿ, ಅವನೂ ಆ ಸಂಭಾಷಣೆಗೆ ಕಿವಿಗೊಟ್ಟನು. ಅವನು ಒಂದು ಬೈಬಲ್‌ ಅಭ್ಯಾಸಕ್ಕೆ ಒಪ್ಪಿಕೊಂಡನು, ಆದರೆ ಕೆಲವು ಸಮಸ್ಯೆಗಳಿದ್ದವು. “ಆ ಕ್ಷೇತ್ರದಲ್ಲಿ ನನ್ನ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ನನ್ನ ಅಣ್ಣ ಯಾವಾಗಲೂ ಜಗಳವಾಡುತ್ತಿದ್ದನು, ಮತ್ತು ನಾನು ಜೋರಾದ ಡಾನ್ಸ್‌ ಪಾರ್ಟಿಗಳನ್ನು ಏರ್ಪಡಿಸುತ್ತಿದ್ದೆ. ನಾನು ಒಬ್ಬ ಸಾಕ್ಷಿಯಾಗುತ್ತಿದ್ದೇನೆ ಎಂಬ ವಾಸ್ತವಾಂಶವನ್ನು ಇತರರು ಹೇಗೆ ಒಪ್ಪಿಕೊಂಡಾರು?” ಪಾರ್ಟಿಗಳನ್ನು ಏರ್ಪಡಿಸುವಂತೆ ಬಂದ ಸತತವಾದ ಕೋರಿಕೆಗಳ ಹೊರತೂ, ಬ್ರೂಸ್‌ ಆ ಚಟುವಟಿಕೆಯನ್ನು ಬಿಟ್ಟುಬಿಟ್ಟನು. ಒಂದು ತಿಂಗಳಿನ ನಂತರ ಅವನು ಸಾರಲು ಆರಂಭಿಸಿದನು: “ನಾನು ಏಕೆ ಒಬ್ಬ ಸಾಕ್ಷಿಯಾದೆ ಎಂಬುದನ್ನು ಕ್ಷೇತ್ರದಲ್ಲಿದ್ದ ಎಲ್ಲರೂ ತಿಳಿದುಕೊಳ್ಳಲು ಆಸಕ್ತರಾಗಿದ್ದರು.” ಶೀಘ್ರದಲ್ಲೇ ಅವನು ದೀಕ್ಷಾಸ್ನಾನ ಪಡೆದುಕೊಂಡನು. ಕಾಲಕ್ರಮೇಣ, ಮಿನಿಸ್ಟೀರಿಯಲ್‌ ಟ್ರೇನಿಂಗ್‌ ಸ್ಕೂಲ್‌ನಲ್ಲಿ ತರಬೇತಿಯನ್ನು ಪಡೆದುಕೊಳ್ಳುವ ಸುಯೋಗವು ಅವನಿಗೆ ಸಿಕ್ಕಿತು.

ನಿಧಿಗಳಿಗಾಗಿ ಹುಡುಕಲು ತುಂಬ ಪ್ರಯತ್ನವು ಬೇಕಾಗಬಹುದು. ಆದರೆ ಆ ಪ್ರಯತ್ನಗಳೆಲ್ಲ ಸಾರ್ಥಕವಾಗುವಾಗ ಎಷ್ಟು ಆನಂದವು ಉಂಟಾಗುವುದು! ಸಾಕೀ, ಬ್ರೂನೊ ಮತ್ತು ಡಾಮಿಯನ್‌, ಪ್ಯಾರಿಸ್‌ನಲ್ಲಿ ಬ್ರೆಡ್‌ ಮಾಡುವವರಾಗಿದ್ದರು. “ನಮ್ಮನ್ನು ಸಂಪರ್ಕಿಸುವುದು ಅಸಾಧ್ಯವಾಗಿತ್ತು. ಏಕೆಂದರೆ ನಾವು ಎಲ್ಲ ಸಮಯಗಳಲ್ಲಿ ಕೆಲಸ ಮಾಡುತ್ತಿದ್ದೆವು ಮತ್ತು ಮನೆಯಲ್ಲಿ ಇರುತ್ತಿರಲಿಲ್ಲ,” ಎಂದು ಸಾಕೀ ವಿವರಿಸುತ್ತಾನೆ. ರೆಗ್ಯುಲರ್‌ ಪಯನೀಯರನಾಗಿದ್ದ ಪ್ಯಾಟ್ರಿಕ್‌, ಒಂದು ಕಟ್ಟಡದ ಮೇಲ್ಭಾಗದಲ್ಲಿ ಕೆಲವು ಚಿಕ್ಕ ಕೋಣೆಗಳಿರುವುದನ್ನು ಮತ್ತು ಕಡಿಮೆಪಕ್ಷ ಒಂದು ಕೋಣೆಯಲ್ಲಾದರೂ ಜನರು ವಾಸಿಸುತ್ತಿದ್ದಾರೆ ಎಂಬುದನ್ನು ಗ್ರಹಿಸಿದನು. ಅಲ್ಲಿ ವಾಸಿಸುತ್ತಿರುವವರನ್ನು ತಲಪಲಿಕ್ಕಾಗಿ ಅವನು ಮಾಡಿದ ಸತತ ಪ್ರಯತ್ನಗಳು ಒಳ್ಳೆಯ ಫಲಿತಾಂಶಗಳನ್ನು ತಂದವು. ಹೇಗೆಂದರೆ, ಕೊನೆಗೆ ಒಂದು ದಿನ ಮಧ್ಯಾಹ್ನ, ಅಲ್ಲಿ ಕೊಂಚ ಸಮಯಕ್ಕಾಗಿ ತಂಗಿದ್ದ ಸಾಕೀಯನ್ನು ಸಂಪರ್ಕಿಸಲು ಅವನಿಗೆ ಸಾಧ್ಯವಾಯಿತು. ಪರಿಣಾಮವೇನಾಯಿತು? ಈ ಮೂವರೂ ಸ್ನೇಹಿತರು ಸಾಕ್ಷಿಗಳಾದರು ಮತ್ತು ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲಿಕ್ಕಾಗಿ ತಮ್ಮ ಕೆಲಸವನ್ನು ಬದಲಾಯಿಸಿಕೊಂಡರು.

ಚಂಡಮಾರುತವನ್ನು ಪ್ರಶಾಂತಗೊಳಿಸುವುದು

ಇತ್ತೀಚೆಗೆ, ಫ್ರಾನ್ಸ್‌ನ ಕೆಲವು ವಾರ್ತಾಮಾಧ್ಯಮಗಳು ಯೆಹೋವನ ಸಾಕ್ಷಿಗಳನ್ನು ಒಂದು ಅಪಾಯಕರ ಧಾರ್ಮಿಕ ಪಂಥವಾಗಿ ಚಿತ್ರಿಸಿವೆ. 1996ರಲ್ಲಿ, ಯೆಹೋವನ ಸಾಕ್ಷಿಗಳು​—ನೀವು ತಿಳಿದುಕೊಳ್ಳಬೇಕಾಗಿರುವ ವಿಷಯ (ಇಂಗ್ಲಿಷ್‌) ಎಂಬ ಶೀರ್ಷಿಕೆಯಿದ್ದ, ವಿಶೇಷ ಮಾಹಿತಿಯು ಅಡಕವಾಗಿದ್ದ ಟ್ರ್ಯಾಕ್ಟ್‌ನ 90 ಲಕ್ಷ ಪ್ರತಿಗಳನ್ನು ವಿತರಿಸುವುದರಲ್ಲಿ ಸಾಕ್ಷಿಗಳು ಹೃತ್ಪೂರ್ವಕವಾಗಿ ಭಾಗವಹಿಸಿದರು. ಫಲಿತಾಂಶಗಳು ಬಹಳ ಸಕಾರಾತ್ಮಕವಾಗಿದ್ದವು.

ಪ್ರತಿಯೊಬ್ಬರನ್ನು ತಲಪುವ ವಿಶೇಷ ಪ್ರಯತ್ನವು ಮಾಡಲ್ಪಟ್ಟಿತು. ಅನೇಕ ಅಧಿಕಾರಿಗಳು ಸಾಕ್ಷಿಗಳಿಗೆ ತಮ್ಮ ಗಣ್ಯತೆಯನ್ನು ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆಯ ಒಬ್ಬ ಸಲಹೆಗಾರನು ಬರೆದದ್ದು: “ಈ ಟ್ರ್ಯಾಕ್ಟನ್ನು ವಿತರಿಸುವುದರಿಂದ ಯೆಹೋವನ ಸಾಕ್ಷಿಗಳು ಒಳ್ಳೇ ಕೆಲಸವನ್ನು ಮಾಡಿದ್ದಾರೆ. ಇದು ಸುಳ್ಳು ಅಪವಾದವನ್ನು ಸರಿಪಡಿಸುತ್ತದೆ.” ಒಬ್ಬ ಡಾಕ್ಟರ್‌ ಹೇಳಿಕೆ ನೀಡಿದ್ದು: “ನಾನು ಇದಕ್ಕಾಗಿ ತುಂಬ ಸಮಯದಿಂದ ಕಾದುಕೊಂಡಿದ್ದೆ!” ಪ್ಯಾರಿಸ್‌ ಕ್ಷೇತ್ರದಲ್ಲಿರುವ ಒಬ್ಬ ಮನುಷ್ಯನು ಬರೆದದ್ದು: “ಯೆಹೋವನ ಸಾಕ್ಷಿಗಳು​—ನೀವು ತಿಳಿದುಕೊಳ್ಳಬೇಕಾಗಿರುವ ವಿಷಯ ಎಂಬ ಟ್ರ್ಯಾಕ್ಟನ್ನು ನಾನು ಆಕಸ್ಮಿಕವಾಗಿ ಓದಿದೆ. ನಾನು ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಮತ್ತು ಬೈಬಲನ್ನು ಮನೆಯಲ್ಲಿಯೇ ಉಚಿತವಾಗಿ ಅಭ್ಯಾಸಿಸುವ ನೀಡಿಕೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುತ್ತೇನೆ.” ಮತ್ತೊಬ್ಬಳು ಬರೆದದ್ದು: “ನಿಮ್ಮ ಪ್ರಾಮಾಣಿಕತೆಗಾಗಿ ಉಪಕಾರಗಳು.” ಒಬ್ಬ ಕ್ಯಾಥೊಲಿಕ್‌ ಸ್ತ್ರೀಯು ಸಾಕ್ಷಿಗಳಿಗೆ ಹೇಳಿದ್ದು: “ಭೇಷ್‌! ಕೊನೆಗೆ ನೀವು ಆ ಸುಳ್ಳುಗಳಿಗೆ ಪ್ರತಿಕ್ರಿಯೆಯನ್ನು ತೋರಿಸಿದ್ದೀರಿ!”

ಪ್ಯಾರಿಸ್‌ ಕ್ಷೇತ್ರದಲ್ಲಿರುವ ಅನೇಕ ಯುವ ಸಾಕ್ಷಿಗಳಿಗೆ ವಿಶೇಷ ಆನಂದವನ್ನು ತಂದ ಸಂಗತಿಯು 1997ರಲ್ಲಿ ಕ್ಯಾಥೊಲಿಕ್‌ ವರ್ಲ್ಡ್‌ ಯೂತ್‌ ಡೇಸ್‌ನ ಸಂದರ್ಭಕ್ಕಾಗಿ ಏರ್ಪಡಿಸಲ್ಪಟ್ಟ ಸಾರುವ ಕಾರ್ಯಾಚರಣೆಯೇ ಆಗಿತ್ತು. ಹವಾಮಾನವು 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದರೂ, ಸುಮಾರು 2,500 ಸಾಕ್ಷಿಗಳು ಇದರಲ್ಲಿ ಭಾಗವಹಿಸಿದರು. ಕೇವಲ ಕೆಲವೇ ದಿನಗಳ ಅಂತರದಲ್ಲಿ ಅವರು, ಭೂಗೋಳದ ಎಲ್ಲೆಡೆಯಿಂದಲೂ ಬಂದಿದ್ದ ಯುವ ಜನರಿಗೆ, ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರಿನ 18,000 ಪ್ರತಿಗಳನ್ನು ಕೊಟ್ಟರು. ಈ ಕಾರ್ಯಾಚರಣೆಯು ಯೆಹೋವನ ನಾಮಕ್ಕೆ ಒಂದು ಉತ್ತಮವಾದ ಸಾಕ್ಷ್ಯವನ್ನು ಕೊಟ್ಟು ಸತ್ಯದ ಬೀಜಗಳನ್ನು ಬಿತ್ತುವುದರೊಂದಿಗೆ, ಯುವ ಸಾಕ್ಷಿಗಳನ್ನು ಉದ್ದೀಪಿಸಿತು. ಈ ವಿಶೇಷ ಪ್ರಯತ್ನದಲ್ಲಿ ಪಾಲ್ಗೊಳ್ಳಲಿಕ್ಕಾಗಿ ತನ್ನ ರಜೆಯನ್ನು ಕಡಿಮೆಗೊಳಿಸಿದ ಒಬ್ಬ ಯುವ ಸಹೋದರಿ ಬರೆದದ್ದು: “ಯೆಹೋವನ ನಾಮದ ಸ್ತುತಿಗಾಗಿ ತಮ್ಮ ಶಕ್ತಿಯನ್ನು ಉಪಯೋಗಿಸುವಂಥ ಸಂತೋಷವುಳ್ಳ ಜನರು ಆತನಿಗೆ ಭೂಮಿಯಲ್ಲಿದ್ದಾರೆ. ಈ ಎರಡು ದಿನಗಳು, ಎಷ್ಟು ತೃಪ್ತಿದಾಯಕ ಮತ್ತು ಫಲದಾಯಕವಾಗಿದ್ದವೆಂದರೆ, ಒಬ್ಬನ ಜೀವಮಾನದಲ್ಲೆಲ್ಲ ಅನುಭವಿಸಬಹುದಾದ ಎಲ್ಲಾ ರಜಾಕಾಲಗಳೂ ಅದಕ್ಕೆ ಸಮಾನವಾಗಲಾರವು! (ಕೀರ್ತನೆ 84:10)”

ಇಸವಿ 1998ರ ಫೆಬ್ರವರಿ 28, ಹಿಟ್ಲರನು ಹೊರಡಿಸಿದ ಒಂದು ಆಜ್ಞೆಯ 65ನೆಯ ವಾರ್ಷಿಕೋತ್ಸವವಾಗಿತ್ತು. ಆ ಆಜ್ಞೆಯ ಫಲಿತಾಂಶವಾಗಿಯೇ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳನ್ನು ನಿಷೇಧಿಸಲಾಗಿತ್ತು. ಆ ತಾರೀಖಿನಂದು, ಫ್ರಾನ್ಸ್‌ನಲ್ಲಿದ್ದ ಸಾಕ್ಷಿಗಳು, ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದ ವಿರುದ್ಧ ದೃಢವಾಗಿ ನಿಲ್ಲುತ್ತಾರೆ (ಇಂಗ್ಲಿಷ್‌) ಎಂಬ ವಿಡಿಯೋವನ್ನು, ಬಾಡಿಗೆಗೆ ತೆಗೆದುಕೊಳ್ಳಲಾಗಿದ್ದ ಸಭಾಂಗಣಗಳಲ್ಲಿ ಸಾರ್ವಜನಿಕರಿಗೆ ತೋರಿಸಿದರು. ಈ ವಿಡಿಯೋ, ಯೆಹೋವನ ಜನರು ಅನುಭವಿಸಿದ ಹಿಂಸೆಯ ಕುರಿತಾಗಿ ವಿವರವಾಗಿ ತಿಳಿಸುತ್ತದೆ. 70 ಲಕ್ಷಕ್ಕಿಂತಲೂ ಹೆಚ್ಚಿನ ಆಮಂತ್ರಣ ಪ್ರತಿಗಳು ವಿತರಿಸಲ್ಪಟ್ಟವು. ಇತಿಹಾಸಗಾರರು ಮತ್ತು ಮಾಜಿ ಕ್ಯಾಂಪ್‌ ಸೆರೆವಾಸಿಗಳು ಮನಕಲಕಿಸುವಂಥ ಸಾಕ್ಷ್ಯಗಳನ್ನು ಕೊಟ್ಟರು. ಪ್ಯಾರಿಸ್‌ ಕ್ಷೇತ್ರದಲ್ಲಿ 5,000 ಮಂದಿ ಹಾಜರಾದರು. ಇವರಲ್ಲಿ ಗಮನಾರ್ಹವಾದ ಸಂಖ್ಯೆಯಲ್ಲಿ ಕೂಡಿಬಂದಿದ್ದವರು ಸಾಕ್ಷ್ಯೇತರರಾಗಿದ್ದರು.

ಪ್ಯಾರಿಸ್‌ನಲ್ಲಿರುವ ಅನೇಕರು ಆತ್ಮಿಕ ಬೆಳಕನ್ನು ಗಣ್ಯಮಾಡುತ್ತಾರೆ ಮತ್ತು ರಾಜ್ಯ ಪ್ರಚಾರಕರು ಜ್ಯೋತಿರ್ಮಂಡಲಗಳಂತೆ ಉಜ್ವಲವಾಗಿ ಹೊಳೆಯುತ್ತಿರುವುದನ್ನು ನೋಡಿ ಅವರು ಆನಂದಿಸುತ್ತಾರೆ. ಇದು ಯೇಸು ಪ್ರಕಟಿಸಿದಂತೆಯೇ ಇದೆ: “ಬೆಳೆಯು ಬಹಳ, ಕೆಲಸದವರು ಸ್ವಲ್ಪ.” (ಮತ್ತಾಯ 9:37) ಆ ನಗರದಲ್ಲಿ ಸಾರುವುದರ ವಿರುದ್ಧ ಏಳುವ ಪಂಥಾಹ್ವಾನಗಳನ್ನು ಜಯಿಸಬೇಕು ಎಂಬ ಯೆಹೋವನ ಸಾಕ್ಷಿಗಳ ದೃಢನಿಶ್ಚಿತ ಮನೋಭಾವವು, ಯೆಹೋವನ ಸ್ತುತಿಗಾಗಿ ಪ್ಯಾರಿಸನ್ನು ವಿಶೇಷ ರೀತಿಯಲ್ಲಿ ಬೆಳಕಿನ ನಗರವಾಗಿ ಮಾಡಿದೆ.

[ಪುಟ 9ರಲ್ಲಿರುವ ಚಿತ್ರ]

ಸಿಟಿ ಹಾಲ್‌

[ಪುಟ 9ರಲ್ಲಿರುವ ಚಿತ್ರ]

ಲೂವರ್‌ ಮ್ಯೂಸಿಯಮ್‌

[ಪುಟ 9ರಲ್ಲಿರುವ ಚಿತ್ರ]

ಒಪೆರಾ ಗಾರ್ನಿಯ

[ಪುಟ 10ರಲ್ಲಿರುವ ಚಿತ್ರಗಳು]

ಕಾರ್ಯಮಗ್ನ ಜನರು ಎಲ್ಲೆಲ್ಲಿ ಕಂಡುಕೊಳ್ಳಲ್ಪಡುತ್ತಾರೋ ಅಲ್ಲೆಲ್ಲಾ ಬೈಬಲಿನ ಸಂದೇಶವನ್ನು ಹಂಚುವುದು