ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಧ್ಯಪೂರ್ವದಲ್ಲಿ ಆತ್ಮಿಕ ಬೆಳಕು ಪ್ರಕಾಶಿಸುತ್ತದೆ

ಮಧ್ಯಪೂರ್ವದಲ್ಲಿ ಆತ್ಮಿಕ ಬೆಳಕು ಪ್ರಕಾಶಿಸುತ್ತದೆ

ಜೀವನ ಕಥೆ

ಮಧ್ಯಪೂರ್ವದಲ್ಲಿ ಆತ್ಮಿಕ ಬೆಳಕು ಪ್ರಕಾಶಿಸುತ್ತದೆ

ನೆಜೀಬ್‌ ಸಾಲಮ್‌ರಿಂದ ಅವರು ಹೇಳಿದಂತೆ

ಸಾ.ಶ. ಮೊದಲನೆಯ ಶತಮಾನದಲ್ಲಿ, ದೇವರ ವಾಕ್ಯದ ಬೆಳಕು ಮಧ್ಯಪೂರ್ವದಿಂದ ಹೊರಟು, ಭೂಮಿಯ ಕಟ್ಟಕಡೆಯ ವರೆಗೂ ತಲಪಿತು. ಆದರೆ 20ನೆಯ ಶತಮಾನದಲ್ಲಿ ಆ ಬೆಳಕು, ಲೋಕದ ಆ ಭಾಗವನ್ನು ಪುನಃ ಒಮ್ಮೆ ಬೆಳಗಿಸಲು ಹಿಂದಿರುಗಿ ಬಂತು. ಅದು ಹೇಗಾಯಿತೆಂಬುದನ್ನು ನಾನು ನಿಮಗೆ ತಿಳಿಸುವೆ.

ನಾನು 1913ರಲ್ಲಿ, ಉತ್ತರ ಲೆಬನನ್‌ನ ಆ್ಯಮ್ಯೂನ್‌ ಪಟ್ಟಣದಲ್ಲಿ ಹುಟ್ಟಿದೆ. ಆ ವರ್ಷ ಲೋಕದಲ್ಲಿ ಸಾಧಾರಣ ಮಟ್ಟಿಗಿನ ಸ್ಥಿರತೆ ಮತ್ತು ಪ್ರಶಾಂತತೆಯಿತ್ತು ಏಕೆಂದರೆ ಮರುವರ್ಷವೇ Iನೆಯ ಲೋಕ ಯುದ್ಧವು ಆರಂಭವಾಯಿತು. 1918ರಲ್ಲಿ ಯುದ್ಧವು ಕೊನೆಗೊಂಡಾಗ, ಆ ಸಮಯದಲ್ಲಿ ಮಧ್ಯಪೂರ್ವದ ಮುತ್ತು ಎಂದು ಕರೆಯಲ್ಪಡುತ್ತಿದ್ದ ಲೆಬನನ್‌ ದೇಶವು ಆರ್ಥಿಕವಾಗಿಯೂ, ರಾಜಕೀಯವಾಗಿಯೂ ಬರಿದಾಗಿಬಿಟ್ಟಿತ್ತು.

ಇಸವಿ 1920ರಲ್ಲಿ, ಲೆಬನನ್‌ನಲ್ಲಿ ಪುನಃ ಒಮ್ಮೆ ಅಂಚೆ ಸೌಲಭ್ಯವು ಆರಂಭವಾದಾಗ, ವಿದೇಶದಲ್ಲಿ ಜೀವಿಸುತ್ತಿದ್ದ ಲೆಬನನ್‌ನ ಜನರಿಂದ ಪತ್ರಗಳು ಬರಲಾರಂಭಿಸಿದವು. ಅವರಲ್ಲಿ ನನ್ನ ಮಾವಂದಿರಾದ ಅಬ್ದುಲ್ಲಾ ಮತ್ತು ಜಾರ್ಜ್‌ ಘಂಟೂಸ್‌ ಸಹ ಇದ್ದರು. ಅವರ ತಂದೆ ಮತ್ತು ನನ್ನ ಅಜ್ಜ ಆಗಿದ್ದ ಹಬಿಬ್‌ ಘಂಟೂಸ್‌ರವರಿಗೆ ಅವರು ಪತ್ರವನ್ನು ಬರೆಯುತ್ತಿದ್ದರು. ಅದರಲ್ಲಿ ದೇವರ ರಾಜ್ಯದ ಕುರಿತಾಗಿ ಹೇಳುತ್ತಿದ್ದರು. (ಮತ್ತಾಯ 24:14) ನನ್ನ ಅಜ್ಜ, ತನ್ನ ಪುತ್ರರು ಬರೆದ ಪತ್ರಗಳಲ್ಲಿದ್ದ ವಿಷಯಗಳನ್ನು ಇತರರಿಗೆ ಹೇಳಿದ ಕಾರಣಮಾತ್ರಕ್ಕೆ, ಪಟ್ಟಣದ ಜನರು ಅವರನ್ನು ಅಪಹಾಸ್ಯಮಾಡಲಾರಂಭಿಸಿದರು. ಈ ಪಟ್ಟಣದ ಜನರು, ಹಬಿಬನ ಪುತ್ರರು ಅವರ ತಂದೆಗೆ, ತನ್ನ ಜಮೀನನ್ನು ಮಾರಿ ಒಂದು ಕತ್ತೆಯನ್ನು ಖರೀದಿಸಿ ಪ್ರಚಾರಮಾಡಲು ಹೋಗುವಂತೆ ಪ್ರೋತ್ಸಾಹಿಸುತ್ತಿದ್ದಾರೆಂಬ ಗಾಳಿಸುದ್ದಿಯನ್ನು ಹಬ್ಬಿಸಿದರು.

ಆರಂಭದಲ್ಲಿ ಬೆಳಕಿನ ಹಬ್ಬುವಿಕೆ

ಮುಂದಿನ ವರ್ಷ, ಅಂದರೆ 1921ರಲ್ಲಿ, ಅಮೆರಿಕದ ಬ್ರೂಕ್ಲಿನ್‌ ನ್ಯೂ ಯಾರ್ಕ್‌ನಲ್ಲಿ ವಾಸಿಸುತ್ತಿದ್ದ ಮೀಶಲ್‌ ಅಬೂಡ್‌ ಎಂಬುವರು, ಲೆಬನನ್‌ನ ಟ್ರಿಪೊಲಿಗೆ ಹಿಂದಿರುಗಿ ಬಂದರು. ಅವರೊಬ್ಬ ಬೈಬಲ್‌ ವಿದ್ಯಾರ್ಥಿಯಾಗಿಬಿಟ್ಟಿದ್ದರು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳನ್ನು ಹಾಗೆ ಕರೆಯಲಾಗುತ್ತಿತ್ತು. ಸಹೋದರ ಅಬೂಡರ ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಹೆಚ್ಚಿನವರು ಬೈಬಲ್‌ ಸಂದೇಶದ ಕಡೆಗೆ ಪ್ರತಿಕ್ರಿಯೆಯನ್ನು ತೋರಿಸದಿದ್ದರೂ, ಇಬ್ಬರು ಸುಪ್ರಸಿದ್ಧ ವ್ಯಕ್ತಿಗಳು ಪ್ರತಿಕ್ರಿಯೆಯನ್ನು ತೋರಿಸಿದರು. ಒಬ್ಬರು ಇಬ್ರಾಹಿಮ್‌ ಆಟಯಾ ಎಂಬ ಪ್ರೊಫೆಸರರಾಗಿದ್ದರು, ಮತ್ತು ಇನ್ನೊಬ್ಬರು ಹಾನ ಶಾಮ್ಮಾಸ್‌ ಎಂಬ ದಂತವೈದ್ಯರಾಗಿದ್ದರು. ವಾಸ್ತವದಲ್ಲಿ ಡಾ. ಶಾಮ್ಮಾಸ್‌ರವರು ಕ್ರೈಸ್ತ ಕೂಟಗಳನ್ನು ನಡೆಸಲಿಕ್ಕಾಗಿ ತಮ್ಮ ಮನೆ ಮತ್ತು ಚಿಕಿತ್ಸಾಲಯವನ್ನು ಲಭ್ಯಗೊಳಿಸಿದರು.

ನಾನು ವಾಸಿಸುತ್ತಿದ್ದ ಆ್ಯಮ್ಯೂನ್‌ ಎಂಬ ಸ್ಥಳಕ್ಕೆ ಸಹೋದರ ಅಬೂಡ್‌ ಮತ್ತು ಸಹೋದರ ಶಾಮ್ಮಾಸ್‌ ಭೇಟಿನೀಡಿದಾಗ, ನಾನಿನ್ನೂ ಒಬ್ಬ ಚಿಕ್ಕ ಹುಡುಗನಾಗಿದ್ದೆ. ಆದರೆ ಅವರ ಭೇಟಿಯು ನನ್ನ ಮೇಲೆ ತುಂಬ ಪ್ರಭಾವಬೀರಿತು, ಮತ್ತು ನಾನು ಸಹೋದರ ಅಬೂಡ್‌ರೊಂದಿಗೆ ಸಾರುವ ಕೆಲಸದಲ್ಲಿ ಹೋಗಲಾರಂಭಿಸಿದೆ. 40 ವರ್ಷಗಳ ವರೆಗೆ ನಾವಿಬ್ಬರೂ ಶುಶ್ರೂಷೆಯಲ್ಲಿ ಕ್ರಮವಾದ ಸಂಗಾತಿಗಳಾಗಿದ್ದೆವು. ಇದು 1963ರಲ್ಲಿ ಸಹೋದರ ಅಬೂಡರ ಮರಣದ ಪರ್ಯಂತರ ನಡೆಯಿತು.

ಇಸವಿ 1922 ಮತ್ತು 1925ರ ನಡುವೆ, ಬೈಬಲ್‌ ಸತ್ಯದ ಬೆಳಕು, ಉತ್ತರ ಲೆಬನನ್‌ನ ಅನೇಕ ಹಳ್ಳಿಗಳಲ್ಲಿ ವ್ಯಾಪಕವಾಗಿ ಹಬ್ಬಲಾರಂಭಿಸಿತು. ಆ್ಯಮ್ಯೂನ್‌ನಲ್ಲಿದ್ದ ನಮ್ಮ ಮನೆಯಲ್ಲಿ ನಡೆಯುತ್ತಿದ್ದಂತೆ, ಬೇರೆ ಖಾಸಗಿ ಮನೆಗಳಲ್ಲಿ ಸುಮಾರು 20ರಿಂದ 30 ಜನರು ಬೈಬಲನ್ನು ಚರ್ಚಿಸಲಿಕ್ಕಾಗಿ ಕೂಡಿಬರುತ್ತಿದ್ದರು. ನಮ್ಮ ಕೂಟಗಳನ್ನು ಭಂಗಪಡಿಸಲಿಕ್ಕಾಗಿ ಪಾದ್ರಿಗಳು, ತಗಡಿನ ಡಬ್ಬಿಗಳನ್ನು ಬಡಿದು, ಕೂಗಿ, ಚೀರಾಡುವಂತೆ ಮಕ್ಕಳನ್ನು ಕಳುಹಿಸುತ್ತಿದ್ದರು. ಆದುದರಿಂದ ನಾವು ಕೆಲವೊಮ್ಮೆ ತೋಪು ಮರಗಳ ಕಾಡಿನಲ್ಲಿ ಜೊತೆಗೂಡಿ ಕೂಟಗಳನ್ನು ನಡೆಸುತ್ತಿದ್ದೆವು.

ನಾನು ಯುವಕನಾಗಿದ್ದಾಗ ಶುಶ್ರೂಷೆಗಾಗಿ ಮತ್ತು ಪ್ರತಿಯೊಂದು ಕ್ರೈಸ್ತ ಕೂಟಕ್ಕೆ ಹಾಜರಾಗುವ ನನ್ನ ಹುರುಪಿನಿಂದಾಗಿ ನನಗೆ ತಿಮೊಥೆಯ ಎಂಬ ಅಡ್ಡಹೆಸರು ಬಂತು. ನನ್ನ ಶಾಲೆಯ ನಿರ್ದೇಶಕರು, “ಆ ಕೂಟಗಳು” ಎಂದು ಕರೆದ ಕೂಟಗಳಿಗೆ ಹಾಜರಾಗುವುದನ್ನು ನಿಲ್ಲಿಸುವಂತೆ ನನ್ನನ್ನು ಆಜ್ಞಾಪಿಸಿದರು. ಹಾಗೆ ಮಾಡಲು ನಿರಾಕರಿಸಿದಾಗ, ಅವರು ನನ್ನನ್ನು ಶಾಲೆಯಿಂದ ಹೊರಹಾಕಿದರು.

ಬೈಬಲ್‌ ದೇಶಗಳಲ್ಲಿ ಸಾಕ್ಷಿಕಾರ್ಯ

ಇಸವಿ 1933ರಲ್ಲಿ ನನ್ನ ದೀಕ್ಷಾಸ್ನಾನವಾದ ಕೂಡಲೇ, ನಾನು ಪಯನೀಯರ್‌ ಸೇವೆಯನ್ನು ಆರಂಭಿಸಿದೆ. ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೇವೆಯನ್ನು ಹಾಗೆ ಕರೆಯಲಾಗುತ್ತದೆ. ಆ ಸಮಯದಲ್ಲಿ ನಮ್ಮ ಸಂಖ್ಯೆಯು ತೀರ ಚಿಕ್ಕದ್ದಾಗಿದ್ದರೂ, ನಾವು ಲೆಬನನ್‌ನ ಉತ್ತರಭಾಗದಲ್ಲಿರುವ ಹೆಚ್ಚಿನ ಹಳ್ಳಿಗಳಲ್ಲಿ ಸಾರಿದೆವು ಮಾತ್ರವಲ್ಲ, ಬೀರೂಟ್‌ ಮತ್ತು ಅದರ ಹೊರವಲಯಗಳು ಹಾಗೂ ಲೆಬನನ್‌ನ ದಕ್ಷಿಣಭಾಗವನ್ನೂ ತಲಪಿದೆವು. ಆ ಆರಂಭದ ವರ್ಷಗಳಲ್ಲಿ ನಾವು ಯೇಸು ಕ್ರಿಸ್ತನು ಮತ್ತು ಅವನ ಪ್ರಥಮ ಶತಮಾನದ ಹಿಂಬಾಲಕರಂತೆ ಸಾಮಾನ್ಯವಾಗಿ ಕಾಲ್ನಡಿಗೆಯಲ್ಲಿ ಅಥವಾ ಕತ್ತೆ ಮೇಲೆ ಕುಳಿತುಕೊಂಡು ಪ್ರಯಾಣಿಸುತ್ತಿದ್ದೆವು.

ಇಸವಿ 1936ರಲ್ಲಿ, ಅಮೆರಿಕದಲ್ಲಿ ಹಲವಾರು ವರ್ಷಗಳ ವರೆಗೆ ಜೀವಿಸಿದ್ದ ಯೂಸಫ್‌ ರಾಕಾಲ್‌ ಎಂಬ ಲೆಬನನ್‌ನ ಸಾಕ್ಷಿಯು, ಲೆಬನನ್‌ಗೆ ಭೇಟಿನೀಡಲು ಬಂದರು. ಅವರು ತಮ್ಮೊಂದಿಗೆ ಧ್ವನಿವರ್ಧಕ ಉಪಕರಣ ಮತ್ತು ಎರಡು ಫೋನೋಗ್ರಾಫ್‌ಗಳನ್ನು ತಂದರು. ನಾವು ಈ ಉಪಕರಣವನ್ನು 1931ರ ಒಂದು ಫೋರ್ಡ್‌ ಗಾಡಿಯಲ್ಲಿ ಅಳವಡಿಸಿ, ದೂರದೂರದ ಕ್ಷೇತ್ರಗಳಿಗೆ ರಾಜ್ಯ ಸಂದೇಶವನ್ನು ಒಯ್ಯುತ್ತಾ ಲೆಬನನ್‌ ಮತ್ತು ಸಿರಿಯದಾದ್ಯಂತ ಪ್ರಯಾಣಿಸಿದೆವು. ಆ ಧ್ವನಿವರ್ಧಕವನ್ನು ಸುಮಾರು 10 ಕಿಲೊಮೀಟರ್‌ಗಳಷ್ಟು ದೂರದಲ್ಲಿಯೂ ಕೇಳಿಸಿಕೊಳ್ಳಬಹುದಿತ್ತು. ಜನರು ಇದನ್ನು ಸ್ವರ್ಗದಿಂದ ಬರುತ್ತಿರುವ ವಾಣಿಗಳು ಎಂದು ವರ್ಣಿಸುತ್ತಿದ್ದರು. ಈ ವಿಷಯಗಳನ್ನು ಕೇಳಲು ಜನರು ತಮ್ಮ ಮನೆಗಳ ಛಾವಣಿಗಳ ಮೇಲೆ ಹೋಗಿ ನಿಲ್ಲುತ್ತಿದ್ದರು. ಹೊಲಗಳಲ್ಲಿದ್ದವರು ತಮ್ಮ ಕೆಲಸವನ್ನು ಬಿಟ್ಟು, ಕಿವಿಗೊಡಲಿಕ್ಕಾಗಿ ಹೆಚ್ಚು ಹತ್ತಿರಬರುತ್ತಿದ್ದರು.

ಯೂಸಫ್‌ ರಾಕಾಲ್‌ರೊಂದಿಗಿನ ನನ್ನ ಕೊನೆ ಪ್ರಯಾಣವು ಸಿರಿಯದ ಅಲೆಪ್ಪೊಗೆ 1937ರ ಚಳಿಗಾಲದಲ್ಲಿತ್ತು. ಅವರು ಅಮೆರಿಕಕ್ಕೆ ಹಿಂದಿರುಗುವ ಮುಂಚೆ ನಾವು ಪ್ಯಾಲಿಸ್ಟೀನ್‌ನಲ್ಲೂ ಪ್ರಯಾಣಿಸಿದೆವು. ಅಲ್ಲಿ ನಾವು ಹೈಫಾ ಮತ್ತು ಜೆರೂಸಲೇಮ್‌ ನಗರಗಳು, ಹಾಗೂ ಆ ದೇಶದಲ್ಲಿನ ಹಳ್ಳಿಗಳನ್ನೂ ಭೇಟಿಮಾಡಿದೆವು. ನಾವು ಅಲ್ಲಿ ಸಂಪರ್ಕಿಸಿದವರಲ್ಲಿ, ಈ ಮುಂಚೆ ನಾನು ನಡೆಸುತ್ತಿದ್ದ ಪತ್ರವ್ಯವಹಾರದ ಮೂಲಕ ಪರಿಚಿತನಾಗಿದ್ದ ಇಬ್ರಾಹಿಮ್‌ ಶೆಹಾದಿ ಎಂಬುವನು ಇದ್ದನು. ಇಬ್ರಾಹಿಮ್‌ ಎಷ್ಟರ ಮಟ್ಟಿಗೆ ಬೈಬಲ್‌ ಜ್ಞಾನದಲ್ಲಿ ಪ್ರಗತಿ ಮಾಡಿದ್ದನೆಂದರೆ, ನಾವು ಭೇಟಿಯಿತ್ತ ಸಮಯದಲ್ಲಿ ಅವನು ನಮ್ಮೊಂದಿಗೆ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಜೊತೆಗೂಡಿದನು.​—ಅ. ಕೃತ್ಯಗಳು 20:20.

ಯೆಹೋವನ ಸಾಕ್ಷಿಗಳೊಂದಿಗೆ ಪತ್ರವ್ಯವಹಾರದ ಮೂಲಕ ಬೈಬಲಿನ ಅಭ್ಯಾಸಮಾಡುತ್ತಿದ್ದ ಪ್ರೊಫೆಸರ್‌ ಖಾಲೀಲ್‌ ಕೊಬ್ರೊಸೀ ಎಂಬ ಒಬ್ಬ ಕಟ್ಟಾ ಕ್ಯಾಥೊಲಿಕನನ್ನು ಭೇಟಿಯಾಗಲೂ ನಾನು ತುಂಬ ಕಾತುರನಾಗಿದ್ದೆ. ಅವನಿಗೆ ಲೆಬನನ್‌ನಲ್ಲಿದ್ದ ಯೆಹೋವನ ಸಾಕ್ಷಿಗಳ ವಿಳಾಸವು ಹೇಗೆ ಸಿಕ್ಕಿತು? ಹೈಫಾದಲ್ಲಿನ ಒಂದು ಅಂಗಡಿಯಲ್ಲಿ, ಅಂಗಡಿಯವನು ಖಾಲಿಲನಿಗೆ ಬೇಕಾಗಿದ್ದ ದಿನಸಿಗಳನ್ನು, ಯೆಹೋವನ ಸಾಕ್ಷಿಗಳ ಒಂದು ಪ್ರಕಾಶನದಿಂದ ಹರಿದುತೆಗೆಯಲಾಗಿದ್ದ ಕಾಗದದಲ್ಲಿ ಸುತ್ತಿದ್ದನು. ಆ ಕಾಗದದಲ್ಲಿ ನಮ್ಮ ವಿಳಾಸವಿತ್ತು. ನಾವು ಪರಸ್ಪರರನ್ನು ಭೇಟಿಯಾದಾಗ ತುಂಬ ಆನಂದಿಸಿದೆವು, ಮತ್ತು ತದನಂತರ ಅವನು 1939ರಲ್ಲಿ ದೀಕ್ಷಾಸ್ನಾನವನ್ನು ತೆಗೆದುಕೊಳ್ಳಲಿಕ್ಕಾಗಿ ಟ್ರಿಪೊಲಿಗೆ ಬಂದನು.

ಇಸವಿ 1937ರಲ್ಲಿ ಪೆಟ್ರೊಸ್‌ ಲಾಗಕೊಸ್‌ ಮತ್ತು ಅವನ ಹೆಂಡತಿ ಟ್ರಿಪೊಲಿಗೆ ಬಂದರು. ಮುಂದಿನ ಕೆಲವು ವರ್ಷಗಳಲ್ಲಿ ನಾವು ಮೂರು ಮಂದಿ, ರಾಜ್ಯದ ಸಂದೇಶವನ್ನು ಜನರಿಗೆ ಕೊಂಡೊಯ್ಯುತ್ತಾ ಲೆಬನನ್‌ ಮತ್ತು ಸಿರಿಯದ ಹೆಚ್ಚಿನ ಭಾಗವನ್ನು ಆವರಿಸಿದೆವು. ಸಹೋದರ ಲಾಗಕೊಸ್‌ 1943ರಲ್ಲಿ ಸಾಯುವಷ್ಟರಲ್ಲಿ, ಸಾಕ್ಷಿಗಳು ಲೆಬನನ್‌, ಸಿರಿಯ ಮತ್ತು ಪ್ಯಾಲಿಸ್ಟೀನ್‌ನ ಹೆಚ್ಚಿನ ನಗರಗಳು ಮತ್ತು ಹಳ್ಳಿಗಳಿಗೆ ಆತ್ಮಿಕ ಬೆಳಕನ್ನು ಕೊಂಡೊಯ್ದಿದ್ದರು. ಕೆಲವೊಮ್ಮೆ ನಾವು ಸುಮಾರು 30 ಮಂದಿ, ದೂರದೂರದಲ್ಲಿದ್ದ ಕ್ಷೇತ್ರಗಳನ್ನು ತಲಪಲಿಕ್ಕಾಗಿ ಬೆಳಗ್ಗೆ 3:00 ಘಂಟೆಯಷ್ಟು ಬೇಗನೆ ಕಾರ್‌ನಲ್ಲೊ ಬಸ್‌ನಲ್ಲೊ ಹೊರಡುತ್ತಿದ್ದೆವು.

ಸಾವಿರದ ಒಂಬೈನೂರ ನಾಲ್ವತ್ತರ ದಶಕದಲ್ಲಿ, ಇಬ್ರಾಹಿಮ್‌ ಆಟಯಾ ಎಂಬವರು, ದ ವಾಚ್‌ಟವರ್‌ ಪತ್ರಿಕೆಯನ್ನು ಆ್ಯರಬಿಕ್‌ ಭಾಷೆಗೆ ತರ್ಜುಮೆಮಾಡಿದರು. ಆನಂತರ ನಾನು ಆ ಪತ್ರಿಕೆಯ ನಾಲ್ಕು ಹಸ್ತಲಿಖಿತ ಪ್ರತಿಗಳನ್ನು ಮಾಡಿ ಅವುಗಳನ್ನು ಪ್ಯಾಲಿಸ್ಟೀನ್‌, ಸಿರಿಯ ಮತ್ತು ಈಜಿಪ್ಟ್‌ನಲ್ಲಿದ್ದ ಸಾಕ್ಷಿಗಳಿಗೆ ಕಳುಹಿಸುತ್ತಿದ್ದೆ. IIನೆಯ ಲೋಕ ಯುದ್ಧವು ನಡೆಯುತ್ತಿದ್ದ ಆ ದಿನಗಳಲ್ಲಿ, ನಮ್ಮ ಸಾರುವ ಕೆಲಸಕ್ಕೆ ವಿರೋಧವು ಬಹಳಷ್ಟಿತ್ತು. ಆದರೆ ಮಧ್ಯಪೂರ್ವದಲ್ಲಿದ್ದ ಬೈಬಲ್‌ ಸತ್ಯದ ಪ್ರಿಯರೆಲ್ಲರನ್ನು ನಾವು ಸಂಪರ್ಕಿಸುತ್ತಾ ಇರುತ್ತಿದ್ದೆವು. ನಾನೇ ವೈಯಕ್ತಿಕವಾಗಿ ನಗರಗಳ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಭೂಪಟಗಳನ್ನು ತಯಾರಿಸುತ್ತಿದ್ದೆ, ಮತ್ತು ಅಲ್ಲೆಲ್ಲಾ ಸುವಾರ್ತೆಯು ತಲಪುವಂತೆ ನಾವು ನೋಡಿಕೊಳ್ಳುತ್ತಿದ್ದೆವು.

ಇಸವಿ 1944ರಲ್ಲಿ, IIನೆಯ ಲೋಕ ಯುದ್ಧವು ಇನ್ನೂ ನಡೆಯುತ್ತಾ ಇದ್ದಾಗ, ನಾನು ಈವ್ಲೀನ್‌ಳನ್ನು ಮದುವೆಯಾದೆ. ಅವಳು ನನ್ನ ಪಯನೀಯರ್‌ ಸಂಗಡಿಗನಾಗಿದ್ದ ಮೀಶಲ್‌ ಅಬೂಡರ ಮಗಳಾಗಿದ್ದಳು. ಅನಂತರ ನಮಗೆ ಮೂರು ಮಕ್ಕಳು, ಅಂದರೆ ಒಬ್ಬ ಹುಡುಗಿ ಮತ್ತು ಇಬ್ಬರು ಹುಡುಗರು ಹುಟ್ಟಿದ್ದರು.

ಮಿಷನೆರಿಗಳೊಂದಿಗೆ ಕೆಲಸಮಾಡುವುದು

ಯುದ್ಧವು ಕೊನೆಗೊಂಡ ಕೂಡಲೇ, ಮಿಷನೆರಿಗಳಿಗಾಗಿರುವ ಗಿಲ್ಯಡ್‌ ಶಾಲೆಯ ಪ್ರಪ್ರಥಮ ಪದವೀಧರರು ಲೆಬನನ್‌ಗೆ ಬಂದರು. ಫಲಿತಾಂಶವಾಗಿ ಲೆಬನನ್‌ನಲ್ಲಿ ಪ್ರಪ್ರಥಮ ಸಭೆಯ ಸ್ಥಾಪನೆಯಾಯಿತು. ಮತ್ತು ನನ್ನನ್ನು ಕಂಪೆನಿ ಸರ್ವೆಂಟ್‌ ಆಗಿ ನೇಮಿಸಲಾಯಿತು. ಅನಂತರ 1947ರಲ್ಲಿ ನೇತನ್‌ ಎಚ್‌. ನಾರ್‌ ಮತ್ತು ಅವರ ಸೆಕ್ರಿಟರಿ ಮಿಲ್ಟನ್‌ ಜಿ. ಹೆನ್ಶೆಲ್‌ರವರು ಲೆಬನನ್‌ಗೆ ಭೇಟಿನೀಡಿ, ಸಹೋದರರಿಗೆ ತುಂಬ ಉತ್ತೇಜನವನ್ನು ಕೊಟ್ಟರು. ಸ್ವಲ್ಪ ಸಮಯದೊಳಗೆ ಹೆಚ್ಚು ಮಿಷನೆರಿಗಳು ಆಗಮಿಸಿದರು, ಮತ್ತು ನಮ್ಮ ಶುಶ್ರೂಷೆಯನ್ನು ಸಂಘಟಿಸುವುದರಲ್ಲಿ ಹಾಗೂ ಸಭಾ ಕೂಟಗಳನ್ನು ನಡೆಸುವುದರಲ್ಲಿ ನಮಗೆ ತುಂಬ ಸಹಾಯಮಾಡಿದರು.

ಸಿರಿಯದಲ್ಲಿ ತುಂಬ ದೂರದಲ್ಲಿದ್ದ ಒಂದು ಕ್ಷೇತ್ರಕ್ಕೆ ನಾವು ಒಮ್ಮೆ ಹೋದಾಗ, ಸ್ಥಳಿಕ ಬಿಷಪ್‌ನಿಂದ ನಮಗೆ ವಿರೋಧವು ಎದುರಾಯಿತು. ಅವನು ಏನನ್ನು ಝೈಯನಿನ (ಯೆಹೂದಿ ಧರ್ಮದ) ಪ್ರಕಾಶನಗಳೆಂದು ಕರೆದನೊ ಅದನ್ನು ನಾವು ವಿತರಿಸುತ್ತಿದ್ದೇವೆಂಬ ಆರೋಪವನ್ನು ಹೊರಿಸಿದನು. ಹಾಸ್ಯವ್ಯಂಗ್ಯ ಸಂಗತಿಯೇನೆಂದರೆ, 1948ಕ್ಕಿಂತಲೂ ಹಿಂದೆ, ಪಾದ್ರಿಗಳು ಹೆಚ್ಚಾಗಿ ನಮಗೆ “ಕಮ್ಯೂನಿಸ್ಟರು” ಎಂಬ ಪಟ್ಟವನ್ನು ಕಟ್ಟಿದ್ದರು. ಈ ಸಂದರ್ಭದಲ್ಲಿ ನಮ್ಮನ್ನು ದಸ್ತಗಿರಿ ಮಾಡಲಾಯಿತು ಮತ್ತು ಎರಡು ತಾಸುಗಳ ವರೆಗೆ ವಿಚಾರಣೆಗೊಳಪಡಿಸಲಾಯಿತು. ಆ ಸಮಯದಲ್ಲಿ ಒಂದು ಒಳ್ಳೆಯ ಸಾಕ್ಷಿಯನ್ನು ಕೊಟ್ಟೆವು.

ಕೊನೆಯಲ್ಲಿ, ಈ ಮೊಕದ್ದಮೆಗೆ ಕಿವಿಗೊಡುತ್ತಿದ್ದ ನ್ಯಾಯಾಧೀಶನು ಘೋಷಿಸಿದ್ದು: “ನಿಮ್ಮ ವಿರುದ್ಧ ಈ ಆರೋಪಗಳನ್ನು ಮಾಡಿದ ಆ ಗಡ್ಡಧಾರಿಯನ್ನು [ಆ ಬಿಷಪನಿಗೆ ಸೂಚಿಸಲು ಉಪಯೋಗಿಸಲ್ಪಟ್ಟ ಅಲಂಕಾರ ರೂಪಕ] ನಾನು ಶಪಿಸುತ್ತೇನಾದರೂ, ನಿಮ್ಮನ್ನು ಭೇಟಿಯಾಗಿ, ನಿಮ್ಮ ಬೋಧನೆಗಳನ್ನು ಕಲಿಯುವಂತೆ ಆ ಗಡ್ಡಧಾರಿ ನನಗೆ ಈ ಅವಕಾಶವನ್ನು ಕೊಟ್ಟದ್ದಕ್ಕಾಗಿ ಅವನಿಗೆ ಉಪಕಾರವನ್ನು ಹೇಳಬೇಕಾಗಿದೆ.” ನಮಗುಂಟಾದ ತೊಂದರೆಗೆ ಅವರು ಅನಂತರ ಕ್ಷಮೆಯಾಚಿಸಿದರು.

ಹತ್ತು ವರ್ಷಗಳ ಬಳಿಕ ನಾನು ಬೀರೂಟ್‌ಗೆ ಪ್ರಯಾಣಿಸುತ್ತಿದ್ದಾಗ, ನನ್ನ ಪಕ್ಕದಲ್ಲಿ ಕುಳಿತುಕೊಂಡಿದ್ದ ಒಬ್ಬ ವ್ಯವಸಾಯ ಇಂಜಿನಿಯರನೊಂದಿಗೆ ನಾನು ಮಾತಾಡಲಾರಂಭಿಸಿದೆ. ನಮ್ಮ ನಂಬಿಕೆಗಳ ಕುರಿತಾಗಿ ಕೆಲವು ನಿಮಿಷಗಳ ವರೆಗೆ ಕಿವಿಗೊಟ್ಟ ನಂತರ, ಸಿರಿಯದಲ್ಲಿರುವ ತನ್ನ ಒಬ್ಬ ಸ್ನೇಹಿತನು ಸಹ ಹೀಗೆಯೇ ಮಾತಾಡುವುದನ್ನು ಕೇಳಿಸಿಕೊಂಡಿದ್ದೇನೆಂದು ಅವನು ಹೇಳಿದನು. ಆ ಸ್ನೇಹಿತನು ಯಾರಾಗಿದ್ದನು? ಹತ್ತು ವರ್ಷಗಳ ಹಿಂದೆ ನಮ್ಮ ಮೊಕದ್ದಮೆಯನ್ನು ನಡೆಸಿದಂಥ ಆ ನ್ಯಾಯಾಧೀಶರೇ!

ಸಾವಿರದ ಒಂಬೈನೂರ ಐವತ್ತರ ದಶಕದಲ್ಲಿ, ನಾನು ಇರಾಕ್‌ನಲ್ಲಿದ್ದ ಸಾಕ್ಷಿಗಳನ್ನು ಭೇಟಿಮಾಡಿ, ಅವರೊಂದಿಗೆ ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಜೊತೆಗೂಡಿದೆ. ನಾನು ಜೋರ್ಡನ್‌ ಮತ್ತು ವೆಸ್ಟ್‌ ಬ್ಯಾಂಕ್‌ಗೂ ಅನೇಕಸಲ ಪ್ರಯಾಣಬೆಳಸಿದೆ. 1951ರಲ್ಲಿ, ಬೆತ್ಲೆಹೇಮ್‌ಗೆ ಹೋದ ನಾಲ್ಕು ಮಂದಿ ಸಾಕ್ಷಿಗಳ ಗುಂಪಿನಲ್ಲಿ ನಾನೂ ಒಬ್ಬನಾಗಿದ್ದೆ. ಅಲ್ಲಿ ನಾವು ಕರ್ತನ ರಾತ್ರಿ ಬೋಜನವನ್ನು ಆಚರಿಸಿದೆವು. ಆ ದಿನದ ಆರಂಭದಲ್ಲಿ, ಆ ಸಂದರ್ಭಕ್ಕಾಗಿ ಹಾಜರಿದ್ದವರೆಲ್ಲರೂ ಜೋರ್ಡನ್‌ ನದಿಗೆ ಹೋಗಿ, ಅಲ್ಲಿ ನಮ್ಮಲ್ಲಿ 22 ಮಂದಿ ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನಪಡೆದರು. ಆ ಕ್ಷೇತ್ರದಲ್ಲಿ ನಮಗೆ ವಿರೋಧವು ಎದುರಾದಾಗಲೆಲ್ಲ, ನಾವು ಹೀಗನ್ನುತ್ತಿದ್ದೆವು: “ನಿಮ್ಮ ಸ್ವಂತ ನಾಡಿನ ಒಬ್ಬ ಪುತ್ರನು ಇಡೀ ಭೂಮಿಯ ಮೇಲೆ ರಾಜನಾಗಲಿದ್ದಾನೆಂಬುದನ್ನು ನಾವು ನಿಮಗೆ ಹೇಳಲು ಬಂದಿದ್ದೇವೆ! ನೀವು ಏಕೆ ಇಷ್ಟು ಕೋಪಮಾಡುತ್ತಿದ್ದೀರಿ? ನೀವು ಆನಂದಪಡಬೇಕು!”

ಕಷ್ಟಗಳ ಮಧ್ಯದಲ್ಲೂ ಸಾರುವುದು

ಮಧ್ಯಪೂರ್ವದ ಜನರು ಸಾಮಾನ್ಯವಾಗಿ ಸಹೃದಯಿಗಳು, ನಮ್ರರು ಮತ್ತು ಅತಿಥಿಸತ್ಕಾರಭಾವದವರು ಆಗಿದ್ದಾರೆ. ಅನೇಕರು ದೇವರ ರಾಜ್ಯದ ಸಂದೇಶಕ್ಕೆ ಆಸಕ್ತಿಯಿಂದ ಕಿವಿಗೊಡುತ್ತಾರೆ. “ದೇವರು ತಾನೇ [ತನ್ನ ಜನರ] ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು” ಎಂಬ ಬೈಬಲ್‌ ವಾಗ್ದಾನವು ಬೇಗನೆ ನೆರವೇರಲಿದೆಯೆಂಬುದನ್ನು ತಿಳಿಯುವುದಕ್ಕಿಂತಲೂ ಬೇರಾವುದೇ ಸಂಗತಿಯು ಹೆಚ್ಚು ಚೈತನ್ಯದಾಯಕವಾಗಿರುವುದಿಲ್ಲ.​—ಪ್ರಕಟನೆ 21:3, 4.

ನಮ್ಮ ಚಟುವಟಿಕೆಯನ್ನು ವಿರೋಧಿಸುವ ಹೆಚ್ಚಿನ ಜನರಿಗೆ ನಮ್ಮ ಕೆಲಸ ಮತ್ತು ನಾವು ಕೊಡುವ ಸಂದೇಶವು ನಿಜವಾಗಿ ಅರ್ಥವಾಗಿರುವುದಿಲ್ಲವೆಂಬುದನ್ನು ನಾನು ನೋಡಿದ್ದೇನೆ. ಏಕೆಂದರೆ ಕ್ರೈಸ್ತಪ್ರಪಂಚದ ಪಾದ್ರಿಗಳು, ನಮ್ಮ ಕುರಿತಾಗಿ ಅಷ್ಟೊಂದು ತಪ್ಪು ಸಂಗತಿಗಳನ್ನು ತಿಳಿಸಿದ್ದಾರೆ! ಆದುದರಿಂದ 1975ರಲ್ಲಿ ಲೆಬನನ್‌ನಲ್ಲಿ ಆಂತರಿಕ ಯುದ್ಧವು ಆರಂಭವಾಗಿ, 15ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ನಡೆದ ಸಮಯದಲ್ಲಿ ಸಾಕ್ಷಿಗಳು ಅನೇಕ ಕಷ್ಟಗಳನ್ನು ಎದುರಿಸಿದರು.

ಒಂದು ಸಮಯದಲ್ಲಿ, ಚರ್ಚಿಗೆ ತುಂಬ ಹುರುಪಿನಿಂದ ಹೋಗುತ್ತಿದ್ದ ಒಂದು ಕುಟುಂಬದೊಂದಿಗೆ ಬೈಬಲ್‌ ಅಭ್ಯಾಸವನ್ನು ನಡೆಸುತ್ತಿದ್ದೆ. ಬೈಬಲ್‌ ಸತ್ಯವನ್ನು ಕಲಿಯುವುದರಲ್ಲಿ ಅವರು ಮಾಡುತ್ತಿದ್ದ ಒಳ್ಳೇ ಪ್ರಗತಿಯು, ಪಾದ್ರಿಗಳ ಸಿಟ್ಟನ್ನೆಬ್ಬಿಸಿತು. ಇದರಿಂದಾಗಿ, ಒಂದು ಸ್ಥಳಿಕ ಧಾರ್ಮಿಕ ಗುಂಪು, ತನ್ನ ಸದಸ್ಯರು ಆ ಕುಟುಂಬದ ಅಂಗಡಿಯ ಮೇಲೆ ದಾಳಿಮಾಡುವಂತೆ ಪ್ರೇರಿಸಿತು, ಮತ್ತು ಅವರು ಸುಮಾರು 4,50,000 ರೂಪಾಯಿಗಳಷ್ಟು ಮೌಲ್ಯದ ಸಾಮಾನುಗಳನ್ನು ಸುಟ್ಟುಹಾಕಿದರು. ಅದೇ ರಾತ್ರಿ ಅವರು ಬಂದು ನನ್ನನ್ನು ಅಪಹರಿಸಿಕೊಂಡುಹೋದರು. ಆದರೆ ನಾನು ಅವರ ಮುಖ್ಯಸ್ಥನೊಂದಿಗೆ ತರ್ಕಿಸಲು ಶಕ್ತನಾದೆ. ಅವರು ನಿಜವಾಗಿಯೂ ಕ್ರೈಸ್ತರಾಗಿರುವಲ್ಲಿ ಅವರು ಇಷ್ಟೊಂದು ಅಮಾನುಷ ರೀತಿಯಲ್ಲಿ ವರ್ತಿಸುತ್ತಿರಲಿಲ್ಲವೆಂದು ನಾನು ಅವನಿಗೆ ವಿವರಿಸಿದೆ. ಆಗ, ಅವನು ಕಾರನ್ನು ನಿಲ್ಲಿಸುವಂತೆ ಹೇಳಿ, ನಾನು ಹೊರಗೆ ಹೋಗುವಂತೆ ಆಜ್ಞಾಪಿಸಿದನು.

ಇನ್ನೊಂದು ಸಂದರ್ಭದಲ್ಲಿ, ಪ್ರಜಾಸೇನೆಯ ನಾಲ್ಕು ಮಂದಿ ನನ್ನನ್ನು ಅಪಹರಿಸಿದರು. ಅನೇಕ ಬೆದರಿಕೆಗಳನ್ನು ಕೊಟ್ಟ ನಂತರ, ನನ್ನನ್ನು ಕೊಂದುಹಾಕುವನೆಂದು ಹೇಳಿದ ಅವರ ಮುಖ್ಯಸ್ಥನು ಒಮ್ಮೆಲೇ ತನ್ನ ಮನಸ್ಸನ್ನು ಬದಲಾಯಿಸಿ, ನನ್ನನ್ನು ಬಿಡುಗಡೆಮಾಡಿದನು. ಇವರಲ್ಲಿ ಇಬ್ಬರು ಕೊಲೆ ಮತ್ತು ಕಳ್ಳತನಕ್ಕಾಗಿ ಈಗ ಸೆರೆಮನೆಯಲ್ಲಿದ್ದಾರೆ, ಮತ್ತು ಉಳಿದಿಬ್ಬರನ್ನು ಹತಿಸಲಾಯಿತು.

ಸಾಕ್ಷಿಕೊಡಲು ಬೇರೆ ಅವಕಾಶಗಳು

ನನಗೆ ಅನೇಕ ಸಲ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನಯಾನ ಮಾಡುವ ಅವಕಾಶ ಸಿಕ್ಕಿದೆ. ಒಮ್ಮೆ ನಾನು ಬೀರೂಟ್‌ನಿಂದ ಅಮೆರಿಕಕ್ಕೆ ಹೋಗುತ್ತಿದ್ದಾಗ, ಲೆಬನನ್‌ನ ಮಾಜಿ ವಿದೇಶಾಂಗ ಸಚಿವರಾಗಿದ್ದ ಚಾರ್ಲ್ಸ್‌ ಮಾಲಕ್‌ ಎಂಬುವರ ಪಕ್ಕದಲ್ಲಿ ಕುಳಿತುಬಿಟ್ಟೆ. ಅವರು ಗಮನಕೊಟ್ಟು ಆಲಿಸಿದರು, ಮತ್ತು ಬೈಬಲಿನಿಂದ ನಾನು ಓದಿಹೇಳಿದ ಪ್ರತಿಯೊಂದು ವಚನವನ್ನು ಗಣ್ಯಮಾಡಿದರು. ಕೊನೆಯಲ್ಲಿ ಅವರು, ತಾನು ಟ್ರಿಪೊಲಿಯಲ್ಲಿ ಹೋಗುತ್ತಿದ್ದ ಶಾಲೆಯಲ್ಲಿ ಇಬ್ರಾಹಿಮ್‌ ಆಟಯಾ ಎಂಬವರು ತನ್ನ ಶಿಕ್ಷಕರಾಗಿದ್ದರೆಂದು ಹೇಳಿದರು. ಈ ಶಿಕ್ಷಕನಿಗೆ ನನ್ನ ಮಾವನವರೇ ಬೈಬಲ್‌ ಸತ್ಯವನ್ನು ಪರಿಚಯಿಸಿದ್ದರು! ಇಬ್ರಾಹಿಮ್‌ರವರು ತನಗೆ ಬೈಬಲನ್ನು ಗೌರವಿಸುವಂತೆ ಕಲಿಸಿದ್ದರೆಂದು ಶ್ರೀ. ಮಾಲಕ್‌ ಹೇಳಿದರು.

ಇನ್ನೊಂದು ಸಂದರ್ಭದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ನಾನು ವಿಶ್ವ ಸಂಸ್ಥೆಯ ಪ್ಯಾಲಿಸ್ಟೀನ್‌ನ ಪ್ರತಿನಿಧಿಯೊಬ್ಬನ ಪಕ್ಕದಲ್ಲಿ ಕುಳಿತಿದ್ದೆ. ದೇವರ ರಾಜ್ಯದ ಸುವಾರ್ತೆಯನ್ನು ಅವನಿಗೆ ತಿಳಿಸುವ ಅವಕಾಶ ನನಗೆ ಸಿಕ್ಕಿತು. ಅವನು ಕಟ್ಟಕಡೆಗೆ ನನ್ನನ್ನು ನ್ಯೂ ಯಾರ್ಕ್‌ನಲ್ಲಿದ್ದ ಅವನ ಸಹೋದರನ ಕುಟುಂಬಕ್ಕೆ ಪರಿಚಯಿಸಿದನು, ಮತ್ತು ಅನೇಕ ಸಲ ಅವನನ್ನು ಅಲ್ಲಿ ಭೇಟಿಯಾದೆ. ನ್ಯೂ ಯಾರ್ಕ್‌ನಲ್ಲಿರುವ ವಿಶ್ವ ಸಂಸ್ಥೆಯ ಕಟ್ಟಡದಲ್ಲೂ ನನಗೆ ಒಬ್ಬ ಸಂಬಂಧಿಕನಿದ್ದನು. ಒಂದು ದಿನ ನಾನು ಅವನನ್ನು ಭೇಟಿಮಾಡಿ ಮೂರು ತಾಸುಗಳ ವರೆಗೆ ಅಲ್ಲಿದ್ದೆ. ಆಗ ನಾನು ದೇವರ ರಾಜ್ಯದ ಕುರಿತಾಗಿ ಅವನಿಗೆ ಸಾಕ್ಷಿಯನ್ನು ಕೊಡಲು ಶಕ್ತನಾದೆ.

ಈಗ ನನಗೆ 88 ವರ್ಷ ಪ್ರಾಯ. ಈಗಲೂ ಸಭಾ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ ಸಕ್ರಿಯ ಪಾತ್ರವನ್ನು ವಹಿಸಲು ಶಕ್ತನಾಗಿದ್ದೇನೆ. ನನ್ನ ಹೆಂಡತಿಯಾದ ಈವ್ಲೀನಳು ಈಗಲೂ ನನ್ನೊಂದಿಗೆಯೇ ಯೆಹೋವನನ್ನು ಸೇವಿಸುತ್ತಿದ್ದಾಳೆ. ನಮ್ಮ ಮಗಳು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬ ಸಂಚರಣಾ ಮೇಲ್ವಿಚಾರಕನನ್ನು ಮದುವೆಯಾದಳು. ಈಗ ಅವನು ಬೀರೂಟ್‌ನಲ್ಲಿರುವ ಒಂದು ಸಭೆಯಲ್ಲಿ ಒಬ್ಬ ಹಿರಿಯನೋಪಾದಿ ಸೇವೆಸಲ್ಲಿಸುತ್ತಿದ್ದಾನೆ. ಅವರ ಮಗಳು ಸಹ ಒಬ್ಬ ಸಾಕ್ಷಿಯಾಗಿದ್ದಾಳೆ. ನಮ್ಮ ಕಿರಿಯ ಮಗ ಮತ್ತು ಅವನ ಹೆಂಡತಿ ಮತ್ತು ಅವರ ಮಗಳು ಸಹ ಸತ್ಯದಲ್ಲಿದ್ದಾರೆ. ನಮ್ಮ ಹಿರಿಯ ಮಗನ ಕುರಿತು ಹೇಳುವುದಾದರೆ, ಅವನಲ್ಲಿ ಕ್ರೈಸ್ತ ನಂಬಿಕೆಯನ್ನು ಬೇರೂರಿಸಲಾಗಿತ್ತು, ಮತ್ತು ಒಂದು ದಿನ ಅವನು ಅದನ್ನು ಅಂಗೀಕರಿಸುವನೆಂದು ನಾನು ನಿರೀಕ್ಷಿಸುತ್ತೇನೆ.

ಇಸವಿ 1933ರಲ್ಲಿ, ನನ್ನನ್ನು ಮಧ್ಯಪೂರ್ವದಲ್ಲಿ ಪ್ರಪ್ರಥಮ ಪಯನೀಯರನೋಪಾದಿ ಸೇವೆಸಲ್ಲಿಸುವಂತೆ ನೇಮಿಸಲಾಗಿತ್ತು. ಈ ಎಲ್ಲ 68 ವರ್ಷಗಳಲ್ಲಿ ಒಬ್ಬ ಪಯನೀಯರನೋಪಾದಿ ಯೆಹೋವನ ಸೇವೆಮಾಡುವುದಕ್ಕಿಂತಲೂ ಹೆಚ್ಚು ಉತ್ತಮವಾದ ಕೆಲಸವನ್ನು ನಾನು ನನ್ನ ಜೀವಿತದಲ್ಲಿ ಮಾಡಸಾಧ್ಯವಿರಲಿಲ್ಲವೆಂದು ನನಗನಿಸುತ್ತದೆ. ಆತನು ಒದಗಿಸುವಂಥ ಆತ್ಮಿಕ ಬೆಳಕಿನಲ್ಲಿ ನಡೆಯುತ್ತಾ ಇರುವೆ ಎಂಬ ದೃಢನಿರ್ಧಾರವನ್ನು ಮಾಡಿದ್ದೇನೆ.

[ಪುಟ 23ರಲ್ಲಿರುವ ಚಿತ್ರ]

1935ರಲ್ಲಿ ನೆಜೀಬ್‌

[ಪುಟ 24ರಲ್ಲಿರುವ ಚಿತ್ರ]

1940ರಲ್ಲಿ, ಲೆಬನನ್‌ ಪರ್ವತಗಳಲ್ಲಿ ಧ್ವನಿಪ್ರಸಾರಣ ಕಾರ್‌ನೊಂದಿಗೆ

[ಪುಟ 25ರಲ್ಲಿರುವ ಚಿತ್ರಗಳು]

ಮೇಲೆ ಎಡಬದಿಯಿಂದ ಪ್ರದಕ್ಷಿಣವಾಗಿ ಮೇಲೆ: ನೆಜೀಬ್‌, ಈವ್ಲೀನ್‌, ಅವರ ಮಗಳು, ಸಹೋದರ ಅಬೂಡ್‌ ಮತ್ತು ನೆಜೀಬರ ಹಿರಿಯ ಮಗ, 1952ರಲ್ಲಿ

ಕೆಳಗೆ (ಮುಂದಿನ ಸಾಲಿನಲ್ಲಿ): ಸಹೋದರರಾದ ಶಾಮ್ಮಾಸ್‌, ನಾರ್‌, ಅಬೂಡ್‌ ಮತ್ತು ಹೆನ್ಶೆಲ್‌ ಟ್ರಿಪೊಲಿಯಲ್ಲಿ ನೆಜೀಬರ ಮನೆಯಲ್ಲಿ, 1952

[ಪುಟ 26ರಲ್ಲಿರುವ ಚಿತ್ರ]

ನೆಜೀಬ್‌ ಮತ್ತು ಅವರ ಹೆಂಡತಿ ಈವ್ಲೀನ್‌