ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಿಶಾಚನು ಕೇವಲ ಮೂಢನಂಬಿಕೆಯ ಉತ್ಪತ್ತಿಯಲ್ಲ

ಪಿಶಾಚನು ಕೇವಲ ಮೂಢನಂಬಿಕೆಯ ಉತ್ಪತ್ತಿಯಲ್ಲ

ಪಿಶಾಚನು ಕೇವಲ ಮೂಢನಂಬಿಕೆಯ ಉತ್ಪತ್ತಿಯಲ್ಲ

“ಹೊಸ ಒಡಂಬಡಿಕೆಯಲ್ಲಿ ಎಲ್ಲ ಕಡೆ, ದೇವರ ಹಾಗೂ ಒಳ್ಳೇತನದ ಶಕ್ತಿಗಳು ಒಂದು ಕಡೆಯಲ್ಲಿ ಮತ್ತು ಸೈತಾನನಿಂದ ನಡೆಸಲ್ಪಡುವ ಕೆಡುಕಿನ ಶಕ್ತಿಗಳು ಮತ್ತೊಂದು ಕಡೆಯಲ್ಲಿ ಪರಸ್ಪರ ವಿರೋಧಿಸುತ್ತಿರುವುದನ್ನು ಸೂಚಿಸುತ್ತದೆ. ಇದು ಕೇವಲ ಒಬ್ಬ ಅಥವಾ ಮತ್ತೊಬ್ಬ ಲೇಖಕನ ಭಾವನೆಯಾಗಿರುವುದಿಲ್ಲ, ಬದಲಿಗೆ ಎಲ್ಲರಿಂದಲೂ ನಂಬಲ್ಪಟ್ಟದ್ದಾಗಿದೆ. . . . ಹಾಗಾದರೆ ಹೊಸ ಒಡಂಬಡಿಕೆಯ ಸಾಕ್ಷ್ಯವು ಸ್ಪಷ್ಟವಾಗಿದೆ. ಸೈತಾನನು ಒಂದು ಮಾರಕ ವಾಸ್ತವಾಂಶವಾಗಿದ್ದು, ದೇವರನ್ನು ಮತ್ತು ದೇವಜನರನ್ನು ಸದಾ ವಿರೋಧಿಸುವವನಾಗಿದ್ದಾನೆ.”​—“ದ ನ್ಯೂ ಬೈಬಲ್‌ ಡಿಕ್ಷನೆರಿ.”

ಹಾಗಾದರೆ, ಕ್ರೈಸ್ತತ್ವದ ಭಾಗವಾಗಿದ್ದೇವೆ ಎಂದು ಹೇಳಿಕೊಳ್ಳುವ ಮತ್ತು ಬೈಬಲಿನಲ್ಲಿ ನಂಬಿಕೆಯಿದೆ ಎಂದು ಸಮರ್ಥಿಸುವ ಅನೇಕರು, ಪಿಶಾಚನು ನಿಜವಾಗಿಯೂ ಅಸ್ತಿತ್ವದಲ್ಲಿದ್ದಾನೆ ಎಂಬ ವಿಚಾರವನ್ನು ಏಕೆ ನಿರಾಕರಿಸುತ್ತಾರೆ? ನಿಜಾಂಶವೇನೆಂದರೆ, ಅವರು ಬೈಬಲನ್ನು ದೇವರ ವಾಕ್ಯವೆಂದು ಅಂಗೀಕರಿಸುವುದಿಲ್ಲ. (ಯೆರೆಮೀಯ 8:9) ಅವರು ಹೇಳುವುದೇನೆಂದರೆ, ಬೈಬಲಿನ ಬರಹಗಾರರು ತಮ್ಮ ಸುತ್ತಲೂ ಇದ್ದ ಜನಾಂಗಗಳ ತತ್ತ್ವಜ್ಞಾನಗಳನ್ನು ಪ್ರತಿಬಿಂಬಿಸಿದರು ಮತ್ತು ದೇವರಿಂದ ಒದಗಿಸಲ್ಪಟ್ಟ ಸತ್ಯವನ್ನು ನಿಷ್ಕೃಷ್ಟವಾಗಿ ತಿಳಿಯಪಡಿಸಲಿಲ್ಲ. ಉದಾಹರಣೆಗೆ, ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞನಾದ ಹ್ಯಾನ್ಸ್‌ ಕಂಗ್‌ ಬರೆಯುವುದು: “ಸೈತಾನನು ಮತ್ತು ಅವನೊಂದಿಗಿರುವ ಅಸಂಖ್ಯಾತ ದೆವ್ವಗಳ ಕುರಿತಾದ ಪುರಾಣ ಕಥೆಗಳು . . . ಬಾಬೆಲಿನ ಪುರಾಣ ಕಥೆಯಿಂದ ಆರಂಭದ ಯೆಹೂದಿಮತಕ್ಕೆ ಮತ್ತು ಅದರಿಂದ ಹೊಸ ಒಡಂಬಡಿಕೆಯಲ್ಲಿ ಒಳನುಗ್ಗಿದವು.”​—ಕ್ರೈಸ್ತನಾಗಿರುವುದು (ಇಂಗ್ಲಿಷ್‌).

ಆದರೆ ಬೈಬಲ್‌ ಕೇವಲ ಮಾನವನ ವಾಕ್ಯವಾಗಿರುವುದಿಲ್ಲ; ಅದು ಖಂಡಿತವಾಗಿಯೂ ದೇವರ ಪ್ರೇರಿತ ವಾಕ್ಯವಾಗಿದೆ. ಆದುದರಿಂದ, ಅದು ಪಿಶಾಚನ ಕುರಿತಾಗಿ ಏನು ಹೇಳುತ್ತದೋ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ನಮಗೆ ವಿವೇಕಯುತವಾಗಿರುವುದು.​—2 ತಿಮೊಥೆಯ 3:14-17; 2 ಪೇತ್ರ 1:20, 21.

ಯೇಸುವಿಗೆ ಯಾವ ಅನಿಸಿಕೆಯಿತ್ತು?

ಪಿಶಾಚನು ನಿಜವಾಗಿಯೂ ಇದ್ದಾನೆ ಎಂದು ಯೇಸು ಕ್ರಿಸ್ತನು ನಂಬಿದನು. ಯೇಸು ತನ್ನ ಆಂತರ್ಯದಲ್ಲಿದ್ದ ಯಾವುದೋ ಕೆಡುಕಿನಿಂದ ಶೋಧನೆಗೊಳಗಾಗಲಿಲ್ಲ. ಸ್ವಲ್ಪ ಕಾಲದ ನಂತರ “ಇಹಲೋಕಾಧಿಪತಿ” ಎಂದು ಅವನು ಯಾರನ್ನು ಕರೆದನೋ ಆ ಒಬ್ಬ ನೈಜ ವ್ಯಕ್ತಿಯಿಂದ ಅವನು ದಾಳಿಮಾಡಲ್ಪಟ್ಟನು. (ಯೋಹಾನ 14:30; ಮತ್ತಾಯ 4:1-11) ಇನ್ನಿತರ ಆತ್ಮ ಜೀವಿಗಳು ಸೈತಾನನ ದುಷ್ಟ ಒಳಸಂಚುಗಳಲ್ಲಿ ಅವನನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನೂ ನಂಬಿದನು. ಅವನು ‘ದೆವ್ವಹಿಡಿದಿದ್ದ’ ಜನರನ್ನು ಸ್ವಸ್ಥಮಾಡಿದನು. (ಮತ್ತಾಯ 12:22-28) ಎ ರ್ಯಾಷನಲಿಸ್ಟಿಕ್‌ ಎನ್‌ಸೈಕ್ಲೊಪೀಡಿಯ ಎಂಬ ನಾಸ್ತಿಕ ಪ್ರಕಾಶನವು ಕೂಡ ಇದರ ಮಹತ್ವವನ್ನು ಗಮನಿಸುತ್ತಾ ಹೀಗೆ ಹೇಳುತ್ತದೆ: “ಸುವಾರ್ತೆಗಳಲ್ಲಿ ತಿಳಿಸಲ್ಪಟ್ಟಿರುವ ಯೇಸು ಹೇಗೆ ದೆವ್ವಗಳಲ್ಲಿ ತನ್ನ ನಂಬಿಕೆಯನ್ನು ವ್ಯಕ್ತಪಡಿಸಿದನು ಎಂಬುದು ದೇವತಾಶಾಸ್ತ್ರಜ್ಞರಿಗೆ ಯಾವಾಗಲೂ ಎಡವುಗಲ್ಲಾಗಿದೆ.” ಪಿಶಾಚನು ಮತ್ತು ದೆವ್ವಗಳ ಕುರಿತಾಗಿ ಯೇಸು ಮಾತಾಡಿದಾಗ, ಅವನು ಬಾಬೆಲಿನ ಪುರಾಣ ಕಥೆಯಿಂದ ಬಂದಿರುವ ಮೂಢನಂಬಿಕೆಗಳನ್ನು ಪುನರಾವರ್ತಿಸುತ್ತಿರಲಿಲ್ಲ. ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆ ಎಂಬುದನ್ನು ಅವನು ತಿಳಿದವನಾಗಿದ್ದನು.

ತನ್ನ ದಿನದ ಧಾರ್ಮಿಕ ಬೋಧಕರಿಗೆ ಯೇಸು ಹೇಳಿದ ಮಾತುಗಳನ್ನು ನಾವು ಪರಿಗಣಿಸುವ ಮೂಲಕ, ಪಿಶಾಚನ ವಿಷಯದಲ್ಲಿ ನಾವು ಹೆಚ್ಚಿನದ್ದನ್ನು ಕಲಿಯುತ್ತೇವೆ: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.”​—ಯೋಹಾನ 8:44.

ಇದರ ಪ್ರಕಾರ, “ಮಿಥ್ಯಾಪವಾದಿ” ಎಂಬ ನಾಮಾರ್ಥವನ್ನು ಹೊಂದಿರುವ ಪಿಶಾಚನು, “ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.” (ಓರೆ ಅಕ್ಷರಗಳು ನಮ್ಮವು.) ದೇವರ ಕುರಿತಾಗಿ ಸುಳ್ಳಾಡಿದ ಮೊದಲ ಸೃಷ್ಟಿಜೀವಿ ಅವನೇ ಆಗಿದ್ದನು, ಮತ್ತು ಇದನ್ನು ಅವನು ಏದೆನ್‌ ತೋಟದಲ್ಲೇ ಮಾಡಿದನು. ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದಿಂದ ಹಣ್ಣನ್ನು ತಿಂದರೆ ನಮ್ಮ ಮೂಲ ಹೆತ್ತವರು ‘ಸತ್ತೇ ಹೋಗುವರು’ ಎಂಬುದಾಗಿ ಯೆಹೋವನು ಹೇಳಿದ್ದನು. ಒಂದು ಸರ್ಪದ ಮೂಲಕ ಸೈತಾನನು, ಆ ಮಾತುಗಳು ಸತ್ಯವಲ್ಲ ಎಂದು ಹೇಳಿದನು. (ಆದಿಕಾಂಡ 2:17; 3:4) ಸೂಕ್ತವಾಗಿಯೇ, “ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ” ಎಂದು ಅವನು ಕರೆಯಲ್ಪಟ್ಟಿದ್ದಾನೆ.​—ಪ್ರಕಟನೆ 12:9.

ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಕುರಿತಾಗಿ ಪಿಶಾಚನು ಸುಳ್ಳಾಡಿದನು. ಆ ಮರದ ಹಣ್ಣನ್ನು ತಿನ್ನುವುದರ ಮೇಲೆ ಒಡ್ಡಲ್ಪಟ್ಟಿರುವ ನಿಷೇಧವು, ಅನ್ಯಾಯವಾಗಿದೆ, ಅಧಿಕಾರದ ದುರುಪಯೋಗವಾಗಿದೆ ಎಂದು ಅವನು ವಾದಿಸಿದನು. ಆದಾಮಹವ್ವರು ಒಳ್ಳೇದರ ಮತ್ತು ಕೆಟ್ಟದ್ದರ ಬೇಧವನ್ನು ನಿರ್ಧರಿಸುವುದರಲ್ಲಿ ‘ದೇವರಂತೆ ಆಗುವರು’ ಎಂದು ಅವನು ಹೇಳಿದನು. ಆದುದರಿಂದ, ಸ್ವತಂತ್ರ ನೈತಿಕ ವ್ಯಕ್ತಿಗಳಾಗಿರುವ ಅವರಿಗೆ ಸ್ವನಿರ್ಧಾರಮಾಡುವ ಸಂಪೂರ್ಣ ಹಕ್ಕು ಇದೆ ಎಂಬ ಅನಿಸಿಕೆಯನ್ನು ಅವನು ವ್ಯಕ್ತಪಡಿಸಿದನು. (ಆದಿಕಾಂಡ 3:​1-5) ದೇವರು ಆಡಳಿತ ನಡೆಸುವ ರೀತಿಯ ಯೋಗ್ಯತೆಯ ಮೇಲೆ ಮಾಡಿದಂಥ ಈ ದಾಳಿಯು, ನಿರ್ಣಾಯಕ ವಿವಾದಗಳನ್ನು ಎಬ್ಬಿಸಿತು. ಆದುದರಿಂದ ಈ ವಿವಾದಗಳು ಬಗೆಹರಿಸಲ್ಪಡಲು ಯೆಹೋವನು ಸಮಯವನ್ನು ಅನುಮತಿಸಿದ್ದಾನೆ. ಅಂದರೆ, ಸೈತಾನನು ಸ್ವಲ್ಪಕಾಲ ಜೀವಿಸಲಿಕ್ಕಾಗಿ ಅನುಮತಿಸಲ್ಪಟ್ಟಿದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ. ಅವನ ನಿಗದಿತ ಕಾಲವು ಈಗ ಕ್ಷಿಪ್ರವಾಗಿ ಕೊನೆಗೊಳ್ಳುತ್ತಿದೆ. (ಪ್ರಕಟನೆ 12:12) ಯೇಸುವಿನ ದಿನದಲ್ಲಿದ್ದ ಶಾಸ್ತ್ರಿಗಳು ಮತ್ತು ಫರಿಸಾಯರಂಥ ಜನರನ್ನು, ತನ್ನ ಬೋಧನೆಗಳನ್ನು ಪ್ರಸಾರಮಾಡಲಿಕ್ಕಾಗಿ ಉಪಯೋಗಿಸುತ್ತಾ, ಈಗಲೂ ಸೈತಾನನು ಸುಳ್ಳು ಮತ್ತು ವಂಚನೆಯ ಮೂಲಕ ಮಾನವಕುಲವನ್ನು ದೇವರಿಂದ ವಿಮುಖಗೊಳಿಸುವುದನ್ನು ಮುಂದುವರಿಸುತ್ತಿದ್ದಾನೆ.​—ಮತ್ತಾಯ 23:13, 15.

ಪಿಶಾಚನು “ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ” ಎಂದು ಸಹ ಯೇಸು ಹೇಳಿದನು. (ಓರೆ ಅಕ್ಷರಗಳು ನಮ್ಮವು.) ಆದರೆ ಯೆಹೋವನು ಪಿಶಾಚನನ್ನು ‘ಕೊಲೆಗಾರನಾಗಿ’ ಸೃಷ್ಟಿಸಿದನು ಎಂಬುದನ್ನು ಇದು ಅರ್ಥೈಸುವುದಿಲ್ಲ. ದೇವರನ್ನು ವಿರೋಧಿಸುವವರಿಗಾಗಿರುವ ಅಗ್ನಿ ಮತ್ತು ಯಾತನೆಯ ಸ್ಥಳದ ಅಧಿಕಾರಿಯೋಪಾದಿ ಯಾವುದೇ ರೀತಿಯ ಪೆಡಂಭೂತವಾಗಿ ಅವನು ಸೃಷ್ಟಿಸಲ್ಪಡಲಿಲ್ಲ. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ “ನರಕ”ವು ಸೈತಾನನ ವಾಸಸ್ಥಳವಲ್ಲ. ಅದು ಮಾನವಕುಲದ ಸಾಮಾನ್ಯ ಸಮಾಧಿಯಾಗಿದೆ ಅಷ್ಟೇ.​—ಅ. ಕೃತ್ಯಗಳು 2:25-27; ಪ್ರಕಟನೆ 20:13, 14.

ಪಿಶಾಚನು ಆದಿಯಲ್ಲಿ ‘ಸತ್ಯದಲ್ಲಿದ್ದನು.’ ದೇವರ ಪರಿಪೂರ್ಣ ಆತ್ಮ ಪುತ್ರನಾಗಿ ಅವನು ಒಂದು ಕಾಲದಲ್ಲಿ ದೇವರ ಸ್ವರ್ಗೀಯ ಕುಟುಂಬದ ಭಾಗವಾಗಿದ್ದನು. ಆದರೆ ಅವನು “ಸತ್ಯದಲ್ಲಿ ನಿಲ್ಲಲಿಲ್ಲ.” ಅವನು ತನ್ನ ಸ್ವಂತ ಮಾರ್ಗಗಳನ್ನು ಮತ್ತು ಸ್ವಂತ ಸುಳ್ಳು ಮೂಲತತ್ತ್ವಗಳನ್ನು ಆರಿಸಿಕೊಂಡನು. “ಆದಿಯಿಂದಲೂ” ಎಂಬುದು, ಅವನು ದೇವದೂತ ಪುತ್ರನಾಗಿ ಸೃಷ್ಟಿಸಲ್ಪಟ್ಟ ಸಮಯವನ್ನು ಅಲ್ಲ, ಬದಲಾಗಿ ಅವನು ಮನಃಪೂರ್ವಕವಾಗಿ ಯೆಹೋವನ ವಿರುದ್ಧ ದಂಗೆಯೆದ್ದು ಆದಾಮಹವ್ವರೊಂದಿಗೆ ಸುಳ್ಳಾಡಿದ್ದ ಸಮಯವನ್ನು ಸೂಚಿಸುತ್ತದೆ. ಪಿಶಾಚನು, ಮೋಶೆಯನ ಕಾಲದಲ್ಲಿ ಯೆಹೋವನ ವಿರುದ್ಧ ದಂಗೆಯೆದ್ದ ಜನರಂತೆಯೇ ಇದ್ದಾನೆ. ಅವರ ಕುರಿತಾಗಿ ನಾವು ಓದುವುದು: “ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷ.” (ಧರ್ಮೋಪದೇಶಕಾಂಡ 32:5) ಸೈತಾನನ ಕುರಿತಾಗಿಯೂ ಇದನ್ನೇ ಹೇಳಸಾಧ್ಯವಿದೆ. ಅವನು ದಂಗೆಯೆದ್ದು, ಆದಾಮಹವ್ವರ ಮರಣಕ್ಕೆ ಮತ್ತು ವಾಸ್ತವದಲ್ಲಿ ಇಡೀ ಮಾನವ ಕುಟುಂಬದ ಮರಣಕ್ಕೆ ಜವಾಬ್ದಾರನಾದಾಗ, ಅವನು ‘ಕೊಲೆಗಾರನಾದನು.’​—ರೋಮಾಪುರ 5:12.

ಅವಿಧೇಯ ದೇವದೂತರು

ಬೇರೆ ದೇವದೂತರು ಸೈತಾನನೊಂದಿಗೆ ಅವನ ದಂಗೆಯಲ್ಲಿ ಸೇರಿಕೊಂಡರು. (ಲೂಕ 11:14, 15) ನೋಹನ ದಿನಗಳಲ್ಲಿ ‘ಮನುಷ್ಯ ಪುತ್ರಿಯರೊಂದಿಗೆ’ ಲೈಂಗಿಕ ಸಂಬಂಧದಲ್ಲಿ ಆನಂದಿಸಲಿಕ್ಕಾಗಿ ಈ ದೇವದೂತರು ಮಾನವ ಶರೀರಗಳನ್ನು ಧರಿಸಿದರು ಮತ್ತು ‘ತಮಗೆ ತಕ್ಕ ವಾಸಸ್ಥಾನವನ್ನು ಬಿಟ್ಟರು.’ (ಯೂದ 6; ಆದಿಕಾಂಡ 6:1-4; 1 ಪೇತ್ರ 3:19, 20) “ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗ” ಅಥವಾ ಕೊಂಚ ಸಂಖ್ಯೆಯ ಆತ್ಮ ಜೀವಿಗಳು ಈ ಮಾರ್ಗವನ್ನು ಹಿಡಿದಿದ್ದಾರೆ.​—ಪ್ರಕಟನೆ 12:4.

ಹೆಚ್ಚು ಸಾಂಕೇತಿಕ ಭಾಷೆಯುಳ್ಳ ಪ್ರಕಟನೆಯ ಪುಸ್ತಕವು ಪಿಶಾಚನನ್ನು ಒಂದು “ಕೆಂಪಾದ ಮಹಾ ಘಟಸರ್ಪ”ವಾಗಿ ಚಿತ್ರಿಸುತ್ತದೆ. (ಪ್ರಕಟನೆ 12:3) ಏಕೆ? ಅವನಿಗೆ ಅಕ್ಷರಾರ್ಥದಲ್ಲಿ ಭೀಕರ ನೋಟವುಳ್ಳ ಅವಲಕ್ಷಣವಾದ ದೇಹವಿದೆ ಎಂಬ ಕಾರಣಕ್ಕಾಗಿ ಅಲ್ಲ. ವಾಸ್ತವದಲ್ಲಿ, ಆತ್ಮ ಜೀವಿಗಳಿಗೆ ಯಾವ ರೀತಿಯ ದೇಹವಿದೆ ಎಂಬುದು ನಮಗೆ ಗೊತ್ತಿಲ್ಲವಾದರೂ, ಬೇರೆ ದೇವದೂತ ಆತ್ಮ ಜೀವಿಗಳಿಗಿರುವಂತೆಯೇ ಸೈತಾನನ ದೇಹವೂ ಇರುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೂ, “ಕೆಂಪಾದ ಮಹಾ ಘಟಸರ್ಪ” ಎಂಬುದು, ಸೈತಾನನ ಅತ್ಯಾಸೆಯ, ಭೀಕರ, ಶಕ್ತಿಯುತ, ಮತ್ತು ವಿನಾಶಕಾರಿ ಪ್ರವೃತ್ತಿಯ ಸೂಕ್ತವಾದ ವರ್ಣನೆಯಾಗಿದೆ.

ಸೈತಾನನು ಮತ್ತು ಅವನ ದೆವ್ವಗಳು ಈಗ ತೀವ್ರವಾಗಿ ನಿರ್ಬಂಧಿಸಲ್ಪಟ್ಟಿವೆ. ಅವರು ಒಂದು ಕಾಲದಲ್ಲಿ ಮಾಡಿದಂತೆ ಇನ್ನು ಮುಂದೆ ದೇಹಾಧಾರಣೆಮಾಡಲು ಸಾಧ್ಯವಿಲ್ಲ. 1914ರಲ್ಲಿ ಕ್ರಿಸ್ತನ ಕೈಕೆಳಗೆ ದೇವರ ರಾಜ್ಯದ ಸ್ಥಾಪನೆಯಾದ ಸ್ವಲ್ಪ ಸಮಯದ ನಂತರ, ಅವರು ಭೂಮಿಯ ಕ್ಷೇತ್ರಕ್ಕೆ ದೊಬ್ಬಲ್ಪಟ್ಟರು.​—ಪ್ರಕಟನೆ 12:7-9.

ಪಿಶಾಚನು ಭಯಾನಕ ಎದುರಾಳಿಯಾಗಿದ್ದಾನೆ

ಆದರೂ, ಪಿಶಾಚನು ಒಂದು ಭಯಾನಕ ಎದುರಾಳಿಯಾಗಿಯೇ ಉಳಿದಿದ್ದಾನೆ. ಅವನು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ಅವನು ನಮ್ಮ ಅಪರಿಪೂರ್ಣ ದೇಹಗಳಲ್ಲಿ ವಾಸಿಸುವ ಅನುದ್ದಿಷ್ಟವಾದ ದುಷ್ಟ ಭಾವನೆಯಾಗಿಲ್ಲ. ನಮ್ಮ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ನಾವು ಪ್ರತಿನಿತ್ಯ ಹೋರಾಡಬೇಕೆಂಬುದು ನಿಜವೇ. (ರೋಮಾಪುರ 7:18-20) ಆದರೆ ನಿಜವಾದ ಹೋರಾಟವು, “ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ” ಆಗಿದೆ.​—ಎಫೆಸ 6:12.

ಪಿಶಾಚನ ಪ್ರಭಾವವು ಎಷ್ಟು ವಿಸ್ತಾರವಾಗಿ ಹಬ್ಬಿಕೊಂಡಿದೆ? “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ,” ಎಂದು ಅಪೊಸ್ತಲ ಯೋಹಾನನು ಹೇಳಿದನು. (1 ಯೋಹಾನ 5:19) ಪಿಶಾಚನಿಂದ ಆಕ್ರಮಣಮಾಡಲ್ಪಡಲು ಅಥವಾ ಮೂಢನಂಬಿಕೆಗಳ ಭಯವು ನಮ್ಮನ್ನು ನಿತ್ರಾಣಗೊಳಿಸುವಂತೆ ಬಿಡಲು ನಾವು ಬಯಸುವುದಿಲ್ಲ ಎಂಬುದು ನಿಜ. ಆದರೂ, ಸತ್ಯದೆಡೆಗೆ ನಮ್ಮನ್ನು ಕುರುಡುಗೊಳಿಸಲು ಮತ್ತು ಯೆಹೋವನ ಕಡೆಗಿನ ನಮ್ಮ ಯಥಾರ್ಥತೆಯನ್ನು ಮುರಿಯಲು ಅವನು ಮಾಡುವ ಪ್ರಯತ್ನಗಳ ಕುರಿತು ನಾವು ಎಚ್ಚರವುಳ್ಳವರಾಗಿರುವುದು ವಿವೇಕಯುತವಾದದ್ದಾಗಿದೆ.​—ಯೋಬ 2:3-5; 2 ಕೊರಿಂಥ 4:3, 4.

ದೇವರ ಚಿತ್ತವನ್ನು ಮಾಡಲು ಬಯಸುವವರ ಮೇಲೆ ಆಕ್ರಮಣಮಾಡಲು ಪಿಶಾಚನು ಎಲ್ಲಾ ಸಮಯಗಳಲ್ಲಿ ಕ್ರೂರವಾದ ವಿಧಾನಗಳನ್ನೇ ಉಪಯೋಗಿಸುವುದಿಲ್ಲ. ಕೆಲವೊಮ್ಮೆ ಅವನು ‘ಪ್ರಕಾಶರೂಪವುಳ್ಳ ದೇವದೂತನಂತೆ’ ತನ್ನನ್ನು ತೋರಿಸಿಕೊಳ್ಳುತ್ತಾನೆ. ಅಪೊಸ್ತಲ ಪೌಲನು ಈ ಅಪಾಯದ ಕುರಿತಾಗಿ ಕ್ರೈಸ್ತರನ್ನು ಎಚ್ಚರಿಸುತ್ತಾ ಹೀಗೆ ಬರೆದನು: “ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು.”​—2 ಕೊರಿಂಥ 11:3, 14, 15.

ಆದುದರಿಂದ, ನಾವು ‘ಸ್ವಸ್ಥಚಿತ್ತರಾಗಿದ್ದು, ಎಚ್ಚರವಾಗಿದ್ದು, ಅವನನ್ನು ಎದುರಿಸಿ, ನಂಬಿಕೆಯಲ್ಲಿ ದೃಢವಾಗಿರಬೇಕಾದ’ ಆವಶ್ಯಕತೆಯಿದೆ. (1 ಪೇತ್ರ 5:8, 9; 2 ಕೊರಿಂಥ 2:11) ಮಾಟಮಂತ್ರಕ್ಕೆ ಸಂಬಂಧಪಟ್ಟಿರುವ ಯಾವುದೇ ವಿಷಯದೊಂದಿಗೆ ಆಟವಾಡದಿರುವ ಮೂಲಕ ಸೈತಾನನಿಗೆ ಸುಲಭವಾಗಿ ಬಲಿಯಾಗುವುದನ್ನು ತಪ್ಪಿಸಿರಿ. (ಧರ್ಮೋಪದೇಶಕಾಂಡ 18:10-12) ಪಿಶಾಚನಿಂದ ಪರೀಕ್ಷಿಸಲ್ಪಟ್ಟಾಗ ಯೇಸು ಕ್ರಿಸ್ತನು ಪದೇ ಪದೇ ದೇವರ ವಾಕ್ಯವನ್ನು ಉಲ್ಲೇಖಿಸಿದನು ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು, ದೇವರ ವಾಕ್ಯದ ಒಳ್ಳೇ ವಿದ್ಯಾರ್ಥಿಯಾಗಿರ್ರಿ. (ಮತ್ತಾಯ 4:4, 7, 10) ದೇವರಾತ್ಮಕ್ಕಾಗಿ ಪ್ರಾರ್ಥಿಸಿರಿ. ಅದರ ಪ್ರತಿಫಲವು, ಸೈತಾನನು ಹೆಚ್ಚು ಪರಿಣಾಮಕಾರಿಯಾಗಿ ಪ್ರೇರೇಪಿಸುವ ಶರೀರಭಾವದ ಕರ್ಮಗಳನ್ನು ದೂರಮಾಡಲು ನಿಮಗೆ ಸಹಾಯಮಾಡುವುದು. (ಗಲಾತ್ಯ 5:16-24) ಮಾತ್ರವಲ್ಲದೆ, ಪಿಶಾಚನಿಂದ ಮತ್ತು ಅವನ ದೆವ್ವಗಳಿಂದ ಯಾವುದೋ ರೀತಿಯಲ್ಲಿ ಒತ್ತಡಕ್ಕೊಳಗಾದಂತೆ ನಿಮಗೆ ಅನಿಸುವಾಗ, ಮನಃಪೂರ್ವಕವಾಗಿ ಯೆಹೋವನಿಗೆ ಪ್ರಾರ್ಥಿಸಿರಿ.​—ಫಿಲಿಪ್ಪಿ 4:6, 7.

ಪಿಶಾಚನ ಕುರಿತು ಭಯಪಡುವ ಆವಶ್ಯಕತೆಯಿಲ್ಲ. ಸೈತಾನನು ಏನೇ ಮಾಡಲಿ, ಅದರ ವಿರುದ್ಧ ನಮಗೆ ನಿಜವಾದ ಸಂರಕ್ಷಣೆಯನ್ನು ಕೊಡುವೆನೆಂದು ಯೆಹೋವನು ವಾಗ್ದಾನಿಸುತ್ತಾನೆ. (ಕೀರ್ತನೆ 91:1-4; ಜ್ಞಾನೋಕ್ತಿ 18:10; ಯಾಕೋಬ 4:7, 8) “ನೀವು ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳಿರಿ” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. ಆಗ, ನೀವು ‘ಪಿಶಾಚನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಿರಿ.’​—ಎಫೆಸ 6:10, 11.

[ಪುಟ 5ರಲ್ಲಿರುವ ಚಿತ್ರ]

ಪಿಶಾಚನು ಒಬ್ಬ ನೈಜ ವ್ಯಕ್ತಿಯಾಗಿದ್ದಾನೆ ಎಂಬುದು ಯೇಸುವಿಗೆ ತಿಳಿದಿತ್ತು

[ಪುಟ 6ರಲ್ಲಿರುವ ಚಿತ್ರ]

“ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ”

[ಕೃಪೆ]

NASA photo

[ಪುಟ 7ರಲ್ಲಿರುವ ಚಿತ್ರಗಳು]

ಕ್ರಮವಾಗಿ ದೇವರ ವಾಕ್ಯವನ್ನು ಅಭ್ಯಾಸಿಸುವ ಮತ್ತು ಪ್ರಾರ್ಥಿಸುವ ಮೂಲಕ ಪಿಶಾಚನ ವಿರುದ್ಧ ದೃಢರಾಗಿ ನಿಲ್ಲಿರಿ