ಒಳ್ಳೇ ತೀರ್ಮಾನಗಳನ್ನು ನೀವು ಮಾಡಸಾಧ್ಯವಿರುವ ವಿಧ
ಒಳ್ಳೇ ತೀರ್ಮಾನಗಳನ್ನು ನೀವು ಮಾಡಸಾಧ್ಯವಿರುವ ವಿಧ
ಇಚ್ಛಾ ಸ್ವಾತಂತ್ರ್ಯವು ದೇವರಿಂದ ಕೊಡಲ್ಪಟ್ಟ ಕೊಡುಗೆಯಾಗಿದೆ. ಅದಿಲ್ಲದಿರುತ್ತಿದ್ದರೆ, ತನ್ನ ಕೃತ್ಯಗಳ ಮೇಲೆ ಯಾವುದೇ ರೀತಿಯ ನಿಯಂತ್ರಣವಿಲ್ಲದ ಯಾಂತ್ರಿಕ ಮನುಷ್ಯನಿಗೂ ನಮಗೂ ಯಾವ ವ್ಯತ್ಯಾಸವೂ ಇರುತ್ತಿರಲಿಲ್ಲ. ಅದಿದ್ದರೂ ನಾವು ಪಂಥಾಹ್ವಾನಗಳನ್ನು ಎದುರಿಸುತ್ತೇವೆ. ಇಚ್ಛಾ ಸ್ವಾತಂತ್ರ್ಯವುಳ್ಳವರಾಗಿರುವ ನಾವು, ಜೀವನವನ್ನು ಸಾಗಿಸುತ್ತಾ ಹೋಗುವಾಗ ತೀರ್ಮಾನಗಳನ್ನು ಮಾಡಬೇಕಾಗುತ್ತದೆ.
ಹಾಗಿದ್ದರೂ, ಕೆಲವು ತೀರ್ಮಾನಗಳು ಕ್ಷುಲ್ಲಕವಾದವುಗಳಾಗಿವೆ. ಬೇರೆಯವುಗಳು, ಅಂದರೆ ಯಾವ ಜೀವನವೃತ್ತಿಯನ್ನು ಆರಿಸಿಕೊಳ್ಳುವುದು ಅಥವಾ ಮದುವೆಯಾಗಬೇಕೋ ಬೇಡವೋ ಎಂಬ ತೀರ್ಮಾನಗಳು, ನಿಮ್ಮ ಇಡೀ ಭವಿಷ್ಯವನ್ನೇ ಬಾಧಿಸಬಲ್ಲವು. ಇನ್ನೂ ಇತರ ವಿಷಯಗಳು ಬೇರೆ ಜನರನ್ನು ಬಾಧಿಸುತ್ತವೆ. ಹೆತ್ತವರು ಮಾಡುವ ಕೆಲವು ತೀರ್ಮಾನಗಳು ಅವರ ಮಕ್ಕಳ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲವು. ಅಲ್ಲದೆ, ನಾವು ಮಾಡುವಂಥ ಅನೇಕ ತೀರ್ಮಾನಗಳಿಗೆ ನಾವು ದೇವರಿಗೆ ಉತ್ತರಕೊಡಬೇಕು.—ರೋಮಾಪುರ 14:12.
ಸಹಾಯದ ಅಗತ್ಯ
ತೀರ್ಮಾನಮಾಡುವ ವಿಷಯದಲ್ಲಿ ಮಾನವರಿಗೆ ಒಂದು ಒಳ್ಳೆಯ ದಾಖಲೆಯಿಲ್ಲ. ಮಾನವನು ಮಾಡಿದ ದಾಖಲಿತ ತೀರ್ಮಾನಗಳಲ್ಲಿ ಮೊತ್ತಮೊದಲ ತೀರ್ಮಾನವೇ ವಿನಾಶಕರವಾಗಿತ್ತು. ದೇವರು ನಿರ್ದಿಷ್ಟವಾಗಿ ನಿಷೇಧಿಸಿದ್ದ ಹಣ್ಣನ್ನು ತಿನ್ನಲು ಹವ್ವಳು ತೀರ್ಮಾನಿಸಿದಳು. ಸ್ವಾರ್ಥಪರ ಬಯಕೆಯ ಮೇಲೆ ಆಧಾರಿಸಿದ್ದ ಅವಳ ತೀರ್ಮಾನವು, ದೇವರಿಗೆ ಅವಿಧೇಯರಾಗುವುದರಲ್ಲಿ ಅವಳ ಗಂಡನೂ ಅವಳೊಂದಿಗೆ ಸೇರಿಕೊಳ್ಳುವಂತೆ ಮಾಡಿತು ಮತ್ತು ಇದರ ಪರಿಣಾಮವು ಮಾನವಕುಲಕ್ಕೆ ಬಹಳಷ್ಟು ಕಷ್ಟಾನುಭವಗಳನ್ನು ತಂದಿತು. ಅನೇಕ ಸಂದರ್ಭಗಳಲ್ಲಿ, ಮಾನವರು ಸರಿಯಾದ ಮೂಲತತ್ತ್ವಗಳ ಮೇಲೆ ತಮ್ಮ ತೀರ್ಮಾನಗಳನ್ನು ಆಧಾರಿಸುವ ಬದಲು ಹೆಚ್ಚಾಗಿ ಸ್ವಾರ್ಥಪರ ಬಯಕೆಗಳ ಮೇಲೆ ಆಧಾರಿಸುತ್ತಾರೆ. (ಆದಿಕಾಂಡ 3:6-19; ಯೆರೆಮೀಯ 17:9) ಗಂಭೀರವಾದ ತೀರ್ಮಾನಗಳನ್ನು ಮಾಡಬೇಕಾದಾಗ, ಆಗಿಂದಾಗ್ಗೆ ನಮ್ಮ ಇತಿಮಿತಿಗಳ ಅರಿವೂ ನಮಗಾಗುತ್ತದೆ.
ಆದುದರಿಂದ, ದೊಡ್ಡ ತೀರ್ಮಾನಗಳನ್ನು ಮಾಡಬೇಕಾದಾಗ, ಅನೇಕರು ಮಾನವರಿಗಿಂತ ಉನ್ನತವಾಗಿರುವ ಮೂಲಗಳಿಂದ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುದು ಆಶ್ಚರ್ಯಕರವೇನಲ್ಲ. ನೆಬೂಕದ್ನೆಚ್ಚರನು ಒಂದು ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ, ಒಂದು ತೀರ್ಮಾನವನ್ನು ಮಾಡಬೇಕಾಗಿದ್ದ ಸಂದರ್ಭವೊಂದರ ಕುರಿತು ಬೈಬಲು ದಾಖಲಿಸುತ್ತದೆ. ಅವನು ರಾಜನಾಗಿದ್ದರೂ, ‘ಶಕುನನೋಡುವ’ ಅಂದರೆ ಆತ್ಮಗಳನ್ನು ಸಂಪರ್ಕಿಸುವ ಅಗತ್ಯವಿದೆ ಎಂದು ಅವನಿಗೆ ಅನಿಸಿತು. ಆದುದರಿಂದ ದಾಖಲೆಯು ಹೇಳುವುದು: “ಬಾಣಗಳನ್ನು ಕಲಕಿ ವಿಗ್ರಹಗಳನ್ನು ಪ್ರಶ್ನೆಕೇಳಿ ಕಾಳಿಜವನ್ನು ಪರೀಕ್ಷಿಸಿದ್ದಾನೆ.” (ಯೆಹೆಜ್ಕೇಲ 21:21) ತದ್ರೀತಿಯಲ್ಲೇ ಇಂದು, ಅನೇಕರು ಕಣಿಹೇಳುವವರನ್ನು ಮತ್ತು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಾರೆ ಹಾಗೂ ಬೇರೆ ವಿಧಗಳಲ್ಲಿ ಆತ್ಮಗಳಿಂದ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಇವು ಮೋಸಕರವೂ ದಾರಿತಪ್ಪಿಸುವವುಗಳೂ ಆಗಿವೆ.—ಯಾಜಕಕಾಂಡ 19:31.
ಆದರೂ, ಸಂಪೂರ್ಣವಾಗಿ ಭರವಸಾರ್ಹನೂ ವಿವೇಕಯುತವಾದ ತೀರ್ಮಾನಗಳನ್ನು ಮಾಡುವುದರಲ್ಲಿ ಮಾನವರಿಗೆ ಇತಿಹಾಸದಾದ್ಯಂತ ಸಹಾಯಮಾಡಿರುವಾತನು ಒಬ್ಬನಿದ್ದಾನೆ. ಆತನು ಯೆಹೋವ ದೇವರಲ್ಲದೇ ಬೇರೆ ಯಾರೂ ಅಲ್ಲ. ಉದಾಹರಣೆಗಾಗಿ, ಪುರಾತನ ಕಾಲಗಳಲ್ಲಿ ದೇವರು ತನ್ನ ಜನಾಂಗವಾದ ಇಸ್ರಾಯೇಲಿಗೆ ಊರೀಮ್ ಮತ್ತು ತುಮ್ಮೀಮ್ ಅನ್ನು ಕೊಟ್ಟನು. ಇವು ಬಹುಶಃ ಜನಾಂಗವು ಅತಿ ಪ್ರಾಮುಖ್ಯವಾದ ಸನ್ನಿವೇಶಗಳನ್ನು ಎದುರಿಸಿದಾಗ ವಿಷಯಗಳನ್ನು ತೀರ್ಮಾನಿಸಲಿಕ್ಕಾಗಿ ಉಪಯೋಗಿಸಿದ ಪವಿತ್ರ ಚೀಟುಹಾಕುವಿಕೆಗಳಾಗಿದ್ದವು. ಊರೀಮ್ ಮತ್ತು ತುಮ್ಮೀಮ್‌ನ ಮೂಲಕ ಯೆಹೋವನು ಪ್ರಶ್ನೆಗಳಿಗೆ ನೇರವಾದ ಉತ್ತರಗಳನ್ನು ಕೊಟ್ಟನು ಮತ್ತು ಇಸ್ರಾಯೇಲ್‌ನ ಹಿರಿಯರು ಮಾಡುವ ತೀರ್ಮಾನಗಳು ಆತನ ಚಿತ್ತಾನುಸಾರವಾಗಿವೆಯೆಂಬುದನ್ನು ಖಚಿಪಡಿಸಿಕೊಳ್ಳಲಿಕ್ಕಾಗಿ ಹೀಗೆ ಅವರಿಗೆ ಸಹಾಯಮಾಡಿದನು.—ವಿಮೋಚನಕಾಂಡ 28:30; ಯಾಜಕಕಾಂಡ 8:8; ಅರಣ್ಯಕಾಂಡ 27:21.
ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ. ಮಿದ್ಯಾನಿನ ವಿರುದ್ಧ ಇಸ್ರಾಯೇಲ್ಯರ ಸೈನ್ಯವನ್ನು ಮುನ್ನಡೆಸುವಂತೆ ಗಿದ್ಯೋನನಿಗೆ ನ್ಯಾಯಸ್ಥಾಪಕರು 6:33-40; 7:21, 22.
ಕರೆಕೊಡಲ್ಪಟ್ಟಾಗ, ಅವನು ಈ ಉನ್ನತ ಸುಯೋಗವನ್ನು ಅಂಗೀಕರಿಸುವುದೋ ಬೇಡವೋ ಎಂಬುದನ್ನು ತೀರ್ಮಾನಿಸಬೇಕಾಗಿತ್ತು. ಯೆಹೋವನು ತನ್ನನ್ನು ಬೆಂಬಲಿಸುವನು ಎಂಬ ಪುನರಾಶ್ವಾಸನೆಯನ್ನು ಪಡೆದುಕೊಳ್ಳಲು ಬಯಸುತ್ತಾ, ಗಿದ್ಯೋನನು ಒಂದು ಅದ್ಭುತಕರ ಗುರುತನ್ನು ನೀಡುವಂತೆ ಕೇಳಿಕೊಂಡನು. ಹೊರಗೆ ರಾತ್ರಿಯಿಡೀ ಇಡಲ್ಪಟ್ಟಿರುವ ಒಂದು ತುಪ್ಪಟವು ಮಂಜುಬಿದ್ದು ತೇವಗೊಂಡಿರುವಾಗ, ಅದರ ಸುತ್ತಲೂ ಇರುವ ನೆಲವು ಒಣಗಿರಬೇಕು ಎಂಬುದಾಗಿ ಪ್ರಾರ್ಥಿಸಿದನು. ಮರುದಿನ ರಾತ್ರಿ, ಆ ತುಪ್ಪಟವು ಒಣಗಿರುವಾಗ, ಅದರ ಸುತ್ತಲೂ ಇರುವ ನೆಲವು ಮಂಜಿನಿಂದ ತೋಯ್ದಿರಬೇಕು ಎಂದು ಅವನು ಕೇಳಿಕೊಂಡನು. ಗಿದ್ಯೋನನು ಕೋರಿಕೊಂಡ ಗುರುತುಗಳನ್ನು ಯೆಹೋವನು ಸಂತೋಷದಿಂದ ಒದಗಿಸಿದನು. ಪರಿಣಾಮವಾಗಿ, ಗಿದ್ಯೋನನು ಸರಿಯಾದ ತೀರ್ಮಾನವನ್ನು ಮಾಡಿದನು ಮತ್ತು ದೈವಿಕ ಬೆಂಬಲದೊಂದಿಗೆ ಇಸ್ರಾಯೇಲ್ಯರ ವೈರಿಗಳನ್ನು ಸಂಪೂರ್ಣವಾಗಿ ಜಯಿಸಿದನು.—ಇಂದಿನ ಕುರಿತಾಗಿ ಏನು?
ತನ್ನ ಸೇವಕರು ಪ್ರಾಮುಖ್ಯವಾದ ತೀರ್ಮಾನಗಳನ್ನು ಮಾಡಬೇಕಾದಾಗ ಅವರಿಗೆ ಇಂದು ಕೂಡ ಯೆಹೋವನು ಸಹಾಯವನ್ನು ನೀಡುತ್ತಿದ್ದಾನೆ. ಹೇಗೆ? ಗಿದ್ಯೋನನಂತೆ ನಾವು ಕೂಡ ‘ತುಪ್ಪಟ ಪರೀಕ್ಷೆಗಳನ್ನು’ ಮಾಡಿತೋರಿಸುವಂತೆ, ಅಂದರೆ ನಾವು ಹೋಗಬೇಕಾದ ದಾರಿಯನ್ನು ತೋರಿಸುವಂತೆ ಯೆಹೋವನಿಂದ ಗುರುತುಗಳನ್ನು ಕೇಳಿಕೊಳ್ಳಬೇಕೋ? ಒಬ್ಬ ದಂಪತಿಯು, ಹೆಚ್ಚಿನ ರಾಜ್ಯ ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಸ್ಥಳಾಂತರಿಸಬೇಕೋ ಎಂಬುದರ ಕುರಿತಾಗಿ ಯೋಚಿಸುತ್ತಿದ್ದರು. ಇದನ್ನು ತೀರ್ಮಾನಿಸಲಿಕ್ಕಾಗಿ ಅವರು ಒಂದು ಪರೀಕ್ಷೆಯನ್ನು ಏರ್ಪಡಿಸಿದರು. ಒಂದು ನಿರ್ದಿಷ್ಟ ಬೆಲೆಗೆ ತಮ್ಮ ಮನೆಯನ್ನು ಮಾರುವ ಯೋಜನೆಯನ್ನು ಮಾಡಿದರು. ಆ ಮನೆಯು ನಿರ್ದಿಷ್ಟವಾದ ಒಂದು ತಾರೀಖಿನೊಳಗೆ, ಅವರು ಅಪೇಕ್ಷಿಸಿದ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾದರೆ, ಇದು ಅವರು ಸ್ಥಳಾಂತರಿಸುವುದನ್ನು ದೇವರು ಬಯಸುತ್ತಾನೆ ಎಂಬುದಕ್ಕೆ ಆತನಿಂದ ಬಂದ ಸೂಚನೆಯಾಗಿದೆ ಎಂದು ಪರಿಗಣಿಸಲಿದ್ದರು. ಆ ಮನೆಯು ಮಾರಾಟವಾಗದಿದ್ದರೆ, ಅವರು ಸ್ಥಳಾಂತರಿಸುವಂತೆ ದೇವರು ಬಯಸುವುದಿಲ್ಲ ಎಂದು ಅವರು ತೀರ್ಮಾನಿಸಲಿದ್ದರು.
ಆ ಮನೆಯು ಮಾರಾಟವಾಗಲಿಲ್ಲ. ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿಗೆ ಈ ದಂಪತಿಯು ಸ್ಥಳಾಂತರಿಸುವುದನ್ನು ಯೆಹೋವನು ಬಯಸಲಿಲ್ಲ ಎಂಬುದಕ್ಕೆ ಇದು ಸೂಚನೆಯಾಗಿತ್ತೋ? ಯೆಹೋವನು ತನ್ನ ಸೇವಕರಿಗೆ ಏನು ಮಾಡುತ್ತಾನೆ ಅಥವಾ ಏನು ಮಾಡುವುದಿಲ್ಲ ಎಂಬುದನ್ನು ವರ್ಗೀಕರಿಸಿ ಹೇಳುವುದು ಮಿತಿಮೀರಿದ ಆತ್ಮವಿಶ್ವಾಸವಾಗಿರುವುದು. ಇಂದು, ತನ್ನ ಚಿತ್ತವನ್ನು ನಮಗೆ ವ್ಯಕ್ತಪಡಿಸುವುದರಲ್ಲಿ ಯೆಹೋವನು ಎಂದೂ ವೈಯಕ್ತಿಕವಾಗಿ ಒಳಗೂಡುವುದಿಲ್ಲ ಎಂದು ನಾವು ಹೇಳಲಿಕ್ಕಾಗುವುದಿಲ್ಲ. (ಯೆಶಾಯ 59:1) ಆದರೂ, ನಮ್ಮ ಬಹುಮುಖ್ಯವಾದ ತೀರ್ಮಾನಗಳಲ್ಲಿ ಆತನು ಈ ರೀತಿ ಮಧ್ಯೆಬರುವುದನ್ನು ಅಪೇಕ್ಷಿಸಲು ನಮಗೆ ಯಾವ ಹಕ್ಕೂ ಇಲ್ಲ, ಹೀಗೆ ಮಾಡುವುದಾದರೆ ನಮ್ಮ ತೀರ್ಮಾನವನ್ನು ನಾವು ದೇವರ ಮೇಲೇ ಬಿಡುತ್ತೇವೆ. ಅಷ್ಟೇಕೆ, ಗಿದ್ಯೋನನು ಕೂಡ ತನ್ನ ಜೀವಮಾನವಿಡೀ ಯೆಹೋವನ ಅದ್ಭುತಕರ ಗುರುತುಗಳಿಲ್ಲದೆ ಅನೇಕ ತೀರ್ಮಾನಗಳನ್ನು ಮಾಡಬೇಕಿತ್ತು!
ಆದರೂ, ದೈವಿಕ ಮಾರ್ಗದರ್ಶನವು ಲಭ್ಯವಿದೆ ಎಂದು ಬೈಬಲ್ ಹೇಳುತ್ತದೆ. ಅದು ನಮ್ಮ ಕಾಲಗಳ ಕುರಿತಾಗಿ ಮುಂತಿಳಿಸುವುದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ನಾವು ಪ್ರಾಮುಖ್ಯವಾದ ಆಯ್ಕೆಗಳನ್ನು ಮಾಡಬೇಕಾಗಿರುವಾಗ, ನಮ್ಮ ತೀರ್ಮಾನಗಳು ದೇವರ ಚಿತ್ತಾನುಸಾರವಾಗಿವೆಯೋ ಮತ್ತು ಆತನ ಉನ್ನತ ವಿವೇಕವನ್ನು ಪ್ರತಿಬಿಂಬಿಸುತ್ತವೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಪ್ರಯತ್ನಿಸುವುದು ಸಂಪೂರ್ಣವಾಗಿ ಯೋಗ್ಯವಾಗಿದೆ. ಹೇಗೆ? ಆತನ ವಾಕ್ಯವನ್ನು ಸಂಪರ್ಕಿಸುವ ಮತ್ತು ಅದನ್ನು ‘ನಮ್ಮ ಕಾಲಿಗೆ ದೀಪವೂ ದಾರಿಗೆ ಬೆಳಕೂ ಆಗಿ’ ಕಾರ್ಯನಡಿಸುವಂತೆ ಅನುಮತಿಸುವ ಮೂಲಕವೇ. (ಕೀರ್ತನೆ 119:105; ಜ್ಞಾನೋಕ್ತಿ 2:1-6) ಹೀಗೆ ಮಾಡಲು, ಬೈಬಲಿನಿಂದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. (ಕೊಲೊಸ್ಸೆ 1:9, 10) ಒಂದು ತೀರ್ಮಾನವನ್ನು ಮಾಡಬೇಕಾಗಿರುವಾಗ, ಆ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಬೈಬಲ್ ಮೂಲತತ್ತ್ವಗಳನ್ನು ಜಾಗರೂಕತೆಯಿಂದ ಸಂಶೋಧಿಸುವ ಅಗತ್ಯವಿದೆ. ಇಂತಹ ಸಂಶೋಧನೆಯು ‘ಉತ್ತಮ ಕಾರ್ಯಗಳು ಯಾವವೆಂದು ವಿವೇಚಿಸಿ’ ತಿಳಿದುಕೊಳ್ಳಲು ನಮ್ಮನ್ನು ಶಕ್ತರನ್ನಾಗಿ ಮಾಡುವುದು.—ಫಿಲಿಪ್ಪಿ 1:9, 10.
ನಮಗೆ ಯೆಹೋವನು ಕಿವಿಗೊಡುವನು ಎಂಬ ದೃಢಸಂಕಲ್ಪದಿಂದ ನಾವು ಆತನೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡಬೇಕು. ನಾವು ಮಾಡಬೇಕಾಗಿರುವ ತೀರ್ಮಾನಗಳು ಮತ್ತು ನಾವು ಪರಿಗಣಿಸುತ್ತಿರುವ ಬದಲಿಮಾರ್ಗಗಳ ಕುರಿತಾಗಿ ನಮ್ಮ ಪ್ರೀತಿಯ ತಂದೆಗೆ ತಿಳಿಸುವುದು ಎಷ್ಟು ಸಾಂತ್ವನದಾಯಕವಾಗಿರುವುದು! ಆಗ, ಸರಿಯಾದ ತೀರ್ಮಾನವನ್ನು ಮಾಡುವುದರಲ್ಲಿ ಮಾರ್ಗದರ್ಶನಕ್ಕಾಗಿ ನಾವು ದೃಢಸಂಕಲ್ಪದಿಂದ ಕೇಳಿಕೊಳ್ಳಬಹುದು. ಅನೇಕಾವರ್ತಿ, ಅನ್ವಯವಾಗುವ ಬೈಬಲ್ ಮೂಲತತ್ತ್ವಗಳ ಕುರಿತು ಪವಿತ್ರಾತ್ಮವು ನಮಗೆ ಮರುಜ್ಞಾಪಿಸುವುದು ಅಥವಾ ನಮ್ಮ ಸನ್ನಿವೇಶಕ್ಕೆ ಸರಿಹೋಲುವ ಒಂದು ಶಾಸ್ತ್ರವಚನವನ್ನು ಹೆಚ್ಚು ಯಾಕೋಬ 1:5, 6.
ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡಬಹುದು.—ನಮ್ಮ ತೀರ್ಮಾನಗಳ ಕುರಿತಾಗಿ ಚರ್ಚಿಸಲಿಕ್ಕಾಗಿ ಯೆಹೋವನು ಸಭೆಯಲ್ಲಿ ಪ್ರೌಢ ವ್ಯಕ್ತಿಗಳನ್ನೂ ಒದಗಿಸುತ್ತಾನೆ. (ಎಫೆಸ 4:11, 12) ಆದರೂ, ಬೇರೆಯವರೊಂದಿಗೆ ವಿಚಾರಿಸುವಾಗ, ತಾವು ಏನು ಕೇಳಿಸಿಕೊಳ್ಳಬೇಕೆಂದು ಬಯಸುತ್ತಾರೋ ಅದನ್ನು ಹೇಳುವ ವ್ಯಕ್ತಿ ಸಿಗುವ ವರೆಗೂ ಒಬ್ಬರಿಂದ ಮತ್ತೊಬ್ಬರ ಬಳಿ ಹೋಗುತ್ತಿರುವವರ ಮತ್ತು ಅನಂತರ ಆ ವ್ಯಕ್ತಿಯ ಸಲಹೆಯನ್ನು ಹಿಂಬಾಲಿಸುವವರ ಮಾದರಿಯನ್ನು ನಾವು ಹಿಂಬಾಲಿಸಬಾರದು. ನಾವು ರೆಹಬ್ಬಾಮನ ಎಚ್ಚರಿಕೆಯ ಮಾದರಿಯನ್ನೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಅವನು ಒಂದು ಗಂಭೀರವಾದ ತೀರ್ಮಾನವನ್ನು ಮಾಡಬೇಕಾಗಿದ್ದಾಗ, ತನ್ನ ತಂದೆಗೆ ಸೇವೆ ಸಲ್ಲಿಸಿದ್ದ ಹಿರೀ ಪುರುಷರಿಂದ ಅವನಿಗೆ ಅತ್ಯುತ್ತಮವಾದ ಸಲಹೆಯು ಸಿಕ್ಕಿತು. ಆದರೆ, ಅವರ ಬುದ್ಧಿವಾದವನ್ನು ಹಿಂಬಾಲಿಸುವ ಬದಲು, ತನ್ನ ಜೊತೆಯಲ್ಲಿ ಬೆಳೆದು ದೊಡ್ಡವರಾಗಿದ್ದ ಯುವ ಪುರುಷರನ್ನು ಅವನು ವಿಚಾರಿಸಿದನು. ಅವರ ಸಲಹೆಯನ್ನು ಹಿಂಬಾಲಿಸುತ್ತಾ, ಅವನು ತುಂಬ ತಪ್ಪಾದ ಒಂದು ತೀರ್ಮಾನವನ್ನು ಮಾಡಿದನು ಮತ್ತು ಇದರ ಫಲಿತಾಂಶವಾಗಿ ತನ್ನ ರಾಜ್ಯದ ದೊಡ್ಡ ಭಾಗವನ್ನು ಕಳೆದುಕೊಂಡನು.—1 ಅರಸುಗಳು 12:1-17.
ಸಲಹೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ, ಜೀವನದಲ್ಲಿ ಅನುಭವ ಪಡೆದಿರುವ ಮತ್ತು ಶಾಸ್ತ್ರವಚನಗಳಲ್ಲಿ ಒಳ್ಳೆಯ ಜ್ಞಾನವಿರುವ ಹಾಗೂ ಒಳ್ಳೆಯ ಮೂಲತತ್ತ್ವಗಳಿಗಾಗಿ ಆಳವಾದ ಗೌರವವಿರುವ ವ್ಯಕ್ತಿಗಳಿಂದ ಇದನ್ನು ಪಡೆದುಕೊಳ್ಳಿ. (ಜ್ಞಾನೋಕ್ತಿ 1:5; 11:14; 13:20) ಸಾಧ್ಯವಿರುವಾಗ, ಒಳಗೂಡಿರುವ ಮೂಲತತ್ತ್ವಗಳ ಕುರಿತು ಮತ್ತು ನೀವು ಸಂಗ್ರಹಿಸಿರುವ ಎಲ್ಲಾ ವಿಚಾರಗಳ ಕುರಿತು ಮನನಮಾಡಿರಿ. ವಿಷಯಗಳನ್ನು ನೀವು ಯೆಹೋವನ ವಾಕ್ಯದ ಬೆಳಕಿನಲ್ಲಿ ನೋಡುವಾಗ, ಸರಿಯಾದ ತೀರ್ಮಾನವು ಹೆಚ್ಚು ವ್ಯಕ್ತವಾಗುವುದು.—ಫಿಲಿಪ್ಪಿ 4:6, 7.
ನಾವು ಮಾಡುವಂಥ ತೀರ್ಮಾನಗಳು
ಕೆಲವು ತೀರ್ಮಾನಗಳು ಸುಲಭವಾಗಿ ಮಾಡಲ್ಪಡುತ್ತವೆ. ಸಾಕ್ಷಿಹೇಳಲೇಬಾರದು ಎಂದು ಆಜ್ಞಾಪಿಸಲ್ಪಟ್ಟಾಗ, ಯೇಸುವಿನ ಕುರಿತಾಗಿ ಸಾರುತ್ತಾ ಇರಬೇಕು ಎಂಬುದನ್ನು ತಿಳಿದವರಾಗಿದ್ದು, ತತ್‌ಕ್ಷಣವೇ ಪ್ರತಿಕ್ರಿಯಿಸುತ್ತಾ ತಾವು ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಿರಬೇಕು ಎಂಬ ತಮ್ಮ ತೀರ್ಮಾನವನ್ನು ಹಿರೀಸಭೆಗೆ ಅಪೊಸ್ತಲರು ತಿಳಿಸಿದರು. (ಅ. ಕೃತ್ಯಗಳು 5:28, 29) ಬೇರೆ ತೀರ್ಮಾನಗಳು ಹೆಚ್ಚಿನ ಆಲೋಚನೆಯನ್ನು ಕೇಳಿಕೊಳ್ಳಬಹುದು, ಏಕೆಂದರೆ ಆ ವಿಚಾರದ ಕುರಿತಾಗಿ ಹೇಳುವ ಯಾವುದೇ ನೇರವಾದ ಬೈಬಲ್ ವಾಕ್ಯವು ಇಲ್ಲದಿರಬಹುದು. ಆದರೂ, ಮಾಡಬೇಕಾದ ಅತ್ಯುತ್ತಮವಾದ ತೀರ್ಮಾನದೆಡೆಗೆ ಬೈಬಲ್ ಮೂಲತತ್ತ್ವಗಳು ಕೈತೋರಿಸುತ್ತವೆ. ಉದಾಹರಣೆಗಾಗಿ, ಇಂದಿರುವ ಅನೇಕ ರೀತಿಯ ಮನೋರಂಜನೆಯು ಯೇಸುವಿನ ಕಾಲದಲ್ಲಿ ಇರಲಿಲ್ಲವಾದರೂ, ಯೆಹೋವನು ಯಾವುದನ್ನು ಮೆಚ್ಚುತ್ತಾನೆ ಮತ್ತು ಆತನು ಯಾವುದನ್ನು ಮೆಚ್ಚುವುದಿಲ್ಲ ಎಂಬುದರ ಕುರಿತಾದ ಸ್ಪಷ್ಟವಾದ ಬೈಬಲ್ ಹೇಳಿಕೆಗಳಿವೆ. ಹೀಗಿರಲಾಗಿ, ಯಾವನೇ ಕ್ರೈಸ್ತನು ಹಿಂಸೆ, ಅನೈತಿಕತೆ, ಅಥವಾ ದಂಗೆಕೋರತನವನ್ನು ಪ್ರೋತ್ಸಾಹಿಸುವಂಥ ಮನೋರಂಜನೆಯಲ್ಲಿ ಪಾಲ್ಗೊಳ್ಳುವುದಾದರೆ, ಅವನು ಒಂದು ಕೆಟ್ಟ ತೀರ್ಮಾನವನ್ನು ಮಾಡಿದ್ದಾನೆ.—ಕೀರ್ತನೆ 97:10; ಯೋಹಾನ 3:19-21; ಗಲಾತ್ಯ 5:19-23; ಎಫೆಸ 5:3-5.
ಕೆಲವೊಮ್ಮೆ, ಎರಡು ತೀರ್ಮಾನಗಳಲ್ಲಿ ಎರಡೂ ಸರಿಯಾಗಿರಬಹುದು. ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಅಲ್ಲಿಗೆ ಹೋಗಿ ಸೇವೆಮಾಡುವುದು ಅದ್ಭುತಕರ ಸುಯೋಗವಾಗಿದೆ ಮತ್ತು ಮಹಾ ಆಶೀರ್ವಾದಗಳಿಗೆ ನಡೆಸಬಲ್ಲದು. ಅಥವಾ ಯಾವುದೇ ಕಾರಣಕ್ಕಾಗಿ ಒಬ್ಬ ವ್ಯಕ್ತಿಯು ಹಾಗೆ ಮಾಡಬಾರದೆಂದು ತೀರ್ಮಾನಿಸುವುದಾದರೆ, ಆಗಲೂ ತನ್ನ ಸ್ವಂತ ಸಭೆಯಲ್ಲೇ ಅವನು ಉತ್ತಮವಾದ ಕೆಲಸವನ್ನು ಮಾಡಬಹುದು. ಕೆಲವೊಮ್ಮೆ, ಯೆಹೋವನಿಗಾಗಿರುವ ನಮ್ಮ ಆಳವಾದ ದೈವಭಕ್ತಿಯನ್ನು ಅಥವಾ ನಮ್ಮ ಜೀವನದಲ್ಲಿ ಯಾವುದು ಹೆಚ್ಚು ಪ್ರಾಮುಖ್ಯವಾಗಿದೆ ಎಂಬುದನ್ನು ತೋರಿಸಲು ಅವಕಾಶವನ್ನುಮಾಡಿಕೊಡುವ ತೀರ್ಮಾನವನ್ನು ನಾವು ಮಾಡಬೇಕಾಗಬಹುದು. ಹೀಗೆ, ನಮ್ಮ ಹೃದಯಗಳಲ್ಲಿ ನಿಜವಾಗಿಯೂ ಏನಿದೆ ಎಂಬುದನ್ನು ತೋರಿಸಲಿಕ್ಕಾಗಿ ನಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಉಪಯೋಗಿಸುವಂತೆ ಯೆಹೋವನು ಅನುಮತಿಸುತ್ತಾನೆ.
ಆಗಿಂದಾಗ್ಗೆ ನಮ್ಮ ತೀರ್ಮಾನಗಳಿಂದ ಬೇರೆಯವರು ಬಾಧಿಸಲ್ಪಡುತ್ತಾರೆ. ಉದಾಹರಣೆಗಾಗಿ, ಮೊದಲನೇ ಶತಮಾನದ ಕ್ರೈಸ್ತರು ನಿಯಮಶಾಸ್ತ್ರದ ಅನೇಕ ನಿರ್ಬಂಧಗಳಿಂದ ಬಿಡಿಸಲ್ಪಟ್ಟದ್ದಕ್ಕಾಗಿ ಸಂತೋಷಪಟ್ಟರು. ಇದರರ್ಥ, ದೃಷ್ಟಾಂತಕ್ಕಾಗಿ, ನಿಯಮಶಾಸ್ತ್ರದಲ್ಲಿ ಅಶುದ್ಧವೆಂದು ಹೇಳಲ್ಪಟ್ಟಿದ್ದ ಆಹಾರವನ್ನು ಅವರು ತೆಗೆದುಕೊಳ್ಳಬಹುದು ಅಥವಾ ನಿರಾಕರಿಸಬಹುದು. ಆದರೂ, ಈ ಸ್ವಾತಂತ್ರ್ಯವನ್ನು ಉಪಯೋಗಿಸುವುದೋ ಬೇಡವೋ ಎಂಬುದನ್ನು ತೀರ್ಮಾನಿಸುವಾಗ, ಬೇರೆಯವರ ಮನಸ್ಸಾಕ್ಷಿಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಅವರು ಪ್ರೋತ್ಸಾಹಿಸಲ್ಪಟ್ಟರು. ಪೌಲನು ಇದರ ಕುರಿತು ಹೇಳುವ ಮಾತುಗಳು ನಾವು ಮಾಡುವಂಥ ಅನೇಕ ತೀರ್ಮಾನಗಳಿಗೆ ಅನ್ವಯವಾಗಬಹುದು: “ಇತರರು 1 ಕೊರಿಂಥ 10:32, NW) ನಾವು ಮಾಡಬೇಕಾದ ಅನೇಕ ತೀರ್ಮಾನಗಳನ್ನು ದೃಢಪಡಿಸಿಕೊಳ್ಳುವುದರಲ್ಲಿ, ಇತರರನ್ನು ಎಡವಿಸಬಾರದು ಎಂಬ ಮನದಾಸೆಯು ನಮಗೆ ಸಹಾಯಮಾಡಬಹುದು. ಎಷ್ಟೆಂದರೂ, ನೆರೆಯವನನ್ನು ಪ್ರೀತಿಸಬೇಕೆಂಬುದು ಮುಖ್ಯವಾದ ಆಜ್ಞೆಗಳಲ್ಲಿ ಎರಡನೆಯದ್ದಾಗಿದೆ.—ಮತ್ತಾಯ 22:36, 39.
ಎಡವಲು ಕಾರಣರಾಗುವುದರಿಂದ ದೂರವಿರಿ.” (ನಮ್ಮ ತೀರ್ಮಾನಗಳ ಫಲಿತಾಂಶಗಳು
ಒಳ್ಳೇ ಮನಸ್ಸಾಕ್ಷಿಗೆ ಅನುಗುಣವಾಗಿ ಮತ್ತು ಬೈಬಲ್ ಮೂಲತತ್ತ್ವಗಳ ಮೇಲಾಧಾರಿಸಿ ಮಾಡಲ್ಪಡುವ ತೀರ್ಮಾನಗಳು, ಕೊನೆಯಲ್ಲಿ ಯಾವಾಗಲೂ ಒಳ್ಳೇ ಫಲಿತಾಂಶವನ್ನು ತರುವವು. ಸದ್ಯಕ್ಕೆ ಒಂದುವೇಳೆ ಅವು ಕೆಲವೊಂದು ವೈಯಕ್ತಿಕ ತ್ಯಾಗಗಳನ್ನು ಮಾಡುವುದರಲ್ಲಿ ಪರಿಣಮಿಸಬಹುದು. ಯೇಸುವಿನ ಕುರಿತಾಗಿ ಸಾರುತ್ತಾ ಇರುವೆವು ಎಂಬ ತಮ್ಮ ತೀರ್ಮಾನವನ್ನು ಅಪೊಸ್ತಲರು ಹಿರೀಸಭೆಗೆ ತಿಳಿಸಿದಾಗ, ಅವರು ಬಿಡುಗಡೆಮಾಡಲ್ಪಡುವ ಮುನ್ನ ಹೊಡೆಯಲ್ಪಟ್ಟರು. (ಅ. ಕೃತ್ಯಗಳು 5:40) ಶದ್ರಕ್, ಮೇಶಕ್, ಮತ್ತು ಅಬೇದ್‌ನೆಗೋ ಎಂಬ ಮೂವರು ಇಬ್ರಿಯರು ನೆಬೂಕದ್ನೆಚ್ಚರನ ಬಂಗಾರದ ಪ್ರತಿಮೆಗೆ ಅಡ್ಡಬೀಳಬಾರದೆಂದು ತೀರ್ಮಾನಿಸಿದಾಗ, ಅವರು ತಮ್ಮ ಜೀವಗಳನ್ನು ಅಪಾಯಕ್ಕೆ ಒಡ್ಡಿಕೊಂಡರು. ತಮ್ಮ ತೀರ್ಮಾನವು ತರಸಾಧ್ಯವಿದ್ದ ಮರಣವನ್ನು ಎದುರಿಸುವುದಕ್ಕೂ ಅವರು ಸಿದ್ಧರಿದ್ದರು. ಆದರೆ ತಮಗೆ ದೇವರ ಅಂಗೀಕಾರ ಮತ್ತು ಆಶೀರ್ವಾದವು ಸಿಗುತ್ತದೆ ಎಂಬುದನ್ನು ಅವರು ಅರಿತವರಾಗಿದ್ದರು.—ದಾನಿಯೇಲ 3:16-19.
ಮನಸ್ಸಾಕ್ಷಿಪೂರ್ವಕವಾಗಿ ಮಾಡಿದ ತೀರ್ಮಾನದಿಂದಾಗಿ ನಾವು ಕಷ್ಟಗಳನ್ನು ಎದುರಿಸುವುದಾದರೆ, ನಾವು ಮಾಡಿದ ತೀರ್ಮಾನವು ತಪ್ಪು ಎಂದು ಭಾವಿಸಲು ಅದು ಯಾವುದೇ ಕಾರಣವನ್ನು ಕೊಡುವುದಿಲ್ಲ. “ಕಾಲವೂ ಪ್ರಾಪ್ತಿಯೂ” ಅತ್ಯುತ್ತಮವಾಗಿ ಉದ್ದೇಶಿಸಿದ ತೀರ್ಮಾನಗಳ ಫಲಿತಾಂಶವನ್ನು ಪ್ರತಿಕೂಲವಾಗಿ ಬಾಧಿಸಬಹುದು. (ಪ್ರಸಂಗಿ 9:11) ಕೆಲವೊಮ್ಮೆ, ನಮ್ಮ ಮಾತುಕೊಡುವಿಕೆಯ ಯಥಾರ್ಥತೆಯನ್ನು ಪರೀಕ್ಷಿಸಲಿಕ್ಕಾಗಿಯೂ ಯೆಹೋವನು ಕಷ್ಟಗಳನ್ನು ಅನುಮತಿಸುತ್ತಾನೆ. ಯಾಕೋಬನು ಒಂದು ಆಶೀರ್ವಾದವನ್ನು ಪಡೆದುಕೊಳ್ಳುವ ಮುಂಚೆ ಇಡೀ ರಾತ್ರಿ ಒಬ್ಬ ದೇವದೂತನೊಂದಿಗೆ ಹೋರಾಡಬೇಕಾಯಿತು. (ಆದಿಕಾಂಡ 32:24-26) ನಾವು ಕೂಡ ಕೆಲವೊಮ್ಮೆ, ಸರಿಯಾದದ್ದನ್ನು ಮಾಡುತ್ತಿರುವಾಗಲೂ ಸಂಕಷ್ಟಗಳೊಂದಿಗೆ ಹೋರಾಡಬೇಕಾಗಿರಬಹುದು. ಆದರೂ, ನಮ್ಮ ತೀರ್ಮಾನಗಳು ದೇವರ ಚಿತ್ತಕ್ಕನುಗುಣವಾಗಿರುವುದಾದರೆ, ನಾವು ತಾಳಿಕೊಳ್ಳಲು ಆತನು ನಮಗೆ ಸಹಾಯಮಾಡುವನು ಮತ್ತು ಅಂತಿಮವಾಗಿ ನಮ್ಮನ್ನು ಆಶೀರ್ವದಿಸುವನು ಎಂಬುದರ ಕುರಿತಾಗಿ ನಾವು ದೃಢಸಂಕಲ್ಪದಿಂದಿರಬಲ್ಲೆವು.—2 ಕೊರಿಂಥ 4:7.
ಆದುದರಿಂದ, ಒಂದು ಪ್ರಾಮುಖ್ಯವಾದ ತೀರ್ಮಾನವನ್ನು ಮಾಡುವಾಗ, ನಿಮ್ಮ ಸ್ವಂತ ಜ್ಞಾನದ ಮೇಲೆ ಆತುಕೊಳ್ಳಬೇಡಿ. ಅನ್ವಯವಾಗುವಂಥ ಬೈಬಲ್ ಮೂಲತತ್ತ್ವಗಳಿಗಾಗಿ ಹುಡುಕಿರಿ. ಆ ವಿಷಯದ ಕುರಿತು ಯೆಹೋವನೊಂದಿಗೆ ಮಾತಾಡಿ. ಸಾಧ್ಯವಿರುವಲ್ಲೆಲ್ಲ, ಪ್ರೌಢ ಜೊತೆ ಕ್ರೈಸ್ತರೊಂದಿಗೆ ವಿಚಾರಿಸಿ. ನಂತರ ಧೈರ್ಯದಿಂದಿರಿ. ದೇವರಿಂದ ಕೊಡಲ್ಪಟ್ಟಿರುವ ನಿಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಉಪಯೋಗಿಸಿ. ಒಂದು ಒಳ್ಳೇ ತೀರ್ಮಾನವನ್ನು ಮಾಡಿ ಮತ್ತು ನಿಮ್ಮ ಹೃದಯವು ಯೆಹೋವನ ಮುಂದೆ ನಿರ್ಮಲವಾಗಿದೆ ಎಂಬುದನ್ನು ತೋರ್ಪಡಿಸಿರಿ.
[ಪುಟ 28ರಲ್ಲಿರುವ ಚಿತ್ರ]
ಪ್ರಾಮುಖ್ಯವಾದ ತೀರ್ಮಾನಗಳನ್ನು ಮಾಡುವ ಮುನ್ನ ದೇವರ ವಾಕ್ಯವನ್ನು ಸಂಪರ್ಕಿಸಿ
[ಪುಟ 28, 29ರಲ್ಲಿರುವ ಚಿತ್ರಗಳು]
ನೀವು ಮಾಡಬೇಕಾಗಿರುವ ತೀರ್ಮಾನಗಳ ಕುರಿತು ಯೆಹೋವನೊಂದಿಗೆ ಮಾತಾಡಿ
[ಪುಟ 30ರಲ್ಲಿರುವ ಚಿತ್ರ]
ನಿಮ್ಮ ಬಹುಮುಖ್ಯವಾದ ತೀರ್ಮಾನಗಳ ಕುರಿತು ನೀವು ಪ್ರೌಢ ಕ್ರೈಸ್ತರೊಂದಿಗೆ ಚರ್ಚಿಸಬಹುದು