ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಿಶಾಚನು ಅಸ್ತಿತ್ವದಲ್ಲಿದ್ದಾನೋ?

ಪಿಶಾಚನು ಅಸ್ತಿತ್ವದಲ್ಲಿದ್ದಾನೋ?

ಪಿಶಾಚನು ಅಸ್ತಿತ್ವದಲ್ಲಿದ್ದಾನೋ?

“ಕ್ರೈಸ್ತ ಚರ್ಚಿನ ಇತಿಹಾಸದ ಒಂದು ಕಾಲದಲ್ಲಿ ಕೆಡುಕಿನ ರಾಜನಾದ ಪಿಶಾಚ, ಬೆಲ್ಜೆಬೂಲ ಅಥವಾ ಸೈತಾನನು, ಕೊಂಚವೇ ಜನರಿಗೆ ‘ದೇವರು’ ಇಂದು ಎಷ್ಟು ನೈಜನೂ ಶಕ್ತಿಯುತನೂ ಆಗಿದ್ದಾನೋ ಹಾಗೆಯೇ ಇದ್ದನು; ಯೆಹೂದ್ಯರು ಮತ್ತು ಆದಿ ಕ್ರೈಸ್ತರು ತಮ್ಮ ಸುತ್ತಲೂ ನೋಡಿದ ಕೆಟ್ಟತನಕ್ಕೆ ಕೊಟ್ಟ ಅರೆಮಾನುಷ, ಅರೆಪಾಶವ ಸೃಷ್ಟಿಯೇ ಇದು. ತದನಂತರ, ಇದು ವಾಸ್ತವಿಕತೆಯಲ್ಲಿ ಆಧಾರಿಸಿರದ ಕಾಲ್ಪನಿಕ ರೂಪವೆಂದು ಕ್ರೈಸ್ತರು ಗುರುತಿಸಿ, ಅವನನ್ನು ಕ್ರಮೇಣ ತಿರಸ್ಕರಿಸಿದರು.”​—“ಎಲ್ಲಾ ಕಾಲ್ಪನಿಕವೇ ​—ದೇವರಿಗೆ ತಿರಸ್ಕಾರ” (ಇಂಗ್ಲಿಷ್‌), ಲೂಡೊವಿಕ್‌ ಕೆನಡಿಯಿಂದ.

ಬರಹಗಾರ ಮತ್ತು ಪ್ರಸಾರಕನಾದ ಲೂಡೊವಿಕ್‌ ಕೆನಡಿ ಹೇಳುವ ಪ್ರಕಾರ, ಅನೇಕ ಶತಮಾನಗಳ ವರೆಗೆ ಕ್ರೈಸ್ತಪ್ರಪಂಚದಲ್ಲಿದ್ದ ಯಾರೊಬ್ಬರೂ ಪಿಶಾಚನ ಅಸ್ತಿತ್ವದ ಕುರಿತು ಸಂದೇಹಪಡಲಿಲ್ಲ. ಬದಲಾಗಿ, ಪ್ರೊಫೆಸರ್‌ ನೊರ್ಮನ್‌ ಕೊನ್‌ ವಿವರಿಸುವ ಪ್ರಕಾರ, ಕೆಲವೊಮ್ಮೆ ಕ್ರೈಸ್ತರು “ಸೈತಾನನ ಮತ್ತು ಅವನ ದೆವ್ವಗಳ ಶಕ್ತಿಯಿಂದ ಆಕ್ರಮಿಸಲ್ಪಟ್ಟಿದ್ದರು.” (ಯೂರೋಪಿನ ಆಂತರಿಕ ದೆವ್ವಪ್ರವೃತ್ತಿಗಳು, ಇಂಗ್ಲಿಷ್‌) ಈ ಆಕ್ರಮಣವು ಸಾಧಾರಣ, ವಿದ್ಯಾಭ್ಯಾಸವಿಲ್ಲದ ರೈತರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಉದಾಹರಣೆಗಾಗಿ, ದುಷ್ಟ ಮತ್ತು ಅಶ್ಲೀಲವಾದ ಮತಾಚರಣೆಗಳ ಮೇಲ್ವಿಚಾರಣೆ ನಡೆಸಲಿಕ್ಕಾಗಿ ಪಿಶಾಚನು ಒಂದು ಪ್ರಾಣಿಯ ರೂಪಧಾರಣೆಮಾಡಿದ್ದಾನೆ ಎಂಬ ನಂಬಿಕೆಯು, “ಶಿಕ್ಷಣವಿಲ್ಲದ ಅಧಿಕಾಂಶ ಜನರಿಂದ ಪಾರಂಪರ್ಯವಾಗಿ ಬಂದ ಕಥೆಯಾಗಿರದೇ, ಬುದ್ಧಿಜೀವಿಗಳಾಗಿರುವ ಗಣ್ಯರ ಒಂದು ಗುಂಪಿನ ಗ್ರಹಿಕೆಯಾಗಿದೆ” ಎಂದು ಪ್ರೊಫೆಸರ್‌ ಕೊನ್‌ ಹೇಳುತ್ತಾರೆ. ವಿದ್ಯಾವಂತ ಪಾದ್ರಿವರ್ಗವನ್ನೂ ಒಳಗೊಂಡು ಈ “ಬುದ್ಧಿಜೀವಿಗಳಾಗಿರುವ ಗಣ್ಯರ ಗುಂಪು,” 15ರಿಂದ 17ನೆಯ ಶತಮಾನದ ವರೆಗೆ ಯೂರೋಪಿನಾದ್ಯಂತ ನಡೆದ ಮಾಟಗಾರರ ಬೇಟೆಗೆ ಕಾರಣವಾಗಿತ್ತು. ಈ ಸಮಯದಲ್ಲಿ, ಚರ್ಚ್‌ ಮತ್ತು ಪ್ರಜಾಧಿಪತಿಗಳು ಸುಮಾರು 50,000 ಮಂದಿ ಆಪಾದಿತ ಮಾಟಗಾರರನ್ನು ಹಿಂಸಿಸಿ ಕೊಂದರು ಎಂದು ಹೇಳಲಾಗಿದೆ.

ಆದುದರಿಂದ ಅನೇಕರು ಪಿಶಾಚನ ಕುರಿತಾದ ಭಾವನಾತ್ಮಕ ಮೂಢನಂಬಿಕೆಗಳೆಂದು ತಾವು ಪರಿಗಣಿಸಿದ ವಿಷಯಗಳನ್ನು ತಳ್ಳಿಬಿಟ್ಟಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಹಿಂದೆ 1726ರಲ್ಲಿ ಕೂಡ, ಪಿಶಾಚನು “ಬಾವಲಿಯ ರೆಕ್ಕೆಗಳು, ಕೊಂಬುಗಳು, ಸೀಳುಗೊರಸುಗಳು, ಉದ್ದವಾದ ಬಾಲ, ತ್ರಿಶೂಲಾಕಾರದ ನಾಲಿಗೆ, ಇನ್ನು ಮುಂತಾದ ವೈಶಿಷ್ಟ್ಯಗಳುಳ್ಳ” ಒಂದು ಭೀಕರ ಪೆಡಂಭೂತವಾಗಿದ್ದಾನೆ ಎಂಬ ಜನರ ನಂಬಿಕೆಯನ್ನು ಡ್ಯಾನಿಯಲ್‌ ಡಿಫೆ ಅಪಹಾಸ್ಯಮಾಡಿದನು. ಅವನು ಹೇಳಿದ್ದೇನೆಂದರೆ, ಇಂತಹ ನಂಬಿಕೆಗಳು “ಪಿಶಾಚನ ಪ್ರವರ್ಧಕರು ಮತ್ತು ಪಿಶಾಚನನ್ನು ತಯಾರಿಸುವವರಿಂದ” ಉತ್ಪಾದಿಸಲ್ಪಟ್ಟ “ದುರ್ಬಲವಾದ ಕಾಲ್ಪನಿಕ ಕ್ಷುಲ್ಲಕ ವಿಷಯ”ಗಳಾಗಿವೆ. ಮತ್ತು ಇವರು “ತಮ್ಮ ಸ್ವಂತ ಮನೋಧಾಟಿಯಿಂದ ಮಾಡಿದ ಪಿಶಾಚನ ಮೂಲಕ ಮುಗ್ಧ ಜನಶೇಷವನ್ನು ವಂಚಿಸಿದ್ದಾರೆ.”

ನಿಮ್ಮ ದೃಷ್ಟಿಕೋನವೂ ಅದೇ ರೀತಿಯದ್ದಾಗಿದೆಯೋ? “ಪಿಶಾಚನು ವಾಸ್ತವದಲ್ಲಿ ಮಾನವನ ಪಾಪಸ್ಥಿತಿಯಿಂದುಂಟಾದ ಉತ್ಪತ್ತಿಯಾಗಿದ್ದಾನೆ” ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರೋ? ಆ ಹೇಳಿಕೆಯು, ಝಾಂಡರ್ವನ್‌ ಪಿಕ್ಟೊರಿಯಲ್‌ ಎನ್‌ಸೈಕ್ಲೊಪೀಡಿಯ ಆಫ್‌ ದ ಬೈಬಲ್‌ನಲ್ಲಿ ಕಂಡುಬರುತ್ತದೆ, ಮತ್ತು ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ಇದೇ ರೀತಿಯಲ್ಲಿ ಯೋಚಿಸುತ್ತಾರೆ. ಕ್ರೈಸ್ತಪ್ರಪಂಚದ ದೇವತಾಶಾಸ್ತ್ರಜ್ಞರು, “ಪಿಶಾಚನನ್ನು ಮತ್ತು ದೆವ್ವಗಳನ್ನು ಮೂಢನಂಬಿಕೆಯ ಅವಶೇಷಗಳಾಗಿ ತಳ್ಳಿಹಾಕಿದ್ದಾರೆ” ಎಂದು ಜೆಫ್ರೀ ಬರ್ಟನ್‌ ರಸಲ್‌ ಹೇಳುತ್ತಾರೆ.

ಆದರೂ ಕೆಲವರಿಗೆ, ಪಿಶಾಚನು ತುಂಬ ನೈಜವಾದವನಾಗಿದ್ದಾನೆ. ಮಾನವನ ಇತಿಹಾಸವನ್ನು ವ್ಯಾಪಿಸಿರುವ, ಪದೇ ಪದೇ ನಡೆಯುತ್ತಿರುವ ದುಷ್ಟ ಕೃತ್ಯಗಳ ಹಿಂದೆ ಖಂಡಿತವಾಗಿಯೂ ಯಾವುದೋ ರೀತಿಯ ಒಂದು ಅತಿಮಾನುಷ, ಮಾರಕ ಶಕ್ತಿಯಿರಲೇಬೇಕು ಎಂದು ಅವರು ಸಮರ್ಥಿಸುತ್ತಾರೆ. ರಸಲ್‌ ಹೇಳುವುದು, “ಇಪ್ಪತ್ತನೆಯ ಶತಮಾನವು ಉಂಟುಮಾಡಿರುವ ಘೋರ ಕೃತ್ಯಗಳು, ಬಹಳ ದೀರ್ಘ ಕಾಲಾವಧಿಯ ವರೆಗೆ ಇಲ್ಲವಾಗಿದ್ದ ಪಿಶಾಚನಲ್ಲಿನ ನಂಬಿಕೆಯು, ಈಗ ತೀವ್ರಗತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ” ಒಂದು ಕಾರಣವನ್ನು ಒದಗಿಸುತ್ತವೆ. ಸಂಪಾದಕ ಡಾನ್‌ ಲೂಅಸ್‌ಗನುಸಾರ, ತಮ್ಮ “ಓದುಬರಹ ಬಾರದ ಪೂರ್ವಜರ” ಮೂಢನಂಬಿಕೆಗಳು ಮತ್ತು ಭೀತಿಗಳನ್ನು “ಹಾಸ್ಯವ್ಯಂಗ್ಯವಾಗಿ ಪರಿಗಣಿಸುವ” ಅನೇಕ ಆಧುನಿಕ ಶಿಕ್ಷಿತ ಜನರು, “ಮತ್ತೊಮ್ಮೆ ಅದೃಶ್ಯ ಕ್ಷೇತ್ರದಲ್ಲಿ ಪಿಶಾಚನು ಇದ್ದಾನೆ ಎಂಬ ವಿಚಾರದಿಂದ ಮರುಳುಗೊಳಿಸಲ್ಪಡುತ್ತಿದ್ದಾರೆ.”​—ಯುಗಗಳಾದ್ಯಂತ ಧಾರ್ಮಿಕ ಮೂಢನಂಬಿಕೆ (ಇಂಗ್ಲಿಷ್‌).

ಹಾಗಾದರೆ, ಈ ವಿಷಯದ ಕುರಿತಾದ ಸತ್ಯಾಂಶವಾದರೂ ಏನು? ಪಿಶಾಚನು ಕೇವಲ ಮೂಢನಂಬಿಕೆಯಿಂದುಂಟಾದ ಹುಚ್ಚುತನವೋ? ಅಥವಾ ಅವನು ಈ 21ನೆಯ ಶತಮಾನದಲ್ಲೂ ಗಂಭೀರವಾದ ಪರಿಗಣನೆಗೆ ಅರ್ಹನಾದ ಒಬ್ಬ ವ್ಯಕ್ತಿಯಾಗಿದ್ದಾನೋ?

[ಪುಟ 4ರಲ್ಲಿರುವ ಚಿತ್ರ]

ಗೆಸ್ಟಾವೊ ಡೊರೆಯ ಈ ಕೆತ್ತನೆಯ ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ಹಳೆಯ ಮೂಢನಂಬಿಕೆಗಳು ಪಿಶಾಚನನ್ನು ಅರೆಮಾನುಷ, ಅರೆಪಾಶವ ಸ್ವರೂಪವುಳ್ಳವನಾಗಿ ಚಿತ್ರಿಸಿದವು

[ಕೃಪೆ]

The Judecca​—Lucifer/The Doré Illustrations For Dante’s Divine Comedy/Dover Publications Inc.